೧೮ನೆ ಜೂನ್ ೧೮೮೩, ಜ್ಯೇಷ್ಠ ಶುಕ್ಲ ತ್ರಯೋದಶಿ, ಸೋಮವಾರ
ಕಲ್ಕತ್ತದ ಹತ್ತಿರವಿರುವ ಪಾನಿಹಾಟಿ ಮಹೋತ್ಸವಕ್ಕೆ ಪರಮಹಂಸರಿಗೆ ಆಹ್ವಾನ ಬಂದಿದೆ. ಇದಕ್ಕೆ “ಅವಲಕ್ಕಿ ಮಹೋತ್ಸವ” ಅಂತಲೂ ಹೆಸರು. ಇದು ಶ್ರೀಚೈತನ್ಯನ ಶಿಷ್ಯ ರಘುನಾಥದಾಸನಿಂದ ಅಂಕುರಾರ್ಪಣ ಮಾಡಲ್ಪಟ್ಟಿತು. ರಘುನಾಥ ಆಗಾಗ ಮನೆಯಿಂದ ಓಡಿಹೋಗಿ ಏಕಾಂತದಲ್ಲಿ ಇದ್ದು ಭಗವದಾನಂದದ ಸವಿಯನ್ನು ಸವಿಯುತ್ತಿದ್ದನಂತೆ. ಅದನ್ನು ಕಂಡು ನಿತ್ಯಾನಂದ ಆತನಿಗೆ ಹೇಳಿದನಂತೆ: “ಕಳ್ಳ! ನೀನು ಆಗಾಗ ಮನೆಯಿಂದ ಓಡಿಹೋಗಿ ಕೇವಲ ಒಬ್ಬನೇ ಭಗವದಾನಂದವನ್ನು ಅನುಭವಿಸುತ್ತಾ ಇದ್ದೀಯೆ. ನಮಗಾರಿಗೂ ಅದು ಗೊತ್ತಾಗದ ಹಾಗೆ ವರ್ತಿಸುತ್ತಿದ್ದೀಯೆ. ನಿನಗೆ ಶಿಕ್ಷೆ ವಿಧಿಸುತ್ತೇನೆ, ಇಂದು ನೀನು ಒಂದು ಮಹೋತ್ಸವ ಏರ್ಪಾಡುಮಾಡಿ ಅದರಲ್ಲಿ ಭಕ್ತರಿಗೆಲ್ಲಾ ಅವಲಕ್ಕಿಯನ್ನು ಹಂಚಬೇಕು.” ಅಂದಿನಿಂದ ವೈಷ್ಣವರು ಪಾನಹಾಟಿಯಲ್ಲಿ ಈ ಅವಲಕ್ಕಿ ಉತ್ಸವವನ್ನು ನಡೆಸಿಕೊಂಡು ಬರುತ್ತಾರೆ. ಶ್ರೀಚೈತನ್ಯದೇವನ ಅನುಯಾಯಿಗಳು ಸಹಸ್ರಗಟ್ಟಲೆ ಅಲ್ಲಿ ನೆರೆಯುತ್ತಾರೆ. ಅಲ್ಲಿ ಸಂಕೀರ್ತನೆ ಮತ್ತು ನರ್ತನ ವಿಶೇಷವಾದ ಭಾವಭಕ್ತಿಯಿಂದ ನಡೆಯುತ್ತದೆ. ಗಂಗಾನದಿಯ ದಡದಲ್ಲಿ ಇರುವ ರಾಧಾಕೃಷ್ಣರ ದೇವಾಲಯದಲ್ಲಿ ಈ ಮಹೋತ್ಸವ ನಡೆಯುತ್ತದೆ.
ದೇವಾಲಯದ ಮುಖ್ಯ ಪಾಲಕ ಮಣಿಸೇನನಿಂದ ಪರಮಹಂಸರಿಗೆ ಆಹ್ವಾನ ಬಂದಿದೆ. ಪರಮಹಂಸರು ಗಾಡಿ ಮಾಡಿಕೊಂಡು ರಾಮ, ಮಾಸ್ಟರ್, ರಾಖಾಲ, ಭವನಾಥ ಮತ್ತು ಇನ್ನೂ ಕೆಲವು ಭಕ್ತರೊಡನೆ ಪಾನಿಹಾಟಿಗೆ ಹೊರಟಿದ್ದಾರೆ. ದಾರಿಯಲ್ಲಿ ಭಕ್ತರೊಡನೆ ತಮಾಷೆ ಮಾಡುತ್ತಲೇ ಮುಂದುವರಿಯುತ್ತಿದ್ದಾರೆ. ಈಗ ಬಂಡಿ ಪಾನಿಹಾಟಿಯನ್ನು ತಲುಪಿತು. ಪರಮಹಂಸರು ಗಾಡಿಯಿಂದ ಇಳಿದೊಡನೆ ನೇರವಾಗಿ ಗುಂಪಿನೊಳಕ್ಕೆ ನುಗ್ಗಿಯೇಬಿಟ್ಟರು. ಅಲ್ಲಿ ಮಣಿಸೇನನ ಗುರುವಾದ ನವದ್ವೀಪ ಗೋಸ್ವಾಮಿಯ ಕೀರ್ತನ ಪಾರ್ಟಿಯೊಡನೆ ಬೆರೆತು ಇಡೀ ಜಗತ್ತನ್ನೇ ಮರೆತು ನರ್ತಿಸುತ್ತಿದ್ದಾರೆ. ಆಗಾಗ ನಿಂತೇ ಸಮಾಧಿಸ್ಥರಾಗಿಬಿಡುತ್ತಿದ್ದಾರೆ. ಅವರು ಕೆಳಕ್ಕೆ ಬಿದ್ದುಬಿಡಬಹುದೆಂದು ಆ ಸಂದರ್ಭಗಳಲ್ಲೆಲ್ಲಾ ನವದ್ವೀಪ ಗೋಸ್ವಾಮಿ ಅವರನ್ನು ಹಿಡಿದುಕೊಂಡಿರುತ್ತಿದ್ದಾನೆ. ಈ ವರ್ಷದ ಉತ್ಸವಕ್ಕೆ ಲಕ್ಷಾಂತರ ಜನ ಬಂದುಬಿಟ್ಟಿದ್ದಾರೆ. ಯಾವ ಕಡೆ ನೋಡಿದರೂ ಮನುಷ್ಯರ ತಲೆಯೇ ಕಂಡು ಬರುತ್ತಿದೆ. ಪರಮಹಂಸರ ಪ್ರೇಮೋನ್ಮತ್ತತೆಯ ಸೋಂಕು ಆ ಇಡೀ ಜನಸಂದಣಿಗೆ ತಗಲಿ, ಅವರೆಲ್ಲರೂ ಪ್ರೇಮೋನ್ಮತ್ತರಾಗಿ ಆಕಾಶ ಬಿರಿಯುವ ರೀತಿಯಲ್ಲಿ ಭಗವನ್ನಾಮೋಚ್ಚಾರಣೆ ಮಾಡುತ್ತಿದ್ದಾರೆ. ತಾಳ ಮೃದಂಗ ಇವೇ ಮೊದಲಾದುವು ಬಹಳ ಇಂಪಾದ ಶಬ್ದವನ್ನು ಹೊರಡಿಸುತ್ತಿವೆ. ಎಲ್ಲರ ಮುಖದಲ್ಲೂ ಭಗವದಾನಂದ ಎಂಬುದು ಸುಮ್ಮನೆ ನಲಿಯುತ್ತಿದೆ. ಅಲ್ಲಿ ನೆರೆದಿದ್ದ ಭಕ್ತರಿಗೆಲ್ಲಾ ತೋರಿಬಂತು, ಸಾಕ್ಷಾತ್ ಶ್ರೀಚೈತನ್ಯಪ್ರಭುವೇ ಪರಮಹಂಸರ ರೂಪಿನಲ್ಲಿ ಬಂದಿದ್ದಾನೆ ಎಂಬುದಾಗಿ. ಹೂವು ಮತ್ತು ಬತ್ತಾಸು ಎಲ್ಲಾ ಕಡೆಯಿಂದಲೂ ಬಂದು ಅವರ ತಲೆಯ ಮೇಲೆ ಬೀಳುತ್ತಲೇ ಇವೆ. ಜನರು ಅವರ ಪಾದಗಳಿಗೆ ಹೂವು ಅರ್ಪಿಸಿ ಅಡ್ಡಬೀಳುತ್ತಲೇ ಇದ್ದಾರೆ. ಹರಿಕೀರ್ತನೆಯ ಧ್ವನಿ ದೂರಕ್ಕೆ ಸಮುದ್ರಗರ್ಜನೆಯಂತೆ ಕೇಳಿಬರುತ್ತಿದೆ.
ಪರಮಹಂಸರಿಗೆ ಭಾವಾವಿಷ್ಟತೆಯ ವಿವಿಧ ಅವಸ್ಥೆಗಳು ಒಂದಾದ ಮೇಲೊಂದು ಬರುತ್ತಿರುತ್ತವೆ. ಗಾಢಸಮಾಧಿಯಲ್ಲಿ ಮುಖದಿಂದ ಪ್ರೇಮಾನಂದವನ್ನು ಹೊರಸೂಸುತ್ತ ಪ್ರತಿಮೆಯೋಪಾದಿಯಲ್ಲಿ ಸ್ಥಿರವಾಗಿ ನಿಂತುಕೊಂಡಿರುತ್ತಾರೆ. ಅರ್ಧ ಬಾಹ್ಯದೆಶೆಯಲ್ಲಿ ಕೆಲವು ವೇಳೆ ಮೆತ್ತಗೆ, ಇನ್ನೂ ಕೆಲವು ವೇಳೆ ಸಿಂಹಪರಾಕ್ರಮದಿಂದ ನರ್ತಿಸುತ್ತಿರುತ್ತಾರೆ. ಬಾಹ್ಯದೆಶೆಯಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಒಟ್ಟಿಗೆ ಹಾಡುತ್ತಿರುತ್ತಾರೆ. ಈಗ ಪರಮಹಂಸರು ಎಲ್ಲರನ್ನೂ ಸೇರಿಸಿಕೊಂಡು ಒಟ್ಟಿಗೆ ಹಾಡುತ್ತಿದ್ದಾರೆ:
ಹರಿನಾಮವನು ನುತಿಸಿ, ಆನಂದಬಾಷ್ಪವನು
ಕರೆವಣ್ಣತಮ್ಮಂದಿರು, ಇವರು ನೋಡು!….
ಮತ್ತೆ ಪರಮಹಂಸರು ಹಾಡುತ್ತಿದ್ದಾರೆ:
ಗೌರಾಂಗನು ಹುಟ್ಟಿದೂರು
ಅವನ ಪ್ರೇಮ ಹಿಲ್ಲೋಲದಿ
ಸ್ಪಂದಿಸುತಿದೆ ಮೋದದಿ!…..
ಜನಸಂದಣಿ ಪರಮಹಂಸರನ್ನು ಸುತ್ತುಗಟ್ಟಿ ರಾಧಾಕೃಷ್ಣ ದೇವಾಲಯದ ಕಡೆ ಬರುತ್ತಿದೆ. ಎಲ್ಲೋ ಕೆಲವರಿಗೆ ಮಾತ್ರ ದೇವಾಲಯದ ಒಳಕ್ಕೆ ಹೋಗಲು ಸಾಧ್ಯವಾಯಿತು. ಉಳಿದವರು ಹೊರಗಡೆಯೇ ನಿಂತು ಪರಮಹಂಸರ ದರ್ಶನ ಪಡೆಯಲು ಒಬ್ಬರನ್ನೊಬ್ಬರು ನೂಕಾಡುತ್ತಿದ್ದಾರೆ. ಪರಮಹಂಸರು ಪ್ರೇಮೋನ್ಮತ್ತರಾಗಿ ದೇವಾಲಯದ ಪ್ರಾಂಗಣದಲ್ಲಿ ನರ್ತಿಸಲಾರಂಭಿಸಿದ್ದಾರೆ. ಆಗಾಗ ಅವರು ಸಮಾಧಿಸ್ಥರಾಗುತ್ತಲೇ ಇದ್ದಾರೆ. ಅವರ ಸುತ್ತ ನೆರೆದಿದ್ದ ನೂರಾರು ಜನ ಭಗವನ್ನಾಮವನ್ನು ಕೂಗಿ ಹೇಳುತ್ತಿದ್ದಾರೆ. ದೇವಾಲಯದ ಹೊರಗಡೆ ಇದ್ದ ಸಹಸ್ರಾರು ಜನಕ್ಕೂ ಆ ಸೋಂಕು ತಗಲಿ ಅವರು ತಮ್ಮ ಕಂಠ ಕಿತ್ತು ಹೋಗುವ ಹಾಗೆ ಭಗವನ್ನಾಮವನ್ನು ಕೂಗಿ ಹೇಳುತ್ತಿದ್ದಾರೆ. ಇಲ್ಲಿಂದ ಹೊರಟ ಧ್ವನಿ ಗಂಗೆಯಲ್ಲಿ ದೋಣಿಯ ಮೇಲೆ ಕುಳಿತಿದ್ದವರಿಗೂ ಕೇಳಿಬಂದು ಅವರೂ ಭಗವನ್ನಾಮವನ್ನು ತಮ್ಮ ಉಚ್ಚ ಕಂಠದಿಂದ ಹೇಳುತ್ತಿದ್ದಾರೆ.
ಕೀರ್ತನೆ ಮುಗಿದ ನಂತರ ಮಣಿಸೇನನು ಪರಮಹಂಸರನ್ನೂ, ನವದ್ವೀಪ ಗೋಸ್ವಾಮಿಯನ್ನೂ ಒಂದು ಕೊಠಡಿಗೆ ಕರೆದುಕೊಂಡು ಹೋಗಿ ಉಪಾಹಾರ ಮಾಡಿಸುತ್ತಿದ್ದಾನೆ. ಅವರು ತಿಂದು ಮುಗಿಸಿದ ನಂತರ ರಾಮನಿಗೆ, ಮಾಸ್ಟರಿಗೆ ಮತ್ತು ಉಳಿದವರಿಗೂ ಭಗವತ್ಪ್ರಸಾದ ದೊರೆಯಿತು. ಶ್ರೀರಾಮಕೃಷ್ಣರು ಭಕ್ತವತ್ಸಲರು. ಅವರು ತಾವೇ ನಿಂತು ಭಕ್ತರಿಗೆ ಉಪಚಾರ ಮಾಡುತ್ತಿದ್ದಾರೆ.
ಅಪರಾಹ್ನದಲ್ಲಿ ಪರಮಹಂಸರು ಭಕ್ತರೊಡನೆ ಮಣಿಸೇನನ ಬೈಠಕ್ಖಾನೆಯಲ್ಲಿ ಕುಳಿತುಕೊಂಡಿದ್ದಾರೆ. ನವದ್ವೀಪ ಗೋಸ್ವಾಮಿಯೂ ಹತ್ತಿರ ಕುಳಿತಿದ್ದಾನೆ. ಮಣಿಸೇನ ಪರಮಹಂಸರಿಗೆ ಗಾಡಿ ಬಾಡಿಗೆಯನ್ನು ತಂದುಕೊಡಲು ಇಚ್ಛಿಸಿದ. ರಾಮನೇ ಮೊದಲಾದವರನ್ನು ನಿರ್ದೇಶಿಸಿ ಪರಮಹಂಸರು ಹೇಳುತ್ತಿದ್ದಾರೆ: “ಅವರು ಏಕೆ ನಿನ್ನಿಂದ ಗಾಡಿ ಬಾಡಿಗೆ ತೆಗೆದುಕೊಳ್ಳಬೇಕು? ಅವರು ಹಣ ಸಂಪಾದನೆ ಮಾಡುತ್ತಿದ್ದಾರಲ್ಲಾ.” ಈಗ ಪರಮಹಂಸರು ನವದ್ವೀಪ ಗೋಸ್ವಾಮಿಯೊಡನೆ ಮಾತುಕತೆಯಲ್ಲಿ ತೊಡಗಿದ್ದಾರೆ.
ಶ್ರೀರಾಮಕೃಷ್ಣರು: “ಭಕ್ತಿ ಹಣ್ಣಾಯಿತು ಎಂದರೆ ಅದು ಭಾವವಾಗಿ ಪರಿಣಮಿಸುತ್ತದೆ. ಅನಂತರ ಮಹಾಭಾವ, ಬಳಿಕ ಪ್ರೇಮ, ಕೊನೆಗೆ ವಸ್ತುಲಾಭ (ಭಗವಂತನ ಸಾಕ್ಷಾತ್ಕಾರ). ಗೌರಾಂಗನಿಗೆ ಮಹಾಭಾವ ಮತ್ತು ಪ್ರೇಮ ಎರಡೂ ಉಂಟಾಗಿದ್ದುವು. ಪ್ರೇಮ ಉದಯವಾಯಿತು ಎಂದರೆ, ಈ ಜಗತ್ತು ಮರೆತೇಹೋಗಿಬಿಡುತ್ತದೆ. ಅಷ್ಟು ಪ್ರಿಯವಾದ ಸ್ವಂತ ದೇಹವೂ ಮರೆತುಹೋಗಿಬಿಡುತ್ತದೆ. ಗೌರಾಂಗನಿಗೆ ಈ ಪ್ರೇಮ ಉಂಟಾಗಿತ್ತು. ಸಮುದ್ರ ಕಣ್ಣಿಗೆ ಬಿದ್ದಾಗ, ಅದು ಯಮುನೆ ಎಂದು ಭಾವಿಸಿ ಅದಕ್ಕೆ ಧುಮುಕಿಬಿಟ್ಟ. ಸಾಮಾನ್ಯ ಜೀವರಿಗೆ ಮಹಾಭಾವವೇ ಆಗಲಿ, ಪ್ರೇಮವೇ ಆಗಲಿ ಉಂಟಾಗುವುದಿಲ್ಲ. ಅವರು ಭಾವದವರೆಗೆ ಮಾತ್ರ ಮಂದುವರಿಯಬಲ್ಲರು. ಗೌರಾಂಗ ದೇವನಿಗೆ ಮೂರೂ ಉಂಟಾಗುತ್ತಿತ್ತು. ಅಲ್ಲವೆ?”
ನವದ್ವೀಪ: “ಹೌದು, ನಿಜ-ಅಂತರ್ದಶೆ, ಅರ್ಧಬಾಹ್ಯದಶೆ ಮತ್ತು ಬಾಹ್ಯದಶೆ.”
ಶ್ರೀರಾಮಕೃಷ್ಣರು: “ಅಂತರ್ದಶೆಯಲ್ಲಿ ಆತ ಸಮಾಧಿಸ್ಥನಾಗಿರುತ್ತಿದ್ದ. ಅರ್ಧಬಾಹ್ಯದಶೆಯಲ್ಲಿ ನರ್ತನಮಾಡಲು ಮಾತ್ರ ಸಾಧ್ಯವಾಗುತ್ತಿತ್ತು. ಬಾಹ್ಯದಶೆಯಲ್ಲಿ ನಾಮಸಂಕೀರ್ತನೆ ಮಾಡುತ್ತಿದ್ದ.”
ನವದ್ವೀಪನು ತನ್ನ ಮಗನನ್ನು ಪರಮಹಂಸರಿಗೆ ಪರಿಚಯಮಾಡಿಕೊಟ್ಟ. ಆತ ಇನ್ನೂ ಯುವಕ, ಶಾಸ್ತ್ರಾಭ್ಯಾಸ ಮಾಡುತ್ತಿದ್ದಾನೆ. ಆತ ಪರಮಹಂಸರಿಗೆ ಪ್ರಣಾಮಮಾಡಿದ.
ನವದ್ವೀಪ: “ಮನೆಯಲ್ಲಿ ಶಾಸ್ತ್ರಗಳನ್ನು ಓದುತ್ತಿದ್ದಾನೆ. ವೇದಗ್ರಂಥಗಳು ಹಿಂದೆ ಸಿಕ್ಕುವುದೇ ದುರ್ಲಭವಾಗಿತ್ತು. ಈಗ ಮ್ಯಾಕ್ಸ್ಮುಲ್ಲರ್ ಭಾಷಾಂತರಿಸಿದ್ದಾರೆ; ಆದ್ದರಿಂದ ಜನ ಅವನ್ನು ಓದಬಲ್ಲರು.”
ಶ್ರೀರಾಮಕೃಷ್ಣರು: “ಅಧಿಕವಾದ ಶಾಸ್ತ್ರಾಧ್ಯಯನ ಒಳ್ಳೆಯದನ್ನು ಮಾಡುವುದಕ್ಕೆ ಬದಲು ಹೆಚ್ಚಾಗಿ ಹಾನಿಯನ್ನೇ ತರುತ್ತದೆ. ಮೊದಲು ಶಾಸ್ತ್ರಗಳ ಸಾರ ಏನು ಎಂಬುದನ್ನು ಅರಿತುಕೊಂಡುಬಿಡಬೇಕಾಗುತ್ತದೆ. ಬಳಿಕ ಶಾಸ್ತ್ರಗ್ರಂಥಗಳ ಆವಶ್ಯಕತೆಯೇನಿರುತ್ತದೆ? ಮೊದಲು ಸಾರ ಏನು ಎಂಬುದನ್ನು ಅರಿತುಕೊಂಡುಬಿಟ್ಟು, ಬಳಿಕ ಭಗವಂತನ ಸಾಕ್ಷಾತ್ಕಾರಕ್ಕಾಗಿ ಸಾಧನೆಯ ಆಳಕ್ಕೆ ಮುಳುಗಬೇಕು.
“ಭಗವತಿ ವೇದಾಂತದ ಸಾರ ಏನು ಎಂಬುದನ್ನು ನನಗೆ ತಿಳಿಸಿಕೊಟ್ಟಿದ್ದಾಳೆ-ಬ್ರಹ್ಮ ಸತ್ಯ, ಜಗನ್ಮಿಥ್ಯಾ ಎಂಬುದಾಗಿ. ಗೀತೆಯ ಸಾರ-ಅದನ್ನು ಒಂದು ಹತ್ತಾವರ್ತಿ ಹೇಳಿದರೆ, ಅದು ಏನಾಗಿ ಕೇಳಿಬರುತ್ತದೋ ಅದೆ. ಅಂದರೆ ಅದು ‘ತ್ಯಾಗಿ’, ‘ತ್ಯಾಗಿ’ ಎಂಬುದಾಗಿ ಕೇಳಿ ಬರುತ್ತದೆ. ಆದ್ದರಿಂದ ಗೀತೆಯ ಸಾರ: ‘ಹೇ ಜೀವ, ಎಲ್ಲವನ್ನೂ ತ್ಯಾಗ ಮಾಡಿ, ಭಗವಂತನ ಸಾಕ್ಷಾತ್ಕಾರಕ್ಕಾಗಿ ಸಾಧನೆಯಲ್ಲಿ ತೊಡಗು’ ಎಂದು.
ನವದ್ವೀಪ: “ತ್ಯಾಗಮಾಡಬೇಕೆಂದು ಮನಸ್ಸಿಗೆಲ್ಲಿ ಅನಿಸುತ್ತದೆ?”
ಶ್ರೀರಾಮಕೃಷ್ಣರು: “ನೀವು ಗೋಸ್ವಾಮಿಗಳು, ನಿಮಗೆ ಅರ್ಚಕರ ಕೆಲಸ ಇದೆ. ನೀವು ಸಂಸಾರವನ್ನು ತ್ಯಜಿಸಲಾಗುವುದಿಲ್ಲ; ಹಾಗೆ ಮಾಡಿದರೆ, ದೇವಾಲಯಗಳಲ್ಲಿ ಭಗವಂತನ ಸೇವೆ ಹೇಗೆ ನಡೆಯಬೇಕು? ನೀವು ಮಾನಸಿಕವಾಗಿ ತ್ಯಾಗಮಾಡಿ.
“ಭಗವಂತನೇ ಲೋಕಕಲ್ಯಾಣಕ್ಕಾಗಿ ನಿಮ್ಮನ್ನು ಈ ಸಂಸಾರದಲ್ಲಿ ಇಟ್ಟಿದ್ದಾನೆ. ನೀನು ಎಷ್ಟೇ ಮನಸ್ಸು ಮಾಡಿದರೂ ನಿನ್ನ ಕೈಯಲ್ಲಿ ಈ ಸಂಸಾರ ತ್ಯಜಿಸಲಾಗುವುದಿಲ್ಲ. ಭಗವಂತ ನಿನಗೆ ಅಂಥಾ ಸ್ವಭಾವ ಕೊಟ್ಟಿದ್ದಾನೆ, ನೀನು ಸಂಸಾರ ಕಾರ್ಯಗಳನ್ನು ಮಾಡಲೇಬೇಕಾಗುತ್ತದೆ.
“ಕೃಷ್ಣ ಅರ್ಜುನನಿಗೆ ಹೇಳಿದ: ‘ನೀನು ಯುದ್ಧಮಾಡುವುದಿಲ್ಲ ಅಂತ ಹೇಳುತ್ತಿದ್ದೀಯಲ್ಲ, ಇದೇನು ಹುಚ್ಚು? ಹಾಗೆ ಇಷ್ಟಪಟ್ಟರೂ ನೀನು ಯುದ್ಧಮಾಡದೆ ಇರಲಾಗುವುದಿಲ್ಲ. ನಿನ್ನ ಸ್ವಭಾವವೇ ನಿನ್ನ ಕೈಯಲ್ಲಿ ಯುದ್ಧಮಾಡಿಸಿಬಿಡುತ್ತದೆ.”
ಶ್ರೀಕೃಷ್ಣ ಅರ್ಜುನನಿಗೆ ಹೀಗೆ ಹೇಳುತ್ತಿದ್ದಾನೆ ಎಂಬುದಾಗಿ ಹೇಳುತ್ತಿದ್ದ ಹಾಗೆಯೇ ಪರಮಹಂಸರು ಸಮಾಧಿಸ್ಥರಾಗುತ್ತಿದ್ದಾರೆ. ರೆಪ್ಪೆ ಹೊಡೆಯುವುದರೊಳಗಾಗಿಯೇ ಅವರ ಶರೀರ ಸ್ಥಿರವಾಗಿಬಿಟ್ಟಿತು, ಕಣ್ಣು ಎವೆಯಿಕ್ಕುತ್ತಿಲ್ಲ, ಉಸಿರು ಆಡುತ್ತಿದೆಯೋ ಇಲ್ಲವೇ ಹೇಳಲಾಗುತ್ತಿಲ್ಲ. ಪರಮಹಂಸರಲ್ಲಿ ಆದ ಈ ವಿದ್ಯುದ್ವೇಗದ ಪರಿವರ್ತನೆ ನೋಡಿ, ನವದ್ವೀಪ ಗೋಸ್ವಾಮಿ, ಆತನ ಮಗ ಮತ್ತು ಉಳಿದ ಭಕ್ತರು ಆಶ್ಚರ್ಯಚಕಿತರಾಗಿ ಪರಮಹಂಸರನ್ನು ನೋಡುತ್ತಿದ್ದಾರೆ.
ಸ್ವಲ್ಪ ಪ್ರಕೃತಿಸ್ಥರಾಗಿ ಪರಮಹಂಸರು ನವದ್ವೀಪ ಗೋಸ್ವಾಮಿಗೆ ಹೇಳುತ್ತಿದ್ದಾರೆ: “ಯೋಗ, ಭೋಗ. ಗೋಸ್ವಾಮಿ ವಂಶಸ್ಥನಾದ ನಿನಗೆ ಎರಡೂ ಇವೆ. ಈಗ ನೀನು ಕೇವಲ ಪ್ರಾರ್ಥನೆಮಾಡು. ವ್ಯಾಕುಲತೆಯಿಂದ ಪ್ರಾರ್ಥನೆಮಾಡು: ‘ಹೇ ಭಗವಂತ, ನಿನ್ನ ಈ ಭುವನಮೋಹಿನಿಯ ಐಶ್ವರ್ಯ ನನಗೆ ಬೇಕಾಗಿಲ್ಲ. ನನಗೆ ನೀನೊಬ್ಬನೇ ಬೇಕು!’ ಆತನೇನೋ ನಿಶ್ಚಯವಾಗಿಯೂ ಸರ್ವಭೂತಗಳಲ್ಲೂ ಇದ್ದಾನೆ; ಹಾಗಾದರೆ ಭಕ್ತ ಅನ್ನಿಸಿಕೊಳ್ಳುವವನು ಯಾರು? ಯಾರ ಮನಸ್ಸು ಪ್ರಾಣ ಅಂತರಾತ್ಮ ಎಲ್ಲವೂ ಭಗವಂತನಲ್ಲಿ ಲೀನವಾಗಿಬಿಟ್ಟಿವೆಯೋ ಆತ.
ಪರಮಹಂಸರು ಸಂಪೂರ್ಣವಾಗಿ ಪ್ರಕೃತಿಸ್ಥರಾಗಿದ್ದಾರೆ. ತಮ್ಮ ಸಮಾಧಿಯ ಸಂಬಂಧವಾಗಿ ನವದ್ವೀಪನಿಗೆ ಹೇಳುತ್ತಿದ್ದಾರೆ: “ಕೆಲವರು ಹೇಳುತ್ತಾರೆ, ನನ್ನ ಈ ಅವಸ್ಥೆ ಒಂದು ವಿಧವಾದ ರೋಗ ಎಂಬುದಾಗಿ. ಅವರಿಗೆ ನನ್ನ ಉತ್ತರ: ‘ಯಾರ ಚೇತನದಿಂದ ಈ ಜಗತ್ತು ಚೇತನಮಯವಾಗಿ ಕಾಣುವುದೋ, ಅಂಥವನ ಮೇಲೆ ಧ್ಯಾನಮಾಡಿದರೆ ಮನುಷ್ಯ ಅಚೇತನನಾಗಲು ಎಂದಿಗಾದರೂ ಸಾಧ್ಯವೇ?’ ಎಂದು.”
ಮಣಿಸೇನನು ತಾನು ಆಹ್ವಾನಿಸಿದ ಬ್ರಾಹ್ಮಣರಿಗೆ, ವೈಷ್ಣವರಿಗೆ ತಕ್ಕ ಸಂಭಾವನೆಯನ್ನು ಒಪ್ಪಿಸಿ, ಅವರನ್ನು ಬೀಳ್ಕೊಟ್ಟ. ಆತ ಪರಮಹಂಸರನ್ನು ಸಮೀಪಿಸಿ ಅವರಿಗೆ ಐದು ರೂಪಾಯಿ ಕೊಡಲು ಬಂದ. ತಾವು ದುಡ್ಡನ್ನು ಮುಟ್ಟುವ ಹಾಗಿಲ್ಲ ಎಂಬುದಾಗಿ ಪರಮಹಂಸರು ಹೇಳಿದರು. ಅವರು ಹಾಗೆ ಹೇಳಿದರೂ ಮಣಿಸೇನ ಬಿಡುತ್ತಿಲ್ಲ. ನಿನ್ನ ಗುರುವಿನ ಆಣೆಯಾಗಿಯೂ ನನ್ನನ್ನು ಬಲಾತ್ಕರಿಸಬೇಡ ಅಂದರು. ಹಾಗೆಂದರೂ ಆತ ಸುಮ್ಮನೆ ಬಿಡುತ್ತಿಲ್ಲ. ಆಗ ಅವರು ಬೇಸರಗೊಂಡು, ತಾವು ಸ್ವೀಕರಿಸಬಹುದೇ ಎಂಬುದಾಗಿ ಮಾಸ್ಟರನ್ನು ಕೇಳಿದರು. ಆತ ಬಹಳವಾಗಿ ಪ್ರತಿಭಟಿಸಿ ಹೇಳಿದ: “ಎಲ್ಲಾದರೂ ಉಂಟೆ? ಪ್ರಪಂಚದ ಮೇಲೆ ಪ್ರಪಂಚ ಬಿದ್ದರೂ ಸ್ವೀಕರಿಸಬೇಡಿ.”
ಆಗ ಮಣಿಸೇನನ ಸ್ನೇಹಿತರು ಪರಮಹಂಸರಿಗೆ ಮಾವಿನಹಣ್ಣು, ಸಂದೇಶ (ಸಿಹಿ ತಿಂಡಿ) ಕೊಂಡುಕೊಡುವಂತೆ ಹೇಳಿ ರಾಖಾಲನ ಕೈಗೆ ಆ ಹಣವನ್ನು ಕೊಟ್ಟರು. ಶ್ರೀರಾಮಕೃಷ್ಣರು ಮಾಸ್ಟರಿಗೆ ಹೇಳಿದರು: ‘ನಾನು ಆತನಿಗೆ ಗುರುವಿನ ಆಣೆಯಾಗಿಯೂ ಅಂತ ಹೇಳಿಬಿಟ್ಟಿದ್ದೇನೆ. ಆದರೂ ರಾಖಾಲ ಅದನ್ನು ಸ್ವೀಕರಿಸಿದ್ದಾನೆ. ಅದಕ್ಕೆ ಅವನೇ ಜವಾಬ್ದಾರ.’
ಪರಮಹಂಸರು ಭಕ್ತರೊಡನೆ ಒಂದು ಗಾಡಿಯನ್ನು ಹತ್ತಿದರು. ದಕ್ಷಿಣೇಶ್ವರಕ್ಕೆ ಹಿಂದಿರುಗುತ್ತಾರೆ. ದಾರಿಯಲ್ಲಿ ಮತಿಶೀಲರ ದೇವಾಲಯದ ತೋಟ ಸಿಕ್ಕುತ್ತದೆ. ಬಹಳ ಕಾಲದಿಂದ ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದರು, ತಮ್ಮನ್ನು ಒಂದು ದಿನ ಅಲ್ಲಿಗೆ ಕರೆದುಕೊಂಡು ಹೋಗುವಂತೆ. ಅಲ್ಲಿನ ಕೊಳದಲ್ಲಿ ಈಜಾಡುವ ಮೀನುಗಳನ್ನು ತೋರಿಸಿ ನಿರಾಕಾರ ಧ್ಯಾನವನ್ನು ಹೇಗೆ ಮಾಡಬೇಕು ಎಂಬುದನ್ನು ಮಾಸ್ಟರಿಗೆ ಪ್ರತ್ಯಕ್ಷವಾಗಿ ತೋರಿಸಬೇಕೆಂಬ ಇಚ್ಛೆ ಅವರಿಗೆ. ಆ ಕೊಳದಲ್ಲಿ ಸಾಕಿದ ಮೀನುಗಳು ಹೇರಳವಾಗಿ ಇವೆ. ಯಾರೂ ಅವಕ್ಕೆ ತೊಂದರೆಮಾಡುವುದಿಲ್ಲ. ಅದನ್ನು ನೋಡಲು ಬರುವವರು ಅದಕ್ಕೆ ಪುರಿ ಮೊದಲಾದ ಆಹಾರಗಳನ್ನು ಹಾಕಿದೊಡನೆಯೇ ದೊಡ್ಡದೊಡ್ಡ ಮೀನುಗಳ ಹಿಂಡೇ ಬಂದು, ಒಂದರಮೇಲೊಂದು ಬಿದ್ದು ಆಹಾರವನ್ನು ತಿನ್ನಲು ಪ್ರಯತ್ನಿಸುತ್ತವೆ. ಯಾವ ಭಯವೂ ಇಲ್ಲದೆ ಅವು ಅಲ್ಲಿ ಈಜಾಡುತ್ತ ಕ್ರೀಡಿಸುತ್ತಿರುತ್ತವೆ.
ಆ ಕೊಳದ ಹತ್ತಿರಕ್ಕೆ ಬಂದು ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ: “ನೋಡು, ಈ ಮೀನುಗಳ ಕಡೆಗೆ. ನಿರಾಕಾರದ ಮೇಲೆ ಧ್ಯಾನಮಾಡುವುದು ಎಂದರೆ, ಈ ಮೀನುಗಳು ಆನಂದದಿಂದ ಈ ಕೊಳದಲ್ಲಿ ಈಜಾಡುತ್ತಿರುವ ಹಾಗೆ, ಚಿದಾನಂದ ಸಾಗರದಲ್ಲಿ ಈಜಾಡುವಿಕೆ.”
೨೫ನೆ ಜೂನ್ ೧೮೮೩, ಜ್ಯೇಷ್ಠ ಕೃಷ್ಣ ಪಂಚಮಿ, ಸೋಮವಾರ
ಶ್ರೀರಾಮಕೃಷ್ಣರು ಕಲ್ಕತ್ತದಲ್ಲಿ ಬಲರಾಮಬಸುವಿನ ಮನೆಗೆ ಬಂದಿದ್ದಾರೆ. ರಾಖಾಲ ಮಾಸ್ಟರ್ ಹತ್ತಿರ ಕುಳಿತಿದ್ದಾರೆ. ಪರಮಹಂಸರು ಭಾವಾವಿಷ್ಟರಾಗಿದ್ದಾರೆ. ಆ ಅವಸ್ಥೆಯಲ್ಲಿಯೇ ಭಕ್ತರೊಡನೆ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೋಡಿ, ಹೃತ್ಪೂರ್ವಕವಾಗಿ ಪ್ರಾರ್ಥನೆ ಮಾಡಿದರೆ ಸ್ವಸ್ವರೂಪ ದರ್ಶನ ಪಡೆಯಬಹುದು. ಆದರೆ ಈ ಪ್ರಾಪಂಚಿಕ ವಸ್ತುಗಳ ಮೇಲಿನ ಭೋಗಾಸಕ್ತಿ ಎಷ್ಟು ಪ್ರಮಾಣದಲ್ಲಿ ಸಾಧಕನಲ್ಲಿ ಇರುವುದೋ, ಅದಕ್ಕನುಗುಣವಾಗಿ ಆತನಿಗೆ ಸ್ವಸ್ವರೂಪದರ್ಶನ ತಡವಾಗುತ್ತದೆ.”
ಮಾಸ್ಟರ್ : “ಹೌದು, ನೀವು ಯಾವಾಗಲೂ ಹೇಳುತ್ತೀರಲ್ಲ, ಸಾಧನೆಯಲ್ಲಿ ಮುಳುಗಬೇಕು ಅಂತ.”
ಶ್ರೀರಾಮಕೃಷ್ಣರು: “ಹೌದು, ಹಾಗೆಯೇ ಮಾಡಬೇಕು. ನೋಡು, ಎಲ್ಲರಿಗೂ ಆತ್ಮ ಸಾಕ್ಷಾತ್ಕಾರ ಸಾಧ್ಯ.”
ಮಾಸ್ಟರ್: “ಅದು ನಿಜ. ಆದರೆ ಭಗವಂತ ಕರ್ತ. ಜೀವಿಗಳ ಯೋಗ್ಯತೆಗನುಸಾರ ಆತ ವಿವಿಧ ಜೀವಿಗಳಲ್ಲಿ ವಿವಿಧ ರೀತಿಯಾಗಿ ವ್ಯಕ್ತವಾಗಿದ್ದಾನೆ. ಕೆಲವರಿಗೆ ಆತ್ಮಜಾಗ್ರತಿಯನ್ನು ಉಂಟುಮಾಡಿಬಿಡುತ್ತಾನೆ. ಇನ್ನು ಕೆಲವರನ್ನು ಅಜ್ಞಾನದಲ್ಲಿಡುತ್ತಾನೆ.”
ಶ್ರೀರಾಮಕೃಷ್ಣರು: “ಇಲ್ಲ, ಅದು ಹಾಗಲ್ಲ. ವ್ಯಾಕುಲಚಿತ್ತದಿಂದ ಆತನಿಗೆ ಪ್ರಾರ್ಥನೆ ಮಾಡಬೇಕು. ಹೃತ್ಪೂರ್ವಕ ಪ್ರಾರ್ಥನೆಗೆ ಆತ ಕಿವಿಗೊಟ್ಟೇಗೊಡುತ್ತಾನೆ.”
ಒಬ್ಬ ಭಕ್ತ: “ಅದು ಸರಿ, ನಮ್ಮಲ್ಲಿ ‘ಅಹಂ’ ಎಂಬುದು ಇರುವುದರಿಂದ ಪ್ರಾರ್ಥನೆ ಮಾಡಬೇಕಾಗುತ್ತದೆ.”
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಲೀಲೆಯ ಸಹಾಯ ತೆಗೆದುಕೊಂಡು ನಿತ್ಯವನ್ನು ಹತ್ತಬೇಕು. ಇದು ಏಣಿಯ ಸಹಾಯದಿಂದ ಅಟ್ಟವನ್ನು ಹತ್ತಿದ ಹಾಗೆ. ನಿತ್ಯದ ದರ್ಶನ ದೊರೆತ ನಂತರ, ಅಲ್ಲಿಂದ ಇಳಿದುಬಂದು, ಲೀಲೆಯಲ್ಲಿ ಭಕ್ತಿ ಮತ್ತು ಭಕ್ತರನ್ನು ಆಶ್ರಯಿಸಿ ಇರಬೇಕು. ಇದು ನನ್ನ ಕೊನೆಯ ಮತ್ತು ಪೂರ್ಣ ಅಭಿಮತ.
“ಭಗವಂತನಿಗೆ ಅನೇಕ ರೂಪಗಳಿವೆ : ಅವನು ಬಗೆಬಗೆಯಾಗಿ ಕ್ರೀಡಿಸುತ್ತಾನೆ-ಭಗವಲ್ಲೀಲೆ, ದೇವಲೀಲೆ, ನರಲೀಲೆ, ಜಗಲ್ಲೀಲೆ ಇತ್ಯಾದಿಯಾಗಿ. ಆತ ಮನುಷ್ಯನ ರೂಪ ಧರಿಸಿ, ಎಂದರೆ ಅವತಾರವೆತ್ತಿ ಪ್ರೇಮ ಮತ್ತು ಭಕ್ತಿಯನ್ನು ಹರಡಲೋಸುಗ ಪ್ರತಿಯೊಂದು ಯುಗದಲ್ಲೂ ಈ ಧರೆಗೆ ಬರುತ್ತಾನೆ. ಉದಾಹರಣೆಗೆ ಚೈತನ್ಯದೇವನನ್ನು ನೋಡು. ಕೇವಲ ಅವತಾರಪುರುಷರ ಮೂಲಕವೇ ಭಗವದ್ಭಕ್ತಿ ಮತ್ತು ಪ್ರೇಮ ಏನು ಎಂಬುದರ ರುಚಿ ನೋಡಬಹುದು. ಭಗವಂತನ ಲೀಲೆ ಅನಂತ ಬಗೆಯಾದದ್ದು, ಆದರೆ ನಮಗೆ ಬೇಕಾದದ್ದು ಪ್ರೇಮಾ ಭಕ್ತಿ. ನಮಗೆ ಕೇವಲ ಹಾಲು ಮಾತ್ರ ಬೇಕು. ಹಾಲು ಹಸುವಿನ ಕೆಚ್ಚಲಿನಿಂದ ಬರುತ್ತದೆ. ಅವತಾರಪುರುಷ ಹಸುವಿನ ಕೆಚ್ಚಲು.”
ತಾವು ಅವತಾರ ಪುರುಷರು ಎಂಬುದಾಗಿ ಪರಮಹಂಸರು ಸೂಚಿಸಿದರೇನು? ತಮ್ಮ ದರ್ಶನ ಮಾಡಿದರೆ, ಭಗವಂತನ ದರ್ಶನ ಮಾಡಿದ ಹಾಗೆಯೇ ಎಂಬುದಾಗಿ ವ್ಯಕ್ತಪಡಿಸಿದರೇನು? ಚೈತನ್ಯದೇವನ ಸಂಬಂಧವಾಗಿ ಹೇಳಿ, ತಮ್ಮ ಸಂಬಂಧವಾಗಿ ರಹಸ್ಯ ಬಿಟ್ಟುಕೊಟ್ಟರೇನು?
೧೮೮೩ನೆ ಇಸವಿಯ ಜೂನ್ ತಿಂಗಳ ಒಂದು ಸೆಕೆಯ ದಿನ
ಪರಮಹಂಸರು ದಕ್ಷಿಣೇಶ್ವರದಲ್ಲಿ ಶಿವದೇವಾಲಯಗಳ ಹಂತಗಳ ಮೇಲೆ ಕುಳಿತಿದ್ದಾರೆ. ಇನ್ನೇನು ಸಾಯಂಕಾಲವಾಗುವುದರಲ್ಲಿದೆ. ಮಾಸ್ಟರ್ ಐಸ್ ಮೊದಲಾದುವನ್ನು ತೆಗೆದುಕೊಂಡು ಬಂದು ಪರಮಹಂಸರಿಗೆ ಪ್ರಣಾಮ ಮಾಡಿ ಅವರ ಹತ್ತಿರ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಮಣಿಮಲ್ಲಿಕನ ಮೊಮ್ಮಗಳ ಗಂಡ ಇಲ್ಲಿಗೆ ಬಂದಿದ್ದ. ಆತ ಒಂದು ಪುಸ್ತಕದಲ್ಲಿ 1 ಓದಿದನಂತೆ: ಭಗವಂತನನ್ನು ಬುದ್ಧಿವಂತ, ಸರ್ವಜ್ಞ ಅಂತ ಹೇಳಲಾಗುವುದಿಲ್ಲ; ಅದು ಹಾಗಿದ್ದ ಪಕ್ಷದಲ್ಲಿ ಈ ಜಗತ್ತಿನಲ್ಲೇಕೆ ಇಷ್ಟೊಂದು ದುಃಖ, ಕಷ್ಟ? ಜೀವಿಗಳಿಗೆ ಮೃತ್ಯು ಉಂಟಾಗುತ್ತಿದೆಯಲ್ಲ, ಒಂದು ಕ್ಷಣಕ್ಕೆ ಸಾಯುವ ಹಾಗೆ ಮಾಡದೆ ಚಿತ್ರಹಿಂಸೆಗೆ ಒಳಪಡಿಸಿ ಏಕೆ ಅವನನ್ನು ಸಾಯಿಸಬೇಕು? ಮತ್ತೆ ಗ್ರಂಥಕರ್ತ ಬರೆದಿದ್ದಾನಂತೆ: ತಾನು ಸೃಷ್ಟಿಕರ್ತನಾಗಿದ್ದರೆ, ಇದಕ್ಕಿಂತಲೂ ಮೇಲಾದ ಜಗತ್ತನ್ನು ಸೃಷ್ಟಿಸಿಬಿಡುತ್ತಿದ್ದೆ ಎಂಬುದಾಗಿ.”
ಮಾಸ್ಟರ್ ಬಾಯಿ ತೆರೆದುಕೊಂಡು ಈ ಮಾತುಗಳನ್ನೆಲ್ಲಾ ಕೇಳಿ, ಯಾವ ಟೀಕೆಯನ್ನೂ ಮಾಡದೆ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಭಗವಂತನ ಸಂಬಂಧವಾಗಿ ಏಕೆ ಹೀಗೆ ಎಂಬುದನ್ನು ಅರಿಯಲು ಸಾಧ್ಯವಾಗುವುದೇ? ನಾನೂ ಕೆಲವು ವೇಳೆ ಆತ ಒಳ್ಳೆಯವ ಅಂತ ಭಾವಿಸುತ್ತೇನೆ. ಇನ್ನು ಕೆಲವು ವೇಳೆ ಕೆಟ್ಟವ ಅಂತ ಭಾವಿಸುತ್ತೇನೆ. ಆತ ನಮ್ಮನ್ನು ತನ್ನ ಮಾಯೆಯಿಂದ ಮುಗ್ಧಗೊಳಿಸಿ ಇಟ್ಟಿದ್ದಾನೆ. ಕೆಲವು ವೇಳೆ ನಮ್ಮನ್ನು ಎಚ್ಚರಗೊಳಿಸುತ್ತಾನೆ, ಇನ್ನು ಕೆಲವು ವೇಳೆ ನಮಗೆ ಮರೆವು ತರುತ್ತಾನೆ. ಈ ನಿಮಿಷ ಅಜ್ಞಾನ ಒಮ್ಮೆಗೇ ಹೊರಟುಹೋಗುತ್ತದೆ. ಮರು ನಿಮಿಷ ಮತ್ತೆ ಬಂದು ಮುಚ್ಚಿಕೊಳ್ಳುತ್ತದೆ. ಪಾಚಿ ಮುಚ್ಚಿಕೊಂಡಿರುವ ಕೊಳಕ್ಕೆ ಕಲ್ಲು ಬಿಸಾಡಿದರೆ, ನೀರಿನ ಸ್ವಲ್ಪಭಾಗ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವು ಕ್ಷಣದೊಳಗೇ ಮತ್ತೆ ಪಾಚಿ ನರ್ತಿಸುತ್ತಾ ಬಂದು ಆ ಭಾಗವನ್ನು ಮುಚ್ಚಿಕೊಂಡುಬಿಡುತ್ತದೆ.
“ದೇಹಬುದ್ಧಿ ಇರುವವರೆಗೆ ಸುಖ-ದುಃಖ, ಜನ್ಮ-ಮೃತ್ಯು, ರೋಗ-ಶೋಕ. ಇವೆಲ್ಲಾ ದೇಹಕ್ಕೆ ಸೇರಿದವೇ ವಿನಾ ಆತ್ಮಕ್ಕಲ್ಲ. ಈ ಶರೀರ ಸತ್ತುಹೋದ ಮೇಲೆ ಬಹುಶಃ ಆತ ನಮ್ಮನ್ನು ಉತ್ತಮ ಎಡೆಗೆ ಕರೆದುಕೊಂಡು ಹೋಗಬಹುದು. ಇದು ಪ್ರಸವವೇದನೆಯನ್ನು ಅನುಭವಿಸಿದ ನಂತರ ಮಗುವನ್ನು ಪಡೆದುಕೊಳ್ಳುವ ಹಾಗೆ. ಆತ್ಮಜ್ಞಾನ ದೊರೆತ ನಂತರ ಸುಖ-ದುಃಖ, ಜನ್ಮ-ಮೃತ್ಯು ಇವೆಲ್ಲ ಸ್ವಪ್ನದ ಹಾಗೆ ಕಾಣುತ್ತವೆ.
“ನಮ್ಮ ಕೈಯಲ್ಲಿ ಏನನ್ನು ತಾನೆ ಅರಿಯಲಾದೀತು? ಒಂದು ಸೇರಿನ ಪಾತ್ರೆಗೆ ಹತ್ತು ಸೇರು ಹಾಲು ಹಿಡಿಸುವುದೇ? ಉಪ್ಪಿನ ಗೊಂಬೆಯೇನಾದರೂ ಸಮುದ್ರದ ಆಳ ಕಂಡು ಹಿಡಿಯಲು ಪ್ರಯತ್ನಿಸಿದರೆ ಅದು ಹಿಂದಿರುಗಿ ಬಂದು ಸಮಾಚಾರ ಕೊಡಲಾರದು. ಅದು ನೀರಿನಲ್ಲಿ ಕರಗಿ ಬೆರೆತುಹೋಗಿಬಿಡುತ್ತದೆ.”
ಮುಸ್ಸಂಜೆಯಾಗಿದೆ. ದೇವಾಲಯಗಳಲ್ಲಿ ಸಾಯಂ ಮಂಗಳಾರತಿ ಆರಂಭವಾಯಿತು. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಜಗನ್ಮಾತೆಯ ಧ್ಯಾನ ಮಾಡುತ್ತಿದ್ದಾರೆ. ಅನೇಕ ಮಂದಿ ಭಕ್ತರೂ ನೆಲದ ಮೇಲೆ ಕುಳಿತಿದ್ದಾರೆ. ಮಾಸ್ಟರ್ ಇಂದಿನ ರಾತ್ರಿಯನ್ನು ಇಲ್ಲೇ ಕಳೆಯುತ್ತಾನೆ.
ಸ್ವಲ್ಪ ಹೊತ್ತಾದ ನಂತರ ಪರಮಹಂಸರು ತಮ್ಮ ಕೊಠಡಿಯ ಉತ್ತರ ದಿಕ್ಕಿನ ವರಾಂಡಕ್ಕೆ ಹೋಗಿ ಏಕಾಂತವಾಗಿ ಒಬ್ಬ ಭಕ್ತನೊಡನೆ ಮಾತಾಡಲಾರಂಭಿಸಿದ್ದಾರೆ. ಅವರು ಆತನಿಗೆ ಹೇಳುತ್ತಿದ್ದಾರೆ: “ಬೆಳಗಿನ ಜಾವ ಮತ್ತು ಪ್ರಾತಃಕಾಲ ಧ್ಯಾನ ಮಾಡುವುದು ಒಳ್ಳೆಯದು. ದಿನವೂ ಮುಸ್ಸಂಜೆಯಾದ ಮೇಲೆ ಧ್ಯಾನ ಮಾಡುವುದೂ ಒಳ್ಳೆಯದೆ.” ಸಾಕಾರ ಧ್ಯಾನ, ನಿರಾಕಾರ ಧ್ಯಾನ ಇವನ್ನೆಲ್ಲ ಹೇಗೆ ಮಾಡಬೇಕು ಎಂಬುದಾಗಿ ಆತನಿಗೆ ಉಪದೇಶವೀಯುತ್ತಿದ್ದಾರೆ.
ಸ್ವಲ್ಪ ಹೊತ್ತಾದ ನಂತರ ಪರಮಹಂಸರು ತಮ್ಮ ಕೊಠಡಿಯ ಪಶ್ಚಿಮ ದಿಕ್ಕಿನಲ್ಲಿರುವ ಅರ್ಧಚಂದ್ರಾಕೃತಿಯ ವರಾಂಡದಲ್ಲಿ ಕುಳಿತಿಕೊಂಡಿದ್ದಾರೆ. ಘಂಟೆ ರಾತ್ರಿ ಒಂಬತ್ತು.
ಶ್ರೀರಾಮಕೃಷ್ಣರು: “ನೋಡು ಯಾರಾರು ಇಲ್ಲಿಗೆ ಬರುವರೋ ಅವರ ಸಂದೇಹವೆಲ್ಲಾ ಸಂಪೂರ್ಣವಾಗಿ ನಿವೃತ್ತಿಯಾಗಿಹೋಗಿಬಿಡುತ್ತದೆ. ನಿನಗೇನನಿಸುತ್ತದೆ?”
ಮಾಸ್ಟರ್: “ಅದು ನಿಜ.”
ದಡದಿಂದ ಬಹಳ ದೂರದಲ್ಲಿ ಗಂಗಾನದಿಯ ಮೇಲೆ ಒಂದು ದೋಣಿ ಹೋಗುತ್ತಿತ್ತು. ಅಂಬಿಗ ಅದರಲ್ಲಿ ಹಾಡಲು ಶುರುಮಾಡಿದ. ಆತನ ಧ್ವನಿ ಗಂಗಾನದಿಯ ಮೇಲೆ ತೇಲಿ ಬಂದು ಪರಮಹಂಸರ ಕಿವಿಯನ್ನು ಮುಟ್ಟಿತು. ಅವರು ಒಡನೆ ಭಾವಾವಿಷ್ಟರಾಗಿ ಬಿಟ್ಟರು. ಅವರಿಗೆ ರೋಮಾಂಚನವಾಗಿದೆ. ಅವರು ಮಾಸ್ಟರಿಗೆ ಹೇಳುತ್ತಿದ್ದಾರೆ:ನನ್ನ ಮೈ ಮುಟ್ಟಿನೋಡು.” ಪರಮಹಂಸರಿಗೆ ರೋಮಾಂಚನವಾಗುವುದನ್ನು ನೋಡಿ ಮಾಸ್ಟರ್ ಆಶ್ಚರ್ಯಚಕಿತನಾದ. ಆತ ಭಾವಿಸಿದ: “ಬ್ರಹ್ಮ ಈ ವಿಶ್ವದಲ್ಲಿ, ಆಕಾಶದಲ್ಲಿ ಓತಪ್ರೋತನಾಗಿದ್ದಾನೆ ಎಂಬುದಾಗಿ ಉಪನಿಷತ್ತು ಹೇಳುತ್ತಿದೆ. ಆತನೇ ಶಬ್ದರೂಪದಲ್ಲಿ ಪರಮಹಂಸರ ಕಿವಿಯನ್ನು ಹೊಕ್ಕನೇನು? ಶಬ್ದಬ್ರಹ್ಮ ಎಂಬುದು ಇದೇ ಏನು?” ಸ್ವಲ್ಪ ಹೊತ್ತಾದ ನಂತರ ಪರಮಹಂಸರು ಮತ್ತೆ ಮಾತನಾಡಲು ಶುರುಮಾಡಿದ್ದಾರೆ.
ಶ್ರೀರಾಮಕೃಷ್ಣರು: “ಯಾರಾರು ಇಲ್ಲಿಗೆ ಬರುತ್ತಾರೋ, ಅವರು ಒಳ್ಳೆ ಸಂಸ್ಕಾರಗಳಿಂದ ಜನ್ಮವೆತ್ತಿರಬೇಕು, ಅಲ್ಲವೆ?”
ಮಾಸ್ಟರ್: “ಹೌದು, ನಿಜ.”
ಶ್ರೀರಾಮಕೃಷ್ಣರು: “ಅಧರಸೇನನಿಗೆ ಒಳ್ಳೆಯ ಸಂಸ್ಕಾರವಿರಬೇಕು.”
ಮಾಸ್ಟರ್: “ಹಾಗೆಂದು ಹೇಳಲೇಬೇಕಾಗಿಲ್ಲ.”
ಶ್ರೀರಾಮಕೃಷ್ಣರು: “ಸರಳತೆ ಇದ್ದರೆ, ಭಗವಂತನ ಸಾಕ್ಷಾತ್ಕಾರ ಬೇಗ ದೊರೆತುಬಿಡುತ್ತದೆ. ಎರಡು ಮಾರ್ಗಗಳಿವೆ; ಸನ್ಮಾರ್ಗ, ಅಸನ್ಮಾರ್ಗ. ಸನ್ಮಾರ್ಗದಲ್ಲಿ ಮುಂದುವರಿಯಬೇಕು.”
ಮಾಸ್ಟರ್: “ಅದು ಸರಿ, ದಾರಕ್ಕೆ ಒಂದು ಎಳೆ ಅಂಟಿಕೊಂಡಿದ್ದರೂ ಅದನ್ನು ಸೂಜಿಗೆ ಪೋಣಿಸಲಾಗುವುದಿಲ್ಲ.”
ಶ್ರೀರಾಮಕೃಷ್ಣರು: “ಬಾಯಿಗೆ ಹಾಕಿಕೊಂಡಿರುವ ತುತ್ತಿನಲ್ಲಿ ಕೂದಲು ಏನಾದರೂ ಸಿಕ್ಕಿಕೊಂಡಿತು ಎಂದರೆ, ಇಡೀ ತುತ್ತನ್ನು ಉಗುಳಿಬಿಡಬೇಕಾಗುತ್ತದೆ.”
ಮಾಸ್ಟರ್ : “ಆದರೆ ನೀವು ಹೇಳುತ್ತೀರಿ, ಯಾರಿಗೆ ಭಗವಂತನ ದರ್ಶನ ಆಗಿದೆಯೋ ಆತನನ್ನು ಕೆಟ್ಟ ಸಹವಾಸ ಏನೂ ಮಾಡಲಾರದು. ತಾನೇತಾನಾಗಿ ಉರಿಯುತ್ತಿರುವ ಬೆಂಕಿ ಬಾಳೆಗಿಡವನ್ನೂ ಸುಟ್ಟುಬಿಡಬಲ್ಲುದು.”
೧೪ನೆ ಜುಲೈ ೧೮೮೩, ಆಷಾಢ ಕೃಷ್ಣ ದಶಮಿ, ಶನಿವಾರ
ಪರಮಹಂಸರು ಕಲ್ಕತ್ತದಲ್ಲಿರುವ ಅಧರಸೇನನ ಮನೆಗೆ ಬಂದಿದ್ದಾರೆ. ರಾಖಾಲ, ಮಾಸ್ಟರ್, ಇನ್ನೂ ಕೆಲವು ಮಂದಿ ಭಕ್ತರು ಅವರೊಡನೆ ಅಲ್ಲಿಗೆ ಬಂದಿದ್ದಾರೆ. ಅಧರಸೇನ, ರಾಜನಾರಾಯಣ ಮತ್ತು ಆತನ ಪಾರ್ಟಿಯಿಂದ ಚಂಡೀಕೀರ್ತನೆ ನಡೆಸಲು ವ್ಯವಸ್ಥೆ ಮಾಡಿದ್ದಾನೆ.
ರಾಜನಾರಾಯಣ ದೇವರಮನೆಯಲ್ಲಿ ಹಾಡಲಾರಂಭಿಸಿದ:
ತಾಯ ಶ್ರೀಪಾದದಲಿ ಜೀವವಿರಿಸಿದ ನನಗೆ
ಮೃತ್ಯುಭಯವೇನು?……..
ಪರಹಂಸರು ಈ ಹಾಡನ್ನು ಕೇಳುತ್ತ ಕೇಳುತ್ತ ಇದ್ದಹಾಗೆಯೇ ಭಾವಾವಿಷ್ಟರಾಗಿ ಗಾಯಕರೊಡನೆ ಸೇರಿ ಹಾಡಲಾರಂಭಿಸಿದ್ದಾರೆ. ಆಗಾಗ ಆಶುಕವಿತೆಗಳನ್ನು ಮಾಡಲಾರಂಭಿಸಿದ್ದಾರೆ. ಈಗ ಇದ್ದಕ್ಕಿದ್ದ ಹಾಗೆ ಸಮಾಧಿಸ್ಥರಾಗಿ ನಿಂತುಕೊಂಡಿದ್ದಾರೆ.
ಗಾಯಕ ಮತ್ತೆ ಹಾಡುತ್ತಿದ್ದಾನೆ:
ನಲಿಯುವಳಾರೀ ಭೈರವನಾರೀ
ರಣರಂಗದೊಳೀ ಬೆಳಕನು ಬೀರಿ?
ಪರಮಹಂಸರು ಗಾಢಸಮಾಧಿಸ್ಥರಾಗಿಬಿಟ್ಟಿದ್ದಾರೆ.
೨೧ನೆ ಜುಲೈ ೧೮೮೩, ಆಷಾಢ ಕೃಷ್ಣ ಪಾಡ್ಯಮಿ, ಶನಿವಾರ
ಘಂಟೆ ಅಪರಾಹ್ನ ನಾಲ್ಕು. ಪರಮಹಂಸರು ರಾಮಲಾಲ ಮತ್ತು ಇನ್ನೂ ಒಬ್ಬಿಬ್ಬರು ಭಕ್ತರೊಡನೆ ದಕ್ಷಿಣೇಶ್ವರದಿಂದ ಕಲ್ಕತ್ತೆಗೆ ಗಾಡಿಯಲ್ಲಿ ಕುಳಿತು ಹೊರಟಿದ್ದಾರೆ. ಅವರು ದೇವಾಲಯದ ಹೆಬ್ಬಾಗಿಲಿಗೆ ಬಂದಾಗ ಎದುರುಗಡೆಯಿಂದ ಮಾಸ್ಟರ್ ಕೈಯಲ್ಲಿ ನಾಲ್ಕು ಮಾವಿನಹಣ್ಣು ಹಿಡಿದುಕೊಂಡು ಬರುತ್ತಿರುವುದು ಕಂಡುಬಂತು. ಗಾಡಿ ನಿಂತುಕೊಂಡಿತು. ಮಾಸ್ಟರ್ ಪರಮಹಂಸರಿಗೆ ಪ್ರಣಾಮ ಮಾಡುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ ನಗುತ್ತ: “ಬಾ ನಮ್ಮೊಡನೆ. ನಾವು ಅಧರಸೇನನ ಮನೆಗೆ ಹೋಗುತ್ತಿದ್ದೇವೆ.”
ಮಾಸ್ಟರ್ ಆನಂದದಿಂದ ಗಾಡಿಯನ್ನು ಹತ್ತಿದ. ಮಾಸ್ಟರ್ ಆಂಗ್ಲ ವಿದ್ಯಾಭ್ಯಾಸ ಪಡೆದಿದ್ದುದರಿಂದ ಆತನಿಗೆ ಪೂರ್ವಸಂಸ್ಕಾರದಲ್ಲಿ ನಂಬಿಕೆ ಇರಲಿಲ್ಲ. ಆದರೆ ಈಗ ಕೆಲವು ದಿನಗಳ ಹಿಂದೆ ಒಪ್ಪಿಕೊಂಡಿದ್ದ, ಅಧರಸೇನ ತನ್ನ ಪೂರ್ವಸಂಸ್ಕಾರದ ದೆಸೆಯಿಂದ ಪರಮಹಂಸರನ್ನು ಪ್ರೀತಿಸುತ್ತಿದ್ದಾನೆ ಎಂಬುದಾಗಿ. ಆತ ಮನೆಗೆ ಹಿಂತಿರುಗಿ ಹೋಗಿ ಅದರ ಸಂಬಂಧವಾಗಿ ಬಹಳವಾಗಿ ಯೋಚಿಸಿದ ನಂತರ ಇನ್ನೂ ತನಗೆ ಅದರಲ್ಲಿ ಪೂರ್ಣ ನಂಬಿಕೆ ಬಾರದಿರುವುದಾಗಿ ಆತನಿಗೆ ತೋರಿಬಂತು. ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲೋಸುಗ ಇಂದು ದಕ್ಷಿಣೇಶ್ವರಕ್ಕೆ ಬರುತ್ತಾ ಇದ್ದ.
ಶ್ರೀರಾಮಕೃಷ್ಣರು: “ಒಳ್ಳೆಯದು, ಅಧರನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು?”
ಮಾಸ್ಟರ್: “ಆತನಿಗೆ ಭಗವಂತನಲ್ಲಿ ಒಳ್ಳೆ ಅನುರಾಗವಿದೆ.”
ಶ್ರೀರಾಮಕೃಷ್ಣರು: “ಅಧರನೂ ನಿನ್ನನ್ನು ಬಹಳವಾಗಿ ಹೊಗಳುತ್ತಾನೆ.”
ಮಾಸ್ಟರ್ ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಪೂರ್ವಸಂಸ್ಕಾರದ ಸಂಬಂಧವಾಗಿ ಮಾತು ಎತ್ತಿದ.
ಮಾಸ್ಟರ್: “ನನಗೆ ಪೂರ್ವಜನ್ಮ, ಸಂಸ್ಕಾರ ಇವುಗಳ ಮೇಲೆ ಅಂಥ ನಿಜವಾದ ಶ್ರದ್ಧೆಯೇನಿಲ್ಲ. ಇದು ನನ್ನ ಭಕ್ತಿಗೆ ಏನಾದರೂ ಹಾನಿಯನ್ನು ತರುವುದೇ?”
ಶ್ರೀರಾಮಕೃಷ್ಣರು: “ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ಸಾಧ್ಯ ಎಂಬ ಶ್ರದ್ಧೆಯೊಂದಿದ್ದರೆ ಬೇಕಾದಷ್ಟು. ನಿನ್ನ ಭಾವನೆಗಳೇ ಸತ್ಯವಾದುವು, ಉಳಿದವರದೆಲ್ಲಾ ಅಸತ್ಯವಾದುವು ಎಂಬ ಭಾವನೆ ನಿನ್ನ ಮನಸ್ಸಿನ ಹೊಸ್ತಿಲನ್ನೇ ಹತ್ತದಿರಲಿ. ಬಳಿಕ ಆತನೇ ಎಲ್ಲವನ್ನು ತಿಳಿಸಿಕೊಡುತ್ತಾನೆ.
“ಭಗವಂತನ ಕೆಲಸಕಾರ್ಯಗಳನ್ನು ಮನುಷ್ಯ ಅರಿಯುವ ಬಗೆ ಹೇಗೆ? ಅವಕ್ಕೆ ಮಿತಿ ಎಂಬುದೇ ಇಲ್ಲ. ಆದ್ದರಿಂದ ಇದನ್ನು ನಾನು ಅರಿತುಕೊಳ್ಳಲು ಸ್ವಲ್ಪವೂ ಪ್ರಯತ್ನ ಮಾಡುವುದಿಲ್ಲ. ಆತನ ಸೃಷ್ಟಿಯಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ಕೇಳಿ, ಅದನ್ನು ಹೃದಯದಲ್ಲಿ ಚಿರಮುದ್ರಿತವನ್ನಾಗಿ ಮಾಡಿಕೊಂಡಿದ್ದೇನೆ. ಆದ್ದರಿಂದ ನಾನು ಆತನ ಸೃಷ್ಟಿಯ ಸಂಬಂಧವಾಗಿ ಒಂದು ಸ್ವಲ್ಪವೂ ಚಿಂತಿಸದೆ ಆತನ ಸಂಬಂಧವಾಗಿಯೇ ಚಿಂತಿಸುತ್ತಿದ್ದೇನೆ. ಒಮ್ಮೆ ಹನುಮಂತನಿಗೆ ಯಾರೋ ಪ್ರಶ್ನೆ ಹಾಕಿದರು: ‘ಈ ದಿನ ಯಾವ ತಿಥಿ?’ ಎಂಬುದಾಗಿ. ಆತ ಹೇಳಿದ: “ನನಗೆ ತಿಥಿ, ವಾರ, ನಕ್ಷತ್ರ ಯಾವುದೂಗೊತ್ತಿಲ್ಲ; ನಾನು ಕೇವಲ ರಾಮಚಿಂತನೆಯನ್ನು ಮಾತ್ರ ಮಾಡುತ್ತಿದ್ದೇನೆ.’
“ಭಗವಂತನ ಕಾರ್ಯ ಏನು ಅಂತ ಒಂದು ಕಿಂಚಿತ್ತಾದರೂ ಅರಿಯಲು ಸಾಧ್ಯವಾಗುವುದೇ? ಆತ ಬಹಳ ಹತ್ತಿರದಲ್ಲಿದ್ದಾನೆ; ಆದರೂ ಆತನನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ಕೃಷ್ಣ ಭಗವಂತ ಎಂಬುದು ಬಲರಾಮನ ಅರಿವಿಗೆ ಬರಲೇ ಇಲ್ಲ.”
ಮಾಸ್ಟರ್: “ಅದು ನಿಜ.”
ಶ್ರೀರಾಮಕೃಷ್ಣರು: “ಭಗವಂತ ತನ್ನ ಮಾಯೆಯಿಂದ ಎಲ್ಲವನ್ನೂ ಮುಸುಕಿ ಇಟ್ಟಿದ್ದಾನೆ. ಯಾವುದನ್ನು ಅರಿಯಲೂ ಬಿಟ್ಟುಕೊಡುವುದಿಲ್ಲ. ಕಾಮಕಾಂಚನವೇ ಮಾಯೆ. ಯಾರು ಭಗವಂತನನ್ನು ನೋಡಬೇಕೆಂದು ಈ ಮಾಯೆಯ ಮುಸುಕನ್ನು ಹರಿದು ಒಂದು ಕಡೆಗೆ ಬಿಸಾಡುತ್ತಾನೋ, ಅವನು ಆತನನ್ನು ನೋಡಬಲ್ಲ. ಒಮ್ಮೆ ನಾನು ಒಬ್ಬನಿಗೆ ಭಗವಂತನ ಸಂಬಂಧವಾಗಿ ತಿಳಿಸುತ್ತ ತಿಳಿಸುತ್ತ ಮುಂದುವರಿಯುತ್ತಿದ್ದಾಗ, ಭಗವಂತ ಇದ್ದಕ್ಕಿದ್ದ ಹಾಗೆ ಆ ದೇಶದ (ಕಾಮಾರಪುಕುರದ) ಒಂದು ಕೆರೆಯನ್ನು ನನಗೆ ತೋರಿಸಿದ. ಒಬ್ಬ ಮನುಷ್ಯ ಅದರಲ್ಲಿದ್ದ ಪಾಚಿಯನ್ನು ಒಂದು ಕಡೆಗೆ ಸರಿಸಿ ನೀರು ಕುಡಿದುದನ್ನು ಕಂಡೆ. ನೀರು ಸ್ಫಟಿಕದಂತೆ ಇತ್ತು. ಭಗವಂತ ನನಗೆ ತೋರಿಸಿದ, ಸಚ್ಚಿದಾನಂದವೆಂಬ ನೀರು ಮಾಯೆಯೆಂಬ ಪಾಚಿಯಿಂದ ಮುಚ್ಚಲ್ಪಟ್ಟಿದೆ; ಯಾರು ಅದನ್ನು ಒಂದು ಕಡೆಗೆ ಸರಿಸಿ ಬಿಡುವರೋ, ಅವರಿಗೆ ನೀರು ಸಿಕ್ಕುತ್ತದೆ.
“ನಿನಗೊಂದು ರಹಸ್ಯ ಅನುಭವವನ್ನು ತಿಳಿಸುತ್ತೇನೆ. ಒಮ್ಮೆ ನಾನು ಸರ್ವೆಮರದ ತೋಪಿಗೆ ಹೋಗಿ ಅಲ್ಲಿ ಕುಳಿತಿದ್ದಾಗ ರಹಸ್ಯ ಬಾಗಿಲುಳ್ಳ ಒಂದು ಕೊಠಡಿ ಕಾಣಿಸಿಕೊಂಡಿತು. ಅದರೊಳಗೆ ಏನಿದೆ ಎಂಬುದು ನನಗೆ ಕಾಣಬರುತ್ತಿರಲಿಲ್ಲ. ಒಂದು ಉಗುರುಗತ್ತಿ ತೆಗೆದುಕೊಂಡು ಬಾಗಿಲಿನಲ್ಲಿ ಒಂದು ರಂಧ್ರ ಕೊರೆಯಲು ಪ್ರಯತ್ನಿಸಿದೆ. ಆದರೆ ಜಯಶೀಲನಾಗಲಿಲ್ಲ. ನಾನು ಕೊರೆಯುತ್ತ ಕೊರೆಯುತ್ತ ಹೋದರೂ ಅದು ಮುಚ್ಚಿಕೊಳ್ಳುತ್ತ ಮುಚ್ಚಿಕೊಳ್ಳುತ್ತ ಬರುತ್ತಲೂ ಇತ್ತು. ಇದ್ದಕ್ಕಿದ್ದ ಹಾಗೆ ಒಂದು ದೊಡ್ಡ ರಂಧ್ರ ಬಿದ್ದುಬಿಟ್ಟಿತು.”
ಈ ಮಾತುಗಳನ್ನು ಹೇಳಿ ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಇದ್ದುಬಿಟ್ಟರು. ಈಗ ಮತ್ತೆ ಹೇಳುತ್ತಿದ್ದಾರೆ : “ಇವೆಲ್ಲಾ ಬಹಳ ದೊಡ್ಡ ದೊಡ್ಡ ವಿಷಯಗಳು. ನೋಡು, ಯಾರೋ ನನ್ನ ಗಂಟಲನ್ನು ಹಿಡಿದು ಅದುಮಿದಂತೆ ಇದೆ…. ಭಗವಂತ ಜನನೇಂದ್ರಿಯದಲ್ಲಿ ವಾಸವಾಗಿರುವುದನ್ನೂ ನಾನು ನನ್ನ ಕಣ್ಣಿನಿಂದಲೇ ನೋಡಿದ್ದೇನೆ. ಒಮ್ಮೆ ನಾನು ಗಂಡು ಹೆಣ್ಣು ನಾಯಿಗಳ ಮೈಥುನ ಸಮಯದಲ್ಲಿ ಆತನನ್ನು ನೋಡಿದೆ.
“ಭಗವಂತನ ಚೇತನದಿಂದ ಈ ಜಗತ್ತು ಚೇತನಮಯವಾಗಿದೆ. ಒಮ್ಮೊಮ್ಮೆ ಕಾಣಬರುತ್ತದೆ, ಚಿಕ್ಕಪುಟ್ಟ ಮೀನುಗಳಲ್ಲೂ ಅದೇ ಚೇತನ ಕಿಲಕಿಲ ಅನ್ನುತ್ತಿರುವುದು.”
ಪರಮಹಂಸರ ಗಾಡಿ ಶೋಭಾಬಜಾರಿನ ಚೌಕದ ಹತ್ತಿರಕ್ಕೆ ಬಂದಿತು. ಅವರು ಮತ್ತೆ ತಮ್ಮ ಮಾತು ಮುಂದುವರಿಸುತ್ತ ಹೇಳುತ್ತಿದ್ದಾರೆ: “ಒಮ್ಮೊಮ್ಮೆ ನನಗೆ ಕಾಣಬರುತ್ತದೆ, ಯಾವ ರೀತಿಯಾಗಿ ಮಳೆಗಾಲದಲ್ಲಿ ಭೂಮಿ ಜಲಮಯವಾಗಿ ಕಾಣುವುದೋ ಅದೇ ರೀತಿಯಾಗಿ ಜಗತ್ತು ಚೈತನ್ಯಮಯವಾಗಿರುವಂತೆ.
“ಇಷ್ಟೊಂದು ದರ್ಶನಗಳಾಗುತ್ತವೆ ನನಗೆ. ಆದರೂ ನನಗೆ ಅಹಂಕಾರ ಉಂಟಾಗುತ್ತಿಲ್ಲ.”
ಮಾಸ್ಟರ್: “ನಿಮಗೆ ಅಹಂಕಾರ!”
ಶ್ರೀರಾಮಕೃಷ್ಣರು: “ನನ್ನ ಮಾತಿನಲ್ಲಿ ನಂಬಿಕೆಯಿಡು, ನನ್ನಲ್ಲಿ ಒಂದು ಕಿಂಚಿತ್ತಾದರೂ ಅಹಂಕಾರವಿಲ್ಲ.”
ಮಾಸ್ಟರ್: “ಗ್ರೀಸ್ ದೇಶದಲ್ಲಿ ಸಾಕ್ರೆಟೀಸ್ ಎಂಬ ಹೆಸರಿನ ಒಬ್ಬ ಮನುಷ್ಯನಿದ್ದ. ದೈವವಾಣಿಯಾಯಿತು, ಮನುಷ್ಯರಲ್ಲೆಲ್ಲಾ ಆತನೊಬ್ಬನೇ ಜ್ಞಾನಿ ಎಂಬುದಾಗಿ. ಇದನ್ನು ಕೇಳಿ ಸಾಕ್ರೆಟೀಸ್ ಆಶ್ಚರ್ಯಚಕಿತನಾದ. ಆತ ಏಕಾಂತದಲ್ಲಿ ಬಹಳಕಾಲ ಧ್ಯಾನದಲ್ಲಿ ತೊಡಗಿ, ದೈವವಾಣಿ ಹೇಳಿದುದರ ಇಂಗಿತವೇನೆಂಬುದನ್ನು ಅರಿತುಕೊಂಡ. ಬಳಿಕ ಆತ ನನ್ನ ಸ್ನೇಹಿತರಿಗೆ ತಿಳಿಸಿದ: ‘ಕೇವಲ ನಾನೊಬ್ಬನೇ ಅರಿತುಕೊಂಡಿದ್ದೇನೆ “ನನಗೇನೂ ಗೊತ್ತಿಲ್ಲ” ಎಂಬುದನ್ನು. ಆದರೆ ಪ್ರತಿಯೊಬ್ಬನೂ ಭಾವಿಸುತ್ತಾನೆ, ತಾನು ಬುದ್ಧಿವಂತ ಎಂಬುದಾಗಿ. ವಸ್ತುತಃ ಎಲ್ಲರೂ ಅಜ್ಞಾನಿಗಳೇ.”
ಶ್ರೀರಾಮಕೃಷ್ಣರು: “ಒಮ್ಮೊಮ್ಮೆ ನನಗೆ ಭಾವನೆ ಬರುತ್ತದೆ: ‘ಇಷ್ಟೊಂದು ಜನ ಇಲ್ಲಿಗೆ ಬರುವಂತೆ ಪ್ರೇರೇಪಣೆಯಾಗಲು ನನಗೇನು ಗೊತ್ತಿದೆ?’ ವೈಷ್ಣವಚರಣ ಒಳ್ಳೆ ದೊಡ್ಡ ಪಂಡಿತ. ಆತ ಹೇಳುತ್ತಿದ್ದ: ‘ನೀವು ಆಡುವ ಮಾತುಗಳನ್ನೆಲ್ಲ ಶಾಸ್ತ್ರಗಳಲ್ಲಿ ಕಾಣಬಹುದು. ಆದರೆ ನಾನೇಕೆ ಇಲ್ಲಿಗೆ ಬರುತ್ತಾ ಇದ್ದೇನೆ ಗೊತ್ತೆ? ಅದನ್ನು ನಿಮ್ಮ ಬಾಯಿಂದ ಕೇಳಲು ಬರುತ್ತಿದ್ದೇನೆ.”’
ಮಾಸ್ಟರ್: “ನೀವು ಆಡುವ ಮಾತುಗಳೆಲ್ಲಾ ಶಾಸ್ತ್ರಗಳಲ್ಲಿ ಹೊಂದಿಕೆಯಾಗುತ್ತಿವೆ. ಅಂದು ಪಾನಿಹಾಟಿಯಲ್ಲಿ ನವದ್ವೀಪ ಗೋಸ್ವಾಮಿಯೂ ಹಾಗೆಯೇ ಹೇಳಿದ. ನೀವು ಅಂದು ಹೇಳಿದಿರಿ: ‘ಗೀತೆ’ ಎಂಬ ಪದವನ್ನು ಒಂದು ಹತ್ತು ಸಲ ಆವೃತ್ತಿ ಮಾಡಿದರೆ ಅದು ‘ತ್ಯಾಗಿ’ ಎಂಬುದಾಗಿ ಕೇಳಿಬರುತ್ತದೆ ಅಂತ. ಅದನ್ನು ಆತ ವ್ಯಾಕರಣದ ದೃಷ್ಟಿಯಿಂದ ಸಮರ್ಥಿಸಿದ.”
ಶ್ರೀರಾಮಕೃಷ್ಣರು: “ನನ್ನನ್ನು ಹೋಲುವವರು ಬೇರೆ ಯಾರಾದರೂ ಇದ್ದಾರೇನು- ಸಾಧುವಾಗಲೀ, ಪಂಡಿತನಾಗಲೀ?”
ಮಾಸ್ಟರ್: “ಭಗವಂತ ತಮ್ಮನ್ನು ತನ್ನ ಸ್ವಂತ ಕೈಗಳಿಂದಲೇ ರೂಪಿಸಿದ್ದಾನೆ. ಉಳಿದವರನ್ನೆಲ್ಲ ಯಂತ್ರಗಳಿಂದ ನಿರ್ಮಾಣಮಾಡಿದ್ದಾನೆ-ಸೃಷ್ಟಿಯ ನಿಯಮಾನುಸಾರ ಸೃಷ್ಟಿಸಿದ್ದಾನೆ.”
ಶ್ರೀರಾಮಕೃಷ್ಣರು ನಗುತ್ತ ರಾಮಲಾಲನೇ ಮೊದಲಾದವರಿಗೆ: “ನೋಡಿ, ಇವನೇನು ಹೇಳುತ್ತಾನೆ!”
ಪರಮಹಂಸರು ಬಹಳ ಹೊತ್ತು ನಕ್ಕು ಕೊನೆಯಲ್ಲಿ ಹೇಳುತ್ತಿದ್ದಾರೆ: “ಸತ್ಯವಾಗಿ ಹೇಳುತ್ತೇನೆ, ನನ್ನಲ್ಲಿ ಸ್ವಲ್ಪವೂ ಅಹಂಕಾರವಿಲ್ಲ.”
ಮಾಸ್ಟರ್ : “ಜ್ಞಾನ ಒಂದು ವಿಧದಲ್ಲಿ ನಮಗೆ ಉಪಕಾರ ಮಾಡುತ್ತದೆ; ಅದು ನಮಗೇನೂ ಗೊತ್ತಿಲ್ಲ, ನಾವು ಏನೂ ಅಲ್ಲ ಎಂಬ ಬೋಧೆಯನ್ನು ತರುತ್ತದೆ.”
ಶ್ರೀರಾಮಕೃಷ್ಣರು: “ಬಹಳ ಒಳ್ಳೆಯದು, ನಾನು ಏನೂ ಅಲ್ಲ. ನಾನು ಯಾರೂ ಅಲ್ಲ. ನಿನಗೆ ಆಂಗ್ಲ ಜ್ಯೋತಿಶ್ಶಾಸ್ತ್ರದಲ್ಲಿ ನಂಬಿಕೆ ಇದೆಯೇ?”
ಮಾಸ್ಟರ್: “ಅದರ ನಿಯಮಗಳನ್ನು ಅನುಸರಿಸಿ, ಹೊಸ ಹೊಸ ವಸ್ತುಗಳನ್ನು ಕಂಡುಹಿಡಿಯಬಹುದು. ಯುರೇನಸ್ಸಿನ ನಿಯಮವಿರುದ್ಧವಾದ ಚಲನವಲನ ನೋಡಿ ಜ್ಯೋತಿಶ್ಶಾಸ್ತ್ರಜ್ಞರು ತಮ್ಮ ದುರ್ಬೀನಿನಿಂದ ಅದರ ಕಾರಣಕ್ಕಾಗಿ ಹುಡುಕುತ್ತಿರಲಾಗಿ ಅವರಿಗೆ ಒಂದು ಹೊಸ ಗ್ರಹ ‘ನೆಪ್ಚೂನ್’ ಎಂಬುದು ಕಾಣಿಸಿಕೊಂಡಿತು. ಅವರು ಗ್ರಹಣಗಳು ಎಂದು, ಯಾವಾಗ ಎಂಬುದನ್ನೂ ಹೇಳಬಲ್ಲರು.”
ಶ್ರೀರಾಮಕೃಷ್ಣರು: “ಹೌದು, ಅದು ಸಾಧ್ಯ.”
ಗಾಡಿ ಮುಂದುವರಿಯುತ್ತಿದೆ. ಈಗ ಅಧರಸೇನನ ಮನೆಯ ಹತ್ತಿರಕ್ಕೆ ಬರುವುದರಲ್ಲಿದೆ. ಶ್ರೀರಾಮಕೃಷ್ಣರು ಮಾಸ್ಟರಿಗೆ ಹೇಳಿದರು: “ಸತ್ಯಾರ್ಥಿಯಾಗು. ನಿನಗೆ ನಿಜವಾಗಿಯೂ ಭಗವಂತನ ಸಾಕ್ಷಾತ್ಕಾರ ದೊರಕುತ್ತದೆ.”
ಮಾಸ್ಟರ್: “ಅಂದು ನೀವು ನವದ್ವೀಪ ಗೋಸ್ವಾಮಿಗೆ ಹೇಳಿದಿರಿ: ‘ಹೇ ಭಗವಂತ, ನನಗೆ ನೀನೊಬ್ಬನೇ ಬೇಕು. ದಯವಿಟ್ಟು ನೀನು ನಿನ್ನ ಭುವನಮೋಹಿನಿ ಮಾಯೆಯಿಂದ ನನ್ನನ್ನು ಮುಗ್ಧನನ್ನಾಗಿ ಮಾಡಬೇಡ. ನನಗೆ ನಿನ್ನ ಸಾಕ್ಷಾತ್ಕಾರ ಬೇಕು’ ಎಂಬುದಾಗಿ ಪ್ರಾರ್ಥನೆ ಮಾಡುವಂತೆ.”
ಶ್ರೀರಾಮಕೃಷ್ಣರು: “ಹೌದು, ಹಾಗೆಂದುಹೃತ್ಪೂರ್ವಕವಾಗಿ ಪ್ರಾರ್ಥನೆಮಾಡಬೇಕು.”
ಪರಮಹಂಸರು ಅಧರಸೇನನ ಮನೆಯನ್ನು ಮುಟ್ಟಿ, ಆತನ ಬೈಠಕ್ಖಾನೆಯಲ್ಲಿ ಕುಳಿತಿದ್ದಾರೆ. ರಾಮಲಾಲ, ಅಧರಸೇನ, ಮಾಸ್ಟರ್, ಇನ್ನೂ ಕೆಲವು ಮಂದಿ ಭಕ್ತರು ಅವರ ಹತ್ತಿರ ಕುಳಿತಿದ್ದಾರೆ. ರಾಖಾಲ ಕಲ್ಕತ್ತದಲ್ಲಿ ತನ್ನ ತಂದೆಯೊಡನೆ ಇದ್ದಾನೆ.
ಶ್ರೀರಾಮಕೃಷ್ಣರು ಅಧರಸೇನನಿಗೆ: “ನಾನು ಇಲ್ಲಿಗೆ ಬರುವುದನ್ನು ರಾಖಾಲನಿಗೆ ನೀನು ತಿಳಿಸಿಲ್ಲವೇನು?”
ಅಧರಸೇನ: “ಸಮಾಚಾರ ಕಳಿಸಿದ್ದೇನೆ.”
ಪರಮಹಂಸರು ರಾಖಾಲನನ್ನು ನೋಡಲು ಕಾತರರಾಗಿರುವುದನ್ನು ನೋಡಿ ಅಧರಸೇನ ಆತನನ್ನು ಕರೆದುಕೊಂಡು ಬರಲು ಒಡನೇ ತನ್ನ ಗಾಡಿಯನ್ನು ಕಳಿಸಿದ. ಅಧರಸೇನನ ಮನಸ್ಸು ಪರಮಹಂಸರನ್ನು ಇಂದು ನೋಡಬೇಕೆಂದು ಬಹಳವಾಗಿ ಕಾತರಪಡುತ್ತಿತ್ತು. ಅವರು ಇಂದು ಇಲ್ಲಿಗೆ ಬರುವುದು ಆತನಿಗೆ ನಿರ್ದಿಷ್ಟವಾಗಿ ಗೊತ್ತಿರಲಿಲ್ಲ.
ಅಧರಸೇನ: “ನಮ್ಮ ಮನೆಗೆ ಬಂದು ನೀವು ಬಹಳ ದಿವಸವಾಯಿತು. ನೀವು ಇಂದು ಇಲ್ಲಿಗೆ ಬರಲಿ ಎಂದು ಭಗವಂತನಿಗೆ ಪ್ರಾರ್ಥನೆಮಾಡಿದೆ.ಆಸಂದರ್ಭದಲ್ಲಿ ಅತ್ತೂಬಿಟ್ಟೆ.”
ಪರಮಹಂಸರು ಸಂತುಷ್ಟರಾಗಿ ನಗುತ್ತ ಹೇಳುತ್ತಿದ್ದಾರೆ: “ಹಾಗೇನು!”
ಸಾಯಂಕಾಲವಾಗಿಬಿಟ್ಟಿತು. ಬೈಠಕ್ಖಾನೆಯಲ್ಲಿ ದೀಪ ಹಚ್ಚಿದ್ದಾರೆ. ಪರಮಹಂಸರು ಎರಡುಕೈಗಳಿಂದಲೂ ಜಗನ್ಮಾತೆಗೆ ಕೈಮುಗಿದು, ನಿಶ್ಶಬ್ದರಾಗಿ ಮೂಲಮಂತ್ರ ಜಪಿಸುತ್ತಿದ್ದಾರೆ. ಬಳಿಕ ಮಧುರ ಕಂಠದಿಂದ ಭಗವನ್ನಾಮ ಜಪ ಮಾಡಲಾರಂಭಿಸಿದ್ದಾರೆ: “ಗೋವಿಂದ! ಗೋವಿಂದ! ಸಚ್ಚಿದಾನಂದ! ಹರಿ! ಹರಿ!” ಅವರ ಬಾಯಿಂದ ಪ್ರತಿಯೊಂದು ಪದವೂ ಅಮೃತವನ್ನೇ ಭಕ್ತರ ಕಿವಿಯ ಮೇಲೆ ವರ್ಷಿಸತೊಡಗಿದೆ.
ರಾಮಲಾಲ ಭಗವತಿ ಕಾಳಿಯ ಸಂಬಂಧವಾಗಿ ಹಾಡಲಾರಂಭಿಸಿದ:
ಓ ಶರ್ವಪ್ರಿಯೆ ತಾಯಿ, ಸಕಲ ಭಯಹಾರಿಣಿಯೆ
ನಿನ್ನ ನಾಮವ ನಾನು ಕೇಳಿರುವೆನು,
ಅದರಿಂದ ನಿನ್ನಡಿಗೆ ಶರಣಾದೆನು.
ನಿನ್ನ ಬಸರಿಂದೊಗೆದು ಬಂದುದೀ ಬ್ರಹ್ಮಾಂಡ.
ಅದರ ಸಚರಾಚರವ ನೀ ತುಂಬಿದೆ.
ರಾಧೆಯೋ ಕಾಳಿಯೋ ನೀನು ಯಾರೆಂಬುದನು-
ನಾವು ಅಲ್ಪರು ತಾಯಿ-ಹೇಳಲಹುದೆ?
ನೀನು ಮೂಲಾಧಾರ ಪದ್ಮದಲಿ ನೆಲಸಿರುವೆ
ಕುಲಕುಂಡಲಿನಿ ಶಕ್ತಿರೂಪಿಯಾಗಿ,
ಮತ್ತೆ ಸ್ವಾಧಿಷ್ಠಾನವೆಂಬಲ್ಲಿಯೂ ಇರುವೆ
ನಾಲ್ಕು ದಲಗಳ ಕಮಲವರಳಿದಲ್ಲಿ.
ಮತ್ತೆ ಅದರಿಂದಾಚೆ ವಜ್ರಾಸನೇ ಎಂಬ
ಷಡ್ದಲದ ಕಮಲದಲಿ ಮನೆಯ ಮಾಡಿ
ಊರ್ಧ್ವಗಾಮಿನಿಯಾಗಿ ಮಣಿಪುರ ನಾಭಿಯಲಿ
ದಶದಲದ ನೀಲವರ್ಣದ ಪದ್ಮವರಳಿದೆಡೆಗೆ
ಸುಷುಮ್ನಪಥದಲಿ ಏರಿಬರುವೆ
ಕಮಲವನ ಸಂಚಾರಿ ದಿವ್ಯ ಕಮಲೆ.
ಇನ್ನು ಅದರಿಂದಾಚೆ, ಮೇಲೆ ಮೇಲೆರಿದರೆ
ಅಮೃತಕಾಸರವಲ್ಲಿದೆ ಹೃದಯದಲ್ಲಿ,
ಅಲ್ಲಿ ದ್ವಾದಶದಲದ ರಕ್ತವರ್ಣದ ಪದ್ಮ-
ವರಳಿ ಕೋರೈಸುವುದು ನಿನ್ನ ಪದ ಸ್ಪರ್ಶಿಸಲು ಬೆಳಕ ಚೆಲ್ಲಿ!
ಅದರಾಚೆ ಕಂಠಸ್ಥಲದಿ ಶೋಭಿಸಿದೆ
ಧೂಮ್ರವರ್ಣದ ಮತ್ತೆ ಷೋಡಷದಲದ ಪದ್ಮವೊಂದು,
ಅದರ ದಲದಲಗಳಲ್ಲಿ ಆಕಾಶವಡಗಿಹುದು,
ಅದನು ದಾಟಲು ಎಲ್ಲ ಆಕಾಶವಹುದು!
ಮತ್ತೆ ಅದರಿಂದಾಚೆ ಲಲಾಟದೇಶದಲಿ
ಭ್ರೂಮಧ್ಯದೊಳಗೆರಡು ಕಮಲವಿಹವು;
ಅಲ್ಲಿ ಮಾನವಬುದ್ಧಿ ಸೆರೆಯಾಗಿ ಲೋಕವನು
ಪ್ರೇಕ್ಷಕನ ರೀತಿಯಲಿ ನೋಡುತಿಹುದು.
ಎಲ್ಲಕೂ ಮಿಗಿಲಾಗಿ, ಬಹು ಮನೋಹರವಾಗಿ
ಸಹಸ್ರದಲ ಕಮಲವಿದೆ ಮಸ್ತಕದಲಿ,
ಅಲ್ಲಿ ಶ್ರೀಮಹದೇವ ಧ್ಯಾನಸ್ಥನಾಗಿರಲು
ನೀನು ಅವನೊಡನಿರುವೆ ಪೀಠದಲ್ಲಿ.
ನೀನು ಆದ್ಯಾಶಕ್ತಿ, ನೀ ಜಿತೇಂದ್ರಿಯಶಕ್ತಿ;
ಯೋಗಿಜನ ಹೃದಯದಲಿ ನೀ ಪಾರ್ವತಿ.
ಓ ದಿವ್ಯ ಶಿವಶಕ್ತಿ ಪಾರುಗಾಣಿಸು ನನ್ನ
ಈ ತೃಷ್ಣೆಯೊಳಗಿಂದ ಮೇಲಕೆತ್ತಿ.
ಮತ್ತೆ ಭವಸಾಗರಕ್ಕೆ ಬೀಳದಂದದಿ ನನಗೆ
ವರವ ಕರುಣಿಸು ತಾಯೆ ವಿಶ್ವಭೂತೆ.
ನಿನ್ನ ನಿಜರೂಪವನು ಯಾರು ಬಲ್ಲರು ತಾಯೆ?
ಪಂಚಭೂತಾಧಾರೆ ಲೋಕಮಾತೆ.
ಸಕಲ ತತ್ತ್ವಾತೀತೆಯಾದರೂ ಭಕ್ತರಿಗೆ
ಹಲವು ರೂಪದೊಳಿಂತು ತೋರುತಿರುವೆ
ಪಂಚ ಪಂಚದಿ ಲಯವನಾಗಿಸಿದ ಸಾಧಕಗೆ
ನೀ ನಿರಾಕಾರೆಯೊಲು ಗೋಚರಿಸುವೆ.
ರಾಮಲಾಲ ಈ ಚರಣ ಹಾಡಿದಾಗ:
ಅದರಾಚೆ ಕಂಠಸ್ಥಲದಿ ಶೋಭಿಸಿದೆ
ಧೂಮ್ರವರ್ಣದ ಮತ್ತೆ ಷೋಡಷದಲದ ಪದ್ಮವೊಂದು.
ಅದರ ದಲದಲಗಳಲಿ ಆಕಾಶವಡಗಿಹುದು,
ಅದನು ದಾಟಲು ಎಲ್ಲ ಆಕಾಶವಹುದು!
ಪರಮಹಂಸರು ಮಾಸ್ಟರಿಗೆ ಹೇಳಿದರು: “ಕೇಳಿಲ್ಲಿ, ನಿರಾಕಾರ ಸಚ್ಚಿದಾನಂದ ದರ್ಶನ ಎಂಬುದು ಇದೇನೆ. ವಿಶುದ್ಧ ಚಕ್ರವನ್ನು ಭೇದಿಸಿದೊಡನೇ ಎಲ್ಲವೂ ಆಕಾಶಮಯ.”
ಮಾಸ್ಟರ್: “ಹೌದು.”
ಶ್ರೀರಾಮಕೃಷ್ಣರು: “ಈ ಮಾಯಾಕಲ್ಪಿತ ಜೀವಜಗತ್ತನ್ನು ದಾಟಿದ ಒಡನೆಯೇ, ನಿತ್ಯನಾದವನ್ನು ಭೇದಿಸಿದೊಡನೆಯೇ ಸಮಾಧಿ. ಓಂಕಾರ ಸಾಧನೆ ಮಾಡುತ್ತ ಮಾಡುತ್ತ ನಾದ ಭೇದವಾಗಿಬಿಡುತ್ತದೆ; ಸಮಾಧಿ ಉಂಟಾಗುತ್ತದೆ.”
ಅಧರಸೇನ ಪರಮಹಂಸರಿಗೆ ಹಣ್ಣು ಹಂಪಲು, ಸಿಹಿತಿಂಡಿಗಳ ಉಪಾಹಾರ ಮಾಡಿಸಿದ. ಅವರು ಈಗ ಯದುಮಲ್ಲಿಕನ ಮನೆಗೆ ಹೊರಟು ನಿಂತಿದ್ದಾರೆ.
ಪರಮಹಂಸರು ಯದುಮಲ್ಲಿಕನ ಮನೆಗೆ ಬಂದಿದ್ದಾರೆ. ಆತನ ಮನೆಯಲ್ಲಿ ಸಿಂಹವಾಹಿನಿಯ ನಿತ್ಯಪೂಜೆ ನಡೆಯುತ್ತಿದೆ. ದೇವಿಯನ್ನು ಹೂವು, ಚಂದನ, ಮಾಲೆ ಇವುಗಳಿಂದ ಬಹಳ ಚೆನ್ನಾಗಿ ಅಲಂಕಾರ ಮಾಡಿದ್ದಾರೆ. ಪೀಠದ ಹತ್ತಿರ ದೀಪಗಳನ್ನು ಹಚ್ಚಿಟ್ಟಿದ್ದಾರೆ. ದೇವಿ ಆನಂದವನ್ನೇ ಹೊರಚೆಲ್ಲುತ್ತಿದ್ದಾಳೆ. ಹತ್ತಿರದಲ್ಲೇ ಅರ್ಚಕನೂ ಕುಳಿತಿದ್ದಾನೆ. ಪರಮಹಂಸರು ತಮ್ಮ ಭಕ್ತರೊಡನೆ ಅಲ್ಲಿಗೆ ಬಂದು ದೇವಿಗೆ ಪ್ರಣಾಮಮಾಡಿ ಆಕೆಯ ಎದುರು ನಿಂತುಕೊಂಡಿದ್ದಾರೆ. ಈಗ ಭಕ್ತರಲ್ಲೊಬ್ಬನಿಗೆ ಹೇಳುತ್ತಿದ್ದಾರೆ, ದಕ್ಷಿಣೆಯ ತಟ್ಟೆಗೆ ಒಂದು ರೂಪಾಯಿ ಹಾಕುವ ಹಾಗೆ.
ಪರಮಹಂಸರು ದೇವಿಯ ಎದುರು ಬಹಳ ಹೊತ್ತಿನಿಂದಲೂ ಕೈಮುಗಿದು ನಿಂತಿದ್ದಾರೆ. ಭಕ್ತರೂ ಅವರ ಹಿಂದೆ ಕೈಮುಗಿದುಕೊಂಡು ನಿಂತಿದ್ದಾರೆ. ಕ್ರಮೇಣ ಪರಮಹಂಸರು ಸಮಾಧಿಸ್ಥರಾಗುತ್ತಿದ್ದಾರೆ. ಶರೀರ ಸ್ಥಿರವಾಗಿ ನಿಂತುಕೊಂಡಿದೆ. ಕಣ್ಣುರೆಪ್ಪೆ ಹೊಡೆಯುತ್ತಿಲ್ಲ.
ಬಹಳ ಹೊತ್ತಾದನಂತರ ದೀರ್ಘನಿಶ್ವಾಸ ಬಿಟ್ಟರು. ಈಗ ಪ್ರಕೃತಿಸ್ಥರಾಗಿದ್ದಾರೆ. ಇನ್ನೂ ಪ್ರೇಮೋನ್ಮತ್ತರಾಗಿಯೇ ಭಗವತಿಗೆ ಹೇಳುತ್ತಿದ್ದಾರೆ: “ತಾಯೆ, ನಾನು ಹೋಗಿ ಬರುತ್ತೇನೆ.” ಆದರೆ ಅವರಿಗೆ ಆ ಸ್ಥಳವನ್ನು ಬಿಟ್ಟು ಹೋಗಲಾಗುತ್ತಿಲ್ಲ. ರಾಮಲಾಲನನ್ನು ಸಂಬೋಧಿಸಿ ಆತನಿಗೆ ಹೇಳುತ್ತಿದ್ದಾರೆ: “ಆ ಹಾಡನ್ನು ಹಾಡು-ಬಳಿಕ ನನಗೆ ಸರಿಯಾಗುತ್ತದೆ.”
ರಾಮಲಾಲ ಹಾಡುತ್ತಿದ್ದಾನೆ:
ಜಗವ ಮರುಳು ಮಾಡಿಹೆ ನೀ
ಪರಶಿವ ಮನಮೋಹಿನೀ!
ಮೂಲಾಧಾರ ಕಮಲದಲ್ಲಿ
ವೀಣಾರವ ವಿನೋದಿನೀ.
ದೇಹ ದೇಹ ಯಂತ್ರದಲ್ಲಿ
ಸುಷುಮ್ನಾದಿ ತಂತ್ರದಲ್ಲಿ
ಗುಣಭೇದದ ಮಂತ್ರದಲ್ಲಿ
ಗುಣತ್ರಯ ವಿಭಾಗಿನೀ.
ಮಹಾಮಾಯೆ! ಅನಾಯಾಸ-
ದಿಂದ ಮೋಹಪಾಶದಿ
ಜಗವ ಬಿಗಿದು ನೀನು ಮಾತ್ರ
ತತ್ತ್ವಾಕಾಶದಲ್ಲಿ ನಿಂತೆ
ಅಚಲ ಮಿಂಚಿನಂದದಿ!
ಪರಮಹಂಸರು ಭಕ್ತರೊಡನೆ ಬೈಠಕ್ಖಾನೆಗೆ ಮುಂದುವರಿಯುತ್ತಿದ್ದಾರೆ. ಆಗಾಗ ಹೇಳುತ್ತಲೇ ಇದ್ದಾರೆ: “ಹೇ ತಾಯೆ, ನನ್ನ ಹೃದಯದಲ್ಲಿ ನೆಲಸು!” ಯದುಮಲ್ಲಿಕ ತನ್ನ ಬಂಧುಬಾಂಧವರೊಡನೆ ಬೈಠಕ್ಖಾನೆಯಲ್ಲಿ ಕುಳಿತಿದ್ದಾನೆ. ಪರಮಹಂಸರು ಇನ್ನೂ ಪ್ರೇಮೋನ್ಮತ್ತರಾಗಿಯೇ ಇದ್ದಾರೆ. ಈಗ ಕುಳಿತುಕೊಂಡು ಭಗವತಿಯ ಸಂಬಂಧವಾಗಿ ಹಾಡಲಾರಂಭಿಸಿದರು.
ನಿನ್ನ ನಿತ್ಯಾನಂದದಾಚೆಗೆ ತಳ್ಳದಿರು ನೀನೆನ್ನನು.
ನಿನ್ನ ಪಾದವನಲ್ಲದೀತನು ಬೇರೆ ಏನೂ ಕಾಣನು….
ಪರಮಹಂಸರು ಇನ್ನೂ ಪ್ರೇಮೋನ್ಮತ್ತರಾಗಿಯೇ ಯದುಮಲ್ಲಿಕನಿಗೆ ಹೇಳುತ್ತಿದ್ದಾರೆ: “ಏನಪ್ಪ, ಮತ್ತೇನು ಹಾಡಲಿ? ‘ಇವನೆಲ್ಲೊ ಎಂಟು ತಿಂಗಳ ಕೂಸು’ ಎಂಬುದನ್ನು ಹಾಡಲೆ?” ಪರಮಹಂಸರು ಹಾಡುತ್ತಿದ್ದಾರೆ:
ಇವನೆಲ್ಲೊ ಎಂಟುತಿಂಗಳ ಕೂಸು-ಎಂದುಕೊಂಡಿಹೆ ನೀನು!
ನಿನ್ನ ಕೆಂಗಣ್ಣುಗಳ ಕಂಡು ಬೆದರುವೆನೆ ನಾನು?……
ಬಹುಮಟ್ಟಿಗೆ ಪ್ರಕೃತಿಸ್ಥರಾದ ಪರಮಹಂಸರು ಹೇಳುತ್ತಿದ್ದಾರೆ: “ನಾನು ಭಗವತಿಯ ಪ್ರಸಾದ ತಿನ್ನುತ್ತೇನೆ.” ಬಳಿಕ ಸಿಂಹವಾಹಿನಿಯ ಪ್ರಸಾದವನ್ನು ಸ್ವಲ್ಪ ತಿಂದರು.
ಯದುಮಲ್ಲಿಕ ತನ್ನ ಅನೇಕ ಮಂದಿ ಬಂಧುಬಾಂಧರೊಡನೆ ಪರಮಹಂಸರ ಹತ್ತಿರ ಕುಳಿತಿದ್ದಾನೆ. ಅವರಲ್ಲಿ ಕೆಲವರು ಯದುಮಲ್ಲಿಕನ ಹೊಗಳುಭಟ್ಟರು.
ಶ್ರೀರಾಮಕೃಷ್ಣರು ನಗುತ್ತ: “ಈ ಹೊಗಳುಭಟ್ಟರನ್ನೇಕೆ ಹತ್ತಿರ ಸೇರಿಸುತ್ತೀಯೆ?”
ಯದುಮಲ್ಲಿಕ: “ಅವರು ಅಂಥವರೇ ಅಂತ ಇಟ್ಟುಕೊಳ್ಳಿ, ನೀವು ಅವರನ್ನು ಉದ್ಧಾರ ಮಾಡಲಾರಿರಾ?”
ಶ್ರೀರಾಮಕೃಷ್ಣರು ನಗುತ್ತ: “ಗಂಗೆಯ ನೀರು ಮದ್ಯದ ಸೀಸೆಯನ್ನು ಶುದ್ಧಿ ಮಾಡಲಾರದು.”
ಯದುಮಲ್ಲಿಕ ಪರಮಹಂಸರಿಗೆ ವಾಗ್ದಾನ ಮಾಡಿದ್ದ, ತಾನು ತನ್ನ ಮನೆಯಲ್ಲಿ ಚಂಡೀಕೀರ್ತನೆಯನ್ನು ಮಾಡಿಸುವುದಾಗಿ. ಹಾಗೆ ವಾಗ್ದಾನ ಮಾಡಿದ ಮೇಲೆ ಬಹಳ ದಿನಗಳು ಕಳೆದುಹೋದವು. ಆದರೆ ಇನ್ನೂ ಚಂಡೀಕೀರ್ತನೆ ಮಾತ್ರ ನಡೆಯಲಿಲ್ಲ.
ಶ್ರೀರಾಮಕೃಷ್ಣರು: “ಒಳ್ಳೆಯದು, ಚಂಡೀಕೀರ್ತನೆ ಸಮಾಚಾರ ಏನಾಯಿತು?”
ಯದುಮಲ್ಲಿಕ: “ಏನೇನೋ ಕೆಲಸಗಳು ಬಂದುಬಿಟ್ಟಿದ್ದುವು; ಆದ್ದರಿಂದ ವ್ಯವಸ್ಥೆ ಮಾಡಲಾಗಲಿಲ್ಲ.”
ಶ್ರೀರಾಮಕೃಷ್ಣರು: “ಇದೇನಿದು? ಮನುಷ್ಯನಿಗೆ ಒಂದೇ ಒಂದು ನಾಲಗೆ! ಆತನ ಮಾತು ಆನೆಯ ದಂತದ ಹಾಗೆ; ಅವು ಹೊರಕ್ಕೆ ಬರುತ್ತವೆಯೇ ವಿನಾ ಒಳಕ್ಕೆ ಹಿಂದಿರುಗುವುದಿಲ್ಲ. ಮನುಷ್ಯ ತನ್ನ ನಾಲಗೆ ಉಳಿಸಿಕೊಳ್ಳಬೇಕು. ಏನು ಹೇಳುತ್ತೀಯೆ?”
ಯದುಮಲ್ಲಿಕ: “ನೀವು ಹೇಳುವುದೇನೋ ನಿಜ.”
ಶ್ರೀರಾಮಕೃಷ್ಣರು: “ನೀನು ಒಬ್ಬ ವ್ಯವಹಾರ ನಿಪುಣ. ನೀನು ಯಾವ ಕೆಲಸವನ್ನೂ ಬಹಳವಾಗಿ ಗುಣಾಕಾರ ಹಾಕಿ ಮಾಡುತ್ತೀಯೆ. ಬ್ರಾಹ್ಮಣನ ಹಸು ಕಡಮೆ ತಿನ್ನಬೇಕು, ಸಗಣಿ ಹೆಚ್ಚಾಗಿ ಹಾಕಬೇಕು. ‘ಸೊರ್, ಸೊರ್’ ಅಂತ ಧಾರಾಕಾರವಾಗಿ ಹಾಲು ಕರೆಯಬೇಕು.” (ಎಲ್ಲರೂ ನಗುತ್ತಿದ್ದಾರೆ.)
ಸ್ವಲ್ಪ ಹೊತ್ತಾದ ನಂತರ ಪರಮಹಂಸರು ಯದುವಿಗೆ ಹೇಳುತ್ತಿದ್ದಾರೆ: “ನಿನ್ನ ಸ್ವಭಾವ ಏನು ಎಂಬುದು ಅರ್ಥವಾಯಿತು. ಅದು ಅರ್ಧ ಬೆಚ್ಚಗೆ, ಅರ್ಧ ತಣ್ಣಗೆ. ನೀನು ಭಗವಂತ ಮತ್ತು ಜಗತ್ತು ಎರಡರಲ್ಲೂ ಮನಸ್ಸಿಟ್ಟಿದ್ದೀಯೆ.”
ಯದುಮಲ್ಲಿಕ ಪರಮಹಂಸರಿಗೂ ಅವರ ಭಕ್ತರಿಗೂ ಹಣ್ಣುಹಂಪಲು ಮತ್ತು ಸಿಹಿ ತಿಂಡಿಗಳನ್ನು ಉಪಾಹಾರ ಮಾಡಿಸಿದ. ಬಳಿಕ ಪರಮಹಂಸರು ಖೇಲಾತ ಘೋಷನ ಮನೆಗೆ ಹೋದರು.
ಖೇಲಾತ ಘೋಷನ ಮನೆಯೇನೋ ಬಹಳ ದೊಡ್ಡ ಭವನವೇ; ಆದರೆ ಅದು ಬಿಟ್ಟು ಬಿಟ್ಟ ಮನೆಯ ಹಾಗೆ ಕಂಡಿತು. ಮನೆಗೆ ಪ್ರವೇಶ ಮಾಡಿ ಮುಂದುವರಿಯುತ್ತಿದ್ದ ಹಾಗೆಯೇ ಪರಮಹಂಸರು ಭಾವಾವಿಷ್ಟರಾಗಿಬಿಟ್ಟಿದ್ದಾರೆ. ಮಾಸ್ಟರ್, ರಾಮಲಾಲ, ಇನ್ನೂ ಕೆಲವು ಮಂದಿ ಭಕ್ತರು ಅವರೊಡನೆ ಇದ್ದಾರೆ. ಪರಮಹಂಸರನ್ನು ಆಹ್ವಾನಿಸಿದ್ದವನು ಖೇಲಾತ ಘೋಷನ ಭಾವ. ಆತ ವೈಷ್ಣವ. ಆಗಲೇ ಮುದುಕನಾಗಿದ್ದಾನೆ. ಮೈಮೇಲೆ ತಿಲಕಾದಿ ಮುದ್ರೆಗಳನ್ನು ಹಾಕಿಕೊಂಡಿದ್ದಾನೆ. ಕೈಯಲ್ಲಿ ಹರಿನಾಮ ಚೀಲ ಹಿಡಿದಿದ್ದಾನೆ. ಆತ ಆಗಾಗ ದಕ್ಷಿಣೇಶ್ವರಕ್ಕೆ ಬಂದು ಪರಮಹಂಸರ ದರ್ಶನ ಪಡೆಯುತ್ತಿದ್ದ. ಕೆಲಕೆಲ ವೈಷ್ಣವರಿಗೆ ಬಹಳ ಸಂಕುಚಿತ ಬುದ್ಧಿ. ಅವರು ಶಾಕ್ತರನ್ನು, ವೇದಾಂತಿಗಳನ್ನು ಬಹಳವಾಗಿ ನಿಂದಿಸುತ್ತಾರೆ. ಪರಮಹಂಸರು ಈಗ ಆತನೊಡನೆ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಮ್ಮ ಧರ್ಮವೇ ಸರಿ, ಉಳಿದವರದೆಲ್ಲ ತಪ್ಪು, ಎಂಬ ಭಾವನೆ ಒಳ್ಳೆಯದಲ್ಲ. ಭಗವಂತ ಒಬ್ಬನೇ ವಿನಾ ಇಬ್ಬರಲ್ಲ. ಆತನನ್ನು ಭಿನ್ನ ಭಿನ್ನ ಹೆಸರಿನಿಂದ ಬೇರೆ ಬೇರೆ ಜನರು ಕರೆಯುತ್ತಾರೆ. ಕೆಲವರು ಆತನನ್ನು ‘ಗಾಡ್’ ಅಂತ ಕರೆಯುತ್ತಾರೆ. ಇನ್ನು ಕೆಲವರು ‘ಅಲ್ಲಾ’ ಎಂದು ಕರೆಯುತ್ತಾರೆ. ಇನ್ನೂ ಕೆಲಕೆಲವರು ಆತನನ್ನೇ ‘ಕೃಷ್ಣ’, ‘ಶಿವ’, ‘ಬ್ರಹ್ಮ’ ಹೀಗೆಲ್ಲಾ ಕರೆಯುತ್ತಾರೆ. ಉದಾಹರಣೆಗೆ ಕೊಳದ ನೀರು. ಒಂದು ಘಟ್ಟದವರು ಅದನ್ನು ‘ಜಲ’, ಇನ್ನೊಂದು ಘಟ್ಟದವರು ‘ವಾಟರ್’, ಮತ್ತೊಂದು ಘಟ್ಟದವರು ‘ಪಾನಿ’ ಎಂದು ಕರೆಯುತ್ತಾರೆ. ಹಿಂದುಗಳು ಅದನ್ನು ‘ಜಲ’, ಕ್ರಿಶ್ಚಿಯನ್ನರು ‘ವಾಟರ್’ ಮುಸಲ್ಮಾನರು ‘ಪಾನಿ’ ಅಂತ ಕರೆಯುತ್ತಾರೆ. ಆದರೆ ವಸ್ತು ಮಾತ್ರ ಒಂದೇ ಒಂದು. ಮತಗಳು ಕೇವಲ ಪಥಗಳು ಮಾತ್ರ. ಪ್ರತಿಯೊಂದು ಧರ್ಮವೂ ಭಗವಂತನ ಸಾಕ್ಷಾತ್ಕಾರಕ್ಕೆ ಒಂದೊಂದು ಮಾರ್ಗ. ಇದು ನದಿಗಳು ವಿವಿಧ ದಿಕ್ಕುಗಳಿಂದ ಹರಿದುಬಂದು ಎಲ್ಲವೂ ಸಾಗರದಲ್ಲಿ ಐಕ್ಯವಾಗುವ ಹಾಗೆ.
“ವೇದಗಳಲ್ಲಿಯೂ, ಪುರಾಣಗಳಲ್ಲಿಯೂ, ತಂತ್ರದಲ್ಲಿಯೂ, ಪ್ರತಿಪಾದ್ಯನಾಗಿರುವವನು ಕೇವಲ ಆ ಸಚ್ಚಿದಾನಂದನೊಬ್ಬನೇ. ವೇದಗಳು ಆತನನ್ನೇ ‘ಬ್ರಹ್ಮ’ ಎಂದು, ಪುರಾಣಗಳು ‘ಕೃಷ್ಣ’ ಇತ್ಯಾದಿ ಎಂದು, ತಂತ್ರ ‘ಶಿವ’ ಎಂದು ಕರೆದಿವೆ. ಆ ಒಬ್ಬ ಸಚ್ಚಿದಾನಂದನಿಗೇ ಬ್ರಹ್ಮ, ಕೃಷ್ಣ, ಶಿವ ಅಂತ ಹೆಸರು.”
ಎಲ್ಲರೂ ಸುಮ್ಮನೆ ಕುಳಿತಿದ್ದಾರೆ.
ವೈಷ್ಣವ ಭಕ್ತ: “ಮಹಾಶಯರೆ, ಭಗವಂತನ ಸಂಬಂಧವಾಗಿ ಯೋಚಿಸುವುದರ ಆವಶ್ಯಕತೆ ತಾನೆ ಏನಿದೆ?”
ಶ್ರೀರಾಮಕೃಷ್ಣರು: “ಮನುಷ್ಯನಿಗೆ ಈ ಜ್ಞಾನ 2 ವಿರುವುದೇ ಆದರೆ ಆತ ಜೀವನ್ಮುಕ್ತ.”
“ಆದರೆ ಎಲ್ಲರಿಗೂ ಇದರಲ್ಲಿ ಶ್ರದ್ಧೆ ಇಲ್ಲ. ಬಾಯಲ್ಲಿ ಮಾತ್ರ ಹೀಗೆ ಹೇಳುತ್ತಾರೆ. ಭಗವಂತನಿದ್ದಾನೆ. ಆತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ ಎಂಬುದನ್ನು ಪ್ರಾಪಂಚಿಕರು ಕೇಳಿ ತಿಳಿದುಕೊಂಡಿದ್ದಾರೆಯೇ ವಿನಾ ಅದರಲ್ಲಿ ಅವರಿಗೆ ಶ್ರದ್ಧೆಯಿಲ್ಲ.
“ಪ್ರಾಪಂಚಿಕರ ಭಗವದ್ಭಾವನೆ ಯಾವ ರೀತಿಯದು ಗೊತ್ತೆ? ಅದು ಚಿಕ್ಕ ಮಕ್ಕಳು ಜಗಳವಾಡುವಾಗ ‘ಭಗವಂತನಾಣೆಗೂ’ ಎಂದು ಹೇಳುತ್ತವೆಯಲ್ಲ, ಹಾಗೆ. ಅವು ಆ ಪದವನ್ನು ತಮ್ಮ ಚಿಕ್ಕಮ್ಮ ದೊಡ್ಡಮ್ಮಂದಿರು ಜಗಳಕಾಯುವಾಗ ಉಪಯೋಗಿಸುವುದನ್ನು ನೋಡಿ ಕಲಿತುಕೊಳ್ಳುತ್ತವೆ.
“ಎಲ್ಲರಿಗೂ ಭಗವಂತನನ್ನು ಗ್ರಹಿಸಲು ಸಾಧ್ಯವೆ? ಆತ ಒಳ್ಳೆಯವರು, ಕೆಟ್ಟವರು, ಭಕ್ತರು, ಅಭಕ್ತರು, ವಿಶ್ವಾಸಿ, ಅವಿಶ್ವಾಸಿ-ಎಲ್ಲರನ್ನೂ ಸೃಷ್ಟಿಸಿದ್ದಾನೆ. ಆತನ ಸೃಷ್ಟಿಯಲ್ಲಿ ಈ ವೈಚಿತ್ರೈವೆಲ್ಲಾ ಇದೆ. ಆತನ ಶಕ್ತಿ ಕೆಲವದರಲ್ಲಿ ಅಧಿಕವಾಗಿ, ಇನ್ನು ಕೆಲವದರಲ್ಲಿ ಕಡಿಮೆಯಾಗಿ ವ್ಯಕ್ತವಾಗಿದೆ. ಸೂರ್ಯನ ಬೆಳಕು ಮಣ್ಣಿಗಿಂತ ನೀರಿನಲ್ಲಿ ಹೆಚ್ಚಾಗಿ ಪ್ರತಿಬಿಂಬಿತವಾಗುತ್ತದೆ; ಕನ್ನಡಿಯಲ್ಲಿ ಇನ್ನೂ ಅಧಿಕವಾಗಿ. ಹಾಗೆಯೇ ಭಕ್ತರಲ್ಲೂ ವಿವಿಧ ಅಂತಸ್ತಿನವರಿದ್ದಾರೆ. ಉತ್ತಮ, ಮಧ್ಯಮ, ಅಧಮ. ಗೀತೆಯಲ್ಲಿ ಇವೆಲ್ಲಾ ವರ್ಣಿತವಾಗಿವೆ.”
ವೈಷ್ಣವ: “ಅದು ನಿಜ.”
ಶ್ರೀರಾಮಕೃಷ್ಣರು: “ಅಧಮ ಭಕ್ತ ಹೇಳುತ್ತಾನೆ: ‘ಭಗವಂತನಿದ್ದಾನೆ, ಆದರೆ ಆಕಾಶದಲ್ಲಿ-ಬಹಳ ದೂರದಲ್ಲಿ.’ ಮಧ್ಯಮ ಭಕ್ತ ಹೇಳುತ್ತಾನೆ: ‘ಭಗವಂತ ಎಲ್ಲಾ ಭೂತಗಳಲ್ಲಿಯೂ ಚೈತನ್ಯರೂಪದಿಂದ, ಪ್ರಾಣರೂಪದಿಂದ ಇದ್ದಾನೆ.’ ಉತ್ತಮ ಭಕ್ತ ಹೇಳುತ್ತಾನೆ: ‘ಭಗವಂತನೇ ಎಲ್ಲವೂ ಆಗಿದ್ದಾನೆ. ಏನೇನಿದೆಯೋ ಅದೆಲ್ಲಾ ಭಗವಂತನ ಒಂದೊಂದು ರೂಪ. ಆತನೇ ಮಾಯೆ, ಜೀವ, ಜಗತ್ತು ಇವೆಲ್ಲಾ ಆಗಿದ್ದಾನೆ, ಆತನ ಹೊರತು ಬೇರೇನೂ ಇಲ್ಲ.”
ವೈಷ್ಣವ: “ಆ ವಿಧದ ಅವಸ್ಥೆ ಯಾರಿಗಾದರೂ ಉಂಟಾಗುತ್ತದೆಯೇ”
ಶ್ರೀರಾಮಕೃಷ್ಣರು: “ಆತನ ದರ್ಶನ ಆಗದ ಹೊರತು, ಆ ಅವಸ್ಥೆ ಉಂಟಾಗುವುದಿಲ್ಲ. ಆದರೆ ದರ್ಶನ ದೊರೆತಿದೆಯೋ ಇಲ್ಲವೋ ಎಂಬುದನ್ನು ಅರಿಯಲು ಲಕ್ಷಣಗಳಿವೆ. ಆತ ಕೆಲವು ವೇಳೆ ಉನ್ಮತ್ತನ ಹಾಗೆ ನಗುತ್ತಾನೆ, ಅಳುತ್ತಾನೆ, ನರ್ತಿಸುತ್ತಾನೆ. ಇನ್ನೂ ಕೆಲವು ವೇಳೆ ಬಾಲಕನ ಹಾಗೆ ಎಂದರೆ ಐದು ವರ್ಷದ ಬಾಲಕನ ಹಾಗೆ-ಸರಳವಾಗಿ, ಉದಾರಿಯಾಗಿ, ಅಹಂಕಾರಶೂನ್ಯನಾಗಿ, ಯಾವ ವಸ್ತುವಿನಲ್ಲೂ ಆಸಕ್ತಿಯಿಲ್ಲದವನಾಗಿ, ಯಾವ ಗುಣಕ್ಕೂ ವಶನಾಗದವನಾಗಿ, ಸದಾನಂದಮಯನಾಗಿ ಇರುತ್ತಾನೆ. ಮತ್ತೆ ಕೆಲವು ವೇಳೆ ಪಿಶಾಚಿಯ ಹಾಗೆ-ಶುಚಿ ಅಶುಚಿಯ ಭೇದವಿರದು; ಆಚಾರ ಅನಾಚಾರ ಎಲ್ಲಾ ಆಗಿಬಿಡುತ್ತದೆ. ಮತ್ತೂ ಕೆಲವು ವೇಲೆ ಜಡನ ಹಾಗೆ-ಏನೋ ಒಂದನ್ನು ನೋಡುತ್ತ ನಿಂತಿರುವನೋ ಎಂಬಂತೆ; ಆತನ ಕೈಯಲ್ಲಿ ಯಾವ ಕಾರ್ಯವೂ ಸಾಧ್ಯವಿಲ್ಲ. ಯಾವುದಕ್ಕೂ ಪ್ರಯತ್ನ ಮಾಡಲಾರ.”
ಪರಮಹಂಸರು ತಮ್ಮ ಅವಸ್ಥೆಯನ್ನೇ ಈ ರೀತಿಯಾಗಿ ಸೂಚಿಸುತ್ತಿದ್ದಾರೇನು?
ಶ್ರೀರಾಮಕೃಷ್ಣರು ವೈಷ್ಣವ ಭಕ್ತನಿಗೆ: “ನೀನು ನಿನ್ನದು” ಎಂಬ ಭಾವನೆಯೇ ಜ್ಞಾನ; ‘ನಾನು, ನನ್ನದು’ ಎಂಬುದೇ ಅಜ್ಞಾನ. ಜ್ಞಾನ ಈ ಭಾವನೆಯನ್ನು ತರುತ್ತದೆ: ‘ಹೇ ಭಗವಂತ, ನೀನೇ ಕರ್ತ, ನಾನು ಅಕರ್ತ. ಹೇ ಭಗವಂತ, ಎಲ್ಲವೂ ನಿನಗೆ ಸೇರಿದವೆ. ದೇಹ, ಮನಸ್ಸು, ಗೃಹ, ಪರಿವಾರ, ಜೀವ, ಜಗತ್ತು ಎಲ್ಲವೂ ನಿನಗೆ ಸೇರಿದವೆ. ಯಾವುದೂ ನನಗೆ ಸೇರಿದುದಲ್ಲ.’
“ಅಜ್ಞಾನಿ ಹೇಳುತ್ತಾನೆ: ‘ಏನು, ಭಗವಂತನೆ? ಅಲ್ಲಿ, ಅಲ್ಲಿ-ಬಹಳ ದೂರದಲ್ಲಿ.’ ಜ್ಞಾನಿಗೆ ಗೊತ್ತಿದೆ. ಭಗವಂತ ಇಲ್ಲೆ, ಬಹಳ ಹತ್ತಿರದಲ್ಲೆ, ಹೃದಯಮಧ್ಯದಲ್ಲೆ ಅಂತರ್ಯಾಮಿ ರೂಪದಿಂದ ಇದ್ದಾನೆ; ಪ್ರತಿಯೊಂದು ರೂಪವನ್ನೂ ಆತನೇ ಧರಿಸಿದ್ದಾನೆ ಎಂಬುದಾಗಿ.”
೨೨ನೆ ಜುಲೈ ೧೮೮೩, ಆಷಾಢ ಕೃಷ್ಣ ಬಿದಿಗೆ, ಭಾನುವಾರ
ಇಂದು ರಜಾದಿನವಾದ್ದರಿಂದ ಅನೇಕ ಗೃಹಸ್ಥ ಭಕ್ತರು ಪರಮಹಂಸರ ದರ್ಶನ ಪಡೆಯಲು ದಕ್ಷಿಣೇಶ್ವರಕ್ಕೆ ಬಂದಿದ್ದಾರೆ. ಯುವಕ ಭಕ್ತರು ಬಿಡಿ ದಿನಗಳಲ್ಲಿ ಬರುವ ವಾಡಿಕೆ. ಪರಮಹಂಸರು ತಮ್ಮ ಅಂತರಂಗ ಭಕ್ತರಿಗೆ ಸಾಧ್ಯವಾದಾಗಲೆಲ್ಲ ಮಂಗಳವಾರ, ಶನಿವಾರ ಬರುವಂತೆ ಸಲಹೆ ಇತ್ತಿದ್ದಾರೆ. ಅವು ಆಧ್ಯಾತ್ಮಿಕ ಉಪದೇಶಗಳಿಗೆ ಬಹು ಪವಿತ್ರವಾದ ದಿನಗಳು ಅಂತ ಪರಮಹಂಸರ ಭಾವನೆ. ಅಧರಸೇನ, ರಾಖಾಲ, ಮಾಸ್ಟರ್ ಗಾಡಿ ಮಾಡಿಕೊಂಡು ಬಂದಿದ್ದಾರೆ.
ಪರಮಹಂಸರು ಮಧ್ಯಾಹ್ನದ ಊಟವಾದ ನಂತರ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡಿದ್ದಾರೆ. ಅವರ ಕೊಠಡಿಯಲ್ಲಿ ಅನೇಕ ದೇವ ದೇವಿಯರ ಚಿತ್ರಗಳನ್ನು ಗೋಡೆಗಳಿಗೆ ತೂಗು ಹಾಕಿದ್ದಾರೆ. ಅವುಗಳಲ್ಲಿ ಒಂದು ಯೇಸುಕ್ರಿಸ್ತ ಮುಳುಗಿಹೋಗುತ್ತಿರುವ ಪೀಟರನನ್ನು ಎತ್ತುತ್ತಿರುವುದು. ಅವರ ಕೊಠಡಿಯ ಹೊರಗೆ ಸುವಾಸನೆಯನ್ನು ಬೀರುವ ಅನೇಕ ಹೂವಿನ ಗಿಡಗಳಿವೆ. ಕೊಠಡಿಯಿಂದಲೇ ದಕ್ಷಿಣಾಭಿಮುಖವಾಗಿ ಹರಿಯುವ ಗಂಗಾನದಿಯನ್ನು ನೋಡಬಹುದು. ಪರಮಹಂಸರು ಉತ್ತರಾಭಿಮುಖವಾಗಿ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ಅವರ ಮುಂದುಗಡೆ ನೆಲದ ಮೇಲೆ ಹಾಸಿರುವ ಜಮಖಾನೆ ಮತ್ತು ಮಂದಲಿಗೆಗಳ ಮೇಲೆ ಭಕ್ತರು ಕುಳಿತುಕೊಂಡಿದ್ದಾರೆ. ಎಲ್ಲರೂ ಪರಮಹಂಸರನ್ನು ಏಕದೃಷ್ಟಿಯಿಂದ ನೋಡುತ್ತಿದ್ದಾರೆ. ಬ್ರಾಹ್ಮಸಮಾಜದ ಅನುಯಾಯಿಯಾದ ಅರುವತ್ತು ವರ್ಷ ವಯಸ್ಸಿನ ಮಣಿಮಲ್ಲಿಕ ಪರಮಹಂಸರ ದರ್ಶನ ಪಡೆಯಲು ಬಂದಿದ್ದಾನೆ. ಈ ಕೆಲವು ದಿನದ ಹಿಂದೆ ಕಾಶೀಯಾತ್ರೆ ಮಾಡಿ ಹಿಂತಿರುಗಿ ಬಂದಿದ್ದಾನೆ. ಈಗ ಪರಮಹಂಸರಿಗೆ ತನ್ನ ಅನುಭವಗಳನ್ನು ತಿಳಿಸುತ್ತಿದ್ದಾನೆ.
ಮಣಿಮಲ್ಲಿಕ: “ನಾನು ಕಾಶಿಯಲ್ಲಿ ಒಬ್ಬ ಸಾಧುವನ್ನು ಕಂಡೆ. ಆತ ಹೇಳಿದ: ಇಂದ್ರಿಯಸಂಯಮ ಆಗದ ಹೊರತು ಏನೂ ದೊರೆಯುವ ಹಾಗಿಲ್ಲ. ಸುಮ್ಮನೆ “ಭಗವಂತ! ಭಗವಂತ!” ಅಂತ ಕೂಗಿಕೊಂಡ ಮಾತ್ರಕ್ಕೆ ಏನು ದೊರೆತುಬಿಟ್ಟಿತು?”
ಶ್ರೀರಾಮಕೃಷ್ಣರು: “ಇಂಥವರ ದೃಷ್ಟಿ ಏನು ಗೊತ್ತೆ? ಮೊದಲು ಸಾಧನೆ ಮಾಡಬೇಕು. ಶಮದಮಾದಿ ಷಟ್ಸಂಪತ್ತಿಗಳನ್ನು ಗಳಿಸಿಕೊಳ್ಳಬೇಕು. ಇವರ ಗುರಿ ನಿರ್ವಾಣ. ಇವರು ವೇದಾಂತವಾದಿಗಳು. ‘ಬ್ರಹ್ಮ ಸತ್ಯಂ, ಜಗನ್ಮಿಥ್ಯಾ’ ಎಂಬುದಾಗಿ ಸತತ ವಿಚಾರದಲ್ಲಿ ತೊಡಗಿರುತ್ತಾರೆ. ಇದು ಬಹಳ ಕಠಿಣ ಮಾರ್ಗ. ಜಗತ್ತು ಮಿಥ್ಯೆಯಾದರೆ ನೀನೂ ಮಿಥ್ಯೆ. ಯಾರು ಉಪದೇಶವೀಯುತ್ತಾನೋ ಆತನೂ ಮಿಥ್ಯೆ. ಆತನ ಉಪದೇಶವೂ ಸ್ವಪ್ನದ ಹಾಗೆ ಮಿಥ್ಯೆ.
“ಈ ಅನುಭವ ಸಾಮಾನ್ಯ ಮನುಷ್ಯನಿಗೆ ನಿಲುಕದ ಮಾತು. ಇದು ಹೇಗೆ ಗೊತ್ತೆ? ಕರ್ಪೂರ ಉರಿಸಿದರೆ ಕೊನೆಗೆ ಏನೂ ಉಳಿಯುವುದಿಲ್ಲ; ಸೌದೆ ಉರಿಸಿದಾಗ ಒಂದಿಷ್ಟು ಬೂದಿಯಾದರೂ ಉಳಿಯುತ್ತದೆ. ವಿಚಾರದ ಪರಮಾವಧಿಯನ್ನು ಮುಟ್ಟಿದ ನಂತರ ಸಮಾಧಿಯುಂಟಾಗುತ್ತದೆ. ಆಗ ‘ನಾನು,’ ‘ನೀನು’, ‘ಈ ಜಗತ್ತು’ ಇವುಗಳ ಸುದ್ದಿ ಸಮಾಚಾರವೇ ಇರದು.
“ಪದ್ಮಲೋಚನ ಒಬ್ಬ ಜ್ಞಾನಿ. ಆಗ ನಾನು ಯಾವಾಗ ನೋಡಿದರೂ ‘ತಾಯಿ, ತಾಯಿ!’ ಅನ್ನುತ್ತಿದ್ದೆ. ಆದರೂ ಆತ ನನ್ನನ್ನು ಗೌರವಿಸುತ್ತಿದ್ದ. ಆತ ವರ್ಧಮಾನರಾಜನ ಸಭಾಪಂಡಿತ. ಆತ ಒಮ್ಮೆ ಕಲ್ಕತ್ತಕ್ಕೆ ಬಂದಿದ್ದಾಗ, ಕಾಮಾರಹಾಟಿಯ ತೋಟದಲ್ಲಿ ಕೆಲವು ಕಾಲ ಇದ್ದ. ನನಗೆ ಆತನನ್ನು ನೋಡಬೇಕು ಅಂತ ಇಚ್ಛೆಯಾಯಿತು. ಆತನಿಗೆ ಅಹಂಕಾರ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಬರಲು ಹೃದಯನನ್ನು ಕಳುಹಿಸಿದೆ. ಇಲ್ಲ ಎಂದು ಗೊತ್ತಾಯಿತು. ಬಳಿಕ ಆತನನ್ನು ಹೋಗಿ ಕಂಡೆ. ಆತ ಒಳ್ಳೆ ಜ್ಞಾನಿ! ದೊಡ್ಡ ಪಂಡಿತ. ಆದರೂ ನಾನು ರಾಮಪ್ರಸಾದನ ಹಾಡನ್ನು ಹಾಡಿದೊಡನೆಯೇ ಅಳಲಾರಂಭಿಸಿದ. ನಾವಿಬ್ಬರೂ ಬಹಳ ಹೊತ್ತು ಮಾತಾಡಿದೆವು. ಅಂದಿನ ಸಂಭಾಷಣೆಯಲ್ಲಿ ನನಗೆ ದೊರೆತ ತೃಪ್ತಿ ಬೇರೆ ಯಾರೊಡನೆ ಸಂಭಾಷಿಸಿದಾಗಲೂ ದೊರೆಯಲಿಲ್ಲ. ಆತ ನನಗೆ ಬುದ್ಧಿವಾದವಿತ್ತ: ‘ಭಕ್ತರ ಸಹವಾಸ ಬೇಕೆಂಬ ಇಚ್ಛೆಯನ್ನು ಬಿಟ್ಟುಬಿಡಿ; ಇಲ್ಲದಿದ್ದರೆ ಸಿಕ್ಕಿಸಿಕ್ಕಿದವರೆಲ್ಲಾ ನಿಮ್ಮನ್ನು ಮುತ್ತಿ, ನಿಮ್ಮನ್ನು ಅಧೋಗತಿಗೆ ಎಳೆದು ಬಿಡುವರು.’ ಒಮ್ಮೆ ವೈಷ್ಣವಚರಣ ಗುರು ಉತ್ಸವಾನಂದರೊಡನೆ ಬರವಣಿಗೆಯ ಮೂಲಕ ವಿಚಾರದಲ್ಲಿ ತೊಡಗಿದ್ದ. ಅಂದು ಆತ ನನಗೊಂದು ಸ್ವಾರಸ್ಯವಾದ ಘಟನೆ ತಿಳಿಸಿದ: ‘ಒಮ್ಮೆ ಒಂದು ಸಭೆಯಲ್ಲಿ ಶಿವ ದೊಡ್ಡವನೋ ಅಥವಾ ಬ್ರಹ್ಮ ದೊಡ್ಡವನೋ ಎಂಬುದರ ಸಂಬಂಧವಾಗಿ ಚರ್ಚೆ ನಡೆಯಿತಂತೆ. ಪಂಡಿತರು ಯಾವ ನಿರ್ಧಾರಕ್ಕೂ ಬರಲು ಅಶಕ್ತರಾಗಿ ಪದ್ಮಲೋಚನನ ಅಭಿಪ್ರಾಯವನ್ನು ಕೇಳಿದರಂತೆ. ಆಗ ಆತ ತನ್ನ ಸ್ವಾಭಾವಿಕ ಸರಳತೆಯಿಂದ ಉತ್ತರವಿತ್ತನಂತೆ: ‘ಅದು ನನಗೆ ಹೇಗೆ ಗೊತ್ತಾಗಬೇಕು? ನನಗೇ ಆಗಲಿ ಅಥವಾ ನಮ್ಮ ವಂಶದ ಹದಿನಾಲ್ಕು ತಲೆಗಳೇ ಆಗಲಿ, ಯಾರಿಗೂ ಶಿವನ ದರ್ಶನವೂ ಆಗಿಲ್ಲ, ಬ್ರಹ್ಮನ ದರ್ಶನವೂ ಆಗಿಲ್ಲ.’ ನಾನು ಕಾಮಕಾಂಚನ ತ್ಯಾಗಮಾಡಿರುವುದನ್ನು ಕೇಳಿ ನನಗೆ ಹೇಳಿದ: ‘ನೀವು ಅದನ್ನೇಕೆ ತ್ಯಜಿಸಿಬಿಟ್ಟಿರಿ? ಇದು ಹಣ, ಅದು ಮಣ್ಣು ಎಂಬ ಭೇದಬುದ್ಧಿ ಅಜ್ಞಾನದಿಂದ ಉಂಟಾಗುತ್ತದೆ.’ ಅದಕ್ಕೆ ನಾನೇನು ಉತ್ತರ ಕೊಡಲಿ? ಹೇಳಿದೆ: ‘ನನಗೆ ಇವೆಲ್ಲಾ ಗೊತ್ತಿಲ್ಲ. ನನಗಂತೂ, ಹಣ, ಗಿಣ ಇವು ಯಾವುವೂ ರುಚಿಸುತ್ತಿಲ್ಲ.’
“ಒಬ್ಬ ಪಂಡಿತನಿಗೆ ಅಹಂಕಾರ ಬಹಳ ಜಾಸ್ತಿ. ಭಗವಂತನಿಗೆ ರೂಪವಿದೆಯೆಂಬುದನ್ನು ಆತ ಒಪ್ಪುತ್ತಿರಲಿಲ್ಲ. ಆದರೆ ಭಗವಂತನ ಕಾರ್ಯವನ್ನು ಯಾರು ತಾನೆ ಅರಿಯಬಲ್ಲರು? ಭಗವಂತ ಆದ್ಯಾಶಕ್ತಿ ರೂಪದಲ್ಲಿ ಆತನಿಗೆ ಕಾಣಿಸಿಕೊಂಡ. ಪಂಡಿತ ಬಹಳ ಹೊತ್ತಿನವರೆಗೆ ಬಾಹ್ಯ ಪ್ರಜ್ಞೆಯೇ ಇಲ್ಲದವನಾಗಿ ಬಿದ್ದಿರಬೇಕಾಯಿತು. ಕಿಂಚಿತ್ ಪ್ರಜ್ಞೆ ಬಂದ ನಂತರ ಕೇವಲ ‘ಕಾ! ಕಾ! ಕಾ!’ ಅಂತ ಹೇಳಲಾರಂಭಿಸಿದ. ಆತನ ಕೈಯಲ್ಲಿ ‘ಕಾಳಿ’ ಎಂಬ ಪದವನ್ನು ಪೂರ್ಣವಾಗಿ ಉಚ್ಚರಿಸಲು ಸಾಧ್ಯವಾಗಲಿಲ್ಲ.”
ಒಬ್ಬ ಭಕ್ತ: “ನೀವು ವಿದ್ಯಾಸಾಗರನನ್ನು ನೋಡಿದ್ದೀರಿ. ಆತನ ಸಂಬಂಧವಾಗಿ ನಿಮ್ಮ ಅಭಿಪ್ರಾಯವೇನು?”
ಶ್ರೀರಾಮಕೃಷ್ಣರು: “ವಿದ್ಯಾಸಾಗರನಲ್ಲಿ ಪಾಂಡಿತ್ಯವಿದೆ, ದಯೆಯಿದೆ. ಆದರೆ ಅಂತರ್ದೃಷ್ಟಿಯಿಲ್ಲ. ಚಿನ್ನ ಆತನ ಆಂತರ್ಯದಲ್ಲಿ ಮಣ್ಣು ಮುಚ್ಚಿಕೊಂಡು ಬಿದ್ದಿದೆ. ಅದರ ಸೂಚನೆ ಗೊತ್ತಾಗಿದ್ದ ಪಕ್ಷದಲ್ಲಿ ಆತನ ಬಾಹ್ಯ ಕೆಲಸಗಳೆಲ್ಲಾ ಬಹಳವಾಗಿ ಕಡಮೆಯಾಗಿಬಿಡುತ್ತಿದ್ದುವು; ಕೊನೆಗೆ ಅವೆಲ್ಲಾ ಒಮ್ಮೆಗೇ ನಿಂತೇಹೋಗಿಬಿಡುತ್ತಿದ್ದುವು. ತನ್ನ ಆಂತರ್ಯದಲ್ಲಿ ಭಗವಂತ ನೆಲೆಸಿದ್ದಾನೆ ಎಂಬುದಾಗಿ ಆತನಿಗೆ ಗೊತ್ತಾಗಿದ್ದರೆ, ಆತನ ಮನಸ್ಸು ಭಗವಂತನ ಧ್ಯಾನ ಚಿಂತನೆಯಲ್ಲಿಯೇ ಮಗ್ನವಾಗಿಬಿಡುತ್ತಿತ್ತು. ಕೆಲಕೆಲವರು ನಿಷ್ಕಾಮ ಕರ್ಮವನ್ನು ಬಹಳ ಕಾಲದವರೆಗೆ ಮಾಡುತ್ತ ಮಾಡುತ್ತ ಮುಂದುವರಿದರೇನೇ ಕೊನೆಗೆ ಅವರಿಗೆ ವೈರಾಗ್ಯ ಉಂಟಾಗಿ ಅವರ ಮನಸ್ಸು ಭಗವಂತನ ಕಡೆಗೆ ಹರಿಯತೊಡಗುತ್ತದೆ. ಕೊನೆಯಲ್ಲಿ ಆತನೊಡನೆ ಲೀನವಾಗಿ ಬಿಡುತ್ತದೆ.”
“ವಿದ್ಯಾಸಾಗರ ಮಾಡುತ್ತಿರುವ ಕೆಲಸಕಾರ್ಯಗಳು ಬಹಳ ಒಳ್ಳೆಯವು. ದಯಾವಂತನಾಗಿರುವುದು ಬಹಳ ಒಳ್ಳೆಯದೆ. ದಯೆಗೂ ಮಾಯೆಗೂ ಅಜಗಜಾಂತರ. ದಯೆ ಒಳ್ಳೆಯದು, ಆದರೆ ಮಾಯೆ ಅಲ್ಲ. ಮಾಯೆ ಅಂದರೆ, ಆತ್ಮೀಯರ ಮೇಲೆ-ಹೆಂಡತಿ, ಪುತ್ರ, ಸೋದರ, ಸೋದರಿ, ಸೋದರ ಮಕ್ಕಳು, ತಂದೆತಾಯಿ, ಇವರ ಮೇಲೆ ಇರುವ ಪ್ರೀತಿ. ದಯೆ ಎಂದರೆ ಸರ್ವಭೂತಗಳಲ್ಲಿಯೂ ಒಂದೇ ಸಮ ಪ್ರೀತಿ.”
ಮಾಸ್ಟರ್: “ದಯೆಯೂ ಒಂದು ಬಂಧನವೆ?”
ಶ್ರೀರಾಮಕೃಷ್ಣರು: “ಅದು ಬಹಳ ದೂರದ ಮಾತು. ದಯೆ ಸತ್ತ್ವಗುಣದಿಂದ ಉಂಟಾಗುತ್ತದೆ. ಸತ್ತ್ವಗುಣದಿಂದ ಪಾಲನೆ, ರಜೋಗುಣದಿಂದ ಸೃಷ್ಟಿ, ತಮೋಗುಣದಿಂದ ಸಂಹಾರ. ಆದರೆ ಬ್ರಹ್ಮ ಈ ಮೂರು ಗುಣಗಳಿಗೂ ಅತೀತ. ಪ್ರಕೃತಿಗೆ ಅತೀತ.
“ಈ ಮೂರು ಗುಣಗಳೂ ಸತ್ಯದ ಹೊಸ್ತಿಲನ್ನು ಮೆಟ್ಟಲಾರವು. ಇದು ಡಕಾಯಿತ ಯಾವ ರೀತಿಯಾಗಿ ಪೋಲೀಸಿನವರಿಗೆ ಹೆದರಿ ರಾಜಬೀದಿಗೆ ಬರಲು ಹೆದರುತ್ತಾನೋ ಹಾಗೆ. ಇವು ಮೂರು ಗುಣಗಳೂ ಒಬ್ಬೊಬ್ಬ ಡಕಾಯಿತರೇ.
“ಒಂದು ಕಥೆ ಹೇಳುತ್ತೇನೆ ಕೇಳು. ಒಮ್ಮೆ ಒಬ್ಬ ಒಂದು ದಿನ ಕಾಡಿನ ಮಾರ್ಗವಾಗಿ ಹೋಗುತ್ತಿದ್ದ. ಇದ್ದಕ್ಕಿದ್ದ ಹಾಗೆ ಮೂರು ಜನ ಡಕಾಯಿತರು ಬಂದು ಆತನನ್ನು ಸುತ್ತುಗಟ್ಟಿ ಆತನಲ್ಲಿದ್ದುದನ್ನೆಲ್ಲಾ ಕಸಿದುಕೊಂಡುಬಿಟ್ಟರು. ಬಳಿಕ ಒಬ್ಬ ಡಕಾಯಿತ ಹೇಳಿದ: ‘ಇವನನ್ನೇಕೆ ಜೀವಸಹಿತ ಬಿಟ್ಟುಬಿಡಬೇಕು? ಕೊಂದುಹಾಕಿಬಿಡೋಣ.’ ಹೀಗೆಂದು ಹೇಳಿ ಆತನನ್ನು ತನ್ನ ಕತ್ತಿಯಿಂದ ಇನ್ನೇನು ಇರಿಯಲಿದ್ದ. ಅಷ್ಟರಲ್ಲಿ ಎರಡನೆ ಡಕಾಯಿತ ಆತನನ್ನು ತಡೆದು ಹೇಳಿದ: ‘ಈತನನ್ನೇಕೆ ಕೊಂದುಹಾಕಬೇಕು ಪಾಪ. ಈತನ ಕೈಕಾಲು ಕಟ್ಟಿ ಇಲ್ಲೇ ಬಿಟ್ಟು ಹೋಗೋಣ. ಆಗ ಈತ ಹೋಗಿ ಪೋಲೀಸಿನವರಿಗೆ ದೂರು ಹೇಳಲಾರ.’ ಹೀಗೆಂದು ಹೇಳಿ ಆತನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ಅಲ್ಲೇ ಬಿಟ್ಟು ಹೊರಟುಹೋದರು. ಸ್ವಲ್ಪ ಹೊತ್ತಾದನಂತರ ಮೂರನೆ ಡಕಾಯಿತ ಹಿಂದಿರುಗಿ ಬಂದು, ಆ ಮನುಷ್ಯನಿಗೆ ಹೇಳಿದ: ‘ಅಯ್ಯೋ ಪಾಪ! ನಿನಗೆ ಬಹಳ ಕಷ್ಟವಾಗಿರಬೇಕು, ಅಲ್ಲವೆ? ನಾನು ನಿನ್ನನ್ನು ಬಂಧನದಿಂದ ಬಿಡಿಸುತ್ತೇನೆ.’ ಆತನನ್ನು ಬಂಧನದಿಂದ ಬಿಡಿಸಿ, ಡಕಾಯಿತ ಆತನಿಗೆ ಹೇಳಿದ: ‘ನನ್ನೊಡನೆ ಬಾ, ನಿನ್ನನ್ನು ರಾಜಮಾರ್ಗಕ್ಕೆ ಕರೆದುಕೊಂಡು ಹೋಗಿ ಬಿಡುತ್ತೇನೆ.’ ಬಹಳವಾಗಿ ಮುಂದುವರಿದ ನಂತರ ಅವರು ರಾಜಮಾರ್ಗವನ್ನು ತಲುಪಿದರು. ಬಳಿಕ ಡಕಾಯಿತ ಆತನಿಗೆ ಹೇಳಿದ: ‘ಈ ಮಾರ್ಗವಾಗಿಯೇ ಹೋಗು. ಅಲ್ಲಿ ನೋಡು, ನಿನ್ನ ಮನೆ ಕಾಣುತ್ತಾ ಇದೆ.’ ಆಗ ಆ ಮನುಷ್ಯ ಡಕಾಯಿತನಿಗೆ ಹೇಳಿದ: ‘ಮಹಾಶಯ, ನೀನು ನನಗೆ ಬಹಳ ಉಪಕಾರ ಮಾಡಿದ್ದೀಯೆ. ಬಾ ನನ್ನೊಡನೆ, ನನ್ನ ಮನೆಗೆ.’ ಡಕಾಯಿತ ಹೇಳಿದ: ‘ಓ ಸಾಧ್ಯವಿಲ್ಲ! ನಾನು ಅಲ್ಲಿಗೆ ಬರುವ ಹಾಗಿಲ್ಲ. ಪೋಲೀಸಿನವರಿಗೆ ಗೊತ್ತಾಗಿಬಿಡುತ್ತದೆ.’
“ಈ ಸಂಸಾರವೇ ಒಂದು ಅರಣ್ಯ. ಈ ಅರಣ್ಯದಲ್ಲಿ ಸತ್ತ್ವ, ರಜಸ್ಸು, ತಮಸ್ಸು- ಎಂಬ ಮೂರು ಜನ ಡಕಾಯಿತರು ಹೊಂಚುಹಾಕುತ್ತಾ ಇದ್ದಾರೆ. ಜೀವರ ತತ್ತ್ವಜ್ಞಾನವನ್ನು ಕಸಿದುಕೊಂಡುಬಿಡುವವರು ಇವರೇ. ತಮೋಗುಣ ಜೀವವನ್ನು ನಾಶಗೊಳಿಸಲು ಪ್ರಯತ್ನಿಸುತ್ತದೆ; ರಜೋಗುಣ ಆತನನ್ನು ಈ ಜಗತ್ತಿಗೆ ಕಟ್ಟಿಹಾಕುತ್ತದೆ. ಆದರೆ ಸತ್ತ್ವಗುಣ ಆತನನ್ನು ರಜಸ್ತಮೋಗುಣಗಳ ಹಿಡಿತದಿಂದ ಬಿಡಿಸುತ್ತದೆ. ಜೀವ ಸತ್ತ್ವಗುಣವನ್ನು ಆಶ್ರಯಿಸಿದರೆ ಆತ ತಮೋ ಗುಣದಿಂದ ಉದ್ಭವವಾದ ಕಾಮಕ್ರೋಧಾದಿಗಳಿಂದ ಪಾರಾಗಬಲ್ಲ. ಇದೂ ಅಲ್ಲದೆ ಸತ್ತ್ವಗುಣ ಜೀವನನ್ನು ಈ ಜಗದ್ಬಂಧನದಿಂದ ವಿಮೋಚನೆಮಾಡುತ್ತದೆ. ಆದರೂ ಸತ್ತ್ವಗುಣವೂ ಒಬ್ಬ ಡಕಾಯಿತನೇ. ಅದು ಪರಂಧಾಮಕ್ಕೆ ಮಾರ್ಗ ತೋರಿಸಿಕೊಡಬಲ್ಲುದಾದರೂ ತತ್ತ್ವಜ್ಞಾನವನ್ನು ಕೊಡಲಾರದು. ರಾಜಮಾರ್ಗಕ್ಕೆ ತಂದುಬಿಟ್ಟು ಅದು ಹೇಳುತ್ತದೆ: ‘ಆ ಕಡೆ ನೋಡು, ಅಗೋ ಅಲ್ಲಿದೆ ನಿನ್ನ ನಿವಾಸ.’ ಯಾವ ಅವಸ್ಥೆಯಲ್ಲಿ ಬ್ರಹ್ಮಜ್ಞಾನ ದೊರೆಯಬೇಕೋ, ಅದು ಅಲ್ಲಿಂದ ಬಹಳ ದೂರದಲ್ಲೇ ನಿಲ್ಲುತ್ತದೆ.
“ಬ್ರಹ್ಮ ಏನು ಎಂಬುದನ್ನು ಬಾಯಿಂದ ಹೇಳಲಾಗುವುದಿಲ್ಲ. ಯಾರಿಗೆ ಅದು ದೊರೆಯುತ್ತದೋ ಅವರಿಗೆ ಅದರ ಸಂಬಂಧವಾಗಿ ಏನು ಸುದ್ದಿಯನ್ನೂ ಕೊಡಲಾಗುವುದಿಲ್ಲ. ಜನ ಹೇಳುತ್ತಾರೆ, ಕಪ್ಪು ಸಾಗರದ ಕಡೆ ಹೋದ ಹಡಗು ಹಿಂದಿರುಗಿ ಬರುವುದಿಲ್ಲ ಎಂಬುದಾಗಿ.”
“ನಾಲ್ಕು ಜನ ಸ್ನೇಹಿತರು ಹಾಗೇ ಸುತ್ತಾಡುತ್ತ ಸುತ್ತಾಡುತ್ತ ಹೋಗುವಾಗ ಒಂದು ಕಡೆ ನಾಲ್ಕು ದಿಕ್ಕಿಗೂ ಗೋಡೆ ಎದ್ದಿದ್ದ ಒಂದು ಸ್ಥಳ ಕಣ್ಣಿಗೆ ಬಿತ್ತು. ಗೋಡೆ ಬಹಳ ಎತ್ತರದವರೆಗೆ ಎದ್ದಿತ್ತು. ಅದರೊಳಗೆ ಏನಿದೆ ಎಂಬುದನ್ನು ಅರಿಯಲು ಎಲ್ಲರೂ ಬಹಳವಾಗಿ ಕುತೂಹಲಪಟ್ಟರು. ಒಬ್ಬ ಅದರ ಮೇಲಕ್ಕೆ ಹತ್ತಿದ. ಆ ಕಡೆ ದೃಷ್ಟಿ ಬಿದ್ದೊಡನೆಯೇ ಆತನಿಗೆ ಏನು ಕಂಡುಬಂತೊ, ಅದು ಆತನನ್ನು ಆಶ್ಚರ್ಯಚಕಿತನನ್ನಾಗಿ ಮಾಡಿಬಿಟ್ಟಿತು. ಆತ ಕೇವಲ, ‘ಆಹ! ಆಹ! ಆಹ! ಅಹ!’ ಅಂತ ಹೇಳಿ ಒಳಕ್ಕೆ ಧುಮುಕಿಬಿಟ್ಟ. ಮತ್ತೇನು ಸಮಾಚಾರವನ್ನೂ ಕೊಡಲಿಲ್ಲ. ಉಳಿದವರೂ ಹಾಗೆಯೇ ಹತ್ತಿ, ಮೊದಲನೆಯವನ ಹಾಗೆಯೇ ಆಹ! ಆಹ! ಆಹ! ಆಹ! ಅಂತ ಕೂಗಿ ಒಳಕ್ಕೆ ಧುಮುಕಿಬಿಟ್ಟರು. ಈಗ ಒಳಗೇನಿದೆ ಎಂಬುದನ್ನು ಯಾರು ತಾನೆ ಹೇಳಬಲ್ಲರು?
“ಜಡಭರತ, ದತ್ತಾತ್ರೇಯ ಮೊದಲಾದವರು ಬ್ರಹ್ಮಸಾಕ್ಷಾತ್ಕಾರ ದೊರೆತ ನಂತರ ಅದರ ಸಂಬಂಧವಾಗಿ ಯಾವ ಸುದ್ಧಿಯನ್ನೂ ಕೊಡಲಾರದೆಹೋದರು. ಬ್ರಹ್ಮಜ್ಞಾನ ದೊರೆತು ಸಮಾಧಿಯುಂಟಾಯಿತು ಎಂದರೆ ‘ಅಹಂ’ ಎಂಬುದು ಉಳಿದಿರದು. ಇದಕ್ಕಾಗಿಯೇ ರಾಮಪ್ರಸಾದನು ಮನಸ್ಸನ್ನು ಸಂಬೋಧಿಸಿ ಹೇಳಿದ್ದಾನೆ:
ನಿನಗೆ ಈ ಕೆಲಸವೂ ಕಷ್ಟವಾದರೆ ಹೇಳು
ರಾಮಪ್ರಸಾದನಿದೊ ನೆರವಿಗಿಹನು.
“ಮನಸ್ಸು ಜ್ಞಾನದಲ್ಲಿ ಲಯವಾಗಿಹೋಗಬೇಕು. ಆದರೆ ಅದು ಸಾಕಾಗದು. ‘ರಾಮ ಪ್ರಸಾದನ ಲಯ’ ಎಂದರೆ ‘ಅಹಂ ತತ್ತ್ವದ ಲಯ’ ಆಗಬೇಕು. ಆಗ ಮಾತ್ರವೇ ಬ್ರಹ್ಮಜ್ಞಾನ ದೊರೆಯುತ್ತದೆ.
ಒಬ್ಬ ಭಕ್ತ: “ಮಹಾಶಯರೇ, ಹಾಗಾದರೆ, ಶುಕದೇವನಿಗೆ ಬ್ರಹ್ಮಜ್ಞಾನ ದೊರೆಯಲಿಲ್ಲ ಅಂತಲೇನು?”
ಶ್ರೀರಾಮಕೃಷ್ಣರು: “ಕೆಲಕೆಲವರ ಭಾವನೆ, ಶುಕದೇವ ಬ್ರಹ್ಮಸಾಗರದ ದರ್ಶನ ಸ್ಪರ್ಶನ ಮಾಡಿದನೇ ವಿನಾ ಅದರಲ್ಲಿ ಮುಳುಗಲಿಲ್ಲ ಅಂತ. ಅದಕ್ಕಾಗಿಯೇ ಆತ ಹಿಂದಿರುಗಿ ಬಂದು ಅಷ್ಟೊಂದು ಉಪದೇಶ ಮಾಡಲು ಸಾಧ್ಯವಾಯಿತು. ಇನ್ನು ಕೆಲವರ ಭಾವನೆ, ಆತ ಬ್ರಹ್ಮಜ್ಞಾನ ದೊರೆತ ನಂತರ ಲೋಕಶಿಕ್ಷಣಕ್ಕಾಗಿ ಹಿಂದಿರುಗಿ ಬಂದ ಎಂದು. ಆತ ಪರೀಕ್ಷಿದ್ರಾಜನಿಗೆ ಭಾಗವತ ಪ್ರವಚನ ಮಾಡಿಸಬೇಕಾಗಿತ್ತು. ಅದಕ್ಕಾಗಿಯೇ ಭಗವಂತ ಆತನ ‘ಅಹಂ’ ಅನ್ನು ಪೂರ್ಣವಾಗಿ ನಾಶಮಾಡಲಿಲ್ಲ. ಭಗವಂತ ಆತನಲ್ಲಿ ‘ವಿದ್ಯಾ ಅಹಂ’ ಅನ್ನು ಇಟ್ಟಿದ್ದ.”
ಭಕ್ತ: “ಬ್ರಹ್ಮಜ್ಞಾನ ದೊರೆತ ನಂತರ ಸಮಾಜ ಮುಂತಾದುವನ್ನೆಲ್ಲಾ ನೋಡಲಾಗುವುದೇ?”
ಶ್ರೀರಾಮಕೃಷ್ಣರು: “ಒಮ್ಮೆ ನಾನು ಕೇಶವಸೇನನೊಡನೆ ಬ್ರಹ್ಮಜ್ಞಾನದ ಸಂಬಂಧವಾಗಿ ಮಾತನಾಡಿದೆ. ಅದನ್ನು ಇನ್ನೂ ಸ್ವಲ್ಪ ವಿಶದವಾಗಿ ಹೇಳಬೇಕೆಂದು ಆತ ನನ್ನನ್ನು ಕೇಳಿದ. ನಾನು ಹೇಳಿದೆ: ‘ನಾನು ಹಾಗೆ ಮಾಡಿದ್ದೇ ಆದರೆ, ನಿನ್ನ ಸಮಾಜ ಯಾವುದೂ ಉಳಿದುಕೊಳ್ಳದು.’ ಅದಕ್ಕೆ ಕೇಶವಸೇನ ಹೇಳಿದ: ‘ಮಹಾಶಯರೆ, ಹಾಗಾದರೆ ಮುಂದಕ್ಕೆ ಬೇಡಿ!’ (ಎಲ್ಲರೂ ನಗುತ್ತಿದ್ದಾರೆ.) ಆದರೂ ನಾನು ಕೇಶವಸೇನನಿಗೆ ಹೇಳಿದೆ: ‘ನಾನು’, ‘ನನ್ನದು’ ಎಂಬುದೇ ಅಜ್ಞಾನ. ‘ನಾನು ಕರ್ತ; ಈ ಹೆಂಡತಿ, ಮಕ್ಕಳು ಆಸ್ತಿ, ಕೀರ್ತಿ, ಸಂಭ್ರಮ ಇವೆಲ್ಲಾ ನನಗೆ ಸೇರಿದವು’ ಎಂಬ ಭಾವನೆ ಅಜ್ಞಾನದಿಂದಲ್ಲದೆ ಬೇರೆ ಯಾವುದರಿಂದಲೂ ಬಾರದು. ಕೇಶವ ಹೇಳಿದ: ‘ಮಹಾಶಯರೆ, ಈ ‘ಅಹಂ’ ಎಂಬುದನ್ನು ತ್ಯಜಿಸಿಬಿಟ್ಟಿದ್ದೇ ಆದರೆ ಇನ್ನು ಏನೂ ಉಳಿದುಕೊಳ್ಳುವುದಿಲ್ಲವಲ್ಲ.’ ಆಗ ನಾನು ಆತನಿಗೆ ಹೇಳಿದೆ : ಕೇಶವ, ನಾನು ನಿನಗೆ ಸಂಪೂರ್ಣವಾಗಿ ಎಲ್ಲಾ ‘ಅಹಂ’ ಗಳನ್ನೂ ತ್ಯಾಗಮಾಡು ಅಂತ ಹೇಳುತ್ತಿಲ್ಲ. ನೀನು ‘ಅಪಕ್ವ ಅಹಂ’ ಅನ್ನು ಮಾತ್ರ ತ್ಯಾಗಮಾಡು. ‘ನಾನು ಕರ್ತ; ನನ್ನ ಹೆಂಡತಿ-ಮಕ್ಕಳು; ನಾನು ಗುರು’ ಎಂಬ ಭಾವನೆ ‘ಅಪಕ್ವ ಅಹಂ’ ಗೆ ಸೇರಿದುದು. ಇದನ್ನು ತ್ಯಾಗಮಾಡಿ ‘ಪಕ್ವ ಅಹಂ’ ಮಾತ್ರ ಉಳಿಸಿಕೊ. ಅದು ನಿನಗೆ: ‘ನಾನು ಭಗವಂತನ ದಾಸ, ನಾನು ಆತನ ಭಕ್ತ. ಅವನು ಕರ್ತ, ನಾನು ಅಕರ್ತ” ಎಂಬ ಭಾವನೆಯನ್ನು ತರುತ್ತದೆ.”
ಭಕ್ತ: ‘ಪಕ್ವ ಅಹಂ’ ಸಮಾಜ ಕಟ್ಟಬಲ್ಲುದೆ?”
ಶ್ರೀರಾಮಕೃಷ್ಣರು: “ನಾನು ದಳಪತಿ, ನಾನು ಈ ಸಮಾಜ ಕಟ್ಟಿದ್ದೇನೆ, ನಾನು ಲೋಕಶಿಕ್ಷಣ ಮಾಡುತ್ತಿದ್ದೇನೆ” ಎಂಬ ‘ಅಹಂ’ ‘ಅಪಕ್ವ ಅಹಂ’. ಧರ್ಮಪ್ರಚಾರ ಬಹಳ ಕಠಿಣವಾದ ಕೆಲಸ. ಭಗವಂತನ ಆಜ್ಞೆಯಿಲ್ಲದಿದ್ದರೆ ಅದು ನಡೆಯುವ ಹಾಗಿಲ್ಲ. ಆತನ ಆದೇಶ ಬೇಕೇಬೇಕು. ಪ್ರವಚನ ಮಾಡಬೇಕೆಂದು ಶುಕದೇವನಿಗೆ ಆದೇಶವಾಗಿತ್ತು. ಭಗವಂತನ ಸಾಕ್ಷಾತ್ಕಾರ ದೊರೆತ ನಂತರ, ಆದೇಶ ದೊರೆತು, ಮನುಷ್ಯ ಧರ್ಮಪ್ರಚಾರಕನೋ ಲೋಕಶಿಕ್ಷಕನೋ ಆಗುವುದಾದರೆ ಅದರಿಂದ ಯಾವ ಹಾನಿಯೂ ಉಂಟಾಗದು. ಆತನ ‘ಅಹಂ’ ‘ಅಪಕ್ವ ಅಹಂ’ ಅಲ್ಲ. ‘ಪಕ್ವ ಅಹಂ’.
“ನಾನು ಕೇಶವನಿಗೆ ತಿಳಿಸಿದೆ ‘ಅಪಕ್ವ ಅಹಂ’ ಅನ್ನು ತ್ಯಾಗಮಾಡುವ ಹಾಗೆ. ‘ದಾಸ ಅಹಂ’, ‘ಭಕ್ತ ಅಹಂ’ ಇವು ಹಾನಿಕರವಾದುದೇನಲ್ಲ. ‘ನೀನು ಯಾವಾಗ ನೋಡಿದರೂ “ಸಮಾಜ, ಸಮಾಜ” ಅನ್ನುತ್ತಲೇ ಇದ್ದೀಯೆ. ಆದರೆ ನಿನ್ನ ಸಮಾಜದಿಂದಲೂ ಜನ ಒಡೆದುಕೊಂಡು ಹೋಗಿಬಿಡುತ್ತಾ ಇದ್ದಾರಲ್ಲಾ? ಎಂದು ಕೇಳಿದೆ. ಕೇಶವಸೇನ ಹೇಳಿದ: ‘ಹೌದು, ನಿಜ. ಅನೇಕ ವರ್ಷಗಳು ಇಲ್ಲಿ ಇದ್ದೂ ಬೇರೆ ಸಮಾಜಕ್ಕೆ ಹೊರಟುಹೋಗಿ ಬಿಡುತ್ತಾರೆ. ಅಷ್ಟೇ ಅಲ್ಲ, ಬಿಟ್ಟುಹೋಗುವಾಗ ನನ್ನನ್ನು ಚೆನ್ನಾಗಿ ಬಯ್ದೂ ಹೋಗುತ್ತಾರೆ.’ ನಾನು ಹೇಳಿದೆ: ‘ಜನರ ಸ್ವಭಾವ ನೋಡಿ ನೀನು ಏಕೆ ಅವರನ್ನು ಸೇರಿಸಿಕೊಳ್ಳುವುದಿಲ್ಲ? ಸಿಕ್ಕಿಸಿಕ್ಕಿದವರನ್ನೆಲ್ಲಾ ಶಿಷ್ಯರನ್ನಾಗಿ ಮಾಡಿಕೊಂಡರೆ, ಅದು ನಡೆಯುತ್ತದೆಯೇ?’
“ಮತ್ತೆ ಕೇಶವನಿಗೆ ಹೇಳಿದೆ: ‘ನೀನು ಆದ್ಯಾಶಕ್ತಿಯನ್ನು ಒಪ್ಪಿಕೊಂಡುಬಿಡು. ಬ್ರಹ್ಮನಿಗೂ ಶಕ್ತಿಗೂ ಅಭೇದ. ಯಾರು ಬ್ರಹ್ಮನೋ ಆತನೇ ಶಕ್ತಿ. ದೇಹಬುದ್ಧಿ ಇರುವವರೆಗೆ ದ್ವೈತ ಎಂಬ ಬೋಧೆ. ಬಾಯಿಬಿಡುವುದು ಅಂದರೇ ದ್ವೈತ’. ಕೇಶವಸೇನ ಕೊನೆಗೆ ಕಾಳಿಯನ್ನು ಸ್ವೀಕರಿಸಿದ.
‘ಒಂದು ದಿನ ಕೇಶವ ಇಲ್ಲಿಗೆ ಬಂದಿದ್ದ. ನಾನು ಆತನಿಗೆ ಹೇಳಿದೆ: “ನನಗೆ ನಿನ್ನ ಲೆಕ್ಚರ್ ಕೇಳಬೇಕು ಅಂತ ಆಸೆಯಾಗಿದೆ.’ ಆತ ಮುಖಮಂಟಪದಲ್ಲಿ ಕುಳಿತು ಲೆಕ್ಚರ್ ಕೊಟ್ಟ. ಬಳಿಕ ಎಲ್ಲರೂ ಸ್ನಾನಘಟ್ಟದ ಮೇಲೆ ಕುಳಿತು ಬಹಳವಾಗಿ ಮಾತಾಡಿದೆವು. ನಾನು ಆತನಿಗೆ ಹೇಳಿದೆ: ‘ಯಾರು ಭಗವಂತನೋ ಆತನೇ ಒಂದು ರೂಪದಲ್ಲಿ ಭಕ್ತನಾಗಿದ್ದಾನೆ, ಇನ್ನೊಂದು ರೂಪದಲ್ಲಿ ಭಾಗವತವಾಗಿದ್ದಾನೆ. ಆದ್ದರಿಂದ ನೀವೆಲ್ಲರೂ ಹೇಳಿ ನೋಡೋಣ “ಭಾಗವತ-ಭಕ್ತ-ಭಗವಾನ್” ಅಂತ.’ ಕೇಶವಸೇನ ಮತ್ತು ಆತನ ಭಕ್ತರು ಎಲ್ಲರೂ ಕೂಡಿ ಅದನ್ನು ಹೇಳಿದರು. ಯಾವಾಗ ನಾನು ‘ಗುರು-ಕೃಷ್ಣ-ವೈಷ್ಣವ’ ಅಂತ ಹೇಳಿ ಎಂದೆನೊ, ಆಗ ಕೇಶವ ಹೇಳಿದ: ‘ಮಹಾಶಯರೆ, ಈಗ ಅಷ್ಟು ದೂರದವರೆಗೆ ಬೇಡಿ. ಜನ ನನ್ನನ್ನು ಗೊಡ್ಡು ವೈಷ್ಣವ ಅಂದುಬಿಟ್ಟಾರು.’
“ತ್ರಿಗುಣಾತೀತನಾಗುವುದು ಬಹಳ ಕಷ್ಟ. ಭಗವಂತನ ಸಾಕ್ಷಾತ್ಕಾರ ದೊರೆಯದವರೆಗೆ ಅದು ಸಾಧ್ಯವಾಗುವುದಿಲ್ಲ. ಮನುಷ್ಯ ಮಾಯಾರಾಜ್ಯದಲ್ಲಿ ವಾಸಮಾಡುತ್ತಾನೆ. ಈ ಮಾಯೆ ಭಗವಂತನನ್ನು ದರ್ಶನ ಮಾಡಲು ಬಿಟ್ಟುಕೊಡುತ್ತಿಲ್ಲ. ಇದು ಮನುಷ್ಯನನ್ನು ಅಜ್ಞಾನದಿಂದ ಮುಸುಕಿ ಇಟ್ಟುಬಿಟ್ಟಿದೆ.
“ಒಮ್ಮೆ ಹೃದೆ ಇಲ್ಲಿಗೆ ಒಂದು ಹೋರಿಗರುವನ್ನು ತೆಗೆದುಕೊಂಡು ಬಂದ. ಒಂದು ದಿನ ಅದು ಹುಲ್ಲು ಮೇಯಲಿ ಎಂದು ಒಂದು ಉದ್ದವಾದ ಹಗ್ಗ ಹಾಕಿ ತೋಟದಲ್ಲಿ ಕಟ್ಟಿದ್ದ. ನಾನು ಆತನನ್ನು ಕೇಳಿದೆ: ‘ಏಕೆ, ನೀನು ದಿನವೂ ಆ ಕರುವನ್ನು ಅಲ್ಲಿ ಕಟ್ಟುತ್ತಾ ಇದ್ದೀಯೆ?’ ಆತ ಹೇಳಿದ: ‘ಮಾವ, ಇದನ್ನು ಊರಿಗೆ ಕಳುಹಿಸುತ್ತೇನೆ. ದೊಡ್ಡದಾದ ಮೇಲೆ ಇದು ನೇಗಿಲಿಗೆ ಬರುತ್ತದೆ.’ ಈ ಮಾತು ನನ್ನ ಕಿವಿಗೆ ಬಿದ್ದೊಡನೆಯೇ ನಾನು ಮೂರ್ಛಿತನಾಗಿ ಹೋಗಿಬಿಟ್ಟೆ. ಆಗ ಅನ್ನಿಸಿತು: ‘ಮಾಯೆಯ ಕ್ರೀಡೆ ಎಷ್ಟು ಅದ್ಭುತವಾದ್ದು! ಕಾಮಾರಪುಕುರ ಮತ್ತು ಸಿಹೋರ್ 3 ಇರುವುದೆಲ್ಲಿ, ಕಲ್ಕತ್ತವಿರುವುದೆಲ್ಲಿ! ಈ ಬಡ ಪ್ರಾಣಿ ಅಲ್ಲಿಯವರೆಗೆ ನಡೆದು ಹೋಗಬೇಕು, ಅಲ್ಲಿ ದೊಡ್ಡದಾಗಿ ಬೆಳೆಯಬೇಕು. ಬಳಿಕ ಬಹಳ ದಿನಗಳಾದ ನಂತರ ನೇಗಿಲಿಗೆ ಬರಬೇಕು! ಸಂಸಾರ ಎಂಬುದು ಇದೇ! ಮಾಯೆ ಎಂಬುದು ಇದೇ!’ ಬಹಳ ಹೊತ್ತಾದ ನಂತರ ನಾನು ಮೂರ್ಛೆಯಿಂದ ಎದ್ದೆ.”
ಘಂಟೆ ಅಪರಾಹ್ನ ಮೂರೊ-ನಾಲ್ಕೊ. ಪರಮಹಂಸರು ಭಾವಾವಿಷ್ಟರಾಗಿ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತಿರುವುದು ಮಾಸ್ಟರ ಕಣ್ಣಿಗೆ ಬಿತ್ತು. ಸ್ವಲ್ಪ ಹೊತ್ತಾದ ನಂತರ ಅವರು ಭಗವತಿಯೊಡನೆ ಮಾತನಾಡುತ್ತಿರುವುದು ಕೇಳಿಬಂತು. ಅವರು ಹೇಳುತ್ತಿದ್ದಾರೆ: “ತಾಯೆ, ಅವನಿಗೇಕೆ ಒಂದು ಕಿಂಚಿತ್ ಭಾಗವನ್ನು ಮಾತ್ರ ಕೊಟ್ಟಿದ್ದೀಯೆ?” ಸ್ವಲ್ಪ ಹಾಗೆಯೇ ಕುಳಿತು ಮತ್ತೆ ಹೇಳುತ್ತಿದ್ದಾರೆ: “ತಾಯೆ, ಈಗ ನನಗೆ ಅರ್ಥವಾಯಿತು. ನೀನು ಕೊಟ್ಟಿರುವ ಭಾಗವೇ ಅವನಿಗೆ ಯಥೇಷ್ಟ, ಅದರಿಂದಲೇ ನಿನ್ನ ಕಾರ್ಯವಾಗಿಬಿಡುತ್ತದೆ. ಲೋಕಶಿಕ್ಷಣವಾಗಿ ಬಿಡುತ್ತದೆ.”
ಪರಮಹಂಸರು ಈಗ ತಮ್ಮ ಅಂತರಂಗ ಭಕ್ತರಿಗೆ ಶಕ್ತಿಸಂಚಾರ ಮಾಡುತ್ತಿದ್ದಾರೇನು? ಮುಂದೆ ಅವರು ಲೋಕಶಿಕ್ಷಕರಾಗಲಿ ಎಂದು ಈಗಿನಿಂದಲೇ ಅವರಿಗೆ ಬೇಕಾಗುವ ಅನುಕೂಲತೆಗಳನ್ನು ಕಲ್ಪಿಸುತ್ತಿದ್ದಾರೇನು?
ಕೊಠಡಿಯಲ್ಲಿ ರಾಖಾಲನೂ ಇದ್ದಾನೆ. ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ರಾಖಾಲನಿಗೆ ಹೇಳುತ್ತಿದ್ದಾರೆ: “ನೀನು ನನ್ನ ಮೇಲೆ ಕೋಪಿಸಿಕೊಂಡಿದ್ದಿ, ಅಲ್ಲವೇ? ನಿನಗೆ ಕೋಪ ಬರುವಂತೆ ನಾನೇಕೆ ಮಾಡಿದೆ ಗೊತ್ತೆ? ಇದರಲ್ಲಿ ಒಂದು ಉದ್ದೇಶವಿದೆ. ಆಗ ಮಾತ್ರವೇ ಔಷಧ ಕೆಲಸ ಮಾಡುತ್ತದೆ. ಕುರು ಚೆನ್ನಾಗಿ ಹಣ್ಣಾದ ಮೇಲೆ ತಾನೆ ಶಸ್ತ್ರಚಿಕಿತ್ಸೆ ಮಾಡಬೇಕು?”
ಸ್ವಲ್ಪ ಹೊತ್ತಾದ ನಂತರ ಹೇಳಲಾರಂಭಿಸಿದ್ದಾರೆ: “ಹಾಜರಾ ನನಗೆ ಒಣಗಿದ ಮರದ ಹಾಗೆ ಕಂಡ. ಹಾಗಾದರೆ ಸುಮ್ಮನೆ ಆತ ಏಕೆ ಇಲ್ಲಿದ್ದಾನೆ? ಇದರಲ್ಲೂ ಅರ್ಥವಿದೆ. ಜಟಿಲೆ-ಕುಟಿಲೆಯರಿದ್ದರೆ ತಾನೆ ಲೀಲೆಗೆ ಕಳೆ ಬರಬೇಕಾದರೆ.
(ಮಾಸ್ಟರಿಗೆ) “ಭಗವದ್ರೂಪಗಳನ್ನು ಒಪ್ಪಿಕೊಳ್ಳಬೇಕು. ಜಗದ್ಧಾತ್ರಿ ರೂಪದ ಸಂಕೇತ ನಿನಗೆ ಗೊತ್ತೆ? ಯಾರು ಈ ಜಗತ್ತನ್ನು ಧಾರಣಮಾಡಿಕೊಂಡಿದ್ದಾಳೊ ಅವಳು. ಆಕೆ ಈ ಜಗತ್ತನ್ನು ಹೊತ್ತುಕೊಂಡಿರದಿದ್ದರೆ, ಪಾಲಿಸದಿದ್ದರೆ ಅದು ತನ್ನ ಸ್ಥಾನದಿಂದ ಕೆಳಕ್ಕೆ ಬಿದ್ದು ನಾಶವಾಗಿ ಬಿಡುತ್ತದೆ. ಮನಸ್ಸೆಂಬ ಆನೆಯನ್ನು ಯಾರು ವಶಪಡಿಸಿಕೊಳ್ಳುತ್ತಾನೊ ಆತನ ಹೃದಯದಲ್ಲಿ ಆಕೆ ವ್ಯಕ್ತವಾಗುತ್ತಾಳೆ.”
ರಾಖಾಲ: “ಮನಸ್ಸು ಮದದ ಆನೆ.”
ಶ್ರೀರಾಮಕೃಷ್ಣರು: “ಅದಕ್ಕೇ ಸಿಂಹವಾಹಿನಿಯ ಸಿಂಹ ಆನೆಯನ್ನು ಒಂದು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿರುವುದು.”
ಸಾಯಂಕಾಲವಾಗಿದೆ. ದೇವಾಲಯಗಳಲ್ಲಿ ಮಂಗಳಾರತಿ ನಡೆಯುತ್ತಿದೆ. ಪರಮಹಂಸರು ದೇವದೇವಿಯರ ನಾಮೋಚ್ಚಾರಣೆ ಮಾಡುತ್ತಿದ್ದಾರೆ. ಅವರು ತಮ್ಮ ಕೊಠಡಿಯಲ್ಲಿ ಚಿಕ್ಕ ಮಂಚದ ಮೇಲೆ ಕೈ ಮುಗಿದು ಕುಳಿತುಕೊಂಡು ಭಗವತಿಯ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಹೊರಜಗತ್ತು ಚಂದ್ರನ ಬೆಳಕಿನಿಂದ ತುಂಬಿ ತುಳುಕುತ್ತಿದೆ. ಭಕ್ತರು ಪರಮಹಂಸರ ಕೊಠಡಿಯಲ್ಲಿ ಕುಳಿತು ಅವರ ಪ್ರಶಾಂತ ಮುಖದ ಕಡೆ ದಿಟ್ಟಿಸಿ ನೋಡುತ್ತಿದ್ದಾರೆ.
ಬೇಲಘರದ ಗೋವಿಂದ ತನ್ನ ಕೆಲವು ಮಿತ್ರರೊಡನೆ ಕೊಠಡಿಯನ್ನು ಪ್ರವೇಶಿಸಿದ. ಅವರೆಲ್ಲರೂ ಪರಮಹಂಸರಿಗೆ ಪ್ರಣಾಮಮಾಡಿ ನೆಲದ ಮೇಲೆ ಕುಳಿತುಕೊಂಡರು. ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ಇದ್ದರು. ಕೆಲವು ನಿಮಿಷಗಳಾದ ನಂತರ ಅವರು ಭಕ್ತರಿಗೆ ಹೇಳಿದರು: “ನಿಮಗೇನೇನು ಸಂಶಯವಿದೆಯೋ, ಎಲ್ಲವನ್ನೂ ಕೇಳಿ ಬಿಡಿ. ಎಲ್ಲಕ್ಕೂ ಉತ್ತರ ಕೊಟ್ಟುಬಿಡುತ್ತೇನೆ.”
ಗೋವಿಂದ ಮತ್ತು ಉಳಿದ ಭಕ್ತರು ಭಾವನಾರಾಜ್ಯದಲ್ಲಿ ಮುಳುಗಿರುವಂತೆ ಕಂಡಿತು.
ಗೋವಿಂದ: “ಮಹಾಶಯರೆ, ಕಾಳಿಗೆ ಈ ಕಪ್ಪು ಬಣ್ಣ ಏಕೆ ಬಂತು?”
ಶ್ರೀರಾಮಕೃಷ್ಣರು: “ನೀನು ಆಕೆಯಿಂದ ಬಹಳ ದೂರದಲ್ಲಿರುವುದರಿಂದ ನಿನಗೆ ಆಕೆ ಕಪ್ಪಾಗಿ ಕಾಣುತ್ತಿದ್ದಾಳೆ. ಹತ್ತಿರ ಹೋಗಿ ನೋಡು, ಯಾವ ಬಣ್ಣವೂ ಇಲ್ಲ. ಸರೋವರದ ನೀರು ದೂರದಿಂದ ಕಪ್ಪಾಗಿ ಕಾಣುತ್ತದೆ, ಹತ್ತಿರ ಹೋಗಿ ಕೈಗೆ ಸ್ವಲ್ಪ ನೀರು ತೆಗೆದುಕೊಂಡು ನೋಡು, ಅದಕ್ಕೆ ಯಾವ ಬಣ್ಣವೂ ಇಲ್ಲ. ಆಕಾಶ ದೂರಕ್ಕೆ ನೀಲವರ್ಣದ್ದಾಗಿ ಕಾಣುತ್ತದೆ. ನಿನ್ನ ಹತ್ತಿರವಿರುವ ಆಕಾಶವನ್ನು ನೋಡು, ಅದಕ್ಕೆ ಯಾವ ಬಣ್ಣವೂ ಇಲ್ಲ. ಭಗವಂತನ ಹತ್ತಿರ ಹತ್ತಿರ ಬಂದಷ್ಟೂ ಅನುಭವವಾಗುತ್ತದೆ-ಆತನಿಗೆ ನಾಮ, ರೂಪ, ಯಾವುದೂ ಇಲ್ಲ ಎಂಬುದಾಗಿ. ಭಗವತಿಯನ್ನು ಬಿಟ್ಟು ಬಹಳ ದೂರಕ್ಕೆ ಮುಂದುವರಿದರೆ ಹುಲ್ಲು ಹೂವಿನ ಬಣ್ಣದ ಹಾಗೆ ನೀಲಿಯಾಗಿ ಕಾಣುತ್ತಾಳೆ. ಶ್ಯಾಮೆ (ಕಾಳಿ) ಪುರುಷನೆ ಅಥವಾ ಪ್ರಕೃತಿಯೆ? ಒಮ್ಮೆ ಒಬ್ಬ ಭಕ್ತ ಶ್ಯಾಮೆಯ ಪೂಜೆ ಮಾಡಿದ್ದ. ಇನ್ನೊಬ್ಬ ಬಂದು ಆಕೆಯನ್ನು ದರ್ಶನಮಾಡಿದಾಗ ಆಕೆಯ ಕೊರಳಿಗೆ ಯಜ್ಞೋಪವೀತವಿರುವುದು ಕಂಡುಬಂತು. ಆಗ ಆತ ಆ ಭಕ್ತನನ್ನು ಕೇಳಿದ : ‘ಏನಿದು? ನೀನು ಭಗವತಿಯ ಕೊರಳಿಗೆ ಯಜ್ಞೋಪವೀತ ಹಾಕಿದ್ದೀಯಲ್ಲ!’ ಭಕ್ತ ಹೇಳಿದ: ‘ಗೆಳೆಯ, ನೀನು ಭಗವತಿಯನ್ನು ಅರಿತುಕೊಂಡಿರುವಂತೆ ಕಾಣುತ್ತದೆ. ಆದರೆ ನನಗೆ ಇನ್ನೂ ಗೊತ್ತಾಗಿಲ್ಲ, ಆಕೆ ಪುರುಷನೋ ಅಥವಾ ಪ್ರಕೃತಿಯೋ ಎಂಬುದು; ಅದಕ್ಕಾಗಿಯೇ ಆಕೆಯ ಕೊರಳಿಗೆ ಯಜ್ಞೋಪವೀತ ಹಾಕಿದ್ದೇನೆ.’
“ಯಾರು ಶ್ಯಾಮೆಯೋ ಆತನೇ ಬ್ರಹ್ಮ. ಯಾರು ಸಾಕಾರನೋ ಆತನೇ ನಿರಾಕಾರ. ಯಾರು ಸಗುಣನೋ ಆತನೇ ನಿರ್ಗುಣ. ಬ್ರಹ್ಮನೇ ಶಕ್ತಿ; ಶಕ್ತಿಯೇ ಬ್ರಹ್ಮ. ಇಬ್ಬರಿಗೂ ಭೇದವಿಲ್ಲ. ಯಾರು ಸಚ್ಚಿದಾನಂದಮಯನೋ ಆತನೇ ಸಚ್ಚಿದಾನಂದಮಯಿ.”
ಗೋವಿಂದ: “ಯೋಗಮಾಯೆ ಅಂದರೇನು?”
ಶ್ರೀರಾಮಕೃಷ್ಣರು: “ಯೋಗಮಾಯೆ ಎಂದರೆ ಪ್ರಕೃತಿ-ಪುರುಷರ ಸಂಯೋಗ. ಈ ಜಗತ್ತಿನಲ್ಲಿ ಏನೇನು ಕಣ್ಣಿಗೆ ಬೀಳುವುವೋ ಅವೆಲ್ಲವೂ ಈ ಸಂಯೋಗದಿಂದ ಉದ್ಭವವಾದುವು. ಉದಾಹರಣೆಗೆ ಶಿವಕಾಳಿಯರ ಮೂರ್ತಿ ತೆಗೆದುಕೊ. ಕಾಳಿ ಶಿವನ ಮೇಲೆ ನಿಂತುಕೊಂಡಿದ್ದಾಳೆ. ಶಿವ ಶವದ ಹಾಗೆ ಆಕೆಯ ಪಾದದ ಕೆಳಗೆ ಬಿದ್ದುಕೊಂಡಿದ್ದಾನೆ. ಕಾಳಿ ಆತನ ಕಡೆಗೆ ದೃಷ್ಟಿಸಿ ನೋಡುತ್ತಿದ್ದಾಳೆ. ಇವೆಲ್ಲವೂ ಪುರುಷಪ್ರಕೃತಿಯರ ಸಂಯೋಗವನ್ನು ಸೂಚಿಸುತ್ತದೆ. ಪುರುಷ ನಿಷ್ಕ್ರಿಯ; ಅದಕ್ಕಾಗಿಯೇ ಶಿವ ಶವದ ಹಾಗೆ ನೆಲದ ಮೇಲೆ ಬಿದ್ದಿದ್ದಾನೆ. ಪುರುಷನ ಸಂಯೋಗದಿಂದ ಪ್ರಕೃತಿ ತನ್ನ ಎಲ್ಲಾ ಕೆಲಸಕಾರ್ಯಗಳನ್ನೂ ಮಾಡುತ್ತಾಳೆ, ಸೃಷ್ಟಿ-ಸ್ಥಿತಿ-ಪ್ರಳಯ ಕಾರ್ಯಗಳನ್ನು ಮಾಡುತ್ತಾಳೆ, ರಾಧಾಕೃಷ್ಣರ ಯುಗಳ ಮೂರ್ತಿಗಳ ಸಂಕೇತವೂ ಇದೇನೆ. ಈ ಸಂಯೋಗಕ್ಕಾಗಿಯೇ ಆ ಪ್ರತಿಮೆಗಳು ಒಂದರ ಕಡೆ ಇನ್ನೊಂದು ಬಾಗಿರುವುದು.
“ಈ ಸಂಯೋಗವನ್ನು ಸೂಚಿಸಲೋಸುಗವೇ ಶ್ರೀಕೃಷ್ಣ ಮೂಗಿಗೆ ಮುತ್ತು ಇಟ್ಟುಕೊಂಡಿರುವುದು; ಶ್ರೀಮತಿ (ರಾಧೆ) ತನ್ನ ಮೂಗಿಗೆ ನೀಲಮಣಿ ಇಟ್ಟುಕೊಂಡಿರುವುದು. ಶ್ರೀಮತಿಯದು ಗೌರವರ್ಣ, ಮುತ್ತಿನ ಹಾಗೆ ಉಜ್ಜ್ವಲವಾದ್ದು. ಶ್ರೀಕೃಷ್ಣನದು ಶ್ಯಾಮವರ್ಣ. ಇದಕ್ಕಾಗಿಯೇ ಶ್ರೀಮತಿ ನೀಲಮಣಿಯನ್ನು ಇಟ್ಟುಕೊಂಡಿರುವುದು. ಮತ್ತೆ ಶ್ರೀಕೃಷ್ಣನ ಉಡಿಗೆ ಪೀತಾಂಬರ, ಶ್ರೀಮತಿಯದು ನೀಲಾಂಬರ.
“ಉತ್ತಮ ಭಕ್ತ ಯಾರು ಗೊತ್ತೆ? ಯಾರು ಬ್ರಹ್ಮಜ್ಞಾನವನ್ನು ಪಡೆದುಕೊಂಡ ನಂತರ ಭಗವಂತನೇ ಈ ಜೀವ, ಜಗತ್ತು, ಚತುರ್ವಿಂಶತಿ ತತ್ತ್ವ ಆಗಿದ್ದಾನೆ ಎಂಬುದಾಗಿ ನೋಡುತ್ತಾನೋ ಆತ. ಮೊದಲು ‘ನೇತಿ’, ‘ನೇತಿ’, ‘ಇದಲ್ಲ’, ‘ಇದಲ್ಲ’ ಎಂದು ವಿಚಾರ ಮಾಡಿ ಚಾವಣಿಯನ್ನು ಮುಟ್ಟಬೇಕು. ಆಗ ಆತನಿಗೆ ಗೊತ್ತಾಗುತ್ತದೆ, ಚಾವಣಿ ಯಾವುದರಿಂದ-ಇಟ್ಟಿಗೆ, ಸುಣ್ಣ, ಇಟ್ಟಿಗೆಪುಡಿ-ತಯಾರಾಗಿದೆಯೋ ಅದೇ ವಸ್ತುಗಳಿಂದ ಮೆಟ್ಟಿಲ ಸಾಲೂ ತಯಾರಾಗಿದೆ ಎಂಬುದಾಗಿ. ಆಗ ಆತನಿಗೆ ತೋರಿಬರುತ್ತದೆ, ಬ್ರಹ್ಮನೇ ಜೀವ ಜಗತ್ತು ಸಮಸ್ತವೂ ಆಗಿದ್ದಾನೆ ಎಂಬುದಾಗಿ.
“ಕೇವಲ ವಿಚಾರವೇ? ಥೂ! ಥೂ! ಯಾವ ಪ್ರಯೋಜನಕ್ಕೂ ಬಂದುದಲ್ಲ. (ಪರಮಹಂಸರು ನೆಲದ ಮೇಲೆ ಉಗುಳುತ್ತಾರೆ.)
“ವಿಚಾರದಲ್ಲಿ ತೊಡಗಿ ನಾನೇಕೆ ಒಣಮರದಂತಾಗಲಿ? ಎಲ್ಲಿಯವರೆಗೆ ನನ್ನಲ್ಲಿ ‘ನಾನು’ ‘ನೀನು’ ಎಂಬ ಭೇದವಿರುವುದೋ ಅಲ್ಲಿಯವರೆಗೆ ಭಗವಂತನ ಪಾದಪದ್ಮಗಳಲ್ಲಿ ನನಗೆ ಶುದ್ಧ ಭಕ್ತಿ ಇರಲಿ.
(ಗೋವಿಂದನಿಗೆ) “ಕೆಲವು ವೇಳೆ ನಾನು ಹೇಳುವುದುಂಟು, ‘ನಾನೇ ನೀನು, ನೀನೇ ನಾನು’ ಎಂಬುದಾಗಿ. ಮತ್ತೆ ಕೆಲವು ವೇಳೆ ಅದು, ‘ನೀನೇ ನೀನು’ ಎಂಬುದಾಗಿ ಆಗಿ ಹೋಗುತ್ತದೆ. ಆಗ ‘ಅಹಂ’ ಎಂಬುದಕ್ಕಾಗಿ ಎಷ್ಟು ಹುಡುಕಿದರೂ ಸಿಕ್ಕದು. ಅವತಾರ ಶಕ್ತಿಯದೇ. ಕೆಲವರ ದೃಷ್ಟಿಯಿಂದ, ರಾಮ-ಕೃಷ್ಣ ಎಂಬುವರು ಚಿದಾನಂದ ಸಾಗರದ ಎರಡು ಅಲೆ ಮಾತ್ರ.
“ಅದ್ವೈತಜ್ಞಾನ ದೊರೆತನಂತರ ಆತ್ಮಜಾಗ್ರತಿಯುಂಟಾಗಿಬಿಡುತ್ತದೆ. ಆಗ ಸರ್ವಭೂತಗಳಲ್ಲೂ ಭಗವಂತ ಚೈತನ್ಯರೂಪದಿಂದಿರುವುದು ಕಾಣಬರುತ್ತದೆ. ಈ ಅನುಭವ ದೊರೆತ ನಂತರ ಆನಂದ ದೊರೆಯುತ್ತದೆ. ಮೊದಲು ಅದ್ವೈತಜ್ಞಾನ, ಬಳಿಕ ಆತ್ಮಜಾಗ್ರತಿ, ಅನಂತರ ನಿತ್ಯಾನಂದ.
(ಮಾಸ್ಟರಿಗೆ) “ಮತ್ತೆ ನಿನಗೆ ಹೇಳುತ್ತೇನೆ, ನೀನು ಭಗವದ್ರೂಪಗಳಲ್ಲಿ ಅವಿಶ್ವಾಸವಿಡಬೇಡ. ಭಗವಂತನಿಗೆ ರೂಪ ಉಂಟು; ನೀನು ಅದರಲ್ಲಿ ಶ್ರದ್ಧೆಯಿಡು. ಆತನ ಯಾವ ರೂಪ ನಿನಗೆ ಹಿಡಿಸುತ್ತದೋ ಅದರ ಮೇಲೆ ನೀನು ಧ್ಯಾನಮಾಡು.
(ಗೋವಿಂದನಿಗೆ) “ಸತ್ಯವೇನೆಂದರೆ, ಎಲ್ಲಿಯವರೆಗೆ ಪ್ರಾಪಂಚಿಕ ವಸ್ತುಗಳಲ್ಲಿ ಭೋಗಾಸಕ್ತಿ ಇರುವುದೋ ಅಲ್ಲಿಯವರೆಗೆ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂದಾಗಲೀ, ಆತನ ದರ್ಶನ ಪಡೆಯಬೇಕೆಂದಾಗಲೀ ಪ್ರಾಣ ವ್ಯಾಕುಲಪಡುವುದಿಲ್ಲ. ಮಗು ಆಟದಲ್ಲಿ ತೊಡಗುವಾಗ ಎಲ್ಲವನ್ನೂ ಮರೆತುಬಿಡುತ್ತದೆ. ಅದನ್ನು ಆಟದಿಂದ ಬಿಡಿಸಲು ಸಂದೇಶ (ಸಿಹಿತಿಂಡಿ) ಕೊಟ್ಟರೂ, ಅದನ್ನು ಎಲ್ಲೋ ಕಿಂಚಿತ್ ತಿಂದುಬಿಟ್ಟು ಮತ್ತೆ ಆಟದಲ್ಲಿ ತೊಡಗುತ್ತದೆ. ಯಾವಾಗ ಅದಕ್ಕೆ ಆಟವೂ ರುಚಿಸದೋ, ಸಂದೇಶವೂ ರುಚಿಸದೋ, ಆಗ ಅದು ಹೇಳುತ್ತದೆ: ‘ನಾನು ತಾಯಿಯ ಹತ್ತಿರಕ್ಕೆ ಹೋಗಬೇಕು’ ಎಂಬುದಾಗಿ. ಆಗ ಅದಕ್ಕೆ ಸಂದೇಶ ಬೇಕಾಗುವುದಿಲ್ಲ. ಯಾರನ್ನು ಆ ಮಗು ಎಂದೂ ನೋಡಿಲ್ಲವೋ ಕಂಡಿಲ್ಲವೋ ಆತ ಬಂದು ಹೇಳಿದರೂ: ‘ಬಾ, ನನ್ನೊಡನೆ. ನಿನ್ನ ತಾಯಿಯ ಹತ್ತಿರ ಕರೆದುಕೊಂಡು ಹೋಗುತ್ತೇನೆ’ ಎಂಬುದಾಗಿ, ಒಡನೇ ಅದು ಆತನನ್ನು ಹಿಂಬಾಲಿಸುತ್ತದೆ. ಮನುಷ್ಯ ಯಾರು ಬೇಕಾದರೂ ಆಗಲಿ, ಯಾರು ಅದನ್ನು ತನ್ನ ತಾಯಿಯ ಹತ್ತಿರಕ್ಕೆ ಕರೆದುಕೊಂಡುಹೋಗಿಬಿಡುತ್ತಾನೊ, ಆತನೊಡನೆ ಅದು ಹೊರಟುಹೋಗುತ್ತದೆ.
“ಪ್ರಾಪಂಚಿಕ ವಸ್ತುಗಳನ್ನು ಭೋಗಿಸಿ ತೃಪ್ತಿ ದೊರೆಯಿತು ಎಂದರೆ, ಪ್ರಾಣ ಭಗವಂತನಿಗಾಗಿ ವ್ಯಾಕುಲಪಡುತ್ತದೆ. ಏನು ಮಾಡಿದರೆ ಆತನ ಸಾಕ್ಷಾತ್ಕಾರ ದೊರೆಯುತ್ತದೆ ಎಂಬ ಈ ಚಿಂತೆಯೊಂದೇ. ಆಗ ಭಗವಂತನ ಬಗ್ಗೆ ಯಾರು ಏನು ಹೇಳಿದರೂ ಅದಕ್ಕೆ ಕಿವಿಗೊಡುತ್ತಾನೆ.”
ಮಾಸ್ಟರ್ ತನಗೆ ತಾನೇ: “ಅಯ್ಯೋ! ಪ್ರಾಣ ಭಗವಂತನಿಗಾಗಿ ವ್ಯಾಕುಲಪಡಬೇಕಾದರೆ ಈ ಹಾಳಾದ ಭೋಗವಾಸನೆ ಮುಗಿಯಬೇಕಲ್ಲ.”
೧೮ನೆ ಆಗಸ್ಟ್ ೧೮೮೩, ಪೂರ್ಣಿಮೆ, ಶನಿವಾರ
ಪರಮಹಂಸರು ಕಲ್ಕತ್ತದಲ್ಲಿ ಬಲರಾಮನ ಮನೆಗೆ ಬಂದಿದ್ದಾರೆ. ಅವತಾರತತ್ತ್ವದ ಸಂಬಂಧವಾಗಿ ಭಕ್ತರಿಗೆ ತಿಳಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಅವತಾರಪುರುಷ ಲೋಕಶಿಕ್ಷಣಕ್ಕಾಗಿ ಭಕ್ತಿ-ಭಕ್ತರನ್ನು ಆಶ್ರಯಿಸಿ ಈ ಜಗತ್ತಿನಲ್ಲಿ ಇರುತ್ತಾನೆ. ಇದು ಚಾವಣಿಯನ್ನು ಹತ್ತಿದ ನಂತರ ಮೆಟ್ಟಲ ಮೂಲಕ ಹತ್ತಿ ಇಳಿದು ಮಾಡುವ ಹಾಗೆ. ಜ್ಞಾನ ದೊರೆಯದವರೆಗೆ, ಎಲ್ಲಾ ಆಸೆಗಳು ನಿವೃತ್ತಿಯಾಗದವರೆಗೆ, ಜನರು ಭಕ್ತಿಮಾರ್ಗಾವಲಂಬಿಗಳಾಗಿರಬೇಕು. ಆಗ ಮಾತ್ರವೇ ಅವರಿಗೆ ಚಾವಣಿಯ ಮೇಲಕ್ಕೆ ಹತ್ತಲು ಸಾಧ್ಯವಾಗುತ್ತದೆ. ಎಲ್ಲಾ ವಾಸನೆಗಳು ಹೋದರೆ ಮಾತ್ರವೇ ಚಾವಣಿಗೆ ಹತ್ತಲು ಸಾಧ್ಯ. ಲೆಕ್ಕ ಸರಿಯಾಗದವರೆಗೆ ಅಂಗಡಿಯವ ಮಲಗಲು ಹೋಗುವುದಿಲ್ಲ. ಲೆಕ್ಕ ಹಾಕಿ ಅದು ಸರಿಯಾದ ನಂತರವೇ ನಿದ್ರಿಸಲು ಹೋಗುತ್ತಾನೆ.
(ಮಾಸ್ಟರಿಗೆ) “ಮನುಷ್ಯ ಕಾರ್ಯರಂಗಕ್ಕೆ ಇಳಿದ ಅಂದರೆ ಆತನಿಗೆ ಜಯ ಸಿದ್ಧವೇ ಸಿದ್ಧ. ಆಗೇ ಆಗುತ್ತದೆ.
“ಒಳ್ಳೇದು; ಕೇಶವಸೇನ, ಶಿವನಾಥಶಾಸ್ತ್ರಿ, ಇನ್ನೂ ಉಳಿದವರು ಉಪಾಸನೆ ನಡೆಸುತ್ತಾರಲ್ಲ, ಅದರ ವಿಷಯವಾಗಿ ನಿನ್ನ ಅಭಿಪ್ರಾಯವೇನು?”
ಮಾಸ್ಟರ್: “ನೀವು ಹೇಳುವ ಹಾಗೆ ಅವರು ತೋಟದ ವರ್ಣನೆಯಲ್ಲೇ ತೃಪ್ತರಾಗುತ್ತಾರೆಯೇ ವಿನಾ, ತೋಟದ ಯಜಮಾನನನ್ನು ನೋಡಬೇಕೆಂಬುದರ ವಿಷಯವಾಗಿ ಅಪರೂಪಕ್ಕೂ ಮಾತನಾಡುವುದಿಲ್ಲ. ತೋಟದ ವರ್ಣನೆ ಮಾಡುವುದೇ ಅವರ ಪೂಜೆಯ ಆದಿ ಮತ್ತು ಅಂತ್ಯ.”
ಶ್ರೀರಾಮಕೃಷ್ಣರು: “ನೀನು ಹೇಳುವುದು ಸರಿ. ತೋಟದ ಯಜಮಾನನನ್ನು ಕಂಡುಹಿಡಿದು ಆತನೊಡನೆ ಮಾತುಕತೆಯಾಡುವುದು ಮುಖ್ಯ ಕೆಲಸ. ಭಗವಂತನ ದರ್ಶನವೇ ಜೀವನದ ಉದ್ದೇಶ.”
ಈಗ ಪರಮಹಂಸರು ಅಧರಸೇನನ ಮನೆಗೆ ಬಂದಿದ್ದಾರೆ. ಮುಸ್ಸಂಜೆಯಾದ ನಂತರ ಪರಮಹಂಸರು ಅಧರಸೇನನ ಬೈಠಕ್ಖಾನೆಯಲ್ಲಿ ನಾಮಸಂಕೀರ್ತನೆ ಮಾಡುತ್ತ ನರ್ತಿಸುತ್ತಿದ್ದಾರೆ. ಕೊಠಡಿಯಲ್ಲಿ ರಾಖಾಲ, ಮಾಸ್ಟರ್ ಇನ್ನೂ ಕೆಲವು ಮಂದಿ ಭಕ್ತರು ಕುಳಿತಿದ್ದಾರೆ. ನಾಮಸಂಕೀರ್ತನೆ ಮುಗಿದ ನಂತರ ಭಾವಾವಿಷ್ಟರಾಗಿಯೇ ಕೆಳಗೆ ಕುಳಿತುಕೊಂಡರು. ಈಗ ರಾಖಾಲನಿಗೆ ಹೇಳುತ್ತಿದ್ದಾರೆ: “ಇಲ್ಲಿಯದು (ತಮ್ಮ ದೇಹವನ್ನು ತೋರಿ) ಶ್ರಾವಣಮಾಸದ ಮಳೆಯ ಹಾಗಲ್ಲ. ಅದು ಇದ್ದಕ್ಕಿದ್ದಹಾಗೆ ಜೋರಾಗಿ ‘ಧಪ್, ಧಪ್’ ಅಂತ ಬರುತ್ತದೆ, ಮತ್ತೆ ನಿಂತುಹೋಗಿಬಿಡುತ್ತದೆ. ಇಲ್ಲಿಯದು ಒಡೆದು ಮೂಡಿದ ಶಿವನೇ ಹೊರತು ಪ್ರತಿಷ್ಠಾಪಿಸಿದ ಶಿವನಲ್ಲ. ನೀನು ಅಂದು ಕೋಪಿಸಿಕೊಂಡು ದಕ್ಷಿಣೇಶ್ವರದಿಂದ ಬಂದುಬಿಟ್ಟೆ. ನಿನ್ನನ್ನು ಕ್ಷಮಿಸುವ ಹಾಗೆ ನಾನು ಭಗವತಿಗೆ ಪ್ರಾರ್ಥನೆ ಮಾಡಿದೆ.”
ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ಅಧರಸೇನನಿಗೆ ಹೇಳುತ್ತಿದ್ದಾರೆ: “ಮಗೂ, ನೀನು ಯಾರ ನಾಮಸಂಕೀರ್ತನೆ ಮಾಡಿದೆಯೋ, ಆತನ ಮೇಲೆ ಧ್ಯಾನ ಮಾಡು.” ಹೀಗೆಂದು ಹೇಳಿ ಅಧರಸೇನನ ನಾಲಗೆಯ ಮೇಲೆ ತಮ್ಮ ಬೆರಳಿನಿಂದ ಏನನ್ನೋ ಬರೆಯುತ್ತಿದ್ದಾರೆ. ಇದೇ ಅಧರಸೇನನ ಮಂತ್ರೋಪದೇಶವೇನು?
1. ಜಾನ್ ಸ್ಟೂಯರ್ಟ್ ಮಿಲ್ಲನ ಆತ್ಮಕಥೆ.
2 . ಭಗವಂತ ಒಳಗೆ ಹೊರಗೆ ಎಲ್ಲೆಲ್ಲೂ ಇದ್ದಾನೆ ಎಂಬ ಜ್ಞಾನ. ಈ ಜ್ಞಾನವಿರುವುದೇ ಆದರೆ, ಆತನ ಸಂಬಂಧವಾಗಿ ಚಿಂತಿಸುವುದೇ ಅನಾವಶ್ಯಕ.
3. ಹೃದಯನ ಊರು.