೨೬ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ದ್ವಾದಶಿ, ಬುಧವಾರ
ಪರಮಹಂಸರು ಇಂದು ರಾಮಚಂದ್ರನ ಹೊಸ ತೋಟಕ್ಕೆ ಗಾಡಿ ಮಾಡಿಕೊಂಡು ಹೋಗುತ್ತಿದ್ದಾರೆ. ಗಾಡಿಯಲ್ಲಿ ಮಣಿಲಾಲ ಮಲ್ಲಿಕ, ಮಾಸ್ಟರ್, ಇನ್ನೂ ಕೆಲವು ಮಂದಿ ಭಕ್ತರು ಇದ್ದಾರೆ. ರಾಮಚಂದ್ರನ ಈ ಹೊಸ ತೋಟ ಸುರೇಂದ್ರನ ತೋಟದ ಹತ್ತಿರದಲ್ಲೇ ಇದೆ. ರಾಮಚಂದ್ರ ಪರಮಹಂಸರನ್ನು ಸಾಕ್ಷಾತ್ ಅವತಾರಪುರುಷರೇ ಎಂದು ಪೂಜಿಸುತ್ತಿದ್ದಾನೆ. ಆತ ದಕ್ಷಿಣೇಶ್ವರಕ್ಕೆ ಆಗಾಗ ಬಂದು ಪರಮಹಂಸರ ದರ್ಶನ ಮಾಡಿಕೊಂಡು ಹೋಗುತ್ತಿದ್ದಾನೆ. ಮಣಿಲಾಲಮಲ್ಲಿಕ ಬ್ರಾಹ್ಮಸಮಾಜದ ಒಬ್ಬ ಅನುಯಾಯಿ. ಬ್ರಾಹ್ಮ ಸಮಾಜದವರು ಅವತಾರವನ್ನು ಒಪ್ಪುವುದಿಲ್ಲ.
ಶ್ರೀರಾಮಕೃಷ್ಣರು ಮಣಿಲಾಲ ಮಲ್ಲಿಕನಿಗೆ: “ಭಗವಂತನನ್ನು ಧ್ಯಾನಿಸಬೇಕಾದರೆ ಮೊದಲು ಉಪಾಧಿಶೂನ್ಯ ಭಗವಂತನನ್ನು ಧ್ಯಾನಿಸಲು ಪ್ರಯತ್ನಮಾಡಬೇಕು. ಆತ ನಿರುಪಾಧಿಕ, ವಾಙ್ಮನಾತೀತ. ಆದರೆ ಈ ವಿಧದ ಧ್ಯಾನದಿಂದ ಮುಕ್ತಿಯನ್ನು ಪಡೆಯುವುದು ಬಹಳ ಕಷ್ಟ.
“ಆದರೆ ಯಾವಾಗ ಭಗವಂತ ಮನುಷ್ಯನಾಗಿ ಅವತರಿಸುತ್ತಾನೊ ಆಗ ಆತನ ಮೇಲೆ ಧ್ಯಾನ ಮಾಡುವುದು ಬಹಳ ಸುಲಭ. ಹೌದು, ಅವತಾರಪುರುಷ ಬೇರೆ ಏನೂ ಅಲ್ಲ, ಸಾಕ್ಷಾತ್ ಭಗವಂತನೇ ಮನುಷ್ಯರೂಪ ಧರಿಸುವಿಕೆ. ದೇಹ ಕೇವಲ ಆವರಣ ಮಾತ್ರ. ಇದು ಲಾಟೀನಿನ ಒಳಗೆ ದೀಪ ಉರಿಯುತ್ತಿರುವ ಹಾಗೆ ಅಥವಾ ಗಾಜಿನ ಪೆಟ್ಟಿಗೆಯಲ್ಲಿ ಅಮೂಲ್ಯ ವಸ್ತುಗಳು ಕಾಣಬರುವ ಹಾಗೆ.”
ತೋಟದ ಹತ್ತಿರಕ್ಕೆ ಬಂದ ನಂತರ ಪರಮಹಂಸರು ಗಾಡಿಯಿಂದಿಳಿದು ರಾಮನೇ ಮೊದಲಾದ ಭಕ್ತರೊಡನೆ ತುಳಸೀವನದ ಕಡೆಗೆ ಹೋಗುತ್ತಿದ್ದಾರೆ. ಅದರ ಹತ್ತಿರ ನಿಂತು ಹೇಳುತ್ತಿದ್ದಾರೆ: ‘ಆಹ, ಎಷ್ಟು ಚೆನ್ನಾಗಿದೆ ಈ ಜಾಗ! ಇಲ್ಲಿ ಭಗವಂತನ ಮೇಲೆ ಬಹಳ ಚೆನ್ನಾಗಿ ಧ್ಯಾನ ಮಾಡಬಹುದು.”
ಈಗ ಪರಮಹಂಸರು ಪುಷ್ಕರಣಿಯ ದಕ್ಷಿಣದ ಕೊಠಡಿಗೆ ಬಂದು ಕುಳಿತುಕೊಂಡರು. ರಾಮ ಅವರಿಗೆ ಹಣ್ಣುಹಂಪಲಾದಿಗಳನ್ನು ಮತ್ತು ಸಿಹಿ ತಿಂಡಿಗಳನ್ನು ಅರ್ಪಿಸಿದ. ಪರಮಹಂಸರು ಅವನ್ನು ಭಕ್ತರಿಗೂ ಹಂಚಿ ತಾವೂ ತಿನ್ನಲಾರಂಭಿಸಿದರು. ಸ್ವಲ್ಪ ಹೊತ್ತಾದ ನಂತರ ತೋಟದಲ್ಲಿ ಸುತ್ತಾಡಲು ಹೊರಟರು.
ಈಗ ಪರಮಹಂಸರು ಸುರೇಂದ್ರನ ತೋಟದ ಕಡೆ ಮುಂದುವರಿಯುತ್ತಿದ್ದಾರೆ. ಅವರು ಪಾದಚಾರಿಯಾಗಿ ಸ್ವಲ್ಪ ದೂರ ಮುಂದುವರಿದಾಗ ಪಕ್ಕದ ತೋಟದಲ್ಲಿ ಒಬ್ಬ ಸಾಧು ಒಬ್ಬರೇ ಒಂದು ಮರದ ಕೆಳಗೆ ಮಂಚದ ಮೇಲೆ ಕುಳಿತಿದ್ದುದು ಕಣ್ಣಿಗೆ ಬಿತ್ತು. ಒಡನೆಯೇ ಪರಮಹಂಸರು ಆ ಸಾಧುವನ್ನು ಸಮೀಪಿಸಿ ಅವರೊಡನೆ ಹಿಂದಿಯಲ್ಲಿ ಆನಂದದಿಂದ ಮಾತುಕತೆ ಆರಂಭಿಸಿದರು.
ಶ್ರೀರಾಮಕೃಷ್ಣರು ಸಾಧುವಿಗೆ: “ನೀವು ಯಾವ ಸಂಪ್ರದಾಯಕ್ಕೆ ಸೇರಿದವರು-ಗಿರಿಯೆ, ಪುರಿಯೆ ಅಥವಾ ಬೇರೆ ಯಾವುದಾದರೂ ಉಪಾಧಿ ಇವೆಯೆ?”
ಸಾಧು: “ಜನರು ನನ್ನನ್ನು ಪರಮಹಂಸ ಅಂತ ಕರೆಯುತ್ತಾರೆ.”
ಶ್ರೀರಾಮಕೃಷ್ಣರು: “ಭೇಷ್, ಭೇಷ್. ನಿಮ್ಮದು ‘ಶಿವೋಠ್ಹಮ್’, ಇದು ಬಹಳ ಒಳ್ಳೆಯದೆ. ಆದರೆ ಒಂದು ವಿಷಯ. ಈ ಸೃಷ್ಟಿ-ಸ್ಥಿತಿ-ಪ್ರಳಯ ಹಗಲಿರುಳೂ ನಡೆಯುತ್ತಾ ಇದೆಯಲ್ಲ, ಇದು ಭಗವಂತನ ಶಕ್ತಿಯಿಂದಲೇ. ಈ ಆದ್ಯಾಶಕ್ತಿಗೂ ಬ್ರಹ್ಮನಿಗೂ ಅಭೇದ. ಹೇಗೆ ನೀರೆಂಬುದು ಇಲ್ಲದಿದ್ದರೆ ಅಲೆಯೆಂಬುದೂ ಇರದೊ, ಹಾಗೆ ಬ್ರಹ್ಮನೆಂಬುವವನು ಇಲ್ಲದಿದ್ದರೆ ಶಕ್ತಿಯೆಂಬುವವಳೂ ಇರಳು. ವಾದ್ಯವೆಂಬುದು ಇಲ್ಲದಿದ್ದರೆ ಬಾಜನವೆಂಬುದೂ ಇರದು.
“ಎಲ್ಲಿಯವರೆಗೆ ಭಗವಂತ ನಮ್ಮನ್ನು ಈ ಲೀಲಾಪ್ರಪಂಚದಲ್ಲಿ ಇಡುತ್ತಾನೋ ಅಲ್ಲಿಯವರೆಗೆ ಎರಡೂ ಇರುವುದರ ಬೋಧೆಯಾಗುತ್ತದೆ. ಶಕ್ತಿ ಅಂದರೇ ಬ್ರಹ್ಮನೂ ಜೊತೆಯಲ್ಲೇ. ಇದು ರಾತ್ರಿಯ ಬೋಧೆ ಇತ್ತು ಎಂದರೆ ದಿನದ ಬೋಧೆಯೂ ಇರುವ ಹಾಗೆ. ಜ್ಞಾನದ ಬೋಧೆ ಇತ್ತು ಎಂದರೆ ಅಜ್ಞಾನದ ಬೋಧೆಯೂ ಇರಲೇಬೇಕು.
“ಇನ್ನೊಂದು ಅವಸ್ಥೆ ಇದೆ. ಅದರಲ್ಲಿ ಭಗವಂತ ತೋರಿಸುತ್ತಾನೆ, ಬ್ರಹ್ಮ ಜ್ಞಾನಾ ಜ್ಞಾನಗಳಿಗೆ ಅತೀತ ಎಂಬುದಾಗಿ. ಆ ಅವಸ್ಥೆಯನ್ನು ಬಾಯಿಂದ ವರ್ಣಿಸಲಾಗುವುದಿಲ್ಲ. ಆಗ ಏನಿದೆಯೋ ಅದೇ ಇರುತ್ತದೆ.”
ಈ ರೀತಿಯಾಗಿ ಅನ್ಯೋನ್ಯವಾಗಿ ಮಾತುಕತೆಗಳಾಡಿದನಂತರ ಪರಮಹಂಸರು ತಮ್ಮ ಗಾಡಿಯ ಕಡೆ ಮುಂದುವರಿಯುತ್ತಿದ್ದಾರೆ. ಸಾಧು ಪರಮಹಂಸರನ್ನು ಗಾಡಿಗೆ ಹತ್ತಿಸಲು ಅವರೊಡನೆ ಬರುತ್ತಿದ್ದಾರೆ. ಅವರಿಬ್ಬರೂ ಎಷ್ಟೋ ದಿವಸಗಳಾದ ಮೇಲೆ ಸಂಧಿಸಿದ ಬಂಧುಗಳ ಹಾಗೆ ತೋಳೊಳಗೆ ತೋಳಿಟ್ಟು ನಡೆಯುತ್ತಿದ್ದಾರೆ.
ಈಗ ಪರಮಹಂಸರು ಸುರೇಂದ್ರನ ತೋಟಕ್ಕೆ ಬಂದಿದ್ದಾರೆ. ಅಲ್ಲಿ ಎಲ್ಲರೂ ಕುಳಿತುಕೊಂಡನಂತರ ಅವರು ಎತ್ತಿದ ಮೊದಲನೆಯ ಮಾತೇ ಆ ಸಾಧುಗಳ ವಿಷಯವಾಗಿ.
ಶ್ರೀರಾಮಕೃಷ್ಣರು: “ಅವರು ಬಹಳ ಒಳ್ಳೆಯ ಸಾಧು. (ರಾಮನಿಗೆ) ನೀನು ದಕ್ಷಿಣೇಶ್ವರಕ್ಕೆ ಬಂದಾಗ ಆ ಸಾಧುಗಳನ್ನು ಕರೆದುಕೊಂಡು ಬಾ. ಅವರು ನಿಜವಾಗಿಯೂ ಒಳ್ಳೆಯ ಸಾಧು. ಒಂದು ಹಾಡಿದೆ-ಸಹಜನಾಗದಿದ್ದರೆ ಸಹಜನನ್ನು ಅರಿಯಲಾಗುವುದಿಲ್ಲ ಎಂದು.
“ಅವರು ನಿರಾಕಾರವಾದಿ. ಅದು ಬಹಳ ಒಳ್ಳೆಯದೆ. ಭಗವಂತ ಸಾಕಾರ, ನಿರಾಕಾರ, ಎರಡೂ ಆಗಿದ್ದಾನೆ; ಇನ್ನೂ ಏನೇನೋ ಆಗಿದ್ದಾನೆ. ನಿತ್ಯ ಯಾರದೋ ಆತನದೇ ಲೀಲೆ. ಯಾರು ವಾಙ್ಮನಾತೀತನೋ ಆತನೇ ನಾನಾ ರೂಪಗಳ ಮೂಲಕ ಅವತೀರ್ಣನಾಗಿ ಅನೇಕ ಕೆಲಸಕಾರ್ಯಗಳಲ್ಲಿ ತೊಡಗಿದ್ದಾನೆ. ಆ ಒಂದು ಓಂಕಾರದಿಂದಲೇ “ಓಂ ಶಿವ’, “ಓಂ ಕಾಳಿ’, ಒಂದು ಮನೆಯ ಯಜಮಾನ ತನ್ನ ಮನೆಯ ಒಬ್ಬ ಚಿಕ್ಕ ಹುಡುಗನನ್ನು ಸಂತರ್ಪಣೆಗಾಗಿ ಜನರನ್ನು ಆಹ್ವಾನ ಮಾಡಿ ಬರಲು ಕಳುಹಿಸಿದ್ದಾನೆ ಅಂತ ಇಟ್ಟುಕೊ. ಜನ ಈತನನ್ನು ಎಷ್ಟು ಆದರದಿಂದ ನೋಡುತ್ತಾರೆ! ಏಕೆಂದರೆ ಆತ ಒಬ್ಬ ದೊಡ್ಡ ಮನುಷ್ಯನ ಮಗನೊ ಅಥವಾ ಮೊಮ್ಮಗನೊ ಆಗಿರುವುದರಿಂದ.”
ಪರಮಹಂಸರು ಸುರೇಂದ್ರನ ತೋಟದಲ್ಲಿ ಸ್ವಲ್ಪ ಉಪಾಹಾರವನ್ನು ಸ್ವೀಕರಿಸಿ ಭಕ್ತರೊಡನೆ ದಕ್ಷಿಣೇಶ್ವರಕ್ಕೆ ಹೊರಟರು.
೨೭ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ತ್ರಯೋದಶಿ, ಗುರುವಾರ
ದಕ್ಷಿಣೇಶ್ವರದ ಕಾಳೀದೇವಾಲಯದಲ್ಲಿ ಪ್ರಾತಃಕಾಲದ ಮಂಗಳಾರತಿಯ ಮಧುರ ನಿನಾದ ಕೇಳಿಬರುತ್ತಿದೆ. ಅದರೊಡನೆ ನಹಬತ್ಖಾನೆಯಿಂದ ಬರುತ್ತಿದ್ದ ಉದಯರಾಗದ ಬಾಜನವೂ ಹೊಂದಿಕೊಳ್ಳುತ್ತಿದೆ. ಪರಮಹಂಸರು ಹಾಸಿಗೆಯಿಂದೆದ್ದು ತಮ್ಮ ಮಧುರ ಕಂಠದಿಂದ ಭಗವತಿಯ ನಾಮೋಚ್ಚಾರಣೆ ಮಾಡುತ್ತಿದ್ದಾರೆ. ಈಗ ಅವರು ತಮ್ಮ ಕೊಠಡಿಯಲ್ಲಿದ್ದ ಪ್ರತಿಯೊಂದು ದೇವದೇವಿಯರ ಪಟಕ್ಕೂ ಕೈಮುಗಿಯುತ್ತಿದ್ದಾರೆ. ಮತ್ತೆ ಈಗ ತಮ್ಮ ಕೊಠಡಿಯ ಪಶ್ಚಿಮ ವರಾಂಡಕ್ಕೆ ಬಂದು ಭಾಗೀರಥಿಯ ದರ್ಶನಮಾಡಿ ಆಕೆಗೆ ಪ್ರಣಾಮ ಮಾಡುತ್ತಿದ್ದಾರೆ.
ಹಿಂದಿನ ರಾತ್ರಿಯನ್ನು ದಕ್ಷಿಣೇಶ್ವರದಲ್ಲೇ ಕಳೆದ ಭಕ್ತರು ಈಗ ಒಬ್ಬೊಬ್ಬರಾಗಿ ಬಂದು ಪರಮಹಂಸರಿಗೆ ಪ್ರಣಾಮಮಾಡುತ್ತಿದ್ದಾರೆ. ರಾಖಾಲ ಪರಮಹಂಸರೊಡನೆಯೇ ಇದ್ದಾನೆ. ಬಾಬುರಾಮ ಹಿಂದಿನ ರಾತ್ರಿ ಬಂದ. ಮಾಸ್ಟರ್ ಈಗ ಹದಿನಾಲ್ಕು ದಿನಗಳಿಂದ ಪರಮಹಂಸರೊಡನೆಯೇ ಇದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ ಹೇಳುತ್ತಿದ್ದಾರೆ: “ಇಂದಿನ ಪ್ರಾತಃಕಾಲ ತನ್ನ ಮನೆಗೆ ಬರಬೇಕೆಂದು ಈಶಾನ ನನಗೆ ಆಹ್ವಾನವಿತ್ತು ಹೋಗಿದ್ದಾನೆ. ನನ್ನೊಡನೆ ಬಾಬುರಾಮ ಬರುತ್ತಾನೆ. ನೀನೂ ಬಾ.” ಪರಮಹಂಸರೊಡನೆ ಹೊರಡಲು ಮಾಸ್ಟರ್ ಈಗ ಸಿದ್ಧನಾಗುತ್ತಿದ್ದಾನೆ.
ಘಂಟೆ ಬೆಳಗಿನ ಎಂಟು. ಪರಮಹಂಸರಿಗಾಗಿ ಗಾಡಿ ಬಂದು ನಹಬತ್ಖಾನೆಯ ಹತ್ತಿರ ನಿಂತಿದೆ. ಸುತ್ತಲೂ ಹೂವಿನ ಗಿಡಗಳು ತುಂಬಿವೆ. ಹತ್ತಿರದಲ್ಲೇ ಭಾಗೀರಥಿ ಹರಿಯುತ್ತಿದ್ದಾಳೆ. ಎಲ್ಲ ದಿಕ್ಕುಗಳೂ ಪ್ರಾತಃಕಾಲದ ಸೂರ್ಯರಶ್ಮಿಯಿಂದ ಪುಲಕಿತಗೊಂಡು ಹರ್ಷವನ್ನು ಸೂಚಿಸುತ್ತಿವೆ. ಪರಮಹಂಸರು ಮತ್ತೆ ದೇವದೇವಿಯರ ಪಟಗಳಿಗೆಲ್ಲಾ ಪ್ರಣಾಮಮಾಡಿ ಭಗವತಿಯ ನಾಮೋಚ್ಚಾರಣೆ ಮಾಡುತ್ತ ಗಾಡಿ ಹತ್ತುತ್ತಿದ್ದಾರೆ. ಈಗ ಮಾಸ್ಟರ್ ಮತ್ತು ಬಾಬುರಾಮನೂ ಗಾಡಿಯನ್ನು ಹತ್ತುತ್ತಿದ್ದಾರೆ. ಭಕ್ತರು ಪರಮಹಂಸರ ಶಾಲನ್ನು, ಉಣ್ಣೆಯ ಟೋಪಿಯನ್ನು ಮತ್ತು ಎಲೆಯಡಿಕೆ ಚೀಲವನ್ನು ತಮ್ಮ ಜೊತೆಯಲ್ಲಿ ತೆಗೆದುಕೊಂಡಿದ್ದಾರೆ.
ಪರಮಹಂಸರು ಹಸನ್ಮುಖರಾಗಿದ್ದಾರೆ. ದಾರಿಯ ಉದ್ದಕ್ಕೂ ಮಗುವಿನ ಹಾಗೆ ಎಲ್ಲವನ್ನೂ ನೋಡಿ ಆನಂದಪಡುತ್ತ ಮುಂದುವರಿಯುತ್ತಿದ್ದಾರೆ. ಒಂಬತ್ತು ಘಂಟೆ ಸಮಯಕ್ಕೆ ಗಾಡಿ ಈಶಾನನ ಮನೆಯ ಬಾಗಿಲ ಹತ್ತಿರ ಬಂದು ನಿಂತಿತು.
ಈಶಾನ ತನ್ನ ಮನೆಯವರೊಡನೆ ಪರಮಹಂಸರನ್ನು ಎದುರುಗೊಂಡು ಅವರನ್ನು ಮೊದಲನೆ ಅಂತಸ್ತಿನಲ್ಲಿದ್ದ ಬೈಠಕ್ಖಾನೆಗೆ ಕರೆದುಕೊಂಡು ಹೋದ. ಈಗ ಈಶಾನನ ಮಗ ಶ್ರೀಶನನ್ನು ಪರಮಹಂಸರಿಗೆ ಪರಿಚಯಮಾಡಿಕೊಡಲಾಯಿತು. ಆ ಯುವಕ ಆಲೀಪುರದಲ್ಲಿ ಲಾಯರಾಗಿದ್ದಾನೆ. ಆತ ಒಳ್ಳೆ ತೀಕ್ಷ್ಣ ಬುದ್ಧಿಯುಳ್ಳ ಯುವಕ. ವಿಶ್ವವಿದ್ಯಾನಿಲಯದ ಎರಡು ಪರೀಕ್ಷೆಗಳಲ್ಲೂ ಮೊದಲನೆ ರ್ಯಾಂಕು ಪಡೆದಿದ್ದಾನೆ. ಆದರೂ ಆತ ಅತ್ಯಂತ ನಮ್ರ ಸ್ವಭಾವಿ.
ಶ್ರೀರಾಮಕೃಷ್ಣರು ಶ್ರೀಶನಿಗೆ: “ನಿನಗೆ ಏನು ಕೆಲಸ ಇದೆ?”
ಶ್ರೀಶ: “ನಾನು ಆಲಿಪುರದಲ್ಲಿ ವಕೀಲನ ಕೆಲಸ ಮಾಡಿಕೊಂಡಿದ್ದೇನೆ.”
ಶ್ರೀರಾಮಕೃಷ್ಣರು: “ಇಂಥ ಮನುಷ್ಯ ವಕೀಲನ ಕೆಲಸ ಮಾಡುವುದೆ? (ಶ್ರೀಶನಿಗೆ) ಒಳ್ಳೇದು, ನೀನೇನಾದರೂ ಕೇಳಬೇಕು ಅಂತ ಇದ್ದೀಯೇನು? ಸಂಸಾರದಲ್ಲಿ ಅನಾಸಕ್ತನಾಗಿ ಇರುವುದು ಹೇಗೆ ಎಂದು ಕೇಳಬೇಕು ಅಂತ ಇದ್ದೀಯೆ ಅಂತ ಕಾಣುವುದು ಅಲ್ಲವೆ?”
ಶ್ರೀಶ : “ಕೆಲಸಗಳ ಒತ್ತಡದ ದೆಸೆಯಿಂದ ಈ ಜಗತ್ತಿನಲ್ಲಿ ಜನರು ಎಷ್ಟೋ ಅನ್ಯಾಯ ಕರ್ಮಗಳನ್ನು ಮಾಡಬೇಕಾಗಿ ಬರುತ್ತದೆ. ನೋಡಿ, ಕೆಲವರು ಪಾಪಕರ್ಮಗಳನ್ನು ಕೆಲವರು ಪುಣ್ಯಕರ್ಮಗಳನ್ನು ಮಾಡುತ್ತಾರೆ. ಇವುಗಳೆಲ್ಲ ಹಿಂದಿನ ಜನ್ಮಗಳ ಕಾರ್ಯಗಳ ಫಲವೇನು? ಅದಕ್ಕಾಗೇನು ಅವರು ಹಾಗೆ ವರ್ತಿಸುವುದು?”
ಶ್ರೀರಾಮಕೃಷ್ಣರು: “ಕರ್ಮವನ್ನು ಎಲ್ಲಿಯವರೆಗೆ ಮಾಡಬೇಕಾಗುವುದು ಗೊತ್ತೆ? ಭಗವಂತನ ಸಾಕ್ಷಾತ್ಕಾರವಾಗದವರೆಗೆ. ಆತನ ಸಾಕ್ಷಾತ್ಕಾರವಾದೊಡನೆ ಎಲ್ಲಾ ತಾನಾಗಿಯೇ ನಿಂತುಹೋಗುತ್ತವೆ. ಆಗ ಮನುಷ್ಯ ಪಾಪಪುಣ್ಯಗಳಿಗೆ ಅತೀತನಾಗುತ್ತಾನೆ. ಕಾಯಿ ತಲೆದೋರಿದೊಡನೆಯೇ ಹೂವು ಉದುರಿಹೋಗುತ್ತದೆ. ಕಾಯಿ ಬಿಡುವುದಕ್ಕೊಸ್ಕರ ಹೂವು ಉಂಟಾಗುವುದು.
“ಸಂಧ್ಯಾವಂದನಾದಿ ಕರ್ಮಗಳನ್ನು ಎಲ್ಲಿಯವರೆಗೆ ಮಾಡಬೇಕು ಗೊತ್ತೆ? ಎಲ್ಲಿಯವರೆಗೆ ಭಗವನ್ನಾಮೋಚ್ಚಾರಣೆ ಮಾಡಿದ ಮಾತ್ರದಿಂದಲೇ ಮೈಯಲ್ಲಿ ರೋಮಾಂಚನವಾಗದೊ, ಕಣ್ಣುಗಳಲ್ಲಿ ಪ್ರೇಮಾಶ್ರು ಸುರಿಯದೊ ಅಲ್ಲಿಯವರೆಗೆ. ಈ ಅವಸ್ಥೆಗಳೆಲ್ಲ ಭಗವಂತನ ಸಾಕ್ಷಾತ್ಕಾರವಾಗಿರುವುದರ ಲಕ್ಷಣ; ಭಗವಂತನಲ್ಲಿ ಶ್ರದ್ಧಾಭಕ್ತಿಯನ್ನು ಗಳಿಸಿಕೊಂಡಿರುವುದರ ಚಿಹ್ನೆ. ಭಗವಂತನ ಸಾಕ್ಷಾತ್ಕಾರ ದೊರೆತುದೇ ಆದರೆ ಮನುಷ್ಯ ಪಾಪ-ಪುಣ್ಯಗಳಿಗೆ ಅತೀತನಾಗಿಬಿಡುತ್ತಾನೆ. ರಾಮಪ್ರಸಾದ ಹೇಳುತ್ತಾನೆ:
‘ತಾಯಿ ದುರ್ಗೆಯು ಪರಮಬ್ರಹ್ಮಸ್ವರೂಪಿ ಎನ್ನುವ ಮರ್ಮವ
ತಿಳಿದು ನಾನಿದೊ ಭುಕ್ತಿ ಮುಕ್ತಿಗೆ ತಲೆಯ ಬಾಗಿಸಿ ನಿಲ್ಲುತ
ಕಟ್ಟಕಡೆಗಿದೊ ಬಿಸುಟು ನಿಂತಿಹೆ ಸಕಲ ಧರ್ಮಾಧರ್ಮವ.’
“ಭಗವಂತನ ಕಡೆಗೆ ಮುಂದುವರಿದಷ್ಟೂ ಆತ ಕರ್ಮಗಳನ್ನು ಕಡಮೆಮಾಡಿಕೊಡುತ್ತಾನೆ.”
ಶ್ರೀಶ: “ಸಂಸಾರದಲ್ಲಿ ಇದ್ದು ಭಗವಂತನ ಕಡೆಗೆ ಹೋಗುವುದೆಂದರೆ ಬಹಳ ಕಷ್ಟ.”
ಶ್ರೀರಾಮಕೃಷ್ಣರು: “ಅಭ್ಯಾಸಯೋಗವಿದೆಯಲ್ಲ! ಕಾಮಾರಪುಕುರಿನಲ್ಲಿ ಬಡಗಿಯ ಹೆಂಗಸರು ಅವಲಕ್ಕಿ ವ್ಯಾಪಾರ ಮಾಡುತ್ತಾರೆ. ಅವರು ಎಷ್ಟು ಕಡೆಗೆ ಕಣ್ಣಿಟ್ಟು ಕೆಲಸ ಮಾಡುತ್ತಾರೆ ಎಂಬುದನ್ನು ಸ್ವಲ್ಪ ಕೇಳು. ಏತ ಅವಲಕ್ಕಿಯನ್ನು ಕುಟ್ಟುತ್ತಲೇ ಇರುತ್ತದೆ. ಹೆಂಗಸು ಒಂದು ಕೈಯಿಂದ ಒರಳಿಗೆ ಬತ್ತವನ್ನು ತಳ್ಳಿಕೊಡುತ್ತಿರುತ್ತಾಳೆ. ಇನ್ನೊಂದು ಕೈಯಿಂದ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಹಾಲುಕೊಡುತ್ತಿರುತ್ತಾಳೆ. ಸಾಲದುದಕ್ಕೆ ಅದೇ ಸಮಯಕ್ಕೆ ಗಿರಾಕಿಗಳು ಬೇರೆ ಬಂದಿರುತ್ತಾರೆ. ಆ ಕಡೆ ಏತ ಬತ್ತವನ್ನು ಕುಟ್ಟುತ್ತಲೇ ಇರುತ್ತದೆ. ಈ ಕಡೆ ಗಿರಾಕಿಗಳೊಡನೆ ವ್ಯಾಪಾರ ಮಾಡುತ್ತಿರುತ್ತಾಳೆ. ‘ಬಾಕಿ ಏನು ಕೊಡಬೇಕಾಗಿದೆಯೊ ಅದನ್ನು ಮೊದಲು ಕೊಟ್ಟುಬಿಟ್ಟು ಬಳಿಕ ಸಾಮಾನು ತೆಗೆದುಕೊಂಡು ಹೋಗಿ.’ ಹಾಗೇ ನೋಡು, ಮಗುವಿಗೆ ಹಾಲು ಕೊಡುವುದು, ಒರಳಿಗೆ ಬತ್ತವನ್ನು ತಳ್ಳುವುದು, ಅವಲಕ್ಕಿಯಾದ ನಂತರ ಅದನ್ನು ಒರಳಿನಿಂದ ಹೊರಕ್ಕೆ ತೆಗೆಯುವುದು, ಗಿರಾಕಿಗಳೊಡನೆ ವ್ಯಾಪಾರಮಾಡುವುದು-ಇಷ್ಟನ್ನೂ ಒಟ್ಟಿಗೆ ಮಾಡುತ್ತಾಳೆ. ಇದಕ್ಕೇ ಅಭ್ಯಾಸ ಯೋಗ ಅಂತ ಹೆಸರು. ಆದರೂ ಏತದ ಮೊನೆ ಎಲ್ಲಿ ಕೈಯನ್ನು ಜಜ್ಜಿಬಿಡುವುದೋ ಎಂದು ಆಕೆ ತನ್ನ ಮನಸ್ಸಿನ ಹದಿನೈದು ಆಣೆ ಭಾಗವನ್ನು ಒರಳ ಕಡೆಗೇ ಇಟ್ಟಿರುತ್ತಾಳೆ. ಉಳಿದುಕೊಂಡಿರುವ ಆ ಒಂದಾಣೆ ಮನಸ್ಸಿನಿಂದ ಮಗುವಿಗೆ ಹಾಲು ಕೊಡುವುದು, ಗಿರಾಕಿಗಳೊಡನೆ ವ್ಯಾಪಾರ ಮಾಡುವುದು ಇವೇ ಮೊದಲಾದ ಕೆಲಸಗಳನ್ನು ಮಾಡುತ್ತಾಳೆ. ಅದೇ ರೀತಿ ಯಾರು ಸಂಸಾರಸ್ಥರೊ ಅವರು ತಮ್ಮ ಮನಸ್ಸಿನ ಹದಿನೈದು ಆಣೆ ಭಾಗವನ್ನು ಭಗವಂತನಿಗೆ ಮೀಸಲಾಗಿ ಇಡಬೇಕು; ಉಳಿದ ಒಂದಾಣೆ ಮನಸ್ಸಿನಿಂದ ಬಾಕಿ ಎಲ್ಲಾ ಕೆಲಸಕಾರ್ಯಗಳನ್ನೂ ಮಾಡಿಕೊಳ್ಳಬೇಕು. ಹಾಗೆ ಮಾಡದಿದ್ದರೆ ಸರ್ವನಾಶವಾಗುತ್ತದೆ; ಯಮನ ಕೈಗೆ ಸಿಕ್ಕಿಬೀಳಬೇಕಾಗುತ್ತದೆ.
“ಬ್ರಹ್ಮಜ್ಞಾನ ಪಡೆದುಕೊಂಡು ನಂತರ ಸಂಸಾರದಲ್ಲಿ ಇರಲು ಸಾಧ್ಯ. ಆದರೆ ಮೊದಲು ಬ್ರಹ್ಮಜ್ಞಾನವನ್ನು ದೊರಕಿಸಿಕೊಳ್ಳಬೇಕು. ಸಂಸಾರವೆಂಬ ನೀರಿಗೆ ಮನಸ್ಸೆಂಬ ಹಾಲನ್ನು ಸುರಿದರೆ ಎರಡೂ ಬೆರೆತುಕೊಂಡುಬಿಡುತ್ತದೆ. ಆದ್ದರಿಂದ ಮನಸ್ಸೆಂಬ ಹಾಲಿಗೆ ಹೆಪ್ಪು ಹಾಕಿ ಮೊಸರು ಮಾಡಿ ಅದನ್ನು ಏಕಾಂತಸ್ಥಳದಲ್ಲಿ ಕಡೆದು ಬೆಣ್ಣೆ ತೆಗೆದ ನಂತರ ಬೇಕಾದರೆ ಅದನ್ನು ಸಂಸಾರವೆಂಬ ನೀರಿನಲ್ಲಿ ಇಡಬಹುದು. ಆದ್ದರಿಂದ, ನೀನೇ ನೋಡು, ಸಾಧನೆ ಆವಶ್ಯಕ. ಪ್ರಥಮ ಅವಸ್ಥೆಯಲ್ಲಿ ನಿರ್ಜನವಾಸ ಅತ್ಯಂತ ಆವಶ್ಯಕ. ಅಶ್ವತ್ಥ ವೃಕ್ಷ ಇನ್ನೂ ಸಸಿಯಾಗಿರುವಾಗ ಅದಕ್ಕೆ ಬೇಲಿ ಹಾಕಬೇಕು; ಇಲ್ಲದಿದ್ದರೆ ಆಡುಕುರಿಗಳು ಅದನ್ನು ತಿಂದುಬಿಡುತ್ತವೆ, ಆದರೆ ಅದರ ಬುಡ ದಪ್ಪವಾಯಿತು ಎಂದರೆ ಬೇಲಿಯನ್ನು ತೆಗೆದುಹಾಕಿಬಿಡಬಹುದು. ಅಷ್ಟೇ ಏಕೆ, ಆಗ ಅದಕ್ಕೆ ಆನೆ ತಂದು ಕಟ್ಟಿದರೂ ಏನೂ ಆಗದು.
“ಆದ್ದರಿಂದ ಮೊದಮೊದಲು ಸಾಧಕ ಆಗಾಗ ಏಕಾಂತಸ್ಥಳಕ್ಕೆ ಹೋಗಿ ಇರಬೇಕು. ಸಾಧನೆ ಆವಶ್ಯಕ. ನಿನಗೆ ಅನ್ನ ತಿನ್ನಬೇಕು ಅಂತ ಇಚ್ಛೆ ಇದೆ ಅಂತ ಇಟ್ಟುಕೊ. ಸುಮ್ಮನೆ ಒಂದು ಜಾಗದಲ್ಲಿ ಕುಳಿತುಕೊಂಡು ನೀನು ಹೇಳಲಾರಂಭಿಸಿದರೆ: ‘ಸೌದೆಯಲ್ಲಿ ಬೆಂಕಿ ಇದೆ. ಆ ಬೆಂಕಿಯಿಂದ ಅನ್ನವಾಗುತ್ತದೆ,’ ಅಷ್ಟಕ್ಕೇ ಅನ್ನ ತಯಾರಾಗಿ ಹೋಗುವುದೇ? ಎರಡು ತುಂಡು ಸೌದೆ ತಂದು ಅವನ್ನು ಉಜ್ಜಿದರೆ ಅವುಗಳಿಂದ ಬೆಂಕಿ ಹೊರಬರುತ್ತದೆ.
“ರಾಮರಸವನ್ನು ಕುಡಿದರೆ ಅಮಲೇರುತ್ತದೆ. ಆನಂದವುಂಟಾಗುತ್ತದೆ. ಅದನ್ನು ಕುಡಿಯದೇ ಸುಮ್ಮನೆ ಕುಳಿತುಕೊಂಡು ‘ರಾಮರಸ, ರಾಮರಸ’, ಅನ್ನುತ್ತಿದ್ದರೆ ಅಮಲೇರುವುದೆ ಅಥವಾ ಆನಂದವುಂಟಾಗುವುದೆ?
“ಬೇಕಾದಷ್ಟನ್ನು ಪುಸ್ತಕ ಓದಿ ತಿಳಿದುಕೊಳ್ಳಬಹುದು. ಆದರೆ ಭಗವಂತನಲ್ಲಿ ಭಕ್ತಿಯಿಲ್ಲದಿದ್ದರೆ, ಆತನ ಸಾಕ್ಷಾತ್ಕಾರ ಪಡೆಯಬೇಕು ಎಂಬ ಇಚ್ಛೆಯಿಲ್ಲದಿದ್ದರೆ ಎಲ್ಲವೂ ವ್ಯರ್ಥ. ವಿವೇಕ ವೈರಾಗ್ಯಗಳಿಲ್ಲದ ಬರಿಯ ವಿದ್ವಾಂಸರ ದೃಷ್ಟಿ ಕಾಮಕಾಂಚನಗಳ ಮೇಲೆ ನೆಲಸಿರುತ್ತದೆ. ಹದ್ದು ಬಹಳ ಎತ್ತರಕ್ಕೇನೊ ಹಾರಿಹೋಗುತ್ತದೆ, ಆದರೆ ಅದರ ದೃಷ್ಟಿ ಮಾತ್ರ ಹೆಣದ ಗುಂಡಿಗಳ ಕಡೆಗೇ.
“ಯಾವ ವಿದ್ಯೆಯಿಂದ ಭಗವಂತನ ಸಾಕ್ಷಾತ್ಕಾರ ದೊರೆಯುವುದೋ ಅದೇ ನಿಜವಾದ ವಿದ್ಯೆ. ಉಳಿದುದೆಲ್ಲಾ ಯಾವುದಕ್ಕೂ ಬಾರದ್ದು. ಒಳ್ಳೇದು, ಭಗವಂತನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು?”
ಶ್ರೀಶ: “ಮಹಾಶಯರೆ, ನನಗೆ ಇಷ್ಟು ಮಾತ್ರ ಜ್ಞಾನೋದಯವಾಗಿದೆ: ಒಬ್ಬ ಜ್ಞಾನಮಯಪುರುಷ ಇದ್ದಾನೆ ಎಂಬುದಾಗಿ. ನಾವು ಆತನ ಸೃಷ್ಟಿಯ ಕಡೆಗೆ ನೋಡಿದ್ದೇ ಆದರೆ, ಆತನ ಜ್ಞಾನದ ಪರಿಚಯ ನಮಗಾಗುತ್ತದೆ. ಇದನ್ನು ನೋಡಿ-ಶೀತಪ್ರದೇಶದಲ್ಲಿ ಮೀನು ಮೊದಲಾದ ಜಲಚರ ಪ್ರಾಣಿಗಳನ್ನು ಬದುಕಿಸಿ ಇಡಲು ಭಗವಂತ ಎಂಥ ಕೌಶಲ ಉಪಯೋಗಿಸಿದ್ದಾನೆ ಎಂಬುದನ್ನು! ನೀರು ತಣ್ಣಗಾಗುತ್ತ ಆಗುತ್ತ ಅದು ಸಂಕುಚಿಸುತ್ತದೆ. ಆದರೆ ಒಂದು ಆಶ್ಚರ್ಯವೇನೆಂದರೆ, ನೀರು ಹಿಮಗಡ್ಡೆಯಾಗುವ ಮುನ್ನ ಅದು ಹಗುರ ಆಗಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಗಡ್ಡೆ ಕಟ್ಟುವ ಚಳಿಯಲ್ಲೂ ಮೀನು ಯಾವ ಆತಂಕವೂ ಇಲ್ಲದೆ ವಾಸಿಸಬಲ್ಲವು. ನೀರಿನ ಇಡೀ ಮೇಲ್ಭಾಗ ಗಡ್ಡೆ ಕಟ್ಟಿಕೊಂಡುಬಿಡುತ್ತದೆ. ಆದರೆ ಒಳಗೆ ಮಾತ್ರ ಎಂದಿನ ನೀರೇ. ವಿಪರೀತವಾದ ತಂಗಾಳಿ ಬೀಸುವಾಗ ನೀರಿನ ಗಡ್ಡೆ ಕಟ್ಟಿದ ಭಾಗ ಆ ಶೈತ್ಯವನ್ನು ತಡೆದುಬಿಡುತ್ತದೆ. ಒಳಗಿನ ನೀರು ಮಾತ್ರ ಬೆಚ್ಚಗೇ ಇರುತ್ತದೆ.”
ಶ್ರೀರಾಮಕೃಷ್ಣರು: “ಭಗವಂತನಿದ್ದಾನೆ ಎಂಬುದಕ್ಕೆ ಈ ಜಗತ್ತಿನ ಕಡೆ ನೋಡಿದರೇ ಸಾಕು. ಆದರೆ ಆತನ ವಿಷಯವಾಗಿ ಕೇಳುವುದು ಒಂದು, ಆತನನ್ನು ನೋಡುವುದು ಇನ್ನೊಂದು, ಆತನೊಡನೆ ಮಾತುಕತೆಯಾಡುವುದು ಮತ್ತೊಂದು ವಿಧದ ಅನುಭವ. ಕೆಲವರು ಹಾಲಿನ ವಿಷಯವಾಗಿ ಕೇಳಿದ್ದಾರೆ, ಇನ್ನು ಕೆಲವರು ಅದನ್ನು ನೋಡಿದ್ದಾರೆ, ಮತ್ತೆ ಕೆಲವರು ಅದನ್ನು ಕುಡಿದಿದ್ದಾರೆ. ಹಾಲನ್ನು ನೋಡಿದಾಗ ಆನಂದವೇನೊ ಆಗುತ್ತದೆ. ಆದರೆ ಕುಡಿದಾಗ ಬಲವುಂಟಾಗುತ್ತದೆ, ದೇಹ ಪುಷ್ಟಿಗೊಳ್ಳುತ್ತದೆ. ಭಗವಂತನನ್ನು ದರ್ಶನ ಮಾಡಿದಾಗ ಶಾಂತಿಯೇನೊ ದೊರೆಯುತ್ತದೆ; ಆದರೆ ಆತನೊಡನೆ ಮಾತುಕತೆಯಾಡಿದರೆ ಆನಂದವುಂಟಾಗುತ್ತದೆ, ಬಲವೂ ಅಧಿಕವಾಗುತ್ತದೆ.”
ಶ್ರೀಶ: “ಆತನನ್ನು ಪ್ರಾರ್ಥಿಸಲು ಸಮಯ ದೊರೆಯುತ್ತಿಲ್ಲ.”
ಶ್ರೀರಾಮಕೃಷ್ಣರು ನಗುತ್ತ : “ಅದೇನೋ ನಿಜ. ಸಮಯವಾಗದೆ ಇತ್ತು ಎಂದರೆ ಏನೂ ದೊರೆಯದು. ಒಂದು ಮಗು ತನ್ನ ತಾಯಿಗೆ ಹೇಳಿತು: ‘ದೇಹಬಾಧೆಯುಂಟಾದಾಗ ನನ್ನನ್ನು ಎಬ್ಬಿಸು.’ ತಾಯಿ ಹೇಳಿದಳು: ‘ಮಗು, ದೇಹಬಾಧೆಯೇ ನಿನ್ನನ್ನು ಎಬ್ಬಿಸಿಬಿಡುತ್ತದೆ. ನಾನೇನು ಕಷ್ಟ ತೆಗೆದುಕೊಳ್ಳಬೇಕಾಗಿಲ್ಲ.’
“ಯಾರಿಗೆ ಏನು ಕೊಡಬೇಕು ಎಂಬುದನ್ನು ಭಗವಂತ ಮೊದಲೇ ಇತ್ಯರ್ಥ ಮಾಡಿಕೊಂಡುಬಿಟ್ಟಿದ್ದಾನೆ. ಒಬ್ಬಳು ಅತ್ತೆ ತನ್ನ ಸೊಸೆಯಂದಿರಿಗೆ ಒಂದು ಬಟ್ಟಲಿನಿಂದ ಅಳೆದು ಅಳೆದು ಅನ್ನ ಬಡಿಸುತ್ತಿದ್ದಳು. ಆದರೆ ಅದು ಅವರಿಗೆ ಸಾಕಾಗುತ್ತಿರಲಿಲ್ಲ. ಒಂದು ದಿನ ಆ ಬಟ್ಟಲು ಒಡೆದುಹೋಯಿತು. ಅದನ್ನು ನೋಡಿ ಸೊಸೆಯರಿಗೆಲ್ಲಾ ಬಹಳ ಆನಂದವಾಯಿತು. ಆದರೆ ಅತ್ತೆ ಅವರಿಗೆ ಹೇಳಿದಳು: ‘ನೀವು ಕುಣಿದು ನಲಿಯಬಹುದು. ಆದರೆ ನೋಡಿ ನನ್ನ ಕೈಯಳತೆ ಇದ್ದೇ ಇದೆ.’
(ಶ್ರೀಶನಿಗೆ) “ಇನ್ನೇನು ತಾನೇ ಸಾಧ್ಯ? ಆತನ ಪಾದಪದ್ಮಗಳಲ್ಲಿ ನಿನ್ನ ಸರ್ವಸ್ವವನ್ನೂ ಸಮರ್ಪಿಸಿಬಿಡು. ಆತನಿಗೆ ನಿನ್ನ ವಕಾಲತ್ತು ವಹಿಸಿಬಿಡು. ಆತನಿಗೆ ಯಾವುದು ಶ್ರೇಯಸ್ಕರವಾದ್ದು ಅಂತ ತೋರುವುದೊ ಅದನ್ನು ಆತ ನಿನಗೆ ಕರುಣಿಸಲಿ. ದೊಡ್ಡಮನುಷ್ಯರ ಮೇಲೆ ಭಾರ ಹಾಕಿದರೆ ಅವರು ಎಂದಿಗೂ ನಿನಗೆ ಕೆಟ್ಟದ್ದನ್ನು ಮಾಡುವುದಿಲ್ಲ.
“ಸಾಧನೆ ಆವಶ್ಯಕವಾದ್ದೆ; ಆದರೆ ಎರಡು ವಿಧದ ಸಾಧಕರಿದ್ದಾರೆ. ಒಬ್ಬರದು ಕೋತಿಮರಿಯ ಸ್ವಭಾವ. ಇನ್ನೊಬ್ಬರದು ಬೆಕ್ಕಿನ ಮರಿಯ ಸ್ವಭಾವ. ಕೋತಿಮರಿ ಹಾಗೂ ಹೀಗೂ ಮಾಡಿ ಬಹಳ ಪ್ರಯಾಸದಿಂದ ತಾಯಿಯನ್ನು ಅಪ್ಪಿ ಹಿಡಿದುಕೊಂಡಿರುತ್ತದೆ. ಅದೇ ರೀತಿಯಾಗಿ ಕೆಲಕೆಲ ಸಾಧಕರು ಭಾವಿಸುತ್ತಾರೆ, ತಾವು ಇಷ್ಟೊಂದು ಸಲ ಜಪ ಮಾಡಬೇಕು,” ಇಷ್ಟೊಂದು ಸಲ ಧ್ಯಾನ ಮಾಡಬೇಕು, ಇಷ್ಟೊಂದು ಬಗೆಯ ತಪಸ್ಸು ಮಾಡಬೇಕು, ಆಗ ಮಾತ್ರವೇ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ. ಈ ವಿಧದ ಸಾಧಕ ಸ್ವಪ್ರಯತ್ನದಿಂದ ಭಗವಂತನ ಸಾಕ್ಷಾತ್ಕಾರವನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಬೆಕ್ಕಿನ ಮರಿ ತಾನೇ ತನ್ನ ತಾಯನ್ನು ಹಿಡಿದುಕೊಳ್ಳಲಾರದು. ಅದು ಒಂದು ಕಡೆ ಸುಮ್ಮನೆ ಬಿದ್ದುಕೊಂಡು ಕೇವಲ ‘ಮಿಯಾವ್, ಮಿಯಾವ್’ ಎಂದು ಕೂಗುತ್ತದೆ. ಅದು ತನ್ನ ಭಾರವನ್ನು ತಾಯಿಯ ಮೇಲೆ ಹಾಕಿಬಿಡುತ್ತದೆ. ತಾಯಿಬೆಕ್ಕು ಅದನ್ನು ಕೆಲವು ವೇಳೆ ಹಾಸಿಗೆಯ ಮೇಲೆ, ಇನ್ನು ಕೆಲವು ವೇಳೆ ಮಾಳಿಗೆ ಮೇಲೆ ಸೌದೆ ಹೊರೆ ಹಿಂದೆ ಇಡುತ್ತದೆ. ಅದು ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಅಲ್ಲಿಗೆ ಇಲ್ಲಿಗೆ ತೆಗೆದುಕೊಂಡು ಹೋಗಿ ಇಡುತ್ತದೆ. ತಾಯಿಯನ್ನು ಹೇಗೆ ಅಪ್ಪಿ ಹಿಡಿದುಕೊಳ್ಳುವುದು ಎಂಬುದು ಅದಕ್ಕೆ ಗೊತ್ತಿಲ್ಲ. ಅದೇ ರೀತಿ ಕೆಲವು ಸಾಧಕರಿಗೆ ಇಷ್ಟು ಸಲ ಜಪಮಾಡಬೇಕು, ಇಷ್ಟು ಧ್ಯಾನ ಮಾಡಬೇಕು ಇತ್ಯಾದಿಯಾಗಿ ಗುಣಾಕಾರ ಭಾಗಾಕಾರ ಹಾಕಿ ಸಾಧನೆಮಾಡಲಾಗುವುದಿಲ್ಲ. ಅವರು ಕೇವಲ ವ್ಯಾಕುಲಚಿತ್ತದಿಂದ ಅಳುತ್ತ ಅಳುತ್ತ ಭಗವಂತನನ್ನು ಕರೆಯುತ್ತಾರೆ. ಆತ ಅವರ ಅಳು ಕೇಳಿ ಸುಮ್ಮನೆ ಇರಲಾರ, ಬಂದು ದರ್ಶನವೀಯುತ್ತಾನೆ.”
ಊಟಕ್ಕೆ ಸಮಯವಾಯಿತು. ಈಶಾನ ಪರಮಹಂಸರಿಗೆ ಮತ್ತು ಭಕ್ತರಿಗೆ ಊಟಕ್ಕೆ ಬಡಿಸಲು ಸಿದ್ಧನಾಗುತ್ತಿದ್ದಾನೆ. ಪರಮಹಂಸರು ನಗುಮುಖರಾಗಿ ಕೊಠಡಿಯಲ್ಲಿ ಅಡ್ಡಾಡುತ್ತಿದ್ದಾರೆ. ಆಗಾಗ ಗಾಯಕನೊಡನೆ (ಕೇಶವಕೀರ್ತನಕಾರ) ಒಂದೆರಡು ಮಾತು ಆಡುತ್ತಿದ್ದಾರೆ.
ಗಾಯಕ: “ಭಗವಂತನೇ ‘ಕರಣ’, ‘ಕಾರಣ’ ಎರಡೂ. ದುರ್ಯೋಧನ ಶ್ರೀಕೃಷ್ಣನಿಗೆ ಹೇಳಿದ: ‘ಹೇ ಹೃಷಿಕೇಶ, ನೀನು ನನ್ನ ಹೃದಯದಲ್ಲಿ ಇದ್ದುಕೊಂಡು ಯಾವ ರೀತಿಯಾಗಿ ಪ್ರೇರೇಪಿಸುತ್ತೀಯೋ ಹಾಗೆ ಮಾಡುತ್ತೇನೆ.’”
ಶ್ರೀರಾಮಕೃಷ್ಣರು ನಗುತ್ತ: “ಹೌದು ನಿಜ. ಆತನೇ ನಮ್ಮ ಕೈಯಿಂದ ಎಲ್ಲವನ್ನೂ ಮಾಡಿಸುತ್ತಾನೆ. ಆತನೇ ನಿಜವಾಗಿ ಕರ್ತ. ಮನುಷ್ಯ ಆತನ ಯಂತ್ರ ಮಾತ್ರ. ಆದರೆ ಅದೂ ನಿಜ, ಕರ್ಮಫಲವೆಂಬುದು ನಿಸ್ಸಂದೇಹವಾಗಿ ಇದೆ. ಖಾರದ ಮೆಣಸಿನಕಾಯಿ ತಿಂದರೆ ಹೊಟ್ಟೆ ಉರಿದೇ ಉರಿಯುತ್ತದೆ. ತಿಂದರೆ ಹೊಟ್ಟೆ ಉರಿಯಲೆಂದೇ ಅದನ್ನು ಭಗವಂತ ಆ ರೀತಿಯಾಗಿ ಸೃಷ್ಟಿಸಿದ್ದಾನೆ. ಪಾಪಮಾಡಿದ್ದೇ ಆದರೆ ಅದರ ಫಲವನ್ನು ಅನುಭವಿಸಲೇಬೇಕು. ಯಾರಿಗೆ ಸಿದ್ಧಿ ದೊರೆತಿದೆಯೋ, ಭಗವಂತನ ದರ್ಶನ ದೊರೆತಿದೆಯೋ, ಆತ ಎಂದಿಗೂ ಪಾಪಕಾರ್ಯಗಳನ್ನು ಮಾಡಲಾರ. ನಿಪುಣ ನರ್ತಕ ಎಂದಿಗೂ ತಪ್ಪುಹೆಜ್ಜೆ ಇಡುವುದಿಲ್ಲ. ಸಾಧನೆಮಾಡಿದ ಕಂಠದಿಂದ ‘ಸ, ರಿ, ಗ, ಮ, ಪ, ದ, ನಿ’ ಸ್ವರಗಳು ತಪ್ಪಿಲ್ಲದೇ ಹೊರಡುತ್ತವೆ.”
ಎಲೆಹಾಕಿದ ನಂತರ ಪರಮಹಂಸರು ಭಕ್ತರೊಡನೆ ಊಟಕ್ಕೆ ಕುಳಿತು ತೃಪ್ತಿಯಿಂದ ಊಟಮಾಡಿದರು. ಈಶಾನ ಅನೇಕ ವಿಧದ ಭಕ್ಷ್ಯಭೋಜ್ಯಗಳನ್ನು ಮಾಡಿಸಿದ್ದ.
ಊಟವಾದನಂತರ ಪರಮಹಂಸರು ಈಶಾನನ ಬೈಠಕ್ಖಾನೆಯಲ್ಲಿ ಕುಳಿತಿದ್ದಾರೆ. ಘಂಟೆ ಅಪರಾಹ್ನ ಮೂರು. ಅವರ ಹತ್ತಿರ ಮಾಸ್ಟರ್, ಶ್ರೀಶ ಕುಳಿತಿದ್ದಾರೆ. ಈಗ ಪರಮಹಂಸರು ಶ್ರೀಶನೊಡನೆ ಮಾತುಕತೆಯಾಡಲು ಮತ್ತೆ ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಭಗವಂತನ ಸಂಬಂಧವಾಗಿ ನಿನ್ನ ಭಾವವೇನು? ‘ಸೋಠ್ಹಮ್’ ಭಾವವೊ ಅಥವಾ ಸೇವ್ಯ-ಸೇವಕ’ ಭಾವವೊ? ಸಂಸಾರಿಗಳಿಗೆ ಸೇವ್ಯ-ಸೇವಕ ಭಾವವೇ ಒಳ್ಳೇದು. ಸಂಸಾರಿ ಈ ಪ್ರಪಂಚದ ಎಲ್ಲಾ ಕೆಲಸಕಾರ್ಯಗಳನ್ನೂ ಮಾಡಿಕೊಂಡು ಹೋಗುತ್ತಿರುವಾಗ ಆತನಿಗೆ ‘ನಾನೇ ಅವನು’ ಎಂಬ ಭಾವ ಹೇಗೆ ತಾನೆ ಉಂಟಾದೀತು? ಯಾರು ‘ನಾನೇ ಅವನು’ ಎಂದು ಹೇಳುತ್ತಾನೊ, ಎಂದು ಹೇಳುತ್ತಾನೊ, ಆತನ ದೃಷ್ಟಿಯಿಂದ ಈ ಜಗತ್ತು ಸ್ವಪ್ನವಿದ್ದ ಹಾಗೆ. ಆತನ ಸ್ವಂತ ದೇಹ, ಮನಸ್ಸು ಎಲ್ಲವೂ ಆತನಿಗೆ ಸ್ವಪ್ನವಿದ್ದ ಹಾಗೆ. ಆದ್ದರಿಂದ ಆತ ಈ ಪ್ರಾಪಂಚಿಕ ಕೆಲಸಕಾರ್ಯಗಳನ್ನು ಮಾಡಲಾರ. ಇದಕ್ಕಾಗಿಯೇ ಗೃಹಸ್ಥನಿಗೆ ಸೇವಕಭಾವ, ದಾಸ್ಯಭಾವ ಒಳ್ಳೆಯದು.
“ಹನುಮಂತನದು ದಾಸ್ಯಭಾವ. ಆತ ರಾಮನಿಗೆ ಹೇಳಿದ: ‘ಹೇ ರಾಮ, ಕೆಲವು ವೇಳೆ ನಾನು ಭಾವಿಸುತ್ತೇನೆ, ನೀನು ಪೂರ್ಣ ನಾನು ಅಂಶ. ಇನ್ನು ಕೆಲವು ವೇಳೆ ಭಾವಿಸುತ್ತೇನೆ, ನೀನು ಪ್ರಭು ನಾನು ದಾಸ. ಆದರೆ ನನಗೆ ತತ್ತ್ವಜ್ಞಾನವುಂಟಾದಾಗ ಕಂಡುಬರುತ್ತದೆ, ನೀನೇ ನಾನು. ನಾನೇ ನೀನು.’
“ತತ್ತ್ವಜ್ಞಾನವುಂಟಾದಾಗ ‘ಸೋಽಹಮ್ ’ ಭಾವ ಸಾಧ್ಯ; ಆದರೆ ಅದು ಬಹಳ ದೂರದ ಮಾತು.”
ಶ್ರೀಶ: “ಹೌದು, ನಿಜ. ದಾಸ್ಯಭಾವವನ್ನು ಅನುಸರಿಸಿದರೆ ಮನುಷ್ಯ ನಿಶ್ಚಿಂತನಾಗಿರಬಹುದು. ಎಲ್ಲವೂ ಭಗವಂತನ ಲೀಲೆಯ ಮೇಲೆ ನಿಂತಿದೆ. ನಾಯಿಗೆ ಒಡೆಯನ ಮೇಲೆ ಬಹಳ ಭಕ್ತಿ. ಆದ್ದರಿಂದ ಎಲ್ಲಾ ಭಾರವನ್ನೂ ಒಡೆಯನ ಮೇಲೆ ಹಾಕಿ ನಿಶ್ಚಿಂತೆಯಿಂದ ಇದ್ದು ಬಿಡುತ್ತದೆ.”
ಶ್ರೀರಾಮಕೃಷ್ಣರು: “ಒಳ್ಳೇದು, ನಿನಗೆ ಯಾವುದು ಹಿಡಿಸುತ್ತದೆ-ಸಾಕಾರವೊ, ನಿರಾಕಾರವೊ? ಆದರೆ ಸತ್ಯಾಂಶವೇನೆಂದರೆ, ಯಾರು ಸಾಕಾರನೊ ಆತನೇ ನಿರಾಕಾರನೂ ಕೂಡ. ಭಕ್ತರಿಗೆ ತನ್ನ ಸಾಕಾರ ರೂಪವನ್ನು ತೋರಿಸುತ್ತಾನೆ. ಉದಾಹರಣೆಗೆ ಅನಂತ ಜಲರಾಶಿಯನ್ನು-ಮಹಾಸಾಗರವನ್ನು ತೆಗೆದುಕೊ. ಅದಕ್ಕೆ ದಡ ಎಂಬುದೇ ಇಲ್ಲ. ಅಂಥ ಜಲರಾಶಿಯ ಕೆಲಕೆಲ ಭಾಗದಲ್ಲಿ ನೀರು ಗಡ್ಡೆ ಕಟ್ಟಿದೆ. ಅಧಿಕವಾದ ಶೈತ್ಯ ನೀರನ್ನು ಗಡ್ಡೆ ಕಟ್ಟಿಸಿಬಿಟ್ಟಿದೆ. ಅದೇ ರೀತಿ ಭಕ್ತಿ ಎಂಬ ಶೈತ್ಯದಿಂದ ಆ ಅನಂತಬ್ರಹ್ಮ ಸಾಕಾರವನ್ನು ತಾಳುತ್ತಾನೆ. ಸೂರ್ಯ ಉದಯವಾದೊಡನೆ ಯಾವ ರೀತಿ ಹಿಮಗಡ್ಡೆ ಕರಗಿ ಎಂದಿನಂತೆ ನಿರಾಗುವುದೋ, ಅದೇ ರೀತಿ ಜ್ಞಾನಮಾರ್ಗದ-ವಿಚಾರಮಾರ್ಗದ ಮೂಲಕ ಮುಂದುವರಿದರೆ ಸಾಕಾರ ರೂಪವನ್ನು ನೋಡಲಾಗುವುದಿಲ್ಲ. ಆಗ ಎಲ್ಲವೂ ನಿರಾಕಾರವಾಗಿ ಕಾಣುತ್ತದೆ. ಜ್ಞಾನಸೂರ್ಯ ಉದಯಿಸಿಬಿಟ್ಟಿದ್ದರಿಂದ ಸಾಕಾರ ಹಿಮಗಡ್ಡೆ ಕರಗಿಹೋಗಿಬಿಟ್ಟಿತು. ಆದರೆ ಇದನ್ನು ಮನಸ್ಸಿಗೆ ಚೆನ್ನಾಗಿ ಒತ್ತಿಹೇಳು, ನಿರಾಕಾರ ಯಾರದೊ ಆತನದೇ ಸಾಕಾರ ಎಂಬುದನ್ನು.”
ಇನ್ನೇನು ಮುಸ್ಸಂಜೆಯಾಗುವುದರಲ್ಲಿದೆ. ಪರಮಹಂಸರು ದಕ್ಷಿಣೇಶ್ವರಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಈಗ ಅವರು ಈಶಾನನ ಬೈಠಕ್ಖಾನೆಯ ದಕ್ಷಿಣ ಕೈಸಾಲೆಯಲ್ಲಿ ನಿಂತು ಆತನೊಡನೆ ಮಾತನಾಡುತ್ತಿದ್ದಾರೆ. ಅಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದ: ‘ಭಗವನ್ನಾಮೋಚ್ಚಾರಣೆ ಎಲ್ಲಾ ಸಮಯದಲ್ಲೂ ಫಲಕೊಡುತ್ತದೆ ಎಂದು ಹೇಳಲಾಗುವುದಿಲ್ಲ.” ಈಶಾನ ಹೇಳಿದ: “ಏನು ನೀನು ಹೇಳುವುದು! ಅಶ್ವತ್ಥದ ಬೀಜ ಬಹಳ ಚಿಕ್ಕದೇನೊ ನಿಜ, ಆದರೆ ಅದರಲ್ಲಿ ದೊಡ್ಡ ಮರವಾಗಿ ಬೆಳೆಯುವ ಶಕ್ತಿ ಅಡಗಿದೆ. ಅದು ಬೆಳೆದು ದೊಡ್ಡದಾಗಲು ಸ್ವಲ್ಪ ಹೆಚ್ಚು ಸಮಯವೇನೊ ಬೇಕಾಗಬಹುದು.”
ಶ್ರೀರಾಮಕೃಷ್ಣರು: “ಹೌದು ಹೌದು. ಫಲ ದೊರಕಬೇಕಾದರೆ ಸ್ವಲ್ಪ ಹೆಚ್ಚು ಸಮಯವೇ ಬೇಕು.”
ಈಶಾನನ ಮನೆಯ ಪಕ್ಕದ ಮನೆಯೇ ಆತನ ಮಾವನ ಮನೆ. ಎರಡು ಮನೆಗೂ ಮಧ್ಯೆಯ ಬಾಗಿಲಿದೆ. ಪರಮಹಂಸರು ಈಗ ಗಾಡಿಗೆ ಹತ್ತಲು ಈಶಾನನ ಮಾವನ ಮನೆಯ ಬಾಗಿಲಿನಲ್ಲಿ ನಿಂತಿದ್ದಾರೆ. ಈಶಾನ ಮತ್ತು ಆತನ ಬಂಧುಬಾಂಧವರು ಅವರನ್ನು ಬೀಳ್ಕೊಡಲು ಅವರ ಸುತ್ತ ನಿಂತಿದ್ದಾರೆ. ಪರಮಹಂಸರು ಈಶಾನನಿಗೆ ಹೇಳುತ್ತಿದ್ದಾರೆ: “ನೀನು ಸಂಸಾರದಲ್ಲಿದ್ದೀಯೆ-ಕೆಸರುಮೀನಿನ ಹಾಗೆ. ಅದು ಕೊಳದ ಕೆಸರಿನಲ್ಲಿ ವಾಸಿಸುತ್ತದೆ. ಅದರ ಶರೀರಕ್ಕೆ ಮಾತ್ರ ಕೆಸರು ಅಂಟದು.
“ಮಾಯೆಯ ಈ ಸಂಸಾರದಲ್ಲಿ ವಿದ್ಯೆ, ಅವಿದ್ಯೆ ಎರಡೂ ಇವೆ. ಯಾರಿಗೆ ಪರಮಹಂಸ ಅಂತ ಹೆಸರು? ಯಾರು ಹಂಸದ ಹಾಗೆ, ಹಾಲು ನೀರು ಒಟ್ಟಿಗೆ ಬೆರೆತಿದ್ದರೂ, ಹಾಲನ್ನು ಮಾತ್ರ ಸ್ವೀಕರಿಸಿ ನೀರನ್ನು ತ್ಯಜಿಸಿಬಿಡುವನೊ; ಇರುವೆಯ ಹಾಗೆ, ಸಕ್ಕರೆ ಮರಳು ಎರಡೂ ಬೆರೆತಿದ್ದರೂ, ಸಕ್ಕರೆಯನ್ನು ಬೇರ್ಪಡಿಸಿಕೊಂಡು ಮರಳನ್ನು ಬಿಟ್ಟು ಬಿಡುವನೊ ಆತನೇ ಪರಮಹಂಸ.”
ಮುಸ್ಸಂಜೆಯಾಗಿಬಿಟ್ಟಿದೆ. ಈಗ ಪರಮಹಂಸರು ರಾಮನ ಮನೆಗೆ ಬಂದಿದ್ದಾರೆ. ಇಲ್ಲಿಂದ ದಕ್ಷಿಣೇಶ್ವರಕ್ಕೆ ಹೊರಡುತ್ತಾರೆ. ಪರಮಹಂಸರನ್ನು ಬೈಠಕ್ಖಾನೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವರು ಮಹೇಂದ್ರ ಗೋಸ್ವಾಮಿಯೊಡನೆ ಮಾತುಕತೆಯಾಡುತ್ತಿದ್ದಾರೆ. ಗೋಸ್ವಾಮಿಯ ಮನೆ ರಾಮನ ಮನೆಯ ಹತ್ತಿರವೇ ಇದೆ. ಆತನನ್ನು ಕಂಡರೆ ಪರಮಹಂಸರಿಗೆ ಬಹಳ ಪ್ರೀತಿ.
ಶ್ರೀರಾಮಕೃಷ್ಣರು: “ವೈಷ್ಣವರು ಶಾಕ್ತರು ಎಲ್ಲರೂ ಕಟ್ಟಕಡೆಯಲ್ಲಿ ಮುಟ್ಟುವ ಜಾಗ ಒಂದೇ ಒಂದು; ಆದರೆ ಮಾರ್ಗ ಮಾತ್ರ ಬೇರೆ ಬೇರೆ. ನಿಜವಾದ ವೈಷ್ಣವರು ಶಾಕ್ತರನ್ನು ನಿಂದಿಸುವುದಿಲ್ಲ.”
ಗೋಸ್ವಾಮಿ ನಗುತ್ತ: “ಹರ-ಪಾರ್ವತಿ ನಮ್ಮ ತಂದೆ ತಾಯಿ.”
ಶ್ರೀರಾಮಕೃಷ್ಣರು ತಮಗೆ ಗೊತ್ತಿದ್ದ ಒಂದು ಡಜನ್ ಇಂಗ್ಲೀಷ್ ಪದಗಳಕೋಶವನ್ನು ಉಪಯೋಗಿಸಿ ನಗುತ್ತ ಹೇಳಿದರು: “ಥ್ಯಾಂಕ್ಯೂ!” ಬಳಿಕ ಹೇಳಿದರು: “ಹೌದು, ತಂದೆ ತಾಯಿ.”
ಗೋಸ್ವಾಮಿ: “ಇದೂ ಅಲ್ಲದೆ ಯಾರನ್ನೇ ಆಗಲಿ, ವಿಶೇಷತಃ ಭಗವದ್ಭಕ್ತನನ್ನು, ನಿಂದಿಸುವುದು ದೊಡ್ಡ ಅಪರಾಧವೇ. ಎಲ್ಲಾ ಅಪರಾಧಗಳಿಗೂ ಕ್ಷಮೆಯುಂಟು, ಭಗವದ್ಭಕ್ತರನ್ನು ನಿಂದಿಸಿದ ಅಪರಾಧಕ್ಕೆ ಕ್ಷಮೆಯೆಂಬುದೇ ಇಲ್ಲ.”
ಶ್ರೀರಾಮಕೃಷ್ಣರು: “ಅಪರಾಧವನ್ನು ಎಲ್ಲರೂ ಮಾಡಿದಂತಾಗುವುದಿಲ್ಲ. ಈಶ್ವರ ಕೋಟಿಗಳು ಅಪರಾಧಮಾಡಿದಂತಾಗುವುದಿಲ್ಲ. ಉದಾಹರಣೆಗೆ ಚೈತನ್ಯದೇವನಂಥ ಅವತಾರಪುರುಷರು.
“ಮಗು ತಂದೆಯ ಕೈ ಹಿಡಿದುಕೊಂಡು ಗದ್ದೆ ತವರಿಯ ಮೇಲೆ ನಡೆಯಲಾರಂಭಿಸಿದರೆ ಹಳ್ಳಕ್ಕೆ ಬೀಳುವ ಸಂಭವವಿರುತ್ತದೆ. ಆದರೆ ತಂದೆ ಮಗುವಿನ ಕೈಯನ್ನು ಹಿಡಿದುಕೊಂಡಿದ್ದರೆ ಅದು ಎಂದಿಗೂ ಹಳ್ಳಕ್ಕೆ ಬೀಳುವ ಹಾಗಿಲ್ಲ.
“ಇದನ್ನು ಕೇಳು. ನಾನು ಭಗವತಿಯನ್ನು ಶುದ್ಧ ಭಕ್ತಿಗಾಗಿ ಪ್ರಾರ್ಥಿಸಿದೆ. ಆಕೆಯನ್ನು ಪ್ರಾರ್ಥಿಸಿದೆ: ‘ಇಗೋ ತೆಗೆದುಕೋ ನಿನ್ನ ಧರ್ಮವನ್ನು; ಇಗೋ ತೆಗೆದುಕೋ ನಿನ್ನ ಅಧರ್ಮವನ್ನು; ನನಗೆ ಶುದ್ಧ ಭಕ್ತಿಯನ್ನು ಕೊಡು. ಇಗೋ ತೆಗೆದುಕೋ ನಿನ್ನ ಶುಚಿಯನ್ನು, ಇಗೋ ತೆಗೆದುಕೋ ನಿನ್ನ ಅಶುಚಿಯನ್ನು; ನನಗೆ ಶುದ್ಧಭಕ್ತಿಯನ್ನು ಕರುಣಿಸು ತಾಯೆ. ಇಗೋ ತೆಗೆದುಕೋ ನಿನ್ನ ಪಾಪವನ್ನು, ಇಗೋ ತೆಗೆದುಕೋ ನಿನ್ನ ಪುಣ್ಯವನ್ನು; ನನಗೆ ಶುದ್ಧಭಕ್ತಿಯನ್ನು ಕೃಪೆಮಾಡು.’”
ಗೋಸ್ವಾಮಿ: “ಇದು ಸರಿ.”
ಶ್ರೀರಾಮಕೃಷ್ಣರು: “ಎಲ್ಲಾ ಮತಗಳನ್ನು ಗೌರವಿಸು. ಆದರೆ ನೋಡು, ನಿಷ್ಠಾಭಕ್ತಿ ಎಂಬುದೊಂದಿದೆ. ಎಲ್ಲಾ ಮತಗಳನ್ನು ಗೌರವಿಸಬೇಕಾದ್ದೇನೋ ಸರಿ, ಆದರೆ ಅವುಗಳಲ್ಲಿ ಒಂದನ್ನು ಮಾತ್ರ ತನ್ನ ಇಡೀ ಹೃದಯದಿಂದ ಪ್ರೀತಿಸುವುದಕ್ಕೆ ನಿಷ್ಠೆ ಅಂತ ಹೆಸರು.”
“ರಾಮನ ರೂಪ ವಿನಾ ಬೇರೆ ಯಾವ ರೂಪವೂ ಹನುಮಂತನಿಗೆ ಹಿಡಿಸುತ್ತಿರಲಿಲ್ಲ. ಗೋಪಿಯರಿಗೆ ಬೃಂದಾವನದ ಗೋಪಾಲಕೃಷ್ಣನ ಮೇಲೆ ಅಂಥ ನಿಷ್ಠೆ, ದ್ವಾರಕೆಯ ಪೇಟ ಸುತ್ತಿದ್ದ ಕೃಷ್ಣನನ್ನು ನೋಡಲು ಅವರು ಇಚ್ಛೆಪಡಲಿಲ್ಲ.”
“ಹೆಂಗಸು ತನ್ನ ಭಾವಮೈದುನರಿಗೆ ಕೈಕಾಲು ತೊಳೆಯಲು ನೀರು ಕೊಡುವುದು, ಮಣೆಹಾಕಿ ಊಟಕ್ಕೆ ಬಡಿಸುವುದು ಇವೇ ಮೊದಲಾದ ಉಪಚಾರಗಳನ್ನು ಮಾಡುತ್ತಾಳೆ. ಆದರೆ ಆಕೆ ತನ್ನ ಪತಿಗೆ ಯಾವ ರೀತಿ ಸೇವೆ ಮಾಡುತ್ತಾಳೋ ಹಾಗೆ ಬೇರೆ ಯಾರಿಗೂ ಮಾಡುವುದಿಲ್ಲ. ಪತಿಯೊಡನೆ ಆಕೆಯ ಸಂಬಂಧ ಪ್ರತ್ಯೇಕವಾದ್ದು.”
ರಾಮ ಪರಮಹಂಸರಿಗೆ ಸ್ವಲ್ಪ ಉಪಹಾರ ಮಾಡಿಸಿದ. ಪರಮಹಂಸರು ದಕ್ಷಿಣೇಶ್ವರಕ್ಕೆ ಹೊರಡಲು ಈಗ ಸಿದ್ಧರಾಗಿದ್ದಾರೆ. ಅವರು ತಮ್ಮ ಶಾಲು ಹೊದ್ದುಕೊಂಡು, ಟೋಪಿ ಹಾಕಿಕೊಂಡು ಮಾಸ್ಟರ್ ಮೊದಲಾದವರೊಡನೆ ಗಾಡಿಗೆ ಹತ್ತಿದರು. ರಾಮ ಮತ್ತು ಆತನ ಸ್ನೇಹಿತರು ಪರಮಹಂಸರಿಗೆ ಪ್ರಣಾಮಮಾಡಿ ಅವರನ್ನು ಬೀಳ್ಕೊಟ್ಟರು.
೨೯ನೆ ಡಿಸೆಂಬರ್ ೧೮೮೩, ಮಾರ್ಗಶಿರ ಅಮಾವಾಸ್ಯೆ, ಶನಿವಾರ
ಘಂಟೆ ಅಪರಾಹ್ನ ಒಂದು. ಪರಮಹಂಸರು ಕಾಳೀಘಟ್ಟಕ್ಕೆ ಹೋಗಲು ಗಾಡಿಯನ್ನು ಹತ್ತಿದರು. ಅಧರಸೇನನ ಮನೆಗೆ ಮೊದಲು ಹೋಗಿ ಆತನನ್ನು ಕರೆದುಕೊಂಡು ಕಾಳೀಘಟ್ಟಕ್ಕೆ ಹೋಗುತ್ತಾರೆ. ಗಾಡಿ ಪರಮಹಂಸರ ಕೊಠಡಿಯ ಉತ್ತರ ವರಾಂಡದ ಹತ್ತಿರ ನಿಂತಿದ್ದಾಗ ಮಾಸ್ಟರ್ ಅವರ ಹತ್ತಿರಕ್ಕೆ ಹೋಗಿ ಕೇಳಿದ: “ನಾನೂ ನಿಮ್ಮೊಡನೆ ಬರಲೆ?”
ಶ್ರೀರಾಮಕೃಷ್ಣರು: “ಏಕೆ?”
ಮಾಸ್ಟರ್: “ನಾನು ನಮ್ಮ ಮನೆಗೆ ಹೋಗಿ ಬರಬೇಕು ಅಂತ ಇದ್ದೇನೆ.?”
ಶ್ರೀರಾಮಕೃಷ್ಣರು ಸ್ವಲ್ಪ ಹೊತ್ತು ಯೋಚಿಸಿ ಹೇಳಿದರು: “ಮನೆಗೆ ಹೋಗಬೇಕಾಗಿದೆಯೇನು? ಏಕೆ? ಇಲ್ಲಿ ಆನಂದದಿಂದ ಇದ್ದೀಯಲ್ಲ.”
ಮಾಸ್ಟರಿಗೆ ಕೆಲವು ಘಂಟೆಗಳ ಮಟ್ಟಿಗೆ ಮನೆಗೆ ಹೋಗಿ ಮನೆಯವರನ್ನು ನೋಡಿ ಬರಬೇಕೆಂಬ ಇಚ್ಛೆ. ಆದರೆ ಪರಮಹಂಸರಿಗೆ ಇದು ಒಪ್ಪಿಗೆಯಾಗಲಿಲ್ಲ.
೩೦ನೆ ಡಿಸೆಂಬರ್ ೧೮೮೩, ಪುಷ್ಯ ಶುಕ್ಲ ಪಾಡ್ಯಮಿ, ಭಾನುವಾರ
ಘಂಟೆ ಅಪರಾಹ್ನ ಮೂರು. ಮಾಸ್ಟರ್ ಮರಗಳ ನೆರಳಿನಲ್ಲಿ ಒಬ್ಬನೆ ಅಡ್ಡಾಡುತ್ತಿದ್ದಾನೆ. ಒಬ್ಬ ಭಕ್ತ ಬಂದು ಆತನಿಗೆ ತಿಳಿಸಿದ, ಪರಮಹಂಸರು ಆತನನ್ನು ಕರೆಯುತ್ತಾರೆ ಎಂದು. ಮಾಸ್ಟರ್ ಪರಮಹಂಸರ ಕೊಠಡಿಗೆ ಬಂದು ನೋಡುತ್ತಾನೆ, ಅನೇಕ ಮಂದಿ ಭಕ್ತರು ನೆರೆದಿದ್ದಾರೆ. ಮಾಸ್ಟರ್ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಳ್ಳುತ್ತಿದ್ದಾನೆ.
ಕಲ್ಕತ್ತದಿಂದ ರಾಮ, ಕೇದಾರ ಮೊದಲಾದ ಭಕ್ತರು ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಪರಮಹಂಸರು ರಾಮನ ತೋಟದ ಹತ್ತಿರ ಸಂಧಿಸಿದ ವೇದಾಂತವಾದಿ ಸಾಧುವನ್ನು ರಾಮ ಕರೆದುಕೊಂಡು ಬಂದಿದ್ದಾನೆ. ಆ ಸಂದರ್ಭದಲ್ಲಿ ಪರಮಹಂಸರು ರಾಮನಿಗೆ ತಿಳಿಸಿದ್ದರು, ಆ ಸಾಧುವನ್ನು ದಕ್ಷಿಣೇಶ್ವರಕ್ಕೆ ಕರೆದುಕೊಂಡು ಬರುವಂತೆ.
ಆ ಸಾಧು ಪರಮಹಂಸರೊಡನೆ ಒಂದು ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾನೆ. ಇಬ್ಬರೂ ಹಿಂದೂಸ್ಥಾನಿಯಲ್ಲಿ ಬಹಳ ಆನಂದದಿಂದ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಇವೆಲ್ಲಾ ನಿನಗೆ ಹೇಗೆ ಕಾಣುತ್ತವೆ?”
ಸಾಧು: “ಎಲ್ಲಾ ಸ್ವಪ್ನವಿದ್ದ ಹಾಗೆ.”
ಶ್ರೀರಾಮಕೃಷ್ಣರು: “ಬ್ರಹ್ಮ ಸತ್ಯ, ಜಗತ್ ಮಿಥ್ಯಾ ತಾನೆ? ಒಳ್ಳೇದು. ಬ್ರಹ್ಮನ ಸ್ವರೂಪವೇನು?”
ಸಾಧು: “ಶಬ್ದವೇ ಬ್ರಹ್ಮ. ಅನಾಹತ ಶಬ್ದವೇ ಬ್ರಹ್ಮ.”
ಶ್ರೀರಾಮಕೃಷ್ಣರು: “ಆದರೆ ಶಬ್ದದ ಪ್ರತಿಪಾದ್ಯನೊಬ್ಬ ಇದ್ದಾನೆ ಅಲ್ಲವೇ?”
ಸಾಧು: “ಆತನೇ ವಾಚ್ಯ, ಆತನೇ ವಾಚಕ.”
ಈ ಮಾತನ್ನು ಕೇಳುಕೇಳುತ್ತ ಇದ್ದ ಹಾಗೇ ಪರಮಹಂಸರು ಸಮಾಧಿಸ್ಥರಾಗಿಬಿಟ್ಟರು. ಚಿತ್ರದ ಗೊಂಬೆಯ ಹಾಗೆ ಕುಳಿತಿದ್ದಾರೆ. ಸಾಧು ಮತ್ತು ಭಕ್ತರು ಆಶ್ಚರ್ಯಚಕಿತರಾಗಿ ಪರಮಹಂಸರ ಸಮಾಧಿಯ ಅವಸ್ಥೆಯನ್ನು ನೋಡುತ್ತಾ ಕುಳಿತಿದ್ದಾರೆ. ಕೇದಾರ ಆ ಸಾಧುವಿಗೆ ಹೇಳಿದ: “ಅವರ ಕಡೆ ನೋಡಿ. ಇದಕ್ಕೇ ಸಮಾಧಿ ಅಂತ ಕರೆಯುತ್ತಾರೆ.”
ಸಾಧು ಪುಸ್ತಕಗಳಲ್ಲಿ ಸಮಾಧಿ ಅಂದರೆ ಏನು ಎಂಬುದನ್ನು ಓದಿದ್ದನು; ಎಂದೂ ಕಂಡಿರಲಿಲ್ಲ. ಪರಮಹಂಸರು ಕ್ರಮಕ್ರಮೇಣ ಪ್ರಕೃತಿಸ್ಥರಾಗುತ್ತಿದ್ದಾರೆ. ಅವರು ಈಗ ಭಗವತಿಗೆ ಹೇಳುತ್ತಿದ್ದಾರೆ: “ತಾಯೆ, ಎಂದಿನ ಸ್ಥಿತಿಯಲ್ಲಿರಲು ನನಗೆ ಇಚ್ಛೆ. ನನ್ನನ್ನು ಬಾಹ್ಯಜ್ಞಾನಶೂನ್ಯನನ್ನಾಗಿ ಮಾಡಬೇಡ. ಸಾಧುವಿನೊಡನೆ ಸಚ್ಚಿದಾನಂದನ ಸಂಬಂಧವಾಗಿ ಮಾತುಕತೆಯಾಡಬೇಕೆಂದು ಇಚ್ಛೆ. ಸಚ್ಚಿದಾನಂದನ ಮಾತುಕತೆಯಾಡುತ್ತ ಆನಂದಪಡಬೇಕೆಂಬ ಇಚ್ಛೆ ನನಗಿದೆ.”
ಸಾಧು ಪರಮಹಂಸರ ಈ ಮಾತುಗಳನ್ನು ಕೇಳಿ ಮತ್ತು ಅವರ ಅವಸ್ಥೆಯನ್ನು ನೋಡಿ ಆಶ್ಚರ್ಯಚಕಿತನಾಗಿಬಿಟ್ಟಿದ್ದಾನೆ. ಪರಮಹಂಸರು ಈಗ ಅವನಿಗೆ ಹೇಳುತ್ತಿದ್ದಾರೆ: “ಸದ್ಯಕ್ಕೆ ನಿಮ್ಮ ‘ಸೋಠ್ಹಮ್’ ಎಂಬುದನ್ನು ಒಂದು ಕಡೆ ಕಟ್ಟಿಟ್ಟುಬಿಡಿ. ಈಗ ಆನಂದಪಡಲು ‘ನಾನು’ ‘ನೀನು’ ಎಂಬುವುಗಳ ಕಡೆ ಮನಸ್ಸಿಡೋಣ.”
ಈಗ ಪರಮಹಂಸರು ಕೇದಾರ, ರಾಮ, ಮಾಸ್ಟರ್ ಇವರೇ ಮೊದಲಾದ ಭಕ್ತರೊಡನೆ ಪಂಚವಟಿಯಲ್ಲಿ ನಡೆಯುತ್ತಿದ್ದಾರೆ.
ಶ್ರೀರಾಮಕೃಷ್ಣರು ಕೇದಾರನಿಗೆ ನಗುತ್ತ: “ಸಾಧುವಿನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು?”
ಕೇದಾರ: “ಬರೀ ಒಣಜ್ಞಾನ. ಒಲೆ ಮೇಲೇನೋ ತಪ್ಪಲೆ ಇಟ್ಟಿದ್ದಾರೆ, ಆದರೆ ಇನ್ನೂ ಅಕ್ಕಿ ಹಾಕಿಲ್ಲ.”
ಶ್ರೀರಾಮಕೃಷ್ಣರು: “ಅದೇನೋ ನಿಜ. ಆದರೆ ಅವನು ಎಲ್ಲವನ್ನೂ ತ್ಯಜಿಸಿದ್ದಾನೆ. ಯಾರು ಸಂಸಾರವನ್ನು ತ್ಯಜಿಸಿಬಿಟ್ಟಿದ್ದಾರೊ ಅವರು ಆಗಲೇ ಬಹಳವಾಗಿ ಮುಂದುವರಿದ ಹಾಗೆ. ಸಾಧುವೇನೊ ಪ್ರವರ್ತಕ. ಭಗವಂತನ ಸಾಕ್ಷಾತ್ಕಾರ ಪಡೆಯದೆ ಇತ್ತು ಅಂದರೆ ಏನನ್ನು ಪಡೆದ ಹಾಗೂ ಆಗುವುದಿಲ್ಲ. ಯಾವಾಗ ಆತನ ಪ್ರೇಮದಿಂದ ಮತ್ತನಾಗಲು ಸಾಧ್ಯವಾಗುವುದೊ, ಆಗ ಇನ್ನು ಏನೂ ಬೇಕಾಗದು. ಬಳಿಕ-
ಅಂತರಂಗದಲಿ ಶ್ರೀಘನಶ್ಯಾಮೆಯ
ಆದರಿಸಲೆ ಮನವೇ.
ನಮ್ಮಿಬ್ಬರ ಹೊರತಿನ್ನಾರೂ ತಿಳಿಯದ
ರೀತಿಯೊಳವಳೆಡೆ ಸಾಗುವೆವೇ!
ಕೇದಾರ ಪರಮಹಂಸರ ಭಾವಕ್ಕನುಗುಣವಾಗಿ ಒಂದು ಹಾಡನ್ನು ಹಾಡಿದ:
ಎಂತೊರೆಯಲಿ ಸಖಿ ನನ್ನೆದೆಯೊಳಗನು?
ಬಾಯಿಗೆ ಇಕ್ಕಿದೊಲಿದೆ ಬೀಗ!…….
ಈಗ ಪರಮಹಂಸರು ತಮ್ಮ ಕೊಠಡಿಗೆ ಹಿಂದಿರುಗಿ ಬಂದಿದ್ದಾರೆ. ಘಂಟೆ ಅಪರಾಹ್ನ ನಾಲ್ಕು. ಕಾಳೀದೇವಾಲಯದ ಬಾಗಿಲನ್ನು ತೆರೆದಿದ್ದಾರೆ. ಪರಮಹಂಸರು ಸಾಧುವಿನೊಡನೆ ಕಾಳೀದೇವಾಲಯಕ್ಕೆ ಹೋಗುತ್ತಿದ್ದಾರೆ. ಮಾಸ್ಟರೂ ಅವರನ್ನು ಹಿಂಬಾಲಿಸುತ್ತಿದ್ದಾನೆ. ಪರಮಹಂಸರು ಗರ್ಭಗುಡಿಗೆ ಪ್ರವೇಶಮಾಡಿ ಭಕ್ತಿಯಿಂದ ಭಗವತಿಗೆ ಪ್ರಣಾಮಮಾಡುತ್ತಿದ್ದಾರೆ. ಸಾಧುವೂ ಕೈಮುಗಿದು ತಲೆಯನ್ನು ಬಗ್ಗಿಸಿ ಮತ್ತೆ ಪ್ರಣಾಮಮಾಡಲಾರಂಭಿಸಿದ್ದಾನೆ.
ಶ್ರೀರಾಮಕೃಷ್ಣರು: “ಕಾಳಿಯ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?”
ಸಾಧು ಭಕ್ತಿಯುತವಾಗಿ: “ಕಾಳಿಯೇ ಮೂಲತತ್ತ್ವ”
ಶ್ರೀರಾಮಕೃಷ್ಣರು: “ಕಾಳಿಗೂ ಬ್ರಹ್ಮನಿಗೂ ಅಭೇದ. ಏನು ಅಲ್ಲವೇ?”
ಸಾಧು: “ಎಲ್ಲಿಯವರೆಗೆ ಮನಸ್ಸು ಬಹಿರ್ಮುಖವಾಗಿರುವುದೊ ಅಲ್ಲಿಯವರೆಗೆ ಕಾಳಿಯನ್ನು ಒಪ್ಪಬೇಕಾಗುತ್ತದೆ. ಎಲ್ಲಿಯವರೆಗೆ ಈ ಹೊರಗಿನ ಪ್ರಪಂಚ ಕಣ್ಣಿಗೆ ಬೀಳುತ್ತದೊ, ಒಳ್ಳೆಯದು ಕೆಟ್ಟದ್ದು ಎಂಬ ವಿವೇಚನೆ ಇರುವುದೊ, ಅಲ್ಲಿಯವರೆಗೆ ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದನ್ನು ತ್ಯಜಿಸಬೇಕು. ನಿಸ್ಸಂದೇಹವಾಗಿ ಈ ನಾಮರೂಪಾತ್ಮಕ ಪ್ರಪಂಚ ಮಿಥ್ಯೆಯಾದುದೆ; ಆದರೆ ಎಲ್ಲಿಯವರೆಗೆ ಮನಸ್ಸು ಬಹಿರ್ಮುಖವಾಗಿರುವುದೊ, ಅಲ್ಲಿಯವರೆಗೆ ಹೆಂಗಸನ್ನು ತ್ಯಜಿಸಬೇಕು. ಇದು ಒಳ್ಳೆಯದು, ಅದು ಕೆಟ್ಟದ್ದು ಎಂಬುದು ಸಾಧಕನಿಗೆ ಮಾತ್ರ; ಇಲ್ಲದಿದ್ದರೆ ಆತ ಭ್ರಷ್ಟಾಚಾರಿಯಾಗುತ್ತಾನೆ.”
ಪರಮಹಂಸರು ಸಾಧುವಿನೊಡನೆ ಈ ರೀತಿಯಾಗಿ ಮಾತುಕತೆಯಾಡುತ್ತ ತಮ್ಮ ಕೊಠಡಿಗೆ ಹಿಂದಿರುಗಿ ಬಂದರು.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೋಡಿದೆ ತಾನೆ, ಸಾಧು ಕಾಳೀದೇವಾಲಯದಲ್ಲಿ ಪ್ರಣಾಮಮಾಡಿದುದನ್ನು?”
ಮಾಸ್ಟರ್: “ಹೌದು, ನೋಡಿದೆ.”
೩೧ನೇ ಡಿಸೆಂಬರ್ ೧೮೮೩, ಪುಷ್ಯ ಶುಕ್ಲ ಬಿದಿಗೆ. ಸೋಮವಾರ
ಅಪರಾಹ್ನ ನಾಲ್ಕು ಘಂಟೆ ಸಮಯದಲ್ಲಿ ಪರಮಹಂಸರು ತಮ್ಮ ಕೊಠಡಿಯಲ್ಲಿ ಮಾಸ್ಟರ್, ರಾಖಾಲ, ಲಾಟು, ಹರೀಶ, ಬಲರಾಮ ಇವರೇ ಮೊದಲಾದ ಭಕ್ತರೊಡನೆ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು, ಮಾಸ್ಟರ್ ಹಾಗೂ ಬಲರಾಮನನ್ನು ಸಂಬೋಧಿಸಿ ಹೇಳುತ್ತಿದ್ದಾರೆ: “ಹಲಧಾರಿಯದು ಜ್ಞಾನಿಯ ಭಾವ. ಆತ ಹಗಲೂ ಇರುಳೂ ಅಧ್ಯಾತ್ಮರಾಮಾಯಣ, ಉಪನಿಷತ್ತು, ಈ ವಿಧದ ಇನ್ನೂ ಅನೇಕ ಪುಸ್ತಕಗಳನ್ನು ಓದುತ್ತಿದ್ದ. ಸಾಕಾರದ ಮಾತು ಎತ್ತಿತು ಎಂದರೆ, ಮುಖ ತಿರುಗಿಸಿಕೊಳ್ಳುತ್ತಿದ್ದ. ಒಮ್ಮೆ ನಾನು ದರಿದ್ರನಾರಾಯಣರು ತಮ್ಮ ಎಲೆಯಲ್ಲಿ ಬಿಟ್ಟಿದ್ದ ಅನ್ನವನ್ನು ತಿಂದೆ. ಅದನ್ನು ನೋಡಿ ಹಲಧಾರಿ ನನ್ನನ್ನು ಜರೆದ: ‘ಹೀಗೆ ಮಾಡಿದರೆ, ನಿಮ್ಮ ಮಕ್ಕಳನ್ನು ನೀವು ಮದುವೆ ಮಾಡುವ ಬಗೆ ಹೇಗೆ? ನಾನು ಬಿಸಿಬಿಸಿಯಾಗಿ ತಾಕಿಸಿದೆ: ‘ಎಲೋ ನೀಚ! ನಾನು ಮಕ್ಕಳು ಮರಿಗಳನ್ನು ಹುಟ್ಟಿಸಿಕೊಳ್ಳುತ್ತೇನೆ ಅಂತ ತಿಳಿದುಕೊಂಡಿದ್ದೀಯೇನು? ಗೀತೆ, ವೇದಾಂತ ಓದುತ್ತಿರುವ ನಿನ್ನ ಬಾಯಿಗೆ ಬೆಂಕಿಬೀಳ!’ ಹಾಗೇ ನೋಡಿ! ಒಂದು ಕಡೆ ನೋಡಿದರೆ ಜಗತ್ತು ಮಿಥ್ಯೆ ಎಂದು ಹೇಳುತ್ತಿದ್ದ, ಮತ್ತೆ ವಿಷ್ಣು ದೇವಾಲಯಕ್ಕೆ ಹೋಗಿ ಮೂಗು ಹಿಡಿದು ಕುಳಿತು ಧ್ಯಾನಮಾಡುತ್ತಿದ್ದ.”
ಸಾಯಂಕಾಲವಾದ ನಂತರ ಬಲರಾಮನೇ ಮೊದಲಾದ ಭಕ್ತರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಹೊರಟುಹೋದರು. ಪರಮಹಂಸರು ತಮ್ಮ ಕೊಠಡಿಯಲ್ಲಿ ಭಗವತಿಯ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಸ್ವಲ್ಪ ಹೊತ್ತಾದ ನಂತರ ದೇವಾಲಯಗಳಿಂದ ಮಂಗಳಾರತಿಯ ಸುಮಧುರ ಧ್ವನಿ ಕೇಳಿಬರಲಾರಂಭಿಸಿತು.
ಘಂಟೆ ರಾತ್ರಿ ಎಂಟು. ಪರಮಹಂಸರು ಭಾವೋನ್ಮತ್ತರಾಗಿ ತಮ್ಮ ಸುಮಧುರ ಕಂಠದಿಂದ ಭಗವತಿಯೊಡನೆ ಮಾತುಕತೆಯಾಡುತ್ತಿದ್ದಾರೆ. ಮಾಸ್ಟರ್ ನೆಲದ ಮೇಲೆ ಕುಳಿತಿದ್ದಾನೆ. “ಹರಿಃ ಓಂ! ಹರಿಃ ಓಂ! ಓಂ!” ಎಂಬುದಾಗಿ ಉಚ್ಚರಿಸಿದ ನಂತರ ಪರಮಹಂಸರು ಭಗವತಿಗೆ ಹೇಳುತ್ತಿದ್ದಾರೆ. “ಹೇ ತಾಯೆ, ಬ್ರಹ್ಮಜ್ಞಾನವನ್ನು ಕೊಟ್ಟು ನನ್ನನ್ನು ಬಾಹ್ಯಜ್ಞಾನಶೂನ್ಯನನ್ನಾಗಿ ಮಾಡಿಬಿಡಬೇಡ. ತಾಯೆ, ನನಗೆ ಬ್ರಹ್ಮಜ್ಞಾನ ಬೇಕಾಗಿಲ್ಲ. ಆನಂದಪಡಲು, ವಿಲಾಸಿಸಲು ನನಗೆ ಇಚ್ಛೆ ಇದೆ.” ಮತ್ತೆ ಹೇಳುತ್ತಿದ್ದಾರೆ: “ತಾಯೆ, ನನಗೆ ವೇದಾಂತ ಗೊತ್ತಿಲ್ಲ ಅದನ್ನು ತಿಳಿದುಕೊಳ್ಳಲು ಇಚ್ಛೆಯೂ ಇಲ್ಲ; ತಾಯೆ, ತಾಯೆ, ನೀನು ದೊರೆತುಬಿಟ್ಟುದೇ ಆದರೆ ವೇದ ವೇದಾಂತಗಳು ಎಷ್ಟೋ ಹಿಂದೆ ಬಿದ್ದುಕೊಂಡಿರುತ್ತವೆ.” ಬಳಿಕ ಹೇಳುತ್ತಿದ್ದಾರೆ: “ಓ ಕೃಷ್ಣ, ನಾನು ನಿನಗೆ ಹೇಳುತ್ತೇನೆ: ‘ಎಲೋ ಮಗು, ಇದನ್ನು ತಿನ್ನೊ! ಅದನ್ನು ತೆಗೆದುಕೊಳ್ಳೊ!’ ಓ ಕೃಷ್ಣ, ನಾನು ನಿನಗೆ ಹೇಳುತ್ತೇನೆ: ‘ಎಲೋ ಮಗು, ನೀನು ನನಗಾಗಿ ದೇಹಧಾರಣೆ ಮಾಡಿಕೊಂಡು ಬಂದಿದ್ದೀಯೆ.’”
೨ನೆ ಜನವರಿ ೧೮೮೪, ಪುಷ್ಯ ಶುಕ್ಲ ಚತುರ್ಥಿ, ಬುಧವಾರ
ರಾಖಾಲ, ಲಾಟು, ಹರೀಶ, ರಾಮಲಾಲ, ಮಾಸ್ಟರ್ ಪರಮಹಂಸರೊಡನೆ ದಕ್ಷಿಣೇಶ್ವರದಲ್ಲಿ ವಾಸವಾಗಿದ್ದಾರೆ. ಸುಮಾರು ಮೂರು ಘಂಟೆಯ ಸಮಯದಲ್ಲಿ ಪರಮಹಂಸರು ತಮ್ಮ ಕೊಠಡಿಯ ಪಶ್ಚಿಮ ವರಾಂಡದಲ್ಲಿ ಕುಳಿತು ಒಬ್ಬ ತಾಂತ್ರಿಕ ಭಕ್ತನೊಡನೆ ಮಾತನಾಡುತ್ತಿರುವುದು ಮಾಸ್ಟರನ ಕಣ್ಣಿಗೆ ಬಿತ್ತು. ಆತ ಕಾಷಾಯವಸ್ತ್ರಧಾರಿಯಾಗಿದ್ದ. ಪರಮಹಂಸರು ಮಾಸ್ಟರಿಗೆ ಹೇಳಿದರು, ತಮ್ಮ ಹತ್ತಿರ ಕುಳಿತುಕೊಳ್ಳುವಂತೆ. ಬಹುಶಃ ಪರಮಹಂಸರು ತಾಂತ್ರಿಕ ಭಕ್ತನೊಡನೆ ಮಾತುಕತೆಯಾಡುತ್ತ ಮಾಸ್ಟರಿಗೂ ತಿಳಿವಳಿಕೆ ಕೊಡಬೇಕು ಅಂತ ಇದ್ದಾರೆ ಅಂತ ಕಾಣುತ್ತದೆ. ಮಹಿಮ ಚಕ್ರವರ್ತಿ ಆ ತಾಂತ್ರಿಕ ಭಕ್ತನನ್ನು ಪರಮಹಂಸರ ಹತ್ತಿರಕ್ಕೆ ಕಳುಹಿಸಿದ್ದ.
ಶ್ರೀರಾಮಕೃಷ್ಣರು ತಾಂತ್ರಿಕ ಭಕ್ತನಿಗೆ: “ಮನುಷ್ಯನ ತಲೆಬುರುಡೆಯನ್ನು ಪಾತ್ರೆಯನ್ನಾಗಿ ಮಾಡಿಕೊಂಡು ಅದರಿಂದ ಮದ್ಯ ಕುಡಿಯುವುದು ತಾಂತ್ರಿಕ ಸಾಧನೆಯ ಒಂದು ಅಂಗ. ಆ ಮದ್ಯವನ್ನು ‘ಕಾರಣವಾರಿ’ ಅಂತ ಕರೆಯುತ್ತಾರೆ, ಅಲ್ಲವೆ?”
ತಾಂತ್ರಿಕ: “ಹೌದು,”
ಶ್ರೀರಾಮಕೃಷ್ಣರು: “ಆ ಪಾತ್ರೆಯಿಂದ ಹನ್ನೊಂದು ಸಲ, ಅಲ್ಲವೆ?”
ತಾಂತ್ರಿಕ: “ಇಲ್ಲ, ಕೇವಲ ಮೂರು ತೊಲ ಪ್ರಮಾಣದಷ್ಟು ಮಾತ್ರ-ಶವ ಸಾಧನೆಗಾಗಿ.”
ಶ್ರೀರಾಮಕೃಷ್ಣರು: “ನಾನು ಮದ್ಯವನ್ನು ಮುಟ್ಟವ ಹಾಗೂ ಇಲ್ಲ.”
ತಾಂತ್ರಿಕ: “ನಿಮ್ಮದು ಸಹಜಾನಂದ. ಅದು ದೊರೆತುದೇ ಆದರೆ, ಬೇರೆ ಏನೂ ಬೇಕಾಗದು.”
ಶ್ರೀರಾಮಕೃಷ್ಣರು: “ಇಲ್ಲಿ ನೋಡು; ನನಗೆ ಜಪ, ತಪ ಹಿಡಿಸುತ್ತಿಲ್ಲ, ಆದರೆ ಸರ್ವದಾ ಸ್ಮರಣ ಮನನ ನಡೆಯುತ್ತಿದೆ. ಒಳ್ಳೇದು, ಷಟ್ಚಕ್ರ ಅಂತ ಹೇಳುತ್ತಾರಲ್ಲ, ಅದೇನದು?”
ತಾಂತ್ರಿಕ: “ಅವು ವಿವಿಧ ತೀರ್ಥಸ್ಥಾನಗಳಿದ್ದಂತೆ. ಪ್ರತಿಯೊಂದು ಚಕ್ರದಲ್ಲೂ ಶಿವ ಶಕ್ತಿಯರ ವಾಸ. ಅವರನ್ನು ಸ್ಥೂಲ ಕಣ್ಣಿನಿಂದ ನೋಡಲಾಗುವುದಿಲ್ಲ. ಶರೀರವನ್ನು ಹೋಳು ಮಾಡಿ ಅವರನ್ನು ಹೊರಕ್ಕೆ ತೆಗೆಯಲಾಗುವುದಿಲ್ಲ ಪದ್ಮದ ದಂಟು ಶಿವಲಿಂಗ ಹಾಗೂ ಮೂಲ ಮಾತೃಸ್ಥಾನ.”
ಮಾಸ್ಟರ್ ಎಲ್ಲವನ್ನೂ ನಿಶ್ಶಬ್ದವಾಗಿ ಕುಳಿತು ಕೇಳುತ್ತಿದ್ದಾನೆ. ಆ ತಾಂತ್ರಿಕ ಭಕ್ತನ ಕಡೆ ನೋಡಿ ಆತನನ್ನು ಕೇಳುತ್ತಿದ್ದಾರೆ: “ಒಳ್ಳೇದು, ಬೀಜಮಂತ್ರೋಪದೇಶವನ್ನು ಪಡೆಯದೆ ಸಿದ್ಧಿಯನ್ನು ಪಡೆಯಲಾಗುವುದೆ?”
ತಾಂತ್ರಿಕ: “ಪಡೆಯಬಹುದು; ಶ್ರದ್ಧೆಯಿದ್ದರೆ-ಗುರುವಾಕ್ಯದಲ್ಲಿ ಶ್ರದ್ಧೆಯಿದ್ದರೆ.”
ಶ್ರೀರಾಮಕೃಷ್ಣರು ಮಾಸ್ಟರ ಕಡೆ ತಿರುಗಿ ಆತನ ಗಮನವನ್ನು ಸೆಳೆದು ಹೇಳುತ್ತಿದ್ದಾರೆ: “ಶ್ರದ್ಧೆ!”
ಆ ತಾಂತ್ರಿಕ ಭಕ್ತ ಹೊರಟುಹೋದ ನಂತರ ಬ್ರಾಹ್ಮಸಮಾಜದ ಅನುಯಾಯಿ ಜಯಗೋಪಾಲಸೇನ ಕೊಠಡಿಯನ್ನು ಪ್ರವೇಶಿಸಿದ. ಪರಮಹಂಸರು ಆತನೊಡನೆ ಮಾತುಕತೆಯಾಡಲು ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು ಜಯಗೋಪಾಲಸೇನನಿಗೆ: “ಯಾರನ್ನೇ ಆಗಲಿ, ಯಾವ ಮತವನ್ನೇ ಆಗಲಿ, ದ್ವೇಷಿಸಕೂಡದು. ನಿರಾಕಾರವಾದಿ, ಸಾಕಾರವಾದಿ ಎಲ್ಲರೂ ಆ ಒಂದೇ ಭಗವಂತನ ಕಡೆಗೆ ಹೋಗುತ್ತಿದ್ದಾರೆ. ಜ್ಞಾನಿ, ಯೋಗಿ, ಭಕ್ತ-ಎಲ್ಲರೂ ಆತನಿಗಾಗಿಯೇ ಹುಡುಕುತ್ತಿದ್ದಾರೆ. ಜ್ಞಾನಮಾರ್ಗಿಗಳು ಆತನನ್ನು ‘ಬ್ರಹ್ಮ’ ಎಂದು, ಯೋಗಿಗಳು ‘ಆತ್ಮ ಅಥವಾ ಪರಮಾತ್ಮ’ ಎಂದು, ಭಕ್ತರು ‘ಭಗವಾನ್’ ಎಂದು ಕರೆಯುತ್ತಾರೆ. ಮತ್ತೆ ಜನ ಹೇಳುತ್ತಾರೆ, ನಿತ್ಯಭಗವಂತನಿದ್ದಾನೆ, ನಿತ್ಯದಾಸರಿದ್ದಾರೆ ಎಂದು.”
ಜಯಗೋಪಾಲ: “ಎಲ್ಲಾ ಮಾರ್ಗಗಳೂ ಸತ್ಯ ಎಂದು ಅರಿಯುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಯಾವುದಾದರೂ ಒಂದು ಮಾರ್ಗವನ್ನು ಸರಿಯಾಗಿ ಅನುಸರಿಸಿ ಮುಂದುವರಿದುದೇ ಆದರೆ ಭಗವಂತನನ್ನು ಮುಟ್ಟಬಹುದು. ಬಳಿಕ ಎಲ್ಲಾ ಮಾರ್ಗಗಳ ಸುದ್ದಿಸಮಾಚಾರಗಳನ್ನೂ ತಿಳಿದುಕೊಳ್ಳಬಹುದು. ಒಮ್ಮೆ ಹೇಗೊ ಮಾಡಿ ಚಾವಣಿಯ ಮೇಲಕ್ಕೆ ಹತ್ತಿಬಿಟ್ಟಿದ್ದೇ ಆದರೆ, ಬಳಿಕ ಬೇಕಾದರೆ ಮರದ ಹಂತಗಳ ಮೂಲಕ ಅಥವಾ ಬೊಂಬಿನ ಮೂಲಕ ಅಥವಾ ಹಗ್ಗದ ಮೂಲಕ ಕೆಳಕ್ಕೆ ಇಳಿದು ಬಂದುಬಿಡಬಹುದು.
“ಭಗವಂತನ ಕೃಪೆಯೊಂದೊದಗಿತು ಎಂದರೆ ಭಕ್ತ ಎಲ್ಲವನ್ನೂ ಅರಿತುಕೊಳ್ಳಬಲ್ಲ. ಆತನ ಸಾಕ್ಷಾತ್ಕಾರ ಒಮ್ಮೆ ದೊರೆಯಿತು ಎಂದರೆ, ಎಲ್ಲವನ್ನೂ ಅರಿತುಕೊಳ್ಳಲು ಸಾಧ್ಯ. ಒಮ್ಮೆ ಹೇಗಾದರೂ ಮಾಡಿ ಮನೆಯ ಯಜಮಾನನನ್ನು ಸಂಧಿಸಿ ಆತನ ಸ್ನೇಹ ಬೆಳೆಸಿಬಿಟ್ಟಿದ್ದೇ ಆದರೆ ಆತನೇ ಹೇಳಿಬಿಡುತ್ತಾನೆ ತನಗೆಷ್ಟು ತೋಟತುಡಿಕೆಗಳಿವೆ, ಕೆರೆಕಟ್ಟೆಗಳಿವೆ, ಲೇವಾದೇವಿ ಪತ್ರಗಳಿವೆ ಎಂಬುದನ್ನು.”
ಜಯಗೋಪಾಲ: “ಏನು ಮಾಡಿದರೆ ಭಗವಂತನ ಕೃಪೆಯೊದಗುತ್ತದೆ?”
ಶ್ರೀರಾಮಕೃಷ್ಣರು: “ಭಗವಂತನ ನಾಮಗುಣಕೀರ್ತನೆಯನ್ನು ಸರ್ವದಾ ಮಾಡುತ್ತಿರಬೇಕು. ವಿಷಯಚಿಂತನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತ್ಯಜಿಸಬೇಕು. ನೀನು ಬೆಳೆ ಬೆಳೆಯಲು ಬಹಳ ಶ್ರಮವಹಿಸಿ ಗದ್ದೆಗೆ ನೀರು ತರಬಹುದು. ಆದರೆ ತೆವರಿಯಲ್ಲಿರುವ ಬಿಲಗಳ ಮೂಲಕ ನೀರೆಲ್ಲಾ ಹೊರಕ್ಕೆ ಹರಿದುಹೋಗಿಬಿಡುತ್ತದೆ ಅಂತ ಇಟ್ಟುಕೋ. ಆಗ ನಾಲೆ ತೋಡಿ ನೀರು ತಂದದ್ದೆ ವೃಥಾ ಪರಿಶ್ರಮ.
“ಚಿತ್ತಶುದ್ಧಿಯಾಯಿತು ಎಂದರೆ, ವಿಷಯಾಸಕ್ತಿ ಹೊರಟುಹೋಯಿತು ಅಂದರೆ, ವ್ಯಾಕುಲತೆಯುಂಟಾಗುತ್ತದೆ. ಆಗ ಮಾತ್ರವೇ ನಿನ್ನ ಪ್ರಾರ್ಥನೆ ಭಗವಂತನನ್ನು ಮುಟ್ಟುತ್ತದೆ. ಟೆಲಿಗ್ರಾಫ್ ತಂತಿಯಲ್ಲಿ ಬೇರೆ ವಸ್ತು ಬೆರೆತುಕೊಂಡಿದ್ದರೆ ಅಥವಾ ಅದು ಕಿತ್ತುಹೋಗಿದ್ದರೆ ವಾರ್ತೆಯನ್ನು ಅದು ಹೊತ್ತುಕೊಂಡು ಹೋಗಲಾರದು.
“ನಾನು ವ್ಯಾಕುಲನಾಗಿ ಒಬ್ಬನೇ ಏಕಾಂಗಿಯಾಗಿ ಅಳುತ್ತಿದ್ದೆ: ‘ಹೇ ಭಗವಂತ ಎಲ್ಲಿದ್ದೀಯೋ?’ ಅಂತ. ಹಾಗೇ ಅಳುತ್ತ ಅಳುತ್ತ ಬಾಹ್ಯಜ್ಞಾನಶೂನ್ಯನಾಗಿಬಿಡುತ್ತಿದ್ದೆ. ನನ್ನ ಮನಸ್ಸು ಆಗ ಮಹಾವಾಯುವಿನಲ್ಲಿ ಲೀನವಾಗಿಬಿಡುತ್ತಿತ್ತು.
“ಯೋಗ ಯಾವುದರಿಂದ ದೊರೆಯುತ್ತದೆ? ಒಮ್ಮೆಗೇ ವಿಷಯಾಸಕ್ತಿಯನ್ನು ತ್ಯಾಗ ಮಾಡುವುದರಿಂದ. ಯಾವ ನ್ಯೂನತೆಯೂ ಇಲ್ಲದ ಟೆಲಿಗ್ರಾಫ್ ತಂತಿಯ ಹಾಗೆ ಮನಸ್ಸು ಕಳಂಕರಹಿತವಾಗಿಯೂ ಶುದ್ಧವಾಗಿಯೂ ಇರಬೇಕು.
“ಮನಸ್ಸಿನಲ್ಲಿ ಯಾವ ಕಾಮನೆಯನ್ನೇ ಆಗಲಿ, ವಾಸನೆಯನ್ನೇ ಆಗಲಿ ಇಟ್ಟುಕೊಂಡಿರಬಾರದು. ಕಾಮನೆ, ವಾಸನೆ ಇತ್ತು ಎಂದರೆ, ಅದಕ್ಕೆ ಸಕಾಮ ಭಕ್ತಿ ಅಂತ ಹೆಸರು. ನಿಷ್ಕಾಮ ಭಕ್ತಿಗೆ ಅಹೇತುಕ ಭಕ್ತಿ ಅಂತ ಹೆಸರು. ನೀನು ನನ್ನನ್ನು ಪ್ರೀತಿಸು ಅಥವಾ ಬಿಡು, ನಾನು ಮಾತ್ರ ನಿನ್ನನ್ನು ಪ್ರೀತಿಸುತ್ತೇನೆ. ಇದಕ್ಕೇ ಅಹೇತುಕ ಭಕ್ತಿ ಅಂತ ಹೆಸರು.
“ಮುಖ್ಯವಾದುದೇನೆಂದರೆ ಭಗವಂತನನ್ನು ಪ್ರೀತಿಸಬೇಕು. ಅಗಾಧ ಪ್ರೀತಿಯುಂಟಾಯಿತು ಎಂದರೆ, ಆತನ ದರ್ಶನ ದೊರೆಯುತ್ತದೆ. ಸತಿಗೆ ಪತಿಯಲ್ಲಿರುವ ಪ್ರೀತಿ, ತಾಯಿಗೆ ಮಗುವಿನಲ್ಲಿರುವ ಪ್ರೀತಿ, ವಿಷಯಾಸಕ್ತನಿಗೆ ವಿಷಯವಸ್ತುಗಳಲ್ಲಿರುವ ಪ್ರೀತಿ-ಈ ಮೂರು ಪ್ರೀತಿಗಳನ್ನೂ ಒಟ್ಟುಗೂಡಿಸಿ ಭಗವಂತನ ಕಡೆ ತಿರುಗಿಸುವುದಾದರೆ ಆಗ ಆತನ ದರ್ಶನ ದೊರೆಯುತ್ತದೆ.”
ಜಯಗೋಪಾಲ ವಿಷಯಾಸಕ್ತ. ಅದಕ್ಕಾಗಿಯೇನು ಪರಮಹಂಸರು ಆತನಿಗೆ ಈ ಹಿತಕಾರಿ ಉಪದೇಶಗಳನ್ನು ಕೊಟ್ಟದ್ದು?
ಪರಮಹಂಸರು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಘಂಟೆ ರಾತ್ರಿ ಎಂಟು ಕೊಠಡಿಯಲ್ಲಿ ಮಾಸ್ಟರ್, ರಾಖಾಲ ಕುಳಿತಿದ್ದಾರೆ. ಮಾಸ್ಟರ್ ಇಲ್ಲಿಯೇ ವಾಸಿಸಲಾರಂಭಿಸಿ ಇಂದಿಗೆ ಇಪ್ಪತ್ತೊಂದು ದಿನ. ಪರಮಹಂಸರು ಮಾಸ್ಟರಿಗೆ ಕಟ್ಟಾಜ್ಞೆಯಿತ್ತಿದ್ದಾರೆ. ಆತ ವಿಚಾರದಲ್ಲಿ ತೊಡಗಕೂಡದೆಂದು.
ಶ್ರೀರಾಮಕೃಷ್ಣರು ರಾಖಾಲನಿಗೆ : “ಹೆಚ್ಚಾಗಿ ವಾದದಲ್ಲಿ ತೊಡಗುವುದು ಒಳ್ಳೆಯದಲ್ಲ. ಮೊದಲು ಭಗವಂತನ ದರ್ಶನ, ಬಳಿಕ ಜಗದ್ವಿಚಾರ. ಮೊದಲು ಆತನ ಸಾಕ್ಷಾತ್ಕಾರವನ್ನು ಪಡೆದುಕೊಂಡದ್ದೇ ಆದರೆ, ಬಳಿಕ ಜಗತ್ತಿನ ವಿಷಯವನ್ನೆಲ್ಲಾ ಚೆನ್ನಾಗಿ ಅರಿತುಕೊಳ್ಳಬಹುದು. (ಮಾಸ್ಟರ್-ರಾಖಾಲರಿಗೆ) ಮೊದಲು ಯದುಮಲ್ಲಿಕನೊಡನೆ ಸ್ನೇಹ ಬೆಳಸಿಕೊಂಡುಬಿಟ್ಟದ್ದೇ ಆದರೆ ಬಳಿಕ ಆತನಿಗೆಷ್ಟು ಮನೆ, ತೋಟ, ಲೇವಾದೇವಿ ಪತ್ರ ಇವೆ ಎಂಬಿವೇ ಮೊದಲಾದ ಎಲ್ಲಾ ವಿಷಯಗಳನ್ನೂ ಅರಿತುಕೊಂಡುಬಿಡಬಹುದು. ಅದಕ್ಕಾಗಿಯೇ ನಾರದ ಋಷಿ ‘ಮರಾ’, ‘ಮರಾ’ ಎಂದು ಜಪಿಸುವಂತೆ ವಾಲ್ಮೀಕಿಗೆ ಉಪದೇಶವಿತ್ತುದು. ‘ಮ’ ಅಂದರೆ ಭಗವಂತ, ‘ರಾ’ ಅಂದರೆ ಜಗತ್ತು. ಮೊದಲು ಭಗವಂತ, ಅನಂತರ ಜಗತ್ತು. ಕೃಷ್ಣಕಿಶೋರ ಹೇಳಿದ, ‘ಮರಾ’ ಎಂಬ ಮಂತ್ರವನ್ನು ನಾರದ ಋಷಿ ವಾಲ್ಮೀಕಿಗೆ ಕೊಟ್ಟಿದ್ದರಿಂದ ಅದು ಬಹಳ ಪವಿತ್ರವಾದ ಮಂತ್ರವೇ. ‘ಮ’ ಅಂದರೆ ಭಗವಂತ, ‘ರಾ’ ಅಂದರೆ ಜಗತ್ತು.
“ಆದುದರಿಂದ ಮೊದಲು ವಾಲ್ಮೀಕಿಯ ಹಾಗೆ ಎಲ್ಲವನ್ನೂ ತ್ಯಜಿಸಿ ನಿರ್ಜನಪ್ರದೇಶದಲ್ಲಿ ಗೋಪ್ಯವಾಗಿ ವ್ಯಾಕುಲಚಿತ್ತದಿಂದ ಅಳುತ್ತ ಅಳುತ್ತ ಭಗವಂತನನ್ನು ಕರೆಯಬೇಕು. ಮೊದಲು ಆವಶ್ಯಕವಾದದ್ದು ಭಗವಂತನ ದರ್ಶನ; ಬಳಿಕ ವಿಚಾರ-ಶಾಸ್ತ್ರಗಳ ಮತ್ತು ಜಗತ್ತಿನ ಸಂಬಂಧವಾಗಿ.
(ಮಾಸ್ಟರಿಗೆ): “ಆದ್ದರಿಂದಲೇ ನಾನು ನಿನಗೆ ಹೇಳುತ್ತಾ ಬಂದಿರುವುದು-ಇನ್ನು ವಿಚಾರದಲ್ಲಿ ತೊಡಗಬೇಡ ಎಂದು. ಅದನ್ನು ಮತ್ತೆ ಹೇಳಲೋಸುಗವೇ ನಾನು ಸರ್ವೆಮರಗಳ ತೋಪಿನಿಂದ ಎದ್ದು ಬಂದುದು. ಹೆಚ್ಚಾಗಿ ವಿಚಾರದಲ್ಲಿ ತೊಡಗಿದರೆ ಕೊನೆಯಲ್ಲಿ ಹಾನಿ ತಗಲುತ್ತದೆ. ಕೊನೆಗೆ ನೀನು ಹಾಜರಾನ ಹಾಗೆ ಆಗಿಬಿಡುತ್ತೀಯೆ ನೋಡಿಕೊ. ನಾನು ಒಬ್ಬನೇ ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ತಿರುಗುತ್ತ ಭಗವತಿಗೆ ಅಳುತ್ತ ಅಳುತ್ತ ಮೊರೆಯಿಡುತ್ತಿದ್ದೆ. “ಹೇ ತಾಯೆ, ನನ್ನ ವಿಚಾರಬುದ್ಧಿಗೆ ನಿನ್ನ ವಜ್ರಾಘಾತವನ್ನು ಹಾಕು.’ ಇನ್ನು ಮುಂದೆ ವಿಚಾರದಲ್ಲಿ ತೊಡಗುವುದಿಲ್ಲವೆಂದು ವಾಗ್ದಾನಮಾಡು.”
(ಮಾಸ್ಟರಿಗೆ) “ಖಂಡಿತ, ನಾನು ಇನ್ನೆಂದಿಗೂ ವಿಚಾರದಲ್ಲಿ ತೊಡಗುವುದಿಲ್ಲ.”
ಶ್ರೀರಾಮಕೃಷ್ಣರು: “ಭಕ್ತಿಯಿಂದಲೇ ಎಲ್ಲವೂ ದೊರೆತುಬಿಡುತ್ತದೆ. ಯಾರಿಗೆ ಬ್ರಹ್ಮ ಜ್ಞಾನ ಬೇಕೊ ಅವರು ಭಕ್ತಿಮತಾವಲಂಬಿಗಳಾಗಿದ್ದರೂ ಅವರಿಗೂ ಅದು ದೊರೆತು ಬಿಡುತ್ತದೆ.
“ಭಗವಂತನ ಕೃಪೆಯೊಂದಿತ್ತು ಎಂದರೆ, ಜ್ಞಾನದ ಅಭಾವವಿರುವುದೆ? ಕಾಮಾರ ಪುಕುರಿನಲ್ಲಿ ಜನ ಬತ್ತವನ್ನು ಅಳೆಯುತ್ತಾರೆ. ರಾಶಿ ಇನ್ನೇನು ಮುಗಿಯುತ್ತಾ ಬಂತು ಅನ್ನುವುದರೊಳಗೇ ಇನ್ನೊಬ್ಬ ರಾಶಿಯನ್ನು ತಳ್ಳಿಕೊಡುತ್ತಾನೆ. ಭಗವತಿ ಜ್ಞಾನದ ದೃಷ್ಟಿಯನ್ನು ತಳ್ಳಿಕೊಟ್ಟುಬಿಡುತ್ತಾಳೆ.
“ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡ ನಂತರ ಬರೀ ಪಂಡಿತರು ಕಸಕಡ್ಡಿಯಂತೆ ತೋರಿಬರುತ್ತಾರೆ. ಒಮ್ಮೆ ಪದ್ಮಲೋಚನ ನನಗೆ ಹೇಳಿದ: ‘ನಾನು ನಿಮ್ಮೊಡನೆ ಬೆಸ್ತರ ಸಭೆಗೂ ಹೋಗಿಬರಬಲ್ಲೆ. ಅದರಿಂದ ಯಾವ ರಾಜ್ಯ ತಾನೆ ಮುಳುಗಿಹೋಗಿಬಿಟ್ಟೀತು? ನಾನು ನಿಮ್ಮೊಡನೆ ಹರಿಜನರ ಮನೆಗೆ ಹೋಗಿಯೂ ಊಟಮಾಡಿ ಬರಬಲ್ಲೆ.’
“ಭಕ್ತಿಯಿಂದಲೇ ಎಲ್ಲವನ್ನೂ ಹೊಂದಬಹುದು. ಭಗವಂತನನ್ನು ಪ್ರೀತಿಸಿದುದೇ ಆದರೆ ಯಾವ ಅಭಾವವೂ ಇರದು. ಒಂದು ದಿನ ಭಗವತಿಯ ಹತ್ತಿರ ಕಾರ್ತಿಕೇಯ ಮತ್ತು ಗಣೇಶ ಇಬ್ಬರೂ ಕುಳಿತಿದ್ದರು. ಆಕೆ ಕೊರಳಿಗೆ ಒಂದು ರತ್ನಖಚಿತ ಹಾರವನ್ನು ಹಾಕಿಕೊಂಡಿದ್ದಳು. ಭಗವತಿ ಅವರಿಗೆ ಹೇಳಿದಳು: ‘ನಿಮ್ಮಿಬ್ಬರಲ್ಲಿ ಯಾರು ಮೊದಲು ಈ ಬ್ರಹ್ಮಾಂಡವನ್ನು ಸುತ್ತಿ ಬರಬಲ್ಲಿರೊ ಅವರಿಗೆ ಈ ಹಾರವನ್ನು ಕೊಡುತ್ತೇನೆ’. ಕಾರ್ತಿಕೇಯ ಒಡನೆಯೇ ಒಂದು ನಿಮಿಷವನ್ನೂ ಕಳೆಯದೆ ನವಿಲನ್ನು ಹತ್ತಿ ಹೊರಟೇಬಿಟ್ಟ. ಗಣೇಶ ಸಾವಕಾಶವಾಗಿ ಭಗವತಿಯ ಸುತ್ತ ಪ್ರದಕ್ಷಿಣೆ ಬಂದು ಆಕೆಗೆ ಸಾಷ್ಟಾಂಗ ಪ್ರಣಾಮ ಮಾಡಿದ. ಆತನಿಗೆ ಗೊತ್ತಿತ್ತು, ತಾಯ ಗರ್ಭದಲ್ಲೇ ಇಡೀ ಬ್ರಹ್ಮಾಂಡವಿದೆ ಎಂದು. ಭಗವತಿ ಪ್ರಸನ್ನಳಾಗಿ ಗಣೇಶನ ಕೊರಳಿಗೆ ಆ ಹಾರವನ್ನು ಹಾಕಿಬಿಟ್ಟಳು. ಬಹಳ ಸಮಯವಾದ ನಂತರ ಕಾರ್ತಿಕೇಯ ಬಂದು ನೋಡುತ್ತಾನೆ, ಅಣ್ಣ ಆಗಲೆ ಕೊರಳಿಗೆ ಹಾರ ಹಾಕಿಕೊಂಡು ಕುಳಿತಿದ್ದಾನೆ.
“ಅಳುತ್ತ ಅಳುತ್ತ ನಾನು ಭಗವತಿಗೆ ಪ್ರಾರ್ಥನೆಮಾಡಿದೆ : ‘ತಾಯೆ, ವೇದವೇದಾಂತಗಳಲ್ಲಿ ಏನು ಇದೆ ಎಂಬುದನ್ನು ನನಗೆ ತಿಳಿಸಿಕೊಟ್ಟುಬಿಡು. ಪುರಾಣ, ತಂತ್ರಗಳಲ್ಲಿ ಏನಿದೆ ಎಂಬುದನ್ನೂ ನನಗೆ ತಿಳಿಸಿಕೊಟ್ಟುಬಿಡು.’ ಆಕೆ ಒಂದೊಂದಾಗಿ ನನಗೆ ತಿಳಿಸಿಕೊಟ್ಟುಬಿಟ್ಟಳು.
“ಆಕೆ ಎಲ್ಲವನ್ನೂ ನನಗೆ ತೋರಿಸಿಕೊಟ್ಟುಬಿಟ್ಟಿದ್ದಾಳೆ. ಓ, ಆಕೆ ನನಗೆ ಎಷ್ಟೊಂದು ಅನುಭವಗಳನ್ನು ಮಾಡಿಕೊಟ್ಟಿದ್ದಾಳೆ! ಒಂದು ದಿನ ತೋರಿಸಿದಳು, ಎಲ್ಲೆಲ್ಲೂ ಶಿವ ಶಕ್ತಿಯರಿರುವುದನ್ನು. ಎಲ್ಲೆಲ್ಲೂ ಶಿವಶಕ್ತಿಯರ ಕ್ರೀಡೆಯೇ ನಡೆಯುತ್ತಿರುವುದನ್ನು ನೋಡಿದೆ. ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ತರುಗಳಲ್ಲಿ, ಲತೆಗಳಲ್ಲಿ ಎಲ್ಲದರಲ್ಲೂ ಶಿವಶಕ್ತಿಯಿರುವುದನ್ನು ನೋಡಿದೆ. ಪ್ರತಿಯೊಂದರಲ್ಲೂ ಪುರುಷ ಪ್ರಕೃತಿಯರ ಕ್ರೀಡೆಯನ್ನು ನೋಡಿದೆ.
“ಇನ್ನೊಂದು ದಿನ ತೋರಿಸಿದಳು, ನರಮುಂಡದ ರಾಶಿಯನ್ನು-ಪರ್ವತದ ಎತ್ತರದಷ್ಟು. ಇನ್ನು ಬೇರೆ ಏನೂ ಇರಲಿಲ್ಲ. ನಾನು ಅದರ ಮಧ್ಯದಲ್ಲಿ ಒಬ್ಬನೇ ಕುಳಿತಿದ್ದೆ.
“ಇನ್ನೊಮ್ಮೆ ಆಕೆ ನನಗೆ ತೋರಿಸಿದಳು ಮಹಾ ಸಮುದ್ರವನ್ನು. ನಾನು ಉಪ್ಪಿನ ಗೊಂಬೆಯಾಗಿ ಅದನ್ನು ಅಳೆಯಲು ಹೋಗುತ್ತಿದ್ದೆ. ಹಾಗೇ ಹೋಗಿ ಗುರುವಿನ ಕೃಪೆಯಿಂದ ಕಲ್ಲಾಗಿ ಪರಿವರ್ತನೆಯಾಗಿಬಿಟ್ಟೆ. ಆಗ ಕಣ್ಣಿಗೆ ಬಿತ್ತು ಒಂದು ಹಡಗು. ಒಡನೇ ಅದನ್ನು ಹತ್ತಿಬಿಟ್ಟೆ. ಗುರುವೇ ಚುಕ್ಕಾಣಿಗ. ಸಚ್ಚಿದಾನಂದ ಗುರುವಿಗೆ ದಿನವೂ ಪ್ರಾತಃಕಾಲ ನೀನು ಪ್ರಾರ್ಥನೆ ಸಲ್ಲಿಸುತ್ತಾ ಇದ್ದೀಯೇನು?”
ಮಾಸ್ಟರ್: “ಹೌದು, ಸಲ್ಲಿಸುತ್ತಾ ಇದ್ದೇನೆ.”
ಶ್ರೀರಾಮಕೃಷ್ಣರು: “ಗುರು ಚುಕ್ಕಾಣಿಗ. ಆಗ ನೋಡುತ್ತೇನೆ, ‘ನಾನು’ ಎಂಬುದು ಒಂದು, ‘ನೀನು’ ಎಂಬುದು ಇನ್ನೊಂದು ವಸ್ತು. ಮತ್ತೆ ಸಮುದ್ರಕ್ಕೆ ಧುಮುಕಿ ಮೀನು ಆದೆ. ಬಳಿಕ ಸಚ್ಚಿದಾನಂದ ಸಾಗರದಲ್ಲಿ ಆನಂದದಿಂದ ನಾನೇ ಈಜಾಡುವುದನ್ನು ನೋಡಿದೆ.
“ಇವೆಲ್ಲಾ ಅತಿ ಗುಹ್ಯ ವಿಷಯಗಳು. ವಿಚಾರದಿಂದ ಏನು ತಾನೇ ಗೊತ್ತಾದೀತು? ಯಾವಾಗ ಭಗವಂತನೇ ಮಾರ್ಗದರ್ಶಕನಾಗುತ್ತಾನೊ ಆಗ ಎಲ್ಲವೂ ದೊರೆತುಬಿಡುತ್ತವೆ -ಯಾವುದರ ಅಭಾವವೂ ಇರದು.”
೪ನೆ ಜನವರಿ ೧೮೮೪, ಪುಷ್ಯ ಶುಕ್ಲ ಷಷ್ಠಿ, ಶುಕ್ರವಾರ
ಪರಮಹಂಸರು ಪಂಚವಟಿಯಲ್ಲಿ ಕುಳಿತುಕೊಂಡಿದ್ದಾರೆ. ಘಂಟೆ ಅಪರಾಹ್ನ ನಾಲ್ಕು. ಮಾಸ್ಟರ್ ಇನ್ನೂ ಪರಮಹಂಸರೊಡನೆಯೇ ವಾಸವಾಗಿದ್ದಾನೆ. ಆತ ಬಿಲ್ವ ಮರದ ಕೆಳಗೆ ತನ್ನ ಬಹುಭಾಗ ಸಮಯವನ್ನು ಧ್ಯಾನದಲ್ಲಿ ಕಳೆಯುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಮತ್ತೆಂದಿಗೂ ವಿಚಾರದಲ್ಲಿ ತೊಡಗಬೇಡ. ಕೊನೆಗೆ ಅದರಿಂದ ಹಾನಿಯುಂಟಾಗುತ್ತದೆ. ಭಗವಂತನ ಪ್ರಾರ್ಥನೆಮಾಡುವಾಗ ಯಾವುದಾದರೂ ಒಂದು ಭಾವವನ್ನು ಆಶ್ರಯಿಸಬೇಕು-ಸಖೀಭಾವವನ್ನೊ, ದಾಸೀಭಾವವನ್ನೊ, ಸಂತಾನಭಾವವನ್ನೊ ಅಥವಾ ವೀರಭಾವವನ್ನೊ.
“ನನ್ನದು ಸಂತಾನಭಾವ. ಈ ಭಾವವನ್ನು ನೋಡಿದೊಡನೆಯೇ ಮಾಯಾದೇವಿ ದಾರಿ ಬಿಟ್ಟು ನಿಂತುಕೊಳ್ಳುತ್ತಾಳೆ-ಲಜ್ಜೆಪಟ್ಟುಕೊಂಡು.
“ವೀರಭಾವ ಬಹಳ ಕಠಿಣ. ಶಾಕ್ತರು, ವೈಷ್ಣವ ಸಂಪ್ರದಾಯಕ್ಕೆ ಸೇರಿದ ಬಾವುಲರು. ಈ ಭಾವವನ್ನು ಆರೋಪಿಸಿಕೊಳ್ಳುತ್ತಾರೆ. ಆದರೆ ಇದರಲ್ಲಿ ನೇರವಾಗಿರುವುದು ಬಹಳ ಕಠಿಣ. ಮತ್ತೆ ಶಾಂತ, ದಾಸ್ಯ, ಸಖ್ಯ, ವಾತ್ಸಲ್ಯ, ಮಧುರ ಭಾವಗಳೂ ಇವೆ. ಮಧುರಭಾವದಲ್ಲಿ ಎಲ್ಲವೂ ಸೇರಿಕೊಂಡಿವೆ-ಶಾಂತ, ದಾಸ್ಯ, ಸಖ್ಯ, ವಾತ್ಸಲ್ಯ. (ಮಾಸ್ಟರಿಗೆ) ನಿನಗೆ ಇವುಗಳಲ್ಲಿ ಯಾವುದು ಹಿಡಿಸುತ್ತದೆ?”
ಮಾಸ್ಟರ್: “ನನಗೆ ಎಲ್ಲವೂ ಹಿಡಿಸುತ್ತದೆ.”
ಶ್ರೀರಾಮಕೃಷ್ಣರು: “ಎಲ್ಲಾ ಭಾವಗಳು ಸಿದ್ಧನ ಅವಸ್ಥೆಯಲ್ಲಿ ಮಾತ್ರ ಹಿಡಿಸುತ್ತವೆ. ಆ ಅವಸ್ಥೆಯಲ್ಲಿ ಕಾಮಗಂಧ ಲೇಶಮಾತ್ರವೂ ಇರದು. ವೈಷ್ಣವಶಾಸ್ತ್ರದಲ್ಲಿ ಇದೇ ಚಂಡೀದಾಸನ ಮತ್ತು ರಜಕಿನಿಯ (ಅಗಸಗಿತ್ತಿ) ಕಥೆ. ಅವರ ಪ್ರೀತಿ ಕಾಮಗಂಧ ವಿಹೀನವಾಗಿತ್ತು.”
“ಆ ಅವಸ್ಥೆಯಲ್ಲಿ ಪ್ರಕೃತಿಭಾವ. ಸಾಧಕನಿಗೆ ತಾನು ಪುರುಷ ಎಂಬ ಬೋಧೆ ಇರದು. ಮೀರಾಬಾಯಿ ಹೆಂಗಸಾಗಿದ್ದುದರಿಂದ ಸನಾತನ ಗೋಸ್ವಾಮಿ ಆಕೆಗೆ ಭೇಟಿಕೊಡಲು ಒಪ್ಪಲಿಲ್ಲ. ಆಗ ಆಕೆ ಆತನಿಗೆ ಉತ್ತರ ಕಳುಹಿಸಿದಳು: “ಶ್ರೀಕೃಷ್ಣನೊಬ್ಬನೆ ಏಕಮಾತ್ರ ಪುರುಷ. ಬೃಂದಾವನದಲ್ಲಿರುವವರೆಲ್ಲರೂ ಆ ಪುರುಷನ ದಾಸಿಯರು. ಅಂಥಾದ್ದರಲ್ಲಿ ತಾವೂ ಒಬ್ಬ ಪುರುಷ ಎಂಬ ಅಭಿಮಾನವಿಟ್ಟುಕೊಂಡಿರುವುದು ಸರಿಯೇನು?’”
ಈಗ ಮುಸ್ಸಂಜೆ. ಮಾಸ್ಟರ್ ಪರಮಹಂಸರ ಹತ್ತಿರ ಕುಳಿತಿದ್ದಾನೆ. ಸಮಾಚಾರ ಬಂತು, ಕೇಶವಸೇನನ ರೋಗ ಬಲಗೊಂಡಿದೆ ಎಂದು. ಆತನ ಮಾತೆತ್ತಿ ಈಗ ಪರಮಹಂಸರು ಬ್ರಾಹ್ಮಸಮಾಜದ ವಿಷಯವಾಗಿ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೋಡು, ಅವರು ಅಲ್ಲಿ ಕೇವಲ ಉಪನ್ಯಾಸ ಕೊಡುತ್ತಾರೋ ಅಥವಾ ಧ್ಯಾನವನ್ನೂ ಮಾಡುತ್ತಾರೊ? ಅವರು ತಮ್ಮ ಆರಾಧನೆಯನ್ನು ‘ಉಪಾಸನೆ’ ಅಂತ ಕರೆಯುತ್ತಾರೆ ಅಂತ ಕೇಳಿದ್ದೇನೆ.
“ಕೇಶವ ಹಿಂದೆ ಕ್ರೈಸ್ತಧರ್ಮದ ಮತ್ತು ಕ್ರಿಸ್ತನ ದೃಷ್ಟಿಕೋನದ ಸಂಬಂಧವಾಗಿ ಬಹಳ ಚಿಂತಿಸುತ್ತಿದ್ದ. ಆ ಸಮಯದಲ್ಲಿ ಮತ್ತು ಅದಕ್ಕೆ ಮುಂಚಿನಿಂದಲೂ ದೇವೇಂದ್ರನಾಥ ಠಾಕೂರನ ಸಮಾಜದ ಅನುಯಾಯಿಯಾಗಿದ್ದ.”
ಮಾಸ್ಟರ್: “ಕೇಶವಬಾಬು ಮುಂಚಿನಿಂದಲೂ ಇಲ್ಲಿಗೆ ಬರುತ್ತಿದ್ದಿದ್ದರೆ ಆತ ಸಮಾಜ ಸುಧಾರಣೆ ಸಂಬಂಧವಾಗಿ ಇಷ್ಟೊಂದು ವ್ಯಸ್ತನಾಗುತ್ತಿರಲಿಲ್ಲ. ಜಾತಿಭೇದ ನಿರ್ಮೂಲ ಮಾಡುವಿಕೆ, ವಿಧವಾವಿವಾಹ, ಅಂತರಜಾತೀಯವಿವಾಹ, ಸ್ತ್ರೀಶಿಕ್ಷಣ ಇವೇ ಮೊದಲಾದ ಸಾಮಾಜಿಕ ಕೆಲಸಕಾರ್ಯಗಳಲ್ಲಿ ಬಹಳವಾಗಿ ಮಗ್ನನಾಗಿಬಿಡುತ್ತಿರಲಿಲ್ಲ.”
ಶ್ರೀರಾಮಕೃಷ್ಣರು: “ಕೇಶವ ಈಗ ಕಾಳಿಯನ್ನು ಒಪ್ಪುತ್ತಾನೆ-ಚಿನ್ಮಯ ಕಾಳಿಯನ್ನು, ಆದ್ಯಾಶಕ್ತಿ ಕಾಳಿಯನ್ನು. ಇದೂ ಅಲ್ಲದೆ ‘ತಾಯಿ, ತಾಯಿ’ ಎಂದ ಹೇಳುತ್ತ ನಾಮಗುಣ ಕೀರ್ತನೆ ಮಾಡುತ್ತಾನೆ.
“ಒಳ್ಳೇದು, ಏನು ಈ ಬ್ರಾಹ್ಮಸಮಾಜವು ಮುಂದೆಯೂ ಒಂದು ಸಮಾಜಸುಧಾರಕ ಸಂಘವಾಗಿಯೇ ಉಳಿಯುವುದೇ?”
ಮಾಸ್ಟರ್: “ಈ ದೇಶದ ಮಣ್ಣಿನ ಗುಣವೇ ಬೇರೆ. ಯಾವುದು ಸತ್ಯವಾದುದೊ ಅದು ಮಾತ್ರ ಉಳಿದುಕೊಳ್ಳುತ್ತದೋ.”
ಶ್ರೀರಾಮಕೃಷ್ಣರು: “ಹೌದು, ನಿಜ. ಸನಾತನಧರ್ಮ, ಎಂದರೆ ಋಷಿಗಳು ಬೋಧಿಸಿರುವ ಧರ್ಮ ಮಾತ್ರ ಉಳಿದುಕೊಳ್ಳುತ್ತದೆ. ಆದರೆ ಬ್ರಾಹ್ಮಸಮಾಜ ಮತ್ತು ಅದರಂಥ ಸಂಪ್ರದಾಯಗಳೂ ಅಲ್ಪಸ್ವಲ್ಪವಾಗಿ ಬದುಕಿಕೊಂಡಿರುತ್ತವೆ. ಎಲ್ಲವೂ ಭಗವದಿಚ್ಛೆಯಂತೆ ಉದ್ಭವಿಸುತ್ತವೆ, ನಶಿಸುತ್ತವೆ.”
ಅಪರಾಹ್ನದಲ್ಲಿ ಅನೇಕ ಮಂದಿ ಭಕ್ತರು ಕಲ್ಕತ್ತದಿಂದ ಬಂದು ಪರಮಹಂಸರ ಮುಂದೆ ಅನೇಕ ಹಾಡುಗಳನ್ನು ಹಾಡಿದ್ದರು. ಒಂದು ಹಾಡಿನಲ್ಲಿ ಈ ಭಾವನೆ ಇತ್ತು : ‘ಹೇ ತಾಯಿ, ನೀನು ಕೆಂಪು ಬಣ್ಣದ ಉರುಳುಗೋಲನ್ನು ನಮ್ಮ ಬಾಯಲ್ಲಿ ಇಟ್ಟು ನಿನ್ನನ್ನು ಮರೆಯುವಂತೆ ಮಾಡಿಬಿಟ್ಟಿದ್ದೀಯೆ. ಯಾವಾಗ ನಾವು ಅದನ್ನು ಬಿಸಾಡಿ ನಿನಗಾಗಿ ಚಂಡಿ ಹಿಡಿದು ಅಳುತ್ತೇವೆಯೋ, ಆಗ ನೀನು ನಮ್ಮ ಹತ್ತಿರಕ್ಕೆ ನಿಶ್ಚಯವಾಗಿ ಓಡಿಬರುವೆ.’
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಅವರು ಎಷ್ಟು ಚೆನ್ನಾಗಿ ಕೆಂಪು ಉರುಳುಗೋಲಿನ ಹಾಡನ್ನು ಹಾಡಿದರು!”
ಮಾಸ್ಟರ್: “ಹೌದು, ಒಮ್ಮೆ ನೀವು ಕೇಶವಸೇನನಿಗೆ ಕೆಂಪು ಉರುಳುಗೋಲಿನ ವಿಷಯವನ್ನು ತಿಳಿಸಿದಿರಿ.”
ಶ್ರೀರಾಮಕೃಷ್ಣರು: “ನಿಜ, ಚಿದಾಕಾಶದ ವಿಷಯವನ್ನು-ಇನ್ನೂ ಏನೇನೋ ಅನೇಕ ವಿಷಯಗಳನ್ನು ತಿಳಿಸಿದ್ದೇನೆ. ಆಗ ನಾವು ಎಷ್ಟು ಆನಂದದಿಂದ ಇರುತ್ತಿದ್ದೆವು! ನಾವು ಒಟ್ಟಿಗೆ ಹಾಡುತ್ತ ನರ್ತಿಸುತ್ತಿದ್ದೆವು.”
೫ನೆ ಜನವರಿ ೧೮೮೪, ಪುಷ್ಯ ಶುಕ್ಲ ಸಪ್ತಮಿ, ಶನಿವಾರ
ಪರಮಹಂಸರೊಡನೆ ಮಾಸ್ಟರ್ ಇರಲು ಆರಂಭಿಸಿ ಇಂದಿಗೆ ಇಪ್ಪತ್ತಮೂರು ದಿನ. ಘಂಟೆ ಒಂದು. ಮಾಸ್ಟರ್ ಮಧ್ಯಾಹ್ನದ ಊಟ ಮುಗಿಸಿ ನಹಬತ್ಖಾನೆಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾಗ, ಇದ್ದಕ್ಕಿದ್ದ ಹಾಗೆ ಆತನ ಹೆಸರನ್ನು ಹಿಡಿದು ಯಾರೊ ನಾಲ್ಕು ಸಲ ಕೂಗಿದಂತೆ ಕೇಳಿತು. ಹೊರಗಡೆ ಬಂದು ನೋಡುತ್ತಾನೆ, ಪರಮಹಂಸರು ತಮ್ಮ ಕೊಠಡಿಯ ಉತ್ತರ ವರಾಂಡದಲ್ಲಿ ನಿಂತು ತನ್ನನ್ನು ಕೂಗುತ್ತಿದ್ದಾರೆ.
ಮಾಸ್ಟರ್ ಅಲ್ಲಿಗೆ ಬಂದು ಪರಮಹಂಸರಿಗೆ ಪ್ರಣಾಮಮಾಡಿದ. ಈಗ ಅವರು ದಕ್ಷಿಣ ವರಾಂಡದಲ್ಲಿ ಕುಳಿತು ಮಾಸ್ಟರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಿನ್ನ ಧ್ಯಾನ ಯಾವ ರೀತಿಯಾಗಿ ನಡೆಯುತ್ತಿದೆ? ನಾನು ಬಿಲ್ವಮರದ ಕೆಳಗೆ ಧ್ಯಾನಮಾಡುತ್ತಿದ್ದಾಗ ನನಗೆ ಅನೇಕ ದಿವ್ಯ ದರ್ಶನಗಳು ಬಹಳ ಸ್ಪಷ್ಟವಾಗಿ ಆಗುತ್ತಿದ್ದುವು. ಒಂದು ದಿನ ನೋಡಿದೆ. ಎದುರಿಗೆ ಹಣ, ಶಾಲು, ಒಂದು ತಟ್ಟೆ ಸಂದೇಶ (ಸಿಹಿ ತಿಂಡಿ) ಇಬ್ಬರು ಹೆಂಗಸರು ಇರುವುದನ್ನು. ಮನಸ್ಸನ್ನು ಕೇಳಿದೆ: ‘ಮನಸ್ಸೇ, ಇವುಗಳಲ್ಲಿ ಯಾವುದಾದರೂ ಬೇಕೆ?’ ಸಂದೇಶ ಮಲದ ಹಾಗೆ ತೋರಿತು. ಆ ಹೆಂಗಸರಲ್ಲಿ ಒಬ್ಬಳು ಮೂಗಿಗೆ ಮುಕುರ ಇಟ್ಟುಕೊಂಡಿದ್ದಳು. ಅವರ ಒಳಗೆ ಹೊರಗೆ ಇರುವುದೆಲ್ಲ ನನಗೆ ಚೆನ್ನಾಗಿ ಕಾಣಿಸಲಾರಂಭಿಸಿತು-ಕರುಳು, ಹೊಟ್ಟೆ, ಮಲಮೂತ್ರ, ಮೂಳೆ, ಮಾಂಸ, ರಕ್ತ ಇವೆಲ್ಲ. ಮನಸ್ಸಿಗೆ ಹಣ, ಶಾಲು, ಸಿಹಿತಿಂಡಿ, ಹೆಂಗಸು, ಇವು ಯಾವುದೂ ಬೇಕಾಗಲಿಲ್ಲ. ಭಗವಂತನ ಪಾದಪದ್ಮಗಳಲ್ಲೇ ಮನಸ್ಸು ನೆಲಸಿ ನಿಂತಿತು.
“ಚಿಕ್ಕ ತಕ್ಕಡಿಗೆ ಎರಡು ಮುಳ್ಳು ಇರುತ್ತವೆ-ಮೇಲೊಂದು ಕೆಳಗೊಂದು. ಮನಸ್ಸೆಂಬುದೇ ಕೆಳಗಿನ ಮುಳ್ಳು. ಮನಸ್ಸು ಮೇಲಿನ ಮುಳ್ಳನ್ನು ಎಂದರೆ ಭಗವಂತನನ್ನು ಬಿಟ್ಟು ಎಲ್ಲಿ ವಿಮುಖವಾಗಿಬಿಡುವುದೊ ಎಂದು ಸತತ ಆತಂಕಪಡುತ್ತಿದ್ದೆ. ಇದೂ ಅಲ್ಲದೆ ಒಬ್ಬ ತ್ರಿಶೂಲ ಹಿಡಿದುಕೊಂಡು ಸದಾ ನನ್ನ ಹತ್ತಿರವೇ ಕುಳಿತಿರುತ್ತಿದ್ದ. ಆತ ಹೆದರಿಸುತ್ತಿದ್ದ, ಕೆಳಗಿನ ಮುಳ್ಳೇನಾದರೂ ಮೇಲಿನ ಮುಳ್ಳನ್ನು ಬಿಟ್ಟು ಅಲುಗಿತು ಎಂದರೆ ತ್ರಿಶೂಲದಿಂದ ಅಪ್ಪಳಿಸುತ್ತೇನೆ ಎಂದು.”
“ಆದರೆ ಕಾಮಕಾಂಚನ ತ್ಯಾಗವನ್ನು ಮಾಡದ ಹೊರತು ಭಗವಂತನ ಸಾಕ್ಷಾತ್ಕಾರ ಸಾಧ್ಯವೇ ಇಲ್ಲ. ನಾನು ಇವು ಮೂರನ್ನೂ ತ್ಯಜಿಸಿಬಿಟ್ಟೆ: ಹೆಣ್ಣು, ಹೊನ್ನು, ಮಣ್ಣು. ಕಾಮಾರಪುಕುರದಲ್ಲಿ ರಘುವೀರನ ಹೆಸರಿನಲ್ಲಿದ್ದ ಭೂಮಿಯನ್ನು ರಿಜಿಸ್ಟರ್ ಮಾಡಿಸಲು ಒಮ್ಮೆ ಕಚೇರಿಗೆ ಹೋಗಿದ್ದೆ. ನನಗೆ ರುಜು ಹಾಕುವಂತೆ ಹೇಳಿದರು. ಆದರೆ ನಾನು ಮಾಡಲಿಲ್ಲ. ಆ ಭೂಮಿ ನನ್ನದು ಎಂಬ ಭಾವನೆ ನನಗಿರಲಿಲ್ಲ. ಕೇಶವಸೇನನ ಗುರು ಎಂದು ಜನ ಬಹಳವಾಗಿ ನನಗೆ ಆದರ ತೋರಿಸಿದರು. ಬೇಕಾದಷ್ಟು ಮಾವಿನಹಣ್ಣನ್ನು ತಂದು ಅರ್ಪಿಸಿದರು. ಆದರೆ ಅದನ್ನು ಮನೆಗೆ ತೆಗೆದುಕೊಂಡು ಬರುವಂತಿಲ್ಲ. ಸಂನ್ಯಾಸಿ ಸಂಚಯ ಮಾಡಿಡಕೂಡದು.
“ತ್ಯಾಗವನ್ನು ಮಾಡದೆ ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವ ಬಗೆ ಹೇಗೆ? ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಇಟ್ಟಿದೆ ಅಂತ ಇಟ್ಟಕೊ. ಮೇಲಿನದನ್ನು ತೆಗೆಯದೆ ಕೆಳಗಿನದನ್ನು ತೆಗೆದುಕೊಳ್ಳುವ ಬಗೆ ಹೇಗೆ?”
“ನಿಷ್ಕಾಮ ಭಾವನೆಯಿಂದ ಭಗವಂತನಿಗೆ ಪ್ರಾರ್ಥನೆ ಮಾಡಬೇಕು. ಆದರೆ ಸಕಾಮ ಭಾವನೆಯಿಂದ ಪ್ರಾರ್ಥನೆ ಮಾಡುತ್ತ ಮಾಡುತ್ತ ಕೊನೆಗೆ ಅದು ನಿಷ್ಕಾಮ ಭಾವನೆಯಾಗಿ ಪರಿಣಮಿಸಿಬಿಡುತ್ತದೆ. ಧ್ರುವ ರಾಜ್ಯಕ್ಕಾಗಿ ತಪಸ್ಸುಮಾಡಿದ. ಆದರೆ ಕೊನೆಯಲ್ಲಿ ಆತನಿಗೆ ಭಗವಂತನ ದರ್ಶನ ದೊರೆಯಿತು. ಆತ ಹೇಳಿದ: ‘ಗಾಜಿನ ಮಣಿಗಾಗಿ ಹುಡುಕುತ್ತಿರುವಾಗ ಚಿನ್ನ ದೊರೆತುದೇ ಆದರೆ ಅದನ್ನಾರು ಬಿಟ್ಟುಬಿಡುತ್ತಾರೆ?’
“ಸತ್ತ್ವಗುಣ ಉಂಟಾದಾಗ ಮಾತ್ರ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು. ದಾನಾದಿ ಕರ್ಮಗಳನ್ನು ಸಂಸಾರಿಗಳು ಪ್ರಾಯಿಕವಾಗಿ ಸಕಾಮ ಭಾವನೆಯಿಂದಲೇ ಮಾಡುತ್ತಾರೆ. ಅದು ಒಳ್ಳೆಯದಲ್ಲ. ಅದನ್ನು ನಿಷ್ಕಾಮ ಭಾವನೆಯಿಂದ ಮಾಡಿದರೆ ಅದು ಬಹಳ ಒಳ್ಳೆಯದು. ಆದರೆ ಹಾಗೆ ಮಾಡುವುದು ಬಹಳ ಕಠಿಣವೇನೋ ನಿಜ.
“ಭಗವಂತನ ಸಾಕ್ಷಾತ್ಕಾರ ದೊರೆತಾಗ ಆತನನ್ನು ಪ್ರಾರ್ಥನೆ ಮಾಡುವಿಯೇನು: ‘ಹೇ ಭಗವಂತ, ನಾನು ಕೆಲವು ಕೆರೆ, ರಸ್ತೆ, ಸ್ನಾನಘಟ್ಟ, ಔಷಧಾಲಯ, ಆಸ್ಪತ್ರೆಗಳನ್ನು ಕಟ್ಟಿಸಬೇಕೆಂದಿದ್ದೇನೆ. ಅವೆಲ್ಲವೂ ಆಗುವಂತೆ ವರ ಕರುಣಿಸು’ ಎಂದು? ಆತನ ಸಾಕ್ಷಾತ್ಕಾರ ದೊರೆತ ನಂತರ ಆ ವಿಧದ ಆಸೆಗಳೆಲ್ಲಾ ಒಂದು ಮೂಲೆಯಲ್ಲಿ ಮುರಿದುಬಿದ್ದಿರುತ್ತವೆ.
“ಹಾಗೆಂದು ದಯಾಕಾರ್ಯಗಳನ್ನು, ಎಂದರೆ ದಾನಾದಿ ಕರ್ಮಗಳನ್ನು ಸ್ವಲ್ಪವೂ ಮಾಡಲೇಕೂಡದು ಅಂತಲೇನು? ಎಂದಿಗೂ ಅಲ್ಲ. ಎದುರಿಗೆ ಜನ ದುಃಖ, ಕಷ್ಟಗಳಿಂದ ನರಳುತ್ತಿರುವುದನ್ನು ಕಂಡರೆ, ಹತ್ತಿರ ಹಣವಿದ್ದರೆ ಅವರಿಗೆ ಸಹಾಯ ನೀಡಬೇಕಾದ್ದೆ. ಅಂಥ ಸಂದರ್ಭಗಳಲ್ಲಿ ಜ್ಞಾನಿ ಜನರಿಗೆ ಹೇಳುತ್ತಾನೆ: ‘ಕೊಡಿ, ಕೊಡಿ. ಈ ದುಃಖಪೀಡಿತರಿಗೆ ಏನನ್ನಾದರೂ ಕೊಡಿ.’ ಇಲ್ಲದಿದ್ದರೆ ತನ್ನ ಆಂತರ್ಯದಲ್ಲಿ ಆತ ಭಾವಿಸುತ್ತಾನೆ: ‘ನನ್ನ ಕೈಯಲ್ಲಿ ಏನು ತಾನೆ ಸಾಧ್ಯ? ಭಗವಂತನೇ ಕರ್ತ, ನಾನು ಅಕರ್ತ.’
“ಮಹಾಪುರುಷರು ಜೀವರ ದುಃಖಗಳನ್ನು ನೋಡಿ ಸಹಿಸಲಾರದೆ ಅವರಿಗೆ ಭಗವಂತನನ್ನು ಪಡೆಯುವ ಮಾರ್ಗವನ್ನು ತೋರಿಸಿಕೊಟ್ಟುಬಿಡುತ್ತಾರೆ. ಶಂಕರಾಚಾರ್ಯರು ಲೋಕಶಿಕ್ಷಣಕ್ಕಾಗಿ, ‘ವಿದ್ಯೆಯ ಅಹಂ’ ಅನ್ನು ಇಟ್ಟುಕೊಂಡಿದ್ದರು. ಅನ್ನದಾನಕ್ಕಿಂತ ಜ್ಞಾನದಾನ, ಭಕ್ತಿದಾನ ಬಹಳ ಉತ್ತಮವಾದುವು. ಅದಕ್ಕಾಗಿಯೇ ಆಚಂಡಾಲಾದಿಯಾಗಿ ಎಲ್ಲರಿಗೂ ಚೈತನ್ಯದೇವ ಭಕ್ತಿದಾನವನ್ನು ಮಾಡಿದುದು. ದೇಹದ ಸುಖದುಃಖವಂತೂ ಇದ್ದೇ ಇರುತ್ತವೆ. ನೀನು ಇಲ್ಲಿಗೆ ಬಂದುದು ಮಾವಿನ ಹಣ್ಣು ತಿನ್ನಲು. ಅವನ್ನು ತಿಂದು ಹೋಗು. ಅತ್ಯಾವಶ್ಯಕವಾಗಿ ಬೇಕಾದ್ದು ಜ್ಞಾನ, ಭಕ್ತಿ. ಭಗವಂತನೊಬ್ಬನೇ ವಸ್ತು; ಉಳಿದುದೆಲ್ಲಾ ಅವಸ್ತು.
“ಆತನೇ ಎಲ್ಲವನ್ನೂ ಮಾಡುತ್ತಿದ್ದಾನೆ. ಹಾಗಾದರೆ ಮನುಷ್ಯ ಪಾಪಕೃತ್ಯಗಳನ್ನು ಮಾಡಬಹುದಲ್ಲ ಎಂದರೆ, ಅದು ಸರಿಯಲ್ಲ. ಯಾರಿಗೆ ನಿಜವಾಗಿ ಬೋಧೆಯಾಗಿದೆಯೊ ಭಗವಂತನೊಬ್ಬನೇ ಕರ್ತೃ, ತಾನು ಅಕರ್ತ ಎಂದು, ಆತ ಎಂದಿಗೂ ತಪ್ಪು ಹೆಜ್ಜೆ ಇಡುವುದಿಲ್ಲ.
“ಯಾವುದನ್ನು ಇಂಗ್ಲಿಷ್ಮನ್ರು 1 ‘ಸ್ವಾಧೀನ ಇಚ್ಛೆ’ ಅಂತ ಕರೆಯುತ್ತಾರೊ ಅದನ್ನೂ ಮನಸ್ಸಿನಲ್ಲಿ ಭಗವಂತನೇ ನಾಟಿದ್ದಾನೆ. ಯಾರು ಭಗವಂತನ ಸಾಕ್ಷಾತ್ಕಾರವನ್ನು ಇನ್ನೂ ಮಾಡಿಕೊಂಡಿಲ್ಲವೊ ಅಂಥವರ ಮನಸ್ಸಿನಲ್ಲಿ ಭಗವಂತ ‘ಈ ಸ್ವಾಧೀನ ಇಚ್ಛೆ’ ಎಂಬುದನ್ನು ನಾಟದೆ ಇದ್ದಿದ್ದರೆ ಅವರಲ್ಲಿ ಪಾಪಪ್ರವೃತ್ತಿ ವೃದ್ಧಿಯಾಗಿಬಿಡುತ್ತಿತ್ತು. ತಮ್ಮ ಪಾಪಪ್ರವೃತ್ತಿಗೆ ತಾವೇ ಹೊಣೆ ಎಂಬುದನ್ನು ಆತ ಜನರ ಮನಸ್ಸಿನಲ್ಲಿ ನಾಟದೆ ಇದ್ದಿದ್ದರೆ ಪಾಪಪ್ರವೃತ್ತಿ ಇನ್ನೂ ಹೆಚ್ಚಾಗಿ ವೃದ್ಧಿಯಾಗಿಬಿಡುತ್ತಿತ್ತು.
“ಯಾರಿಗೆ ಭಗವಂತನ ಸಾಕ್ಷಾತ್ಕಾರ ಆಗಿದೆಯೊ ಅವರಿಗೆ ಗೊತ್ತಿದೆ, ‘ಸ್ವಾಧೀನ ಇಚ್ಛೆ’ ಎಂಬುದೊಂದು ಇರುವಂತಲೇನೋ ತೋರುತ್ತದೆ. ಆದರೆ ವಾಸ್ತವಿಕವಾಗಿ ಭಗವಂತ ಯಂತ್ರಚಾಲಕ, ಮನುಷ್ಯ ಯಂತ್ರ; ಆತ ಗಾಡಿಹೊಡೆಯುವವ, ಮನುಷ್ಯ ಗಾಡಿ.”
ಘಂಟೆ ಅಪರಾಹ್ನ ನಾಲ್ಕು. ಪಂಚವಟಿಯ ಗುಡಿಸಲಿನಲ್ಲಿ ರಾಖಾಲ, ಇನ್ನೂ ಒಬ್ಬಿಬ್ಬರು ಭಕ್ತರು ಮಾಸ್ಟರ್ ಹಾಡುತ್ತಿದ್ದ ಕೀರ್ತನೆಯನ್ನು ಕೇಳುತ್ತಿದ್ದಾರೆ. ರಾಖಾಲ ಕೀರ್ತನೆಯನ್ನು ಕೇಳಿ ಭಾವಾವಿಷ್ಟನಾಗಿಬಿಟ್ಟಿದ್ದಾನೆ. ಸ್ವಲ್ಪ ಹೊತ್ತಾದ ಮೇಲೆ ಪರಮಹಂಸರು ಬಾಬುರಾಮ, ಹರೀಶನೊಡನೆ ಪಂಚವಟಿಗೆ ಬಂದರು. ಈಗ ರಾಖಾಲ, ಮಾಸ್ಟರು ಅಲ್ಲಿಗೆ ಬಂದಿದ್ದಾರೆ. ಉಳಿದವರೂ ಬರುತ್ತಿದ್ದಾರೆ.
ರಾಖಾಲ ಮಾಸ್ಟರನ್ನು ತೋರಿಸಿ: “ಇಂದು ಈತ ಬಹಳ ಚೆನ್ನಾಗಿ ಕೀರ್ತನೆಯನ್ನು ಹಾಡಿ ನಮಗೆ ಬಹಳ ಆನಂದವನ್ನು ಕೊಟ್ಟಿದ್ದಾನೆ.”
ಪರಮಹಂಸರು ಈಗ ಭಾವಾವಿಷ್ಟರಾಗಿ ಹಾಡುತ್ತಿದ್ದಾರೆ:
ಮನದ ಭಾರವು ನೀಗಿತೇ, ಸಖಿ
ಕೇಳಿ ಕೃಷ್ಣನ ನಾಮವ!……..
ಭಕ್ತರಿಗೆ ಹೇಳುತ್ತಿದ್ದಾರೆ: “ಈ ವಿಧದ ಹಾಡುಗಳನ್ನು ನೀವು ಯಾವಾಗಲೂ ಹಾಡುತ್ತಿರಬೇಕು.” ಮತ್ತೆ ಹೇಳುತ್ತಿದ್ದಾರೆ: “ಇಷ್ಟೇ ಬೇಕಾಗಿರುವುದು-ಭಗವಂತನನ್ನು ಪ್ರೀತಿಸುವುದು. ಭಕ್ತರ ಸಹವಾಸ ಮಾಡುವುದು.” ಮತ್ತೆ ಪುನಃ ಹೇಳುತ್ತಿದ್ದಾರೆ: “ಕೃಷ್ಣ ಮಥುರೆಗೆ ಹೊರಟು ಹೋದಾಗ ಯಶೋದೆ ಶ್ರೀಮತಿಯನ್ನು (ರಾಧೆಯನ್ನು) ನೋಡಲು ಬಂದಳು. ಆಗ ಆಕೆ ಧ್ಯಾನದಲ್ಲಿದ್ದಳು. ಅನಂತರ ರಾಧೆ ಯಶೋದೆಗೆ ಹೇಳಿದಳು: ‘ಆದ್ಯಾಶಕ್ತಿ ನಾನು. ನಿನಗೇನು ವರ ಬೇಕಾದರೂ ಕೇಳು.’ ಯಶೋದೆ ಹೇಳಿದಳು: ‘ಇನ್ನು ಬೇರೆ ಯಾವ ವರವನ್ನು ತಾನೆ ಕೇಳಲಿ? ಹಾಗಾದರೆ ಆಶೀರ್ವಾದ ಮಾಡು, ನಾನು ಮನೋವಾಕ್ಕಾಯವಾಗಿ ಭಗವಂತನ ಸೇವೆ ಮಾಡುವ ಹಾಗೆ, ಈ ಕಣ್ಣುಗಳಿಂದ ಆತನ ಭಕ್ತರನ್ನು ನೋಡುವ ಹಾಗೆ, ಈ ಮನಸ್ಸಿನಿಂದ ಆತನ ಚಿಂತನೆ ಮಾಡುವ ಹಾಗೆ, ಈ ನಾಲಗೆಯಿಂದ ಆತನ ನಾಮ ಗುಣಕೀರ್ತನೆ ಮಾಡುವ ಹಾಗೆ ಆಗಲಿ.’
“ಆದರೆ ಯಾರ ಜ್ಞಾನ ಪೂರ್ಣ ಹಣ್ಣಾಗಿ ಹೋಗಿರುವುದೋ, ಅವರಿಗೆ ಭಕ್ತರ ಸಹವಾಸವಿಲ್ಲದಿದ್ದರೂ ಏನೂ ತೊಂದರೆಯಾಗುವುದಿಲ್ಲ. ಅವರಿಗೆ ಕೆಲವು ವೇಳೆ ಭಕ್ತರ ಸಹವಾಸ ರುಚಿಸುವುದೂ ಇಲ್ಲ. ಮುತ್ತಿನ ಚಿಪ್ಪಿನ ಕೆಲಸದ ಮೇಲೆ ಸುಣ್ಣದ ಕೆಲಸ ನಿಲ್ಲುವುದಿಲ್ಲ. ಎಂದರೆ, ಯಾರ ಒಳಗೆ ಹೊರಗೆ ಎಲ್ಲಾ ಭಗವನ್ಮಯವಾಗಿಬಿಟ್ಟಿರುವುದೋ, ಅವರದು ಈ ಅವಸ್ಥೆ.”
ಈಗ ಪರಮಹಂಸರು ಸರ್ವೆಮರಗಳ ತೋಪಿನಿಂದ ಹಿಂದಿರುಗಿ ಪಂಚವಟಿಗೆ ಬಂದು ಮಾಸ್ಟರಿಗೆ ಹೇಳುತ್ತಿದ್ದಾರೆ: “ನಿನಗೆ ಹೆಂಗಸಿನ ಕಂಠವಿದೆ. ಈ ವಿಧದ ಹಾಡುಗಳನ್ನು ಅಭ್ಯಾಸ ಮಾಡಲಾಗುವುದಿಲ್ಲವೆ?
ಹೃದಯವಲ್ಲಭನಿರುವ ಕದಂಬವನವೆನ್ನುವುದು
ಇನ್ನೆಷ್ಟು ದೂರವಿದೆ ಹೇಳು ಕೆಳದೀ?
(ಮಾಸ್ಟರಿಗೆ ಬಾಬುರಾಮನನ್ನು ತೋರಿಸಿ) “ನೋಡು, ಯಾರು ನನ್ನ ಸ್ವಂತದವರೋ ಅವರು ಪರಕೀಯರಾಗಿ ಬಿಟ್ಟಿದ್ದಾರೆ-ರಾಮಲಾಲ ಮೊದಲಾದವರು ಯಾರೊ ಬೇರೆಯವರು ಇದ್ದ ಹಾಗೆ. ಪರಕೀಯರು ನನ್ನ ಸ್ವಂತದವರಾಗಿ ಬಿಟ್ಟಿದ್ದಾರೆ. ಎದ್ದು ಕೈಕಾಲು ತೊಳೆದುಕೊಂಡು ಬಾ ಎಂದು ನಾನು ಬಾಬುರಾಮನಿಗೆ ಹೇಳುತ್ತಿರುವುದನ್ನು ನೀನು ನೋಡಿರಬೇಕಲ್ಲವೆ? ಈಗ ಭಕ್ತರೇ ನನ್ನ ಸ್ವಂತದವರು.
(ಪಂಚವಟಿಯ ಕಡೆಗೆ ನೋಡಿ) “ನಾನು ಅಲ್ಲಿ ಕುಳಿತುಕೊಳ್ಳುತ್ತಿದ್ದೆ. ಕಾಲಾನಂತರದಲ್ಲಿ ನನಗೆ ಭಗವದುನ್ಮಾದ ಉಂಟಾಯಿತು. ಆ ಅವಸ್ಥೆಯೂ ಹೊರಟುಹೋಯಿತು. ಕಾಲನೇ ಬ್ರಹ್ಮ. ಯಾರು ಕಾಲನೊಡನೆ ವಿಲಾಸಿಸುತ್ತಾಳೋ, ಆಕೆಯೇ ಕಾಳಿ-ಆಕೆಯೇ ಆದ್ಯಾಶಕ್ತಿ. ಆಕೆ ಅಚಲನನ್ನೇ ಚಲಿಸಿಬಿಡುತ್ತಾಳೆ.”
ಹೀಗೆಂದು ಹೇಳಿ ಪರಮಹಂಸರು ಹಾಡುತ್ತಿದ್ದಾರೆ:
ತಾಯಿ ಶ್ರೀಕಾಳಿಯ ಲೀಲೆಯವಲೋಕನದಿ
ಸೋಜಿಗದ ಕಡಲೊಳಗೆ ಮನ ಮುಳುಗಿದೆ…..
ಅನಂತರ ಅವರು ಮಾಸ್ಟರಿಗೆ ಹೇಳುತ್ತಿದ್ದಾರೆ: “ಇಂದು ಶನಿವಾರ. ಕಾಳೀ ದೇವಾಲಯಕ್ಕೆ ಹೋಗಿ ಬಾ.”
ಶ್ರೀರಾಮಕೃಷ್ಣರು ಬಕುಳ ವೃಕ್ಷದ ಹತ್ತಿರಕ್ಕೆ ಬಂದಾಗ, ಅವರು ಮಾಸ್ಟರಿಗೆ ಹೇಳಲಾರಂಭಿಸಿದರು: “ಚಿದಾತ್ಮ, ಚಿಚ್ಛಕ್ತಿ ಅಂತ ಇವೆ. ಚಿದಾತ್ಮನೇ ಪುರುಷ, ಚಿಚ್ಛಕ್ತಿಯೇ ಪ್ರಕೃತಿ. ಚಿದಾತ್ಮನೇ ಶ್ರೀಕೃಷ್ಣ, ಚಿಚ್ಛಕ್ತಿಯೇ ರಾಧೆ. ಭಕ್ತರೆಲ್ಲರೂ ಆ ಚಿಚ್ಛಕ್ತಿಯ ಒಂದೊಂದು ರೂಪ. ಆದ್ದರಿಂದ ಭಕ್ತರು ತಾವು ಚಿಚ್ಛಕ್ತಿಯ ಅಥವಾ ರಾಧೆಯ ಸಖಿಯರು ಎಂದು ಭಾವಿಸಿಕೊಳ್ಳಬೇಕು. ಸಾರಾಂಶ ಇದೇ.”
ಸಾಯಂಕಾಲವಾದ ನಂತರ ಪರಮಹಂಸರು ಕಾಳೀದೇವಾಲಯಕ್ಕೆ ಬಂದಿದ್ದಾರೆ. ಅಲ್ಲಿ ಮಾಸ್ಟರ್ ಭಗವತಿಯ ಧ್ಯಾನದಲ್ಲಿ ತೊಡಗಿರುವುದನ್ನು ನೋಡಿ ಅವರಿಗೆ ಬಹಳ ಆನಂದವಾಗಿಬಿಟ್ಟಿದೆ.
ದೇವಾಲಯಗಳಲ್ಲೆಲ್ಲಾ ಸಾಯಂ ಮಂಗಳಾರತಿ ಮುಗಿದಿದೆ. ಪರಮಹಂಸರು ತಮ್ಮ ಕೊಠಡಿಯಲ್ಲಿ ಚಿಕ್ಕ ಮಂಚದ ಮೇಲೆ ಕುಳಿತು ಧ್ಯಾನಮಾಡುತ್ತಿದ್ದಾರೆ. ಮಾಸ್ಟರ್ ನೆಲದ ಮೇಲೆ ಕುಳಿತಿದ್ದಾನೆ. ಕೊಠಡಿಯಲ್ಲಿ ಇನ್ನು ಬೇರೆ ಯಾರೂ ಇಲ್ಲ.
ಪರಮಹಂಸರು ಸಮಾಧಿಸ್ಥರಾಗಿದ್ದಾರೆ. ಈಗ ಕಿಂಚಿತ್ ಪ್ರಕೃತಿಸ್ಥರಾಗುತ್ತಿದ್ದಾರೆ. ಆದರೂ ಭಾವೋನ್ಮತ್ತರಾಗಿಯೇ ಇದ್ದಾರೆ. ಚಿಕ್ಕ ಮಗು ತಾಯಿಯನ್ನು ಚಂಡಿಹಿಡಿದು ಕೇಳುವ ಹಾಗೆ ಪರಮಹಂಸರು ಭಗವತಿಯನ್ನು ಕರುಣಾಜನಕ ಸ್ವರದಿಂದ ಕೇಳುತ್ತಿದ್ದಾರೆ: “ಹೇ ತಾಯೆ, ಏಕೆ ನೀನು ನಿನ್ನ ಆ ರೂಪವನ್ನು-ನಿನ್ನ ಆ ಭುವನಮೋಹನ ರೂಪವನ್ನು ನನಗೆ ತೋರಿಸುತ್ತಿಲ್ಲ? ನಾನು ಅಷ್ಟೊಂದು ನಿನ್ನನ್ನು ಕೇಳಿಕೊಂಡೆ. ಆದರೂ ನೀನು ನನ್ನ ಪ್ರಾರ್ಥನೆಗೆ ಕಿವಿಯನ್ನೇ ಕೊಡುತ್ತಿಲ್ಲವಲ್ಲ! ನೀನು ಇಚ್ಛಾಮಯಿ.”
ಪರಮಹಂಸರು ಈ ಮಾತುಗಳನ್ನು ಕಲ್ಲೂ ಕರಗಿ ಹೋಗಬೇಕು ಅಂಥ ಕಂಠದಿಂದ ಹೇಳಿದರು.
ಮತ್ತೆ ಪರಮಹಂಸರು ಭಗವತಿಗೆ ಹೇಳುತ್ತಿದ್ದಾರೆ: “ತಾಯೆ, ಬೇಕಾಗಿರುವುದು ಶ್ರದ್ಧೆ. ಈ ಹಾಳು ವಿಚಾರ ಎಂಬುದು ತೊಲಗಿಹೋಗಲಿ! ಅದು ನಾಶವಾಗಲಿ! ಶ್ರದ್ಧೆ ಬೇಕು-ಗುರುವಾಕ್ಯದಲ್ಲಿ ಶ್ರದ್ಧೆ, ಬಾಲಕನಂಥ ಶ್ರದ್ಧೆ. ತಾಯಿ ಮಗುವಿಗೆ ಹೇಳುತ್ತಾಳೆ : ‘ಮಗು, ಅಲ್ಲೊಂದು ಭೂತವಿದೆ.’ ಅದು ಸಂಪೂರ್ಣವಾಗಿ ನಂಬುತ್ತದೆ, ಅಲ್ಲೊಂದು ಭೂತವಿದೆ. ಎಂದು. ತಾಯಿ ಮಗುವಿಗೆ ಹೇಳುತ್ತಾಳೆ: ‘ಮಗು, ಅಲ್ಲೊಂದು ಗುಮ್ಮ ಇದೆ.’ ಅದು ಸಂಪೂರ್ಣವಾಗಿ ನಂಬುವುದು, ಅಲ್ಲೊಂದು ಗುಮ್ಮ ಇದೆ ಎಂದು. ತಾಯಿ ಯಾರೊ ಒಬ್ಬನನ್ನು ತೋರಿಸಿ ಮಗುವಿಗೆ ಹೇಳುತ್ತಾಳೆ: ‘ಮಗು ಆತ ನಿನ್ನ ಅಣ್ಣ.’ ಅದು ಸಂಪೂರ್ಣವಾಗಿ ನಂಬುತ್ತದೆ, ಆತ ನೂರಕ್ಕೆ ನೂರಿಪ್ಪತ್ತೈದು ಭಾಗ ತನ್ನ ಅಣ್ಣನೇ ಎಂದು. ಬೇಕಾಗಿರುವುದು ಶ್ರದ್ಧೆ. ಆದರೆ ತಾಯೆ! ಇದರಲ್ಲಿ ಅವರ ತಪ್ಪೇನು? ಅವರು ಇನ್ನೇನನ್ನು ತಾನೆ ಮಾಡಿಯಾರು? ವಿಚಾರದ ದವಡೆಗೆ ಒಮ್ಮೆಯಾದರೂ ಸಿಕ್ಕಬೇಕಾದ ಆವಶ್ಯಕತೆ ಇದೆ. ಹಾಗೇ ನೀನೇ ನೋಡು. ಅಂದು ನಾನು ಆತನಿಗೆ ಎಷ್ಟೊಂದು ಹೇಳಿದೆ; ಆದರೂ ಅದು ಯಾವ ಪ್ರಯೋಜನಕ್ಕೂ ಬಾರದೆ ಹೋಯಿತಲ್ಲ!”
ಪರಮಹಂಸರು ಬಿಕ್ಕಿ ಬಿಕ್ಕಿ ಅಳುತ್ತ ಭಕ್ತರ ಹಿತಕ್ಕಾಗಿ ಈ ರೀತಿಯಾಗಿ ಭಗವತಿಯ ಹತ್ತಿರ ಪ್ರಾರ್ಥನೆ ಮಾಡುತ್ತಿದ್ದಾರೆ. ಏನಾಶ್ಚರ್ಯ! ಹೇಳುತ್ತಿದ್ದಾರೆ: “ತಾಯಿ, ಯಾರಾರು ನಿನ್ನನ್ನು ಸಮೀಪಿಸುತ್ತಾರೊ ಅವರ ಸಕಲ ಅಭೀಷ್ಟಗಳನ್ನೂ ಪೂರ್ಣ ಮಾಡಿಕೊಡು. ಆದರೆ ಅವರು ಒಮ್ಮೆಗೇ ಎಲ್ಲವನ್ನೂ ತ್ಯಾಗಮಾಡುವಂತೆ ಬಲಾತ್ಕರಿಸಬೇಡ. ಒಳ್ಳೇದು, ಕೊನೆಯಲ್ಲಿ ಹೇಗೆ ಬೇಕೊ ಹಾಗೇ ಮಾಡು. ನೀನು ಅವರನ್ನು ಸಂಸಾರದಲ್ಲಿ ಇಡುವುದಾದರೆ, ಒಮ್ಮೊಮ್ಮೆ ಅವರಿಗೆ ನಿನ್ನ ದರ್ಶನವನ್ನು ಕೊಡು. ಇಲ್ಲದಿದ್ದರೆ ಅವರು ಬದುಕಿಕೊಂಡಿರುವ ಬಗೆ ಹೇಗೆ? ಒಮ್ಮೊಮ್ಮೆ ನೀನು ಅವರಿಗೆ ನಿನ್ನ ದರ್ಶನ ಕೊಡದಿದ್ದರೆ ನಿನ್ನ ದರ್ಶನ ಮಾಡಬೇಕೆಂಬ ಉತ್ಸಾಹ ಅವರಿಗೆ ಹೇಗೆ ತಾನೇ ಬಂದೀತು? ಇಷ್ಟರ ಮೇಲೆ ಕೊನೆಗೆ ನಿನಗೆ ಇಚ್ಛೆ ಬಂದಂತೆ ಮಾಡು.”
ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ಇದ್ದಾರೆ. ಇದ್ದಕ್ಕಿದ್ದ ಹಾಗೆ ಮಾಸ್ಟರಿಗೆ ಹೇಳುತ್ತಿದ್ದಾರೆ: “ನೋಡು, ನೀನು ಇದುವರೆಗೆ ಬೇಕಾದಷ್ಟು ಸಮಯವನ್ನು ವಿಚಾರದಲ್ಲಿ ಕಳೆದಿದ್ದೀಯೆ. ಇನ್ನು ಬೇಡ, ಹೇಳು, ಇನ್ನು ಮಾಡುವುದಿಲ್ಲವೆಂದು.”
ಮಾಸ್ಟರ್ ಕೈಮುಗಿದು ಹೇಳುತ್ತಿದ್ದಾರೆ: “ಇಲ್ಲ, ಇನ್ನು ಮಾಡುವುದಿಲ್ಲ.”
ಶ್ರೀರಾಮಕೃಷ್ಣರು: “ಇದುವರೆಗೆ ಬೇಕಾದಷ್ಟು ಆಗಿದೆ. ನೀನು ಮೊಟ್ಟ ಮೊದಲು ನನ್ನನ್ನು ಸಂಧಿಸಿದಾಗಲೇ ನಾನು ನಿನಗೆ ನಿನ್ನ ಆದರ್ಶ ಏನು ಎಂಬುದನ್ನು ತಿಳಿಸಿಬಿಟ್ಟಿದ್ದೇನೆ. ನಿನ್ನ ವಿಷಯವಾಗಿ ನನಗೆ ಎಲ್ಲ ಗೊತ್ತಿದೆ, ಅಲ್ಲವೆ?”
ಮಾಸ್ಟರ್ ಕೈ ಮುಗಿದು: “ಹೌದು ಗೊತ್ತಿದೆ.”
ಶ್ರೀರಾಮಕೃಷ್ಣರು: “ನೀನು ಯಾರು? ನಿನ್ನ ಆದರ್ಶ, ನಿನ್ನ ಒಳಗು ಹೊರಗು, ನಿನ್ನ ಹಿಂದಿನದು ಮುಂದಿನದು-ಎಲ್ಲವೂ ನನಗೆ ಗೊತ್ತಿದೆ ಅಲ್ಲವೆ?”
ಮಾಸ್ಟರ್ ಕೈ ಮುಗಿದು: “ಹೌದು ನಿಜ.”
ಶ್ರೀರಾಮಕೃಷ್ಣರು: “ನಿನಗೆ ಮಕ್ಕಳಾಗಿವೆ ಎಂಬುದನ್ನು ಕೇಳಿ ನಾನು ನಿನ್ನನ್ನು ಹಳಿದಿದ್ದೆ. ಈಗ ಹೋಗಿ ಮನೆಯಲ್ಲಿ ವಾಸಮಾಡಿಕೊಂಡಿರು. ನೀನು ಅವರಿಗೆ ಸೇರಿದವನೆಂದು ಅವರಿಗೆ ಗೊತ್ತಾಗುವಂತೆ ವ್ಯವಹರಿಸು. ಆದರೆ ನೀನು ಆಂತರ್ಯದಲ್ಲಿ ಚೆನ್ನಾಗಿ ಅರಿತುಕೊಂಡಿರು. ನೀನು ಅವರಿಗೇ ಆಗಲಿ, ಅವರು ನಿನಗೇ ಆಗಲಿ ಸೇರಿದವರಲ್ಲ ಎಂಬುದನ್ನು.”
ಮಾಸ್ಟರ್ ಸುಮ್ಮನೆ ಕುಳಿತಿದ್ದಾನೆ. ಪರಮಹಂಸರು ಬುದ್ಧಿವಾದವೀಯುತ್ತಲೇ ಮುಂದುವರಿಯುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಈಗ ನೀನು ಹಾರುವುದನ್ನು ಕಲಿತುಕೊಂಡಿದ್ದೀಯೆ. ನೀನು ನಿನ್ನ ತಂದೆಯನ್ನು ಪ್ರೀತಿಯಿಂದ ನೋಡಬೇಕು. ನೀನು ನಿನ್ನ ತಂದೆಗೆ ಸಾಷ್ಟಾಂಗ ಪ್ರಣಾಮ ಮಾಡಲಾಗುವುದಿಲ್ಲವೆ?”
ಮಾಸ್ಟರ್ ಕೈ ಮುಗಿದು: “ಹೌದು, ಸಾಧ್ಯ.”
ಶ್ರೀರಾಮಕೃಷ್ಣರು: “ನಾನು ನಿನಗೆ ಇನ್ನೇನು ತಾನೇ ಹೇಳಲಿ? ನಿನಗೆ ಎಲ್ಲಾ ಗೊತ್ತಿದೆ. ಎಲ್ಲಾ ಅರ್ಥವಾಗುತ್ತಿದೆ, ಅಲ್ಲವೆ?”
ಮಾಸ್ಟರ್ ಒಂದು ಮಾತೂ ಆಡದೆ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೀಯೆ, ಅಲ್ಲವೆ?”
ಮಾಸ್ಟರ್: “ಹೌದು, ಈಗ ನನಗೆ ಸ್ವಲ್ಪ ಸ್ವಲ್ಪ ಅರ್ಥವಾಗಲು ಹತ್ತಿದೆ.”
ಶ್ರೀರಾಮಕೃಷ್ಣರು: “ಇಲ್ಲ, ನಿನಗೆ ಚೆನ್ನಾಗಿಯೇ ಅರ್ಥವಾಗುತ್ತಿದೆ. ರಾಖಾಲ ಇಲ್ಲಿ ಇರುವುದನ್ನು ನೋಡಿ ಆತನ ತಂದೆಗೆ ಬಹಳ ಆನಂದವಾಗಿಬಿಟ್ಟಿದೆ.”
ಮಾಸ್ಟರ್ ಕೈ ಮುಗಿದು ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಹೌದು, ನೀನು ಏನು ಭಾವಿಸುತ್ತಿದ್ದೀಯೊ ಅದೂ ನಡೆದುಹೋಗಿ ಬಿಡುತ್ತದೆ.”
ಈಗ ಪರಮಹಂಸರು ಪೂರ್ಣ ಪ್ರಕೃತಿಸ್ಥರಾಗಿದ್ದಾರೆ. ರಾಖಾಲ, ರಾಮಲಾಲ ಕೊಠಡಿಯನ್ನು ಪ್ರವೇಶಿಸಿದರು. ಪರಮಹಂಸರ ಅಜ್ಞಾನುಸಾರ ರಾಮಲಾಲ ಹಾಡಲಾರಂಭಿಸಿದ್ದಾನೆ:
ನಲಿಯುವಳಾರೀ ಭೈರವನಾರೀ
ರಣರಂಗದೊಳೀ ಬೆಳಕನು ಬೀರಿ?……
ಆತ ಮತ್ತೆ ಹಾಡುತ್ತಿದ್ದಾನೆ:
ನಟ್ಟಿರುಳ ನಭದಂತೆ ಕಾಳಿಮಾ ತನುವಾಗಿ
ಧಾವಿಸುವ ನಾರಿ ಯಾರು?……..
ಶ್ರೀರಾಮಕೃಷ್ಣರು: “ಭಗವತಿ ಮತ್ತು ಜನನಿ. ಯಾರು ಸರ್ವವ್ಯಾಪಿಯಾಗಿದ್ದುಕೊಂಡು ಜಗದ್ರೂಪವನ್ನು ಧರಿಸಿದ್ದಾಳೊ, ಆಕೆಯೇ ಭಗವತಿ. ಜನನೀ ಎಂದರೆ ಹೆತ್ತ ತಾಯಿ, ಈ ಶರೀರಕ್ಕೆ ಜನ್ಮ ಕೊಡತಕ್ಕವಳು. ನಾನು ‘ಭಗವತಿ’, ‘ಭಗವತಿ’ ಎಂದು ಹೇಳುತ್ತಿದ್ದ ಹಾಗೇ ಸಮಾಧಿಸ್ಥನಾಗಿಬಿಡುತ್ತಿದ್ದೆ. ‘ಭಗವತಿ’, ‘ಭಗವತಿ’ ಎಂದು ಹೇಳುತ್ತಿದ್ದ ಹಾಗೇ ಜಗಜ್ಜನನಿಯನ್ನು ಹತ್ತಿರಕ್ಕೆ ಎಳೆದುಕೊಂಡು ಬರುತ್ತಿರುವಂತೆ ಆಗುತ್ತಿತ್ತು. ಇದು ಬೆಸ್ತರು ಮೊದಲು ಬಲೆ ಬೀಸಿ ಅನಂತರ ಅದನ್ನು ಎಳೆಯುವಾಗ ದೊಡ್ಡ ದೊಡ್ಡ ಮೀನು ಅದಕ್ಕೆ ಬಿದ್ದಿರುವುದು ಗೊತ್ತಾಗುತ್ತದೆಯಲ್ಲ ಹಾಗೆ.
“ಗೌರೀಪಂಡಿತ ಒಮ್ಮೆ ಹೇಳಿದ, ಕಾಳಿ, ಗೌರಾಂಗ ಒಂದೇ ಎಂಬ ಜ್ಞಾನೋದಯವಾದಾಗ ನಿಜವಾದ ಜ್ಞಾನ ದೊರಕಿದಂತಾಗುತ್ತದೆ. ಯಾರು ಬ್ರಹ್ಮನೊ ಆತನೇ ಶಕ್ತಿ-ಕಾಳಿ; ಆತನೇ ನರರೂಪದಲ್ಲಿ ಶ್ರೀಗೌರಾಂಗ.”
ಪರಮಹಂಸರ ಇಚ್ಛೆಗನುಸಾರ ಈ ಸಲ ರಾಮಲಾಲ ಗೌರಾಂಗನ ಸಂಬಂಧವಾಗಿ ಹಾಡಿದ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನಿತ್ಯ ಯಾರದೊ ಆತನದೇ ಲೀಲೆ. ಲೀಲೆ; ಭಕ್ತರಿಗಾಗಿ ಭಗವಂತ ನರರೂಪವನ್ನು ಧರಿಸಿದರೆ ತಾನೆ, ಭಕ್ತರು ಆತನನ್ನು ಪ್ರೀತಿಸಲು ಸಾಧ್ಯ. ಸೋದರ, ಸೋದರಿ, ತಂದೆ, ತಾಯಿ, ಸಂತಾನ ಭಾವಗಳಿಂದ ಆತನನ್ನು ಪೂಜಿಸಲು ಸಾಧ್ಯ.
“ಭಗವಂತ ಭಕ್ತರ ಈ ಪ್ರೀತಿಯ ಸಲುವಾಗಿ ದೇಹಧಾರಣೆ ಮಾಡಿಕೊಂಡು ಈ ಜಗತ್ತಿನಲ್ಲಿ ಕ್ರೀಡಿಸಲು ಬರುತ್ತಾನೆ.”
1. ಪರಮಹಂಸರು ಪಾಶ್ಚಾತ್ಯರೆಲ್ಲರನ್ನೂ ಒಟ್ಟಿಗೆ ಈ ಹೆಸರಿನಿಂದ ಕರೆಯುತ್ತಿದ್ದುದೇ ಅಲ್ಲದೆ ಅವರನ್ನು ಅನುಕರಿಸುತ್ತಿದ್ದ ಪ್ರಾಚ್ಯರನ್ನೂ ಇದೇ ಹೆಸರಿನಿಂದ ಕರೆಯುತ್ತಿದ್ದರು.