೧೯ನೆ ಆಗಸ್ಟ್ ೧೮೮೩, ಶ್ರಾವಣ ಕೃಷ್ಣ ಪಾಡ್ಯಮಿ, ಭಾನುವಾರ
ದೇವಾಲಯದಲ್ಲಿ ಈಗತಾನೆ ಮಧ್ಯಾಹ್ನದ ಮಂಗಳಾರತಿ ಮುಗಿದು ಬಾಗಿಲು ಹಾಕುತ್ತಿದ್ದಾರೆ. ಪರಮಹಂಸರು ಭಗವತಿಯ ಪ್ರಸಾದ ಸ್ವೀಕರಿಸಿದ ನಂತರ ತಮ್ಮ ಕೊಠಡಿಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಸ್ವಲ್ಪ ಹೊತ್ತು ವಿಶ್ರಮಿಸಿದ ನಂತರ ತಮ್ಮ ಚಿಕ್ಕ ಮಂಚದ ಮೇಲೆ ಎದ್ದು ಕುಳಿತುಕೊಂಡಿದ್ದಾರೆ. ಮಾಸ್ಟರ್ ಕೊಠಡಿಯನ್ನು ಪ್ರವೇಶಿಸಿ ಅವರಿಗೆ ಪ್ರಣಾಮ ಮಾಡಿ ಒಂದು ಕಡೆ ನೆಲದ ಮೇಲೆ ಕುಳಿತುಕೊಂಡ ನಂತರ ಆತನೊಡನೆ ವೇದಾಂತದ ಸಂಬಂಧವಾಗಿ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೋಡು, ಅಷ್ಟಾವಕ್ರಸಂಹಿತೆಯಲ್ಲಿ ಆತ್ಮಜ್ಞಾನದ ವಿಚಾರವಾಗಿ ಹೇಳಿದೆ. ಆತ್ಮಜ್ಞಾನಿಗಳು ಹೇಳುತ್ತಾರೆ, ‘ಸೋಠ್ಹಮ್’ ಎಂದರೆ, ‘ನಾನೇ ಪರಮಾತ್ಮ’ ಎಂಬುದಾಗಿ. ಇದೇ ವೇದಾಂತವಾದಿ ಸಂನ್ಯಾಸಿಗಳ ದೃಷ್ಟಿ. ಆದರೆ ಈ ದೃಷ್ಟಿ ಸಂಸಾರಿಗಳಿಗೆ ತಕ್ಕದಲ್ಲ. ಸಂಸಾರಿಗಳು ಎಲ್ಲಾ ವಿಧದ ಕೆಲಸಕಾರ್ಯಗಳಲ್ಲೂ ತೊಡಗುತ್ತ, ‘ನಾನೇ ಆ ನಿಷ್ಕ್ರಿಯ ಪರಮಾತ್ಮ’ ಎಂಬುದಾಗಿ ಹೇಳುವ ಬಗೆ ಹೇಗೆ? ವೇದಾಂತವಾದಿಗಳ ದೃಷ್ಟಿಯಿಂದ ಆತ್ಮ ನಿರ್ಲಿಪ್ತ. ಸುಖ, ದುಃಖ, ಪಾಪ, ಪುಣ್ಯ ಇವೇ ಮೊದಲಾದುವು ಯಾವ ವಿಧದಿಂದಲೂ ಸ್ಪರ್ಶಿಸಲಾರವು. ಆದರೆ ದೇಹಾಭಿಮಾನಿಗಳಿಗೆ ಅವು ಕಷ್ಟ ಕೊಡಬಲ್ಲುವು. ಹೊಗೆ ಗೋಡೆಯನ್ನು ಕಪ್ಪು ಮಾಡಬಲ್ಲುದು. ಆದರೆ ಆಕಾಶಕ್ಕೆ ಅದು ಏನೂ ಮಾಡಲಾರದು. ಕೃಷ್ಣಕಿಶೋರ ಜ್ಞಾನಿಗಳ ಹಾಗೆ ಹೇಳುತ್ತಿದ್ದ : ನಾನು “ಖ” ಎಂಬುದಾಗಿ, ಅಂದರೆ ತಾನು ಆಕಾಶದ ಹಾಗೆ ಅಂತ. ಆತ ಒಬ್ಬ ಪರಮಭಕ್ತನಾಗಿದ್ದುದರಿಂದ, ಆತನಿಗೆ ಹಾಗೆ ಹೇಳಲು ಹಕ್ಕಿದೆ; ಆದರೆ ಉಳಿದವರ ಬಾಯಿಂದ ಆ ಮಾತು ಉಚಿತವಾದುದಲ್ಲ.
“ಆದರೆ, ‘ನಾನು ಮುಕ್ತ’ ಎಂಬ ಮನೋಭಾವ ಬಹಳ ಒಳ್ಳೆಯದು. ಸತತ, ‘ನಾನು ಮುಕ್ತ, ನಾನು ಮುಕ್ತ’ ಅಂತ ಹೇಳುತ್ತಲೇ ಇದ್ದರೆ, ಮನುಷ್ಯ ನಿಜವಾಗಿಯೂ ಮುಕ್ತನಾಗಿ ಬಿಡುತ್ತಾನೆ. ಇದಕ್ಕೆ ಬದಲು ಮನುಷ್ಯ, ‘ನಾನು ಬದ್ಧ, ನಾನು ಬದ್ಧ ಅಂತ ಹೇಳಿಕೊಳ್ಳುತ್ತಲೇ ಇದ್ದರೆ, ಆತ ಬದ್ಧನೇ ಆಗಿಬಿಡುತ್ತಾನೆ. ಯಾರು ಕೇವಲ ಹೇಳುತ್ತಾನೋ, ‘ನಾನು ಪಾಪಿ, ನಾನು ಪಾಪಿ’ ಎಂಬುದಾಗಿ, ಆ ನೀಚ ಅಧೋಗತಿಗೆ ಇಳಿದುಬಿಡುತ್ತಾನೆ. ಅದಕ್ಕೆ ಬದಲು ಹೇಳಬೇಕು, ‘ನಾನು ಭಗವನ್ನಾಮೋಚ್ಚಾರಣೆ ಮಾಡಿದ್ದೇನೆ. ಇನ್ನು ನನಗೆಲ್ಲಿಯ ಪಾಪ? ಇನ್ನು ಬಂಧನ ನನಗೆಲ್ಲಿಯದು?’
(ಮಾಸ್ಟರಿಗೆ) “ನೋಡು, ಇಂದು ನನ್ನ ಮನಸ್ಸು ಬಹಳವಾಗಿ ಕೆಟ್ಟುಹೋಗಿದೆ. ಹೃದೆ ಕಾಗದ ಬರೆದಿದ್ದಾನೆ, ತನಗೆ ಬಹಳವಾಗಿ ಖಾಯಿಲೆ ಅಂತ. ಇದಕ್ಕೇಕೆ ನನ್ನ ಮನಸ್ಸು ಕೆಟ್ಟುಹೋಗಬೇಕು? ಹೀಗಾಗಿರುವುದು ದಯೆಯಿಂದಲೋ, ಮಾಯೆಯಿಂದಲೋ ?”
ಮಾಸ್ಟರ್ ಏನು ತಾನೆ ಹೇಳಿಯಾನು? ಸುಮ್ಮನೆ ಇದ್ದಾನೆ.
ಶ್ರೀರಾಮಕೃಷ್ಣರು: “ಮಾಯೆ ಯಾವುದು ಗೊತ್ತೆ? ತಾಯಿ-ತಂದೆ, ಸೋದರ- ಸೋದರಿ, ಹೆಂಡತಿ-ಮಕ್ಕಳು, ಸೋದರಳಿಯ-ಸೋದರಸೊಸೆ ಇವರೇ ಮೊದಲಾದ ಸ್ವಬಾಂಧವರಲ್ಲಿ ಇಡುವ ಪ್ರೀತಿಯೇ ಮಾಯೆ. ದಯೆ ಎಂದರೆ ಸರ್ವಭೂತಗಳಲ್ಲಿಯೂ ಒಂದೇ ಸಮನಾದ ಪ್ರೀತಿ. ಈ ನನ್ನದು ದಯೆಯೋ ಮಾಯೆಯೋ? ಆದರೆ ಹೃದೆ ನನಗೆ ಬಹಳ ಮಟ್ಟಿಗೆ ಉಪಕಾರ ಮಾಡಿದ್ದಾನೆ. ನನಗೆ ಬಹಳ ಸೇವೆ ಮಾಡಿದ್ದಾನೆ-ವಿಶೇಷತಃ ನಾನು ಖಾಯಿಲೆ ಬಿದ್ದಿದ್ದಾಗ, ಆದರೆ ಕೊನೆಯಲ್ಲಿ ನನಗೆ ಚಿತ್ರಹಿಂಸೆಯನ್ನೂ ಕೊಟ್ಟ. ಆತ ಕೊಡುತ್ತಿದ್ದ ಚಿತ್ರಹಿಂಸೆ ಅಷ್ಟು ತಡೆಯಲಾರದಾಗಿಬಿಟ್ಟಿತ್ತು; ಒಮ್ಮೆ ನಾನು ಗಂಗಾನದಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳಬೇಕೆಂದು ದಡದವರೆಗೂ ಹೋಗಿಬಿಟ್ಟಿದ್ದೆ. ಆದರೆ ಆತ ಬಹಳವಾಗಿ ನನಗೆ ಸೇವೆ ಮಾಡಿದ್ದಾನೆ. ಈಗ ಅವನ ಕೈಗೊಂದಿಷ್ಟು (ಹಣ) ದೊರೆಯುವುದಾದರೆ ನನ್ನ ಮನಸ್ಸಿಗೆ ಸ್ವಲ್ಪ ಸಮಾಧಾನವಾಗುತ್ತದೆ. ಅದಕ್ಕಾಗಿ ನಾನು ಯಾರನ್ನು ತಾನೇ ಕೇಳುವುದಕ್ಕೆ ಹೋಗಲಿ? ಯಾರು ಇದನ್ನೆಲ್ಲಾ ಇಲ್ಲಿಗೆ ಬರುವ ಧನಿಕರ ಮುಂದೆ ಹೇಳಿಕೊಳ್ಳುತ್ತಾ ಹೋಗುವವರು?”
ಘಂಟೆ ಅಪರಾಹ್ನ ಎರಡೋ-ಮೂರೋ. ಅಧರಸೇನ ಮತ್ತು ಬಲರಾಮ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿ, ಒಂದು ಕಡೆ ನೆಲದ ಮೇಲೆ ಕುಳಿತುಕೊಂಡು ಪರಮಹಂಸರ ದೇಹಾರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಪರಮಹಂಸರು ಹೇಳುತ್ತಿದ್ದಾರೆ: “ನನ್ನ ಶರೀರವೇನೋ ಆರೋಗ್ಯದಿಂದಿದೆ. ಆದರೆ ಮನಸ್ಸು ಸ್ವಲ್ಪ ಕಷ್ಟಕ್ಕೊಳಗಾಗಿದೆ.” ಅವರು ಹೃದಯನ ಖಾಯಿಲೆ ಸಂಬಂಧವಾಗಿ ಯಾವ ಮಾತನ್ನೂ ಎತ್ತಲಿಲ್ಲ.
ಶ್ರೀರಾಮಕೃಷ್ಣರು: “ನಾನು ಸಿಂಹವಾಹಿನಿಯನ್ನು ನೋಡಿ ಬರಲು ಹೋಗಿದ್ದೆ. ಆಕೆಯನ್ನು ಕಲ್ಕತ್ತದ ಮಣಿ ಮಲ್ಲಿಕನ ಮನೆತನಕ್ಕೆ ಸೇರಿದ ಒಂದು ಕುಟುಂಬದವರು ಪೂಜೆ ಮಾಡುತ್ತಿದ್ದಾರೆ. ಈ ಕುಟುಂಬದವರು ಬಹಳ ಕಷ್ಟಸ್ಥಿತಿಯಲ್ಲಿದ್ದಾರೆ. ಮನೆ ಹರಕಲು- ಮುರುಕಲು. ಗೋಡೆ, ನೆಲ ಎಲ್ಲಾ ಹಸುರು ಪಾಚಿ ಮತ್ತು ಪಾರಿವಾಳದ ಹಿಕ್ಕೆಗಳಿಂದ ತುಂಬಿದೆ. ಗೋಡೆಯ ಸುಣ್ಣ ಒರೆಮಣ್ಣು ಛಿದ್ರಛಿದ್ರವಾಗಿ ಒಡೆದು ಉದುರುತ್ತಿವೆ. ಆದರೆ ಇದೇ ಮನೆತನದ ಉಳಿದ ಕುಟುಂಬಗಳು ಒಳ್ಳೇ ಸ್ಥಿತಿಯಲ್ಲಿವೆ. ಈ ಮನೆಯವರು ಮಾತ್ರ ಏಳಿಗೆಗೆ ಬರುವ ಯಾವ ಸೂಚನೆಯೂ ನನಗೆ ಕಂಡುಬರಲಿಲ್ಲ. (ಮಾಸ್ಟರಿಗೆ) ಒಳ್ಳೇದು, ಇದು ಏನು ಸೂಚಿಸುತ್ತದೆ?”
ಮಾಸ್ಟರ್ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಇದು ಏಕೆ ಹೀಗೆ ಗೊತ್ತೆ? ಯಾರ್ಯಾರು ಯಾವ್ಯಾವ ಕರ್ಮಫಲದ ಬುತ್ತಿಯನ್ನು ಕಟ್ಟಿಕೊಂಡು ಬಂದಿದ್ದಾರೋ, ಅವರವರು ಅದನ್ನು ಉಣ್ಣಲೇಬೇಕು, ಪೂರ್ವಸಂಸ್ಕಾರ, ಪ್ರಾರಬ್ಧ ಇವನ್ನೆಲ್ಲ ಒಪ್ಪಿಕೊಳ್ಳಬೇಕು. ಆದರೂ ಆ ಹರಕಲು-ಮುರುಕಲು ಮನೆಯಲ್ಲಿ ಸಿಂಹವಾಹಿನಿಯ ಮುಖ ಸುಮ್ಮನೆ ಹೊಳೆಯುತ್ತಿರುವ ಹಾಗೆ ಕಂಡಿತು. ಆವಿರ್ಭಾವವನ್ನು ಒಪ್ಪಿಕೊಳ್ಳಬೇಕು.
“ಒಮ್ಮೆ ನಾನು ವಿಷ್ಣುಪುರಕ್ಕೆ ಹೋಗಿದ್ದೆ. ಅಲ್ಲಿನ ರಾಜಮನೆತನದವರಿಗೆ ಒಳ್ಳೊಳ್ಳೆ ದೇವಾಲಯಗಳಿವೆ. ಅವುಗಳಲ್ಲೊಂದರಲ್ಲಿ ಮೃಣ್ಮಯಿ ದೇವಿಯ ಮೂರ್ತಿಯಿದೆ. ಆ ದೇವಾಲಯದ ಹತ್ತಿರ ‘ಕೃಷ್ಣಬಂಧ,’ ‘ಲಾಲ್ಬಂಧ’ ಎಂಬ ಹೆಸರಿನ ಎರಡು ಕೊಳಗಳಿವೆ. ಒಳ್ಳೇದು, ಒಂದು ಕೊಳದ ಹತ್ತಿರ ಹೆಂಗಸರು ತಮ್ಮ ತಲೆಗೆ ಉಪಯೋಗಿಸುವ ಸುಗಂಧ ದ್ರವ್ಯದ ವಾಸನೆ ಬಂತಲ್ಲ ಏಕೆ ಹೇಳು ನೋಡೋಣ? ಅಲ್ಲಿಗೆ ಬರುವ ಭಕ್ತೆಯರು ದೇವಿಗೆ ಆ ಸುಗಂಧ ದ್ರವ್ಯ ಅರ್ಪಿಸುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಆ ಕೊಳದ ಹತ್ತಿರ ನನಗೆ ಭಾವಸಮಾಧಿ ಉಂಟಾಯಿತು. ಆಗ ನಾನಿನ್ನೂ ದೇವಾಲಯಕ್ಕೆ ಹೋಗಿ ದೇವಿಯ ದರ್ಶನ ಮಾಡಿರಲಿಲ್ಲ. ಆದರೂ ಆ ಅವಸ್ಥೆಯಲ್ಲೇ ನನಗೆ ಮೃಣ್ಮಯಿಯ ದರ್ಶನ ಆಯಿತು. ಆಕೆ ಆ ಕೊಳದ ನೀರಿನಲ್ಲಿ ಸೊಂಟದವರೆಗೆ ಎದ್ದು ನಿಂತಿದ್ದಳು.”
ಇಷ್ಟರಲ್ಲಿ ಇನ್ನೂ ಅನೇಕ ಭಕ್ತರು ಬಂದು ಸೇರಿದ್ದರು. ಯಾರೋ ಒಬ್ಬರು ಕಾಬೂಲಿನ ರಾಜಕೀಯ ಕ್ರಾಂತಿ ಮತ್ತು ಒಳಯುದ್ಧದ ಮಾತು ಎತ್ತಿದರು. ಒಬ್ಬ ಭಕ್ತ ಹೇಳಿದ, ಯಾಕೂಬ್ಖಾನ್ ಸಿಂಹಾಸನಚ್ಯುತನಾಗಿಬಿಟ್ಟಿದ್ದಾನೆ ಎಂಬುದಾಗಿ. ಆ ಭಕ್ತ ಪರಮಹಂಸರನ್ನು ಸಂಬೋಧಿಸಿ ಹೇಳಿದ, ಯಾಕೂಬ್ಖಾನ್ ಒಬ್ಬ ಪರಮ ಭಗವದ್ಭಕ್ತ ಎಂಬುದಾಗಿ.
ಶ್ರೀರಾಮಕೃಷ್ಣರು: “ನೋಡು, ದೇಹ ಅಂದರೆ, ಸುಖದುಃಖ ಇದ್ದೇ ಇರುತ್ತದೆ. ಕವಿ ಕಂಕಣನ ಚಂಡಿಯಲ್ಲಿ ಜನ ಕಲುವೀರನನ್ನು ಜೈಲಿಗೆ ಹಾಕಿ, ಆತನ ಎದೆಯ ಮೇಲೆ ಭಾರವಾದ ಕಲ್ಲನ್ನು ಹೇರಿದರು ಎಂಬುದಾಗಿ ಹೇಳಿದೆ. ಆದರೆ ಆತ ಭಗವತಿಯ ವರಪುತ್ರ. ದೇಹಧಾರಣೆ ಅಂದರೆ, ಸುಖ ದುಃಖ ಇದ್ದೇ ಇರುತ್ತದೆ. ಮತ್ತೆ ದೊಡ್ಡ ಭಕ್ತನಾಗಿದ್ದ ಶ್ರೀಮಂತನನ್ನು ತೆಗೆದುಕೊ. ಆತನ ತಾಯಿಯಾದ ಖುಲ್ಲನೆಯನ್ನು ಭಗವತಿ ಎಷ್ಟೊಂದು ಪ್ರೀತಿಸುತ್ತಿದ್ದಳು! ಆದರೂ ಆತ ಎಷ್ಟೊಂದು ವಿಪತ್ತುಗಳಿಗೆ ತುತ್ತಾಗಬೇಕಾಯಿತು. ಜನ ಆತನ ಕತ್ತನ್ನೇ ಕತ್ತರಿಸಿಬಿಟ್ಟರು. ಪರಮಭಕ್ತನಾದ ಒಬ್ಬ ಮರಕಡಿಯುವವನಿಗೆ ಭಗವತಿಯ ದರ್ಶನ ದೊರೆಯಿತು. ಆಕೆ ಆತನ ಮೇಲೆ ಬಹಳವಾಗಿ ದಯೆ ಮತ್ತು ಕೃಪೆ ತೋರಿದಳು. ಆದರೂ ಆತನ ಮರ ಕಡಿಯುವ ಕೆಲಸ ಮಾತ್ರ ನಿಂತುಹೋಗಲಿಲ್ಲ. ಆ ಕೆಲಸ ಮಾಡಿಯೇ ಆತ ಜೀವಿಸಬೇಕಾಯಿತು. ಕಾರಾಗೃಹದಲ್ಲಿ ದೇವಕಿಗೆ ಶಂಖಚಕ್ರಗಧಾದಾರಿಯಾದ ಭಗವಂತನ ದರ್ಶನ ದೊರೆಯಿತು. ಆದರೆ ಆಕೆಯ ಕಾರಾಗೃಹವಾಸ ಮಾತ್ರ ಕೊನೆಗೊಳ್ಳಲಿಲ್ಲ.”
ಮಾಸ್ಟರು: “ಕೇವಲ ಕಾರಾಗೃಹದಿಂದ ಬಿಡುಗಡೆಯೇ ಏಕೆ? ಈ ದೇಹ ಸಕಲ ತೊಂದರೆಗಳಿಗೂ ಮೂಲ. ದೇವಕಿ ಈ ದೇಹದಿಂದಲೂ ಬಿಡುಗಡೆ ಹೊಂದಬೇಕಾಗಿತ್ತು.”
ಶ್ರೀರಾಮಕೃಷ್ಣರು: “ಇವೆಲ್ಲ ಪ್ರಾರಬ್ಧಕರ್ಮದ ಫಲ. ಆ ಬುತ್ತಿಯಿರುವವರೆಗೆ ದೇಹಧಾರಣೆ ಮಾಡಲೇಬೇಕು. ಒಬ್ಬ ಕುರುಡ ಒಮ್ಮೆ ಗಂಗಾಸ್ನಾನ ಮಾಡಿದ, ಅದರ ಫಲವಾಗಿ ಆತನ ಪಾಪಗಳೆಲ್ಲಾ ಆತನನ್ನು ಬಿಟ್ಟು ಹೊರಟುಹೋದವು. ಆದರೆ ಕುರುಡುತನ ಮಾತ್ರ ಹೋಗಲಿಲ್ಲ. (ಎಲ್ಲರೂ ನಗುತ್ತಿದ್ದಾರೆ.) ಹಿಂದಿನ ಜನ್ಮಗಳಲ್ಲಿ ಏನೋ ಮಾಡಿದ್ದ. ಅದಕ್ಕಾಗಿ ಆತ ಈ ಜನ್ಮದಲ್ಲಿ ಅನುಭವಿಸಬೇಕಾಗಿತ್ತು.”
ಮಾಸ್ಟರ್: “ಹೌದು, ಬಿಟ್ಟ ಬಾಣದ ಮೇಲೆ ಯಾವ ಹತೋಟಿಯೂ ಇರದು.”
ಶ್ರೀರಾಮಕೃಷ್ಣರು: “ದೇಹಕ್ಕೆ ಸುಖ ದುಃಖ ಏನೇ ಬಂದರೂ ಭಕ್ತನ ಜ್ಞಾನ ಮತ್ತು ಭಕ್ತಿಯ ಸಂಪತ್ತು ಅಚ್ಚಳಿಯದೆ ಉಳಿದುಕೊಂಡಿರುತ್ತದೆ. ಉದಾಹರಣೆಗೆ ಪಾಂಡವರನ್ನು ತೆಗೆದುಕೊ. ಅವರು ಏನೇನು ಕಷ್ಟಗಳಿಗೆ ಒಳಗಾದರು ಏನು ಕತೆ! ಆದರೂ ಅವರ ಹೃದಯದಲ್ಲಿ ನಾಸ್ತಿಕಭಾವನೆ ಒಮ್ಮೆಯೂ ಮೂಡಲಿಲ್ಲ. ಅವರಂಥ ಜ್ಞಾನಿಗಳು, ಅವರಂಥ ಭಕ್ತರು ಎಲ್ಲಿ ದೊರೆಯುತ್ತಾರೆ?”
ಈಗ ನರೇಂದ್ರ ಮತ್ತು ಕ್ಯಾಪ್ಟನ್ ವಿಶ್ವನಾಥ ಉಪಾಧ್ಯಾಯ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಳ್ಳುತ್ತಿದ್ದಾರೆ. ನರೇಂದ್ರನಿಗೆ ಇಪ್ಪತ್ತೆರಡು ವಯಸ್ಸು. ಕಾಲೇಜಿನಲ್ಲಿ ಓದುತ್ತಿದ್ದಾನೆ. ಪರಮಹಂಸರು ನರೇಂದ್ರನಿಗೆ ಹಾಡುವಂತೆ ಹೇಳಿದರು. ಕೊಠಡಿಯ ಪಶ್ಚಿಮ ಗೋಡೆಗೆ ತಂಬೂರಿಯನ್ನು ತೂಗು ಹಾಕಿದೆ, ಎಲ್ಲರ ಕಣ್ಣೂ ನರೇಂದ್ರನ ಕಡೆಗೆ ತಿರುಗಿವೆ. ಆತ ಈಗ ತಬಲ ಶ್ರುತಿಮಾಡುತ್ತಿದ್ದಾನೆ.
ಶ್ರೀರಾಮಕೃಷ್ಣರು ನರೇಂದ್ರನಿಗೆ: “ನೋಡು, ಈ ತಬಲ ಹಿಂದಿನ ಹಾಗೆ ಶ್ರುತಿ ಕೊಡಲಿಲ್ಲ.”
ಕ್ಯಾಪ್ಟನ್: “ಪೂರ್ಣತೆಯನ್ನು ಪಡೆದುಕೊಂಡುಬಿಟ್ಟಿದೆ. ಆದ್ದರಿಂದ ಅದು ಶಬ್ದ ಮಾಡುತ್ತಿಲ್ಲ. ಪೂರ್ಣಕುಂಭವಾಗಿಬಿಟ್ಟಿದೆ. (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು: “ಆದರೆ, ನಾರದಾದಿಗಳು?”
ಕ್ಯಾಪ್ಟನ್: “ಅವರು ಪರರ ದುಃಖ ನೋಡಿ ಮಾತನಾಡಿದರು.”
ಶ್ರೀರಾಮಕೃಷ್ಣರು: “ಹೌದು, ನಿಜ. ನಾರದ, ಶುಕದೇವ ಇವರೇ ಮೊದಲಾದವರು ಸಮಾಧಿ ದೊರೆತ ನಂತರ ಕೆಳಕ್ಕೆ ಇಳಿದು ಬಂದಿದ್ದರು. ದಯಾಪೂರಿತ ಹೃದಯರಾದುದರಿಂದ ಪರರ ಹಿತಕ್ಕಾಗಿ ಮಾತನಾಡಿದರು.”
ನರೇಂದ್ರ ಹಾಡಲಾರಂಭಿಸಿದ:
ಸತ್ಯ ಶಿವ ಸುಂದರನ ರೂಪ ಹೃದಿಮಂದಿರದಿ
ಹೊಳೆವುದೆಂದೋ………..
ಪರಮಹಂಸರು ಈ ಹಾಡಿನ ಕೆಲವು ನುಡಿಗಳನ್ನು ಕೇಳುವುದೇ ತಡ, ಗಾಢಸಮಾಧಿಸ್ಥರಾಗಿಬಿಟ್ಟಿದ್ದಾರೆ. ಪೂರ್ವಾಭಿಮುಖವಾಗಿ ಕೈಮುಗಿದುಕೊಂಡು ಕುಳಿತಿದ್ದಾರೆ. ದೇಹ ನೆಟ್ಟಗೆ ಕುಳಿತಿದೆ. ಬಾಹ್ಯಪ್ರಜ್ಞೆ ಒಂದು ಕಿಂಚಿತ್ತೂ ಇಲ್ಲ. ಉಸಿರಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಹೇಳಲಾಗುವುದಿಲ್ಲ. ಕಣ್ಣು ಎವೆಯಿಕ್ಕದೆ ನೋಡುತ್ತಿವೆ. ಪರದೆ ಮೇಲಿನ ಚಿತ್ರದ ಹಾಗೆ ಕುಳಿತಿದ್ದಾರೆ. ಅವರ ಮನಸ್ಸು ಆನಂದಮಯಿಯ ರೂಪಸಾಗರದಲ್ಲಿ ಮುಳುಗಿ ಹೋಗಿರುವಂತಿದೆ.
ಪರಮಹಂಸರ ಕೊಠಡಿಯ ಪೂರ್ವ ವರಾಂಡದಲ್ಲಿ ಹಾಜರಾ ಕಂಬಳಿಯ ಆಸನದ ಮೇಲೆ ಕೈಯಲ್ಲಿ ಜಪಮಾಲೆ ಹಿಡಿದು ಕುಳಿತಿದ್ದ. ನರೇಂದ್ರ ಅಲ್ಲಿಗೆ ಎದ್ದುಹೋಗಿ ಆತನೊಡನೆ ಮಾತುಕತೆಯಾಡುತ್ತಿದ್ದಾನೆ. ಇನ್ನೂ ಅನೇಕ ಮಂದಿ ಭಕ್ತರು ಬಂದು ಸೇರಿದರು. ಪರಮಹಂಸರು ಪ್ರಕೃತಿಸ್ಥರಾಗಿ ಸುತ್ತಲೂ ನೋಡಿದರು. ನರೇಂದ್ರ ಅಲ್ಲಿ ಇಲ್ಲದಿರುವುದು, ತಂಬೂರಿ ಹಾಗೇ ಅಲ್ಲಿ ಬಿದ್ದಿರುವುದು, ಭಕ್ತರು ತಮ್ಮನ್ನೇ ನೋಡುತ್ತಿರುವುದು ಅವರ ಕಣ್ಣಿಗೆ ಬಿತ್ತು.
ಶ್ರೀರಾಮಕೃಷ್ಣರು ನರೇಂದ್ರನನ್ನು ನಿರ್ದೇಶಿಸಿ: “ಕಾಡ್ಗಿಚ್ಚು ಹೊತ್ತಿಸಿಬಿಟ್ಟ. ಈಗ ಆತ ಇಲ್ಲಿ ಇದ್ದರೆ ತಾನೆ ಏನು ಅಥವಾ ಹೊರಕ್ಕೆ ಹೋದರೆ ತಾನೆ ಏನು?”
(ಕ್ಯಾಪ್ಟನ್ ಮತ್ತು ಉಳಿದ ಭಕ್ತರಿಗೆ) “ಚಿದಾನಂದವನ್ನು ಆರೋಪಿಸಿಕೊಳ್ಳಿ. ನಿಮಗೂ ಆನಂದ ಉಂಟಾಗುತ್ತದೆ. ಚಿದಾನಂದ ಯಾವಾಗಲೂ ನಿಮ್ಮಲ್ಲಿ ಇದ್ದೇ ಇದೆ. ಅದು ಆವರಣ ವಿಕ್ಷೇಪಶಕ್ತಿಗಳಿಂದ ಕೇವಲ ಮುಚ್ಚಲ್ಪಟ್ಟಿದೆ. ವಿಷಯಾಸಕ್ತಿ ಕಡಿಮೆಯಾದಷ್ಟೂ ಭಗವಂತನಲ್ಲಿ ಪ್ರೀತಿ ಅಧಿಕವಾಗುತ್ತ ಬರುತ್ತದೆ.
ಕ್ಯಾಪ್ಟನ್: ಕಲ್ಕತ್ತದ ಕಡೆಗೆ ಮುಂದುವರಿದಷ್ಟೂ ಕಾಶಿ ದೂರದೂರವಾಗುತ್ತಾ ಬರುತ್ತದೆ. ಹಾಗೇ ಕಾಶಿ ಕಡೆಗೆ ಮುಂದುಮುಂದುವರಿದಷ್ಟೂ, ಕಲ್ಕತ್ತ ದೂರ ದೂರವಾಗುತ್ತ ಬರುತ್ತದೆ.
ಶ್ರೀರಾಮಕೃಷ್ಣರು: “ರಾಧೆ ಶ್ರೀಕೃಷ್ಣನ ಕಡೆಗೆ ಮುಂದುವರಿದಷ್ಟೂ ಆಕೆ ಆತನ ದೇಹಗಂಧವನ್ನು ಅಧಿಕಾಧಿಕವಾಗಿ ಪಡೆಯುತ್ತಿದ್ದಳು. ಭಗವಂತನ ಕಡೆಗೆ ಮುಂದುವರಿದಷ್ಟೂ ಆತನಲ್ಲಿ ಭಾವಭಕ್ತಿ ಅಧಿಕಾಧಿಕವಾಗುತ್ತಾ ಬರುತ್ತದೆ. ನದಿ ಸಮುದ್ರವನ್ನು ಹೆಚ್ಚುಹೆಚ್ಚಾಗಿ ಸಮೀಪಿಸಿದಂತೆಲ್ಲಾ ನದಿಯಲ್ಲಿ ಉಬ್ಬರವಿಳಿತಗಳು ಅಧಿಕಾಧಿಕವಾಗುವುದನ್ನು ನಾವು ನೋಡಬಹುದು.
“ಜ್ಞಾನಿ ತನ್ನ ಆಂತರ್ಯದಲ್ಲಿ ಭಗವದಾನಂದವನ್ನು ಅನುಭವಿಸುತ್ತಾನೆ. ಗಂಗೆಯ ಹಾಗೆ ಅದು ಒಂದೇ ದಿಕ್ಕಿಗೆ ಹರಿಯುತ್ತದೆ. ಅವನ ದೃಷ್ಟಿಯಲ್ಲಿ ಎಲ್ಲಾ ಸ್ವಪ್ನದ ಹಾಗೆ. ಯಾವಾಗಲೂ ಸ್ವಸ್ವರೂಪದಲ್ಲೇ ನೆಲಸಿರುತ್ತಾನೆ. ಆದರೆ ಭಕ್ತನ ಮನಸ್ಸು ಯಾವಾಗಲೂ ಒಂದೇ ದಿಕ್ಕಿನದಲ್ಲ. ಆತನ ಭಗವದ್ಭಾವನೆಯಲ್ಲಿ ಉಬ್ಬರವಿಳಿತಗಳಿವೆ. ಆತ ಪ್ರೇಮೋನ್ಮತ್ತನಾಗಿ ನಗುತ್ತಾನೆ, ಅಳುತ್ತಾನೆ, ನರ್ತಿಸುತ್ತಾನೆ, ಹಾಡುತ್ತಾನೆ. ಆಗ ಭಗವಂತನೊಡನೆ ವಿಲಾಸಿಸಲು ಇಚ್ಛೆಪಡುತ್ತಾನೆ. ಸಾಗರದಲ್ಲಿ ಹಿಮಗಡ್ಡೆ ಮುಳುಗಿ ಎದ್ದು ತೇಲಿಯಾಡುವುದಿಲ್ಲವೆ, ಹಾಗೆಯೇ ಆತ ಭಗವದಾನಂದ ಸಾಗರದಲ್ಲಿ ಕೆಲವು ವೇಳೆ ಮುಳುಗುತ್ತಾನೆ, ಮತ್ತೆ ಕೆಲವು ಮೇಲೆ ಮೇಲೆ ಏಳುತ್ತಾನೆ (ನಗು.)
“ಜ್ಞಾನಿಗಳಿಗೆ ಬ್ರಹ್ಮಸಾಕ್ಷಾತ್ಕಾರ ಬೇಕು. ಆದರೆ ಭಕ್ತರ ಆದರ್ಶ ಷಡೈಶ್ವರ್ಯಪೂರ್ಣ ಸರ್ವಶಕ್ತಿಮಾನ್ ಸಾಕಾರ ಭಗವಂತ. ಆದರೆ ವಾಸ್ತವಿಕವಾಗಿ ಬ್ರಹ್ಮನಿಗೂ ಶಕ್ತಿಗೂ ಯಾವ ಭೇದವೂ ಇಲ್ಲ. ಯಾರು ಸಚ್ಚಿದಾನಂದನೋ ಆತನೇ ಸಚ್ಚಿದಾನಂದಮಯಿ. ಅವರು ರತ್ನ ಮತ್ತು ಅದರ ಪ್ರಭೆ ಇದ್ದ ಹಾಗೆ. ರತ್ನಪ್ರಭೆಯ ಭಾವನೆಯೊಡನೆ ರತ್ನವೂ ಮನಸ್ಸಿಗೆ ಬರುತ್ತದೆ; ಹಾಗೆ ರತ್ನದ ಭಾವನೆಯೊಡನೆ ರತ್ನಪ್ರಭೆಯೂ ಮನಸ್ಸಿಗೆ ಬರುತ್ತದೆ. ರತ್ನವನ್ನು ಭಾವಿಸದೆ ರತ್ನಪ್ರಭೆಯನ್ನು ಭಾವಿಸಲಾಗುವುದಿಲ್ಲ. ರತ್ನಪ್ರಭೆಯನ್ನು ಭಾವಿಸದೆ ರತ್ನವನ್ನು ಭಾವಿಸಲಾಗುವುದಿಲ್ಲ.”
“ಇರತಕ್ಕವನು ಸಚ್ಚಿದಾನಂದ ಬ್ರಹ್ಮನೊಬ್ಬನೇ. ಆತನೇ ಶಕ್ತಿಭೇದದಿಂದ, ಉಪಾಧಿಭೇದದಿಂದ ನಾನಾ ರೂಪಗಳನ್ನು ಧರಿಸಿದ್ದಾನೆ. ಅದಕ್ಕಾಗಿಯೇ ಭಕ್ತ ಹಾಡುತ್ತಾನೆ: ‘ಹೇ ಭಗವತಿ, ಎಲ್ಲವೂ ನೀನೆ!’ ಎಂಬುದಾಗಿ. ಎಲ್ಲೆಲ್ಲಿ ಕಾರ್ಯ-ಸೃಷ್ಟಿ ಸ್ಥಿತಿ ಪ್ರಳಯಕಾರ್ಯವಿರುವುದೋ ಅಲ್ಲೆಲ್ಲಾ ಶಕ್ತಿಯ ವ್ಯಕ್ತತೆ. ನೀರು ಸುಮ್ಮನೆ ನಿಂತಿದ್ದರೂ ನೀರೇ, ಅಲೆ ಗುಳ್ಳೆ ಇವುಗಳಿಂದ ತುಂಬಿದ್ದರೂ ನೀರೇ. ಸಚ್ಚಿದಾನಂದನೇ ಆದ್ಯಾಶಕ್ತಿಯಾಗಿದ್ದಾನೆ. ಆಕೆ ಸೃಷ್ಟಿ-ಸ್ಥಿತಿ ಕಾರ್ಯಗಳನ್ನು ಮಾಡುತ್ತಾಳೆ. ಕ್ಯಾಪ್ಟನ್ ಯಾವ ಕೆಲಸ ಮಾಡದೆ ಇರುವಾಗಲೂ ಕ್ಯಾಪ್ಟನ್ನೇ, ಪೂಜೆ ಕೆಲಸ ಮಾಡುವಾಗಲೂ ಕ್ಯಾಪ್ಟನ್ನೇ, ಗವರ್ನರರನ್ನು ಭೇಟಿಮಾಡಲು ಹೋದಾಗಲೂ ಕ್ಯಾಪ್ಟನ್ನೇ-ಕೇವಲ ಉಪಾಧಿಯಿಂದ ಬೇರೆ ಬೇರೆ ಹೆಸರು.”
ಕ್ಯಾಪ್ಟನ್: “ಹೌದು, ನಿಜ, ನಿಜ.”
ಶ್ರೀರಾಮಕೃಷ್ಣರು: “ನಾನು ಇದೇ ಮಾತುಗಳನ್ನು ಒಮ್ಮೆ ಕೇಶವಸೇನನಿಗೆ ಹೇಳಿದೆ”
ಕ್ಯಾಪ್ಟನ್: “ಕೇಶವಸೇನ ಭ್ರಷ್ಟಾಚಾರಿ, ಸ್ವೇಚ್ಛಾಹಾರಿ, ಆತ ಬಾಬು, ಸಾಧು ಅಲ್ಲ.”
ಶ್ರೀರಾಮಕೃಷ್ಣರು ಉಳಿದ ಭಕ್ತರಿಗೆ: “ಕ್ಯಾಪ್ಟನ್ ನಾನು ಹೋಗಿ ಕೇಶವಸೇನನೊಡನೆ ಬೆರೆಯಕೂಡದು ಎಂದು ನಿಷೇಧಿಸುತ್ತಿದ್ದಾನೆ.”
ಕ್ಯಾಪ್ಟನ್: “ಮಹಾಶಯರೆ, ಆದರೆ ನೀವು ನಿಮಗೆ ಇಚ್ಛೆ ಬಂದ ಹಾಗೆ ಮಾಡಿ ಬಿಡುತ್ತೀರಿ. ಅದಕ್ಕೆ ನಾನೇನು ಮಾಡಲಿ?”
ಶ್ರೀರಾಮಕೃಷ್ಣರು ಸಿಟ್ಟುಗೊಂಡು: “ನೀನು ಮಾತ್ರ ಹಣಕ್ಕಾಗಿ ಗವರ್ನರ್ ಹತ್ತಿರಕ್ಕೆ ಹೋಗಬಹುದು. ನಾನು ಕೇಶವಸೇನನ ಹತ್ತಿರಕ್ಕೆ ಹೋಗಕೂಡದು? ಆತ ಭಗವಚ್ಚಿಂತನೆ ಮಾಡುತ್ತಾನೆ, ಭಗವನ್ನಾಮೋಚ್ಚಾರಣೆ ಮಾಡುತ್ತಾನೆ. ನೀನೇ ತಾನೇ ಹೀಗೆಲ್ಲಾ ಹೇಳೋನು: ‘ಈಶ್ವರ ಮಾಯಾಜೀವಜಗತ್’ -ಭಗವಂತನೇ ಈ ಜೀವಜಗತ್ ಎಲ್ಲಾ ಆಗಿದ್ದಾನೆ’ ಅಂತ? ಹಾಗಾದರೆ ಕೇಶವನಲ್ಲೂ ಭಗವಂತ ವಾಸಿಸುವುದಿಲ್ಲವೇ?”
ಹೀಗೆಂದು ಹೇಳಿ ಪರಮಹಂಸರು ಇದ್ದಕ್ಕಿದ್ದ ಹಾಗೆ ಕೊಠಡಿಯನ್ನು ಬಿಟ್ಟು ಈಶಾನ್ಯ ವರಾಂಡಕ್ಕೆ ಹೊರಟುಹೋದರು. ಕ್ಯಾಪ್ಟನ್ ಮತ್ತು ಉಳಿದ ಭಕ್ತರು ಅವರ ಹಿಂದಿರುಗುವಿಕೆಗಾಗಿ ಎದುರುನೋಡುತ್ತ ಕೊಠಡಿಯಲ್ಲೇ ಕುಳಿತಿದ್ದಾರೆ. ಮಾಸ್ಟರ್ ಶ್ರೀರಾಮಕೃಷ್ಣರನ್ನು ಹಿಂಬಾಲಿಸಿದ. ಅದೇ ಈಶಾನ್ಯ ವರಾಂಡದಲ್ಲಿ ನರೇಂದ್ರ ಹಾಜರಾನೊಡನೆ ಮಾತುಕತೆಯಾಡುತ್ತಾ ಕುಳಿತಿದ್ದ. ಪರಮಹಂಸರಿಗೆ ಗೊತ್ತಿತ್ತು, ಹಾಜರಾ ಸದಾ ಶುಷ್ಕಜ್ಞಾನ ವಿಚಾರದಲ್ಲಿ ತೊಡಗಿರುತ್ತಾನೆ ಎಂಬುದು. ಆತ ಹೇಳುತ್ತಿದ್ದ: “ಈ ಜಗತ್ತು ಸ್ವಪ್ನದ ಹಾಗೆ ಅನಿತ್ಯ. ಪೂಜೆ ನೈವೇದ್ಯ ಇವೆಲ್ಲಾ ಮಾನಸಿಕ ಭ್ರಮೆ. ಸ್ವಸ್ವರೂಪಧ್ಯಾನವೇ ಜೀವನದ ಉದ್ದೇಶ” ಮತ್ತೆ ಹೇಳುತ್ತಿದ್ದ: “ನಾನೇ ಅವನು (ಪರಮಾತ್ಮ)” ಎಂಬುದಾಗಿ. ಆತ ಹೀಗೆಲ್ಲಾ ಹೇಳುತ್ತಿದ್ದರೂ ಹಣ, ಮಾನ, ಸಂಭ್ರಮ ಇವುಗಳ ಕಡೆ ದೃಷ್ಟಿಯಿಟ್ಟಿದ್ದ.
ಶ್ರೀರಾಮಕೃಷ್ಣರು ನಗುತ್ತ ಹಾಜರಾನಿಗೆ ಮತ್ತು ನರೇಂದ್ರನಿಗೆ ಹೇಳುತ್ತಿದ್ದಾರೆ: “ಏನು ಸಮಾಚಾರ ಏನು ಮಾತಾಡುತ್ತಿದ್ದೀರಿ?”
ನರೇಂದ್ರ ನಗುತ್ತ: “ನಾವು ಏನೇನೋ ದೊಡ್ಡದೊಡ್ಡ ಮಾತುಗಳನ್ನು ಆಡುತ್ತಿದ್ದೇವೆ. ಅವು ಸಾಮಾನ್ಯರಿಗೆ ಗೊತ್ತಾಗುವ ಹಾಗಿಲ್ಲ.”
ಶ್ರೀರಾಮಕೃಷ್ಣರು ನಗುತ್ತ: “ನೋಡು, ಶುದ್ಧಜ್ಞಾನ, ಶುದ್ಧಭಕ್ತಿ ಎರಡೂ ಒಂದೇ. ಶುದ್ಧಜ್ಞಾನ ಎಲ್ಲಿಗೆ ಕರೆದೊಯ್ಯುತ್ತದೋ, ಅಲ್ಲಿಗೇ ಶುದ್ಧಭಕ್ತಿಯೂ ಕರೆದೊಯ್ಯುತ್ತದೆ. ಭಕ್ತಿಮಾರ್ಗ ಬಹಳ ಸುಲಭವಾದ ಮಾರ್ಗ.”
ನರೇಂದ್ರ ಒಂದು ಹಾಡನ್ನು ಹಾಡಿದ:
ನನ್ನನ್ನೂ ಉನ್ಮತ್ತನಾಗಿಸೆಲೆ ತಾಯೆ,
ನಿನ್ನ ಭಕ್ತಿಯ ಮಧುರ ಮಧುಪಾನದಿಂದ!…..
ನರೇಂದ್ರ ಮಾಸ್ಟರಿಗೆ ಹೇಳಿದ: “ನಾನು ಹ್ಯಾಮಿಲ್ಟನ್ನನ ಒಂದು ಪುಸ್ತಕ ಓದುತ್ತಿದ್ದೇನೆ. ಅದರಲ್ಲಿ ಆತ ಒಂದು ಕಡೆ ಬರೆದಿದ್ದಾನೆ. ‘ಎ ಲರ್ನೆಡ್ ಇಗ್ನೋರೆನ್ಸ್ ಈಸ್ ದಿ ಎಂಡ್ ಆಫ್ ಫಿಲಾಸೊಫಿ ಅಂಡ್ ದಿ ಬಿಗಿನಿಂಗ್ ಆಫ್ ರಿಲಿಜನ್’ ಎಂದು.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಇದರ ಅರ್ಥ ಏನು?”
ನರೇಂದ್ರ ವಿವರಿಸಿ ಹೇಳಿದ: “ತತ್ತ್ವಶಾಸ್ತ್ರಗಳನ್ನೆಲ್ಲಾ ಓದಿ ಮುಗಿಸುವುದರಲ್ಲಿ ಮನುಷ್ಯ ಮೂರ್ಖಪಂಡಿತನಾಗುತ್ತಾನೆ. ಬಳಿಕ ಆತ ಧರ್ಮ ಮುಂತಾದುವನ್ನು ಆರಂಭಿಸುತ್ತಾನೆ. ಅನಂತರ ಆತನ ಭಗವದಭಿಮುಖ ಜೀವನ ಪ್ರಾರಂಭಿಸುತ್ತದೆ.’ ಇದೇ ಇದರ ಅರ್ಥ.” ಪರಮಹಂಸರು ಆನಂದದಿಂದ ಇಂಗ್ಲೀಷಿನಲ್ಲಿ ಹೇಳಿದರು: “ಥ್ಯಾಂಕ್ ಯೂ! ಥ್ಯಾಂಕ್ ಯೂ!” ಅಂದರೆ “ನಿನಗೆ ಅಭಿನಂದನೆ! ನಿನಗೆ ಅಭಿನಂದನೆ!” ಎಂದು. ಪರಮಹಂಸರು ಈ ಇಂಗ್ಲೀಷು ಪದಗಳನ್ನು ಉಚ್ಚರಿಸಿದ ರೀತಿಯನ್ನು ನೋಡಿ ಭಕ್ತರೆಲ್ಲರೂ ಬಹಳವಾಗಿ ನಗುತ್ತಿದ್ದಾರೆ. ಅವರಿಗೆ ಗೊತ್ತಿತ್ತು, ಪರಮಹಂಸರು ಇಂಗ್ಲೀಷು ಪದಗಳ ಕೋಶ ಒಂದು ಹತ್ತು ಹನ್ನೆರಡಕ್ಕಿಂತ ಹೆಚ್ಚಾಗೇನಿಲ್ಲ ಎಂಬುದು.
ಇನ್ನೇನು ಮುಸ್ಸಂಜೆಯಾಗುವುದರಲ್ಲಿದೆ. ಭಕ್ತರಲ್ಲನೇಕರು ಮತ್ತು ನರೇಂದ್ರನು ಕೂಡ ಪರಮಹಂಸರಿಂದ ಬೀಳ್ಕೊಂಡು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿ ಹೊರಟುಹೋದರು. ಪರಮಹಂಸರು ತಮ್ಮ ಕೊಠಡಿಯ ಪಶ್ಚಿಮ ವರಾಂಡಕ್ಕೆ ಹೋಗಿ ನಿಂತುಕೊಂಡು ಗಂಗೆಯ ಕಡೆ ನೋಡುತ್ತಿದ್ದಾರೆ. ಕಾಳಿ ಮತ್ತು ವಿಷ್ಣು ದೇವಾಲಯಗಳ ಅರ್ಚಕರು ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದುದು ಅವರ ಕಣ್ಣಿಗೆ ಬಿತ್ತು. ದಕ್ಷಿಣೇಶ್ವರದ ಒಂದು ಯುವಕರ ಗುಂಪು ದೇವಾಲಯದ ಉದ್ಯಾನವನದಲ್ಲಿ, ಗಂಗೆಯ ದಡದಲ್ಲಿ ಅಲ್ಲಿ ಇಲ್ಲಿ ಸುತ್ತಾಡುತ್ತಿದೆ. ಯೋಚನಾಪರರಾದ ಬೇರೆ ಕೆಲವರು ಪಂಚವಟಿಯಲ್ಲಿ ಏಕಾಂತವಾಗಿ ನಡೆಯುತ್ತಿದ್ದಾರೆ.
ಈಗ ಕತ್ತಲಾಗಿದೆ. ದಾಸಿ ಪರಮಹಂಸರ ಕೊಠಡಿಗೆ ದೀಪ ಹಚ್ಚಿ ಧೂಪ ಹಾಕಿದಳು. ಎಲ್ಲಾ ದೇವಾಲಯಗಳಲ್ಲೂ ಸಾಯಂ ಮಂಗಳಾರತಿ ಆಯಿತು.
ಇಂದು ಕೃಷ್ಣಪಕ್ಷದ ಪಾಡ್ಯಮಿಯಾದ್ದರಿಂದ ಚಂದ್ರೋದಯ ಬೇಗ ಆಗಿಬಿಟ್ಟಿತು. ಅದರ ಹಾಲು ಚೆಲ್ಲಿದಂಥ ಬೆಳಕು ದೇವಾಲಯಗಳನ್ನು, ಮರದ ತುದಿಗಳನ್ನು ಬೆಳಗಲಾರಂಭಿಸಿತು. ಗಂಗೆಯ ಅಸಂಖ್ಯ ಅಲೆಗಳು ಬೆಳ್ಳಿಯ ತಗಡನ್ನು ಹೊದ್ದುಕೊಂಡಿರುವುದೋ ಏನೋ ಎಂಬಂತೆ ಥಳಥಳಿಸತೊಡಗಿದುವು.
ಪರಮಹಂಸರು ಕೊಠಡಿಗೆ ಹಿಂದಿರುಗಿ ಬಂದು ಭಗವತಿಗೆ ಪ್ರಣಾಮ ಮಾಡಿ ಕೈತಾಳ ಹಾಕುತ್ತ ಭಗವನ್ನಾಮೋಚ್ಚಾರಣೆ ಮಾಡಲಾರಂಭಿಸಿದರು. ಅವರ ಕೊಠಡಿಯಲ್ಲಿ ಧ್ರುವ, ಪ್ರಹ್ಲಾದ, ರಾಧಾ-ಕೃಷ್ಣ, ಕಾಳಿ ಇವರ ಪಟಗಳು, ರಾಮಪಟ್ಟಾಭಿಷೇಕದ ಪಟ, ಇನ್ನೂ ಏನೇನೋ ತೂಗುಹಾಕಿವೆ. ಪರಮಹಂಸರು ಪ್ರತಿಯೊಂದು ಪಟಕ್ಕೂ ಪ್ರಣಾಮಮಾಡಿ, ಅದರದರ ನಾಮಜಪ ಮಾಡುತ್ತಿದ್ದಾರೆ. ಈಗ ಹೇಳುತ್ತಿದ್ದಾರೆ: “ಬ್ರಹ್ಮ-ಆತ್ಮ-ಭಗವಾನ್; ಬ್ರಹ್ಮ-ಶಕ್ತಿ, ಶಕ್ತಿ-ಬ್ರಹ್ಮ; ವೇದ, ಪುರಾಣ, ತಂತ್ರ, ಗೀತೆ, ಗಾಯತ್ರಿ.” ಮತ್ತೆ ಹೇಳುತ್ತಿದ್ದಾರೆ: “ಹೇ ತಾಯೆ, ಶರಣಾಗತ, ಶರಣಾಗತ: ನಾನಲ್ಲ, ನಾನಲ್ಲ, ನೀನು ನೀನು; ನಾನು ಯಂತ್ರ, ನೀನು ಯಂತ್ರಿ,” ಇತ್ಯಾದಿ.
ಪರಮಹಂಸರು ಈ ರೀತಿಯಾಗಿ ಭಗವತಿಯ ಮೇಲೆ ಧ್ಯಾನಮಾಡುತ್ತಿದ್ದಾಗ, ಉದ್ಯಾನವನದಲ್ಲಿ ಸುತ್ತಾಡುತ್ತಿದ್ದ ಕೆಲವು ಮಂದಿ ಭಕ್ತರು ಅವರ ಕೊಠಡಿಗೆ ಬಂದರು. ಪರಮಹಂಸರು ಈಗ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡು ಹೇಳುತ್ತಿದ್ದಾರೆ: “ನರೇಂದ್ರ, ಭವನಾಥ, ರಾಖಾಲ ಇವರು ನಿತ್ಯಸಿದ್ಧರ ಗುಂಪಿಗೆ ಸೇರಿದವರು; ಈಶ್ವರ ಕೋಟಿಗಳು, ಇವರಿಗೆ ಸಾಧನೆ ಅನಾವಶ್ಯಕ. ನರೇಂದ್ರನ ಕಡೆ ನೋಡು, ಆತ ಯಾರನ್ನೂ ಕೇರ್ (ಲಕ್ಷ್ಯ) ಮಾಡುವುದೇ ಇಲ್ಲ. ಒಂದು ದಿನ ಕ್ಯಾಪ್ಟನ್ನನ ಗಾಡಿಯಲ್ಲಿ ನನ್ನೊಡನೆ ಬರುತ್ತಿದ್ದ. ಒಳ್ಳೆ ಜಾಗದಲ್ಲಿ ಕುಳಿತುಕೊಳ್ಳುವ ಹಾಗೆ ಕ್ಯಾಪ್ಟನ್ ಆತನಿಗೆ ಹೇಳಿದ. ನರೇಂದ್ರ ಆತನ ಕಡೆ ಕಣ್ಣೆತ್ತೂ ನೋಡಲಿಲ್ಲ. ಆತ ನನ್ನನ್ನೂ ಲಕ್ಷ್ಯ ಮಾಡುವುದಿಲ್ಲ! ನಾನು ಆತನನ್ನು ಎಲ್ಲರ ಮುಂದೆಯೂ ಹೊಗಳಿಬಿಡಬಹುದೆಂದು ಹೆದರಿ, ತನಗೆ ಗೊತ್ತಿರುವುದನ್ನೆಲ್ಲಾ ನನ್ನೆದುರಿಗೆ ಪ್ರದರ್ಶಿಸುತ್ತಿಲ್ಲ. ಆತ ಮಾಯಾ ಮೋಹಗಳಿಂದ ನಿವೃತ್ತನಾಗಿದ್ದಾನೆ. ಆತನಿಗೆ ಯಾವ ಬಂಧನವೂ ಇಲ್ಲ. ಒಳ್ಳೆ ಪಾತ್ರೆ, ಅನೇಕ ಒಳ್ಳೆ ಗುಣಗಳಿವೆ. ಹಾಡುವುದರಲ್ಲಿ ಬಾಜಿಸುವುದರಲ್ಲಿ ಒಳ್ಳೇ ನಿಪುಣ. ಜಿತೇಂದ್ರಿಯ ಬೇರೆ. ಹೇಳುತ್ತಾನೆ, ವಿವಾಹವಾಗುವುದಿಲ್ಲ ಎಂದು. ನರೇಂದ್ರ ಭವನಾಥ ಇವರೀರ್ವರೂ ಪರಮ ಸ್ನೇಹಿತರು, ಗಂಡಹೆಂಡಿರೋ ಏನೋ ಎಂಬಂತೆ. ನರೇಂದ್ರ ಆಗಾಗ ಇಲ್ಲಿಗೆ ಬರುತ್ತಿಲ್ಲ. ಅದು ಒಳ್ಳೆಯದೆ. ಅವನು ಹಾಗೆ ಮಾಡಿದರೆ ನಾನು ವಿಹ್ವಲನಾಗಿಬಿಡುತ್ತೇನೆ.”
೨೦ನೆ ಆಗಸ್ಟ್, ೧೮೮೩, ಶ್ರಾವಣ ಕೃಷ್ಣ ದ್ವಿತೀಯ, ಸೋಮವಾರ
ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಸೊಳ್ಳೆ ಪರದೆಯ ಒಳಗೆ ಕುಳಿತು ಧ್ಯಾನ ಮಾಡುತ್ತಿದ್ದಾರೆ. ಘಂಟೆ ರಾತ್ರಿ ಎಂಟು. ಮಾಸ್ಟರ್ ತನ್ನ ಸ್ನೇಹಿತ ಹರಿಬಾಬುವಿನೊಡನೆ ನೆಲದ ಮೇಲೆ ಕುಳಿತಿದ್ದಾನೆ. ಹರಿಬಾಬುವಿಗೆ ವಯಸ್ಸು ಇಪ್ಪತ್ತೆಂಟು, ಹನ್ನೊಂದು ವರ್ಷದ ಹಿಂದೆ ಪತ್ನೀವಿಯೋಗವಾಯಿತು, ಮತ್ತೆ ವಿವಾಹವಾಗಿಲ್ಲ. ತನ್ನ ತಾಯಿ, ತಂದೆ, ಸೋದರ, ಸೋದರಿ ಇವರನ್ನು ಕಂಡರೆ ಅತ್ಯಂತ ಮಮತೆ. ಅವರ ಸೇವೆ ಮಾಡುತ್ತಿದ್ದಾನೆ.
ಹಾಜರಾ ಪರಮಹಂಸರೊಡನೆಯೇ ದಕ್ಷಿಣೇಶ್ವರದಲ್ಲಿ ಇದ್ದಾನೆ. ರಾಖಾಲನೂ ಪರಮಹಂಸರೊಡನೆ ಇರುತ್ತಿದ್ದರೂ, ಒಮ್ಮೊಮ್ಮೆ ಅಧರಸೇನನ ಮನೆಗೂ ಹೋಗಿ ಇರುತ್ತಾನೆ. ನರೇಂದ್ರ, ಭವನಾಥ, ಮಾಸ್ಟರ್, ಅಧರಸೇನ, ರಾಮ, ಮನಮೋಹನ ಮತ್ತು ಇನ್ನೂ ಕೆಲವರು ವಾರಕ್ಕೊಮ್ಮೆಯಾದರೂ ಬಂದುಹೋಗುತ್ತಿದ್ದಾರೆ.
ಪರಮಹಂಸರ ಸೋದರಳಿಯ ಹೃದಯ ಇನ್ನೂ ಊರಿನಲ್ಲೇ ಇದ್ದಾನೆ. ಪರಮಹಂಸರು ಆತನ ಸಂಬಂಧವಾಗಿ ಬಹಳವಾಗಿ ಚಿಂತಿಸುತ್ತಿದ್ದಾರೆ. ಪರಮಹಂಸರ ಭಕ್ತರಲ್ಲಿ ಒಬ್ಬ ಆತನಿಗೆ ಸ್ವಲ್ಪ ದುಡ್ಡು ಕಳುಹಿಸಿದ್ದಾನೆ. ಆದರೆ ಅದು ಪರಮಹಂಸರಿಗೆ ಗೊತ್ತಿರಲಿಲ್ಲ.
ಪರಮಹಂಸರು ಸೊಳ್ಳೆಪರದೆಯ ಹೊರಕ್ಕೆ ಬಂದೊಡನೆಯೇ ಭಕ್ತರೆಲ್ಲರೂ ಅವರಿಗೆ ಪ್ರಣಾಮಮಾಡಿದರು. ಸೊಳ್ಳೆಪರದೆಯನ್ನು ಮೇಲಕ್ಕೆ ಕಟ್ಟಿದ ಮೇಲೆ ಪರಮಹಂಸರು ಮತ್ತೆ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಸೊಳ್ಳೆಪರದೆಯೊಳಗೆ ಕುಳಿತು ಧ್ಯಾನ ಮಾಡುತ್ತಿದ್ದೆ. ಭಾವನೆ ಬಂತು, ಧ್ಯಾನ ಎಂಬುದು ಇನ್ನು ಬೇರೆ ಏನೂ ಅಲ್ಲ, ಯಾವುದಾದರೂ ಒಂದು ರೂಪ ಕಲ್ಪಿಸಿಕೊಂಡು ಅದರ ಮೇಲೆ ಚಿಂತನೆ ಮಾಡುವುದು ಎಂಬುದಾಗಿ. ಆದ್ದರಿಂದ ಇದು ನನಗೆ ರುಚಿಸಲಿಲ್ಲ. ಭಗವಂತ ಇದ್ದಕ್ಕಿದ್ದಹಾಗೆ ತನ್ನ ದರ್ಶನ ಕೊಟ್ಟುಬಿಟ್ಟದ್ದೇ ಆದರೆ, ಆಗ ತುಷ್ಟಿ. ಮತ್ತೆ ನನಗೆ ನಾನೇ ಹೇಳಿಕೊಂಡೆ: ‘ಧ್ಯಾನ ಮಾಡುತ್ತಾನಲ್ಲ, ಆತ ಯಾರು? ಯಾರ ಮೇಲೆ ತಾನೆ ಧ್ಯಾನ ಮಾಡುವುದು?”
ಮಾಸ್ಟರ್: “ನೀವು ಹೇಳಿದಿರಿ, ಭಗವಂತನೇ ಜೀವ ಜಗತ್ತು ಎಲ್ಲವೂ ಆಗಿದ್ದಾನೆ ಎಂಬುದಾಗಿ. ಆದ್ದರಿಂದ ಧ್ಯಾನಮಾಡುವವನೂ ಭಗವಂತನೇ.”
ಶ್ರೀರಾಮಕೃಷ್ಣರು: “ಭಗವಂತ ಧ್ಯಾನಮಾಡಿಸದಿದ್ದರೆ ಧ್ಯಾನಮಾಡಲಾಗುವುದಿಲ್ಲ. ಆತ ಮಾಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ನೀನು ಏನು ಹೇಳುತ್ತೀಯೆ?”
ಮಾಸ್ಟರ್: “ಹೌದು, ನಿಜ. ನಿಮ್ಮಲ್ಲಿ ‘ಅಹಂ’ ಎಂಬುದೇ ಇಲ್ಲವೇ ಇಲ್ಲ. ಆದ್ದರಿಂದ ನಿಮಗೆ ಹಾಗನಿಸುತ್ತದೆ. ಯಾರಲ್ಲಿ ‘ಅಹಂ’ ಎಂಬುದು ಇಲ್ಲವೇ ಇಲ್ಲವೋ ಆತನಿಗೆ ಹೀಗೇ ಅನ್ನಿಸುತ್ತದೆ.”
ಶ್ರೀರಾಮಕೃಷ್ಣರು: “ ‘ನಾನು ದಾಸ, ನಾನು ಸೇವಕ’ ಎಂಬ ಇದೊಂದಿಷ್ಟು ‘ಅಹಂ’ ಇರುವುದು ಒಳ್ಳೆಯದು. ಎಲ್ಲಿಯವರೆಗೆ ಮನುಷ್ಯನಿಗೆ ಎಲ್ಲವನ್ನೂ ತಾನು ಮಾಡುವುದು ಎಂಬ ಭಾವನೆ ಇರುವುದೊ ಅಲ್ಲಿಯವರೆಗೆ ಆತನಿಗೆ ತಾನು ದಾಸ, ಭಗವಂತ ಪ್ರಭು ಎಂಬ ಭಾವನೆ ಇರುವುದು ಒಳ್ಳೆಯದು. ಎಲ್ಲವನ್ನೂ ಮಾಡುತ್ತಿರುವವನು ತಾನೇ ಎಂಬ ಭಾವನೆ ಇರುವವರೆಗೆ ಸೇವ್ಯಸೇವಕ ಭಾವದಿಂದಿರುವುದೇ ಒಳ್ಳೆಯದು.”
ಮಾಸ್ಟರ್ ಯಾವಾಗಲೂ ಪರಬ್ರಹ್ಮನ ಮೇಲೆ ಚಿಂತಿಸುತ್ತಿರುತ್ತಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಬ್ರಹ್ಮ ಆಕಾಶದ ಹಾಗೆ, ಆತನಲ್ಲಿ ಯಾವ ವಿಕಾರವೂ ಇಲ್ಲ. ಆದರೆ ಶಕ್ತಿಯ ದೆಸೆಯಿಂದ ಆತ ನಾನಾ ರೂಪ ಧರಿಸಿದ್ದಾನೆ. ಮತ್ತೆ ಬ್ರಹ್ಮ ಯಾವ ಬಣ್ಣವೂ ಇಲ್ಲದ ಬೆಂಕಿಯ ಹಾಗೆ: ಬೆಂಕಿಗೆ ಬಿಳಿ ಬಣ್ಣ ಹಾಕಿದರೆ ಬೆಳ್ಳಗೆ, ಕೆಂಪು ಬಣ್ಣ ಹಾಕಿದರೆ ಕೆಂಪಗೆ, ಕಪ್ಪು ಬಣ್ಣ ಹಾಕಿದರೆ ಕಪ್ಪಗೆ ಕಾಣಿಸಿಕೊಳ್ಳುತ್ತದೆ. ಸತ್ತ್ವ, ರಜಸ್ಸು, ತಮಸ್ಸು ಈ ಮೂರು ಗುಣಗಳೂ ಶಕ್ತಿಗೆ ಸೇರಿದುವು. ಬ್ರಹ್ಮ ಇವು ಮೂರಕ್ಕೂ ಅತೀತ. ಆತ ಏನು ಎಂಬುದನ್ನು ಮಾತಿನಿಂದ ಹೇಳಲಾಗುವುದಿಲ್ಲ. ಆತ ವಾಕ್ಯಗಳಿಗೆ ಅತೀತ, ‘ನೇತಿ, ನೇತಿ’ ಅಂತ ವಿಚಾರಮಾಡಿ ಕೊನೆಗೆ ಏನು ಉಳಿದುಕೊಳ್ಳುವುದೋ, ಮತ್ತೆ ಯಾವುದು ಆನಂದ ಸ್ವರೂಪವೋ ಅದೇ ಬ್ರಹ್ಮ.
“ಒಬ್ಬ ಹುಡುಗಿಯ ಗಂಡ ಮಾವನ ಮನೆಗೆ ಬಂದು ಬೈಠಕ್ಖಾನೆಯಲ್ಲಿ ತನ್ನ ಸಮವಯಸ್ಕ ಗೆಳೆಯರೊಡನೆ ಕುಳಿತಿದ್ದಾನೆ ಅಂತ ಇಟ್ಟುಕೊ. ಹುಡುಗಿಯೂ, ಆಕೆಯ ಗೆಳತಿಯರೂ ಕಿಟಕಿಯಿಂದ ಅವರ ಕಡೆ ನೋಡುತ್ತಿದ್ದಾರೆ. ಆ ಹುಡುಗಿಯ ಗೆಳತಿಯರಿಗೆ ಅಲ್ಲಿ ಕುಳಿತವರಲ್ಲಿ ಆಕೆಯ ಪತಿ ಯಾರೆಂಬುದು ಗೊತ್ತಿಲ್ಲ. ಆದ್ದರಿಂದ ಅವರು ಒಬ್ಬನನ್ನು ತೋರಿಸಿ ಆಕೆಯನ್ನು ಕೇಳುತ್ತಾರೆ: ‘ಆತ ನಿನ್ನ ಪತಿಯೇ?’ ಆಕೆ ನಗುತ್ತ ಹೇಳುತ್ತಾಳೆ ‘ಅಲ್ಲ.’ ಗೆಳತಿಯರು ಇನ್ನೊಬ್ಬನನ್ನು ತೋರಿಸಿ ಅದೇ ಪ್ರಶ್ನೆಯನ್ನು ಹಾಕುತ್ತಾರೆ. ಮತ್ತೆ ಆಕೆ ಹೇಳುತ್ತಾಳೆ: ‘ಅಲ್ಲ.’ ಅವರು ಮೂರನೆಯವನನ್ನು ತೋರಿಸಿದಾಗಲೂ ಅವರಿಗೆ ಅದೇ ಉತ್ತರ ದೊರೆಯುತ್ತದೆ. ಕೊನೆಗೆ ಆಕೆಯ ಪತಿಯನ್ನು ತೋರಿಸಿ ಕೇಳುತ್ತಾರೆ: ‘ಆತ ನಿನ್ನ ಪತಿಯೇ?’ ಆಗ ಆಕೆ ‘ಹೌದು’ ಅಂತಲೂ ಹೇಳುವುದಿಲ್ಲ. ‘ಅಲ್ಲ’ ಅಂತಲೂ ಹೇಳುವುದಿಲ್ಲ. ನಸುನಗೆ ನಕ್ಕು ಸುಮ್ಮನಿದ್ದುಬಿಡುತ್ತಾಳೆ. ಆಗ ಗೆಳತಿಯರಿಗೆ ಗೊತ್ತಾಗುತ್ತದೆ, ಆತನೇ ಆಕೆಯ ಪತಿ ಎಂಬುದಾಗಿ.
“ನಿಜವಾದ ಬ್ರಹ್ಮಜ್ಞಾನ ದೊರೆಯಿತು ಎಂದರೆ ಸಾಧಕ ಮೂಕನಾಗಿಬಿಡುತ್ತಾನೆ.
(ಮಾಸ್ಟರಿಗೆ) “ಹಾಗಾದರೆ, ನಾನೇಕೆ ಇಷ್ಟೊಂದು ಮಾತಾಡುತ್ತೇನೆ?”
ಮಾಸ್ಟರ್: “ಭಕ್ತರಲ್ಲಿ ಆತ್ಮಜಾಗೃತಿಯನ್ನುಂಟುಮಾಡಲು ನೀವು ಮಾತಾಡುತ್ತಿದ್ದೀರಿ, ನೀವು ಒಮ್ಮೆ ಹೇಳಿದಿರಿ: ‘ಕಾದ ತುಪ್ಪಕ್ಕೆ ಹಸಿಯ ಗೋಧಿ ಹಪ್ಪಳ ಹಾಕಿದರೆ, ಅದು ಮತ್ತೆ “ಚರ, ಚರ” ಅಂತ ಶಬ್ದಮಾಡುತ್ತದೆ” ಎಂಬುದಾಗಿ.”
ಈಗ ಪರಮಹಂಸರು ಹಾಜರಾನ ಸಂಬಂಧವಾಗಿ ಮಾಸ್ಟರೊಡನೆ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಒಳ್ಳೆಯ ಮನುಷ್ಯನ ಸ್ವಭಾವ ಎಂಥದು ಗೊತ್ತೆ? ಆತ ಯಾರಿಗೂ ತೊಂದರೆ ಕೊಡುವುದಿಲ್ಲ ಆದರೆ, ಇವರಿಗೆ ಭಿನ್ನವಾದವರು ಹಾಗಲ್ಲ. ಅವರು ಪರರ ಮನೆಗೆ ಔತಣಕ್ಕೆ ಹೋದರೆ, ಅವರಿಗೇ ಒಂದು ಪ್ರತ್ಯೇಕ ಸ್ಥಳ ಬೇಕು. ನಿಜವಾದ ಭಕ್ತ ಯಾವಾಗಲೂ ತಪ್ಪು ಹೆಜ್ಜೆ ಇಡುವುದಿಲ್ಲ; ಬೇಕೂ ಅಂತ ಯಾರಿಗೂ ಕಷ್ಟ ಕೊಡುವುದಿಲ್ಲ.
“ಕೆಟ್ಟವರ ಸಹವಾಸ ಒಳ್ಳೆಯದಲ್ಲ. ಅವರಿಂದ ಬಹಳ ದೂರದಲ್ಲೇ ಇದ್ದು ತನ್ನನ್ನು ತಾನು ರಕ್ಷಿಸಿಕೊಂಡುಬಿಡಬೇಕು. (ಮಾಸ್ಟರಿಗೆ) ಏನು ಹೇಳುತ್ತೀಯೆ?”
ಮಾಸ್ಟರ್: “ಹೌದು, ಕೆಟ್ಟವರ ಸಹವಾಸದಿಂದ ಮನಸ್ಸು ಬಹಳ ಕೆಳಮಟ್ಟಕ್ಕೆ ಇಳಿದುಬಿಡುತ್ತದೆ. ಆದರೆ ನೀವು ಹೇಳಿದ್ದೀರಿ, ವೀರರ ಮಾತು ಬೇರೆ ಎಂಬುದಾಗಿ.”
ಶ್ರೀರಾಮಕೃಷ್ಣರು: “ಹೇಗೆ ಅದು ಬೇರೆ?”
ಮಾಸ್ಟರ್: “ಉರಿ, ‘ಮಿಣುಕು, ಮಿಣುಕು’ ಅನ್ನುತ್ತಿರುವಾಗ, ಅದಕ್ಕೆ ಒಂದು ಚಿಕ್ಕಕಡ್ಡಿ ಹಾಕಿದರೂ ಅದು ಆರಿಹೋಗಿಬಿಡುತ್ತದೆ. ಅದು ದೊಡ್ಡದಾಗಿ ಧಗಧಗ ಉರಿಯುತ್ತಿರುವಾಗ, ಅದಕ್ಕೆ ಬಾಳೆಗಿಡ ಹಾಕಿದರೂ ಏನೂ ಆಗದು. ಆ ಗಿಡ ಕೂಡ ಸುಟ್ಟು ಬೂದಿಯಾಗಿ ಬಿಡುತ್ತದೆ.”
ಪರಮಹಂಸರು ಮಾಸ್ಟರನ್ನು ಆತನ ಸ್ನೇಹಿತ ಹರಿಬಾಬುವಿನ ಸಂಬಂಧವಾಗಿ ಕೇಳುತ್ತಿದ್ದಾರೆ.
ಮಾಸ್ಟರ್: “ಈತ ನಿಮ್ಮ ದರ್ಶನ ಮಾಡಲು ಬಂದಿದ್ದಾನೆ. ಈತನಿಗೆ ಪತ್ನೀ ವಿಯೋಗವಾಗಿ ಬಹಳ ಕಾಲವೇ ಆಗಿಬಿಟ್ಟಿದೆ.”
ಶ್ರೀರಾಮಕೃಷ್ಣರು (ಹರಿಗೆ): “ನೀನು ಏನು ಕೆಲಸ ಮಾಡಿಕೊಂಡಿದ್ದೀಯೆ?”
ಮಾಸ್ಟರ್: “ನಿರ್ದಿಷ್ಟವಾದ್ದು ಏನೂ ಇಲ್ಲ. ಆದರೆ ಮನೆಯಲ್ಲಿ ಸೋದರ ಸೋದರಿ ತಂದೆ ತಾಯಿ ಇವರ ಸೇವೆಯನ್ನು ಬಹಳ ಚೆನ್ನಾಗಿ ಮಾಡುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಇದೇಕೆ ಹೀಗೆ? ನೀನು ಕುಂಬಳಕಾಯಿ ಒಡೆಯುವ ಮನೆಯ ಮುದುಕಪ್ಪನಾಗಿಬಿಟ್ಟಿದ್ದೀಯಲ್ಲ. ನೀನು ಸಂಸಾರಿಗೆ ಸಂಸಾರಿಯೂ ಅಲ್ಲ. ಭಗವದ್ಭಕ್ತನಿಗೆ ಭಗವದ್ಭಕ್ತನೂ ಅಲ್ಲ. ಹೀಗಾಗಿಬಿಟ್ಟಿದ್ದೀಯಲ್ಲ. ಇದು ಒಳ್ಳೆಯದಲ್ಲ. ಯಾವ ಕೆಲಸ ಕಾರ್ಯವೂ ಇಲ್ಲದೆ ಮನೆಯ ಹೊರಜಗಲಿಯಲ್ಲಿ ಗುಡಿಗುಡಿ ಸೇದುತ್ತ, ಹಗಲಿರುಳೆನ್ನದೆ ಮಕ್ಕಳೊಡನೆ ಆಟವಾಡುತ್ತ ಬರಿದೆ ಕಾಲ ಕಳೆಯುವ ಮನುಷ್ಯನನ್ನು ನೀನು ಅನೇಕ ಮನೆಗಳಲ್ಲಿ ನೋಡಿರಬಹುದು. ಆತ ಅಪರೂಪಕ್ಕೆ ಹೋಗಿ ಕುಂಬಳಕಾಯಿ ಒಡೆದುಕೊಟ್ಟು ಬರುತ್ತಾನೆ. ಏಕೆಂದರೆ ಹೆಂಗಸರು ಕುಂಬಳಕಾಯಿ ಒಡೆಯಕೂಡದಾದುದರಿಂದ ಅವರು ಮಕ್ಕಳ ಮೂಲಕ ಆತನನ್ನು ಕರೆಸಿಕೊಂಡು ಆ ಕೆಲಸ ಮಾಡಿಸಿಕೊಳ್ಳುತ್ತಾರೆ. ಆತನ ಉಪಯೋಗ ಅದಷ್ಟು ಕೆಲಸ ಮಾತ್ರ, ಆದ್ದರಿಂದ ಆತನಿಗೆ ಅಡ್ಡ ಹೆಸರು ಬಂದಿದೆ: ‘ಕುಂಬಳಕಾಯಿ ಒಡೆಯುವ ಮನೆಯ ಮುದುಕಪ್ಪ’ ಅಂತ.
“ನೀನು ಇದನ್ನೂ ಮಾಡಬೇಕು, ಅದನ್ನೂ ಮಾಡಬೇಕು. ಭಗವಂತನ ಪಾದಪದ್ಮಗಳಲ್ಲಿ ಮನಸ್ಸಿಟ್ಟು ಸಾಂಸಾರಿಕ ಕೆಲಸಕಾರ್ಯಗಳನ್ನು ಮಾಡು. ನೀನು ಏಕಾಂತದಲ್ಲಿರುವಾಗ ಶ್ರೀಮದ್ಭಾಗವತ, ಶ್ರೀಚೈತನ್ಯಚರಿತಾಮೃತ ಇವೇ ಮೊದಲಾದ ಭಕ್ತಿಶಾಸ್ತ್ರಗಳನ್ನು ಓದು.”
ಘಂಟೆ ರಾತ್ರಿ ಹತ್ತು. ಪರಮಹಂಸರು ಸ್ವಲ್ಪ ರವೆ ಪಾಯಸ ಒಂದೆರಡು ಪೂರಿಯನ್ನು ಮಾತ್ರ ತೆಗೆದುಕೊಂಡರು. ಸ್ವಲ್ಪ ಹೊತ್ತಾದ ನಂತರ ಮಾಸ್ಟರ್ ಮತ್ತು ಆತನ ಸ್ನೇಹಿತ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡರು.
೭ನೆ ಸೆಪ್ಟೆಂಬರ್ ೧೮೮೩, ಭಾದ್ರಪದ ಶುಕ್ಲ ಷಷ್ಠಿ, ಶುಕ್ರವಾರ
ಶ್ರೀರಾಮಕೃಷ್ಣರು ತಮ್ಮ ಕೊಠಡಿಯಲ್ಲಿ ಚಿಕ್ಕ ಮಂಚದ ಮೇಲೆ ಕುಳಿತು ಮಾಸ್ಟರೊಡನೆ ಮಾತನಾಡುತ್ತಿದ್ದಾರೆ. ಅಲ್ಲಿ ಇನ್ನು ಬೇರೆ ಯಾರೂ ಇಲ್ಲ. ಘಂಟೆ ರಾತ್ರಿ ಏಳೂವರೆ.
ಶ್ರೀರಾಮಕೃಷ್ಣರು: “ಅಂದು ನಾನು ಕಲ್ಕತ್ತಕ್ಕೆ ಹೋಗಿದ್ದೆ. ಗಾಡಿಯಲ್ಲಿ ಕುಳಿತು ಹಾಗೇ ಮುಂದುವರಿಯುತ್ತ ಇದ್ದಾಗ ನೋಡುತ್ತೇನೆ, ದಾರಿಯಲ್ಲಿ ಸಿಕ್ಕಿದ ಪ್ರತಿಯೊಬ್ಬರ ದೃಷ್ಟಿಯೂ ಪ್ರಾಪಂಚಿಕ ವಸ್ತುಗಳ ಕಡೆಗೇ ಹರಿಯುತ್ತಿದೆ. ಪ್ರತಿಯೊಬ್ಬರಿಗೂ ಹೊಟ್ಟೆಯ ಚಿಂತೆಯೇ; ಹೊಟ್ಟೆಪಾಡಿಗಾಗಿ ಸುಮ್ಮನೆ ಧಾವಿಸುತ್ತಿದ್ದಾರೆ. ಅವರ ಮನಸ್ಸೆಲ್ಲಾ ಕಾಮ ಕಾಂಚನದಲ್ಲೇ ನಿರತವಾಗಿಬಿಟ್ಟಿದೆ. ಆದರೆ ಎಲ್ಲೋ ಒಬ್ಬಿಬ್ಬರಿಗೆ ಮಾತ್ರ ಊರ್ಧ್ವದೃಷ್ಟಿ ಇತ್ತು-ಭಗವಂತನ ಕಡೆಗೆ ಮನಸ್ಸು ಹರಿಯುತ್ತಿತ್ತು.”
ಮಾಸ್ಟರ್: “ಈಗಿನ ಕಾಲದಲ್ಲಂತೂ ಹೊಟ್ಟೆಯ ಚಿಂತೆ ಅಧಿಕವಾಗಿಬಿಟ್ಟಿದೆ. ಇಂಗ್ಲೀಷಿನವರನ್ನು ಅನುಸರಿಸಲು ಪ್ರಯತ್ನಿಸಿ, ಜನರ ಮನಸ್ಸು ಹೆಚ್ಚು ಹೆಚ್ಚು ವಿಲಾಸದ ಕಡೆಗೆ ಹರಿಯುತ್ತಿದೆ; ಅದಕ್ಕಾಗಿ ಆವಶ್ಯಕತೆಗಳೂ ಅಧಿಕವಾಗಿಬಿಟ್ಟಿವೆ.”
ಶ್ರೀರಾಮಕೃಷ್ಣರು: “ಭಗವಂತನ ಸಂಬಂಧವಾಗಿ ಇಂಗ್ಲೀಷಿನವರ ಭಾವನೆ ಏನು?”
ಮಾಸ್ಟರ್: “ಅವರು ನಿರಾಕಾರವಾದಿಗಳು.”
ಶ್ರೀರಾಮಕೃಷ್ಣರು: “ನಮ್ಮಲ್ಲಿಯೂ ಅಂಥವರಿದ್ದಾರೆ.”
ಸ್ವಲ್ಪ ಹೊತ್ತಿನಿಂದ ಇಬ್ಬರೂ ಸುಮ್ಮನೆ ಕುಳಿತುಕೊಂಡಿದ್ದಾರೆ. ಈಗ ಪರಮಹಂಸರು ತಮ್ಮ ಬ್ರಹ್ಮಜ್ಞಾನಾವಸ್ಥೆಯ ಸಂಬಂಧವಾಗಿ ವರ್ಣಿಸಲು ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಒಂದು ದಿನ ನನಗೆ ಭೇದರಹಿತವಾದ ಅಖಂಡಚೈತನ್ಯದ ದರ್ಶನವಾಯಿತು. ಮೊದಲು ಭಗವಂತ ನನಗೆ ದರ್ಶನಮಾಡಿಸಿದ, ಅನೇಕ ಮಂದಿ ಮನುಷ್ಯರು, ಜೀವ, ಜಂತು, ಒಂದು ಕಡೆ ಇರುವುದನ್ನು. ಆ ಗುಂಪಿನಲ್ಲಿ ಸಾಹುಕಾರರು, ಇಂಗ್ಲೀಷಿನವರು, ಮುಸಲ್ಮಾನರು, ನಾನು, ಜಾಡಮಾಲಿಗಳು, ನಾಯಿಗಳು, ಕೈಯಲ್ಲಿ ಒಂದು ಮಣ್ಣಿನ ತಟ್ಟೆ ತುಂಬ ಅನ್ನವನ್ನು ಹಿಡಿದಿದ್ದ ಒಬ್ಬ ಗಡ್ಡ ಬೆಳೆದ ಮುಸಲ್ಮಾನ ಎಲ್ಲರೂ ಇದ್ದೆವು. ಆ ಮುಸಲ್ಮಾನ ಎಲ್ಲರ ಬಾಯಿಗೂ ಕೆಲವು ಅನ್ನದ ಅಗುಳನ್ನು ಹಾಕಿದ. ನಾನೂ ಅದನ್ನು ತಿಂದೆ.
“ಇನ್ನೊಂದು ದಿನ ಭಗವಂತ ತೋರಿಸಿದ, ಮಲ, ಮೂತ್ರ, ಅನ್ನ, ಕಾಯಿಪಲ್ಯ, ವಿವಿಧ ಭಕ್ಷ್ಯಭೋಜ್ಯ ಎಲ್ಲಾ ಸುತ್ತಲೂ ಇದ್ದ ಹಾಗೆ, ಇದ್ದಕ್ಕಿದ್ದ ಹಾಗೆ ಜೀವಾತ್ಮ ನನ್ನ ಶರೀರದಿಂದ ಹೊರಕ್ಕೆ ಬಂದು ಜ್ವಾಲೆಯ ರೂಪ ತಾಳಿ ಎಲ್ಲವನ್ನೂ ರುಚಿನೋಡಲಾರಂಭಿಸಿದ-ನಾಲಗೆ ನೀಡಿ ನೀಡಿ ಎಲ್ಲವನ್ನೂ ರುಚಿ ನೋಡುತ್ತಿರುವನೋ ಏನೋ ಎಂಬಂತೆ ಕಂಡಿತು. ಮಲಮೂತ್ರಗಳನ್ನೂ ರುಚಿ ನೋಡಿಬಿಟ್ಟ. ಎಲ್ಲವೂ ಒಂದೇ. ಅಭೇದ ಎಂಬುದನ್ನು ತೋರಿಸಿಬಿಟ್ಟ.”
“ಮತ್ತೊಂದು ದಿನ ಭಗವಂತ ನನಗೆ ತೋರಿಸಿದ, ಇಲ್ಲಿಗೆ ಅನೇಕ ಮಂದಿ ಭಕ್ತರು ಬರುವುದನ್ನು-ನನ್ನ ಪರಮ ಶಿಷ್ಯರನ್ನೂ, ನನ್ನ ಅಂತರಂಗ ಭಕ್ತರನ್ನೂ. ಬಳಿಕ ಸಾಯಂ ಮಂಗಳಾರತಿಯ ಗಂಟೆ ಜಾಗಟೆ ಮೊದಲಾದುವುಗಳ ಶಬ್ದ ಕೇಳಿಬಂದೊಡನೆಯೇ ಕುಟೀರದ ಮೇಲಕ್ಕೆ ಹತ್ತಿ ವ್ಯಾಕುಲಹೃದಯದಿಂದ ಕೂಗುತ್ತಿದ್ದೆ: ‘ಏನ್ರೋ, ಎಲ್ಲಿದ್ದೀರೋ ನೀವೆಲ್ಲಾ? ಬೇಗ ಬನ್ನಿರೋ! ನಿಮ್ಮನ್ನು ನೋಡಬೇಕು ಎಂಬುದಾಗಿ ಪ್ರಾಣ ಸುಮ್ಮನೆ ಚಟಪಟಗುಟ್ಟುತ್ತಿದೆ ಕಣ್ರೋ!’
(ಮಾಸ್ಟರಿಗೆ) “ಒಳ್ಳೇದು, ನನ್ನ ಈ ಅಲೌಕಿಕ ದರ್ಶನಗಳ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು?”
ಮಾಸ್ಟರ್: “ನೀವು ಭಗವಂತನ ವಿಲಾಸಸ್ಥಾನ. ನನ್ನ ಅನುಭವಕ್ಕೆ ಬಂದಿದೆ. ನೀವು ಯಂತ್ರ, ಭಗವಂತ ಯಾಂತ್ರಿಕ ಎಂಬುದಾಗಿ. ಭಗವಂತ ಉಳಿದವರನ್ನು ಯಂತ್ರಗಳಿಂದ ಸೃಷ್ಟಿಸಿದರೆ, ನಿಮ್ಮನ್ನು ತನ್ನ ಸ್ವಂತ ಹಸ್ತಗಳಿಂದಲೇ ನಿರ್ಮಿಸಿದ್ದಾನೆ.”
ಶ್ರೀರಾಮಕೃಷ್ಣರು: “ನೋಡು, ಹಾಜರಾ ಹೇಳುತ್ತಾನೆ, ಭಗವದ್ದರ್ಶನವಾದ ಮೇಲೆ ಷಡೈಶ್ವರ್ಯ ದೊರೆಯುತ್ತದೆ ಎಂಬುದಾಗಿ.”
ಮಾಸ್ಟರ್: “ಯಾರಿಗೆ ಶುದ್ಧ ಭಕ್ತಿ ಬೇಕಾಗಿದೆಯೋ ಅವರಿಗೆ ಷಡೈಶ್ವರ್ಯ ಬೇಕೆನಿಸುವುದಿಲ್ಲ.”
ಶ್ರೀರಾಮಕೃಷ್ಣರು: “ಬಹುಶಃ ಹಾಜರಾ ಹಿಂದಿನ ಜನ್ಮದಲ್ಲಿ ಒಬ್ಬ ದರಿದ್ರನಾಗಿರಬೇಕು. ಅದಕ್ಕಾಗಿ ಆತ ಷಡೈಶ್ವರ್ಯ ನೋಡಬೇಕು ಅಂತ ಅಷ್ಟೊಂದು ಇಚ್ಛೆಪಡುತ್ತಿದ್ದಾನೆ. ನಾನು ಅಡಿಗೆಯವನೊಡನೆ ಏನೇನು ಮಾತುಕತೆಯಾಡಿದ್ದೇನೆ ಎಂಬುದನ್ನು ತಿಳಿದುಕೊಳ್ಳಲು ಆತನಿಗೆ ಇಚ್ಛೆ. ಆತ ನನಗೆ ಹೇಳುತ್ತಾನೆ: ‘ನಿಮಗೆ ಏನಾದರೂ ಬೇಕಾದರೆ, ಅಡಿಗೆಯವನಿಗೆ ಏಕೆ ತಿಳಿಸಲು ಹೋಗಬೇಕು? ನಾನು ಖಜಾಂಚಿಗೆ ಹೇಳಿ ನಿಮಗೆ ಬೇಕಾದ್ದೆಲ್ಲವನ್ನೂ ಕೊಡಿಸಿ ಕೊಟ್ಟುಬಿಡುತ್ತೇನೆ.’ (ಮಾಸ್ಟರ್ ಗಟ್ಟಿಯಾಗಿ ನಗುತ್ತಾನೆ.) ಆತ ಈ ರೀತಿಯಾಗೆಲ್ಲ ಹೇಳುತ್ತಲೇ ಇರುತ್ತಾನೆ. ನಾನು ಸುಮ್ಮನೆ ಇದ್ದುಬಿಡುತ್ತಲೇ ಇರುತ್ತೇನೆ.”
ಮಾಸ್ಟರ್: “ನೀವು ಅನೇಕ ಸಾರಿ ಹೇಳಿದ್ದೀರಿ, ಯಾರು ನಿಜವಾದ ಭಕ್ತನೋ ಆತನಿಗೆ ಭಗವಂತನ ಐಶ್ವರ್ಯ ನೋಡಬೇಕು ಅಂತ ಅನಿಸುವುದೇ ಇಲ್ಲ ಎಂಬುದಾಗಿ. ಆತ ಭಗವಂತನನ್ನು ಗೋಪಾಲಭಾವದಿಂದ ನೋಡಲು ಇಚ್ಛೆಪಡುತ್ತಾನೆ. ಮೊದಮೊದಲು ಭಗವಂತ ಸೂಜಿಗಲ್ಲು, ಭಕ್ತ ಸೂಜಿಯಾಗಿರುತ್ತಾನೆ. ಆದರೆ ಕೊನೆಯಲ್ಲಿ ಭಕ್ತನೇ ಸೂಜಿಗಲ್ಲು, ಭಗವಂತ ಸೂಜಿ ಆಗಿಬಿಡುತ್ತಾನೆ-ಎಂದರೆ ಭಗವಂತ ಭಕ್ತನ ಬಳಿಯಲ್ಲಿ ಒಬ್ಬ ಸಣ್ಣ ವ್ಯಕ್ತಿಯಾಗಿಬಿಡುತ್ತಾನೆ.”
ಶ್ರೀರಾಮಕೃಷ್ಣರು: “ಹೌದು, ಇದು ಅರುಣೋದಯಕಾಲದ ಸೂರ್ಯನ ಹಾಗೆ. ಆತನನ್ನು ಸುಲಭವಾಗಿ ಕಣ್ಣುಬಿಟ್ಟು ನೋಡಬಹುದು. ಆಗ ಆತನ ಬೆಳಕು ಕಣ್ಣನ್ನು ಕೋರೈಸುವುದಿಲ್ಲ; ಅದಕ್ಕೆ ಬದಲು ಅವಕ್ಕೆ ತೃಪ್ತಿಯನ್ನು ತರುತ್ತವೆ. ಭಗವಂತ ಭಕ್ತನ ಸಲುವಾಗಿ ಸೌಮ್ಯ ಭಾವವನ್ನು ಆರೋಪಿಸಿಕೊಳ್ಳುತ್ತಾನೆ. ತನ್ನ ಐಶ್ವರ್ಯಗಳನ್ನೆಲ್ಲಾ ತ್ಯಜಿಸಿ ಭಕ್ತನನ್ನು ಸಮೀಪಿಸುತ್ತಾನೆ.”
ಇಬ್ಬರೂ ಸ್ವಲ್ಪ ಹೊತ್ತಿನಿಂದ ಹಾಗೇ ಕುಳಿತುಕೊಂಡಿದ್ದಾರೆ.
ಮಾಸ್ಟರ್: “ನಿಮ್ಮ ಈ ದರ್ಶನಗಳೆಲ್ಲ ಸತ್ಯವೇಕೆ ಅಲ್ಲ? ಅವು ಸತ್ಯವಲ್ಲದಿದ್ದರೆ ಈ ಜಗತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಅಸತ್ಯ; ಏಕೆಂದರೆ ಈ ಎರಡು ವಿಧದ ಅನುಭವಗಳಿಗೂ ಕೇವಲ ಒಂದು ಮನಸ್ಸೇ ಕಾರಣ. ಅತೀಂದ್ರಿಯ ದರ್ಶನಗಳೆಲ್ಲಾ ಶುದ್ಧ ಮನಸ್ಸಿಗೆ ಗೋಚರವಾಗುತ್ತಿವೆ. ಈ ಜಗತ್ತಿನ ವಸ್ತುಗಳೆಲ್ಲ ಸಾಮಾನ್ಯ ಮನಸ್ಸಿಗೆ ಗೋಚರವಾಗುತ್ತಿವೆ.”
ಶ್ರೀರಾಮಕೃಷ್ಣರು : “ಈಗ ಕಾಣುತ್ತಾ ಇದೆ. ‘ಅನಿತ್ಯ’ ಎಂದರೆ ಏನು ಎಂಬುದನ್ನು ನೀನು ಚೆನ್ನಾಗಿ ಗ್ರಹಿಸಿಬಿಟ್ಟಿರುವ ಹಾಗೆ. ಒಳ್ಳೇದು. ನಿನ್ನ ದೃಷ್ಟಿಯಿಂದ ಹಾಜರಾ ಹೇಗೆ?”
ಮಾಸ್ಟರ್: “ಆತ ಒಂದು ವಿಧದ ವ್ಯಕ್ತಿ.” (ಶ್ರೀರಾಮಕೃಷ್ಣರು ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು: “ಒಳ್ಳೇದು, ನನ್ನ ಹಾಗೆ ಬೇರೆ ಯಾರಾದರೂ ಇದ್ದಾರೆಯೇ?”
ಮಾಸ್ಟರ್: “ಇಲ್ಲ.”
ಶ್ರೀರಾಮಕೃಷ್ಣರು: “ಬೇರೆ ಯಾರಾದರೂ ಪರಮಹಂಸರು?”
ಮಾಸ್ಟರ್: “ಇಲ್ಲ, ನಿಮ್ಮೊಡನೆ ಬೇರೆ ಯಾರನ್ನೂ ಹೋಲಿಸಲಾಗುವುದಿಲ್ಲ.”
ಶ್ರೀರಾಮಕೃಷ್ಣರು: “ನಗುತ್ತ:ಅಚೀನೆ 1 ಎಂಬ ಹೆಸರಿನ ಒಂದು ಮರ ಇದೆ. ಗೊತ್ತೆ?”
ಮಾಸ್ಟರ್: “ಇಲ್ಲ”
ಶ್ರೀರಾಮಕೃಷ್ಣರು: “ಆ ಹೆಸರಿನ ಒಂದು ಮರ ಇದೆ. ಆದರೆ ಅದನ್ನು ಯಾರೂ ಗುರುತಿಸಲಾರರು.”
ಮಾಸ್ಟರ್: “ಹಾಗೇನೆ ನಿಮ್ಮನ್ನು ಕಂಡುಹಿಡಿಯಲಾಗುವುದಿಲ್ಲ. ನಿಮ್ಮನ್ನು ಅರಿತುಕೊಂಡಷ್ಟೂ ವ್ಯಕ್ತಿಯ ಉನ್ನತಿಯೂ ಅಧಿಕವಾಗುತ್ತಾ ಬರುತ್ತದೆ.”
ಮಾಸ್ಟರ್ ಸುಮ್ಮನೆ ಕುಳಿತು ಭಾವಿಸಲಾರಂಭಿಸಿದ: “ಪರಮಹಂಸರು ‘ಅರುಣೋದಯ ಕಾಲದ ಸೂರ್ಯ, ಅಚೀನೆ ಎಂಬ ಗಿಡ, ಇವುಗಳ ವಿಷಯವಾಗಿ ಹೇಳಿದರಲ್ಲ, ಏನವರು ಅವತಾರಪುರುಷನನ್ನು ಸೂಚಿಸಿದರೇನು? ನರಲೀಲೆ ಎಂಬುದು ಇದೇ ಏನು? ಪರಮಹಂಸರೆ ಅವತಾರಪುರುಷರೇನು? ಅದಕ್ಕಾಗಿಯೇ ತಮ್ಮ ಸಹಾಯಕರುಗಳನ್ನು ನೋಡಲು ಅತ್ಯಂತ ಕಾತರರಾಗಿ ಕುಟೀರದ ಚಾವಣಿಗೆ ಹತ್ತಿ ಕೂಗುತ್ತಿದ್ದರೇನು: ‘ಏನ್ರೋ, ಎಲ್ಲಿದ್ದೀರೋ? ಬೇಗ ಬನ್ರೋ! ಎಂಬುದಾಗಿ?”
ಮಾರನೇ ದಿನ ಪರಮಹಂಸರು ಕಾಳೀದೇವಾಲಯದ ಆಗ್ನೇಯ ವರಾಂಡದ ಹಂತಗಳ ಮೇಲೆ ಕುಳಿತಿದ್ದಾರೆ. ಅವರ ಹತ್ತಿರ ರಾಖಾಲ, ಮಾಸ್ಟರ್, ಹಾಜರಾ ಕುಳಿತಿದ್ದಾರೆ. ತಮ್ಮ ಬಾಲ್ಯಕಾಲದ ಜೀವನದ ಸಂಬಂಧವಾಗಿ ಮಗುವಿನ ಹಾಗೆ ಹೇಳಿಕೊಳ್ಳುತ್ತಿದ್ದಾರೆ.
ಮುಸ್ಸಂಜೆ. ಪರಮಹಂಸರು ತಮ್ಮ ಕೊಠಡಿಗೆ ಹಿಂದಿರುಗಿ ಬಂದು, ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೆ ಸಮಾಧಿಸ್ಥರಾಗಿ ಆ ಅವಸ್ಥೆಯಲ್ಲಿಯೇ ಭಗವತಿಯೊಡನೆ ಮಾತುಕತೆ ಆಡುತ್ತಿದ್ದಾರೆ. ಈಗ ಹೇಳುತ್ತಿದ್ದಾರೆ: “ತಾಯೆ, ಈ ಗೊಂದಲವೆಲ್ಲ ಏಕೆ? ನಾನು ಅಲ್ಲಿಗೆ ಹೋಗಬೇಕೇನು? ಕರೆದುಕೊಂಡು ಹೋದರೆ ಬರುತ್ತೇನೆ.” ಪರಮಹಂಸರು ಒಬ್ಬ ಭಕ್ತನ ಮನೆಗೆ ಹೋಗಬೇಕಾಗಿತ್ತು. ಅದಕ್ಕಾಗಿ ಭಗವತಿಯಿಂದ ಅಪ್ಪಣೆ ಪಡೆದುಕೊಳ್ಳುತ್ತಿದ್ದಾರೇನು?
ಈಗ ಮತ್ತೆ-ಬಹುಶಃ ಒಬ್ಬ ಭಕ್ತನ ಸಂಬಂಧವಾಗಿ ಇರಬೇಕು-ಭಗವತಿಯೊಡನೆ ಮಾತುಕತೆಯಾಡುತ್ತಿದ್ದಾರೆ. ಹೇಳುತ್ತಿದ್ದಾರೆ: “ತಾಯೆ, ಆತನನ್ನು ಕಳಂಕವಿಹೀನನನ್ನಾಗಿ ಮಾಡು. ಒಳ್ಳೇದು, ತಾಯೆ, ಆತನಿಗೆ ಏಕೆ ಒಂದೇ ಒಂದು ಅಂಶವನ್ನು ಕೊಟ್ಟಿದ್ದೀಯೆ?” ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಮತ್ತೆ ಹೇಳುತ್ತಿದ್ದಾರೆ: “ಓ, ಈಗ ಅರ್ಥವಾಯಿತು. ಇಷ್ಟರಿಂದಲೇ ನಿನ್ನ ಕೆಲಸ ನೆರವೇರಿಬಿಡುತ್ತದೆ.”
ಅದೇ ಅವಸ್ಥೆಯಲ್ಲಿ ಭಕ್ತರನ್ನು ಸಂಬೋಧಿಸಿ ಹೇಳುತ್ತಿದ್ದಾರೆ: “ಯಾರು ಬ್ರಹ್ಮನೋ, ಆತನೇ ಶಕ್ತಿ. ಆತನನ್ನೇ ನಾನು ‘ಭಗವತಿ’ ಎಂಬುದಾಗಿ ಕರೆಯುತ್ತಿರುವುದು. ಯಾವಾಗ ಆತ ನಿಷ್ಕ್ರಿಯನೋ, ಆಗ ಆತನನ್ನು ‘ಬ್ರಹ್ಮ’ ಅಂತ ಕರೆಯುತ್ತೇನೆ. ಸೃಷ್ಟಿ-ಸ್ಥಿತಿ-ಪ್ರಳಯ ಕಾರ್ಯ ಮಾಡುವಾಗ ಆತನನ್ನೇ ‘ಶಕ್ತಿ’ ಅಂತ ಕರೆಯುತ್ತೇನೆ. ನೀರು ಕೆಲವು ವೇಳೆ ಸ್ಥಿರವಾಗಿ; ಇನ್ನೂ ಕೆಲವು ವೇಳೆ ಅಲೆಗಳಿಂದ ಕೂಡಿ ಇರುವುದಿಲ್ಲವೇ ಅದೂ ಹಾಗೆ. ಶಕ್ತಿಯ ಲೀಲೆಯಿಂದಲೇ ಅವತಾರದ ಉತ್ಪನ್ನ, ಅವತಾರಪುರುಷ ಪ್ರೇಮ ಭಕ್ತಿಯನ್ನು ಕಲಿಸಿಕೊಡಲು ಬರುತ್ತಾನೆ. ಆತನನ್ನು ಹಸುವಿನ ಕೆಚ್ಚಲಿಗೆ ಹೋಲಿಸಬಹುದು. ಹಾಲು ಬೇಕಾಗಿದ್ದರೆ, ಇದು ಕೆಚ್ಚಲಿನ ಮೂಲಕವೇ ಬರಬೇಕು. ಭಗವಂತ ಮನುಷ್ಯನಾಗಿ ಅವತೀರ್ಣನಾಗುತ್ತಾನೆ. ಸರೋವರದ ಗುಂಡಿಗಳಲ್ಲಿ ಅನೇಕ ಮೀನುಗಳು ಬಂದು ಸೇರಿಕೊಳ್ಳುವ ಹಾಗೆ, ಅವತಾರಪುರುಷನಲ್ಲಿ ಭಗವಂತನ ಶಕ್ತಿ ವಿಶೇಷವಾಗಿ ತುಂಬಿಕೊಂಡಿರುತ್ತದೆ.”
ಭಕ್ತರಲ್ಲಿ ಕೆಲಕೆಲವರು ಭಾವಿಸುತ್ತಿದ್ದಾರೆ: “ಪರಮಹಂಸರು ಶ್ರೀಕೃಷ್ಣ, ಶ್ರೀಚೈತನ್ಯ, ಏಸುಕ್ರಿಸ್ತ ಇವರಂತೆ ಅವತಾರಪುರುಷರೇನು?” ಎಂಬುದಾಗಿ.
೯ನೆ ಸೆಪ್ಟೆಂಬರ್ ೧೮೮೩, ಭಾದ್ರಪದ ಶುಕ್ಲ ಸಪ್ತಮಿ, ಭಾನುವಾರ
ಪರಮಹಂಸರು ಮಧ್ಯಾಹ್ನದ ಊಟ ಮುಗಿಸಿ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ರಾಖಾಲ, ಮಾಸ್ಟರ್, ರತ್ನ ನೆಲದ ಮೇಲೆ ಕುಳಿತುಕೊಂಡಿದ್ದಾರೆ. ರತ್ನ ಯದುಮಲ್ಲಿಕನ ತೋಟದ ಮನೆಯ ಮೇಲ್ವಿಚಾರಕ. ಆತ ಪರಮಹಂಸರನ್ನು ಬಹಳವಾಗಿ ಗೌರವಿಸುತ್ತಿದ್ದುದರಿಂದ ಆಗಾಗ ಅಲ್ಲಿಗೆ ಬಂದುಹೋಗುತ್ತಿದ್ದಾನೆ. ರಾಮ ಚಟ್ಟೋಪಾಧ್ಯಾಯ ಮತ್ತು ಹಾಜರಾ ಆಗಾಗ ಕೊಠಡಿಗೆ ಬಂದು ಹೋಗುತ್ತಿದ್ದಾರೆ. ಘಂಟೆ ಅಪರಾಹ್ನ ಎರಡು.
ರತ್ನ ಪರಮಹಂಸರಿಗೆ ತಿಳಿಸಿದ. ಯದುಮಲ್ಲಿಕನ ಕಲ್ಕತ್ತದ ಮನೆಯಲ್ಲಿ ನೀಲಕಂಠನಿಂದ ಬಯಲು ನಾಟಕ ನಡೆಯುವಂತೆ ಏರ್ಪಾಟಾಗಿದೆ ಎಂಬುದಾಗಿ.
ರತ್ನ ಶ್ರೀರಾಮಕೃಷ್ಣರಿಗೆ: “ನೀವು ಅಲ್ಲಿಗೆ ಬರಬೇಕು. ನಿರ್ದಿಷ್ಟ ದಿನವನ್ನು ಗೊತ್ತು ಮಾಡಿದೆ.”
ಶ್ರೀರಾಮಕೃಷ್ಣರು: “ಅದು ಬಹಳ ಒಳ್ಳೆಯದು, ನನಗೂ ಇಚ್ಛೆಯಿದೆ. ನೀಲಕಂಠ ಬಹಳ ಭಕ್ತಿಯಿಂದ ಹಾಡುತ್ತಾನೆ.”
ಒಬ್ಬ ಭಕ್ತ: “ಅದು ನಿಜ.”
ಶ್ರೀರಾಮಕೃಷ್ಣರು: “ಹಾಡುತ್ತ ಹಾಡುತ್ತ ಅವನ ಕಣ್ಣಿನಿಂದ ಪ್ರೇಮಾಶ್ರು ಸುರಿಯುತ್ತದೆ. (ರತ್ನನಿಗೆ) ಯೋಚನೆಮಾಡುತ್ತಿದ್ದೇನೆ, ರಾತ್ರಿಯನ್ನೆಲ್ಲಾ ಅಲ್ಲೇ ಕಳೆದುಬಿಡಬೇಕು ಎಂಬುದಾಗಿ.”
ರತ್ನ: “ಬಹಳ ಒಳ್ಳೆಯದು.”
ರಾಮ ಚಟ್ಟೋಪಾಧ್ಯಾಯ ಮತ್ತು ಉಳಿದ ಭಕ್ತರು ರತ್ನನನ್ನು ಯದುಮಲ್ಲಿಕನ ಮನೆಯಲ್ಲಿ ನಡೆದ ಕಳ್ಳತನದ ಸಂಬಂಧವಾಗಿ ಕೇಳಿದರು.
ರತ್ನ: “ಯದುಬಾಬುವಿನ ಮನೆದೇವರ ಚಿನ್ನದ ಪಾದುಕೆ ಕಳವಾಗಿಬಿಟ್ಟಿದೆ. ಅದಕ್ಕಾಗಿ ಮನೆಯಲ್ಲೆಲ್ಲಾ ಗೊಂದಲವೇ ಗೊಂದಲ. ಮಂತ್ರಿಸಿದ ತಟ್ಟೆಯಿಂದ ಕಳ್ಳನನ್ನು ಪತ್ತೆಮಾಡಿಬಿಡುತ್ತಾರೆ. ಎಲ್ಲರೂ ಮನೆಯಲ್ಲಿಯೆ ಇರಬೇಕು ಅಂತ ಕಟ್ಟಾಜ್ಞೆಯಾಗಿದೆ. ಯಾರು ಕದ್ದಿದ್ದಾನೋ, ಆತನ ಕಡೆಗೇ ಆ ತಟ್ಟೆ ಚಲಿಸಿಬಿಡುತ್ತದೆ.”
ಶ್ರೀರಾಮಕೃಷ್ಣರು: “ಅದು ಹೇಗೆ ಚಲಿಸುತ್ತದೆ? ಏನು ತನಗೆ ತಾನೇ?”
ರತ್ನ: “ಅದನ್ನು ನೆಲಕ್ಕೆ ಬಡಿಯುತ್ತಾರೆ.”
ಒಬ್ಬ ಭಕ್ತ: “ಇದು ಒಂದು ವಿಧವಾದ ಕೈಚಳಕ-ಒಂದು ವಿಧವಾದ ಕೈಚಾತುರ್ಯ.”
ಶ್ರೀರಾಮಕೃಷ್ಣರು: “ಯಾವ ಚಾತುರ್ಯದಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುವುದೋ ಅದೇ ನಿಜವಾದ ಚಾತುರ್ಯ. ಆ ಚಾತುರ್ಯವೇ ಉತ್ತಮೋತ್ತಮ ಚಾತುರ್ಯ.”
ಹೀಗೆ ಮಾತು ಮುಂದುವರಿಯುತ್ತಿದ್ದಾಗ ಕೆಲವು ಮಂದಿ ಬಂಗಾಳಿ ದೊಡ್ಡ ಮನುಷ್ಯರು ಕೊಠಡಿಯನ್ನು ಪ್ರವೇಶಿಸಿ, ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡರು. ಅವರಲ್ಲಿ ಒಬ್ಬನ ಪರಿಚಯ ಹಿಂದೆಯೇ ಆಗಿತ್ತು. ಅವರೆಲ್ಲರೂ ತಂತ್ರ ಸಾಧನೆ ಮಾಡುತ್ತಿದ್ದರು. ಅವರಲ್ಲಿ ಒಬ್ಬ ಧರ್ಮದ ಹೆಸರಿನಲ್ಲಿ ಅನೀತಿಯುತವಾಗಿ ವರ್ತಿಸುತ್ತಿದ್ದುದು ಪರಮಹಂಸರಿಗೆ ಗೊತ್ತಿತ್ತು. ತಂತ್ರಶಾಸ್ತ್ರ, ಸಾಧನೆಯ ಸಮಯದಲ್ಲಿ ಪಂಚಮಕಾರಗಳನ್ನು ಉಪಯೋಗಿಸಲೇನೋ ಅನುಮತಿಯನ್ನಿತ್ತಿದೆ. ಆದರೆ ಪರಮಹಂಸರದುಸಂತಾನಭಾವ. ಪ್ರತಿಯೊಬ್ಬ ಹೆಂಗಸೂ-ವೇಶ್ಯೆ ಕೂಡ-ಅವರ ದೃಷ್ಟಿಯಿಂದ ಸಾಕ್ಷಾತ್ ಭಗವತಿಯೇ. ಅವರೆಲ್ಲರನ್ನೂ ಅವರು “ತಾಯಿ” ಎಂದು ಸಂಬೋಧಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು ನಗುತ್ತ: “ಅಚಲಾನಂದನೆಲ್ಲಿ? ಅಚಲಾನಂದ ಮತ್ತು ಆತನ ಶಿಷ್ಯರ ಭಾವವೇ ಬೇರೆ. ನನ್ನದು ಸಂತಾನಭಾವ.”
ಕೊಠಡಿಯನ್ನು ಪ್ರವೇಶಿಸಿದ ಬಂಗಾಳಿಬಾಬುಗಳು ಯಾವ ಮಾತನ್ನೂ ಆಡದೆ ಸುಮ್ಮನೆ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು: “ನನ್ನದು ಸಂತಾನಭಾವ. ಅಚಲಾನಂದ ಆಗಾಗ ಇಲ್ಲಿಗೆ ಬಂದು ಇರುತ್ತಿದ್ದ, ಕಾರಣವನ್ನು (ಭಗವತಿಗೆ ಅರ್ಪಿಸಿದ ಮದ್ಯ) ಬಹಳವಾಗಿ ಕುಡಿಯುತ್ತಿದ್ದ. ನನ್ನದು ಸಂತಾನಭಾವ ಎಂಬುದನ್ನು ಕೇಳಿ ತನ್ನದೇ ಸರಿಯೆಂದು ಹಠತೊಡಲಾರಂಭಿಸಿದ. ಒತ್ತಿ ಒತ್ತಿ ಹೇಳಲಾರಂಭಿಸಿದ: ‘ಹೆಂಗಸಿನೊಡನೆ ವೀರಭಾವ ಸಾಧನೆ ಮಾಡುವುದನ್ನು ನೀವು ಏಕೆ ಒಪ್ಪುತ್ತಿಲ್ಲ? ಶಿವನ ಬರವಣಿಗೆಗೆ ನೀವು ಮನ್ನಣೆ ಕೊಡುವುದಿಲ್ಲ. ಆತ ತಂತ್ರಶಾಸ್ತ್ರವನ್ನು ಬರೆದಿದ್ದಾನೆ. ಅದರಲ್ಲಿ ಎಲ್ಲಾ ವಿಧದ ಸಾಧನೆಗಳನ್ನೂ ನಿರೂಪಿಸಿದ್ದಾನೆ. ವೀರಭಾವದ ಸಾಧನೆಯೂ ಅದರಲ್ಲಿದೆ.’ ನಾನು ಆತನಿಗೆ ಹೇಳಿದೆ: ‘ನನಗೆ ಅದೆಲ್ಲ ಗೊತ್ತಿಲ್ಲ. ನನಗೆ ಇವೆಲ್ಲ ಸ್ವಲ್ಪವೂ ರುಚಿಸುತ್ತಿಲ್ಲ. ನನ್ನದು ಸಂತಾನಭಾವ.’
“ಅಚಲಾನಂದ ತನ್ನ ಮಕ್ಕಳು-ಮರಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಿರಲಿಲ್ಲ. ಆತ ನನಗೆ ಹೇಳುತ್ತಿದ್ದ: ‘ಅವನ್ನೆಲ್ಲಾ ಭಗವಂತ ನೋಡಿಕೊಳ್ಳುತ್ತಾನೆ. ಅವೆಲ್ಲಾ ಆತನ ಇಚ್ಛೆಯಂತೆ.’ ನಾನು ಅದನ್ನು ಕೇಳಿ ಸುಮ್ಮನೆ ಇದ್ದುಬಿಟ್ಟೆ. ಆಗ ಆತ ಹೇಳಿದುದರ ಸಂಬಂಧವಾಗಿ ನನಗೆ ಈ ಭಾವನೆ ಬಂತು: ‘ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಹೆಂಡತಿ ಮಕ್ಕಳನ್ನು ತ್ಯಜಿಸುವುದು ಹಣ ಸಂಪಾದಿಸಲು ಬೇರೊಂದು ಮಾರ್ಗ ಆಗದ ಹಾಗೆ ಇರಲಿ. ಜನ ಭಾವಿಸಿಕೊಳ್ಳುತ್ತಾರೆ, ಈತ ಒಳ್ಳೆಯ ತ್ಯಾಗಿಪುರುಷ ಎಂಬುದಾಗಿ; ಮತ್ತು ಬೇಕಾದಷ್ಟು ಹಣ ಸಂಗ್ರಹವಾಗುತ್ತದೆ.’
“ಮೊಕದ್ದಮೆಯಲ್ಲಿ ಗೆಲ್ಲಲು, ಹೆಚ್ಚಾಗಿ ಹಣ ಸಂಪಾದಿಸಲು ಅಥವಾ ಬೇರೆಯವರಿಗೆ ವ್ಯಾಜ್ಯ ಗೆದ್ದುಕೊಡಲು, ಪ್ರಾಪಂಚಿಕ ವಸ್ತುಗಳನ್ನು ದೊರಕಿಸಿಕೊಡಲು ಸಾಧನೆಯಲ್ಲಿ ತೊಡಗುವುದೇ? ಇದು ಅತ್ಯಂತ ಹೀನಬುದ್ಧಿಯುಳ್ಳವರ ವರ್ತನೆ.”
“ಹಣದಿಂದ ತಿನ್ನಲು ಅನ್ನ, ಉಡಲು ಬಟ್ಟೆ, ಇರಲು ಜಾಗ ದೊರಕುತ್ತವೆ. ಅದರಿಂದ ಭಗವಂತನ, ಸಾಧುಸಂತರ, ದರಿದ್ರರ ಸೇವೆ ಆಗುತ್ತದೆ. ಆ ಕೆಲವದರಿಂದ ಹಣದ ಸದ್ವಿನಿಯೋಗ ಆಗುತ್ತದೆ. ಹಣವನ್ನು ಭೋಗಸುಖಗಳಿಗೇ ಆಗಲಿ, ದೇಹಸುಖಗಳಿಗೇ ಆಗಲಿ, ಲೋಕಮಾನ್ಯತೆಗೇ ಆಗಲಿ ಉಪಯೋಗಿಸಕೂಡದು.
“ಅಣಿಮಾದಿ ಸಿದ್ಧಿಗಳನ್ನು ದೊರಕಿಸಿಕೊಳ್ಳಲು ಜನ ತಂತ್ರಶಾಸ್ತ್ರದಲ್ಲಿ ಹೇಳಿರುವ ಪಂಚಮಕಾರ ಸಾಧನೆಗಳಲ್ಲಿ ತೊಡಗುತ್ತಾರೆ. ಅವರದು ಎಂಥ ಹೀನಬುದ್ಧಿ! ಶ್ರೀಕೃಷ್ಣ ಅರ್ಜುನನಿಗೆ ಹೇಳಿದ: ‘ಗೆಳೆಯ, ಅಷ್ಟಸಿದ್ಧಿಗಳಲ್ಲಿ ಒಂದನ್ನು ಗಳಿಸಿಕೊಂಡರೂ ನಿನ್ನ ಶಕ್ತಿಯೇನೋ ಅಧಿಕವಾಗಬಹುದು. ಆದರೆ ಅದರಿಂದ ನನ್ನ ಸಾಕ್ಷಾತ್ಕಾರ ಮಾತ್ರ ನಿನಗೆ ದೊರೆಯುವ ಹಾಗಿಲ್ಲ.” ಸಿದ್ಧಿ ಇತ್ತು ಎಂದರೆ ಮಾಯೆ ನಮ್ಮನ್ನು ಬಿಟ್ಟು ತೊಲಗಲೊಲ್ಲದು. ಮಾಯೆಯಿಂದ ಅಹಂಕಾರ ಉಂಟಾಗುತ್ತದೆ.
“ಶರೀರ, ಹಣ ಇವೆಲ್ಲಾ ಅನಿತ್ಯ. ಇವುಗಳಿಗೇಕೆ ಇಷ್ಟೊಂದು ಹಂಬಲಿಸಬೇಕು? ಹಾಗೇ ಹಠಯೋಗಿಗಳ ಪಾಡನ್ನು ನೋಡು. ಈ ಶರೀರವನ್ನು ದೀರ್ಘಾಯುವನ್ನಾಗಿ ಮಾಡುವುದು ಹೇಗೆ ಎಂಬ ಹಂಬಲವೊಂದೇ ಅವರಿಗೆ. ಅವರ ಲಕ್ಷ್ಯ ಭಗವಂತನ ಕಡೆಗಿಲ್ಲ. ನೇತಿ, ಧೌತಿಗಳಿಂದ ಸುಮ್ಮನೆ ಹೊಟ್ಟೆ ತೊಳೆದುಕೊಳ್ಳುವುದು, ಕೊಳವೆಯ ಮುಖಾಂತರ ಹೊಟ್ಟೆಗೆ ಹಾಲು ಎಳೆದುಕೊಳ್ಳುವುದು ಇಷ್ಟೇ ಕೆಲಸ!
“ಒಬ್ಬ ಅಕ್ಕಸಾಲಿಗನ ನಾಲಗೆ ಅಕಸ್ಮಾತ್ತಾಗಿ ಮಡಿಸಿಕೊಂಡು ಅಂಗುಳಿಗೆ ಅಂಟಿಕೊಂಡು ಬಿಟ್ಟಿತು. ಜಡಸಮಾಧಿಸ್ಥನ ಹಾಗೆ ತೋರಲಾರಂಭಿಸಿದ. ಚಲನವಲನಗಳೆಲ್ಲಾ ಸಂಪೂರ್ಣವಾಗಿ ನಿಂತುಹೋದವು. ಆ ಅವಸ್ಥೆಯಲ್ಲೇ ಆತ ಬಹಳ ದಿನದವರೆಗೆ ಇದ್ದು ಬಿಟ್ಟ. ಜನರು ಬಂದು ಆತನಿಗೆ ಪೂಜೆ ಪುರಸ್ಕಾರಗಳನ್ನು ಮಾಡುತ್ತಿದ್ದರು. ಕೆಲವು ವರ್ಷಗಳ ಬಳಿಕ ಇದ್ದಕ್ಕಿದ್ದ ಹಾಗೆ ನಾಲಗೆ ಮತ್ತೆ ಎಂದಿನ ಸ್ಥಿತಿಗೆ ಹಿಂದಿರುಗಿಬಿಟ್ಟಿತು. ಅದರೊಡನೆ ಆತನ ಹಿಂದಿನ ಪ್ರಜ್ಞೆಯೂ ಬಂತು. ಮತ್ತೆ ಚಿನ್ನದ ಕೆಲಸ ಮಾಡಲು ಶುರುಮಾಡಿದ. (ಎಲ್ಲರೂ ನಗುತ್ತಿದ್ದಾರೆ.)
“ಇವೆಲ್ಲಾ ದೇಹಕ್ಕೆ ಸಂಬಂಧಪಟ್ಟವು. ಇವಕ್ಕೂ ಭಗವಂತನ ಸಾಕ್ಷಾತ್ಕಾರಕ್ಕೂ ಯಾವ ಸಂಬಂಧವೂ ಇಲ್ಲ. ಒಬ್ಬನಿಗೆ ಎಂಬತ್ತೆರಡು ಆಸನಗಳು ಬರುತ್ತಿದ್ದುವು. ಯೋಗ ಸಮಾಧಿಯ ವಿಷಯವಾಗಿ ಬಹಳ ಬಹಳವಾಗಿ ಮಾತಾಡುತ್ತಿದ್ದ. ಆದರೆ ಆತನ ಆಂತರ್ಯ ಕಾಮ ಕಾಂಚನಗಳಲ್ಲಿ ಆಸಕ್ತವಾಗಿತ್ತು. ಒಮ್ಮೆ ಅನೇಕ ಸಹಸ್ರ ರೂಪಾಯಿಗಳ ಒಂದು ನೋಟು ಒಂದು ಕಡೆ ಬಿದ್ದುಹೋಗಿತ್ತು. ಹಣದ ಲೋಭದಿಂದ, ಮುಂದೆ ಹೊರಕ್ಕೆ ತೆಗೆದುಕೊಳ್ಳಬಹುದೆಂದು ಅದನ್ನು ಎತ್ತಿ ನುಂಗಿಬಿಟ್ಟ. ಆತ ಆ ನೋಟನ್ನು ಹಿಂದಿರುಗಿ ಕೊಡಬೇಕಾಗಿ ಬಂದದ್ದೂ ಅಲ್ಲದೆ, ಮೂರು ವರ್ಷ ಜೈಲುವಾಸ ಮಾಡಬೇಕಾಯಿತು. ಸತ್ಯವಾಗಿ ಹೇಳುತ್ತೇನೆ, ನನ್ನ ಸರಳ ಬುದ್ಧಿಯಿಂದ ಭಾವಿಸುತ್ತಿದ್ದೆ, ಆತ ಆಧ್ಯಾತ್ಮಿಕ ಜೀವನದಲ್ಲಿ ಬಹಳ ಮುಂದುವರಿದಿರಬೇಕು ಎಂಬುದಾಗಿ.
“ಸಿಂಥಿಯ ಮಹೇಂದ್ರಪಾಲ ಒಮ್ಮೆ ರಾಮಲಾಲನ ಕೈಯಲ್ಲಿ ಐದು ರೂಪಾಯಿ ಕೊಟ್ಟು ಹೊರಟುಹೋದನಂತರ ರಾಮಲಾಲ ಬಂದು ಅದನ್ನು ನನಗೆ ತಿಳಿಸಿದ, ನಾನು ಆತನಲ್ಲಿ ಕೇಳಿದೆ: ‘ಆತ ಏಕೆ ಕೊಟ್ಟುಹೋದ?’ ಆತ: ‘ನಿಮಗಾಗಿ’ ಎಂದ. ಆಗ ಮನಸ್ಸಿನಲ್ಲಿ ಭಾವನೆ ಬಂತು, ಹಾಲಿನವನ ಸಾಲವನ್ನು ಸ್ವಲ್ಪವಾಗಿ ತೀರಿಸಿಬಿಡಬಹುದು ಎಂಬುದಾಗಿ. ಏನು ಹೇಳಲಿ! ರಾತ್ರಿ ಮಲಗಿದ್ದವನು ಹಠಾತ್ತಾಗಿ ಎದ್ದು ಕುಳಿತುಕೊಂಡೆ. ನನ್ನ ಹೃದಯವನ್ನು ಬೆಕ್ಕು ಒಳಹೊಕ್ಕು ಅದನ್ನು ಪರಚುತ್ತಿರುವುದೋ ಏನೋ ಎಂಬಂತೆ ಅನುಭವವಾಯಿತು. ಒಡನೆಯೇ ರಾಮಲಾಲನನ್ನು ಏಳಿಸಿ ಕೇಳಿದೆ: ‘ಏನೋ, ಆ ಹಣವನ್ನು ಮಹೇಂದ್ರಪಾಲ ಯಾರಿಗೆ ಕೊಟ್ಟ? ನಿನ್ನ ಚಿಕ್ಕಮ್ಮನಿಗೇನೋ?’ ಆತ ‘ಇಲ್ಲ, ನಿಮಗೆ’ ಎಂದ. ಆಗ ಆತನಿಗೆ ಹೇಳಿದೆ: ‘ಈ ಕ್ಷಣವೇ ಹೋಗಿ ಆ ಹಣವನ್ನು ಹಿಂದಿರುಗಿ ಕೊಟ್ಟು ಬಾ; ಇಲ್ಲದಿದ್ದರೆ ನನ್ನ ಮನಸ್ಸಿಗೆ ಶಾಂತಿ ದೊರಕುವ ಹಾಗಿಲ್ಲ.’ ರಾಮಲಾಲ ಬೆಳಗ್ಗೆ ಹೊತ್ತಿಗೆ ಮುಂಚೆಯೇ ಹೋಗಿ ಹಣವನ್ನು ಕೊಟ್ಟು ಬಂದ. ಆಗ ನನಗೆ ಸರಿಹೋಯಿತು.
“ಒಂದು ದಿನ ಇಲ್ಲಿಗೆ ಒಬ್ಬ ದೊಡ್ಡ ಧನಿಕ ಬಂದಿದ್ದ. ನನ್ನನ್ನು ಪ್ರಾರ್ಥನೆಮಾಡಿಕೊಂಡ: ‘ಮಹಾಶಯರೇ, ಈ ಮೊಕದ್ದಮೆಯಲ್ಲಿ ನನಗೆ ಜಯವಾಗುವ ಹಾಗೆ ನೀವು ಏನಾದರೂ ಒಂದು ಮಾಡಬೇಕು. ನಿಮ್ಮ ಹೆಸರು ಕೇಳಿ ನಾನು ಇಲ್ಲಿಗೆ ಬಂದಿದ್ದೇನೆ.’ ನಾನು ಅವನಿಗೆ ತಿಳಿಸಿದೆ: ‘ನೋಡಪ್ಪ, ನೀನು ಹುಡುಕಿಕೊಂಡು ಬಂದಿರುವ ವ್ಯಕ್ತಿ ನಾನಲ್ಲ; ಆತ ಅಚಲಾನಂದ. ನೀನು ತಪ್ಪಿ ಇಲ್ಲಿಗೆ ಬಂದಿದ್ದೀಯೆ.’
“ನಿಜವಾದ ಭಕ್ತ ದೇಹಸುಖ, ಐಶ್ವರ್ಯ ಇವುಗಳ ಕಡೆಗೆ ಗಮನವೀಯುವುದಿಲ್ಲ. ಆತ ಭಾವಿಸುತ್ತಾನೆ: ‘ದೇಹಸುಖ, ಲೋಕಮಾನ್ಯತೆ, ಧನಾರ್ಜನೆ-ಇವುಗಳಿಗೇತಕ್ಕೆ ತಪಸ್ಸು ಮಾಡಲಿ, ಇವೆಲ್ಲಾ ಅನಿತ್ಯ-ಎರಡು ದಿನ ಬಾಳಿನವು.’
ಹೊಸದಾಗಿ ಬಂದಿದ್ದ ಬಾಬುಗಳು ಪರಮಹಂಸರಿಗೆ ಪ್ರಣಾಮಮಾಡಿ ಎದ್ದು ಹೊರಟುಹೋದರು. ಶ್ರೀರಾಮಕೃಷ್ಣರು ಸ್ವಲ್ಪ ನಕ್ಕು ಮಾಸ್ಟರಿಗೆ ಹೇಳುತ್ತಿದ್ದಾರೆ : “ಚೋರರಿಗೆ ಧರ್ಮಬೋಧೆ ಹಿಡಿಸದು.” (ಎಲ್ಲರೂ ನಗುತ್ತಿದ್ದಾರೆ.)
“ಒಳ್ಳೇದು, ನರೇಂದ್ರ ಹೇಗೆ ಕಾಣುತ್ತಾನೆ ನಿನ್ನ ಕಣ್ಣಿಗೆ?”
ಮಾಸ್ಟರ್: “ಆತ ಬಹಳ ಒಳ್ಳೆಯವ.”
ಶ್ರೀರಾಮಕೃಷ್ಣರು: “ನೋಡು, ಅವನಲ್ಲಿ ವಿದ್ಯೆಗೆ ತಕ್ಕಂತೆ ಬುದ್ಧಿಯೂ ಇದೆ. ಹಾಡುವುದರಲ್ಲೂ, ಬಾಜಿಸುವುದರಲ್ಲೂ ನಿಪುಣ. ಜೊತೆಗೆ ಜಿತೇಂದ್ರಿಯನಾಗಿರುವುದು ಬೇರೆ. ಆತ ಹೇಳುತ್ತಿದ್ದಾನೆ, ತಾನು ವಿವಾಹವಾಗುವುದಿಲ್ಲ ಎಂದು.”
ಮಾಸ್ಟರ್: “ಒಮ್ಮೆ ನೀವು ಹೇಳಿದಿರಿ, ಯಾರು ತಾನು ‘ಪಾಪಿ, ಪಾಪಿ’ ಅಂತ ಭಾವಿಸಿಕೊಳ್ಳುತ್ತಾನೋ, ಆತ ಪಾಪಿಯೇ ಆಗಿಬಿಡುತ್ತಾನೆ; ಆತ ಉನ್ನತಿಯನ್ನು ಪಡೆಯಲಾರ. ಆದರೆ ಯಾರಿಗೆ ತಾನು ಭಗವಂತನ ಮಗು ಎಂಬ ದೃಢವಿಶ್ವಾಸವಿರುವುದೋ ಆತನಿಗೆ ಬೇಗ ಬೇಗ ಆತ್ಮೋನ್ನತಿಯಾಗಿಬಿಡುತ್ತದೆ ಅಂತ.”
ಶ್ರೀರಾಮಕೃಷ್ಣರು: “ಹೌದು, ವಿಶ್ವಾಸಬೇಕು. ಕೃಷ್ಣಕಿಶೋರನದು ಎಂಥ ವಿಶ್ವಾಸ! ಹೇಳುತ್ತಿದ್ದ: ‘ನಾನು ಭಗವಂತನ ಹೆಸರನ್ನು ಒಮ್ಮೆ ಪಠಿಸಿದ್ದೇನೆ. ನನ್ನಲ್ಲಿ ಇನ್ನು ಪಾಪ ಅಂದರೇನು? ನಾನು ಶುದ್ಧ ನಿರ್ಮಲವ್ಯಕ್ತಿಯಾಗಿಬಿಟ್ಟಿದ್ದೇನೆ.’ ಒಂದು ದಿನ ಹಲಧಾರಿ ಹೇಳಿದ: ‘ಅಜಾಮಿಳನೂ ಭಗವಂತನನ್ನು ತುಷ್ಟಿಗೊಳಿಸಲು ತಪಸ್ಸು ಮಾಡಬೇಕಾಯಿತು. ತಪಸ್ಸು ಮಾಡದೆ ಭಗವಂತನ ಕೃಪೆಯನ್ನು ಪಡೆಯಲು ಸಾಧ್ಯವೇ? ಕೇವಲ ಒಮ್ಮೆ ‘ನಾರಾಯಣ’ ಅಂತ ಹೇಳಿಬಿಟ್ಟಾಕ್ಷಣವೇ ಏನು ದೊರೆತುಬಿಟ್ಟೀತು? ಇದನ್ನು ಕೇಳಿ ಕೃಷ್ಣಕಿಶೋರನ ಕೋಪಕ್ಕೆ ಮಿತಿಯೇ ಇಲ್ಲದೆ ಹೋಯಿತು. ಮತ್ತೆ ಆತ ಹೂವು ಕೊಯ್ಯಲು ಈ ತೋಟಕ್ಕೆ ಬಂದಾಗ, ಹಲಧಾರಿಯ ಕಡೆ ತಿರುಗಿಯೂ ನೋಡಲಿಲ್ಲ.
“ಹಲಧಾರಿಯ ತಂದೆ ಬಹಳ ದೊಡ್ಡ ಭಕ್ತ. ಸ್ನಾನದ ಸಮಯದಲ್ಲಿ ನಡುವಿನುದ್ದದ ನೀರಿಗಿಳಿದು ‘ರಕ್ತವರ್ಣಂ ಚತುರ್ಮುಖಂ’ ಎಂಬಿವೇ ಮೊದಲಾದ ಮಂತ್ರಗಳನ್ನು ಉಚ್ಚರಿಸುತ್ತ ಭಗವಂತನ ಮೇಲೆ ಧ್ಯಾನಮಾಡುತ್ತಿದ್ದ. ಆಗ ಆತನ ಕಣ್ಣುಗಳಿಂದ ಪ್ರೇಮಾಶ್ರು ಸುರಿಯುತ್ತಿತ್ತು.
“ಒಂದು ದಿನ ಗಂಗೆಯ ಏಡೇದೇರ್ ಘಟ್ಟಕ್ಕೆ ಒಬ್ಬ ಸಾಧು ಬಂದಿದ್ದ. ಆತನನ್ನು ನೋಡಿಬರಬೇಕೆಂದು ನಾವು ಮಾತುಕತೆಯಾಡಿಕೊಂಡೆವು. ಹಲಧಾರಿ ಹೇಳಿದ: ‘ಆ ಪಂಚಭೂತಗಳ ಚೀಲವನ್ನು ನೋಡಿಕೊಂಡು ಬರುವುದರಿಂದ ದೊರೆಯುವ ಲಾಭವೇನು!’ ಅನಂತರ ಈ ಮಾತನ್ನು ಕೃಷ್ಣಕಿಶೋರ ಕೇಳಿ ಹೇಳಿದ: ‘ಏನು? ಸಾಧುವನ್ನು ದರ್ಶನ ಮಾಡುವುದರಿಂದ ಏನು ದೊರೆಯುತ್ತದೆ ಅಂತ ಹಲಧಾರಿ ಹೇಳಿದನೆ? ಯಾರು ರಾಮನಾಮ ಮತ್ತು ಕೃಷ್ಣನಾಮ ಜಪಿಸುತ್ತಾನೊ, ಆತನ ಭೌತದೇಹ ಚಿನ್ಮಯ ದೇಹ ಆಗಿಬಿಡುತ್ತದೆ. ಎಲ್ಲವೂ ಆತನ ಕಣ್ಣಿಗೆ ಚಿನ್ಮಯವಾಗಿ ಕಂಡುಬರುತ್ತದೆ- “ಚಿನ್ಮಯ ಶ್ಯಾಮ, ಚಿನ್ಮಯ ಧಾಮ.”
“ಮತ್ತೂ ಹೇಳಿದ: ‘ರಾಮನಾಮವನ್ನೇ ಆಗಲಿ, ಕೃಷ್ಣನಾಮವನ್ನೇ ಆಗಲಿ, ಒಮ್ಮೆ ಜಪಿಸಿದರೂ ನೂರು ಸಂಧ್ಯಾವಂದನೆಗಳ ಫಲ ದೊರೆತುಬಿಡುತ್ತದೆ.’
“ಆತನ ಒಬ್ಬ ಮಗ ಸಾಯುವಾಗ ರಾಮನಾಮ ಜಪಿಸಿ ಸತ್ತ. ಅದನ್ನು ನೋಡಿ ಕೃಷ್ಣಕಿಶೋರ ಹೇಳಿದ: ‘ಆತನ ಬಾಯಿಂದ ರಾಮನಾಮ ಹೊರಬಂತು; ಆತ ಇನ್ನು ಹೆದರುವುದೇನಿದೆ?’ ಆದರೆ ಮಧ್ಯೆ ಮಧ್ಯೆ ಒಮ್ಮೊಮ್ಮೆ ಅಳುತ್ತಿದ್ದ. ಎಷ್ಟೇ ಆಗಲಿ, ಪುತ್ರಶೋಕವಲ್ಲವೇ?
“ಶ್ರದ್ಧೆಯಿಲ್ಲದೆ ಪೂಜೆ, ಜಪ, ತಪ ಇವನ್ನು ಮಾಡಿದರೆ ಏನೂ ದೊರೆಯುವುದಿಲ್ಲ. ಏನು ಹೇಳುತ್ತೀಯೆ?”
ಮಾಸ್ಟರ್: “ಹೌದು ನಿಜ.”
ಶ್ರೀರಾಮಕೃಷ್ಣರು: “ಸ್ನಾನಕ್ಕೆ ಗಂಗಾಘಟ್ಟಕ್ಕೆ ಜನರು ಬರುವುದನ್ನು ನೋಡಿದ್ದೇನೆ. ಅವರು ಅಲ್ಲಿ ಎಲ್ಲಾ ರಾಜ್ಯಗಳ ಸುದ್ದಿಯನ್ನೂ ಅಳೆದು ಸುರಿದು ನೋಡಿಬಿಡುತ್ತಾರೆ. ವಿಧವೆಯಾದ ಸೋದರತ್ತೆ ಹೇಳುತ್ತಾಳೆ: ‘ನಾನಿಲ್ಲದೆ ಇತ್ತು ಎಂದರೆ, ಮನೆಯಲ್ಲಿ ದುರ್ಗಾಪೂಜೆ ನಡೆಯುವ ಹಾಗೇ ಇಲ್ಲ. ಗುಡಿಸಿ ಸಾರಿಸುವುದರಿಂದ ಹಿಡಿದು ನೈವೇದ್ಯದವರೆಗೂ ಎಲ್ಲವನ್ನೂ ನಾನೇ ನೋಡಿಕೊಳ್ಳಬೇಕಾಗುತ್ತದೆ. ಮನೆಯಲ್ಲಿ ವಿವಾಹ-ಗಿವಾಹವಾದರಂತೂ ಮೊದಲಿನಿಂದ ಕೊನೆಯವರೆಗೆ ಎಲ್ಲವನ್ನೂ-ಗಂಡು ಹೆಣ್ಣಿನ ಶಯ್ಯಾಗೃಹದ ವ್ಯವಸ್ಥೆಯನ್ನೂ ಕೂಡ-ನಾನು ನೋಡಿಕೊಂಡರೇ ಅದು ನಡೆದ ಹಾಗೆ.”
ಮಾಸ್ಟರ್: “ನಿಜ, ಪಾಪ, ಅವರದೇನು ತಪ್ಪು? ಇಲ್ಲದಿದ್ದರೆ ಅವರು ಸಮಯ ಕಳೆಯುವ ಬಗೆ ಹೇಗೆ?”
ಶ್ರೀರಾಮಕೃಷ್ಣರು ನಗುತ್ತ: “ಮಹಡಿಯಲ್ಲಿ ದೇವರ ಮನೆ ಇದೆ. ಅಲ್ಲಿ ಭಗವಂತನ ಪೂಜೆ ನಡೆಯುತ್ತದೆ. ಪೂಜೆಗಾಗಿ ನೈವೇದ್ಯ, ಚಂದನ ಇತ್ಯಾದಿಗಳನ್ನು ಹೆಂಗಸರು ಸಿದ್ಧ ಮಾಡುತ್ತಿರುತ್ತಾರೆ. ಆದರೆ ಆ ಸಂದರ್ಭದಲ್ಲೂ ಅವರ ಬಾಯಿಂದ ಭಗವತ್ಸಂಬಂಧವಾದ ಮಾತುಕತೆ ಒಂದೂ ಹೊರಡದು. ಅವರ ಮಾತುಕತೆಯ ಸಾರಾಂಶ: “ಈ ಹೊತ್ತು ಏನು ಅಡಿಗೆ ಮಾಡೋಣ ? ಪೇಟೆಯಲ್ಲಿ ಇಂದು ಒಳ್ಳೆ ಕಾಯಿಪಲ್ಯ ದೊರೆಯಲಿಲ್ಲ. ನಿನ್ನ ಪಲ್ಯ ಬಹಳ ರುಚಿಯಾಗಿತ್ತು. ಆ ಹುಡುಗ ನಮ್ಮ ಚಿಕ್ಕಪ್ಪನ ಮಗ. ಏನ್ರಿ, ನಿಮಗೆ ಇನ್ನೂ ಅದೇ ಕೆಲಸವಿದೆಯೇನು? ನನ್ನ ಆರೋಗ್ಯವನ್ನು ಕೇಳಬೇಡಿ. ನಮ್ಮ ಹರಿ ಈ ಭೂಲೋಕದಲ್ಲಿ ಇಲ್ಲ’ ಇತ್ಯಾದಿ. ಹಾಗೇ ನೋಡು, ದೇವರ ಮನೆಯಲ್ಲಿ ಪೂಜೆ ನಡೆಯುತ್ತಿರುವಾಗ ಈ ಎಲ್ಲಾ ರಾಜ್ಯಗಳ ಮಾತು.”
ಮಾಸ್ಟರ್: “ಹೌದು, ಅನೇಕರು ಹೀಗೆ. ನೀವು ಹೇಳುವ ಹಾಗೆ ಯಾರಲ್ಲಿ ಭಗವಂತನ ಅನುರಾಗ ಅಧಿಕವಾಗಿದೆಯೋ, ಆತ ಈ ವಿಧವಾದ ಪೂಜೆ ಪುರಸ್ಕಾರಗಳನ್ನು ಹೆಚ್ಚು ದಿನ ಮುಂದುವರಿಸಲಾಗುವುದೇ?”
ಪರಮಹಂಸರು ಈಗ ಮಾಸ್ಟರೊಡನೆ ಏಕಾಂತದಲ್ಲಿ ಮಾತುಕತೆಯಾಡುತ್ತಿದ್ದಾರೆ.
ಮಾಸ್ಟರ್: “ಒಳ್ಳೇದು, ಭಗವಂತನೇ ಎಲ್ಲವೂ ಆಗಿರುವುದಾದರೆ, ಜನರಲ್ಲಿ ವಿವಿಧ ಭಾವನೆಗಳು ಉಂಟಾಗಲು ಕಾರಣವೇನು?”
ಶ್ರೀರಾಮಕೃಷ್ಣರು: “ಭಗವಂತ ವಿಭುರೂಪದಿಂದ ನಿಸ್ಸಂದೇಹವಾಗಿ ಸರ್ವಭೂತಗಳಲ್ಲಿಯೂ ಇದ್ದಾನೆ. ಆದರೆ ಶಕ್ತಿವಿಶೇಷತೆಯಿಂದ, ಕೆಲವೆಡೆ ವಿದ್ಯಾಶಕ್ತಿ ರೂಪದಲ್ಲಿ, ಇನ್ನೂ ಕೆಲವೆಡೆ ಅವಿದ್ಯಾಶಕ್ತಿ ರೂಪದಲ್ಲಿ, ಕೆಲವೆಡೆ ಹೆಚ್ಚು ಶಕ್ತಿಯಿಂದ, ಇನ್ನು ಕೆಲವೆಡೆ ಕಡಮೆ ಶಕ್ತಿಯಿಂದ ವ್ಯಕ್ತವಾಗಿದ್ದಾನೆ. ಕಾಣುವುದಿಲ್ಲವೆ, ಮನುಷ್ಯರಲ್ಲಿ ಮೋಸಗಾರರು, ದಗಾಖೋರರೂ, ಅಲ್ಲದೆ ಹುಲಿಯಂಥ ಕ್ರೂರಿಗಳೂ ಇರುವುದನ್ನು? ನಾನು ಅವರನ್ನು ಕರೆಯುತ್ತೇನೆ. ‘ಮೋಸಗಾರ ಭಗವಂತ’, ‘ವ್ಯಾಘ್ರಭಗವಂತ’ ಅಂತ.”
ಮಾಸ್ಟರ್ ನಗುತ್ತ: “ನಾವು ಅವರಿಗೆ ದೂರದಿಂದಲೇ ನಮಸ್ಕಾರ ಹಾಕಿಬಿಡಬೇಕು. ವ್ಯಾಘ್ರಭಗವಂತನನ್ನು ಸಮೀಪಿಸಿ, ಆತನನ್ನು ಅಪ್ಪಿಕೊಂಡರೆ, ಆತ ನನ್ನನ್ನು ನುಂಗಿಯೇ ಬಿಡಬಹುದು.”
ಶ್ರೀರಾಮಕೃಷ್ಣರು: “ಭಗವಂತ, ಭಗವಂತನ ಶಕ್ತಿ; ಬ್ರಹ್ಮ, ಬ್ರಹ್ಮನ ಶಕ್ತಿ-ಬಿಟ್ಟರೆ ಬೇರೇನೂ ಇಲ್ಲ. ನಾರದ ಶ್ರೀರಾಮಚಂದ್ರನನ್ನು ಸ್ತೋತ್ರ ಮಾಡುತ್ತ ಮಾಡುತ್ತ ಹೇಳಿದ: ‘ಹೇ ರಾಮ, ನೀನೇ ಶಿವ, ಸೀತೆಯೇ ಭಗವತಿ; ‘ನೀನೇ ಬ್ರಹ್ಮ, ಸೀತೆಯೇ ಬ್ರಹ್ಮಾಣಿ; ನೀನೇ ಇಂದ್ರ, ಸೀತೆಯೇ ಇಂದ್ರಾಣಿ; ನೀನೇ ನಾರಾಯಣ, ಸೀತೆಯೇ ಲಕ್ಷ್ಮಿ; ಪುರುಷ ವಾಚಕವಾದ್ದೆಲ್ಲಾ ನೀನೇ, ಸ್ತ್ರೀವಾಚಕವಾದ್ದೆಲ್ಲಾ ಸೀತೆಯೇ.”
ಮಾಸ್ಟರ್: “ಚಿನ್ಮಯರೂಪ ಎಂಬುದು ಯಾವುದರ ಹಾಗೆ ಇದೆ?”
ಶ್ರೀರಾಮಕೃಷ್ಣರು ಸ್ವಲ್ಪ ಹೊತ್ತು ಆಲೋಚಿಸಿ, ಮೆಲ್ಲಮೆಲ್ಲಗೆ ಹೇಳುತ್ತಿದ್ದಾರೆ: “ಅದು ಯಾವುದರ ಹಾಗೆ ಅಂತೀಯಾ? ಅದು ನೀರಿನ ಹಾಗೆ….. ಸಾಧನೆ ಮಾಡಿದರೆ ಇವೆಲ್ಲಾ ಅರ್ಥವಾಗುತ್ತವೆ.”
“ನೀನು ಭಗವದ್ರೂಪದಲ್ಲಿ ಶ್ರದ್ಧೆಯಿಡು. ಬ್ರಹ್ಮಜ್ಞಾನ ದೊರೆತ ನಂತರ ಮಾತ್ರ ಅಭೇದ ಜ್ಞಾನ-ಬ್ರಹ್ಮನಿಗೂ ಶಕ್ತಿಗೂ ಅಭೇದ ಎಂಬ ಜ್ಞಾನ ಉಂಟಾಗುತ್ತದೆ. ಬೆಂಕಿ, ಅದರ ಸುಡುವ ಶಕ್ತಿ ಅನನ್ಯವಾಗಿರುವ ಹಾಗೆ ಬ್ರಹ್ಮ, ಆತನ ಶಕ್ತಿ ಅನನ್ಯ. ಬೆಂಕಿಯನ್ನು ಭಾವಿಸಿದರೆ, ಬೆಂಕಿಯ ಸುಡುವ ಶಕ್ತಿಯನ್ನು ಭಾವಿಸಲೇಬೇಕು; ಮತ್ತೆ ಹಾಲು, ಹಾಲಿನ ಬಿಳುಪು; ನೀರು, ನೀರಿನ ತೋಯುವ ಶಕ್ತಿ; ಇವುಗಳ ಹಾಗೆ ಬ್ರಹ್ಮ, ಆತನ ಶಕ್ತಿ ಅನನ್ಯ.”
“ಬ್ರಹ್ಮಜ್ಞಾನಾವಸ್ಥೆಗೂ ಅತೀತವಾದ್ದು ಬೇರೊಂದಿದೆ. ಜ್ಞಾನ ದೊರೆತ ಮೇಲೆ ವಿಜ್ಞಾನ. ಯಾರಿಗೆ ಜ್ಞಾನದ ಅರಿವು ಇದೆಯೋ, ಆತನಿಗೆ ಅಜ್ಞಾನದ ಅರಿವೂ ಇರುತ್ತದೆ. ವಸಿಷ್ಠ ತನ್ನ ನೂರು ಮಕ್ಕಳನ್ನೂ ಕಳೆದುಕೊಂಡಿದ್ದಕ್ಕಾಗಿ ಶೋಕಾಕ್ರಾಂತನಾದ. ವಸಿಷ್ಠನಂಥ ಜ್ಞಾನಿ ಏಕೆ ಪುತ್ರಶೋಕಾಕ್ರಾಂತನಾಗಬೇಕು ಎಂಬುದಾಗಿ ಲಕ್ಷ್ಮಣ ರಾಮನನ್ನು ಕೇಳಿದಾಗ, ಆತ ಹೇಳಿದ: ‘ನೀನು ಜ್ಞಾನಾಜ್ಞಾನಗಳಿಗೆ ಅತೀತನಾಗು.’ ಯಾರಲ್ಲಿ ಜ್ಞಾನವು ಇರುತ್ತದೆಯೋ, ಆತನಲ್ಲಿ ಅಜ್ಞಾನವೂ ಇರುತ್ತದೆ. ಕಾಲಿಗೆ ಮುಳ್ಳು ಚುಚ್ಚಿಕೊಂಡರೆ, ಬೇರೊಂದು ಮುಳ್ಳನ್ನು ಹುಡುಕಿ ತಂದು ಅದನ್ನು ತೆಗೆಯಬೇಕಾಗುತ್ತದೆ; ಬಳಿಕ ಎರಡನೆ ಮುಳ್ಳನ್ನೂ ಬಿಸಾಡಿಬಿಡಬೇಕು.”
ಮಾಸ್ಟರ್: “ಹಾಗಾದರೆ, ಜ್ಞಾನ-ಅಜ್ಞಾನ ಎರಡನ್ನೂ ತ್ಯಜಿಸಿಬಿಡಬೇಕೇನು?”
ಶ್ರೀರಾಮಕೃಷ್ಣರು: “ಹೌದು, ವಿಜ್ಞಾನವೆಂಬುದಿರುವುದೇ ಅದಕ್ಕಾಗಿ. ಹಾಗೇ ನೋಡು, ಯಾರಿಗೆ ಬೆಳಕಿನ ಅರಿವು ಇದೆಯೋ, ಆತನಿಗೆ ಕತ್ತಲೆಯ ಅರಿವೂ ಇರುತ್ತದೆ. ಯಾರಿಗೆ ಸುಖದ ಬೋಧೆ ಇರುವುದೋ, ಆತನಿಗೆ ದುಃಖದ ಬೋಧೆಯೂ ಇರುತ್ತದೆ. ಯಾರಿಗೆ ಒಳ್ಳೆಯದರ ತಿಳಿವು ಇರುವುದೋ, ಆತನಿಗೆ ಕೆಟ್ಟದರ ತಿಳಿವೂ ಇರುತ್ತದೆ. ಯಾರಿಗೆ ನಾನು ಎಂಬುದರ ಅರಿವು ಇರುವುದೋ, ಆತನಿಗೆ ನೀನು ಎಂಬುದರ ಅರಿವೂ ಇರುತ್ತದೆ.”
“ವಿಜ್ಞಾನವೆಂದರೇನು? ಭಗವಂತನನ್ನು ವಿಶೇಷ ರೂಪದಿಂದ ಅರಿಯುವಿಕೆ. ಕಟ್ಟಿಗೆಯಲ್ಲಿ ಬೆಂಕಿಯಿದೆ ಎಂಬ ಅರಿವು ಮತ್ತು ದೃಢಶ್ರದ್ಧೆಗೆ ‘ಜ್ಞಾನ’ ಅಂತ ಹೆಸರು. ಅದರ ಬೆಂಕಿಯಿಂದ ಅನ್ನ ಬೇಯಿಸಿ ಉಂಡು ತಿಂದು, ಹೃಷ್ಟಪುಷ್ಟರಾಗುವುದಕ್ಕೆ ‘ವಿಜ್ಞಾನ’ ಅಂತ ಹೆಸರು. ಭಗವಂತನಿದ್ದಾನೆ ಎಂಬುದರ ಸ್ವಾತ್ಮಾನುಭವ ಹೊಂದುವುದಕ್ಕೆ ‘ಜ್ಞಾನ’ ಅಂತ ಹೆಸರು. ಆದರೆ ಆತನೊಡನೆ ಸಲಿಗೆಯಿಂದ ಮಾತುಕತೆಯಾಡುವುದಕ್ಕೆ, ಆತನೊಡನೆ ವಾತ್ಸಲ್ಯ, ಸಖ್ಯ, ದಾಸ್ಯ, ಮಧುರ-ಈ ಭಾವಗಳಿಂದ ಆನಂದಪಡುವುದಕ್ಕೆ ‘ವಿಜ್ಞಾನ’ ಅಂತ ಹೆಸರು. ಭಗವಂತನೇ ಈ ಜೀವಜಗತ್ತು ಎಲ್ಲವೂ ಆಗಿದ್ದಾನೆ ಎಂಬುದರ ಪ್ರತ್ಯಕ್ಷ ದರ್ಶನಕ್ಕೆ ‘ವಿಜ್ಞಾನ’ ಅಂತ ಹೆಸರು.
“ಒಂದು ಮತದ ಪ್ರಕಾರ ಭಗವಂತನನ್ನು ದರ್ಶನ ಮಾಡಲಾಗುವುದಿಲ್ಲ. ಯಾರು ಯಾರನ್ನು ದರ್ಶನ ಮಾಡುವುದು? ಭಗವಂತ ನಮ್ಮಿಂದ ಪ್ರತ್ಯೇಕವೇನು? ದರ್ಶನ ಮಾಡುವುದೆಂದರೆ, ತನ್ನನ್ನು ತಾನೇ ದರ್ಶನಮಾಡಿಕೊಳ್ಳುತ್ತಾನೆ. ಸಮುದ್ರದ ಕಪ್ಪು ನೀರಿನ ಕಡೆ ಹಡಗು ಮುಂದುವರಿಯಿತು ಎಂದರೆ, ಅದು ಹಿಂದಿರುಗಿ ಬರುವ ಹಾಗಿಲ್ಲ -ಹಿಂದಿರುಗಿ ಬಂದು ತನ್ನ ಅನುಭವ ಏನು ಎಂಬುದನ್ನು ತಿಳಿಸುವ ಹಾಗಿಲ್ಲ.”
ಮಾಸ್ಟರ್: “ಹೌದು, ನಿಜ. ನೀವು ಹೇಳುವ ಹಾಗೆ, ಆಕ್ಟರ್ಲೋನಿ ಸ್ಮಾರಕಸ್ತಂಭದ ಮೇಲಕ್ಕೆ ಹತ್ತಿಹೋಗಿ ನೋಡಿದರೆ, ಕೆಳಗಡೆ ಏನೇನು ಎಲ್ಲೆಲ್ಲಿ ಎಂಬುದರ ವಿಷಯವೇ ಗೊತ್ತಾಗದು. ಗಾಡಿ ಯಾವುದು, ಕುದುರೆ ಯಾವುದು; ಗಂಡಸು ಯಾರು; ಹೆಂಗಸು ಯಾರು; ಮನೆ ಯಾವುದು, ಮಠ ಯಾವುದು; ಅಂಗಡಿ ಯಾವುದು; ಮುಂಗಟ್ಟು ಯಾವುದು; ಕೋರ್ಟು ಯಾವುದು, ಕಛೇರಿ ಯಾವುದು; ಯಾವುಯಾವುದು ಏನೇನು ಎಂದು ಹೇಳಲಾಗುವುದಿಲ್ಲ.”
ಶ್ರೀರಾಮಕೃಷ್ಣರು: “ಒಳ್ಳೇದು, ಈಗ ಸ್ವಲ್ಪ ದಿನಗಳಿಂದ ನಾನು ಕಾಳೀದೇವಾಲಯಕ್ಕೆ ಹೋಗುತ್ತಿಲ್ಲ. ಅದು ತಪ್ಪು ಮಾಡಿದಂತಾಗುವುದೆ? ಒಮ್ಮೆ ನರೇಂದ್ರ ಹೇಳುತ್ತಿದ್ದ: ‘ಏನಿದು? ಇವರು ಇನ್ನೂ ಕಾಳೀದೇವಾಲಯಕ್ಕೆ ಹೋಗುತ್ತಾರಲ್ಲ!”
ಮಾಸ್ಟರ್: “ದಿನದಿನವೂ ನೀವು ಹೊಸ ಹೊಸ ಅವಸ್ಥೆಯಲ್ಲಿ ಇರುತ್ತೀರಿ. ಆದ್ದರಿಂದ ನೀವು ಅಪರಾಧವೆಸಗಿದಂತೆಲ್ಲಾಗುತ್ತೆ?”
ಶ್ರೀರಾಮಕೃಷ್ಣರು: “ಹೃದೂ ಸಂಬಂಧವಾಗಿ ಯಾರೋ ಸೇನನಿಗೆ ಹೇಳಿದರು: ‘ಹೃದೂಗೆ ಬಹಳ ಕಾಯಿಲೆಯಾಗಿದೆ. ನೀವು ಆತನಿಗಾಗಿ ಎರಡು ಷರಟು, ಎರಡು ಪಂಚೆ ತೆಗೆದುಕೊಂಡು ಬನ್ನಿ. ನಾವು ಅವನನ್ನು ಆತನ ಊರಿಗೆ ಕಳಿಸಿಕೊಡುತ್ತೇವೆ.’ ಆತ ಎರಡು ರೂಪಾಯಿಗಳನ್ನು ಮಾತ್ರ ತಂದುಕೊಟ್ಟ. ಏಕೆ ಹೀಗೆ ಹೇಳು? ಅಂಥ ಧನಿಕ, ಆದರೂ ಕೊಟ್ಟದ್ದು ಮಾತ್ರ ಅಷ್ಟು ಸ್ವಲ್ಪ! ಇದಕ್ಕೆ ಏನು ಹೇಳುತ್ತೀಯೆ?”
ಮಾಸ್ಟರ್: “ಯಾರು ಭಗವಂತನ ಸಾಕ್ಷಾತ್ಕಾರಕ್ಕಾಗಿ ಹಾತೊರೆಯುತ್ತಾರೋ ಅವರು ಹೀಗೆ ವರ್ತಿಸಲಾರರು-ಅಂದರೆ ಯಾರು ಬ್ರಹ್ಮಜ್ಞಾನಕ್ಕಾಗಿ ಕಾತರರಾಗಿದ್ದಾರೆ, ಅವರು.”
ಶ್ರೀರಾಮಕೃಷ್ಣರು: “ಕೇವಲ ಭಗವಂತನೊಬ್ಬನೇ ವಸ್ತು, ಉಳಿದುದೆಲ್ಲಾ ಅವಸ್ತು.”
೨೨ನೆ ಸೆಪ್ಟೆಂಬರ್ ೧೮೮೩, ಶನಿವಾರ
ಪರಮಹಂಸರು ಅಧರಸೇನನ ಮನೆಯ ಬೈಠಕ್ಖಾನೆಯಲ್ಲಿ ಕುಳಿತುಕೊಂಡಿದ್ದಾರೆ. ಅವರ ಹತ್ತಿರ ರಾಖಾಲ, ಅಧರಸೇನ, ಮಾಸ್ಟರ್, ಈಶಾನ ಇನ್ನೂ ಅನೇಕರು ಕುಳಿತಿದ್ದಾರೆ. ವೇಳೆ ಅಪರಾಹ್ನ.
ಪರಮಹಂಸರಿಗೆ ಈಶಾನಚಂದ್ರ ಮುಖ್ಯೋಪಾಧ್ಯಾಯನನ್ನು ಕಂಡರೆ ಬಹಳ ಪ್ರೀತಿ. ಆತ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಸೂಪರಿಂಟೆಂಡೆಂಟ್ ಆಗಿದ್ದ. ಈಗ ವಿಶ್ರಾಂತಿ ವೇತನ ಪಡೆಯುತ್ತಿದ್ದಾನೆ. ಆತನ ಮಕ್ಕಳೂ ದೊಡ್ಡ ಹುದ್ದೆಗಳಲ್ಲಿದ್ದಾರೆ. ಅವರಲ್ಲಿ ಒಬ್ಬ ನರೇಂದ್ರನ ಸಹಪಾಠಿ. ಈಶಾನನಿಗೆ ವಿಶ್ರಾಂತಿವೇತನ ದೊರೆತ ನಂತರ ಆತ ಧ್ಯಾನ, ದಾನಧರ್ಮಾದಿ ಕಾರ್ಯಗಳಲ್ಲಿ ತೊಡಗಿ, ಆಗಾಗ ಬಂದು ಪರಮಹಂಸರ ದರ್ಶನ ಪಡೆದು ಹೋಗುತ್ತಿದ್ದ.
ಶ್ರೀರಾಮಕೃಷ್ಣರು ಈಶಾನನಿಗೆ: “ನಿನ್ನ ಕಥೆ ಹೇಳು-ಹುಡುಗ ಕಾಗದ ಬರೆದು ಹಾಕಿದುದನ್ನು.”
ಈಶಾನ ನಗುತ್ತ: “ಒಮ್ಮೆ ಒಬ್ಬರು ಒಬ್ಬ ಹುಡುಗನಿಗೆ ಹೇಳಿದರು, ಭಗವಂತ ನಮ್ಮನ್ನು ಸೃಷ್ಟಿಸಿದ್ದಾನೆ ಎಂಬುದಾಗಿ. ಆ ಹುಡುಗ ತನ್ನ ಪ್ರಾರ್ಥನೆಯನ್ನೆಲ್ಲಾ ಒಂದು ಕಾಗದದಲ್ಲಿ ಬರೆದು, ಅಂಚೆಪೆಟ್ಟಿಗೆಗೆ ಹಾಕಿದ. ಆ ಕಾಗದದ ಮೇಲೆ “ವೈಕುಂಠ” ಎಂಬುದಾಗಿ ವಿಳಾಸ ಬರೆದಿತ್ತು.”
ಶ್ರೀರಾಮಕೃಷ್ಣರು ನಗುತ್ತ: “ಕಥೆ ಕೇಳಿದಿರಾ? ಆ ಹುಡುಗನ ಶ್ರದ್ಧೆಯಂತೆ ಶ್ರದ್ಧೆಯುಂಟಾಗುವುದಾದರೆ, ಆಗ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. (ಈಶಾನನಿಗೆ) ಆ ಕರ್ಮತ್ಯಾಗದ ವಿಷಯವಾಗಿ ಹೇಳು.”
ಈಶಾನ: “ಭಗವಂತನ ಸಾಕ್ಷಾತ್ಕಾರ ದೊರೆಯಿತು ಎಂದರೆ, ಸಂಧ್ಯಾವಂದನಾದಿ ಕರ್ಮಗಳು ತಾವಾಗಿಯೇ ನಿಂತುಹೋಗುತ್ತವೆ. ಒಂದು ದಿನ ಎಲ್ಲರೂ ಗಂಗಾ ದಡದಲ್ಲಿ ಕುಳಿತು ಸಂಧ್ಯಾವಂದನೆ ಮಾಡುತ್ತಿದ್ದಾರೆ. ಆದರೆ ಒಬ್ಬ ಮಾತ್ರ ಮಾಡುತ್ತಿಲ್ಲ. ಕಾರಣ ಕೇಳಲಾಗಿ, ಆತ ಹೇಳಿದ: ‘ನನಗೆ ಅಶೌಚ ಬಂದಿದೆ. ಆದ್ದರಿಂದ ನಾನು ಸಂಧ್ಯಾವಂದನೆ ಮಾಡಕೂಡದು, ಸತ್ತ ಸೂತಕ, ಹೆತ್ತ ಪುರುಡು ಎರಡೂ ಬಂದಿವೆ. ಅವಿದ್ಯೆ ಎಂಬ ನನ್ನ ತಾಯ ಮರಣ, ಆತ್ಮಸಾಕ್ಷಾತ್ಕಾರವೆಂಬ ನನ್ನ ಮಗನ ಜನನ ಎರಡೂ ಆಗಿವೆ.’
ಶ್ರೀರಾಮಕೃಷ್ಣರು: “ಆತ್ಮಜ್ಞಾನ ದೊರೆತ ಮೇಲೆ ಜಾತಿಭೇದವಿರದು ಎಂಬುದು.”
ಈಶಾನ: “ಕಾಶಿಯಲ್ಲಿ ಗಂಗಾಸ್ನಾನ ಮುಗಿಸಿ ಶಂಕರಾಚಾರ್ಯರು ಮೆಟ್ಟಲು ಹತ್ತಿ ಬರುತ್ತಿರುವಾಗ ಒಂದು ಗುಂಪು ನಾಯಿಗಳನ್ನು ಹಿಡಿದುಕೊಂಡಿದ್ದ ಒಬ್ಬ ಚಂಡಾಲ ಎದುರಾದ. ಆಗ ಶಂಕರಾಚಾರ್ಯರು ಆತನಿಗೆ ಹೇಳಿದರು: ‘ಏನು ನನ್ನನ್ನು ಮುಟ್ಟಿಬಿಟ್ಟೆಯಲ್ಲ!’ ಚಂಡಾಲ ಹೇಳಿದ: ‘ಪೂಜ್ಯರೆ, ನಾನೂ ನಿಮ್ಮನ್ನು ಮುಟ್ಟಲಿಲ್ಲ. ನೀವೂ ನನ್ನನ್ನು ಮುಟ್ಟಲಿಲ್ಲ. ಆತ್ಮ ಎಲ್ಲರ ಅಂತರ್ಯಾಮಿ. ಅದು ನಿರ್ಲಿಪ್ತವಾದ್ದು. ಮದ್ಯದಲ್ಲಿ ಬಿದ್ದಿರುವ ಸೂರ್ಯನ ಪ್ರತಿಬಿಂಬಕ್ಕೂ, ಗಂಗೆಯಲ್ಲಿ ಬಿದ್ದಿರುವ ಸೂರ್ಯನ ಪ್ರತಿಬಿಂಬಕ್ಕೂ ಏನಾದರೂ ವ್ಯತ್ಯಾಸವಿದೆಯೇ?’”
ಶ್ರೀರಾಮಕೃಷ್ಣರು ನಗುತ್ತ: “ಆ ಸಮನ್ವಯ ಕತೆ-ಎಲ್ಲಾ ಮಾರ್ಗಗಳಿಂದಲೂ ಭಗವಂತನನ್ನು ಪಡೆಯಬಹುದು ಎಂಬುದು.”
ಈಶಾನ ನಗುತ್ತ: “ಹರಿ ಹರ ಎಂಬ ಪದಗಳು ಒಂದೇ ಧಾತುವಿನಿಂದ ಬಂದಿವೆ. ಕೇವಲ ಪ್ರತ್ಯಯಗಳಲ್ಲಿ ಮಾತ್ರ ಭೇದ. ಯಾರು ಹರಿಯೋ ಆತನೇ ಹರ. ಶ್ರದ್ಧೆಯಿದ್ದರೆ ಎಲ್ಲಾ ದೊರೆತ ಹಾಗೆಯೇ.”
ಶ್ರೀರಾಮಕೃಷ್ಣರು: “ಆ ಕಥೆ-ಸಾಧುವಿನ ಹೃದಯ ಎಲ್ಲಕ್ಕಿಂತ ದೊಡ್ಡದು ಎಂಬುದು.”
ಈಶಾನ: “ನಮ್ಮ ಸುತ್ತಮುತ್ತಲಲ್ಲಿ ಇರತಕ್ಕವುಗಳಿಗಿಂತ ಭೂಮಿ ದೊಡ್ಡದು. ಭೂಮಿಗಿಂತ ದೊಡ್ಡದು ಸಾಗರ. ಸಾಗರಕ್ಕಿಂತ ದೊಡ್ಡದು ಆಕಾಶ. ಆದರೆ ಭಗವಾನ್ ವಿಷ್ಣು ತನ್ನ ಒಂದು ಪಾದದಿಂದಲೇ ಸ್ವರ್ಗ, ಮರ್ತ್ಯ, ಪಾತಾಳ ಈ ತ್ರಿಭುವನಗಳನ್ನೂ ಅಳೆದುಬಿಟ್ಟ. ಆ ವಿಷ್ಣುವಿನ ಪಾದ ಸಾಧುವಿನ ಹೃದಯಮಧ್ಯದಲ್ಲಿದೆ. ಆದ್ದರಿಂದ ಸಾಧುವಿನ ಹೃದಯ ಎಲ್ಲಕ್ಕಿಂತ ದೊಡ್ಡದು.”
ಈಶಾನನ ಈ ಎಲ್ಲಾ ಮಾತುಗಳನ್ನು ಕೇಳಿ ಭಕ್ತರಿಗೆ ಬಹಳ ಆನಂದವಾಯಿತು.
ಈಶಾನ ಒಂದು ಏಕಾಂತ ಸ್ಥಳಕ್ಕೆ ಹೋಗಿ ಗಾಯತ್ರಿ ಪುರಶ್ಚರಣೆ ಮಾಡಬೇಕೆಂದಿದ್ದಾನೆ. ಗಾಯತ್ರಿ ಬ್ರಹ್ಮಮಂತ್ರ. ಪರಮಹಂಸರು ಹೇಳುತ್ತಿದ್ದಾರೆ, ವಿಷಯಬುದ್ಧಿ ಹೋಗದೆ ಇತ್ತು ಎಂದರೆ, ಬ್ರಹ್ಮಜ್ಞಾನ ದೊರಕುವುದಿಲ್ಲ ಎಂಬುದಾಗಿ. ಮತ್ತೆ ಹೇಳುತ್ತಾರೆ, ಕಲಿಯುಗದಲ್ಲಿ ಅನ್ನಗತಪ್ರಾಣ-ವಿಷಯಬುದ್ಧಿ ಬಿಟ್ಟು ತೊಲಗದು; ಮನಸ್ಸು, ರೂಪ, ರಸ, ಗಂಧ, ಸ್ಪರ್ಶ, ಶಬ್ದ, ಇವುಗಳಲ್ಲೇ ಸರ್ವದಾ ನೆಲಸಿರುತ್ತದೆ ಎಂಬುದಾಗಿ. ಅದಕ್ಕಾಗಿಯೇ ಅವರು ಹೇಳುತ್ತಿದ್ದಾರೆ, ಕಲಿಯುಗಕ್ಕೆ ವೇದಮತವಲ್ಲ. ಯಾರು ಬ್ರಹ್ಮನೋ ಆತನೇ ಶಕ್ತಿ. ಶಕ್ತಿಯ ಉಪಾಸನೆ ಮಾಡಿದರೇ ಬ್ರಹ್ಮನ ಉಪಾಸನೆ ಮಾಡಿದ ಹಾಗೆ. ಸೃಷ್ಟಿ-ಸ್ಥಿತಿ-ಪ್ರಳಯ ಕಾರ್ಯಗಳನ್ನು ಮಾಡುವಾಗ ಬ್ರಹ್ಮನಿಗೆ ಶಕ್ತಿ ಅಂತ ಹೆಸರು. ಬ್ರಹ್ಮ ಶಕ್ತಿ ಬೇರೆ ಬೇರೆ ವಸ್ತುಗಳಲ್ಲ-ಒಂದೇ.
ಶ್ರೀರಾಮಕೃಷ್ಣರು ಈಶಾನನಿಗೆ: “ ‘ನೇತಿ, ನೇತಿ’ ಅಂತ ಸುಮ್ಮನೆ ಹೇಳಿಕೊಂಡು ಏಕೆ ವೃಥಾ ಕಾಲ ಕಳೆಯುತ್ತಾ ಇದ್ದೀಯೆ? ಬ್ರಹ್ಮನ ಸಂಬಂಧವಾಗಿ ಏನನ್ನೂ ಹೇಳಲಾಗುವುದಿಲ್ಲ. ಕೇವಲ ಆತ ಇದ್ದಾನೆ ಎಂಬುದಾಗಿ ಮಾತ್ರ ಹೇಳಬಹುದು.
“ನಾವು ಏನೇನನ್ನು ನೋಡುತ್ತೇವೆಯೋ, ಭಾವಿಸುತ್ತೇವೆಯೋ ಅವೆಲ್ಲಾ ಆದ್ಯಾಶಕ್ತಿಯೆ, ಚಿಚ್ಛಕ್ತಿಯ ಅಭಿವ್ಯಕ್ತಿಯೆ. ಸೃಷ್ಟಿ, ಪಾಲನೆ, ಸಂಹಾರ. ಜೀವ, ಜಗತ್ತು, ಧ್ಯಾನ, ಧ್ಯಾತಾ, ಭಕ್ತಿ, ಪ್ರೇಮ, ಎಲ್ಲಾ ಆಕೆಯ ಐಶ್ವರ್ಯ.
“ಆದರೆ ಬ್ರಹ್ಮನಿಗೂ ಶಕ್ತಿಗೂ ಅಭೇದ. ಲಂಕೆಯಿಂದ ಹಿಂದಿರುಗಿದ ನಂತರ ಹನುಮಂತ ರಾಮನನ್ನು ಸ್ತೋತ್ರಮಾಡುತ್ತ ಹೇಳಲಾರಂಭಿಸಿದ ‘ಹೇ ರಾಮ, ನೀನೇ ಪರಬ್ರಹ್ಮ, ಸೀತೆಯೇ ನಿನ್ನ ಶಕ್ತಿ; ಆದರೆ ನೀವಿಬ್ಬರೂ ಒಂದೇ-ಭೇದರಹಿತರು.’ ಬ್ರಹ್ಮ ಶಕ್ತಿ ಹಾವಿನ ಸೊಟ್ಟ ಸೊಟ್ಟ ಗತಿ ಇದ್ದ ಹಾಗೆ. ಹಾವನ್ನು ಭಾವಿಸಿದರೆ, ಆದರ ಸೊಟ್ಟ ಸೊಟ್ಟ ಗತಿಯನ್ನೂ ಭಾವಿಸಲೇಬೇಕಾಗುತ್ತದೆ. ಹಾವಿನ ಸೊಟ್ಟ ಸೊಟ್ಟ ಗತಿಯನ್ನು ಭಾವಿಸಿದರೆ, ಅದರೊಡನೆ ಹಾವನ್ನೂ ಭಾವಿಸಲೇಬೇಕಾಗುತ್ತದೆ. ಹಾಲಿನ ಬಿಳಿ ಬಣ್ಣವನ್ನು ಭಾವಿಸಿದರೆ ಅದರೊಡನೆ ಹಾಲನ್ನೂ ಭಾವಿಸಲೇಬೇಕಾಗುತ್ತದೆ. ನೀರನ್ನು ಭಾವಿಸಿದರೆ, ಅದರೊಡನೆ ಅದರ ತೊಯ್ಯುವ ಶಕ್ತಿಯನ್ನೂ ಭಾವಿಸಲೇಬೇಕಾಗುತ್ತದೆ. ನೀರಿನ ತೋಯ್ಯುವ ಶಕ್ತಿಯನ್ನು ಭಾವಿಸದರೆ, ಅದರೊಡನೆ ನೀರನ್ನೂ ಭಾವಿಸಲೇಬೇಕಾಗುತ್ತದೆ.
“ಈ ಆದ್ಯಾಶಕ್ತಿ, ಎಂದರೆ ಮಹಾಮಾಯೆ ಬ್ರಹ್ಮನನ್ನು ಮುಚ್ಚಿಬಿಟ್ಟಿದೆ. ಈ ಆವರಣ ಹೋದ ಒಡನೇ ಅನುಭವವಾಗುತ್ತದೆ ‘ಏನಾಗಿದ್ದೆನೋ ಅದೇ ಆಗಿದ್ದೇನೆ,’ ‘ನಾನೇ ನೀನು; ನೀನೇ ನಾನು’ ಅಂತ.
“ವ್ಯಕ್ತಿಯಲ್ಲಿ ಆವರಣವಿರುವವರೆಗೆ ವೇದಾಂತವಾದಿಗಳು ‘ಸೋಠ್ಹಮ್’ ಎಂದರೆ ‘ನಾನೇ ಆ ಪರಬ್ರಹ್ಮ’ ಎಂಬುದನ್ನು ಹೇಳುವುದು ಸರಿಯಲ್ಲ. ಅಲೆ ನೀರಿಗೆ ಸೇರಿದುದೇ ವಿನಾ ನೀರು ಅಲೆಗೆ ಸೇರಿದುದಲ್ಲ. ವ್ಯಕ್ತಿಯಲ್ಲಿ ಆವರಣವಿರುವವರೆಗೆ ‘ತಾಯಿ, ತಾಯಿ’ ಎಂದು ಕರೆಯುವುದೇ ಶ್ರೇಯಸ್ಕರ. ಭಕ್ತ ಭಗವಂತನನ್ನು ಸಂಬೋಧಿಸಿ ಹೇಳಬೇಕು: ‘ನೀನು ತಾಯಿ, ನಾನು ನಿನ್ನ ಸಂತಾನ; ನೀನು ಪ್ರಭು, ನಾನು ನಿನ್ನ ದಾಸ.’ ಸೇವ್ಯ ಸೇವಕಭಾವವೇ ಶ್ರೇಯಸ್ಕರ. ಈ ದಾಸಭಾವದಿಂದ ಉಳಿದ ಭಾವಗಳು-ಶಾಂತ, ಸಖ್ಯ ಇತ್ಯಾದಿ-ಉದ್ಭವವಾಗುತ್ತವೆ. ಯಜಮಾನ ದಾಸನನ್ನು ಪ್ರೀತಿಸುವಾಗ ಬೇಕಾದರೆ ಆತ ಹೇಳಬಹುದು: ‘ಬಾ, ನನ್ನ ಹತ್ತಿರ ಕುಳಿತುಕೊ; ನನಗೂ ನಿನಗೂ ಯಾವ ಭೇದವೂ ಇಲ್ಲ.’ ಆದರೆ ದಾಸ ಏಕಾ ಏಕಿ ಯಜಮಾನನ ಹತ್ತಿರ ಕುಳಿತುಕೊಳ್ಳಲು ಹೋದರೆ, ಯಜಮಾನನಿಗೆ ಕೋಪ ಬರುವುದಿಲ್ಲವೇ?
“ಅವತಾರ, ಲೀಲೆ ಇವೆಲ್ಲಾ ಚಿಚ್ಛಕ್ತಿಯ ಆವಿರ್ಭಾವ (ಐಶ್ವರ್ಯ). ಯಾರು ಬ್ರಹ್ಮನೋ ಆತನೇ ರಾಮ, ಕೃಷ್ಣ, ಶಿವ ಆಗಿದ್ದಾನೆ.”
ಈಶಾನ: “ಹರಿ, ಹರ, ಈ ಎರಡು ಪದಗಳ ಮೂಲಧಾತು ಒಂದೇ. ಇವುಗಳಿಗಿರುವ ವ್ಯತ್ಯಾಸ ಪ್ರತ್ಯಯಗಳಲ್ಲಿ ಮಾತ್ರ.”
ಶ್ರೀರಾಮಕೃಷ್ಣರು: “ಹೌದು, ಇರುವುದು ಒಂದೇ ಅಲ್ಲದೆ ಎರಡಲ್ಲ. ವೇದಗಳು ಅದನ್ನೇ “ಓಂ ಸಚ್ಚಿದಾನಂದ ಬ್ರಹ್ಮ” ಎಂಬುದಾಗಿಯೂ, ಪುರಾಣ ‘ಓಂ ಸಚ್ಚಿದಾನಂದ ಕೃಷ್ಣ’ ಎಂಬುದಾಗಿಯೂ, ತಂತ್ರಶಾಸ್ತ್ರ “ಓಂ ಸಚ್ಚಿದಾನಂದ ಶಿವ” ಎಂಬುದಾಗಿಯೂ ಹೇಳಿವೆ.
ಆ ಚಿಚ್ಛಕ್ತಿಯೇ ಮಹಾಮಾಯೆಯ ರೂಪದಿಂದ ಎಲ್ಲರನ್ನೂ ಅಜ್ಞಾನದ ಹೊದಿಕೆಯಲ್ಲಿ ಮುಚ್ಚಿಬಿಟ್ಟಿದೆ. ಆಧ್ಯಾತ್ಮರಾಮಾಯಣದಲ್ಲಿ ಹೇಳಿದೆ: ‘ಶ್ರೀರಾಮನನ್ನು ದರ್ಶನ ಮಾಡಿದ ಋಷಿಗಳೆಲ್ಲರೂ ಕೇವಲ ಈ ರೀತಿಯಾಗೇ ಹೇಳಿದರು: ‘ಹೇ ರಾಮ, ನಿನ್ನ ಭುವನಮೋಹಿನೀ ಮಾಯೆಯಿಂದ ನಮ್ಮನ್ನು ಮುಗ್ಧಗೊಳಿಸಬೇಡ.’”
ಈಶಾನ: “ಈ ಮಾಯೆಯೆಂಬುದು ಏನು?”
ಶ್ರೀರಾಮಕೃಷ್ಣರು: “ಏನೇನು ನೋಡುತ್ತೀಯೋ, ಏನೇನು ಕಿವಿಯಿಂದ ಕೇಳುತ್ತೀಯೋ, ಏನೇನು ಭಾವಿಸುತ್ತೀಯೋ ಅವೆಲ್ಲವೂ ಮಾಯೆ. ಒಂದೇ ಪದದಲ್ಲಿ ಹೇಳುವುದಾದರೆ, ‘ಕಾಮಕಾಂಚನವೇ’ ಮಾಯೆಯ ಆವರಣ (ಹೊದಿಕೆ).
“ಎಲಡಿಕೆ ಹಾಕಿಕೊಳ್ಳುವುದು, ಮೀನು ತಿನ್ನುವುದು, ತಂಬಾಕು ಸೇವಿಸುವುದು, ಮೈಗೆ ಎಣ್ಣೆ ಸವರಿಕೊಳ್ಳುವುದು-ಇವೆಲ್ಲಾ ಅಂಥಾ ಕೆಡುಕಾದುದೇನಲ್ಲ. ಕೇವಲ ಇವನ್ನೇ ತ್ಯಜಿಸಿದರೆ ದೊರೆಯುವ ಪುರುಷಾರ್ಥವೇನು? ಅತ್ಯಂತ ಆವಶ್ಯಕವಾದುದು ಕಾಮಕಾಂಚನ ತ್ಯಾಗ. ಆ ತ್ಯಾಗವೇ ನಿಜವಾದ ತ್ಯಾಗ. ಗೃಹಸ್ಥರು ಆಗಾಗ ನಿರ್ಜನ ಪ್ರದೇಶಕ್ಕೆ ಹೋಗಿ, ಸಾಧನೆ-ಭಜನೆ ಮಾಡಿ ಭಕ್ತಿಯನ್ನು ಗಳಿಸಿಕೊಳ್ಳಬೇಕು. ಅವರು ಮಾನಸಿಕವಾಗಿ ತ್ಯಾಗಮಾಡಬೇಕು. ಆದರೆ ಸಂನ್ಯಾಸಿ ಮಾನಸಿಕವಾಗಿ, ಬಾಹ್ಯಿಕವಾಗಿ-ಈ ಎರಡು ವಿಧದಿಂದಲೂ ತ್ಯಾಗಮಾಡಬೇಕು.
ನಾನು ಒಮ್ಮೆ ಕೇಶವಸೇನನಿಗೆ ಹೇಳಿದೆ : ‘ಯಾವ ಕೊಠಡಿಯಲ್ಲಿ ನೀರಿನ ಹಂಡೆ, ಉಪ್ಪಿನಕಾಯಿ, ಹುಣಿಸೇಚಟ್ನಿ ಇವೆಯೋ, ಅದೇ ಕೋಣೆಯಲ್ಲಿ ವಿಷಮಶೀತಜ್ವರದ ರೋಗಿಯನ್ನು ಮಲಗಿಸಿದರೆ ಆತ ಆ ರೋಗದಿಂದ ಮುಕ್ತನಾಗುವ ಬಗೆ ಹೇಗೆ? ಆಗಾಗ ನಿರ್ಜನ ಪ್ರದೇಶಕ್ಕೆ ಹೋಗಿ ಅಲ್ಲಿ ಇರಬೇಕು.”
ಒಬ್ಬ ಭಕ್ತ : “ಮಹಾಶಯರೇ, ನವ ವಿಧಾನದ ಸಂಬಂಧವಾಗಿ ನಿಮ್ಮ ಅಭಿಪ್ರಾಯವೇನು? ಅದು ನನಗೆ ಎಲ್ಲದರ ಕಲಸುಮೇಲೋಗರದಂತೆ ಕಾಣುತ್ತದೆ.”
ಶ್ರೀರಾಮಕೃಷ್ಣರು: “ಕೆಲಕೆಲವರು ಹೇಳುತ್ತಾರೆ, ಅದು ಆಧುನಿಕ ಸಂಪ್ರದಾಯ ಅಂತ. ಇದು ನನಗೆ ಆಶ್ಚರ್ಯವನ್ನು ತರುತ್ತದೆ: “ಹಾಗಾದರೆ, ಬ್ರಹ್ಮಜ್ಞಾನಿಗಳ (ಬ್ರಾಹ್ಮಸಮಾಜ ದವರ) ಭಗವಂತ ಒಬ್ಬ ಪ್ರತ್ಯೇಕವಾದ ಭಗವಂತನೇ?’ ಅವರು ಹೇಳುತ್ತಾರೆ, ತಮ್ಮದು ನವವಿಧಾನ, ಎಂದರೆ ಹೊಸ ರೀತಿಯ ಸಂಪ್ರದಾಯ ಅಂತ. ಬಹುಶಃ ಇದ್ದರೂ ಇರ ಬಹುದು. ಯಾರಿಗೆ ಗೊತ್ತು? ಷಡ್ದರ್ಶನಗಳಿವೆ; ಹಾಗೆ ಬಹುಶಃ ಇದೂ ಒಂದು ಇರಬೇಕು.
“ಆದರೆ, ನಿರಾಕಾರವಾದಿಗಳು ಎಲ್ಲಿ ತಪ್ಪು ಮಾಡುತ್ತಾರೆ ಗೊತ್ತೆ? ಭಗವಂತ ಕೇವಲ ನಿರಾಕಾರನೇ, ಉಳಿದವರ ಮತಗಳೆಲ್ಲಾ ತಪ್ಪು ಎಂದು ಹೇಳುವಾಗ.”
“ಆದರೆ, ನನಗೆ ಗೊತ್ತಿದೆ. ಭಗವಂತ ಸಾಕಾರ ನಿರಾಕಾರ ಎರಡೂ ಅಂತ, ಆತ ಇನ್ನೂ ಏನೇನೋ ಆಗಿರಬಹುದು. ಆತ ಪ್ರತಿಯೊಂದೂ ಆಗಬಲ್ಲ.
(ಈಶಾನನಿಗೆ) “ಆ ಚಿಚ್ಛಕ್ತಿ, ಆ ಮಹಾಮಾಯೆ ಚತುರ್ವಿಂಶತಿ ತತ್ತ್ವವಾಗಿ ವ್ಯಕ್ತವಾಗಿದೆ. ಒಂದು ದಿನ ನಾನು ಧ್ಯಾನಮಾಡುತ್ತಿದ್ದಾಗ ನನ್ನ ಮನಸ್ಸು ಅಲೆದಾಡುತ್ತ ಅಲೆದಾಡುತ್ತ ರಸಿಕನ ಮನೆಗೆ ಹೋಯಿತು. ಆತ ಒಬ್ಬ ಜಾಡಮಾಲಿ. ಆಗ ನನ್ನ ಮನಸ್ಸಿಗೆ ಹೇಳಿದೆ: ‘ನೀಚ ಮುಂಡೇದೆ, ಇರು ಇಲ್ಲೆ!’ ಅಂತ. ಭಗವತಿ ನನಗೆ ತೋರಿಸಿದಳು. ಆತನ ಮನೆಯ ಜನ-ಗಿನ ಎಲ್ಲ ಕೇವಲ ಹೊದಿಕೆಗಳು ಮಾತ್ರ; ಅವರೊಳಗೆಲ್ಲಾ ಅದೇ ಕುಲಕುಂಡಲಿನಿ, ಅದೇ ಷಟ್ಚಕ್ರ ಇವೆ ಎಂಬುದನ್ನು.
“ಆದ್ಯಾಶಕ್ತಿ ಗಂಡಸೋ, ಹೆಂಗಸೋ? ಒಮ್ಮೆ ನಾನು ಕಾಮಾರಪುಕುರದಲ್ಲಿ ಲಾಹಾಗಳ ಮನೆಯಲ್ಲಿ ಕಾಳೀಪೂಜೆ ನಡೆದುದನ್ನು ನೋಡಿದೆ. ಭಗವತಿಯ ಕೊರಳಿಗೆ ಯಜ್ಞೋಪವೀತವನ್ನು ಹಾಕಿದ್ದರು. ಒಬ್ಬ ಮನುಷ್ಯ ಕೇಳಿದ “ಭಗವತಿಯ ಕೊರಳಿಗೆ ಯಜ್ಞೋಪವೀತ ಏಕೆ ಹಾಕಿದ್ದಾರೆ ?” ಮನೆಯ ಯಜಮಾನ ಹೇಳಿದ: ‘ಸೋದರ, ಭಗವತಿ ಏನು ಎಂಬುದು ನಿನಗೆ ಸರಿಯಾಗಿ ಗೊತ್ತಾಗಿರುವಂತೆ ಕಾಣುತ್ತಿದೆ. ಆದರೆ ನನಗೆ ಸರಿಯಾಗಿ ಗೊತ್ತಿಲ್ಲ ಭಗವತಿ ಗಂಡಸೊ ಹೆಂಗಸೊ ಎಂಬುದು.’
“ಒಂದು ಹೇಳಿಕೆ ಇದೆ. ಮಹಾಮಾಯೆ ಶಿವನನ್ನು ಇದ್ದಕ್ಕಿದ್ದ ಹಾಗೆ ನುಂಗಿಬಿಟ್ಟಳು. ಭಗವತಿಗೆ ಷಟ್ಚಕ್ರದ ಜ್ಞಾನೋದಯವಾದ ನಂತರ, ಶಿವ ಆಕೆಯ ತೊಡೆಯಿಂದ ಹೊರಕ್ಕೆ ಬಂದುಬಿಟ್ಟ. ಬಳಿಕ ಶಿವ ತಂತ್ರಶಾಸ್ತ್ರವನ್ನು ರಚಿಸಿದ ಎಂಬುದಾಗಿ.
“ಆ ಚಿಚ್ಛಕ್ತಿಯಲ್ಲಿ, ಆ ಮಹಾಮಾಯೆಯಲ್ಲಿ ಶರಣಾಗತರಾಗಬೇಕು.”
ಈಶಾನ: “ದಯವಿಟ್ಟು ನೀವು ಕೃಪೆಮಾಡಿ.”
ಶ್ರೀರಾಮಕೃಷ್ಣರು: “ಸರಳಭಾವದಿಂದ ಭಗವಂತನಿಗೆ ಪ್ರಾರ್ಥನೆಮಾಡು: ‘ಹೇ ಭಗವಂತ, ನಿನ್ನ ದರ್ಶನ ಕೊಡು’ ಅಂತ. ಮತ್ತೆ ಅಳು. ಪ್ರಾರ್ಥಿಸಿಕೊ: ‘ಹೇ ಭಗವಂತ, ಕಾಮಕಾಂಚನದಿಂದ ನನ್ನ ಮನಸ್ಸು ವಿಮುಖವಾಗುವಂತೆ ಮಾಡು’ ಎಂದು. ಇನ್ನೂ ಆಳಕ್ಕೆ ಮುಳುಗು. ಮೇಲೆ ಮೇಲೆ ತೇಲಿದರೆ ಅಥವಾ ಈಜಾಡಿದರೆ ರತ್ನ ದೊರೆಯುವುದೆ? ಆಳಕ್ಕೆ ಆಳಕ್ಕೆ ಮುಳುಗಬೇಕು.
“ಗುರುವಿನಿಂದ ಉಪದೇಶ ಪಡೆಯಬೇಕು. ಒಬ್ಬ ಒಮ್ಮೆ ಬಾಣಲಿಂಗ ಶಿವನಿಗಾಗಿ ಹುಡುಕುತ್ತಿದ್ದ. ಯಾರೋ ಒಬ್ಬ ಹೇಳಿದ: ‘ಆ ನಿರ್ದಿಷ್ಟ ನದಿಯ ಹತ್ತಿರ ಹೋಗು. ಅಲ್ಲಿ ಒಂದು ಮರ ಕಣ್ಣಿಗೆ ಬೀಳುತ್ತದೆ. ಆ ಮರದ ಹತ್ತಿರ ಒಂದು ಜಲಾವರ್ತವನ್ನು ನೋಡುತ್ತೀಯೆ. ಅದರಲ್ಲಿ ಮುಳುಗುಹಾಕಿ ನೋಡು. ಆಗ ನಿನಗೆ ಬಾಣಲಿಂಗ ಶಿವ ದೊರಕುತ್ತಾನೆ.’ ಆದ್ದರಿಂದ ನಾನು ಹೇಳುವುದು, ಗುರುವಿನಿಂದ ಉಪದೇಶ ಪಡೆಯಬೇಕು ಎಂಬುದಾಗಿ.”
ಈಶಾನ: “ಹೌದು; ನಿಜ.”
ಶ್ರೀರಾಮಕೃಷ್ಣರು: “ಸಚ್ಚಿದಾನಂದನೇ ಗುರುರೂಪ ಧರಿಸಿ ಬರುತ್ತಾನೆ. ಮನುಷ್ಯ ಗುರುವಿನಿಂದ ದೀಕ್ಷೆಯನ್ನು ಪಡೆದ ವ್ಯಕ್ತಿ. ಆತನನ್ನು ಕೇವಲ ಮನುಷ್ಯ ಅಂತ ಭಾವಿಸಿದ್ದೇ ಆದರೆ, ಆ ದೀಕ್ಷಿತನಿಗೆ ಯಾವ ಉನ್ನತಿಯೂ ಉಂಟಾಗದು. ಆತನನ್ನು ಸಾಕ್ಷಾತ್ ಭಗವಂತನೇ ಎಂಬುದಾಗಿ ಭಾವಿಸಿದರೆ ತಾನೆ ದೀಕ್ಷಿತನಿಗೆ ಮಂತ್ರದಲ್ಲಿ ಶ್ರದ್ಧೆಯುಂಟಾ ಗುವುದು. ಶ್ರದ್ಧೆಯೊಂದು ಉಂಟಾಯಿತು ಎಂದರೆ ಎಲ್ಲಾ ದೊರೆತ ಹಾಗೆಯೇ. ಶೂದ್ರ ಜಾತಿಯ ಏಕಲವ್ಯ ದ್ರೋಣನ ಮಣ್ಣಿನ ಪ್ರತಿಮೆಯನ್ನು ಕಾಡಿನಲ್ಲಿ ಮುಂದಿಟ್ಟುಕೊಂಡು ಧನುರ್ವಿದ್ಯೆಯಲ್ಲಿ ಪಾರಂಗತನಾದ. ದ್ರೋಣನ ಮಣ್ಣಿನ ಪ್ರತಿಮೆಯನ್ನೇ ಸಾಕ್ಷಾತ್ ದ್ರೋಣನೆಂದು ಭಾವಿಸಿ ಆತ ಅದನ್ನು ಪೂಜಿಸುತ್ತಿದ್ದ. ಅದಕ್ಕಾಗಿಯೇ ಆತ ಧನುರ್ವಿದ್ಯೆಯಲ್ಲಿ ಸಿದ್ಧಪುರುಷನಾದ.
“ನೀನು ಬ್ರಾಹ್ಮಣ ಪಂಡಿತರೊಡನೆ ಅತಿಯಾಗಿ ಬೆರೆಯಬೇಡ. ಅವರ ಹಗಲಿರುಳು ಚಿಂತನೆ ಹೇಗೆ ಒಂದೆರಡು ಕಾಸು ಸಂಪಾದನೆ ಮಾಡುವುದು ಅಂತಲೇ. ನಾನು ನೋಡಿದ್ದೇನೆ, ಬ್ರಾಹ್ಮಣ ಪುರೋಹಿತರು ಸ್ವಸ್ತ್ಯಯನ ಮಾಡಲು ಬಂದಾಗ ಚಂಡೀಪಾಠ ಮಾಡುವುದನ್ನು. ಅವರು ಮಾತಾಡುತ್ತಿರುವುದು ಚಂಡೀ ಪಾಠವನ್ನೋ ಅಥವಾ ಇನ್ನು ಬೇರೆ ಯಾವುದೋ ಪಾಠವನ್ನೋ ಎಂಬುದನ್ನು ಸರಿಯಾಗಿ ಹೇಳಲಾಗುವುದಿಲ್ಲ, ಆ ಪುಸ್ತಕದ ಅರ್ಧ ಹಾಳೆಗಳನ್ನು ಸುಮ್ಮನೆ ಮಗುಚಿಹಾಕಿ ಬಿಡುವುದನ್ನು ನೋಡಿದ್ದೇನೆ. (ಎಲ್ಲರೂ ನಗುತ್ತಿದ್ದಾರೆ).
“ತನ್ನನ್ನು ತಾನೇ ಕೊಂದುಕೊಳ್ಳುವುದಕ್ಕೆ ಉಗುರು ಕತ್ತರಿಸುವ ಚಾಕು ಸಾಕು. ಬೇರೆಯವರನ್ನು ಕೊಲ್ಲಬೇಕಾದರೆ ಕತ್ತಿ ಗುರಾಣಿ ಇವೆಲ್ಲಾ ಬೇಕು. ಶಾಸ್ತ್ರಗಳ ಪ್ರಯೋಜನವೂ ಇದೇ ರೀತಿಯದು.
“ವಿವಿಧ ಶಾಸ್ತ್ರಗಳ ಅಧ್ಯಯನ ಆವಶ್ಯಕವೇನಲ್ಲ. ವಿವೇಕ ಇಲ್ಲದೆ ಇತ್ತು ಎಂದರೆ, ಕೇವಲ ಪಾಂಡಿತ್ಯ ಯಾವುದಕ್ಕೂ ಬಂದುದಲ್ಲ. ಷಟ್ ಶಾಸ್ತ್ರಗಳನ್ನು ಅಧ್ಯಯನ ಮಾಡಿದರೂ ಏನೂ ದೊರೆಯದು. ನಿರ್ಜನಪ್ರದೇಶದಲ್ಲಿ ಗೋಪ್ಯವಾಗಿ ಅಳುತ್ತ ಅಳುತ್ತ ಭಗವಂತನನ್ನು ಕರೆ, ಆತ ಏನೇನು ಬೇಕೋ ಎಲ್ಲವನ್ನೂ ಮಾಡಿಕೊಟ್ಟುಬಿಡುತ್ತಾನೆ.”
ಪರಮಹಂಸರು ಕೇಳಿದ್ದರು ಈಶಾನ ಗಂಗಾನದಿ ದಡದಲ್ಲಿ ಸಾಧನೆಗಾಗಿ ಒಂದು ಕುಟೀರವನ್ನು ಕಟ್ಟಿಸುತ್ತಿದ್ದಾನೆ ಎಂಬುದಾಗಿ. ಅವರು ಉತ್ಸುಕರಾಗಿ ಈಶಾನನನ್ನು ಕೇಳುತ್ತಿದ್ದಾರೆ: “ಏನು, ಕುಟೀರ ಕಟ್ಟಿಸಿಯಾಯಿತೆ? ನಿನಗೊಂದು ವಿಷಯವನ್ನು ತಿಳಿಸಬೇಕು ಅಂತ ಇದ್ದೇನೆ. ನಿನ್ನ ಆಧ್ಯಾತ್ಮಿಕ ಸಾಧನೆಯ ಸಂಬಂಧವಾಗಿ ಜನರಿಗೆ ಕಡಮೆಯಾಗಿ ತಿಳಿದಷ್ಟೂ ನಿನಗೆ ಮೇಲು. ಸಾತ್ತ್ವಿಕಗುಣೀ ಭಕ್ತರು ಧ್ಯಾನವನ್ನು ಏಕಾಂತ ಜಾಗದಲ್ಲಿ ಅಥವಾ ಕಾಡಿನಲ್ಲಿ ಅಥವಾ ಮನಸ್ಸಿನೊಳಗೇ ಮಾಡುತ್ತಾರೆ. ಇನ್ನು ಕೆಲವು ವೇಳೆ ಸೊಳ್ಳೆ ಪರದೆಯ ಒಳಗೆ ಕುಳಿತು ಧ್ಯಾನಮಾಡುತ್ತಾರೆ.”
ಈಶಾನ ಹಾಜರಾನನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಹಾಜರಾನಿಗೆ ಬಾಹ್ಯಶುಚಿಯ ಹುಚ್ಚು. ಅದಕ್ಕೆ ಅಷ್ಟು ಮನಸ್ಸು ಕೊಡಬಾರದೆಂದು ಪರಮಹಂಸರು ಅನೇಕ ವೇಳೆ ಆತನಿಗೆ ಹೇಳಿದ್ದಾರೆ.
ಶ್ರೀರಾಮಕೃಷ್ಣರು ಈಶಾನನಿಗೆ: “ಇನ್ನೊಂದು ವಿಷಯ ಕೇಳು. ಅತಿಯಾಗಿ ಬಾಹ್ಯಾಚಾರದಲ್ಲಿ ತೊಡಗಬೇಡ. ಒಮ್ಮೆ ಒಬ್ಬ ಸಾಧುವಿಗೆ ತಡೆಯಲಾರದ ಬಾಯಾರಿಕೆಯಾಯಿತು. ಚಕ್ಕಳದಲ್ಲಿ ನೀರು ಹೊತ್ತುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿ ನೀರು ಕೊಡಲು ಮುಂದೆ ಬಂದ. ಸಾಧು ಆತನನ್ನು ಕೇಳಿದ: ‘ಏನು, ನಿನ್ನ ಚೀಲವನ್ನು ಚೆನ್ನಾಗಿ ತೊಳೆದಿದ್ದೀಯಾ?’ ಆತ ಹೇಳಿದ: ‘ಸ್ವಾಮಿ, ನನ್ನ ಚೀಲ ಸಂಪೂರ್ಣವಾಗಿ ಪರಿಶುದ್ಧವಾಗಿದೆ. ಆದರೆ ನಿಮ್ಮ ಚೀಲದೊಳಗೆ ಮಲಮೂತ್ರ, ಇನ್ನೂ ಏನೇನೋ ಕಶ್ಮಲ ತುಂಬಿವೆ. ಆದ್ದರಿಂದ ನಾನು ಹೇಳುತ್ತೇನೆ. ನೀವು ನಿಸ್ಸಂಕೋಚವಾಗಿ ನನ್ನ ಚೀಲದಿಂದ ನೀರು ಕುಡಿಯಬಹುದು. ಇದರಿಂದ ನಿಮಗೆ ಯಾವ ಕೇಡೂ ಸಂಭವಿಸದು.’ ‘ನಿಮ್ಮ ಚೀಲ’ ಎಂಬುದಾಗಿ ಆ ನೀರು ಹೊರುವ ವ್ಯಕ್ತಿ ಹೇಳಿದುದರ ಅರ್ಥ ದೇಹ, ಹೊಟ್ಟೆ ಇತ್ಯಾದಿ.
“ಭಗವನ್ನಾಮದಲ್ಲಿ ಶ್ರದ್ಧೆಯಿಡು. ಬಳಿಕ ನೀನು ತೀರ್ಥಾದಿಗಳಿಗೆ ಹೋಗಬೇಕಾದ ಯಾವ ಆವಶ್ಯಕತೆಯೂ ಇರದು.”
ಈಗ ಪರಮಹಂಸರು ಭಾವೋನ್ಮತ್ತರಾಗಿ ಹಾಡುತ್ತಿದ್ದಾರೆ:
ಏತಕೆ, ಇನ್ನೇತಕೆ?
ಕಾಶಿ ಕಾಂಚಿಯೊ, ಗಯೆಯೊ ಗಂಗೆಯೊ
ಪುಣ್ಯಕ್ಷೇತ್ರಗಳೇತಕೆ?………
ಈಶಾನ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ಈಶಾನನಿಗೆ: “ಇನ್ನೇನಾದರೂ ಸಂದೇಹವಿರುವುದಾದರೆ ತಿಳಿಸು.”
ಈಶಾನ: “ಶ್ರದ್ಧೆಯ ಸಂಬಂಧವಾಗಿ ಹೇಳಿದಾಗ ಎಲ್ಲಕ್ಕೂ ಉತ್ತರ ಕೊಟ್ಟು ಬಿಟ್ಟಿದ್ದೀರಿ.”
ಶ್ರೀರಾಮಕೃಷ್ಣರು: “ನಿಜವಾದ ಶ್ರದ್ಧೆಯಿಂದಲೇ ಆತನ ಸಾಕ್ಷಾತ್ಕಾರವನ್ನು ಪಡೆದು ಕೊಂಡುಬಿಡಬಹುದು. ಭಗವಂತನ ಸಂಬಂಧವಾಗಿ ಹೇಳಿರುವುದರಲ್ಲೆಲ್ಲಾ ಪೂರ್ಣ ಶ್ರದ್ಧೆಯಿಡುವುದಾದರೆ, ಸಾಕ್ಷಾತ್ಕಾರ ಇನ್ನೂ ಬೇಗ ದೊರೆತುಬಿಡುತ್ತದೆ. ಹಸು ಆರಿಸಿಕೊಂಡು ಮೇವು ಮೇಯ್ದರೆ ಕಡಮೆ ಹಾಲು ಕೊಡುತ್ತದೆ. ಆದರೆ ಅದು ಎಲ್ಲಾ ವಿಧದ ಗಿಡಗಡ್ಡೆಗಳನ್ನು ತಿಂದಿತು ಎಂದರೆ, ಧಾರಾಕಾರವಾಗಿ ಹಾಲು ಕರೆಯುತ್ತದೆ.
“ಒಮ್ಮೆ ನಾನು ಒಂದು ಕಥೆ ಕೇಳಿದೆ. ಒಮ್ಮೆ ಒಬ್ಬನಿಗೆ ಭಗವಂತನಿಂದ ಆದೇಶ ದೊರೆಯಿತಂತೆ, ಆತ ಟಗರಿನಲ್ಲಿ ತನ್ನ ಇಷ್ಟದೇವರನ್ನು ನೋಡಬೇಕು ಎಂಬುದಾಗಿ. ಆತ ಅದನ್ನು ಒಡನೆಯೇ ನಂಬಿದನಂತೆ. ಸರ್ವಭೂತಗಳಲ್ಲೂ ಭಗವಂತನೇ ಇದ್ದಾನೆ.
“ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ: ‘ಪ್ರತಿಯೊಂದು ಶರೀರದಲ್ಲೂ ರಾಮನೇ ಇದ್ದಾನೆ, ಎಂಬುದಾಗಿ. ಶಿಷ್ಯನಿಗೆ ಅದರಲ್ಲಿ ಪೂರ್ಣ ಶ್ರದ್ಧೆಯುಂಟಾಯಿತು. ಒಂದು ದಿನ ನಾಯಿಯೊಂದು ಆತನ ಕೈಯಿಂದ ರೊಟ್ಟಿಯನ್ನು ಕಿತ್ತುಕೊಂಡು ಓಡಲಾರಂಭಿಸಿತು. ಆಗ ಶಿಷ್ಯ ತುಪ್ಪದ ಭರಣಿಯನ್ನು ಕೈಯಲ್ಲಿ ಹಿಡಿದು ಅದರ ಹಿಂದೆ ಓಡುತ್ತಾ ಕೂಗಲಾರಂಭಿಸಿದ. ‘ಎಲೋ ರಾಮಾ, ಒಂದು ನಿಮಿಷ ನಿಲ್ಲೋ. ರೊಟ್ಟಿಗೆ ಇನ್ನೂ ತುಪ್ಪ ಸವರಿಲ್ಲ ಕಣೋ!’
“ಕೃಷ್ಣಕಿಶೋರನದು ಎಂತಹ ಅದ್ಭುತ ವಿಶ್ವಾಸ! ಆತ ಹೇಳುತ್ತಿದ್ದ: “ಓಂ ಕೃಷ್ಣ, ಓಂ ರಾಮ” ಎಂಬುದಾಗಿ ಉಚ್ಚರಿಸಿದ ಮಾತ್ರದಿಂದಲೇ ಕೋಟಿ ಸಂಧ್ಯೆಗಳ ಫಲ ದೊರೆಯು ತ್ತದೆ. ಒಮ್ಮೆ ಆತ ಗೋಪ್ಯವಾಗಿ ನನಗೆ ತಿಳಿಸಿದ: ‘ಯಾರಿಗೂ ಹೇಳಬೇಡಿ:ಈಗ ನನಗೆ ಸಂಧ್ಯೆ ಮುಂತಾದವು ರುಚಿಸುತ್ತಿಲ್ಲ.’
“ಕೆಲವು ವೇಳೆ ನನಗೂ ಹಾಗಾಗುತ್ತದೆ. ಭಗವತಿ ತೋರಿಸುತ್ತಿದ್ದಾಳೆ, ಎಲ್ಲವೂ ತಾನೇ ಆಗಿರುವುದನ್ನು. ಒಮ್ಮೆ ಸರ್ವೆ ಮರಗಳ ಕಡೆಯಿಂದ ಪಂಚವಟಿಗೆ ಬರುತ್ತಿದ್ದೆ. ಒಂದು ನಾಯಿ ನನ್ನನ್ನು ಹಿಂಬಾಲಿಸಿತು. ಪಂಚವಟಿಯ ಹತ್ತಿರ ಸ್ವಲ್ಪ ಹೊತ್ತು ನಿಂತುಕೊಂಡೆ. ಬಹುಶಃ ಭಗವತಿ ಈ ನಾಯಿಯ ಮೂಲಕ ನನಗೆ ಏನನ್ನಾದರೂ ತಿಳಿಸಬಹುದೋ ಏನೋ ಅಂತ ಭಾವನೆ ಬಂತು.
“ಶ್ರದ್ಧೆಯಿಂದ ಎಲ್ಲವೂ ದೊರೆಯುತ್ತದೆ ಎಂಬುದಾಗಿ ನೀನು ಹೇಳಿದ್ದು ಖಂಡಿತ ಸರಿ.”
ಈಶಾನ: “ಆದರೆ ನಾವು ಗೃಹಸ್ಥರು.”
ಶ್ರೀರಾಮಕೃಷ್ಣರು: “ಆದರೇನು? ಭಗವಂತನ ಕೃಪೆಯಿಂದ ಅಸಂಭವವಾದ್ದೂ ಸಂಭವವಾಗಿಬಿಡುತ್ತದೆ. ರಾಮಪ್ರಸಾದ ಹಾಡಿದ: ‘ಮಾಯೆಯ ಚೌಕಟ್ಟು ಈ ಸಂಸಾರ!’ ಎಂಬುದಾಗಿ. ಅದಕ್ಕೆ ಉತ್ತರವಾಗಿ ಇನ್ನೊಬ್ಬ ಒಂದು ಹಾಡನ್ನು ರಚಿಸಿದ:
ಈ ಜಗವೆಂಬುದು ಮೋಜಿನ ಮನೆಯೊ!
ಇದರೊಳು ನಾ ಮನಬಂದೊಲು ನಡೆವೆ……
“ಆದರೆ, ಮೊದಲು ನಿರ್ಜನಪ್ರದೇಶದಲ್ಲಿ ಗೋಪ್ಯವಾಗಿ ಸಾಧನೆ ಭಜನೆ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆದು ಈ ಜಗತ್ತಿನಲ್ಲಿದ್ದರೆ, ಜನಕರಾಜನಂತೆ ವಾಸಿಸಬಹುದು. ಇಲ್ಲದಿದ್ದರೆ ಏನನ್ನು ತಾನೆ ಸಾಧಿಸಲಾದೀತು?
“ಉದಾಹರಣೆಗೆ ಶಿವನನ್ನು ತೆಗೆದುಕೊ. ಆತನಿಗೆ ಎಲ್ಲರೂ ಇದ್ದಾರೆ-ಕಾರ್ತಿಕೇಯ, ಗಣೇಶ, ಲಕ್ಷ್ಮಿ, ಸರಸ್ವತಿ. ಆದರೂ ಶಿವ ಕೆಲವು ವೇಳೆ ಸಮಾಧಿಸ್ಥನಾಗಿರುತ್ತಾನೆ, ಇನ್ನೂ ಕೆಲವು ವೇಳೆ ‘ರಾಮ, ರಾಮ’ ಅಂತ ನರ್ತಿಸುತ್ತಿರುತ್ತಾನೆ.”
1. ಇದರ ಪದಶಃ ಅರ್ಥ ‘ಗುರುತಿಸಲಾಗದುದು’ ಎಂದು.