೨೮ನೆ ನವಂಬರ್ ೧೮೮೩, ಕಾರ್ತಿಕ ಕೃಷ್ಣ ಚತುರ್ದಶಿ, ಬುಧವಾರ
ಅಪರಾಹ್ನ ಎರಡು ಗಂಟೆಯ ಸಮಯದಲ್ಲಿ ಕೇಶವಸೇನನ ಕಮಲಕುಟೀರದ ಮುಂದೆ ಇರುವ ಸರ್ಕ್ಯುಲರ್ ರಸ್ತೆಯ ಫುಟ್ಪಾತಿನಲ್ಲಿ ಮಾಸ್ಟರ್ ಅಡ್ಡಾಡುತ್ತಿದ್ದಾನೆ. ಆತ ಪರಮಹಂಸರ ಬರುವಿಕೆಯನ್ನೇ ಆಕಾಂಕ್ಷಿತನಾಗಿ ಎದುರುನೋಡುತ್ತಿದ್ದಾನೆ. ಕೇಶವಸೇನನಿಗೆ ಬಂದಿರುವ ಕಾಯಿಲೆ ದಾರುಣವಾಗಿದೆ. ಈ ಸಲ ಆತ ಬದುಕಿಕೊಳ್ಳುವ ಸಂಭವ ಬಹಳ ಕಡಮೆ. ಪರಮಹಂಸರು ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದುದರಿಂದ ಆತನನ್ನು ನೋಡಲು ಅವರು ದಕ್ಷಿಣೇಶ್ವರದಿಂದ ಬರಲಿದ್ದಾರೆ.
ಸರ್ಕ್ಯುಲರ್ ರಸ್ತೆಯ ಪೂರ್ವಭಾಗದಲ್ಲಿ ವಿಕ್ಟೋರಿಯಾ ಕಾಲೇಜು ಇದೆ. ಇಲ್ಲಿ ಕೇಶವಸೇನನ ಸಮಾಜದ ಹೆಂಗಸರು ಮತ್ತು ಅವರ ಹೆಣ್ಣುಮಕ್ಕಳು ಓದುತ್ತಿದ್ದಾರೆ. ಈ ಕಾಲೇಜಿನ ಉತ್ತರಕ್ಕೆ ವಿಶಾಲವಾದ ಒಂದು ತೋಟದ ಮನೆ ಇದೆ. ಇದರಲ್ಲಿ ಒಬ್ಬ ಆಂಗ್ಲ ಸಂಸಾರಿ ವಾಸಿಸುತ್ತಿದ್ದಾನೆ. ಆ ಮನೆಯಲ್ಲಿ ಏನೋ ಒಂದು ಅನಾಹುತವಾಗಿರುವಂತೆ ಮಾಸ್ಟರಿಗೆ ಕಂಡುಬಂತು. ಏನದು ಅಂತ ಬಹಳ ಕುತೂಹಲದಿಂದ ನೋಡಲಾರಂಭಿಸಿದ. ಇದ್ದಕ್ಕಿದ್ದ ಹಾಗೆ ಒಂದು ಶವದ ಬಂಡಿ ಅಲ್ಲಿ ಬಂದು ನಿಂತಿತು. ಬಹಳ ದುಃಖದಿಂದ ಮನೆಯವರೆಲ್ಲರೂ ಹೊರಕ್ಕೆ ಬರಲಾರಂಭಿಸಿದರು. ಅಲ್ಲಿ ಒಂದು ಸಾವು.
“ಈ ಮರ್ತ್ಯದೇಹವನ್ನು ಬಿಟ್ಟು ಜೀವ ಎಲ್ಲಿಗೆ ಹೋಗುತ್ತದೆ?” ಅನಾದಿಕಾಲ ದಿಂದಲೂ ಬಂದ ಈ ಪ್ರಶ್ನೆಯ ಮೇಲೆ ಚಿಂತಿಸುತ್ತ ಮಾಸ್ಟರ್ ಉತ್ತರ ದಿಕ್ಕಿನಿಂದ ಬರುತ್ತಿದ್ದ ಗಾಡಿಗಳನ್ನೆಲ್ಲಾ ದಿಟ್ಟಿಸಿ ನೋಡುತ್ತಲೇ ಕಾದಿದ್ದಾನೆ.
ಐದು ಘಂಟೆ ಸಮಯಕ್ಕೆ ಒಂದು ಗಾಡಿ ಬಂದು ಕಮಲಕುಟೀರದ ಎದುರಿಗೆ ನಿಂತಿತು. ಲಾಟು, ರಾಖಾಲ, ಇನ್ನೂ ಕೆಲವರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದ ಪರಮಹಂಸರು ಗಾಡಿಯಿಂದ ಕೆಳಕ್ಕೆ ಇಳಿದರು. ಕೇಶವಸೇನನ ಸಂಬಂಧಿಗಳು ಬಂದು ಪರಮಹಂಸರನ್ನು ಎದುರುಗೊಂಡು ಅವರನ್ನೂ ಭಕ್ತರನ್ನೂ ಮೇಲ್ಮಹಡಿಯ ಬೈಠಕ್ಖಾನೆಯ ದಕ್ಷಿಣ ವರಾಂಡಕ್ಕೆ ಕರೆದುಕೊಂಡು ಹೋದರು. ಪರಮಹಂಸರು ಒಂದು ಆರಾಮ ಸೋಫದ ಮೇಲೆ ಕುಳಿತಿದ್ದಾರೆ.
ಪರಮಹಂಸರು ಹಾಗೆಯೆ ಬಹಳ ಹೊತ್ತು ಕುಳಿತಿದ್ದು ಸಾಕಾಗಿ ಕೇಶವಸೇನನನ್ನು ನೋಡಲು ತವಕಪಡಲಾರಂಭಿಸಿದರು. ಕೇಶವಸೇನನ ಶಿಷ್ಯರು ಹೇಳುತ್ತಿದ್ದಾರೆ: “ಅವರು ವಿಶ್ರಮಿಸಿಕೊಳ್ಳುತ್ತಿದ್ದರು. ಇನ್ನೇನು ಬರುತ್ತಾರೆ.” ಪರಮಹಂಸರು ಇನ್ನೂ ಅಧಿಕವಾಗಿ ತವಕಪಡುತ್ತ ಕೇಶವನ ಶಿಷ್ಯರಿಗೆ ಹೇಳುತ್ತಿದ್ದಾರೆ: “ನೋಡಿ, ಆತನೇ ಇಲ್ಲಿಗೆ ಬರುವುದರ ಆವಶ್ಯಕತೆಯೇನಿದೆ? ನಾನೇ ಒಳಕ್ಕೆ ಹೋಗಿ ಆತನನ್ನು ಏಕೆ ನೋಡಬಾರದು?”
ಪ್ರಸನ್ನ ವಿನಯದಿಂದ: “ಮಹಾಶಯರೆ, ಇನ್ನು ಕೆಲವು ನಿಮಿಷಗಳಲ್ಲೆ ಅವರು ಇಲ್ಲಿಗೇ ಬಂದುಬಿಡುತ್ತಾರೆ.”
ಶ್ರೀರಾಮಕೃಷ್ಣರು: “ಹೋಗಿ! ಏನು ಬೇಕಾದರೂ ಮಾಡಿಕೊಳ್ಳಿ! ಈ ತೊಂದರೆ ಯನ್ನೆಲ್ಲಾ ತಂದೊಡ್ಡುತ್ತಿರುವವರು ನೀವೇ. ನಾನಂತೂ ಒಳಕ್ಕೆ ಹೋಗಿಬಿಡುತ್ತೇನೆ.”
ಪರಮಹಂಸರ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಲು ಪ್ರಸನ್ನ ಕೇಶವನ ಸಂಬಂಧ ವಾಗಿ ಮಾತು ಎತ್ತಿದ. ಆತ ಹೇಳಿದ: “ಕೇಶವಸೇನರು ಈಗ ಒಬ್ಬ ಹೊಸ ಮನುಷ್ಯ ರಾಗಿಬಿಟ್ಟಿದ್ದಾರೆ. ನಿಮ್ಮ ಹಾಗೆ ಅವರು ಭಗವತಿಯೊಡನೆ ಮಾತನಾಡುತ್ತಾರೆ. ಭಗವತಿ ಹೇಳುವುದನ್ನು ಕೇಳಿ ಒಮ್ಮೊಮ್ಮೆ ನಗುತ್ತಾರೆ, ಅಳುತ್ತಾರೆ.”
ಕೇಶವಸೇನ ಭಗವತಿಯೊಡನೆ ಮಾತಾಡುತ್ತಾನೆ, ನಗುತ್ತಾನೆ, ಅಳುತ್ತಾನೆ ಎಂಬುದನ್ನು ಕೇಳಿದೊಡನೆಯೇ ಪರಮಹಂಸರು ಭಾವಾವಿಷ್ಟರಾಗಲಾರಂಭಿಸಿದರು. ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲೇ ಸಮಾಧಿಸ್ಥರಾಗಿಬಿಟ್ಟಿದ್ದಾರೆ.
ಚಳಿಗಾಲವಾದ್ದರಿಂದ ಪರಮಹಂಸರು ಒಂದು ಹಸುರು ಫ್ಲಾನೆಲ್ ಕೋಟು ಹಾಕಿ ಕೊಂಡು ಶಾಲು ಹೊದ್ದುಕೊಂಡಿದ್ದಾರೆ. ದೇಹ ನೇರವಾಗಿ ಕುಳಿತಿದೆ, ದೃಷ್ಟಿ ಸ್ಥಿರವಾಗಿದೆ. ಸಂಪೂರ್ಣವಾಗಿ ಸಮಾಧಿಯಲ್ಲಿ ಮಗ್ನರಾಗಿದ್ದಾರೆ. ಹೀಗೇ ಬಹಳ ಹೊತ್ತು ಕಳೆದು ಹೋದರೂ ಅವರು ಪ್ರಕೃತಿಸ್ಥರಾಗುವ ಚಿಹ್ನೆಗಳಾವುವೂ ಕಂಡುಬರಲಿಲ್ಲ.
ಸಾಯಂಕಾಲವಾಗತೊಡಗಿತು. ಪಕ್ಕದ ಬೈಠಕ್ಖಾನೆಗೆ ದೀಪ ಹಚ್ಚಲಾಯಿತು. ಪರಮಹಂಸರನ್ನು ಅಲ್ಲಿಗೆ ಕರೆದುಕೊಂಡು ಹೋಗಲು ವ್ಯವಸ್ಥೆ ನಡೆಯುತ್ತಿದೆ. ಅವರು ಈಗ ತಾನೆ ಕಿಂಚಿತ್ ಪ್ರಕೃತಿಸ್ಥರಾಗುತ್ತಿದ್ದಾರೆ. ಬಹಳ ಪ್ರಯಾಸದಿಂದ ಅವರನ್ನು ಅಲ್ಲಿಗೆ ಕರೆದು ಕೊಂಡು ಹೋಗಲಾಯಿತು. ಕೊಠಡಿಯನ್ನು ಬಹಳ ಚೆನ್ನಾಗಿ ಸಜ್ಜುಗೊಳಿಸಿದ್ದಾರೆ. ಅಲ್ಲಿನ ಸಾಮಾನು ನೋಡಿ ಪರಮಹಂಸರು ತಮಗೆ ತಾವೇ ವಟಗುಟ್ಟುತ್ತಿದ್ದಾರೆ: “ಹಿಂದೆ ಇವೆಲ್ಲ ಬಹಳವಾಗಿ ಬೇಕಾಗಿದ್ದುವು. ಆದರೆ ಈಗ ಇವುಗಳ ಆವಶ್ಯಕತೆಯೇನಿದೆ?” ರಾಖಾಲನನ್ನು ನೋಡಿ ಹೇಳುತ್ತಿದ್ದಾರೆ: “ಓ, ನೀನು ಇಲ್ಲಿ ಕುಳಿತಿದ್ದೀಯಾ?” ಪರಮಹಂಸರನ್ನು ಒಂದು ಸೋಫದ ಮೇಲೆ ಕೂರಿಸಲಾಯಿತು. ಅದರ ಮೇಲೆ ಕುಳಿತುಕೊಂಡು ಮತ್ತೆ ಭಾವಾವಿಷ್ಟ ರಾಗುತ್ತಿದ್ದಾರೆ. ಯಾರನ್ನೋ ನೋಡುತ್ತಿರುವವರ ಹಾಗೆ ಹೇಳುತ್ತಿದ್ದಾರೆ: “ಓಹೊ! ಭಗವತಿ ಬಂದುಬಿಟ್ಟಿದ್ದಾಳೆ! ಕಾಶಿಯ ಸೀರೆ ಎಷ್ಟು ಸೊಗಸಾಗಿ ನಿನಗೆ ಒಪ್ಪುತ್ತಿದೆ! ಈಗ ನನಗೇನೂ ತೊಂದರೆ ಕೊಡಬೇಡ. ಕುಳಿತುಕೊ, ಸುಮ್ಮನೆ ಕುಳಿತುಕೊ.”
ಪರಮಹಂಸರ ಮಹಾಭಾವದ ಮತ್ತು ಇನ್ನೂ ಇಳಿದಿಲ್ಲ. ಕೊಠಡಿ ಬೆಳಕುಮಯ ವಾಗಿದೆ. ಬ್ರಾಹ್ಮಭಕ್ತರು ಪರಮಹಂಸರ ಸುತ್ತಲೂ ಕುಳಿತಿದ್ದಾರೆ. ಲಾಟು, ರಾಖಾಲ, ಮಾಸ್ಟರ್ ಮೊದಲಾದವರು ಪರಮಹಂಸರ ಹತ್ತಿರ ಕುಳಿತಿದ್ದಾರೆ. ಪರಮಹಂಸರು ಭಾವಾ ವಸ್ಥೆಯಲ್ಲಿ ತಮಗೆ ತಾವೆ ಹೇಳಿಕೊಳ್ಳುತ್ತಿದ್ದಾರೆ: “ದೇಹ ಮತ್ತು ಆತ್ಮ! ದೇಹ ಹುಟ್ಟಿತು, ಸಾಯುತ್ತದೆ. ಆತ್ಮಕ್ಕೆ ಮೃತ್ಯುವಿಲ್ಲ. ಅದು ಹಣ್ಣಾದ ಅಡಕೆಯ ಹಾಗೆ. ಅಡಕೆ ಹಣ್ಣಾದಾಗ ಅದು ಸಿಪ್ಪೆಗೆ ಅಂಟಿಕೊಂಡಿರುವುದಿಲ್ಲ. ಆದರೆ ಅದು ಕಾಯಿಯಾಗಿರುವಾಗ ಅದನ್ನು ಸಿಪ್ಪೆಯಿಂದ ಬೇರ್ಪಡಿಸಬೇಕಾದರೆ ಬಹಳವಾಗಿ ಕಷ್ಟಪಡಬೇಕಾಗುತ್ತದೆ. ಭಗವಂತನ ಸಾಕ್ಷಾತ್ಕಾರ, ಭಗವಂತನ ದರ್ಶನ ದೊರೆತನಂತರ ದೇಹಬುದ್ಧಿ ಹೊರಟುಹೋಗುತ್ತದೆ. ಆಗ ದೇಹ ಪ್ರತ್ಯೇಕ, ಆತ್ಮ ಪ್ರತ್ಯೇಕ ಎಂಬ ಬೋಧೆಯಾಗುತ್ತದೆ.” (BG 2.20, Chandogya Upanishad 6.11.3, Katha Upanishad 1.2.18, Katha Upanishad 2.3.17)
ಈ ಸಮಯಕ್ಕೆ ಸರಿಯಾಗಿ ಕೇಶವನು ಕೊಠಡಿಯನ್ನು ಪೂರ್ವದ ಬಾಗಿಲಿನಿಂದ ಪ್ರವೇಶಿಸಿದ. ಬ್ರಾಹ್ಮಸಮಾಜದ ಮಂದಿರದಲ್ಲಿ, ಟೌನ್ಹಾಲಿನಲ್ಲಿ ಆತ ಉಪನ್ಯಾಸ ಕೊಟ್ಟಾಗ ಆತನನ್ನು ಯಾರು ನೋಡಿದ್ದರೊ, ಅವರಿಗೆ ಅಸ್ಥಿಚರ್ಮವಾಗಿರುವ ಈ ಮೂರ್ತಿಯನ್ನು ನೋಡಿ, ಎದೆ ಒಡೆದುಹೋದಂತಾಯಿತು. ಆತನಿಗೆ ಸರಿಯಾಗಿ ನಿಂತುಕೊಳ್ಳಲೂ ಆಗುತ್ತಿರಲಿಲ್ಲ. ಆತ ಗೋಡೆ ಹಿಡಿದು ಮುಂದುವರಿಯುತ್ತ ಬಹಳ ಕಷ್ಟಪಟ್ಟು ಸೋಫದ ಮುಂಭಾಗಕ್ಕೆ ಬಂದು ನೆಲದ ಮೇಲೆ ಕುಳಿತುಕೊಂಡ. ಅಷ್ಟರಲ್ಲಿ ಪರಮಹಂಸರೂ ಸೋಫದಿಂದಿಳಿದು ನೆಲದ ಮೇಲೆ ಕುಳಿತುಕೊಂಡರು. ಕೇಶವಸೇನನು ಪರಮಹಂಸರ ದರ್ಶನವನ್ನು ಪಡೆದ ನಂತರ ಅವರಿಗೆ ಸಾಷ್ಟಾಂಗ ಪ್ರಣಾಮಮಾಡುತ್ತ ಆ ಅವಸ್ಥೆಯಲ್ಲೇ ಬಹಳ ಹೊತ್ತು ಇದ್ದ. ಬಳಿಕ ಎದ್ದು ಕುಳಿತುಕೊಂಡ. ಪರಮಹಂಸರು ಇನ್ನೂ ಭಾವಾವಸ್ಥೆಯಲ್ಲಿಯೇ ಇದ್ದಾರೆ. ತಮ್ಮಷ್ಟಕ್ಕೆ ತಾವೇ ಏನೋ ಹೇಳಿಕೊಳ್ಳುತ್ತಿದ್ದು ಈಗ ಭಗವತಿಯೊಡನೆ ಮಾತಾಡುತ್ತಿದ್ದಾರೆ.
ಕೇಶವಸೇನ ಈಗ ಉಚ್ಚ ಸ್ವರದಲ್ಲಿ ಹೇಳುತ್ತಿದ್ದಾನೆ: “ನಾನು ಬಂದಿದ್ದೇನೆ, ನಾನು ಬಂದಿದ್ದೇನೆ” ಹೀಗೆ ಹೇಳಿ ಆತ ಪರಮಹಂಸರ ಎಡಗೈಯನ್ನು ತನ್ನ ಕೈಗೆ ತೆಗೆದುಕೊಂಡು ಅದನ್ನು ಮೆತ್ತಗೆ ಸವರುತ್ತಿದ್ದಾನೆ. ಆದರೆ ಪರಮಹಂಸರು ಭಾವದಿಂದ ತುಂಬಿತುಳುಕಾಡುತ್ತ ತಮಗೆ ತಾವೇ ಏನನ್ನೋ ಹೇಳಿಕೊಳ್ಳುತ್ತಿದ್ದಾರೆ, ಭಕ್ತರೆಲ್ಲರೂ ಆಶ್ಚರ್ಯದಿಂದ ಬಾಯಿತೆರೆದು ಕೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಎಲ್ಲಿಯವರೆಗೆ ಉಪಾಧಿಯಿರುವುದೋ, ಅಲ್ಲಿಯವರೆಗೆ ನಾನಾತ್ವದ ಬೋಧೆ ಇರುತ್ತದೆ-ಕೇಶವ, ಪ್ರಸನ್ನ, ಅಮೃತ ಇತ್ಯಾದಿಗಳ ಬೋಧೆ. ಪೂರ್ಣ ಜ್ಞಾನ ದೊರೆತಾಗ ಎಲ್ಲೆಲ್ಲೂ ಒಂದೇ ಚೈತನ್ಯವಿರುವ ಹಾಗೆ ಬೋಧೆಯಾಗುತ್ತದೆ. ಆ ಪೂರ್ಣಜ್ಞಾನವೇ ಮತ್ತೆ ಅನುಭವವನ್ನು ತರುತ್ತದೆ, ಆ ಒಂದು ಚೈತನ್ಯವಸ್ತುವೇ ಈ ಜೀವ ಜಗತ್ತು ಈ ಚತುರ್ವಿಂಶತಿ ತತ್ತ್ವ ಆಗಿದೆ ಎಂಬುದಾಗಿ. ಶಕ್ತಿವಿಶೇಷತೆಯಿಂದ, ಅದೇ ಎಲ್ಲವೂ ಆಗಿರುವುದೇನೋ ನಿಜ; ಆದರೆ ಕೆಲವದರಲ್ಲಿ ಶಕ್ತಿಯ ಪ್ರಕಾಶ ಹೆಚ್ಚು. ಇನ್ನು ಕೆಲವದರಲ್ಲಿ ಕಡಮೆ.”
“ವಿದ್ಯಾಸಾಗರ ಒಮ್ಮೆ ನನ್ನನ್ನು ಕೇಳಿದ: ‘ಭಗವಂತ ಕೆಲವರಿಗೆ ಅಧಿಕ ಶಕ್ತಿ, ಕೆಲವರಿಗೆ ಕಡಮೆ ಶಕ್ತಿ ಕೊಟ್ಟಿದ್ದಾನೆ ಎಂಬುದು ನಿಜವೆ?’ ನಾನು ಹೇಳಿದೆ: “ಹಾಗಿಲ್ಲದಿದ್ದರೆ, ಒಬ್ಬನೇ ಒಬ್ಬ ಐವತ್ತು ಜನ ಎದುರಾದರೂ ಎಲ್ಲರನ್ನೂ ಸೋಲಿಸಿಬಿಡುತ್ತಾನಲ್ಲ ಅದು ಹೇಗೆ? ಅದು ನಿಜವಲ್ಲದಿದ್ದರೆ, ನಾವೇಕೆ ನಿನ್ನನ್ನು ನೋಡಲು ಬಂದಿದ್ದೇವೆ?’
“ಭಗವಂತ ಯಾರ ಮೂಲಕ ವಿಶೇಷವಾಗಿ ಕ್ರೀಡಿಸುತ್ತಾನೋ, ಆತನಲ್ಲಿ ಭಗವಂತನ ಶಕ್ತಿ ವಿಶೇಷರೂಪದಲ್ಲಿ ಇರುತ್ತದೆ. ಜಮೀನುದಾರ ತನ್ನ ಎಸ್ಟೇಟಿನಲ್ಲಿ ಎಲ್ಲಿ ಬೇಕಾದರೂ ಇರಬಲ್ಲ. ಆದರೆ ಒಂದು ನಿರ್ದಿಷ್ಟ ಬೈಠಕ್ಖಾನೆಯಲ್ಲಿ ಆತ ಪ್ರಾಯಿಕವಾಗಿ ಇರುತ್ತಾನೆ. ಭಕ್ತ ಭಗವಂತನ ಬೈಠಕ್ಖಾನೆ, ಭಕ್ತನ ಹೃದಯದಲ್ಲಿ ಕ್ರೀಡಿಸಲು ಆತ ಇಚ್ಛಿಸುತ್ತಾನೆ. ಭಕ್ತನ ಹೃದಯದಲ್ಲಿ ಆತನ ವಿಶೇಷ ಶಕ್ತಿ ಬಂದು ನೆಲಸುತ್ತದೆ.
“ಅಂಥ ಭಕ್ತನ ಲಕ್ಷಣವೇನು? ಯಾರೇ ಆಗಲಿ, ಮಹತ್ಕಾರ್ಯಗಳನ್ನು ಸಾಧಿಸು ತ್ತಿದ್ದರೆ, ಭಗವಂತನ ವಿಶೇಷ ಶಕ್ತಿ ಆತನ ಮೂಲಕ ವ್ಯಕ್ತವಾಗುತ್ತಿದೆ ಎಂದು ಅರಿತುಕೊಳ್ಳಬೇಕು.”
ಆದ್ಯಾಶಕ್ತಿ ಮತ್ತು ಪರಬ್ರಹ್ಮ ಒಂದೇ. ಒಬ್ಬರನ್ನು ಬಿಟ್ಟು ಇನ್ನೊಬ್ಬರನ್ನು ಚಿಂತಿಸುವ ಹಾಗಿಲ್ಲ. ಅವರು ರತ್ನ ಮತ್ತು ಅದರ ಪ್ರಭೆಯ ಹಾಗೆ. ರತ್ನವನ್ನು ಬಿಟ್ಟು ಅದರ ಪ್ರಭೆಯನ್ನು ಭಾವಿಸುವ ಹಾಗಿಲ್ಲ. ಹಾಗೇ ರತ್ನದ ಪ್ರಭೆಯನ್ನು ಬಿಟ್ಟು ರತ್ನವನ್ನು ಭಾವಿಸುವ ಹಾಗಿಲ್ಲ. ಮತ್ತೆ ಇದು ಹಾವು ಮತ್ತು ಅದರ ಸೊಟ್ಟಸೊಟ್ಟ ಗತಿಯ ಹಾಗೆ. ಹಾವನ್ನು ಬಿಟ್ಟು ಅದರ ಸೊಟ್ಟಸೊಟ್ಟ ಗತಿಯನ್ನು ಭಾವಿಸುವ ಹಾಗಿಲ್ಲ.
“ಆದ್ಯಾಶಕ್ತಿಯೇ ಈ ಜೀವಜಗತ್ತು, ಈ ಚತುರ್ವಿಂಶತಿ ತತ್ತ್ವ ಆಗಿದ್ದಾಳೆ. ಅನುಲೋಮವಿಲೋಮ ಇವೂ ಅವಳಿಂದಲೇ ನಡೆದುಕೊಂಡು ಹೋಗುತ್ತಿದೆ.
“ರಾಖಾಲ, ನರೇಂದ್ರ, ಇನ್ನೂ ಉಳಿದ ಯುವಕರು-ಇವರಿಗಾಗಿ ನಾನು ವ್ಯಸ್ತ ನಾಗುತ್ತೇನಲ್ಲ ಏಕೆ? ಹಾಜರಾ ಒಮ್ಮೆ ನನ್ನನ್ನು ಕೇಳಿದ: ‘ನೀವು ಆ ಹುಡುಗರಿಗಾಗಿ ವ್ಯಸ್ತರಾಗಿ ಕಾಲ ಕಳೆಯುತ್ತಿದ್ದರೆ, ಇನ್ನು ನೀವು ಭಗವಂತನ ಧ್ಯಾನಮಾಡುವುದು ಯಾವಾಗ?’ (ಕೇಶವ ಮತ್ತು ಉಳಿದವರು ಸ್ವಲ್ಪ ಮುಗುಳುನಗೆ ನಕ್ಕರು.) ಅದು ನನಗೆ ಮಹಾಚಿಂತೆಯನ್ನು ತಂದುಬಿಟ್ಟಿತು. ನಾನು ಭಗವತಿಗೆ ಪ್ರಾರ್ಥನೆಮಾಡಿದೆ: ‘ತಾಯೆ, ನನ್ನ ಅವಸ್ಥೆ ಯಾವ ದುರವಸ್ಥೆಗೆ ಬಂದುಬಿಟ್ಟಿದೆ ನೋಡು! ನಾನು ಆ ಯುವಕರ ಸಂಬಂಧವಾಗಿ ವ್ಯಸ್ತನಾಗಿರುವು ದನ್ನು ನೋಡಿ ಹಾಜರಾ ನನ್ನನ್ನು ಖಂಡಿಸುತ್ತಿದ್ದಾನೆ.’ ಅನಂತರ ನಾನು ಭೋಲಾನಾಥನನ್ನು ಅವರ ಸಂಬಂಧವಾಗಿ ಕೇಳಿದೆ. ಆತ ಹೇಳಿದ, ಮಹಾಭಾರತದಲ್ಲಿ ಈ ಅವಸ್ಥೆಯ ಸಂಬಂಧವಾಗಿ ವರ್ಣನೆ ಇದೆ ಎಂದು. ಸಮಾಧಿಸ್ಥ ಪುರುಷ ಸಮಾಧಿಯಿಂದ ಇಳಿದುಬಂದ ಮೇಲೆ ತನ್ನ ಮನಸ್ಸನ್ನು ಇನ್ನು ಬೇರೆ ಯಾವುದರ ಮೇಲೆ ತಾನೆ ಇಟ್ಟಾನು? ಅದಕ್ಕಾಗಿಯೇ ಆತ ಸಾತ್ತ್ವಿಕಗುಣೀ ಭಕ್ತರೊಡನೆ ಬೆರೆಯಲು ಪ್ರಯತ್ನಿಸುತ್ತಾನೆ. ಮಹಾಭಾರತದಲ್ಲಿನ ವಿಷಯವನ್ನು ಆತ ತಿಳಿಸಿದ ನಂತರ ‘ಬದುಕಿಕೊಂಡೆನಪ್ಪ!’ ಅಂತ ಅನಿಸಿತು.
“ಹಾಜರಾನದು ತಪ್ಪೇನಲ್ಲ. ಸಾಧಕನ ಅವಸ್ಥೆಯಲ್ಲಿ ‘ನೇತಿ’ ‘ನೇತಿ’ ಮಾರ್ಗವನ್ನು ಅನುಸರಿಸಿ ಇಡೀ ಮನಸ್ಸನ್ನು ಭಗವಂತನ ಕಡೆ ತಿರುಗಿಸಬೇಕು. ಆದರೆ ಸಿದ್ಧನ ಅವಸ್ಥೆ ಬೇರೆ. ಭಗವಂತನ ಸಾಕ್ಷಾತ್ಕಾರ ದೊರೆತ ಮೇಲೆ ಅನುಲೋಮಮಾಡಿದುದನ್ನೆಲ್ಲ ವಿಲೋಮಮಾಡ ಬೇಕಾಗುತ್ತದೆ-ಎಂದರೆ, ತ್ಯಜಿಸಿದುದನ್ನೆಲ್ಲ ಸ್ವೀಕರಿಸಬೇಕಾಗುತ್ತದೆ. ಮಜ್ಜಿಗೆಯನ್ನು ಪ್ರತ್ಯೇಕಿಸಿದರೆ ಬೆಣ್ಣೆ ದೊರೆಯುತ್ತದೆ. ಆಗ ಬೋಧೆಯಾಗುತ್ತದೆ, ಬೆಣ್ಣೆಗೂ ಮಜ್ಜಿಗೆಗೂ ಅನ್ಯೋನ್ಯ ಸಂಬಂಧವಿದೆ. ಅವೆರಡೂ ಒಂದೇ ವಸ್ತುವಿನಿಂದ ಬಂದಿದೆ. ಬೆಣ್ಣೆ ಮೂಲತಃ ಮಜ್ಜಿಗೆಯಿಂದ ಪ್ರತ್ಯೇಕವಲ್ಲ. ಹಾಗೆಯೇ ಮಜ್ಜಿಗೆಯೂ ಮೂಲತಃ ಬೆಣ್ಣೆಯಿಂದ ಪ್ರತ್ಯೇಕ ವಲ್ಲ ಎಂದು. ಭಗವಂತನ ಸಾಕ್ಷಾತ್ಕಾರ ದೊರೆತ ಮೇಲೆ ನಿರ್ದಿಷ್ಟ ಅನುಭವವಾಗುತ್ತದೆ, ಆತನೇ ಎಲ್ಲವೂ ಆಗಿದ್ದಾನೆ ಎಂಬುದಾಗಿ. ಕೆಲವದರಲ್ಲಿ ಕಡಮೆಯಾಗಿ, ಇನ್ನು ಕೆಲವದರಲ್ಲಿ ಹೆಚ್ಚಾಗಿ ವ್ಯಕ್ತವಾಗಿದ್ದಾನೆ, ಅಷ್ಟೆ.
“ಸಮುದ್ರದಿಂದ ನೀರು ಉಕ್ಕಿಬಂದರೆ ಭೂಮಿಯ ಮೇಲೆ ಒಂದು ಗಳುವಿನುದ್ದದ ನೀರು ನಿಲ್ಲುತ್ತದೆ. ಹೀಗಾಗುವುದಕ್ಕೆ ಮುಂಚೆ ದೋಣಿ ಸಮುದ್ರವನ್ನು ಮುಟ್ಟಬೇಕಾಗಿದ್ದರೆ ನದಿಯ ಸೊಟ್ಟ ಸೊಟ್ಟ ಗತಿಯನ್ನು ಅನುಸರಿಸಿ ಸಮುದ್ರವನ್ನು ಮುಟ್ಟಬೇಕಾಗಿತ್ತು. ಆದರೆ ಸಮುದ್ರ ಉಕ್ಕಿಬಂದ ನಂತರ ಸಮುದ್ರಕ್ಕೆ ನೇರವಾಗಿ ದೋಣಿಯನ್ನು ನಡೆಯಿಸಿಕೊಂಡು ಹೋಗಿಬಿಡಬಹುದು. ಆಗ ಸುತ್ತಿ ಸುತ್ತಿ ಸಮುದ್ರವನ್ನು ಸೇರಬೇಕಾಗಿರುವುದಿಲ್ಲ. ಭತ್ತದ ಬೆಳೆಯನ್ನು ಕೊಯ್ದ ನಂತರ ತೆವರಿಗಳ ಮೇಲೆ ಸುತ್ತಿ ಸುತ್ತಿ ತಿರುಗಾಡಬೇಕಾಗಿರುವುದಿಲ್ಲ.” ಯಾವ ದಿಕ್ಕಿಗೆ ಬೇಕಾದರೂ ನೇರವಾಗಿ ಹೊರಟು ಹೋಗಿಬಿಡಬಹುದು.
“ಭಗವಂತನ ಸಾಕ್ಷಾತ್ಕಾರ ದೊರೆತನಂತರ ಆತನನ್ನು ಪ್ರತಿಯೊಂದರಲ್ಲೂ ನೋಡ ಬಹುದು. ಮನುಷ್ಯರಲ್ಲಿ ಆತ ಹೆಚ್ಚಾಗಿ ವ್ಯಕ್ತವಾಗಿದ್ದಾನೆ ಮತ್ತೆ ಮನುಷ್ಯರ ಮಧ್ಯೆ ಸಾತ್ತ್ವಿಕ ಭಕ್ತರಲ್ಲಿ, ಎಂದರೆ ಯಾರಲ್ಲಿ ಕಾಮಕಾಂಚನ ಭೋಗೇಚ್ಛೆ ಸಂಪೂರ್ಣವಾಗಿ ಇಲ್ಲವೋ ಅವರಲ್ಲಿ ಇನ್ನೂ ಹೆಚ್ಚಾಗಿ ವ್ಯಕ್ತವಾಗಿರುತ್ತಾನೆ. ಸಮಾಧಿಸ್ಥ ವ್ಯಕ್ತಿ ಕೆಳಕ್ಕೆ ಇಳಿದುಬಂದುದೇ ಆದರೆ, ಆತ ಇನ್ನು ಬೇರೆ ಯಾವುದರ ಮೇಲೆ ತಾನೆ ತನ್ನ ಮನಸ್ಸನ್ನು ಇಟ್ಟಾನು? ಅದಕ್ಕಾಗಿಯೇ ಆತನಿಗೆ ಕಾಮಕಾಂಚನ ತ್ಯಾಗಿಗಳಾದ ಶುದ್ಧ ಸಾತ್ತ್ವಿಕ ಭಕ್ತರ ಸಂಗ ಬೇಕಾಗು ತ್ತದೆ. ಇಲ್ಲದಿದ್ದರೆ ಆತ ತನ್ನ ಮನಸ್ಸನ್ನು ಬೇರೆ ಯಾವುದರ ಕಡೆಗೆ ತಾನೆ ತಿರುಗಿಸಿ ಇಡಬಲ್ಲ?
“ಯಾರು ಬ್ರಹ್ಮನೊ ಆತನೇ ಆದ್ಯಾಶಕ್ತಿಯಾಗಿದ್ದಾನೆ. ನಿಷ್ಕ್ರಿಯನಾಗಿರುವಾಗ ಆತನಿಗೇ ಬ್ರಹ್ಮ ಅಂತ ಹೆಸರು; ಪುರುಷ ಅಂತ ಹೆಸರು. ಸೃಷ್ಟಿ ಸ್ಥಿತಿ ಪ್ರಳಯ ಕಾರ್ಯಗಳನ್ನು ಮಾಡುವಾಗ ಆತನಿಗೇ ಶಕ್ತಿ ಅಂತ ಹೆಸರು, ಪ್ರಕೃತಿ ಅಂತ ಹೆಸರು. ಪುರುಷ ಮತ್ತು ಪ್ರಕೃತಿ. ಯಾರು ಪುರುಷನೊ ಆತನೇ ಪ್ರಕೃತಿ. ಆನಂದಮಯನೇ ಆನಂದಮಯಿ.
“ಯಾರಿಗೆ ಪುರುಷಜ್ಞಾನವಿರುವುದೋ ಅವರಿಗೆ ಪ್ರಕೃತಿಜ್ಞಾನವೂ ಇದ್ದೇ ಇರುತ್ತದೆ, ತಂದೆಯ ಜ್ಞಾನ ಇರುವವರಿಗೆ ತಾಯಿಯ ಜ್ಞಾನವೂ ಇದ್ದೇ ಇರುತ್ತದೆ. (ಕೇಶವ ನಗುತ್ತಾನೆ.) ಯಾರಿಗೆ ಕತ್ತಲೆಯ ಜ್ಞಾನವಿರುವುದೋ, ಅವರಿಗೆ ಬೆಳಕಿನ ಜ್ಞಾನವೂ ಇರುತ್ತದೆ. ಸುಖದ ಜ್ಞಾನವಿರುವವರಿಗೆ ದುಃಖದ ಜ್ಞಾನವೂ ಇರುತ್ತದೆ. ನಿನಗೆ ಇದು ಅರ್ಥವಾಗಿರಬೇಕು, ಅಲ್ಲವೆ?”
ಕೇಶವಸೇನ: “ಹೌದು ನನಗೆ ಅರ್ಥವಾಯಿತು.”
ಶ್ರೀರಾಮಕೃಷ್ಣರು: “ನನ್ನ ತಾಯಿ! ಯಾರು ನನ್ನ ತಾಯಿ? ಓ, ಆಕೆ ಈ ಜಗಜ್ಜನನಿ. ಈ ಜಗತ್ತನ್ನು ಸೃಷ್ಟಿಸಿರುವವಳು, ಪಾಲಿಸುತ್ತಿರುವವಳು ಅವಳೇ. ಅವಳೇ ಸರ್ವದಾ ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಿರುತ್ತಾಳೆ. ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳಲ್ಲಿ ಯಾವುದು ಯಾರಿಗೆ ಬೇಕಾದರೂ ಅದನ್ನು ಅವರಿಗೆ ಕೊಡುತ್ತಾಳೆ. ನಿಜವಾದ ಮಗು ತಾಯಿಯನ್ನು ಬಿಟ್ಟು ಇರಲಾರದು. ತಾಯಿಗೆ ಎಲ್ಲಾ ಗೊತ್ತು. ಮಗು ಉಂಡು ತಿಂದು ತಿರುಗಾಡಿಕೊಂಡಿರುತ್ತದೆ; ಈ ಜಗತ್ತಿನ ಸಂಬಂಧವಾಗಿ ಅದು ಏನನ್ನೂ ತಲೆಗೆ ಹಚ್ಚಿಕೊಳ್ಳುವುದಿಲ್ಲ.”
ಕೇಶವಸೇನ: “ಹೌದು, ನಿಜ.”
ಪರಮಹಂಸರು ಹೀಗೆ ಮಾತನಾಡುತ್ತ ಮಾತನಾಡುತ್ತ ಪೂರ್ಣವಾಗಿ ಪ್ರಕೃತಿಸ್ಥ ರಾಗಿದ್ದಾರೆ, ಈಗ ಕೇಶವಸೇನನೊಡನೆ ಆನಂದದಿಂದ ಮಾತುಕತೆಯಾಡುತ್ತಿದ್ದಾರೆ. ಕೊಠಡಿಯ ತುಂಬ ತುಂಬಿದ್ದ ಜನ ಕಿವಿ ನೆಟ್ಟಗೆ ಮಾಡಿಕೊಂಡು ಎಲ್ಲವನ್ನೂ ಕೇಳುತ್ತಿದ್ದಾರೆ. ಅವರ ಕಡೆ ದಿಟ್ಟಿಸಿ ನೋಡುತ್ತಿದ್ದಾರೆ. ಇಬ್ಬರೂ ದೇಹಾರೋಗ್ಯದ ಸಂಬಂಧವಾಗಿ ಯಾವ ಮಾತನ್ನೂ ಎತ್ತದೆ ಭಗವತ್ಸಂಬಂಧವಾಗಿಯೇ ಮಾತನಾಡುತ್ತಿರುವುದನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಗಿಬಿಟ್ಟಿದೆ.
ಶ್ರೀರಾಮಕೃಷ್ಣರು ಕೇಶವಸೇನನಿಗೆ: “ಬ್ರಾಹ್ಮಸಮಾಜದ ಅನುಯಾಯಿಗಳು ಭಗವಂತನ ಮಹಿಮೆಯನ್ನು ಅಷ್ಟೊಂದಾಗಿ ವರ್ಣನೆ ಮಾಡುತ್ತಾರಲ್ಲ ಏಕೆ? ‘ಹೇ ಭಗವಂತ, ನೀನು ಚಂದ್ರನನ್ನು ಸೃಷ್ಟಿಸಿದ್ದೀಯೆ. ಸೂರ್ಯನನ್ನು ಸೃಷ್ಟಿಸಿದ್ದೀಯೆ, ನಕ್ಷತ್ರಗಳನ್ನು ಸೃಷ್ಟಿ ಸಿದ್ದೀಯೆ’ ಎಂಬ ಈ ವಿಧದ ವರ್ಣನೆ ಯಾವ ಪ್ರಯೋಜನಕ್ಕೆ ಬರುತ್ತದೆ? ಅನೇಕರಿಗೆ ತೋಟವನ್ನು ಕಂಡರೆ ತೃಪ್ತಿ. ಅದರ ಯಜಮಾನನನ್ನು ನೋಡಬೇಕೆಂದು ಹಂಬಲಿಸುವವರು ಅಷ್ಟು ಅಲ್ಪ! ಮಹತ್ತು ತೋಟದಲ್ಲಿದೆಯೋ ಅಥವಾ ಯಜಮಾನನಲ್ಲಿದೆಯೋ?
“ಮದ್ಯವನ್ನು ಕುಡಿದು ಮುಗಿಸಿದ ಮೇಲೆ ಸಾರಾಯಿ ಅಂಗಡಿಯಲ್ಲಿ ಎಷ್ಟು ಸೇರು ಮದ್ಯವಿದೆ ಎಂಬುದರ ಲೆಕ್ಕಾಚಾರ ನನಗೇಕೆ? ನನಗೆ ಒಂದು ಸೀಸೆ ಮದ್ಯವೇ ಸಾಕು.
“ನಾನು ನರೇಂದ್ರನನ್ನು ಸಂಧಿಸಿದಂದಿನಿಂದ ಇದುವರೆಗೆ ಎಂದೂ ಕೇಳಲಿಲ್ಲ: ‘ನಿನ್ನ ತಂದೆಯ ಹೆಸರೇನು? ಆತನಿಗೆಷ್ಟು ಮನೆ ಇದೆ?’
“ಸತ್ಯವೇನು ಹೇಳಲೆ? ಮನುಷ್ಯ ತಾನು ಐಶ್ವರ್ಯವನ್ನು ಪ್ರೀತಿಸುವುದರಿಂದ ಭಗವಂತನೂ ಹಾಗೆಯೇ ಮಾಡುತ್ತಾನೆ ಎಂದು ಭಾವಿಸುತ್ತಾನೆ. ಆತನ ಐಶ್ವರ್ಯದ ವೈಭವವನ್ನು ಹೊಗಳಿದ್ದೇ ಆದರೆ ಆತನಿಗೆ ಆನಂದವಾಗಿಬಿಡುತ್ತದೆ ಎಂದು ಭಾವಿಸುತ್ತಾನೆ. ಒಮ್ಮೆ ಶಂಭುಮಲ್ಲಿಕ ಹೇಳಿದ: ‘ನಾನು ನನ್ನ ಈ ಐಶ್ವರ್ಯವನ್ನೆಲ್ಲಾ ಭಗವಂತನ ಪಾದಪದ್ಮಗಳಲ್ಲಿ ಅರ್ಪಿಸಿ ಶಾಂತಿಯಿಂದ ಸಾಯುವ ಹಾಗೆ ನನಗೆ ಆಶೀರ್ವಾದ ಮಾಡಿ.’ ನಾನು ಹೇಳಿದೆ: ‘ಇವು ನಿನಗೇನೋ ದೊಡ್ಡ ಐಶ್ವರ್ಯವಾಗಿರಬಹುದು. ನೀನು ಆತನಿಗೆ ಯಾವ ಐಶ್ವರ್ಯವನ್ನು ಕೊಡಬಲ್ಲೆ? ಆತನ ದೃಷ್ಟಿಯಿಂದ ಇವೆಲ್ಲಾ ಕಸಕಡ್ಡಿ.’
“ಒಮ್ಮೆ ವಿಷ್ಣುದೇವಾಲಯದ ಒಡವೆಗಳನ್ನೆಲ್ಲಾ ಯಾರೋ ಕದ್ದುಕೊಂಡು ಹೋದಾಗ ನಾನೂ ಮಥುರಬಾಬುವೂ ದೇವಾಲಯದ ಒಳಕ್ಕೆ ಹೋಗಿ ನೋಡಿದೆವು. ಮಥುರಬಾಬು ಹೇಳಿದ: ‘ಛೆ, ದೇವರೆ! ನೀನು ಯಾವುದಕ್ಕೂ ಬರುವವನಲ್ಲ. ಕಳ್ಳರು ನಿನ್ನ ಶರೀರದ ಮೇಲೆ ಇದ್ದ ಒಡವೆಗಳನ್ನೆಲ್ಲಾ ಕಳಚಿಕೊಂಡು ಹೋಗಿಬಿಟ್ಟಿದ್ದಾರೆ. ನಿನ್ನ ಕೈಯಲ್ಲಿ ಏನು ಮಾಡುವುದಕ್ಕೂ ಆಗದೆ ಹೋಯಿತಲ್ಲ!’ ನಾನು ಆತನಿಗೆ ಹೇಳಿದೆ: ‘ನಿನ್ನದು ಎಂಥ ಮಾತು! ನೀನು ಅಷ್ಟೊಂದಾಗಿ ಭಾವಿಸುತ್ತಿರುವ ಒಡವೆ ಭಗವಂತನಿಗೆ ಒಂದು ಮಣ್ಣುಹೆಂಟೆಗೆ ಸಮಾನ, ಭಾಗ್ಯದೇವತೆಯಾದ ಲಕ್ಷ್ಮಿಯೇ ಆತನ ರಾಣಿ. ಅಂಥ ಭಗವಂತ ನಿನ್ನ ಈ ಕೆಲವು ರೂಪಾಯಿಗಳ ಒಡವೆ ಕಳವಾದುದಕ್ಕಾಗಿ ಹಗಲಿರುಳು ಚಿಂತಿಸಬೇಕಾಗಿತ್ತು ಅನ್ನು? ಇಂಥ ಮಾತುಗಳನ್ನು ನೀನು ಇನ್ನೆಂದಿಗೂ ಆಡಕೂಡದು.’
“ಭಗವಂತ ಐಶ್ವರ್ಯಕ್ಕೆ ವಶನೆ? ಆತ ಭಕ್ತಿಗೆ ವಶನಾಗುತ್ತಾನೆ. ಆತನಿಗೆ ಏನು ಬೇಕಾಗಿದೆ? ನಿಜವಾಗಿಯೂ ಹಣವಲ್ಲ! ಭಕ್ತರ ಭಾವ, ಪ್ರೇಮ, ಭಕ್ತಿ, ವಿವೇಕ, ವೈರಾಗ್ಯ ಇವೇ ಮೊದಲಾದವು ಬೇಕು.
“ಪ್ರತಿಯೊಬ್ಬನೂ ತನ್ನ ತನ್ನ ಭಾವದಂತೆ ಭಗವಂತನನ್ನು ನೋಡುತ್ತಾನೆ. ಉದಾಹರಣೆಗೆ ತಾಮಸಿಕ ಭಕ್ತನನ್ನು ತೆಗೆದುಕೊಳ್ಳಿ. ಆತ ಭಾವಿಸುತ್ತಾನೆ, ಭಗವತಿ ಆಡನ್ನು ತಿನ್ನುತ್ತಾಳೆ ಎಂದು. ಅದಕ್ಕಾಗಿ ಆಕೆಗೆ ಬಲಿಯನ್ನು ಅರ್ಪಿಸುತ್ತಾನೆ. ಹಾಗೆಯೇ ರಾಜಸಿಕ ಭಕ್ತ ಅನೇಕ ಬಗೆಯ ಪಲ್ಯ ಮತ್ತು ಅನ್ನವನ್ನು ಅರ್ಪಿಸುತ್ತಾನೆ. ಆದರೆ ಸಾತ್ತ್ವಿಕ ಭಕ್ತನಲ್ಲಿ ಯಾವ ವಿಧವಾದ ಬಾಹ್ಯ ಪೂಜೆಯ ಆಡಂಬರವಿರುವುದಿಲ್ಲ. ಆತ ಪೂಜೆ ಮಾಡುತ್ತಿರುವುದು ಜನರಿಗೆ ಗೊತ್ತೇ ಇರುವುದಿಲ್ಲ. ಹೂವು ಇಲ್ಲದೆ ಇತ್ತು ಎಂದರೆ ಬಿಲ್ವಪತ್ರೆ, ಗಂಗಾಜಲ ಇವುಗಳಿಂದಲೇ ಪೂಜೆ ಮಾಡಿಬಿಡುತ್ತಾನೆ. ಆತನ ನೈವೇದ್ಯಕ್ಕೆ ಒಂದು ಹಿಡಿ ಬೆಲ್ಲದ ಪುರಿಯೋ ಅಥವಾ ಒಂದೆರಡು ಬತ್ತಾಸವೋ ಇದ್ದರೆ ಸಾಕು. ಅಪರೂಪಕ್ಕೆ ಒಮ್ಮೊಮ್ಮೆ ಭಗವಂತನಿಗೆ ಪಾಯಸ ಮಾಡಿ ಅರ್ಪಿಸುತ್ತಾನೆ.
“ಇವರೂ ಅಲ್ಲದೆ ತ್ರಿಗುಣಾತೀತ ಭಕ್ತರೂ ಇದ್ದಾರೆ. ಅವರದು ಬಾಲಕನ ಸ್ವಭಾವ. ಅವರ ಪೂಜೆ ಭಗವನ್ನಾಮೋಚ್ಚಾರಣೆ ಮಾಡುವುದರಲ್ಲೇ-ಕೇವಲ ಆತನ ನಾಮೋಚ್ಚಾರಣೆ ಯಲ್ಲೇ ಕೊನೆಗಾಣುತ್ತದೆ.
(ಕೇಶವಸೇನನಿಗೆ ನಗುತ್ತ) “ನಿನ್ನ ದೇಹಾರೋಗ್ಯ ಕೆಟ್ಟಿದೆಯಲ್ಲ ಏಕೆ? ಇದಕ್ಕೆ ಕಾರಣವಿದೆ. ಶರೀರದ ಮೂಲಕ ಅನೇಕ ಭಾವಗಳು ಪ್ರವಹಿಸಿ ಹೋಗಿವೆ; ಅದಕ್ಕಾಗಿ ಹೀಗಾಗಿ ಬಿಟ್ಟಿದೆ. ಭಾವ ಉಂಟಾದಾಗ ಏನೂ ಗೊತ್ತಾಗುವುದಿಲ್ಲ. ಬಹಳ ದಿನಗಳಾದ ಮೇಲೆ ಅದು ಶರೀರದ ಮೇಲೆ ಮಾಡಿದ ಆಘಾತ ಅರಿವಿಗೆ ಬರುತ್ತದೆ. ನಾನು ನೋಡಿದ್ದೇನೆ, ಗಂಗೆಯಲ್ಲಿ ದೊಡ್ಡದೊಡ್ಡ ಜಹಜುಗಳು ಹೋಗುವುದನ್ನು. ಅವು ಹೋಗುವ ಸಮಯದಲ್ಲಿ ಗೊತ್ತೇ ಆಗದ ಹಾಗೆ ಹೊರಟು ಹೋಗುತ್ತವೆ. ಆದರೆ ಏನು ಹೇಳಲಿ! ಸ್ವಲ್ಪ ಹೊತ್ತಿನಲ್ಲೇ ಅಲೆಗಳು ಬಂದು ‘ಢಬಾರ್, ಢಬಾರ್’ ಅಂತ ರಭಸದಿಂದ ದಡವನ್ನು ಬಡಿಯಲಾರಂಭಿಸುತ್ತವೆ. ಬಹುಶಃ ಆ ಏಟಿಗೆ ದಡದ ಸ್ವಲ್ಪ ಭಾಗ ಕುಸಿದು ನೀರಿಗೆ ಬೀಳಬಹುದು.
“ಆನೆ ಗುಡಿಸಲನ್ನು ಒಳಹೊಕ್ಕರೆ ಒಳಗೆಲ್ಲ ಹಾವಳಿಮಾಡಿ ಕೊನೆಗೆ ಅದನ್ನು ಉರುಳಿಸಿ ಚೂರು ಚೂರು ಮಾಡಿಬಿಡುತ್ತದೆ. ಹಾಗೆಯೇ ಭಾವವೆಂಬ ಆನೆ ಈ ದೇಹವನ್ನು ಪ್ರವೇಶಿಸಿ ಅದನ್ನು ಚೂರು ಚೂರು ಮಾಡಿಬಿಡುತ್ತದೆ.”
“ನಿಜವಾಗಿ ಏನು ಆಗುತ್ತದೆ ಗೊತ್ತೆ? ಮನೆಗೆ ಬೆಂಕಿ ಹೊತ್ತಿಕೊಂಡಾಗ ಮೊದಲು ಮನೆಯೊಳಗಿನ ಕೆಲವು ವಸ್ತುಗಳು ಉರಿದುಹೋಗಲಾರಂಭಿಸುತ್ತವೆ. ಬಳಿಕ ದೊಡ್ಡ ಲಂಕಾ ದಹನ ಆರಂಭವಾಗುತ್ತದೆ. ಅದೇ ರೀತಿ ಜ್ಞಾನಾಗ್ನಿ ಮೊದಲು ಕಾಮ, ಕ್ರೋಧ ಮೊದಲಾದ ರಿಪುಗಳನ್ನು ನಾಶಮಾಡುತ್ತದೆ. ಬಳಿಕ ಅಹಂ ಬುದ್ಧಿಯನ್ನು ನಾಶಮಾಡುತ್ತದೆ. ಅನಂತರ ಈ ದೇಹದಲ್ಲಿ ಒಂದು ದೊಡ್ಡ ತುಮುಲ ಏಳುತ್ತದೆ.
“ನೀನು ಭಾವಿಸಿಕೊಳ್ಳಬಹುದು, ಎಲ್ಲ ಮುಗಿದುಹೋಯಿತು ಎಂದು. ಆದರೆ ಭಗವಂತ ರೋಗದ ಸಿಲ್ಕು ಒಂದು ಕಿಂಚಿತ್ ಇರುವವರೆಗೂ ನಿನ್ನನ್ನು ಬಿಟ್ಟುಕೊಡಲೊಲ್ಲ. ಆಸ್ಪತ್ರೆಗೆ ಹೋಗಿ ದಾಖಲಾದರೆ ಅಲ್ಲಿಂದ ಸುಮ್ಮನೆ ಬಂದುಬಿಡಲಾಗುವುದಿಲ್ಲ. ರೋಗದ ಕೊಸರು ಸ್ವಲ್ಪ ಇರುವವರೆಗೂ ಡಾಕ್ಟರ್ ನಿನ್ನನ್ನು ಬಿಟ್ಟುಕೊಡುವುದಿಲ್ಲ. ಆಸ್ಪತ್ರೆಗೆ ಹೋಗಿ ಏಕೆ ದಾಖಲಾದೆ ಮತ್ತೆ?” (ಎಲ್ಲರೂ ನಗುತ್ತಿದ್ದಾರೆ.)
ಕೇಶವಸೇನ ಆಸ್ಪತ್ರೆಯ ಮಾತು ಕೇಳಿ ಮತ್ತೆ ಮತ್ತೆ ನಗುತ್ತಿದ್ದಾನೆ. ಆತನಿಗೆ ನಗುವನ್ನು ನಿಲ್ಲಿಸಲಾಗಲಿಲ್ಲ. ತಡೆದು ತಡೆದು ನಗುತ್ತಲೇ ಇದ್ದಾನೆ. ಈಗ ಪರಮಹಂಸರು ತಮ್ಮ ರೋಗದ ಸಂಬಂಧವಾಗಿ ಹೇಳಲಾರಂಭಿಸಿದ್ದಾರೆ. ಕೇಶವಸೇನನಿಗೆ: “ಹೃದು ಹೇಳುತ್ತಿದ್ದ: ‘ಇದುವರೆಗೆ ನಾನು ಎಂದೂ ಇಂಥ ಭಾವವನ್ನು ನೋಡಿಲ್ಲ. ಇಂಥ ರೋಗವನ್ನೂ ನೋಡಿಲ್ಲ.’ ಆಗ ನನಗೆ ಬಹಳ ಕೆಟ್ಟ ಅತಿಸಾರ. ಲಕ್ಷಾಂತರ ಇರುವೆ ಒಟ್ಟಿಗೆ ಸೇರಿ ನನ್ನ ಮಿದುಳನ್ನು ಕಚ್ಚುತ್ತಿರುವಂತೆ ಅನುಭವವಾಗುತ್ತಿತ್ತು. ಆದರೂ ಭಗವತ್ಸಂಬಂಧವಾದ ಮಾತುಕತೆ ಮಾತ್ರ ಹಗಲೂ ರಾತ್ರಿ ನಡೆಯುತ್ತಲೇ ಇತ್ತು. ನಾಟಗರ್ನ ಕವಿರಾಜ ರಾಮ ನನ್ನನ್ನು ಪರೀಕ್ಷೆಮಾಡಲು ಬಂದ. ನಾನು ಭಗವತ್ಸಂಬಂಧವಾಗಿ ವಿಚಾರದಲ್ಲಿ ತೊಡಗಿದ್ದುದು ಆತನ ಕಣ್ಣಿಗೆ ಬಿತ್ತು. ಆಗ ಆತ ಹೇಳಿದ: ‘ಇವರೆಂಥ ಹುಚ್ಚು ಮನುಷ್ಯರು! ಮೂಳೆ ಚಕ್ಕಳದ ಅವಸ್ಥೆಗೆ ಇಳಿದಿದ್ದರೂ ವಿಚಾರದಲ್ಲಿ ತೊಡಗಿದ್ದಾರಲ್ಲ?’”
ಶ್ರೀರಾಮಕೃಷ್ಣರು ಕೇಶವನಿಗೆ: “ಎಲ್ಲವೂ ಭಗವಂತನ ಇಚ್ಛೆಯ ಮೇಲೆ ನಿಂತಿದೆ.
ಎಲ್ಲವೂ ನಿನ್ನಿಚ್ಛೆಯಂತೆ ನಡೆದಿರಲು
ನೀನೆ ಭವಸಾಗರವ ದಾಟಿಸುವ ಹಡಗು……
“ಇಬ್ಬನಿಯನ್ನು ಕುಡಿಯಲಿ ಎಂದು ತೋಟಗಾರ ಬಸ್ರಾ ಗುಲಾಬಿ ಗಿಡದ ಬೇರಿನ ಬಹುಭಾಗವನ್ನು ತೋಡಿ ಹಾಗೆಯೇ ಬಿಟ್ಟುಬಿಡುತ್ತಾನೆ. ಇದು ಇಬ್ಬನಿಯನ್ನು ಕುಡಿದರೆ ಬಹು ಚೆನ್ನಾಗಿ ಹೂವು ಬಿಡುತ್ತದೆ. ಬಹುಶಃ ಅದಕ್ಕಾಗಿಯೇ ಇರಬೇಕು, ಭಗವತಿ ನಿನ್ನ ಬೇರಿನ ಬಹುಭಾಗವನ್ನು ತೋಡಿಬಿಟ್ಟಿರುವುದು. (ಕೇಶವ, ಪರಮಹಂಸರು ಇಬ್ಬರೂ ನಗುತ್ತಾರೆ.) ಬಹುಶಃ ನೀನು ಹಿಂದಿರುಗಿ ಬಂದ ಮೇಲೆ ಒಂದು ದೊಡ್ಡ ಮಹತ್ಕಾರ್ಯ ವನ್ನು ಸಾಧಿಸಬಹುದು.
“ನಿನಗೆ ಖಾಯಿಲೆ ಬಂತು ಎಂದರೇ ನನ್ನ ಪ್ರಾಣ ಬಹಳವಾಗಿ ವ್ಯಾಕುಲಪಡಲಾರಂಭಿ ಸುತ್ತದೆ. ಹಿಂದಿನ ಸಲ ನೀನು ಖಾಯಿಲೆ ಬಿದ್ದಿದ್ದಾಗ ರಾತ್ರಿಯ ಕೊನೆಯ ಭಾಗದಲ್ಲಿ ನಿನಗಾಗಿ ಅಳುತ್ತ ಭಗವತಿಗೆ ಹೇಳುತ್ತಿದ್ದೆ: ‘ತಾಯೆ, ಕೇಶವನಿಗೆ ಅಕಸ್ಮಾತ್ ಏನಾದರೂ ಆಗಿಬಿಟ್ಟರೆ, ಬಳಿಕ ಕಲ್ಕತ್ತೆಗೆ ಹೋದಾಗ ನಾನು ಯಾರೊಡನೆ ಮಾತಾಡಲಿ?’ ಕಲ್ಕತ್ತಕ್ಕೆ ಬಂದು ನಿನ್ನ ಆರೋಗ್ಯಕ್ಕಾಗಿ ಭಗವತಿ ಸಿದ್ಧೇಶ್ವರಿದೇವಿಗೆ ಎಳೆನೀರು ಸಕ್ಕರೆಯನ್ನು ಅರ್ಪಿಸಿದೆ.”
ಪರಮಹಂಸರು ಕೇಶವಸೇನನ ಮೇಲೆ ಇಟ್ಟಿರುವ ಅಕೃತ್ರಿಮ ಪ್ರೀತಿ, ಆತನಿಗಾಗಿ ಅವರು ವ್ಯಾಕುಲಪಡುವುದು, ಈ ವಿಷಯವಾಗಿ ಎಲ್ಲವನ್ನೂ ಕೇಳಿ ಭಕ್ತರೆಲ್ಲರೂ ಬಹಳವಾಗಿ ಆಶ್ಚರ್ಯಚಕಿತರಾಗಿದ್ದಾರೆ.
ಶ್ರೀರಾಮಕೃಷ್ಣರು: “ಆದರೆ, ಈ ಸಲ ಸತ್ಯವಾಗಿ ಹೇಳಬೇಕಾದರೆ, ಹಿಂದಿನಷ್ಟು ಮನಸ್ಸು ವ್ಯಾಕುಲಪಡಲಿಲ್ಲ. ಎಲ್ಲೋ ಎರಡು ಮೂರು ದಿನ ಸ್ವಲ್ಪ ವ್ಯಾಕುಲಪಟ್ಟಿತು.”
ಕೇಶವಸೇನ ಕೊಠಡಿಯನ್ನು ಪ್ರವೇಶಿಸಿದ ಆ ಪೂರ್ವಬಾಗಿಲಿನ ಹತ್ತಿರಕ್ಕೆ ಕೇಶವ ಸೇನನ ವೃದ್ಧ ಮಾತೆ ಬಂದಿದ್ದಾಳೆ. ಉಮಾನಾಥ ಪರಮಹಂಸರಿಗೆ ಗಟ್ಟಿಯಾಗಿ ಕೂಗಿ ಹೇಳುತ್ತಿದ್ದಾನೆ: “ಇಲ್ಲಿ ತಾಯಿ ನಿಮಗೆ ಪ್ರಣಾಮಮಾಡುತ್ತಿದ್ದಾಳೆ.”
ಶ್ರೀರಾಮಕೃಷ್ಣರು ನಗುತ್ತಿದ್ದಾರೆ. ಉಮಾನಾಥ ಮತ್ತೆ ಹೇಳುತ್ತಿದ್ದಾನೆ: “ತಾಯಿ ಕೇಳಿಕೊಳ್ಳುತ್ತಿದ್ದಾಳೆ, ತಾವು ಕೇಶವಸೇನನ ರೋಗ ಗುಣಹೊಂದುವ ಹಾಗೆ ಆಶೀರ್ವಾದ ಮಾಡಬೇಕು ಎಂದು.”
ಶ್ರೀರಾಮಕೃಷ್ಣರು ಕೇಶವಸೇನನ ತಾಯಿಗೆ: “ಭಗವತಿ ಆನಂದಮಯಿಗೆ ಮೊರೆಯಿಡಿ. ಆಕೆ ದುಃಖವನ್ನು ದೂರಮಾಡುತ್ತಾಳೆ.
(ಕೇಶವಸೇನನಿಗೆ) “ಮನೆಯ ಅಂತಃಪುರದಲ್ಲಿ ಬಹಳ ಕಾಲ ಕಳೆಯಬೇಡ. ಹೆಂಗಸರ ಮಧ್ಯೆ ಇದ್ದರೆ ಇನ್ನೂ ಆಳಕ್ಕೆ ಇಳಿದುಹೋಗಿಬಿಡುತ್ತೀಯೆ. ಭಗವತ್ಸಂಬಂಧವಾಗಿಯೇ ಮಾತುಕತೆ ನಿನ್ನ ಕಿವಿಗೆ ಬೀಳುವುದಾದರೆ ನೀನು ಉತ್ತಮಗೊಳ್ಳುವೆ.”
ಪರಮಹಂಸರು ಗಂಭೀರಮುದ್ರೆಯಿಂದ ಈ ಮಾತುಗಳನ್ನು ಹೇಳಿದ ನಂತರ ಬಾಲಕನ ಹಾಗೆ ನಗಲಾರಂಭಿಸಿದ್ದಾರೆ. ಈಗ ಕೇಶವಸೇನನಿಗೆ ಹೇಳುತ್ತಿದ್ದಾರೆ: “ಎಲ್ಲಿ, ನಿನ್ನ ಕೈ ನೋಡೋಣ” ಮಗುವಿನ ಹಾಗೆ ಅದನ್ನು ಹಿಡಿದು ಆಟವಾಡುತ್ತ ತೂಗಿ ನೋಡುತ್ತಿದ್ದಾರೆ. ಕೊನೆಗೆ ಈಗ ಹೇಳುತ್ತಿದ್ದಾರೆ: “ಇಲ್ಲ, ನಿನ್ನ ಕೈ ಹಗುರವಾಗಿದೆ. ಕಪಟಿಯ ಕೈ ಬಹಳ ಭಾರವಾಗಿರುತ್ತದೆ.” (ಎಲ್ಲರೂ ನಗುತ್ತಿದ್ದಾರೆ.)
ಉಮಾನಾಥ ಬಾಗಿಲಿನ ಹತ್ತಿರದಿಂದ ಮತ್ತೆ ಹೇಳುತ್ತಿದ್ದಾನೆ: “ತಾಯಿ ಹೇಳುತ್ತಿದ್ದಾಳೆ. ತಾವು ಕೇಶವಸೇನನಿಗೆ ಆಶೀರ್ವಾದ ಮಾಡಬೇಕು ಎಂದು.”
ಶ್ರೀರಾಮಕೃಷ್ಣರು ಗಂಭೀರ ಸ್ವರದಿಂದ: “ನನ್ನ ಕೈಯಲ್ಲಿ ಏನು ತಾನೆ ಸಾಧ್ಯ? ಆಶೀರ್ವಾದ ಮಾಡತಕ್ಕವನು ಕೇವಲ ಭಗವಂತನೊಬ್ಬನೇ. ‘ನಿನ್ನ ಇಚ್ಛೆಯ ನೀನು ಪೂರೈಸುತ್ತಿರಲು; ತಮ್ಮ ಗೈಮೆಯಿದೆಂದು ತಿಳಿವರೀ ಜನರು!’
“ಭಗವಂತ ಎರಡು ವೇಳೆ ನಗುತ್ತಾನೆ. ಸೋದರರಿಬ್ಬರು ಪಿತ್ರಾರ್ಜಿತ ಜಮೀನನ್ನು ಹಂಚಿಕೊಳ್ಳುವಾಗೊಮ್ಮೆ ನಗುತ್ತಾನೆ. ಅವರು ಜಮೀನಿನ ಮೇಲೆ ದಾರ ಕಟ್ಟಿ ಹೇಳುತ್ತಾರೆ ‘ಈ ಭಾಗ ನನ್ನದು, ಆ ಭಾಗ ನಿನ್ನದು.’ ಆಗ ಭಗವಂತ ನಗುತ್ತ ತನಗೆ ತಾನೇ ಹೇಳಿಕೊಳ್ಳುತ್ತಾನೆ: ‘ಏಕೆ, ಈ ಇಡೀ ಜಗತ್ತೇ ನನ್ನದು. ಅಂಥಾದ್ದರಲ್ಲಿ ಇದೊಂದಿಷ್ಟು ಭಾಗ ಮಣ್ಣಿನ ಸಂಬಂಧವಾಗಿ ಅವರು ಹೇಳುತ್ತಿದ್ದಾರಲ್ಲ; “ಈ ಭಾಗ ನನ್ನದು, ಆ ಭಾಗ ನಿನ್ನದು” ಎಂದು!’
“ಭಗವಂತ ಇನ್ನೊಮ್ಮೆ ನಗುತ್ತಾನೆ: ಮಗುವಿನ ತೀವ್ರ ಖಾಯಿಲೆಯನ್ನು ನೋಡಿ ತಾಯಿ ಬಹಳವಾಗಿ ವಿಲಾಪಿಸುತ್ತಿರುತ್ತಾಳೆ. ಡಾಕ್ಟರ್ ಬಂದು ಹೇಳುತ್ತಾನೆ: ‘ತಾಯೆ ಭಯಪಡಬೇಕಾಗಿಲ್ಲ. ನಾನು ಗುಣಪಡಿಸಿಕೊಟ್ಟುಬಿಡುತ್ತೇನೆ.’ ಆದರೆ ಡಾಕ್ಟರಿಗೆ ಗೊತ್ತಿಲ್ಲ. ಆ ಮಗು ಸಾಯಬೇಕೆಂಬುದು ಭಗವಂತನ ಇಚ್ಛೆಯಾಗಿದ್ದ ಪಕ್ಷದಲ್ಲಿ ಅದನ್ನು ಯಾರೂ ಬದುಕಿಸಲಾರರು ಎಂಬುದು.” (ಎಲ್ಲರೂ ಸ್ತಬ್ಧರಾಗಿ ಕುಳಿತಿದ್ದಾರೆ.)
ಈ ಸಮಯಕ್ಕೆ ಸರಿಯಾಗಿ ಕೇಶವಸೇನ ಕೆಮ್ಮಲು ಆರಂಭಿಸಿ ಬಹಳ ಹೊತ್ತಿನವರೆಗೆ ಕೆಮ್ಮುತ್ತಲೇ ಇದ್ದ. ಆತನ ಕೆಮ್ಮಲು ಶಬ್ದ ಕೇಳಿ ಎಲ್ಲರಿಗೂ ದುಃಖವಾಗಲಾರಂಭಿಸಿತು. ಆತನಿಗೆ ಬಹಳವಾಗಿ ಸುಸ್ತಾಗಿಬಿಟ್ಟು ಇನ್ನು ಅಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಆತ ಪರಮ ಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಎದ್ದು ಮತ್ತೆ ಗೋಡೆಯನ್ನು ಹಿಡಿದುಕೊಂಡು ತನ್ನ ಕೊಠಡಿಗೆ ಬಂದ ಮಾರ್ಗವಾಗಿಯೇ ಹಿಂದಿರುಗಿ ಹೊರಟುಹೋದ.
ಪರಮಹಂಸರು ಸ್ವಲ್ಪ ಉಪಾಹಾರ ಮಾಡಿಕೊಂಡು ಹೊರಡುತ್ತಾರೆ. ಕೇಶವಸೇನನ ಹಿರಿಯ ಮಗ ಪರಮಹಂಸರ ಹತ್ತಿರ ಕುಳಿತುಕೊಂಡಿದ್ದಾನೆ. ಅಮೃತ ಪರಮಹಂಸರಿಗೆ ಆ ಹುಡುಗನ ಪರಿಚಯ ಮಾಡಿಕೊಟ್ಟು. ಆತನಿಗೆ ಆಶೀರ್ವಾದ ಮಾಡುವಂತೆ ಅವರನ್ನು ಪ್ರಾರ್ಥಿಸಿಕೊಳ್ಳುತ್ತಿದ್ದಾನೆ, “ತಲೆಯ ಮೇಲೆ ಕೈ ಇರಿಸಿ ಆಶೀರ್ವದಿಸಿ.” ಪರಮಹಂಸರು ಹೇಳುತ್ತಿದ್ದಾರೆ: “ನನ್ನಿಂದ ಆಶೀರ್ವಾದ ಮಾಡಲಾಗದು.” ನಗುತ್ತ ಆ ಹುಡುಗನ ಮೈ-ಕೈಯನ್ನು ಸವರುತ್ತಿದ್ದಾರೆ.”
ಅಮೃತ ನಗುತ್ತ: “ಒಳ್ಳೇದು, ಹಾಗಾದರೆ ಮೈದಡವಿ.” (ಎಲ್ಲರೂ ನಗುತ್ತಿದ್ದಾರೆ)
ಶ್ರೀರಾಮಕೃಷ್ಣರು ಭಕ್ತರಿಗೆ: “ನಿನಗೆ ಗುಣವಾಗಿಬಿಡಲಿ,’ ಇವೇ ಮೊದಲಾದುವನ್ನು ಹೇಳಲು ನನ್ನ ಕೈಯಲ್ಲಿ ಸಾಧ್ಯವಿಲ್ಲ. ಗುಣಪಡಿಸುವ ಶಕ್ತಿಯನ್ನು ಕೊಡು ಎಂಬುದಾಗಿ ನಾನು ಎಂದೂ ಭಗವತಿಗೆ ಪ್ರಾರ್ಥನೆ ಸಲ್ಲಿಸುವುದಿಲ್ಲ. ನಾನು ಆಕೆಯನ್ನು ಕೇವಲ ಶುದ್ಧ ಭಕ್ತಿಯನ್ನು ಕೊಡುವಂತೆ ಪ್ರಾರ್ಥಿಸುತ್ತೇನೆ.
“ಏನು, ಕೇಶವಸೇನ ಸಾಮಾನ್ಯ ಮನುಷ್ಯನೇ? ಹಣಯಾಚಕರಲ್ಲಿ ಆತನನ್ನು ಗೌರವಿಸುತ್ತಾರೆ. ಹಾಗೆಯೇ ಸಾಧುಗಳು ಕೂಡ. ಇಲ್ಲೊಂದು ತೋಟದಲ್ಲಿ ದಯಾನಂದ ಬಂದು ಇಳಿದುಕೊಂಡಿದ್ದಾಗ ನಾನು ಹೋಗಿ ಆತನನ್ನು ನೋಡಿದೆ. ಅಂದು ಆತ ಕೇಶವ ಸೇನನನ್ನು ತೀವ್ರ ಆಕಾಂಕ್ಷೆಯಿಂದ ಎದುರುನೋಡುತ್ತ ಆಗಾಗ ಕೊಠಡಿಯಿಂದ ಹೊರಕ್ಕೆ ಬಂದು ನೋಡುತ್ತಲೇ ಇದ್ದ. ಅಂದು ಕೇಶವಸೇನ ಅಲ್ಲಿಗೆ ಬರುವುದಾಗಿ ಆತ ದಯಾನಂದನಿಗೆ ತಿಳಿಸಿದ್ದನೆಂದು ಬಳಿಕ ಅರಿತೆ. ಕೇಶವಸೇನನಿಗೆ ವೇದೋಕ್ತ ಹೋಮದಲ್ಲಿ ಮತ್ತು ದೇವತೆಗಳಲ್ಲಿ ಶ್ರದ್ಧೆಯಿರಲಿಲ್ಲ. ಅದಕ್ಕಾಗಿ ದಯಾನಂದ ಹೇಳಿದ: ‘ಇಷ್ಟೊಂದು ವಸ್ತುಗಳನ್ನು ಸೃಷ್ಟಿಸಿದ ಭಗವಂತನ ಕೈಯಲ್ಲಿ ದೇವತೆಗಳನ್ನು ಸೃಷ್ಟಿಸಲು ಆಗುವುದಿಲ್ಲವೆ?’”
ಶ್ರೀರಾಮಕೃಷ್ಣರು ತಮ್ಮ ಮಾತು ಮುಂದುವರಿಸಿ ಹೇಳುತ್ತಿದ್ದಾರೆ: “ಕೇಶವಸೇನನದು ಹೀನಬುದ್ಧಿಯಲ್ಲ. ಅನೇಕರಿಗೆ ಆತ ಹೇಳಿದ್ದಾನೆ: ‘ಏನೇನು ಸಂದೇಹವಿದ್ದರೂ ಅಲ್ಲಿಗೆ 1 ಹೋಗಿ ಪರಿಹಾರ ಮಾಡಿಕೊಂಡುಬಿಡಿ.’ ನನ್ನ ಸ್ವಭಾವವೂ ಅದೇ ರೀತಿಯದು. ನಾನು ಹೇಳುತ್ತೇನೆ: ‘ಕೀರ್ತಿಯನ್ನು ತೆಗೆದುಕೊಂಡು ನಾನೇನು ಮಾಡಲಿ? ಕೇಶವನ ಕೀರ್ತಿ ಇನ್ನೂ ಸಹಸ್ರಮಡಿಯಾಗಿ ಬೆಳೆಯಲಿ.’ ಕೇಶವ ನಿಜವಾಗಿಯೂ ಬಹಳ ದೊಡ್ಡ ಮನುಷ್ಯನೆ. ಹಣಯಾಚಕರೂ ಆತನನ್ನು ಗೌರವಿಸುತ್ತಾರೆ. ಹಾಗೆಯೇ ಸಾಧುಗಳು ಕೂಡ.” ಈ ರೀತಿಯಾಗಿ ಪರಮಹಂಸರು ಕೇಶವಸೇನನನ್ನು ಆತನ ಶಿಷ್ಯರ ಎದುರಿಗೆ ಹೊಗಳಿದರು.
ಉಪಾಹಾರವಾದ ನಂತರ ಪರಮಹಂಸರು ಹೊರಡಲು ಸಿದ್ಧರಾದರು. ಬ್ರಾಹ್ಮಭಕ್ತರು ಅವರನ್ನು ಗಾಡಿಗೆ ಹತ್ತಿಸಿಕೊಡಲು ಸಿದ್ಧರಾಗಿದ್ದಾರೆ. ಮೆಟ್ಟಲಿನ ಮೂಲಕ ಕೆಳಕ್ಕೆ ಇಳಿಯುವಾಗ ನೆಲ ಅಂತಸ್ತಿನಲ್ಲಿ ಬೆಳಕಿಲ್ಲದಿರುವುದು ಪರಮಹಂಸರ ಕಣ್ಣಿಗೆ ಬಿತ್ತು. ಅವರು ಅಮೃತನಿಗೆ ಮತ್ತು ಕೇಶವನ ಶಿಷ್ಯರಿಗೆ ಹೇಳುತ್ತಿದ್ದಾರೆ: “ಇಂಥಾ ಸ್ಥಳಗಳಲ್ಲೆಲ್ಲಾ ಒಳ್ಳೆ ಬೆಳಕು ಇರಬೇಕು. ಬೆಳಕಿಲ್ಲದೆ ಇತ್ತು ಎಂದರೆ ದಾರಿದ್ರ್ಯಲಕ್ಷ್ಮಿ ಗೃಹವನ್ನು ಪ್ರವೇಶಿಸುತ್ತಾಳೆ. ಈ ರೀತಿಯಾಗಿ ಮುಂದೆ ಇನ್ನೆಂದಿಗೂ ಆಗದ ಹಾಗೆ ನೋಡಿಕೊಳ್ಳಬೇಕು.”
ಬಳಿಕ ಪರಮಹಂಸರು ಒಬ್ಬಿಬ್ಬರು ಭಕ್ತರೊಡನೆ ದಕ್ಷಿಣೇಶ್ವರದ ಕಡೆ ಮುಂದುವರಿಯಲಾರಂಭಿಸಿದರು.
ಪರಮಹಂಸರು ಹಾಗೆಯೆ ಮುಂದುವರಿಯುತ್ತ ಜಯಗೋಪಾಲಸೇನನ ಮನೆಯ ಹತ್ತಿರ ಗಾಡಿಯನ್ನು ನಿಲ್ಲಿಸಿ ಆತನ ಮನೆಗೆ ಬಂದಿದ್ದಾರೆ. ಘಂಟೆ ಈಗ ರಾತ್ರಿ ಏಳು. ಜಯಗೋಪಾಲಸೇನನ ಮನೆಯವರು, ಆತನ ಬಂಧುಗಳು, ಅಕ್ಕಪಕ್ಕದವರು ಬೈಠಕ್ಖಾನೆ ಯಲ್ಲಿ ತುಂಬಿಕೊಂಡಿದ್ದಾರೆ. ಜಯಗೋಪಾಲಸೇನನ ಸೋದರ ವೈಕುಂಠ ಪರಮಹಂಸರನ್ನು ಪ್ರಾರ್ಥಿಸಿಕೊಳ್ಳುತ್ತಿದ್ದಾನೆ: “ಮಹಾಶಯರೆ, ನಾವು ಸಂಸಾರಿಗಳು. ನಮಗೆ ಏನಾದರೂ ಉಪದೇಶ ಕೊಡಿ.”
ಶ್ರೀರಾಮಕೃಷ್ಣರು: “ಮೊದಲು ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಂಡು ಅನಂತರ ಈ ಜಗತ್ತಿನ ಕಾರ್ಯವನ್ನು ಮಾಡಿ. ಒಂದು ಕೈಯಿಂದ ಭಗವಂತನ ಪಾದಪದ್ಮಗಳನ್ನು ಬಿಗಿಯಾಗಿ ಹಿಡಿದುಕೊಂಡು ಇನ್ನೊಂದು ಕೈಯಿಂದ ಸಾಂಸಾರಿಕ ಕೆಲಸ ಕಾರ್ಯಗಳನ್ನು ಮಾಡಿ.”
ವೈಕುಂಠ: “ಮಹಾಶಯರೆ, ಈ ಸಂಸಾರ ಮಿಥ್ಯೆಯಾದುದೇನು?”
ಶ್ರೀರಾಮಕೃಷ್ಣರು: “ಹೌದು, ಭಗವಂತನ ಸಾಕ್ಷಾತ್ಕಾರವನ್ನು ಪಡೆಯದವರೆಗೆ ಈ ಜಗತ್ತು ಮಿಥ್ಯೆಯಾದುದೆ. ಅಜ್ಞಾನವಶದಿಂದ ಮನುಷ್ಯ ಭಗವಂತನನ್ನು ಮರೆತು ‘ನನ್ನದು, ನನ್ನದು’ ಅನ್ನುತ್ತಲೇ ಇರುತ್ತಾನೆ. ಮಾಯೆಯಿಂದ ಬದ್ಧನಾಗಿ, ಕಾಮಕಾಂಚನದಿಂದ ಮುಗ್ಧ ನಾಗಿ ಅಧೋಗತಿಗೆ ಇಳಿಯುತ್ತಲೇ ಇರುತ್ತಾನೆ. ಮಾಯೆಯ ದೆಸೆಯಿಂದ ಮನುಷ್ಯ ಅಂಥ ಅಜ್ಞಾನಿಯಾಗುತ್ತಾನೆ. ಈ ಸಂಸಾರದಿಂದ ಮುಕ್ತನಾಗಲು ದಾರಿಯಿದ್ದರೂ ಕೂಡ ಅದನ್ನು ಪತ್ತೆ ಮಾಡಲಾರದವನಾಗಿ ಬಿಡುತ್ತಾನೆ!
“ಒಂದು ಹಾಡನ್ನು ಕೇಳು:
ತಾಯ ಮಾಯೆಯ ಬಲೆಯು ಹರಹಿದೆ
ಮೂರು ಲೋಕದ ಅಗಲಕೆ….
“ಈ ಜಗತ್ತು ಎಷ್ಟು ಅನಿತ್ಯವಾದ್ದು ಎಂಬುದನ್ನು ನೀವು ನಿಮ್ಮ ಸ್ವಂತ ಅನುಭವ ದಿಂದಲೆ ಅರಿತುಕೊಂಡಿದ್ದೀರಿ. ಈ ದೃಷ್ಟಿಯಿಂದ ಅದನ್ನು ನೋಡಿ. ಎಷ್ಟೊಂದು ಜನ ಈ ಜಗತ್ತಿನಲ್ಲಿ ಹುಟ್ಟಿ ಸತ್ತಿದ್ದಾರೆ! ಜನ ಹುಟ್ಟುತ್ತಾರೆ ಮತ್ತು ಸಾಯುತ್ತಾರೆ. ಈ ಜಗತ್ತು ಈಗಿದೆ, ಈಗಿಲ್ಲ. ಅನಿತ್ಯವಾದ್ದು. ಯಾರನ್ನು ‘ನನ್ನವರು, ನನ್ನವರು’ ಅನ್ನುತ್ತಿದ್ದೀರೊ, ನೀವು ಸಾಯು ವಾಗ ಕಣ್ಣು ಮುಚ್ಚಿದೊಡನೆಯೆ ಯಾರೂ ಜೊತೆಯಲ್ಲಿ ಬರುವುದಿಲ್ಲ. ಕೆಲಕೆಲವರಿಗೆ ಹತ್ತಿರದ ಸಂಬಂಧಿಗಳು ಯಾರೂ ಇಲ್ಲದಿದ್ದರೂ, ಅವರು ತಮ್ಮ ಮೊಮ್ಮಕ್ಕಳ ಸಲುವಾಗಿ ಕಾಶಿಗೆ ಹೋಗಲಾಗುವುದಿಲ್ಲ. ‘ನಮ್ಮ ‘ಹಾರು’ ವಿನ ಗತಿ ಏನಾಗಿಬಿಡುತ್ತದೊ ಬಳಿಕ?’ ಅಂತ ವಾದಿಸುತ್ತಾರೆ. ‘ಬಂದು ಹೋಗಲು ಮಾರ್ಗವಿದೆ. ಆದರೂ ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು.’ ರೇಷ್ಮೆಹುಳು ತನ್ನನ್ನು ತಾನೇ ಬಂಧಿಸಿಕೊಂಡು, ತಾನಾಗಿಯೇ ಸಾಯುತ್ತದೆ. ಈ ರೀತಿಯ ಈ ಜಗತ್ತು ಮಿಥ್ಯೆಯಾದ್ದು, ಅನಿತ್ಯವಾದ್ದು.”
ಒಬ್ಬ ನೆರೆಯವ: “ಮಹಾಶಯರೆ, ಒಂದು ಕೈಯಿಂದ ಭಗವಂತನನ್ನು ಹಿಡಿದು ಕೊಂಡು, ಇನ್ನೊಂದು ಕೈಯನ್ನು ಸಂಸಾರದಲ್ಲಿ ಏಕೆ ಇಡಬೇಕು? ಈ ಜಗತ್ತು ಅನಿತ್ಯವಾದ್ದೇ ಆದರೆ ಅದರ ಕಡೆ ಏಕೆ ತಾನೆ ಕೈನೀಡಬೇಕು?”
ಶ್ರೀರಾಮಕೃಷ್ಣರು: “ಭಗವಂತನ ಸಾಕ್ಷಾತ್ಕಾರ ಪಡೆದು ಈ ಜಗತ್ತಿನಲ್ಲಿ ಇದ್ದರೆ, ಆಗ ಇದು ಅನಿತ್ಯವಾಗಿ ತೋರುವುದಿಲ್ಲ. ಒಂದು ಹಾಡನ್ನು ಕೇಳು:
ನಿನ್ನ ಬಾಳಿನ ಹೊಲವು ಪಾಳುಬಿದ್ದಿಹುದಲ್ಲೊ
ಕೃಷಿಗೈಯಲೂ ಕೂಡ ತಿಳಿಯದಿರುವೆ!
ಎಂಥ ಹೊನ್ನನು ಬೆಳೆದು ತೆಗೆಯಬಹುದಾಗಿತ್ತೊ
ಕೆಲವು ದಿನ ಮೈಮುರಿದು ದುಡಿದಿದ್ದರು!
ಈಗಲಾದರು ತಾಯ ಶ್ರೀನಾಮವೆಂತೆಂಬ
ಬೇಲಿಯನ್ನು ಕಟ್ಟಿ ನೀ ಕಾಯ್ದುಕೊಳ್ಳೋ.
ಅದಕಿಂತ ಬಲವಾದ ಕಾವಲಿನ್ನಾವುದಿದೆ
ಮೃತ್ಯುವೂ ನಿನ್ನ ಬಳಿ ಬರಲಾರನೊ……
“ಹಾಡನ್ನು ಕೇಳಿದೆಯೋ?
ಈಗಲಾದರೂ ತಾಯ ಶ್ರೀನಾಮವೆಂತೆಂಬ
ಬೇಲಿಯನ್ನು ಕಟ್ಟಿ ನೀ ಕಾಯ್ದುಕೊಳ್ಳೋ.
“ಭಗವಂತನಿಗೆ ಶರಣಾಗತನಾಗಿಬಿಡು. ಎಲ್ಲವೂ ನಿನಗೆ ದೊರೆತುಬಿಡುತ್ತವೆ.
ಅದಕ್ಕಿಂತ ಬಲವಾದ ಕಾವಲಿನ್ನಾವುದಿದೆ?
ಮೃತ್ಯುವೂ ನಿನ್ನ ಬಳಿ ಬರಲಾರನೊ.
“ಹೌದು, ನಿಜವಾಗಿಯೂ ಅದು ಬಹಳ ಬಲವಾದ ಬೇಲಿ. ಭಗವಂತನ ಸಾಕ್ಷಾತ್ಕಾರ ವನ್ನು ಪಡೆದುಕೊಂಡುದೇ ಆದರೆ, ಆಗ ಈ ಜಗತ್ತು ನಿಸ್ಸಾರವಾದುದಾಗಿ ತೋರುವುದಿಲ್ಲ. ಯಾರಿಗೆ ಭಗವಂತನ ಸಾಕ್ಷಾತ್ಕಾರವಾಗಿದೆಯೊ ಆತನಿಗೆ ಭಗವಂತನೇ ಈ ಜೀವ ಜಗ ತ್ತಾಗಿರುವುದಾಗಿ ಕಂಡುಬರುತ್ತದೆ. ಮಕ್ಕಳನ್ನು ಪೋಷಿಸುವಾಗ ಭಾವಿಸಬೇಕು, ಸಾಕ್ಷಾತ್ ಭಗವಂತನನ್ನೇ ಪೋಷಿಸುತ್ತಿರುವ ಹಾಗೆ. ತಂದೆ ತಾಯಿಗಳನ್ನು ಸಾಕ್ಷಾತ್ ಭಗವಂತನೇ ಎಂದು ಭಾವಿಸಿ ಅವರ ಸೇವೆಯನ್ನು ಮಾಡಬೇಕು. ಆತನ ಸಾಕ್ಷಾತ್ಕಾರವನ್ನು ಪಡೆದು ಸಂಸಾರದಲ್ಲಿದ್ದರೆ, ಮನುಷ್ಯ ಪ್ರಾಯಶಃ ತನ್ನ ಹೆಂಡತಿಯೊಡನೆ ಯಾವ ಸ್ಥೂಲ ಸಂಬಂಧವನ್ನೂ ಇಟ್ಟುಕೊಂಡಿರುವುದಿಲ್ಲ. ಇಬ್ಬರೂ ಭಕ್ತರೇ ಆಗಿ ಭಗವತ್ಸಂಬಂಧವಾದ ಮಾತುಗಳನ್ನೇ ಆಡುತ್ತ, ಭಗವದ್ವಿಚಾರದಲ್ಲೇ ತೊಡಗಿರುತ್ತಾರೆ. ಭಕ್ತರ ಸೇವೆಯನ್ನು ಮಾಡುತ್ತಾರೆ, ಏಕೆಂದರೆ, ಭಗವಂತನೇ ಸರ್ವಭೂತಗಳಲ್ಲಿಯೂ ಇದ್ದಾನೆ ಎಂಬುದು ಅವರಿಗೆ ಗೊತ್ತಿದೆ. ಇದನ್ನು ಅರಿತು ಪರರ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಡುತ್ತಾರೆ.”
ನೆರೆಯವ: “ಆದರೆ, ಮಹಾಶಯರೆ, ಈ ವಿಧದ ಸತಿಪತಿಯರನ್ನು ಎಲ್ಲಿಯೂ ಕಂಡುದೇ ಇಲ್ಲವಲ್ಲ.”
ಶ್ರೀರಾಮಕೃಷ್ಣರು: “ಇದ್ದಾರೆ, ಆದರೆ ಅತಿ ವಿರಳ. ಪ್ರಾಪಂಚಿಕರು ಅವರನ್ನು ಗುರುತು ಹಚ್ಚಲಾರರು. ಈ ವಿಧದ ಜೀವನ ನಡೆಸಬೇಕಾದರೆ ಇಬ್ಬರೂ ಆಧ್ಯಾತ್ಮಿಕ ಜೀವಿಗಳಾಗಿರ ಬೇಕು. ಇಬ್ಬರಿಗೂ ಭಗವದಾನಂದದ ರುಚಿ ದೊರೆತದ್ದೇ ಆದರೆ ಮಾತ್ರ ಈ ವಿಧದ ಜೀವನ ಸಾಧ್ಯವಾಗುವ ಸಂಭವ. ಇದಕ್ಕೆ ಭಗವಂತನ ವಿಶೇಷ ಕೃಪೆ ಬೇಕು. ಇಲ್ಲದಿದ್ದರೆ ಜೀವನ, ‘ಎತ್ತು ಏರಿಗೆ, ಕೋಣ ನೀರಿಗೆ’ ಎಳೆದಂತಾಗುತ್ತದೆ. ಇಂಥ ಸನ್ನಿವೇಶದಲ್ಲಿ ಒಬ್ಬರು ಇನ್ನೊಬ್ಬರನ್ನು ಅಗಲಿ ಇರಬೇಕಾಗುತ್ತದೆ. ಇಬ್ಬರ ಮಾನಸಿಕ ಪ್ರವೃತ್ತಿಯೂ ಒಂದೇ ರೀತಿಯ ದಾಗಿಲ್ಲದೆ ಇತ್ತು ಎಂದರೆ, ಇಬ್ಬರೂ ತಾಳಲಾರದ ದುಃಖಪರಂಪರೆಗಳಿಗೆ ಈಡಾಗ ಬೇಕಾಗುತ್ತದೆ. ಹೆಂಡತಿ ಬಹುಶಃ ಹಗಲೂ ಇರುಳೂ ಗೊಣಗುಟ್ಟಬಹುದು: ‘ನಮ್ಮ ತಂದೆ ಏಕೆ ತಂದು ನನ್ನನ್ನು ನಿಮಗೆ ಗಂಟುಹಾಕಿದರೊ? ನನಗೇ ಆಗಲಿ, ನನ್ನ ಮಕ್ಕಳಿಗೇ ಆಗಲಿ, ಉಡುವುದಕ್ಕೆ ಉಣ್ಣುವುದಕ್ಕೆ ಏನೂ ದೊರೆಯುತ್ತಿಲ್ಲ. ನನ್ನ ಶರೀರದ ಮೇಲೆ ಒಡವೆಯ ಗಂಧವೂ ಇಲ್ಲ. ನಿಮ್ಮನ್ನು ಸೇರಿದುದಕ್ಕೆ ನನಗೇನು ಸುಖವನ್ನು ತಾನೆ ಕೊಟ್ಟಿದ್ದೀರಿ? ಯಾವಾಗ ನೋಡಿದರೂ ಕಣ್ಣು ಮುಚ್ಚಿಕೊಂಡು ಸುಮ್ಮನೆ ‘ಭಗವಂತ, ಭಗವಂತ’ ಅಂತ ಅನ್ನುತ್ತಲೇ ಇದ್ದೀರಿ! ಈ ಹುಚ್ಚುತನವನ್ನು ಬಿಟ್ಟುಬಿಡಿ.”
ಒಬ್ಬ ಭಕ್ತ: “ಹೌದು, ಈ ಪ್ರತಿಬಂಧಕಗಳೆಲ್ಲಾ ಇವೆ. ಜೊತೆಗೆ ಮಕ್ಕಳು ಅವಿಧೇಯರೂ ಆಗಬಹುದು. ಈ ವಿಧದ ತೊಂದರೆಗಳಿಗೆ ಕೊನೆಯೆಂಬುದೇ ಇಲ್ಲ. ಆದ್ದರಿಂದ, ಮಹಾಶಯರೆ, ನಮಗೆ ಮಾರ್ಗವೇನು?”
ಶ್ರೀರಾಮಕೃಷ್ಣರು: “ಸಂಸಾರದಲ್ಲಿದ್ದು ಸಾಧನೆಮಾಡುವುದು ಎಂದರೆ ಬಹಳ ಕಷ್ಟ. ಅನೇಕ ಪ್ರತಿಕೂಲಗಳಿವೆ: ರೋಗ, ಶೋಕ, ದಾರಿದ್ರ್ಯ, ಹೆಂಡತಿಯೊಡನೆ ಒಮ್ಮನಸ್ಸಿಲ್ಲ ದಿರುವುದು, ಅವಿಧೇಯ, ಮೂರ್ಖ, ಹಠಮಾರಿ ಮಕ್ಕಳು ಹುಟ್ಟುವುದು ಇತ್ಯಾದಿ. ನಾನೇನೂ ನಿಮಗೆ ಇವುಗಳ ಪಟ್ಟಿಯನ್ನು ಕೊಡಬೇಕಾಗಿಲ್ಲ.
“ಆದರೂ ಮಾರ್ಗವಿದೆ. ಆಗಾಗ ನಿರ್ಜನಪ್ರದೇಶಕ್ಕೆ ಹೋಗಿ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಬೇಕು. ಆತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಲು ಪ್ರಯತ್ನ ಮಾಡಬೇಕು.”
ನೆರೆಯವ: “ಮನೆ ಬಿಟ್ಟು ಹೊರಗೆ ಹೋಗಿ ಇರಬೇಕೆ?”
ಶ್ರೀರಾಮಕೃಷ್ಣರು: “ಒಮ್ಮೆಗೇ ಏನಲ್ಲ. ಅವಕಾಶ ದೊರೆತಾಗ ಒಂದೊ ಎರಡೊ ದಿನದ ಮಟ್ಟಿಗೆ ಹೋಗಿ ನಿರ್ಜನಪ್ರದೇಶದಲ್ಲಿ ಇರಬೇಕು. ಆಗ ಹೊರಜಗತ್ತಿನೊಂದಿಗೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳಕೂಡದು. ಪ್ರಾಪಂಚಿಕರೊಡನೆ ಪ್ರಪಂಚದ ವಿಷಯ ವಾಗಿ ಒಂದು ಮಾತೂ ಆಡಕೂಡದು. ಸಾಧ್ಯವಾದರೆ ನಿರ್ಜನವಾಸ, ಇಲ್ಲದಿದ್ದರೆ ಸಾಧು ಸಂಗ ಮಾಡುತ್ತಿರಬೇಕು.”
ನೆರೆಯವ: “ಈತ ಸಾಧು ಎಂದು ಗುರುತಿಸುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಯಾರ ಮನಸ್ಸು, ಪ್ರಾಣ, ಅಂತರಾತ್ಮ ಭಗವದ್ಗತವಾಗಿದೆಯೊ ಆತನೇ ಸಾಧು. ಯಾರು ಕಾಮಕಾಂಚನ ತ್ಯಾಗಿಯೊ ಆತನೇ ಸಾಧು. ಯಾರು ಸಾಧುವೋ ಆತ ಹೆಂಗಸರನ್ನು ಎಂದಿಗೂ ಐಹಿಕ ದೃಷ್ಟಿಯಿಂದ ನೋಡುವುದಿಲ್ಲ. ಸರ್ವದಾ ಅವರಿಂದ ದೂರದಲ್ಲೆ ಇರುತ್ತಾನೆ. ಒಂದು ಪಕ್ಷ ಅವರನ್ನು ಸಮೀಪಿಸಬೇಕಾಗಿ ಬಂದರೆ ಅವರನ್ನು ಮಾತೃದೃಷ್ಟಿಯಿಂದ ನೋಡುತ್ತ ಅವರನ್ನು ಪೂಜೆಮಾಡುತ್ತಾನೆ. ಸಾಧು ಯಾವಾಗಲೂ ಭಗವಚ್ಚಿಂತನೆಯನ್ನೇ ಮಾಡುತ್ತಾನೆ. ಭಗವತ್ಸಂಬಂಧವಾಗಿ ಹೊರತು ಬೇರೆ ಯಾವ ಮಾತನ್ನೂ ಆಡುವುದಿಲ್ಲ. ಸರ್ವಭೂತಗಳಲ್ಲಿಯೂ ಭಗವಂತನೇ ಇದ್ದಾನೆ ಎಂಬುದನ್ನು ಅರಿತು ಅವರ ಸೇವೆಯನ್ನು ಮಾಡುತ್ತಾನೆ. ಸಾಮಾನ್ಯವಾಗಿ ಇವು ಸಾಧುವಿನ ಲಕ್ಷಣಗಳು.
ನೆರೆಯವ: “ನಿರ್ಜನ ಪ್ರದೇಶದಲ್ಲಿ ಯಾವಾಗಲೂ ಇದ್ದುಕೊಂಡಿರಬೇಕಾಗುತ್ತದೆಯೇ?”
ಶ್ರೀರಾಮಕೃಷ್ಣರು: “ಫುಟ್ಪಾತಿನಲ್ಲಿರುವ ಮರಗಳನ್ನು ನೀನು ನೋಡಿಲ್ಲವೇನು? ಅವು ಸಸಿಯಾಗಿರುವವರೆಗೆ ಬೇಲಿ ಹಾಕಬೇಕು. ಇಲ್ಲದಿದ್ದರೆ ದನ, ಕರು, ಆಡು, ಅವನ್ನು ತಿಂದುಬಿಡುತ್ತವೆ. ಆದರೆ ಗಿಡದ ಕಾಂಡ ದಪ್ಪವಾಯಿತು ಎಂದರೆ, ಬಳಿಕ ಬೇಲಿ ಬೇಕಾಗಿರು ವುದಿಲ್ಲ. ಅನಂತರ ಅದಕ್ಕೆ ಆನೆಯನ್ನು ತಂದು ಕಟ್ಟಿದರೂ ಅದಕ್ಕೇನೂ ಆಗುವುದಿಲ್ಲ. ಅದೇ ರೀತಿಯಾಗಿ ನೀನು ಮನಸ್ಸನ್ನು ಬಲವಾದುದನ್ನಾಗಿ ಮಾಡಿಕೊಂಡು ಬಿಟ್ಟಿದ್ದೇ ಆದರೆ ಇನ್ನು ಚಿಂತೆಯೇನು? ಭಯವೇನು? ವಿವೇಕವನ್ನು ಗಳಿಸಿಕೊಳ್ಳಲು ಮೊದಲು ಪ್ರಯತ್ನಪಡು. ಕೈಗೆ ಎಣ್ಣೆ ಸವರಿಕೊಂಡು ಹಲಸಿನ ಹಣ್ಣು ಬಿಡಿಸು. ಆಗ ಅದರ ಅಂಟು ಅಂಟಿಕೊಳ್ಳುವುದಿಲ್ಲ.”
ನೆರೆಯವ: “ಯಾವುದಕ್ಕೆ ವಿವೇಕ ಅಂತ ಹೆಸರು?”
ಶ್ರೀರಾಮಕೃಷ್ಣರು: “ಭಗವಂತನೊಬ್ಬನೇ ಸತ್, ಉಳಿದುದೆಲ್ಲಾ ಅಸತ್ ಎಂಬ ವಿಚಾರ. ಸತ್ ಎಂದರೆ ನಿತ್ಯವಾದ್ದು, ಅಸತ್ ಎಂದರೆ ಅನಿತ್ಯವಾದ್ದು. ಯಾರು ವಿವೇಕವನ್ನು ಗಳಿಸಿಕೊಂಡಿದ್ದಾರೊ ಅವರಿಗೆ ಗೊತ್ತಿದೆ ಭಗವಂತನೊಬ್ಬನೇ ವಸ್ತು ಉಳಿದುದೆಲ್ಲಾ ಅವಸ್ತು ಎಂದು. ವಿವೇಕ ಉದಯವಾಯಿತು ಎಂದರೆ, ಭಗವಂತನನ್ನು ಅರಿಯಬೇಕು ಎಂಬ ಇಚ್ಛೆಯಾಗುತ್ತದೆ. ಅಸತ್ ವಸ್ತುಗಳನ್ನು ಎಂದರೆ ದೇಹಸುಖ, ಲೋಕ ಮಾನ್ಯತೆ, ಹಣ ಇವೇ ಮೊದಲಾದುವುಗಳನ್ನು ಪ್ರೀತಿಸಿದರೆ, ಸತ್ಸ್ವರೂಪನಾದ ಭಗವಂತನನ್ನು ಅರಿಯಲು ಇಚ್ಛೆಯುಂಟಾಗುವುದಿಲ್ಲ. ಸದ್ವಿಚಾರ ಬಂದಮೇಲೇನೆ ಭಗವಂತನನ್ನು ಅರಿಯಲು ಇಚ್ಛೆ ಯುಂಟಾಗುತ್ತದೆ.”
“ಒಂದು ಹಾಡನ್ನು ಕೇಳು:
ಸುಮ್ಮನೆ ತಿರುಗಾಟಕೆ ಾ ಮನವೇ
ಶ್ರೀ ಕಾಳೀ ಸುರತರುವಿರುವೆಡೆಗೆ!…….
“ಮನಸ್ಸಿನಲ್ಲಿ ನಿವೃತ್ತಿಯುಂಟಾಯಿತು ಎಂದರೆ, ವಿವೇಕ ಉದಯವಾಗುತ್ತದೆ. ವಿವೇಕ ಉದಯವಾಯಿತು ಎಂದರೆ, ತಾತ್ತ್ವಿಕ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ. ಬಳಿಕ ಮನಸ್ಸು ಇಚ್ಛೆಪಡುತ್ತದೆ. ‘ಶ್ರೀ ಕಾಳೀ ಸುರತರವಿರುವೆಡೆಗೆ’ ಹೋಗಲು. ಆ ಮರದ ಹತ್ತಿರಕ್ಕೆ ಹೋದರೆ, ಎಂದರೆ ಭಗವಂತನನ್ನು ಸಮೀಪಿಸಿದರೆ ಅನಾಯಾಸವಾಗಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಫಲಗಳು ದೊರೆಯುತ್ತವೆ. ಹೌದು, ಆತನ ಸಾಕ್ಷಾತ್ಕಾರವನ್ನು ಪಡೆದುಕೊಂಡ ಮೇಲೆ ಇಚ್ಛೆಯಿದ್ದರೆ ಸಂಸಾರಿಗಳಿಗೆ ಬೇಕಾದ ಧರ್ಮ, ಅರ್ಥ, ಕಾಮಗಳನ್ನು ಆತನಿಂದ ಪಡೆದುಕೊಳ್ಳಬಹುದು.”
ನೆರೆಯವ: “ಹಾಗಾದರೆ, ಈ ಜಗತ್ತನ್ನು ಮಾಯೆ ಅಂತ ಏಕೆ ಕರೆಯುತ್ತಾರೆ?”
ಶ್ರೀರಾಮಕೃಷ್ಣರು: “ಭಗವಂತನ ಸಾಕ್ಷಾತ್ಕಾರ ದೊರೆಯದವರೆಗೆ ‘ನೇತಿ, ನೇತಿ’ ಮಾರ್ಗವನ್ನು ಅನುಸರಿಸಿ ಈ ಜಗತ್ತನ್ನು ತ್ಯಜಿಸಬೇಕು. ಆದರೆ ಯಾರು ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡಿದ್ದಾರೊ ಅವರಿಗೆ ಗೊತ್ತಿದೆ ಆತನೇ ಎಲ್ಲವೂ ಆಗಿದ್ದಾನೆ ಎಂಬುದು. ಆಗ ಬೋಧೆಯಾಗುತ್ತದೆ. ‘ಈಶ್ವರ-ಮಾಯಾ-ಜೀವ-ಜಗತ್’ ಎಂಬುದಾಗಿ. ಜೀವಜಗತ್ತೆಲ್ಲವೂ ಕೇವಲ ಆತನೇ. ಒಂದು ಪಕ್ಷ ನೀನು ಬೇಲದ ಹಣ್ಣನ್ನು ಒಡೆದು, ಅದರ ಕರಟ, ತಿರುಳು, ಬೀಜ, ಇವನ್ನು ಪ್ರತ್ಯೇಕಮಾಡಿರುವಾಗ ಒಬ್ಬ ಬಂದು ನಿನ್ನನ್ನು ಬೇಲದ ಹಣ್ಣಿನ ತೂಕ ಎಷ್ಟು ಎಂದು ಕೇಳುತ್ತಾನೆ ಅಂತ ಇಟ್ಟುಕೊ. ಆಗ ನೀನು ಕರಟ, ಬೀಜ ಇವನ್ನು ಬಿಸಾಡಿ, ಕೇವಲ ತಿರುಳನ್ನು ಮಾತ್ರ ತೂಗಿ ನೋಡುವಿಯೇನು? ಎಂದಿಗೂ ಇಲ್ಲ. ಅದರ ನಿಜವಾದ ತೂಕ ಸಿಕ್ಕಬೇಕಾದರೆ ಕರಟ, ಬೀಜ, ತಿರುಳು ಮೂರನ್ನೂ ಸೇರಿಸಿ ತೂಗಬೇಕು. ಆಗ ಮಾತ್ರವೇ ನೀನು ಅದರ ತೂಕವನ್ನು, ಅದರ ನಿಜವಾದ ತೂಕವನ್ನು ಹೇಳಬಲ್ಲೆ. ಕರಟ ಈ ಜಗತ್ತು ಇದ್ದ ಹಾಗೆ, ಬೀಜಗಳೆಲ್ಲಾ ಜೀವಗಳು ಇದ್ದ ಹಾಗೆ. ವಿಚಾರದ ಅವಸ್ಥೆಯಲ್ಲಿ ಮನುಷ್ಯ ಭಾವಿಸುತ್ತಾನೆ, ಜೀವ ಜಗತ್ತುಗಳು ಅನಾತ್ಮ-ಅವಸ್ತು ಎಂಬುದಾಗಿ. ಆ ಸಮಯದಲ್ಲಿ ಬೋಧೆಯಾಗುತ್ತದೆ, ತಿರುಳೇ ನಿಜವಾದ ಸಾರ, ಕರಟ ಬೀಜ ಅಸಾರ ಎಂಬುದಾಗಿ. ಆದರೆ ವಿಚಾರ ಮುಗಿದ ನಂತರ ಅವು ಮೂರೂ ಸೇರಿ ಒಂದೇ ಪೂರ್ಣ ವಸ್ತುವಾಗಿದೆ ಎಂಬ ಬೋಧೆಯಾಗುತ್ತದೆ. ಯಾವ ವಸ್ತುವಿನಿಂದ ತಿರುಳು ಉದ್ಭವವಾಗಿದೆಯೊ, ಅದೇ ವಸ್ತುವಿನಿಂದ ಕರಟ ಬೀಜ ಕೂಡ ಉದ್ಭವವಾಗಿದೆ ಅಂತ. ಬೇಲದ ಹಣ್ಣಿನ ನೈಜಸ್ವರೂಪವನ್ನು ಅರಿಯಬೇಕಾದರೆ ಅವು ಮೂರನ್ನೂ ಗಣನೆಗೆ ತೆಗೆದುಕೊಳ್ಳಬೇಕು.
“ಇದು ಅನುಲೋಮ ಮತ್ತು ವಿಲೋಮ. ಮಜ್ಜಿಗೆಯದೇ ಬೆಣ್ಣೆ, ಬೆಣ್ಣೆಯದೇ ಮಜ್ಜಿಗೆ. ಮಜ್ಜಿಗೆ ಎಂಬುದೂ ಇರಲೇಬೇಕು. ಬೆಣ್ಣೆ ಎಂಬುದೂ ಇರಲೇಬೇಕು. ಬೆಣ್ಣೆ ಎಂಬುದು ಇತ್ತು ಎಂದರೆ ಮಜ್ಜಿಗೆಯೂ ಇರಲೇಬೇಕು. ಆತ್ಮವಿದ್ದುದೇ ಆದರೆ ಅನಾತ್ಮವೂ ಇರಲೇಬೇಕು.”
“ನಿತ್ಯ ಯಾರದೋ ಆತನದೇ ಲೀಲೆ. ಲೀಲೆ ಯಾರದೋ ಆತನದೇ ನಿತ್ಯ. ಯಾರು ಈಶ್ವರನಾಗಿ ವ್ಯಕ್ತವಾಗಿದ್ದಾನೊ, ಆತನೇ ಈ ಜೀವಜಗತ್ತಾಗಿ ವ್ಯಕ್ತವಾಗಿದ್ದಾನೆ. ಯಾರಿಗೆ ಭಗವಂತನ ಸಾಕ್ಷಾತ್ಕಾರವಾಗಿದೆಯೊ, ಆತನಿಗೇ ಗೊತ್ತಿದೆ ಆತನೇ ಸಮಸ್ತವೂ, ಎಂದರೆ ತಾಯಿ, ತಂದೆ, ಮಗು, ನೆರೆಯವ, ಜೀವಜಂತು, ಒಳ್ಳೆಯದು ಕೆಟ್ಟದ್ದು, ಶುಚಿ, ಅಶುಚಿ, ಇತ್ಯಾದಿ ಆಗಿದ್ದಾನೆ ಎಂಬುದಾಗಿ.”
ನೆರೆಯವ: “ಹಾಗಾದರೆ, ಪಾಪ-ಪುಣ್ಯ ಎಂಬುದೇನಿಲ್ಲವೆ?”
ಶ್ರೀರಾಮಕೃಷ್ಣರು: “ಅವು ಇವೆ ಮತ್ತು ಇಲ್ಲ. ಭಗವಂತ ಮನುಷ್ಯನಲ್ಲಿ ಅಹಂ ತತ್ತ್ವ ವನ್ನು ಇಟ್ಟಿದ್ದೇ ಆದರೆ, ಆತ ಆತನಲ್ಲಿ ಭೇದಬುದ್ಧಿಯನ್ನೂ ಇಡುತ್ತಾನೆ. ಪಾಪಪುಣ್ಯ ಜ್ಞಾನವನ್ನೂ ಇಡುತ್ತಾನೆ. ಆದರೆ ಆತ ಎಲ್ಲೋ ಕೆಲವರ ಅಹಂಕಾರವನ್ನು ಮಾತ್ರ ಸಂಪೂರ್ಣ ವಾಗಿ ತೆಗೆದುಹಾಕಿಬಿಡುತ್ತಾನೆ. ಅವರು ಪಾಪ-ಪುಣ್ಯ, ಒಳ್ಳೆಯದು-ಕೆಟ್ಟದ್ದು ಇವನ್ನು ದಾಟಿ ಹೋಗಿಬಿಡುತ್ತಾರೆ. ಭಗವಂತನ ದರ್ಶನ ಆಗದವರಿಗೆ ಭೇದಬುದ್ಧಿ, ಒಳ್ಳೆಯದು ಕೆಟ್ಟದ್ದರ ಜ್ಞಾನ ಇದ್ದೇ ಇರುತ್ತದೆ. ನೀನು ಬಾಯಲ್ಲಿ ಬೇಕಾದರೆ ಹೇಳಿಬಿಡಬಹುದು: ‘ನನಗೆ, ಪಾಪಪುಣ್ಯ ಎರಡೂ ಒಂದೇ ಆಗಿಬಿಟ್ಟಿದೆ. ಭಗವಂತ ಮಾಡಿಸಿದ ಹಾಗೆ ಮಾಡುತ್ತೇನೆ.’ ಆದರೆ ನಿನ್ನ ಆಂತರ್ಯದಲ್ಲಿ ನಿನಗೆ ಚೆನ್ನಾಗಿ ಗೊತ್ತಿದೆ, ಅವೆಲ್ಲ ಕೇವಲ ಬಾಯಿಮಾತು ಮಾತ್ರ. ದುಷ್ಕಾರ್ಯಗಳಲ್ಲಿ ನೀನು ತೊಡಗುವುದೇ ತಡ, ನಿನ್ನ ಹೃದಯ ‘ಡಬ್, ಡಬ್’ ಎಂದು ಹೊಡೆದುಕೊಳ್ಳಲಾರಂಭಿಸುತ್ತದೆ. ಭಗವಂತನ ಸಾಕ್ಷಾತ್ಕಾರ ಭಕ್ತನಿಗೆ ದೊರೆತ ಮೇಲೂ ಭಗವಂತ ಇಚ್ಛೆಪಡುವುದಾದರೆ ಆತ ಭಕ್ತನ ಹೃದಯದಲ್ಲಿ ‘ದಾಸ ಅಹಂ’ ಅನ್ನು ಇಡುತ್ತಾನೆ. ಆ ಅವಸ್ಥೆಯಲ್ಲಿ ಭಕ್ತ ಹೇಳುತ್ತಾನೆ, ‘ನಾನು ದಾಸ, ನೀನು ಪ್ರಭು’ ಅಂತ. ಭಕ್ತನಿಗೆ ಭಗವತ್ಕಥೆ, ಭಗವತ್ಕಾರ್ಯ ಮಾತ್ರ ರುಚಿಸುತ್ತವೆ. ಭಗವದ್ವಿಮುಖರಾದ ಜನರ ಸಹವಾಸ ಆತನಿಗೆ ರುಚಿಸದು. ಭಗವತ್ಸಂಬಂಧವಾದ ಕಾರ್ಯದ ವಿನಾ ಬೇರೆ ಯಾವುದೂ ರುಚಿಸದು. ಈಗ ನಿನಗೆ ಸ್ಪಷ್ಟವಾಗಿರಬೇಕು, ಇಂಥ ಭಕ್ತರಿಗೂ ಭಗವಂತ ಭೇದಬುದ್ಧಿ ಯನ್ನು ಕೊಡುತ್ತಾನೆ ಎಂಬುದು.”
ನೆರೆಯವ: “ಮಹಾಶಯರೆ, ನೀವು ಹೇಳುತ್ತೀರಿ, ಭಗವಂತನನ್ನು ಅರಿತು ಸಂಸಾರದಲ್ಲಿರಿ ಎಂದು. ಏನು, ಆತನನ್ನು ನಿಜವಾಗಿ ಅರಿಯಬಹುದೆ?”
ಶ್ರೀರಾಮಕೃಷ್ಣರು: “ಭಗವಂತನನ್ನು ಇಂದ್ರಿಯಗಳ ಮೂಲಕ ಅಥವಾ ಈ ಮನಸ್ಸಿನ ಮೂಲಕ ಅರಿಯಲಾಗುವುದಿಲ್ಲ. ಆದರೆ ಯಾವ ಮನಸ್ಸಿನಲ್ಲಿ ವಿಷಯರಸ ಎಂಬುದು ಇಲ್ಲವೇ ಇಲ್ಲವೊ ಅಂಥ ಶುದ್ಧ ಮನಸ್ಸಿನಿಂದ ಆತನನ್ನು ಅರಿಯಲು ಸಾಧ್ಯ.”
ನೆರೆಯವ: “ಭಗವಂತನನ್ನು ಯಾರು ತಾನೆ ಅರಿಯಬಲ್ಲರು?”
ಶ್ರೀರಾಮಕೃಷ್ಣರು : “ನಿಜ, ಯಾರು ತಾನೆ ಆತನನ್ನು ನಿಜವಾಗಿ ಅರಿಯಬಲ್ಲರು? ನಮಗೆಷ್ಟು ಬೇಕೋ ಅಷ್ಟು ದೊರೆತರೇ ಸಾಕು. ಇಡೀ ಬಾವಿಯ ನೀರು ಏಕೆ ನನಗೆ ಬೇಕು? ಒಂದು ಹೂಜಿ ನೀರು ದೊರೆತರೆ ಬೇಕಾದಷ್ಟು. ಸಕ್ಕರೆಯ ಬೆಟ್ಟದ ಹತ್ತಿರಕ್ಕೆ ಒಂದು ಇರುವೆ ಹೋಯಿತು ಅದಕ್ಕೆ ಇಡೀ ಗುಡ್ಡ ಏಕೆ ತಾನೇ ಬೇಕು ? ಅದರ ಒಂದೆರಡು ಕಣವೇ ಅದಕ್ಕೆ ಯಥೇಷ್ಟ.”
ನೆರೆಯವ: “ಮಹಾಶಯರೆ, ನಾವು ವಿಷಮಶೀತಜ್ವರದ ರೋಗಿ ಇದ್ದ ಹಾಗೆ. ನಮಗೆ ಒಂದು ಹೂಜಿ ನೀರು ಸಾಕಾಗುತ್ತದೆಯೇ? ಭಗವಂತನನ್ನು ಸಂಪೂರ್ಣ ಅರಿತುಕೊಂಡು ಬಿಡಬೇಕು ಅಂತ ಇಚ್ಛೆಯಾಗುತ್ತದೆ.”
ಶ್ರೀರಾಮಕೃಷ್ಣರು: “ಅದೇನೋ ನಿಜ. ಆದರೆ, ವಿಷಮಶೀತಜ್ವರಕ್ಕೆ ಔಷಧವಿದೆ.”
ನೆರೆಯವ: “ಮಹಾಶಯರೆ, ಯಾವ ಔಷಧ?”
ಶ್ರೀರಾಮಕೃಷ್ಣರು: “ಸಾಧುಸಂಗ, ಭಗವಂತನ ನಾಮಗುಣಕೀರ್ತನೆ. ಆತನನ್ನು ಸರ್ವದಾ ಪ್ರಾರ್ಥನೆಮಾಡುವುದು. ನಾನು ಭಗವತಿಗೆ ಪ್ರಾರ್ಥನೆ ಸಲ್ಲಿಸಿದೆ: ‘ತಾಯೆ ನನಗೆ ಜ್ಞಾನ ಬೇಕಾಗಿಲ್ಲ. ಇಗೋ ತೆಗೆದುಕೋ ನಿನ್ನ ಜ್ಞಾನವನ್ನು, ಇಗೋ ತೆಗೆದುಕೋ ನಿನ್ನ ಅಜ್ಞಾನವನ್ನು, ತಾಯೆ, ನನಗೆ ನಿನ್ನ ಪಾದಪದ್ಮಗಳಲ್ಲಿ ಶುದ್ಧಭಕ್ತಿಯನ್ನು ಮಾತ್ರ ನೀಡು’, ನಾನು ಇನ್ನು ಬೇರೆ ಯಾವುದಕ್ಕೂ ಪ್ರಾರ್ಥನೆ ಮಾಡಲಿಲ್ಲ.
“ರೋಗಕ್ಕೆ ತಕ್ಕಂತೆ ಔಷಧ ಹಾಕಬೇಕು. ಶ್ರೀಕೃಷ್ಣ ಗೀತೆಯಲ್ಲಿ ಹೇಳುತ್ತಾನೆ: “ಓ ಅರ್ಜುನ, ನೀನು ನನ್ನಲ್ಲಿ ಶರಣುಹೊಂದು. ನಿನ್ನನ್ನು ಎಲ್ಲಾ ವಿಧದ ಪಾಪಗಳಿಂದಲೂ ಮುಕ್ತನನ್ನಾಗಿ ಮಾಡುತ್ತೇನೆ.’ ಆತನಲ್ಲಿ ಶರಣಾಗತಿಯನ್ನು ಪಡೆ. ಆತ ಸದ್ಭುದ್ಧಿಯನ್ನು ಕೊಡುತ್ತಾನೆ. ನಿನ್ನ ಭಾರವನ್ನೆಲ್ಲಾ ಆತ ಹೊತ್ತುಕೊಳ್ಳುತ್ತಾನೆ. ಆಗ ವಿಷಮಶೀತಜ್ವರ ನಿನ್ನನ್ನು ಬಿಟ್ಟು ತೊಲಗುವುದು. ಈ ನಮ್ಮ ಮನಸ್ಸಿನಿಂದ ಆತನನ್ನು ಅರಿತುಕೊಳ್ಳಲು ಸಾಧ್ಯವೇ? ಒಂದು ಸೇರಿನ ಪಾತ್ರೆಗೆ ನಾಲ್ಕು ಸೇರು ಹಾಲು ಹಿಡಿಸುವುದೆ? ಆತನನ್ನು ಅರಿಯುವಂತೆ ಆತ ನಮ್ಮನ್ನು ಪ್ರಚೋದಿಸದ ಹೊರತು ಆತನನ್ನು ಅರಿಯಲಾಗುವುದೇ? ಅದಕ್ಕಾಗಿಯೇ ನಾನು ಹೇಳುವುದು. ಆತನಲ್ಲಿ ಶರಣುಹೊಂದು, ಆತ ತನ್ನಿಚ್ಛೆಯಂತೆ ಮಾಡಲಿ ಎಂದು. ಆತ ಇಚ್ಛಾಮಯ. ಮನುಷ್ಯನಲ್ಲಿ ಯಾವ ಶಕ್ತಿ ತಾನೆ ಇದೆ?”
1. ಪರಮಹಂಸರ ಹತ್ತಿರಕ್ಕೆ.