೨೩ನೆ ಸೆಪ್ಟೆಂಬರ್ ೧೮೮೩, ಭಾದ್ರಪದ ಕೃಷ್ಣ ಸಪ್ತಮಿ, ಭಾನುವಾರ
ಪರಮಹಂಸರು ದಕ್ಷಿಣೇಶ್ವರದಲ್ಲಿ ರಾಖಾಲ, ಮಾಸ್ಟರ್ ಮತ್ತು ಇನ್ನೂ ಕೆಲವು ಭಕ್ತರೊಡನೆ ತಮ್ಮ ಕೊಠಡಿಯಲ್ಲಿ ಕುಳಿತಿದ್ದಾರೆ. ಹಾಜರಾ ಹೊರಗಿನ ವರಾಂಡದಲ್ಲೇ ಕುಳಿತಿದ್ದಾನೆ. ಪರಮಹಂಸರು ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಒಬ್ಬನಿಗೆ: “ನಿನ್ನನ್ನು ಕಂಡರೂ ಈಗ ಕೆಲವು ಕಾಲದಿಂದ ನರೇಂದ್ರ ನಿಗೆ ಆಗುತ್ತಿಲ್ಲ. (ಮಾಸ್ಟರಿಗೆ) ಏಕೆ ಆತ ನನ್ನನ್ನು ನೋಡಲು ಅಧರಸೇನನ ಮನೆಗೆ ಬರಲಿಲ್ಲ?
“ನರೇಂದ್ರನಲ್ಲಿ ಎಷ್ಟೊಂದು ಗುಣಗಳು! ಹಾಡುವುದರಲ್ಲಿ, ಬಾಜಿಸುವುದರಲ್ಲಿ, ಓದು ಬರಹದಲ್ಲಿ ಎಲ್ಲದರಲ್ಲೂ ನಿಪುಣ. ಆತ ಸ್ವಾತಂತ್ರ್ಯಪ್ರೇಮಿ. ಯಾರನ್ನೂ ಲೆಕ್ಕಕ್ಕೇ ಇಡುವುದಿಲ್ಲ. ಅಂದು ಕ್ಯಾಪ್ಟನ್ನನ ಗಾಡಿಯಲ್ಲಿ ಹಿಂದಿರುಗುತ್ತಿದ್ದ. ನರೇಂದ್ರ ಬಂದು ತನ್ನ ಹತ್ತಿರ ಕುಳಿತುಕೊಳ್ಳಬೇಕೆಂದು ಕ್ಯಾಪ್ಟನ್ ಆತನನ್ನು ಬಹಳವಾಗಿ ಕೇಳಿಕೊಂಡ. ಆದರೂ ಆತ ಹೋಗಿ ಆತನ ಎದುರುಪಕ್ಕದಲ್ಲೇ ಕುಳಿತುಕೊಂಡ. ಕ್ಯಾಪ್ಟನ್ನನ ಕಡೆ ಕಣ್ಣೆತ್ತಿಕೂಡ ನೋಡಲಿಲ್ಲ.
“ಕೇವಲ ಪಾಂಡಿತ್ಯದಿಂದ ಏನು ದೊರಕೀತು? ಸಾಧನೆ ಭಜನೆ ಮಾಡಬೇಕು. ಇಂದೇಶದ ಗೌರಿ, ಪಂಡಿತನೂ ಆಗಿದ್ದ, ಸಾಧಕನೂ ಆಗಿದ್ದ. ಆತ ಒಬ್ಬ ಶಕ್ತಿಸಾಧಕ. ಭಗವತಿಯ ಭಾವದಿಂದ ಆಗಾಗ ಉನ್ಮತ್ತನಾಗಿಬಿಡುತ್ತಿದ್ದ. ಆಗಾಗ ಆತ ಸ್ತೋತ್ರ ಮಾಡುತ್ತಿದ್ದ: ‘ಹಾ! ರೇ! ರೇ! ರೇ! ನಿರಾಲಂಬಲಂಬೋದರ ಜನನೀ ಕಂ ಯಾಮಿ ಶರಣಮ್.’ ಆಗ ಉಳಿದ ಪಂಡಿತರೆಲ್ಲ ಆತನ ಎದುರು ಎರೆಹುಳುವಿನಂತೆ ಆಗಿಬಿಡುತ್ತಿದ್ದರು. ನಾನೂ ಭಾವಾವಿಷ್ಟನಾಗಿಬಿಡುತ್ತಿದ್ದೆ.
“ಮೊದಮೊದಲು ಗೌರೀಪಂಡಿತ ಮತಭ್ರಾಂತ ಶಾಕ್ತನಾಗಿದ್ದ. ತುಳಸಿ ಪತ್ರೆಯನ್ನು ಆತ ಎರಡು ಕಡ್ಡಿಯ ಸಹಾಯದಿಂದ ಎತ್ತುತ್ತಿದ್ದ-ಕೈಗೆ ಸೋಂಕದೆ ಇರಲಿ ಅಂತ. (ಎಲ್ಲರೂ ನಗುತ್ತಿದ್ದಾರೆ.) ಅನಂತರ ತನ್ನ ಮನೆಗೆ ಹೋದ. ಅಲ್ಲಿಂದ ಹಿಂದಿರುಗಿ ಬಂದ ಮೇಲೆ ಆ ರೀತಿಯಾಗಿ ಮತ್ತೆ ಆತ ವರ್ತಿಸಲಿಲ್ಲ. ಹಿಂದೂ ಪುರಾಣಗಳ ಸಂಬಂಧವಾಗಿ ಬಹಳ ಒಳ್ಳೆ ವ್ಯಾಖ್ಯಾನ ಕೊಡುತ್ತಿದ್ದ : “ರಾವಣನ ದಶಮುಖಗಳೇ ದಶೇಂದ್ರಿಯಗಳು. ಕುಂಭಕರ್ಣ ತಮೋಗುಣದ, ರಾವಣ ರಜೋಗುಣದ, ವಿಭೀಷಣ ಸತ್ತ್ವಗುಣದ ಪ್ರತೀಕಗಳು. ಅದಕ್ಕಾಗಿಯೇ ವಿಭೀಷಣ ರಾಮನ ಸಾಕ್ಷಾತ್ಕಾರ ಪಡೆದುಕೊಂಡ.”
ಪರಮಹಂಸರು ಮಧ್ಯಾಹ್ನದ ಊಟವಾದನಂತರ ವಿಶ್ರಮಿಸಿಕೊಳ್ಳುತ್ತಿದ್ದಾಗ ಕಲ್ಕತ್ತ ದಿಂದ ರಾಮ, ತಾರಕ (ಶಿವಾನಂದ), ಇನ್ನೂ ಕೆಲವು ಮಂದಿ ಭಕ್ತರು ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡರು.
ನಿತ್ಯಗೋಪಾಲ, ತಾರಕ ಮತ್ತು ಇನ್ನೂ ಕೆಲವರು ರಾಮನ ಮನೆಯಲ್ಲೇ ಇರುತ್ತಿದ್ದರು. ನಿತ್ಯಗೋಪಾಲ ಯಾವಾಗಲೂ ಭಾವಾವಿಷ್ಟನಾಗಿಯೇ ಇರುತ್ತಿದ್ದ. ತಾರಕನ ಮನಸ್ಸು ಯಾವಾಗಲೂ ಅಂತರ್ಮುಖವಾಗಿಯೇ ಇರುತ್ತಿತ್ತು. ಅಪರೂಪಕ್ಕೆ ಒಮ್ಮೆ ಆತ ಇತರ ರೊಡನೆ ಮಾತುಕತೆಯಾಡುತ್ತಿದ್ದ. ರಾಮ ಅವರಿಗೆಲ್ಲ ಊಟಕ್ಕೆ ಹಾಕುತ್ತಿದ್ದ. ರಾಖಾಲ ಆಗಾಗ ತನ್ನ ಕೆಲವು ದಿನಗಳನ್ನು ಅಧರಸೇನನೊಡನೆ ಕಳೆಯುತ್ತಿದ್ದ.
ರಾಮ: “ನಾವೆಲ್ಲರೂ ಮೃದಂಗ ನುಡಿಸಲು ಕಲಿಯುತ್ತಿದ್ದೇವೆ.”
ಶ್ರೀರಾಮಕೃಷ್ಣರು ರಾಮನಿಗೆ: “ನಿತ್ಯಗೋಪಾಲ ನುಡಿಸಬಲ್ಲನೆ?”
ರಾಮ: “ಚೆನ್ನಾಗೇನಿಲ್ಲ. ಸಾಮಾನ್ಯವಾಗಿ ನುಡಿಸಬಲ್ಲ,”
ಶ್ರೀರಾಮಕೃಷ್ಣರು: “ತಾರಕನೋ?”
ರಾಮ: “ಆತ ಚೆನ್ನಾಗಿ ಕಲಿತಿದ್ದಾನೆ.”
ಶ್ರೀರಾಮಕೃಷ್ಣರು: “ಅದು ಹಾಗಿದ್ದರೆ, ಅಷ್ಟೊಂದಾಗಿ ಆತ ನೆಲದ ಕಡೆಗೆ ಮುಖ ತಿರುಗಿಸಿ ಇರಲಾಗುತ್ತಿರಲಿಲ್ಲ. ಮನಸ್ಸು ಬೇರೆ ವಸ್ತುವಿನ ಕಡೆ ಬಹಳವಾಗಿ ಹರಿದು ಹೋದರೆ ಭಗವಂತನ ಕಡೆ ಗಾಢವಾಗೇನೂ ಇರಲಾರದು.”
ರಾಮ: “ನಾನು ಕಲಿಯುತ್ತಿರುವುದು ಸಂಕೀರ್ತನೆಯ ಸಮಯದಲ್ಲಿ ಹಿಂಬಾಲಿಸು ವಷ್ಟು.”
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೀನು ಹಾಡುವುದನ್ನು ಕಲಿಯುತ್ತಾ ಇದ್ದೀಯಂತೆ ನಿಜವೆ?”
ಮಾಸ್ಟರ್ ನಗುತ್ತ : “ಇಲ್ಲ, ಸುಮ್ಮನೆ ಸ್ವಲ್ಪ ‘ಉ, ಆ’ ಅಂತ ಹೇಳುತ್ತೇನೆ.”
ಶ್ರೀರಾಮಕೃಷ್ಣರು: “ನೀನು ಆ ಹಾಡನ್ನು- ‘ನನ್ನನ್ನೂ ಉನ್ಮತ್ತನಾಗಿಸಲೆ? ತಾಯೆ’ ಎಂಬ ಹಾಡನ್ನು ಅಭ್ಯಾಸಮಾಡಿದ್ದೀಯೇನು? ಮಾಡಿದ್ದರೆ ಹಾಡು. ಅದು ನನ್ನ ಭಾವವನ್ನು ಪೂರ್ಣವಾಗಿ ವ್ಯಕ್ತಪಡಿಸುತ್ತದೆ.”
ಮಾತುಕತೆ ಹಾಜರಾ ಕೆಲಕೆಲವರ ಮೇಲೆ ಇಟ್ಟಿದ್ದ ದ್ವೇಷದ ಮೇಲೆ ಶುರುವಾಯಿತು. ಆತ ಹಾಗೆ ಮಾಡುತ್ತಿರುವುದು ಪರಮಹಂಸರಿಗೆ ಒಪ್ಪುತ್ತಿಲ್ಲ.
ಶ್ರೀರಾಮಕೃಷ್ಣರು: (ಭಕ್ತರಿಗೆ): “ನಾನು ಕಾಮಾರಪುಕುರದಲ್ಲಿದ್ದಾಗ ಆಗಾಗ ಒಂದು ಮನೆಗೆ ಹೋಗುತ್ತಿದ್ದೆ. ಆ ಮನೆಯ ಹುಡುಗರು ನನ್ನ ಸಮವಯಸ್ಕರು. ಅಂದು ಅವರು ಇಲ್ಲಿಗೆ ಬಂದಿದ್ದರು; ಎರಡು ಮೂರು ದಿನ ಇದ್ದರು, ಅವರ ತಾಯಿ ಹಾಜರಾನ ಹಾಗೆ ಎಲ್ಲರನ್ನೂ ದ್ವೇಷಿಸುತ್ತಿದ್ದಳು. ಆಕೆಯ ಕಾಲಿಗೆ ಏನೋ ಒಂದು ಆಗಿ ಕೊನೆಗೆ ಅಂಗಕ್ಷಯರೋಗ ಬಂತು. ಕಾಲು ಕೊಳೆತು ನಾರಲಾರಂಭಿಸಿತು. ಆಕೆಯಿದ್ದ ಕೊಠಡಿಯಲ್ಲಿ ಅಂಥ ದುರ್ವಾಸನೆ, ಬೇರೆ ಯಾರೂ ಒಳಕ್ಕೆ ಹೋಗಲಾಗುತ್ತಿರಲಿಲ್ಲ. ಹಾಜರಾನಿಗೆ ಈ ವಿಷಯ ತಿಳಿಸಿ ಯಾರನ್ನೂ ದ್ವೇಷಿಸಬೇಡ ಅಂತ ಹೇಳಿದೆ.”
ಸಾಯಂಕಾಲವಾಗಿದೆ. ಪರಮಹಂಸರು ದೇವಾಲಯದ ಒಳ ಅಂಗಳದ ವಾಯವ್ಯ ಮೂಲೆಯಲ್ಲಿ ನಿಂತಿದ್ದ ಹಾಗೇ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಈಗ ಕೆಲವು ಕಾಲದಿಂದ ಪರಮಹಂಸರು ಯಾವಾಗ ನೋಡಿದರೂ ಸಮಾಧಿಸ್ಥರಾಗಿಯೇ ಇದ್ದಾರೆ. ಸಾಮಾನ್ಯ ಉದ್ದೀಪನವೇ ಸಾಕು, ಅವರನ್ನು ಬಾಹ್ಯಜ್ಞಾನಶೂನ್ಯರನ್ನಾಗಿ ಮಾಡುವುದಕ್ಕೆ. ಭಕ್ತರು ಬಂದಾಗ ಎಲ್ಲೋ ಸ್ವಲ್ಪ ಹೊತ್ತು ಅವರೊಡನೆ ಮಾತುಕತೆ ಆಡುತ್ತಾರೆ. ಇಲ್ಲದೆ ಇತ್ತು ಎಂದರೆ, ಸರ್ವದಾ ಅಂತರ್ಮುಖರಾಗಿಯೇ ಇರುತ್ತಾರೆ. ಪೂಜೆ, ಜಪ, ಇತ್ಯಾದಿ ಕರ್ಮ ಈಗ ಅವರ ಕೈಯಲ್ಲಿ ಸಾಗುತ್ತಿಲ್ಲ.
ಪರಮಹಂಸರು ಪ್ರಕೃತಿಸ್ಥರಾಗಿ ನಿಂತಲ್ಲೇ ನಿಂತು ಭಗವತಿಯೊಡನೆ ಮಾತುಕತೆ ಯಾಡುತ್ತಿದ್ದಾರೆ. ಈಗ ಹೇಳುತ್ತಿದ್ದಾರೆ: “ಹೇ ತಾಯೆ, ಪೂಜೆ ಮಾಡುವುದೂ ನಿಂತು ಹೋಯಿತು; ಜಪ ಮಾಡುವುದೂ ನಿಂತುಹೋಯಿತು. ದಯವಿಟ್ಟು ನೋಡಿಕೋ ತಾಯೆ, ನಾನು ಒಂದು ಜಡವಸ್ತು ಆಗದ ಹಾಗೆ. ನನ್ನನ್ನು ಸೇವ್ಯಸೇವಕಭಾವದಲ್ಲಿ ಇಡು. ಹೇ ತಾಯಿ, ನಿನ್ನ ಸಂಬಂಧವಾಗಿ ಮಾತುಕತೆಯಾಡುವ ಹಾಗೆ, ನಿನ್ನ ನಾಮ ಗುಣಕೀರ್ತನೆ ಮಾಡುವ ಹಾಗೆ ಸಾಧ್ಯವಾಗುವಂತೆ ಇಡು. ನಿನ್ನ ವೈಭವವನ್ನು ನಾನು ಸ್ತುತಿಸಬೇಕು ಅಂತ ಇದ್ದೇನೆ ತಾಯೆ. ಈ ಶರೀರಕ್ಕೆ ಸ್ವಲ್ಪ ಶಕ್ತಿ ಕೊಡು. ಅದು ತಾನೇ ನಡೆಯುವಂತಾಗಲಿ, ಎಲ್ಲಿ ನಿನ್ನ ಸಂಬಂಧವಾಗಿ ಕಥಾಶ್ರವಣವಾಗುತ್ತದೆಯೋ, ಎಲ್ಲಿ ನಿನ್ನ ಭಕ್ತರಿದ್ದಾರೋ, ಅಲ್ಲಿಗೆಲ್ಲಾ ಅದು ಹೋಗಿಬರುವಂತಾಗಲಿ.”
ಪರಮಹಂಸರು ಇಂದು ಪ್ರಾತಃಕಾಲ ಹೋಗಿ ಭಗವತಿಯ ಪಾದಪದ್ಮಗಳಲ್ಲಿ ಪುಷ್ಪಾಂಜಲಿಯನ್ನು ಅರ್ಪಿಸಿ ಬಂದಿದ್ದರು.
ಭಗವತಿಯೊಡನೆ ತಮ್ಮ ಮಾತನ್ನು ಮುಂದುವರಿಸುತ್ತ ಪರಮಹಂಸರು ಹೇಳು ತ್ತಿದ್ದಾರೆ: “ಇಂದು ಪ್ರಾತಃಕಾಲ ನಿನ್ನ ಪಾದಪದ್ಮಗಳಲ್ಲಿ ಪುಷ್ಟಾಂಜಲಿಯನ್ನಿತ್ತು ಬಂದೆ. ಆಗ ಯೋಚನೆ ಬಂತು: ‘ಭೇಷ್, ನನ್ನ ಮನಸ್ಸು ಬಾಹ್ಯಪೂಜೆಯ ಕಡೆ ಹೋಗುತ್ತಿದೆ. ಆದರೆ ಹೀಗನಿಸುತ್ತಿದೆಯಲ್ಲ, ಏಕೆ? ಮತ್ತೆ ನನ್ನನ್ನು ಜಡನಂತೆ ಮಾಡಿಬಿಡುತ್ತೀಯಲ್ಲ, ಏಕೆ?”
ಇಂದು ಕೃಷ್ಣಪಕ್ಷದ ಸಪ್ತಮಿಯಾದ್ದರಿಂದ, ಇನ್ನೂ ಚಂದ್ರೋದಯವಾಗಿಲ್ಲ, ಪರಮ ಹಂಸರು ಇನ್ನೂ ಭಾವಾವಿಷ್ಟರಾಗಿಯೇ ತಮ್ಮ ಕೊಠಡಿಯಲ್ಲಿ ಚಿಕ್ಕ ಮಂಚದ ಮೇಲೆ ಕುಳಿತು ಭಗವತಿಯೊಡನೆ ಮಾತುಕತೆಯಾಡುತ್ತಿದ್ದಾರೆ: “ಮತ್ತೆ ಗಾಯತ್ರಿಯ ಈ ಪುರಶ್ಚರಣವೇಕೆ? ಈ ನೆಲೆಯಿಂದ ಆ ನೆಲೆಗೆ ಹಾರುವುದು…. ಇದನ್ನು ಮಾಡುವಂತೆ ಯಾರು ಆತನಿಗೆ ಹೇಳಿದರು? ಬಹುಶಃ ತಾನೇ ಸ್ವತಃ ಮಾಡುತ್ತಿರಬಹುದು…… ಒಳ್ಳೇದು, ಸ್ವಲ್ಪ ಮಾಡಲಿ.”
ಹಿಂದಿನ ದಿನ ಪರಮಹಂಸರು ಈಶಾನನಿಗೆ ತಿಳಿಸಿದ್ದರು. ಈ ಕಲಿಯುಗದಲ್ಲಿ ಅನ್ನಗತ ಪ್ರಾಣವಾದ್ದರಿಂದ, ವೇದಾಂತಮತಪೂಜೆ ಸೂಕ್ತವಾದುದಲ್ಲ. ಭಗವತಿಯನ್ನು ಮಾತೃಭಾವ ದಿಂದ ಪೂಜೆ ಮಾಡಬೇಕು ಎಂದು.
ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ: “ಇವೆಲ್ಲಾ ನನ್ನ ಮಾನಸಿಕ ಕಲ್ಪನೆಯೋ ಅಥವಾ ನಿಜವಾದುವೋ?” ಪರಮಹಂಸರು ಈ ರೀತಿಯಾಗಿ ಭಗವತಿಯೊಡನೆ ಮಾತುಕತೆ ಯಾಡುತ್ತಿದ್ದುದನ್ನು ನೋಡಿ ಮಾಸ್ಟರ್ ಆಶ್ಚರ್ಯಚಕಿತನಾಗಿ ಸುಮ್ಮನೆ ಕುಳಿತಿದ್ದಾನೆ. ಆತ ಯೋಚಿಸುತ್ತಿದ್ದಾನೆ, ಭಗವತಿ ನಮಗೆ ಬಹಳ ಹತ್ತಿರದಲ್ಲಿ ಒಳಗೂ ಹೊರಗೂ ಇರಬೇಕು. ಇಲ್ಲದಿದ್ದರೆ ಪರಮಹಂಸರು ಆಕೆಯೊಡನೆ “ಪಿಸಿ, ಪಿಸಿ” ಅಂತ ಮಾತನಾಡಲು ಹೇಗೆ ಸಾಧ್ಯವಾಗುತ್ತಿತ್ತು?
೨೬ನೆ ಸೆಪ್ಟೆಂಬರ್ ೧೮೮೩, ಭಾದ್ರಪದ ಕೃಷ್ಣದಶಮಿ, ಬುಧವಾರ
ಭಾನುವಾರ ರಜಾದಿನವಾದ್ದರಿಂದ ಭಕ್ತರಲ್ಲನೇಕರು ಅಂದು ಬರುತ್ತಾರೆ. ಇಂದು ಕೆಲಸ ಕಾರ್ಯವಿರುವುದರಿಂದ ಎಲ್ಲೋ ಕೆಲವರು ಮಾತ್ರ ಬಂದಿದ್ದಾರೆ. ರಾಖಾಲ, ಲಾಟು ತಮ್ಮ ಸಮಯದ ಬಹುಭಾಗವನ್ನು ದಕ್ಷಿಣೇಶ್ವರದಲ್ಲಿಯೇ ಕಳೆಯುತ್ತಿದ್ದಾರೆ. ಮಾಸ್ಟರ್ ಅಪರಾಹ್ನ ದಲ್ಲಿ ಬಂದು ನೋಡುತ್ತಾನೆ, ಪರಮಹಂಸರು ತಮ್ಮ ಚಿಕ್ಕಮಂಚದ ಮೇಲೆ ಕುಳಿತು ಕೊಂಡಿದ್ದಾರೆ. ಮಾತುಕತೆ ನರೇಂದ್ರನ ಸಂಬಂಧವಾಗಿ ಆರಂಭವಾಯಿತು.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಇತ್ತೀಚೆಗೆ ನರೇಂದ್ರ ನಿನಗೆ ಸಿಕ್ಕಿದನೇನು? (ನಗುತ್ತ) ಆತ ನನ್ನ ಸಂಬಂಧವಾಗಿ ಹೇಳಿದ: ‘ಇವರು ಇನ್ನೂ ಕಾಳೀದೇವಾಲಯಕ್ಕೆ ಹೋಗುತ್ತಿದ್ದಾರೆ. ನಿಜವಾದ ಜ್ಞಾನೋದಯವಾಯಿತು ಎಂದರೆ ಮತ್ತೆ ಇವರು ಅಲ್ಲಿಗೆ ಹೋಗುವುದಿಲ್ಲ.’ ಆತ ಆಗಾಗ ಇಲ್ಲಿ ಬರುತ್ತಿರುವುದರಿಂದ, ಅವರ ಮನೆಯವರು ಆತನ ಮೇಲೆ ಬಹಳವಾಗಿ ಸಿಟ್ಟುಗೊಂಡಿದ್ದಾರೆ. ಅಂದು ಇಲ್ಲಿಗೆ ಒಂದು ಗಾಡಿ ಮಾಡಿಕೊಂಡು ಬಂದ. ಸುರೇಂದ್ರ ಅದರ ಬಾಡಿಗೆ ಕೊಟ್ಟ. ಅದಕ್ಕಾಗಿ ನರೇಂದ್ರನ ಸೋದರತ್ತೆ ಸುರೇಂದ್ರನ ಮನೆಗೆ ಹೋಗಿ ಒಂದು ದೊಡ್ಡ ಗೊಂದಲವನ್ನೇ ಎಬ್ಬಿಸಿ ಬಂದುಬಿಟ್ಟಳು.”
ಪರಮಹಂಸರು ನರೇಂದ್ರನ ಸಂಬಂಧವಾಗಿ ಮಾತುಕತೆ ಆಡುತ್ತಾ ತಮ್ಮ ಮಂಚದಿಂದ ಎದ್ದು ಈಶಾನ್ಯ ವರಾಂಡಕ್ಕೆ ಹೋಗಿ ನಿಂತುಕೊಂಡಿದ್ದಾರೆ. ಅಲ್ಲಿ ಹಾಜರಾ, ಕಿಶೋರಿ, ರಾಖಾಲ ಇವರೇ ಮೊದಲಾದ ಭಕ್ತರು ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಏನು ಈವೊತ್ತು ಇಲ್ಲಿಗೆ ಬಂದುಬಿಟ್ಟೆಯಲ್ಲ? ಸ್ಕೂಲಿಲ್ಲವೆ?”
ಮಾಸ್ಟರ್: “ಈ ದಿನ ನಮ್ಮ ಸ್ಕೂಲನ್ನು ಒಂದೂವರೆ ಗಂಟೆಗೆ ಮುಚ್ಚಿಬಿಟ್ಟರು.”
ಶ್ರೀರಾಮಕೃಷ್ಣರು: “ಏಕೆ. ಅಷ್ಟು ಹೊತ್ತಿಗೆ ಮುಂಚೆ?”
ಮಾಸ್ಟರ್: “ಸ್ಕೂಲು ನೋಡಲು ವಿದ್ಯಾಸಾಗರ ಬಂದಿದ್ದರು. ಸ್ಕೂಲು ಅವರದಾದ್ದ ರಿಂದ ಅವರು ಸ್ಕೂಲಿಗೆ ಭೇಟಿ ಕೊಟ್ಟಾಗಲೆಲ್ಲಾ ಮಕ್ಕಳು ಆನಂದಪಡಲಿ ಎಂದು ಅರ್ಧ ದಿನ ರಜಾ ಕೊಡಲಾಗುತ್ತಿದೆ.”
ಶ್ರೀರಾಮಕೃಷ್ಣರು: “ವಿದ್ಯಾಸಾಗರ ತನ್ನ ಮಾತಿನಂತೆ ನಡೆದುಕೊಳ್ಳುವುದಿಲ್ಲ ಏಕೆ? ‘ಸತ್ಯವಚನ, ಪರಸ್ತ್ರೀಯನ್ನು ಮಾತೃಸಮಾನವಾಗಿ ಕಾಣುವುದು. ಇವುಗಳಿಂದ ಭಗವಂತನ ಸಾಕ್ಷಾತ್ಕಾರ ದೊರೆಯದಿದ್ದರೆ, ತುಳಸೀದಾಸ ಒಬ್ಬ ಮಿಥ್ಯಾವಾದಿಯಾಗುತ್ತಾನೆ.’ ಮನುಷ್ಯ ಸತ್ಯಾರ್ಥಿಯಾಗಿದ್ದರೆ, ಆತನಿಗೆ ಭಗವಂತನ ಸಾಕ್ಷಾತ್ಕಾರ ದೊರೆತೇ ದೊರೆಯುತ್ತದೆ. ಅಂದು ವಿದ್ಯಾಸಾಗರ ಹೇಳಿದ ತಾನು ಇಲ್ಲಿಗೆ ಬಂದು ನನ್ನನ್ನು ನೋಡುವುದಾಗಿ. ಆದರೆ ಅದರಂತೆ ನಡೆದುಕೊಳ್ಳಲಿಲ್ಲ.
“ಪಂಡಿತನಿಗೂ ಸಾಧುವಿಗೂ ಅಜಗಜಾಂತರ ವ್ಯತ್ಯಾಸ. ಯಾರು ಕೇವಲ ಪಂಡಿತರೋ ಅವರಿಗೆ ಕಾಮಕಾಂಚನಗಳಲ್ಲಿ ಮನಸ್ಸಿರುತ್ತದೆ. ಆದರೆ ಸಾಧುಗಳ ಮನಸ್ಸು ಹರಿಯಪಾದಪದ್ಮಗಳಲ್ಲಿ ನೆಲಸಿರುತ್ತದೆ. ಪಂಡಿತ ಬಾಯಲ್ಲಿ ಹೇಳುವುದು ಒಂದು. ಕೈಯಲ್ಲಿ ಮಾಡುವುದು ಒಂದು. ಸಾಧುಗಳ ಮಾತು ಬಿಟ್ಟುಬಿಡು. ಸಾಮಾನ್ಯವಾಗಿ ಯಾರು ಹರಿಯಪಾದ ಪದ್ಮಗಳಲ್ಲಿ ಮನಸ್ಸಿಟ್ಟಿರುತ್ತಾರೋ ಅವರ ಮಾತುಕತೆ, ವರ್ತನೆ ಎಲ್ಲಾ ಬೇರೆ. ಕಾಶಿಯಲ್ಲಿ ನಾನಕ್ ಪಂಥದ ಒಬ್ಬ ಯುವಕ ಸಂನ್ಯಾಸಿಯನ್ನು ನೋಡಿದೆ. ಅವನಿಗೆ ವಯಸ್ಸು ನಿನ್ನಷ್ಟೆ. ನನ್ನನ್ನು ಸಂಬೋಧಿಸುತ್ತಿದ್ದ: ‘ಪ್ರೇಮೀ ಸಾಧು’ ಎಂದು. ಕಾಶಿಯಲ್ಲಿ ಅವರ ಪಂಥದ ಒಂದು ಮಠ ಇದೆ. ಅಲ್ಲಿಗೆ ಅವರು ಒಂದು ದಿನ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿನ ಮಹಂತ ಮನೆಯ ಒಳ್ಳೆ ಯಜಮಾನಿಯ ಹಾಗೆ ಕಂಡ. ಆತನನ್ನು ಕೇಳಿದೆ: ‘ಮಾರ್ಗವೇನು? ಆತ ಹೇಳಿದ: ‘ಕಲಿಯುಗಕ್ಕೆ ನಾರದೀಯ ಭಕ್ತಿ.’ ನಾನು ಹೋಗಿದ್ದಾಗ ಆತ ಸ್ತೋತ್ರಪಾಠ ಮಾಡುತ್ತಿದ್ದ. ಅದು ಮುಗಿದ ನಂತರ ಹೇಳಲಾರಂಭಿಸಿದ: ‘ಜಲೇ ವಿಷ್ಣುಃ ಸ್ಥಲೇ ವಿಷ್ಣುಃ ವಿಷ್ಣುಃ ಪರ್ವತಮಸ್ತಕೇ ಸರ್ವಂ ವಿಷ್ಣುಮಯಂ ಜಗತ್’ ಜಲದಲ್ಲಿ ವಿಷ್ಣು, ಸ್ಥಳದಲ್ಲಿ ವಿಷ್ಣು, ಪರ್ವತದ ತುದಿಯಲ್ಲೂ ವಿಷ್ಣು. ಈ ಇಡೀ ಜಗತ್ತೇ ವಿಷ್ಣುಮಯ. ‘ಕೊನೆಗೆ ಹೇಳಿದ: ‘ಶಾಂತಿಃ! ಶಾಂತಿಃ! ಶಾಂತಿಃ!’ ಅಂತ.
“ಒಂದು ದಿನ ಗೀತಾಪಠನ ಮಾಡುತ್ತಿದ್ದ, ಆತ ಅಷ್ಟು ಕಟ್ಟುನಿಟ್ಟಿನವ, ಪ್ರಾಪಂಚಿಕರ ಕಡೆ ಮುಖಮಾಡಿ ಅದನ್ನು ಪಠಿಸುತ್ತಿರಲಿಲ್ಲ.ಮಥುರಬಾಬುವೂ ನನ್ನೊಡನೆ ಇದ್ದ. ಆತನ ಕಡೆಗೆ ಬೆನ್ನು ತಿರುಗಿಸಿಬಿಟ್ಟ. ಈ ನಾನಕ್ ಪಂಥದ ಸಾಧುವೇ ನನಗೆ ಹೇಳಿದವನು, ಉಪಾಯ ‘ನಾರದೀಯ ಭಕ್ತಿ’ ಅಂತ.”
ಮಾಸ್ಟರ್: “ಏನು, ಆ ಸಾಧುಗಳು ವೇದಾಂತವಾದಿಗಳಲ್ಲವೇನು?”
ಶ್ರೀರಾಮಕೃಷ್ಣರು: “ಹೌದು, ವೇದಾಂತವಾದಿಗಳೇ; ಆದರೆ ಭಕ್ತಿಮಾರ್ಗವನ್ನೂ ಒಪ್ಪುತ್ತಾರೆ. ಆದರೆ ನೋಡು, ಈ ಕಲಿಯುಗದಲ್ಲಿ ವೇದಾಂತ ಮತದಂತೆ ನಡೆಯಲು ಸಾಧ್ಯವಿಲ್ಲ. ಒಮ್ಮೆ ಒಬ್ಬ ಹೇಳಿದ, ತಾನು ಗಾಯತ್ರಿ ಪುರಶ್ಚರಣೆ ಮಾಡುವುದಾಗಿ. ನಾನು ಆತನಿಗೆ ಹೇಳಿದೆ: ‘ಏಕೆ, ಅದರಲ್ಲಿ ತೊಡಗಬೇಕು? ಕಲಿಯುಗಕ್ಕೆ ತಂತ್ರೋಕ್ತಮತ. ಇದರಲ್ಲಿ ಪುರಶ್ಚರಣೆ ಸಾಧ್ಯವಿಲ್ಲವೇನು?’
“ವೈದಿಕ ಕರ್ಮ ಬಹಳ ಕಠಿಣ. ಜೊತೆಗೆ ಈಗ ಎಲ್ಲಿ ನೋಡಿದರೂ ದಾಸತ್ವ. ಒಂದು ಹೇಳಿಕೆ ಇದೆ, ಹನ್ನೆರಡು ವರ್ಷವೋ ಏನೋ ಮನುಷ್ಯ ದಾಸತ್ವ ಮಾಡಿದ್ದೇ ಆದರೆ, ಕೊನೆಗೆ ದಾಸನೇ ಆಗಿಬಿಡುತ್ತಾನೆ ಅಂತ. ಅಷ್ಟೊಂದು ಕಾಲ ದಾಸತ್ವ ಮಾಡಿದರೆ, ಯಜಮಾನನ ಗುಣಗಳೆಲ್ಲಾ ದಾಸನಿಗೆ ಬಂದುಬಿಡುತ್ತವೆ. ಯಜಮಾನನ ರಾಜಸಿಕ ಮತ್ತು ತಾಮಸಿಕ ಗುಣ, ಹಿಂಸಾಪ್ರವೃತ್ತಿ, ವಿಲಾಸವಿಭ್ರಮ ಎಲ್ಲಾ ಬಂದುಬಿಡುತ್ತವೆ. ಕೇವಲ ಅವರಿಗೆ ಬರೀ ದಾಸತ್ವವೇ ಅಲ್ಲ, ಅನಂತರ ಅದರ ವಿಶ್ರಾಂತಿ ವೇತನವೂ ದೊರೆಯುತ್ತದೆ.
“ಒಮ್ಮೆ ಇಲ್ಲಿಗೆ ಒಬ್ಬ ವೇದಾಂತವಾದಿ ಸಾಧು ಬಂದಿದ್ದ. ಮೇಘ ಕಣ್ಣಿಗೆ ಬಿತ್ತು ಎಂದರೆ ನರ್ತಿಸುತ್ತಿದ್ದ. ಬಿರುಗಾಳಿ ಮಳೆ ಕಂಡರೆ ಬಹಳ ಆನಂದ. ಧ್ಯಾನದ ಸಮಯದಲ್ಲಿ ಯಾರಾದರೂ ಆತನನ್ನು ಸಮೀಪಿಸಿದರೆ ಆತನಿಗೆ ಉಗ್ರ ಕೋಪ ಬಂದುಬಿಡುತ್ತಿತ್ತು. ಒಂದು ದಿನ ನಾನು ಹಾಗೇ ಹೋಗಿಬಿಟ್ಟೆ. ಸಮೀಪಿಸಿದ ಒಡನೆಯೇ ಆತನಿಗೆ ಬಹಳವಾಗಿ ಸಿಟ್ಟು ಬಂತು. ಯಾವಾಗ ನೋಡಿದರೂ ‘ಬ್ರಹ್ಮ ಸತ್ಯಂ, ಜಗನ್ಮಿಥ್ಯಾ’ ಅಂತ ವಿಚಾರದಲ್ಲಿ ತೊಡಗು ತ್ತಿದ್ದ. ನಾನಾತ್ವಕ್ಕೆ ಮಾಯೆಯೇ ಕಾರಣವಾದ್ದರಿಂದ, ಕೈಯಲ್ಲಿ ಯಾವಾಗಲೂ ಗೊಂಚಲು ದೀಪದ ಒಂದು ಮುಪ್ಪಟ್ಟೆ ಗಾಜನ್ನು (ಪ್ರಿಸಮ್) ಇಟ್ಟುಕೊಂಡಿರುತ್ತಿದ್ದ. ಅದರ ಮೂಲಕ ನೋಡಿದರೆ ಅನೇಕ ಬಣ್ಣಗಳು ಕಣ್ಣಿಗೆ ಬೀಳುತ್ತವೆ. ಆದರೆ ವಾಸ್ತವಿಕವಾಗಿ ಯಾವ ಬಣ್ಣವೂ ಇಲ್ಲ. ಹಾಗೇನೆ ವಸ್ತುತಃ ಬ್ರಹ್ಮನ ಹೊರತು ಬೇರೇನೂ ಇಲ್ಲ. ಆದರೆ ಮಾಯೆಯ ದೆಸೆ ಯಿಂದ, ಅಹಂಕಾರದ ದೆಸೆಯಿಂದ, ನಾನಾತ್ವ ಕಣ್ಣಿಗೆ ಬೀಳುತ್ತದೆ. ಮಾಯೆಯ ಬಲೆಗೆ ಬೀಳಬೇಕಾಗಿ ಬರಬಹುದು, ಆಸಕ್ತಿಯುಂಟಾಗಬಹುದು ಎಂದು ಹೆದರಿ ಯಾವ ವಸ್ತುವನ್ನೂ ಆತ ಒಂದು ಸಲಕ್ಕಿಂತ ಹೆಚ್ಚಾಗಿ ನೋಡುತ್ತಿರಲಿಲ್ಲ. ಸ್ನಾನದ ಸಮಯದಲ್ಲಿ ಹಕ್ಕಿ ಹಾರುವು ದನ್ನು ನೋಡಿ ವಿಚಾರದಲ್ಲಿ ತೊಡಗುತ್ತಿದ್ದ. ಆತನಿಗೆ ವ್ಯಾಕರಣ ಚೆನ್ನಾಗಿ ಗೊತ್ತಿತ್ತು. ಇಲ್ಲಿ ಮೂರು ದಿನ ಮಾತ್ರ ಇದ್ದ. ಒಂದು ದಿನ ನದಿಯ ದಡದ ಹತ್ತಿರ ಕೊಳಲನಾದ ಆಗುತ್ತಿರುವುದನ್ನು ಕೇಳಿ ಹೇಳಿದ. ‘ಯಾರಿಗೆ ಬ್ರಹ್ಮದರ್ಶನವಾಗಿದೆಯೋ, ಆತನ ಕಿವಿಗೆ ಇದು ಬಿತ್ತು ಎಂದರೆ, ಆತ ಸಮಾಧಿಸ್ಥನಾಗಿಬಿಡುತ್ತಾನೆ’ ಎಂದು.
ಪರಮಹಂಸರು ಸಾಧುಗಳ ಸಂಬಂಧವಾಗಿ ಮಾತಾಡುತ್ತ ಮಾತಾಡುತ್ತ ಪರಮ ಹಂಸನ ಅವಸ್ಥೆಯ ಸಂಬಂಧವಾಗಿ ಭಕ್ತರಿಗೆ ತೋರಿಸಲಾರಂಭಿಸಿದ್ದಾರೆ. ಬಾಲಕನ ಹಾಗೆ ಚಲನವಲನ ಮಾಡುತ್ತಿದ್ದಾರೆ. ಮುಖದಲ್ಲಿ ನಗೆ ಸುಮ್ಮನೆ ಮೂಡುತ್ತಿದೆ. ದಿಗಂಬರ ರಾಗಿದ್ದಾರೆ. ಕಣ್ಣುಗಳು ಆನಂದಬಾಷ್ಪ ಸುರಿಸುತ್ತಿವೆ. ಮತ್ತೆ ಅವರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡು ಎಂದಿನಂತೆ ತಮ್ಮ ಮನಮೋಹಕ ಮಾತುಗಳನ್ನು ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನಾನು ತೋತಾಪುರಿಯಿಂದ ವೇದಾಂತೋಪದೇಶ ಪಡೆದೆ: ‘ಬ್ರಹ್ಮಸತ್ಯಂ, ಜಗನ್ಮಿಥ್ಯಾ’ ಎಂದು. ಐಂದ್ರಜಾಲಿಕ ಇಂದ್ರಜಾಲ ತೋರಿಸುತ್ತಿದ್ದಾನೆ. ಆತ ಮಾವಿನ ಗಿಡವನ್ನು ಹುಟ್ಟಿಸಿ ತೋರಿಸುತ್ತಾನೆ. ಅದು ಹಣ್ಣುಕೂಡ ಬಿಟ್ಟುಬಿಡುತ್ತದೆ. ಆದರೆ ಇದೆಲ್ಲ ಕೇವಲ ಇಂದ್ರಜಾಲ ಮಾತ್ರ. ನಿಜವಾಗಿ ಇರತಕ್ಕವನು ಐಂದ್ರಜಾಲಿಕನೊಬ್ಬನೇ.”
ಮಾಸ್ಟರ್: “ನಮ್ಮ ಜೀವನ ಒಂದು ದೀರ್ಘನಿದ್ರೆ ಇದ್ದ ಹಾಗೆ. ಇದು ಮಾತ್ರ ನನಗೆ ಅರ್ಥವಾಗುತ್ತಿದೆ, ನಾವು ಸರಿಯಾದ ರೀತಿಯಲ್ಲಿ ಈ ಜಗತ್ತನ್ನು ನೋಡುತ್ತಿಲ್ಲ ಅಂತ. ಕಣ್ಣೆದುರಿಗಿರುವ ಈ ಆಕಾಶದ ಸ್ವರೂಪ ಏನು ಎಂಬುದನ್ನು ಅರಿಯಲಾರದ ಈ ಮನಸ್ಸಿ ನಿಂದ ಈ ಜಗತ್ತಿನ ಸ್ವರೂಪ ಏನು ಎಂಬುದನ್ನು ಅರಿಯಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ನಾವು ಅದರ ಸ್ವರೂಪವನ್ನು ಅದು ಇರುವ ರೀತಿಯಲ್ಲಿ ಕಾಣುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಇದನ್ನು ಇನ್ನೊಂದು ದೃಷ್ಟಿಯಿಂದ ನೋಡಬಹುದು. ಆಕಾಶ ವನ್ನು ಅದು ಇರುವ ರೀತಿಯಲ್ಲಿ ನಾವು ನೋಡುತ್ತಿಲ್ಲ. ದಿಗಂತದಲ್ಲಿ ಆಕಾಶ ಭೂಮಿಯನ್ನು ಮುಟ್ಟುತ್ತಿರುವಂತೆ ಕಾಣುತ್ತದೆ. ಮನುಷ್ಯನಿಗೆ ಸರಿಯಾದ ದೃಷ್ಟಿಯಿಂದ ನೋಡಲು ಹೇಗೆ ಸಾಧ್ಯವಾದೀತು? ಆತನ ಮನಸ್ಸು ವಿಷಮಶೀತಜ್ವರದ ರೋಗಿಯ ಹಾಗೆ ಸನ್ನಿಗೊಳಗಾಗಿದೆ.”
ಪರಮಹಂಸರು ತಮ್ಮ ಮಧುರ ಕಂಠದಿಂದ ಹಾಡುತ್ತಿದ್ದಾರೆ:
ಇರುವುದೊಂದೇ ವಿಕಾರ;
ನಿನ್ನ ಪಾದಕಮಲಗಳ ಕೃಪೆಯಿಲ್ಲದಿನ್ನಿಲ್ಲ
ಬೇರೆ ಪರಿಹಾರ……..
ತಮ್ಮ ಮಾತು ಮುಂದುವರಿಸುತ್ತ ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ಇದು ಸನ್ನಿ ಯಲ್ಲದೆ ಮತ್ತೆ ಬೇರೆ ಏನು? ಹಾಗೇ ನೋಡು. ಸಂಸಾರಿಗಳು ಹೇಗೆ ಪರಸ್ಪರ ಜಗಳ ಕಾಯುತ್ತಾರೆ ಯಾವ ಪಟ್ಟಗಳಿಸಿಕೊಳ್ಳುವುದಕ್ಕೋ ದೇವರೇ ಬಲ್ಲ. ಹೇಗೆ ಜಗಳ ಕಾಯುತ್ತಾರೆ. ಏನು ಕತೆ! ‘ನಿನಗೆ ಹಾಗಾಗಲಿ! ನಿನಗೆ ಹೀಗೆ ಮಾಡುತ್ತೇನೆ!’ ಎಷ್ಟೊಂದು ಅಬ್ಬರ! ಎಷ್ಟೊಂದು ಬೈಗಳು!”
ಮಾಸ್ಟರ್: “ನಾನು ಕಿಶೋರಿಗೆ ಹೇಳಿದೆ: ‘ಪೆಟ್ಟಿಗೆ ಖಾಲಿ; ಒಳಗೆ ಏನೂ ಇಲ್ಲ- ಆದರೂ ಅದನ್ನು ಅದರಲ್ಲಿ ಹಣ ಇದೆ ಅಂತ-ಇಬ್ಬರು ಹಿಡಿದು ಎಳೆದಾಡುತ್ತಾರೆ.’ ಒಳ್ಳೇದು. ಎಲ್ಲಾ ಅನರ್ಥಗಳಿಗೂ ಈ ದೇಹವೇ ಕಾರಣ ಅಲ್ಲವೇ? ಇದನ್ನೆಲ್ಲಾ ಅರಿತು ಕೊಂಡು ಜ್ಞಾನಿಗಳು ಭಾವಿಸುತ್ತಾರೆ: ‘ಈ ಶರೀರವೆಂಬ ದಿಂಬಿನ ಚೀಲ ಹೋಯಿತು ಎಂದರೆ, ಬದುಕಿಕೊಂಡೆವಪ್ಪ!”
ಪರಮಹಂಸರು ಮತ್ತು ಮಾಸ್ಟರ್ ಕಾಳೀದೇವಾಲಯದ ಕಡೆ ಹೋಗುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಏಕೆ ಹಾಗೆ ಹೇಳುತ್ತೀಯೇ? ಈ ಜಗತ್ತೇನೂ ಮಾಯೆಯ ಚೌಕ ಟ್ಟಾಗಿ ಇದ್ದರೂ ಇರಬಹುದು. ಆದರೆ ಇದು ‘ಮೋಜಿನ ಮನೆ’ ಅಂತಲೂ ಹೇಳಿದೆಯಲ್ಲ.”
ಮಾಸ್ಟರ್: “ಆದರೆ ಈ ಜಗತ್ತಿನಲ್ಲಿ ಎಲ್ಲಿ ನಿರವಚ್ಛಿನ್ನ ಆನಂದ ದೊರೆತೀತು?”
ಶ್ರೀರಾಮಕೃಷ್ಣರು: “ಇಲ್ಲ. ನೀನು ಹೇಳುವುದು ನಿಜ.”
ಪರಮಹಂಸರು ಕಾಳೀದೇವಾಲಯದ ಮುಂಭಾಗಕ್ಕೆ ಬಂದು ಭಗವತಿಗೆ ಸಾಷ್ಟಾಂಗ ಪ್ರಣಾಮಮಾಡಿದರು. ಮಾಸ್ಟರೂ ಹಾಗೆ ಮಾಡಿದ. ಬಳಿಕ ಪರಮಹಂಸರು ದೇವಾಲಯದ ಎದುರಿಗಿರುವ ಕೆಳಗಿನ ಅಂಗಳದಲ್ಲಿ ನಾಟ್ಯಮಂದಿರದ ಒಂದು ಕಂಬವನ್ನು ಒರಗಿಕೊಂಡು ಕುಳಿತಿದ್ದಾರೆ. ಅವರು ಕೆಂಪು ಅಂಚಿನ ಪಂಚೆ ಉಟ್ಟುಕೊಂಡಿದ್ದಾರೆ. ಅದರ ಒಂದು ಭಾಗವನ್ನು ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ಅದು ಬೆನ್ನಿನ ಮೇಲೆ ಜೋತು ಬಿದ್ದಿದೆ. ಮಾಸ್ಟರ್ ಹತ್ತಿರ ಕುಳಿತಿದ್ದಾನೆ.
ಮಾಸ್ಟರ್: “ಈ ಜಗತ್ತಿನಲ್ಲಿ ನಿರವಚ್ಛಿನ್ನ ಆನಂದವಿಲ್ಲದೆ ಇರುವುದರಿಂದ, ದೇಹ ಧಾರಣೆಯ ಆವಶ್ಯಕತೆ ತಾನೆ ಏನಿದೆ? ಕಾಣಬರುತ್ತಿದೆ, ಕೆಲವು ಹಿಂದಿನ ಕರ್ಮಗಳನ್ನು ಭೋಗಿಸುವುದಕ್ಕಾಗಿಯೇ ಶರೀರಧಾರಣೆ ಎಂಬುದಾಗಿ. ಆದರೆ ಈಗ ಅದು ಏನು ಕರ್ಮ ಮಾಡುತ್ತಿದೆಯೋ ಯಾರಿಗೆ ತಾನೇ ಗೊತ್ತು? ಈ ಮಧ್ಯೆ ನಮ್ಮ ಪ್ರಾಣ ಹೋಗುತ್ತಿದೆ.”
ಶ್ರೀರಾಮಕೃಷ್ಣರು: “ಬಟಾಣಿ ತಿಪ್ಪೆಗುಂಡಿಗೆ ಬಿದ್ದರೂ ಅಲ್ಲೂ ಬಟಾಣಿ ಗಿಡವಾಗಿಯೇ ಹುಟ್ಟುತ್ತದೆ.”
ಮಾಸ್ಟರ್: “ಆದರೂ ಅಷ್ಟಬಂಧನಗಳೆಂಬವು ಇವೆಯಲ್ಲ?”
ಶ್ರೀರಾಮಕೃಷ್ಣರು: “ಅವು ಅಷ್ಟಬಂಧನಗಳಲ್ಲ, ಅಷ್ಟಪಾಶಗಳು. ಅವು ಇದ್ದರೆ ತಾನೆ ಏನು? ಭಗವಂತನ ಕೃಪೆಯೊಂದು ದೊರೆಯಿತು ಎಂದರೆ, ಒಂದು ಮುಹೂರ್ತದೊಳಗೇ ಈ ಅಷ್ಟಪಾಶಗಳೂ ನಮ್ಮನ್ನು ಬಿಟ್ಟು ತೊಲಗಬಹುದು. ಇದು ಹೇಗೆ ಗೊತ್ತೆ? ಒಂದು ಪಕ್ಷ ಸಾವಿರಾರು ವರ್ಷಗಳಿಂದ ಒಂದು ಕೊಠಡಿ ಕತ್ತಲೆಯಾಗಿಯೇ ಇತ್ತು ಅಂತ ಇಟ್ಟುಕೊ. ಅಲ್ಲಿಗೆ ಬೆಳಕು ತಂದೊಡನೆಯೇ ಕತ್ತಲೆ ಪರಾರಿಯಾಗಿ ಬಿಡುತ್ತದೆ; ಕಿಂಚಿತ್ ಕಿಂಚಿತ್ತಾಗೇನೂ ಅಲ್ಲ. ಐಂದ್ರಜಾಲಿಕನ ಆಟವನ್ನು ನೀನು ನೋಡಿಲ್ಲವೆ? ಬಹಳ ಗಂಟು ಹಾಕಿರುವ ಒಂದು ಹಗ್ಗದ ತುದಿಯನ್ನು ಒಂದು ಆಸರೆಗೆ ಕಟ್ಟಿ, ಅದರ ಇನ್ನೊಂದು ತುದಿಯನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳುತ್ತಾನೆ. ಬಳಿಕ ಒಂದೆರಡು ಸಲ ಹಗ್ಗವನ್ನು ಅಲುಗಾಡಿಸುತ್ತಾನೆ. ಒಡನೇ ಗಂಟುಗಳೆಲ್ಲಾ ಬಿಚ್ಚಿಕೊಂಡುಬಿಡುತ್ತವೆ. ಆದರೆ ಬೇರೆ ಯಾರೇ ಆಗಲಿ, ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ಬಿಚ್ಚಲಾಗುವುದಿಲ್ಲ. ಗುರುವಿನ ಕೃಪಾಬಲದಿಂದ ಅಜ್ಞಾನದ ಎಲ್ಲಾ ಗಂಟುಗಳು ಒಂದು ಮುಹೂರ್ತದಲ್ಲೇ ಬಿಚ್ಚಿಹೋಗಿಬಿಡುತ್ತವೆ.”
“ಒಳ್ಳೇದು, ಕೇಶವಸೇನ ಇತ್ತೀಚೆಗೆ ಇಷ್ಟೊಂದು ಬದಲಾಯಿಸಿಬಿಟ್ಟನಲ್ಲ ಏಕೆ? ಇಲ್ಲಿಗೆ ಅಡಿಗಡಿಗೆ ಬರುತ್ತಲೇ ಇದ್ದ. ಇಲ್ಲಿಗೆ ಬಂದ ಮೇಲೆ ಹೇಗೆ ನಮಸ್ಕಾರ ಮಾಡಬೇಕು ಎಂಬುದನ್ನು ಕಲಿತುಕೊಂಡ. ಒಂದು ದಿನ ನಾನು ಆತನಿಗೆ ತಿಳಿಸಿದೆ, ಆತ ಮಾಡುತ್ತಿದ್ದ ಹಾಗೆ ಸಾಧುಗಳಿಗೆ ನಮಸ್ಕಾರ ಮಾಡಕೂಡದು ಎಂಬುದಾಗಿ. ಹರೀಶ ಸರಿಯಾಗಿ ಹೇಳು ತ್ತಿದ್ದಾನೆ: ‘ಎಲ್ಲಾ ಚೆಕ್ಕುಗಳಿಗೂ ಇಲ್ಲಿಯ ಒಪ್ಪಿಗೆ ಮುದ್ರೆ ಬೀಳಬೇಕು. ಆಗ ಮಾತ್ರವೇ ಬ್ಯಾಂಕಿನಲ್ಲಿ ನಗದು ಹಣ ದೊರೆಯುತ್ತದೆ?” (ನಗು.)
ಮಾಸ್ಟರ್ ಆಶ್ಚರ್ಯಚಕಿತನಾಗಿ ಈ ಮಾತುಗಳನ್ನೆಲ್ಲಾ ಕೇಳುತ್ತಿದ್ದಾನೆ. ಆತನಿಗೆ ಅನ್ನಿಸಲಾರಂಭಿಸಿತು, ಸಚ್ಚಿದಾನಂದನೇ ಗುರುವಿನ ರೂಪದಲ್ಲಿ ಚೆಕ್ಕನ್ನು ಸೈನ್ಮಾಡುತ್ತಾನೆ ಎಂಬುದಾಗಿ.
ಶ್ರೀರಾಮಕೃಷ್ಣರು: “ವಾದದಲ್ಲಿ ತೊಡಗಬೇಡ. ಭಗವಂತನನ್ನು ಅರಿತುಕೊಳ್ಳಲು ಯಾರಿಗೆ ತಾನೆ ಸಾಧ್ಯ? ತೋತಾಪುರಿ ಹೇಳುತ್ತಿದ್ದುದನ್ನು ನನ್ನ ಮನಸ್ಸಿನಲ್ಲಿ ಚಿರಮುದ್ರೆಯನ್ನಾಗಿ ಮಾಡಿಕೊಂಡುಬಿಟ್ಟಿದ್ದೇನೆ. ಆತ ಹೇಳುತ್ತಿದ್ದ, ಈ ಬ್ರಹ್ಮಾಂಡ ಆತನ ಕೇವಲ ಒಂದು ಅಂಶ ಮಾತ್ರ ಅಂತ.
“ಹಾಜರಾನದು ಲೆಕ್ಕಾಚಾರ ಬುದ್ಧಿ. ಆತ ಲೆಕ್ಕ ಹಾಕುತ್ತಾನೆ: ‘ಭಗವಂತನ ಇಷ್ಟು ಭಾಗ ಈ ಜಗದ್ರೂಪವನ್ನು ತಾಳಿದೆ. ಇನ್ನು ಉಳಿದುದು ಇಷ್ಟು.’ ಆತ ಲೆಕ್ಕ ಹಾಕುವುದನ್ನು ನೋಡಿದಾಗ ನನ್ನ ತಲೆ ನೋಯುತ್ತದೆ. ನನಗೆ ಗೊತ್ತಿದೆ, ನನಗೆ ಏನೂ ಗೊತ್ತಿಲ್ಲ ಎಂಬುದು. ಕೆಲವು ವೇಳೆ ಭಗವಂತನ ಸಂಬಂಧವಾಗಿ ಭಾವಿಸುತ್ತೇನೆ, ಆತ ಒಳ್ಳೆಯವ, ಇನ್ನು ಕೆಲವು ವೇಳೆ ಕೆಟ್ಟವ ಅಂತ. ಆತನ ಸಂಬಂಧವಾಗಿ ನಾನು ಏನನ್ನು ತಾನೆ ಅರಿತುಕೊಳ್ಳಬಲ್ಲೆ?”
ಮಾಸ್ಟರ್: “ಹೌದು, ಅದು ನಿಜ. ಆತನನ್ನು ಯಾರು ತಾನೆ ಅರಿತುಕೊಳ್ಳಬಲ್ಲರು? ಪ್ರತಿಯೊಬ್ಬನೂ ತನ್ನ ಬುದ್ಧಿಶಕ್ತಿಗನುಸಾರ ಭಾವಿಸುತ್ತಾನೆ, ಭಗವಂತನ ಸಂಬಂಧವಾಗಿ ತಾನು ಎಲ್ಲವನ್ನೂ ಅರಿತುಕೊಂಡುಬಿಟ್ಟಿದ್ದೇನೆ ಎಂಬುದಾಗಿ. ನೀವು ಹೇಳುತ್ತೀರಲ್ಲ, ಒಂದು ಇರುವೆ ಸಕ್ಕರೆಯ ಗುಡ್ಡದ ಹತ್ತಿರ ಹೋಗಿ ಅದರ ಒಂದು ಕಣ ತಿನ್ನುವುದರಲ್ಲೇ ಅದರ ಹೊಟ್ಟೆ ತುಂಬಿಹೋದರೂ ಭಾವಿಸುತ್ತದೆ, ಮುಂದಿನ ಸಲ ಬಂದು ಈ ಇಡೀ ಗುಡ್ಡವನ್ನೇ ತನ್ನ ಗೂಡಿಗೆ ಸಾಗಿಸಿಬಿಡುತ್ತೇನೆ ಎಂಬುದಾಗಿ. ಇದೂ ಹಾಗೆ.”
ಶ್ರೀರಾಮಕೃಷ್ಣರು: “ಭಗವಂತನನ್ನು ಯಾರು ತಾನೆ ಅರಿತುಕೊಳ್ಳಬಲ್ಲರು? ನಾನು ಆ ಪ್ರಯತ್ನವನ್ನೇ ಮಾಡುವುದಿಲ್ಲ. ನಾನು ಆತನನ್ನು ಕೇವಲ ‘ತಾಯಿ’ ಅಂತ ಮಾತ್ರ ಕೂಗುತ್ತೇನೆ. ತಾಯಿ ತನ್ನ ಇಚ್ಛೆಯಿದ್ದಂತೆ ಮಾಡಲಿ. ಆಕೆಯ ಇಚ್ಛೆಯಿದ್ದರೆ ತಾನೇ ತೋರಿಸಿ ಕೊಡುತ್ತಾಳೆ-ತಾನು ಏನು ಎಂಬುದನ್ನು. ಇಲ್ಲದಿದ್ದರೆ ಇಲ್ಲ. ನನ್ನದು ಬೆಕ್ಕಿನ ಮರಿಯ ಸ್ವಭಾವ. ಕೇವಲ ಅದು, ‘ಮಿಯಾವ್!’ ‘ಮಿಯಾವ್!’ ಅಂತ ಕೂಗುತ್ತದೆ. ಉಳಿದ ತನ್ನ ಯೋಗಕ್ಷೇಮವನ್ನೆಲ್ಲಾ ತಾಯಿಗೆ ಬಿಟ್ಟುಬಿಟ್ಟಿರುತ್ತದೆ. ತಾಯಿಬೆಕ್ಕು ಕೆಲವು ವೇಳೆ ಮರಿಯನ್ನು ಅಡಿಗೆಮನೆಯಲ್ಲಿ, ಇನ್ನು ಕೆಲವು ವೇಲೆ ಯಜಮಾನನ ಹಾಸಿಗೆ ಮೇಲೆ ಇಡುತ್ತದೆ. ಚಿಕ್ಕ ಮಗುವಿಗೆ ತಾಯಿ ಮಾತ್ರ ಬೇಕು. ತನ್ನ ತಾಯಿಗೆ ಎಷ್ಟು ಐಶ್ವರ್ಯವಿದೆ ಎಂಬುದು ಅದಕ್ಕೆ ಗೊತ್ತಿರುವುದಿಲ್ಲ; ತಿಳಿಯಲಿಚ್ಛಿಸುವುದೂ ಇಲ್ಲ ಅದಕ್ಕೆ ಕೇವಲ ಗೊತ್ತಿದೆ: ‘ನನ್ನ ತಾಯಿ ಇದ್ದಾಳೆ; ಇನ್ನು ನನಗೇನು ಯೋಚನೆ?’ ದಾಸಿಯ ಮಗುವಿಗೂ ಗೊತ್ತಿದೆ, ತನಗೊಬ್ಬಳು ತಾಯಿ ಇದ್ದಾಳೆ ಅಂತ, ಅದಕ್ಕೂ ಯಜಮಾನನ ಮಗುವಿಗೂ ಜಗಳ ಬಂತು ಎಂದರೆ, ಆಗ ಅದು ಹೇಳುತ್ತದೆ, ‘ನನ್ನ ತಾಯಿ ಇದ್ದಾಳೆ, ನೋಡಿಕೊ. ಹೋಗಿ ಹೇಳಿ ಬಿಡುತ್ತೇನೆ.’ ನನ್ನದು ಸಂತಾನ ಭಾವ.
ಇದ್ದಕ್ಕಿದ್ದ ಹಾಗೆ ಪರಮಹಂಸರು ತಮ್ಮನ್ನು ತೋರಿಸಿ, ತಮ್ಮ ಎದೆಯ ಮೇಲೆ ಕೈಯಿಟ್ಟು ಮಾಸ್ಟರಿಗೆ ಹೇಳುತ್ತಿದ್ದಾರೆ: “ಒಳ್ಳೇದು, ಇದರೊಳಗೆ ಏನೋ ಇರಬೇಕು. ನೀನು ಏನು ಹೇಳುತ್ತೀಯೆ?”
ಮಾಸ್ಟರ್ ಆಶ್ಚರ್ಯಚಕಿತನಾಗಿ ಪರಮಹಂಸರ ಕಡೆ ನೋಡುತ್ತಿದ್ದಾನೆ. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ಸಾಕ್ಷಾತ್ ಭಗವತಿಯೇ ಪರಮಹಂಸರ ಹೃದಯಮಧ್ಯದಲ್ಲಿ ಇದ್ದಾಳೇನು? ಜೀವರ ಮಂಗಳಕ್ಕಾಗಿ ಭಗವತಿಯೇ ಈ ದೇಹಧಾರಣೆ ಮಾಡಿಕೊಂಡು ಬಂದಿದ್ದಾಳೇನು?”
ಈಗ ಶ್ರೀರಾಮಕೃಷ್ಣರು ಭಗವತಿಗೆ ಪ್ರಾರ್ಥನೆಮಾಡುತ್ತಿದ್ದಾರೆ: “ಹೇ ತಾಯೆ! ಹೇ ಓಂಕಾರ ಸ್ವರೂಪಿಣಿಯೆ! ತಾಯೆ, ನಿನ್ನ ವಿಷಯವಾಗಿ ಜನ ಎಷ್ಟೊಂದು ಹೇಳುತ್ತಾರೆ ಏನುಕತೆ! ಆದರೆ ನನಗೇನೂ ಅರ್ಥವಾಗುತ್ತಿಲ್ಲವಲ್ಲ. ನನಗೇನೂ ಗೊತ್ತಿಲ್ಲ ತಾಯೆ. ನಾನು ನಿನ್ನಲ್ಲಿ ಶರಣಾಗತ, ಶರಣಾಗತ. ಕೇವಲ ಇದಿಷ್ಟು, ಎಂದರೆ ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿಯುಂಟಾಗುವಂತೆ ಕರುಣಿಸಿಬಿಡು ತಾಯೆ. ತಾಯೆ, ನಿನ್ನ ಭುವನಮೋಹಿನೀ ಮಾಯೆಯಿಂದ ನನ್ನನ್ನು ಭ್ರಾಂತಿಗೊಳಿಸಬೇಡ. ನಾನು ನಿನ್ನಲ್ಲಿ ಶರಣಾಗತ, ಶರಣಾಗತ.”
ದೇವಾಲಯಗಳಲ್ಲಿ ಸಾಯಂ ಮಂಗಳಾರತಿ ಮುಗಿಯಿತು. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ, ಮಾಸ್ಟರ್ ನೆಲದ ಮೇಲೆ ಕುಳಿತಿದ್ದಾನೆ.
ಮಾಸ್ಟರ್ ಈಗ ಸುಮಾರು ಎರಡು ವರ್ಷಗಳಿಂದ ಪರಮಹಂಸರ ಬಳಿಗೆ ಬಂದು ಹೋಗುತ್ತಾ ಅವರ ಕೃಪಾಕಟಾಕ್ಷವನ್ನು ಪಡೆದುಕೊಂಡಿದ್ದಾನೆ. ಪರಮಹಂಸರು ಆತನಿಗೂ ಮತ್ತು ಉಳಿದ ಭಕ್ತರಿಗೂ ತಿಳಿಸಿದ್ದಾರೆ: ಭಗವಂತನು ಸಾಕಾರನೂ ಹೌದು, ನಿರಾಕಾರನೂ ಹೌದು; ಭಕ್ತರಿಗಾಗಿ ಆತ ರೂಪಧಾರಣೆ ಮಾಡುತ್ತಾನೆ ಎಂಬುದಾಗಿ. ನಿರಾಕಾರವಾದಿಗಳಿಗೆ ಪರಮಹಂಸರು ಹೇಳಿದ್ದಾರೆ: “ನಿಮಗೆ ಯಾವುದರಲ್ಲಿ ವಿಶ್ವಾಸವೋ ಅದನ್ನು ಬಿಗಿಯಾಗಿ ಹಿಡಿದುಕೊಳ್ಳಿ, ಆದರೆ ಭಗವಂತನಿಗೆ ಎಲ್ಲವೂ ಸಾಧ್ಯ ಎಂಬುದನ್ನು ಮಾತ್ರ ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊಂಡಿರಿ. ಆತ ಸಾಕಾರನೂ ಹೌದು, ನಿರಾಕಾರನೂ ಹೌದು. ಆತ ಇನ್ನೂ ಏನೇನೋ ಆಗಲೂ ಬಲ್ಲ.”
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೀನು ಒಂದನ್ನು, ಅಂದರೆ ನಿರಾಕಾರವನ್ನು ಹಿಡಿದುಕೊಂಡಿದ್ದೀಯೆ, ಅಲ್ಲವೇ?”
ಮಾಸ್ಟರ್: “ಹೌದು, ಆದರೆ ನೀವು ಹೇಳುತ್ತೀರಲ್ಲ, ಭಗವಂತನಿಗೆ ಎಲ್ಲವೂ ಸಂಭವ ಅಂತ. ಸಾಕಾರವೂ ಸಂಭವ.”
ಶ್ರೀರಾಮಕೃಷ್ಣರು: “ಭೇಷ್, ಜ್ಞಾಪಕದಲ್ಲಿಟ್ಟುಕೊ, ಆತ ಚೈತನ್ಯರೂಪದಿಂದ ಇಡೀ ಚರಾಚರ ವಿಶ್ವವನ್ನೆಲ್ಲಾ ವ್ಯಾಪಿಸಿಕೊಂಡಿದ್ದಾನೆ ಎಂಬುದನ್ನು.”
ಮಾಸ್ಟರ್: “ನಾನು ಭಾವಿಸುತ್ತಿದ್ದೇನೆ. ಭಗವಂತ ಚೇತನ ವಸ್ತುಗಳ ಚೈತನ್ಯ ಎಂಬುದಾಗಿ.”
ಶ್ರೀರಾಮಕೃಷ್ಣರು: “ಈಗ ಈ ಭಾವವನ್ನೇ ಹಿಡಿದುಕೊಂಡಿರು. ಬಲಾತ್ಕರಿಸಿ ಭಾವ ಬದಲಾವಣೆ ಮಾಡುವುದು ಬೇಡ. ಕ್ರಮೇಣ ನಿನ್ನ ಅನುಭವಕ್ಕೆ ಬರುತ್ತದೆ, ಆ ಚೈತನ್ಯ ಭಗವಂತನ ಚೈತನ್ಯವೇ ಅಂತ. ಕೇವಲ ಆತ ಮಾತ್ರವೇ ಚೈತನ್ಯಸ್ವರೂಪ.
“ಒಳ್ಳೇದು, ನಿನಗೆ ಹಣ ಐಶ್ವರ್ಯಗಳ ಮೇಲೆ ಆಸಕ್ತಿ ಇದೆಯೇ?”
ಮಾಸ್ಟರ್: “ಇಲ್ಲ. ನಿಶ್ಚಿಂತೆಯಿಂದ ಇರುವುದಕ್ಕೆ ಮಾತ್ರ-ನಿಶ್ಚಿಂತೆಯಿಂದ ಇದ್ದು ಭಗವಂತನ ಧ್ಯಾನ ಮಾಡುವುದಕ್ಕೆ ಮಾತ್ರ.”
ಶ್ರೀರಾಮಕೃಷ್ಣರು: “ಅದು ಸ್ವಾಭಾವಿಕವಾದ್ದು.”
ಮಾಸ್ಟರ್: “ಅದು ಲೋಭವೇನು? ಅಲ್ಲ ಅಂತ ಕಾಣುತ್ತದೆ.”
ಶ್ರೀರಾಮಕೃಷ್ಣರು: “ನೀನು ಹೇಳುವುದು ಸರಿ. ಇಲ್ಲದಿದ್ದರೆ ನಿನ್ನ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ನಿನಗೆ ಅಕರ್ತ ಎಂಬ ಜ್ಞಾನವುಂಟಾಗಿಬಿಟ್ಟರೆ, ಮಕ್ಕಳ ಗತಿಯೇನಾಗಬೇಕು?”
ಮಾಸ್ಟರ್: “ಕೇಳಿದ್ದೇನೆ, ಕರ್ತವ್ಯಜ್ಞಾನ ಇರುವವರೆಗೆ ಬ್ರಹ್ಮಜ್ಞಾನ ದೊರೆಯುವುದಿಲ್ಲ ಎಂಬುದಾಗಿ, ಕರ್ತವ್ಯ ಎಂಬುದು ಉರಿಬಿಸಿಲು ಇದ್ದ ಹಾಗೆ.”
ಶ್ರೀರಾಮಕೃಷ್ಣರು: “ನಿನಗೆ ಈಗಿರುವ ಭಾವವೇ ಇರಲಿ. ಮುಂದೆ ಯಾವಾಗ ಕರ್ತವ್ಯ ಬೋಧೆ ತಾನಾಗಿಯೇ ಹೊರಟುಹೋಗುವುದೋ ಅದು ಬೇರೆ ವಿಷಯ.”
ಇಬ್ಬರೂ ಸ್ವಲ್ಪ ಹೊತ್ತು ಹಾಗೆಯೇ ಕುಳಿತುಕೊಂಡರು.
ಮಾಸ್ಟರ್: “ಕಿಂಚಿತ್ ಜ್ಞಾನಾರ್ಜನೆ ಮಾಡಿ ಸಂಸಾರಕ್ಕೆ ಕಾಲಿಡುವುದು! ಇದು, ಕಾಲರಾ ರೋಗಿ ಪ್ರಜ್ಞೆಯೊಡನೆ ಸಾಯುವ ಹಾಗೆ!”
ಶ್ರೀರಾಮಕೃಷ್ಣರು: “ರಾಮ! ರಾಮ!”
ಮಾಸ್ಟರ್ ಮನಸ್ಸಿನಲ್ಲಿದ್ದ ಭಾವನೆಯೇನೆಂದರೆ, ಕಾಲರಾ ರೋಗಿಗೆ ಕೊನೆಯವರೆಗೂ ಪ್ರಜ್ಞೆ ಇರುವುದರಿಂದ, ಆತ ಬಹಳವಾಗಿ ದುಃಖ ಅನುಭವಿಸಿ ಸಾಯಬೇಕಾಗಿರುವ ಹಾಗೆ ಈ ಜಗತ್ತು ಮಿಥ್ಯೆ ಎಂಬುದಾಗಿ ಕಿಂಚಿತ್ ಜ್ಞಾನವನ್ನು ಸಂಪಾದಿಸಿಕೊಂಡಿರುವ ಜ್ಞಾನಿಯೂ ಈ ಸಂಸಾರವನ್ನು ನಡೆಸಿಕೊಂಡು ಹೋಗುವಾಗ ಬಹಳವಾಗಿ ಸಂಕಟಕ್ಕೊಳಗಾಗುತ್ತಾನೆ.
ಮಾಸ್ಟರ್: “ವಿಷಮಶೀತಜ್ವರದ ರೋಗಿಗೆ ಸನ್ನಿ ಮುಚ್ಚಿಕೊಂಡಿರುವುದರಿಂದ ಆತನಿಗೆ ಮರಣಸಂಕಟ ಆಗದು. ಪೂರ್ಣ ಅಜ್ಞಾನಿಗಳು ಅವರ ಹಾಗೇ.”
ಶ್ರೀರಾಮಕೃಷ್ಣರು: “ಹಣದಿಂದ ಏನು ದೊರೆಯುತ್ತದೆ ಹೇಳು? ಜಯಗೋಪಾಲ ಸೇನ ಅಂಥ ಧನಿಕ; ಆದರೆ ಆತನ ಸಂಕಟ, ತನ್ನ ಮಕ್ಕಳು ಹೇಳಿದ ಹಾಗೆ ಕೇಳುವುದಿಲ್ಲವಲ್ಲ, ಏನು ಮಾಡುವುದು ಅಂತ.”
ಮಾಸ್ಟರ್: “ಏನು, ಈ ಸಂಸಾರದಲ್ಲಿ ದಾರಿದ್ರ್ಯ ದುಃಖವೊಂದು ಮಾತ್ರವೇ ಇದೆಯೇ? ಜೊತೆಗೆ ಆರು ರಿಪುಗಳೂ ಇವೆ. ಬಳಿಕ ರೋಗ, ಶೋಕ.”
ಶ್ರೀರಾಮಕೃಷ್ಣರು: “ಇವೂ ಅಲ್ಲದೆ, ಮಾನ, ಸಂಭ್ರಮ, ಲೋಕಮಾನ್ಯನಾಗಲು ಇಚ್ಛೆ ಕೂಡ. ಒಳ್ಳೇದು ನನ್ನ ಭಾವ ಎಂಥದ್ದು?”
ಮಾಸ್ಟರ್: “ನಿದ್ದೆಯಿಂದ ಎದ್ದರೆ ಮನುಷ್ಯನಿಗೆ ಏನಾಗುತ್ತೋ ಹಾಗೆ. ಆತನಿಗೆ ತಾನು ಯಾರು ಎಂಬ ಅರಿವು ಆಗುತ್ತದೆ. ನೀವು ಯಾವಾಗಲೂ ಭಗವಂತನೊಡನೆ ಐಕ್ಯವಾಗಿದ್ದೀರಿ.”
ಶ್ರೀರಾಮಕೃಷ್ಣರು: “ನೀನು ಎಂದಾದರೂ ನನ್ನನ್ನು ಸ್ವಪ್ನದಲ್ಲಿ ಕಂಡಿದ್ದೀಯೇನು ?”
ಮಾಸ್ಟರು: “ಹೌದು, ಅನೇಕ ವೇಳೆ.”
ಶ್ರೀರಾಮಕೃಷ್ಣರು: “ಯಾವ ರೀತಿಯಾಗಿ? ಏನಾದರೂ ಉಪದೇಶ ಕೊಡುವ ಹಾಗೆ?”
ಮಾಸ್ಟರ್ ಸುಮ್ಮನೆ ಇದ್ದಾನೆ.
ಶ್ರೀರಾಮಕೃಷ್ಣರು: “ನಾನೇನಾದರೂ ನಿನಗೆ ದೀಕ್ಷೆ ಕೊಡುವ ಹಾಗೆ ನೀನು ಸ್ವಪ್ನ ಕಂಡಿದ್ದರೆ, ಹಾಗೆ ಮಾಡಿದವನು ಸಚ್ಚಿದಾನಂದನೇ ಎಂಬುದನ್ನು ನೀನು ತಿಳಿದುಕೊ.”
ಬಳಿಕ ಮಾಸ್ಟರ್ ತನ್ನ ಸ್ವಪ್ನಾನುಭವಗಳನ್ನೆಲ್ಲಾ ಪರಮಹಂಸರಿಗೆ ಹೇಳಲಾರಂಭಿಸಿದ. ಅವರು ಅದನ್ನು ಏಕಾಗ್ರಚಿತ್ತದಿಂದ ಕೇಳಲಾರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಇದು ಬಹಳ ಒಳ್ಳೆಯದು. ನೀನು ಇನ್ನು ವಿಚಾರಕ್ಕೆ ಮನಸ್ಸು ಕೊಡಬೇಡ. ನೀನು ಒಬ್ಬ ಶಾಕ್ತ.”
೧೦ನೆ ಅಕ್ಟೋಬರ್ ೧೮೮೩, ಆಶ್ವೀಜ ಶುಕ್ಲ ನವಮಿ, ಬುಧವಾರ
ಅಧರಸೇನ ಪರಮಹಂಸರನ್ನು ತನ್ನ ಮನೆಯ ದುರ್ಗಾಪೂಜೆಗೆ ಆಹ್ವಾನಿಸಿದ್ದ. ಇಂದು ದುರ್ಗಾಪೂಜೆಯ ಮೂರನೆ ದಿನ. ಪರಮಹಂಸರು ಅಧರಸೇನನ ಮನೆಗೆ ಬಂದಾಗ, ಅಧರಸೇನನ ಸ್ನೇಹಿತ ಸಾರದಾಬಾಬು, ಬಲರಾಮನ ತಂದೆ, ಅಧರಸೇನನ ಅಕ್ಕಪಕ್ಕದವರು ಮತ್ತು ಬಂಧುಬಾಂಧವರು ತಮಗಾಗಿ ಕಾದಿರುವುದು ಅವರ ಕಣ್ಣಿಗೆ ಬಿತ್ತು.
ಸಾಯಂ ಮಂಗಳಾರತಿ ನೋಡಲು ಪರಮಹಂಸರು ಪೂಜಾಗೃಹಕ್ಕೆ ಬಂದಿದ್ದಾರೆ. ಮಂಗಳಾರತಿ ಮುಗಿದನಂತರ ಪರಮಹಂಸರು ಭಾವಾವಿಷ್ಟರಾಗಿ ನಿಂತುಕೊಂಡೇ ಭಗವತಿಯ ಸಂಬಂಧವಾದ ಒಂದು ಸ್ತೋತ್ರವನ್ನು ಹೇಳಲಾರಂಭಿಸಿದ್ದಾರೆ:
ಮರಣಭಯ ವಿಹ್ವಲನು ನಾನಾದೆನೆಲೆ ತಾಯೆ,
ಪಾರುಗಾಣಿಸು ನನ್ನ ಭವತಾರಿಣಿ,
ನೀನು ಗಮನಿಸದಿರಲು ನಾಶವಾಗುವೆ ನಾನು,
ಕಾಪಾಡು, ಕಾಪಾಡು, ಭಯಹಾರಿಣಿ.
ಸಕಲಲೋಕದ ತಾಯಿ, ಸರ್ವಜನರಾಧಾರೆ
ಲೋಕಮೋಹಿನಿ ಮತ್ತೆ ಜಗತಜನನೀ;
ಅಲ್ಲಿ ಬೃಂದಾವನದಿ ರಾಧಾ ವಿನೋದಿನೀ
ಗೋಪಿಜನವಲ್ಲಭನ ಮನಮೋಹಿನೀ.
ರಾಸಲೀಲೆಯೊಳಿರುವ ಓ ರಾಸಸಂಗಿನೀ,
ನೀ ಗಿರಿಜೆ, ನೀ ಗೋಪಿ, ಗೋವಿಂದ ಮೋಹಿನೀ,
ಓ ಜಗನ್ಮಾತೆ ಗಂಗೆ ಪರಮಗತಿದಾಯಿನೀ-
ಓ ಸದಾನಂದ ಶಿವೆ, ಚಿರಂತನೇ.
ಸಗುಣ-ನಿರ್ಗುಣ ರೂಪೆ ಸರ್ವಸ್ವರೂಪಿಣೀ
ಶರ್ವಪ್ರಿಯೆ, ಘನಮಹಿಮೆ, ನಿನ್ನಮಿತ ಲೀಲೆಗಳ
ಯಾರು ಬಲ್ಲರು ಹೇಳು ಮೂಲೋಕದಿ?
ಪರಮಹಂಸರು ಈಗ ಅಧರಸೇನನ ಮನೆಯ ಎರಡನೆ ಅಂತಸ್ತಿನಲ್ಲಿರುವ ಬೈಠಕ್ ಖಾನೆಯಲ್ಲಿ ಕುಳಿತಿದ್ದಾರೆ, ಅಲ್ಲಿ ಅನೇಕ ಆಹ್ವಾನಿತ ಅತಿಥಿಗಳೂ ಕುಳಿತಿದ್ದಾರೆ. ಪರಮ ಹಂಸರು ಇನ್ನೂ ಭಾವಾವಿಷ್ಟರಾಗಿಯೇ ಆ ಅತಿಥಿಗಳನ್ನು ಸಂಬೋಧಿಸಿ ಹೇಳುತ್ತಿದ್ದಾರೆ: “ಮಹನೀಯರೇ, ನಾನು ಊಟಮಾಡಿದ್ದೇನೆ. ಈಗ ನೀವು ಹೋಗಿ ಊಟ ಮಾಡಿ.” ಅಧರಸೇನ ಅರ್ಪಿಸಿದ ನೈವೇದ್ಯವನ್ನು ಭಗವತಿ ಸ್ವೀಕರಿಸಿದ್ದಾಳೆ ಎಂಬುದಾಗಿ ಪರಮ ಹಂಸರು ಸೂಚಿಸಿದರೇನು? ಭಗವತಿಯೊಡನೆ ತಾದಾತ್ಮ್ಯವನ್ನು ಹೊಂದಿ ಹೇಳುತ್ತಿದ್ದಾರೇನು: “ನಾನು ಊಟ ಮಾಡಿದ್ದೇನೆ” ಅಂತ?
ಬಳಿಕ ಪರಮಹಂಸರು ಭಗವತಿಯನ್ನು ಸಂಬೋಧಿಸಿ ಕೇಳುತ್ತಿದ್ದಾರೆ: “ತಾಯೆ, ನಾನು ತಿನ್ನಲೆ? ಅಥವಾ ನೀನೆ ತಿನ್ನುತ್ತೀಯಾ? ತಾಯಿ, ಕಾರಣಾನಂದರೂಪಿಣಿ.” ಜಗನ್ಮಾತೆ ಮತ್ತು ತಾವು ಒಂದೇ ಎಂದು ಪರಮಹಂಸರು ವ್ಯಕ್ತಪಡಿಸಿದರೇನು? ಭಗವತಿಯೇ ಸಂತಾನ ರೂಪದಿಂದ ಲೋಕಶಿಕ್ಷಣಕ್ಕಾಗಿ ಅವತೀರ್ಣಳಾಗಿದ್ದಾಳೇನು? ಅದಕ್ಕಾಗಿಯೇ ಏನು ಪರಮಹಂಸರು ಹೇಳಿದುದು: “ನಾನು ಊಟ ಮಾಡಿದ್ದೇನೆ” ಎಂಬುದಾಗಿ?
ಪರಮಹಂಸರು ಭಾವಾವೇಶದಿಂದ ತಮ್ಮ ಶರೀರದಲ್ಲಿ ಷಟ್ಚಕ್ರಗಳನ್ನೂ ಮತ್ತು ಅವುಗಳ ಮಧ್ಯೆ ಭಗವತಿ ನೆಲಸಿರುವುದನ್ನೂ ದರ್ಶನ ಮಾಡುತ್ತಿದ್ದಾರೆ. ಆದ್ದರಿಂದ ಭಾವದಿಂದ ತುಂಬಿ ತುಳುಕಾಡುತ್ತ ಆ ದೃಶ್ಯದ ಸಂಬಂಧವಾಗಿ ಒಂದು ಹಾಡನ್ನು ಹಾಡುತ್ತಿದ್ದಾರೆ:
ಓ ಶರ್ವಪ್ರಿಯೆ ತಾಯಿ, ಸಕಲಭಯಹಾರಿಣಿಯೆ
ನಿನ್ನ ನಾಮವ ನಾನು ಕೇಳಿರುವೆನು-
ಮತ್ತೆ ಹಾಡುತ್ತಿದ್ದಾರೆ:
ತಾಯಿ ಶ್ರೀಕಾಳಿಯೇ ಲೀಲೆಯವಲೋಕನದಿ
ಸೋಜಿಗದ ಕಡಲೊಳಗೆ ಮನ ಮುಳುಗಿದೆ.
ಅವಳ ಶ್ರೀಶುಭನಾಮ ಮರಣಭಯವನು ಕೂಡ
ಹೊಡೆದಟ್ಟಿದೆ.
ಅವಳ ಶ್ರೀ ಪಾದವಿದೊ ಆ ಮಹಾಕಾಳನನೆ
ಮೆಟ್ಟುತ್ತಿದೆ!
ಅವಳ ತನುರುಚಿಯೇಕೆ ಕಾಳವಾಗಿದೆ ಹೇಳು?
ಎಲ್ಲ ಕಪ್ಪಿಗು ಮಿಗಿಲು ಕಪ್ಪಾದಳೇಕಿವಳು?
ಧ್ಯಾನಿಯೆದೆಯೊಳು ದಿವ್ಯ ಕಮಲವನ್ನರಳಿಸುತ
ಬೆಳಕನಿತ್ತವಳು!
ಅವಳ ರೂಪವು ಕಾಳಿ; ಅವಳ ಹೆಸರೂ ಕಾಳಿ
ಕಣ್ಣ ತುಂಬುವ ಕಪ್ಪು, ಕಾರಿರುಳ ಕಪ್ಪು!
ಇವಳ ಕಂಡಾ ಕಣ್ಗೆ ಬೇರಾವ ರೂಪವೂ
ಶೋಭಿಸದ ರೀತಿಯಲಿ ಇವಳು ಒಪ್ಪು.
ಅಚ್ಚರಿಯೊಳೆನ್ನುವನು ರಾಮಪ್ರಸಾದನಿದೊ;
ಯಾರ ರೂಪವ ನಾನು ಕಾಣದಿದ್ದರೂ ಕೂಡ
ಯಾರ ಶ್ರೀ ಶುಭನಾಮ ಮನದ ಸೆರೆಗೈಯುವುದೊ
ಅಂಥ ತಾಯಿಯು ಈಗ ಎಲ್ಲಿರುವಳೊ!
ಭಗವತಿಯಲ್ಲಿ ಶರಣಾಗತಿಯನ್ನು ಹೊಂದಿದುದೇ ಆದರೆ ಭಕ್ತರ ಸಕಲ ಭಯಗಳೂ ಒಮ್ಮೆಗೇ ಕಂಬಿಕೀಳುತ್ತದೆ. ಬಹುಶಃ ಇದಕ್ಕಾಗಿಯೇ ಏನು ಪರಮಹಂಸರು ಈ ಹಾಡು ಹಾಡಿದ್ದು?
ತಾಯ ಶ್ರೀಪಾದದಲಿ ಜೀವವಿರಿಸಿದ ನನಗೆ
ಮೃತ್ಯುಭಯವೇನು?…………….
ಸಾರದಾಬಾಬು ಪುತ್ರಶೋಕಾನ್ವಿತನಾಗಿದ್ದಾನೆ. ಅದಕ್ಕಾಗಿ ಅಧರಸೇನ ಆತನನ್ನು ದಕ್ಷಿಣೇಶ್ವರಕ್ಕೆ ಪರಮಹಂಸರ ದರ್ಶನಮಾಡಿಸಲು ಕೆಲವು ದಿನದ ಹಿಂದೆ ಕರೆದುಕೊಂಡು ಬಂದಿದ್ದ. ಆತ ಗೌರಾಂಗನ ಭಕ್ತ. ಆತನನ್ನು ನೋಡಿ ಪರಮಹಂಸರಿಗೆ ಈಗ ಗೌರಾಂಗನ ಉದ್ದೀಪನವಾಗಿಬಿಟ್ಟಿದೆ.
ಪರಮಹಂಸರು ಹಾಡುತ್ತಿದ್ದಾರೆ:
ಗೌರವರ್ಣವಾಯಿತೇಕೆ ಇಂದು ನನ್ನ ತನುರುಚಿ?
ಯುಗಯುಗಗಳು ಕಳೆಯಬೇಕು
ಮುಗಿಯಬೇಕು ದ್ವಾಪರ;
ಈ ಲೀಲೆಯು ತೀರಲಿಲ್ಲ
ಏನಚ್ಚರಿ ಈಗಾಗಲೆ ಗೌರವರ್ಣವಾಯಿತಲ್ಲ
ನನ್ನ ದೇಹ ಗೋಪುರ
ಸುತ್ತಮುತ್ತ ಗೌರವರ್ಣ
ಗೌರ ನವಿಲು ಕೋಕಿಲ!
ಗೌರವರ್ಣ ಭರಿತವಾಯ್ತು
ನನ್ನ ಕಣ್ಣಿನಂಗಳ
ಎತ್ತನೋಡಲತ್ತ ಗೌರ
ಈ ಪವಾಡ ಬಂಧುರ!
ಬಹುಶಃ ಹೀಗಿರಲೇಬೇಕು
ಪರಿವರ್ತನ ಕಾರಣ;
ಮಥುರೆಗಿಂದು ಬಂದಳಲ್ತೆ
ನನ್ನ ರಾಣಿ ರಾಧೆಯು?
ಭ್ರಮರದಂತೆ ಬಂದಳಿವಳು
ಬೆಳಗುಗಣ್ಣ ತೆರದಳಿವಳು
ಒಡನೆ ಗೌರವಾಯಿತೆನ್ನ
ಕೃಷ್ಣವರ್ಣ ಕಾಯವು!
ರಾಧೆಯನ್ನು ನೆನೆದು ನೆನೆದು
ನಾನೆ ರಾಧೆಯಾದೆನೊ!
ನವದ್ವೀಪವೊ ಮಥುರೆಯೋ
ನಾನೆಲ್ಲಿಹೆ ಕಾಣೆನೊ!
ಏಕಾಯಿತು ಪರಿವರ್ತನೆ
ತಿಳಿಯದೆ ಬೆರಗಾದೆನೊ,
ನಿತ್ಯಾನಂದನಾಗಿ ಇನ್ನೂ
ಬಲರಾಮನು ಜನಿಸಲಿಲ್ಲ.
ಶ್ರೀವಾಸನ ರೂಪದಲ್ಲಿ
ನಾರದರೂ ಕಾಣಲಿಲ್ಲ.
ಈ ಯಶೋದೆ ಶಚಿಯಾಗದೆ
ನಂದಗೋಪ ಜಗನ್ನಾಥ-
ನಾಗಿ ಇನ್ನು ಜನಿಸದೆ,
ನಾನೊಬ್ಬನೆ ಗೌರನಾಗಿ
ಮೊದಲು ಮೂಡಿ ಬಂದೆನೆ?
ಓ ಈಗ ಅರ್ಥವಾಯ್ತು
ಪರಿವರ್ತನ ಕಾರಣ;
ಮಧುರೆಗಿಂದು ಬಂದಳಲ್ತೆ
ನನ್ನ ರಾಣಿ ರಾಧೆಯು
ಒಡನೆ ಗೌರವಾಯಿತೆನ್ನ
ಕೃಷ್ಣವರ್ಣ ಕಾಯವು!
ಪರಮಹಂಸರು ಇನ್ನೂ ಗೌರಾಂಗಭಾವದಿಂದ ಆವಿಷ್ಟರಾಗಿಯೇ ಮತ್ತೆ ಹಾಡು ತ್ತಿದ್ದಾರೆ:
ನಿಜಕೂ ಭಾವದ ಸಮಾಧಿಗದ್ದುತ ಮೈಮರೆತಿರುವನು ಗೌರಾಂಗ,
ಆಳುವನು ನಗುವನು, ಹಾಡುತ ಕುಣಿವನು, ತುಂಬಿತುಳುಕಿರಲು ಆನಂದ.
ಸನಿಯದ ಕಾಡಾಗಿದೆ ಬೃಂದಾವನ, ಹರಿವ ಗಂಗೆಯೇ ಯಮುನೆ
ಎಂಬ ಭಾವದೊಳು ರೋದಿಸುತಿರುವನು ನೆನೆದು ನೆನೆದು ಶ್ರೀಕೃಷ್ಣನನೆ!
ಇಂತಿರುವೀ ಗೌರಾಂಗನ ಕಾಯವು, ಹೊರಗೆ ಗೌರವರ್ಣ
ಅಂತರಂಗವೋ ಕೃಷ್ಣಭಾವದಲಿ ತುಂಬಿ ಕೃಷ್ಣವರ್ಣ!
ಪರಮಹಂಸರು ಈಗ ಗೌರಾಂಗನ ಪ್ರೇಮದಿಂದ ಮೋಹಪರವಶಳಾಗಿರುವ ಭಕ್ತೆಯ ಭಾವವನ್ನು ಆರೋಪಿಸಿಕೊಂಡು ಹಾಡಲಾರಂಭಿಸಿದ್ದಾರೆ:
ಏಕೆ ನೆರೆಹೊರೆಯವರು ಈ ತೆರ
ಸಲ್ಲದಪವಾದವನು ಹಬ್ಬಿಸಿ
ನಾ ಕಳಂಕಿನಿ ಎಂಬರು?
ಯಾರಿಗೊರೆಯಲಿ, ಎಂತು ಒರೆಯಲಿ
ನನ್ನ ಒಳಗಿನ ನೋವನು?
ನಾನು ಹೇಳಿದೆನೆಂದರೂ,
ಅದನೆಂತು ತಿಳಿಯಲು ಬಲ್ಲರು?
ಒಮ್ಮೆ ನಾ ಶ್ರೀವಾಸಗೃಹದೊಳು
ಹರಿಯ ನಾಮವ ನುತಿಪ ಗೌರನ
ದಿವ್ಯವಾಣಿಯ ಕೇಳಿದೆ;
ದಿವ್ಯಭಾವದೊಳಿದ್ದ ಶ್ರೀಗೌ-
ರಾಂಗ ಹೊರಳಿರೆ ನೆಲದೊಳು
ಸನಿಯದಲಿ ನಿಂತಿದ್ದ ನಾನೂ
ದಿವ್ಯಭಾವಕೆ ಮುಳುಗಲು
ಸಹಚರ ಶ್ರೀವಾಸನೆನ್ನನು
ಮರಳಿ ಪ್ರಜ್ಞೆಗೆ ತಂದನು.
ಭಕ್ತವೃಂದದ ನಡುವೆ ಹಾಡುತ
ಹೊಲೆಯರನು ಎದೆಗಪ್ಪುತ,
ಒಂದು ದಿನವೀಪೇಟೆಬೀದಿಯೊ-
ಳಿರಲು ಶ್ರೀಗೌರಾಂಗನು
ನಾನು ಕೂಡ ಒಡನೆ ನಡೆದೆನು
ಅವನ ಚರಣವ ಕಂಡೆನು.
ಒಮ್ಮೆ ಗಂಗಾತೀರದೊಳು ಶ್ರೀ
ಗೌರಾಂಗನಿದ್ದನು ಸೂರ್ಯಚಂದ್ರರ
ಹೊಳಪ ಜರೆಯುವ ಪ್ರಭೆಯೊಳು,
ಕೊಡವ ತುಂಬಲು ಬಂದು ನಾನೂ
ಆ ಅಗೋ ಅಲ್ಲವನ ಕಂಡೆನು.
ಕೊಡವು ಜಾರಿತು ಹುಡಿಯೊಳು!
ನನ್ನ ನಾದಿನಿ ಇದನು ಕಂಡಳು,
ಅಂದಿನಿಂದಲೂ ಅಲ್ಲಸಲ್ಲದ
ಮಾತ ಹರಡುತಲಿರುವಳು.
ಬಲರಾಮನ ತಂದೆ ವೈಷ್ಣವ. ಬಹುಶಃ ಅದಕ್ಕಾಗಿಯೇ ಇರಬೇಕು ಈಗ ಪರಮ ಹಂಸರು ಗೋಪಿಯರ ದಿಗ್ಭ್ರಾಂತಪ್ರೇಮದ ಸಂಬಂಧವಾಗಿ ಹಾಡಲಾರಂಭಿಸಿರುವುದು:
ಇನ್ನೂ ಕಾಣೆನು ಕೃಷ್ಣನ, ನಾ-
ನಿನ್ನೂ ಕಾಣೆನು ಸಖಿಯೇ,
ಅವನಿಲ್ಲದೆ ಬರಿದಾಗಿದೆ ಮನೆಯೇ!
ನನ್ನ ತಲೆನವಿರು ಅವನಾಗಿದ್ದರೆ, ಸಖಿ
ಬಾಚುತಲಿದ್ದೆನು ಮೃದುವಾಗಿ
ಮೆಲ್ಲನೆ ಬಾಚುತ ಬಕುಲದ ಮಾಲೆಯ
ಮುಡಿಸುತಲಿದ್ದೆನು ಚೆಲುವಾಗಿ,
ಆ ಶ್ರೀಕೃಷ್ಣನು ಕೃಷ್ಣಕೇಶದಲಿ
ಬೆರೆಯುತಲಿದ್ದನು ಒಂದಾಗಿ!
ನನ್ನ ಮೂಗಿನಲಿ ನತ್ತಾಗಿದ್ದರೆ, ಸಖಿ
ನನ್ನಧರದ ಮಧು ಚುಂಬನದಿ
ನಲಿಯುತಲಿದ್ದನು………, ಬರಿ ಕನಸಿದು ಸಖಿ,
ಆ ಶ್ರೀಕೃಷ್ಣನು ಈ ನಿರ್ಭಾಗ್ಯಳ
ನತ್ತಾಗಿರುವನೆ ಮೂಗಿನಲಿ?
ನನ್ನೀ ತೋಳಿನ ತೋಡವಾಗಿದ್ದರೆ, ಸಖಿ
ತೋಳನು ತಿರುಹುತ ಹೆಮ್ಮೆಯಲಿ
ರಾಜವೀಧಿಯೊಳು ನಡೆಯುತಲಿದ್ದೆನು
ಝಣಕು ಝಣಕು ಝಣ ನಾದದಲಿ!
ಬಲರಾಮನ ತಂದೆಗೆ ಒರಿಸ್ಸಾದಲ್ಲಿ ಅನೇಕ ಕಡೆ ಜಮೀನು ಇವೆ. ಆತ ನಿಷ್ಠಾವಂತ ವೈಷ್ಣವ. ಅನೇಕ ತೀರ್ಥಸ್ಥಾನಗಳಲ್ಲಿ ದೇವಾಲಯ ಕಟ್ಟಿಸಿ ಅತಿಥಿಶಾಲೆ ಏರ್ಪಡಿಸಿದ್ದಾನೆ. ತನ್ನ ಮುಪ್ಪಿನ ಜೀವನವನ್ನು ಈಗ ಬೃಂದಾವನದಲ್ಲಿ ಕಳೆಯುತ್ತಿದ್ದಾನೆ. ವೈಷ್ಣವರು ಸಾಮಾನ್ಯವಾಗಿ ಸ್ವಮತಭ್ರಾಂತರು. ಅವರಲ್ಲಿ ಅನೇಕ ಶಕ್ತರನ್ನು, ಶೈವರನ್ನು, ವೇದಾಂತವಾದಿಗಳನ್ನು ಸಹಾನುಭೂತಿಯಿಂದ ನೋಡುವುದಿಲ್ಲ. ಅವರಲ್ಲಿ ಕೆಲವರು ಇವರನ್ನೆಲ್ಲಾ ದ್ವೇಷಿಸುತ್ತಾರೆ. ಆದರೆ ಪರಮಹಂಸರು ಆ ವಿಧದ ಭಾವನೆಗೆ ಮನ್ನಣೆ ಕೊಡುತ್ತಿಲ್ಲ. ಅವರ ದೃಷ್ಟಿಯಿಂದ, ವ್ಯಾಕುಲತೆಯೊಂದಿದ್ದರೆ ಎಲ್ಲಾ ಮಾರ್ಗಗಳಿಂದಲೂ, ಎಲ್ಲಾ ಮತಗಳಿಂದಲೂ ಭಗವಂತನ ಸಾಕ್ಷಾತ್ಕಾರ ಪಡೆಯಬಹುದು. ಬಲರಾಮನ ತಂದೆಯ ದೃಷ್ಟಿಯನ್ನು ವಿಶಾಲಗೊಳಿಸಲು ಈಗ ಪರಮಹಂಸರು ಮಾತುಕತೆಯಾಡಲಾರೆನೆಂಭಿಸಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಒಮ್ಮೆ ಭಾವಿಸಿದೆ: ‘ನಾನೇಕೆ ಒಂದೇ ಸ್ವರ ಊದುವವನಾಗಬೇಕು?’ ಅದಕ್ಕಾಗಿ ಬೃಂದಾವನದಲ್ಲಿ ವೈಷ್ಣವ ಮಂತ್ರೋಪದೇಶ ಪಡೆದು ವೈಷ್ಣವ ಬೈರಾಗಿಯ ಉಡುಪನ್ನು ಧರಿಸಿದೆ. ಮೂರು ದಿನ ಆ ಭಾವದಲ್ಲಿ ಇದ್ದೆ. ಮತ್ತೆ ದಕ್ಷಿಣೇಶ್ವರದಲ್ಲಿ ರಾಮಮಂತ್ರೋಪದೇಶ ಪಡೆದೆ. ಹಣೆಗೆ ಉದ್ದುದ್ದವಾದ ನಾಮ ಬಳಿದುಕೊಳ್ಳುತ್ತಿದ್ದೆ. ಕೊರಳಿಗೆ ಹೀರದ ಹಾರ ಹಾಕಿಕೊಳ್ಳುತ್ತಿದ್ದೆ. ಕೆಲವು ದಿನಗಳಾದ ಮೇಲೆ ಅವನ್ನೆಲ್ಲಾ ವರ್ಜಿಸಿಬಿಟ್ಟೆ.
“ಒಬ್ಬನ ಹತ್ತಿರ ಒಂದು ಮರದ ತೊಟ್ಟಿ ಇತ್ತು. ತಮ್ಮ ಬಟ್ಟೆಗೆ ಬಣ್ಣ ಹಾಕಿಕೊಳ್ಳುವು ದಕ್ಕೆ ಜನ ಆತನ ಹತ್ತಿರಕ್ಕೆ ಬರುತ್ತಿದ್ದರು. ಆ ತೊಟ್ಟಿಯಲ್ಲಿ ಬಣ್ಣದ ಒಂದು ಮಿಶ್ರಣ ಇತ್ತು. ಯಾರ್ಯಾರಿಗೆ ಯಾವ್ಯಾವ ಬಣ್ಣದ ಬಟ್ಟೆ ಬೇಕೋ, ಆ ಮಿಶ್ರಣದಲ್ಲಿ ಅದ್ದಿದರೆ ಆಯಾಯಾ ಬಣ್ಣದ ಬಟ್ಟೆಯಾಗಿಬಿಡುತ್ತಿತ್ತು. ಒಬ್ಬ ಈ ಸೋಜಿಗವನ್ನು ನೋಡಿ ಆಶ್ಚರ್ಯದಿಂದ ಬಣ್ಣ ಹಾಕುವವನಿಗೆ ಹೇಳಿದ: ‘ನಿನ್ನ ತೊಟ್ಟಿಯಲ್ಲಿ ಇರುವ ಬಣ್ಣ ಹಾಕಿಕೊಡು ನನಗೆ.’
ಎಲ್ಲಾ ಧರ್ಮದ ಜನರೂ ತಮ್ಮ ಹತ್ತಿರ ಬರುತ್ತಾರೆ, ಮತ್ತು ತಮ್ಮ ತಮ್ಮ ಆದರ್ಶ ಗಳಿಗೆ ತಕ್ಕಂತೆ ಆತ್ಮಜಾಗೃತಿಯನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ಪರಮಹಂಸರು ಸೂಚಿಸಿದರೇನು?
ಶ್ರೀರಾಮಕೃಷ್ಣರು ಬಲರಾಮನ ತಂದೆಗೆ: “ನೀನು ಇನ್ನು ಮೇಲೆ ಪುಸ್ತಕಗಳನ್ನು ಓದುವ ಗೋಜಿಗೆ ಹೋಗಬೇಡ. ಆದರೆ ಚೈತನ್ಯಚರಿತಾಮೃತದಂಥ ಭಕ್ತಿಶಾಸ್ತ್ರಗಳನ್ನು ಬೇಕಾದರೆ ಓದು.”
“ಮುಖ್ಯವಾಗಿ ಮಾಡಬೇಕಾದ್ದು ಭಗವಂತನನ್ನು ಪ್ರೀತಿಸುವುದು, ಆತನ ಮಾಧುರ್ಯವನ್ನು ಸವಿಯುವುದು. ಆತ ರಸ, ಭಕ್ತ ಆಸ್ವಾದಕ. ಭಕ್ತ ಭಗವದಾನಂದವನ್ನು ಸವಿಯುತ್ತಾನೆ. ಆತ ತಾವರೆ ಹೂವು. ಭಕ್ತ ದುಂಬಿ. ಭಕ್ತ ತಾವರೆಹೂವಿನ ಮಧುವನ್ನು ಹೀರುತ್ತಾನೆ.”
“ಭಗವಂತನಿಲ್ಲದೆ ಭಕ್ತನಿರಲಾರದ ಹಾಗೆ, ಭಕ್ತನಿಲ್ಲದೆ ಭಗವಂತನೂ ಇರಲಾರ. ಆಗ ಭಕ್ತ ರಸವಾಗುತ್ತಾನೆ, ಭಗವಂತ ಆಸ್ವಾದಕನಾಗುತ್ತಾನೆ. ಭಕ್ತ ತಾವರೆ ಹೂವು ಆಗುತ್ತಾನೆ, ಭಗವಂತ ದುಂಬಿಯಾಗುತ್ತಾನೆ. ಭಗವಂತ ತನ್ನ ಮಾಧುರ್ಯವನ್ನು ತಾನೇ ಆಸ್ವಾದಿಸ ಲೋಸುಗ ಎರಡಾಗಿದ್ದಾನೆ. ಈ ಕಾರಣದಿಂದಲೇ ರಾಧಾಕೃಷ್ಣ ಲೀಲೆ.
“ಆಧ್ಯಾತ್ಮಿಕ ಜೀವನದ ಮೊದಮೊದಲಲ್ಲಿ ತೀರ್ಥಯಾತ್ರೆ, ಕೊರಳಿಗೆ ರುದ್ರಾಕ್ಷಿ ಅಥವಾ ತುಳಸಿಮಾಲೆ, ಮಡಿ-ಇವನ್ನೆಲ್ಲಾ ಆಚರಿಸಬೇಕು. ವಸ್ತುಲಾಭವಾಯಿತೆಂದರೆ, ಭಗವದ್ದರ್ಶನ ದೊರೆಯಿತು ಎಂದರೆ ಬಾಹ್ಯಾಡಂಬರ ಕ್ರಮೇಣ ಕಡಮೆಯಾಗಿಬಿಡುತ್ತದೆ. ಬಳಿಕ ಉಳಿದುಕೊಳ್ಳುವ ಕೆಲಸ ಆತನ ನಾಮಜಪ ಮಾಡುವುದು ಮತ್ತು ಸ್ಮರಣ ಮನನ.
“ಹದಿನಾರು ರೂಪಾಯಿಗಳ ಕಾಸು ದೊಡ್ಡ ಗುಡ್ಡೆಯೇ ಆಗಿಬಿಡುತ್ತದೆ. ಅವನ್ನೆಲ್ಲಾ ರೂಪಾಯಿಯಾಗಿ ಪರಿವರ್ತಿಸಿದರೆ, ಆಗ ಅವು ಒಂದು ದೊಡ್ಡ ಗುಡ್ಡೆಯಾಗಿ ಕಾಣುವುದಿಲ್ಲ. ಅವುಗಳಿಗೆ ಬದಲು ಒಂದು ಮೊಹರುಕೊಂಡುಕೊಂಡರೆ, ಆ ಗುಡ್ಡೆ ಎಂಥ ಪುಟ್ಟ ಅವಸ್ಥೆಗೆ ಬಂದುಬಿಡುತ್ತದೆ. ಆ ಮೊಹರಿಗೆ ಬದಲು ಒಂದು ವಜ್ರಕೊಂಡುಕೊಂಡರೆ, ಅದು ಜನರ ಕಣ್ಣಿಗೆ ಬೀಳುವುದೇ ಕಷ್ಟವಾಗುತ್ತದೆ.”
ಕೊರಳಿಗೆ ತುಳಸಿಮಾಲೆ, ಮುಂತಾದ ಆಚಾರಗಳನ್ನು ಆಚರಿಸದೆ ಇತ್ತು ಎಂದರೆ ವೈಷ್ಣವರು ಜನರನ್ನು ನಿಂದಿಸುತ್ತಾರೆ. ಈ ಕಾರಣದಿಂದಲೇ ಏನು ಪರಮಹಂಸರು ಹೇಳಿದುದು, ಭಗವಂತನ ದರ್ಶನ ದೊರೆತನಂತರ ಮಾಲೆ, ವೇಷಭೂಷಣ ಇವುಗಳ ಕಡೆ ಮನಸ್ಸು ಅಷ್ಟಾಗಿ ಹರಿದುಹೋಗುವುದಿಲ್ಲ; ಬಾಹ್ಯಾಚಾರಣೆ ಬಹಳವಾಗಿ ಕಡಮೆಯಾಗಿ ಬಿಡುತ್ತದೆ ಎಂದು?
ಶ್ರೀರಾಮಕೃಷ್ಣರು ಬಲರಾಮನ ತಂದೆಗೆ: “ಕರ್ತಾಭಜಾ ಸಂಪ್ರದಾಯದವರು ಭಕ್ತರನ್ನು ಪ್ರವರ್ತಕ, ಸಾಧಕ, ಸಿದ್ಧ, ಸಿದ್ಧರಸಿದ್ಧ ಎಂಬುದಾಗಿ ನಾಲ್ಕು ಪಂಗಡಗಳಾಗಿ ವಿಂಗಡಿಸುತ್ತಾರೆ. ಪ್ರವರ್ತಕ ಕೊರಳಿಗೆ ಮಾಲೆ ಹಾಕುತ್ತಾನೆ, ಹಣೆಗೆ ತಿಲಕವಿಡುತ್ತಾನೆ, ಉಳಿದ ಬಾಹ್ಯಾಚಾರಗಳನ್ನು ಆಚರಿಸುತ್ತಾನೆ, ಸಾಧಕನಲ್ಲಿ ಬಾಹ್ಯಾಡಂಬರ ಅಷ್ಟಾಗೇನೂ ಇರುವುದಿಲ್ಲ. ಉದಾಹರಣೆಗೆ ಬಾಉಲರು. ಸಿದ್ಧನಿಗೆ ಭಗವಂತನಿದ್ದಾನೆ ಎಂಬ ಪೂರ್ಣ ವಿಶ್ವಾಸವಿರುತ್ತದೆ. ಸಿದ್ಧರ ಸಿದ್ಧ, ಶ್ರೀಚೈತನ್ಯನ ಹಾಗೆ, ಭಗವಂತನ ದರ್ಶನ ಮಾಡುವುದೇ ಅಲ್ಲದೆ, ಆತನೊಡನೆ ಸರ್ವದಾ ಮಾತುಕತೆಯಾಡುತ್ತಾನೆ. ಸಿದ್ಧರ ಸಿದ್ಧನ ಅವಸ್ಥೆಯೇ ತುತ್ತತುದಿಯದು.”
“ಅನೇಕ ವಿಧದ ಸಾಧಕರಿದ್ದಾರೆ. ಸಾತ್ತ್ವಿಕ ಸಾಧಕರು ಸಾಧನೆ ಭಜನೆಯನ್ನು ಗೋಪ್ಯವಾಗಿ ಮಾಡುತ್ತಾರೆ. ಹೊರಗೆ ನೋಡುವುದಕ್ಕೇನೋ ಸಾಮಾನ್ಯರಂತೆ ಕಾಣುತ್ತಾರೆ. ಆದರೆ ಸೊಳ್ಳೆಪರದೆಯೊಳಗೆ ಧ್ಯಾನಮಾಡುತ್ತಾರೆ.
“ರಾಜಸಿಕ ಸಾಧಕರು ಬಾಹ್ಯಾಡಂಬರವನ್ನು ಪ್ರದರ್ಶಿಸುತ್ತಾರೆ. ಕೊರಳಿಗೆ ಮಾಲೆ, ಹಣೆಗೆ ತಿಲಕ, ಕಾಷಾಯದುಡಿಗೆ, ರೇಶ್ಮೆವಸ್ತ್ರ, ಚಿನ್ನದ ಮಣಿ ಹಾಕಿರುವ ಜಪಮಾಲೆ, ಇತ್ಯಾದಿ. ಇವರನ್ನು ಸೈನ್ಬೋರ್ಡ್ ಹಾಕಿ ಅಂಗಡಿ ತೆರೆದಿರುವ ವ್ಯಾಪಾರಿಗಳಿಗೆ ಹೋಲಿಸಬಹುದು.
“ಯಾವ ಧರ್ಮವೇ ಆಗಲಿ, ಯಾವ ಮತವೇ ಆಗಲಿ, ಎಲ್ಲವೂ ಆ ಒಬ್ಬ ಭಗವಂತನನ್ನೇ ಕರೆಯುವಂತೆ ತಮ್ಮ ತಮ್ಮ ಅನುಯಾಯಿಗಳನ್ನು ಪ್ರೇರೇಪಿಸುತ್ತವೆ. ಆದ್ದ ರಿಂದ ಯಾವ ಧರ್ಮವನ್ನೇ ಆಗಲಿ, ಯಾವ ಮತವನ್ನೇ ಆಗಲಿ, ಅಶ್ರದ್ಧೆಯಿಂದ ನೋಡ ಕೂಡದು, ದ್ವೇಷಿಸಕೂಡದು. ಆ ಒಬ್ಬ ಭಗವಂತನನ್ನೇ ವೇದಗಳು ಸಚ್ಚಿದಾನಂದ ಬ್ರಹ್ಮ ಅಂತಲೂ, ಭಾಗವತಾದಿ ಪುರಾಣಗಳು ಸಚ್ಚಿದಾನಂದ ಕೃಷ್ಣ ಅಂತಲೂ, ತಂತ್ರಶಾಸ್ತ್ರ ಶಿವ ಅಂತಲೂ ಕರೆಯುತ್ತವೆ. ನಿಜವಾಗಿ ಇರುವವನು ಕೇವಲ ಆ ಸಚ್ಚಿದಾನಂದನೊಬ್ಬನೇ.
“ವೈಷ್ಣವರಲ್ಲಿ ವಿವಿಧ ಪಂಗಡಗಳಿವೆ. ವೇದ ಯಾವುದನ್ನು ‘ಬ್ರಹ್ಮ’ ಅಂತ ಕರೆಯು ತ್ತದೆಯೊ, ಅದನ್ನೇ ಒಂದು ಪಂಗಡದ ವೈಷ್ಣವರು ‘ಆಲೇಕ ನಿರಂಜನ’ ಎಂಬುದಾಗಿ ಕರೆಯು ತ್ತಾರೆ. ‘ಆಲೇಕ’ ಅಂದರೆ ಯಾವುದನ್ನು ಗುರುತಿಸಿ ಹೇಳಲಾಗುವುದಿಲ್ಲವೋ, ಇಂದ್ರಿಯ ಗಳಿಂದ ಗ್ರಹಿಸಲಾಗುವುದಿಲ್ಲವೋ ಅದು. ಇವರು ಹೇಳುತ್ತಾರೆ, ರಾಧೆ ಮತ್ತು ಕೃಷ್ಣ ಆಲೇಕದ ಕೇವಲ ಎರಡು ಗುಳ್ಳೆ ಅಂತ.
ವೇದಾಂತದ ದೃಷ್ಟಿಯಿಂದ ಅವತಾರವೆಂಬುದು ಇಲ್ಲ. ವೇದಾಂತಿಗಳು ಹೇಳುತ್ತಾರೆ: ರಾಮ, ಕೃಷ್ಣ ಇವರು ಸಚ್ಚಿದಾನಂದ ಸಾಗರದ ಎರಡು ಅಲೆಗಳು ಮಾತ್ರ ಎಂದು.
“ನಿಜವಾಗಿ ಇರುವುದು ಒಂದೇ ಹೊರತು ಎರಡಲ್ಲ. ಮನುಷ್ಯ ಭಗವಂತನನ್ನು ಯಾವ ಹೆಸರಿನಿಂದ ಬೇಕಾದರೂ ಕರೆಯಲಿ, ಹೃತ್ಪೂರ್ವಕವಾಗಿ ಭಗವಂತನನ್ನು ಕರೆದುದೇ ಆದರೆ ಆತ ಭಗವಂತನ ಸಾಕ್ಷಾತ್ಕಾರವನ್ನು ಪಡೆದೇ ಪಡೆಯುತ್ತಾನೆ. ವ್ಯಾಕುಲತೆ ಇತ್ತು ಎಂದರೆ ಜಯ.”
ಪರಮಹಂಸರು ಭಾವದಿಂದ ತುಂಬಿತುಳುಕಾಡುತ್ತ ಈ ವಿಷಯಗಳನ್ನೆಲ್ಲ ಭಕ್ತರಿಗೆ ತಿಳಿಸಿದರು. ಈಗ ಸ್ವಲ್ಪ ಪ್ರಕೃತಿಸ್ಥರಾಗಿ ಬಲರಾಮನ ತಂದೆಯನ್ನು ಕೇಳುತ್ತಿದ್ದಾರೆ: “ನೀನು ಬಲರಾಮನ ತಂದೆಯಲ್ಲವೇ?”
ಎಲ್ಲರೂ ನಿಶ್ಶಬ್ದರಾಗಿ ಕುಳಿತಿದ್ದಾರೆ. ಬಲರಾಮನ ವೃದ್ಧ ತಂದೆ ಸದ್ದುಮಾಡದೆ ಜಪಮಾಲೆ ತಿರುಗಿಸುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರ್ ಮತ್ತು ಉಳಿದವರಿಗೆ: “ಇವರು ಅಷ್ಟೊಂದು ಜಪ ಮಾಡುತ್ತಾರೆ, ಅಷ್ಟೊಂದು ತೀರ್ಥಯಾತ್ರೆ ಮಾಡುತ್ತಾರೆ, ಆದರೂ ಹೀಗಿದ್ದಾರಲ್ಲ ಏಕೆ? ಇವರ ವರ್ಷ ಹದಿನೆಂಟು ತಿಂಗಳಿನದು ಅನ್ನುವ ಹಾಗಿದ್ದಾರಲ್ಲ!
“ಒಮ್ಮೆ ನಾನು ಹರೀಶನಿಗೆ ಹೇಳಿದೆ: ‘ಕಾಶಿಗೆ ಹೋಗುವುದರ ಆವಶ್ಯಕತೆಯೇನಿದೆ ಭಗವಂತನಿಗಾಗಿ ವ್ಯಾಕುಲತೆ ಇಲ್ಲದೆ ಇತ್ತು ಎಂದರೆ? ವ್ಯಾಕುಲತೆಯೊಂದು ಇತ್ತು ಎಂದರೆ, ಈ ಜಾಗವೇ ಕಾಶಿಯಾಗಿಬಿಡುತ್ತದೆ.’
“ಅವರು ಅಷ್ಟೊಂದು ಜಪ, ಅಷ್ಟೊಂದು ತೀರ್ಥಯಾತ್ರೆ ಮಾಡುತ್ತಾರೆ. ಆದರೆ ಅವರಿಗೆ ಯಾವ ಸಾಕ್ಷಾತ್ಕಾರವೂ ದೊರೆಯುತ್ತಿಲ್ಲವಲ್ಲ ಏಕೆ? ಅವರಲ್ಲಿ ವ್ಯಾಕುಲತೆ ಇಲ್ಲ. ವ್ಯಾಕುಲತೆಯಿಂದ ಆತನನ್ನು ಕರೆದದ್ದೇ ಆದರೆ ಖಂಡಿತ ಆತ ತನ್ನ ದರ್ಶನವನ್ನು ಕೊಟ್ಟೇ ಕೊಡುತ್ತಾನೆ.”
“ಬಯಲು ನಾಟಕದ ಆರಂಭದಲ್ಲಿ ರಂಗಭೂಮಿಯ ಮೇಲೆ ಏನೇನೋ ‘ಗುಜು, ಗುಜು, ಗುಜುಗುಜು’ ಅಂತ ಶಬ್ದ ನಡೆಯುತ್ತಿರುತ್ತದೆ. ಆಗ ಶ್ರೀಕೃಷ್ಣ ಅಲ್ಲಿ ಕಾಣಿಸಿಕೊಳ್ಳುವುದಿಲ್ಲ. ಯಾವಾಗ ನಾರದ ಋಷಿ ರಂಗಭೂಮಿಯನ್ನು ಪ್ರವೇಶಿಸಿ ವೀಣೆಯನ್ನು ನುಡಿಸುತ್ತ ನುಡಿಸುತ್ತ ವ್ಯಾಕುಲತೆಯಿಂದ ಕರೆಯುತ್ತಾನೋ: ‘ಪ್ರಾಣ ಹೇ ಗೋವಿಂದ, ಮಮ ಜೀವನ’ ಅಂತ, ಆಗ ಶ್ರೀಕೃಷ್ಣ ಇನ್ನು ಅಲ್ಲಿ ಕಾಣಿಸಿಕೊಳ್ಳಲಾರದೆ ಇರಲಾರ. ಗೋಪಾಲಕರೊಡನೆ ಬಂದು ದರ್ಶನವೀಯುತ್ತಾನೆ.”
೧೬ನೆ ಅಕ್ಟೋಬರ್ ೧೮೮೩, ಆಶ್ವೀಜ ಪೂರ್ಣಿಮೆ, ಮಂಗಳವಾರ
ಪರಮಹಂಸರು ದಕ್ಷಿಣೇಶ್ವರದಲ್ಲಿ ತಮ್ಮ ಕೊಠಡಿಯಲ್ಲಿ ರಾಖಾಲ, ಬಲರಾಮನ ತಂದೆ, ವೇಣೀಪಾಲ, ಮಾಸ್ಟರ್, ಮಣಿಮಲ್ಲಿಕ, ಈಶಾನ, ಕಿಶೋರಿ ಇವರೇ ಮೊದಲಾದವ ರೊಡನೆ ಕುಳಿತಿದ್ದಾರೆ. ಬಲರಾಮನ ತಂದೆ ಪರಮ ವೈಷ್ಣವರು. ಸದಾ ಜಪಮಾಲೆಯನ್ನು ಹಿಡಿದು ಹರಿನಾಮ ಸ್ಮರಣೆ ಮಾಡುತ್ತಿರುತ್ತಾರೆ. ನಿಷ್ಠಾವಂತ ವೈಷ್ಣವರು ಬೇರೆ ಸಂಪ್ರದಾಯದವರನ್ನು ಅಷ್ಟು ಮನ್ನಿಸುವುದಿಲ್ಲ. ಆದರೆ ಬಲರಾಮನ ತಂದೆ ಹಾಗಲ್ಲ. ಆಗಾಗ ಶ್ರೀರಾಮಕೃಷ್ಣರನ್ನು ಕಾಣಲು ಬರುತ್ತಿರುತ್ತಾರೆ.
ಶ್ರೀರಾಮಕೃಷ್ಣರು: “ಯಾರದು ಉದಾರಭಾವವೊ ಅವರು ಎಲ್ಲಾ ದೇವರನ್ನೂ ಒಪ್ಪಿಕೊಳ್ಳುತ್ತಾರೆ-ಕೃಷ್ಣ, ಕಾಳಿ, ಶಿವ, ರಾಮ, ಇತ್ಯಾದಿ ಎಲ್ಲರನ್ನೂ.”
ಬಲರಾಮನ ತಂದೆ: “ನಿಜ. ಇದು ಹೆಂಗಸು ತನ್ನ ಪತಿ ಯಾವ ಪೋಷಾಕು ಹಾಕಿಕೊಂಡಿದ್ದರೂ ಆತನನ್ನು ಆಕೆ ಗುರುತಿಸುವ ಹಾಗೆ.”
ಶ್ರೀರಾಮಕೃಷ್ಣರು: “ಆದರೆ ನಿಷ್ಠಾಭಕ್ತಿ ಎಂಬುದೊಂದಿದೆ. ಗೋಪಿಯರು ಮಥುರೆಗೆ ಹೋಗಿದ್ದಾಗ ರುಮಾಲು ಕಟ್ಟಿದ್ದ ಕೃಷ್ಣನನ್ನು ಕಂಡು, ತಲೆ ಮುಸುಕು ಎಳೆದುಕೊಂಡು ಹೇಳಿದರು: ‘ಇವನಾರಪ್ಪ ಇವನು? ತಲೆಗೆ ನವಿಲುಗರಿಯ ಕಿರೀಟವಿಟ್ಟುಕೊಂಡಿರುವ, ಶರೀರದ ಮೇಲೆ ಪೀತಾಂಬರ ಹೊದ್ದುಕೊಂಡಿರುವ ನಮ್ಮ ಕೃಷ್ಣನೆಲ್ಲಿ?’ ಹನುಮಂತನದೂ ನಿಷ್ಠಾಭಕ್ತಿ. ದ್ವಾಪರಯುಗದಲ್ಲಿ ಹನುಮಂತ ದ್ವಾರಕೆಗೆ ಬಂದಾಗ, ಕೃಷ್ಣ ರುಕ್ಮಿಣಿಗೆ ಹೇಳಿದ: ‘ಹನುಮಂತನಿಗೆ ರಾಮರೂಪವನ್ನು ನೋಡದೆ ಇದ್ದರೆ ಸಂತೋಷವಾಗುವುದಿಲ್ಲ.’ ಅದಕ್ಕಾಗಿ ಕೃಷ್ಣ ರಾಮರೂಪವನ್ನು ಧರಿಸಿ ಆತನನ್ನು ಎದುರುಗೊಂಡ.
“ಆದರೆ ನೋಡಿ, ನನ್ನದು ಒಂದು ವಿಚಿತ್ರ ಅವಸ್ಥೆ. ನನ್ನ ಮನಸ್ಸು ಸತತವಾಗಿ ನಿತ್ಯದಿಂದ ಲೀಲೆಗೆ ಇಳಿದು ಬರುತ್ತಿರುತ್ತದೆ ಮತ್ತು ಲೀಲೆಯಿಂದ ನಿತ್ಯಕ್ಕೆ ಹತ್ತುತ್ತಿರುತ್ತದೆ.
“ನಿತ್ಯವನ್ನು ಮುಟ್ಟುವುದರ ಹೆಸರೇ ಬ್ರಹ್ಮಜ್ಞಾನ. ಅದನ್ನು ಗಳಿಸಿಕೊಳ್ಳುವುದು ಬಹಳ ಕಷ್ಟ. ಸಂಪೂರ್ಣವಾಗಿ ವಿಷಯಬುದ್ಧಿ ಹೋಗದ ಹೊರತು ಅದು ದೊರೆಯುವು ದಿಲ್ಲ. ಹಿಮಾಲಯಪರ್ವತರಾಜನ ಮನೆಯಲ್ಲಿ ಭಗವತಿ ಜನ್ಮತಳೆದಾಗ ಆಕೆ ಅನೇಕ ರೂಪಗಳನ್ನು ಧರಿಸಿ ತನ್ನ ತಂದೆಗೆ ದರ್ಶನ ಕೊಟ್ಟಳು. ರಾಜ ಆಕೆಗೆ ತಿಳಿಸಿದ: ‘ನನಗೆ ಬ್ರಹ್ಮದರ್ಶನ ಪಡೆಯಲು ಇಚ್ಛೆಯಾಗುತ್ತಿದೆ.’ ಅದಕ್ಕೆ ಭಗವತಿ ಹೇಳಿದಳು: ‘ಹೇ ತಂದೆ, ನಿಮಗೆ ಆ ಇಚ್ಛೆಯುಂಟಾಗಿರುವುದಾದರೆ, ನೀವು ಸಾಧುಸಂಗ ಮಾಡಬೇಕು. ಸಂಸಾರವನ್ನು ಬಿಟ್ಟು ನಿರ್ಜನಪ್ರದೇಶದಲ್ಲಿದ್ದು ಆಗಾಗ ಸಾಧುಸಂಗ ಮಾಡಿ.’
“ಆ ಒಂದರಿಂದಲೇ ಅನೇಕ ಉಂಟಾಗಿದೆ. ನಿತ್ಯದಿಂದಲೇ ಲೀಲೆಯ ಉದ್ಭವ. ಒಂದು ಅವಸ್ಥೆ ಇದೆ. ಅದರಲ್ಲಿ ಅನೇಕವೂ ಹೊರಟುಹೋಗುತ್ತದೆ. ಹಾಗೆಯೇ ಇದೂ ಕೂಡ. ಏಕೆಂದರೆ ಒಂದು ಎಂಬುದು ಇತ್ತು ಎಂದರೆ, ಎರಡು ಎಂಬುದು ಇರಲೇಬೇಕು. ಬ್ರಹ್ಮ ಅನುಪಮ-ಉಪಮೆಯ ಮೂಲಕ ಆತನನ್ನು ಅರಿಯುವಂತಿಲ್ಲ. ಆತ ಬೆಳಕಿಗೂ ಅಂಧಕಾರಕ್ಕೂ ಮಧ್ಯೆ. ಆತ ಬೆಳಕೇನೋ ನಿಜ, ಆದರೆ ನಮ್ಮ ಈ ಬೆಳಕಲ್ಲ-ಈ ಜಡಬೆಳಕಲ್ಲ.
“ಯಾವಾಗ ಆತ ನನ್ನ ಮನಸ್ಸನ್ನು ಬದಲಾಯಿಸುತ್ತಾನೊ, ಲೀಲೆಗೆ ಇಳಿಸುತ್ತಾನೋ, ಆಗ ನೋಡುತ್ತೇನೆ, ಆತನೇ ಈಶ್ವರ, ಮಾಯೆ, ಈ ಜೀವಜಗತ್ತು-ಎಲ್ಲವೂ ಆಗಿರುವುದನ್ನು.
“ಮತ್ತೆ ಇನ್ನು ಕೆಲವು ವೇಳೆ ತೋರಿಸುತ್ತಾನೆ, ತಾನೇ ಈ ಜೀವಜಗತ್ತನ್ನು ಸೃಷ್ಟಿಸಿರುವುದಾಗಿ. ಆತ ಒಡೆಯ, ಈ ಜಗತ್ತು ಆತನ ತೋಟ.
“ಆತ ಒಡೆಯ, ಈ ಇಡೀ ಜೀವಜಗತ್ತು ಆತನಿಗೇ ಸೇರಿದುದು’ -ಇದಕ್ಕೆ ಜ್ಞಾನ ಅಂತ ಹೆಸರು. ‘ನಾನು ಕರ್ತ’, ‘ನಾನು ಗುರು’, ‘ನಾನು ತಂದೆ’ -ಇದರ ಹೆಸರೇ ಅಜ್ಞಾನ. ‘ಇದು ನನ್ನ ಮನೆ; ಇದು ನನ್ನ ಸಂಸಾರ; ಇದು ನನ್ನ ಧನ; ಇವರು ನನ್ನ ಬಂಧುಬಾಂಧವರು’ ಈ ಭಾವನೆಯೂ ಅಜ್ಞಾನವೇ.”
ಬಲರಾಮನ ತಂದೆ: “ಹೌದು, ಅದು ನಿಜ.”
ಶ್ರೀರಾಮಕೃಷ್ಣರು: “ಎಲ್ಲಿಯವರೆಗೆ ‘ಭಗವಂತ ಕರ್ತ’ ಎಂಬ ಜ್ಞಾನೋದಯವಾಗುವು ದಿಲ್ಲವೊ, ಅಲ್ಲಿಯವರೆಗೆ ಮತ್ತೆ ಮತ್ತೆ ಈ ಜಗತ್ತಿಗೆ ಬರಲೇಬೇಕಾಗುತ್ತದೆ. ಮತ್ತೆ ಮತ್ತೆ ಜನ್ಮವೆತ್ತಬೇಕಾಗುತ್ತದೆ. ‘ಭಗವಂತ ಕರ್ತ’ ಎಂಬ ಜ್ಞಾನೋದಯವಾಗಿ ಬಿಟ್ಟರೆ ಮತ್ತೆ ಜನ್ಮವೆತ್ತಬೇಕಾಗಿರುವುದಿಲ್ಲ. ಎಲ್ಲಿಯವರೆಗೆ, ‘ಹೇ ಭಗವಂತ, ನಿಜವಾಗಿ ಇರತಕ್ಕವನು ನೀನೊಬ್ಬನೇ’ ಎಂದು ಹೇಳುವುದಿಲ್ಲವೊ, ಅಲ್ಲಿಯವರೆಗೆ ಈ ಸಂಸಾರದಿಂದ ಬಿಡುಗಡೆಯಾಗುವುದಿಲ್ಲ. ಪುನರ್ಜನ್ಮ, ಈ ಜಗತ್ತಿಗೆ ಬಂದು ಹೋಗುವುದು, ಇದ್ದೇ ಇರುತ್ತದೆ. ಮುಕ್ತಿ ದೊರಕುವುದಿಲ್ಲ. ‘ನನ್ನದು, ನನ್ನದು’ ಅಂದರೆ ತಾನೆ ಏನು ಪುರುಷಾರ್ಥ ದೊರೆಯುತ್ತದೆ? ಎಸ್ಟೇಟಿನ ವ್ಯವಸ್ಥಾಪಕ ಹೇಳಬಹುದು: ‘ಇದು ನಮ್ಮ ತೋಟ. ಇದು ನಮ್ಮ ಮರಮಟ್ಟುಗಳು’ ಎಂದು. ಆದರೆ ತೋಟದ ಯಜಮಾನ ಆತನನ್ನು ವಜಾಮಾಡಿಬಿಟ್ಟಾಗ, ತನ್ನ ಸ್ವಂತ ಉಪಯೋಗಕ್ಕೆ ದೊರೆತಿದ್ದ ಮಾವಿನ ಮರದ ಒಡಕಲು ಪೆಟ್ಟಿಗೆಯನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗಲು ಧೈರ್ಯವಿರುವುದಿಲ್ಲ.
‘ನಾನು, ನನ್ನದು’ ಎಂಬುದು ಸತ್ಯವನ್ನು ಮುಚ್ಚಿ ಇಟ್ಟುಬಿಟ್ಟಿದೆ-ಅರಿತುಕೊಳ್ಳಲು ಬಿಟ್ಟುಕೊಡಲೊಲ್ಲದು. ಅದ್ವೈತಜ್ಞಾನ ಉಂಟಾಗದ ಹೊರತು ಚೈತನ್ಯ ದರ್ಶನ ದೊರೆಯುವುದಿಲ್ಲ. ಅದು ದೊರೆತ ಮೇಲೆಯೇ ನಿತ್ಯಾನಂದದ ಅನುಭವ. ಪರಮಹಂಸಾವಸ್ಥೆಯನ್ನು ಹೊಂದಿದ ಮೇಲೆ ಈ ನಿತ್ಯಾನಂದದ ಅನುಭವ ದೊರೆಯುತ್ತದೆ.
“ವೇದಾಂತದ ದೃಷ್ಟಿಯಿಂದ ಅವತಾರವೆಂಬುದು ಇಲ್ಲ. ಅದರ ದೃಷ್ಟಿಯಿಂದ ಚೈತನ್ಯದೇವ ಅಖಂಡಬ್ರಹ್ಮನ ಗುಳ್ಳೆ ಮಾತ್ರ.
“ಚೈತನ್ಯದರ್ಶನ ಯಾವುದರ ಹಾಗಿದೆ ಗೊತ್ತೆ? ಬೆಂಕಿಕಡ್ಡಿ ಗೀಚಿದಾಗ ಕತ್ತಲೆ ಕೊಠಡಿ ಇದ್ದಕ್ಕಿದ್ದ ಹಾಗೆ ಬೆಳಕಾದ ಹಾಗೆ.
“ಭಕ್ತಿಮಾರ್ಗಿಗಳು ಅವತಾರವನ್ನು ಒಪ್ಪುತ್ತಾರೆ. ಕರ್ತಾಭಜಾ ಸಂಪ್ರದಾಯದ ಒಬ್ಬ ಹೆಂಗಸು ನನ್ನ ಅವಸ್ಥೆಯನ್ನು ನೋಡಿದಳು: ‘ನಿಮಗೆ ಆತ್ಮಸಾಕ್ಷಾತ್ಕಾರವಾಗಿ ಬಿಟ್ಟಿದೆ. ಅತಿಯಾಗಿ ಹಾಡುವುದು ನರ್ತಿಸುವುದು ಮಾಡಬೇಡಿ. ಹಣ್ಣಾದ ದ್ರಾಕ್ಷಿಗಳನ್ನು ಬಿಡಿಸಿದ ಹತ್ತಿಯ ಮೇಲಿಟ್ಟು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಸೊಸೆ ಗರ್ಭಿಣಿಯಾದರೆ ಅತ್ತೆ ಆಕೆಯ ಕೆಲಸವನ್ನು ಕಡಮೆ ಮಾಡಿಕೊಡುತ್ತಾಳೆ. ಭಗವಂತನ ದರ್ಶನ ದೊರೆ ತಿರುವುದಕ್ಕೆ ಚಿಹ್ನೆ, ಕ್ರಮೇಣ ಕರ್ಮತ್ಯಾಗವಾಗಿಬಿಡುತ್ತದೆ. ಈ ಮನುಷ್ಯರ ಆಂತರ್ಯದಲ್ಲಿ (ಪರಮಹಂಸರನ್ನುದ್ದೇಶಿಸಿ) ಮಾನುಷರತ್ನ ಇದೆ.’
“ನಾನು ಊಟ ಮಾಡುವುದನ್ನು ನೋಡಿ ಆಕೆ ಹೇಳುತ್ತಿದ್ದಳು: ‘ಏನು ನೀವು ತಿನ್ನುತ್ತಾ ಇದ್ದೀರೋ ಅಥವಾ ಬೇರೆ ಯಾರಿಗಾದರೂ ತಿನ್ನಿಸುತ್ತಿದ್ದೀರೊ?’
“ಈ ‘ಅಹಂ’ ಎಂಬುದೇ ಸತ್ಯವನ್ನು ಮುಚ್ಚಿ ಇಟ್ಟುಬಿಟ್ಟಿದೆ. ನರೇಂದ್ರ ಒಮ್ಮೆ ಹೇಳಿದ: ‘ಮನುಷ್ಯನ’ ‘ಅಹಂ’ ಎಂಬುದನ್ನು ಹಿಂತೆಗೆದ ಹಾಗೆಲ್ಲಾ ಭಗವಂತನ ‘ಅಹಂ’ ಎಂಬುದು ಸಮೀಪಿಸತೊಡಗುತ್ತದೆ.’ ಕೇದಾರ ಹೇಳುತ್ತಾನೆ: ‘ಹೂಜಿಯಲ್ಲಿ ಜೇಡಿಮಣ್ಣು ಎಷ್ಟು ಹೆಚ್ಚಾಗಿರುವುದೋ, ಅಷ್ಟೂ ಕಡಮೆಯಾಗಿ ಅದು ನೀರು ಹಿಡಿಯುತ್ತದೆ.
“ಕೃಷ್ಣ ಅರ್ಜುನನಿಗೆ ಹೇಳಿದ: ‘ಗೆಳೆಯಾ, ಅಷ್ಟಸಿದ್ಧಿಗಳಲ್ಲಿ ಒಂದು ಇದ್ದರೂ ನಿನಗೆ ನನ್ನ ಸಾಕ್ಷಾತ್ಕಾರ ದೊರೆಯದು.’ ಇವು ಎಲ್ಲೋ ಸ್ವಲ್ಪ ಶಕ್ತಿಯನ್ನು ಮಾತ್ರ ಕೊಡಬಲ್ಲವು. ಗುಣಪಡಿಸುವುದು ಇದೇ ಮೊದಲಾದ ಶಕ್ತಿಗಳಿಂದ ಎಲ್ಲೋ ಅಲ್ಪ ಸಹಾಯವನ್ನು ಪರರಿಗೆ ಮಾಡಲು ಸಾಧ್ಯ. ಏನು ಹೇಳುತ್ತೀಯೆ?
“ಅದಕ್ಕಾಗಿಯೇ ನಾನು ಭಗವತಿಯನ್ನು ಕೇವಲ ಶುದ್ಧಭಕ್ತಿಗಾಗಿ ಪ್ರಾರ್ಥನೆ ಮಾಡಿದೆ. ಸಿದ್ಧಿಗಳು ಬೇಕೆಂದು ಪ್ರಾರ್ಥಿಸಲಿಲ್ಲ.”
ಹೀಗೆ ಮಾತನಾಡುತ್ತ ಮಾತನಾಡುತ್ತ ಇದ್ದಹಾಗೆಯೇ ಪರಮಹಂಸರು ಸಮಾಧಿಸ್ಥ ರಾಗಿ ಬಿಟ್ಟಿದ್ದಾರೆ. ಬಾಹ್ಯಜ್ಞಾನಶೂನ್ಯರಾಗಿದ್ದಾರೆ. ಚಿತ್ರದ ಗೊಂಬೆಯ ಹಾಗೆ ಕುಳಿತಿದ್ದಾರೆ. ಈಗ ಪ್ರಕೃತಿಸ್ಥರಾಗಿ ಹಾಡಲಾರಂಭಿಸಿದ್ದಾರೆ:
ಯಾರಿಗಾಗಿ ಮರುಳುಗೊಂಡು ಅಲೆಯುತ್ತಿರುವೆನೋ
ಆ ನಿನ್ನ ಮೋಹಮೂರ್ತಿ ಕಾಣನಿನ್ನೂ ಕೆಳದಿಯೆ…….
ಈಗ ರಾಮಲಾಲ ಪರಮಹಂಸರ ಇಚ್ಛೆಗನುಸಾರ ಗೌರಾಂಗ ಯಾವ ರೀತಿಯಾಗಿ ಸಂನ್ಯಾಸ ಸ್ವೀಕರಿಸಿದ ಎಂಬುದರ ಸಂಬಂಧವಾಗಿ ಹಾಡತೊಡಗಿದ್ದಾನೆ:
ಓ ಎಂಥ ನೋಟವ ಕಂಡೆನು!
ಕೇಶವಭಾರತಿಯ ಕುಟಿಯೊಳಗೆ ನಾ-
ನೆಂಥ ನೋಟವ ಕಂಡೆನು!……
ಈಗ ಮಣಿಮಲ್ಲಿಕನಿಗೆ ಪರಮಹಂಸರು ಹೇಳುತ್ತಿದ್ದಾರೆ: “ಹರಿಭಕ್ತಿಯುಂಟಾಯಿತು ಎಂದರೆ, ಮತ್ತೆ ಜಾತಿಭೇದದ ಗೊಂದಲವಿರದು ಎಂಬುದಾಗಿ ತುಳಸೀದಾಸ ಹೇಳಿದುದರ ಸಂಬಂಧವಾಗಿ ನೀನು ಹೇಳು.”
ಮಣಿಮಲ್ಲಿಕ: “ನೀರಡಿಕೆಯಿಂದ ಚಾತಕಪಕ್ಷಿಯ ಗಂಟಲು ಒಣಗಿಹೋಗುವುದ ರಲ್ಲಿದೆ. ಅದರ ಸುತ್ತಲೂ ಗಂಗೆ, ಯಮುನೆ, ಸರಯೂ ಮತ್ತು ಇನ್ನೂ ಅಸಂಖ್ಯ ನದಿಗಳು, ಸರೋವರಗಳು ನೀರಿನಿಂದ ತುಂಬಿತುಳುಕಾಡುತ್ತಿವೆ. ಆದರೆ ಅವೊಂದನ್ನೂ ಆ ಹಕ್ಕಿ ಮುಟ್ಟದು. ಕೇವಲ ಸ್ವಾತಿ ನಕ್ಷತ್ರದ ಮಳೆಯ ಹನಿಗಾಗಿ ಬಾಯಿ ತೆರೆದುಕೊಂಡು ಕುಳಿತಿರುತ್ತದೆ.”
ಶ್ರೀರಾಮಕೃಷ್ಣರು: “ಎಂದರೆ, ಭಗವಂತನ ಪಾದಪದ್ಮಗಳಲ್ಲಿನ ಭಕ್ತಿಯೇ ಸಾರವಾದ್ದು, ಉಳಿದುದೆಲ್ಲಾ ಮಿಥ್ಯಾ.”
ಮಣಿಮಲ್ಲಿಕ: “ತುಳಸೀದಾಸ, ಇನ್ನೊಂದು ವಿಷಯ ಹೇಳಿದ್ದಾನೆ: ‘ಅಷ್ಟಧಾತುಗಳು ಸ್ಪರ್ಶಮಣಿಯನ್ನು ಮುಟ್ಟಿದ್ದೇ ಆದರೆ, ಅವು ಚಿನ್ನವಾಗಿಬಿಡುತ್ತವೆ. ಅದೇ ರೀತಿಯಾಗಿ ಎಲ್ಲಾ ಜಾತಿಯ ಜನರೂ-ಚಮ್ಮಾರ, ಚಂಡಾಲ ಕೂಡ-ಭಗವನ್ನಾಮೋಚ್ಚಾರಣೆ ಮಾಡಿದರೆ ಶುದ್ಧರಾಗಿಬಿಡುತ್ತಾರೆ. ಭಗವನ್ನಾಮೋಚ್ಚಾರಣೆ ಮಾಡದೆ ಇದ್ದರೆ, ನಾಲ್ಕು ವರ್ಣದವರೂ ಚಮ್ಮಾರರೇ.’
ಶ್ರೀರಾಮಕೃಷ್ಣರು: “ಯಾವ ಚರ್ಮವನ್ನು ಮುಟ್ಟಲೇಕೂಡದೋ ಅದನ್ನು ಹದ ಮಾಡಿಬಿಟ್ಟಿದ್ದೇ ಆದರೆ ಅದನ್ನು ದೇವಾಲಯಕ್ಕೆ ಕೂಡ ತೆಗೆದುಕೊಂಡು ಹೋಗಿಬಿಡಬಹುದು.”
ಭಗವನ್ನಾಮೋಚ್ಚಾರಣೆಯಿಂದ ಮನುಷ್ಯ ಪವಿತ್ರನಾಗಿಬಿಡುತ್ತಾನೆ. ಆದ್ದರಿಂದ ನಾಮಕೀರ್ತನೆಯ ಅಭ್ಯಾಸವನ್ನಿಟ್ಟುಕೊಂಡಿರಬೇಕು. ನಾನು ಯದುಮಲ್ಲಿಕನ ತಾಯಿಗೆ ಹೇಳಿದೆ: ‘ಪ್ರಾಪಂಚಿಕನಿಗೆ ಸಾಯುವ ಸಮಯದಲ್ಲಿ ಸಂಸಾರದ-ಎಂದರೆ ಹೆಂಡತಿ ಮಕ್ಕಳು ಮರಿಗಳ ಉಯಿಲು ಬರೆದಿಡುವುದು ಇವೇ ಮೊದಲಾದುವುಗಳ ಯೋಚನೆಗಳೇ ಬರುತ್ತವೆ. ಭಗವದ್ಭಾವನೆ ಮನಸ್ಸಿನಲ್ಲಿ ಏಳದು. ಇದಕ್ಕೆ ಮಾರ್ಗ ಬದುಕಿರುವಾಗ ನಾಮಜಪ ಕೀರ್ತನೆಯ ಅಭ್ಯಾಸವನ್ನಿಟ್ಟುಕೊಂಡಿರುವುದೇ. ಈ ಅಭ್ಯಾಸವನ್ನು ಇಟ್ಟುಕೊಂಡಿದ್ದುದೇ ಆದರೆ ಸಾಯುವ ಸಮಯದಲ್ಲಿ ಭಗವನ್ನಾಮ ಬಾಯಿಂದ ಹೊರಡುತ್ತದೆ. ಗಿಳಿಯನ್ನು ಬೆಕ್ಕು ಹಿಡಿಯಿತು ಎಂದರೆ ಆಗ ಅದು “ಕ್ಯಾ, ಕ್ಯಾ” ಅಂತ ಕೂಗಿಕೊಳ್ಳುತ್ತದೆಯೇ ವಿನಾ, “ರಾಮ, ರಾಮ, ಹರೇ ಕೃಷ್ಣ!” ಅಂತ ಹೇಳುವುದಿಲ್ಲ.
“ಸಾವಿಗಾಗಿ ಸಿದ್ಧರಾಗಿರುವುದು ಮೇಲು. ಮುಪ್ಪಿನಲ್ಲಿ ನಿರ್ಜನಪ್ರದೇಶದಲ್ಲಿದ್ದು ಕೇವಲ ಭಗವಚ್ಚಿಂತನೆ, ಆತನ ನಾಮಗುಣಕೀರ್ತನೆ ಮಾಡುತ್ತಿರಬೇಕು. ಆನೆಯ ಮೈ ತೊಳೆದ ಮೇಲೆ ಅದನ್ನು ಗಜಶಾಲೆಯಲ್ಲಿ ಕಟ್ಟಿಹಾಕಿದರೆ, ಅದು ಮತ್ತೆ ಧೂಳು ಬೂದಿ ಇವನ್ನು ಮೈಗೆ ಮೆತ್ತಿಕೊಳ್ಳಲಾರದು.”
ಬಲರಾಮನ ತಂದೆ, ಮಣಿಮಲ್ಲಿಕ, ವೇಣೀಪಾಲ ಇವರೆಲ್ಲ ವೃದ್ಧರು. ಪರಮ ಹಂಸರು ಈ ಉಪದೇಶಗಳನ್ನೆಲ್ಲಾ ವಿಶೇಷತಃ ಅವರ ಹಿತಕ್ಕಾಗಿ ಕೊಟ್ಟರೇನು?
ಶ್ರೀರಾಮಕೃಷ್ಣರು: “ನಿರ್ಜನಪ್ರದೇಶದಲ್ಲಿ ಭಗವಚ್ಚಿಂತನೆ, ಭಗವನ್ನಾಮಗುಣಕೀರ್ತನೆ ಮಾಡಬೇಕೆಂದು ಹೇಳುತ್ತೇನಲ್ಲ, ಏಕೆ ಗೊತ್ತೆ? ಸಂಸಾರದಲ್ಲೇ ಹಗಲೂ ಇರುಳೂ ವಾಸಿಸುತ್ತಿದ್ದರೆ, ಅಶಾಂತಿ ಇದ್ದೇ ಇರುತ್ತದೆ. ಒಂದು ಅಂಗೈಯಗಲದ ಜಮೀನಿಗಾಗಿ ಅಣ್ಣತಮ್ಮಂದಿರು ಒಬ್ಬರನ್ನೊಬ್ಬರು ಖೂನಿ ಮಾಡಿಬಿಡುವುದಕ್ಕೂ ಹೇಸದಿರುವುದನ್ನು ನೀನು ನೋಡಿಲ್ಲವೇ? ಒಮ್ಮೆ ಸಿಖ್ ಮತದವರು ನನಗೆ ಹೇಳಿದರು: ‘ಈ ಜಗತ್ತಿನಲ್ಲಿರುವ ಎಲ್ಲಾ ಅಶಾಂತಿ ಗೊಂದಲಗಳಿಗೂ ಇವು ಮೂರೇ ಕಾರಣ-ಹೊನ್ನು, ಹೆಣ್ಣು, ಮಣ್ಣು.’
“ನೀವು ಸಂಸಾರದಲ್ಲಿದ್ದೀರಿ; ಅದಕ್ಕೆ ಭಯಪಡುವುದೇಕೆ? ತಾನು ಸಂಸಾರವನ್ನು ತ್ಯಾಗಮಾಡಬೇಕೆಂದಿರುವ ವಿಷಯವನ್ನು ರಾಮ ದಶರಥನಿಗೆ ತಿಳಿಸಿದಾಗ, ದಶರಥ ಚಿಂತಾಮಗ್ನನಾಗಿ ವಸಿಷ್ಠರನ್ನು ಶರಣುಹೊಕ್ಕ. ವಸಿಷ್ಠ ರಾಮನಿಗೆ ಹೇಳಿದ: ‘ರಾಮ, ನೀನೇಕೆ ಸಂಸಾರವನ್ನು ತ್ಯಾಗಮಾಡಬೇಕು? ನನ್ನೊಡನೆ ಆಲೋಚಿಸಿ ನೋಡು. ಈ ಸಂಸಾರ ಭಗವಂತನಿಂದ ಹೊರಗಿದೆಯೇನು? ಏನನ್ನು ತಾನೆ ನೀನು ತ್ಯಜಿಸುವುದು? ಏನನ್ನು ತಾನೆ ನೀನು ಗ್ರಹಿಸುವುದು? ಆತನ ಹೊರತು ಬೇರೇನೂ ಇಲ್ಲ. ಕೇವಲ ಬ್ರಹ್ಮನೇ ಈ ಜೀವ, ಜಗತ್ತು, ಮಾಯೆ, ಈಶ್ವರ ಎಲ್ಲವೂ ಆಗಿ ತೋರ್ಪಡಿಸಿಕೊಳ್ಳುತ್ತಿದ್ದಾನೆ.’
ಬಲರಾಮನ ತಂದೆ: “ಬಹಳ ಕಷ್ಟ.”
ಶ್ರೀರಾಮಕೃಷ್ಣರು: “ಸಾಧನೆಯ ಸಮಯದಲ್ಲಿ ಈ ಜಗತ್ತು ‘ಮಾಯೆಯ ಚೌಕಟ್ಟಾಗಿ’ ಕಾಣುತ್ತದೆ. ಆದರೆ ಬ್ರಹ್ಮಜ್ಞಾನ ದೊರೆತನಂತರ ಇದೇ ಜಗತ್ತು ‘ಮೋಜಿನಮನೆ’ ಯಾಗಿ ಕಾಣುತ್ತದೆ.
“ವೈಷ್ಣವ ಗ್ರಂಥಗಳಲ್ಲಿ ಬರೆದಿದೆ: ‘ಶ್ರದ್ಧೆಯಿಂದಲೇ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬಹುದು; ತರ್ಕ ಆತನನ್ನು ಬಹು ದೂರಕ್ಕೆ ತಳ್ಳಿಬಿಡುತ್ತದೆ.’ ಬೇಕಾಗಿರುವುದು ಕೇವಲ ಶ್ರದ್ಧೆ!
“ಕೃಷ್ಣಕಿಶೋರನದು ಎಂಥ ಶ್ರದ್ಧೆ! ಒಬ್ಬ ಕೀಳುಜಾತಿಯವ ಆತನಿಗೆ ಬಾವಿಯಿಂದ ನೀರು ಸೇದಿಕೊಟ್ಟ. ಕೃಷ್ಣಕಿಶೋರ ಆತನಿಗೆ ಹೇಳಿದ: ‘ನೀನು ‘ಶಿವ’ ಅಂತ ಹೇಳು.’ ಆತ ಹಾಗೆ ಮಾಡಿದ ನಂತರ ಮರುಯೋಚನೆಯನ್ನೇ ಮಾಡದೆ ನೀರು ಕುಡಿದುಬಿಟ್ಟ. ಆತ ಹೇಳುತ್ತಿದ್ದ: ‘ಭಗವನ್ನಾಮೋಚ್ಚಾರಣೆ ಮಾಡಿದ ನಂತರ ದುಡ್ಡು ಖರ್ಚುಮಾಡಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೆ? ಇದು ಎಂಥ ತಿಳಿಗೇಡಿತನ!’ ಜನ ರೋಗದಿಂದ ಮುಕ್ತರಾಗಲು ಭಗವಂತನಿಗೆ ತುಳಸಿ ಅರ್ಪಿಸುವುದನ್ನು ನೋಡಿ ಆತನಿಗೆ ಆಶ್ಚರ್ಯವಾಗಿಬಿಟ್ಟಿತು. ಈ ಸ್ನಾನಘಟ್ಟದಲ್ಲಿ ಆತ ನಮಗೆ ಹೇಳಿದ: ‘ಶ್ರೀರಾಮನ ಪವಿತ್ರನಾಮೋಚ್ಚಾರಣೆ ಮಾಡುತ್ತ ನಾನು ನನ್ನ ದಿನಗಳನ್ನು ಕಳೆಯುವ ಹಾಗೆ ನೀವೆಲ್ಲರೂ ನನಗೆ ಆಶೀರ್ವಾದ ಮಾಡಿ.’ ನಾನು ಆತನ ಮನೆಗೆ ಹೋದಾಗಲೆಲ್ಲಾ ಆತ ನನ್ನನ್ನು ನೋಡಿ ಆನಂದದಿಂದ ಕುಪ್ಪಳಿಸುತ್ತಿದ್ದ. ರಾಮಚಂದ್ರ ಲಕ್ಷ್ಮಣನಿಗೆ ಹೇಳಿದ: ‘ಸೋದರ, ಎಲ್ಲಿ ನೀನು ಊರ್ಜಿತ ಭಕ್ತಿಯನ್ನು ನೋಡುವೆಯೋ, ಅಲ್ಲಿ ನಾನು ಇದ್ದೇನೆ ಎಂಬುದನ್ನು ತಿಳಿದುಕೋ.’ ಉದಾಹರಣೆಗೆ ಚೈತನ್ಯದೇವ ಪ್ರೇಮದಿಂದ ನಕ್ಕು ಅತ್ತು ನರ್ತಿಸಿ ಹಾಡುತ್ತಿದ್ದ. ಆತ ಒಬ್ಬ ಅವತಾರಪುರುಷ. ಭಗವಂತನೇ ಆತನ ಮೂಲಕ ಅವತೀರ್ಣನಾಗಿದ್ದ.”
ಪರಮಹಂಸರು ಗೌರಾಂಗನ ಪ್ರೇಮಾ ಭಕ್ತಿಯ ಸಂಬಂಧವಾಗಿ ಒಂದು ಹಾಡನ್ನು ಹಾಡಿದರು. ಬಲರಾಮನ ತಂದೆ, ಮಣಿಮಲ್ಲಿಕ, ವೇಣಿಪಾಲ ಇನ್ನೂ ಅನೇಕ ಭಕ್ತರು ಪರಮಹಂಸರಿಂದ ಬೀಳ್ಕೊಂಡರು.
ಸಾಯಂಕಾಲವಾದ ಮೇಲೆ ಕಾನ್ಸಾರಿತೊಲದ ಹರಿಸಭೆಯ ಭಕ್ತರು ಬಂದರು. ಅವರೊಡನೆ ಪರಮಹಂಸರು ಪ್ರೇಮೋನ್ಮತ್ತರಾಗಿ ನರ್ತಿಸುತ್ತಿದ್ದಾರೆ. ನರ್ತನವಾದ ನಂತರ ಭಾವಾವಿಷ್ಟರಾಗಿ ಹೇಳುತ್ತಿದ್ದಾರೆ: “ನಾನೇ ಸ್ವಲ್ಪ ದೂರ ಮುಂದುವರಿಯುತ್ತೇನೆ,” ಕಿಶೋರಿ ಅವರ ಪಾದವನ್ನು ಒತ್ತಲು ಮುಂದೆ ಬಂದ, ಆದರೆ ಪರಮಹಂಸರು ತಮ್ಮನ್ನು ಸ್ಪರ್ಶಿಸಲು ಯಾರನ್ನೂ ಬಿಟ್ಟುಕೊಡಲಿಲ್ಲ.
ಈಗ ಈಶಾನ ಕೊಠಡಿಯನ್ನು ಪ್ರವೇಶಿಸಿದ. ಪರಮಹಂಸರು ಕುಳಿತುಕೊಂಡಿದ್ದಾರೆ -ಭಾವಾವಿಷ್ಟರಾಗಿ. ಸ್ವಲ್ಪ ಹೊತ್ತಾದ ಮೇಲೆ ಈಶಾನನೊಡನೆ ಮಾತುಕತೆಯಾಡಲು ತೊಡಗಿದರು. ಈಶಾನನಿಗೆ ಗಾಯತ್ರಿಯ ಪುರಶ್ಚರಣೆ ಮಾಡಲು ಇಚ್ಛೆ.
ಶ್ರೀರಾಮಕೃಷ್ಣರು ಈಶಾನನಿಗೆ: “ನಿನ್ನ ಮನಸ್ಸು ಹೇಗೆ ಹೇಳುತ್ತದೋ ಹಾಗೆಯೇ ಮಾಡು. ನಿನ್ನ ಮನಸ್ಸಿನಲ್ಲಿ ಇನ್ನೇನೂ ಸಂದೇಹವಿಲ್ಲ ತಾನೆ? ಕಲಿಯುಗಕ್ಕೆ ನಿಗಮ ಮಾರ್ಗವಲ್ಲ, ಆಗಮಮಾರ್ಗ.”
ಈಶಾನ: “ನಾನು ಒಂದು ವಿಧದ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಂಕಲ್ಪಿಸಿದ್ದೆ.”
ಶ್ರೀರಾಮಕೃಷ್ಣರು: “ಆಗಮಮಾರ್ಗ (ತಂತ್ರಮಾರ್ಗ)ದಿಂದ ಭಗವಂತನ ಸಾಕ್ಷಾತ್ಕಾರ ದೊರೆಯುವುದಿಲ್ಲವೇನು? ಯಾರು ಬ್ರಹ್ಮನೋ, ಆತನೇ ಶಕ್ತಿ, ಕಾಳಿ.
“ತಾಯಿ ಕಾಳಿಯೆ ಪರಮ ಬ್ರಹ್ಮಸ್ವರೂಪಿ ಎನ್ನುವ ಮರ್ಮವ
ತಿಳಿದು ನಾನಿದೊ ಬಿಸುಟು ನಿಂತಿಹೆ ಸಕಲ ಧರ್ಮಾಧರ್ಮವ!”
ಈಶಾನ: “ಚಂಡಿಯ ಒಂದು ಸ್ತೋತ್ರದಲ್ಲಿ ಹೇಳಿದೆ, ಬ್ರಹ್ಮನೇ ಆದ್ಯಾಶಕ್ತಿ ಎಂದು. ಬ್ರಹ್ಮನಿಗೂ ಶಕ್ತಿಗೂ ಅಭೇದ.”
ಶ್ರೀರಾಮಕೃಷ್ಣರು: “ಸುಮ್ಮನೆ ಹೀಗೆ ಬಾಯಲ್ಲಿ ಹೇಳಿಬಿಟ್ಟರೆ ಏನೂ ಪ್ರಯೋಜನ ವಿಲ್ಲ. ಯಾವಾಗ ಈ ಭಾವನೆ ನಿನ್ನ ಅಂತರ್ಗತವಾಗುವುದೋ, ಆಗ ನಿನಗೆ ಶ್ರೇಯಸ್ಸಾಗುತ್ತದೆ.”
“ಸಾಧನೆಯಿಂದ ಚಿತ್ತಶುದ್ಧಿಯಾದನಂತರ ನಿಸ್ಸಂದೇಹವಾಗಿ ಬೋಧೆಯಾಗುತ್ತದೆ. ಭಗವಂತನೇ ಕರ್ತ. ಆತನೇ ಮನಸ್ಸು, ಬುದ್ಧಿ, ಪ್ರಾಣ ಆಗಿದ್ದಾನೆ. ನಾವು ಕೇವಲ ಯಂತ್ರ ಎಂದು.
ಪಂಕದಲ್ಲಿ ಬಂಧಿಸುವೆ ಕರಿಯ
ಹೆಳವನನು ದಾಟಿಸುವೆ ಗಿರಿಯ!
“ಚಿತ್ತಶುದ್ಧಿಯಾದನಂತರ ಬೋಧೆಯಾಗುತ್ತದೆ. ಪುರಶ್ಚರಣಾದಿ ಕರ್ಮಗಳನ್ನು ಭಗವಂತನೇ ನಮ್ಮ ಕೈಯಿಂದ ಮಾಡಿಸುತ್ತಿದ್ದಾನೆ ಎಂದು.
ನಿನ್ನ ಇಚ್ಛೆಯ ನೀನು ಪೂರೈಸುತಿರಲು
ತಮ್ಮ ಗೈಮೆಯಿದೆಂದು ತಿಳಿವರೀ ಜನರು!
ಭಗವಂತನ ದರ್ಶನ ದೊರೆತರೆ ಎಲ್ಲಾ ಸಂದೇಹಗಳೂ ನಿವೃತ್ತಿಯಾಗಿಬಿಡುತ್ತವೆ. ಆಗ ಅನುಕೂಲವಾದ ಗಾಳಿ ಬೀಸಲಾರಂಭಿಸುತ್ತದೆ. ಭಕ್ತ ನಿಶ್ಚಿಂತನಾಗಿಬಿಡುತ್ತಾನೆ. ಅನುಕೂಲವಾದ ಗಾಳಿ ಬೀಸುವಾಗ ಯಾವ ರೀತಿಯಾಗಿ ಅಂಬಿಗ ನೌಕಾಪಟವನ್ನು ಬಿಚ್ಚಿ ಚುಕ್ಕಾಣಿ ಹಲಗೆಯನ್ನು ನೆಪಮಾತ್ರಕ್ಕೆ ಹಿಡಿದುಕೊಂಡು ನಿಶ್ಚಿಂತೆಯಿಂದ ಕುಳಿತು ಹುಕ್ಕ ಸೇದುತ್ತಾನೊ, ಆ ರೀತಿಯಾಗಿ ಭಕ್ತ ನಿಶ್ಚಿಂತನಾಗಿಬಿಡುತ್ತಾನೆ.”
ಈಶಾನ ಪರಮಹಂಸರಿಂದ ಬೀಳ್ಕೊಂಡು ಹೊರಟುಹೋದ. ಪರಮಹಂಸರೂ ಈಗ ಮಾಸ್ಟರೊಡನೆ ಮಾತುಕತೆಯಾಡುತ್ತಿದ್ದಾರೆ. ಕೊಠಡಿಯಲ್ಲಿ ಇನ್ನು ಬೇರೆ ಯಾರೂ ಇಲ್ಲ. ಪರಮಹಂಸರು ಮಾಸ್ಟರನ್ನು ಕೇಳುತ್ತಿದ್ದಾರೆ-ನರೇಂದ್ರ, ರಾಖಾಲ, ಅಧರಸೇನ, ಹಾಜರಾ ಇವರೆಲ್ಲಾ ಸರಳರೋ, ಅಲ್ಲವೋ; ಅವರ ಸಂಬಂಧವಾಗಿ ಆತನ ಅಭಿಪ್ರಾಯವೇನು ಎಂಬುದಾಗಿ. ತಮ್ಮ ವಿಷಯವಾಗಿಯೂ ಆತನನ್ನು ಕೇಳಿದರು: “ನಾನು ಹೇಗೆ ಕಾಣುತ್ತೇನೆ ನಿನಗೆ?”
ಮಾಸ್ಟರ್ ಉತ್ತರವಿತ್ತ: “ನೀವು ಸರಳರೂ ಹೌದು, ಅಷ್ಟೇ ಗಂಭೀರರೂ ಹೌದು ನಿಮ್ಮನ್ನು ಅರಿತುಕೊಳ್ಳುವುದು ಬಹಳ ಕಷ್ಟ.”
ಶ್ರೀರಾಮಕೃಷ್ಣರು ನಗುತ್ತಿದ್ದಾರೆ.
೨೬ನೆ ನವೆಂಬರ್ ೧೮೮೩, ಕಾರ್ತಿಕ ಕೃಷ್ಣ ಏಕಾದಶಿ, ಸೋಮವಾರ
ಸಿಂದೂರಿಯಾಪಟ್ಟಿಯ ಬ್ರಾಹ್ಮಸಮಾಜದ ವಾರ್ಷಿಕ ಸಮ್ಮೇಳನ ಮಣಿಲಾಲ ಮಲ್ಲಿಕನ ಮನೆಯಲ್ಲಿ ಇಂದು ನಡೆಯುತ್ತದೆ. ಉಪಾಸನಾಗೃಹವನ್ನು ತಳಿರುತೋರಣ ಗಳಿಂದ, ವಿವಿಧ ಹೂವುಗಳಿಂದ, ಬಹಳ ಚೆನ್ನಾಗಿ ಅಲಂಕಾರಮಾಡಿದ್ದಾರೆ. ಭಕ್ತರೆಲ್ಲರೂ ಅಲ್ಲಿ ನೆರೆದು, ಉಪಾಸನೆ ಎಷ್ಟು ಹೊತ್ತಿಗೆ ಆರಂಭವಾದೀತು ಎಂದು ಆಕಾಂಕ್ಷಿತರಾಗಿ ಕುಳಿತಿದ್ದಾರೆ. ಪರಮಹಂಸರು ಸಮ್ಮೇಳನಕ್ಕೆ ಬರುತ್ತಾರೆ ಎಂಬ ಸುದ್ದಿಯನ್ನು ಕೇಳಿ ಸಭಿಕರ ಉತ್ಸಾಹ, ಆನಂದಕ್ಕೆ ಮೇರೆಯೇ ಇಲ್ಲದಂತಾಗಿದೆ. ಕೇಶವ, ಶಿವನಾಥ, ವಿಜಯ ಇನ್ನೂ ಉಳಿದ ಬ್ರಾಹ್ಮಭಕ್ತರು ಅವರನ್ನು ಬಹಳ ಗೌರವದಿಂದ ನೋಡುತ್ತಿದ್ದಾರೆ. ಪರಮಹಂಸರ ಭಗವತ್ಪ್ರೇಮ, ಉಜ್ಜ್ವಲ ಶ್ರದ್ಧೆ, ಭಗವಂತನೊಡನೆ ಬಾಲಕನಂತೆ ಮಾತುಕತೆಯಾಡುವಿಕೆ, ಭಗವಂತನಿಗಾಗಿ ವ್ಯಾಕುಲತೆಯಿಂದ ಅಳುವುದು, ಸ್ತ್ರೀಜಾತಿಯನ್ನೇ ಮಾತೃದೃಷ್ಟಿಯಿಂದ ಪೂಜೆ ಮಾಡುವಿಕೆ, ಪ್ರಾಪಂಚಿಕ ಮಾತುಕತೆಯ ವರ್ಜನೆ, ತೈಲದ ಧಾರೆಯಂತೆ ಅನವರತವಾದ ಭಗವತ್ಕಥಾಪ್ರಸಂಗ, ಸರ್ವಧರ್ಮ ಸಮನ್ವಯ, ಪರಧರ್ಮಗಳ ಮೇಲೆ ದ್ವೇಷಭಾವನೆಯು ಲೇಶವೂ ಇಲ್ಲದಿರುವಿಕೆ, ಭಗವದ್ಭಕ್ತರಿಗಾಗಿ ರೋದನ-ಇವುಗಳೆಲ್ಲಾ ಬ್ರಾಹ್ಮಭಕ್ತರ ಚಿತ್ತವನ್ನು ಆಕರ್ಷಿಸಿಬಿಟ್ಟಿವೆ. ಅದಕ್ಕಾಗಿಯೇ ಇಂದು ಬಹಳ ದೂರದಿಂದ ಅನೇಕ ಮಂದಿ ಬ್ರಾಹ್ಮಭಕ್ತರು ಪರಮಹಂಸರ ದರ್ಶನಾರ್ಥವಾಗಿ, ಅವರ ಭಗವದ್ವಾಣಿಯನ್ನು ಕೇಳುವುದಕ್ಕಾಗಿ ಬಂದಿದ್ದಾರೆ.
ಪರಮಹಂಸರು ಉಪಾಸನೆಗೆ ಮುಂಚೆಯೇ ಬಂದುಬಿಟ್ಟಿದ್ದಾರೆ. ಈಗ ಅವರು ವಿಜಯಕೃಷ್ಣಗೋಸ್ವಾಮಿ ಮತ್ತು ಉಳಿದ ಭಕ್ತರೊಡನೆ ಮಾತುಕತೆಯಾಡುತ್ತಿದ್ದಾರೆ. ಸಮಾಜಗೃಹದಲ್ಲಿ ದೀಪ ಹಚ್ಚಲಾಯಿತು. ಇನ್ನೇನು ಉಪಾಸನೆ ಆರಂಭವಾಗಲಿದೆ.
“ಶಿವನಾಥ ಬರುವುದಿಲ್ಲವೇ?” ಎಂದು ಪರಮಹಂಸರು ಕೇಳಿದರು. ಬ್ರಾಹ್ಮಭಕ್ತ ಉತ್ತರವಿತ್ತ: “ಅವರಿಗೆ ವಿಶೇಷ ಕೆಲಸವಿರುವುದರಿಂದ ಬರುವುದಿಲ್ಲ.”
ಶ್ರೀರಾಮಕೃಷ್ಣರು: “ಶಿವನಾಥನನ್ನು ನೋಡಿದರೆ ನನಗೆ ಬಹಳ ಆನಂದವಾಗಿಬಿಡು ತ್ತದೆ. ಭಕ್ತಿರಸದಲ್ಲಿ ಸದಾ ಮುಳುಗಿರುವಂತೆಯೇ ಆತ ಕಾಣುತ್ತಾನೆ. ಜೊತೆಗೆ ಯಾರನ್ನು ಅನೇಕರು ಗೌರವಿಸುತ್ತಾರೋ, ಕೊಂಡಾಡುತ್ತಾರೋ, ಅವರಲ್ಲಿ ಭಗವಂತನ ಶಕ್ತಿ ವಿಶೇಷ ವಾಗಿ ಸ್ವಲ್ಪ ಇದ್ದೇ ಇರಬೇಕು. ಆದರೆ ಆತನಲ್ಲಿ ಒಂದು ದೊಡ್ಡ ದುರ್ಗುಣವಿದೆ-ಮಾತಿ ನಂತೆ ನಡೆದುಕೊಳ್ಳುವುದಿಲ್ಲ. ದಕ್ಷಿಣೇಶ್ವರಕ್ಕೆ ಬರುವೆನೆಂದು ಒಮ್ಮೆ ನನಗೆ ತಿಳಿಸಿದ್ದ. ಆದರೆ ಬರಲೂ ಇಲ್ಲ. ಅದರ ಸಂಬಂಧವಾಗಿ ಯಾವ ಸಮಾಚಾರವನ್ನು ಕಳುಹಿಸಲೂ ಇಲ್ಲ. ಇದು ಸರಿಯಲ್ಲ. ಸತ್ಯವಚನವೇ ಕಲಿಯುಗದ ತಪಸ್ಸು ಎಂಬ ಒಂದು ಹೇಳಿಕೆ ಇದೆ. ಸತ್ಯವನ್ನು ಬಲವಾಗಿ ಹಿಡಿದುಕೊಂಡಿದ್ದರೇನೇ ಭಗವಂತನ ದರ್ಶನ ದೊರೆಯಬೇಕಾಗಿದ್ದರೆ. ಸತ್ಯನಿಷ್ಠೆ ಇಲ್ಲದೆ ಇತ್ತು ಎಂದರೆ, ಕ್ರಮಕ್ರಮೇಣ ಇಹಪರ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಸರ್ವೆತೋಪಿನ ಕಡೆ ಹೋಗಿಬರುತ್ತೇನೆ ಎಂದು ಆಕಸ್ಮಿಕವಾಗಿ ನಾನು ಹೇಳಿಬಿಟ್ಟರೆ, ಆವಶ್ಯಕತೆ ಇಲ್ಲದಿದ್ದರೂ ಸತ್ಯನಿಷ್ಠೆ ಎಲ್ಲಿ ಕೈಬಿಟ್ಟು ಹೋಗಿಬಿಡುವುದೋ ಎಂದು ಹೆದರಿ, ಅಲ್ಲಿಗೆ ಸುಮ್ಮನೆಯಾದರೂ ಹೋಗಿಬರುತ್ತೇನೆ. ನನಗೆ ಭಗವತಿಯ ದರ್ಶನ ದೊರೆತನಂತರ ಕೈಯಲ್ಲಿ ಹೂವನ್ನು ತೆಗೆದುಕೊಂಡು ಪ್ರಾರ್ಥನೆ ಮಾಡಿದೆ: ‘ಹೇ ಭಗವತಿ, ಇಗೋ ತೆಗೆದುಕೊ ನಿನ್ನ ಜ್ಞಾನವನ್ನು, ಇಗೋ ತೆಗೆದುಕೊ ನಿನ್ನ ಅಜ್ಞಾನವನ್ನು, ನನಗೆ ಶುದ್ಧಭಕ್ತಿಯನ್ನು ಕೊಡು ತಾಯೆ. ಇಗೋ ತೆಗೆದುಕೊ ನಿನ್ನ ಶುಚಿಯನ್ನು, ಇಗೋ ತೆಗೆದುಕೊ ನಿನ್ನ ಅಶುಚಿ ಯನ್ನು, ನನಗೆ ಶುದ್ಧಭಕ್ತಿಯನ್ನು ಕರುಣಿಸು ತಾಯೆ. ಇಗೋ ತೆಗೆದುಕೊ ನಿನ್ನ ಕೆಟ್ಟದ್ದನ್ನು, ಇಗೋ ತೆಗೆದುಕೊ ನಿನ್ನ ಒಳ್ಳೆಯದನ್ನು, ನನಗೆ ಶುದ್ಧಭಕ್ತಿಯನ್ನು ನೀಡು ತಾಯೆ. ಇಗೋ ತೆಗೆದುಕೊ ನಿನ್ನ ಪುಣ್ಯವನ್ನು, ಇಗೋ ತೆಗೆದುಕೋ ನಿನ್ನ ಪಾಪವನ್ನು, ನನಗೆ ಶುದ್ಧಭಕ್ತಿಯನ್ನು ಕರುಣಿಸು ತಾಯೆ.’ ಇವುಗಳನ್ನೆಲ್ಲಾ ತೆಗೆದುಕೋ ಅಂತಲೇನೋ ಹೇಳಿದೆ, ಆದರೆ ಆಗ ‘ಹೇ ತಾಯೆ, ಇಗೋ ತೆಗೆದುಕೊ ನಿನ್ನ ಸತ್ಯವನ್ನು, ಇಗೋ ತೆಗೆದುಕೊ ನಿನ್ನ ಅಸತ್ಯವನ್ನು’, ಎಂದು ಹೇಳಲಾಗಲಿಲ್ಲ. ಭಗವತಿಯ ಪಾದಪದ್ಮಗಳಲ್ಲಿ ಎಲ್ಲವನ್ನೂ ಅರ್ಪಿಸಿಬಿಟ್ಟೆ. ಆದರೆ ಸತ್ಯವೊಂದನ್ನು ಮಾತ್ರ ಅರ್ಪಿಸಲಾಗಲಿಲ್ಲ.”
ಬ್ರಾಹ್ಮಸಮಾಜದ ಪದ್ಧತಿಗನುಸಾರ ಉಪಾಸನೆ ಆರಂಭವಾಯಿತು. ಆಚಾರ್ಯ ವೇದಿಕೆಯ ಮೇಲೆ ಕುಳಿತಿದ್ದಾನೆ. ಪ್ರಾರ್ಥನೆಯಾದ ನಂತರ ಆತ ಪರಬ್ರಹ್ಮ ಸಂಬಂಧವಾಗಿ ವೇದೋಕ್ತಮಂತ್ರಗಳನ್ನು ಉಚ್ಚರಿಸಲಾರಂಭಿಸಿದ್ದಾನೆ. ಬ್ರಾಹ್ಮಭಕ್ತರೆಲ್ಲರೂ ಒಕ್ಕೊರಳಿನಿಂದ ಆ ಪುರಾತನ ಆರ್ಯಋಷಿಗಳ ಶ್ರೀಮುಖದಿಂದ ಹೊರಬಿದಂತಹ, ಅವರ ಪವಿತ್ರ ನಾಲಗೆ ಯಿಂದ ಉಚ್ಚರಿಸಲ್ಪಟ್ಟಂಥ “ಸತ್ಯಂ ಜ್ಞಾನಂ ಅನಂತಂ ಬ್ರಹ್ಮ”, “ಆನಂದರೂಪಮಮೃತಂ ಯದ್ವಿಭಾತಿ”, “ಶಾಂತಂ ಶಿವಮದ್ವೈತಮ್”, “ಶುದ್ಧಮ್ ಅಪಾಪವಿದ್ಧಮ್” ಎಂಬ ಮಂತ್ರಗಳನ್ನು ಉಚ್ಚರಿಸಲಾರಂಭಿಸಿದ್ದಾರೆ. ಪ್ರಣವ ಸಂಯುಕ್ತ ಈ ಉಚ್ಚಾರಣೆಯ ಧ್ವನಿ ಭಕ್ತರ ಹೃದಯಾಕಾಶದಲ್ಲಿ ಪ್ರತಿಧ್ವನಿಯಾಗತೊಡಗಿದೆ. ಎಲ್ಲರೂ ಕಣ್ಣುಮುಚ್ಚಿ ವೇದೋಕ್ತ ಸಗುಣ ಬ್ರಹ್ಮನ ಮೇಲೆ ಸ್ವಲ್ಪಹೊತ್ತಿನಿಂದ ಧ್ಯಾನದಲ್ಲಿ ತೊಡಗಿದ್ದಾರೆ.
ಪರಮಹಂಸರು ಭಾವದಲ್ಲಿ ನಿಮಗ್ನರಾಗಿದ್ದಾರೆ. ಬಾಯಲ್ಲಿ ಯಾವ ಮಾತೂ ಇಲ್ಲ. ಸ್ಥಿರದೃಷ್ಟಿಯುಳ್ಳವರಾಗಿ ಚಿತ್ರದ ಗೊಂಬೆಯ ಹಾಗೆ ಕುಳಿತಿದ್ದಾರೆ. ಅವರ ಆತ್ಮಪಕ್ಷಿ ಎಲ್ಲೋ ಆನಂದದಿಂದ ವಿಹರಿಸುತ್ತಿದೆ. ಅವರ ದೇಹ ಮಾತ್ರ ಶೂನ್ಯಮಂದಿರದಲ್ಲಿ ಬಿದ್ದಿದೆ. ಪ್ರಕೃತಿಸ್ಥ ರಾದ ನಂತರ ಕಣ್ಣು ತೆರೆದು ನೋಡುತ್ತಾರೆ, ಸಭಿಕರೆಲ್ಲರೂ ನೆಟ್ಟ ದೃಷ್ಟಿಯುಳ್ಳವರಾಗಿ ತಮ್ಮನ್ನೇ ನೋಡುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ “ಬ್ರಹ್ಮ! ಬ್ರಹ್ಮ!” ಅಂತ ಹೇಳುತ್ತ ಎದ್ದು ನಿಂತುಕೊಂಡುಬಿಟ್ಟಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಉಪಾಸನೆ ಮುಗಿದು ಬ್ರಾಹ್ಮಭಕ್ತರು ತಾಳ ಮೃದಂಗಗಳೊಡನೆ ಸಂಕೀರ್ತನೆ ಮಾಡಲಾರಂಭಿಸಿದ್ದಾರೆ. ಪರಮಹಂಸರು ಪ್ರೇಮಾ ನಂದದಿಂದ ಮತ್ತರಾಗಿ ಅವರೊಡನೆ ಹಾಡುತ್ತ ನರ್ತಿಸಲಾರಂಭಿಸಿದ್ದಾರೆ. ಎಲ್ಲರೂ ಮುಗ್ಧ ರಾಗಿ ಆ ನೃತ್ಯವನ್ನು ನೋಡುತ್ತಿದ್ದಾರೆ. ವಿಜಯನೂ ಉಳಿದ ಭಕ್ತರೂ ಅವರನ್ನು ಸುತ್ತುಗಟ್ಟಿ ನರ್ತಿಸುತ್ತಿದ್ದಾರೆ. ಅಲ್ಲಿ ನೆರೆದಿದ್ದವರೆಲ್ಲರೂ ಆ ಅದ್ಭುತ ದೃಶ್ಯವನ್ನು ನೋಡುತ್ತ, ಕೀರ್ತನಾ ನಂದವನ್ನು ಸವಿಯುತ್ತ ಈ ಪ್ರಪಂಚವನ್ನೇ ಮರೆತುಬಿಟ್ಟಂತೆ ಕಾಣುತ್ತಿದ್ದಾರೆ. ಹರಿ-ರಸ- ಮದಿರೆಯನ್ನು ಪಾನಮಾಡುತ್ತ ಈ ಕೆಲವು ನಿಮಿಷಗಳ ಮಟ್ಟಿಗಾದರೂ ವಿಷಯಾನಂದ ವನ್ನು ಮರೆತುಬಿಟ್ಟಿರುವಂತೆಯೂ, ವಿಷಯಸುಖರಸ ಅವರಿಗೆ ಕಹಿಯಾಗಿ ತೋರುತ್ತಿರು ವಂತೆಯೂ ಕಂಡುಬರುತ್ತಿದೆ.
ಕೀರ್ತನೆ ಮುಗಿದನಂತರ ಪರಮಹಂಸರ ಬಾಯಿಂದ ಬರುವ ಅಮೃತವಾಣಿಯನ್ನು ಕೇಳಲು ಎಲ್ಲರೂ ಅವರನ್ನು ಸುತ್ತಗಟ್ಟಿ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು: “ಈ ಸಂಸಾರದಲ್ಲಿ ನಿರ್ಲಿಪ್ತರಾಗಿ ಇರುವುದು ಎಂದರೆ ಬಹಳ ಕಠಿಣ, ಒಮ್ಮೆ ಪ್ರತಾಪಚಂದ್ರ ನನಗೆ ಹೇಳಿದ: ‘ಮಹಾಶಯರೆ, ನಮ್ಮ ಆದರ್ಶಪುರುಷ ಜನಕರಾಜ. ಆತ ಈ ಸಂಸಾರದಲ್ಲಿ ನಿರ್ಲಿಪ್ತನಾಗಿ ಇದ್ದ. ನಾವೂ ಆತನ ಹಾಗೆಯೇ ಇರಲು ಪ್ರಯತ್ನಿಸುತ್ತೇವೆ.’ ನಾನು ಹೇಳಿದೆ: ‘ಸುಮ್ಮನೆ ಹಾಗೆ ಭಾವಿಸಿಕೊಂಡು ಬಿಟ್ಟರೇ ಜನಕ ರಾಜನಂತಿರಲಾಗುವುದೇ? ಆತ ಎಷ್ಟೊಂದು ತಪಸ್ಸುಮಾಡಿ ಬ್ರಹ್ಮಜ್ಞಾನವನ್ನು ಪಡೆದು ಕೊಂಡಿದ್ದ! ಶೀರ್ಷಾಸನದಲ್ಲಿ ಬಹಳ ವರ್ಷಗಳ ಕಾಲ ಘೋರ ತಪಸ್ಸು ಮಾಡಿ ಅನಂತರ ಬಂದು ಸಂಸಾರದಲ್ಲಿ ಇರಲಾರಂಭಿಸಿದ.’
“ಹಾಗಾದರೆ ಸಂಸಾರಿಗಳಿಗೆ ಮಾರ್ಗವೇ ಇಲ್ಲ ಅಂತಲೇನು? ಅವಶ್ಯವಾಗಿ ಇದೆ. ಆಗಾಗ ಕೆಲವು ದಿನಗಳ ಮಟ್ಟಿಗೆ ನಿರ್ಜನಪ್ರದೇಶದಲ್ಲಿ ಸಾಧನೆಮಾಡಬೇಕು. ಆಗ ಭಕ್ತಿ ದೊರೆಯುತ್ತದೆ, ಜ್ಞಾನ ದೊರೆಯುತ್ತದೆ. ಬಳಿಕ ಹೋಗಿ ಸಂಸಾರದಲ್ಲಿ ಇದ್ದರೆ ಯಾವ ತೊಂದರೆಯೂ ಆಗದು. ನಿರ್ಜನ ಪ್ರದೇಶದಲ್ಲಿ ಸಾಧನೆಮಾಡುವಾಗ ಸಂಸಾರ ಸಂಬಂಧ ವನ್ನು ಸಂಪೂರ್ಣವಾಗಿ ತ್ಯಜಿಸಿಬಿಡಬೇಕು. ಹೆಂಡತಿ, ಮಗ, ಮಗಳು, ತಾಯಿ, ತಂದೆ, ಸೋದರ, ಸೋದರಿ, ಗೆಳೆಯರು, ಸ್ವಬಾಂಧವರು ಯಾರೂ ಹತ್ತಿರ ಸುಳಿಯದ ಹಾಗೆ ನೋಡಿಕೊಳ್ಳಬೇಕು. ಹಾಗೆ ಸಾಧನೆ ಮಾಡುವಾಗ ಭಾವಿಸಬೇಕು: ‘ನನಗೆ ಈ ಜಗತ್ತಿನಲ್ಲಿ ಯಾರೆಂದರೆ ಯಾರೂ ಇಲ್ಲ. ಭಗವಂತನೇ ನನ್ನ ಸರ್ವಸ್ವ.’ ಅಳುತ್ತ ಅಳುತ್ತ ಜ್ಞಾನಭಕ್ತಿಗಳಿಗಾಗಿ ಭಗವಂತನನ್ನು ಪ್ರಾರ್ಥಿಸಬೇಕು.
“ಎಷ್ಟು ದಿನಗಳ ಮಟ್ಟಿಗೆ ಸಂಸಾರವನ್ನು ಬಿಟ್ಟುಹೋಗಿ ನಿರ್ಜನಪ್ರದೇಶದಲ್ಲಿ ಇರಬೇಕು ಎಂದು ನೀವು ಪ್ರಶ್ನಿಸುವುದಾದರೆ, ನನ್ನ ಉತ್ತರ, ಹಾಗೆ ಕೇವಲ ಒಂದು ದಿನವಿದ್ದರೂ ಶ್ರೇಯಸ್ಕರವಾದುದೆ. ಮೂರು ದಿನದ ಮಟ್ಟಿಗೆ ಇನ್ನೂ ಒಳ್ಳೆಯದೆ. ಸಾಧ್ಯವಾದರೆ ಹನ್ನೆರಡು ದಿನವನ್ನು, ಒಂದು ತಿಂಗಳನ್ನು, ಮೂರು ತಿಂಗಳನ್ನು, ಒಂದು ವರ್ಷವನ್ನು-ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ, ಏಕಾಂತದಲ್ಲಿ ಕಳೆದು, ಜ್ಞಾನಭಕ್ತಿಗಳನ್ನು ಪಡೆದುಕೊಂಡು ಸಂಸಾರದಲ್ಲಿ ಬಂದು ಇದ್ದರೆ ವಿಶೇಷವಾಗೇನೂ ಹೆದರಬೇಕಾಗಿಲ್ಲ.
“ಕೈಗೆ ಎಣ್ಣೆ ಸವರಿಕೊಂಡು ಹಲಸಿನಹಣ್ಣು ಬಿಡಿಸಿದರೆ ಅಂಟು ಕೈಗೆ ಅಂಟುವುದಿಲ್ಲ. ಕಣ್ಣುಮುಚ್ಚಾಲೆಯಾಟವಾಡುವಾಗ ಅಜ್ಜಿಯನ್ನು ಮುಟ್ಟಿಬಿಟ್ಟದ್ದೇ ಆದರೆ, ನಿಶ್ಚಿಂತೆಯಿಂದ ಇದ್ದುಬಿಡಬಹುದು. ಒಮ್ಮೆ ಸ್ಪರ್ಶಮಣಿಯನ್ನು ಮುಟ್ಟಿ ಚಿನ್ನವಾಗಿಬಿಡಿ. ಬಳಿಕ ನಿಮ್ಮನ್ನು ಒಂದು ಸಾವಿರ ವರ್ಷ ಮಣ್ಣಿನೊಳಗೆ ಹೂತಿಟ್ಟಿದ್ದು ಹೊರಕ್ಕೆ ತೆಗೆದರೂ ಚಿನ್ನವಾಗಿಯೇ ಉಳಿದಿರುತ್ತೀರಿ.
“ಮನಸ್ಸು ಹಾಲು ಇದ್ದ ಹಾಗೆ. ಅದನ್ನು ಸಂಸಾರವೆಂಬ ನೀರಿಗೆ ಸುರಿದರೆ ಅದು ಅದರೊಡನೆ ಬೆರೆತುಕೊಂಡುಬಿಡುತ್ತದೆ. ಜನ ಹಾಲನ್ನು ನಿರ್ಜನಪ್ರದೇಶದಲ್ಲಿ ಇಟ್ಟು ಹೆಪ್ಪುಹಾಕಿ ಮೊಸರುಮಾಡಿ ಕಡೆದು ಬೆಣ್ಣೆ ತೆಗೆಯುತ್ತಾರೆ. ಹಾಗೇನೇ ನಿರ್ಜನಪ್ರದೇಶದಲ್ಲಿ ಸಾಧನೆಮಾಡಿ ಮನಸ್ಸೆಂಬ ಹಾಲಿನಿಂದ ಜ್ಞಾನ-ಭಕ್ತಿಗಳೆಂಬ ಬೆಣ್ಣೆಯನ್ನು ತೆಗೆಯುವುದಾದರೆ, ಬಳಿಕ ಆ ಬೆಣ್ಣೆಯನ್ನು ಅನಾಯಾಸವಾಗಿ ಸಂಸಾರವೆಂಬ ನೀರಿನಲ್ಲಿ ಇಡಬಹುದು. ಆಗ ಅದು ಎಂದಿಗೂ ಸಂಸಾರವೆಂಬ ನೀರಿನಲ್ಲಿ ಬೆರೆತುಹೋಗುವುದಿಲ್ಲ- ಅದು ಅದರಲ್ಲಿ ನಿರ್ಲಿಪ್ತವಾಗಿ ತೇಲುತ್ತಿರುತ್ತದೆ.”
ವಿಜಯ ಈಗತಾನೇ ಗಯೆಯಿಂದ ಬಂದಿದ್ದಾನೆ. ಅಲ್ಲಿ ಆತನಿಗೆ ನಿರ್ಜನವಾಸ, ಸಾಧುಸಂಗ ಎರಡೂ ದೊರೆಯಿತು. ಈಗ ಕಾಷಾಯವಸ್ತ್ರಧಾರಿಯಾಗಿದ್ದಾನೆ. ಆತನ ಮನಸ್ಸು ಬಹಳ ಉಚ್ಚಸ್ಥಿತಿಯಲ್ಲಿದೆ, ಸರ್ವದಾ ಅಂತರ್ಮುಖವಾಗಿರುವ ಹಾಗೆ. ಪರಮಹಂಸರ ಹತ್ತಿರ ತಲೆತಗ್ಗಿಸಿ ಕುಳಿತಿದ್ದಾನೆ. ಏನನ್ನೋ ಭಾವಿಸುತ್ತಿರುವಂತೆ ಕಾಣುತ್ತಿದೆ.
ಪರಮಹಂಸರು ವಿಜಯನ ಕಡೆ ನೋಡುತ್ತ ನೋಡುತ್ತ ಇದ್ದ ಹಾಗೆ ಕೇಳುತ್ತಿದ್ದಾರೆ: “ವಿಜಯಾ, ನಿನಗೆ ಇಳಿದುಕೊಳ್ಳಲು ಕೊಠಡಿ ದೊರೆತಿರುವುದೆ?
“ಒಂದು ಕಥೆ ಹೇಳುತ್ತೇನೆ ಕೇಳು: ಇಬ್ಬರು ಸಾಧುಗಳು ದೇಶಾಟನೆ ಮಾಡುತ್ತ ಮಾಡುತ್ತ ಒಂದು ಪಟ್ಟಣಕ್ಕೆ ಬಂದು ಸೇರಿದರು. ಒಬ್ಬ ಚಕಿತದೃಷ್ಟಿಯಿಂದಲೂ, ಆಶ್ಚರ್ಯ ದಿಂದಲೂ ಬಾಯಿ ತೆರೆದು ಪೇಟೆ, ಅಂಗಡಿ, ಮುಂಗಟ್ಟು, ಮನೆಮಠ ಎಲ್ಲವನ್ನೂ ನೋಡುತ್ತಿದ್ದ. ಆ ಸಂದರ್ಭದಲ್ಲಿ ಆತ ತನ್ನ ಗೆಳೆಯ ಸಾಧುವನ್ನು ಸಂಧಿಸಿದ. ಆಗ ಆ ಸಾಧು ಈ ಸಾಧುವನ್ನು ಕೇಳಿದ: ‘ನೀನು ಬಾಯಿ ತೆರೆದುಕೊಂಡು ಪಟ್ಟಣ ನೋಡುತ್ತಿದ್ದೀಯಲ್ಲ, ನಿನ್ನ ಗಂಟುಮೂಟೆಗಳೆಲ್ಲ ಎಲ್ಲಿ?’ ಆತ ಹೇಳಿದ. ‘ನಾನು ಮೊದಲು ಇಳಿದುಕೊಳ್ಳಲು ಕೊಠಡಿ ಪತ್ತೆಮಾಡಿ, ಅದರಲ್ಲಿ ಗಂಟುಮೂಟೆಗಳನ್ನೆಲ್ಲಾ ಇಟ್ಟು, ಕೊಠಡಿಗೆ ಬೀಗ ಹಾಕಿ, ನಿಶ್ಚಿಂತನಾಗಿ ಈಗ ಪಟ್ಟಣದಲ್ಲಿ ತಮಾಷೆ ನೋಡುತ್ತಿದ್ದೇನೆ.’
“ಅದಕ್ಕಾಗಿಯೇ ವಿಜಯ, ನಾನು ನಿನ್ನನ್ನು ಕೇಳಿದುದು, ಇಳಿದುಕೊಳ್ಳಲು ನಿನಗೆ ಕೊಠಡಿ ದೊರೆತಿರುವುದೇ ಎಂದು. (ಮಾಸ್ಟರ್ ಮೊದಲಾದವರಿಗೆ) ನೋಡಿ, ಇದುವರೆಗೆ ವಿಜಯನ ಹೃದಯ ಚಿಲುಮೆ ಮುಚ್ಚಿಕೊಂಡಿತ್ತು. ಈಗ ತೆರೆದುಕೊಂಡುಬಿಟ್ಟಿದೆ.
(ವಿಜಯನಿಗೆ) “ನೋಡು, ಶಿವನಾಥನಿಗೆ ವರ್ಣಿಸಲಾರದ ಜಂಜಾಟ. ಆತ ವಾರ್ತಾಪತ್ರಿಕೆಗಳಿಗೆ ಬರೆದುಕೊಡಬೇಕಾಗಿದೆ. ಇನ್ನೂ ಏನೇನೋ ಕೆಲಸಕಾರ್ಯಗಳಲ್ಲಿ ತೊಡಗಿರಬೇಕಾಗಿದೆ. ಪ್ರಾಪಂಚಿಕ ಕರ್ಮಗಳಿಗೆ ಕೈ ಹಾಕಿತು ಎಂದರೆ ಅಶಾಂತಿ ಯುಂಟಾಗುತ್ತದೆ; ಬಹಳವಾಗಿ ಚಿಂತೆ ಯೋಚನೆ ಬಂದುಬಿಡುತ್ತವೆ.
“ಶ್ರೀಮದ್ಭಾಗವತದಲ್ಲಿ ಹೇಳಿದೆ, ಅವಧೂತನ ಇಪ್ಪತ್ತನಾಲ್ಕು ಗುರುಗಳಲ್ಲಿ ಹದ್ದೂ ಒಂದು ಎಂದು. ಒಂದು ಜಾಗದಲ್ಲಿ ಬೆಸ್ತರು ಮೀನು ಹಿಡಿಯುತ್ತಿದ್ದರು. ಒಂದು ಹದ್ದು ಮೇಲಿಂದ ಪಕ್ಕನೆ ಕೆಳಕ್ಕೆ ಇಳಿದುಬಂದು ಮೀನನ್ನು ಹಿಡಿದುಕೊಂಡು ಹೋಯಿತು. ಹದ್ದಿನ ಹತ್ತಿರ ಮೀನು ಇರುವುದನ್ನು ಕಂಡು, ಸಾವಿರಾರು ಕಾಗೆಗಳು ಅದರ ಬೆನ್ನು ಹತ್ತಿ ‘ಕಾ, ಕಾ’ ಅಂತ ಕೂಗುತ್ತ ಅದಕ್ಕೆ ಚಿತ್ರಹಿಂಸೆ ಕೊಡಲಾರಂಭಿಸಿದುವು. ಹದ್ದು ಮೀನಿನೊಡನೆ ಯಾವ ದಿಕ್ಕಿಗೆ ಹಾರಿಹೋದರೂ ಕಾಗೆಗಳೂ ಅದನ್ನು ಅಟ್ಟಿಸಿಕೊಂಡು ಆ ದಿಕ್ಕಿಗೇ ಹೋಗುತ್ತಿದ್ದುವು. ಹದ್ದು ಮೊದಲು ದಕ್ಷಿಣ ದಿಕ್ಕಿಗೆ ಹೋಯಿತು. ಬಳಿಕ ಉತ್ತರಕ್ಕೆ ಹೋಯಿತು. ಅಲ್ಲಿಗೂ ಅವು ಹೋದುವು. ಅನಂತರ ಪೂರ್ವ-ಪಶ್ಚಿಮ ದಿಕ್ಕುಗಳಿಗೆ ಹೋದರೂ ಅವು ಹಿಂಬಾಲಿಸುವುದನ್ನು ಬಿಡಲಿಲ್ಲ. ಕೊನೆಗೆ ಹದ್ದಿಗೆ ದಿಗ್ಭ್ರಮೆ ಹಿಡಿದು ಸಿಕ್ಕಿಸಿಕ್ಕಿದ ಕಡೆಗೆ ಹಾರುತ್ತಿದ್ದಾಗ ಮೀನು ಕಳಚಿಕೊಂಡು ಬಿದ್ದುಹೋಯಿತು. ಒಡನೇ ಕಾಗೆಗಳು ಹದ್ದನ್ನು ಸುಮ್ಮನೆ ಬಿಟ್ಟುಬಿಟ್ಟು ಮೀನಿನ ಕಡೆ ಹಾರಿ ಹೋಗಲಾರಂಭಿಸಿದುವು. ಹದ್ದು ಬಳಿಕ ನಿಶ್ಚಿಂತೆಯಿಂದ ಹಾರಿಹೋಗಿ ಒಂದು ಮರದ ಕೊಂಬೆಯ ಮೇಲೆ ಕುಳಿತು ಭಾವಿಸಲಾರಂಭಿಸಿತು: ‘ಆ ಹಾಳಾದ ಮೀನೇ ನನ್ನ ಇಷ್ಟೊಂದು ತೊಂದರೆಗಳಿಗೆಲ್ಲಾ ಮೂಲ. ಈಗ ಅದನ್ನು ನಾನು ಬಿಸಾಡಿಬಿಟ್ಟಿರುವುದರಿಂದ ನಿಶ್ಚಿಂತನಾಗಿದ್ದೇನೆ.’
“ಅವಧೂತ ಹದ್ದಿನಿಂದ ಈ ಕೆಳಗಿನ ಪಾಠ ಕಲಿತುಕೊಂಡ. ಎಲ್ಲಿಯವರೆಗೆ ಹತ್ತಿರ ಮೀನು ಇರುವುದೋ, ಎಂದರೆ ಕಾಮನೆ ಇರುವುದೋ, ಅಲ್ಲಿಯವರೆಗೆ ಪ್ರಾಪಂಚಿಕ ಕೆಲಸ ಕಾರ್ಯಗಳಲ್ಲಿ ತೊಡಗಿರಬೇಕಾಗುತ್ತದೆ. ಅದರಿಂದಾಗಿ ನಾನಾ ಭಾವನೆಗಳು, ಚಿಂತೆ ಹಾಗೂ ಅಶಾಂತಿ. ಕಾಮನಾತ್ಯಾಗವಾದೊಡನೆಯೇ ಕರ್ಮ ನಾಶವಾಗುತ್ತದೆ. ಶಾಂತಿ ದೊರೆಯುತ್ತದೆ.
“ಆದರೆ ನಿಷ್ಕಾಮಕರ್ಮ ಒಳ್ಳೆಯದು. ಅದು ಅಶಾಂತಿಯನ್ನು ತರುವುದಿಲ್ಲ. ಆದರೆ ನಿಷ್ಕಾಮದಿಂದಿರುವುದು ಬಹಳ ಕಠಿಣ. ಭಾವಿಸುತ್ತೇವೆ, ನಿಷ್ಕಾಮ ಕರ್ಮ ಮಾಡುತ್ತಿದ್ದೇವೆ ಎಂದು. ಆದರೆ ಕಾಮನೆ ನಮಗೆ ಅರಿವೇ ಆಗದ ರೀತಿಯಲ್ಲಿ ಎಲ್ಲಿಂದಲೋ ನುಸುಳಿಕೊಂಡು ಬಂದುಬಿಡುತ್ತದೆ. ಮೊದಲು ಬಹಳವಾಗಿ ಸಾಧನೆಮಾಡಿದ್ದರೆ, ಅದರ ಬಲದಿಂದ ಕೆಲಕೆಲ ವರ ಕೈಯಲ್ಲಿ ನಿಷ್ಕಾಮಕರ್ಮ ಸಾಧ್ಯವಾಗಬಹುದು. ಭಗವಂತನ ದರ್ಶನ ದೊರೆತ ನಂತರ ನಿಷ್ಕಾಮಕರ್ಮವನ್ನು ಅನಾಯಾಸದಿಂದ ಮಾಡಬಹುದು. ಭಗವದ್ದರ್ಶನ ದೊರೆತನಂತರ ಪ್ರಾಯಿಕವಾಗಿ ಕರ್ಮತ್ಯಾಗ ಆಗಿಬಿಡುತ್ತದೆ. ಒಬ್ಬಿಬ್ಬರು (ನಾರದಾದಿ) ಲೋಕಶಿಕ್ಷಣಕ್ಕಾಗಿ ಕರ್ಮಮಾಡುತ್ತಾರೆ.
“ಅವಧೂತ ಒಂದು ಜೇನುಹುಳವನ್ನು ತನ್ನ ಗುರುವಾಗಿ ಸ್ವೀಕರಿಸಿದ್ದ. ಜೇನುಹುಳು ಗಳು ಬಹಳ ದಿನಗಳವರೆಗೆ ದುಡಿದು ಜೇನು ಶೇಖರಿಸುತ್ತವೆ. ಆದರೆ ಆ ಜೇನನ್ನು ಅವು ಕುಡಿದು ಆನಂದಪಡುವಂತಿಲ್ಲ. ಮನುಷ್ಯ ಬಂದು ಗೂಡನ್ನು ಕಿತ್ತು ಜೇನನ್ನು ಅಪಹರಿಸಿ ಕೊಂಡು ಹೋಗಿಬಿಡುತ್ತಾನೆ. ಜೇನುಹುಳಗಳಂದ ಅವಧೂತ ಪಾಠ ಕಲಿತುಕೊಂಡ. ಸಂಚಯ ಮಾಡಿಡಕೂಡದು ಎಂದು. ಸಾಧುಗಳು ಭಗವಂತನ ಮೇಲೆ ತಮ್ಮ ಭಾರವನ್ನು ಸಂಪೂರ್ಣವಾಗಿ ಹಾಕಬೇಕು. ಅವರು ಸಂಚಯ ಮಾಡಿಡಕೂಡದು. ಆದರೆ ಈ ನಿಯಮ ಸಂಸಾರಿಗಳಿಗಲ್ಲ. ಸಂಸಾರಿ ತನ್ನ ಸಂಸಾರಪೋಷಣೆ ಮಾಡಬೇಕಾಗಿದೆ; ಆದ್ದರಿಂದ ಆತನಿಗೆ ಸಂಚಯದ ಆವಶ್ಯಕತೆ ಇದೆ. ಹಕ್ಕಿ ಮತ್ತು ಸಾಧು ಸಂಚಯಮಾಡಿಡುವುದಿಲ್ಲ. ಆದರೆ ಹಕ್ಕಿಗೆ ಮರಿಯಾದರೆ ಅದೂ ಸಂಚಯ ಮಾಡುತ್ತದೆ. ಮರಿಗಳಿಗಾಗಿ ಕೊಕ್ಕಿನಲ್ಲಿ ಆಹಾರ ಶೇಖರಿಸಿ ತರುತ್ತದೆ.
“ಒಂದು ವಿಷಯ, ವಿಜಯ. ಸಾಧುವಿನ ಹತ್ತಿರ ಗಂಟುಮೂಟೆ ಇತ್ತು ಎಂದರೆ, ಹತ್ತಿಪ್ಪತ್ತು ಪುಟ್ಟ ಪುಟ್ಟ ಗಂಟು ಹಾಕಿರುವ ಬಟ್ಟೆ ಇತ್ತು ಎಂದರೆ ಆತನನ್ನು ನಂಬಬೇಡ. ನಾನು ಪಂಚವಟಿಯಲ್ಲಿ ಆಲದ ಮರದ ಕೆಳಗೆ ಅಂಥ ಸಾಧುಗಳನ್ನು ನೋಡಿರುತ್ತೇನೆ. ಒಮ್ಮೆ ಇಬ್ಬರು ಮೂವರು ಕುಳಿತಿದ್ದರು. ಒಬ್ಬ ಬೇಳೆಯಿಂದ ಕಲ್ಲು ಆರಿಸುತ್ತಿದ್ದ; ಉಳಿದವರು ಬಟ್ಟೆ ಹೊಲಿದುಕೊಳ್ಳುತ್ತಿದ್ದರು. ಎಲ್ಲರೂ ಕೂಡಿ ಒಬ್ಬ ದೊಡ್ಡ ಮನುಷ್ಯನ ಮನೆಯ ಔತಣದ ಸಂಬಂಧವಾಗಿ ಹರಟೆ ಹೊಡೆಯುತ್ತಿದ್ದರು. ಅವರು ತಮ್ಮೊಳಗೆ ತಾವೇ ಮಾತನಾಡಿಕೊಳ್ಳು ತ್ತಿದ್ದರು: ‘ನೋಡಿ, ಆ ಸಾಹುಕಾರ ಒಂದು ಲಕ್ಷ ರೂಪಾಯಿ ಖರ್ಚುಮಾಡಿದ್ದಾನೆ. ಸಾಧುಗಳಿಗೆ ಹೊಟ್ಟೆ ಬಿರಿಯುವ ಹಾಗೆ ಊಟಕ್ಕೆ ಹಾಕಿಸಿದ. ಪೂರಿ, ಚಿರೋಟಿ, ಪೇಡಾ, ಬರ್ಫೀ, ಮಾಲ್ಟೋವಾ (ಒಂದು ರೀತಿಯ ಕಜ್ಜಾಯ) ಇನ್ನೂ ಏನೇನೋ ಮಾಡಿಸಿದ್ದ.” (ಎಲ್ಲರೂ ನಗುತ್ತಿದ್ದಾರೆ.)
ವಿಜಯ: “ಹೌದು, ನಿಜ. ಗಯೆಯಲ್ಲಿ ಈ ವಿಧದ ಸಾಧುಗಳನ್ನು ನೋಡಿದ್ದೇನೆ. ಅವರಿಗೆ ‘ಗಯೆಯ ಲೋಟಾವಾಲ ಸಾಧು’ ಅಂತ ಹೆಸರು.”
ಶ್ರೀರಾಮಕೃಷ್ಣರು ವಿಜಯನಿಗೆ: “ಭಗವಂತನಲ್ಲಿ ಪ್ರೇಮಾಂಕುರವಾಯಿತು ಎಂದರೆ, ಕರ್ಮತ್ಯಾಗ ತಾನಾಗಿಯೇ ಆಗಿಬಿಡುತ್ತದೆ. ಭಗವಂತ ಯಾರ ಕೈಯಲ್ಲಾದರೂ ಕರ್ಮ ಮಾಡಿಸುತ್ತಿರುವುದಾದರೆ ಅವರು ಬೇಕಾದರೆ ಮಾಡಲಿ. ಈಗ ನಿನಗೆ ಎಲ್ಲವನ್ನೂ ತ್ಯಾಗ ಮಾಡುವ ಸಮಯ ಬಂದಿದೆ. ಎಲ್ಲವನ್ನೂ ತ್ಯಜಿಸಿ ಹೇಳು: ‘ಮನಸ್ಸೇ, ನೀನು ನಾನು ಇಬ್ಬರು ಮಾತ್ರ ಭಗವತಿಯ ದರ್ಶನ ಮಾಡೋಣ. ನಮ್ಮಿಬ್ಬರ ಮಧ್ಯೆ ಬೇರೆ ಯಾರೂ ಬಾರದೆ ಇರಲಿ.’
ಹೀಗೆಂದು ಹೇಳಿ ತಮ್ಮ ಅತುಲನೀಯ ಕಂಠದಿಂದ ಮಾಧುರ್ಯವನ್ನು ವರ್ಷಿಸುತ್ತ ಹಾಡಲಾರಂಭಿಸಿದ್ದಾರೆ:
ಅಂತರಂಗದಲಿ ಶ್ರೀಘನಶ್ಯಾಮೆಯ
ಆದರಿಸೆಲೆ ಮನವೆ…….
ಶ್ರೀರಾಮಕೃಷ್ಣರು ವಿಜಯನಿಗೆ ಹೇಳುತ್ತಿದ್ದಾರೆ: “ಭಗವಂತನಲ್ಲಿ ಶರಣಾಗತನಾಗಿ ಲಜ್ಜೆ, ಭಯ, ಇವನ್ನೆಲ್ಲಾ ತ್ಯಜಿಸಿಬಿಡು. ‘ನಾನು ಭಗವನ್ನಾಮೋಚ್ಚಾರಣೆ ಮಾಡುತ್ತ ನರ್ತಿಸಿದ್ದೇ ಆದರೆ, ನನ್ನನ್ನು ಏನನ್ನುತ್ತಾರೆ?’ ಎಂಬ ಭಾವನೆಗಳನ್ನೆಲ್ಲಾ ಸಂಪೂರ್ಣವಾಗಿ ತ್ಯಜಿಸಿಬಿಡು. ‘ಲಜ್ಜೆ, ದ್ವೇಷ, ಭಯ ಇವು ಮೂರು ಇರುವವರೆಗೆ ಭಗವಂತನ ಸಾಕ್ಷಾತ್ಕಾರ ದೊರೆಯುವುದಿಲ್ಲ’ ಎಂಬ ಹೇಳಿಕೆ, ಅಕ್ಷರಶಃ ಸತ್ಯ. ಲಜ್ಜೆ, ಭಯ, ದ್ವೇಷ, ಜಾತ್ಯಭಿಮಾನ, ಗೋಪ್ಯ ಪ್ರವೃತ್ತಿ ಇವೆಲ್ಲಾ ಪಾಶಗಳು. ಇವೆಲ್ಲಾ ಹೋದ ನಂತರ ಜೀವನಿಗೆ ಮುಕ್ತಿ ದೊರೆಯುತ್ತದೆ.
“ಪಾಶಬದ್ಧನೆ ಜೀವ, ಪಾಶಮುಕ್ತನೆ ಶಿವ. ಭಗವಂತನ ಪ್ರೇಮವೆಂಬುದು ಅತ್ಯಂತ ದುರ್ಲಭ ವಸ್ತು.
“ಮೊದಲು ಉಂಟಾಗುವುದು ಭಕ್ತಿ. ಸತಿಗೆ ಪತಿಯಲ್ಲಿರುವ ನಿಷ್ಠೆಯ ಹಾಗೆ, ಭಕ್ತನಿಗೆ ಭಗವಂತನಲ್ಲಿ ನಿಷ್ಠೆಯುಂಟಾಗುವುದಾದರೆ, ಆಗ ಹೃದಯದಲ್ಲಿ ಭಕ್ತಿ ಅಂಕುರವಾಗುತ್ತದೆ. ಶುದ್ಧಭಕ್ತಿಯುಂಟಾಗುವುದು ಬಹಳ ಕಠಿಣ. ಈ ಭಕ್ತಿಯುಂಟಾದಾಗ ಪ್ರಾಣ, ಮನಸ್ಸು, ಭಗವಂತನಲ್ಲಿ ಲೀನವಾಗಿಬಿಡುತ್ತವೆ.
“ಬಳಿಕ ಭಾವ. ಇದು ಉಂಟಾದಾಗ ಭಕ್ತ ಮೂಕನಾಗುತ್ತಾನೆ. ವಾಯು ಸ್ಥಿರವಾಗಿ ಬಿಡುತ್ತದೆ. ತಾನಾಗಿಯೇ ಕುಂಭಕ ಉಂಟಾಗಿಬಿಡುತ್ತದೆ. ಇದು ಬಂದೂಕ ಹೊಡೆಯುವಾಗ ಹೊಡೆಯುವವನ ಮಾತು ಕಟ್ಟಿಹೋಗಿ ವಾಯು ಸ್ಥಿರವಾಗಿಬಿಡುವುದಿಲ್ಲವೆ, ಹಾಗೆ.
“ಆದರೆ ಪ್ರೇಮ, ಬಹುದೂರದ ಮಾತು. ಚೈತನ್ಯದೇವನಿಗೆ ಪ್ರೇಮವುಂಟಾಗಿತ್ತು. ಭಗವತ್ಪ್ರೇಮ ಉಂಟಾಯಿತು ಎಂದರೆ, ಬಾಹ್ಯ ವಸ್ತುಗಳೆಲ್ಲಾ ನೆನಪಿಗೆ ಬಾರದೆ ಹೋಗುತ್ತವೆ. ಜಗತ್ತೇ ಮರೆತುಹೋಗಿಬಿಡುತ್ತದೆ. ಅತ್ಯಂತ ಪ್ರಿಯವಾದ ನಮ್ಮ ಈ ಸ್ವಂತ ದೇಹ, ಇದೂ ಕೂಡ ಮರೆತುಹೋಗಿಬಿಡುತ್ತದೆ.”
ಪರಮಹಂಸರು ಈಗ ಹಾಡುತ್ತಿದ್ದಾರೆ:
ಓ ಎಂದಿಗೋ ಇನ್ನೆಂದಿಗೋ,
ಎದೆಯೊಳೊಲವಿನ ಕಿಡಿಯು ಜ್ವಲಿಸುವ
ದಿವ್ಯಶುಭದಿನವೆಂದಿಗೋ…….
ಈ ರೀತಿಯಾಗಿ ಮಾತುಕತೆ ನಡೆಯುತ್ತಿದ್ದಾಗ, ಇನ್ನೂ ಕೆಲವು ಮಂದಿ ಆಹ್ವಾನಿತ ಬ್ರಾಹ್ಮಭಕ್ತರು ವಿಜಯನ ಹತ್ತಿರಬಂದು ಕುಳಿತುಕೊಂಡರು. ಅವರಲ್ಲಿ ಕೆಲವರು ಪಂಡಿತರು, ಇನ್ನು ಕೆಲವರು ಉಚ್ಚ ಸರ್ಕಾರಿ ಉದ್ಯೋಗಸ್ಥರು.
ಪರಮಹಂಸರು ಹೇಳಿದ್ದರು, ಭಾವವುಂಟಾದರೆ ವಾಯು ಸ್ಥಿರವಾಗುತ್ತದೆ ಎಂಬುದಾಗಿ. ಈಗ ಅವರು ಮಾತು ಮುಂದುವರಿಸುತ್ತಿದ್ದಾರೆ: “ಅರ್ಜುನ ಮತ್ಸ್ಯಯಂತ್ರವನ್ನು ಭೇದಿಸುವ ಸಮಯದಲ್ಲಿ ಆತನ ದೃಷ್ಟಿಯೆಲ್ಲವೂ ಮತ್ಸ್ಯದ ಕಣ್ಣಿನಲ್ಲಿಯೇ ಇತ್ತು. ಅದರ ಬೇರೆ ಯಾವ ಅಂಗವೂ ಆತನ ಕಣ್ಣಿಗೆ ಬೀಳಲಿಲ್ಲ. ಈ ರೀತಿಯ ಅವಸ್ಥೆಯಲ್ಲಿ ವಾಯು ಸ್ಥಿರವಾಗುತ್ತದೆ, ಕುಂಭಕವಾಗುತ್ತದೆ.
“ಭಗವದ್ದರ್ಶನದ ಇನ್ನೊಂದು ಲಕ್ಷಣ, ದೇಹದೊಳಗಿನಿಂದ ಮಹಾವಾಯು ಗರ್ಗರ್ ಶಬ್ದ ಮಾಡುತ್ತ ಎದ್ದು ತಲೆಯ ಕಡೆಗೆ ನುಗ್ಗುತ್ತದೆ. ಆಗ ಸಮಾಧಿಯುಂಟಾದರೆ ಭಗವಂತನ ದರ್ಶನ ದೊರೆಯುತ್ತದೆ.”
ಹೊಸದಾಗಿ ಬಂದ ಬ್ರಾಹ್ಮಭಕ್ತರ ಕಡೆ ನೋಡಿ ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ಭಗವಂತನಲ್ಲಿ ಭಕ್ತಿಯಿಲ್ಲದ ನಾಮಮಾತ್ರ ಪಂಡಿತರು ಅಸಂಬದ್ಧವಾಗಿ ಮಾತುಕತೆ ಆಡುತ್ತಾರೆ. ಪಂಡಿತ ಸಮಾಧ್ಯಾಯಿ, ತನ್ನ ಸಂಭಾಷಣೆಯ ಸಮಯದಲ್ಲಿ ಒಮ್ಮೆ ಹೇಳಿದ: ‘ಭಗವಂತ ನೀರಸ, ನಾವು ನಮ್ಮ ಪ್ರೇಮ ಭಕ್ತಿಗಳಿಂದ ಆತನನ್ನು ಸರಸನನ್ನಾಗಿ ಮಾಡಿಕೊಳ್ಳ ಬೇಕು.’ ಹಾಗೇ ನೋಡಿ! ವೇದ ಯಾರನ್ನು ‘ರಸಸ್ವರೂಪ’ ಅಂತ ಘೋಷಿಸುತ್ತಿದೆಯೋ ಆತನನ್ನು ‘ನೀರಸ’ ಅಂತ ವರ್ಣಿಸುವುದು! ಇದು ತೋರಿಸುತ್ತದೆ. ಆ ಪಂಡಿತನಿಗೆ ಭಗವಂತನ ನಿಜಸ್ವರೂಪ ಏನು ಎಂಬುದು ಸ್ವಲ್ಪವೂ ಗೊತ್ತಿಲ್ಲ ಎಂಬುದನ್ನು. ಅದಕ್ಕಾಗಿಯೆ ಆತನ ಮಾತಿನಲ್ಲಿ ಅಸಂಬದ್ಧತೆ.
“ಒಮ್ಮೆ ಒಬ್ಬ ಹೇಳಿದ: ‘ನಮ್ಮ ಮಾವನ ಮನೆಯ ದನದ ಕೊಟ್ಟಿಗೆ ತುಂಬ ಕುದುರೆಗಳು ಇವೆ’ ಎಂದು. ಇದರಿಂದ ಅರಿತುಕೊಳ್ಳಬೇಕು, ಅಲ್ಲಿ ಒಂದು ಕುದುರೆಯೂ ಇಲ್ಲ ಎಂಬುದಾಗಿ. ಯಾರೂ ದನದ ಕೊಟ್ಟಿಗೆಯಲ್ಲಿ ಕುದುರೆಯನ್ನು ಕಟ್ಟಿಹಾಕುವುದಿಲ್ಲ.
“ಕೆಲವರು ತಮ್ಮ ಐಶ್ವರ್ಯದ, ಧನದ, ಕೀರ್ತಿಯ, ಪದವಿಯ, ಅಹಂಕಾರವನ್ನು ತೋರಿಸುತ್ತಾರೆ. ಇವೆಲ್ಲಾ ಎರಡು ದಿನದ ಬಾಳಿನವು. ಇವು ಯಾವುವೂ ಸಂಗಡ ಬರುವುದಿಲ್ಲ.”
“ಇದರ ಸಂಬಂಧವಾಗಿ ಒಂದು ಹಾಡಿದೆ:
ಎತ್ತ ಹೋದರು ಸುತ್ತಲೆಲ್ಲೂ
ನನಗೆ ಯಾರು ಇಲ್ಲ ಜಗದೊಳು
ಎಂಬುದನು ನೀ ನೆನಪಿಡು………
“ಧನದ ಅಹಂಕಾರವನ್ನು ತೋರಿಸುವುದು ಒಳ್ಳೆಯದಲ್ಲ. ನೀನು ಧನಿಕ ಎಂದು ನೀನು ಹೇಳಿಕೊಳ್ಳುವುದಾದರೆ, ನಿನಗಿಂತಲೂ ಹೆಚ್ಚಿನ ಧನಿಕರು, ಅವರಿಗಿಂತಲೂ ಇನ್ನೂ ಹೆಚ್ಚಿನ ಧನಿಕರು, ಹೀಗೆ ಇನ್ನೂ ಹೆಚ್ಚು ಹೆಚ್ಚಿನ ಧನಿಕರು ಇದ್ದಾರೆ ಎಂಬುದನ್ನು ಮರೆಯಕೂಡದು. ಸಾಯಂಕಾಲವಾದ ನಂತರ ಮಿಣುಕು ಹುಳುಗಳು ಹಾರಲಾರಂಭಿಸಿದಾಗ ತಾವು ಈ ಜಗತ್ತಿಗೆ ಬೆಳಕು ಕೊಡುತ್ತಿರುವುದಾಗಿ ಅವು ಭಾವಿಸುತ್ತವೆ. ಆದರೆ ನಕ್ಷತ್ರಗಳು ಉದಯಿಸಿದೊಡನೆ ಅವುಗಳ ಅಹಂಕಾರ ಚೂರ್ಣವಾಗುತ್ತದೆ. ಬಳಿಕ ನಕ್ಷತ್ರಗಳು ಭಾವಿಸುತ್ತವೆ, ಈ ಜಗತ್ತಿಗೆ ಬೆಳಕು ಕೊಡುತ್ತಿರುವುದಾಗಿ. ಆದರೆ ಚಂದ್ರೋದಯವಾದೊಡನೆ ನಕ್ಷತ್ರಗಳು ಲಜ್ಜೆಯಿಂದ ಕಾಂತಿಹೀನವಾಗುತ್ತವೆ. ಅನಂತರ ಚಂದ್ರ ಭಾವಿಸುತ್ತಾನೆ, ತನ್ನ ಬೆಳಕಿನಿಂದ ಈ ಜಗತ್ತು ನಗುತ್ತಿದೆ, ತಾನು ಈ ಭೂಮಿಗೆ ಬೆಳಕು ಕೊಡುತ್ತಿದ್ದೇನೆ ಎಂಬುದಾಗಿ. ಬಳಿಕ ಪೂರ್ವ ದಿಗಂತ ಕೆಂಪೇರಲಾರಂಭಿಸುತ್ತದೆ. ಸೂರ್ಯ ಉದಯಿಸುತ್ತಾನೆ. ಚಂದ್ರ ಕಳೆಗುಂದಲಾರಂಭಿಸುತ್ತಾನೆ. ಸ್ವಲ್ಪ ಹೊತ್ತಾದ ನಂತರ ಆತ ಕಣ್ಣಿಗೇ ಕಾಣುವುದಿಲ್ಲ.
“ಧನಿಕರು ಇವುಗಳ ಮೇಲೆ ಚಿಂತಿಸಿದರೆ, ಅವರಲ್ಲಿ ಧನದ ಅಹಂಕಾರ ಉದಯ ವಾಗುವುದಿಲ್ಲ.”
ಮಣಿಲಾಲ ವಾರ್ಷಿಕ ಸಮ್ಮೇಳನದ ಪ್ರಯುಕ್ತ ಒಳ್ಳೇ ಔತಣವನ್ನು ಏರ್ಪಡಿಸಿದ್ದ. ಆತ ಒಳ್ಳೇ ಶ್ರದ್ಧಾಭಕ್ತಿ ಉತ್ಸಾಹದಿಂದ ಪರಮಹಂಸರಿಗೂ ಮತ್ತು ಉಳಿದ ಆಹ್ವಾನಿತರಿಗೂ ಅತಿಥಿಸತ್ಕಾರ ಮಾಡಿದ. ಎಲ್ಲರೂ ತಮ್ಮ ಸ್ವಸ್ಥಾನಕ್ಕೆ ಹಿಂದಿರುಗಿ ಸೇರಿದಾಗ ರಾತ್ರಿ ಬಹಳ ಹೊತ್ತಾಗಿತ್ತು.