೯ನೆ ಡಿಸೆಂಬರ್ ೧೮೮೩, ಮಾರ್ಗಶಿರ ಶುಕ್ಲ ದಶಮಿ, ಭಾನುವಾರ
ಪರಮಹಂಸರು ತಮ್ಮ ಕೊಠಡಿಯಲ್ಲಿ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ಅಧರಸೇನ, ಮನಮೋಹನ, ರಾಖಾಲ, ಮಾಸ್ಟರ್, ಹರೀಶ ಇನ್ನೂ ಅನೇಕರು ಕೊಠಡಿ ಯಲ್ಲಿ ಕುಳಿತಿದ್ದಾರೆ. ಘಂಟೆ ಅಪರಾಹ್ನ ಎರಡು. ಪರಮಹಂಸರು ಅವರಿಗೆಲ್ಲಾ ಶ್ರೀಚೈತನ್ಯ ದೇವನ ದಿವ್ಯಭಾವವನ್ನು ವರ್ಣಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಚೈತನ್ಯದೇವನಿಗೆ ಮೂರು ಅವಸ್ಥೆ ಉಂಟಾಗುತ್ತಿತ್ತು. ಮೊದಲನೆ ಯದು ಬಾಹ್ಯದಶೆ. ಆಗ ಆತನ ಮನಸ್ಸು ಸ್ಥೂಲ ಮತ್ತು ಸೂಕ್ಷ್ಮಗಳ ಮೇಲೆ ನೆಲಸಿರುತ್ತಿತ್ತು. ಎರಡನೆಯದು ಅರ್ಧಬಾಹ್ಯದಶೆ. ಆಗ ಆತನ ಮನಸ್ಸು ಕಾರಣಶರೀರವನ್ನು ಹೊಕ್ಕು, ಕಾರಣಾನಂದದಲ್ಲಿ ಮಗ್ನವಾಗಿರುತ್ತಿತ್ತು. ಮೂರನೆಯದು ಅಂತರ್ದಶೆ. ಆಗ ಆತನ ಮನಸ್ಸು ಮಹಾಕಾರಣದಲ್ಲಿ ಲಯವಾಗಿಬಿಡುತ್ತಿತ್ತು.
“ವೇದಾಂತದ ಪಂಚಕೋಶಗಳೊಡನೆ ಈ ಅವಸ್ಥೆಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಸ್ಥೂಲಶರೀರವೆಂದರೆ, ಅನ್ನಮಯಕೋಶ ಮತ್ತು ಪ್ರಾಣಮಯಕೋಶ. ಸೂಕ್ಷ್ಮ ಶರೀರ ವೆಂದರೆ ಮನೋಮಯಕೋಶ ಮತ್ತು ವಿಜ್ಞಾನಮಯಕೋಶ. ಕಾರಣಶರೀರವೆಂದರೆ, ಆನಂದಮಯಕೋಶ, ಮಹಾಕಾರಣ; ಪಂಚಕೋಶಗಳಿಗೆ ಅತೀತವಾದ್ದು. ಚೈತನ್ಯದೇವನ ಮನಸ್ಸು ಮಹಾಕಾರಣದಲ್ಲಿ ಲಯವಾದಾಗ ಆತನಿಗೆ ಸಮಾಧಿಯುಂಟಾಗುತ್ತಿತ್ತು. ಅದಕ್ಕೇ ನಿರ್ವಿಕಲ್ಪ ಸಮಾಧಿ ಅಥವಾ ಜಡಸಮಾಧಿ ಎಂದು ಹೆಸರು.”
“ಚೈತನ್ಯದೇವನಿಗೆ ಬಾಹ್ಯದಶೆಯುಂಟಾಗುತ್ತಿದ್ದಾಗ ನಾಮಸಂಕೀರ್ತನೆ ಮಾಡುತ್ತಿದ್ದ; ಅರ್ಧಬಾಹ್ಯದಶೆಯಲ್ಲಿ ಭಕ್ತರೊಡನೆ ನರ್ತಿಸುತ್ತಿದ್ದ; ಅಂತರ್ದಶೆಯಲ್ಲಿ ಸಮಾಧಿಸ್ಥ ನಾಗುತ್ತಿದ್ದ.”
ಮಾಸ್ಟರ್ ತನಗೆ ತಾನೇ: “ಪರಮಹಂಸರು ತಮ್ಮ ಅವಸ್ಥೆಗಳ ಸಂಬಂಧವಾಗಿಯೇ ಈ ರೀತಿಯಾಗಿ ಸೂಚಿಸುತ್ತಿದ್ದಾರೇನು? ಇವರಿಗೂ ಚೈತನ್ಯದೇವನಿಗೂ ಬಹುಮಟ್ಟಿಗೆ ಸಾಮ್ಯವಿದೆ!”
ಶ್ರೀರಾಮಕೃಷ್ಣರು: “ಚೈತನ್ಯದೇವ ಭಕ್ತಿಯ ಅವತಾರ. ಭಗವಂತನನ್ನು ಯಾವ ರೀತಿಯಾಗಿ ಪ್ರೀತಿಸಬೇಕು ಎಂಬುದನ್ನು ತೋರಿಸಲೋಸುಗವೇ ಆತ ಅವತರಿಸಿದ್ದು. ಭಗವಂತನಲ್ಲಿ ಭಕ್ತಿಯುಂಟಾಗಿಬಿಟ್ಟಿತು ಎಂದರೆ, ಎಲ್ಲವೂ ದೊರೆತ ಹಾಗೆಯೇ. ಹಠಯೋಗದ ಆವಶ್ಯಕತೆ ಸ್ವಲ್ಪವೂ ಇರದು.”
ಒಬ್ಬ ಭಕ್ತ: “ಮಹಾಶಯರೆ, ಹಠಯೋಗ ಎಂಬುದು ಯಾವುದು?”
ಶ್ರೀರಾಮಕೃಷ್ಣರು: “ಹಠಯೋಗದಲ್ಲಿ ಶರೀರದ ಮೇಲೆ ಹೆಚ್ಚಾಗಿ ಮನಸ್ಸಿಡಬೇಕಾಗು ತ್ತದೆ. ಹಠಯೋಗಿ ತನ್ನ ಗುದದ್ವಾರಕ್ಕೆ ಬಿದಿರ ಕೊಳವೆಯನ್ನು ಸಿಕ್ಕಿಸಿಕೊಂಡು ಅದರ ಮೂಲಕ ನೀರೆಳೆದು ತನ್ನ ಕರುಳನ್ನು ತೊಳೆದುಕೊಳ್ಳುತ್ತಾನೆ. ಜನನೇಂದ್ರಿಯದ ಮೂಲಕ ಹಾಲು ತುಪ್ಪಗಳನ್ನು ಒಳಕ್ಕೆ ಸೆಳೆದುಕೊಳ್ಳುತ್ತಾನೆ. ಜಿಹ್ವಾ ಸಿದ್ಧಿಯನ್ನು ಅಭ್ಯಾಸಮಾಡುತ್ತಾನೆ. ನಿರ್ದಿಷ್ಟ ಆಸನದಲ್ಲಿ ಕುಳಿತು, ದೇಹವನ್ನು ನೆಲದಿಂದ ಮೇಲಕ್ಕೆ ಗಾಳಿಯಲ್ಲಿ ತೇಲಾಡುವಂತೆ ಮಾಡುತ್ತಾನೆ. ಇವೆಲ್ಲಾ ಪ್ರಾಣವಾಯುವಿನ ಕ್ರಿಯೆ. ಒಬ್ಬ ತನ್ನ ಇಂದ್ರಜಾಲವನ್ನು ತೋರಿಸುತ್ತ ತೋರಿಸುತ್ತ ಇದ್ದ ಹಾಗೆ ನಾಲಗೆ ತಿರುಗಿ ಗಂಟಲಿಗೆ ಹೋಗಿ ಸಿಕ್ಕಿಕೊಂಡಿತು. ಒಡನೆ ಆತನ ಶರೀರ ಸ್ಥಿರವಾಗಿಬಿಟ್ಟಿತು. ಜನ ಭಾವಿಸಿದರು, ಆತ ಸತ್ತುಹೋದ ಎಂದು. ಬಳಿಕ ಅವರು ಆತನನ್ನು ಮಣ್ಣಿನಲ್ಲಿ ಹೂಳಿಟ್ಟರು. ಅನೇಕ ವರ್ಷಗಳವರೆಗೆ ಆತ ಆ ಅವಸ್ಥೆಯಲ್ಲೇ ಇದ್ದ. ಬಹಳ ವರ್ಷಗಳಾದ ನಂತರ ಆತನ ಗೋರಿ ಏನೋ ಕಾರಣದಿಂದ ಬಾಯಿ ತೆರೆಯಿತು. ಇದ್ದಕ್ಕಿದ್ದ ಹಾಗೆ ಆ ಮನುಷ್ಯನಿಗೆ ಪ್ರಜ್ಞೆ ಬಂತು. ಆತ ಒಡನೆಯೇ ಕೂಗಲಾರಂಭಿಸಿದ: ‘ಮಾಯವೇ ಬಾ! ಮಾಟವೇ ಬಾ’ ಅಂತ. (ಎಲ್ಲರೂ ನಗುತ್ತಿದ್ದಾರೆ). ಇವೆಲ್ಲಾ ಪ್ರಾಣ ವಾಯುವಿನ ಕ್ರಿಯೆಗಳು.
“ವೇದಾಂತವಾದಿಗಳು ಹಠಯೋಗಕ್ಕೆ ಮನ್ನಣೆ ಕೊಡುವುದಿಲ್ಲ. ಇದಲ್ಲದೆ ರಾಜ ಯೋಗವೆಂಬುದೂ ಇದೆ. ರಾಜಯೋಗದಲ್ಲಿ ಮನಸ್ಸಿನ ಮೂಲಕ ಎಂದರೆ ಭಕ್ತಿ ಮತ್ತು ವಿಚಾರದ ಮೂಲಕ ಭಗವಂತನೊಡನೆ ಯೋಗವುಂಟಾಗುತ್ತದೆ. ಈ ಯೋಗವೇ ಒಳ್ಳೆಯದು. ಹಠಯೋಗ ಒಳ್ಳೆಯದಲ್ಲ. ಕಲಿಯುಗದಲ್ಲಿ ಅನ್ನಗತಪ್ರಾಣ.”
ಪರಮಹಂಸರು ನಹಬತ್ಖಾನೆಯ ಬಳಿಯಲ್ಲಿರುವ ರಸ್ತೆಯಲ್ಲಿ ನಿಂತಿದ್ದಾರೆ. ಸರ್ವೆ ಮರದ ತೋಪಿನ ಕಡೆಯಿಂದ ತಮ್ಮ ಕೊಠಡಿಗೆ ಬರುತ್ತಿದ್ದವರು, ಅಲ್ಲಿ ನಿಂತುಕೊಂಡಿದ್ದಾರೆ. ನೋಡುತ್ತಾರೆ, ಮಾಸ್ಟರ್ ನಹಬತ್ಖಾನೆಯ ವರಾಂಡದ ಕಟಕಟೆಯ ಹಿಂದೆ ಕುಳಿತು ಗಂಭೀರ ಭಗವಚ್ಚಿಂತನೆಯಲ್ಲಿ ಮಗ್ನನಾಗಿದ್ದಾನೆ.
ಶ್ರೀರಾಮಕೃಷ್ಣರು: “ಓಹೋ! ನೀನಿಲ್ಲಿದ್ದೀಯಾ? ನಿನಗೆ ಬೇಗನೆ ದೊರೆಯುತ್ತದೆ. ಸ್ವಲ್ಪ ಮುಂದುವರಿದರೆ ಸಾಕು. ಬೇರೆ ಯಾರಾದರೂ ಬಂದು ಹೀಗೆ ಹೀಗೆ ಮಾಡಬೇಕು ಅಂತ ಹೇಳಿಕೊಟ್ಟುಬಿಡುತ್ತಾರೆ.”
ಮಾಸ್ಟರ್ ಚಕಿತನಾಗಿ ಪರಮಹಂಸರ ಕಡೆ ನೋಡುತ್ತಿದ್ದಾನೆ. ಇನ್ನೂ ಆತ ತಾನು ಕುಳಿತಲ್ಲಿಂದ ಮೇಲಕ್ಕೆ ಎದ್ದಿಲ್ಲ.
ಶ್ರೀರಾಮಕೃಷ್ಣರು: “ಈಗ ನಿನಗೆ ಸಮಯ ಬಂದಿದೆ. ಸಕಾಲ ಬಾರದವರೆಗೆ ತಾಯಿ ಹಕ್ಕಿ ಮೊಟ್ಟೆಯನ್ನು ಒಡೆಯುವುದಿಲ್ಲ. ನಾನು ತಿಳಿಸಿದುದೇ ನಿನ್ನ ನಿಜವಾದ ಆದರ್ಶ ಧ್ಯೇಯ.”
ಪರಮಹಂಸರು ಮತ್ತೆ ಈಗ ಆತನ ಆದರ್ಶ ಧ್ಯೇಯವೇನೆಂಬುದನ್ನು ತಿಳಿಸಿದರು.
ಶ್ರೀರಾಮಕೃಷ್ಣರು: “ಎಲ್ಲರೂ ಕಠೋರ ತಪಸ್ಸಿನಲ್ಲಿ ತೊಡಗಬೇಕಾದ ಆವಶ್ಯಕತೆ ಯೇನಿಲ್ಲ. ಆದರೆ ನಾನು ಬಹಳ ಕಷ್ಟಪಡಬೇಕಾಯಿತು. ಮಣ್ಣಿನ ಗುಡ್ಡೆಯನ್ನೇ ತಲೆದಿಂಬಾಗಿ ಮಾಡಿಕೊಂಡು ನೆಲದ ಮೇಲೆ ಬಿದ್ದಿರುತ್ತಿದ್ದೆ. ದಿನ ಹೇಗೆ ಕಳೆದುಹೋಗುತ್ತಿದ್ದುವೊ ಅದು ನನಗೆ ಗೊತ್ತಾಗುತ್ತಲೆ ಇರಲಿಲ್ಲ. ಆಗ ನಾನು ಕೇವಲ ‘ತಾಯಿ! ತಾಯಿ!’ ಎಂದು ಭಗವತಿಯನ್ನು ಕರೆಯುತ್ತ ಸುಮ್ಮನೆ ಅಳುತ್ತಿದ್ದೆ.”
ಮಾಸ್ಟರ್ ಈಗ ಎರಡು ವರ್ಷಗಳಿಂದ ಪರಮಹಂಸರ ಹತ್ತಿರ ಬಂದು ಹೋಗು ತ್ತಿದ್ದಾನೆ. ಆತ ಇಂಗ್ಲೀಷು ವಿದ್ಯಾಭ್ಯಾಸ ಮಾಡಿದ್ದುದರಿಂದ ಪಾಶ್ಚಾತ್ಯ ದರ್ಶನ ಮತ್ತು ವಿಜ್ಞಾನ ಶಾಸ್ತ್ರಗಳನ್ನು ಓದಲು ಇಚ್ಛೆಪಡುತ್ತಿದ್ದ ಮತ್ತು ಕೇಶವಸೇನನೇ ಮೊದಲಾದ ವಿದ್ವಾಂಸರ ಉಪನ್ಯಾಸ ಕೇಳಲು ಹಾತೊರೆಯುತ್ತಿದ್ದ. ಪರಮಹಂಸರು ಆತನನ್ನು ಆಗಾಗ “ಇಂಗ್ಲೀಷ್ ಮ್ಯಾನ್” ಎಂದು ಕರೆಯುತ್ತಿದ್ದರು. ಆದರೆ ಆತ ಪರಮಹಂಸರನ್ನು ದರ್ಶನಮಾಡಿದಂದಿ ನಿಂದ ಐರೋಪ್ಯ ವಿದ್ವಾಂಸರ ಗ್ರಂಥ ಮತ್ತು ಉಪನ್ಯಾಸಗಳು ಆತನಿಗೆ ಬಹಳ ಸಪ್ಪೆಯಾಗಿ ತೋರುತ್ತಿವೆ. ಈಗ ಆತನಿಗೆ ಪರಮಹಂಸರ ದರ್ಶನವನ್ನು ಹಗಲಿರುಳೂ ಪಡೆಯುತ್ತಲೇ ಇರಬೇಕು ಮತ್ತು ಅವರ ಶ್ರೀಮುಖದಿಂದ ಬರುವ ಮಾತುಗಳನ್ನು ಕೇಳುತ್ತಲೇ ಇರಬೇಕು ಎಂಬ ಉತ್ಕಟೇಚ್ಛೆಯುಂಟಾಗಿಬಿಟ್ಟಿದೆ. ಈಗ ಕೆಲವು ದಿನಗಳಿಂದ ಪರಮಹಂಸರ ಕೆಲವು ಉಕ್ತಿಗಳನ್ನು ಸದಾ ಮೆಲುಕು ಹಾಕುತ್ತಿದ್ದಾನೆ. ಪರಮಹಂಸರು ಹೇಳಿದ್ದಾರೆ: “ಸಾಧನೆಯನ್ನು ಮಾಡಿದರೆ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು.” ಮತ್ತೆ ಹೇಳಿದ್ದಾರೆ: “ಭಗವದ್ದರ್ಶನವೇ ಮಾನವ ಜೀವನದ ಉದ್ದೇಶ.”
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಸ್ವಲ್ಪ ಸಾಧನೆಯಲ್ಲಿ ತೊಡಗಿದ್ದೇ ಆದರೆ, ಯಾರಾದರೂ ಬಂದು ಹೀಗೆ ಮಾಡಬೇಕು ಎಂದು ಹೇಳಿಕೊಟ್ಟುಬಿಡುತ್ತಾರೆ. ನೀನು ಏಕಾದಶೀ ವ್ರತವನ್ನು ಆಚರಿಸು……
“ನೀನು ನನಗೆ ಸೇರಿದವನು, ನನ್ನ ಸಂಬಂಧಿ; ಇಲ್ಲದಿದ್ದರೆ ಇಷ್ಟಾಗಿ ನೀನು ಏಕೆ ಇಲ್ಲಿಗೆ ಬರುತ್ತಿದ್ದೆ? ಕೀರ್ತನೆ ಕೇಳುತ್ತ, ಕೇಳುತ್ತ ಇದ್ದಹಾಗೆ ರಾಖಾಲನ ದರ್ಶನವಾಯಿತು. ಆತ ವ್ರಜಗೋಪಾಲರ ಮಧ್ಯೆ ನಿಂತಿದ್ದ. ನರೇಂದ್ರ ಬಹಳ ಉಚ್ಚ ಮಟ್ಟದವನು. ಹೀರಾನಂದ ಕೂಡ; ಅವನದು ಎಂಥಾ ಮಗುವಿನಂಥ ಸ್ವಭಾವ! ಆತನ ಭಾವ ಎಷ್ಟು ಮಧುರವಾದುದು! ಆತನನ್ನು ನೋಡಬೇಕು ಅಂತಲೂ ಇಚ್ಛೆಯಾಗುತ್ತಿದೆ.”
“ಒಮ್ಮೆ ನಾನು ಗೌರಾಂಗನ ಸಾಂಗೋಪಾಂಗಿಗಳನ್ನೆಲ್ಲಾ ನೋಡಿದೆ. ಭಾವದಲ್ಲಿ ಅಲ್ಲ, ಈ ಕಣ್ಣುಗಳಿಂದಲೇ. ಆಗ ನನಗೆ ಅಂಥ ಅವಸ್ಥೆ ಬಂದಿತು. ಎಲ್ಲಾ ದರ್ಶನಗಳನ್ನೂ ಈ ಕಣ್ಣುಗಳಿಂದಲೇ ನೋಡಬಹುದಾಗಿತ್ತು. ಈಗ ಭಾವದಲ್ಲಿ ಆಗುತ್ತಿವೆ. ನಾನು ಗೌರಾಂಗನ ಸಾಂಗೋಪಾಂಗಿಗಳನ್ನು ಈ ಕಣ್ಣುಗಳಿಂದಲೇ ನೋಡಿದೆ. ಅವರ ಮಧ್ಯದಲ್ಲಿ ನೀನೂ ಇದ್ದ ಹಾಗೆ ಇತ್ತು. ಬಲರಾಮನೂ ಇದ್ದ ಹಾಗೆ ಇತ್ತು. ನಾನು ಕೆಲವರನ್ನು ನೋಡಿದಾಗ ಥಟ್ಟನೆ ಎದ್ದು ನಿಂತುಕೊಳ್ಳುವುದನ್ನು ನೀನು ನೋಡಿರಬಹುದು. ಏಕೆ ಗೊತ್ತೆ? ತನ್ನ ಸ್ವಂತದವರನ್ನು ಬಹಳ ಕಾಲವಾದ ಮೇಲೆ ದರ್ಶನಮಾಡಿದರೆ ಮನುಷ್ಯನಿಗೆ ಆ ರೀತಿಯಾಗಿ ಆಗುತ್ತದೆ.”
“ಭಗವತಿಗೆ ಅಳುತ್ತ ಅಳುತ್ತ ಹೇಳುತ್ತಿದ್ದೆ: ‘ತಾಯೆ ಭಕ್ತರನ್ನು ನೋಡಬೇಕೆಂದು ನನ್ನ ಪ್ರಾಣ ತವಕಪಡುತ್ತಿದೆ. ಅವರನ್ನು ಬೇಗ ನನ್ನ ಹತ್ತಿರಕ್ಕೆ ಕರೆದುಕೊಂಡು ಬಾ.’ ಆಗ ನನ್ನ ಮನಸ್ಸಿನಲ್ಲಿ ಏನೇನು ಇಚ್ಛೆಗಳು ಏಳುತ್ತಿದ್ದವೊ, ಅವೆಲ್ಲಾ ಪೂರ್ಣಗೊಂಡು ಬಿಡುತ್ತಿದ್ದುವು.
“ಜಪ, ಧ್ಯಾನಕ್ಕೆಂದು ಪಂಚವಟಿಯಲ್ಲಿ ತುಳಸಿಯ ವನವನ್ನು ಬೆಳೆಸಿದ್ದೆ. ಅದರ ಸುತ್ತ ಬಿದಿರಿನ ಬೇಲಿಯನ್ನು ಹಾಕಬೇಕು ಎಂಬುದಾಗಿ ಇಚ್ಛೆಯಾಯಿತು. ಸ್ವಲ್ಪ ದಿನಗಳಲ್ಲೇ ಗಂಗೆಯಲ್ಲಿ ಉಬ್ಬರ ಬಂದು ಒಂದು ಹೊರೆ ಬಿದಿರ ಕಡ್ಡಿಗಳನ್ನೂ, ಅದರೊಡನೆ ಸ್ವಲ್ಪ ದಾರವನ್ನೂ ನೇರವಾಗಿ ಪಂಚವಟಿಯ ದಡಕ್ಕೇ ಹೊತ್ತು ತಂದು ಬಿಸಾಡಿತು. ದೇವಾಲಯದ ಒಬ್ಬ ಕೆಲಸಗಾರ ಅದನ್ನು ನೋಡಿ ಆನಂದದಿಂದ ಕುಣಿಯುತ್ತಾ ಬಂದು ಸಮಾಚಾರ ತಿಳಿಸಿದ.
“ನನಗೆ ಈ ಭಗವದವಸ್ಥೆ ಉಂಟಾದನಂತರ ಪೂಜೆಯ ಕೆಲಸ ಮಾಡಲಾಗಲಿಲ್ಲ. ಆಗ ನಾನು ಭಗವತಿಗೆ ಮೊರೆಯಿಟ್ಟೆ: ‘ತಾಯೆ, ನನ್ನನ್ನು ನೋಡಿಕೊಳ್ಳುವವರಾರು? ನನ್ನ ಯೋಗಕ್ಷೇಮವನ್ನು ನಾನೇ ನೋಡಿಕೊಳ್ಳುವಂಥ ಶಕ್ತಿ ನನಗಿಲ್ಲ. ನಿನ್ನ ಸಂಬಂಧವಾಗಿ ಕೇಳಬೇಕು ಅಂತ ಇಚ್ಛೆಯಾಗುತ್ತಿದೆ. ಭಕ್ತರಿಗೆ ಊಟಕ್ಕೆ ಹಾಕಬೇಕು ಅಂತ ಆಸೆಯಾಗುತ್ತಿದೆ. ದರಿದ್ರರು ಕಣ್ಣಿಗೆ ಬಿದ್ದರೆ ಏನಾದರೂ ಕೊಡಬೇಕು ಅಂತ ಬಯಕೆಯಾಗುತ್ತಿದೆ. ಇವೆಲ್ಲಾ ನಡೆಯುವ ಬಗೆ ಹೇಗೆ ತಾಯೆ? ಯಾರಾದರೂ ಒಬ್ಬ ಧನಿಕ ನನಗೆ ಸಹಾಯ ನೀಡುವಂತೆ ಮಾಡು.’ ಅದಕ್ಕಾಗಿಯೇ ಮಥುರಬಾಬು ನನಗೆ ಅಷ್ಟೊಂದು ಸೇವೆ ಸಲ್ಲಿಸಿದುದು.
“ಮತ್ತೆ ಮೊರೆಯಿಟ್ಟೆ: ‘ತಾಯೆ. ನನಗಂತೂ ಮಕ್ಕಳಾಗುವ ಹಾಗಿಲ್ಲ. ಆದರೆ ಇಚ್ಛೆ ಯಾಗುತ್ತಿದೆ. ನನ್ನ ಹತ್ತಿರ ಶುದ್ಧ ಭಕ್ತನಾದ ಒಬ್ಬ ಯುವಕ ಸದಾ ಇರಬೇಕು ಎಂದು. ಅಂಥ ಒಬ್ಬ ಯುವಕನನ್ನು ನನಗೆ ದೊರಕಿಸಿಕೊಡು.’ ಅದಕ್ಕಾಗಿಯೇ ರಾಖಾಲ ಬಂದು ನನ್ನನ್ನು ಸೇರಿದುದು. ಯಾರಾರನ್ನು ನನ್ನ ಸ್ವಂತದವರು ಎಂದು ಪರಿಗಣಿಸುತ್ತಿದ್ದೇನೋ ಅವರಲ್ಲಿ ಕೆಲವರು ನನ್ನ ಅಂಶ, ಮತ್ತೆ ಕೆಲವರು ನನ್ನ ಕಲಾ.”
ಈಗ ಪರಮಹಂಸರು ಮಾಸ್ಟರೊಡನೆ ಪಂಚವಟಿಯ ಕಡೆ ಹೋಗುತ್ತಿದ್ದಾರೆ. ಅವರೊಡನೆ ಇನ್ನು ಬೇರೆ ಯಾರೂ ಇಲ್ಲ. ಪರಮಹಂಸರು ನಗುಮುಖರಾಗಿ ಆತನೊಡನೆ ತಮ್ಮ ಹಿಂದಿನ ಅನುಭವಗಳನ್ನು ತಿಳಿಸುತ್ತಾ ಹೋಗುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೋಡು, ಒಂದು ದಿನ ಕಾಳೀದೇವಾಲಯದಿಂದ ಹಿಡಿದು ಪಂಚವಟಿಯವರೆಗೂ ಮಲಗಿದ್ದ ಒಂದು ಅದ್ಭುತ ಮೂರ್ತಿಯನ್ನು ಕಂಡೆ. ಇದನ್ನು ನೀನು ನಂಬುತ್ತೀಯಾ?”
ಮಾಸ್ಟರ್ ಆಶ್ಚರ್ಯಚಕಿತನಾಗಿ ಸುಮ್ಮನೆ ಇದ್ದಾನೆ. ಈಗ ಆತ ಪಂಚವಟಿಯಲ್ಲಿ ಒಂದು ಕೊಂಬೆಯಿಂದ ಒಂದೆರಡು ಎಲೆಗಳನ್ನು ಕಿತ್ತು ತನ್ನ ಜೇಬಿಗೆ ಹಾಕಿಕೊಳ್ಳುತ್ತಿದ್ದಾನೆ.
ಶ್ರೀರಾಮಕೃಷ್ಣರು: “ಅಲ್ಲಿ ನೋಡು-ಆ ಕೊಂಬೆ ಮುರಿದುಬಿದ್ದಿದೆ. ಅದರ ಕೆಳಗೆ ನಾನು ಕುಳಿತುಕೊಳ್ಳುತ್ತಿದ್ದೆ.”
ಮಾಸ್ಟರ್: “ನಾನು ಇದರಿಂದ ಒಂದು ಕೊಂಬೆ ಕಡಿದುಕೊಂಡು ಹೋಗಿ ಮನೆಯಲ್ಲಿ ನೆಟ್ಟಿದ್ದೇನೆ.”
ಶ್ರೀರಾಮಕೃಷ್ಣರು ನಗುತ್ತ: “ಏಕೆ?”
ಮಾಸ್ಟರ್: “ಅದನ್ನು ನೋಡಿದರೆ ನನಗೆ ಆನಂದವಾಗುತ್ತದೆ. ಎಲ್ಲ ಮುಗಿದ ನಂತರ ಈ ಸ್ಥಳ ಮಹಾತೀರ್ಥವಾಗುತ್ತದೆ.”
ಶ್ರೀರಾಮಕೃಷ್ಣರು ನಗುತ್ತ: “ಎಂಥ ತೀರ್ಥಸ್ಥಳ? ಪಾನಿಹಾಟಿಯ ಹಾಗೇನು?”
ಪರಮಹಂಸರು ಈಗ ಕೆಲವು ವರ್ಷಗಳಿಂದ ಪ್ರತಿವರ್ಷವೂ ಪಾನಿಹಾಟಿಯ ಮಹೋತ್ಸವಕ್ಕೆ ಹೋಗಿಬರುತ್ತಿದ್ದಾರೆ.
ಸಾಯಂಕಾಲವಾಗುತ್ತಿದೆ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಭಗವತಿಯ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಈಗ ದೇವಾಲಯಗಳಲ್ಲಿ ಮಂಗಳಾರತಿ ಆರಂಭವಾಗಿದೆ. ಶಂಖ, ಜಾಗಟೆ, ಗಂಟೆಗಳ ಧ್ವನಿ ಕೇಳಿಬರುತ್ತಿದೆ. ಇಂದಿನ ರಾತ್ರಿಯನ್ನು ಮಾಸ್ಟರ್ ಇಲ್ಲೇ ಕಳೆಯುತ್ತಾನೆ.
ಸ್ವಲ್ಪ ಹೊತ್ತಾದ ನಂತರ ಪರಮಹಂಸರು ಮಾಸ್ಟರಿಗೆ ಹೇಳಿದರು, ಭಕ್ತಮಾಲೆಯಿಂದ ತಮಗೊಂದು ಕಥೆಯನ್ನು ಓದಿ ಹೇಳುವಂತೆ.
ಮಾಸ್ಟರ್ ಈಗ ಓದುತ್ತಿದ್ದಾನೆ:
“ಒಂದು ಪ್ರದೇಶದಲ್ಲಿ ಜಯಮಲ್ ಎಂಬ ಹೆಸರಿನ ಒಬ್ಬ ದೊಡ್ಡ ಭಕ್ತನಿದ್ದ. ಆತ ಕೃಷ್ಣನಲ್ಲಿಟ್ಟಿದ್ದ ಪ್ರೀತಿ ಅನಿರ್ವಚನೀಯವಾದುದಾಗಿತ್ತು. ಕೃಷ್ಣಪೂಜೆಗೆ ಸಲ್ಲಿಸಬೇಕಾದ ಎಲ್ಲಾ ಕ್ರಿಯಾಕರ್ಮಗಳನ್ನೂ ವಿಶೇಷವಾದ ಶ್ರದ್ಧಾಭಕ್ತಿಯಿಂದ ಎಂದಿಗೂ ತಪ್ಪದ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದ. ಆ ಕೃಷ್ಣವಿಗ್ರಹವನ್ನು ಶ್ಯಾಮಲಸುಂದರ ಎಂಬ ಹೆಸರಿನಿಂದ ಪೂಜಿಸುತ್ತಿದ್ದ. ಸಂಪೂರ್ಣವಾಗಿ ತನ್ನ ಇಷ್ಟದೇವನಲ್ಲೇ ತೃಪ್ತನಾಗಿದ್ದುದರಿಂದ ಆತ ತನ್ನ ಮನಸ್ಸನ್ನು ಬೇರೆ ಯಾವ ದೇವದೇವಿಯರ ಕಡೆಗೂ ಹರಿಸುತ್ತಿರಲಿಲ್ಲ. ಶ್ಯಾಮಲಸುಂದರನ ಪೂಜೆ-ಪುರಸ್ಕಾರಗಳಲ್ಲಿ ದಿನವೂ ಬಹುಮಟ್ಟಿಗೆ ಮಧ್ಯಾಹ್ನದವರೆಗೆ ತಾನು ನಿರತನಾಗಿರ ಬೇಕೆಂಬುದೇ ಆತನ ಅಚಲ ನಿಷ್ಠೆ. ರಾಜ್ಯ, ಧನ ಕಳೆದುಕೊಳ್ಳಬೇಕಾಗಿ ಬಂದರೂ ಸ್ವಲ್ಪವೂ ಹೆದರದೆ ತನ್ನ ಈ ನಿಷ್ಠೆಯನ್ನು ಪರಿಪಾಲಿಸಿಕೊಂಡು ಬರುತ್ತಿದ್ದ. ಇದು ಶತ್ರುರಾಜನಿಗೆ ಗೊತ್ತಾಗಿ, ಆತ ದಂಡೆತ್ತಿ ಬಂದು ಬೆಳಗಿನ ವೇಳೆ ಪಟ್ಟಣವನ್ನು ಮುತ್ತಿದ. ಜಯಮಲ್ಲನಿಂದ ಆಜ್ಞೆ ಬಾರದಿದ್ದುದರಿಂದ, ಆತನ ಸೇನೆ ಶತ್ರುರಾಜನನ್ನು ಎದುರಿಸಲಿಲ್ಲ; ಆದ್ದರಿಂದ ಶತ್ರುರಾಜ ಪಟ್ಟಣವನ್ನು ಮುತ್ತಿರುವುದನ್ನು ಸುಮ್ಮನೆ ನೋಡಲಾರಂಭಿಸಿತು. ಶತ್ರುವಿನ ಸೇನೆ ಸಾವಕಾಶವಾಗಿ ರಾಜಧಾನಿಯ ಕಂದಕವನ್ನು ಸುತ್ತುಗಟ್ಟಿತು; ಆದರೂ ಜಯಮಲ್ಲ ಪೂಜಾ ಗೃಹವನ್ನು ಬಿಟ್ಟು ಹೊರಕ್ಕೆ ಬರಲಿಲ್ಲ. ಜಯಮಲ್ಲನ ತಾಯಿ ಆತನನ್ನು ಸಮೀಪಿಸಿ ಬಹಳವಾಗಿ ಅಳುತ್ತ ಶತ್ರುವನ್ನು ಎದುರಿಸುವಂತೆ ಕೇಳಿಕೊಂಡಳು. ಆತ ಶಾಂತವಾಗಿಯೇ ಆಕೆಗೆ ಹೇಳಿದ: “ಏಕಮ್ಮ, ಇಷ್ಟೊಂದು ದುಃಖಿಸುತ್ತೀಯೆ? ಈ ರಾಜ್ಯವನ್ನು ಶ್ಯಾಮಲ ಸುಂದರ ನನಗೆ ಕೊಟ್ಟ. ಆತನೇನಾದರೂ ನನ್ನಿಂದ ಕಿತ್ತುಕೊಂಡುಬಿಡಬೇಕೆಂದು ಇಚ್ಛೆ ಪಟ್ಟುದೇ ಆದರೆ ನಾನು ಏನು ಮಾಡಲು ತಾನೆ ಸಾಧ್ಯವಾದೀತು? ಆದರೆ ಆತ ನನ್ನನ್ನು ರಕ್ಷಿಸಿದ್ದೇ ಆದರೆ ಯಾರೂ ನನಗೇನೂ ಮಾಡಲಾರರು. ಬರಿದೆ ನಮ್ಮ ಪ್ರಯತ್ನ ವ್ಯರ್ಥ!”
ಇಷ್ಟರಲ್ಲಿ ವಾಸ್ತವಿಕವಾಗಿಯೂ ಶ್ಯಾಮಲಸುಂದರನೇ ಶಸ್ತ್ರಸಜ್ಜಿತನಾಗಿ ದೊರೆಯ ಕುದುರೆಯನ್ನು ಹತ್ತಿ ಯುದ್ಧರಂಗಕ್ಕೆ ಹೋಗಿಬಿಟ್ಟಿದ್ದ. ಅಲ್ಲಿ ತಾನೊಬ್ಬನೇ ಶತ್ರುರಾಜನನ್ನು ಎದುರಿಸಿ, ಆತನ ಸೇನೆಯನ್ನೆಲ್ಲಾ ಧ್ವಂಸಮಾಡಿಬಿಟ್ಟ. ಸಂಪೂರ್ಣವಾಗಿ ನಾಶ ಮಾಡಿದ ನಂತರ ಶ್ಯಾಮಲಸುಂದರ ದೇವಾಲಯಕ್ಕೆ ಹಿಂದಿರುಗಿ ಬಂದು ಕುದುರೆಯನ್ನು ಅದರ ಹತ್ತಿರ ಕಟ್ಟಿಹಾಕಿದ.
ಜಯಮಲ್ಲ ಪೂಜೆಯನ್ನು ಮುಗಿಸಿದ ನಂತರ ಹೊರಗೆ ಬಂದು ನೋಡುತ್ತಾನೆ, ತನ್ನ ಕುದುರೆ ಬೆವರಿನಿಂದ ಪೂರ್ಣವಾಗಿ ತೊಯ್ದುಹೋಗಿದೆ ಮತ್ತು ಸುಮ್ಮನೆ ಏದುತ್ತಿದೆ. ಆತ ವಿಚಾರಿಸಿದ: “ನನ್ನ ಕುದುರೆಯನ್ನು ಹತ್ತಿಹೋಗಿದ್ದವರು ಯಾರು? ಯಾರು ಅದನ್ನು ತಂದು ಇಲ್ಲಿ ಕಟ್ಟಿಹಾಕಿದರು?” ಅಧಿಕಾರಿಗಳು ಆತನಿಗೆ ತಿಳಿಸಿದರು, ತಮಗೆ ಇದರ ಸಂಬಂಧವಾಗಿ ಏನೂ ಗೊತ್ತಿಲ್ಲ ಎಂದು. ದೊರೆ ಚಿಂತಾಕ್ರಾಂತನಾಗಿ ತನ್ನ ಸೇನೆಯೊಡನೆ ಯುದ್ಧರಂಗಕ್ಕೆ ಹೋದ. ಅಲ್ಲಿ ಅವನ ಆಶ್ಚರ್ಯಕ್ಕೆ ಶತ್ರುರಾಜ ಒಬ್ಬ ವಿನಾ ಉಳಿದವರೆಲ್ಲಾ ಸತ್ತುಬಿದ್ದಿದ್ದಾರೆ. ಜಯಮಲ್ಲ ಈ ಅದ್ಭುತ ಕಾರ್ಯದ ರಹಸ್ಯವನ್ನರಿಯಲಾರದೆ ಬಿಟ್ಟ ಕಣ್ಣು ಬಿಟ್ಟ ಹಾಗೆ ತನ್ನೆದುರಿಗೆ ಕಾಣುತ್ತಿರುವ ದೃಶ್ಯವನ್ನು ನೋಡಲಾರಂಭಿಸಿದ. ಅಷ್ಟರಲ್ಲಿ ಶತ್ರುರಾಜ ಜಯಮಲ್ಲನನ್ನು ಸಮೀಪಿಸಿ, ಆತನಿಗೆ ಸಾಷ್ಟಾಂಗ ಪ್ರಾಣಾಮಮಾಡಿ ಹೇಳಿದ: “ನನ್ನ ಆಂತರ್ಯದಲ್ಲಿರುವುದನ್ನು ನಿವೇದಿಸಿಕೊಳ್ಳಲು ನೀವು ನನಗೆ ಅನುಮತಿಯನ್ನೀಯಬೇಕು. ನಾನು ಯುದ್ಧಮಾಡುವ ಬಗೆ ಹೇಗೆ? ನಿಮ್ಮ ಹತ್ತಿರ ಇಡೀ ವಿಶ್ವವನ್ನೇ ಗೆಲ್ಲಬಲ್ಲ ಯೋಧನಿದ್ದಾನೆ. ನನಗೆ ನಿಮ್ಮ ರಾಜ್ಯವೇ ಆಗಲಿ, ಧನಕನಕಾದಿಗಳೇ ಆಗಲಿ ಬೇಕಾಗಿಲ್ಲ; ನೀವು ನಿಮ್ಮ ಆ ಸ್ನೇಹಿತ ಇದ್ದಾನಲ್ಲ, ಆ ನೀಲಿ ಬಣ್ಣದ ಯೋಧ, ಆತನ ಸಂಬಂಧವಾಗಿ ತಿಳಿಸುವುದಾದರೆ ನಾನು ಖಂಡಿತವಾಗಿಯೂ ನನ್ನ ರಾಜ್ಯವನ್ನು ನಿಮಗೆ ಕೊಟ್ಟುಬಿಡುತ್ತೇನೆ. ನಾನು ಆತನ ಕಡೆ ನನ್ನ ಕಣ್ಣು ಹಾಕುವುದೇ ತಡ, ಆತ ನನ್ನ ಹೃದಯ ಮತ್ತು ಜೀವವನ್ನು ವಶಮಾಡಿಕೊಂಡುಬಿಟ್ಟ.”
ಆಗ ಜಯಮಲ್ಲನಿಗೆ ಅರ್ಥವಾಯಿತು, ಯುದ್ಧರಂಗಕ್ಕೆ ಬಂದಿದ್ದವನು ಶ್ಯಾಮಲ ಸುಂದರನಲ್ಲದೆ ಇನ್ನು ಬೇರೆ ಯಾರೂ ಅಲ್ಲ ಎಂದು. ಶತ್ರುರಾಜನಿಗೂ ವಾಸ್ತವಿಕತೆ ಗೊತ್ತಾಯಿತು. ಆಗ ಆತ ಜಯಮಲ್ಲನಿಗೆ ಸಾಷ್ಟಾಂಗ ಪ್ರಣಾಮಮಾಡಿ, ಆತನ ಆಶೀರ್ವಾದ ವನ್ನು ಪಡೆದುಕೊಂಡು ಶ್ರೀಕೃಷ್ಣನ ಕೃಪೆಗೆ ಪಾತ್ರನಾದ.
ಶ್ರೀರಾಮಕೃಷ್ಣರು: “ನಿನಗೆ ಇವುಗಳಲ್ಲಿ ನಂಬಿಕೆ ಇದೆಯೇ? ಶ್ರೀಕೃಷ್ಣ ಕುದುರೆಯನ್ನು ಹತ್ತಿಹೋಗಿ ಜಯಮಲ್ಲನ ಶತ್ರುಸೇನೆಯನ್ನು ನಾಶಮಾಡಿ ಬಂದುದನ್ನು ನೀನು ನಂಬುತ್ತೀಯಾ?”
ಮಾಸ್ಟರ್: “ಜಯಮಲ್ಲ ಶ್ರೀಕೃಷ್ಣನನ್ನು ಅತ್ಯಂತ ವ್ಯಾಕುಲ ಹೃದಯದಿಂದ ಪ್ರಾರ್ಥನೆ ಮಾಡಿದ ಎಂಬುದನ್ನು ನಂಬುತ್ತೇನೆ. ಶ್ರೀಕೃಷ್ಣ ಕುದುರೆಯನ್ನು ಹತ್ತಿ ಅಲ್ಲಿಗೆ ಬಂದುದನ್ನು ಶತ್ರುರಾಜ ನಿಜವಾಗಿ ನೋಡಿದನೇ ಎಂಬುದರಲ್ಲಿ ಸಂದೇಹವುಂಟಾಗುತ್ತಿದೆ. ಶ್ರೀಕೃಷ್ಣ ನೇನೋ ಸವಾರನಾಗಿ ಅಲ್ಲಿಗೆ ಬಂದಿದ್ದರೂ ಬಂದಿರಬಹುದು. ಆದರೆ ಅವರು ಆತನನ್ನು ನಿಜವಾಗಿ ನೋಡಿದರೇ ಎಂಬ ಸಂದೇಹ ನನಗೆ.”
ಶ್ರೀರಾಮಕೃಷ್ಣರು ನಗುತ್ತ: “ಈ ಪುಸ್ತಕದಲ್ಲಿ ಭಕ್ತರ ಅನೇಕ ಒಳ್ಳೆ ಕಥೆ ಇವೆ. ಆದರೆ ಎಲ್ಲಾ ಒಂದು ಸ್ವರದವೇ. ಅನ್ಯಮತದವರ ನಿಂದೆ ಈ ಪುಸ್ತಕದಲ್ಲಿದೆ.”
ಮಾರನೆಯ ಪ್ರಾತಃಕಾಲ ಪರಮಹಂಸರು ಮತ್ತು ಮಾಸ್ಟರ್ ಉದ್ಯಾನಪಥದಲ್ಲಿ ನಿಂತು ಮಾತುಕತೆಯಾಡುತ್ತಿದ್ದಾರೆ.
ಮಾಸ್ಟರ್: “ಹಾಗಾದರೆ, ನಾನು ಇಲ್ಲೇ ಬಂದು ಇದ್ದುಬಿಡುತ್ತೇನೆ.”
ಶ್ರೀರಾಮಕೃಷ್ಣರು: “ಒಳ್ಳೇದು, ನೀನು ಇಲ್ಲಿಗೆ ಇಷ್ಟೊಂದಾಗಿ ಬರುತ್ತಾ ಇದ್ದೀಯಲ್ಲಾ, ಇದರ ಅರ್ಥವೇನು? ಜನರು ಸಾಧುಗಳನ್ನು ಎಲ್ಲೋ ಒಂದು ಸಲ ಬಂದು ನೋಡಿ ಹೋಗುತ್ತಾರೆ. ಆದರೆ ನೀನು ಇಲ್ಲಿಗೆ ಅಡಿಗಡಿಗೆ ಬರುತ್ತಾ ಇದ್ದೀಯಲ್ಲ, ಇದರ ಉದ್ದೇಶವೇನು?”
ಮಾಸ್ಟರ್ ಸುಮ್ಮನೆ ನಿಂತಿದ್ದಾನೆ. ಪರಮಹಂಸರೇ ತಮ್ಮ ಪ್ರಶ್ನೆಗೆ ಉತ್ತರವೀಯುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೀನು ನನ್ನ ಅಂತರಂಗಕ್ಕೆ ಸೇರಿಲ್ಲದವನಾಗಿದ್ದರೆ ಇಷ್ಟೊಂದಾಗಿ ಇಲ್ಲಿಗೆ ಬರುತ್ತಾ ಇದ್ದೆಯಾ? ಅಂತರಂಗದವರು ಎಂದರೆ ಸಂಬಂಧಿಗಳು; ತಂದೆ, ತಾಯಿ, ಮಗು, ಸೋದರಿಯರ ಹಾಗೆ ಸ್ವಂತದವರು.
“ಎಲ್ಲವನ್ನೂ ಹೇಳಿಬಿಡುತ್ತಿಲ್ಲ. ಹಾಗೆ ಮಾಡಿಬಿಟ್ಟರೆ ನೀನು ಮತ್ತೆ ಇಲ್ಲಿಗೆ ಬರುತ್ತೀಯೇನು?”
“ಶುಕದೇವ ಬ್ರಹ್ಮಜ್ಞಾನವನ್ನು ಪಡೆದುಕೊಳ್ಳಲು ಜನಕರಾಜನನ್ನು ಸಮೀಪಿಸಿದ. ಜನಕ ಆತನಿಗೆ ಹೇಳಿದ: ‘ಮೊದಲು ಗುರುದಕ್ಷಿಣೆ ಕೊಟ್ಟುಬಿಡು.’ ಅದಕ್ಕೆ ಶುಕದೇವ ಹೇಳಿದ: ‘ಉಪದೇಶ ಪಡೆಯದೆ ಗುರುದಕ್ಷಿಣೆ ಕೊಡುವ ಬಗೆ ಹೇಗೆ?’ ಜನಕರಾಜ ಆಗ ನಗುತ್ತ ನಗುತ್ತ ಹೇಳಿದ: ‘ನಿನಗೆ ಬ್ರಹ್ಮಜ್ಞಾನ ದೊರೆತುಬಿಟ್ಟದ್ದೇ ಆದರೆ, ಬಳಿಕ ನಿನ್ನಲ್ಲಿ ಗುರು-ಶಿಷ್ಯ ಬೋಧೆ ಉಳಿಯುವುದೆ? ಅದಕ್ಕಾಗಿಯೇ ನಾನು ಮೊದಲೇ ಗುರುದಕ್ಷಿಣೆ ಕೇಳಿದ್ದು.’”
ಈಗ ರಾತ್ರಿ. ಚಂದ್ರೋದಯವಾಗಿದೆ. ಮಾಸ್ಟರ್ ಕಾಳೀದೇವಾಲಯದ ಉದ್ಯಾನಪಥ ದಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದಾನೆ. ಪಥದ ಒಂದು ಕಡೆಯಲ್ಲಿ ಪರಮಹಂಸರ ಕೊಠಡಿ, ನಹಬತ್ಖಾನೆ, ಬಕುಳ ತೋಪು, ಪಂಚವಟಿ ಇವೆ. ಇನ್ನೊಂದು ಕಡೆಯಲ್ಲಿ ಭಾಗೀರಥಿ ಜ್ಯೋತ್ಸ್ನಾಮಯಿಯಾಗಿ ಹರಿಯುತ್ತಿದ್ದಾಳೆ.
ಮಾಸ್ಟರ್ ತನಗೆ ತಾನೇ: “ಏನು ನಿಜವಾಗಿಯೂ ಭಗವಂತನನ್ನು ದರ್ಶನ ಮಾಡಲು ಸಾಧ್ಯವೇ? ಪರಮಹಂಸರೇನೋ ಹೇಳುತ್ತಿದ್ದಾರೆ ಸಾಧ್ಯ ಅಂತ. ಅವರು ಹೇಳುತ್ತಿದ್ದಾರೆ, ಏನಾದರೂ ಸ್ವಲ್ಪ ಸಾಧನೆಯನ್ನು ಮಾಡಿದ್ದೇ ಆದರೆ, ಯಾರಾದರೂ ಬಂದು, ‘ಹೀಗೆ, ಹೀಗೆ’ ಅಂತ ಹೇಳಿಕೊಟ್ಟುಬಿಡುತ್ತಾರೆ ಎಂದು. ಎಂದರೆ ಸಾಧನೆಯ ವಿಷಯವಾಗಿ ಅವರು ಸ್ವಲ್ಪ ಹೇಳಿಕೊಟ್ಟಂತೆಯೇ ಆಯಿತು. ಒಳ್ಳೇದು, ನಾನೊಬ್ಬ ವಿವಾಹಿತ ಮನುಷ್ಯ. ಮಕ್ಕಳು ಮರಿ ಇವೆ. ಆದರೂ ನನಗೆ ಭಗವಂತನ ಸಾಕ್ಷಾತ್ಕಾರ ದೊರಕುವುದೇ?”
ಮಾಸ್ಟರ್ ಸ್ವಲ್ಪ ಹೊತ್ತು ಹಾಗೇ ಯೋಚಿಸಿ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ಖಂಡಿತ ಸಾಧ್ಯ. ಇಲ್ಲದಿದ್ದರೆ ಪರಮಹಂಸರು ಹಾಗೆ ಏಕೆ ಹೇಳುತ್ತಿದ್ದರು? ಭಗವಂತ ಕೃಪೆಮಾಡುವುದಾದರೆ ಸಾಧ್ಯವಾಗದೆ ಏನು?
“ನನ್ನ ಸುತ್ತ ಈ ಜಗತ್ತು ಇದೆ-ಸೂರ್ಯ, ಚಂದ್ರ, ನಕ್ಷತ್ರ, ಜೀವ, ಚತುರ್ವಿಂಶತಿ ತತ್ತ್ವ ಇವುಗಳಿಂದ ಕೂಡಿದೆ. ಇವೆಲ್ಲದರ ಬಗೆ ಹೇಗೆ? ಇವುಗಳ ಸೃಷ್ಟಿಕರ್ತ ಯಾರು? ನನಗೂ ಆತನಿಗೂ ಸಂಬಂಧವೇನು? ಇವನ್ನೆಲ್ಲಾ ಅರಿಯದಿದ್ದರೆ ಬರಿದೆ ವ್ಯರ್ಥ.
“ಪರಮಹಂಸರು ಪುರುಷಶ್ರೇಷ್ಠರು. ನನ್ನ ಇಡೀ ಜೀವನದಲ್ಲಿ ಇದುವರೆಗೆ ಇಂಥ ಮಹಾಪುರುಷರನ್ನು ನಾನು ಕಂಡಿಲ್ಲ. ಇವರು ನಿಸ್ಸಂದೇಹವಾಗಿ ಭಗವಂತನ ದರ್ಶನ ಪಡೆದಿದ್ದಾರೆ. ಇಲ್ಲದಿದ್ದರೆ ‘ತಾಯಿ, ತಾಯಿ’ ಎಂದು ಸಂಬೋಧಿಸುತ್ತಾ ಹಗಲೂ ಇರುಳೂ ಮಾತಾಡುತ್ತಿದ್ದಾರಲ್ಲ ಮತ್ತೆ ಯಾರೊಡನೆ? ಇಲ್ಲದಿದ್ದರೆ ಇವರಿಗೆ ಭಗವಂತನಲ್ಲಿ ಪ್ರೀತಿ ಇಷ್ಟೊಂದು ಉಂಟಾಗಲು ಕಾರಣವೇನು? ಭಗವಂತನಲ್ಲಿನ ಇವರ ಪ್ರೀತಿ ಅಷ್ಟೊಂದು ಮಹತ್ತಾದ್ದು, ಇವರು ಬಾಹ್ಯಜ್ಞಾನಶೂನ್ಯರಾಗಿಬಿಡುತ್ತಾರೆ. ಸಮಾಧಿಸ್ಥರಾಗಿ ಜಡವಸ್ತು ವಿನಂತಾಗಿಬಿಡುತ್ತಾರೆ. ಇನ್ನು ಕೆಲವು ವೇಳೆ ಪ್ರೇಮೋನ್ಮತ್ತರಾಗಿ ನಗುತ್ತಾರೆ, ಅಳುತ್ತಾರೆ, ಹಾಡುತ್ತಾರೆ.”
೧೪ನೆ ಡಿಸೆಂಬರ್ ೧೮೮೩, ಮಾರ್ಗಶಿರ ಪೂರ್ಣಿಮೆ, ಶುಕ್ರವಾರ
ಘಂಟೆ ಒಂಬತ್ತು. ಪರಮಹಂಸರು ತಮ್ಮ ಕೊಠಡಿಯ ಆಗ್ನೇಯ ವರಾಂಡದಲ್ಲಿ ಬಾಗಿಲ ಹತ್ತಿರ ನಿಂತಿದ್ದಾರೆ. ರಾಮಲಾಲ ಅವರ ಹತ್ತಿರ ನಿಂತಿದ್ದಾನೆ. ರಾಖಾಲ, ಲಾಟು ಅವರ ಹತ್ತಿರ ಸುಮ್ಮನೆ ಸುತ್ತಾಡುತ್ತಿದ್ದಾರೆ. ಮಾಸ್ಟರ್ ಅಲ್ಲಿಗೆ ಬಂದು ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮಮಾಡಿದ. ಪರಮಹಂಸರು ಆನಂದದಿಂದ ಹೇಳಿದರು: “ಬಂದೆಯಾ? ಇಂದು ಒಳ್ಳೇ ಶುಭದಿನ.”
ಇಂದು ಬಂಗಾಳಿ ತಿಂಗಳ ಕೊನೆಯ ದಿನ. ಜೊತೆಗೆ ಪೂರ್ಣಿಮೆ ಬೇರೆ. ಮಾಸ್ಟರ್ ಇಂದು ಇಲ್ಲಿಗೆ ಬಂದಿರುವುದರ ಉದ್ದೇಶ ಪರಮಹಂಸರೊಡನೆ ಕೆಲವು ದಿನಗಳನ್ನು ಕಳೆದು ಸಾಧನೆಯಲ್ಲಿ ತೊಡಗಬೇಕು ಅಂತ. ಪರಮಹಂಸರು ಆತನಿಗೆ ಹೇಳಿದ್ದಾರೆ: “ಏನಾದರೂ ಸ್ವಲ್ಪ ಸಾಧನೆ ಮಾಡಿದ್ದೇ ಆದರೆ, ಯಾರಾದರೂ ಬಂದು ‘ಹೀಗೆ ಹೀಗೆ’ ಅಂತ ಹೇಳಿಕೊಟ್ಟು ಬಿಡುತ್ತಾರೆ.”
ಪರಮಹಂಸರು ಮಾಸ್ಟರಿಗೆ ಹೇಳಿದ್ದಾರೆ: “ನೀನು ಅತಿಥಿಶಾಲೆಯಲ್ಲಿ ದಿನವೂ ಊಟ ಮಾಡುವುದು ಸರಿಯಲ್ಲ. ಅದನ್ನು ಏರ್ಪಡಿಸಿರುವುದು ಸಾಧುಗಳಿಗೆ ಮತ್ತು ಭಿಕ್ಷುಗಳಿಗೆ, ನಿನ್ನ ಊಟಕ್ಕಾಗಿ ಒಬ್ಬ ಅಡಿಗೆಯವನನ್ನು ಕರೆದುಕೊಂಡು ಬಾ.” ಮಾಸ್ಟರ್ ಆ ರೀತಿಯಾಗಿಯೇ ಒಬ್ಬ ಅಡಿಗೆಯವನನ್ನು ಕರೆದುಕೊಂಡು ಬಂದಿದ್ದಾನೆ. ಪರಮಹಂಸರು ಅಡಿಗೆಮಾಡಲು ಆತನಿಗೆ ಒಂದು ಸ್ಥಳವನ್ನು ಏರ್ಪಡಿಸಿಕೊಟ್ಟರು. ಈಗ ರಾಮಲಾಲನಿಗೆ ಹೇಳುತ್ತಿದ್ದಾರೆ, ಮಾಸ್ಟರಿಗೆ ಹಾಲಿನ ವ್ಯವಸ್ಥೆ ಮಾಡುವ ಹಾಗೆ.
ಸ್ವಲ್ಪ ಹೊತ್ತಾದ ನಂತರ ರಾಮಲಾಲ ಅಧ್ಯಾತ್ಮರಾಮಾಯಣದಿಂದ ಓದಲಾರಂಭಿಸಿದ. ಪರಮಹಂಸರು ಮತ್ತು ಮಾಸ್ಟರ್ ಅದನ್ನು ಕೇಳುತ್ತಿದ್ದಾರೆ:
ರಾಮಚಂದ್ರ ಸೀತೆಯನ್ನು ವಿವಾಹಮಾಡಿಕೊಂಡು ಅಯೋಧ್ಯೆಗೆ ಹಿಂದಿರುಗಿ ಬರುತ್ತಿದ್ದಾಗ ದಾರಿಯಲ್ಲಿ ಪರಶುರಾಮನನ್ನು ಸಂಧಿಸಿದ. ರಾಮಚಂದ್ರ ಹರಧನುಸ್ಸನ್ನು ಮುರಿದಿದ್ದಾನೆ ಎಂಬುದನ್ನು ಕೇಳಿದ ನಂತರ ಪರಶುರಾಮ ಆತನಿಗೆ ತೊಂದರೆ ತಂದೊಡ್ಡಲು ಸಿದ್ಧನಾಗಿರುವುದನ್ನು ನೋಡಿ ದಶರಥ ಭಯದಿಂದ ಸುಮ್ಮನೆ ಕಂಪಿಸಲಾರಂಭಿಸಿದ. ಪರಶುರಾಮ ಒಂದು ಧನುಸ್ಸನ್ನು ರಾಮನ ಮುಂದೆ ಬಿಸಾಡಿ ಅದಕ್ಕೆ ಹೆದೆ ಕಟ್ಟುವ ಹಾಗೆ ಹೇಳಿದ. ರಾಮ ಕಿಂಚಿತ್ ನಕ್ಕು ಆ ಧನುಸ್ಸನ್ನು ತನ್ನ ಎಡಗೈಯಲ್ಲಿ ಎತ್ತಿಕೊಂಡು ಹೆದೆಯೇರಿಸಿ ಟಂಕಾರ ಮಾಡಿದ; ಅನಂತರ ಧನುಸ್ಸಿಗೆ ಬಾಣವನ್ನು ಹೂಡಿ ಪರಶುರಾಮನನ್ನು ಕೇಳಿದ, ಎಲ್ಲಿಗೆ ಬಿಡಬೇಕು ಎಂದು. ಆಗ ಪರಶುರಾಮನ ಅಹಂಕಾರ ಸಂಪೂರ್ಣವಾಗಿ ಚೂರ್ಣವಾಗಿ ಹೋಯಿತು. ಬಳಿಕ ಆತ ಶ್ರೀರಾಮಚಂದ್ರ ಪರಬ್ರಹ್ಮನೇ ಎಂದು ಭಾವಿಸಿ ಆತನನ್ನು ಸ್ತೋತ್ರ ಮಾಡಲಾರಂಭಿಸಿದ.
ಪರಶುರಾಮನ ಸ್ತೋತ್ರವನ್ನು ಕೇಳುತ್ತ ಕೇಳುತ್ತ ಇದ್ದಹಾಗೇ ಪರಮಹಂಸರು ಭಾವಾವಿಷ್ಟರಾಗಿಬಿಟ್ಟಿದ್ದಾರೆ. ಆಗಾಗ ರಾಮನಾಮವನ್ನು ತಮ್ಮ ಮಧುರಕಂಠದಿಂದ ಉಚ್ಚರಿಸುತ್ತಿದ್ದಾರೆ.
ಬಳಿಕ ಪರಮಹಂಸರು ರಾಮಲಾಲನಿಗೆ ಚಂಡಾಲ ಗುಹಕನ ಸಂಬಂಧವಾಗಿ ಓದುವಂತೆ ಹೇಳಿದರು. ರಾಮಲಾಲ ಓದುತ್ತಿದ್ದಾನೆ:
ಚಂಡಾಲ ಗುಹಕ ಶ್ರೀರಾಮಚಂದ್ರನ ಗೆಳೆಯ. ಪಿತೃವಾಕ್ಯಪರಿಪಾಲನೆಗಾಗಿ ಶ್ರೀರಾಮಚಂದ್ರ ಸೀತೆ ಮತ್ತು ಲಕ್ಷ್ಮಣರೊಡನೆ ವನಕ್ಕೆ ತೆರಳುತ್ತಿದ್ದಾಗ, ಆತ ಅವರನ್ನು ತನ್ನ ದೋಣಿಯಲ್ಲಿ ಕೂರಿಸಿ ಸರಯೂ ನದಿಯನ್ನು ದಾಟಿಸಿದ. ರಾಮ ಆತನನ್ನು ಆಲಿಂಗನ ಮಾಡಿಕೊಂಡು ಹೇಳಿದ: ತಾನು ವಲ್ಕಲವನ್ನು ಉಟ್ಟು, ಗೆಡ್ಡೆ ಗೆಣಸು ತಿಂದುಕೊಂಡು ಹದಿನಾಲ್ಕು ವರ್ಷ ವನವಾಸ ಮಾಡಬೇಕಾಗಿದೆ; ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗುವಾಗ ತಾನು ಬಂದು ಆತನನ್ನು ನೋಡುವುದಾಗಿ. ಗುಹಕ ಅಷ್ಟು ಕಾಲವನ್ನೂ ಆತನಿಗಾಗಿ ಎದುರು ನೋಡುತ್ತಲೇ ಶಾಂತತೆಯಿಂದ ಕಳೆದ. ಆದರೆ ಹದಿನಾಲ್ಕು ವರ್ಷ ಮುಗಿದ ಮೇಲೂ ರಾಮ ಬಾರದಿರುವುದನ್ನು ನೋಡಿ ಗುಹಕ ಅಗ್ನಿಪ್ರವೇಶ ಮಾಡಲು ಸಿದ್ಧನಾಗಲಾರಂಭಿಸಿದ. ಆತ ಇನ್ನೇನು ಅಗ್ನಿಪ್ರವೇಶ ಮಾಡಬೇಕು, ಅಷ್ಟರಲ್ಲಿ ಹನುಮಂತ ಬಂದು ರಾಮನ ಸಮಾಚಾರ ಕೊಟ್ಟ. ರಾಮಚಂದ್ರ ಮತ್ತು ಸೀತೆ, ಪುಷ್ಪಕವಿಮಾನದಲ್ಲಿ ಕುಳಿತು ಅಲ್ಲಿಗೆ ಬಂದರು. ಆಗ ಗುಹಕನ ಆನಂದಕ್ಕೆ ಎಣೆಯೇ ಇಲ್ಲದೆ ಹೋಯಿತು.
ಮಧ್ಯಾಹ್ನದ ಊಟವಾದನಂತರ ಪರಮಹಂಸರು ತಮ್ಮ ಹಾಸಿಗೆಯ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಮಾಸ್ಟರ್ ಹತ್ತಿರದಲ್ಲೇ ನೆಲದ ಮೇಲೆ ಕುಳಿತಿದ್ದಾನೆ. ಸ್ವಲ್ಪ ಹೊತ್ತಿನೊಳಗೇ ಡಾಕ್ಟರ್ ಶ್ಯಾಮ ಮತ್ತು ಕೆಲವು ಮಂದಿ ಭಕ್ತರು ಕೊಠಡಿಯನ್ನು ಪ್ರವೇಶಿಸಿದರು. ಈಗ ಪರಮಹಂಸರು ಎದ್ದು ಕುಳಿತು ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಸರ್ವದಾ ಕರ್ಮಗಳನ್ನು ಮಾಡಿಕೊಂಡು ಹೋಗುತ್ತಲೇ ಇರಬೇಕಾದ ಆವಶ್ಯಕತೆಯೇನಿರುವುದಿಲ್ಲ. ಕಾಯಿ ಕಚ್ಚಿದ ಮೇಲೆ ಹೂವು ತಾನಾಗಿಯೆ ಉದುರಿಹೋಗುವ ಹಾಗೆ, ಭಗವದ್ದರ್ಶನವಾದನಂತರ ಕರ್ಮಗಳು ತಾವಾಗಿಯೆ ನಿಂತು ಹೋಗುತ್ತವೆ.
“ಯಾರಿಗೆ ಭಗವಂತನ ಸಾಕ್ಷಾತ್ಕಾರ ದೊರೆತಿದೆಯೋ ಆತನಿಗೆ ಸಂಧ್ಯಾವಂದನಾದಿ ಕರ್ಮಗಳು ಇರುವುದಿಲ್ಲ. ಆತನ ವಿಷಯದಲ್ಲಿ ಸಂಧ್ಯಾವಂದನೆ ಗಾಯತ್ರಿಯಲ್ಲಿ ಲೀನವಾಗು ತ್ತದೆ. ಅದು ಹಾಗಾದಾಗ ಗಾಯತ್ರಿಯನ್ನು ಜಪಿಸಿದರೇ ಬೇಕಾದಷ್ಟು. ಬಳಿಕ ಗಾಯತ್ರಿ ಓಂಕಾರದಲ್ಲಿ ಲಯವಾಗುತ್ತದೆ. ಅದಾದನಂತರ ಗಾಯತ್ರಿಯನ್ನು ಜಪಿಸಬೇಕಾದ ಆವಶ್ಯಕತೆ ಯೇನಿರುವುದಿಲ್ಲ; ಆಗ ಕೇವಲ “ಓಂ” ಎಂದು ಜಪಿಸುತ್ತಿದ್ದರೇ ಸಾಕು. ಸಂಧ್ಯಾವಂದನಾದಿ ಕರ್ಮಗಳು ಎಲ್ಲಿಯವರೆಗೆ? ಹರಿನಾಮ ಅಥವಾ ರಾಮನಾಮೋಚ್ಚಾರಣೆಯಿಂದ ಪುಲಕ ವುಂಟಾಗುವುದಿಲ್ಲವೋ, ಪ್ರೇಮಾಶ್ರು ಸುರಿಯುವುದಿಲ್ಲವೊ ಅಲ್ಲಿಯವರೆಗೆ. ಜನ ಹಣಕಾಸು ಗಳಿಗಾಗಿ, ವ್ಯಾಜ್ಯ ಗೆಲ್ಲುವುದಕ್ಕಾಗಿ, ಪೂಜಾದಿ ಕರ್ಮಗಳಲ್ಲಿ ತೊಡಗುತ್ತಾರೆ. ಇದು ಒಳ್ಳೆಯದಲ್ಲ.”
ಒಬ್ಬ ಭಕ್ತ: “ಹಣಕಾಸುಗಳಿಗಾಗಿ ಪ್ರತಿಯೊಬ್ಬನೂ ಪ್ರಯತ್ನಮಾಡುತ್ತಿದ್ದಾನೆ. ನೋಡಿ, ಕೇಶವಸೇನನೂ ಹೇಗೆ ತನ್ನ ಮಗಳನ್ನು ರಾಜನಿಗೆ ಕೊಟ್ಟು ಮದುವೆಮಾಡಿದ.”
ಶ್ರೀರಾಮಕೃಷ್ಣರು : “ಕೇಶವಸೇನನ ವಿಚಾರವೇ ಬೇರೆ. ಯಾರು ನಿಜವಾದ ಭಕ್ತನೊ, ಆತ ಪ್ರಯತ್ನಮಾಡದೆ ಇದ್ದರೂ ಭಗವಂತ ಆತನ ಆವಶ್ಯಕತೆಗಳನ್ನೆಲ್ಲಾ ದೊರಕಿಸಿಕೊಟ್ಟು ಬಿಡುತ್ತಾನೆ. ಯಾರು ನಿಜವಾಗಿಯೂ ರಾಜನ ಮಗನೊ, ಆತನಿಗೆ ತಿಂಗಳ ತಿಂಗಳ ಭತ್ಯೆ ತಾನಾಗಿಯೇ ದೊರೆಯುತ್ತದೆ. ಬಹಳವಾಗಿ ದುಡಿದು, ದಾಸತ್ವ ಮಾಡಿ ಹಣ ಸಂಪಾದಿಸುತ್ತಾರಲ್ಲ, ಅಂಥ ವಕೀಲ ಮುಂತಾದವರ ವಿಷಯವಾಗಿ ನಾನು ಹೇಳುತ್ತಿಲ್ಲ. ನಾನು ಹೇಳುತ್ತಿರುವುದು ನಿಜವಾದ ರಾಜಕುಮಾರನ ಸಂಬಂಧವಾಗಿ. ಯಾರಿಗೆ ಯಾವ ಕಾಮನೆಗಳೂ ಇಲ್ಲವೊ, ಅವರು ಹಣಕಾಸುಗಳಿಗಾಗಿ ಹಾತೊರೆಯುವುದಿಲ್ಲ. ಅದು ತಾನಾಗಿಯೇ ಬರುತ್ತದೆ. ಗೀತೆಯಲ್ಲಿ ಹೇಳಿದೆ: ‘ಯದೃಚ್ಛಾಲಾಭಸಂತುಷ್ಟಃ’ ಎಂದು. ಯಾವ ಕಾಮನೆಯೂ ಇಲ್ಲದ ಸದ್ಬ್ರಾಹ್ಮಣ ಚಂಡಾಲನ ಮನೆಯಿಂದಲೂ ಸ್ವೀಕರಿಸಬಹುದು. ಆತ ಪ್ರಯತ್ನಿಸುವುದಿಲ್ಲ. ಆದರೆ ತಾನಾಗಿಯೇ ಬರುತ್ತದೆ.”
ಒಬ್ಬ ಭಕ್ತ: “ಮಹಾಶಯರೆ, ಈ ಸಂಸಾರದಲ್ಲಿ ಹೇಗಿರಬೇಕು?”
ಶ್ರೀರಾಮಕೃಷ್ಣರು: “ಕೆಸರು ಮೀನಿನ ಹಾಗೆ ಇರಬೇಕು. ಸಂಸಾರದಿಂದ ದೂರ ಹೋಗಿ ನಿರ್ಜನಪ್ರದೇಶದಲ್ಲಿ ಭಗವಚ್ಚಿಂತನೆಯನ್ನು ಆಗಾಗ ಮಾಡಿದರೆ, ಭಗವಂತನಲ್ಲಿ ಭಕ್ತಿ ಅಂಕುರವಾಗುತ್ತದೆ. ಆಗ ಸಂಸಾರದಲ್ಲಿ ನಿರ್ಲಿಪ್ತನಾಗಿ ಇರಲು ಸಾಧ್ಯವಾಗುತ್ತದೆ. ಕೆಸರೇನೋ ಇದೆ. ಮೀನು ಅದರಲ್ಲಿ ವಾಸಿಸಬೇಕಾಗಿದೆ. ಆದರೂ ಕೆಸರು ಅದರ ಮೈಗೆ ಅಂಟಿಕೊಳ್ಳುವುದಿಲ್ಲ. ಆ ರೀತಿಯ ಮನುಷ್ಯ ಅನಾಸಕ್ತನಾಗಿ ಸಂಸಾರದಲ್ಲಿ ಇರುತ್ತಾನೆ.”
ಪರಮಹಂಸರು ನೋಡುತ್ತಾರೆ, ಮಾಸ್ಟರ್ ಹಾಗೆಯೇ ಕುಳಿತುಕೊಂಡು ಎಲ್ಲವನ್ನೂ ಏಕಾಗ್ರಚಿತ್ತದಿಂದ ಕೇಳುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರ್ ಕಡೆ ನೋಡಿ: “ತೀವ್ರ ವೈರಾಗ್ಯ ಉಂಟಾದರೆ, ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು. ಯಾರಿಗೆ ತೀವ್ರ ವೈರಾಗ್ಯ ಉಂಟಾಗಿದೆಯೊ, ಅವರಿಗೆ ಈ ಸಂಸಾರ ದಾವಾನಲದ ಹಾಗೆ ಕಾಣುತ್ತದೆ. ಹೆಂಡತಿ ಮಕ್ಕಳು ಅವರ ಕಣ್ಣಿಗೆ ಆಳವಾದ ಬಾವಿಯ ಹಾಗೆ ಕಾಣುತ್ತಾರೆ. ಅಂಥ ವೈರಾಗ್ಯ ನಿಜವಾಗಿ ಉಂಟಾದುದೇ ಆದರೆ, ಮನೆಯನ್ನು ತ್ಯಜಿಸಿ ಹೋಗಲೇಬೇಕಾಗುತ್ತದೆ. ಸಂಸಾರದಲ್ಲಿ ಕೇವಲ ಅನಾಸಕ್ತರಾಗಿ ಇದ್ದುಕೊಂಡಿರುವುದು ಅವರಿಗೆ ತೃಪ್ತಿಯನ್ನು ತರದು.
“ಕಾಮಕಾಂಚನವೇ ಮಾಯೆ. ಅದರ ಸ್ವರೂಪ ಏನು ಎಂಬುದನ್ನು ಅರಿತದ್ದೇ ಆದರೆ, ಅದು ನಾಚಿಕೆಪಟ್ಟುಕೊಂಡು ತಾನೇ ಕಂಬಿಕೀಳುತ್ತದೆ. ಒಬ್ಬ ಹುಲಿಯ ಚರ್ಮ ಹೊದ್ದುಕೊಂಡು ಒಬ್ಬನನ್ನು ಅಂಜಿಸುತ್ತಿದ್ದ. ಆತ ಹೇಳಿದ: ‘ನೀನು ಯಾರು ಎಂಬುದು ನನಗೆ ಗೊತ್ತು. ನೀನು ನಮ್ಮ ಹರಿ.’ ಆಗ ಹುಲಿಯ ಚರ್ಮ ಹೊದ್ದುಕೊಂಡಿದ್ದವನು ನಗುತ್ತ ಹೊರಟು ಹೋಗಿ ಇನ್ನೊಬ್ಬನನ್ನು ಹೆದರಿಸಲಾರಂಭಿಸಿದ.
“ಪ್ರತಿಯೊಬ್ಬ ಹೆಂಗಸೂ ಶಕ್ತಿಯ ಒಂದೊಂದು ರೂಪ. ಆ ಆದ್ಯಾಶಕ್ತಿಯೇ ಹೆಂಗಸಾಗಿ ಹೆಂಗಸಿನ ರೂಪ ಧರಿಸಿದ್ದಾಳೆ. ಅಧ್ಯಾತ್ಮರಾಮಾಯಣದಲ್ಲಿ ಹೇಳಿದೆ, ನಾರದಾದಿ ಋಷಿಗಳು ಶ್ರೀರಾಮನನ್ನು ಸ್ತೋತ್ರಮಾಡಿದರು: ‘ಹೇ ರಾಮ, ಗಂಡಸರಾಗಿ ಕಾಣುವವರೆಲ್ಲಾ ನೀನೇ, ಹೆಂಗಸರಾಗಿ ಕಾಣುವವರೆಲ್ಲಾ ಸೀತೆಯೇ. ನೀನು ಇಂದ್ರ, ಸೀತೆ ಇಂದ್ರಾಣಿ; ನೀನು ಶಿವ, ಸೀತೆ ಶಿವೆ; ನೀನು ನರ, ಸೀತೆ ನಾರಿ. ಹೆಚ್ಚಾಗಿ ಇನ್ನೇನು ತಾನೆ ನಾವು ಹೇಳೋಣ? ಗಂಡಸು ಎಲ್ಲೋ ಅಲ್ಲಿ ಇರತಕ್ಕವನು ನೀನೆ. ಹೆಂಗಸು ಎಲ್ಲೋ ಅಲ್ಲಿ ಇರತಕ್ಕವಳು ಸೀತೆಯೆ.
(ಭಕ್ತರಿಗೆ) “ಸುಮ್ಮನೆ ಮನಸ್ಸಿನಲ್ಲಿ ಮಾಡಿಕೊಂಡಾಕ್ಷಣಕ್ಕೇ ತ್ಯಾಗಮಾಡಲಾಗುವುದಿಲ್ಲ. ಪ್ರಾರಬ್ಧ, ಸಂಸ್ಕಾರ ಇವೆಲ್ಲವೂ ಇವೆ. ಒಮ್ಮೆ ಒಬ್ಬ ಯೋಗಿ ಒಬ್ಬ ರಾಜನಿಗೆ ಹೇಳಿದ: ‘ನೀನು ನನ್ನೊಡನೆ ಇದ್ದುಕೊಂಡು ಭಗವಂತನ ಧ್ಯಾನಮಾಡಿಕೊಂಡಿರು.’ ರಾಜ ಹೇಳಿದ: ‘ಅದು ನನ್ನಿಂದ ಸಾಧ್ಯವಿಲ್ಲ. ಸುಮ್ಮನೆ ಏನೋ ನಾನು ನಿಮ್ಮೊಡನೆ ಇರಬಲ್ಲೆ, ಆದರೆ ನನಗಿನ್ನೂ ಭೋಗಾಸಕ್ತಿ ಇದೆ. ನಾನೇನಾದರೂ ಈ ವನದಲ್ಲಿ ಇದ್ದುದೇ ಆದರೆ, ಈ ವನವೇ ಒಂದು ರಾಜ್ಯವಾಗಿಬಿಡಬಹುದು. ನನ್ನಲ್ಲಿ ಇನ್ನೂ ಭೋಗೇಚ್ಛೆಯಿದೆ.’
“ನಟವರಪಾಂಜ ಹುಡುಗನಾಗಿದ್ದಾಗ, ಈ ತೋಟದಲ್ಲಿ ದನ ಮೇಯಿಸುತ್ತಿದ್ದ. ಆತ ಭೋಗಪಡಬೇಕಾದ್ದು ಇನ್ನೂ ಬೇಕಾದಷ್ಟು ಇತ್ತು. ಅದಕ್ಕಾಗಿಯೇ ಆತ ಹರಳೆಣ್ಣೆ ಮಿಲ್ಲು ಇರಿಸಿ ಯಥೇಚ್ಛವಾಗಿ ಹಣ ಸಂಪಾದಿಸಿದ. ಆತನ ಹರಳೆಣ್ಣೆ ವ್ಯಾಪಾರ ಆಲಂಬಜಾರಿನಲ್ಲಿ ಬಹಳ ನಡೆದುಕೊಂಡು ಬರುತ್ತಿದೆ.
“ಒಂದು ಸಂಪ್ರದಾಯವಿದೆ. ಅದು ಹೇಳುತ್ತದೆ, ಹೆಂಗಸಿನೊಡನೆ ಕೂಡಿ ಸಾಧನೆ ಯಲ್ಲಿ ತೊಡಗುವ ಹಾಗೆ. ಒಮ್ಮೆ ನನ್ನನ್ನು ಕರ್ತಾಭಜಾ ಹೆಂಗಸರ ಹತ್ತಿರಕ್ಕೆ ಕರೆದುಕೊಂಡು ಹೋಗಿದ್ದರು. ಅವರೆಲ್ಲರೂ ಬಂದು ನನ್ನ ಹತ್ತಿರ ಕುಳಿತುಕೊಂಡರು. ನಾನು ಅವರನ್ನು ‘ತಾಯಿ, ತಾಯಿ’ ಎಂದು ಸಂಬೋಧಿಸಲಾಗಿ, ಅವರು ಪರಸ್ಪರ ತಮ್ಮಲ್ಲೇ ಮಾತನಾಡ ಲಾರಂಭಿಸಿದರು: ‘ಈತ ಇನ್ನೂ ಪ್ರವರ್ತಕ. ಮಾರ್ಗ ಈತನಿಗೆ ಇನ್ನೂ ಗೊತ್ತಿಲ್ಲ.’ ಆ ಸಂಪ್ರದಾಯದ ದೃಷ್ಟಿಯಿಂದ ಆಗತಾನೆ ಸಾಧನೆಯಲ್ಲಿ ತೊಡಗಿರುವವನಿಗೆ ಪ್ರವರ್ತಕ ಅಂತ ಹೆಸರು. ಬಳಿಕ ಆತ ಸಾಧಕ. ಕೊನೆಯಲ್ಲಿ ಸಿದ್ಧರ ಸಿದ್ಧ ಆಗುತ್ತಾನೆ. ಒಬ್ಬ ಹೆಂಗಸು ವೈಷ್ಣವಚರಣನ ಹತ್ತಿರ ಬಂದು ಕುಳಿತುಕೊಂಡಳು. ಅದರ ಸಂಬಂಧವಾಗಿ ವೈಷ್ಣವಚರಣ ನನ್ನು ಕೇಳಲಾಗಿ ಆತ ಹೇಳಿದ: ‘ಈಕೆಯದು ಬಾಲಿಕಾಭಾವ.’ ಸ್ತ್ರೀಭಾವವನ್ನು ಆರಿಸಿ ಕೊಂಡರೆ ಶೀಘ್ರವಾಗಿ ಪತನವಾಗುವ ಸಂಭವ. ಮಾತೃಭಾವ ಶುದ್ಧಭಾವ.”
ಕೆಲವು ಮಂದಿ ಭಕ್ತರು ತಾವು ಕಾಳಿಯ ಮತ್ತು ಉಳಿದ ದೇವಾಲಯಗಳನ್ನು ನೋಡಬೇಕಾಗಿದೆ ಅಂತ ಹೇಳಿ ಪರಮಹಂಸರಿಂದ ಬೀಳ್ಕೊಂಡರು.
ಮಾಸ್ಟರ್ ಪಂಚವಟಿ ಮತ್ತು ಉದ್ಯಾನವನದ ಇತರ ಭಾಗಗಳಲ್ಲಿ ಸುಮ್ಮನೆ ಒಂಟಿಯಾಗಿ ಸುತ್ತಾಡುತ್ತಿದ್ದಾನೆ. “ಸ್ವಲ್ಪ ಸಾಧನೆ ಮಾಡಿದರೆ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬಹುದು.” “ಮಾಯೆಯ ಸ್ವರೂಪವನ್ನು ಅರಿತುಕೊಂಡರೆ ಅದು ನಾಚಿಕೆಪಟ್ಟು ಕೊಂಡು ತಾನಾಗಿಯೇ ಕಂಬಿಕೀಳುತ್ತದೆ” ಎಂದು ಪರಮಹಂಸರು ಹೇಳಿದುದರ ಮತ್ತು ಅವರು ತೀವ್ರ ವೈರಾಗ್ಯದ ಸಂಬಂಧವಾಗಿ ತಿಳಿಸಿದುದರ ವಿಷಯವಾಗಿ ಮಾಸ್ಟರ್ ಆಲೋಚಿಸುತ್ತಾ ತಿರುಗುತ್ತಿದ್ದಾನೆ.
ಘಂಟೆ ಅಪರಾಹ್ನ ಮೂರು. ಮಾಸ್ಟರ್ ಮತ್ತೆ ಪರಮಹಂಸರ ಕೊಠಡಿಗೆ ಬಂದು ಕುಳಿತುಕೊಂಡಿದ್ದಾನೆ. ಬ್ರೌಟನ್ ಇನ್ಸ್ಟಿಟ್ಯೂಟಿನಿಂದ ಒಬ್ಬ ಉಪಾಧ್ಯಾಯರು ಕೆಲವು ಮಂದಿ ವಿದ್ಯಾರ್ಥಿಗಳೊಡನೆ ಪರಮಹಂಸರನ್ನು ನೋಡಲು ಬಂದಿದ್ದಾರೆ. ಪರಮಹಂಸರು ಅವರೊಡನೆ ಮಾತುಕತೆಯಾಡುತ್ತಿದ್ದಾರೆ. ಆಗಾಗ ಉಪಾಧ್ಯಾಯರು ಒಂದೊಂದು ಪ್ರಶ್ನೆ ಹಾಕುತ್ತಿದ್ದಾರೆ. ಪ್ರತಿಮಾಪೂಜೆಯ ಸಂಬಂಧವಾಗಿ ಮಾತುಕತೆ ನಡೆಯುತ್ತಿದೆ.
ಶ್ರೀರಾಮಕೃಷ್ಣರು ಉಪಾಧ್ಯಾಯರಿಗೆ: “ಪ್ರತಿಮಾಪೂಜೆ ಮಾಡುವುದರಲ್ಲಿ ತಪ್ಪೇನಿದೆ? ‘ಎಲ್ಲಿ ಅಸ್ತಿ, ಭಾತಿ, ಪ್ರಿಯ ಇರುವುವೊ, ಅಲ್ಲೇ ಭಗವಂತನ ವ್ಯಕ್ತತೆಯೂ ಇದೆ’ ಎಂದು ವೇದಾಂತ ಹೇಳುತ್ತದೆ, ಆದ್ದರಿಂದ ಬ್ರಹ್ಮನಿಲ್ಲದ ವಸ್ತುವೇ ಇಲ್ಲ.
“ಚಿಕ್ಕ ಹುಡುಗಿಯರು ಎಲ್ಲಿಯವರೆಗೆ ತಮ್ಮ ಗೊಂಬೆಗಳೊಡನೆ ಆಟವಾಡುತ್ತಾರೆ?” ವಿವಾಹವಾಗದವರೆಗೆ ಮತ್ತು ತಮ್ಮ ತಮ್ಮ ಪತಿಯರೊಡನೆ ವಾಸಿಸದವರೆಗೆ. ವಿವಾಹವಾದ ನಂತರ ಅವರು ಗೊಂಬೆಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಇಡುತ್ತಾರೆ. ಭಗವಂತನ ಸಾಕ್ಷಾತ್ಕಾರ ದೊರೆತನಂತರ ಪ್ರತಿಮಾಪೂಜೆಯ ಆವಶ್ಯಕತೆ ಎಲ್ಲಿರುತ್ತದೆ?”
ಶ್ರೀರಾಮಕೃಷ್ಣರು ಮಾಸ್ಟರ ಕಡೆ ನೋಡಿ ಹೇಳುತ್ತಿದ್ದಾರೆ: “ಅನುರಾಗವುಂಟಾಯಿತು ಎಂದರೆ ಭಗವಂತನ ದರ್ಶನ ದೊರೆಯುತ್ತದೆ, ತೀವ್ರ ವ್ಯಾಕುಲತೆ ಬೇಕು. ತೀವ್ರ ವ್ಯಾಕುಲತೆಯುಂಟಾದರೆ ಇಡೀ ಮನಸ್ಸು ಭಗವಂತನಲ್ಲಿ ಏಕಾಗ್ರಗೊಂಡುಬಿಡುತ್ತದೆ.
“ಒಬ್ಬನಿಗೆ ಒಬ್ಬಳು ಮಗಳಿದ್ದಳು. ಬಹಳ ಚಿಕ್ಕವಳಿರುವಾಗಲೆ ಆಕೆ ವಿಧವೆಯಾಗಿ ಬಿಟ್ಟಳು. ಆಕೆ ಪತಿಯನ್ನು ಅರಿತವಳೇ ಅಲ್ಲ; ತನ್ನ ಜೊತೆಗಾತಿಯರ ಪತಿಗಳನ್ನು ಕಂಡು ಒಂದು ದಿನ ಆಕೆ ತನ್ನ ತಂದೆಯನ್ನು ಕೇಳಿದಳು: ‘ಅಪ್ಪ, ನನ್ನ ಪತಿ ಎಲ್ಲಿದ್ದಾರೆ?” ಆಕೆಯ ತಂದೆ ಹೇಳಿದ: ‘ಗೋವಿಂದನೇ ನಿನ್ನ ಪತಿ. ಕರೆ, ಬರುತ್ತಾನೆ.’ ಈ ಮಾತನ್ನು ಕೇಳಿ ಆ ಹುಡುಗಿ ಕೊಠಡಿಯ ಬಾಗಿಲು ಹಾಕಿಕೊಂಡು ಗೋವಿಂದನನ್ನು ಕರೆಯುತ್ತ ಅಳಲಾರಂಭಿ ಸಿದಳು. ‘ಓ ಗೋವಿಂದ, ದಯವಿಟ್ಟು ಬಾ! ಕೃಪೆಯಿಟ್ಟು ನಿನ್ನ ದರ್ಶನಕೊಡು! ನೀನು ಏಕೆ ಬರುತ್ತಿಲ್ಲ ಹೇಳು?’ ಆ ಚಿಕ್ಕ ಹುಡುಗಿಯ ಹೃದಯವಿದ್ರಾವಕ ಅಳುವನ್ನು ನೋಡಿ ಆಕೆಗೆ ಭಗವಂತ ದರ್ಶನ ಕೊಡದೆ ಇರಲಾಗಲಿಲ್ಲ. ಆಕೆಗೆ ದರ್ಶನವಿತ್ತ.
“ಮಗುವಿನಂಥ ವಿಶ್ವಾಸಬೇಕು. ಮಗು ತಾಯನ್ನು ನೋಡಲು ಯಾವ ರೀತಿಯಾದ ವ್ಯಾಕುಲತೆಯನ್ನು ತೋರಿಸುವುದೊ, ಆ ರೀತಿಯಾದ ವ್ಯಾಕುಲತೆ ಬೇಕು. ಅಂಥಾ ವ್ಯಾಕುಲತೆ ಉಂಟಾಯಿತು ಎಂದರೆ ಅರುಣೋದಯವಾದ ಹಾಗೆಯೇ. ಅರುಣೋದಯವಾದ ನಂತರ ಸೂರ್ಯೋದಯವಾಗಲೇಬೇಕು. ಅಂಥ ವ್ಯಾಕುಲತೆಯುಂಟಾದ ಒಡನೆಯೇ ಭಗವಂತನ ದರ್ಶನ ದೊರೆಯುತ್ತದೆ.
“ಜಟಿಲ ಎಂಬ ಹೆಸರಿನ ಒಬ್ಬ ಬಾಲಕನ ಕಥೆ ಇದೆ, ಕೇಳು. ಆ ಬಾಲಕ ಒಂದು ಕಾಡಿನ ಮೂಲಕ ಹಾದು ತನ್ನ ಶಾಲೆಗೆ ಹೋಗಬೇಕಾಗಿತ್ತು. ಕಾಡುದಾರಿ ಆತನಿಗೆ ಬಹಳ ಹೆದರಿಕೆಯನ್ನುಂಟುಮಾಡುತ್ತಿತ್ತು. ಆ ಹುಡುಗ ತನ್ನ ಭಯವನ್ನು ಒಂದು ದಿನ ತನ್ನ ತಾಯಿಗೆ ತಿಳಿಸಿದ. ಆಕೆ ಹೇಳಿದಳು: ‘ನೀನೇಕೆ ಭಯಪಡಬೇಕು? ಮಧುಸೂದನನನ್ನು ಕರೆ.’ ಆ ಬಾಲಕ ಆಕೆಯನ್ನು ಕೇಳಿದ: ‘ಅಮ್ಮಾ, ಮಧುಸೂದನ ಯಾರು?’ ತಾಯಿ ಹೇಳಿದಳು: ‘ಆತ ನಿನ್ನ ಅಣ್ಣ.’ ಈ ಮಾತುಕತೆಯಾದ ಬಳಿಕ ಒಂದು ದಿನ ಕಾಡಿನಲ್ಲಿ ಹೋಗುತ್ತಿದ್ದಾಗ ಆ ಬಾಲಕನಿಗೆ ಮತ್ತೆ ಹೆದರಿಕೆಯಾಯಿತು. ಆಗ ಆ ಬಾಲಕ ಕೂಗಲಾರಂಭಿಸಿದ: ‘ಅಣ್ಣಾ, ಮಧುಸೂದನಾ!’ ಎಲ್ಲಿ, ಮಧುಸೂದನನೂ ಇಲ್ಲ, ಅಣ್ಣನೂ ಇಲ್ಲ. ಆಗ ಆ ಬಾಲಕ ಅಳುತ್ತಾ ತಾರಸ್ವರದಿಂದ ಕೂಗಲಾರಂಭಿಸಿದ: ‘ಎಲ್ಲಿದ್ದೀಯೊ ಅಣ್ಣಾ, ಮಧುಸೂದನಾ? ಬೇಗ ಬಾರೊ. ನನಗೆ ಬಹಳವಾಗಿ ಹೆದರಿಕೆಯಾಗುತ್ತದೆ ಕಣೋ!’ ಭಗವಂತನಿಗೆ ಆಗ ಸುಮ್ಮನಿರಲಾಗಲಿಲ್ಲ. ಆತ ಆ ಬಾಲಕನಿಗೆ ಹೇಳಿದ: ‘ನೋಡೋ, ನಾನಿಲ್ಲೇ ಇದ್ದೇನೆ. ನೀನೇಕೆ ಭಯಪಟ್ಟುಕೊಳ್ಳಬೇಕೋ.’ ಹೀಗೆಂದು ಹೇಳಿ ಆ ಬಾಲಕನನ್ನು ಕಾಡಿನ ಕೊನೆಯವರೆಗೂ ಕರೆದುಕೊಂಡು ಹೋಗಿ ಶಾಲೆಗೆ ದಾರಿ ತೋರಿಸಿದ. ಆತನಿಂದ ಬೀಳ್ಕೊಂಡಾಗ ಭಗವಂತ ಆ ಬಾಲಕನಿಗೆ ಹೇಳಿದ: ‘ನೀನು ಕರೆದಾಗಲೆಲ್ಲಾ ನಾನು ಬಂದುಬಿಡುತ್ತೇನೆ. ಹೆದರಿಕೊಳ್ಳಬೇಡ.’ ಬಾಲಕನ ಇಂಥ ವಿಶ್ವಾಸ, ವ್ಯಾಕುಲತೆ ಬೇಕು.
“ಒಬ್ಬ ಬ್ರಾಹ್ಮಣನ ಮನೆಯಲ್ಲಿ ನಿತ್ಯವೂ ದೇವರ ಪೂಜೆ ನಡೆಯುತ್ತಿತ್ತು. ಒಂದು ದಿನ ಏನೋ ಕೆಲಸದ ನಿಮಿತ್ತ ಆ ಬ್ರಾಹ್ಮಣ ಬೇರೆ ಸ್ಥಳಕ್ಕೆ ಹೋಗಿಬರಬೇಕಾಗಿ ಬಂತು. ಆತ ತನ್ನ ಚಿಕ್ಕ ಮಗನಿಗೆ ಹೇಳಿಹೋದ: ‘ನೀನು ಇಂದು ದೇವರಿಗೆ ನೈವೇದ್ಯ ಅರ್ಪಿಸಿ ಊಟಮಾಡಿಸು. ಹುಡುಗ ದೇವರಿಗೆ ನೈವೇದ್ಯವನ್ನು ಅರ್ಪಿಸಿದ. ಆದರೆ ದೇವರು ಮಾತ್ರ ಸುಮ್ಮನೆ ಕುಳಿತಿದ್ದಾನೆ, ಮಾತೂ ಆಡುತ್ತಿಲ್ಲ, ಊಟವೂ ಮಾಡುತ್ತಿಲ್ಲ. ಆ ಹುಡುಗ ಬಹಳ ಹೊತ್ತಿನವರೆಗೆ ಕುಳಿತು ನೋಡಿದ. ಆದರೂ ದೇವರು ಮಾತ್ರ ಮೇಲಕ್ಕೆ ಏಳಲೇ ಇಲ್ಲ. ಆತ ಸಂಪೂರ್ಣವಾಗಿ ನಂಬಿದ್ದ, ದೇವರು ಎದ್ದು ಬಂದು ಆಸನದ ಮೇಲೆ ಕುಳಿತುಕೊಂಡು ಊಟಮಾಡುತ್ತಾನೆ ಎಂದು. ಆಗ ಆ ಬಾಲಕ ಮತ್ತೆ ಮತ್ತೆ ಮೊರೆಯಿಡಲಾರಂಭಿಸಿದ: ‘ಹೇ, ದೇವರೆ, ಆಸನದಲ್ಲಿ ಬಂದು ಕುಳಿತುಕೊಂಡು ಊಟಮಾಡು. ಈಗ ಆಗಲೆ ಬಹಳ ಹೊತ್ತಾಗಿಬಿಟ್ಟಿದೆ. ನನ್ನ ಕೈಯಲ್ಲಿ ಇನ್ನು ಕಾದು ಕುಳಿತಿರಲಾಗುವುದಿಲ್ಲ.’ ಹೀಗೆ ಮೊರೆ ಯಿಟ್ಟರೂ ದೇವರು ಒಂದು ಮಾತನ್ನೂ ಆಡಲಿಲ್ಲ, ಇದನ್ನು ನೋಡಿ ಹುಡುಗ ರೋದಿಸುತ್ತ ಮತ್ತೆ ದೇವರಿಗೆ ಮೊರೆಯಿಡಲಾರಂಭಿಸಿದ; ‘ದೇವರೆ, ನಮ್ಮ ತಂದೆ ನಿನಗೆ ಊಟಮಾಡಿಸು ವಂತೆ ಹೇಳಿ ಹೋಗಿದ್ದಾರೆ. ಏತಕ್ಕೆ ನೀನು ಎದ್ದು ಬರುತ್ತಿಲ್ಲ? ನನ್ನ ಕೈಯಿಂದ ಏಕೆ ಊಟಮಾಡಲಿಚ್ಛಿಸುವುದಿಲ್ಲ?’ ಆ ಹುಡುಗ ಈ ರೀತಿಯಾಗಿ ಅತ್ಯಂತ ವ್ಯಾಕುಲನಾಗಿ ಅಳಲಾರಂಭಿಸಿದ. ಸ್ವಲ್ಪ ಹೊತ್ತಿನಲ್ಲೇ ದೇವರು ಪೀಠದಿಂದ ನಗುತ್ತ ನಗುತ್ತ ಎದ್ದು ಬಂದು ಆಸನದ ಮೇಲೆ ಕುಳಿತುಕೊಂಡು ಊಟ ಮಾಡಲಾರಂಭಿಸಿದ. ಆ ಹುಡುಗ ದೇವರಿಗೆ ಊಟಮಾಡಿಸಿ ದೇವರ ಮನೆಯಿಂದ ಹೊರಗೆ ಬಂದ. ಮನೆಯವರು ಕೇಳಿದರು: ‘ನೈವೇದ್ಯ ಅರ್ಪಿಸಿ ಆಯಿತೆ? ಹಾಗಾದರೆ ಎಲ್ಲವನ್ನೂ ತೆಗೆದುಕೊಂಡು ಬಂದುಬಿಡು.’ ಆ ಹುಡುಗ ಹೇಳಿದ: ‘ಹೌದು, ನೈವೇದ್ಯವನ್ನು ಅರ್ಪಿಸಿಯಾಯಿತು. ದೇವರು ಎಲ್ಲವನ್ನೂ ಊಟಮಾಡಿ ಬಿಟ್ಟ.’ ಅದನ್ನು ಕೇಳಿ ಅವರು ಹೇಳಿದರು: ‘ಅದು ಹೇಗೋ?’ ಆ ಹುಡುಗ ತನ್ನ ಸರಳ ಬುದ್ಧಿಯಿಂದ ಹೇಳಿದ: ‘ಏಕೆ, ದೇವರು ಊಟ ಮಾಡಿಬಿಟ್ಟ.’ ಬಳಿಕ ಎಲ್ಲರೂ ದೇವರ ಮನೆಗೆ ಹೋಗಿ ನೋಡಿ ಸುಮ್ಮನೆ ಆಶ್ಚರ್ಯಪಡಲಾರಂಭಿಸಿದರು.”
ಮುಸ್ಸಂಜೆಯಾಗಲು ಇನ್ನೂ ಸಮಯವಿದೆ. ಪರಮಹಂಸರು ನಹಬತ್ಖಾನೆಯ ದಕ್ಷಿಣ ಭಾಗದಲ್ಲಿ ನಿಂತು ಮಾಸ್ಟರೊಡನೆ ಮಾತುಕತೆಯಾಡುತ್ತಿದ್ದಾರೆ. ಚಳಿಗಾಲವಾದ್ದರಿಂದ ಪರಮಹಂಸರು ಶಾಲು ಹೊದ್ದುಕೊಂಡಿದ್ದಾರೆ.
ಶ್ರೀರಾಮಕೃಷ್ಣರು: “ನೀನು ಎಲ್ಲಿ ಮಲಗುತ್ತೀಯೆ? ಪಂಚವಟಿಯ ಗುಡಿಸಲಿನಲ್ಲೇ?”
ಮಾಸ್ಟರ್: “ನಹಬತ್ಖಾನೆಯ ಮಹಡಿಯ ಮೇಲಿನ ಕೊಠಡಿಯನ್ನು ಕೊಡ ಲೊಲ್ಲರೇನು?”
ಮಾಸ್ಟರ್ ಕಾವ್ಯಪ್ರಿಯನಾದ್ದರಿಂದ ನಹಬತ್ಖಾನೆಯ ಮಹಡಿಯ ಮೇಲಿನ ಕೊಠಡಿ ಯನ್ನು ಆರಿಸಿಕೊಂಡ. ಅಲ್ಲಿಂದ ಆತ ಆಕಾಶ, ಗಂಗೆ, ಬೆಳದಿಂಗಳು, ಹೂವು ಹಣ್ಣು, ಗಿಡಗಳು ಇವನ್ನೆಲ್ಲಾ ನೋಡಬಲ್ಲ.
ಶ್ರೀರಾಮಕೃಷ್ಣರು: “ಕೊಡದೆ ಏನು? ಆದರೆ ನಾನು ಪಂಚವಟಿಯನ್ನು ಸೂಚಿಸಿದ್ದು ಇದಕ್ಕಾಗಿ: ಅಲ್ಲಿ ಬಹಳವಾಗಿ ಭಗವನ್ನಾಮಸಂಕೀರ್ತನೆ, ಭಗವಚ್ಚಿಂತನೆ ನಡೆದಿದೆ.”
ಮುಸ್ಸಂಜೆಯಾಯಿತು. ಪರಮಹಂಸರ ಕೊಠಡಿಗೆ ಧೂಪ ಹಾಕಲಾಯಿತು. ಪರಮ ಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡು ಭಗವಚ್ಚಿಂತನೆ ಮಾಡುತ್ತಿದ್ದಾರೆ. ಮಾಸ್ಟರ್ ನೆಲದ ಮೇಲೆ ಕುಳಿತುಕೊಂಡಿದ್ದಾನೆ. ರಾಖಾಲ, ಲಾಟು, ರಾಮಲಾಲ ಇವರೂ ಕೊಠಡಿಯಲ್ಲಿ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ ಹೇಳುತ್ತಿದ್ದಾರೆ: “ನೋಡು, ಮುಖ್ಯವಾಗಿ ಮಾಡ ಬೇಕಾದ್ದು-ಭಗವಂತನಲ್ಲಿ ಭಕ್ತಿ ಬೆಳೆಸಿಕೊಳ್ಳುವುದು. ಆತನನ್ನು ಪ್ರೀತಿಸುವುದು.” ಪರಮ ಹಂಸರು ರಾಮಲಾಲನಿಗೆ ಹಾಡುವಂತೆ ಹೇಳಿದರು. ಆತ ತನ್ನ ಮಧುರ ಕಂಠದಿಂದ ಹಾಡು ತ್ತಿದ್ದಾನೆ. ಪರಮಹಂಸರು ಪ್ರತಿಯೊಂದು ಹಾಡಿನ ಪಲ್ಲವಿಯನ್ನೂ ಎತ್ತಿ ಕೊಡುತ್ತಿದ್ದಾರೆ.
ರಾಮಲಾಲ ಈಗ ಹಾಡುತ್ತಿದ್ದಾನೆ:
ಓ ಎಂಥ ನೋಟವ ಕಂಡೆನು!
ಕೇಶವಭಾರತಿಯ ಕುಟಿಯೊಳಗೆ, ನಾ-
ನೆಂಥ ನೋಟವ ಕಂಡೆನು!……..
ಬಳಿಕ ಆತ ಹಾಡಿದ:
ಮುಕ್ತಿಪದವನು ನೀಡಲೆನಗೆ ಮನವಿದ್ದರೂ
ಶುದ್ಧಭಕ್ತಿಯ ಕೊಡಲು ಹಿಂಜರಿವೆನು………
ಶ್ರೀರಾಮಕೃಷ್ಣರು ರಾಮಲಾಲನಿಗೆ ಹೇಳುತ್ತಿದ್ದಾರೆ: “ಅದನ್ನು ಹಾಡು- ‘ಗೌರಾಂಗ ನಿತ್ಯಾನಂದ’ ರೆನ್ನುವ ದಿವ್ಯ ಸೋದರವರ್ಯರೇ.”
ರಾಮಲಾಲ ಹಾಡಲು ಶುರುಮಾಡಿದ. ಪರಮಹಂಸರು ಆತನೊಡನೆ ಕೂಡಿ ಹಾಡುತ್ತಿದ್ದಾರೆ:
ಗೌರಾಂಗ ನಿತ್ಯಾನಂದರೆನ್ನುವ
ದಿವ್ಯ ಸೋದರವರ್ಯರೇ,
ನೀವು ಕರುಣಾಪೂರ್ಣರೆಂಬುದ
ಕೇಳಿ ಬಂದೆನು ನಿಮ್ಮೆಡೆ…….
ನಹಬತ್ಖಾನೆಯ ಮೇಲಿನ ಕೊಠಡಿಯಲ್ಲಿ ಮಾಸ್ಟರ್ ಒಬ್ಬನೇ ಕುಳಿತಿದ್ದಾನೆ. ಇಂದು ಮಾರ್ಗಶಿರ ತಿಂಗಳ ಪೂರ್ಣಿಮೆ. ಆಕಾಶ, ಗಂಗೆ, ಕಾಳೀದೇವಾಲಯ, ದೇವಾಲಯಗಳ ಗೋಪುರ, ಉದ್ಯಾನಮಾರ್ಗ, ಪಂಚವಟಿ ಇವು ಬೆಳದಿಂಗಳಿಂದ ಸುಮ್ಮನೆ ನಗುತ್ತಿವೆ. ಮಾಸ್ಟರ್ ಪರಮಹಂಸರ ಮೇಲೆ ಧ್ಯಾನಮಾಡುತ್ತಿದ್ದಾನೆ.
ರಾತ್ರಿ ಗಂಟೆ ಮೂರು. ಮಾಸ್ಟರ್ ಹಾಸಿಗೆಯಿಂದ ಎದ್ದು ಪರಮಹಂಸರ ಸಲಹೆ ಯಂತೆ ಪಂಚವಟಿಯ ಕಡೆ ಮುಂದುವರಿಯುತ್ತಿದ್ದಾನೆ. ಆತನಿಗೆ ನಹಬತ್ಖಾನೆಯ ಕೊಠಡಿ ಬೇಡವೆಂದೆನಿಸಿತು. ಪಂಚವಟಿಯ ಗುಡಿಸಲಿನಲ್ಲೇ ಇರಲು ಸ್ಥಿರಮಾಡಿಕೊಂಡುಬಿಟ್ಟ.
ಇದ್ದಕ್ಕಿದ್ದ ಹಾಗೆ ದೂರದಿಂದ ಯಾರೊ, “ಓ, ಅಣ್ಣಾ, ಮಧುಸೂದನಾ! ಎಲ್ಲಿದ್ದೀಯೋ?” ಅಂತ ಆರ್ತನಾದ ಮಾಡುತ್ತಿದ್ದ ಹಾಗೆ ಕೇಳಿಬಂತು. ಪಂಚವಟಿಯ ದಟ್ಟ ಮರಗಳ ಸಂದಿಗೊಂದಿಗಳಿಂದ ಬೆಳದಿಂಗಳು ಪ್ರವಹಿಸಿ ನೆಲದ ಮೇಲೆ ಬೀಳುತ್ತಿತ್ತು. ಹಾಗೇ ಸ್ವಲ್ಪ ದೂರ ಮುಂದುವರಿದ ನಂತರ ಕಂಡುಬಂತು, ಪರಮಹಂಸರ ಶಿಷ್ಯರಲ್ಲೊಬ್ಬ ಪಂಚವಟಿಯಲ್ಲಿ ಕುಳಿತಿರುವುದು. ಆತ ಆರ್ತನಾದ ಮಾಡುತ್ತಿದ್ದಾನೆ: “ಓ ಅಣ್ಣಾ ಮಧುಸೂಧನಾ! ಎಲ್ಲಿದ್ದೀಯೋ” ಅಂತ.
ಮಾಸ್ಟರ್ ಸ್ವಲ್ಪವೂ ಸದ್ದುಮಾಡದೆ ಆತನನ್ನೇ ದೃಷ್ಟಿಸಿ ನೋಡುತ್ತಿದ್ದಾನೆ.
೧೫ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ಪಾಡ್ಯಮಿ, ಶನಿವಾರ
ಮಾಸ್ಟರ್ ದಕ್ಷಿಣೇಶ್ವರದಲ್ಲಿ ಪರಮಹಂಸರೊಡನೆ ಇದ್ದುಕೊಂಡಿದ್ದಾನೆ. ಪರಮ ಹಂಸರು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡು ರಾಮಲಾಲನ ಕೈಯಲ್ಲಿ ಭಕ್ತಮಾಲೆಯಿಂದ ಪ್ರಹ್ಲಾದನ ಚರಿತ್ರೆಯನ್ನು ಓದಿಸಿ ಕೇಳುತ್ತಿದ್ದಾರೆ. ಮಾಸ್ಟರ್ ನೆಲದ ಮೇಲೆ ಕುಳಿತಿದ್ದಾನೆ. ರಾಖಾಲ, ಲಾಟು, ಹರೀಶ ಇವರೂ ಕೊಠಡಿಯಲ್ಲಿ ಕುಳಿತಿದ್ದಾರೆ. ಹಾಜರಾ ವರಾಂಡದಲ್ಲಿ ಕುಳಿತಿದ್ದಾನೆ. ಪರಮಹಂಸರು ಪ್ರಹ್ಲಾದನ ಚರಿತ್ರೆಯನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆ ಭಾವಾವಿಷ್ಟರಾಗುತ್ತಿದ್ದಾರೆ.
ಹಿರಣ್ಯಕಶಿಪುವಿನ ವಧೆಯಾದಾಗ, ನರಸಿಂಹನ ರೌದ್ರಮೂರ್ತಿಯನ್ನು ನೋಡಿ ಮತ್ತು ಆತನ ಸಿಂಹನಾದವನ್ನು ಕೇಳಿ ಬ್ರಹ್ಮಾದಿ ದೇವತೆಗಳೆಲ್ಲರೂ ಇನ್ನು ಎಲ್ಲಿ ಪ್ರಳಯವಾಗಿ ಬಿಡುವುದೋ ಏನೋ ಎಂದು ಹೆದರಿ ಪ್ರಹ್ಲಾದನನ್ನೇ ನರಸಿಂಹನ ಹತ್ತಿರಕ್ಕೆ ಕಳುಹಿಸಿದರು. ಪ್ರಹ್ಲಾದ ಮಗುವಿನ ಹಾಗೆ ನರಸಿಂಹನನ್ನು ಸ್ತೋತ್ರಮಾಡಲಾರಂಭಿಸಿದ. ಭಕ್ತವತ್ಸಲನಾದ ನರಸಿಂಹ ಪ್ರಹ್ಲಾದನ ಶರೀರವನ್ನು ಪ್ರೀತಿಯಿಂದ ನೆಕ್ಕಲಾರಂಭಿಸಿದ.
ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ಹೇಳುತ್ತಿದ್ದಾರೆ: “ಆಹಾ! ಆಹಾ! ಭಕ್ತನ ಮೇಲೆ ಎಷ್ಟೊಂದು ಪ್ರೀತಿ!” ಹೀಗೆಂದು ಹೇಳುತ್ತ ಹೇಳುತ್ತ ಇದ್ದಹಾಗೆಯೇ ಭಾವಸಮಾಧಿಸ್ಥರಾಗಿಬಿಟ್ಟರು. ಸ್ಪಂದಹೀನರಾಗಿಬಿಟ್ಟಿದ್ದಾರೆ. ಕಡೆಗಣ್ಣಿನಿಂದ ಪ್ರೇಮಾಶ್ರು ಸುರಿಯುತ್ತಿದೆ.
ಪರಮಹಂಸರು ಪ್ರಕೃತಿಸ್ಥರಾದನಂತರ ಮಾಸ್ಟರೊಡನೆ ಮಾತಾಡುತ್ತಿದ್ದಾರೆ. ಆಧ್ಯಾತ್ಮಿಕ ಮಾರ್ಗದಲ್ಲಿ ಮುಂದುವರಿಯುತ್ತ ಯಾರು ಸ್ತ್ರೀಸಂಗ ಮಾಡುತ್ತಾರೋ ಅವರ ಸಂಬಂಧ ವಾಗಿ ಪರಮಹಂಸರು ತಮ್ಮ ಕೋಪತಾಪಗಳನ್ನು ಸೂಚಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಿನಗೇನು ನಾಚಿಕೆಯಾಗುವುದಿಲ್ಲವೇ? ಮಕ್ಕಳಾಗಿದ್ದರೂ ಹೆಂಡತಿಯ ಸಹವಾಸ ಮಾಡುವುದು! ಅಸಹ್ಯ ತೋರುವುದಿಲ್ಲವೇ? ಪಶುವಿನ ಹಾಗೆ ವ್ಯವಹರಿಸಲು? ನರ, ರಕ್ತ, ಮಲ, ಮೂತ್ರ ಇವುಗಳಿಂದ ಕೂಡಿದ ದೇಹ ನೋಡಿ ಹೇಸಿಕೆಯಾಗುವುದಿಲ್ಲವೇ? ಯಾರು ಭಗವಂತನ ಪಾದಪದ್ಮಗಳ ಚಿಂತನೆಯನ್ನು ಮಾಡು ತ್ತಾನೋ, ಆತನಿಗೆ ಪರಮ ಸುಂದರ ರಮಣಿಯೂ ಚಿತೆಯ ಭಸ್ಮದ ಹಾಗೆ ತೋರಿ ಬರುತ್ತಾಳೆ. ಯಾವ ಶರೀರ ನಶ್ವರವಾದ್ದೋ, ಯಾವುದರಲ್ಲಿ ಕ್ರಿಮಿ, ಕೀವು, ಶ್ಲೇಷ್ಮ, ಇವೇ ಮುಂತಾದ ಅಸಹ್ಯ ವಸ್ತುಗಳು ತುಂಬಿವೆಯೋ ಅಂಥ ಶರೀರದೊಡನೆ ಆನಂದಪಡುವುದು! ಏನು ನಾಚಿಕೆಯಾಗುವುದಿಲ್ಲವೇ?
ಮಾಸ್ಟರ್ ಲಜ್ಜೆಯಿಂದ ತಲೆತಗ್ಗಿಸಿ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಭಗವತ್ಪ್ರೇಮದ ಒಂದು ಬಿಂದುವೇ ಆಗಲಿ ಯಾರಿಗಾದರೂ ದೊರೆತದ್ದೇ ಆದರೆ ಕಾಮಕಾಂಚನ ಅತಿ ತುಚ್ಛವಾಗಿ ತೋರಿಬರುತ್ತವೆ. ಕಲ್ಲುಸಕ್ಕರೆಯ ಪಾನಕ ದೊರೆಯಿತು ಎಂದರೆ, ಜೋನಿ ಬೆಲ್ಲದ ಪಾನಕ ತುಚ್ಛವಾಗಿ ತೋರುತ್ತದೆ. ಭಗವಂತನನ್ನು ವ್ಯಾಕುಲಚಿತ್ತದಿಂದ ಪ್ರಾರ್ಥನೆಮಾಡಿದರೆ, ಆತನ ನಾಮಗುಣಕೀರ್ತನೆ ಯನ್ನು ಸರ್ವದಾ ಮಾಡುತ್ತಿರುತ್ತಿದ್ದರೆ, ಆತನಲ್ಲಿ ಪ್ರೀತಿ ಕ್ರಮೇಣ ಉದ್ಭವವಾಗಿಬಿಡುತ್ತದೆ.”
ಪರಮಹಂಸರು ಪ್ರೇಮೋನ್ಮತ್ತರಾಗಿ ಕೊಠಡಿಯಲ್ಲಿ ಸುತ್ತಿ ಸುತ್ತಿ ನರ್ತಿಸುತ್ತ ಹಾಡಲಾರಂಭಿಸಿದ್ದಾರೆ:
ಗಂಗಾತೀರದಿ ಶ್ರೀಹರಿನಾಮವ
ನುತಿಸುವ ಇವನಾರು?
ಸಗ್ಗದ ಒಲವನು ಈ ತಿರೆಗೆರೆಯುವ
ನಿತ್ಯಾನಂದನು ಇವನೇನು?
ಘಂಟೆ ಬೆಳಗಿನ ಹತ್ತು. ರಾಮಲಾಲ ಕಾಳೀದೇವಾಲಯದ ನಿತ್ಯಪೂಜೆಯನ್ನು ಮಾಡಿ ಮುಗಿಸಿದ್ದಾನೆ. ಪರಮಹಂಸರು ಮಾಸ್ಟರೊಡನೆ ಕಾಳೀದೇವಾಲಯಕ್ಕೆ ಹೋಗುತ್ತಿದ್ದಾರೆ. ಗರ್ಭಗೃಹವನ್ನು ಪ್ರವೇಶಿಸಿ ಆಸನದಲ್ಲಿ ಕುಳಿತುಕೊಂಡರು. ಈಗ ಭಗವತಿಯ ಪಾದಪದ್ಮಗಳಿಗೆ ಒಂದೆರಡು ಹೂವುಗಳನ್ನು ಅರ್ಪಿಸುತ್ತಿದ್ದಾರೆ. ತಮ್ಮ ತಲೆಯ ಮೇಲೂ ಹೂವನ್ನು ಇಟ್ಟು ಧ್ಯಾನಮಾಡಲಾರಂಭಿಸಿದ್ದಾರೆ. ಈಗ ಭಗವತಿಗೆ ಒಂದು ಹಾಡು ಹಾಡುತ್ತಿದ್ದಾರೆ:
ಓ ಶರ್ವಪ್ರಿಯೆ ತಾಯಿ, ಸಕಲ ಭಯಹಾರಿಣಿಯೆ
ನಿನ್ನ ನಾಮವ ನಾನು ಕೇಳಿರುವೆನು………..
ಪರಮಹಂಸರು ಕಾಳೀದೇವಾಲಯದಿಂದ ಹಿಂದಿರುಗಿ ಬಂದು ತಮ್ಮ ಕೊಠಡಿಯ ಆಗ್ನೇಯ ವರಾಂಡದಲ್ಲಿ ಕುಳಿತಿದ್ದಾರೆ. ಭಗವತಿಯ ಮತ್ತು ರಾಧಾಕಾಂತ ದೇವಾಲಯಗಳ ಹಣ್ಣುಹಂಪಲುಗಳ ಪ್ರಸಾದವನ್ನು ತಾವೂ ತೆಗೆದುಕೊಳ್ಳುತ್ತ ಭಕ್ತರಿಗೂ ಹಂಚುತ್ತಿದ್ದಾರೆ.
ರಾಖಾಲ ಪರಮಹಂಸರ ಹತ್ತಿರ ಕುಳಿತುಕೊಂಡು “ಸ್ಮೈಲ್ಸ್” ಎಂಬುವವನ “ಸೆಲ್ಫ್-ಹೆಲ್ಪ್” ಎಂಬ ಗ್ರಂಥದಿಂದ “ಲಾರ್ಡ್ ಎರ್ಸ್ಕಿನ್” ಎಂಬುವವನ ವಿಷಯವಾಗಿ ಓದುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಈ ಪುಸ್ತಕ ಏನು ಹೇಳುತ್ತದೆ?”
ಮಾಸ್ಟರ್: “ಇದು ಹೇಳುತ್ತದೆ: ಲಾರ್ಡ್ ಎರ್ಸ್ಕಿನ್ ಎಂಬುವನು ಫಲಾಕಾಂಕ್ಷೆಯಿಲ್ಲದೆ ತನ್ನ ಕೆಲಸಗಳನ್ನು ಮಾಡುತ್ತಿದ್ದ.”
ಶ್ರೀರಾಮಕೃಷ್ಣರು: “ಹಾಗಾದರೆ ಇದು ಬಹಳ ಒಳ್ಳೆಯದೆ. ಆದರೆ ಪೂರ್ಣಜ್ಞಾನಿ ತನ್ನ ಹತ್ತಿರ ಒಂದು ಪುಸ್ತಕವನ್ನೂ ಇಟ್ಟುಕೊಳ್ಳುವುದಿಲ್ಲ. ಎಲ್ಲವೂ ಆತನ ನಾಲಗೆಯ ತುದಿಯಲ್ಲಿ. ಉದಾಹರಣೆಗೆ ಶುಕದೇವ. ಪುಸ್ತಕಗಳಲ್ಲಿ, ಎಂದರೆ ಶಾಸ್ತ್ರಗಳಲ್ಲಿ ಸಕ್ಕರೆ ಮರಳು ಮಿಶ್ರವಾಗಿ ಹೋಗಿವೆ. ಸಾಧು ಸಕ್ಕರೆಯನ್ನು ಮಾತ್ರ ಸ್ವೀಕರಿಸಿ ಮರಳನ್ನು ತ್ಯಜಿಸಿಬಿಡುತ್ತಾನೆ. ಸಾಧು ಸಾರವನ್ನು ಮಾತ್ರ ಗ್ರಹಿಸುತ್ತಾನೆ.”
ಕೀರ್ತನಕಾರ ವೈಷ್ಣವಚರಣ ಬಂದಿದ್ದಾನೆ. ಈಗ ಆತ ಕೀರ್ತನೆ ಮಾಡುತ್ತಿದ್ದಾನೆ. ಮಾಸ್ಟರ್ ನಹಬತ್ಖಾನೆಯಲ್ಲಿ ತನ್ನ ರಾತ್ರಿಯನ್ನು ಕಳೆದ.
೧೬ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ಬಿದಿಗೆ, ಭಾನುವಾರ
ಪರಮಹಂಸರು ಮಾಸ್ಟರೊಡನೆ ತಮ್ಮ ಕೊಠಡಿಯ ಅರ್ಧಚಂದ್ರಾಕಾರದ ವರಾಂಡದಲ್ಲಿ ಕುಳಿತಿದ್ದಾರೆ. ಘಂಟೆ ಬೆಳಗಿನ ಹತ್ತು. ಸಮೀಪದಲ್ಲೇ ಕಣಿಗಿಲು, ಮಲ್ಲಿಗೆ, ಗುಲಾಬಿ ಇವೇ ಮೊದಲಾದ ಹೂವಿನ ಗಿಡಗಳು ಹೂವು ತುಂಬಿ ನಗುತ್ತಿವೆ, ಪರಮಹಂಸರು ಮಾಸ್ಟರ್ ಕಡೆ ನೋಡುತ್ತ ಹಾಡುತ್ತಿದ್ದಾರೆ:
ನೀನೇ ಕಾಪಿಡಬೇಕು, ನಾನಿದೋ ಶರಣಾದೆ
ನಿನ್ನ ಪದಕೆ;
ಪಂಜರದ ಒಳಗಿರುವ ಪಕ್ಷಿಯಂದದಿ ನಾನು
ನಿಸ್ಸಹಾಯಕನಾಗಿ ಬಳಲುತಿರುವೆ
ಅನಂತ ಅಪರಾಧಿ, ಜ್ಞಾನಶೂನ್ಯನು ನಾನು
ಕರು ಕಳೆದ ಗೋವಿನೊಲು ಭ್ರಮಿಸುತಿರುವೆ
ಶ್ರೀರಾಮಕೃಷ್ಣರು: “ಏಕೆ? ಪಂಜರದ ಹಕ್ಕಿಯಂತೆ ಏಕೆ ಆಗಲು ಹೋಗಲಿ? ಥೂ!”
ಹೀಗೆಂದು ಹೇಳುತ್ತ ಇದ್ದಹಾಗೇ ಪರಮಹಂಸರು ಭಾವಾವಿಷ್ಟರಾಗಿಬಿಟ್ಟಿದ್ದಾರೆ. ಶರೀರ ಸ್ಥಿರವಾಗಿಬಿಟ್ಟಿದೆ; ಮನಸ್ಸು ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿದೆ. ಕೆನ್ನೆಗಳ ಮೇಲೆ ಪ್ರೇಮಾಶ್ರು ಇಳಿದು ಬರುತ್ತಿದೆ. ಸ್ವಲ್ಪ ಹೊತ್ತಾದ ಮೇಲೆ ಹೇಳಲಾರಂಭಿಸಿದ್ದಾರೆ: “ತಾಯೆ, ನನ್ನನ್ನು ಸೀತೆಯಂತೆ ಮಾಡಿಬಿಡು. ಆಕೆ ಒಮ್ಮೆಗೇ ಎಲ್ಲವನ್ನೂ ಮರೆತುಬಿಟ್ಟಿದ್ದಳು. ಶರೀರ, ಕೈಕಾಲು ಇಂದ್ರಿಯಗಳು ಇವುಗಳಾವುದರ ಅರಿವೇ ಅವಳಿಗಿರಲಿಲ್ಲ. ಅವಳಿಗಿದ್ದ ಕೇವಲ ಒಂದೇ ಒಂದು ಚಿಂತನೆ: ‘ರಾಮ ಎಲ್ಲಿ?’”
ಯಾವ ರೀತಿಯಾದ ವ್ಯಾಕುಲತೆಯುಂಟಾದರೆ ಭಗವಂತನ ಸಾಕ್ಷಾತ್ಕಾರ ದೊರೆಯು ತ್ತದೆ ಎಂಬುದನ್ನು ಮಾಸ್ಟರಿಗೆ ತೋರಿಸಿಕೊಡಲು ಪರಮಹಂಸರಿಗೆ ಸೀತೆಯ ಉದ್ದೀಪನ ವಾಯಿತೆ? ಸೀತೆ ರಾಮಮಯಜೀವಿತೆ-ರಾಮಚಿಂತನೆಯಿಂದ ಉನ್ಮಾದಿನಿ. ಶರೀರ ವೆಂಬುದು ಅಷ್ಟು ಪ್ರಿಯವಾದ ವಸ್ತು. ಅದನ್ನೂ ಆಕೆ ಮರೆತುಬಿಟ್ಟಿದ್ದಳು.
ಘಂಟೆ ಅಪರಾಹ್ನ ನಾಲ್ಕು. ಪ್ರಾಣಕೃಷ್ಣನ ಸಂಬಂಧಿಕ ಮುಖ್ಯೋಪಾಧ್ಯಾಯ ತನ್ನೊಡನೆ ಒಬ್ಬ ಶಾಸ್ತ್ರಜ್ಞ ಬ್ರಾಹ್ಮಣನನ್ನು ಕರೆದುಕೊಂಡು ಬಂದು ಕೊಠಡಿಯನ್ನು ಪ್ರವೇಶಿಸಿದ.
ಮುಖ್ಯೋಪಾಧ್ಯಾಯ: “ನಿಮ್ಮ ದರ್ಶನ ದೊರೆತು ನನಗೆ ಬಹಳ ಆನಂದವಾಗಿ ಬಿಟ್ಟಿದೆ.”
ಶ್ರೀರಾಮಕೃಷ್ಣರು: “ಭಗವಂತ ಎಲ್ಲರಲ್ಲಿಯೂ ಇದ್ದಾನೆ. ಎಲ್ಲರಲ್ಲಿರುವುದೂ ಆ ಒಂದೇ ಚಿನ್ನ. ಆದರೆ ಕೆಲವೆಡೆಗಳಲ್ಲಿ ಹೆಚ್ಚಾಗಿ ಪ್ರಕಾಶವಾಗಿದ್ದಾನೆ. ಸಂಸಾರಿಗಳಲ್ಲಿಯೂ ಭಗವಂತನಿದ್ದಾನೆ. ಆದರೆ ಅವರಲ್ಲಿ ಮಣ್ಣು ಮುಚ್ಚಿದ ಚಿನ್ನದ ಹಾಗೆ ಮುಚ್ಚಿಹೋಗಿ ಬಿಟ್ಟಿದ್ದಾನೆ.”
ಮುಖ್ಯೋಪಾಧ್ಯಾಯ: “ಮಹಾಶಯರೆ, ಇಹಕ್ಕೂ ಪರಕ್ಕೂ ಏನು ವ್ಯತ್ಯಾಸ?”
ಶ್ರೀರಾಮಕೃಷ್ಣರು: “ಸಾಧನೆಯ ಸಮಯದಲ್ಲಿ ‘ನೇತಿ, ನೇತಿ’ ಮಾರ್ಗ ಅನುಸರಿಸಿ ಎಲ್ಲವನ್ನೂ ತ್ಯಾಗಮಾಡಬೇಕಾಗುತ್ತದೆ. ಆದರೆ ಭಗವಂತನ ಸಾಕ್ಷಾತ್ಕಾರ ದೊರೆತನಂತರ ಗೊತ್ತಾಗುತ್ತದೆ, ಆತನೇ ಎಲ್ಲವೂ ಆಗಿದ್ದಾನೆ.
“ಒಮ್ಮೆ ರಾಮಚಂದ್ರನಿಗೆ ತೀವ್ರ ವೈರಾಗ್ಯ ಬಂದುಬಿಟ್ಟಿತು. ಅದನ್ನು ನೋಡಿ ದಶರಥ ಬಹಳ ಚಿಂತಿತನಾಗಿ ವಸಿಷ್ಠನನ್ನು ಸಮೀಪಿಸಿ ರಾಮ ಸಂಸಾರವನ್ನು ತ್ಯಾಗಮಾಡದ ಹಾಗೆ ಬುದ್ಧಿವಾದವೀಯಬೇಕೆಂದು ಬೇಡಿಕೊಂಡ. ವಸಿಷ್ಠ ರಾಮನ ಹತ್ತಿರಕ್ಕೆ ಬಂದು ನೋಡು ತ್ತಾನೆ, ಆತ ವಿಮನಸ್ಕನಾಗಿ ಕುಳಿತಿದ್ದಾನೆ. ಆಂತರ್ಯದಲ್ಲಿ ತೀವ್ರ ವೈರಾಗ್ಯ ತುಂಬಿ ತುಳುಕಾಡುತ್ತಿದೆ. ವಸಿಷ್ಠ ಆತನಿಗೆ ಹೇಳಿದ: ‘ನೀನು ಸಂಸಾರವನ್ನು ಏಕೆ ತ್ಯಾಗ ಮಾಡಬೇಕು?’ ಸಂಸಾರ ಆತನಿಂದ ಹೊರಗಿದೆಯೇನು? ನನ್ನೊಡನೆ ವಿಚಾರಮಾಡಿ ನೋಡು.’ ರಾಮನ ಅನುಭವಕ್ಕೆ ಬಂತು, ಈ ಜಗತ್ತು ಪರಬ್ರಹ್ಮನಿಂದಲೇ ಉದ್ಭವವಾಗಿದೆ ಎಂದು. ಅದಕ್ಕಾಗಿ ಆತ ಸುಮ್ಮನೆ ಆಗಿಬಿಟ್ಟ.
“ಯಾವ ವಸ್ತುವಿನಿಂದ ಮಜ್ಜಿಗೆ ಆಗಿದೆಯೊ ಅದೇ ವಸ್ತುವಿನಿಂದ ಬೆಣ್ಣೆ ಕೂಡ. ಈ ಅನುಭವವಾದವನಿಗೆ ಗೊತ್ತಾಗುತ್ತದೆ ಮಜ್ಜಿಗೆ ಬೆಣ್ಣೆಗೆ ಸೇರಿದುದೇ. ಬೆಣ್ಣೆ ಮಜ್ಜಿಗೆಗೆ ಸೇರಿದುದೇ. ಬಹಳ ಕಷ್ಟಪಟ್ಟು ಬೆಣ್ಣೆಯನ್ನು ತೆಗೆದ ನಂತರ, ಎಂದರೆ ಬ್ರಹ್ಮಜ್ಞಾನವನ್ನು ಪಡೆದ ನಂತರ ಅನುಭವವಾಗುತ್ತದೆ: ಬೆಣ್ಣೆ ಇತ್ತು ಎಂದರೆ ಮಜ್ಜಿಗೆಯೂ ಇರಲೇಬೇಕು, ಮಜ್ಜಿಗೆ ಇತ್ತು ಎಂದರೆ ಬೆಣ್ಣೆಯೂ ಇರಲೇಬೇಕು. ಬ್ರಹ್ಮನಿದ್ದಾನೆಂಬ ಬೋಧೆ ಇತ್ತು ಎಂದರೆ ಜೀವಜಗತ್ತು, ಚತುರ್ವಿಂಶತಿ ತತ್ತ್ವ ಇವುಗಳ ಬೋಧೆಯೂ ಆಗೇ ಆಗುತ್ತದೆ.
“ಬ್ರಹ್ಮ ಏನು ಎಂಬುದನ್ನು ಬಾಯಿಂದ ಹೇಳಲಾಗುವುದಿಲ್ಲ. ಎಲ್ಲಾ ವಸ್ತುಗಳು ಉಚ್ಛಿಷ್ಟವಾಗಿಹೋಗಿವೆ, ಎಂದರೆ ಬಾಯಿಂದ ಹೇಳಲ್ಪಟ್ಟಿವೆ. ಆದರೆ ಬ್ರಹ್ಮ ಏನು ಎಂಬುದನ್ನು ಯಾರಿಗೂ ಬಾಯಿಂದ ಹೇಳಲಾಗುವುದಿಲ್ಲ. ಅದಕ್ಕಾಗಿ ಅದು ಉಚ್ಛಿಷ್ಟವಾಗಿ ಹೋಗಿಲ್ಲ. ಈ ವಿಷಯವನ್ನು ಒಮ್ಮೆ ನಾನು ವಿದ್ಯಾಸಾಗರನಿಗೆ ತಿಳಿಸಿದೆ. ಆತನಿಗೆ ಇದನ್ನು ಕೇಳಿ ಬಹಳ ಆನಂದವಾಯಿತು.
“ಆದರೆ ವಿಷಯಬುದ್ಧಿ ಲೇಶಮಾತ್ರವಿದ್ದರೂ ಬ್ರಹ್ಮಜ್ಞಾನ ದೊರೆಯುವುದಿಲ್ಲ. ಕಾಮಕಾಂಚನಾಸಕ್ತಿ ಮನಸ್ಸಿನಲ್ಲಿ ಒಂದು ಕಿಂಚಿತ್ತೂ ಇಲ್ಲದೆ ಇತ್ತು ಎಂದರೆ ಮಾತ್ರ ಅದು ದೊರೆಯುತ್ತದೆ. ಗಿರಿರಾಜನಿಗೆ ಪಾರ್ವತಿ ಹೇಳಿದಳು: ‘ತಂದೆ, ನಿಮಗೆ ಬ್ರಹ್ಮಜ್ಞಾನ ಬೇಕಾದರೆ, ನೀವು ಸಾಧುಸಂಗ ಮಾಡಿ.’
ಶ್ರೀರಾಮಕೃಷ್ಣರು ಮುಖ್ಯೋಪಾಧ್ಯಾಯನನ್ನು ಸಂಬೋಧಿಸಿ ಹೇಳುತ್ತಿದ್ದಾರೆ: “ನಿನಗೆ ಧನ ಐಶ್ವರ್ಯ ಎಲ್ಲಾ ಇದ್ದರೂ ಭಗವಂತನ ಧ್ಯಾನ ಮಾಡುತ್ತಿದ್ದೀಯೆ. ಇದು ಬಹಳ ಒಳ್ಳೆಯದು. ಗೀತೆಯಲ್ಲಿ ಹೇಳಿದೆ, ಯಾರು ಯೋಗಭ್ರಷ್ಟರೊ ಅವರು ಭಕ್ತರಾಗಿ ಐಶ್ವರ್ಯವಂತರ ಮನೆಗಳಲ್ಲಿ ಜನ್ಮವೆತ್ತುತ್ತಾರೆ.”
ಮುಖ್ಯೋಪಾಧ್ಯಾಯ ಗೀತೆಯಿಂದ ಈ ಶ್ಲೋಕವನ್ನು ಉದ್ಧರಿಸಿದ.
ಶ್ರೀರಾಮಕೃಷ್ಣರು: “ಭಗವಂತ ಇಚ್ಛೆಪಟ್ಟುದೇ ಆದರೆ, ಜ್ಞಾನಿಯನ್ನೂ ಸಂಸಾರದಲ್ಲಿ ಇಡಬಲ್ಲ. ಆತನ ಇಚ್ಛೆಯಿಂದಲೇ ಈ ಜೀವಜಗತ್ತು ಉಂಟಾಗಿದೆ. ಆತ ಇಚ್ಛಾಮಯ.”
ಮುಖ್ಯೋಪಾಧ್ಯಾಯ ನಗುತ್ತ: “ಅವನಿಗೆಲ್ಲಿಂದ ಬಂತು ಇಚ್ಛೆ? ಆತನಿಗೆ ಅಭಾವ ಎಂಬುದು ಏನಾದರೂ ಇದೆಯೇ?”
ಶ್ರೀರಾಮಕೃಷ್ಣರು ನಗುತ್ತ: “ಅದರಲ್ಲಿ ತಪ್ಪೇನಿದೆ? ನೀರು ಸುಮ್ಮನೆ ನಿಂತಿದ್ದರೂ ನೀರೇ, ಅಲೆಗಳಾಗಿ ಎದ್ದಿದ್ದರೂ ನೀರೇ. ಹಾವು ಸುರುಳಿ ಸುತ್ತಿ ಸುಮ್ಮನೆ ಬಿದ್ದಿದ್ದರೂ ಹಾವೇ, ಸೊಟ್ಟಸೊಟ್ಟವಾಗಿ ಹರಿದುಹೋಗುತ್ತಿದ್ದರೂ ಹಾವೇ. ಮನುಷ್ಯ ಸುಮ್ಮನೆ ಕುಳಿತಿದ್ದರೂ ಮನುಷ್ಯನೇ, ಕೆಲಸದಲ್ಲಿ ತೊಡಗಿದ್ದರೂ ಮನುಷ್ಯನೇ.
“ಜೀವಜಗತ್ತನ್ನು ಬ್ರಹ್ಮನಿಂದ ಹೊರಹಾಕುವುದು ಹೇಗೆ? ಹಾಗೆ ಮಾಡಿದರೆ ತೂಕ ಕಡಮೆಯಾಗಿಬಿಡುತ್ತದೆ. ಬೇಲದ ಹಣ್ಣಿನ ಬೀಜ ಮತ್ತು ಕರಟವನ್ನು ಹೊರಕ್ಕೆ ಬಿಸಾಡಿಬಿಟ್ಟರೆ ಬೇಲದ ಹಣ್ಣಿನ ನಿಜವಾದ ತೂಕ ದೊರೆಯುವುದಿಲ್ಲ.”
“ಬ್ರಹ್ಮನಿರ್ಲಿಪ್ತ. ಗಾಳಿಯಲ್ಲಿ ಸುಗಂಧ ದುರ್ಗಂಧಗಳಿರುವುದನ್ನು ನಾವು ಅನುಭವಿಸಬಹುದು. ಆದರೆ ಗಾಳಿಮಾತ್ರ ಅವುಗಳಿಂದ ನಿರ್ಲಿಪ್ತವಾಗಿದೆ. ಬ್ರಹ್ಮನಿಗೂ ಶಕ್ತಿಗೂ ಯಾವ ಭೇದವೂ ಇಲ್ಲ. ಆ ಆದ್ಯಾಶಕ್ತಿಯೇ ಈ ಜೀವಜಗತ್ತಾಗಿ ಆಗಿದೆ.”
ಮುಖ್ಯೋಪಾಧ್ಯಾಯ: “ಯೋಗಭ್ರಷ್ಟನಾಗಲು ಕಾರಣವೇನು?”
ಶ್ರೀರಾಮಕೃಷ್ಣರು: “ಒಂದು ಹೇಳಿಕೆ ಇದೆ: ‘ಗರ್ಭದಲ್ಲಿದ್ದಾಗ ಯೋಗದಲ್ಲಿದ್ದೆ. ಭೂಮಿಗೆ ಬಂದು ಮಣ್ಣು ಮುಕ್ಕಿದೆ. ಸೂಲಗಿತ್ತಿಯೇನೋ ಒಂದು ಬಂಧನವನ್ನು- ಹೊಕ್ಕುಳು ಬಳ್ಳಿಯನ್ನು-ಕತ್ತರಿಸಿ ಹಾಕಿದಳು. ಆದರೆ ನಾನು ಮಾಯಾಬಂಧನವನ್ನು ಕತ್ತರಿಸುವ ಬಗೆ ಹೇಗೆ?’
“ಕಾಮಕಾಂಚನ ಇವೇ ಮಾಯೆ. ಮನಸ್ಸನ್ನು ಇವೆರಡೂ ಬಿಟ್ಟು ತೊಲಗಿದವು ಎಂದರೆ ಯೋಗವುಂಟಾಗುತ್ತದೆ. ಆತ್ಮ, ಎಂದರೆ ಪರಮಾತ್ಮ ಸೂಜಿಗಲ್ಲು; ಜೀವಾತ್ಮ ಸೂಜಿ. ಆತ ಎಳೆದುಕೊಂಡರೇ ಯೋಗ. ಆದರೆ ಸೂಜಿಗೆ ಮಣ್ಣು ಮೆತ್ತಿಕೊಂಡಿದ್ದರೆ ಸೂಜಿಗಲ್ಲು ಅದನ್ನು ಎಳೆಯಲಾರದು. ಮಣ್ಣನ್ನು ತೊಳೆದುಬಿಟ್ಟರೆ ಅದು ಎಳೆದು ಬಿಡುತ್ತದೆ. ಕಾಮ-ಕಾಂಚನಗಳೆಂಬ ಮಣ್ಣನ್ನು ತೊಳೆಯಬೇಕು.”
ಮುಖ್ಯೋಪಾಧ್ಯಾಯ: “ಅದನ್ನು ತೊಳೆಯುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಭಗವಂತನಿಗಾಗಿ ವ್ಯಾಕುಲತೆಯಿಂದ ಅಳು. ಆತನಿಗಾಗಿ ಸುರಿಸಿದ ಕಣ್ಣೀರು ಮಣ್ಣನ್ನು ತೊಳೆದುಬಿಡುತ್ತದೆ. ನೀನು ಹಾಗೆ ಮಾಡಿ ಪರಿಶುದ್ಧನಾಗಿ ಬಿಟ್ಟೆ ಎಂದರೆ ಆಗ ಸೂಜಿಗಲ್ಲು ನಿನ್ನನ್ನು ಎಳೆದುಬಿಡುತ್ತದೆ. ಆಗ ಮಾತ್ರವೇ ಯೋಗ.”
ಮುಖ್ಯೋಪಾಧ್ಯಾಯ: “ಆಹಾ! ಎಂಥ ದಿವ್ಯವಾದ ಮಾತು!”
ಶ್ರೀರಾಮಕೃಷ್ಣರು: “ಭಗವಂತನಿಗಾಗಿ ಅಳುವುದಾದರೆ ಆತನ ದರ್ಶನ ದೊರೆಯು ತ್ತದೆ-ಸಮಾಧಿಯುಂಟಾಗುತ್ತದೆ. ಯೋಗ ಸಿದ್ಧಿಸಿತು ಎಂದರೆ ಸಮಾಧಿ. ಭಗವಂತನಿಗಾಗಿ ಅತ್ತರೆ ಕುಂಭಕ ತಾನಾಗಿಯೇ ಉಂಟಾಗುತ್ತದೆ. ಮುಂದಿನ ಮೆಟ್ಟಲೇ ಸಮಾಧಿ.
“ಇನ್ನೊಂದು ಮಾರ್ಗವಿದೆ-ಧ್ಯಾನದ್ದು. ಸಹಸ್ರಾರದಲ್ಲಿ ಶಿವ ವಿಶೇಷರೂಪದಿಂದ ಇದ್ದಾನೆ. ಆತನ ಮೇಲೆ ಧ್ಯಾನಮಾಡಬೇಕು. ಶರೀರ ತಟ್ಟೆಯಿದ್ದ ಹಾಗೆ. ಮನಸ್ಸು, ಬುದ್ಧಿ, ನೀರು ಇದ್ದ ಹಾಗೆ. ಈ ನೀರಿನಲ್ಲಿ ಸಚ್ಚಿದಾನಂದ ಸೂರ್ಯನ ಪ್ರತಿಬಿಂಬ ಬೀಳುತ್ತದೆ. ಈ ಪ್ರತಿಬಿಂಬಿತ ಸೂರ್ಯನ ಧ್ಯಾನ ಮಾಡುತ್ತ ಮಾಡುತ್ತ ಭಗವಂತನ ಕೃಪೆಯಿಂದ ಸತ್ಯವಾದ ಸೂರ್ಯನ ದರ್ಶನ ದೊರೆಯುತ್ತದೆ.
“ಆದರೆ ಸಂಸಾರಿಗಳಿಗೆ ಸರ್ವದಾ ಸಾಧುಸಂಗ ಆವಶ್ಯಕ. ಎಲ್ಲರಿಗೂ ಅದು ಬೇಕಾದ್ದೆ. ಸಂನ್ಯಾಸಿಗಳಿಗೂ ಕೂಡ. ಆದರೆ ಸಂಸಾರಿಗಳಿಗೆ ವಿಶೇಷತಃ. ಸಂಸಾರಿ ಕಾಮಕಾಂಚನಗಳ ಮಧ್ಯೆ ಇರಬೇಕಾಗಿರುವುದರಿಂದ ಆತನಿಗೆ ರೋಗ ತಗುಲಿಕೊಂಡೇ ಇರುತ್ತದೆ.”
ಮುಖ್ಯೋಪಾಧ್ಯಾಯ: “ಹೌದು, ಆತನಿಗೆ ರೋಗ ತಗುಲಿಕೊಂಡೇ ಇದೆ.”
ಶ್ರೀರಾಮಕೃಷ್ಣರು: “ಭಗವಂತನಿಗೆ ವಕಾಲತ್ತು ವಹಿಸಿಬಿಡು. ಆತ ತನಗಿಚ್ಛೆ ಬಂದಂತೆ ಮಾಡಲಿ. ನೀನು ಬೆಕ್ಕಿನ ಮರಿಯ ಹಾಗೆ ವ್ಯಾಕುಲನಾಗಿ ಆತನನ್ನು ಕರೆ. ತಾಯಿ ಬೆಕ್ಕು ತನಗಿಚ್ಛೆ ಬಂದ ಎಡೆಯಲ್ಲಿ ಅದನ್ನು ಇಡುತ್ತದೆ. ಮರಿಗೆ ಏನೂ ಗೊತ್ತಿರುವುದಿಲ್ಲ. ಅದು ಮರಿಯನ್ನು ಕೆಲವು ವೇಳೆ ಹಾಸಿಗೆಯ ಮೇಲೆ ಇಡುತ್ತದೆ. ಇನ್ನು ಕೆಲವು ವೇಳೆ ಒಲೆಯೊಳಗೆ ಬೂದಿಯ ಮೇಲೆ ಇಡುತ್ತದೆ.”
ಮುಖ್ಯೋಪಾಧ್ಯಾಯ: “ಭಗವದ್ಗೀತೆ ಮೊದಲಾದುವುಗಳನ್ನು ಓದುವುದು ಮೇಲು.”
ಶ್ರೀರಾಮಕೃಷ್ಣರು: “ಕೇವಲ ಓದುವುದರಿಂದಲೇ ಆಗಲಿ ಅಥವಾ ಕೇಳುವುದರಿಂದಲೇ ಆಗಲಿ ಏನು ಪ್ರಯೋಜನ? ಕೆಲವರು ಹಾಲಿನ ವಿಷಯವಾಗಿ ಕೇಳಿದ್ದಾರೆ, ಇನ್ನು ಕೆಲವರು ಅದನ್ನು ನೋಡಿದ್ದಾರೆ, ಮತ್ತೆ ಕೆಲವರು ಅದನ್ನು ಕುಡಿದಿದ್ದಾರೆ. ಭಗವಂತನನ್ನು ನಿಜವಾಗಿ ದರ್ಶನ ಮಾಡಬಹುದು. ಅಷ್ಟೇ ಏಕೆ ಆತನೊಡನೆ ಮಾತುಕತೆಯನ್ನೂ ಆಡಬಹುದು.
“ಮೊದಲನೆಯ ಹಂತ ಪ್ರವರ್ತಕನದು. ಆತ ಓದುತ್ತಾನೆ, ಕೇಳುತ್ತಾನೆ. ಎರಡನೆ ಯದು ಸಾಧಕನ ಹಂತ. ಆತ ಭಗವಂತನಿಗೆ ಪ್ರಾರ್ಥನೆ ಸಲ್ಲಿಸುತ್ತಾನೆ, ಧ್ಯಾನ ಚಿಂತನೆ ಮಾಡುತ್ತಾನೆ, ನಾಮಗುಣಕೀರ್ತನೆ ಮಾಡುತ್ತಾನೆ. ಮೂರನೆಯ ಹಂತ ಸಿದ್ಧನದು. ಭಗವಂತನನ್ನು ತನ್ನ ಆಂತರ್ಯದಲ್ಲಿ ಅರಿತುಕೊಂಡಿರುತ್ತಾನೆ. ದರ್ಶನಮಾಡಿಕೊಂಡಿರು ತ್ತಾನೆ. ಕೊನೆಯ ಹಂತ ಸಿದ್ಧರ ಸಿದ್ಧನದು. ಉದಾಹರಣೆಗೆ ಚೈತನ್ಯನದು. ಕೆಲವು ವೇಳೆ ವಾತ್ಸಲ್ಯಭಾವದಿಂದ ಇರುತ್ತಾನೆ, ಇನ್ನು ಕೆಲವು ವೇಳೆ ಮಧುರಭಾವದಿಂದ ಇರುತ್ತಾನೆ.”
ಮಾಸ್ಟರ್, ರಾಖಾಲ, ಯೋಗಿನ್, ಲಾಟು ಮೊದಲಾದ ಭಕ್ತರು ಈ ದೇವದುರ್ಲಭ ವಿಷಯಗಳನ್ನೆಲ್ಲಾ ಮಂತ್ರಮುಗ್ಧರಾಗಿ ಕೇಳುತ್ತಿದ್ದಾರೆ.
ಈಗ ಮುಖ್ಯೋಪಾಧ್ಯಾಯ ಮತ್ತು ಅವನ ಸ್ನೇಹಿತ ಶ್ರೀರಾಮಕೃಷ್ಣರಿಂದ ಬೀಳ್ಕೊಳ್ಳು ತ್ತಿದ್ದಾರೆ. ಅವರು ಶ್ರೀರಾಮಕೃಷ್ಣರಿಗೆ ನಮಸ್ಕರಿಸಿ ಮೇಲೆದ್ದರು. ಅವರಿಗೆ ಮರ್ಯಾದೆ ತೋರಿಸಲು ಶ್ರೀರಾಮಕೃಷ್ಣರೂ ಮೇಲೆದ್ದರು.
ಮುಖ್ಯೋಪಾಧ್ಯಾಯ ನಗುತ್ತ: “ನೀವೂ ಏಳುವುದು ಕೂರುವುದೇ!”
ಶ್ರೀರಾಮಕೃಷ್ಣರು: “ಅದರಲ್ಲಿ ತಪ್ಪೇನಿದೆ? ನೀರು ಸ್ಥಿರವಾಗಿ ನಿಂತಿದ್ದರೂ ನೀರೇ ಅಲ್ಲೋಲಕಲ್ಲೋಲವಾಗುತ್ತಿದ್ದರೂ ನೀರೇ. ನಾನು ಗಾಳಿಗೆ ಸಿಕ್ಕಿದ ಎಂಜಲೆಲೆಯ ಹಾಗೆ. ಗಾಳಿ ಅದನ್ನು ಇಷ್ಟಬಂದ ಕಡೆ ಹೊತ್ತುಕೊಂಡು ಹೋಗಿಬಿಡುತ್ತದೆ. ನಾನು ಯಂತ್ರ, ಆಕೆ ಯಂತ್ರಿ.”
ಮುಖ್ಯೋಪಾಧ್ಯಾಯ ಮತ್ತು ಆತನ ಸ್ನೇಹಿತ ಕೊಠಡಿಯಿಂದ ಹೊರಹೊರಟರು. ಮಾಸ್ಟರ್ ಭಾವಿಸುತ್ತಿದ್ದಾನೆ: “ವೇದಾಂತದ ದೃಷ್ಟಿಯಿಂದ ಎಲ್ಲಾ ಸ್ನಪ್ನವಿದ್ದ ಹಾಗೆ. ಹಾಗಾದರೆ ಜೀವ, ಜಗತ್ತು, ನಾನು, ಎಲ್ಲಾ-ಮಿಥ್ಯೆಯೇ?”
ಮಾಸ್ಟರ್ ಅಲ್ಪಸ್ವಲ್ಪ ವೇದಾಂತ ಓದಿದ್ದಾನೆ. ಮತ್ತೆ ವೇದಾಂತದ ಅಸ್ಫುಟ ಪ್ರತಿಧ್ವನಿ ಯಂತಿರುವ ಕ್ಯಾಂಟ್, ಹೆಗಲ್ ಮೊದಲಾದ ಜರ್ಮನ್ ತತ್ತ್ವಶಾಸ್ತ್ರಜ್ಞರ ವಿಚಾರಗ್ರಂಥ ಗಳನ್ನೂ ಓದಿದ್ದಾನೆ. ಆದರೆ ಪರಮಹಂಸರು ಸಾಮಾನ್ಯ ಮನುಷ್ಯರ ಹಾಗೆ ವಿಚಾರದಲ್ಲಿ ತೊಡಗಲಿಲ್ಲ. ಜಗನ್ಮಾತೆ ಅವರಿಗೆ ಸಕಲ ದರ್ಶನಗಳ ಸಾರವನ್ನೂ ತಿಳಿಸಿಕೊಟ್ಟು ಬಿಟ್ಟಿದ್ದಾಳೆ. ಮಾಸ್ಟರ್ ಅದರ ಸಂಬಂಧವಾಗಿಯೇ ಭಾವಿಸುತ್ತಿದ್ದಾನೆ.
ಸ್ವಲ್ಪ ಹೊತ್ತಾದ ಮೇಲೆ ಪರಮಹಂಸರು ಮಾಸ್ಟರೊಡನೆ ತಮ್ಮ ಕೊಠಡಿಯ ಪಶ್ಚಿಮದಲ್ಲಿರುವ ಅರ್ಧಚಂದ್ರಾಕಾರದ ವರಾಂಡದಲ್ಲಿ ಮಾತುಕತೆ ಆಡುತ್ತಿದ್ದಾರೆ. ಅಲ್ಲಿ ಇನ್ನು ಬೇರೆ ಯಾರೂ ಇಲ್ಲ. ಚಳಿಗಾಲದ ಅಪರಾಹ್ನ, ಸೂರ್ಯ ಇನ್ನೂ ಮುಳುಗಿಲ್ಲ.
ಮಾಸ್ಟರ್: “ಈ ಜಗತ್ತು ಮಿಥ್ಯೆಯಾದುದೇ?”
ಶ್ರೀರಾಮಕೃಷ್ಣರು: “ಏಕೆ ಮಿಥ್ಯೆಯಾದೀತು? ಈಪ್ರಶ್ನೆ ವಿಚಾರಕ್ಕೆ ಸಂಬಂಧಪಟ್ಟದ್ದು.”
“ಮೊದಲು ‘ನೇತಿ, ನೇತಿ’ ಎಂದು ವಿಚಾರದಲ್ಲಿ ತೊಡಗಿದಾಗ, ಭಗವಂತ ಜೀವವಲ್ಲ, ಜಗತ್ತಲ್ಲ, ಚತುರ್ವಿಂಶತಿ ತತ್ತ್ವ ಅಲ್ಲ ಎಂಬುದಾಗಿ ತೋರುತ್ತದೆ. ಎಲ್ಲವೂ ಸ್ವಪ್ನವಿದ್ದ ಹಾಗೆ ಕಾಣುತ್ತದೆ. ಬಳಿಕ ಅನುಲೋಮ ಹೋಗಿ ವಿಲೋಮ. ಆಗ ಭಗವಂತನೇ ಜೀವಜಗತ್ತು ಆಗಿದ್ದಾನೆಂಬ ಬೋಧೆಯಾಗುತ್ತದೆ.
“ನೀನು ಮೆಟ್ಟಲ ಸಾಲು ಹತ್ತಿ ಮಾಳಿಗೆಗೆ ಹೋಗುತ್ತಿದ್ದೀಯೆ ಅಂತ ಇಟ್ಟುಕೊ. ಆದರೆ ಎಲ್ಲಿಯವರೆಗೆ ಮಾಳಿಗೆಯ ಅರಿವು ನಿನಗಿರುವುದೊ, ಅಲ್ಲಿಯವರೆಗೆ ಮೆಟ್ಟಿಲ ಸಾಲಿನ ಅರಿವೂ ನಿನಗಿರುತ್ತದೆ. ಯಾರಿಗೆ ಎತ್ತರದ ಜ್ಞಾನವಿದೆಯೊ, ಆತನಿಗೆ ತಗ್ಗಿನ ಜ್ಞಾನವೂ ಇರುತ್ತದೆ. ಆದರೆ ಮಾಳಿಗೆಯನ್ನು ಹತ್ತಿ ನೋಡಿದಾಗ ನಿನ್ನ ಅನುಭವಕ್ಕೆ ಬರುತ್ತದೆ, ಯಾವ ವಸ್ತುಗಳಿಂದ ಎಂದರೆ ಇಟ್ಟಿಗೆ ಸುಣ್ಣ ಇಟ್ಟಿಗೆಪುಡಿ ಇವುಗಳಿಂದ ಮಾಳಿಗೆ ನಿರ್ಮಿತವಾಗಿದೆಯೊ, ಅದೇ ವಸ್ತುಗಳಿಂದ ಮೆಟ್ಟಲ ಸಾಲೂ ನಿರ್ಮಿತವಾಗಿದೆ.
“ನಾನಾಗಲೇ ಬೇಲದ ಹಣ್ಣಿನ ಉದಾಹರಣೆ ಕೊಟ್ಟಿದ್ದೇನೆ. ಯಾರು ಅಚಲನೋ ಆತ ಚಲನೂ ಹೌದು.
“ ‘ಅಹಂ’ ಎಂಬುದು ಹೋಗತಕ್ಕುದಲ್ಲ. ‘ನಾನು ದೇಹ’ ಎಂಬ ಜ್ಞಾನವಿರುವವರೆಗೆ, ಜೀವಜಗತ್ತು ಇದ್ದೇ ಇರುತ್ತದೆ. ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡರೆ ಕಂಡುಬರುತ್ತದೆ, ಆತನೇ ಜೀವಜಗತ್ತು ಆಗಿರುವುದಾಗಿ. ಕೇವಲ ವಿಚಾರದಿಂದ ಈ ಅನುಭವವನ್ನು ಪಡೆಯಲಾಗುವುದಿಲ್ಲ.
“ಶಿವನಿಗೆ ಎರಡು ಅವಸ್ಥೆ. ಯಾವಾಗ ಸಮಾಧಿಸ್ಥನಾಗಿರುತ್ತಾನೊ, ಎಂದರೆ ಮಹಾ ಯೋಗದಲ್ಲಿರುತ್ತಾನೊ, ಆಗ ಆತ ಆತ್ಮಾರಾಮ. ಮತ್ತೆ ಯಾವಾಗ ಆ ಅವಸ್ಥೆಯಿಂದ ಕೆಳಕ್ಕೆ ಇಳಿದುಬರುತ್ತಾನೊ, ಆಗ ಆತನಲ್ಲಿ ಸ್ವಲ್ಪ ಅಹಂ ಇರುತ್ತದೆ. ಬಳಿಕ ಆತ ‘ರಾಮ! ರಾಮ!’ ಅಂತ ಹೇಳುತ್ತ ನರ್ತಿಸುತ್ತಾನೆ.”
ಪರಮಹಂಸರು ಶಿವನ ಅವಸ್ಥೆಯನ್ನು ವರ್ಣನೆಮಾಡಿ ತಮ್ಮ ಅವಸ್ಥೆಯನ್ನೇ ಸೂಚಿಸಿ ಹೇಳಿದರೇನು?
ಮುಸ್ಸಂಜೆಯಾಗಿದೆ. ಪರಮಹಂಸರು ಜಗನ್ಮಾತೆಯ ನಾಮೋಚ್ಚಾರಣೆ ಮಾಡುತ್ತ ಆಕೆಯ ಮೇಲೆ ಧ್ಯಾನಮಾಡುತ್ತಿದ್ದಾರೆ. ಭಕ್ತರೂ ನಿರ್ಜನಪ್ರದೇಶಗಳಿಗೆ ಹೋಗಿ ತಮ್ಮ ತಮ್ಮ ಆದರ್ಶಧ್ಯೇಯಗಳ ಮೇಲೆ ಧ್ಯಾನಮಾಡುತ್ತಿದ್ದಾರೆ, ಈಗ ಭಗವತಿ ಕಾಳೀದೇವಾಲಯದಲ್ಲಿ, ರಾಧಾಕಾಂತದೇವಾಲಯದಲ್ಲಿ, ಹನ್ನೆರಡು ಶಿವದೇವಾಲಯಗಳಲ್ಲಿ ಸಾಯಂ ಮಂಗಳಾರತಿ ಆರಂಭವಾಯಿತು.
ಇಂದು ಕೃಷ್ಣಪಕ್ಷದ ದ್ವಿತೀಯ ತಿಥಿ. ಸೂರ್ಯ ಮುಳುಗಿದ ಸ್ವಲ್ಪ ಹೊತ್ತಿನೊಳಗೇ ಚಂದ್ರೋದಯವಾಯಿತು. ಬೆಳದಿಂಗಳು ದೇವಾಲಯಗಳ ಗೋಪುರಗಳ ಮೇಲೂ, ಸುತ್ತ ಮುತ್ತಲಿನ ಗಿಡಬಳ್ಳಿಗಳ ಮೇಲೂ, ಭಾಗೀರಥಿಯ ಮೇಲೂ ಬಿದ್ದು ಅವುಗಳಿಗೆ ಒಂದು ಅಪೂರ್ವ ಕಾಂತಿಯನ್ನು ಕೊಟ್ಟಿದೆ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ, ಮಾಸ್ಟರ್ ನೆಲದ ಮೇಲೆ ಕುಳಿತುಕೊಂಡಿದ್ದಾರೆ. ಮಾತುಕತೆ ವೇದಾಂತದ ಸಂಬಂಧವಾಗಿ ಆರಂಭವಾಯಿತು.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಜಗತ್ತು ಮಿಥ್ಯೆಯೇಕಾದೀತು?ಇದು ತತ್ತ್ವಶಾಸ್ತ್ರಜ್ಞರ ಊಹಾಪೋಹಕ್ಕೆ ಸೇರಿದ ವಿಷಯ. ಭಗವಂತನ ದರ್ಶನವಾದನಂತರ ಬೋಧೆಯಾಗುತ್ತದೆ, ಆತನೇ ಜೀವ ಜಗತ್ತು ಆಗಿರುವುದಾಗಿ.
“ಭಗವತಿ ನನಗೆ ಕಾಳೀ ದೇವಾಲಯದಲ್ಲಿ ತೋರಿಸಿದಳು, ತಾನೇ ಎಲ್ಲವೂ ಆಗಿರುವುದಾಗಿ. ತೋರಿಸಿದಳು, ಎಲ್ಲವೂ ಚಿನ್ಮಯವಾಗಿರುವುದನ್ನು. ಪ್ರತಿಮೆ ಚಿನ್ಮಯವಾಗಿ, ವೇದಿ ಚಿನ್ಮಯವಾಗಿ, ಕೋಶಾ-ಕುಶಿ (ಪೂಜಾಪಾತ್ರೆ) ಚಿನ್ಮಯವಾಗಿ, ಬಾಗಿಲ ಚೌಕಟ್ಟು ಅಮೃತಶಿಲೆ ಎಲ್ಲ ಚಿನ್ಮಯವಾಗಿ-ಕಂಡುವು.
“ಗರ್ಭಗುಡಿಯಲ್ಲಿರುವುದೆಲ್ಲಾ ರಸಮಯವಾಗಿ-ಸಚ್ಚಿದಾನಂದಮಯವಾಗಿ ಕಂಡು ಬಂದುವು. ಕಾಳೀದೇವಾಲಯದ ಎದುರಿಗೆ ಒಬ್ಬ ದುಷ್ಟನನ್ನು ನೋಡಿದೆ. ಆದರೆ ಆತನಲ್ಲೂ ಆಕೆಯ ಶಕ್ತಿ ಜ್ವಲಿಸುತ್ತಿದ್ದುದು ಕಣ್ಣಿಗೆ ಬಿತ್ತು.
“ಅದಕ್ಕಾಗಿಯೇ ನಾನು ಭಗವತಿಗೆ ಅರ್ಪಿಸಬೇಕಾದ ಪೂರಿಯನ್ನು ಬೆಕ್ಕಿಗೆ ತಿನ್ನಿಸಿದುದು. ಭಗವತಿಯೇ ಎಲ್ಲವೂ ಆಗಿರುವುದನ್ನು ನೋಡಿದೆ-ಬೆಕ್ಕು ಕೂಡ. ಆಗ ಪಾರುಪತ್ಯಗಾರ ನಾನು ಭಗವತಿಗೆ ಅರ್ಪಿಸಬೇಕಾದ್ದನ್ನು ಬೆಕ್ಕಿಗೆ ತಿನ್ನಿಸುತ್ತಿರುವುದಾಗಿ ಮಥುರಬಾಬುವಿಗೆ ಕಾಗದ ಬರೆದ. ಆದರೆ ಮಥುರಬಾಬುವಿಗೆ ನನ್ನ ಮಾನಸಿಕ ಅವಸ್ಥೆ ಚೆನ್ನಾಗಿ ಗೊತ್ತಿತ್ತು. ಆತ ಪಾರುಪತ್ಯಗಾರನಿಗೆ ಉತ್ತರ ಬರೆದು ಕಳುಹಿಸಿದ: ‘ಅವರು ಹೇಗೆ ಬೇಕಾದರೆ ಹಾಗೆ ಮಾಡಲಿ. ಅವರ ತಂಟೆಗೇ ನೀನು ಹೋಗಕೂಡದು.’
“ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಂಡರೆ ಇವುಗಳ ನಿಜಸ್ವರೂಪವನ್ನು ನೀನು ನೋಡಬಹುದು. ಆತನೇ ಜೀವ, ಜಗತ್ತು, ಚತುರ್ವಿಂಶತಿ ತತ್ತ್ವ ಆಗಿರುವುದನ್ನು ನೋಡಬಹುದು.
“ಆದರೆ ಆತ ಸಂಪೂರ್ಣವಾಗಿ ‘ಅಹಂ’ ಎಂಬುದನ್ನು ತೊಡೆದುಹಾಕಿಬಿಟ್ಟದ್ದೇ ಆದರೆ, ಬಳಿಕ ಏನು ಇರುತ್ತದೆ ಎಂಬುದನ್ನು ಬಾಯಿಂದ ಹೇಳಲಾಗುವುದಿಲ್ಲ. ರಾಮಪ್ರಸಾದ ತನ್ನ ಒಂದು ಹಾಡಿನಲ್ಲಿ ಹೇಳಿದ್ದಾನೆ: ‘ಆಗ ನೀನು ಒಳ್ಳೆಯವನೊ, ಅಥವಾ ನಾನು ಒಳ್ಳೆಯವನೊ ಎಂಬುದು ನಿನಗೇ ಗೊತ್ತಾಗುತ್ತದೆ!’ ಆ ಅವಸ್ಥೆ ನನಗೆ ಒಮ್ಮೊಮ್ಮೆ ಉಂಟಾಗುತ್ತದೆ.
“ಯಾವುದೇ ಆಗಲಿ, ವಿಚಾರದ ಮೂಲಕ ಒಂದು ವಿಧವಾಗಿ ತೋರುತ್ತದೆ. ಆ ವಸ್ತುವೇ, ಭಗವಂತ ತೋರಿಸಿದಾಗ, ಸಂಪೂರ್ಣ ಬೇರೆ ರೀತಿಯಾಗಿ ತೋರಿಬರುತ್ತದೆ.”
೧೭ನೆ ಡಿಸೆಂಬರ್ ೧೮೮೩, ಮಾರ್ಗಶಿರ ಕೃಷ್ಣ ತದಿಗೆ, ಸೋಮವಾರ
ಘಂಟೆ ಬೆಳಗಿನ ಎಂಟು. ಪರಮಹಂಸರು ಮಾಸ್ಟರೊಡನೆ ತಮ್ಮ ಕೊಠಡಿಯಲ್ಲಿ ಕುಳಿತಿದ್ದಾರೆ. ಡಾಕ್ಟರ್ ಮಧು ಬಂದು ಪರಮಹಂಸರ ಬಳಿಯಲ್ಲಿಯೆ ಚಿಕ್ಕ ಮಂಚದ ಮೇಲೆ ಕುಳಿತುಕೊಂಡನು. ಆತನಿಗೆ ವಯಸ್ಸಾಗಿದೆ. ಹಾಸ್ಯ ತುಂಬಿದೆ ಅವನಲ್ಲಿ. ಪರಮಹಂಸರಿಗೆ ಕಾಯಿಲೆ ಆದಾಗಲೆಲ್ಲಾ ಪ್ರಾಯಿಕವಾಗಿ ಬಂದು ಆತ ಅವರನ್ನು ನೋಡುತ್ತಿದ್ದಾನೆ.
ಶ್ರೀರಾಮಕೃಷ್ಣರು: “ಮುಖ್ಯವಾಗಿ ಬೇಕಾದ್ದು ಸಚ್ಚಿದಾನಂದನಲ್ಲಿ ಪ್ರೀತಿ. ಎಂಥ ಪ್ರೀತಿ? ಭಗವಂತನನ್ನು ಯಾವ ರೀತಿಯಾಗಿ ಪ್ರೀತಿಸಬೇಕು? ಗೌರೀಪಂಡಿತ ಹೇಳುತ್ತಿದ್ದ, ರಾಮನನ್ನು ಅರಿತುಕೊಳ್ಳಬೇಕಾದರೆ, ಸೀತೆಯಂತೆಯೇ ಆಗಬೇಕು:ಭಗವಂತನನ್ನು ಅರಿಯಬೇಕಾದರೆ, ಭಗವತಿಯಂತೆ ಆಗಬೇಕು. ಭಗವತಿ ಯಾವ ರೀತಿಯಾಗಿ ಶಿವನಿಗಾಗಿ ಕಠೋರ ತಪಸ್ಸು ಮಾಡಿದಳೊ, ಆ ರೀತಿಯಾಗಿ ತಪಸ್ಸು ಮಾಡಬೇಕು. ಪುರುಷನನ್ನು ಅರಿಯಬೇಕಾದರೆ, ಪ್ರಕೃತಿಭಾವವನ್ನು ಆರೋಪಿಸಿಕೊಳ್ಳಬೇಕು-ಎಂದರೆ ಸಖೀಭಾವ, ದಾಸೀಭಾವ, ಮಾತೃ ಭಾವಗಳನ್ನು.
“ನನಗೆ ಸೀತಾಮಾತೆಯ ದರ್ಶನ ದೊರೆಯಿತು. ಆಕೆಯ ಇಡೀ ಮನಸ್ಸೆ ರಾಮನಲ್ಲಿ ನೆಲೆಸಿರುವುದನ್ನು ನೋಡಿದೆ. ಆಕೆಗೆ ತನ್ನ ಕೈಕಾಲು, ಶರೀರದ ಮೇಲೇ ಆಗಲಿ, ವಸನಭೂಷಣಗಳ ಮೇಲೆ ಆಗಲಿ, ಯಾವುದರ ಮೇಲೂ ದೃಷ್ಟಿಯಿರಲಿಲ್ಲ. ಆಕೆಯ ಜೀವನ ರಾಮಮಯವಾಗಿ ಕಂಡಿತು. ರಾಮನಿಲ್ಲದಿದ್ದರೆ, ರಾಮ ಆಕೆಗೆ ದೊರೆಯದಿದ್ದರೆ ಆಕೆ ಬದುಕುವಂತಿರಲಿಲ್ಲ.”
ಮಾಸ್ಟರ್: “ಹೌದು, ನಿಜ. ಆಕೆಗೆ ರಾಮನ ಹುಚ್ಚು ಹಿಡಿದಿತ್ತು.”
ಶ್ರೀರಾಮಕೃಷ್ಣರು: “ಹುಚ್ಚು! ಅದು ಬರಬೇಕು. ಭಗವಂತನ ಸಾಕ್ಷಾತ್ಕಾರ ದೊರಕ ಬೇಕಾದರೆ ಆತನಿಗಾಗಿ ಹುಚ್ಚು ಹಿಡಿಯಬೇಕು. ಕಾಮಕಾಂಚನಗಳ ಕಡೆಗೆ ಮನಸ್ಸಿತ್ತು ಎಂದರೆ ಅದು ಉಂಟಾಗದು. ಹೆಂಗಸಿನೊಡನೆ ಸಹವಾಸ! ಅದರಲ್ಲೇನು ಸುಖ ಇದೆ? ಭಗವಂತನ ದರ್ಶನ ದೊರೆತುದೇ ಆದರೆ, ಹೆಂಗಸಿನ ಸುಖಕ್ಕಿಂತ ಕೋಟಿ ಪಾಲು ಅಧಿಕವಾಗಿ ಸುಖ ದೊರೆಯುತ್ತದೆ. ಗೌರೀಪಂಡಿತ ಹೇಳುತ್ತಿದ್ದ, ಮಹಾಭಾವವುಂಟಾದರೆ ಚರ್ಮದ ಎಲ್ಲಾ ರಂಧ್ರಗಳೂ-ರೋಮಕೂಪಗಳೂ ಕೂಡ-ಮಹಾಯೋನಿಗಳಾಗಿಬಿಡುತ್ತವೆ. ಪ್ರತಿ ಯೊಂದು ರಂಧ್ರದ ಮೂಲಕವೂ ಸಾಧಕ ಆತ್ಮನೊಡನೆ ರಮಿಸುತ್ತಿರುವಂತೆ ಬೋಧೆಯಾಗುತ್ತದೆ.”
“ವ್ಯಾಕುಲಚಿತ್ತದಿಂದ ಆತನನ್ನು ಕರೆಯಬೇಕು. ಏನು ಮಾಡಿದರೆ ಆತನ ಸಾಕ್ಷಾತ್ಕಾರವನ್ನು ಪಡೆಯಬಹುದು ಎಂಬುದನ್ನು ಗುರುವಿನ ಮೂಲಕ ತಿಳಿದುಕೊಳ್ಳ ಬೇಕಾಗುತ್ತದೆ. ಗುರು ನಿಜವಾಗಿ ಪೂರ್ಣಜ್ಞಾನಿಯಾಗಿದ್ದ ಪಕ್ಷದಲ್ಲಿ ಮಾತ್ರ ಮಾರ್ಗವನ್ನು ತೋರಿಸಿ ಕೊಡಲು ಆತನಿಗೆ ಸಾಧ್ಯವಾಗುತ್ತದೆ.”
“ಪೂರ್ಣಜ್ಞಾನ ದೊರೆಯಿತು ಎಂದರೆ, ಎಲ್ಲಾ ವಾಸನೆಗಳೂ (ಕಾಮನೆಗಳೂ) ಬಿಟ್ಟು ತೊಲಗುತ್ತವೆ. ಐದು ವರ್ಷದ ಬಾಲಕನ ಸ್ವಭಾವ ಬಂದುಬಿಡುತ್ತದೆ. ದತ್ತಾತ್ರೇಯ ಮತ್ತು ಜಡಭರತರಿಗೆ ಬಾಲಕನ ಸ್ವಭಾವ ಉಂಟಾಗಿತ್ತು.
ಮಾಸ್ಟರ್: “ಇವರು ಏನು ಎತ್ತ ಎಂಬುದು ಜನರಿಗೆ ಗೊತ್ತಾಗಿದೆ. ಹಾಗೆ ಗೊತ್ತಾಗದೆ ಇದ್ದ ಇವರಂಥ ಜ್ಞಾನಿಗಳು ಎಷ್ಟೊಂದು ಮಂದಿ ಈ ಜಗತ್ತಿಗೆ ಬಂದುಹೋಗಿದ್ದಾರೆ.”
ಶ್ರೀರಾಮಕೃಷ್ಣರು: “ಹೌದು, ಜ್ಞಾನಿಗಳ ಎಲ್ಲಾ ವಾಸನೆಗಳೂ ಅವರನ್ನು ಬಿಟ್ಟು ತೊಲಗಿಹೋಗುತ್ತವೆ. ಹಾಗೂ ಏನಾದರೂ ಉಳಿದುಕೊಂಡಿದ್ದರೆ ಅದರಿಂದ ಅವರಿಗೆ ಯಾವ ಕೇಡೂ ಸಂಭವಿಸದು. ಕತ್ತಿ ಸ್ಪರ್ಶವೇದಿಯನ್ನು ಮುಟ್ಟಿದರೆ, ಅದು ಚಿನ್ನವಾಗಿ ಬಿಡುತ್ತದೆ. ಬಳಿಕ ಆ ಕತ್ತಿಯಿಂದ ಹಿಂಸಾತ್ಮಕ ಕಾರ್ಯ ಯಾವುದೂ ಸಾಧ್ಯವಿಲ್ಲ. ಅದೇ ರೀತಿಯಾಗಿ ಜ್ಞಾನಿಗಳ ಕಾಮಕ್ರೋಧಾದಿಗಳು ತೋರಿಕೆಗೆ ಮಾತ್ರ ಇರುತ್ತವೆ. ಅವು ಹೆಸರಿಗೆ ಮಾತ್ರ ಕಾಮಕ್ರೋಧಗಳೇ ವಿನಾ, ಅವುಗಳಿಂದ ಯಾವ ಕೇಡೂ ಸಂಭವಿಸದು.”
ಮಾಸ್ಟರ್: “ನೀವು ಹೇಳುತ್ತೀರಲ್ಲ, ಜ್ಞಾನಿ ಮೂರು ಗುಣಗಳಿಗೂ ಅತೀತ ನಾಗುತ್ತಾನೆ. ಆತ ಸತ್ತ್ವ, ರಜಸ್ಸು, ತಮಸ್ಸು ಈ ಯಾವ ಗುಣಗಳಿಗೂ ವಶನಾಗುವುದಿಲ್ಲ. ಇವು ಮೂರು ಕಳ್ಳರಿದ್ದ ಹಾಗೆ.”
ಶ್ರೀರಾಮಕೃಷ್ಣರು: “ಹೌದು, ಇದನ್ನು ಗ್ರಹಿಸಬೇಕು.”
ಮಾಸ್ಟರ್: “ಈ ಭೂಮಂಡಲದಲ್ಲೆಲ್ಲಾ ಪೂರ್ಣಜ್ಞಾನಿಗಳು ಮೂರು ನಾಲ್ಕಕ್ಕಿಂತ ಹೆಚ್ಚಾಗಿಲ್ಲ ಅಂತ ಕಾಣುತ್ತದೆ.”
ಶ್ರೀರಾಮಕೃಷ್ಣರು: “ಏಕೆ ಹಾಗೆ ಹೇಳುತ್ತೀಯೆ? ಉತ್ತರ ಭಾರತದ ಮಠಗಳಲ್ಲಿ ಅನೇಕ ಸಾಧು ಸಂನ್ಯಾಸಿಗಳಾಗಿದ್ದಾರೆ.”
ಮಾಸ್ಟರ್: “ಸುಲಭವಾಗಿ ನಾನೂ ಅವರಂತೆ ಒಬ್ಬ ಸಂನ್ಯಾಸಿ ಆಗಬಲ್ಲೆ.”
ಪರಮಹಂಸರು ಮಾಸ್ಟರನ್ನು ದೃಷ್ಟಿಸಿ ನೋಡುತ್ತ ಹೇಳಿದರು: “ಏನು, ಎಲ್ಲವನ್ನೂ ತ್ಯಜಿಸಿ?”
ಮಾಸ್ಟರ್: “ಮಾಯೆಯಿಂದ ಮುಕ್ತವಾಗದಿದ್ದರೆ ಏನನ್ನು ತಾನೆ ಸಾಧಿಸಲು ಸಾಧ್ಯ? ಮಾಯೆಯನ್ನು ಗೆಲ್ಲುವ ಶಕ್ತಿಯಿಲ್ಲದೆ ಬರಿದೆ ಸಂನ್ಯಾಸಿಯಾದರೆ ಏನು ದೊರೆತೀತು?”
ಸ್ವಲ್ಪ ಹೊತ್ತಿನವರೆಗೆ ಎಲ್ಲರೂ ಸುಮ್ಮನೆ ಇದ್ದರು.
ಮಾಸ್ಟರ್: “ಯಾವುದಕ್ಕೆ ತ್ರಿಗುಣಾತೀತ ಭಕ್ತಿ ಅಂತ ಹೇಳುತ್ತಾರೆ?”
ಶ್ರೀರಾಮಕೃಷ್ಣರು: “ಆ ಭಕ್ತಿಯುಂಟಾಯಿತು ಎಂದರೆ, ಎಲ್ಲವೂ ಚಿನ್ಮಯವಾಗಿ ಕಾಣುತ್ತದೆ. ಆತನಿಗೆ ‘ಶ್ಯಾಮ ಚಿನ್ಮಯ.’ ಆತನ ‘ಧಾಮವೂ ಚಿನ್ಮಯ.’ ಭಕ್ತನೂ ಚಿನ್ಮಯ. ಎಲ್ಲವೂ ಚಿನ್ಮಯ. ಎಲ್ಲೋ ಕೆಲವರಿಗೆ ಮಾತ್ರ ಆ ವಿಧದ ಭಕ್ತಿಯುಂಟಾಗುತ್ತದೆ.”
ಡಾಕ್ಟರ್ ಮಧು: “ತ್ರಿಗುಣಾತೀತ ಭಕ್ತಿ-ಎಂದರೆ ಭಕ್ತ ಯಾವ ಗುಣಕ್ಕೂ ವಶನಲ್ಲ ಅಂತ.”
ಶ್ರೀರಾಮಕೃಷ್ಣರು ನಗುತ್ತ: “ಹೌದು, ಅದೇ. ಐದು ವರ್ಷ ಬಾಲಕನ ಹಾಗೆ- ಯಾವ ಗುಣಕ್ಕೂ ವಶವಾಗದವನಾಗಿ.”
ಮಧ್ಯಾಹ್ನದ ಊಟವಾದ ನಂತರ ಪರಮಹಂಸರು ಸ್ವಲ್ಪ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಮಣಿಲಾಲಮಲ್ಲಿಕ ಬಂದು ಪರಮಹಂಸರಿಗೆ ಪ್ರಣಾಮಮಾಡಿ ನೆಲದ ಮೇಲೆ ಕುಳಿತುಕೊಂಡ. ಪರಮಹಂಸರು ಹಾಗೆಯೇ ಮಲಗಿಕೊಂಡು ಮಣಿಮಲ್ಲಿಕನೊಡನೆ ಆಗಾಗ ಒಂದೆರಡು ಮಾತು ಆಡುತ್ತಿದ್ದಾರೆ.
ಮಣಿಮಲ್ಲಿಕ: “ನೀವು ಕೇಶವಸೇನನ್ನು ನೋಡಿಬರಲು ಹೋಗಿದ್ದುದಾಗಿ ಸಮಾಚಾರ ಕೇಳಿದೆ.”
ಶ್ರೀರಾಮಕೃಷ್ಣರು: “ಹೌದು, ಈಗ ಹೇಗಿದ್ದಾನೆ ಆತ?”
ಮಣಿಮಲ್ಲಿಕ: “ಏನೂ ಉತ್ತಮಗೊಂಡಿಲ್ಲ.”
ಶ್ರೀರಾಮಕೃಷ್ಣರು: “ಆತ ದೊಡ್ಡ ರಾಜಸಿಕ ವ್ಯಕ್ತಿ, ಬಹಳ ಹೊತ್ತು ಕಾಯಿಸಿ ಬಿಟ್ಟ. ಆ ಬಳಿಕವೇ ಆತನನ್ನು ನೋಡಲು ಸಾಧ್ಯವಾಯಿತು.”
ಪರಮಹಂಸರು ಎದ್ದು ಕುಳಿತುಕೊಂಡು ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಪರಮಹಂಸರು ಮಾಸ್ಟರಿಗೆ: “ನಾನು ‘ರಾಮ ರಾಮ’ ಅಂತ ಹೇಳುತ್ತ ಹುಚ್ಚ ನಂತಾಗಿ ಬಿಟ್ಟಿದ್ದೆ. ಆ ಸಂನ್ಯಾಸಿಯ ಇಷ್ಟದೇವನಾದ ರಾಮಲಾಲನನ್ನು ಕೈಯಲ್ಲಿ ಹಿಡಿದುಕೊಂಡು ಸುಮ್ಮನೆ ಸುತ್ತುತ್ತಿದ್ದೆ. ಅದಕ್ಕೆ ಸ್ನಾನ, ಊಟ, ಶಯನ ಎಲ್ಲವನ್ನೂ ಮಾಡಿಸುತ್ತಿದ್ದೆ. ಹೋದೆಡೆಗೆಲ್ಲಾ ಅದನ್ನು ತೆಗೆದುಕೊಂಡು ಹೋಗುತ್ತಿದ್ದೆ. ನಾನು ರಾಮಲಾಲನಿಗಾಗಿ ಸುಮ್ಮನೆ ಹುಚ್ಚನಾಗಿಬಿಟ್ಟಿದ್ದೆ.”