೧೮ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ಚತುರ್ಥಿ, ಮಂಗಳವಾರ
ಪರಮಹಂಸರು ಪ್ರಾತಃಕಾಲ ತಮ್ಮ ಕೊಠಡಿಯ ಪಶ್ಚಿಮ ವರಾಂಡದಲ್ಲಿ ಕೆಲವು ಮಂದಿ ಭಕ್ತರೊಡನೆ ಕುಳಿತಿದ್ದಾರೆ. ದೇವೇಂದ್ರನಾಥ ಠಾಕೂರನ ಭಕ್ತಿ ಮತ್ತು ವೈರಾಗ್ಯದ ಸಂಬಂಧವಾಗಿ ಆತನನ್ನು ಬಹಳವಾಗಿ ಹೊಗಳುತ್ತಿದ್ದಾರೆ. ರಾಖಾಲನೇ ಮೊದಲಾದ ಭಕ್ತರ ಕಡೆಗೆ ತೋರಿಸಿ ಹೇಳುತ್ತಿದ್ದಾರೆ. “ದೇವೇಂದ್ರ ಒಳ್ಳೆ ಮನುಷ್ಯ; ಆದರೆ ಯಾರು ಸಂಸಾರಕ್ಕೆ ಕಾಲು ಹಾಕದೆ ಬಾಲ್ಯದಿಂದಲೇ ಶುಕದೇವನಂತೆ ಅಹರ್ನಿಶಿ ಭಗವಚ್ಚಿಂತನೆ ಮಾಡುತ್ತಾರೋ, ಅಂದರೆ ಯಾರು ಕೌಮಾರ ವೈರಾಗ್ಯಸಂಪನ್ನರೋ ಅವರು ನಿಸ್ಸಂದೇಹವಾಗಿ ಧನ್ಯರು.”
“ಸಂಸಾರಿಗೆ ಒಂದಲ್ಲ ಒಂದು ಆಸೆ ಇದ್ದೆ ಇರುತ್ತದೆ. ಆದರೂ ಒಮ್ಮೊಮ್ಮೆ ಒಳ್ಳೇ ಭಕ್ತಿಯನ್ನು ವ್ಯಕ್ತಪಡಿಸುತ್ತಾನೆ. ಮಥುರಬಾಬು ಒಂದು ವ್ಯಾಜ್ಯಕ್ಕೆ ಸಿಕ್ಕಿದ್ದ. ಆತ ಕಾಳೀ ದೇವಾಲಯದಲ್ಲಿ ನನಗೆ ಹೇಳಿದ: ‘ಬಾಬಾ, ಈ ಅರ್ಘ್ಯವನ್ನು ಭಗವತಿಗೆ ಅರ್ಪಿಸಿ.’ ನಾನು ಯಾವ ಸಂದೇಹವನ್ನೂ ಪಡದೆ ಭಗವತಿಗೆ ಅರ್ಪಿಸಿದೆ. ಆತ ಸಂಪೂರ್ಣವಾಗಿ ನಂಬಿದ್ದ, ನಾನು ಅರ್ಘ್ಯವನ್ನು ಅರ್ಪಿಸಿದರೆ, ತಾನು ನಿಸ್ಸಂದೇಹವಾಗಿ ಗೆಲ್ಲುವುದಾಗಿ.
“ರತಿಯ ತಾಯಿಯದು ಎಂಥ ಭಕ್ತಿ! ಎಷ್ಟೊಂದು ವೇಳೆ ಇಲ್ಲಿಗೆ ಬರುತ್ತಿದ್ದಳು! ಎಷ್ಟೊಂದು ಸೇವೆ ಮಾಡುತ್ತಿದ್ದಳು! ಆಕೆ ವೈಷ್ಣವಿ. ಒಂದು ದಿನ ಆಕೆಯ ಕಣ್ಣಿಗೆ ಬಿತ್ತು, ನಾನು ಕಾಳಿಯ ಪ್ರಸಾದ ತಿನ್ನುತ್ತಿರುವುದು. ಅದು ಆಕೆಯನ್ನು ಇಲ್ಲಿಗೆ ಬಾರದ ಹಾಗೆ ಮಾಡಿಬಿಟ್ಟಿತು. ಆಕೆ ಒಂದೇ ಒಂದು ಸ್ವರದವಳು. ಜನರನ್ನು ಮೊದಮೊದಲು ಅರಿಯಲಾಗುವುದಿಲ್ಲ.”
ಪರಮಹಂಸರು ಈಗ ತಮ್ಮ ಕೊಠಡಿಯ ಒಳಗೆ ಪೂರ್ವದ ಬಾಗಿಲ ಹತ್ತಿರ ಕುಳಿತಿದ್ದಾರೆ. ಚಳಿಗಾಲದ ಪ್ರಾತಃಕಾಲವಾದ್ದರಿಂದ ಶಾಲು ಹೊದ್ದುಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೆ ಸೂರ್ಯದರ್ಶನ ಮಾಡಿ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಕಣ್ಣು ಎವೆಯಿಕ್ಕದೆ ನೋಡುತ್ತಿದೆ. ಬಾಹ್ಯಜ್ಞಾನಶೂನ್ಯರಾಗಿಬಿಟ್ಟಿದ್ದಾರೆ. ಬಹಳ ಹೊತ್ತಿನ ನಂತರ ಪ್ರಕೃತಿಸ್ಥರಾಗುತ್ತಿದ್ದಾರೆ. ರಾಖಾಲ, ಹಾಜರಾ, ಮಾಸ್ಟರ್ ಮೊದಲಾದವರು ಹತ್ತಿರ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಹಾಜರಾನಿಗೆ: “ಸಮಾಧಿಯ ಅವಸ್ಥೆ ಪ್ರೇಮದಿಂದ ಪ್ರೇರಿತ ವಾದುದೇನೋ ನಿಜ. ಒಮ್ಮೆ ಶಾಮಬಜಾರಿನ ನಟವರ ಗೋಸ್ವಾಮಿಯ ಮನೆಯಲ್ಲಿ ಕೀರ್ತನೆ ನಡೆಯಿತು. ಅಲ್ಲಿ ನನಗೆ ಶ್ರೀಕೃಷ್ಣನ ಮತ್ತು ಗೋಪಿಯರ ದರ್ಶನ ದೊರೆತು ಸಮಾಧಿಸ್ಥನಾಗಿ ಬಿಟ್ಟೆ. ಅನುಭವವಾಯಿತು, ನನ್ನ ಸೂಕ್ಷ್ಮಶರೀರ ಶ್ರೀಕೃಷ್ಣನ ಹಿಂದು ಹಿಂದೇ ತಿರುಗುತ್ತಿರುವ ಹಾಗೆ.
“ಜೊರಾಸಂಕದ ಹರಿಸಭೆಯಲ್ಲಿ ಈ ವಿಧದ ಕೀರ್ತನೆ ನಡೆಯುತ್ತಿದ್ದಾಗಲೂ ಸಮಾಧಿಸ್ಥನಾಗಿ ಬಾಹ್ಯಜ್ಞಾನಶೂನ್ಯನಾಗಿಬಿಟ್ಟೆ. ಆ ದಿನ ದೇಹತ್ಯಾಗದ ಸಂಭವ ಇತ್ತು”
ಪರಮಹಂಸರು ಸ್ನಾನ ಮುಗಿಸಿದ ನಂತರ ಮತ್ತೆ ಅವರು ಗೋಪೀಪ್ರೇಮದ ಸಂಬಂಧವಾಗಿ ಮಾತಾಡುತ್ತಿದ್ದಾರೆ. ಅವರು ಮಾಸ್ಟರ್ ಮತ್ತು ಉಳಿದ ಭಕ್ತರಿಗೆ ಹೇಳುತ್ತಿದ್ದಾರೆ:
“ಗೋಪಿಯರು ಶ್ರೀಕೃಷ್ಣನಲ್ಲಿಟ್ಟಿದ್ದ ಪ್ರೀತಿಯನ್ನು ಅನುಸರಿಸಬೇಕು. ಈ ವಿಧದ ಹಾಡುಗಳನ್ನು ಆಗಾಗ ಹಾಡುತ್ತಿರಿ:
“ಹೃದಯವಲ್ಲಭನಿರುವ ಕದಂಬವನವೆನ್ನುವುದು
ಇನ್ನೆಷ್ಟು ದೂರವಿದೆ ಹೇಳು ಕೆಳದೀ!
ಕೃಷ್ಣಗಂಧವು ಇದೇಕೊ ಇಲ್ಲಿಗೂ ಬೀಸುತಿದೆ!
ನಡೆಯಲಾರೆನು ಮುಂದೆ; ಸೋತಿರುವೆನು.”
ಮತ್ತೆ ಹಾಡುತ್ತಿದ್ದಾರೆ:
ಹೋಗಲಾರೆ ನಾ ಹೋಗಲಾರೆ ಮನೆಗೆ.
ಕೃಷ್ಣನಾಮವನು ಜಪಿಸಲಾರೆ ನಾ
ನನ್ನ ಮನೆಯ ಒಳಗೆ…..
ಪರಮಹಂಸರು ರಾಖಾಲನಿಗೆ ಒಳ್ಳೆಯದಾಗಲಿ ಎಂದು ಸಿದ್ಧೆಶ್ವರೀದೇವಿಗೆ ಎಳೆನೀರು ಸಕ್ಕರೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದರು. ಅವುಗಳ ಬೆಲೆಯನ್ನು ಕೊಡಲು ಮಾಸ್ಟರಿಗೆ ಸಾಧ್ಯವಾಗುತ್ತದೆಯೆ ಎಂದು ಆತನನ್ನು ಕೇಳುತ್ತಿದ್ದಾರೆ.
ಪರಮಹಂಸರು ಅಪರಾಹ್ನದಲ್ಲಿ ರಾಖಾಲ, ಮಾಸ್ಟರ್ ಮೊದಲಾದವರೊಡನೆ ಕಲ್ಕತ್ತದಲ್ಲಿರುವ ಸಿದ್ಧೇಶ್ವರೀ ದೇವಾಲಯದ ಕಡೆ ಗಾಡಿ ಮಾಡಿಕೊಂಡು ಬರುತ್ತಿದ್ದಾರೆ. ದಾರಿಯಲ್ಲಿ ಸಕ್ಕರೆ ಎಳನೀರು ಕೊಂಡುಕೊಂಡದ್ದಾಯಿತು. ದೇವಾಲಯವನ್ನು ಮುಟ್ಟಿದ ನಂತರ ಪರಮಹಂಸರು ಭಕ್ತರಿಗೆ ಹೇಳಿದರು, ಎಳನೀರನ್ನು ಕೊಚ್ಚಿ ಅದಕ್ಕೆ ಸಕ್ಕರೆ ಬೆರಸಿ ಭಗವತಿಗೆ ಅರ್ಪಿಸುವ ಹಾಗೆ. ಅಲ್ಲಿನ ಅರ್ಚಕರು ತಮ್ಮ ಸ್ನೇಹಿತರೊಡನೆ ಇಸ್ಪೀಟು ಆಡುತ್ತಿದ್ದುದು ಪರಮಹಂಸರ ಕಣ್ಣಿಗೆ ಬಿತ್ತು. ಅದನ್ನು ನೋಡಿ ಪರಮಹಂಸರು ಭಕ್ತರಿಗೆ ಹೇಳುತ್ತಿದ್ದಾರೆ: “ನೋಡಿದಿರಾ, ಇಲ್ಲೂ ಇಸ್ಪೀಟು ಆಡುತ್ತಿರುವುದನ್ನು! ಇಲ್ಲಿ ಮಾಡ ಬೇಕಾದ್ದು ಭಗವಚ್ಚಿಂತನೆ.”
ಪರಮಹಂಸರು ದೇವಾಲಯದಿಂದ ಹೊರಟು ಯದುಮಲ್ಲಿಕನ ಮನೆಗೆ ಬಂದಿದ್ದಾರೆ. ಆತನೊಡನೆ ಅನೇಕ ಮಂದಿ ಬಾಬುಗಳು ಕುಳಿತಿದ್ದಾರೆ. ಯದುಮಲ್ಲಿಕ ಪರಮಹಂಸರನ್ನು ಆದರದಿಂದ ಬರಮಾಡಿಕೊಂಡ.
ಶ್ರೀರಾಮಕೃಷ್ಣರು ನಗುತ್ತ: “ನೀನು ಇಷ್ಟೊಂದು ಜನ ನಕಲಿಶ್ಯಾಮರನ್ನು, ಹೊಗಳುಭಟ್ಟರನ್ನು ಏಕೆ ಹತ್ತಿರಕ್ಕೆ ಸೇರಿಸುತ್ತಾ ಇದ್ದೀಯೆ?”
ಯದುಮಲ್ಲಿಕ ನಗುತ್ತ : “ನೀವು ಅವರನ್ನು ಉದ್ಧಾರಮಾಡಲಿ ಎಂದು.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು: “ಹೊಗಳುಭಟ್ಟರು ಭಾವಿಸುತ್ತಾರೆ, ಧನಿಕ ತಮಗಾಗಿ ಹಣದ ಚೀಲದ ಕಟ್ಟನ್ನು ಸಡಿಲುಮಾಡುತ್ತಾನೆ ಎಂದು. ಆದರೆ ಆತನಿಂದ ಏನನ್ನಾದರೂ ವಸೂಲು ಮಾಡುವುದು ಅಂದರೆ ಬಹಳ ಕಷ್ಟ. ಒಮ್ಮೆ ಒಂದು ನರಿ ಒಂದು ಹೋರಿಯನ್ನು ಕಂಡು, ಅದರ ಸಂಗವನ್ನು ಬಿಡಲೊಲ್ಲದು. ಅದು ಹುಲ್ಲು ಮೇಯುತ್ತಿದ್ದರೆ, ಇದೂ ಜೊತೆಯಲ್ಲೇ ಇರುತ್ತಿತ್ತು. ನರಿ ಭಾವಿಸಿತು; ‘ಹೋರಿಯ ಬೀಜಕೋಶ ನೇತಾಡುತ್ತಿದೆ. ಎಂದಾದರೂ ಒಂದು ದಿನ ಅದು ಬೀಳುತ್ತದೆ, ಆಗ ನಾನು ಅದನ್ನು ಸವಿಯಬಹುದು.’ ಹೋರಿ ಮಲಗಿ ನಿದ್ರಿಸಿದಾಗಲೆಲ್ಲಾ ನರಿಯೂ ಅದರ ಹತ್ತಿರವೇ ಮಲಗಿ ನಿದ್ರಿಸುತ್ತಿತ್ತು; ಅದು ಎದ್ದು ಸುತ್ತಾಡಿದಾಗಲೆಲ್ಲಾ ನರಿಯೂ ಅದರ ಹಿಂದೆಯೇ ಸುತ್ತಾಡುತ್ತಿತ್ತು. ಹೀಗೆ ಎಷ್ಟೋ ದಿನ ಕಳೆದುಹೋದವು. ಆದರೂ ಹೋರಿಯ ಬೀಜಕೋಶ ಕೆಳಕ್ಕೆ ಬೀಳಲಿಲ್ಲ. ಆಗ ಅದು ನಿರಾಶೆಯಿಂದ ಹೊರಟುಹೋಯಿತು. (ಎಲ್ಲರೂ ನಗುತ್ತಿದ್ದಾರೆ.) ಹೊಗಳುಭಟ್ಟರಿಗೂ ಆಗುವ ಗತಿ ಇದೇ.”
ಯದುಮಲ್ಲಿಕ ಮತ್ತು ಆತನ ತಾಯಿ ಪರಮಹಂಸರಿಗೂ ಮತ್ತು ಅವರ ಭಕ್ತರಿಗೂ ಉಪಾಹಾರ ಮಾಡಿಸಿದರು.
೧೯ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ಪಂಚಮಿ, ಬುಧವಾರ
ಘಂಟೆ ಬೆಳಗಿನ ಒಂಬತ್ತು. ಪರಮಹಂಸರು ಮಾಸ್ಟರೊಡನೆ ದಕ್ಷಿಣೇಶ್ವರದ ಬಿಲ್ವ ಮರದ ಹತ್ತಿರ ಮಾತಾಡುತ್ತಿದ್ದಾನೆ. ಬಿಲ್ವಮರದ ಮೂಲ ಪರಮಹಂಸರ ಸಾಧನ ಭೂಮಿ, ಅದು ಅತಿ ನಿರ್ಜನಪ್ರದೇಶ. ಉತ್ತರದಲ್ಲಿ ಎತ್ತರವಾದ ಕಾಂಪೌಂಡು ಇದೆ. ಅದರಿಂದಾಚೆಗೆ ಮದ್ದಿನ ಮನೆ. ಪಶ್ಚಿಮದಲ್ಲಿ ಸರ್ವೆಮರಗಳ ತೋಪು ಸದಾ “ಸೊಯ್ ಸೊಯ್” ಅಂತ ಶಬ್ದ ಮಾಡುತ್ತಿದೆ. ಅದರಿಂದಾಚೆಗೆ ಭಾಗೀರಥಿ ಹರಿಯುತ್ತಿದ್ದಾಳೆ. ದಕ್ಷಿಣದಿಕ್ಕಿನಲ್ಲಿ ಪಂಚವಟಿ ಕಾಣಿಸಿಕೊಳ್ಳುತ್ತಿದೆ. ಸುತ್ತಲೂ ಅಷ್ಟೊಂದು ಮರಗಿಡಗಳು ಎದ್ದಿವೆ. ದೇವಾಲಯ ಇಲ್ಲಿಂದ ಕಣ್ಣಿಗೆ ಬೀಳುತ್ತಿಲ್ಲ. ಬಾಹ್ಯಪ್ರಪಂಚದ ಶಬ್ದ ಒಂದು ಕಿಂಚಿತ್ತೂ ಇಲ್ಲಿಗೆ ಕೇಳಿಬರುತ್ತಿಲ್ಲ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೋಡು, ಕಾಮಕಾಂಚನವನ್ನು ತ್ಯಾಗಮಾಡದ ಹೊರತು ಭಗವಂತನ ಸಾಕ್ಷಾತ್ಕಾರ ದೊರಕುವುದಿಲ್ಲ.”
ಮಾಸ್ಟರ್: “ಏಕೆ? ವಸಿಷ್ಠದೇವ ರಾಮಚಂದ್ರನಿಗೆ ಹೇಳಲಿಲ್ಲವೆ: ‘ರಾಮ, ನೀನು ಈ ಜಗತ್ತನ್ನು ತ್ಯಜಿಸಬಹುದು, ಇದು ಭಗವಂತನಿಂದ ಹೊರಗಿರುವುದಾದರೆ.’
ಶ್ರೀರಾಮಕೃಷ್ಣರು ನಸುನಕ್ಕು: “ಅದು ರಾವಣನ ವಧೆಗಾಗಿ. ಅದಕ್ಕಾಗಿ ರಾಮ ಸಂಸಾರಕ್ಕೆ ಬಿದ್ದಿದ್ದು-ವಿವಾಹಮಾಡಿಕೊಂಡಿದ್ದು.”
ಮಾಸ್ಟರ್ ಬಾಯಲ್ಲಿ ಒಂದು ಮಾತೂ ಹೊರಡದೆ ಮರದ ತುಂಡಿನ ಹಾಗೆ ಸುಮ್ಮನೆ ನಿಂತುಕೊಂಡಿದ್ದಾನೆ.
ಪರಮಹಂಸರು ತಮ್ಮ ಕೊಠಡಿಗೆ ಹಿಂದಿರುಗಲು ಪಂಚವಟಿಯ ಕಡೆ ಬರುತ್ತಿದ್ದಾರೆ. ಮಾಸ್ಟರೂ ಅವರನ್ನು ಹಿಂಬಾಲಿಸುತ್ತಿದ್ದಾನೆ. ಈಗ ಘಂಟೆ ಹತ್ತು.
ಮಾಸ್ಟರ್: “ಭಗವಂತನ ನಿರಾಕಾರ ಸಾಕ್ಷಾತ್ಕಾರಕ್ಕೆ ಸಾಧನೆ ಇಲ್ಲವೆ?”
ಶ್ರೀರಾಮಕೃಷ್ಣರು: “ಇಲ್ಲದೆ ಏನು? ಆದರೆ ಆ ಮಾರ್ಗ ಬಹಳ ಕಠಿಣವಾದುದು. ಹಿಂದಿನ ಋಷಿಗಳು ಬಹಳವಾಗಿ ತಪಸ್ಸು ಮಾಡಿ ಭಗವಂತ ತಮ್ಮ ಆತ್ಮದ ಆತ್ಮ ಎಂಬುದನ್ನು ಬ್ರಹ್ಮನ ನಿಜಸ್ವರೂಪ ಏನು ಎಂಬುದನ್ನು ಅನುಭವಮಾಡಿಕೊಳ್ಳುತ್ತಿದ್ದರು. ಆದರೆ ಅವರು ಎಷ್ಟು ಕಷ್ಟಪಡಬೇಕಾಯಿತು? ಅವರು ಪ್ರಾತಃಕಾಲವೇ ತಮ್ಮ ಕುಟೀರವನ್ನು ಬಿಟ್ಟು ಇಡೀ ಹಗಲೆಲ್ಲಾ ತಪಸ್ಸಿನಲ್ಲಿ ತೊಡಗಿದ್ದು ಸಾಯಂಕಾಲದನಂತರ ಕುಟೀರಕ್ಕೆ ಹಿಂದಿರುಗಿ ಬರುತ್ತಿದ್ದರು. ರಾತ್ರಿ ವೇಳೆಯಲ್ಲಿ ಮಾತ್ರ ಎಲ್ಲೋ ಕಿಂಚಿತ್ ಫಲಮೂಲಗಳನ್ನು ತಿನ್ನುತ್ತಿದ್ದರು.
“ಈ ಸಾಧನೆಯಲ್ಲಿ ವಿಷಯಬುದ್ಧಿ ಲೇಶಮಾತ್ರವಿದ್ದರೂ, ಭಗವಂತನ ಸಾಕ್ಷಾತ್ಕಾರ ದೊರೆಯುವುದಿಲ್ಲ. ರೂಪ, ರಸ, ಗಂಧ, ಸ್ಪರ್ಶ, ಶಬ್ದ-ಈ ವಸ್ತುಗಳ ಮೇಲಿನ ಆಸಕ್ತಿ ಮನಸ್ಸಿನಲ್ಲಿ ಒಂದು ಕಿಂಚಿತ್ತೂ ಇರಕೂಡದು. ಆಗ ಮಾತ್ರವೇ ಮನಸ್ಸು ಶುದ್ಧವಾಗುತ್ತದೆ. ಶುದ್ಧ ಮನಸ್ಸೇ ಶುದ್ಧ ಆತ್ಮ. ಅಂಥ ಮನಸ್ಸಿನಲ್ಲಿ ಕಾಮಕಾಂಚನಾಸಕ್ತಿ ಕಿಂಚಿತ್ತೂ ಇರದು. ಮನಸ್ಸು ಶುದ್ಧವಾದಾಗ ಇನ್ನೊಂದು ಅನುಭವ ದೊರೆಯುತ್ತದೆ. ಅನುಭವವಾಗುತ್ತದೆ : ‘ಭಗವಂತನೇ ಕರ್ತ, ನಾನು ಅಕರ್ತ.’ ಪರರ ಸುಖದಲ್ಲಿ, ಅಥವಾ ದುಃಖದಲ್ಲಿ ನಾನಿಲ್ಲ ದಿದ್ದರೆ ಆಗುವುದಿಲ್ಲ ಎಂಬ ಜ್ಞಾನವಿರದು.
“ಒಮ್ಮೆ ಒಬ್ಬ ದುಷ್ಟ ಒಂದು ಮಠದ ಸಾಧುವನ್ನು ಪ್ರಜ್ಞೆ ತಪ್ಪುವವರೆಗೆ ಹೊಡೆದು ಬಿಟ್ಟ. ಆತನಿಗೆ ಪ್ರಜ್ಞೆ ಬಂದ ಮೇಲೆ ಆತನ ಸ್ನೇಹಿತರು ಕೇಳಿದರು: ‘ಯಾರು ನಿನಗೆ ಈಗ ಹಾಲು ಕುಡಿಸುತ್ತಿದ್ದಾರೆ?’ ಆತ ಹೇಳಿದ: ‘ಯಾರು ನನ್ನನ್ನು ಹೊಡೆದನೊ ಆತನೇ ಈಗ ಹಾಲು ಕುಡಿಸುತ್ತಿದ್ದಾನೆ.’”
ಮಾಸ್ಟರ್: “ಹೌದು, ನನಗೆ ಆ ಕಥೆ ಗೊತ್ತಿದೆ.”
ಶ್ರೀರಾಮಕೃಷ್ಣರು: “ಕೇವಲ ಅದು ಗೊತ್ತಿದ್ದುಬಿಟ್ಟರೇ ಸಾಕಾಗದು. ಅದರ ಅರ್ಥವನ್ನು ಅನುಷ್ಠಾನಕ್ಕೆ ತರಬೇಕು. ವಿಷಯಚಿಂತನೆ ಮನಸ್ಸನ್ನು ಸಮಾಧಿಸ್ಥವಾಗಲು ಬಿಟ್ಟುಕೊಡದು. ವಿಷಯಬುದ್ಧಿ ಸಂಪೂರ್ಣವಾಗಿ ತೊಲಗಿಹೋದನಂತರವೇ ಸ್ಥಿತ ಸಮಾಧಿ ಉಂಟಾಗುತ್ತದೆ. ನಾನು ಸ್ಥಿತಸಮಾಧಿಯಲ್ಲಿ ದೇಹತ್ಯಾಗ ಮಾಡಿಬಿಡಬಲ್ಲೆ; ಆದರೆ ನನ್ನಲ್ಲಿ ಭಕ್ತನಾಗಿ ಇರಬೇಕೆಂಬ ಸ್ವಲ್ಪ ಆಸೆ ಇದೆ. ಅದಕ್ಕಾಗಿಯೇ ನಾನು ಈ ದೇಹದ ಮೇಲೆ ಸ್ವಲ್ಪ ಮನಸ್ಸಿಟ್ಟಿರುವುದು.
“ಇನ್ನೊಂದು ಇದೆ: ‘ಉನ್ಮನ ಸಮಾಧಿ’ ಎಂಬುದು. ಚೆದರಿದ್ದ ಮನಸ್ಸನ್ನು ಇದ್ದಕ್ಕಿದ್ದ ಹಾಗೆ ಒಟ್ಟುಗೂಡಿಸುವುದು. ಇದು ಏನು ಎಂಬುದು ನಿನಗೆ ಅರ್ಥವಾಯಿತೆ ?”
ಮಾಸ್ಟರ್: “ಹೌದು, ಆಯಿತು.”
ಶ್ರೀರಾಮಕೃಷ್ಣರು: “ಇದು ಚೆದರಿಹೋಗಿದ್ದ ಮನಸ್ಸನ್ನು ಇದ್ದಕ್ಕಿದ್ದ ಹಾಗೆ ಒಟ್ಟುಗೂಡಿಸುವುದು. ಈ ಸಮಾಧಿ ಹೆಚ್ಚು ಹೊತ್ತು ನಿಲ್ಲದು. ಪ್ರಾಪಂಚಿಕ ಯೋಚನೆ ಬಂದು ಅದನ್ನು ಭಂಗಮಾಡಿಬಿಡುತ್ತದೆ. ಯೋಗಿಯ ಯೋಗ ಭಂಗವಾಗಿಬಿಡುತ್ತದೆ.
“ಕಾಮಾರಪುಕುರದಲ್ಲಿ ನೋಡಿದ್ದೇನೆ, ಉಡ ಗೋಡೆಯೊಳಗೆ ಬಿಲಮಾಡಿಕೊಂಡು ಇರುವುದನ್ನು. ಅದು ಅಲ್ಲಿ ಬಹಳ ಆರಾಮದಿಂದ ಇರುತ್ತದೆ. ಒಮ್ಮೊಮ್ಮೆ ಜನ ಅದರ ಬಾಲಕ್ಕೆ ಇಟ್ಟಿಗೆಯನ್ನು ಕಟ್ಟಿಬಿಡುತ್ತಾರೆ. ಇಟ್ಟಿಗೆಯ ಭಾರಕ್ಕೆ ಅದು ಬಿಲದಿಂದ ಹೊರಕ್ಕೆ ಬೀಳಬೇಕಾಗುತ್ತದೆ. ತನ್ನ ಬಿಲದೊಳಕ್ಕೆ ಹೋಗಿ ಆರಾಮದಿಂದಿರಲು ಅದು ಎಷ್ಟೇ ಸಲ ಪ್ರಯತ್ನ ಪಟ್ಟರೂ, ಅಷ್ಟು ಸಲವೂ ಇಟ್ಟಿಗೆಯ ಭಾರದಿಂದ ಅದು ಕೆಳಕ್ಕೆ ಬೀಳುತ್ತಲೇ ಇರಬೇಕಾಗುತ್ತದೆ. ವಿಷಯಚಿಂತನೆಯೂ ಹೀಗೆಯೇ ಮಾಡುತ್ತದೆ. ಅದು ಯೋಗಿಯನ್ನು ಯೋಗಭ್ರಷ್ಟನನ್ನಾಗಿ ಮಾಡುತ್ತದೆ.
“ಪ್ರಾಪಂಚಿಕರಿಗೂ ಒಮ್ಮೊಮ್ಮೆ ಸಮಾಧಿಯ ಅವಸ್ಥೆ ಉಂಟಾಗಲೂಬಹುದು. ಸೂರ್ಯೋದಯವಾದಾಗ ತಾವರೆಯ ಹೂವು ಅರಳುತ್ತದೆ. ಆದರೆ ಸೂರ್ಯನನ್ನು ಮೋಡ ಮುಚ್ಚಿತು ಎಂದರೆ, ಅದು ಮುಚ್ಚಿಕೊಂಡುಬಿಡುತ್ತದೆ. ಪ್ರಾಪಂಚಿಕ ಚಿಂತನೆಯೇ ಮೋಡ.”
ಮಾಸ್ಟರ್: “ಸಾಧನೆ ಮಾಡಿದರೆ ಜ್ಞಾನ-ಭಕ್ತಿ ಎರಡನ್ನೂ ಗಳಿಸಿಕೊಳ್ಳ ಲಾಗುವುದಿಲ್ಲವೆ?”
ಶ್ರೀರಾಮಕೃಷ್ಣರು: “ಭಕ್ತಿಮಾರ್ಗವನ್ನು ಅನುಸರಿಸಿದರೆ ಎರಡೂ ದೊರೆಯುತ್ತದೆ. ಆವಶ್ಯಕವೆನಿಸಿದರೆ ಭಗವಂತನೇ ಬ್ರಹ್ಮಜ್ಞಾನವನ್ನು ಕೊಡುತ್ತಾನೆ. ಬಹಳ ಉತ್ತಮ ಸಾಧಕ ಜ್ಞಾನ, ಭಕ್ತಿ ಎರಡನ್ನೂ ಜೊತೆಯಲ್ಲೇ ಬೆಳೆಸಿಕೊಂಡುಬಿಡುತ್ತಾನೆ. ಈಶ್ವರಕೋಟಿ ಈ ಗುಂಪಿಗೆ ಸೇರಿದವರು-ಉದಾಹರಣೆಗೆ ಚೈತನ್ಯದೇವ. ಆದರೆ ಜೀವಕೋಟಿಗಳ ವಿಷಯವೇ ಬೇರೆ.
“ಬೆಳಕಿನಲ್ಲಿ ಐದು ವಿಧ : ದೀಪದ ಬೆಳಕು, ವಿವಿಧ ಬೆಂಕಿಗಳ ಬೆಳಕು, ಚಂದ್ರನ ಬೆಳಕು, ಸೂರ್ಯನ ಬೆಳಕು, ಸೂರ್ಯಚಂದ್ರರ ಮಿಶ್ರಣ ಬೆಳಕು. ಭಕ್ತಿ, ಚಂದ್ರನ ಬೆಳಕು; ಜ್ಞಾನ, ಸೂರ್ಯನ ಬೆಳಕು.
“ಕೆಲಕೆಲವು ವೇಳೆ ಸೂರ್ಯ ಅಸ್ತನಾಗುವುದಕ್ಕೆ ಮುನ್ನವೇ ಚಂದ್ರೋದಯವಾಗುವು ದನ್ನು ನೋಡಬಹುದು. ಅವತಾರಾದಿಗಳಲ್ಲಿ ಭಕ್ತಿ ಎಂಬ ಚಂದ್ರ, ಜ್ಞಾನವೆಂಬ ಸೂರ್ಯ ಎರಡೂ ಜೊತೆಯಲ್ಲೇ ಇರುವುದನ್ನು ನೋಡಬಹುದು.
“ಮನಸ್ಸು ಮಾಡಿಕೊಂಡಾಕ್ಷಣಕ್ಕೆ ಎಲ್ಲರೂ ಜ್ಞಾನಭಕ್ತಿಗಳನ್ನು ಒಟ್ಟಿಗೆ ಬೆಳೆಸಿಕೊಳ್ಳಲು ಸಾಧ್ಯವೇ? ಆಧಾರ ವಿಶೇಷತೆಯೆಂಬುದು ಇದೆ. ಕೆಲವು ಬೊಂಬುಗಳಲ್ಲಿ ಟೊಳ್ಳು ದೊಡ್ಡ ದಾಗಿರುತ್ತದೆ. ಇನ್ನು ಕೆಲವದರಲ್ಲಿ ಚಿಕ್ಕದಾಗಿರುತ್ತದೆ. ಭಗವಂತನ ನೈಜಸ್ವರೂಪವನ್ನು ಗ್ರಹಿಸಲು ಎಲ್ಲರಿಗೂ ಸಾಧ್ಯವೇ? ಒಂದು ಸೇರಿನ ಪಾತ್ರೆಗೆ ಎರಡು ಸೇರು ಹಾಲು ಹಿಡಿಸುವುದೆ?”
ಮಾಸ್ಟರ್: “ಏಕೆ? ಆತನ ಕೃಪೆಯೊಂದಿದ್ದರೆ? ಆತ ಕೃಪೆಮಾಡಿದುದೇ ಆದರೆ ಸೂಜಿಯ ಕಣ್ಣಿನ ಮೂಲಕ ಒಂಟೆಯೂ ಹಾದುಹೋಗಿಬಿಡಬಲ್ಲುದು, ಅಲ್ಲವೆ?”
ಶ್ರೀರಾಮಕೃಷ್ಣರು: “ಕೃಪೆ ಸುಮ್ಮನೆ ಬಂದುಬಿಡುತ್ತದೆಯೆ? ಭಿಕ್ಷುಕ ಒಂದು ಕಾಸು ಕೇಳಿದರೇನೊ ಕೊಟ್ಟುಬಿಡಬಹುದು. ಆತ ತನ್ನ ಇಡೀ ರೈಲ್ವೆ ಚಾರ್ಜನ್ನು ಕೊಡಬೇಕೆಂದರೆ?”
ಮಾಸ್ಟರ್ ಸುಮ್ಮನೆ ನಿಂತಿದ್ದಾನೆ. ಪರಮಹಂಸರೂ ಸುಮ್ಮನಿದ್ದಾರೆ. ಇದ್ದಕ್ಕಿದ್ದ ಹಾಗೆ ಹೇಳುತ್ತಿದ್ದಾರೆ: “ಹೌದು, ನಿಜ. ಭಗವಂತನ ಕೃಪೆಯಿಂದ ಕೆಲವರಿಗೆ ಜ್ಞಾನ ಭಕ್ತಿ ಎರಡನ್ನೂ ಗಳಿಸಿಕೊಳ್ಳಲು ಸಾಧ್ಯವಾಗಬಹುದು.”
ಮಾಸ್ಟರ್ ಪರಮಹಂಸರಿಗೆ ಪ್ರಣಾಮಮಾಡಿ ಬಿಲ್ವಮರದ ಕಡೆಗೆ ಹೋಗುತ್ತಿದ್ದಾನೆ. ಮಧ್ಯಾಹ್ನವಾದರೂ ಮಾಸ್ಟರ್ ಇನ್ನೂ ಬಾರದಿರುವುದನ್ನು ನೋಡಿ ಪರಮಹಂಸರೇ ಬಿಲ್ವ ಮರದ ಕಡೆಗೆ ಹೋಗುತ್ತಿದ್ದಾರೆ; ಆದರೆ ಅವರು ಪಂಚವಟಿಯನ್ನು ತಲುಪಿದಾಗ, ಮಾಸ್ಟರೂ ಆ ಕಡೆಯಿಂದ ಜಂಖಾನ, ಆಸನ, ನೀರಿನ ಪಾತ್ರೆ ಹಿಡಿದುಕೊಂಡು ಬರುತ್ತಿದ್ದುದು ಅವರ ಕಣ್ಣಿಗೆ ಬಿತ್ತು. ಮಾಸ್ಟರ್ ಹತ್ತಿರಕ್ಕೆ ಬಂದು ಪರಮಹಂಸರಿಗೆ ಪ್ರಣಾಮಮಾಡಿದ.
ಶ್ರೀರಾಮಕೃಷ್ಣರು ಮಾಸ್ಟರಿಗೆ ಹೇಳುತ್ತಿದ್ದಾರೆ. “ನಿನ್ನನ್ನು ಹುಡುಕಲು ಬರುತ್ತಿದ್ದೆ. ನೀನು ಇಷ್ಟು ಹೊತ್ತಾದರೂ ಬಾರದಿರುವುದನ್ನು ನೋಡಿ ಭಾವಿಸಿದೆ, ನೀನು ಕಾಂಪೌಂಡು ನೆಗೆದು ಹಾಗೇ ತಪ್ಪಿಸಿಕೊಂಡು ಹೊರಟುಹೋಗಿರಬೇಕು. ಬೆಳಗ್ಗೆ ನಿನ್ನ ಕಣ್ಣು ಇದ್ದ ಅವಸ್ಥೆಯನ್ನು ನೋಡಿದ್ದೆ. ಭಾವನೆ ಬಂತು ನಾರಾಯಣಶಾಸ್ತ್ರಿಯ ಹಾಗೆ ಓಡಿಹೋಗಿರಬೇಕು. ಬಳಿಕ ನನಗೆ ನಾನೇ ಹೇಳಿಕೊಂಡೆ : ‘ಛೆ! ಅವನು ಈ ರೀತಿಯಾಗೆಲ್ಲ ಮಾಡತಕ್ಕ ಮನುಷ್ಯನಲ್ಲ. ಆತ ಏನು ಮಾಡಬೇಕಾದರೂ ಮೊದಲೇ ಪೂರ್ವಾಪರ ಆಲೋಚಿಸಿ ಆಮೇಲೆ ಮಾಡುತ್ತಾನೆ.’”
ರಾತ್ರಿಯಾಗಿದೆ. ಪರಮಹಂಸರು ಮಾಸ್ಟರೊಡನೆ ಮಾತಾಡುತ್ತಿದ್ದಾರೆ. ರಾಖಾಲ, ಲಾಟು, ಹರೀಶ ಮೊದಲಾದವರೂ ಹತ್ತಿರ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಒಳ್ಳೇದು, ಕೆಲಕೆಲವರು ಕೃಷ್ಣಲೀಲೆಯ ಸಂಬಂಧ ವಾಗಿ ಆಧ್ಯಾತ್ಮಿಕ ವ್ಯಾಖ್ಯಾನ ಕೊಡುತ್ತಾರೆ. ಅದರ ವಿಷಯವಾಗಿ ನಿನ್ನ ಅಭಿಪ್ರಾಯವೇನು?”
ಮಾಸ್ಟರ್: “ಅನೇಕ ದೃಷ್ಟಿಗಳಿವೆ. ಇದ್ದರೇನು ತೊಂದರೆ? ನೀವು ಭೀಷ್ಮದೇವನ ಸಂಬಂಧವಾಗಿ ಹೇಳಿದ್ದೀರಿ-ಶರಶಯ್ಯೆಯಲ್ಲಿ ಆತ ಮಲಗಿ ದೇಹತ್ಯಾಗಮಾಡುವಾಗ ಹೇಳಿದ: ‘ನಾನು ಏಕೆ ಅಳುತ್ತಿದ್ದೇನೆ ಗೊತ್ತೆ? ಮರಣಸಂಕಟಕ್ಕಾಗೇನೂ ಅಲ್ಲ. ಸಾಕ್ಷಾತ್ ನಾರಾಯಣನೇ ಅರ್ಜುನನ ಸಾರಥಿಯಾಗಿದ್ದರೂ ಪಾಂಡವರ ದುಃಖದುರಿತಗಳಿಗೆ ಕೊನೆಯೇ ಇಲ್ಲವಲ್ಲ, ಭಗವಂತನ ಲೀಲೆ ನನಗೆ ಸ್ವಲ್ಪವೂ ಅರ್ಥವಾಗುತ್ತಿಲ್ಲವಲ್ಲ ಎಂಬ ಭಾವನೆ ಬಂದು ಅಳುತ್ತಿದ್ದೇನೆ.’
“ಮತ್ತೆ ನೀವು ಹನುಮಂತನ ವಿಷಯವಾಗಿ ಹೇಳಿದ್ದೀರಿ-ಆತ ಹೇಳುತ್ತಿದ್ದ: ‘ನನಗೆ ತಿಥಿ, ವಾರ, ನಕ್ಷತ್ರ ಏನೂ ಗೊತ್ತಿಲ್ಲ. ನಾನು ಕೇವಲ ರಾಮಚಿಂತನೆ ಮಾಡುತ್ತಿದ್ದೇನೆ.’
“ನೀವು ಹೇಳಿದ್ದೀರಿ, ಬ್ರಹ್ಮ-ಶಕ್ತಿ ಇವೆರಡು ಹೊರತು ಇನ್ನು ಬೇರೆ ಏನೂ ಇಲ್ಲ. ಮತ್ತೆ ಹೇಳಿದ್ದೀರಿ, ಬ್ರಹ್ಮಜ್ಞಾನ ಉಂಟಾದರೆ ಇವೆರಡೂ ಒಂದೇ ಎಂಬ ಬೋಧೆಯಾಗು ತ್ತದೆ; ಒಂದೇ ಎರಡಲ್ಲ ಎಂಬ ಬೋಧೆಯಾಗುತ್ತದೆ.”
ಶ್ರೀರಾಮಕೃಷ್ಣರು: “ಹೌದು, ನಿಜ. ನಿನ್ನ ಉದ್ದೇಶ ಗುರಿಯನ್ನು ಮುಟ್ಟುವುದು. ನೀನು ಅದನ್ನು ಇಚ್ಛೆ ಬಂದರೆ ಮುಳ್ಳಿನ ಕಾಡಿನ ಮೂಲಕವಾಗಿಯೂ ಮುಟ್ಟಬಹುದು. ಒಳ್ಳೇ ರಸ್ತೆಯ ಮೂಲಕವಾಗಿಯೂ ಮುಟ್ಟಬಹುದು.”
“ನಾನಾ ದೃಷ್ಟಿಗಳು ನಿಜವಾಗಿಯೂ ಇವೆ. ತೋತಾಪುರಿ ಹೇಳುತ್ತಿದ್ದ, ನಾನಾ ದೃಷ್ಟಿಗಳ ದೆಸೆಯಿಂದ ಸಾಧುಸೇವೆ ನಡೆಯದೆ ಹೋಯಿತು ಎಂದು. ಒಂದು ಜಾಗದಲ್ಲಿ ಸಂತರ್ಪಣೆ ನಡೆಯುತ್ತಿತ್ತು. ಅನೇಕ ಸಾಧುಸಂಪ್ರದಾಯದವರು ಬಂದಿದ್ದರು. ಪ್ರತಿಯೊಂದು ಸಂಪ್ರದಾಯದವರೂ ಹೇಳಲಾರಂಭಿಸಿದರು, ಮೊದಲು ತಮಗೆ ಸೇವೆ ನಡೆಯಬೇಕು, ಬಳಿಕ ಉಳಿದ ಸಂಪ್ರದಾಯದವರಿಗೆ ಎಂದು. ಈ ಗೊಂದಲದಲ್ಲಿ ಯಾವ ನಿರ್ಧಾರಕ್ಕೂ ಬರಲಾಗಲಿಲ್ಲ. ಕೊನೆಗೆ ಎಲ್ಲರೂ ಹೊರಟು ಹೋದರು. ಮಾಡಿದ್ದ ಅಡಿಗೆಯನ್ನು ವೇಶ್ಯೆ ಯರಿಗೆ ಬಡಿಸಲಾಯಿತು.”
ಮಾಸ್ಟರ್: “ತೋತಾಪುರಿ ಬಹಳ ದೊಡ್ಡ ಸಾಧು.”
ಶ್ರೀರಾಮಕೃಷ್ಣರು: “ಆದರೆ, ಹಾಜರಾ ಹೇಳುತ್ತಾನೆ, ಆತ ಕೇವಲ ಒಬ್ಬ ಸಾಮಾನ್ಯ ಮನುಷ್ಯ ಎಂದು. ಇವುಗಳ ಮೇಲೆ ಮಾತುಕತೆ ಯಾವ ಪ್ರಯೋಜನಕ್ಕೂ ಬಂದುದಲ್ಲ. ಪ್ರತಿಯೊಬ್ಬರೂ ಹೇಳುತ್ತಾರೆ, ತಮ್ಮ ಗಡಿಯಾರ ಸರಿಯಾಗಿದೆ ಎಂದು.
“ನೋಡು, ನಾರಾಯಣಶಾಸ್ತ್ರಿಯದು ಒಳ್ಳೇ ವೈರಾಗ್ಯ. ಆತ ಒಳ್ಳೇ ದೊಡ್ಡ ವಿದ್ವಾಂಸ-ಹೆಂಡತಿಯನ್ನು ತ್ಯಜಿಸಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಹೊರಟುಹೋದ. ಮನಸ್ಸಿನಿಂದ ಸಂಪೂರ್ಣವಾಗಿ ಕಾಮಕಾಂಚನಾಸಕ್ತಿಯನ್ನು ತ್ಯಜಿಸಿದರೆ ಮಾತ್ರವೇ ಯೋಗ ಉಂಟಾಗುತ್ತದೆ. ಕೆಲಕೆಲವರಲ್ಲಿ ಯೋಗಿಯ ಲಕ್ಷಣ ಎದ್ದುಕಾಣುತ್ತದೆ.
“ನಿನಗೆ ನಾನು ಷಟ್ಚಕ್ರದ ವಿಷಯವಾಗಿ ಸ್ವಲ್ಪ ತಿಳಿಸಬೇಕಾಗಿದೆ. ಯೋಗಿಗಳು ಷಟ್ಚಕ್ರವನ್ನು ಭೇದಿಸಿ ಭಗವಂತನ ಕೃಪೆಯಿಂದ ಆತನ ದರ್ಶನವನ್ನು ಪಡೆಯುತ್ತಾರೆ. ಷಟ್ಚಕ್ರದ ವಿಷಯವಾಗಿ ಕೇಳಿದ್ದೀಯೇನು?”
ಮಾಸ್ಟರ್: “ಅವೇ ವೇದಾಂತದ ಸಪ್ತಭೂಮಿಕೆಗಳು.”
ಶ್ರೀರಾಮಕೃಷ್ಣರು: “ವೇದಾಂತದ್ದಲ್ಲ, ವೇದದ್ದು. ಷಟ್ಚಕ್ರಗಳು ಹೇಗಿವೆ ಗೊತ್ತೆ? ಸೂಕ್ಷ್ಮದೇಹದೊಳಗೆ ಆ ಎಲ್ಲಾ ಪದ್ಮಗಳೂ ಇವೆ. ಯೋಗಿಗಳಿಗೆ ಅವನ್ನು ನೋಡಲು ಸಾಧ್ಯವಾಗುತ್ತದೆ. ಅವು ಮೇಣದ ಮರದ ಎಲೆ-ಕಾಯಿಗಳಂತೆ ಕಾಣುತ್ತವೆ.”
ಮಾಸ್ಟರ್: “ಹೌದು, ಯೋಗಿಗಳು ಅವನ್ನು ನೋಡಬಲ್ಲರಂತೆ. ಒಂದು ವಿಧವಾದ ಗಾಜು ಇದೆ. ಅದರ ಮೂಲಕ ನೋಡಿದರೆ ಚಿಕ್ಕ ವಸ್ತು ದೊಡ್ಡದಾಗಿ ಕಾಣುತ್ತದೆ ಎಂಬುದಾಗಿ ಓದಿದ್ದೇನೆ. ಅದೇ ರೀತಿ ಯೋಗದ ಮೂಲಕ ಆ ಸೂಕ್ಷ್ಮ ಪದ್ಮಗಳನ್ನು ನೋಡಲು ಸಾಧ್ಯವಾಗುತ್ತದೆ ಅಂತ ಕಾಣುವುದು.”
ಪರಮಹಂಸರ ಸಲಹೆಗನುಸಾರ ಮಾಸ್ಟರ್ ಪಂಚವಟಿಯ ಗುಡಿಸಲಿನಲ್ಲಿ ತನ್ನ ರಾತ್ರಿಯನ್ನು ಕಳೆದ. ಬೆಳಗಿನ ಜಾವ ಎದ್ದು ಒಬ್ಬನೇ ಹಾಡುತ್ತಿದ್ದಾನೆ:
ಭಜನೆ ಸಾಧನೆಯಿಂದ ಏನೂ ಫಲ ದೊರೆಯದೆ ಹೋಯಿತು
ದೀನಹೀನನ ದಿವ್ಯಸ್ಪರ್ಶದಿ ಶುದ್ಧಿಗೈಯುತ ನಿಲ್ಲಿಸು.
ನಿನ್ನ ಪಾದವ ಪಡೆವ ಹಂಬಲದಲ್ಲಿ ದಿನಗಳು ಉರುಳಿವೆ
ಆದರಯ್ಯೋ ನೀನು ಮಾತ್ರವೇ ಕಾಣದೆಲ್ಲೋ ಅವಿತಿಹೆ!….
ಅಕಸ್ಮಾತ್ತಾಗಿ ಮಾಸ್ಟರ್ ಕಿಟಕಿಯ ಹತ್ತಿರ ನೋಡಿದಾಗ, ಪರಮಹಂಸರು ಅದರ ಬಳಿ ನಿಂತಿರುವುದು ಕಂಡುಬಂತು. ಪರಮಹಂಸರು ಅಶ್ರುಪೂರ್ಣಲೋಚನರಾಗಿದ್ದಾರೆ, ಮಾಸ್ಟರ್ ಈ ಕೆಳಗಿನ ಚರಣಗಳನ್ನು ಹಾಡಿದಾಗ:
ದೀನಹೀನ ದಿವ್ಯಸ್ಪರ್ಶದಿ ಶುದ್ಧಿಗೈಯುತ ನಿಲ್ಲಿಸು.
ಮಾಸ್ಟರ್ ಮತ್ತೆ ಹಾಡುತ್ತಿದ್ದಾನೆ:
ಕಾವಿಬಟ್ಟೆಯನ್ನುಟ್ಟು, ಕಿವಿಯೊಳು ಶಂಖಕುಂಡಲವಿಕ್ಕುತ
ಕ್ರೂರ ಹರಿ ದೊರೆವನಕ ಅಲೆವೆನು ಯೋಗಿವೇಷವ ತಾಳುತ!……
ಪರಮಹಂಸರು ರಾಖಾಲನೊಡನೆ ಈಗ ಸುತ್ತಾಡುತ್ತಿದ್ದಾರೆ.
೨೧ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ಸಪ್ತಮಿ, ಶುಕ್ರವಾರ
ಬೆಳಗಿನ ವೇಳೆ. ಪರಮಹಂಸರು ಈಗ ಮಾಸ್ಟರೊಡನೆ ಬಿಲ್ವಮರದ ಕೆಳಗೆ ಮಾತಾಡುತ್ತಿದ್ದಾರೆ. ಆತನಿಗೆ ಸಾಧನೆಯ ವಿಷಯವಾಗಿ ಅನೇಕ ರಹಸ್ಯ ವಿಷಯಗಳನ್ನು ತಿಳಿಸುತ್ತಿದ್ದಾರೆ. ಕಾಮಕಾಂಚನವನ್ನು ತ್ಯಜಿಸುವ ಬಗೆ ಹೇಗೆ; ಹೇಗೆ ಮನಸ್ಸು ಕೆಲವು ವೇಳೆ ತಾನೇ ಗುರುವಿನ ಕೆಲಸ ಮಾಡುತ್ತದೆ ಎಂಬುವುಗಳ ವಿಷಯವಾಗಿಯೂ ತಿಳಿಸುತ್ತಿದ್ದಾರೆ.
ಊಟವಾದನಂತರ ಪರಮಹಂಸರು ಪಂಚವಟಿಗೆ ಮನೋಹರ ಪೀತಾಂಬರಧಾರಿ ಗಳಾಗಿ ಬಂದಿದ್ದಾರೆ. ಅವರು ಅಲ್ಲಿಗೆ ಬಂದಾಗ ಇಬ್ಬರು ಮೂವರು ವೈಷ್ಣವಸಾಧುಗಳು ತಮ್ಮ ಸಂಪ್ರದಾಯದ ಉಡಿಗೆ ಉಟ್ಟು ಅಲ್ಲಿ ಕುಳಿತಿದ್ದರು.
ಅಪರಾಹ್ನದಲ್ಲಿ ನಾನಕ್ಪಂಥಕ್ಕೆ ಸೇರಿದ ಒಬ್ಬ ಸಾಧು ಬಂದರು. ಅವರು ನಿರಾಕಾರವಾದಿ. ಪರಮಹಂಸರು ಅವರಿಗೆ ಸಾಕಾರದ ಮೇಲೂ ಧ್ಯಾನಮಾಡುವಂತೆ ಹೇಳುತ್ತಿದ್ದಾರೆ. “ಆಳಕ್ಕೆ ಮುಳುಗು; ಮೇಲೆಮೇಲೆ ತೇಲಿದರೆ ರತ್ನ ದೊರೆಯದು. ಭಗವಂತ ನಿರಾಕಾರನೇನೊ ನಿಶ್ಚಯ. ಆದರೆ ಸಾಕಾರ ಕೂಡ. ಸಾಕಾರದ ಮೇಲೆ ಧ್ಯಾನಮಾಡಿದರೆ ಶೀಘ್ರದಲ್ಲೇ ಭಕ್ತಿಯುಂಟಾಗುತ್ತದೆ; ಬಳಿಕ ನಿರಾಕಾರದ ಮೇಲೆ ಧ್ಯಾನಮಾಡಬೇಕು. ಇದು ಪತ್ರವನ್ನು ಓದಿಕೊಂಡುಬಿಟ್ಟ ನಂತರ ಅದನ್ನು ಬಿಸಾಡಿಬಿಟ್ಟು, ಅದು ಹೇಳಿದಂತೆ ಕಾರ್ಯಕ್ಕೆ ಕೈಹಾಕುವ ಹಾಗೆ.”
೨೨ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ಅಷ್ಟಮಿ, ಶನಿವಾರ
ರಾಖಾಲ, ಹರೀಶ, ಮಾಸ್ಟರ್, ಲಾಟು ಪರಮಹಂಸರೊಡನೆಯೇ ಇದ್ದಾರೆ. ಪರಮಹಂಸರು ಅವರೊಡನೆ ತಮ್ಮ ಕೊಠಡಿಯ ಆಗ್ನೇಯ ವರಾಂಡದಲ್ಲಿ ಕುಳಿತಿದ್ದಾರೆ. ಬಲರಾಮನ ತಂದೆ ಮತ್ತು ಶ್ಯಾಮಪುಕುರದ ದೇವೇಂದ್ರಘೋಷ ಬಂದಿದ್ದಾರೆ. ಈಗ ಘಂಟೆ ಬೆಳಗಿನ ಒಂಭತ್ತು.
ಒಬ್ಬ ಭಕ್ತ: “ಭಕ್ತಿಯನ್ನು ಗಳಿಸಿಕೊಳ್ಳುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಮುಂದೆ ಹೋಗು. ಏಳು ಬಾಗಿಲುಗಳ ಆಚೆ ದೊರೆ ವಾಸಿಸು ತ್ತಿದ್ದಾನೆ. ಆ ಎಲ್ಲಾ ಬಾಗಿಲುಗಳನ್ನೂ ದಾಟಿ ಹೋದರೆ ತಾನೆ ರಾಜನನ್ನು ನೋಡಲು ಸಾಧ್ಯ?
“ಚಾನಕದಲ್ಲಿ ಅನ್ನಪೂರ್ಣೆಯನ್ನು ಪ್ರತಿಷ್ಠಾಪನೆ ಮಾಡಿದಾಗ ನಾನು ದ್ವಾರಕ ಬಾಬುವಿಗೆ ಹೇಳಿದೆ: ‘ದೊಡ್ಡ ಸರೋವರದಲ್ಲಿ ದೊಡ್ಡ ದೊಡ್ಡ ಮೀನುಗಳು ಬಹಳ ಆಳದಲ್ಲಿ ವಾಸಿಸುತ್ತವೆ. ನೀರಿಗೆ ಒಳ್ಳೆ ಎರೆಯನ್ನು ಬಿಸಾಡು; ಆಗ ಮೀನುಗಳು ಅದರ ಗಂಧಕ್ಕಾಗಿ ಮೇಲೆ ಬರುತ್ತವೆ. ಒಂದೊಂದು ಸಲ ನೀರನ್ನು ತಮ್ಮ ಬಾಲದಿಂದ ಹೊಡೆದು ಎರಚುತ್ತವೆ. ಪ್ರೇಮ ಭಕ್ತಿ ಒಳ್ಳೆ ಎರೆ ಇದ್ದ ಹಾಗೆ.’
“ಭಗವಂತ ನರಲೀಲೆಯನ್ನು ಮಾಡುತ್ತಾನೆ. ಮನುಷ್ಯನ ರೂಪಿನಲ್ಲಿ ಅವತೀರ್ಣ ನಾಗುತ್ತಾನೆ. ಉದಾಹರಣೆಗೆ, ಶ್ರೀಕೃಷ್ಣ, ರಾಮಚಂದ್ರ, ಚೈತನ್ಯದೇವ. ಒಮ್ಮೆ ನಾನು ಕೇಶವಸೇನನಿಗೆ ಹೇಳಿದೆ: ‘ಭಗವಂತ ಮನುಷ್ಯನಲ್ಲಿ ವಿಶೇಷ ರೀತಿಯಾಗಿ ವ್ಯಕ್ತವಾಗಿದ್ದಾನೆ. ಗದ್ದೆಯ ತೆವರಿಯಲ್ಲಿ ಚಿಕ್ಕ ಚಿಕ್ಕ ಬಿಲಗಳಿರುತ್ತವೆ. ಮಳೆಗಾಲದಲ್ಲಿ ಅವುಗಳ ಒಳಗೆ ಮೀನು ನಳ್ಳಿ ಸೇರಿಕೊಂಡಿರುತ್ತವೆ. ಮೀನು ನಳ್ಳಿ ಬೇಕಾಗಿತ್ತು ಎಂದರೆ, ಹೋಗಿ ಆ ಬಿಲಗಳಲ್ಲಿ ಹುಡುಕಬೇಕು. ಭಗವಂತ ಬೇಕಾಗಿದ್ದರೆ, ಅವತಾರಪುರುಷನಲ್ಲಿ ಆತನನ್ನು ನೋಡಬಹುದು.’
“ಈ ಮೂರುವರೆ ಮೊಳ ಮಾನವನ ಆಕಾರದ ಮೂಲಕ ಜಗನ್ಮಾತೆ ವ್ಯಕ್ತವಾಗುತ್ತಾಳೆ. ಇದರ ಸಂಬಂಧವಾಗಿ ಒಂದು ಹಾಡು ಇದೆ:
ನಿನ್ನದೇ ಈ ಯಂತ್ರ? ಎಂಟು ಗೇಣಿನ ಬೊಂಬೆ!
ಯಾವ ಆಟಕೆ ಇದನು ನೀ ಮಾಡಿದೆ?…..
“ಭಗವಂತನನ್ನು ಅರಿತುಕೊಳ್ಳಬೇಕಾದರೆ, ಅವತಾರಪುರುಷನನ್ನು ಗುರುತಿಸಬೇಕಾ ದರೆ ಸಾಧನೆ ಮಾಡಬೇಕು. ದೊಡ್ಡ ದೊಡ್ಡ ಮೀನುಗಳು ಸರೋವರದಲ್ಲಿ ವಾಸಿಸುತ್ತವೆ. ಆದರೆ ಅವನ್ನು ನೋಡಬೇಕಾದರೆ ನೀರಿಗೆ ಎಲೆ ಬಿಸಾಡಬೇಕು. ಹಾಲಿನಲ್ಲಿ ಬೆಣ್ಣೆ ಇದೆ, ಅದರೆ ಬೆಣ್ಣೆ ಬೇಕಾದರೆ ಹಾಲಿಗೆ ಹೆಪ್ಪು ಹಾಕಿ ಕಡೆಯಬೇಕು. ಸಾಸಿವೆಯಲ್ಲಿ ಎಣ್ಣೆ ಇದೆ. ಆದರೆ ಎಣ್ಣೆ ಬೇಕಾದರೆ ಸಾಸಿವೆಯನ್ನು ಗಾಣಕ್ಕೆ ಹಾಕಿ ತಿರುಗಿಸಬೇಕು. ಗೋರಂಟಿ ಕೈಯನ್ನು ಕೆಂಪಗೆ ಮಾಡುತ್ತದೆ. ಅದರ ಕೈ ಕೆಂಪಾಗಬೇಕಾದರೆ ಗೋರಂಟಿಯನ್ನು ಅರೆದು ಮೆತ್ತಬೇಕು.”
ಭಕ್ತ: “ಒಳ್ಳೇದು, ಭಗವಂತ ಸಾಕಾರನೇ ಅಥವಾ ನಿರಾಕಾರನೇ?”
ಶ್ರೀರಾಮಕೃಷ್ಣರು: “ತಾಳು, ತಾಳು; ಮೊದಲು ನೀನು ಕಲ್ಕತ್ತಕ್ಕೆ ಹೋದರೆ ತಾನೇ ಅಲ್ಲಿ ಮೈದಾನ, ಏಷ್ಯಾಟಿಕ್ ಸೊಸೈಟಿ, ಬಂಗಾಳ ಬ್ಯಾಂಕ್ ಇವೆಲ್ಲ ಎಲ್ಲಿವೆ ಎಂಬುದು ಗೊತ್ತಾಗಬೇಕಾದರೆ? ನೀನು ಖರ್ದಹಾದ ಅಗ್ರಹಾರಕ್ಕೆ ಹೋಗಬೇಕಾದರೆ ಮೊದಲು ನೀನು ಖರ್ದಹಾ ಅನ್ನು ಮುಟ್ಟಲೇಬೇಕಲ್ಲವೆ?
“ನಿರಾಕಾರ ಸಾಧನೆ ಏಕೆ ಸಾಧ್ಯವಿಲ್ಲ? ಆದರೆ ಅದು ಬಹಳ ಕಠಿಣವಾದದ್ದು. ಕಾಮಕಾಂಚನವನ್ನು ತ್ಯಜಿಸದ ಹೊರತು ಅದು ಸಾಧ್ಯವಿಲ್ಲ. ಹೊರಗಿನ ತ್ಯಾಗ, ಒಳಗಿನ ತ್ಯಾಗ ಎರಡೂ ಆಗಬೇಕು. ವಿಷಯಬುದ್ಧಿ ಲೇಶಮಾತ್ರವಿದ್ದರೂ ಅದು ಸಾಧ್ಯವಿಲ್ಲ.
“ಸಾಕಾರಸಾಧನೆಯೇನೊ ಸುಲಭವಾದ್ದೆ, ಆದರೆ ಬಾಯಲ್ಲಿ ಹೇಳುವಷ್ಟು ಸುಲಭವಾದ್ದಲ್ಲ.
“ನಿರಾಕಾರಸಾಧನೆ, ಜ್ಞಾನಯೋಗ ಸಾಧನೆ ಇವನ್ನು ಭಕ್ತನ ಮುಂದೆ ವಿವರಿಸಬಾರದು. ಬಹಳ ಕಷ್ಟಪಟ್ಟ ನಂತರ ಆತನಲ್ಲಿ ಸ್ವಲ್ಪ ಭಕ್ತಿಯುಂಟಾಗಬಹುದು. ಎಲ್ಲಾ ಸ್ವಪ್ನವತ್ ಅಂತ ವಿವರಿಸಿಬಿಟ್ಟಿದ್ದೇ ಆದರೆ, ಆತನ ಭಕ್ತಿಗೆ ಹಾನಿಯುಂಟಾಗುತ್ತದೆ.
“ಕಬೀರ್ದಾಸ ನಿರಾಕಾರವಾದಿ. ಶಿವ, ಕಾಳಿ, ಕೃಷ್ಣ ಇವರಿಗೆ ಆತ ಮನ್ನಣೆ ತೋರಿಸುತ್ತಿರಲಿಲ್ಲ. ಅವರ ವಿಷಯವಾಗಿ ಆತ ತಮಾಷೆಮಾಡುತ್ತಿದ್ದ. ಆತ ಹೇಳುತ್ತಿದ್ದ: ‘ಕಾಳಿ, ಅಕ್ಕಿ ಬಾಳೆಹಣ್ಣು ತಿಂದು ಜೀವಿಸುತ್ತಿದ್ದಳು; ಕೃಷ್ಣ ಗೋಪಿಯರ ಕೈಚಪ್ಪಾಳೆಗನುಸಾರ ಕಪಿಯ ಹಾಗೆ ಕುಣಿಯುತ್ತಿದ್ದ.’ (ಎಲ್ಲರೂ ನಗುತ್ತಿದ್ದಾರೆ.)
“ನಿರಾಕಾರ ಸಾಧಕ ಬಹುಶಃ ದಶಭುಜ ಮೂರ್ತಿಯನ್ನು ಮೊದಲು ದರ್ಶನ ಮಾಡಬಹುದು, ಬಳಿಕ ಚತುರ್ಭುಜ ಮೂರ್ತಿಯನ್ನು, ಬಳಿಕ ದ್ವಿಭುಜ ಗೋಪಾಲ, ಕೊನೆಗೆ ಆತ ಅಖಂಡ ಜ್ಯೋತಿಯನ್ನು ದರ್ಶನ ಮಾಡಿ ಅದರಲ್ಲಿ ಲೀನವಾಗಿಬಿಡುತ್ತಾನೆ.
“ಪ್ರತೀತಿ ಇದೆ, ದತ್ತಾತ್ರೇಯ, ಜಡಭರತ ಇವರು ಬ್ರಹ್ಮಸಾಕ್ಷಾತ್ಕಾರವಾದ ನಂತರ ಹಿಂದಿರುಗಿ ಬರಲಿಲ್ಲ ಎಂದು. ಕೆಲವರ ಅಭಿಪ್ರಾಯ, ಶುಕದೇವ ಆ ಬ್ರಹ್ಮಸಮುದ್ರದ ಒಂದು ತೊಟ್ಟನ್ನು ರುಚಿ ನೋಡಿದ್ದೆಷ್ಟೊ ಅಷ್ಟೆ. ಆತ ಆ ಸಮುದ್ರದ ಅಲೆಗಳ ಅಲ್ಲೋಲಕಲ್ಲೋಲಗಳನ್ನು ಕೇವಲ ನೋಡಿದ್ದು ಮತ್ತು ಅದರ ಅಬ್ಬರವನ್ನು ಕೇಳಿದ್ದನೇ ವಿನಾ ಅದರಲ್ಲಿ ಮುಳುಗು ಹಾಕಲಿಲ್ಲ.
“ಒಬ್ಬ ಬ್ರಹ್ಮಚಾರಿ ನನಗೆ ಹೇಳಿದ: ‘ಕೇದಾರನಾಥವನ್ನು ಬಿಟ್ಟು ಮುಂದಕ್ಕೆ ಹೋಯಿತು ಎಂದರೆ ದೇಹ ಬದುಕಿರದು.’ ಅದೇ ರೀತಿಯಾಗಿ ಬ್ರಹ್ಮಜ್ಞಾನ ದೊರೆತ ನಂತರ ಶರೀರ ಬದುಕಿರದು. ಶರೀರಕ್ಕೆ ಇಪ್ಪತ್ತೊಂದು ದಿನದೊಳಗೆ ಮೃತ್ಯು.
“ಒಂದು ಬಹಳ ಎತ್ತರವಾದ ಗೋಡೆಯಿಂದಾಚೆ ವಿಶಾಲವಾದ ಮೈದಾನ. ನಾಲ್ಕು ಮಂದಿ ಸ್ನೇಹಿತರು ಆ ಗೋಡೆಯಿಂದಾಚೆ ಏನಿದೆ ಎಂಬುದನ್ನು ಪತ್ತೆಮಾಡಲು ಸನ್ನದ್ಧ ರಾದರು. ಅವರಲ್ಲಿ ಮೂರು ಜನರೂ ಒಬ್ಬೊಬ್ಬರಾಗಿ ಗೋಡೆ ಹತ್ತಿ ಮೈದಾನವನ್ನು ನೋಡಿದ ನಂತರ “ಆಹ! ಆಹ!” ಅಂತ ಹೇಳಿ, ನಕ್ಕು ಆ ಕಡೆಗೆ ಧುಮುಕಿಬಿಟ್ಟರು. ಅವರು ಮೂವರೂ ಆ ಮೈದಾನದ ಯಾವ ಸುದ್ದಿಸಮಾಚಾರವನ್ನೂ ತಿಳಿಸಲೇ ಇಲ್ಲ. ಕೇವಲ ನಾಲ್ಕನೆಯವ ಮಾತ್ರ ಹಿಂದಿರುಗಿ ಇಳಿದು ಬಂದು ಜನರಿಗೆ ಸುದ್ದಿಸಮಾಚಾರವನ್ನು ಕೊಟ್ಟ. ಕೆಲವರು ಬ್ರಹ್ಮಜ್ಞಾನ ದೊರೆತ ನಂತರವೂ ಶರೀರ ಉಳಿಸಿಕೊಂಡಿರುತ್ತಾರಲ್ಲ ಲೋಕಶಿಕ್ಷಣ ಕ್ಕಾಗಿ, ಅವರು ದೇವರ ಹಾಗೆ. ಅವತಾರಾದಿ ಪುರುಷರು ಈ ಗುಂಪಿಗೆ ಸೇರಿದವರು.
“ಹಿಮವತ್ಪರ್ವತರಾಜನ ಮನೆಯಲ್ಲಿ ಪಾರ್ವತಿ ಹುಟ್ಟಿದಳು. ಹುಟ್ಟಿದ ನಂತರ ಆಕೆ ತನ್ನ ತಂದೆಗೆ ತನ್ನ ಅನೇಕ ದಿವ್ಯರೂಪಗಳನ್ನು ತೋರಿಸಲಾರಂಭಿಸಿದಳು. ರಾಜ ಆಕೆಗೆ ಹೇಳಿದ: ‘ಅಮ್ಮ, ನಿನ್ನ ದಿವ್ಯ ರೂಪಗಳನ್ನೇನೋ ನನಗೆ ತೋರಿಸಿದೆ. ಇದು ಬಹಳ ಒಳ್ಳೆಯದೆ. ಆದರೆ ನಿನಗೆ ಇನ್ನೊಂದು ರೂಪವಿದೆಯಲ್ಲ, ಬ್ರಹ್ಮಸ್ವರೂಪ, ದಯವಿಟ್ಟು ಅದನ್ನು ನನಗೆ ತೋರಿಸಿಬಿಡು.’ ಪಾರ್ವತಿ ಹೇಳಿದಳು: ‘ಅಪ್ಪ, ನಿಮಗೆ ಬ್ರಹ್ಮಜ್ಞಾನ ಬೇಕಾಗಿದ್ದರೆ, ನೀವು ಸಂಸಾರವನ್ನು ತ್ಯಜಿಸಿ ಸಾಧುಸಂಗ ಮಾಡಬೇಕು.’ ರಾಜ ಆಕೆಯನ್ನು ಏನುಮಾಡಿದರೂ ಬಿಡಲಿಲ್ಲ. ಆಗ ಪಾರ್ವತಿ ತನ್ನ ಬ್ರಹ್ಮಸ್ವರೂಪವನ್ನು ಒಮ್ಮೆ ತೋರಿ ಸಿದಳು. ಒಡನೆಯೇ ಗಿರಿರಾಜ ಸಂಪೂರ್ಣವಾಗಿ ಮೂರ್ಛಿತನಾಗಿಹೋದ.
“ಇದುವರೆಗೆ ನಾನು ಹೇಳಿದುದೆಲ್ಲಾ ವಿಚಾರಕ್ಕೆ ಸಂಬಂಧಪಟ್ಟದ್ದು. ಬ್ರಹ್ಮ ಸತ್ಯ, ಜಗತ್ತು ಮಿಥ್ಯಾ-ಇದೇ ವಿಚಾರ. ಬ್ರಹ್ಮ ಹೊರತು ಎಲ್ಲವೂ ಸ್ವಪ್ನದಂತೆ. ಇದು ಬಹಳ ಕಠಿಣಮಾರ್ಗ. ಈ ಮಾರ್ಗದ ದೃಷ್ಟಿಯಿಂದ ಭಗವಂತನ ಲೀಲೆಯೂ ಸ್ವಪ್ನದ ಹಾಗೆ ಮಿಥ್ಯೆಯಾಗಿಬಿಡುತ್ತದೆ. ‘ಅಹಂ’ ಕೂಡ ಶೂನ್ಯವಾಗಿಬಿಡುತ್ತದೆ. ಈ ಮಾರ್ಗ ಅವತಾರವನ್ನು ಒಪ್ಪುವುದಿಲ್ಲ. ಇದು ಬಹಳ ಕಠಿಣವಾದ ಮಾರ್ಗ. ವಿಚಾರದ ಈ ಮಾತುಕತೆಗಳನ್ನು ಭಕ್ತರು ಅತಿಯಾಗಿ ಕೇಳಕೂಡದು.
“ಇದಕ್ಕಾಗಿಯೇ ಭಗವಂತ ಅವತರಿಸಿ ಭಕ್ತಿಯನ್ನು ಉಪದೇಶಮಾಡುತ್ತಾನೆ- ಶರಣಾಗತರಾಗುವಂತೆ ಪ್ರಚೋದಿಸುತ್ತಾನೆ. ಭಕ್ತಿಯಿಂದಲೇ, ಆತನ ಕೃಪೆಯಿಂದ, ಎಲ್ಲವೂ ದೊರೆಯುತ್ತವೆ-ಜ್ಞಾನ, ವಿಜ್ಞಾನ ಎಲ್ಲವೂ ದೊರೆಯುತ್ತವೆ.
“ಭಗವಂತ ಈ ಜಗತ್ತಿನಲ್ಲಿ ಲೀಲೆಯನ್ನು ಮಾಡುತ್ತಾನೆ. ಆತ ಭಕ್ತರ ಅಧೀನ. ‘ಭಗವತಿ ಶ್ಯಾಮೆ ತನ್ನ ಭಕ್ತರ ಪ್ರೇಮಪಾಶದಿಂದ ತನ್ನನ್ನೇ ತಾನು ಬಂಧಿಸಿಕೊಂಡಿದ್ದಾಳೆ.’
“ಕೆಲವು ವೇಳೆ ಭಗವಂತ ಸೂಜಿಗಲ್ಲಾಗುತ್ತಾನೆ, ಭಕ್ತ ಸೂಜಿಯಾಗುತ್ತಾನೆ. ಇನ್ನು ಕೆಲವು ವೇಳೆ ಭಕ್ತ ಸೂಜಿಗಲ್ಲಾಗುತ್ತಾನೆ, ಭಗವಂತ ಸೂಜಿಯಾಗುತ್ತಾನೆ. ಭಕ್ತ ಆತನನ್ನು ಸೆಳೆದುಕೊಂಡುಬಿಡುತ್ತಾನೆ. ಭಗವಂತ ಭಕ್ತವತ್ಸಲ, ಭಕ್ತಪರಾಧೀನ.
“ಕೆಲವರು ಹೇಳುತ್ತಾರೆ, ಯಶೋದಾದಿ ಗೋಪಿಯರು ಹಿಂದಿನ ಜನ್ಮಗಳಲ್ಲಿ ನಿರಾಕಾರವಾದಿಗಳಾಗಿದ್ದರು; ಅದರಿಂದ ಅವರಿಗೆ ತೃಪ್ತಿ ದೊರೆಯಲಿಲ್ಲ; ಅದಕ್ಕಾಗಿಯೇ ಬೃಂದಾವನಲೀಲೆಯಲ್ಲಿ ಶ್ರೀಕೃಷ್ಣನೊಡನೆ ಬಹಳವಾಗಿ ಆನಂದಪಟ್ಟರು ಎಂದು. ಒಂದು ದಿನ ಶ್ರೀಕೃಷ್ಣ ಗೋಪಿಯರಿಗೆ ಹೇಳಿದ: ‘ಬನ್ನಿ, ನನ್ನೊಡನೆ ಯಮುನೆಯ ಸ್ನಾನಕ್ಕೆ. ನಿಮಗೆ ನಿತ್ಯಧಾಮದ ದರ್ಶನ ಮಾಡಿಸುತ್ತೇನೆ.’ ಅವರು ಯಮುನೆಯಲ್ಲಿ ಮುಳುಗಿ ಏಳುವುದೇ ತಡ, ಗೋಲೋಕದರ್ಶನವಾಯಿತು. ಅನಂತರ ಅವರಿಗೆ, ಅಖಂಡ ಜ್ಯೋತಿಯ ದರ್ಶನ ದೊರೆಯಿತು. ಆಗ ಯಶೋದೆ ಕೂಗಿ ಹೇಳಿದಳು: “ಓ ಕೃಷ್ಣ, ನಮಗೆ ಇನ್ನು ಇದಾವುದೂ ಬೇಕಾಗಿಲ್ಲ. ಈಗ ನೀನು ನಿನ್ನ ಎಂದಿನ ಮನುಷ್ಯರೂಪವನ್ನು ತೋರಿಸು. ನಾನು ನಿನ್ನನ್ನು ಕಂಕುಳಲ್ಲಿ ಎತ್ತಿಕೊಂಡು ನಿನಗೆ ತಿನ್ನಿಸಬೇಕು.’
“ಆದ್ದರಿಂದ ಭಗವಂತ ಅವತಾರಪುರುಷರಲ್ಲಿ ಹೆಚ್ಚಾಗಿ ವ್ಯಕ್ತವಾಗಿರುತ್ತಾನೆ, ಅವತಾರ ಪುರುಷನ ಶರೀರ ಇನ್ನೂ ಬದುಕಿರುವಾಗಲೇ ಆತನಿಗೆ ಪೂಜೆ, ಸೇವೆ ಸಲ್ಲಿಸಬೇಕು. ‘ಹಗಲು ಮೂಡಿದೊಡನೆಯೇ ಭಗವಂತ ತನ್ನ ಅಂತಃಪುರಕ್ಕೆ ಹೊರಟುಹೋಗುತ್ತಾನೆ.’
“ಅವತಾರಪುರುಷನನ್ನು ಎಲ್ಲರೂ ಗುರುತಿಸಲಾರರು. ಅವತಾರಪುರುಷನೂ ದೇಹಧಾರಣೆಯ ದೆಸೆಯಿಂದ ನಮ್ಮ ಹಾಗೆ ರೋಗ, ಶೋಕ, ಹಸಿವು, ಬಾಯಾರಿಕೆ ಇವುಗಳಿಗೆ ತುತ್ತಾಗುತ್ತಾನೆ. ರಾಮ ಸೀತೆಗಾಗಿ ಅತ್ತ.
“ಪುರಾಣದಲ್ಲಿ ಹೇಳಿದೆ, ಹಿರಣ್ಯಾಕ್ಷನ ವಧೆಯಾದ ನಂತರ ವರಾಹ ಅವತಾರದಲ್ಲಿ ವಿಷ್ಣು ಮರಿಗಳನ್ನು ಕಟ್ಟಿಕೊಂಡು ಅವುಗಳಿಗೆ ಹಾಲನ್ನು ಕೊಡುತ್ತಾ, ಸುಮ್ಮನೆ ಇದ್ದುಬಿಟ್ಟ. ಸ್ವ ಧಾಮಕ್ಕೆ ಹಿಂದಿರುಗಬೇಕು ಎಂಬ ಮಾತೇ ಇಲ್ಲದೆ ತೆಪ್ಪಗಿದ್ದುಬಿಟ್ಟ. ಕೊನೆಗೆ ಶಿವ ಬಂದು ಆ ವರಾಹಶರೀರವನ್ನು ತನ್ನ ತ್ರಿಶೂಲದಿಂದ ನಾಶಮಾಡಿದಾಗ, ವಿಷ್ಣು ‘ಹಿಹಿಹಿ’ ಅಂತ ನಕ್ಕು ತನ್ನ ಸ್ವಧಾಮಕ್ಕೆ ಹಿಂದಿರುಗಿದ ಎಂದು.”
ಈಗ ಅಪರಾಹ್ನ. ಭವನಾಥ ಬಂದಿದ್ದಾನೆ. ಕೊಠಡಿಯಲ್ಲಿ ರಾಖಾಲ, ಮಾಸ್ಟರ್, ಹರೀಶ ಮೊದಲಾದವರು ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಭವನಾಥನಿಗೆ: “ಅವತಾರವನ್ನು ಪ್ರೀತಿಸಲು ಸಾಧ್ಯವಾದರೇ ಬೇಕಾದಷ್ಟು. ಆಹ, ಗೋಪಿಯರಿಗೆ ಕೃಷ್ಣನ ಮೇಲೆ ಎಂಥಾ ಪ್ರೀತಿ!”
ಈಗ ಪರಮಹಂಸರು ಗೋಪಿಯರ ಭಾವವನ್ನು ಆರೋಪಿಸಿಕೊಂಡು ಹಾಡಲು ಆರಂಭಿಸಿದ್ದಾರೆ:
ನನ್ನ ಜೀವದ ಜೀವ, ಓ ನನ್ನ ಘನಶ್ಯಾಮ…..
ಬಳಿಕ ಹಾಡುತ್ತಿದ್ದಾರೆ:
ಹೋಗಲಾರೆ ನಾ ಹೋಗಲಾರೆ ಮನೆಗೆ,
ಕೃಷ್ಣನಾಮವನು ಜಪಿಸಲಾರೆ ನಾ
ನನ್ನ ಮನೆಯ ಒಳಗೆ…..
ಮತ್ತೆ ಹಾಡುತ್ತಿದ್ದಾರೆ:
ನಾನು ಬಾಗಿಲೊಳಿದ್ದೆ, ನೀನಂದು ವನದೆಡೆಗೆ ನಡೆಯುವಾಗ….
ಶ್ರೀರಾಮಕೃಷ್ಣರು ತಮ್ಮ ಮಾತು ಮುಂದುವರಿಸುತ್ತ ಹೇಳುತ್ತಿದ್ದಾರೆ: “ರಾಸಲೀಲೆ ಮುಂದುವರಿಯುತ್ತಿದ್ದಾಗ, ಇದ್ದಕ್ಕಿದ್ದ ಹಾಗೆ ಶ್ರೀಕೃಷ್ಣ ಅಂತರ್ಧಾನನಾಗಿಬಿಟ್ಟಿದ್ದನ್ನು ನೋಡಿ ಗೋಪಿಯರು ಉನ್ಮಾದಿನಿಯರಾಗಿಬಿಟ್ಟಿದ್ದಾರೆ. ಮರದ ಕಡೆ ನೋಡಿ ಹೇಳುತ್ತಾರೆ: ‘ನೀನು ಒಬ್ಬ ತಪಸ್ವಿಯೇ ಆಗಿರಬೇಕು. ನೀನು ಶ್ರೀಕೃಷ್ಣನನ್ನು ನೋಡಿರಲೇಬೇಕು. ಇಲ್ಲದಿದ್ದರೆ ನೀನು ಸಮಾಧಿಸ್ಥನ ಹಾಗೆ ನಿಶ್ಚಲನಾಗಿ ಇರಲು ಕಾರಣವೇನು?’ ಹಸಿರು ಹುಲ್ಲಿನಿಂದ ಕೂಡಿದ ಭೂಮಿಯನ್ನು ನೋಡಿ ಅವರು ಹೇಳುತ್ತಾರೆ: ‘ಹೇ ಭೂಮಿಯೇ, ನೀನು ನಿಜವಾಗಿಯೂ ಶ್ರೀಕೃಷ್ಣನನ್ನು ನೋಡಿರಲೇಬೇಕು. ಇಲ್ಲದಿದ್ದರೆ ನೀನು ರೋಮಾಂಚಿತಳಾಗಿರಲು ಕಾರಣ ವೇನು? ಆತನ ಸ್ಪರ್ಶಸುಖವನ್ನು ನೀನು ಅನುಭವಿಸಿರಲೇಬೇಕು.’ ಮಾಧವೀಲತೆಯನ್ನು ನೋಡಿ ಹೇಳುತ್ತಾರೆ: ‘ಓ ಮಾಧವೀ, ನಮ್ಮ ಮಾಧವನನ್ನು ನಮಗೆ ಕೊಡು!’ ಗೋಪಿಯರದು ಪ್ರೇಮೋನ್ಮಾದ. ಶ್ರೀಕೃಷ್ಣನನ್ನೂ ಬಲರಾಮನನ್ನೂ ಮಥುರೆಗೆ ಕರೆದು ಕೊಂಡು ಹೋಗಲು ಅಕ್ರೂರ ಬೃಂದಾವನಕ್ಕೆ ಬಂದ. ಅವರು ರಥಕ್ಕೆ ಹತ್ತಿದಾಗ ಗೋಪಿಯರು ರಥದ ಚಕ್ರಗಳನ್ನು ಬಲವಾಗಿ ಹಿಡಿದುಕೊಂಡು ಅದು ಮುಂದುವರಿಯಲು ಬಿಟ್ಟುಕೊಡಲಿಲ್ಲ.”
ಹೀಗೆಂದು ಹೇಳಿದನಂತರ ಪರಮಹಂಸರು ಅಕ್ರೂರನ ಭಾವವನ್ನು ಆರೋಪಿಸಿ ಕೊಂಡು ಹಾಡುತ್ತಿದ್ದಾರೆ:
ತಡೆಯದಿರಿ, ತಡೆಯದಿರಿ, ರಥಚಕ್ರಗಳನು;
ಚಕ್ರದಿಂದೀ ರಥವು ಮುನ್ನಡೆವುದೇನು?
ಯಾವ ಚಕ್ರಿಯ ಇಚ್ಛೆಗೀ ಲೋಕಚಕ್ರ
ನಡೆಯುವುದೊ, ಅವನಿಚ್ಛೆ ನಡೆಸುವುದು ಇದನೂ!…..
ಶ್ರೀರಾಮಕೃಷ್ಣರು : “ ‘ಚಕ್ರದಿಂದೀ ರಥವು ಮುನ್ನಡೆವುದೇನು?’ ‘ಯಾವ ಚಕ್ರಿಯ ಇಚ್ಛೆಗೀ ಲೋಕಚಕ್ರ ನಡೆಯುವುದೊ,’ ‘ರಥಿಯ ಆಜ್ಞೆಗನುಸಾರ ಸಾರಥಿ ರಥವನ್ನು ಚಲಿಸುವನು.’ ಈ ಮಾತುಗಳು ನನ್ನ ಹೃದಯದ ಅಂತರಾಳವನ್ನು ಕಲಕಿಬಿಟ್ಟಿವೆ.”
೨೩ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ನವಮಿ, ಭಾನುವಾರ
ಪರಮಹಂಸರು ತಮ್ಮ ಕೊಠಡಿಯ ಆಗ್ನೇಯ ವರಾಂಡದಲ್ಲಿ ರಾಖಾಲ, ಲಾಟು, ಮಾಸ್ಟರ್, ಹರೀಶನೇ ಮೊದಲಾದ ಭಕ್ತರೊಡನೆ ಕುಳಿತಿದ್ದಾರೆ. ಘಂಟೆ ಈಗ ಬೆಳಗಿನ ಒಂಬತ್ತು. ಮಾಸ್ಟರ್ ಗುರುಗೃಹದಲ್ಲಿ ವಾಸಿಸಲು ಆರಂಭಿಸಿ ಆಗಲೇ ಒಂಬತ್ತು ದಿನ ಆಗಿಬಿಟ್ಟಿದೆ. ಕೊನ್ನಗರಕ್ಕೆ ಹೋಗಿದ್ದ ಮನಮೋಹನ ಪ್ರಾತಃಕಾಲವೇ ಇಲ್ಲಿಗೆ ಬಂದಿದ್ದಾನೆ. ಆತ ಇಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಕಲ್ಕತ್ತಕ್ಕೆ ಹಿಂದಿರುಗುತ್ತಾನೆ. ಹಾಜರಾ ಪರಮಹಂಸರ ಹತ್ತಿರ ಕುಳಿತಿದ್ದಾನೆ.
ಒಬ್ಬ ವೈಷ್ಣವ ಈಗ ಹಾಡುತ್ತಿದ್ದಾನೆ. ಆತ ಹಾಡಿದ ಹಾಡುಗಳಲ್ಲೊಂದರ ಮಾತೆತ್ತಿ ಪರಮಹಂಸರು ಹೇಳುತ್ತಿದ್ದಾರೆ: ‘ಆ ಹಾಡು ನನಗೆ ಅಷ್ಟಾಗಿ ರುಚಿಸಲಿಲ್ಲ. ಹಿಂದಿನ ಕಾಲದ ಹಾಡುಗಳಲ್ಲಿ ಒಳ್ಳೆ ಸತ್ತ್ವವಿದೆ. ಒಮ್ಮೆ ನಾನು ಪಂಚವಟಿಯಲ್ಲಿ ತೋತಾಪುರಿಯ ಎದುರಿಗೆ ಹಾಡಿದೆ, ‘ಕೈದುಗೊಳು, ಕೈದುಗೊಳು, ಮನೆಯ ಸುತ್ತಲು ಮೃತ್ಯು ನಿಂತು ರಣಭೇರಿಯನ್ನು ಹೊಡೆಯುತ್ತಿದೆ’ ಎಂಬ ಹಾಡನ್ನು. ನಾನು ಮತ್ತೆ ಹಾಡಿದೆ: ‘ನಾನಾರ ದೂಷಿಸಲಿ, ನಾನೆ ತೋಡಿದ ಕೂಪದಾಳದಲಿ ನಾನಾಗಿ ಮುಳುಗುತಿಹೆನು!’ ಎಂಬುದನ್ನು.
“ತೋತಾಪುರಿ ಮಹಾಜ್ಞಾನಿ. ಆ ಹಾಡು ಆತನಿಗೆ ಅರ್ಥವಾಗದೆ ಇದ್ದರೂ ಪ್ರೇಮಾಶ್ರು ಸುರಿಸಲಾರಂಭಿಸಿದ. ಭಗವತಿಯ ಸಂಬಂಧವಾದ ರಾಮಪ್ರಸಾದನ ಹಾಡುಗಳನ್ನು ನಾನು ಹಾಡಿದಾಗ ಪದ್ಮಲೋಚನನೂ ಪ್ರೇಮಾಶ್ರು ಸುರಿಸಲಾರಂಭಿಸಿದ. ಆತ ನಿಜವಾಗಿಯೂ ಒಳ್ಳೆ ದೊಡ್ಡ ಪಂಡಿತ.”
ಮಧ್ಯಾಹ್ನದ ಊಟವಾದ ನಂತರ ಪರಮಹಂಸರು ಸ್ವಲ್ಪ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಮಾಸ್ಟರ್ ನೆಲದ ಮೇಲೆ ಕುಳಿತಿದ್ದಾನೆ. ನಹಬತ್ಖಾನೆಯಿಂದ ಬರುತ್ತಿದ್ದ ಬಾಜನವನ್ನು ಕೇಳುತ್ತ ಕೇಳುತ್ತ ಪರಮಹಂಸರು ಬಹಳವಾಗಿ ಆನಂದವನ್ನು ಸೂಚಿಸುತ್ತಿದ್ದಾರೆ. ಈಗ ಮಾಸ್ಟರಿಗೆ ವಿವರಿಸಿ ಹೇಳುತ್ತಿದ್ದಾರೆ, ಬ್ರಹ್ಮನೇ ಜೀವಜಗತ್ತು ಎಲ್ಲವೂ ಆಗಿದ್ದಾನೆ ಎಂಬುದಾಗಿ.
ಶ್ರೀರಾಮಕೃಷ್ಣರು: “ಯಾರೋ ಒಬ್ಬರು ಒಂದು ಊರಿನ ಸಂಬಂಧವಾಗಿ ಹೇಳಿದರು: ‘ಅಲ್ಲಿ ಭಗವನ್ನಾಮದ ಶಬ್ದವನ್ನೇ ಕೇಳುವ ಹಾಗಿಲ್ಲ.’ ಆ ಮಾತುಗಳು ಆತನ ಬಾಯಿಂದ ಹೊರಡುವುದೇ ತಡ, ಭಗವಂತನೇ ಎಲ್ಲಾ ಜೀವಗಳಾಗಿರುವುದನ್ನು ಕಂಡೆ. ಅವು ಸಚ್ಚಿದಾನಂದದ ಸಾಗರದಲ್ಲಿ ಎದ್ದಿರುವ ಅಸಂಖ್ಯ ಗುಳ್ಳೆಗಳೋ ಅಥವಾ ಪ್ರತಿಬಿಂಬಗಳೋ ಏನೋ ಎಂಬಂತೆ ಕಂಡವು.
“ಕೆಲವು ವೇಳೆ ನನಗೆ ಕಾಣುತ್ತದೆ, ಜೀವಗಳು ಸಚ್ಚಿದಾನಂದನ ಅಸಂಖ್ಯ ಗುಳಿಗೆಗಳೋ ಏನೋ ಎಂಬಂತೆ. ಒಮ್ಮೆ ನಾನು ಕಾಮಾರಪುಕುರದಿಂದ ಬರ್ದ್ವಾನಿಗೆ ಹೋಗುತ್ತಿದ್ದೆ. ಒಂದು ಜಾಗದಲ್ಲಿ ಹತ್ತಿರವೇ ಇದ್ದ ಒಂದು ಹುಲ್ಲುಗಾವಲಿಗೆ ಓಡಲಾರಂಭಿಸಿದೆ, ಜೀವಗಳು ಯಾವ ರೀತಿಯಾಗಿ ಅಲ್ಲಿ ತಿಂದು ಬದುಕಿಕೊಂಡಿವೆ ಎಂಬುದನ್ನು ನೋಡಲೋಸುಗ. ಅಲ್ಲಿಗೆ ಹೋಗಿ ನೋಡುತ್ತೇನೆ, ಬಯಲಿನಲ್ಲೆಲ್ಲಾ ಇರುವೆಗಳು ಓಡಾಡುತ್ತಿವೆ. ಇಡೀ ಪ್ರದೇಶ ಚೈತನ್ಯಮಯವಾಗಿರುವಂತೆ ಕಂಡಿತು.”
ಹಾಜರಾ ಕೊಠಡಿಯನ್ನು ಪ್ರವೇಶಿಸಿ ನೆಲದ ಮೇಲೆ ಕುಳಿತುಕೊಂಡಿದ್ದಾನೆ.
ಶ್ರೀರಾಮಕೃಷ್ಣರು: “ಇನ್ನು ಕೆಲವು ವೇಳೆ ನನಗೆ ಕಾಣುತ್ತದೆ, ಜೀವಗಳು ವಿವಿಧ ವರಸೆ ದಳಗಳುಳ್ಳ ಹೂವುಗಳ ಹಾಗೆ. ಮತ್ತೆ ಕೆಲವು ವೇಳೆ ಕೆಲವು ದೊಡ್ಡ ಕೆಲವು ಚಿಕ್ಕ ಗುಳ್ಳೆಗಳೊ ಏನೊ ಎಂಬಂತೆ ಕಾಣುತ್ತವೆ.”
ಈ ರೀತಿಯಾಗಿ ಪರಮಹಂಸರು ತಮ್ಮ ದಿವ್ಯ ದರ್ಶನಗಳ ಸಂಬಂಧವಾಗಿ ವಿವರಿಸುತ್ತ ಇದ್ದಹಾಗೇ ಭಾವಾವಿಷ್ಟರಾಗಿ ಹೇಳುತ್ತಿದ್ದಾರೆ: “ನಾನು ಆಗಿದ್ದೇನೆ! ನಾನು ಬಂದಿದ್ದೇನೆ!” ಹೀಗೆಂದು ಹೇಳಿದೊಡನೆಯೇ ಸಮಾಧಿಸ್ಥರಾಗಿಬಿಟ್ಟರು. ಅವರ ಅಂಗಾಂಗಗಳೆಲ್ಲಾ ಸ್ಥಿರವಾಗಿ ಬಿಟ್ಟುವು. ಆ ಅವಸ್ಥೆಯಲ್ಲಿಯೇ ಅವರು ಬಹಳ ಹೊತ್ತು ಇದ್ದ ನಂತರ ಬಾಹ್ಯಪ್ರಜ್ಞೆ ಬರಲಾರಂಭಿಸಿತು. ಈಗ ಬಾಲಕನ ಹಾಗೆ ನಗುತ್ತ ನಗುತ್ತ ಕೊಠಡಿಯಲ್ಲಿ ಸುತ್ತಾಡುತ್ತಿದ್ದಾರೆ. ಅವರು ಏನೋ ಒಂದು ಅದ್ಭುತ ದರ್ಶನ ಮಾಡಿದುದನ್ನು ಅವರ ಕಣ್ಣುಗಳು ಹೊರ ಸೂಸುತ್ತಿವೆ. ಹಸನ್ಮುಖರಾಗಿ ಶೂನ್ಯದೃಷ್ಟಿಯುಳ್ಳವರಾಗಿದ್ದಾರೆ. ಕೊಠಡಿಯಲ್ಲಿ ಇನ್ನೂ ಸುತ್ತಾಡುತ್ತಲೇ ಹೇಳುತ್ತಿದ್ದಾರೆ: “ನಾನು ಆ ಆಲದ ಮರದ ಕೆಳಗೆ ಇರುವ ಪರಮಹಂಸನನ್ನು ನೋಡಿದೆ. ಆತ ಈ ರೀತಿಯಾಗಿ ನಗುತ್ತ ಸುತ್ತಾಡುತ್ತಿದ್ದ. ನನಗೂ ಅದೇ ವ್ಯವಸ್ಥೆ ಬಂದುಬಿಟ್ಟಿದೆಯೇನು?”
ಈಗ ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡು ಭಗವತಿ ಯೊಡನೆ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಹೋಗು, ನನಗೆ ಅರಿತುಕೊಳ್ಳಲು ಇಚ್ಛೆಯಿಲ್ಲ. ತಾಯೆ, ನಿನ್ನ ಪಾದಪದ್ಮಗಳಲ್ಲಿ ಶುದ್ಧ ಭಕ್ತಿಯುಂಟಾಗುವಂತೆ ಆಗಲಿ!”
(ಮಾಸ್ಟರಿಗೆ) “ಕ್ಷೋಭೆ, ಕಾಮನೆ ಹೋದುವು ಎಂದರೇ ಈ ಅವಸ್ಥೆ.
(ಭಗವತಿಗೆ) “ತಾಯೆ, ನನ್ನಿಂದ ಪೂಜಾಕಾರ್ಯವನ್ನು ತಪ್ಪಿಸಿಬಿಟ್ಟಿದ್ದೀಯೆ. ದಯವಿಟ್ಟು ನೋಡಿಕೋ ತಾಯೆ, ನನ್ನ ಎಲ್ಲಾ ಕಾಮನೆಗಳು ಬಿಟ್ಟುಹೋಗದ ಹಾಗೆ. ಪರಮಹಂಸ ಕೇವಲ ಬಾಲಕ. ಬಾಲಕನಿಗೆ ತಾಯಿ ಬೇಡವೆ? ಅದಕ್ಕಾಗಿಯೇ ನೀನು ತಾಯಿ, ನಾನು ಮಗು. ತಾಯಿಯಿಲ್ಲದೆ ಮಗು ಹೇಗೆ ತಾನೆ ಇರಬಲ್ಲುದು?”
ಪರಮಹಂಸರು ಭಗವತಿಯೊಡನೆ ಕಲ್ಲೂ ಕರಗಿ ಹೋಗಬೇಕು ಅಂಥ ಧ್ವನಿಯಿಂದ ಮಾತಾಡುತ್ತಿದ್ದಾರೆ. ಮತ್ತೆ ಭಗವತಿಗೆ ಹೇಳುತ್ತಿದ್ದಾರೆ: “ಕೇವಲ ಅದ್ವೈತ ಜ್ಞಾನವೆ! ಹ್ಯಾಕ್ ಥೂ! ಎಲ್ಲಿಯವರೆಗೆ ‘ನಾನು’ ಎಂಬುದನ್ನು ಇಟ್ಟಿದ್ದೀಯೊ, ಅಲ್ಲಿಯವರೆಗೆ ನೀನು ಇದ್ದೇ ಇದ್ದೀಯೆ. ಪರಮಹಂಸ ಬಾಲಕ. ಬಾಲಕನಿಗೆ ತಾಯಿ ಬೇಡವೇ?”
ಮಾಸ್ಟರ್ ಆಶ್ಚರ್ಯಚಕಿತನಾಗಿ ಪರಮಹಂಸರ ಈ ದೇವದುರ್ಲಭ ಅವಸ್ಥೆಯನ್ನು ನೋಡುತ್ತಿದ್ದಾನೆ. ಆತ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ಪರಮಹಂಸರು ಅಹೇತುಕ ಕೃಪಾಸಿಂಧು. ಭಗವಂತನಲ್ಲಿ ಭಕ್ತರಿಗೆ ಶ್ರದ್ಧೆಯುಂಟಾಗುವಂತೆ ಮಾಡಲು, ಆತ್ಮಜಾಗೃತಿ ಯುಂಟುಮಾಡಲು, ಜೀವಶಿಕ್ಷಣಕ್ಕಾಗಿ ಗುರುರೂಪರಾದ ಶ್ರೀರಾಮಕೃಷ್ಣರಿಗೆ ಈ ಪರಮಹಂಸಾವಸ್ಥೆ.”
ಮಾಸ್ಟರ್ ಮತ್ತೆ ಭಾವಿಸುತ್ತಿದ್ದಾನೆ: “ಪರಮಹಂಸರು ಹೇಳುತ್ತಿದ್ದಾರೆ: ‘ಅದ್ವೈತ ನಿತ್ಯಾನಂದ-ಚೈತನ್ಯ’ ಎಂದು. ಅಂದರೆ ಅದ್ವೈತಜ್ಞಾನ ಉಂಟಾಯಿತು ಎಂದರೆ, ಆತ್ಮಜಾಗೃತಿಯುಂಟಾಗುತ್ತದೆ. ಅನಂತರವೇ ನಿತ್ಯಾನಂದ ದೊರೆಯುತ್ತದೆ. ಪರಮಹಂಸರು ಅದ್ವೈತ ಜ್ಞಾನವನ್ನು ಪಡೆದುಕೊಂಡಿರುವುದಷ್ಟೇ ಅಲ್ಲ, ನಿತ್ಯಾನಂದಾವಸ್ಥೆಯಲ್ಲೂ ಇದ್ದಾರೆ. ಜಗನ್ಮಾತೆಯ ಪ್ರೇಮಾನಂದದಿಂದ ಯಾವಾಗ ನೋಡಿದರೂ ತುಂಬಿತುಳುಕಾಡುತ್ತಾರೆ- ಪ್ರೇಮೋನ್ಮತ್ತರಾಗಿದ್ದಾರೆ.”
ಹಾಜರಾ ಪರಮಹಂಸರ ಈ ಅವಸ್ಥೆಯನ್ನು ನೋಡಿ ಕೈಮುಗಿದು ಆಗಾಗ ಹೇಳುತ್ತಿದ್ದಾನೆ: “ಧನ್ಯ! ಧನ್ಯ!”
ಶ್ರೀರಾಮಕೃಷ್ಣರು ಹಾಜರಾನಿಗೆ: “ನಿನ್ನಲ್ಲಿ ಶ್ರದ್ಧೆಯೆಂಬುದೇ ಇಲ್ಲ. ಆದರೆ ನೀನು ಇಲ್ಲಿ ಇದ್ದೀಯೆ ಜಟಿಲೆಕುಟಿಲೆಯರ ಹಾಗೆ-ಲೀಲೆಗೆ ಕಳೆ ಕೊಡಲೋಸುಗ.”
ಅಪರಾಹ್ನದಲ್ಲಿ ಮಾಸ್ಟರ್ ಏಕಾಕಿಯಾಗಿ ಉದ್ಯಾನವನದಲ್ಲಿ ತಿರುಗಾಡುತ್ತಿದ್ದಾನೆ. ಪರಮಹಂಸರ ಈ ಅದ್ಭುತ ಅವಸ್ಥೆಯ ಸಂಬಂಧವಾಗಿ ಭಾವಿಸುತ್ತಾ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ಕ್ಷೋಭೆ, ಕಾಮನೆ ಹೋದರೇ ಈ ಅವಸ್ಥೆ’ ಎಂದು ಪರಮಹಂಸರು ಏಕೆ ಹೇಳಿದರು? ಈ ಗುರುರೂಪದ ರಾಮಕೃಷ್ಣರು ಯಾರು? ಸಾಕ್ಷಾತ್ ಭಗವಂತನೇ ನಮಗಾಗಿ ಇವರ ರೂಪಿನಲ್ಲಿ ದೇಹಧಾರಣೆ ಮಾಡಿಕೊಂಡು ಬಂದಿದ್ದಾನೇನು? ಪರಮಹಂಸರೇ ಹೇಳುತ್ತಾರೆ, ಈಶ್ವರಕೋಟಿ-ಅವತಾರಗಳನ್ನು ಬಿಟ್ಟು ಬೇರೆಯಾದರೂ ಜಡಸಮಾಧಿ (ನಿರ್ವಿಕಲ್ಪಸಮಾಧಿ)ಯಿಂದ ಹಿಂದಿರುಗಿ ಬರಲಾಗುವುದಿಲ್ಲವೆಂದು.”
೨೪ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ದಶಮಿ, ಸೋಮವಾರ
ಘಂಟೆ ಬೆಳಗಿನ ಎಂಟು. ಪರಮಹಂಸರು ಮಾಸ್ಟರೊಡನೆ ಸರ್ವೆಮರಗಳ ತೋಪಿನಲ್ಲಿ ಮಾತನಾಡುತ್ತಿದ್ದಾರೆ. ಈ ದಿನ ಮಾಸ್ಟರನ ಗುರುಗೃಹವಾಸದ ಹನ್ನೊಂದನೆ ದಿನ. ಚಳಿಗಾಲ, ಸೂರ್ಯೋದಯ ಈಗತಾನೆ ಆಗುತ್ತಿದೆ. ಗಂಗೆಯಲ್ಲಿ ಉಬ್ಬರ ಬಂದು ಆಕೆ ಉತ್ತರವಾಹಿನಿಯಾಗಿ ಹರಿಯುತ್ತಿದ್ದಾಳೆ. ಪರಮಹಂಸರ ಸಾಧನೆಯ ಸ್ಥಾನವಾದ ಆ ಬಿಲ್ವಮರ ಅನತಿ ದೂರದಲ್ಲಿ ಕಾಣಿಸಿಕೊಳ್ಳುತ್ತಿದೆ. ಪರಮಹಂಸರು ಪೂರ್ವಾಭಿಮುಖರಾಗಿ ಕುಳಿತು ಮಾಸ್ಟರಿಗೆ ಬ್ರಹ್ಮಜ್ಞಾನದ ಸಂಬಂಧವಾಗಿ ತಿಳಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಿರಾಕಾರವೂ ಸತ್ಯ, ಸಾಕಾರವೂ ಸತ್ಯ. ತೋತಾಪುರಿ ನನಗೆ ಸಚ್ಚಿದಾನಂದ ಬ್ರಹ್ಮನ ಸಂಬಂಧವಾಗಿ ಉಪದೇಶವೀಯುತ್ತಿದ್ದ. ಆತ ಹೇಳುತ್ತಿದ್ದ, ಅದು ಒಂದು ಅನಂತಸಾಗರವಿದ್ದ ಹಾಗೆ-ಮೇಲೆ, ಕೆಳಗೆ, ಎಡಕ್ಕೆ ಬಲಕ್ಕೆ ಎಲ್ಲೆಲ್ಲೂ ನೀರೇ ನೀರು. ಅದನ್ನು ಚಲನೆಯೇ ಇಲ್ಲದ ಮಹಾಕಾರಣದ ನೀರು ಅಂತ ಹೇಳಬಹುದು. ಅದು ಚಲಿಸಲು ಆರಂಭಿಸಿದಾಗ ಅಲೆ, ಅದರ ಕಾರ್ಯ-ಸೃಷ್ಟಿಸ್ಥಿತಿಪ್ರಳಯ.
“ಮತ್ತೆ ಹೇಳುತ್ತಿದ್ದ, ವಿಚಾರ ಎಲ್ಲಿಗೆ ಹೋಗಿ ನಿಂತುಹೋಗುತ್ತದೋ ಅದೇ ಬ್ರಹ್ಮ. ಉದಾಹರಣೆಗೆ ಕರ್ಪೂರ. ಅದನ್ನು ಉರಿಸಿದನಂತರ ಏನೂ ಉಳಿದಿರದು-ಬೂದಿಯ ಚಿಹ್ನೆ ಕೂಡ.
“ಬ್ರಹ್ಮ ವಾಙ್ಮನಾತೀತ. ಉಪ್ಪಿನ ಗೊಂಬೆ ಸಮುದ್ರದ ಆಳವನ್ನು ಕಂಡುಹಿಡಿಯಲು ಹೋಯಿತು. ಅದು ಹಿಂದಿರುಗಿ ಬಂದು ಯಾವ ಸಮಾಚಾರವನ್ನೂ ಕೊಡಲಿಲ್ಲ. ಸಮುದ್ರದಲ್ಲೆ ಕರಗಿಹೋಯಿತು.
“ಋಷಿಗಳು ಒಮ್ಮೆ ರಾಮನಿಗೆ ಹೇಳಿದರು: “ಓ ರಾಮ, ಭರದ್ವಾಜಾದಿ ಋಷಿಗಳು ನಿನ್ನನ್ನು ಅವತಾರಪುರುಷ ಅಂತ ಬೇಕಾದರೆ ಹೇಳಬಹುದು; ಆದರೆ ನಾವು ಹಾಗೆ ಹೇಳುವುದಿಲ್ಲ. ನಾವು ಶಬ್ದಬ್ರಹ್ಮನ ಉಪಾಸನೆ ಮಾಡುತ್ತಿದ್ದೇವೆ. ನಮಗೆ ಭಗವಂತನ ಮನುಷ್ಯರೂಪ ಬೇಕಾಗಿಲ್ಲ.” ರಾಮ ಪ್ರಸನ್ನನಾಗಿ ಸ್ವಲ್ಪ ನಕ್ಕು ಅವರು ಇತ್ತ ಪೂಜೆಯನ್ನು ಸ್ವೀಕರಿಸಿ ಹೊರಟುಹೋದ.
“ಆದರೆ ನಿತ್ಯ ಯಾರದೋ ಆತನದೇ ಲೀಲೆ. ನಾನು ಹಿಂದೆ ತಿಳಿಸಿರುವ ಹಾಗೆ ಇದು ಚಾವಣಿ ಮತ್ತು ಮೆಟ್ಟಿಲಸಾಲಿನ ಹಾಗೆ. ಸಚ್ಚಿದಾನಂದ ಅನೇಕ ವಿಧದಲ್ಲಿ ಕ್ರೀಡಿಸುತ್ತಾನೆ. ಉದಾಹರಣೆಗೆ ಭಗವಲ್ಲೀಲೆ, ದೇವಲೀಲೆ, ನರಲೀಲೆ, ಜಗಲ್ಲೀಲೆ. ನರಲೀಲೆಯಲ್ಲಿ ಅವತಾರಪುರುಷನಾಗುತ್ತಾನೆ. ನರಲೀಲೆ ಎಂಬುದು ಏನು ಗೊತ್ತೆ? ಇದು ವಿಶಾಲವಾದ ಚಾವಣಿಯ ಮೇಲೆ ಬಿದ್ದ ಮಳೆನೀರು ಒಂದು ಕೊಳವೆಯ ಮೂಲಕ ‘ಜರ್’ ಅಂತ ಹೊರಕ್ಕೆ ಬರುವ ಹಾಗೆ; ಕೊಳವೆಯ ಮೂಲಕ ನೀರು ಬರುವ ಹಾಗೆ ಸಚ್ಚಿದಾನಂದ ಶಕ್ತಿ-ಅಷ್ಟೇ ಅಲ್ಲ, ಸಚ್ಚಿದಾನಂದವೇ-ಮಾನವನೆಂಬ ಕೊಳವೆಯ ಮೂಲಕ ಹೊರಕ್ಕೆ ಬರುತ್ತದೆ. ಕೇವಲ ಭರದ್ವಾಜನೇ ಮೊದಲಾದ ಹನ್ನೆರಡು ಋಷಿಗಳು ರಾಮನನ್ನು ಅವತಾರಪುರುಷನೆಂದು ಗುರುತಿಸಿದರು. ಅವತಾರಪುರುಷನನ್ನು ಎಲ್ಲರೂ ಗುರುತಿಸಲಾರರು.
“ಸಚ್ಚಿದಾನಂದನೇ ಅವತಾರವೆತ್ತಿ ಜ್ಞಾನ, ಭಕ್ತಿಗಳ ಉಪದೇಶವೀಯುತ್ತಾನೆ. ಒಳ್ಳೇದು, ನನ್ನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು?
“ಒಮ್ಮೆ ನನ್ನ ತಂದೆ ಗಯೆಗೆ ಹೋಗಿದ್ದರು. ಅಲ್ಲಿ ರಘುವೀರ ಅವರ ಸ್ವಪ್ನದಲ್ಲಿ ಬಂದು ಹೇಳಿದನಂತೆ: ‘ನಾನು ನಿನ್ನ ಮಗನಾಗಿ ಹುಟ್ಟುತ್ತೇನೆ’. ಅದಕ್ಕೆ ನಮ್ಮ ತಂದೆ ಹೇಳಿದರಂತೆ: ‘ಹೇ ಭಗವಂತ, ನಾನೊಬ್ಬ ದರಿದ್ರ ಬ್ರಾಹ್ಮಣ, ನಿನ್ನ ಸೇವೆ ಮಾಡಲು ನನ್ನ ಕೈಯಲ್ಲಿ ಎಲ್ಲಿ ಸಾಧ್ಯವಾದೀತು?’ ರಘುವೀರ ಹೇಳಿದನಂತೆ: ‘ಅದರ ವಿಷಯವಾಗಿ ನೀನು ಸ್ವಲ್ಪವೂ ಚಿಂತಿಸಬೇಡ. ಇವೆಲ್ಲಾ ಯಾವ ತೊಂದರೆಯೂ ಇಲ್ಲದೆ ನಡೆದುಹೋಗಿ ಬಿಡುತ್ತವೆ.’
“ನನ್ನ ಸೋದರಿ-ಹೃದಯನ ತಾಯಿ-ನನ್ನ ಪಾದಗಳನ್ನು ಗಂಧಪುಷ್ಪಾದಿಗಳಿಂದ ಪೂಜಿಸುತ್ತಿದ್ದಳು. ಒಂದು ದಿನ ಆಕೆಯ ತಲೆಯ ಮೇಲೆ ನನ್ನ ಪಾದವನ್ನಿಡುವಂತೆ ಭಗವತಿ ನನ್ನನ್ನು ಪ್ರೇರೇಪಿಸಿ ನನ್ನ ಮೂಲಕ ಆಕೆಗೆ ತಿಳಿಸಿದಳು: ‘ನಿನಗೆ ಕಾಶಿಯಲ್ಲಿ ಮೃತ್ಯುವುಂಟಾಗುತ್ತದೆ’ ಎಂದು.
“ಒಮ್ಮೆ ಮಥುರಬಾಬು ನನಗೆ ಹೇಳಿದ: ‘ನಿಮ್ಮ ಆಂತರ್ಯದಲ್ಲಿ ಭಗವಂತನಲ್ಲದೆ ಇನ್ನು ಬೇರೆ ಏನೂ ಇಲ್ಲ. ನಿಮ್ಮ ಶರೀರ ಒಂದು ಖಾಲಿ ಬುರುಡೆ ಇದ್ದ ಹಾಗೆ. ಹೊರಗಿನಿಂದ ನೋಡುವುದಕ್ಕೇನೊ ಕುಂಬಳಕಾಯಿಯ ಆಕಾರವೇ, ಆದರೆ ಒಳಗೆ ಮಾತ್ರ ತಿರುಳು ಬೀಜ ಏನೂ ಇಲ್ಲ. ಯಾರೋ ಮುಸುಕು ಹಾಕಿಕೊಂಡು ತಿರುಗಾಡುತ್ತಿರುವ ಹಾಗೆ ಒಮ್ಮೆ ನೀವು ನನ್ನ ಕಣ್ಣಿಗೆ ಬಿದ್ದಿರಿ.’
(ಮಾಸ್ಟರಿಗೆ) “ಭಗವತಿ ಮೊದಲೆ ನನಗೆ ಎಲ್ಲವನ್ನು ತೋರಿಸಿಕೊಟ್ಟುಬಿಟ್ಟಿದ್ದಾಳೆ. ಒಮ್ಮೆ ನಾನು ಗೌರಾಂಗನ ಸಂಕೀರ್ತನ ಪಾರ್ಟಿಯನ್ನು ಪಂಚವಟಿಯಲ್ಲಿ ನೋಡಿದೆ. ಅದರಲ್ಲಿ ಬಲರಾಮ ಇದ್ದ ಹಾಗೆ ಇತ್ತು, ನೀನೂ ಇದ್ದ ಹಾಗೆ ಇತ್ತು.
“ಗೌರಾಂಗನ ಭಾವವನ್ನು ಅರಿಯಲು ಒಮ್ಮೆ ಇಚ್ಛೆಯಾಯಿತು. ಭಗವತಿ ಅದನ್ನು ನಮ್ಮ ಊರಿನ ಹತ್ತಿರವಿರುವ ಶ್ಯಾಮಬಜಾರಿನಲ್ಲಿ ನನಗೆ ತೋರಿಸಿದಳು. ನನ್ನ ಸುತ್ತಲೂ ಒಂದು ದೊಡ್ಡ ಗುಂಪು ನೆರೆಯಿತು; ಮರಗಳ ಮೇಲೆಲ್ಲಾ, ಗೋಡೆಗಳ ಮೇಲೆಲ್ಲಾ, ಜನ ಕಿಕ್ಕಿರಿದು ನಿಲ್ಲಲಾರಂಭಿಸಿದರು; ಹಗಲೂ ಇರುಳೂ ನನ್ನೊಡನೆಯೇ ಇರಲಾರಂಭಿಸಿದರು; ಏಳು ದಿನಗಳವರೆಗೆ ದೇಹಬಾಧೆ ತೀರಿಸಕೊಳ್ಳಲೂ ನನಗೆ ಸಮಯ ದೊರಕಲಿಲ್ಲ. ಆಗ ಭಗವತಿಗೆ ಹೇಳಿದೆ. ‘ತಾಯೆ, ಸಾಕು ಇನ್ನು.’
“ಅದಕ್ಕಾಗಿಯೇ ಈಗ ನಾನು ಶಾಂತನಾಗಿರುವುದು. ನಾನು ಇನ್ನೊಮ್ಮೆ ಧರೆಗೆ ಬರಬೇಕಾಗಿದೆ. ಅದಕ್ಕಾಗಿಯೇ ನಾನು ನನ್ನ ಜೊತೆಯಲ್ಲಿರುವವರಿಗೆ ಎಲ್ಲಾ ಜ್ಞಾನವನ್ನು ತಿಳಿಸಿಕೊಟ್ಟುಬಿಡುತ್ತಿಲ್ಲ. (ನಗುತ್ತ) ಒಂದು ಪಕ್ಷ ನಾನು ಎಲ್ಲಾ ಜ್ಞಾನವನ್ನು ತಿಳಿಸಿಕೊಟ್ಟುಬಿಟ್ಟೆ ಅಂತ ಇಟ್ಟುಕೊ; ಬಳಿಕ ನೀವಾಗೇ ನೀವು ನನ್ನ ಹತ್ತಿರ ಬರುವಿರೇನು?
“ನೀನು ಚೈತನ್ಯ ಭಾಗವತವನ್ನು ಓದಿ ಹೇಳಿದ ರೀತಿಯನ್ನು ನೋಡಿ, ನೀನು ಯಾರು ಎಂಬುದನ್ನು ಅರಿತಿದ್ದೇನೆ. ನೀನು ನನಗೆ ಸೇರಿದವ. ಒಂದೇ ಸತ್ತ್ವ ತಂದೆ, ಮಗು ಆಗಿರುವ ಹಾಗೆ. ಇಲ್ಲಿಗೆ ಎಲ್ಲರೂ ಬರುತ್ತಿದ್ದಾರೆ. ನೀರುಹಂಬಿನ ಒಂದು ಭಾಗ ಹಿಡಿದು ಎಳೆದರೆ ಅದರ ಬಳ್ಳಿಗಳೆಲ್ಲಾ ಜೊತೆಯಲ್ಲಿ ಬಂದುಬಿಡುತ್ತವೆ. ನೀವೆಲ್ಲರೂ ಬಂಧುಬಾಂಧವರಿದ್ದ ಹಾಗೆ-ಅಷ್ಟೇಕೆ ಸೋದರರಿದ್ದ ಹಾಗೆ. ಪುರಿಗೆ ರಾಖಾಲ, ಹರೀಶ ಮೊದಲಾದವರು ಹೋಗಿದ್ದಾರೆ, ನೀನೂ ಅಲ್ಲಿಗೆ ಹೋಗಿದ್ದೀಯೆ ಅಂತ ಇಟ್ಟುಕೊ. ನೀನು ಅಲ್ಲಿ ಏನು ಪ್ರತ್ಯೇಕವಾಗಿ ಇರಲು ಹೋಗುವೆಯಾ?
“ಇಲ್ಲಿಗೆ ಬರುವ ಮುಂಚೆ ನೀನು ಯಾರು ಎಂಬುದು ನಿನಗೆ ಗೊತ್ತಿರಲಿಲ್ಲ. ಇನ್ನು ನಿನಗೆ ಗೊತ್ತಾಗುತ್ತದೆ. ಭಗವಂತ ಗುರುವಿನ ರೂಪದಲ್ಲಿ ಬಂದು ನಿನಗೆ ತಿಳಿಸಿಬಿಡುತ್ತಾನೆ.
“ತೋತಾಪುರಿ ಒಂದು ಹುಲಿ ಮತ್ತು ಒಂದು ಆಡಿನ ಮಂದೆಯ ಕಥೆಯನ್ನು ಒಮ್ಮೆ ನನಗೆ ಹೇಳಿದ. ಒಂದು ಹೆಣ್ಣು ಹುಲಿ ಒಮ್ಮೆ ಒಂದು ಆಡಿನ ಮಂದೆಯ ಮೇಲೆ ಬಿತ್ತು. ಒಬ್ಬ ಬೇಡ ದೂರದಿಂದಲೇ ಅದನ್ನು ಕಂಡು ಆ ಹೆಣ್ಣು ಹುಲಿಯನ್ನು ಕೊಂದು ಹಾಕಿದ. ಅದರ ಹೊಟ್ಟೆಯಲ್ಲಿ ಮರಿ ಇತ್ತು. ಅದು ಸಾಯುವಾಗ ಮರಿ ಪ್ರಸವವಾಗಿ ಹೋಯಿತು. ಆ ಮರಿ ಆಡುಗಳೊಡನೆ ಬೆಳೆಯಲಾರಂಭಿಸಿತು. ಮೊದಲು ಆಡುಗಳು ಅದಕ್ಕೆ ತಮ್ಮ ಮೊಲೆಯನ್ನು ಕೊಟ್ಟವು. ಸ್ವಲ್ಪ ಬೆಳೆದ ಮೇಲೆ ಅದೂ ಹುಲ್ಲು ತಿನ್ನಲಾರಂಭಿಸಿತು. ಅದೂ ಅಲ್ಲದೆ ಆಡುಗಳ ಹಾಗೆ ‘ಬ್ಯಾ, ಬ್ಯಾ’ ಅಂತ ಅರಚಲಾರಂಭಿಸಿತು. ಕ್ರಮೇಣ ಆ ಮರಿ ದೊಡ್ಡ ಹುಲಿಯಾಗಿ ಬೆಳೆಯಿತು; ಅದರೂ ಅದು ಇನ್ನೂ ಹುಲ್ಲು ತಿನ್ನುತ್ತ ‘ಬ್ಯಾ, ಬ್ಯಾ’ ಅಂತ ಅರಚುತ್ತಲೆ ಇತ್ತು. ಬೇರೆ ಯಾವುದಾದರೂ ಮೃಗ ಮಂದೆಯ ಮೇಲೆ ಬಿದ್ದರೆ ಅದೂ ಆಡುಗಳ ಹಾಗೆ ಓಡಿಹೋಗಿ ತಪ್ಪಿಸಿಕೊಳ್ಳುತ್ತಿತ್ತು. ಒಂದು ದಿನ ಒಂದು ಭಯಂಕರ ಹುಲಿ ಆ ಮಂದೆಯ ಮೇಲೆ ಬಿತ್ತು. ಅದಕ್ಕೆ ಆಡುಗಳ ಮಧ್ಯೆ ಒಂದು ಹುಲಿ ಹುಲ್ಲು ಮೇಯುತ್ತಿರುವುದನ್ನು ಮತ್ತು ಅವುಗಳ ಹಾಗೆ ಅದೂ ಓಡಿಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವುದನ್ನು ನೋಡಿ ಅತ್ಯಾಶ್ಚರ್ಯವಾಯಿತು. ಆಗ ಅದು ಆಡುಗಳ ಗೋಜಿಗೆ ಹೋಗದೆ ಆ ಹುಲ್ಲು ತಿನ್ನುತ್ತಿದ್ದ ಹುಲಿಯನ್ನು ಹಿಡಿಯಿತು. ಅದು ‘ಬ್ಯಾ, ಬ್ಯಾ’ ಅಂತ ಅರಚುತ್ತ ತಪ್ಪಿಸಿಕೊಳ್ಳಲು ಪ್ರಯತ್ನಮಾಡಲಾರಂಭಿಸಿತು. ಆಗ ಆ ಕಾಡಿನ ಹುಲಿ ಆ ಹುಲ್ಲು ತಿನ್ನುತ್ತಿದ್ದ ಹುಲಿಯನ್ನು ನೀರಿನ ಹತ್ತಿರಕ್ಕೆ ಎಳೆದುಕೊಂಡು ಹೋಗಿ ಹೇಳಿತು: ‘ಈಗ ನೋಡು ನೀರಿನಲ್ಲಿ ನಿನ್ನ ಮುಖವನ್ನು, ದಿಟ್ಟಿಸಿ ನೋಡು, ನಿನಗೆ ಹುಲಿಯ ಗಡಿಗೆಮುಖದಂಥ ಮುಖ ಇರುವುದನ್ನು; ಅದು ಥೇಟ್ ನನ್ನದರ ಹಾಗೇ ಇದೆ.’ ಅನಂತರ ಅದು ಅದರ ಬಾಯಿಗೆ ಒಂದು ಮಾಂಸದ ತುಂಡನ್ನು ತುರುಕಿತು. ಮೊದಲು ಆ ಹುಲ್ಲು ತಿನ್ನುವ ಹುಲಿ ಮಾಂಸವನ್ನು ತಿನ್ನದೆ ಉಗುಳಲಾರಂಭಿಸಿತು. ಆದರೆ ಆ ಪ್ರಯತ್ನದಲ್ಲಿ ಅದಕ್ಕೆ ಮಾಂಸದ ರುಚಿ ದೊರೆತು ಅದನ್ನು ತಿನ್ನತೊಡಗಿತು. ಕೊನೆಯಲ್ಲಿ ಆ ಕಾಡಿನ ಹುಲಿ ಆ ಹುಲ್ಲು ತಿನ್ನುತ್ತಿದ್ದ ಹುಲಿಗೆ ಹೇಳಿತು: ‘ಇದು ಹುಲಿಯ ಜಾತಿಗೆ ಎಷ್ಟು ಅಪಮಾನಕರ! ನೀನು ಆಡುಗಳೊಡನೆ ಇದ್ದುಕೊಂಡು ಅವುಗಳ ಹಾಗೆ ಹುಲ್ಲು ಮೇಯುತ್ತಿದ್ದೆಯಲ್ಲ!’ ಆಗ ಆ ಹುಲ್ಲು ತಿನ್ನುತ್ತಿದ್ದ ಹುಲಿಗೆ ಬಹಳ ನಾಚಿಕೆಯಾಗಿಬಿಟ್ಟಿತು.
ಕಾಮಕಾಂಚನಗಳನ್ನು ಅನುಭವಿಸುವುದೇ ಹುಲ್ಲು ತಿಂದ ಹಾಗೆ. ಆಡುಗಳ ಹಾಗೆ ‘ಬ್ಯಾ ಬ್ಯಾ’ ಅನ್ನುವುದೇ ಮತ್ತು ಅವುಗಳ ಹಾಗೆ ಓಡಿ ತಪ್ಪಿಸಿಕೊಳ್ಳುವುದೇ ಸಾಮಾನ್ಯ ಜೀವನ ಹಾಗೆ ವರ್ತಿಸುವಿಕೆ. ಕಾಡಿನ ಹುಲಿಯೊಡನೆ ಹೋಗುವುದೇ ಆತ್ಮಜಾಗೃತಿಯನ್ನುಂಟು ಮಾಡುವ ಗುರುವಿಗೆ ಶರಣಾಗತನಾಗುವಿಕೆ ಮತ್ತು ಆತನೇ ಪರಮಬಂಧು ಎಂದು ಅರಿಯುವಿಕೆ. ಸ್ಪಷ್ಟವಾಗಿ ತನ್ನ ಮುಖವನ್ನು ನೋಡುವುದೇ ಸ್ವಸ್ವರೂಪವನ್ನು ಅರಿಯುವಿಕೆ.”
ಪರಮಹಂಸರು ಈಗ ಎದ್ದು ನಿಂತುಕೊಂಡರು. ಸುತ್ತಲೂ ನಿಶ್ಶಬ್ದ. ಕೇವಲ ಸರ್ವೆ ಮರಗಳ ‘ಸೊಯ್, ಸೊಯ್’ ಎಂಬ ಶಬ್ದ ಮತ್ತು ಗಂಗಾನದಿಯ ಮರ್ಮರ ಶಬ್ದ. ಈಗ ಪರಮಹಂಸರು ಮಾಸ್ಟರೊಡನೆ ಮಾತನಾಡುತ್ತಲೆ ಪಂಚವಟಿಯನ್ನು ದಾಟಿ ತಮ್ಮ ಕೊಠಡಿಯ ಕಡೆಗೆ ಬರುತ್ತಿದ್ದಾರೆ. ಮಾಸ್ಟರ್ ಅವರನ್ನು ಮಂತ್ರಮುಗ್ಧನ ಹಾಗೆ ಹಿಂಬಾಲಿಸು ತ್ತಿದ್ದಾನೆ. ಅವರು ಪಂಚವಟಿಗೆ ಬಂದಾಗ ಆಲದ ಮರದ ಕೊಂಬೆ ಮುರಿದು ಬಿದ್ದಿರುವ ಜಾಗದಲ್ಲಿ ಪೂರ್ವಾಭಿಮುಖವಾಗಿ ನಿಂತು ಆ ಕಟ್ಟೆಯನ್ನು ಹಣೆಯಿಂದ ಮುಟ್ಟಿ ಪ್ರಣಾಮ ಮಾಡಿದರು. ಆ ಜಾಗವೇ ಅವರು ಸಾಧನೆಮಾಡಿದ ಸ್ಥಳ. ಆ ಸ್ಥಳದಲ್ಲಿ ಅವರು ಎಷ್ಟೊಂದು ವ್ಯಾಕುಲತೆಯಿಂದ ಅತ್ತಿದ್ದಾರೆ; ಎಷ್ಟೊಂದು ಭಗವದ್ದರ್ಶನಗಳಾಗಿವೆ ಅವರಿಗೆ; ಭಗವತಿ ಯೊಡನೆ ಎಷ್ಟೊಂದು ಮಾತುಗಳನ್ನು ಆಡಿದ್ದಾರೆ! ಬಹುಶಃ ಇದಕ್ಕಾಗಿಯೇ ಇರಬೇಕು, ಅವರು ಇಲ್ಲಿಗೆ ಬಂದಾಗಲೆಲ್ಲಾ ಆ ಸ್ಥಳಕ್ಕೆ ಪ್ರಣಾಮಮಾಡುತ್ತಾರೆ.
ಈಗ ಪರಮಹಂಸರು ಮತ್ತು ಮಾಸ್ಟರ್ ಬಕುಳ ಮರಗಳನ್ನು ದಾಟಿ ನಹಬತ್ಖಾನೆಯ ಹತ್ತಿರಕ್ಕೆ ಬಂದಿದ್ದಾರೆ. ಹಾಜರಾ ಅಲ್ಲಿ ಅವರ ಕಣ್ಣಿಗೆ ಬಿದ್ದ. ಅವರು ಆತನಿಗೆ ಹೇಳುತ್ತಿದ್ದಾರೆ: “ಹೆಚ್ಚಾಗಿ ತಿನ್ನಬೇಡ. ಬಾಹ್ಯಶುಚಿಯ ಹುಚ್ಚನ್ನು ಬಿಟ್ಟುಬಿಡು. ಯಾರು ಬಾಹ್ಯಶುಚಿಗೆ ಅಷ್ಟಾಗಿ ಮನಸ್ಸು ಕೊಡುವರೊ, ಅವರಿಗೆ ಬ್ರಹ್ಮಜ್ಞಾನ ದೊರೆಯು ವುದಿಲ್ಲ. ಆಚಾರ ಎಷ್ಟು ಅತ್ಯಾವಶ್ಯಕವೊ ಅಷ್ಟನ್ನು ಮಾತ್ರ ಮಾಡು. ಮಿತಿಮೀರಿ ಹೋಗಬೇಡ.” ಪರಮಹಂಸರು ಈಗ ತಮ್ಮ ಕೊಠಡಿಯನ್ನು ಪ್ರವೇಶಿಸಿ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡರು.
ಮಧ್ಯಾಹ್ನದ ಊಟವಾದನಂತರ ಪರಮಹಂಸರು ವಿಶ್ರಮಿಸಿಕೊಳ್ಳುತ್ತಿದ್ದ ಹಾಗೆಯೇ ಕಲ್ಕತ್ತದಿಂದ ಸುರೇಂದ್ರ, ರಾಮ ಮೊದಲಾದ ಭಕ್ತರು ಬಂದು ಸೇರಲಾರಂಭಿಸಿದರು. ಈಗ ಘಂಟೆ ಅಪರಾಹ್ನ ಒಂದು. ಮಾಸ್ಟರ್ ಒಬ್ಬನೇ ಸರ್ವೆಮರಗಳ ತೋಪಿನಲ್ಲಿ ಸುತ್ತಾಡುತ್ತಿದ್ದಾನೆ. ಹರೀಶ ಅಲ್ಲಿಗೆ ಬಂದು ಆತನಿಗೆ ತಿಳಿಸಿದ, “ಯಾರೋ ಒಬ್ಬರು ಶಿವಸಂಹಿತೆಯನ್ನು ಓದುತ್ತಾರೆ. ಪರಮಹಂಸರು ನಿನ್ನನ್ನು ಕರೆಯುವಂತೆ ಹೇಳಿದ್ದಾರೆ. ಅದು ಯೋಗದ ವಿಷಯವಾಗಿ-ಷಟ್ಚಕ್ರದ ವಿಷಯವಾಗಿ ತಿಳಿಸುತ್ತದೆ.”
ಮಾಸ್ಟರ್ ಪರಮಹಂಸರ ಕೊಠಡಿಗೆ ಬಂದು ಅವರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ಭಕ್ತರು ನೆಲದ ಮೇಲೆ ಕುಳಿತಿದ್ದಾರೆ. ಕಾರಣಾಂತರದಿಂದ ಶಿವಸಂಹಿತೆಯ ಪ್ರವಚನ ನಡೆಯಲಿಲ್ಲ. ಪರಮಹಂಸರೇ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಗೋಪಿಯರದು ಪ್ರೇಮಾಭಕ್ತಿ. ಇದರಲ್ಲಿ ಎರಡು ಭಾವಗಳಿವೆ-ಅಹಂಕಾರ, ಮಮಕಾರ. ನಾನು ಕೃಷ್ಣನ ಸೇವೆ ಮಾಡದಿದ್ದರೆ ಆತನಿಗೆ ಅಸೌಖ್ಯವುಂಟಾಗುತ್ತದೆ ಎಂಬ ಭಾವನೆಗೆ ಅಹಂಕಾರ ಎಂದು ಹೆಸರು. ಈ ಭಾವದಲ್ಲಿ ಭಕ್ತ ಭಗವಂತನನ್ನು ಭಗವಂತನೆಂದು ಭಾವಿಸುವುದಿಲ್ಲ. ಎಂದರೆ ಆತನಿಗೆ ಭಗವದ್ಬೋಧೆ ಇರದು.
“ಮಮತೆ- ‘ನನ್ನದು, ನನ್ನದು’ ಎನ್ನುವುದು. ಗೋಪಿಯರಿಗೆ ಶ್ರೀಕೃಷ್ಣನಲ್ಲಿ ಅಂಥ ಮಮತೆ, ಆತನ ಪಾದಗಳು ನೋಯಬಹುದೆಂದು ಅವರು ತಮ್ಮ ಸೂಕ್ಷ್ಮ ಶರೀರಗಳನ್ನು ಆತನ ಪಾದದಡಿಯಲ್ಲಿ ಇಡುತ್ತಿದ್ದರು.
“ಯಶೋದೆ ಹೇಳಿದಳು: ‘ನನಗೆ ನಿಮ್ಮ ಚಿಂತಾಮಣಿ ಕೃಷ್ಣ ಗೊತ್ತಿಲ್ಲ-ಆತ ನನ್ನ ಗೋಪಾಲ.’ ಗೋಪಿಯರೂ ಹೇಳಿದರು: ‘ನಮ್ಮ ಪ್ರಾಣವಲ್ಲಭನೆಲ್ಲಿ? ಎಲ್ಲಿ ಹೃದಯವಲ್ಲಭ ಕೃಷ್ಣ?’ ಅವರಿಗೆ ಭಗವಂತ ಎಂಬ ಬೋಧೆ ಇರಲಿಲ್ಲ.
“ಇದು ಚಿಕ್ಕಮಗು, ‘ಅವರು ನಮ್ಮ ತಂದೆ’ ಎಂದು ಹೇಳುವ ಹಾಗೆ. ಯಾರಾದರೂ ಅದಕ್ಕೆ ಹೇಳಿದರೆ, ‘ಅಲ್ಲ ಕಣೊ ಆತ ನಿಮ್ಮ ತಂದೆಯಲ್ಲ,’ ಅದು ಹೇಳುತ್ತದೆ: ‘ಇಲ್ಲ ಇಲ್ಲ, ಅವರು ನಮ್ಮ ತಂದೆಯೇ.’
“ನರಲೀಲೆಯಲ್ಲಿ ಭಗವಂತ ಮನುಷ್ಯನ ಹಾಗೆಯೇ ವರ್ತಿಸಬೇಕಾಗುತ್ತದೆ. ಆದ್ದರಿಂದ ಅವತಾರಪುರುಷರನ್ನು ಗುರುತಿಸುವುದು ಬಹಳ ಕಷ್ಟ. ಭಗವಂತ ಮನುಷ್ಯನಾದಾಗ ತದ್ವತ್ ಮನುಷ್ಯನೇ, ಅದೇ ಹಸಿವು, ಬಾಯಾರಿಕೆ, ರೋಗ, ಶೋಕ, ಕೆಲವು ವೇಳೆ ಭಯ ಕೂಡ-ಮನುಷ್ಯನ ಹಾಗೆಯೇ. ರಾಮಚಂದ್ರ ಸೀತೆಗಾಗಿ ಬಹಳವಾಗಿ ದುಃಖಾನ್ವಿತನಾಗಿ ಹೋಗಿದ್ದ. ಶ್ರೀಕೃಷ್ಣ ತನ್ನ ತಂದೆ ನಂದನ ಮೆಟ್ಟು ಮತ್ತು ಮರದ ಪೀಠವನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಹೋದ.
“ನಾಟಕಶಾಲೆಯಲ್ಲಿ ಯಾರು ಸಾಧುವಿನ ವೇಷ ಧರಿಸಿದ್ದಾನೊ ಆತ ಸಾಧುವಿನ ಹಾಗೇ ವ್ಯವಹರಿಸುವನೇ ವಿನಾ ರಾಜನ ವೇಷ ಧರಿಸಿದವನ ಹಾಗೆ ವ್ಯವಹರಿಸುವುದಿಲ್ಲ. ವೇಷದಂತೆ ಅಭಿನಯ.
“ಒಮ್ಮೆ ಒಬ್ಬ ಬಹುರೂಪಿ ಸರ್ವಸಂಗಪರಿತ್ಯಾಗಿ ಸಾಧುವಿನ ವೇಷ ಧರಿಸಿದ್ದ. ಆತನ ವೇಷ ತದ್ವತ್ತಾಗಿಯೇ ಇದ್ದುದನ್ನು ಕೆಲವು ಮಂದಿ ಧನಿಕರು ಆತನಿಗೆ ಒಂದು ರೂಪಾಯಿ ಕೊಡಹೋದರು. ಆತ ಅದನ್ನು ಸ್ವೀಕರಿಸಲಿಲ್ಲ. ‘ಊಹ್ಞೂ’ ಎಂದು ಹೇಳಿ ಹೊರಟುಹೋದ. ಬಳಿಕ ತನ್ನ ವೇಷವನ್ನು ತೆಗೆದುಹಾಕಿ ತನ್ನ ನಿಜರೂಪದಲ್ಲಿ ಬಂದು ಆ ಧನಿಕರನ್ನು ಕೇಳಿದ: ‘ಕೊಡಿ ಆ ರೂಪಾಯಿಯನ್ನು’. ಅವರು ಹೇಳಿದರು: ‘ಈಗ ತಾನೆ ತೆಗೆದುಕೊಳ್ಳುವುದಿಲ್ಲ ಅಂತ ಹೊರಟುಹೋದೆ, ಮತ್ತೆ ಈಗ ಬಂದು ಕೇಳುತ್ತಾ ಇದ್ದೀಯಲ್ಲೊ?’ ಅದಕ್ಕೆ ಆತ ಹೇಳಿದ: ‘ಆಗ ನಾನು ಸಾಧುವಿನ ವೇಷ ಧರಿಸಿದ್ದೆ. ಆದ್ದರಿಂದ ಹಣ ಸ್ವೀಕರಿಸಲಿಲ್ಲ.’ ಅದೇ ರೀತಿಯಾಗಿ ಭಗವಂತನು ಮನುಷ್ಯನಾದಾಗ ಮನುಷ್ಯನಂತೆಯೇ ವ್ಯವಹರಿಸುತ್ತಾನೆ.
“ಬೃಂದಾವನಕ್ಕೆ ಹೋದರೆ ಕೃಷ್ಣಲೀಲೆಯ ಅನೇಕ ಸ್ಥಳಗಳನ್ನು ನೋಡಬಹುದು.”
ಸುರೇಂದ್ರ: “ನಾವು ನಮ್ಮ ರಜಾದಿನಗಳಲ್ಲಿ ಅಲ್ಲಿಗೆ ಹೋಗಿದ್ದೆವು. ‘ಪೈಸೆ ಕೊಡು, ಪೈಸೆ ಕೊಡು’ ಅಂತ ಜನ ಅಲ್ಲಿ ಚಿತ್ರಹಿಂಸೆ ಮಾಡುತ್ತಾರೆ. ಅಲ್ಲಿನ ಪಂಡಾಗಳು ಮತ್ತು ಇತರರು ‘ಕೊಡು, ಕೊಡು’ ಅಂತ ಶುರುಮಾಡಿದರು. ನಾವು ಅವರಿಗೆ ಮಾರನೆ ದಿನ ಕಲ್ಕತ್ತಕ್ಕೆ ಹೊರಡುತ್ತೇವೆ ಅಂತ ಹೇಳಿ ಅಂದೇ ಪಲಾಯನ ಮಾಡಿದೆವು.”
ಶ್ರೀರಾಮಕೃಷ್ಣರು: “ಏನಿದು, ಛೆ! ಮಾರನೆ ದಿನ ಹೊರಡುತ್ತೇವೆ ಅಂತ ಹೇಳಿ ಅಂದೇ ಪಲಾಯನ ಮಾಡುವುದೆ? ಎಂಥ ನಾಚಿಕೆಗೇಡಿತನ!”
ಸುರೇಂದ್ರ ತಲೆತಗ್ಗಿಸಿ: “ಅಲ್ಲಿ ಇಲ್ಲಿ ತೋಟಗಳಲ್ಲಿ ಬಾಬಾಜಿಗಳು ನಿರ್ಜನಪ್ರದೇಶದಲ್ಲಿ ಕುಳಿತು ಸಾಧನೆಯಲ್ಲಿ ತೊಡಗಿದ್ದುದನ್ನು ನೋಡಿದೆ.”
ಶ್ರೀರಾಮಕೃಷ್ಣರು: “ಬಾಬಾಜಿಗಳಿಗೆ ಏನನ್ನಾದರೂ ಕೊಟ್ಟಿರಾ?”
ಸುರೇಂದ್ರ: “ಇಲ್ಲ.”
ಶ್ರೀರಾಮಕೃಷ್ಣರು: “ಅದು ಸರಿಯಲ್ಲ; ಸಾಧು-ಭಕ್ತರಿಗೆ ಏನನ್ನಾದರೂ ಕೊಡಬೇಕು. ಯಾರಿಗೆ ಭಗವಂತನು ಕೊಟ್ಟಿದ್ದಾನೊ ಅವರು ಅಂಥವರು ಕಣ್ಣಿಗೆ ಬಿದ್ದಾಗ ಏನನ್ನಾದರೂ ಕೊಡಬೇಕು.
“ನಾನು ಮಥುರಬಾಬುವಿನೊಡನೆ ಬೃಂದಾವನಕ್ಕೆ ಹೋಗಿದ್ದೆ. ಮಥುರೆಯಲ್ಲಿ ಧ್ರುವಘಟ್ಟದ ಹತ್ತಿರಕ್ಕೆ ಬಂದೊಡನೆಯೇ ಇದ್ದಕ್ಕಿದ್ದ ಹಾಗೆಯೇ ದರ್ಶನವಾಯಿತು, ವಸುದೇವ ಕೃಷ್ಣನನ್ನು ಎತ್ತಿಕೊಂಡು ಯಮುನೆಯನ್ನು ದಾಟುತ್ತಿರುವುದು.
“ಒಂದು ದಿನ ಸಾಯಂಕಾಲದ ವೇಳೆಯಲ್ಲಿ ನದಿ ದಡದಲ್ಲಿ ತಿರುಗಾಡುತ್ತಿದ್ದೆ. ದಡದ ಮೇಲೆ ಚಿಕ್ಕ ಚಿಕ್ಕ ಕುಟೀರಗಳಿದ್ದುವು. ಅಲ್ಲಲ್ಲಿ ದೊಡ್ಡ ಯಲಚಿಮರಗಳೂ ಇದ್ದುವು. ಗೋಧೂಳಿಯ ಸಮಯ. ಗೋವುಗಳು ಹುಲ್ಲುಗಾವಲಿನಿಂದ ಹಿಂದಿರುಗುತ್ತಿದ್ದುವು. ಅನಂತರ ಅವು ನದಿಯನ್ನು ದಾಟಲಾರಂಭಿಸಿದುವು. ಅವುಗಳ ಹಿಂದೆ ಗೋಪಾಲಕರೂ ನದಿಯನ್ನು ದಾಟಿ ಬರುತ್ತಿದ್ದರು. ಆ ದೃಶ್ಯ ನನ್ನ ಕಣ್ಣಿಗೆ ಬಿದ್ದೊಡನೆಯೆ ಕೂಗಿಕೊಂಡೆ: ‘ಕೃಷ್ಣನೆಲ್ಲಿ?’ ಒಡನೆಯೇ ಬಾಹ್ಯಜ್ಞಾನಶೂನ್ಯನಾಗಿಬಿಟ್ಟೆ.
“ಶ್ಯಾಮಕುಂಡ ರಾಧಾಕುಂಡಗಳ ದರ್ಶನ ಮಾಡಬೇಕು ಅಂತ ಇಚ್ಛೆಯಾಯಿತು. ಮಥುರಬಾಬು ಒಂದು ಪಲ್ಲಕ್ಕಿಯನ್ನು ಏರ್ಪಾಡುಮಾಡಿ ಅಲ್ಲಿಗೆ ಕಳುಹಿಸಿಕೊಟ್ಟ. ಬೃಂದಾ ವನದಿಂದ ಅವು ಬಹಳ ದೂರವೇ. ಪೂರಿ ಜಿಲೇಬಿಗಳನ್ನು ಪಲ್ಲಕ್ಕಿಯಲ್ಲಿ ಇಡಿಸಿದ್ದ. ಅಲ್ಲಿನ ಹುಲ್ಲುಗಾವಲು ದಾಟಿಹೋಗುವಾಗ ಭಾವಾವಿಷ್ಟನಾಗಿ ಅಳಲಾರಂಭಿಸಿದೆ: ‘ಓ ಕೃಷ್ಣ, ನೀನು ಸುತ್ತಿ ಬಳಸಾಡಿದ ಎಲ್ಲಾ ಸ್ಥಾನಗಳೂ ಇವೆ, ಆದರೆ ನೀನೊಬ್ಬ ಮಾತ್ರ ಇಲ್ಲ. ನೀನು ಈ ಹುಲ್ಲುಗಾವಲಿನಲ್ಲೇ ಗೋವುಗಳನ್ನು ಮೇಯಿಸುತ್ತಿದ್ದೆ.’ ಹೃದೆ ನನ್ನ ಹಿಂದೆ ನಡೆದುಬರುತ್ತಿದ್ದ. ನಾನು ಕಣ್ಣೀರಿನಲ್ಲಿ ಸುಮ್ಮನೆ ಸ್ನಾನ ಮಾಡುತ್ತಲೇ ಮುಂದುವರಿದೆ. ಬೋಯಿಗಳಿಗೆ ಸ್ವಲ್ಪ ನಿಂತುಕೊಳ್ಳಿ ಎಂದು ಹೇಳಲೂ ನನ್ನ ಕೈಯಲ್ಲಾಗಲಿಲ್ಲ.
“ಶ್ಯಾಮಕುಂಡ ರಾಧಾಕುಂಡಗಳಿಗೆ ಹೋಗಿ ನೋಡಿದಾಗ ಅಲ್ಲಿ ಸಾಧುಗಳು ಒಂದೊಂದು ಕುಟೀರ ಕಟ್ಟಿಕೊಂಡು, ತಮ್ಮ ಕಣ್ಣು ರಸ್ತೆಯಲ್ಲಿ ಹೋಗಿಬರುವ ಜನರ ಮೇಲೆ ಬೀಳಬಹುದೆಂದು ಹೆದರಿ ರಸ್ತೆಕಡೆ ಬೆನ್ನುಹಾಕಿ ಕುಳಿತು ಧ್ಯಾನ ಭಜನೆ ಮಾಡುತ್ತಿದ್ದರು. ಬೃಂದಾವನದ ಹನ್ನೆರಡು ವನಗಳನ್ನೂ ನೋಡಬೇಕಾದದ್ದೆ.
“ಬಂಕುವಿಹಾರಿ ಮೂರ್ತಿಯನ್ನು ನೋಡಿ ನನಗೆ ಭಾವವುಂಟಾಗಿಬಿಟ್ಟಿತ್ತು. ಅದನ್ನು ಮುಟ್ಟಲು ಹೋಗಿದ್ದೆ. ಗೋವಿಂದಜಿಯನ್ನು ಎರಡನೆಯ ಸಲ ನೋಡಬೇಕು ಅಂತ ಇಚ್ಛೆಯಾಗಲಿಲ್ಲ. ನಾನು ಮಥುರೆಗೆ ಹೋಗಿದ್ದಾಗ ಗೋಪಾಲಕೃಷ್ಣನನ್ನು ಸ್ವಪ್ನದಲ್ಲಿ ಕಂಡೆ. ಹೃದೆಗೂ ಮಥುರಬಾಬುವಿಗೂ ಅದೇ ರೀತಿಯ ಸ್ವಪ್ನ ಬಿತ್ತು.
(ಸುರೇಂದ್ರನಿಗೆ) “ನಿನಗೆ ಯೋಗವೂ ಇದೆ, ಭೋಗವೂ ಇದೆ. ಋಷಿಗಳಲ್ಲಿ ಮೂರು ವಿಧ: ಬ್ರಹ್ಮರ್ಷಿ, ದೇವರ್ಷಿ, ರಾಜರ್ಷಿ. ಶುಕದೇವನಂಥವರು ಬ್ರಹ್ಮರ್ಷಿಗಳು. ಆತನ ಹತ್ತಿರ ಒಂದು ಪುಸ್ತಕವೂ ಇರಲಿಲ್ಲ. ನಾರದ ದೇವರ್ಷಿ. ಜನಕರಾಜನಂಥವರು ರಾಜರ್ಷಿಗಳು-ನಿಷ್ಕಾಮಕರ್ಮ ಮಾಡುತ್ತಾರೆ.
“ದೇವಿಯ ಭಕ್ತರಿಗೆ ಧರ್ಮ, ಮೋಕ್ಷ ಎರಡೂ ದೊರೆಯುತ್ತವೆ. ಜೊತೆಗೆ ಅವರು ಅರ್ಥ, ಕಾಮವನ್ನೂ ಅನುಭವಿಸುತ್ತಾರೆ. ನೀನು ದೇವಿಯ ಪುತ್ರನಾಗಿರುವಂತೆ ಒಂದು ದಿನ ನನಗೆ ದರ್ಶನ ದೊರೆಯಿತು. ನಿನಗೆ ಎರಡೂ ಇವೆ-ಯೋಗ, ಭೋಗ. ಇಲ್ಲದಿದ್ದರೆ ನಿನ್ನ ಮುಖಭಾವ ಒಣಗಿಕೊಂಡಿರುತ್ತಿತ್ತು.
“ಸರ್ವತ್ಯಾಗಿಗಳ ಆಕೃತಿ ಒಣಗಿಕೊಂಡಿರುತ್ತದೆ. ಒಮ್ಮೆ ಗಂಗೆಯ ಘಟ್ಟದಲ್ಲಿ ದೇವಿಯ ಭಕ್ತನೊಬ್ಬನನ್ನು ನೋಡಿದೆ. ಆತ ತಾನು ಊಟ ಮಾಡುತ್ತಿದ್ದ ಹಾಗೆಯೇ ದೇವಿಯ ಪೂಜೆಯನ್ನೂ ಮಾಡುತ್ತಿದ್ದ. ಆತನದು ಸಂತಾನಭಾವ.”
“ದೊಡ್ಡ ಧನವಂತನಾಗುವುದೂ ಒಳ್ಳೆಯದಲ್ಲ. ಈಗ ಯದುಮಲ್ಲಿಕ ಪ್ರಾಪಂಚಿಕ ಸಾಗರದಲ್ಲಿ ಮುಳುಗಿಹೋಗಿದ್ದಾನೆ. ಕಾರಣ ಅವನಿಗೆ ಹೆಚ್ಚು ಹಣ ಸಂಪಾದನೆಯಾಗಿ ಬಿಟ್ಟಿದ್ದರಿಂದ. ನವೀನ ನಿಯೋಗಿಗೂ ಯೋಗ ಭೋಗ ಎರಡೂ ಇದೆ. ದುರ್ಗಾಪೂಜೆಯ ಸಮಯದಲ್ಲಿ ತಂದೆ, ಮಗ ಇಬ್ಬರೂ ದೇವಿಗೆ ಚಾಮರ ಬೀಸುತ್ತಿದ್ದುದನ್ನು ನೋಡಿದೆ.”
ಸುರೇಂದ್ರ: “ನನ್ನ ಕೈಯಲ್ಲಿ ಧ್ಯಾನಮಾಡಲಾಗುತ್ತಿಲ್ಲವಲ್ಲ ಏಕೆ?”
ಶ್ರೀರಾಮಕೃಷ್ಣರು : “ಸ್ಮರಣ-ಮನನವಾದರೂ ನಡೆಯುತ್ತಾ ಇದೆ ತಾನೆ?”
ಸುರೇಂದ್ರ: “ತಾಯಿ, ತಾಯಿ’ ಎಂದು ಹೇಳುತ್ತ ನಿದ್ದೆಹೋಗುತ್ತೇನೆ.”
ಶ್ರೀರಾಮಕೃಷ್ಣರು: “ಅದು ಬಹಳ ಒಳ್ಳೆಯದು. ಸ್ಮರಣ-ಮನನ ಇದ್ದರೇ ಬೇಕಾದಷ್ಟು.”
ಪರಮಹಂಸರು ಸುರೇಂದ್ರನ ಭಾರವನ್ನು ಹೊತ್ತುಕೊಂಡಿದ್ದಾರೆ. ಆದ್ದರಿಂದ ಆತನಿಗೆ ಇನ್ನು ಯೋಚನೆಯೇಕೆ?
ವೇಳೆ ಸಾಯಂಕಾಲ. ಪರಮಹಂಸರು ತಮ್ಮ ಕೊಠಡಿಯಲ್ಲಿ ಕುಳಿತಿದ್ದಾರೆ. ಮಾಸ್ಟರೂ ಉಳಿದ ಭಕ್ತರೊಡನೆ ನೆಲದ ಮೇಲೆ ಕುಳಿತಿದ್ದಾನೆ. ಯೋಗದ ವಿಷಯವಾಗಿ-ಷಟ್ಚಕ್ರದ ವಿಷಯವಾಗಿ-ಮಾತನಾಡುತ್ತಿದ್ದಾರೆ. ಶಿವಸಂಹಿತೆಯಲ್ಲಿ ಈ ವಿಷಯಗಳೆಲ್ಲಾ ಇವೆ.
ಶ್ರೀರಾಮಕೃಷ್ಣರು: “ಇಡಾ, ಪಿಂಗಳಾ, ಸುಷುಮ್ನಾ-ಇವು ಮೂರೂ ನಮ್ಮ ಶರೀರ ದಲ್ಲಿರುವ ಮುಖ್ಯ ನಾಡಿಗಳು. ಸುಷುಮ್ನೆಯ ಒಳಗೆ ಎಲ್ಲಾ ಪದ್ಮಗಳೂ ಇವೆ. ಎಲ್ಲವೂ ಚಿನ್ಮಯ. ಇದು, ಮೇಣದ ಮರದಲ್ಲಿ ಅದರ ಕೊಂಬೆ, ರೆಂಬೆ, ಕಾಯಿ, ಹಣ್ಣು ಎಲ್ಲಾ ಮೇಣವಾಗಿರುವ ಹಾಗೆ. ಮೂಲಾಧಾರ ಪದ್ಮದಲ್ಲಿ ಕುಲಕುಂಡಲಿನಿ ಶಕ್ತಿ ಮಲಗಿರುತ್ತಾಳೆ. ಅದು ಆರು ದಳದ ಪದ್ಮ. ಯಾರು ಆದ್ಯಾಶಕ್ತಿಯೋ ಆಕೆಯೇ ಎಲ್ಲರ ದೇಹಗಳಲ್ಲೂ ಕುಲಕುಂಡಲಿನಿ ರೂಪದಲ್ಲಿ ಇದ್ದಾಳೆ. ಆಕೆ ಅಲ್ಲಿ ಸುರುಳಿ ಸುತ್ತಿಕೊಂಡು ಮಲಗಿರುವ ಹಾವಿನ ಹಾಗೆ ಇದ್ದಾಳೆ- ‘ಪ್ರಸುಪ್ತ ಭುಜಗಾಕಾರ ಆಧಾರಪದ್ಮವಾಸಿನೀ.’ (ಮಾಸ್ಟರಿಗೆ) ಭಕ್ತಿಯೋಗದ ಮೂಲಕ ಕುಲಕುಂಡಲಿನಿ ಬೇಗ ಎಚ್ಚರಗೊಳ್ಳುತ್ತಾಳೆ. ಆಕೆ ಎಚ್ಚರಗೊಳ್ಳದ ಹೊರತು ಭಗವಂತನ ದರ್ಶನ ದೊರೆಯುವ ಹಾಗಿಲ್ಲ. ನಿರ್ಜನ ಪ್ರದೇಶಧಲ್ಲಿ ಗೋಪ್ಯವಾಗಿ ಏಕಾಗ್ರಚಿತ್ತದಿಂದ ಈ ಹಾಡನ್ನು ನೀನು ಹಾಡು:
ಏಳಮ್ಮ ಕುಂಡಲಿನೀ
ನಿತ್ಯಾನಂದ ಸ್ವರೂಪಿಣೀ
ಮೂಲಾಧಾರ ಕಮಲದಲ್ಲಿ
ಪ್ರಸುಪ್ತ ಭುಜಂಗ ರೂಪಿಣೀ
“ಹಾಡಿನಿಂದಲೇ ರಾಮಪ್ರಸಾದನಿಗೆ ಭಗವಂತನ ದರ್ಶನ ದೊರೆಯಿತು. ವ್ಯಾಕುಲ ಚಿತ್ತದಿಂದ ಹಾಡಿದರೆ ಭಗವಂತನ ದರ್ಶನ ದೊರೆಯುತ್ತದೆ.”
ಮಾಸ್ಟರ್: “ಹೌದು, ಈ ಎಲ್ಲವನ್ನೂ ಒಮ್ಮೆ ಮಾಡಿದರೂ ಮನಸ್ಸಿನ ಶೋಕ- ತಾಪಗಳೆಲ್ಲಾ ಹೊರಟುಹೋಗುತ್ತವೆ.”
ಶ್ರೀರಾಮಕೃಷ್ಣರು: “ಹೌದು, ನಿಜ. ಮನಸ್ಸಿನ ದುಃಖಗಳೆಲ್ಲಾ ಒಮ್ಮೆಗೆ ಕೊನೆಗಾಣುತ್ತವೆ. ಯೋಗದ ವಿಷಯವಾಗಿ ನಿನಗೆ ಸಂಕ್ಷಿಪ್ತವಾಗಿ ತಿಳಿಸಬೇಕಾಗಿದೆ. ಆದರೆ ನೋಡು, ಮೊಟ್ಟೆಯೊಳಗೆ ಮರಿ ಚೆನ್ನಾಗಿ ಬೆಳೆಯದವರೆಗೆ ತಾಯಿ ಹಕ್ಕಿ ಮೊಟ್ಟೆಯನ್ನು ಒಡೆಯುವುದಿಲ್ಲ. ಸಕಾಲ ಬಂದಾಗ ಮಾತ್ರವೇ ಹಕ್ಕಿ ಮೊಟ್ಟೆಯನ್ನು ಒಡೆಯುತ್ತದೆ. ಆದರೆ ಸ್ವಲ್ಪ ಸಾಧನೆ ಮಾಡುವ ಅಗತ್ಯವಿದೆ. ಗುರುವೇ ಎಲ್ಲವನ್ನೂ ಮಾಡುತ್ತಾನೆ-ಆದರೆ ಕೊನೆಯಲ್ಲಿ ಶಿಷ್ಯನ ಕೈಯಲ್ಲೂ ಸ್ವಲ್ಪ ಸಾಧನೆ ಮಾಡಿಸುತ್ತಾನೆ. ದೊಡ್ಡ ಮರವನ್ನು ಕತ್ತರಿಸುವಾಗ ಅದರ ಬುಡವನ್ನು ಬಹುಮಟ್ಟಿಗೆ ಕತ್ತರಿಸಿದೊಡನೆಯೇ ಸ್ವಲ್ಪ ದೂರ ಸರಿದು ನಿಲ್ಲಬೇಕಾಗುತ್ತದೆ. ಬಳಿಕ ಮರ ತಾನೇ ‘ಕಟ್, ಕಟ್’ ಅಂತ ಮುರಿದು ‘ಧಪ್’ ಅಂತ ಬೀಳುತ್ತದೆ.
“ರೈತರು ನದಿಯಿಂದ ಗದ್ದೆಗೆ ನೀರು ತರುವಾಗ, ನದಿಯವರೆಗೂ ಕಾಲುವೆ ತೆಗೆದು ಇನ್ನೇನು ಸ್ವಲ್ಪ ಅಗೆಯಬೇಕಾಗಿದೆ ಅನ್ನುವಷ್ಟರಲ್ಲಿ ದೂರ ಸರಿದು ನಿಂತುಕೊಳ್ಳುತ್ತಾರೆ. ಬಳಿಕ ಮಣ್ಣಿಗೆ ತೇವವೇರಿ ಅದು ತಾನಾಗಿಯೇ ಕುಸಿದುಬೀಳುತ್ತದೆ. ಒಡನೆಯೇ ನದಿಯ ನೀರು ‘ಜರ್’ ಅಂತ ಶಬ್ದ ಮಾಡುತ್ತ ರಭಸದಿಂದ ಕಾಲುವೆಗೆ ನುಗ್ಗುತ್ತದೆ.
“ಅಹಂಕಾರ, ಉಪಾಧಿ ಇವುಗಳನ್ನೆಲ್ಲಾ ತ್ಯಜಿಸಿದರೇನೇ ಭಗವಂತನ ದರ್ಶನ ಮಾಡಲು ಸಾಧ್ಯ. ‘ನಾನು ಪಂಡಿತ’, ‘ನಾನು ಅಂಥ ದೊಡ್ಡ ಮನುಷ್ಯನ ಮಗ’, ‘ನಾನು ಧನಿಕ’, ‘ನಾನು ಅಂಥಾ ಕೀರ್ತಿವಂತ’ -ಇವೇ ಮೊದಲಾದ ಉಪಾಧಿಗಳೆಲ್ಲಾ ನಮ್ಮನ್ನು ಬಿಟ್ಟು ತೊಲಗಿದೊಡನೆಯೇ ಭಗವಂತನ ದರ್ಶನ ದೊರೆಯುತ್ತದೆ.
“ಭಗವಂತನೊಬ್ಬನೇ ಸತ್ಯ, ಉಳಿದುದೆಲ್ಲಾ ಅನಿತ್ಯ; ಈ ಜಗತ್ತು ಅನಿತ್ಯ” -ಇದಕ್ಕೇ ವಿವೇಕ ಅಂತ ಹೆಸರು. ವಿವೇಕವುಂಟಾಗದವರೆಗೆ ಭಗವತ್ಸಂಬಂಧವಾದ ಉಪದೇಶಗಳನ್ನು ಗ್ರಹಿಸಲಾಗುವುದಿಲ್ಲ.
“ಸಾಧನೆ ಮಾಡುತ್ತ ಮಾಡುತ್ತ ಮುಂದುವರಿದರೆ ಭಗವಂತನ ಕೃಪೆಯಿಂದ ಸಿದ್ಧಿ ದೊರೆಯುತ್ತದೆ. ಆದರೆ ಮೊದಲು ಸ್ವಲ್ಪ ಕಷ್ಟಪಡಬೇಕು; ಬಳಿಕ ಆತನ ದರ್ಶನ ದೊರೆಯು ತ್ತದೆ. ಆನಂದ ದೊರೆಯುತ್ತದೆ. ಯಾವುದೋ ಒಂದು ಜಾಗದಲ್ಲಿ ಚಿನ್ನದ ನಾಣ್ಯಗಳ ತಪ್ಪಲೆಯನ್ನು ಹೂತಿಟ್ಟಿದೆ ಎಂದು ಕೇಳಿದೊಡನೆಯೇ ಜನ ಅಲ್ಲಿಗೆ ಹೋಗಿ ಅಗೆಯಲು ಶುರುಮಾಡುತ್ತಾರೆ. ಅಗೆಯುತ್ತ ಅಗೆಯುತ್ತ ಮುಖದಿಂದ ಬೆವರು ಸುರಿಯತೊಡಗುತ್ತದೆ. ಬಹಳವಾಗಿ ಮಣ್ಣನ್ನು ತೋಡಿದ ನಂತರ ಗುದ್ದಲಿ ಮೊನೆಗೆ ಏನೋ ತಗುಲಿ ‘ಠಣ್’ ಅಂತ ಶಬ್ದಮಾಡುತ್ತದೆ. ಬಳಿಕ ಗುದ್ದಲಿಯನ್ನು ಒಂದು ಕಡೆಗೆ ಬಿಸುಟು ತಪ್ಪಲೆಗಾಗಿ ಹುಡುಕುತ್ತಾರೆ. ತಪ್ಪಲೆ ಕಣ್ಣಿಗೆ ಬಿದ್ದೊಡನೆಯೇ ಆನಂದದಿಂದ ಕುಣಿದು ಕುಪ್ಪಳಿಸುತ್ತಾರೆ. ಬಳಿಕ ತಪ್ಪಲೆಯನ್ನು ಹೊರತೆಗೆದು ನಾಣ್ಯಗಳನ್ನು ಹೊರಕ್ಕೆ ಸುರಿದುಕೊಳ್ಳುತ್ತಾರೆ. ಅನಂತರ ಅವನ್ನು ಕೈಯಲ್ಲಿ ತೆಗೆದುಕೊಂಡು ಎಣಿಸಲಾರಂಭಿಸುತ್ತಾರೆ. ಆಗ ಏನು ಆನಂದ! ದರ್ಶನ-ಸ್ಪರ್ಶನ-ಸಂಭೋಗ, ಏನು ಹೇಳುತ್ತೀಯೆ?”
ಮಾಸ್ಟರ್: “ಹೌದು ನಿಜ.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಮತ್ತೆ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಯಾರು ನನಗೆ ಸೇರಿದವರೊ, ಅವರನ್ನು ಬೈದರೂ ಮತ್ತೆ ಇಲ್ಲಿಗೆ ಬರುತ್ತಾರೆ. ನರೇಂದ್ರನ ಕಡೆ ನೋಡು! ಮೊದಲು ಆತ ಭಗವತಿ ಕಾಳಿಯನ್ನು ಮನಸ್ಸು ಬಂದ ಹಾಗೆಲ್ಲಾ ಹಳಿಯುತ್ತಿದ್ದ. ಒಂದು ದಿನ ಸಿಟ್ಟುಗೊಂಡು ಆತನಿಗೆ ಹೇಳಿದೆ: ‘ಮೂರ್ಖ! ನೀನು ಮತ್ತೆ ಇಲ್ಲಿಗೆ ಬರಬೇಡ.’ ಆಗ ಆತ ಮೆಲ್ಲಮೆಲ್ಲನೆ ಇಲ್ಲಿಂದ ಸರಿದು ಗುಡುಗುಡಿ ಸಿದ್ಧಪಡಿಸಲಾರಂಭಿಸಿದ. ಸ್ವಂತದವರನ್ನು ತಿರಸ್ಕಾರದೃಷ್ಟಿಯಿಂದ ನೋಡಿದರೂ ಅವರಿಗೆ ಕೋಪ ಬರುವುದಿಲ್ಲ. ನಿನ್ನ ಅಭಿಪ್ರಾಯವೇನು?”
ಮಾಸ್ಟರ್: “ಅದು ನಿಜ.”
ಶ್ರೀರಾಮಕೃಷ್ಣರು: “ನರೇಂದ್ರ ಸ್ವತಸ್ಸಿದ್ಧ. ಆತ ನಿರಾಕಾರನಿಷ್ಠ.”
ಮಾಸ್ಟರ್ ನಗುತ್ತ : “ಆತ ಇಲ್ಲಿಗೆ ಬಂದಾಗಲೆಲ್ಲಾ ಏನಾದರೂ ಒಂದು ಸಂಭ್ರಮ ಇದ್ದೇ ಇರುತ್ತದೆ.”
ಶ್ರೀರಾಮಕೃಷ್ಣರು ಆನಂದದಿಂದ ನಗುತ್ತ ಹೇಳುತ್ತಿದ್ದಾರೆ: “ಹೌದು, ಸಂಭ್ರಮವೇ ನಿಜವಾಗಿಯೂ.”
ಮಾರನೆ ದಿನ ಮಂಗಳವಾರ ಏಕಾದಶಿ. ಘಂಟೆ ಬೆಳಗಿನ ಹನ್ನೊಂದು. ಪರಮಹಂಸರು ಇನ್ನೂ ಊಟ ಮಾಡಿಲ್ಲ. ಮಾಸ್ಟರ್ ರಾಖಾಲ ಇನ್ನೂ ಕೆಲವು ಮಂದಿ ಭಕ್ತರು ಕೊಠಡಿಯಲ್ಲಿ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಏಕಾದಶಿ ವ್ರತವನ್ನು ಆಚರಿಸುವುದು ಒಳ್ಳೆಯದು. ಅದರಿಂದ ಮನಸ್ಸು ಪವಿತ್ರವಾಗುತ್ತದೆ. ಭಗವಂತನಲ್ಲಿ ಭಕ್ತಿಯುಂಟಾಗುತ್ತದೆ. ಏನು?”
ಮಾಸ್ಟರ್: “ಹೌದು ನಿಜ.”
ಶ್ರೀರಾಮಕೃಷ್ಣರು: “ನೀನು ಬೇಕಾದರೆ ಪುರಿ, ಹಾಲು ತೆಗೆದುಕೊ. ಏನು ಹೇಳುತ್ತೀಯೆ?”.