೪ನೆ ಜೂನ್ ೧೮೮೩, ಜ್ಯೇಷ್ಠ ಕೃಷ್ಣ ಚತುರ್ದಶಿ, ಸೋಮವಾರ
ಘಂಟೆ ಬೆಳಗಿನ ಒಂಬತ್ತು. ಭಕ್ತರು ಒಬ್ಬೊಬ್ಬರಾಗಿ ಬರಲಾರಂಭಿಸಿದ್ದಾರೆ. ಶ್ರೀರಾಮಕೃಷ್ಣರು ದಕ್ಷಿಣೇಶ್ವರದಲ್ಲಿ ತಮ್ಮ ಕೊಠಡಿಯ ಪಶ್ಚಿಮ ಅರ್ಧಚಂದ್ರಾಕೃತಿಯ ವರಾಂಡದಲ್ಲಿ ಗಂಗೆಯ ಕಡೆ ತಿರುಗಿ ಕುಳಿತುಕೊಂಡಿದ್ದಾರೆ. ಪರಮಹಂಸರೊಡನೆ ಹಿಂದಿನ ರಾತ್ರಿಯನ್ನು ಕಳೆದಿದ್ದ ಮಾಸ್ಟರ್ ಅವರ ಹತ್ತಿರ ಕುಳಿತಿದ್ದಾನೆ. ಬಲರಾಮ ಮತ್ತು ಇನ್ನೂ ಅನೇಕ ಭಕ್ತರು ವರಾಂಡದಲ್ಲಿ ಕುಳಿತಿದ್ದಾರೆ. ರಾಖಾಲ ನೆಲದ ಮೇಲೆ ಮಲಗಿಕೊಂಡು ತಲೆಯನ್ನು ಮಾತ್ರ ಪರಮಹಂಸರ ತೊಡೆಯ ಮೇಲೆ ಇಟ್ಟಿದ್ದಾನೆ. ಈಗ ಕೆಲವು ದಿನಗಳಿಂದ ಪರಮಹಂಸರು ರಾಖಾಲನನ್ನು ಸಾಕ್ಷಾತ್ ಬಾಲಗೋಪಾಲನೆಂದೇ ಪರಿಗಣಿಸುತ್ತಿದ್ದಾರೆ.
ತ್ರೈಲೋಕ್ಯ 1 ಕಾಳೀದೇವಾಲಯಕ್ಕೆ ತಮ್ಮ ಕೊಠಡಿಯ ಮುಂಭಾಗದ ರಸ್ತೆಯ ಮೂಲಕ ಬರುತ್ತಿರುವುದನ್ನು ಕಂಡು ಪರಮಹಂಸರು ರಾಖಾಲನಿಗೆ ಎದ್ದು ಕುಳಿತುಕೊಳ್ಳುವಂತೆ ಹೇಳಿದರು. ತ್ರೈಲೋಕ್ಯ ಪರಮಹಂಸರಿಗೆ ನಮಸ್ಕಾರ ಮಾಡಿದ.
ಶ್ರೀರಾಮಕೃಷ್ಣರು ತ್ರೈಲೋಕ್ಯನಿಗೆ : “ಏನು, ನಿನ್ನೆ ರಾತ್ರಿ ನಾಟಕ ನಡೆಯಲಿಲ್ಲವೇ?”
ತ್ರೈಲೋಕ್ಯ: “ಇಲ್ಲ. ಏರ್ಪಡಿಸಲೂ ಅನುಕೂಲವಾಗಲಿಲ್ಲ.”
ಶ್ರೀರಾಮಕೃಷ್ಣರು: “ಈಗ ಆದದ್ದು ಆಗಿಹೋಯಿತು. ಮುಂದೆ ಈ ರೀತಿಯಾಗಿ ಎಂದಿಗೂ ಆಗದ ಹಾಗೆ ನೋಡಿಕೊ. ದೇವಾಲಯದ ಪದ್ಧತಿಯನ್ನು ಚಾಚೂ ತಪ್ಪದೆ ನಡೆಸಿಕೊಂಡು ಹೋಗಬೇಕು.”
ತ್ರೈಲೋಕ್ಯ ಒಪ್ಪಿಕೊಂಡು ದೇವಾಲಯದ ಕಡೆ ಮುಂದುವರಿದ. ಸ್ವಲ್ಪ ಹೊತ್ತಾದ ಮೇಲೆ ವಿಷ್ಣು ದೇವಾಲಯದ ಅರ್ಚಕ, ರಾಮ ಚಟ್ಟೋಪಾಧ್ಯಾಯ ಪರಮಹಂಸರು ಕುಳಿತಿದ್ದ ಸ್ಥಳಕ್ಕೆ ಬಂದ.
ಶ್ರೀರಾಮಕೃಷ್ಣರು: “ನೋಡಿ ರಾಮ, ಮತ್ತೆ ಎಂದಿಗೂ ನಾಟಕವನ್ನು ನಿಲ್ಲಿಸಕೂಡದು ಎಂದು ತ್ರೈಲೋಕ್ಯನಿಗೆ ಹೇಳಿದೆ. ಹಾಗೆ ನಾನು ಹೇಳಿದ್ದು ಸರಿತಾನೆ ?”
ರಾಮ: “ಮಹಾಶಯರೇ, ಅದೇನು ತಪ್ಪಲ್ಲವಲ್ಲ? ಒಳ್ಳೇದೇ ಆಯಿತು. ಪದ್ಧತಿಗನುಸಾರ ನಡೆಸಿಕೊಂಡೇ ಬರಬೇಕು.”
ಪರಮಹಂಸರು ಬಲರಾಮನಿಗೆ ಆತನ ಮಧ್ಯಾಹ್ನದ ಊಟವನ್ನು ಇಲ್ಲೇ ಮಾಡುವಂತೆ ಹೇಳಿದರು. ಊಟಕ್ಕೆ ಇನ್ನೂ ಸಮಯ ಆಗಲಿಲ್ಲ. ಪರಮಹಂಸರು ತಮ್ಮ ಸಾಧನಾವಸ್ಥೆಯ ಸಂಬಂಧವಾಗಿ ಭಕ್ತರಿಗೆ ತಿಳಿಸುತ್ತಿದ್ದಾರೆ. ರಾಖಾಲ, ಮಾಸ್ಟರ್, ರಾಮಲಾಲ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು: “ಆಗಾಗ ಹಾಜರಾ ನನಗೆ ಬುದ್ಧಿವಾದ ಕೊಡುವುದಕ್ಕೆ ಬರುತ್ತಾನೆ. ಆತ ನನಗೆ ಹೇಳುತ್ತಾನೆ: ‘ಈ ಹುಡುಗರ ಸಂಬಂಧವಾಗಿ ನೀವೇಕೆ ಅಷ್ಟೊಂದು ತಲೆಗೆ ಹಚ್ಚಿಕೊಳ್ಳುತ್ತಿದ್ದೀರಿ?’ ಒಂದು ದಿನ ನಾನು ಗಾಡಿ ಮಾಡಿಕೊಂಡು ಬಲರಾಮನ ಮನೆಗೆ ಹೋಗುತ್ತಿದ್ದೆ. ಮಧ್ಯದಾರಿಯಲ್ಲಿ ಅದರ ಸಂಬಂಧವಾಗಿ ದೊಡ್ಡ ಯೋಚನೆಯೇ ಬಂದು ಬಿಟ್ಟಿತು. ನಾನು ಭಗವತಿಗೆ ತಿಳಿಸಿದೆ: “ತಾಯೆ, ಹಾಜರಾ ನಾನು ನರೇಂದ್ರನೇ ಮೊದಲಾದ ಯುವಕಭಕ್ತರ ಸಂಬಂಧವಾಗಿ ಹೆಚ್ಚಾಗಿ ಭಾವಿಸುತ್ತಿರುವುದನ್ನು ನೋಡಿ ನನಗೆ ಎಚ್ಚರಿಕೆ ಕೊಡುತ್ತಿದ್ದಾನೆ. ಭಗವಂತನನ್ನು ಮರೆತು ಈ ಹುಡುಗರ ಸಂಬಂಧವಾಗಿ ಏಕೆ ಅಷ್ಟೊಂದು ಭಾವಿಸುತ್ತಿದ್ದೀರಿ ಎಂದು ನನ್ನನ್ನು ಕೇಳುತ್ತಿದ್ದಾನೆ.’ ಹೀಗೆಂದು ನಾನು ಭಗವತಿಗೆ ತಿಳಿಸುವುದೇ ತಡ, ತಾನೇ ಮಾನುಷರೂಪವನ್ನು ಧರಿಸುವುದನ್ನೂ, ಶುದ್ಧಾತ್ಮರಲ್ಲಿ ವಿಶೇಷವಾಗಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿರುವುದನ್ನೂ ನನಗೆ ತೋರಿಸಿಕೊಟ್ಟಳು. ಈ ದರ್ಶನ ನನಗೆ ಸಮಾಧಿಯನ್ನು ತಂದಿತು. ಪ್ರಕೃತಿಸ್ಥನಾದ ನಂತರ ಹಾಜರಾನ ಮೇಲೆ ನನಗೆ ಕೋಪ ಬಂತು. ನನಗೆ ನಾನೇ ಹೇಳಿಕೊಂಡೆ : ‘ಆ ದುರುಳ ನನ್ನ ಮನಸ್ಸು ಕೆಡಿಸಿಬಿಟ್ಟಿದ್ದನಲ್ಲ.’ ಬಳಿಕ ಯೋಚನೆ ಬಂತು: ‘ಅಯ್ಯೋ ಪಾಪ, ಆ ಬಡಪಾಯಿಯನ್ನೇಕೆ ನಿಂದಿಸಲಿ? ಆತನಿಗೆ ಇದೆಲ್ಲಾ ಅರ್ಥವಾಗುವ ಬಗೆ ಹೇಗೆ?’
“ಈ ಯುವಕರು ಸಾಕ್ಷಾತ್ ನಾರಾಯಣರೇ ಎಂಬುದು ನನಗೆ ಗೊತ್ತಿದೆ. ನಾನು ಮೊಟ್ಟಮೊದಲು ನರೇಂದ್ರನನ್ನು ನೋಡಿದಾಗಲೇ ನನಗೆ ಕಂಡುಬಂತು, ಆತನಲ್ಲಿ ದೇಹ ಬುದ್ಧಿಯೇ ಇಲ್ಲದಿರುವುದು. ಎದೆ ಮೇಲೆ ಕೈಯಿಡುವುದೇ ತಡ, ಬಾಹ್ಯಜ್ಞಾನ ಶೂನ್ಯನಾಗಿ ಬಿಟ್ಟ. ಪ್ರಜ್ಞೆ ಬಂದ ಮೇಲೆ ಕೂಗಿಕೊಳ್ಳಲಾರಂಭಿಸಿದ: ‘ಏನಿದು? ಏನು ಮಾಡಿಬಿಟ್ಟಿರಿ ನೀವು ನನಗೆ? ನನಗೆ ಮನೆಯಲ್ಲಿ ತಂದೆತಾಯಿಗಳಿದ್ದಾರೆ!’ ಯದುಮಲ್ಲಿಕನ ಮನೆಯಲ್ಲೂ ಇದೇ ರೀತಿ ಆಯಿತು. ಕ್ರಮೇಣ ಆತನನ್ನು ನೋಡಬೇಕೆಂಬ ಆಕಾಂಕ್ಷೆ ಅಧಿಕಾಧಿಕವಾಗುತ್ತಾ ಬಂತು. ನನ್ನ ಪ್ರಾಣ ಸುಮ್ಮನೆ ಆತನಿಗಾಗಿ ಹಾತೊರೆಯಲಾರಂಭಿಸಿತು. ಆಗ ನಾನು ಭೋಲಾನಾಥನಿಗೆ 2 ತಿಳಿಸಿದೆ: ‘ನೋಡು ನನ್ನ ಮನಸ್ಸಿನಲ್ಲಿ ಹೀಗೇಕೆ ಆಗುತ್ತಿದೆ? ನರೇಂದ್ರನೆಂಬ ಹೆಸರಿನ ಒಬ್ಬ ಕಾಯಸ್ಥರ ಹುಡುಗನಿದ್ದಾನೆ. ಆತನಿಗಾಗಿ ಇಷ್ಟೊಂದು ವ್ಯಾಕುಲನಾಗಿದ್ದೇನಲ್ಲ ಏಕೆ?’ ಭೋಲಾನಾಥ ತಿಳಿಸಿದ: ‘ಇದಕ್ಕೆ ಉತ್ತರ ಮಹಾಭಾರತದಲ್ಲಿ ಇದೆ. ಸಮಾಧಿ ಪಡೆದವರು ಸಾಮಾನ್ಯ ಅವಸ್ಥೆಗೆ ಇಳಿದುಬಂದಾಗ ಸಾತ್ತ್ವಿಕರೊಡನೆ ಬೆರೆತು ಆನಂದಪಡುತ್ತಾರೆ. ಸಾತ್ತ್ವಿಕರನ್ನು ಕಂಡರೆ ಅವರ ಮನಸ್ಸಿಗೆ ಶಾಂತಿಯುಂಟಾಗುತ್ತದೆ.’ ಈ ಮಾತು ಕೇಳಿ ನನ್ನ ಮನಸ್ಸಿಗೆ ಸಮಾಧಾನವಾಯಿತು. ಆಗಾಗ ನರೇಂದ್ರನನ್ನು ನೋಡಬೇಕು ಎಂಬುದಾಗಿ ಏಕಾಂತದಲ್ಲಿ ಕುಳಿತು ಅಳುತ್ತಿದ್ದೆ.
“ಅಹಹ, ಏನೇನವಸ್ಥೆ ಬಂದುಹೋಯಿತು! ಮೊದಲು ನನಗೆ ಈ ಅವಸ್ಥೆ ಬಂದಾಗ ಹಗಲು ಇರುಳು ಹೇಗೆ ಹೊರಟುಹೋಗುತ್ತಿದ್ದುವೋ ಗೊತ್ತಾಗುತ್ತಲೇ ಇರಲಿಲ್ಲ. ನನಗೆ ಹುಚ್ಚು ಹಿಡಿದಿದೆ ಎಂದು ಎಲ್ಲರೂ ಹೇಳತೊಡಗಿದರು. ಅದಕ್ಕಾಗಿ ನನಗೆ ವಿವಾಹ ಮಾಡಿದರು. ಆಗ ನನಗೆ ಉನ್ಮಾದ ಅವಸ್ಥೆ. ಮೊದಲು ನನ್ನ ಹೆಂಡತಿಯ ಸಂಬಂಧವಾಗಿ ಸ್ವಲ್ಪ ಯೋಚನೆ ಹತ್ತಿಕೊಂಡಿತು. ಕೊನೆಗೆ ಯೋಚಿಸಿದೆ, ಆಕೆಯೂ ಉಂಡೂ ತಿಂದೂ ನನ್ನ ಹಾಗೆಯೇ ಇರುತ್ತಾಳೆ.
“ಒಮ್ಮೆ ಮಾವನವರ ಮನೆಗೆ ಹೋಗಿದ್ದೆ. ಅಲ್ಲಿ ಬಹಳ ಒಳ್ಳೆಯ ಸಂಕೀರ್ತನೆಯ ವ್ಯವಸ್ಥೆ ಮಾಡಿದ್ದರು. ಅದು ಬಹಳ ಚೆನ್ನಾಗಿ ನಡೆಯಿತು. ನನ್ನ ಭವಿಷ್ಯದಲ್ಲಿ ಏನೇನಿದೆಯೋ ಎಂದು ಒಮ್ಮೊಮ್ಮೆ ಯೋಚಿಸುತ್ತಿದ್ದೆ. ನಾನು ಭಗವತಿಗೆ ಹೇಳುತ್ತಿದ್ದೆ: ‘ಊರಿನ ಜಮೀನುದಾರ ನನಗೆ ಪುರಸ್ಕಾರ ತೋರಿಸುವುದಾದರೆ, ನಾನು ಭಾವಿಸಿಕೊಳ್ಳುತ್ತೇನೆ, ನನ್ನ ಆಧ್ಯಾತ್ಮಿಕ ಉನ್ನತಿ ಸತ್ಯವಾದ್ದು ಎಂದು.’ ಅದಕ್ಕೆ ತಕ್ಕಂತೆ ಅವರೂ ತಾವಾಗಿಯೇ ಬಂದು ನನ್ನನ್ನು ಮಾತನಾಡಿಸಿದರು.
“ಆಹಾ! ಏನವಸ್ಥೆ ಬಂದಿತ್ತು! ಕಿಂಚಿತ್ ಭಾವಪ್ರೇರಣೆ ಆದರೇ ಸಾಕು, ಒಮ್ಮೆಗೇ ಉದ್ದೀಪನವಾಗಿಬಿಡುತ್ತಿತ್ತು. ಒಮ್ಮೆ ನಾನು ಹದಿನಾಲ್ಕು ವರ್ಷದ ಒಬ್ಬ ಸುಂದರಿಯನ್ನು ಪೂಜೆ ಮಾಡಿದೆ. ಆಕೆ ಸಾಕ್ಷಾತ್ ಭಗವತಿಯೇ ಆಗಿ ಕಂಡಳು. ಒಂದು ರೂಪಾಯಿ ದಕ್ಷಿಣೆ ಕೊಟ್ಟು ಆಕೆಗೆ ಪ್ರಣಾಮ ಮಾಡಿದೆ. ಒಮ್ಮೆ ರಾಮಲೀಲೆ ಎಂಬ ನಾಟಕ ನೋಡಲು ಹೋಗಿದ್ದೆ. ಪಾರ್ಟು ವಹಿಸಿದ್ದವರು ಸಾಕ್ಷಾತ್ ಸೀತೆ, ರಾಮ, ಲಕ್ಷ್ಮಣ, ಹನುಮಂತ, ವಿಭೀಷಣರಾಗಿಯೇ ಕಂಡರು. ಬಳಿಕ ಆ ನಟನಟಿಯರನ್ನೆಲ್ಲಾ ಪೂಜೆ ಮಾಡಿದೆ.
“ಆ ಸಮಯದಲ್ಲಿ ಕುಮಾರಿಯರನ್ನು ಕರೆದುಕೊಂಡು ಅವರಿಗೆ ಪೂಜೆ ಮಾಡುತ್ತಿದ್ದೆ. ಅವರು ಸಾಕ್ಷಾತ್ ಭಗವತಿಯೇ ಆಗಿ ಕಾಣಿಸಿಕೊಳ್ಳುತ್ತಿದ್ದರು.
“ಒಂದು ದಿನ ಒಬ್ಬ ಹೆಂಗಸು ನೀಲಿ ಬಣ್ಣದ ಸೀರೆ ಉಟ್ಟು ಬಕುಳ ಮರದ ಹತ್ತಿರ ನಿಂತಿದ್ದಳು. ಆಕೆ ವೇಶ್ಯೆ. ಒಡನೆಯೇ ನನಗೆ ಸೀತೆಯ ಉದ್ದೀಪನವಾಗಿಬಿಟ್ಟಿತು. ಆಕೆ ವೇಶ್ಯೆ ಎಂಬುದು ಮರೆತೇಹೋಯಿತು. ಸಾಕ್ಷಾತ್ ಸೀತೆಯೇ ಲಂಕೆಯಿಂದ ಬಿಡುಗಡೆ ಹೊಂದಿದವಳಾಗಿ ರಾಮನನ್ನು ಸಂಧಿಸಲು ಮುಂದುವರಿಯುತ್ತಿರುವಂತೆ ಕಂಡುಬಂದಳು. ಬಹಳ ಹೊತ್ತಿನವರೆಗೆ ಬಾಹ್ಯಜ್ಞಾನಶೂನ್ಯನಾಗಿ ಸಮಾಧಿಸ್ಥನಾಗಿದ್ದುಬಿಟ್ಟೆ.
“ಇನ್ನೊಂದು ದಿನ ಕಲ್ಕತ್ತದಲ್ಲಿರುವ ಮೈದಾನಕ್ಕೆ ಹಾಗೇ ಸುತ್ತಾಡಿಬರಲು ಹೋದೆ. ಆಕಾಶಬುಟ್ಟಿ ಮೇಲಕ್ಕೆ ಹತ್ತಿಹೋಗುವುದನ್ನು ನೋಡಲು ಅನೇಕ ಜನ ಅಲ್ಲಿಗೆ ಬಂದು ನೆರೆದಿದ್ದರು. ಇದ್ದಕ್ಕಿದ್ದ ಹಾಗೆ ಒಂದು ಮರಕ್ಕೆ ಒರಗಿಕೊಂಡು ತ್ರಿಭಂಗಿಯಾಗಿ ನಿಂತಿದ್ದ ಒಬ್ಬ ಆಂಗ್ಲ ಹುಡುಗನ ಕಡೆ ನನ್ನ ಕಣ್ಣು ಹೋಯಿತು. ಒಡನೆಯೇ ಶ್ರೀಕೃಷ್ಣನ ಉದ್ದೀಪನವಾಗಿಬಿಟ್ಟಿತು. ಸಮಾಧಿಸ್ಥನಾಗಿಬಿಟ್ಟೆ.
“ಒಮ್ಮೆ ಸಿಹೋರಿನಲ್ಲಿ ಗೋವಳರಿಗೆ ಪ್ರತಿಯೊಬ್ಬರ ಕೈಗೂ ಸಿಹಿತಿಂಡಿ ಕೊಟ್ಟೆ. ಅವರು ಸಾಕ್ಷಾತ್ ವ್ರಜದ ಗೋಪಾಲಕರಾಗಿಯೇ ಕಂಡುಬಂದರು. ಬಳಿಕ ಅವರ ಕೈಯಿಂದಲೆ ನಾನೂ ತಿನ್ನಲಾರಂಭಿಸಿದೆ.
“ಆಗ ಪ್ರಾಯಿಕವಾಗಿ ನನಗೆ ಬಾಹ್ಯಪ್ರಜ್ಞೆಯೆ ಇರುತ್ತಿರಲಿಲ್ಲ. ಒಮ್ಮೆ ಮಧುರ ಬಾಬು ಜಾನಬಜಾರಿನಲ್ಲಿದ್ದ ತನ್ನ ಮನೆಗೆ ಕರೆದುಕೊಂಡು ಹೋಗಿ ಕೆಲವು ದಿನದ ಮಟ್ಟಿಗೆ ನನ್ನನ್ನು ಅಲ್ಲಿಯೆ ಇರುವಂತೆ ಮಾಡಿದ್ದ. ಆಗ ನಾನು ಭಗವತಿಯ ಸಾಕ್ಷಾತ್ ದಾಸಿಯೆ ಆಗಿರುವಂತೆ ನನಗೆ ಕಂಡುಬಂತು. ಮನೆಯ ಹೆಂಗಸರಿಗೆ ನನ್ನನ್ನು ಕಂಡರೆ ಸ್ವಲ್ಪವೂ ಲಜ್ಜೆಯಾಗುತ್ತಿರಲಿಲ್ಲ. ಬೇರೆ ಹೆಂಗಸರನ್ನೆ ಆಗಲಿ ಚಿಕ್ಕ ಮಗುವನ್ನೆ ಆಗಲಿ ಕಂಡರೆ ಹೇಗೆ ಹೆಂಗಸರಿಗೆ ನಾಚಿಕೆಯಾವುದಿಲ್ಲವೋ ಹಾಗೇ ಅವರು ನನ್ನೊಡನೆ ವ್ಯವಹರಿಸುತ್ತಿದ್ದರು. ಮನೆಯ ದಾಸಿಯ ಜೊತೆಯಲ್ಲಿ ಹೋಗಿ ಮಧುರಬಾಬುವಿನ ಮಗಳನ್ನು ಆಕೆಯ ಗಂಡ ಮಲಗುತ್ತಿದ್ದ ಕೊಠಡಿಯಲ್ಲಿ ಬಿಟ್ಟು ಬರುತ್ತಿದ್ದೆ.
“ಈಗಲೂ ಭಾವಸ್ಫುರಣ ಸ್ವಲ್ಪವೇ ಸಾಕು, ಉದ್ದೀಪನವಾಗಿಬಿಡುತ್ತದೆ. ರಾಖಾಲ ಪಿಟಿಪಿಟಿಗುಟ್ಟುತ್ತ ಜಪಮಾಡುತ್ತಿದ್ದ. ಆಗ ನಾನು ಸುಮ್ಮನೆ ಇರಲಾಗುತ್ತಿರಲಿಲ್ಲ. ಒಮ್ಮೆಗೇ ಭಗವದುದ್ದೀಪನವಾಗಿಬಿಟ್ಟು ಭಾವಪರವಶನಾಗಿಬಿಡುತ್ತಿದ್ದೆ.”
ಪರಮಹಂಸರು ಪ್ರಕೃತಿಯ ಭಾವವನ್ನು ಆರೋಪಿಸಿಕೊಂಡಿದ್ದಾಗ ತಮಗೆ ದೊರೆತ ಅನುಭವಗಳನ್ನು ವರ್ಣನೆಮಾಡುತ್ತಾ ಮುಂದುವರಿದರು. ಅವರು ಹೇಳುತ್ತಿದ್ದಾರೆ: “ಒಮ್ಮೆ ನಾನು ಒಬ್ಬ ಕೀರ್ತನಕಾರನಿಗೆ ಕೀರ್ತನಕಾರ್ತಿಯ ಹಾವಭಾವಗಳನ್ನೆಲ್ಲ ಅಣಕಿಸಿ ತೋರಿಸಿದೆ. ಆತ ಹೇಳಿದ: ‘ಇವೆಲ್ಲ ಚಾಚೂ ತಪ್ಪದೆ ಸರಿ. ಇವನ್ನೆಲ್ಲಾ ಎಲ್ಲಿ ಕಲಿತಿರಿ?” ಪರಮಹಂಸರು ಈಗ ಭಕ್ತರ ಮುಂದೆ ಮತ್ತೆ ಅದನ್ನೆ ನಟಿಸಿ ತೋರಿಸುತ್ತಿದ್ದಾರೆ. ಅಲ್ಲಿದ್ದವರೆಲ್ಲ ಗಟ್ಟಿಯಾಗಿ ನಗಲಾರಂಭಿಸಿದ್ದಾರೆ.
ಮಧ್ಯಾಹ್ನದ ಊಟವಾದ ನಂತರ ಪರಮಹಂಸರು ಈಗ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಬ್ರಾಹ್ಮಸಮಾಜದ ಅನುಯಾಯಿಯಾದ ಮಣಿಲಾಲಮಲ್ಲಿಕ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ಅವರಿನ್ನೂ ಹಾಸಿಗೆಯ ಮೇಲೆ ಮಲಗಿಕೊಂಡೇ ಇದ್ದಾರೆ. ಮಣಿಲಾಲ ಪರಮಹಂಸರಿಗೆ ಆಗಾಗ ಪ್ರಶ್ನೆ ಹಾಕುತ್ತಲೆ ಇದ್ದಾನೆ. ಅವರೂ ಅರ್ಧ ಮಲಗಿ ಅರ್ಧ ಎಚ್ಚತ್ತು ಒಮ್ಮೊಮ್ಮೆ ಉತ್ತರ ಕೊಡುತ್ತಿದ್ದಾರೆ. ಮಣಿಲಾಲ ಹೇಳಿದ: ಶಿವನಾಥ, ನಿತ್ಯಗೋಪಾಲನನ್ನು ಬಹಳವಾಗಿ ಹೊಗಳುತ್ತಿದ್ದಾನೆ ಎಂಬುದಾಗಿ; ಪರಮಹಂಸರು ನಿದ್ದೆಗಣ್ಣಿನಲ್ಲೆ ಕೇಳಿದರು, ಹಾಜರಾನ ಸಂಬಂಧವಾಗಿ ಅವರು ಏನು ಹೇಳುತ್ತಾರೆ ಅಂತ.
ಈಗ ಪರಮಹಂಸರು ತಮ್ಮ ಹಾಸಿಗೆಯ ಮೇಲೆ ಎದ್ದು ಕುಳಿತು ಭವನಾಥನ ಭಕ್ತಿಯ ಸಂಬಂಧವಾಗಿ ಮಣಿಲಾಲನಿಗೆ ಹೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಅಹ! ಆತನದು ಎಂಥ ಭಾವ! ಅವನು ಹಾಡತೊಡಗುವುದೇ ತಡ, ಕಣ್ಣಿನಲ್ಲಿ ನೀರು ತುಂಬಿಕೊಂಡುಬಿಡುತ್ತದೆ. ಹರೀಶ ಆತನ ಕಣ್ಣಿಗೆ ಬಿದ್ದ ಅಂದರೆ ಆತನಲ್ಲಿ ಭಾವೋದ್ರೇಕವಾಗಿಬಿಡುತ್ತದೆ. ಹರೀಶ ಮನೆಯನ್ನು ಬಿಟ್ಟುಬಂದು ಆಗಾಗ ಇಲ್ಲಿ ಇರುವುದನ್ನು ನೋಡಿ ಹೇಳಿದ: ‘ಈತ ಒಳ್ಳೇ ಅದೃಷ್ಟಶಾಲಿ.”
ಶ್ರೀರಾಮಕೃಷ್ಣರು ಮಾಸ್ಟರನ್ನು ಕೇಳುತ್ತಿದ್ದಾರೆ: “ಒಳ್ಳೇದು, ಭಕ್ತಿಗೆ ಕಾರಣವೇನು? ಭವನಾಥ ಮೊದಲಾದ ಈ ಹುಡುಗರಿಗೆ ಏಕೆ ಉದ್ದೀಪನವಾಗುತ್ತೆ?” ಮಾಸ್ಟರ್ ಯಾವ ಉತ್ತರವನ್ನೂ ಕೊಡಲಿಲ್ಲ.
ಶ್ರೀರಾಮಕೃಷ್ಣರು: “ಸತ್ಯವೇನೆಂದರೆ, ಮನುಷ್ಯರು ನೋಡುವುದಕ್ಕೇನೋ ಒಂದೇ ರೀತಿಯಾಗಿ ಕಾಣುತ್ತಾರೆ. ಆದರೆ ಕೆಲವರ ಆಂತರ್ಯದಲ್ಲಿ ಹಾಲುಖೋವದಿಂದ ತಯಾರಿಸಿದ ಹೂರ್ಣ ತುಂಬಿರುತ್ತದೆ. ಕಡುಬುಗಳಲ್ಲಿ ಕೆಲವದರೊಳಗೆ ಉದ್ದಿನ ಹೂರ್ಣ ತುಂಬಿರುತ್ತದೆ. ಇನ್ನು ಕೆಲವದರೊಳಗೆ ಹಾಲುಖೋವದ ಹೂರ್ಣ ತುಂಬಿರುತ್ತದೆ. ಆದರೆ ಹೊರಗೆ ನೋಡುವುದಕ್ಕೆ ಮಾತ್ರ ಎಲ್ಲಾ ಒಂದೇ ರೀತಿಯಾಗಿ ಕಾಣುತ್ತವೆ. ಭಗವಂತನನ್ನು ಅರಿಯಬೇಕೆಂಬ ಇಚ್ಛೆ, ಆತನಲ್ಲಿ ಪ್ರೇಮಭಕ್ತಿ ಇವೇ ಮೊದಲಾದುವೇ ಹಾಲುಖೋವದ ಹೂರ್ಣ.”
ಈಗ ಪರಮಹಂಸರು ಭಕ್ತರಿಗೆ ಅಭಯ ನೀಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಕೆಲಕೆಲವರು ಭಾವಿಸುತ್ತಾರೆ: ‘ನಾನು ಬದ್ಧಜೀವಿ. ನನಗೆ ಜ್ಞಾನ ಭಕ್ತಿ ದೊರೆಯುವುದಿಲ್ಲ’ ಎಂದು. ಗುರುವಿನ ಕೃಪೆ ದೊರೆತದ್ದೇ ಆದರೆ, ಸ್ವಲ್ಪವೂ ಹೆದರಬೇಕಾಗಿಲ್ಲ. ಒಮ್ಮೆ ಒಂದು ಹೆಣ್ಣುಹುಲಿ ಕುರಿಮಂದೆಯ ಮೇಲೆ ಬಿತ್ತು. ಅದು ತನ್ನ ಬೇಟೆಯ ಮೇಲೆ ಹಾರಿದಾಗ ಮರಿ ಹಾಕಿ ಸತ್ತುಹೋಯಿತು. ಬಳಿಕ ಮರಿ ಆಡುಗಳೊಡನೆ ಬೆಳೆಯತೊಡಗಿತು. ಅವು ಹುಲ್ಲು ಮೇಯುತ್ತಿದ್ದುವು. ಹುಲಿ ಮರಿಯೂ ಹಾಗೆ ಹುಲ್ಲು ಮೇಯುತ್ತಿತ್ತು. ಅವು ‘ಬ್ಯಾ, ಬ್ಯಾ’ ಎಂದು ಅರಚುತ್ತಿದ್ದುವು. ಹುಲಿ ಮರಿಯೂ ಹಾಗೆಯೇ ‘ಬ್ಯಾ, ಬ್ಯಾ’ ಅಂತ ಅರಚುತ್ತಿತ್ತು. ಕ್ರಮೇಣ ಹುಲಿ ಮರಿ ಬಹಳ ದೊಡ್ಡದಾಗಿ ಬೆಳೆಯಿತು. ಒಂದು ದಿನ ಅದೇ ಮಂದೆಯ ಮೇಲೆ ಇನ್ನೊಂದು ಹುಲಿ ಬಿದ್ದಿತು. ಆ ಮಂದೆಯೊಡನೆ ಹುಲ್ಲು ತಿನ್ನುವ ಹುಲಿ ಇರುವುದನ್ನು ಕಂಡು ಆ ಹುಲಿಗೆ ಬಹಳ ಆಶ್ಚರ್ಯವಾಯಿತು. ಅದು ಓಡಿ ಬಂದು ಆ ಹುಲ್ಲು ತಿನ್ನುತ್ತಿದ್ದ ಹುಲಿಯನ್ನು ಹಿಡಿದುಕೊಂಡಿತು. ಆಗ ಅದು ‘ಬ್ಯಾ, ಬ್ಯಾ’ ಅಂತ ಅರಚತೊಡಗಿತು. ಕಾಡಿನ ಹುಲಿ ಆ ಹುಲ್ಲು ತಿನ್ನುವ ಹುಲಿಯನ್ನು ನೀರಿನ ಹತ್ತಿರಕ್ಕೆ ಎಳೆದುಕೊಂಡು ಹೋಗಿ ಹೇಳಿತು: ‘ಅಲ್ಲಿ ನೋಡು, ನೀರಿನಲ್ಲಿ ನಿನ್ನ ಮುಖ ನೋಡು. ಅದು ನನ್ನದರ ಹಾಗೆಯೇ ಇದೆ. ಇಲ್ಲಿ ಒಂದು ಚೂರು ಮಾಂಸದ ತುಂಡು ಇದೆ. ತಿನ್ನು ಇದನ್ನು.’ ಹೀಗೆಂದು ಹೇಳಿ ಬಲಾತ್ಕರಿಸಿ ಅದರ ಗಂಟಲೊಳಕ್ಕೆ ಆ ಮಾಂಸದ ತುಂಡನ್ನು ಹಾಕಿತು. ಅದು ಏನು ಮಾಡಿದರೂ ತಿನ್ನದೆ ಸುಮ್ಮನೆ ‘ಬ್ಯಾ, ಬ್ಯಾ’ ಅಂತ ಕಿರುಚುತ್ತಲೇ ಇತ್ತು. ಕ್ರಮೇಣ ಅದಕ್ಕೆ ರಕ್ತದ ರುಚಿ ಸಿಕ್ಕಿ ಮಾಂಸವನ್ನು ತಿನ್ನಲಾರಂಭಿಸಿತು. ಆಗ ಕಾಡಿನ ಹುಲಿ ಹೇಳಿತು: ‘ನೋಡಿದೆಯೊ, ಈಗ ನನಗೂ ನಿನಗೂ ಯಾವ ಭೇದವೂ ಇಲ್ಲದಿರುವುದನ್ನು. ಈಗ ಬಾ, ಕಾಡಿಗೆ ನನ್ನೊಡನೆಯೇ ಬಂದುಬಿಡು.’
“ಆದ್ದರಿಂದ ಗುರುವಿನ ಕೃಪೆ ದೊರೆತುದೇ ಆದರೆ, ಇನ್ನು ಹೆದರಬೇಕಾಗಿಲ್ಲ. ಆತ ನೀನು ಯಾರು, ನಿನ್ನ ಸ್ವರೂಪ ಏನು ಎಂಬುದನ್ನು ತಿಳಿಸಿಕೊಡುತ್ತಾನೆ.
“ಒಂದು ಸ್ವಲ್ಪ ಸಾಧನೆ ಮಾಡಿದರೇನೇ ಗುರು ಎಲ್ಲವನ್ನೂ ವಿವರಿಸಿ ತಿಳಿಸಿಕೊಟ್ಟು ಬಿಡುತ್ತಾನೆ. ಆಗ ಸಾಧಕನಿಗೇ ಗೊತ್ತಾಗುತ್ತದೆ, ಯಾವುದು ಸತ್ಯವಾದದ್ದು, ಯಾವುದು ಅಸತ್ಯವಾದದ್ದು ಎಂಬುದು. ಭಗವಂತನೇ ಸತ್ಯ, ಈ ಜಗತ್ತು ಅನಿತ್ಯ.
“ಒಂದು ರಾತ್ರಿ ಒಬ್ಬ ಬೆಸ್ತ ಇನ್ನೊಬ್ಬನ ತೋಟಕ್ಕೆ ಹೇಳದೆ ಕೇಳದೆ ನುಗ್ಗಿ ಮೀನಿಗಾಗಿ ಅಲ್ಲಿದ್ದ ಕೊಳಕ್ಕೆ ತನ್ನ ಬಲೆಯನ್ನು ಬೀಸಿದ. ಅದು ತೋಟದ ಯಜಮಾನನಿಗೆ ಗೊತ್ತಾಗಿ, ತೋಟದ ಸುತ್ತಲೂ ಆಳುಗಳನ್ನು ನಿಲ್ಲಿಸಿ, ಪಂಜು ಹೊತ್ತಿಸಿಕೊಂಡು ಆ ಕಳ್ಳನನ್ನು ತೋಟದಲ್ಲಿ ಹುಡುಕಲಾರಂಭಿಸಿದ. ಇದನ್ನು ಕಂಡು ಆ ಬೆಸ್ತ ಮೈಗೆಲ್ಲಾ ಬೂದಿ ಬಳಿದುಕೊಂಡು ಸಾಧುವಿನ ವೇಷ ಧರಿಸಿ ಒಂದು ಮರದ ಕೆಳಗೆ ಕುಳಿತುಕೊಂಡುಬಿಟ್ಟ. ಆ ತೋಟದ ಯಜಮಾನ ಮತ್ತು ಆಳುಗಳು ಇಡೀ ತೋಟದಲ್ಲೆಲ್ಲಾ ಎಷ್ಟೊಂದು ಹುಡುಕಿದರೂ ಬೆಸ್ತ ಕಾಣಬರಲಿಲ್ಲ. ಒಬ್ಬ ಸಾಧು ಮೈಗೆ ಬೂದಿ ಬಳಿದುಕೊಂಡು ಒಂದು ಮರದ ಕೆಳಗೆ ಧ್ಯಾನಸ್ಥನಾಗಿದ್ದುದು ಮಾತ್ರ ಅವರ ಕಣ್ಣಿಗೆ ಬಿತ್ತು. ಮಾರನೇ ದಿನ ನೆರೆಹೊರೆಯಲ್ಲೆಲ್ಲಾ ಸುದ್ದಿ ಹಬ್ಬಿಬಿಟ್ಟಿತು, ಒಬ್ಬ ದೊಡ್ಡ ಸಾಧು ತೋಟಕ್ಕೆ ಬಂದಿದ್ದಾನೆ ಎಂಬುದಾಗಿ. ಅನೇಕ ಜನ ಫಲಪುಷ್ಪಾದಿಗಳನ್ನೂ, ಸಿಹಿತಿಂಡಿಗಳನ್ನೂ ತೆಗೆದುಕೊಂಡು ಬಂದು ಆತನಿಗೆ ಅರ್ಪಿಸಿ ಪ್ರಣಾಮ ಮಾಡತೊಡಗಿದರು. ಅನೇಕರು ದುಡ್ಡು-ಕಾಸನ್ನೂ ಸಾಧುವಿಗೆ ಅರ್ಪಿಸತೊಡಗಿದರು. ಆ ಬೆಸ್ತ ಭಾವಿಸಲಾರಂಭಿಸಿದ: ‘ಏನಾಶ್ಚರ್ಯ ಇದು! ನಾನು ನಿಜವಾದ ಸಾಧು ಅಲ್ಲ, ಆದರೂ ಜನ ನನಗೆ ಇಷ್ಟೊಂದು ಭಕ್ತಿ ತೋರಿಸುತ್ತಿದ್ದಾರೆ. ನಾನು ನಿಜವಾದ ಸಾಧು ಆದುದೇ ಆದರೆ, ಖಂಡಿತವಾಗಿ ನನಗೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ. ಇದರಲ್ಲಿ ಯಾವ ಸಂದೇಹವೂ ಇಲ್ಲವೇ ಇಲ್ಲ.’
“ಬೂಟಾಟಿಕೆಯ ಸಾಧನೆಯಿಂದಲೇ ಇಷ್ಟೊಂದು ಆತ್ಮಜಾಗೃತಿ ಉಂಟಾಗಿಬಿಡುವಾಗ ಇನ್ನು ನಿಜವಾದ ಸಾಧನೆಯ ಮಾತೇ ಎತ್ತಬೇಕಾಗಿಲ್ಲ. ಯಾವುದು ಸತ್ಯವಾದದ್ದು, ಯಾವುದು ಅಸತ್ಯವಾದದ್ದು ಎಂಬುದು ಗೊತ್ತಾಗಿಬಿಡುತ್ತದೆ. ಭಗವಂತನೇ ಸತ್ಯ, ಈ ಜಗತ್ತು ಅನಿತ್ಯ.”
ಒಬ್ಬ ಭಕ್ತ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ಈ ಜಗತ್ತು ಅನಿತ್ಯವಾದದ್ದು. ಬೆಸ್ತನೇನೋ ಈ ಪ್ರಾಪಂಚಿಕ ಜೀವನವನ್ನು ತ್ಯಜಿಸಿ ಹೊರಟುಹೋದ. ಆದರೆ ಈ ಪ್ರಾಪಂಚಿಕ ಜೀವನ ನಡೆಸಿಕೊಂಡು ಹೋಗುತ್ತಿರುವವರ ಗತಿ ಏನಾಗಬೇಕು? ಅವರೂ ಅದನ್ನ ತ್ಯಜಿಸಬೇಕಾಗುವುದೇ?” ಪರಮಹಂಸರು ಅಹೇತುಕ ಕೃಪಾಸಿಂಧು. ಕೃಪಾಪೂರಿತ ಹೃದಯದಿಂದ ಹೇಳತೊಡಗಿದರು: “ಒಬ್ಬ ಗುಮಾಸ್ತನಿಗೆ ಜೈಲಾಯಿತು ಅಂತ ಇಟ್ಟುಕೊ. ಅಲ್ಲಿ ಆತ ಜೈಲಿನ ಜೀವನ ನಡೆಸಿಕೊಂಡು ಹೋಗಬೇಕಾಗುತ್ತದೆ. ಆದರೆ ಜೈಲಿನಿಂದ ಬಿಡುಗಡೆಹೊಂದಿ ಹಿಂದಿರುಗಿ ಬಂದ ಮೇಲೆ ಆತ ‘ತಕಥೈ’ ಅಂತ ರಸ್ತೆಯಲೆಲ್ಲಾ ಕುಣಿದಾಡಿ ಸುತ್ತಾಡುವನೇ? ಎಂದಿಗೂ ಇಲ್ಲ. ಮತ್ತೆ ಎಂದಿನ ಹಾಗೆ ಗುಮಾಸ್ತನ ಕೆಲಸ ಮಾಡಿಕೊಂಡೇ ಇರುತ್ತಾನೆ. ಗುರುವಿನ ಕೃಪೆಯಿಂದ ಬ್ರಹ್ಮಜ್ಞಾನ ದೊರೆತ ನಂತರ ಈ ಜಗತ್ತಿನಲ್ಲಿ ಜೀವನ್ಮುಕ್ತನಾಗಿ ಇರಲು ಸಾಧ್ಯ.” ಹೀಗೆಂದು ಹೇಳಿ ಪರಮಹಂಸರು ಸಂಸಾರಿಗಳಿಗೆ ಅಭಯವನ್ನಿತ್ತರು.
ಮಣಿಲಾಲ: “ಆಹ್ನಿಕಗಳನ್ನು ಮಾಡುವಾಗ ನಾನು ಭಗವಂತನನ್ನು ಎಲ್ಲಿ ಧ್ಯಾನ ಮಾಡಲಿ?”
ಶ್ರೀರಾಮಕೃಷ್ಣರು: “ಹೃದಯ ಬಹಳ ಪ್ರಶಸ್ತವಾದ ಸ್ಥಳ. ಅಲ್ಲಿ ಧ್ಯಾನಮಾಡು.”
ಮಣಿಲಾಲ ಬ್ರಾಹ್ಮಸಮಾಜಕ್ಕೆ ಸೇರಿದವನಾದ್ದರಿಂದ ನಿರಾಕಾರವಾದಿ. ಆತನನ್ನು ಸಂಬೋಧಿಸಿ ಪರಮಹಂಸರು ಹೇಳುತ್ತಿದ್ದಾರೆ: “ಕಬೀರ ಹೇಳುತ್ತಿದ್ದ: ‘ಸಾಕಾರ ನನ್ನ ತಾಯಿ, ನಿರಾಕಾರ ನನ್ನ ತಂದೆ; ಯಾರನ್ನು ತೆಗಳುವುದು? ಯಾರನ್ನು ಹೊಗಳುವುದು? ತಕ್ಕಡಿಯ ಎರಡೂ ಬಟ್ಟಲೂ ಒಂದೇ ಸಮತೂಕ.’ ಹಲಧಾರಿ ಹಗಲುವೇಳೆ ಸಾಕಾರದ ಮೇಲೆ, ರಾತ್ರಿವೇಳೆ ನಿರಾಕಾರದ ಮೇಲೆ ಧ್ಯಾನಮಾಡುತ್ತಿದ್ದ. ಯಾವ ಭಾವವನ್ನು ಅನುಸರಿಸಿದರೂ ನಿಜವಾದ ಶ್ರದ್ಧೆ ಇತ್ತು ಎಂದರೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಸಾಕಾರದಲ್ಲಾದರೂ ಶ್ರದ್ಧೆ ಇರಲಿ, ಆದರೆ ಅದು ಯಥಾರ್ಥವಾದದ್ದಾಗಿರಬೇಕು. ಶಂಭುಮಲ್ಲಿಕ ಬಾಗ್ಬಜಾರಿನಿಂದ ಹೊರಟು ದಕ್ಷಿಣೇಶ್ವರದಲ್ಲಿದ್ದ ತನ್ನ ತೋಟದ ಮನೆಗೆ ನಡೆದುಬರುತ್ತಿದ್ದ. ಒಂದು ದಿನ ಒಬ್ಬ ಸ್ನೇಹಿತ ಆತನಿಗೆ ಹೇಳಿದ: ‘ಅಲ್ಲಿಂದ ಇಲ್ಲಿಗೆ ಬಹಳ ದೂರ. ಗಾಡಿ ಮಾಡಿಕೊಂಡು ಬರಬಾರದೇ? ದಾರಿಯಲ್ಲಿ ಏನಾದರೂ ಆಕಸ್ಮಿಕ ಸಂಭವಿಸಬಹುದು.’ ಆಗ ಶಂಭುಮಲ್ಲಿಕ ರೇಗಿ ಕೆಂಪು ಮುಖ ಮಾಡಿಕೊಂಡು ಹೇಳಿದ: ‘ಏನೆಂದೆ? ನಾನು ಭಗವಂತನ ನಾಮ ಜಪಿಸಿಕೊಂಡು ಮನೆಯಿಂದ ಹೊರಡುತ್ತೇನೆ! ಮತ್ತೆ ಆಕಸ್ಮಿಕ?’ ಶ್ರದ್ಧೆಯಿಂದಲೇ ಎಲ್ಲವನ್ನೂ ದೊರಕಿಸಿಕೊಳ್ಳಬಹುದು. ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ: ‘ಆ ನಿರ್ದಿಷ್ಟ ವ್ಯಕ್ತಿಯನ್ನು ಸಂಧಿಸಲು ಸಾಧ್ಯವಾದರೆ, ಆ ಖಜಾಂಚಿ ಬಂದು ನನ್ನನ್ನು ನೋಡುವುದಾದರೆ, ಆಗ ನಾನು ನನ್ನ ಅನುಭವಗಳೆಲ್ಲಾ ಸತ್ಯ ಅಂತ ತಿಳಿದುಕೊಳ್ಳುತ್ತೇನೆ’ ಎಂದು. ನಾನು ಭಾವಿಸಿದ ಹಾಗೆಯೇ ಅದು ಆಗುತ್ತಿತ್ತು.”
ಮಾಸ್ಟರ್ ಆಂಗ್ಲ ತರ್ಕ ಓದಿದ್ದಾನೆ. ತರ್ಕದೋಷದ ಅಧ್ಯಾಯದಲ್ಲಿ ಆತ ಓದಿದ್ದ, ಬೆಳಗಿನ ಜಾವ ಆಗುವ ಸ್ವಪ್ನ ನಿಜವಾಗುತ್ತೆ ಎಂಬುದನ್ನು ಮೂಢನಂಬಿಕೆಯುಳ್ಳ ಜನ ಮಾತ್ರ ನಂಬುತ್ತಾರೆ ಎಂಬುದಾಗಿ. ಅದಕ್ಕಾಗಿ ಆತ ಪರಮಹಂಸರನ್ನು ಕೇಳುತ್ತಿದ್ದಾನೆ: “ನಿಮ್ಮ ಭಾವನೆಗೆ ವ್ಯತಿರಿಕ್ತವಾದ ಯಾವುದೂ ಆಗಿಯೇ ಇಲ್ಲವೇ?”
ಶ್ರೀರಾಮಕೃಷ್ಣರು: “ಇಲ್ಲ. ಆಗ ಎಲ್ಲವೂ ಹಾಗೆಯೇ ಆಗುತ್ತಿತ್ತು. ಆ ಸಮಯದಲ್ಲಿ ಭಗವನ್ನಾಮ ಜಪಿಸಿ ಇಂಥಿಂಥದ್ದು ಆಗುವುದೆಂದು ದೃಢವಿಶ್ವಾಸವಿಡುತ್ತಿದ್ದೆ. ಅದು ಹಾಗೇ ತಪ್ಪದೆ ಆಗಿಬಿಡುತ್ತಿತ್ತು. (ಮಣಿಲಾಲನಿಗೆ) ಆದರೆ ನೋಡು, ಮನುಷ್ಯ ಸರಳ, ಉದಾರ ಆಗದೆ ಇದ್ದ ಎಂದರೆ ಈ ವಿಶ್ವಾಸ ಉಂಟಾಗದು. ಮೂಳೆಬಿಟ್ಟುಕೊಂಡಿರುವವರು, ಗುಳಿಗಣ್ಣಿನವರು, ಮೆಳ್ಳೆಗಣ್ಣಿನವರು, ಇವೇ ತರದ ಅನೇಕ ವಿಧದ ಲಕ್ಷಣಗಳುಳ್ಳವರು, ಇವರಿಗೆ ಸ್ವಾಭಾವಿಕವಾಗಿ ವಿಶ್ವಾಸ ಉಂಟಾಗದು. ಎಲ್ಲ ದಿಕ್ಕುಗಳಿಂದಲೂ ಅಪಶಕುನಗಳೇ ಆಗುತ್ತಿದ್ದರೆ, ಮನುಷ್ಯ ಏನುತಾನೆ ಮಾಡಬಲ್ಲ?”
ಮುಸ್ಸಂಜೆಯಾಯಿತು. ದಾಸಿ ಬಂದು ಕೊಠಡಿಗೆ ಧೂಪ ಹಾಕಿ ಹೋದಳು. ಮಣಿಲಾಲ ಮತ್ತು ಇನ್ನೂ ಕೆಲವರು ಕಲ್ಕತ್ತಕ್ಕೆ ಹೊರಟುಹೋದರು. ಮಾಸ್ಟರ್ ಮತ್ತು ರಾಖಾಲ ಕೊಠಡಿಯಲ್ಲಿ ಕುಳಿತಿದ್ದಾರೆ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಭಗವತಿಯನ್ನು ಧ್ಯಾನಮಾಡುತ್ತಿದ್ದಾರೆ. ಕೊಠಡಿ ನಿಶ್ಶಬ್ದವಾಗಿದೆ.
ಸ್ವಲ್ಪ ಹೊತ್ತಾದ ನಂತರ ರಾಣಿ ರಾಸಮಣಿಯ ಮನೆಯ ಭಗವತಿ ಎಂಬ ಹೆಸರಿನ ಒಬ್ಬ ದಾಸಿ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿದಳು. ಪರಮಹಂಸರು ಅವಳಿಗೆ ಕುಳಿತುಕೊಳ್ಳುವಂತೆ ಸಂಜ್ಞೆಮಾಡಿದರು. ಪರಮಹಂಸರಿಗೆ ಬಹಳ ಹಿಂದಿನಿಂದಲೂ ಆಕೆಯ ಪರಿಚಯ ಇದೆ. ತನ್ನ ಯೌವನದಲ್ಲಿ ಅಶ್ಲೀಲ ಜೀವನವನ್ನು ನಡೆಸಿದ್ದಳು. ಆದರೆ ಪರಮಹಂಸರು ದಯಾಸಾಗರರು, ಪತಿತಪಾವನರು. ಈಗ ಆಕೆಯೊಡನೆ ಹಿಂದಿನ ವಿಷಯವಾಗಿ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಈಗಲಾದರೋ ನಿನಗೆ ವಯಸ್ಸಾಗಿಬಿಟ್ಟಿದೆ. ನೀನು ಸಂಪಾದಿಸಿದ ಹಣವನ್ನೆಲ್ಲ ಸಾಧು-ವೈಷ್ಣವರ ಸೇವೆಗಾಗಿ ಉಪಯೋಗಿಸುತ್ತಾ ಇದ್ದೀಯೆ ತಾನೆ?”
ಭಗವತಿ ಕಿಂಚಿತ್ ನಕ್ಕು: “ಅದನ್ನು ನಾನು ಹೇಗೆ ಹೇಳಲಿ?”
ಶ್ರೀರಾಮಕೃಷ್ಣರು: “ಕಾಶಿ, ಬೃಂದಾವನ ಇವಕ್ಕೆಲ್ಲ ಹೋಗಿ ಆಗಿದೆ ತಾನೆ?”
ಭಗವತಿ ಸ್ವಲ್ಪ ನಾಚಿ: “ಅದನ್ನು ನಾನು ಹೇಗೆ ಹೇಳಲಿ? ಒಂದು ಸ್ನಾನಘಟ್ಟ ಮಾಡಿಸಿಕೊಟ್ಟಿದ್ದೇನೆ. ಅದರ ಮೇಲೆ ನನ್ನ ಹೆಸರು ಕೆತ್ತಿದೆ.”
ಶ್ರೀರಾಮಕೃಷ್ಣರು: “ನಿಜವಾಗಿಯೂ!”
ಭಗವತಿ: “ಹೌದು. ‘ಶ್ರೀಮತಿ ಭಗವತಿದಾಸಿ’ ಎಂಬುದಾಗಿ ನನ್ನ ಹೆಸರು ಬರೆದಿದೆ.
ಶ್ರೀರಾಮಕೃಷ್ಣರು (ಸ್ವಲ್ಪ ನಕ್ಕು): “ಭೇಷ್! ಭೇಷ್!”
ಭಗವತಿಗೆ ಸ್ವಲ್ಪ ಧೈರ್ಯ ಬಂದು ಪರಮಹಂಸರ ಪಾದ ಮುಟ್ಟಿ ಪ್ರಣಾಮ ಮಾಡಿದಳು. ಚೇಳು ಕುಟುಕಿದವರ ಹಾಗೆ ಪರಮಹಂಸರು ಎದ್ದುನಿಂತು ಕೂಗಿಕೊಂಡರು: “ಗೋವಿಂದ! ಗೋವಿಂದ” ಎಂಬುದಾಗಿ. ಅವರ ಕೊಠಡಿಯ ಒಂದು ಮೂಲೆಯಲ್ಲಿ ದೊಡ್ಡದೊಂದು ಗುಡಾಣದ ತುಂಬ ಗಂಗಾನದಿ ನೀರು ತುಂಬಿರುತ್ತಿತ್ತು. ಉಸಿರು ಸಿಕ್ಕಿಕೊಂಡವರ ಹಾಗೆ ಎದ್ದು ಅಲ್ಲಿಗೆ ಓಡಿಹೋಗಿ ಆ ದಾಸಿ ಮುಟ್ಟಿದ ಜಾಗವನ್ನು ಗಂಗೆಯ ನೀರಿನಿಂದ ತೊಳೆಯತೊಡಗಿದರು. ಭಕ್ತರು ವಿಸ್ಮಯಗೊಂಡು ಈ ದೃಶ್ಯವನ್ನು ನೋಡುತ್ತಿದ್ದಾರೆ. ಭಗವತಿ ಸತ್ತವಳ ಹಾಗೆ ಕುಳಿತಿದ್ದಾಳೆ.
ಶ್ರೀರಾಮಕೃಷ್ಣರು ಆಕೆಯನ್ನು ಸಮಾಧಾನಪಡಿಸಿ ಕರುಣೆಯಿಂದ ಹೇಳುತ್ತಿದ್ದಾರೆ: “ನೀನು ಇನ್ನುಮೇಲೆ ದೂರದಿಂದಲೇ ಪ್ರಣಾಮ ಮಾಡಿಬಿಡು.” ಆಕೆಗೆ ಉಂಟಾದ ಮಾನಸಿಕ ವ್ಯಥೆಯನ್ನು ನಿರ್ಮೂಲಗೊಳಿಸಲು ಪರಮಹಂಸರು ತಾಯಿಯ ಹೃದಯದಿಂದ ಆಕೆಗೆ ಹೇಳುತ್ತಿದ್ದಾರೆ: “ಈ ಕೆಲವು ಹಾಡುಗಳನ್ನು ಕೇಳು.”
ಈಗ ಪರಮಹಂಸರು ಜಗನ್ಮಾತೆಯ ಸಂಬಂಧವಾಗಿ ಹಾಡುತ್ತಿದ್ದಾರೆ:
ಸಾಗುತಿಹುದು ಚಿತ್ತಭೃಂಗ
ಕಾಳೀಪದ ನೀಲಕಮಲ ಮಧುಪಾನದ ಆಸೆಗೆ!…..
ಬಳಿಕ ಹಾಡುತ್ತಿದ್ದಾರೆ:
ಶ್ರೀಘನಶ್ಯಾಮೆಯ ಚರಣಾಕಾಶದಿ ಗಾಳಿಪಟದ ತೆರದಿ
ಹಾರುತಿರಲು ಮನ, ದುರಿತ ಕಲುಷ ಬಿರುಗಾಳಿಯು ಭರದಿ…..
ಮತ್ತೆ,
ನಿನ್ನೊಳಗೇ ನೀನಿರು ಮನವೇ,
ಅನ್ಯಾಶ್ರಯದೊಳಗರಸದಿರು…..
೫ನೆ ಜೂನ್ ೧೮೮೩, ಜ್ಯೇಷ್ಠ ಅಮಾವಾಸ್ಯೆ, ಮಂಗಳವಾರ
ದಕ್ಷಿಣೇಶ್ವರ ದೇವಾಲಯದಲ್ಲಿ ರಾಖಾಲ ಮತ್ತು ಹಾಜರಾ ಪರಮಹಂಸರೊಡನೆಯೇ ಇದ್ದಾರೆ. ಮಾಸ್ಟರೂ ಕಳೆದ ಭಾನುವಾರದಿಂದ ಇಲ್ಲೇ ಇದ್ದಾನೆ. ಇದು ಬಿಡುದಿನವಾದ್ದರಿಂದ ಎಲ್ಲೋ ಕೆಲವು ಮಂದಿ ಭಕ್ತರು ಬಂದಿದ್ದಾರೆ. ಸಾಮಾನ್ಯವಾಗಿ ಭಾನುವಾರ ಮತ್ತು ರಜಾ ದಿನಗಳಲ್ಲಿ ಜನ ಹೆಚ್ಚಾಗಿ ಬರುತ್ತಾರೆ.
ಪರಮಹಂಸರು ಮಧ್ಯಾಹ್ನದ ಊಟವಾದ ನಂತರ ತಮ್ಮ ಪ್ರೇಮೋನ್ಮಾದ ಅವಸ್ಥೆಯ ಸಂಬಂಧವಾಗಿ ಇಂದೂ ಹೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಏನೇನು ಅವಸ್ಥೆ ಬಂದುಹೋದುವು! ಆಗ ನಾನು ಇಲ್ಲಿ ಊಟ ಮಾಡುತ್ತಿರಲಿಲ್ಲ. ವರಾಹನಗರದಲ್ಲೋ, ಅರಿಯದಹದಲ್ಲೋ ಯಾರಾದರೂ ಒಬ್ಬ ಬ್ರಾಹ್ಮಣನ ಮನೆಗೆ ಹೋಗಿ ಝಾಂಡ ಹಾಕುತ್ತಿದ್ದೆ. ಹಾಗೆ ಹೋದಾಗಲೆಲ್ಲಾ ಸಾಮಾನ್ಯವಾಗಿ ಅದು ಅವೇಳೆಯೇ ಆಗಿರುತ್ತಿತ್ತು. ಮನೆಯ ಒಳಕ್ಕೆ ಹೋಗಿ ಒಂದೂ ಮಾತೂ ಆಡದೆ ಸುಮ್ಮನೆ ಕುಳಿತಿರುತ್ತಿದ್ದೆ: ‘ಮನೆಯವರೇನಾದರೂ ನಾನೇಕೆ ಬಂದಿದ್ದೇನೆ ಎಂದು ಕೇಳಿದರೆ, ಹೇಳಿಬಿಡುತ್ತಿದ್ದೆ: ‘ನಾನು ಇಲ್ಲಿ ಊಟ ಮಾಡುತ್ತೇನೆ’ ಎಂದು. ಇನ್ನೇನೂ ಮಾತಾಡುತ್ತಿರಲಿಲ್ಲ. ಒಂದೊಂದು ದಿನ ಅಲಮ್ಬಜಾರಿನ ರಾಮ ಚಟ್ಟೋಪಾಧ್ಯಾಯನ ಮನೆಗೆ ಹೋಗುತ್ತಿದ್ದೆ. ಇನ್ನು ಕೆಲವು ದಿನ ದಕ್ಷಿಣೇಶ್ವರದ ಚೌಧುರಿಯ ಮನೆಗೆ ಹೋಗುತ್ತಿದ್ದೆ. ಆದರೆ ಚೌಧುರಿಯ ಮನೆಯ ಊಟ ನನಗೆ ರುಚಿಸುತ್ತಿರಲಿಲ್ಲ.
“ಒಂದು ದಿನ ನನ್ನನ್ನು ದೇವೇಂದ್ರನಾಥ ಠಾಕೂರನ ಮನೆಗೆ ಕರೆದುಕೊಂಡು ಹೋಗುವಂತೆ ಮಥುರಬಾಬುವನ್ನು ಪಟ್ಟಾಗಿ ಹಿಡಿದೆ. ಆತನಿಗೆ ಹೇಳಿದೆ: ‘ದೇವೇಂದ್ರ ಭಗವದ್ಭಕ್ತ. ಆತನನ್ನು ನೋಡಬೇಕು ಅಂತ ಅನಿಸುತ್ತಿದೆ. ಕರೆದುಕೊಂಡು ಹೋಗುತ್ತೀಯಾ ನನ್ನನ್ನು?’ ಮಥುರಬಾಬುವಿಗೆ ತನ್ನ ದೊಡ್ಡಸ್ತಿಕೆಯ ಅಭಿಮಾನ ಬಹಳ. ಆತ ಆಹ್ವಾನವಿಲ್ಲದೆ ಇನ್ನೊಬ್ಬರ ಮನೆಗೆ ಹೋಗೋ ಬಗೆ ಹೇಗೆ? ಮೊದಲು ಸ್ವಲ್ಪ ಹಿಂಜರಿದ. ಬಳಿಕ ಹೇಳಿದ: ‘ನಾನೂ ಅವನೂ ಹಿಂದೆ ಒಂದೇ ಕ್ಲಾಸಿನಲ್ಲಿ ಓದಿದವರು. ಆದ್ದರಿಂದ ಹೊರಡಿ, ಕರೆದುಕೊಂಡು ಹೋಗುತ್ತೇನೆ.’
“ಒಂದು ದಿನ ಯಾರೋ ನನ್ನ ಕಿವಿಗೆ ಹಾಕಿದರು ಬಾಗ್ಬಜಾರಿನ ಸೇತುವೆ ಹತ್ತಿರ ದೀನ ಮುಖ್ಯೋಪಾಧ್ಯಾಯ ಎಂಬ ಹೆಸರಿನ ಒಬ್ಬ ಭಕ್ತ ವಾಸವಾಗಿದ್ದಾನೆ ಎಂಬುದಾಗಿ. ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಬೇಕು ಎಂಬುದಾಗಿ ಮತ್ತೆ ಮಥುರಬಾಬುವನ್ನು ಹಿಡಿದೆ. ಮಥುರಬಾಬು ವಿಧಿಯಿಲ್ಲದೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದ. ಆತನ ಮನೆ ಬಹಳ ಪುಟ್ಟದು. ದೊಡ್ಡದೊಂದು ಗಾಡಿ ಮಾಡಿಕೊಂಡು ಒಬ್ಬ ದೊಡ್ಡ ಮನುಷ್ಯ ಅವರ ಮನೆಗೆ ಬಂದಿರುವುದನ್ನು ನೋಡಿ ಅವರೂ ದಿಗ್ಭ್ರಮೆ ಹಿಡಿದವರಾಗಿ ತೋರಿಬಂದರು. ನಮಗೂ ಮುಖ ಒಂದು ಸ್ವಲ್ಪ ಸಣ್ಣಗಾಯಿತು. ಸಾಲದುದಕ್ಕೆ ಅವರ ಮನೆಯಲ್ಲಿ ಉಪನಯನ ಬೇರೆ. ಎಲ್ಲಿ ಕೂರಿಸಿಯಾರು ನಮ್ಮನ್ನು? ನಾವು ಒಂದು ಪಕ್ಕದ ಕೊಠಡಿಗೆ ಪ್ರವೇಶ ಮಾಡುವುದರಲ್ಲಿದ್ದೆವು. ಹತ್ತಿರವಿದ್ದವರು ಕೂಗಿಕೊಂಡರು: ‘ಒಳಗೆ ಹೆಂಗಸರು, ಹೋಗಬೇಡಿ.’ ಬಹಳವಾಗಿ ಮುಖ ಚಿಕ್ಕದಾಯಿತು. ಹಿಂದಿರುಗುವಾಗ ಮಥುರಬಾಬು ಹೇಳಿದ: ‘ಬಾಬಾ, ನೀವು ಹೇಳಿದ ಹಾಗೆ ನಾನು ಇನ್ನೆಂದಿಗೂ ಕೇಳುವುದಿಲ್ಲ.’ ನಾನು ಸುಮ್ಮನೆ ನಕ್ಕುಬಿಟ್ಟೆ.
“ಓ, ಏನವಸ್ಥೆ ಬಂದುಹೋಯಿತಪ್ಪ! ಒಮ್ಮೆ ಕುಮಾರಸಿಂಗ್ ಎಂಬುವನು ಸಾಧುಗಳಿಗೆ ಭೋಜನ ಏರ್ಪಡಿಸಿ ನನ್ನನ್ನೂ ಆಹ್ವಾನಿಸಿದ. ಅಲ್ಲಿಗೆ ಹೋಗಿ ನೋಡುತ್ತೇನೆ, ಅನೇಕ ಜನ ಸಾಧುಗಳು ಬಂದುಬಿಟ್ಟಿದ್ದಾರೆ. ನಾನು ಅಲ್ಲಿ ಕುಳಿತುಕೊಂಡ ನಂತರ ನಾನಾರು, ಎಂತು ಎಂಬುದಾಗಿ ಸಾಧುಗಳು ನನ್ನ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಕರೆದರು. ಆಗ ಅನಿಸಿತು, ಅಲ್ಲಿಂದ ಎದ್ದುಹೋಗಿ ಬೇರೆ ಕಡೆ ಒಂಟಿಯಾಗಿ ಕುಳಿತುಕೊಂಡುಬಿಡೋಣವೆ ಎಂದು. ಇಷ್ಟೊಂದು ಸುದ್ದಿ ಸಮಾಚಾರವೆಲ್ಲ ಇವರಿಗೇಕೆ ಎಂದೆನಿಸಿತು. ಎಲೆ ಹಾಕಿದೊಡನೇ ಎಲ್ಲರೂ ಊಟಕ್ಕೆ ಕುಳಿತರು. ಆಪೋಶನ ಮಂತ್ರ ಹೇಳುವುದಕ್ಕೆ ಮುಂಚೆಯೇ ನಾನು ಊಟಮಾಡಲು ಶುರುಮಾಡಿದೆ. ಸಾಧುಗಳಲ್ಲಿ ಅನೇಕರು ಹೇಳುತ್ತಿದ್ದುದು ಕಿವಿಗೆ ಬಿತ್ತು ‘ಛೆ! ಎಂಥ ಮನುಷ್ಯ ಈತ?”’
ಘಂಟೆ ಸಾಯಂಕಾಲ ಐದು. ಪರಮಹಂಸರು ತಮ್ಮ ಕೊಠಡಿಯ ವರಾಂಡದ ಹಂತಗಳ ಮೇಲೆ ಕುಳಿತಿದ್ದಾರೆ. ರಾಖಾಲ, ಹಾಜರಾ, ಮಾಸ್ಟರ್ ಅವರ ಹತ್ತಿರ ಕುಳಿತಿದ್ದಾರೆ. ಹಾಜರಾನ ಭಾವ “ಸೋಠ್ಹಮ್”, ಎಂದರೆ “ನಾನೇ ಬ್ರಹ್ಮ” ಎಂಬ ಭಾವ.
ಶ್ರೀರಾಮಕೃಷ್ಣರು ಹಾಜರಾನಿಗೆ: “ಹೌದು, ಭಗವಂತನೇ ಆಸ್ತಿಕನ, ನಾಸ್ತಿಕನ, ಒಳ್ಳೆಯದರ, ಕೆಟ್ಟದರ, ಸತ್ನ, ಅಸತ್ನ ರೂಪಗಳಲ್ಲಿ ವ್ಯಕ್ತವಾಗಿದ್ದಾನೆ. ಜಾಗ್ರತ್ ಸುಷುಪ್ತಿ ಮೊದಲಾದ ಅವಸ್ಥೆಗಳಲ್ಲಿಯೂ ಆತನೇ ಇದ್ದಾನೆ. ಮತ್ತೆ ಆತ ಇವುಗಳೆಲ್ಲಕ್ಕೂ ಅತೀತ ಎಂಬುವ ಅನುಭವ ದೊರೆತುದೇ ಆದರೆ ಎಲ್ಲ ಗೊಂದಲಗಳೂ, ತೊಡಕುಗಳೂ ಕೊನೆಗಾಣುತ್ತವೆ.
“ಒಬ್ಬ ರೈತನಿಗೆ ಮಕ್ಕಳೇ ಇಲ್ಲದೆ ಇದ್ದು, ಮುಪ್ಪಿನಲ್ಲಿ ಒಂದು ಗಂಡು ಮಗು ಆಯಿತು. ಮಗುವನ್ನು ಬಹಳ ಪ್ರೀತಿಯಿಂದ ಸಾಕಲಾರಂಭಿಸಿದ. ಆ ಮಗು ಕ್ರಮೇಣ ದೊಡ್ಡ ಹುಡುಗನಾಗಿ ಬೆಳೆಯಿತು. ಒಂದು ದಿನ ರೈತ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಒಬ್ಬ ಬಂದು ತಿಳಿಸಿದ, ನಿಮ್ಮ ಹುಡುಗನ ದೇಹ ಚಿಂತಾಜನಕ ಸ್ಥಿತಿಯಲ್ಲಿದೆ; ಆತ ಇನ್ನೇನು ಯಮಪುರಿಗೆ ಹೊರಡುವುದರಲ್ಲಿದ್ದಾನೆ ಎಂಬುದಾಗಿ. ಮನೆಗೆ ಹಿಂದಿರುಗಿ ಬಂದು ನೋಡುತ್ತಾನೆ, ಹುಡುಗ ಆಗಲೇ ಸತ್ತುಹೋಗಿಬಿಟ್ಟಿದ್ದಾನೆ. ಹೆಂಡತಿ ಎದೆ ಬಡಿದುಕೊಂಡು ಸುಮ್ಮನೆ ಅಳುತ್ತಿದ್ದಾಳೆ. ಆದರೆ ರೈತನ ಕಣ್ಣಿನಲ್ಲಿ ಮಾತ್ರ ಒಂದು ತೊಟ್ಟು ನೀರೂ ಇಲ್ಲ. ಆಕೆ ಇನ್ನೂ ಹೆಚ್ಚು ದುಃಖದಿಂದ ತನ್ನ ನೆರೆಯವರಿಗೆ ಹೇಳಿಕೊಳ್ಳತೊಡಗಿದಳು: ‘ನೋಡಿ, ರನ್ನದಂಥ ಈ ಮಗು ಸತ್ತುಹೋಗಿದ್ದಾನೆ. ಆದರೂ ಇವರ ಕಣ್ಣಿನಲ್ಲಿ ಒಂದು ತೊಟ್ಟು ನೀರೂ ಇಲ್ಲ!’ ಬಹಳ ಹೊತ್ತಾದ ನಂತರ ರೈತ ತನ್ನ ಹೆಂಡತಿಗೆ ಹೇಳಿದ: ‘ನಾನು ಏಕೆ ಅಳುತ್ತಿಲ್ಲ ಗೊತ್ತೆ? ನಿನ್ನೆ ರಾತ್ರಿ ನನಗೆ ಸ್ವಪ್ನ ಬಿತ್ತು, ನಾನು ದೊರೆಯಾದ ಹಾಗೆ ಮತ್ತು ಏಳು ಮಕ್ಕಳ ತಂದೆಯಾಗಿರುವ ಹಾಗೆ. ಅವರು ಸ್ಫುರದ್ರೂಪಿಗಳು ಮತ್ತು ಒಳ್ಳೇ ಗುಣಶಾಲಿಗಳು. ಕ್ರಮೇಣ ಬೆಳೆದು ವಿದ್ಯೆ ಧರ್ಮ ಆರ್ಜನೆ ಮಾಡಿದರು. ಆಗ ಇದ್ದಕ್ಕಿದ್ದ ಹಾಗೆ ಎಚ್ಚರವಾಗಿಬಿಟ್ಟಿತು. ಯೋಚಿಸುತ್ತಾ ಇದ್ದೇನೆ, ಆ ನನ್ನ ಏಳು ಮಕ್ಕಳಿಗಾಗಿ ಅಳಲೋ ಅಥವಾ ನಿನ್ನ ಈ ಒಬ್ಬ ಮಗನಿಗಾಗಿ ಅಳಲೋ ಎಂದು.’ ಜ್ಞಾನಿಗಳ ದೃಷ್ಟಿಯಿಂದ ಸ್ವಪ್ನಾವಸ್ಥೆ ಎಷ್ಟು ಸತ್ಯವಾದದ್ದೋ, ಅಷ್ಟೇ ಸತ್ಯ ಜಾಗ್ರದವಸ್ಥೆ.
“ಕೇವಲ ಭಗವಂತನೊಬ್ಬನೇ ಕರ್ತ. ಎಲ್ಲವೂ ಆತನ ಇಚ್ಛೆಗನುಸಾರವಾಗಿ ನಡೆಯುತ್ತದೆ.”
ಹಾಜರಾ: “ಆದರೆ, ಹಾಗೆಂದು ಅರಿತುಕೊಳ್ಳುವುದು ಬಹಳ ಕಷ್ಟ. ನಿದರ್ಶನಕ್ಕಾಗಿ ಭೂಕೈಲಾಸದ ಸಾಧುವನ್ನು ತೆಗೆದುಕೊಳ್ಳಿ. ಜನರು ಆತನನ್ನು ಎಷ್ಟು ಚಿತ್ರಹಿಂಸೆಗೆ ಒಳಪಡಿಸಿದರು. ಕೊನೆಗೆ ಒಂದು ವಿಧದಲ್ಲಿ ಕೊಂದೂ ಹಾಕಿದರು. ಆತ ಸಮಾಧಿಸ್ಥನಾಗಿದ್ದ. ಮೊದಲು ಆತನನ್ನು ನೆಲದಲ್ಲಿ ಹೂಳಿದರು. ಬಳಿಕ ನೀರಿನಲ್ಲಿ ಮುಳುಗಿಸಿದರು. ಅನಂತರ ಕೆಂಪಗೆ ಕಾದ ಕಬ್ಬಿಣದಿಂದ ಬರೆ ಹಾಕಿದರು. ಈ ರೀತಿಯಾಗೆಲ್ಲ ಮಾಡಿ ಕೊನೆಗೆ ಆತನಿಗೆ ಬಾಹ್ಯಪ್ರಜ್ಞೆ ಬರುವಂತೆ ಮಾಡಿದರು. ಈ ಎಲ್ಲಾ ಚಿತ್ರಹಿಂಸೆಯಿಂದ ಆತ ಕೊನೆಗೆ ದೇಹತ್ಯಾಗ ಮಾಡಿಬಿಟ್ಟ. ನೀವು ಹೇಳುವ ಹಾಗೆ ಆತ ಭಗವದಿಚ್ಚೆಯಿಂದ ದೇಹತ್ಯಾಗ ಮಾಡಿದರೂ ಜನರು ಕೊಟ್ಟ ಚಿತ್ರಹಿಂಸೆಗಳನ್ನೂ ಅನುಭವಿಸಬೇಕಾಯಿತು.”
ಶ್ರೀರಾಮಕೃಷ್ಣರು: “ಮನುಷ್ಯ ತಾನು ಬಿತ್ತಿದ್ದರ ಫಲವನ್ನು ತಾನೇ ಕೊಯ್ಯಬೇಕು. ಆದರೆ ಆ ಸಾಧುವಿನ ದೇಹತ್ಯಾಗ ಮಾತ್ರ ಭಗವದಿಚ್ಛೆಯಿಂದಲೇ ಆಯಿತು ಎಂದು ಹೇಳಬೇಕು. ಕವಿರಾಜ ಬುಡ್ಡಿಗಳಲ್ಲಿ ಮಕರಧ್ವಜ ತಯಾರುಮಾಡುತ್ತಾನೆ. ಅದರ ಸುತ್ತಲೂ ಜೇಡಿಮಣ್ಣು ಮೆತ್ತಿ ಉರಿ ಹಾಕುತ್ತಾನೆ. ಆ ಬುಡ್ಡಿಯಲ್ಲಿರುವ ಚಿನ್ನ ಕರಗಿ ಅದರೊಂದಿಗೆ ಹಾಕಿದ್ದ ಉಳಿದ ಔಷಧಗಳೊಡನೆ ಬೆರೆತು ಮಕರಧ್ವಜ ಆಗುತ್ತದೆ. ಬಳಿಕ ಕವಿರಾಜ ಆ ಬುಡ್ಡಿಯನ್ನು ಹೊರಕ್ಕೆ ತೆಗೆದು, ಎಚ್ಚರಿಕೆಯಿಂದ ಅದನ್ನು ಒಡೆದು ಮಕರಧ್ವಜವನ್ನು ಬೇರ್ಪಡಿಸುತ್ತಾನೆ. ಔಷಧ ತಯಾರಾದ ನಂತರ ಆ ಬುಡ್ಡಿಯನ್ನು ಹಾಗೇ ಉಳಿಸಿಕೊಂಡರೆ ತಾನೆ ಏನು, ಒಡೆದುಹಾಕಿದರೆ ತಾನೆ ಏನು? ಹಾಗೆಯೇ ಜನರೇನೋ ಭಾವಿಸಿಕೊಳ್ಳುತ್ತಾರೆ, ಆ ಸಾಧುವನ್ನು ಕೊಂದುಹಾಕಿಬಿಟ್ಟರಲ್ಲ ಎಂದು. ಬಹುಶಃ ಆತನ ಆಂತರ್ಯ ಆಗಲೇ ಹಣ್ಣಾಗಿಬಿಟ್ಟಿರಬೇಕು. ಭಗವಂತನ ಸಾಕ್ಷಾತ್ಕಾರವಾದನಂತರ ಶರೀರ ಇದ್ದರೇನು, ಹೋದರೇನು?
“ಭೂಕೈಲಾಸ ಸಾಧು ಸಮಾಧಿಸ್ಥನಾಗಿದ್ದ. ಸಮಾಧಿಗಳಲ್ಲಿ ಅನೇಕ ಬಗೆ. ಒಮ್ಮೆ ಹೃಷೀಕೇಶದ ಸಾಧು ನನಗೆ ಹೇಳಿದ ಮಾತುಗಳಿಗೂ ನನ್ನ ಅನುಭವಗಳಿಗೂ ತಾಳೆಯಾಗಿ ಬಿಟ್ಟಿತು. ಕೆಲವು ವೇಳೆ ಕುಂಡಲಿನೀ ಶಕ್ತಿ ನನ್ನ ಶರೀರದೊಳಗೆ, ಇರುವೆಯ ಹಾಗೆ ಚಲಿಸುವುದು ನನ್ನ ಅನುಭವಕ್ಕೆ ಬಂದಿದೆ. ಇನ್ನು ಕೆಲವು ವೇಳೆ ಅದು ಕಪಿ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ನೆಗೆಯೋ ಹಾಗೆ ‘ಚಂಗ್, ಚಂಗ್’ ಅಂತ ಚಲಿಸುವುದು ನೋಡಿದ್ದೇನೆ. ಅನುಭವ ಆಗಿರುವವರಿಗೆ ಮಾತ್ರವೇ ಇದು ಏನು ಎಂಬುದು ಗೊತ್ತಾಗುತ್ತದೆ. ಸಮಾಧಿಯಲ್ಲಿ ಈ ಜಗತ್ತು ಮರೆತೇಹೋಗಿಬಿಡುತ್ತದೆ. ಮನಸ್ಸು ಅಲ್ಲಿಂದ ಸ್ವಲ್ಪ ಕೆಳಕ್ಕೆ ಇಳಿದ ನಂತರ ಹೇಳುತ್ತೇನೆ: ‘ತಾಯೆ, ಇದರಿಂದ ನನ್ನನ್ನು ಮುಕ್ತನನ್ನಾಗಿ ಮಾಡು. ನನಗೆ ನಿನ್ನೊಡನೆ ಮಾತನಾಡಬೇಕು ಅಂತ ಇಚ್ಛೆ.’
“ಈಶ್ವರಕೋಟಿಯ ಹೊರತು ಬೇರೆ ಯಾರೂ ಸಮಾಧಿಯಿಂದ ಕೆಳಕ್ಕೆ ಇಳಿದು ಬರಲಾರರು. ಸಾಮಾನ್ಯರಿಗೆ ಸಾಧನೆಯ ಬಲದಿಂದ ಸಮಾಧಿ ದೊರೆಯುತ್ತದೆ; ಆದರೆ ಅವರು ಹಿಂತಿರುಗಿ ಬರಲಾರರು. ಆದರೆ ಭಗವಂತನೇ ಮನುಷ್ಯದೇಹಧಾರಣೆ ಮಾಡಿ ಬಂದಾಗ, ಅವತರಿಸಿದಾಗ ಜೀವಿಗಳ ಮುಕ್ತಿಯ ಬೀಗದ ಕೈ ಆತನ ಹತ್ತಿರ ಇರುತ್ತದೆ. ಆಗ ಆತ ಜನರ ಮಂಗಳಕ್ಕಾಗಿ ಸಮಾಧಿಯಿಂದ ಹಿಂದಿರುಗಿ ಬರುತ್ತಾನೆ.”
ಮಾಸ್ಟರ್ ತನಗೆ ತಾನೆ: “ಹಾಗಾದರೆ ಪರಮಹಂಸರ ಕೈಯಲ್ಲಿ ಜೀವರ ಮುಕ್ತಿಯ ಬೀಗದ ಕೈ?”
ಹಾಜರಾ: “ಭಗವಂತನನ್ನು ತುಷ್ಟನನ್ನಾಗಿ ಮಾಡಿದರೇ ಯಥೇಷ್ಟ. ಅವತಾರ ಪುರುಷ ಇದ್ದರೂ ಒಂದೆ, ಇಲ್ಲದಿದ್ದರೂ ಒಂದೆ.”
ಇಂದು ಅಮಾವಾಸ್ಯೆ. ಕ್ರಮೇಣ ಸಾಯಂಕಾಲವಾಗುತ್ತಿದೆ. ಕಗ್ಗತ್ತಲು ಮರಗಿಡಗಳನ್ನೆಲ್ಲಾ ಆವರಿಸುತ್ತಿದೆ. ದೇವಾಲಯಗಳಲ್ಲಿ ಎಲ್ಲೊ ಅಲ್ಲಿ ಇಲ್ಲಿ ಒಂದೊಂದು ದೀಪ ಕಣ್ಣಿಗೆ ಬೀಳುತ್ತಿವೆ. ಭಾಗೀರಥಿಯಲ್ಲಿ ಕಪ್ಪು ಆಕಾಶ ಪ್ರತಿಬಿಂಬಿತವಾಗುತ್ತಿದೆ.
ಪರಮಹಂಸರು ತಮ್ಮ ಕೊಠಡಿಯ ದಕ್ಷಿಣದಲ್ಲಿರುವ ವರಾಂಡಕ್ಕೆ ಹೋಗಿ ಕುಳಿತುಕೊಂಡಿದ್ದಾರೆ. ಪರಮಹಂಸರು ಸ್ವಾಭಾವಿಕವಾಗಿಯೇ ಭಾವಮಯರು. ಕಾಳಿಯ ನೆನಪನ್ನು ತರುವ ಈ ಕಗ್ಗತ್ತಲು ಭಾವವನ್ನು ಇನ್ನೂ ಗಾಢವನ್ನಾಗಿ ಮಾಡಿದೆ. ಆಗಾಗ ಪ್ರಣವೋಚ್ಚಾರಣೆ, ಭಗವತಿಯ ನಾಮೋಚ್ಚಾರಣೆ ಮಾಡುತ್ತಿದ್ದಾರೆ. ಈಗ ಮಂದಲಿಗೆಯ ಮೇಲೆ ಮಲಗಿಕೊಂಡು ಮಾಸ್ಟರಿಗೆ ಏನೇನೋ ಪಿಸುಗುಟ್ಟುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೋಡು, ಭಗವಂತನನ್ನು ನೋಡಬಹುದು. ಆತನಿಗೆ ಅನುಭವ ಆಗಿದೆ. ಆದರೆ ಬೇರೆ ಯಾರಿಗೂ ಹೇಳಬೇಡ. ನಿನಗೆ ಯಾವುದು ರುಚಿಸುತ್ತದೆ ಸಾಕಾರವೋ ಅಥವಾ ನಿರಾಕಾರವೋ?”
ಮಾಸ್ಟರ್: “ಈಗ ಕೆಲವು ಕಾಲದಿಂದ ನನಗೆ ನಿರಾಕಾರ ರುಚಿಸುತ್ತದೆ. ಆದರೆ ಈಗೀಗ ಸ್ವಲ್ಪ ಸ್ವಲ್ಪವಾಗಿ ಅರ್ಥವಾಗುತ್ತಿದೆ, ಆತನೇ ಈ ಎಲ್ಲಾ ರೂಪಗಳನ್ನು ಧರಿಸಿದ್ದಾನೆ ಎಂಬುದಾಗಿ.”
ಶ್ರೀರಾಮಕೃಷ್ಣರು: “ನೋಡು, ಒಂದು ದಿನ ನನ್ನನ್ನು ಬೇಲಘರದಲ್ಲಿರುವ ಮತಿಶೀಲನ ತೋಟದ ಮನೆಗೆ ಗಾಡಿ ಮಾಡಿಕೊಂಡು ಕರೆದುಕೊಂಡು ಹೋಗುತ್ತೀಯಾ? ಅಲ್ಲಿನ ಕೊಳದ ನೀರಿಗೆ ಪುರಿ ಹಾಕಿದೊಡನೆಯೇ ಎಲ್ಲಾ ಮೀನುಗಳು ಅದನ್ನು ತಿನ್ನಲು ಮೇಲೆ ಬರುತ್ತವೆ. ಆಹಾ! ಅವು ನೀರಿನಲ್ಲಿ ಕ್ರೀಡಿಸುವುದನ್ನು ನೋಡಿದರೆ ನನಗೆ ಬಹಳ ಆನಂದವಾಗುತ್ತದೆ. ನಿನಗೂ ಆ ಉದ್ದೀಪನವನ್ನು ತರುತ್ತದೆ. ನಿನಗೆ ಅನುಭವವಾಗುತ್ತದೆ, ಸಚ್ಚಿದಾನಂದಸಾಗರದಲ್ಲಿ ಆತ್ಮವೆಂಬ ಮೀನು ಕ್ರೀಡಿಸುತ್ತಿರುವುದೋ ಏನೋ ಎಂಬಂತೆ. ನಾನು ಒಂದು ದೊಡ್ಡ ಮೈದಾನದಲ್ಲಿ ನಿಂತುಕೊಂಡರೂ ಅದೇ ರೀತಿಯಾಗಿ ನನಗೆ ಭಗವದ್ಭಾವ ಬಂದುಬಿಡುತ್ತದೆ. ಆಗ ಮಡಕೆಯಲ್ಲಿದ್ದ ಮೀನು ಸರೋವರಕ್ಕೆ ಬಂದಿರುವ ಹಾಗೆ ಅನುಭವವಾಗುತ್ತದೆ.
“ಭಗವಂತನ ದರ್ಶನ ಆಗಬೇಕಾದರೆ ಸಾಧನೆ ಆವಶ್ಯಕ. ನಾನು ಅನೇಕ ಕಠೋರ ಸಾಧನೆಗಳನ್ನು ಮಾಡಬೇಕಾಗಿ ಬಂತು. ಬಿಲ್ವವೃಕ್ಷದ ಕೆಳಗೆ ಎಷ್ಟೊಂದು ಬಗೆಯ ಸಾಧನೆ ಮಾಡಿದ್ದೇನೆ! ಅದರ ಕೆಳಗೆ ಮಲಗಿ ಅಳುತ್ತಿದ್ದೆ: ‘ಹೇ ಭಗವತಿ, ನನಗೆ ನಿನ್ನ ದರ್ಶನ ಕೊಡು’ ಎಂಬುದಾಗಿ. ಕಣ್ಣೀರಿನಿಂದ ದೇಹ ಒದ್ದೆಯಾಗಿಬಿಡುತ್ತಿತ್ತು.”
ಮಾಸ್ಟರ್: “ನೀವು ಅಷ್ಟೊಂದು ಸಾಧನೆಗಳನ್ನು ಮಾಡಿದಿರಿ. ಆದರೆ ಜನರಿಗೆ ಭಗವಂತ ಒಂದು ಕ್ಷಣದಲ್ಲೇ ದೊರೆತುಬಿಡಬೇಕು! ಮನೆಯ ಸುತ್ತ ಬರಿದೆ ಬೆರಳ ಗೆರೆ ಎಳೆದುಬಿಟ್ಟರೆ ಗೋಡೆ ಎದ್ದುಬಿಟ್ಟೀತೆ?”
ಶ್ರೀರಾಮಕೃಷ್ಣರು: “ಅಮೃತ ಹೇಳುತ್ತಾನೆ, ಒಬ್ಬ ಬೆಂಕಿ ಹೊತ್ತಿಸಿದ ಅಂದರೆ ಒಂದಿಪ್ಪತ್ತು ಜನ ಬೆಂಕಿ ಕಾಯಿಸಿಕೊಳ್ಳಬಹುದು ಎಂಬುದಾಗಿ. ಒಂದು ವಿಷಯ, ನಿತ್ಯವನ್ನು ಮುಟ್ಟಿದ ನಂತರ ಲೀಲೆಯಲ್ಲಿ ಇರುವುದು ಮೇಲು.”
ಮಾಸ್ಟರ್: “ಒಮ್ಮೆ ನೀವು ಹೇಳಿದಿರಿ, ಲೀಲೆಗೆ ಇಳಿದು ಬರುವುದು ವಿಲಾಸಕ್ಕಾಗಿ ಎಂದು.”
ಶ್ರೀರಾಮಕೃಷ್ಣರು: “ಅಲ್ಲ, ಅದು ಹಾಗಲ್ಲ, ಲೀಲೆ ಕೂಡ ಸತ್ಯ.
“ನೋಡು, ನೀನು ಇಲ್ಲಿಗೆ ಬರುವಾಗ ಏನಾದರೂ ಒಂದು ಕಾಸಿನದನ್ನು ಕೈಯಲ್ಲಿ ತೆಗೆದುಕೊಂಡು ಬಾ. ಅದನ್ನು ನಾನೇ ಹೇಳುವುದು ಸರಿಯಲ್ಲ. ಅಹಂಕಾರದಂತೆ ಕಾಣಬರಬಹುದು. ಅಧರಸೇನನಿಗೂ ಹೇಳಿದ್ದೇನೆ, ಒಂದು ಕಾಸಿನದು ಏನನ್ನಾದರೂ ತರುವಂತೆ. ಭವನಾಥನಿಗೆ ಹೇಳಿದ್ದೇನೆ, ಒಂದು ಕಾಸಿನ ಎಲಡಕೆ ತರುವಂತೆ. ಭವನಾಥನ ಭಕ್ತಿ ಅದ್ಭುತವಾದ್ದು, ನೋಡಿದೀಯೆ ತಾನೆ? ನರೇಂದ್ರ, ಭವನಾಥ-ನರನಾರಿಯರಿದ್ದ ಹಾಗೆ. ಭವನಾಥ ನರೇಂದ್ರನ ಅನುಚರ. ನರೇಂದ್ರನನ್ನು ಗಾಡಿ ಮಾಡಿಕೊಂಡು ಇಲ್ಲಿಗೆ ಕರೆದುಕೊಂಡು ಬಾ. ಜೊತೆಯಲ್ಲಿ ಸ್ವಲ್ಪ ಸಿಹಿತಿಂಡಿಯನ್ನು ತೆಗೆದುಕೊಂಡು ಬಾ. ಅದು ನಿನಗೆ ಶ್ರೇಯಸ್ಸನ್ನು ತರುತ್ತದೆ.”
“ಜ್ಞಾನ, ಭಕ್ತಿ-ಎರಡೂ ಪಥಗಳೇ. ಭಕ್ತಿಮಾರ್ಗದಲ್ಲಿ ಸ್ವಲ್ಪ ಹೆಚ್ಚು ಬಾಹ್ಯಾಚಾರ ಬೇಕು. ಜ್ಞಾನಮಾರ್ಗವಲಂಬಿ ತಪ್ಪಿ ಅನಾಚಾರ ಮಾಡಿದರೆ, ಅದು ಜ್ಞಾನಾಗ್ನಿಯಲ್ಲಿ ಭಸ್ಮವಾಗಿಬಿಡುತ್ತದೆ. ಸುಮ್ಮನೆ ತಾನೇತಾನಾಗಿ ಉರಿಯುತ್ತಿರುವ ಬೆಂಕಿಯಲ್ಲಿ ಬಾಳೆ ಮರವನ್ನು ಬಿಸುಟರೂ ಅದು ಸುಟ್ಟು ಭಸ್ಮವಾಗಿಬಿಡುತ್ತದೆ.
“ಜ್ಞಾನಿಗಳ ಮಾರ್ಗ ವಿಚಾರಮಾರ್ಗ. ವಿಚಾರ ಮಾಡುತ್ತ ಮಾಡುತ್ತ ಒಮ್ಮೊಮ್ಮೆ ನಾಸ್ತಿಕಭಾವ ಬಂದುಬಿಡಬಹುದು. ಭಗವಂತನ ಸಾಕ್ಷಾತ್ಕಾರಕ್ಕಾಗಿ ನಿಜವಾಗಿ ವ್ಯಾಕುಲನಾಗಿರುವ ಭಕ್ತನ ಹೃದಯವನ್ನು ನಾಸ್ತಿಕ ಭಾವನೆಗಳು ಹೊಕ್ಕರೂ, ಆತ ಭಗವಚ್ಚಿಂತನೆ ಮಾಡುವುದನ್ನು ಬಿಡುವುದಿಲ್ಲ. ಯಾವ ರೈತನ ತಂದೆ, ತಾತ, ಮುತ್ತಾತ ವ್ಯವಸಾಯ ಮಾಡಿಕೊಂಡು ಬಂದಿದ್ದಾರೋ, ಆತ ಒಂದು ವರ್ಷ ಅನಾವೃಷ್ಟಿಯಾಗಿ ಬಿಟ್ಟಿತು ಎಂದು ವ್ಯವಸಾಯವನ್ನೆ ಬಿಟ್ಟುಬಿಡುವುದಿಲ್ಲ.”
ಪರಮಹಂಸರು ಮಂದಲಿಗೆ ಮೇಲೆ ಒಂದು ದಿಂಬು ಹಾಕಿ ಮಲಗಿಕೊಂಡು ಮಾತು ಮುಂದುವರಿಸುತ್ತಿದ್ದಾರೆ. ಅವರು ಮಾಸ್ಟರಿಗೆ ಹೇಳುತ್ತಿದ್ದಾರೆ: “ನನ್ನ ಕಾಲು ಸ್ವಲ್ಪ ನೋಯುತ್ತಿದೆ. ಅವುಗಳ ಮೇಲೆ ಸ್ವಲ್ಪ ಕೈಯಾಡಿಸು.” ಪರಮದಯಾಳುಗಳಾದ ಪರಮಹಂಸರು ತಮ್ಮ ಶಿಷ್ಯನಿಗೆ ಪಾದಸೇವೆ ಮಾಡಲು ಈ ರೀತಿಯಾದ ಒಂದು ಸದವಕಾಶ ಕಲ್ಪಿಸಿಕೊಟ್ಟಿದ್ದಾರೆ.
೮ನೆ ಜೂನ್ ೧೮೮೩, ಜ್ಯೇಷ್ಠ ಶುಕ್ಲ ತೃತೀಯ, ಶುಕ್ರವಾರ
ಈಗ ಬೇಸಗೆ ಕಾಲ. ಕಾಳೀದೇವಾಲಯದ ಸಾಯಂ ಮಂಗಳಾರತಿ ಮುಗಿದಿದೆ. ಪರಮಹಂಸರು ಭಗವತಿಯ ಎದುರು ನಿಂತು ಚಾಮರ ಬೀಸುತ್ತಿದ್ದಾರೆ.
ರಾಮ, ಕೇದಾರ ಚಟ್ಟೋಪಾಧ್ಯಾಯ, ತಾರಕ ಫಲಪುಷ್ಪ ಮೃಷ್ಟಾನ್ನಾದಿಗಳನ್ನು ತೆಗೆದುಕೊಂಡು ಕಲ್ಕತ್ತದಿಂದ ಬಂದಿದ್ದಾರೆ. ಕೇದಾರನಿಗೆ ವಯಸ್ಸು ಸುಮಾರು ಐವತ್ತು. ಆತ ಮೊದಲು ಬ್ರಾಹ್ಮಸಮಾಜದ ಅನುಯಾಯಿಯಾಗಿದ್ದು ಕ್ರಮೇಣ ಇತರ ಸಂಪ್ರದಾಯಗಳನ್ನೂ ಒಳಹೊಕ್ಕು ನೋಡಿ, ಕಟ್ಟಕಡೆಗೆ ಪರಮಹಂಸರ ಆಶ್ರಯ ಹೊಂದಿದ್ದಾನೆ. ಸರಕಾರದ ಒಂದು ಆಫೀಸಿನಲ್ಲಿ ಕರಣಿಕನ ಕೆಲಸ ಮಾಡಿಕೊಂಡಿದ್ದಾನೆ. ಮನೆ ಕಲ್ಕತ್ತದಲ್ಲಿದೆ.
ತಾರಕನ ವಯಸ್ಸು ಇಪ್ಪತ್ತನಾಲ್ಕು. ವಿವಾಹವಾಗಿದ್ದ. ಸ್ವಲ್ಪ ಕಾಲದ ನಂತರ ಆಕೆ ಸ್ವರ್ಗಸ್ಥಳಾದಳು. ಆತನಿಗೆ ಮನೆ ಬಾರಾಸಾತ್ ಗ್ರಾಮದಲ್ಲಿ. ಅದು ಕಲ್ಕತ್ತದಿಂದೇನೂ ಹೆಚ್ಚು ದೂರದಲ್ಲಿಲ್ಲ. ಆತನ ತಂದೆ ಒಬ್ಬ ಉಚ್ಚ ಮಟ್ಟದ ಸಾಧಕ. ಆತ ಪರಮಹಂಸರನ್ನು ಅನೇಕ ಸಲ ದರ್ಶನ ಮಾಡಿದ್ದಾನೆ. ತಾರಕ ಆಗಾಗ ರಾಮನ ಮನೆಗೆ ಹೋಗುತ್ತಲೇ ಇದ್ದಾನೆ; ರಾಮ ಮತ್ತು ನಿತ್ಯಗೋಪಾಲನೊಡನೆ ಆಗಾಗ ದಕ್ಷಿಣೇಶ್ವರಕ್ಕೆ ಬರುತ್ತಲೂ ಇದ್ದಾನೆ. ಈಗಲೂ ಒಂದು ವ್ಯಾಪಾರಸಂಸ್ಥೆಯ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಜಗತ್ತಿನ ಬಗೆಗೆ ಒಂದು ಉತ್ಕಟ ಉದಾಸೀನಭಾವ.
ಪರಮಹಂಸರು ದೇವಾಲಯದಿಂದ ಹೊರಕ್ಕೆ ಬಂದೊಡನೆಯೇ ರಾಮ, ಮಾಸ್ಟರ್, ಕೇದಾರ, ತಾರಕ ಮೊದಲಾದವರು ಹೊರಗಡೆ ನಿಂತುಕೊಂಡಿರುವುದು ಅವರ ಕಣ್ಣಿಗೆ ಬಿತ್ತು. ಪರಮಹಂಸರು ತಾರಕನ ಗಲ್ಲ ಮುಟ್ಟಿ ಪ್ರೀತಿ ತೋರಿಸಿದರು. ಅವನನ್ನು ಕಂಡು ಪರಮಹಂಸರಿಗೆ ಬಹಳ ಆನಂದವಾಗಿದೆ.
ಪರಮಹಂಸರು ತಮ್ಮ ಕೊಠಡಿಗೆ ಹಿಂದಿರುಗಿದ ಮೇಲೆ ಭಾವಾವಿಷ್ಟರಾಗಿ ನೆಲದ ಮೇಲೆ ಎರಡು ಕಾಲುಗಳನ್ನೂ ನೀಡಿಕೊಂಡು ಕುಳಿತಿದ್ದಾರೆ. ರಾಮ, ಕೇದಾರ ಇವರು ಪರಮಹಂಸರ ಪಾದಗಳನ್ನು ಹೂವು ಹಾರಗಳಿಂದ ಅಲಂಕಾರ ಮಾಡುತ್ತಿದ್ದಾರೆ. ಪರಮಹಂಸರು ಈಗ ಸಮಾಧಿಸ್ಥರಾಗಿದ್ದಾರೆ.
ಕೇದಾರನಿಗೆ ಯಾವುದೋ ಒಂದು ಸಂಪ್ರದಾಯದ ವಿಚಿತ್ರ ಅಭ್ಯಾಸದಲ್ಲಿ ನಂಬಿಕೆ. ಅದಕ್ಕಾಗಿ ಆತ ಪರಮಹಂಸರ ಹೆಬ್ಬೆರಳು ಹಿಡಿದು ಕುಳಿತುಕೊಂಡಿದ್ದಾನೆ. ಹಾಗೆ ಮಾಡಿದರೆ ತನ್ನಲ್ಲಿ ಶಕ್ತಿಸಂಚಾರವಾಗಿಬಿಡುವುದು ಎಂಬುದಾಗಿ ಆತ ನಂಬಿದ್ದಾನೆ. ಪರಮಹಂಸರು. ಕಿಂಚಿತ್ ಪ್ರಕೃತಿಸ್ಥರಾಗಿ ಹೇಳುತ್ತಿದ್ದಾರೆ: “ಹೇ ತಾಯಿ, ನನ್ನ ಹೆಬ್ಬೆರಳು ಹಿಡಿದುಕೊಂಡು ಆತ ನನಗೇನು ಮಾಡಬಲ್ಲ?” ಕೇದಾರ ಈಗ ನಮ್ರತೆಯಿಂದ ಕೈ ಮುಗಿದು ಕುಳಿತುಕೊಂಡ. ಇನ್ನೂ ಭಾವಾವಿಷ್ಟರಾಗಿಯೇ ಪರಮಹಂಸರು ಕೇದಾರನಿಗೆ ಹೇಳುತ್ತಿದ್ದಾರೆ: “ಇನ್ನೂ ನಿನ್ನ ಮನಸ್ಸು ಕಾಮಕಾಂಚನಗಳ ಕಡೆಗೆ ಹರಿಯುತ್ತಿದೆ. ಕೇವಲ ಮಾತಿನಲ್ಲಿ ಮಾತ್ರ ನನ್ನ ಮನಸ್ಸು ಆ ಕಡೆಗೆ ಹರಿಯುತ್ತಿಲ್ಲ ಅಂತ ಹೇಳಿಬಿಟ್ಟರೆ ಏನಾದ ಹಾಗಾಯಿತು? ಮುಂದುವರೆ. ಚಂದನದ ಕಾಡಿನಿಂದ ಆಚೆಗೆ ಇನ್ನೂ ಅನೇಕ ವಸ್ತುಗಳಿವೆ-ಬೆಳ್ಳಿಯ ಗಣಿ, ಚಿನ್ನದ ಗಣಿ, ಹೀರ ಮಾಣಿಕ್ಯಗಳ ಗಣಿ. ಎಲ್ಲೋ ಕಿಂಚಿತ್ ಉದ್ದೀಪನವಾಗಿಬಿಟ್ಟಿತು ಅಂದರೆ, ಭಾವಿಸಬೇಡ ಎಲ್ಲಾ ದೊರೆತುಬಿಟ್ಟಿತು ಎಂದು.” ಮತ್ತೆ ಭಾವಾವಿಷ್ಟರಾಗಿ ಪರಮಹಂಸರು ಭಗವತಿಗೆ ಹೇಳುತ್ತಿದ್ದಾರೆ: “ತಾಯೆ, ಈತನನ್ನು ಸರಿಸಿಬಿಡು.” ಇದನ್ನು ಕೇಳಿ ಕೇದಾರನ ಗಂಟಲು ಒಣಗಿಹೋಯಿತು. ಭಯದಿಂದ ನಡುಗುತ್ತ ರಾಮನಿಗೆ ಹೇಳುತ್ತಿದ್ದಾನೆ: “ಪರಮಹಂಸರು ಏನೋ ಹೇಳುತ್ತಿದ್ದಾರಲ್ಲ?”
ರಾಖಾಲನನ್ನು ಕಂಡು ಮತ್ತೆ ಪರಮಹಂಸರು ಭಾವಾವಿಷ್ಟರಾಗಿಬಿಟ್ಟಿದ್ದಾರೆ. ಆತನನ್ನು ಸಂಬೋಧಿಸಿ ಹೇಳುತ್ತಿದ್ದಾರೆ: “ನಾನು ಇಲ್ಲಿಗೆ ಬಂದು ಬಹಳಕಾಲ ಆಗಿಬಿಟ್ಟಿತು. ನೀನು ಯಾವಾಗ ಬಂದೆ?”
ಪರಮಹಂಸರು ತಾವು ಅವತಾರಪುರುಷರು ಮತ್ತು ರಾಖಾಲ ತಮ್ಮ ಸಹಾಯಕ ಮತ್ತು ಅಂತರಂಗ ಭಕ್ತ ಅಂತ ಸೂಚಿಸಿದ್ದಾರೇನು?
೧೦ನೆ ಜೂನ್ ೧೮೮೩, ಜ್ಯೇಷ್ಠ ಶುಕ್ಲ ಪಂಚಮಿ, ಭಾನುವಾರ
ಪರಮಹಂಸರು ರಾಖಾಲ, ಮಾಸ್ಟರ್, ಲಾಟು, ಕಿಶೋರಿ, ರಾಮಲಾಲ, ಹಾಜರಾ ಮತ್ತು ಇನ್ನೂ ಕೆಲವು ಮಂದಿ ಭಕ್ತರೊಡನೆ ಕೊಠಡಿಯಲ್ಲಿ ಕುಳಿತಿದ್ದಾರೆ. ಘಂಟೆ ಬೆಳಗಿನ ಹತ್ತು. ಅವರು ತಮ್ಮ ಎಳೆ ವಯಸ್ಸಿನ ಜೀವನವನ್ನು ಭಕ್ತರಿಗೆ ವರ್ಣನೆ ಮಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ನಾನು ಬಾಲ್ಯದಲ್ಲಿ ಕಾಮಾರಪುಕುರದಲ್ಲಿದ್ದಾಗ ಅಲ್ಲಿನ ಗಂಡಸರು, ಹೆಂಗಸರು ಎಲ್ಲರೂ ನನ್ನನ್ನು ಪ್ರೀತಿಸುತ್ತಿದ್ದರು. ನನ್ನ ಹಾಡು ಕಂಡರೆ ಎಲ್ಲರಿಗೂ ಇಷ್ಟ. ನನಗೆ ಜನರ ನಡೆ ನುಡಿ, ವ್ಯವಹಾರಗಳನ್ನು ನಕಲಿ ಮಾಡಿ ತೋರಿಸಲು ಚೆನ್ನಾಗಿ ಬರುತ್ತಿತ್ತು. ಅವುಗಳಿಂದ ಜನರ ಮನಸ್ಸು ಸಂತೋಷಗೊಳಿಸುತ್ತಿದ್ದೆ. ಮನೆಗಳಲ್ಲಿ ಹೆಂಗಸರು ಮಾಡಿದ ತಿಂಡಿಯನ್ನು ನನಗಾಗಿ ಪ್ರತ್ಯೇಕವಾಗಿ ಇಡುತ್ತಿದ್ದರು. ಯಾರೂ ನನ್ನನ್ನು ಪರಕೀಯನೆಂದು ಭಾವಿಸುತ್ತಿರಲಿಲ್ಲ. ತಮ್ಮ ಮನೆಹುಡುಗನೋ ಎಂಬಂತೆ ಕಾಣುತ್ತಿದ್ದರು.
“ನಾನು ಯಾವಾಗಲೂ ಆನಂದಭರಿತ ಪಾರಿವಾಳದಂತಿದ್ದೆ. ಆನಂದದಿಂದ ತುಂಬಿದ್ದ ಮನೆಗಳಿಗೆ ಮಾತ್ರ ಹೋಗಿಬರುತ್ತಿದ್ದೆ. ದುಃಖದುರಿತಗಳಿಂದ ಕೂಡಿದ ಮನೆಗಳ ಕಡೆಗೆ ಕಾಲಿಡುತ್ತಿರಲಿಲ್ಲ.
“ಊರಿನಲ್ಲಿ ಒಬ್ಬಿಬ್ಬರು ಹುಡುಗರು ನನ್ನ ಪರಮಮಿತ್ರರಾಗಿದ್ದರು. ಇನ್ನು ಹಲವರೊಡನೆಯೂ ನಾನು ಬೆರೆಯುತ್ತಿದ್ದೆ; ಆದರೆ ಈಗ ಅವರು ಘೋರ ವಿಷಯಾಸಕ್ತರಾಗಿದ್ದಾರೆ. ಅವರಲ್ಲಿ ಕೆಲವರು ಆಗಾಗ ಇಲ್ಲಿಗೆ ಬಂದುಹೋಗುತ್ತಿದ್ದಾರೆ. ಅವರು ಹೇಳುತ್ತಾರೆ: ‘ಹೇ ಭಗವಂತ, ಇವರು ಊರಿನ ಶಾಲೆಯಲ್ಲಿ ಹಿಂದೆ ಹೇಗಿದ್ದರೋ, ಹಾಗೆ ಇನ್ನೂ ಇದ್ದಾರಲ್ಲ!’ ನಾನು ಶಾಲೆಗೆ ಹೋಗುತ್ತಿದ್ದಾಗ, ಗಣಿತ ತನ್ನ ತಲೆಗೆ ಚಿಟ್ಟು ಹಿಡಿಸಿಬಿಡುತ್ತಿತ್ತು. ಆದರೆ ನನಗೆ ಚೆನ್ನಾಗಿ ಚಿತ್ರ ಬರೆಯಲು ಬರುತ್ತಿತ್ತು. ಚಿಕ್ಕ ಪುಟ್ಟ ದೇವದೇವಿಯರ ಮೂರ್ತಿಗಳನ್ನು ಮಾಡಲೂ ಚೆನ್ನಾಗಿ ಬರುತ್ತಿತ್ತು.
“ಅತಿಥಿಶಾಲೆ, ಅನ್ನಸತ್ರ ಇದ್ದ ಎಡೆಗಳಿಗೆ ಹೋಗಿ ಅಲ್ಲಿ ಘಂಟೆಗಳವರೆಗೆ ಕಾಲವನ್ನು ಕಳೆದುಬಿಡುತ್ತಿದ್ದೆ.”
“ಎಲ್ಲೆಲ್ಲಿ ರಾಮಾಯಣ, ಭಾಗವತ ಇವುಗಳ ಪ್ರವಚನ ಆಗುತ್ತಿತ್ತೋ ಅಲ್ಲಿಗೆಲ್ಲಾ ಹೋಗಿ ಕೊನೆಯವರೆಗೂ ಇದ್ದು ಕೇಳಿಬರುತ್ತಿದ್ದೆ. ಭಾಗವತ ಪಂಡಿತನೇನಾದರೂ ಒಂದು ವಿಧವಾದ ಠೀವಿ-ಗೀವಿಯಿಂದ ಓದಿದರೆ ಅದನ್ನು ಅನುಕರಿಸಿ ಜನರ ಮನಸ್ಸನ್ನು ಆನಂದಗೊಳಿಸುತ್ತಿದ್ದೆ.
“ನನಗೆ ಹೆಂಗಸರ ಹಾವಭಾವಗಳನ್ನೆಲ್ಲಾ ಚೆನ್ನಾಗಿ ಅನುಕರಿಸಿ ತೋರಿಸಲು ಬರುತ್ತಿತ್ತು. ಶೀಲಭ್ರಷ್ಟಳಾದ ಹೆಂಗಸು ಯಾರೆಂಬುದು ಸ್ಪಷ್ಟವಾಗಿ ಗೊತ್ತಾಗಿಬಿಡುತ್ತಿತ್ತು. ಶೀಲಭ್ರಷ್ಟರಾದ ವಿಧವೆಯರು ಬೈತಲೆ ತೆಗೆದುಕೊಂಡು ಶೃಂಗಾರ ಮಾಡಿಕೊಳ್ಳುತ್ತಾರೆ. ಅವರಿಗೆ ನಾಚಿಕೆ ಎಂಬುದು ಬಹಳ ಕಡಮೆ. ಅವರು ಕುಳಿತುಕೊಳ್ಳುವ ವಿಧಾನವೇ ಬೇರೆ! ಸಾಕು ಇಲ್ಲಿಗೆ. ಇನ್ನು ಪ್ರಾಪಂಚಿಕರ ವಿಷಯ ಮಾತನಾಡುವುದು ಬೇಡ.”
ಪರಮಹಂಸರು ರಾಮಲಾಲನಿಗೆ ಹಾಡುವಂತೆ ಹೇಳಿದರು. ಆತ ಹಾಡುತ್ತಿದ್ದಾನೆ :
ನಟ್ಟಿರುಳ ನಭದಂತೆ ಕಾಳಿಮಾ ತನುವಾಗಿ
ಧಾವಿಸುವ ನಾರಿ ಯಾರು?………..
ಬಳಿಕ ರಾವಣವಧೆಯನ್ನು ನೋಡಿ ಮಂಡೋದರಿ ದುಃಖ ಪಡುತ್ತಿರುವುದರ ಸಂಬಂಧವಾಗಿ ರಾಮಲಾಲ ಹಾಡಿದ. ಅದನ್ನು ಕೇಳಿ ಪರಮಹಂಸರ ಕಣ್ಣಿನಿಂದ ನೀರು ಸುರಿಯುತ್ತಿದೆ. ಅವರು ಹೇಳುತ್ತಿದ್ದಾರೆ: “ಒಮ್ಮೆ ನಾನು ಸರ್ವೆಮರಗಳ ಕಡೆಗೆ ಹೋಗಿದ್ದಾಗ, ಗಂಗೆಯ ಕಡೆಯಿಂದ ಅಂಬಿಗರು ಇದೇ ಹಾಡನ್ನು ಹಾಡುತ್ತಿದ್ದುದು ಕೇಳಿಬಂತು. ಅಲ್ಲೇ ಕುಳಿತು ಬಹಳ ಹೊತ್ತಿನವರೆಗೆ ಅತ್ತೆ. ಅಲ್ಲಿಂದ ಜನರು ನನ್ನ ಕೈ ಹಿಡಿದುಕೊಂಡು ಕೊಠಡಿಗೆ ತರಬೇಕಾಯಿತು.”
ಈಗ ಗೋಪಿಯರು ಶ್ರೀಕೃಷ್ಣನಲ್ಲಿ ಇಟ್ಟಿದ್ದ ಪ್ರೇಮದ ಸಂಬಂಧವಾಗಿ ಹಾಡಲು ಆರಂಭಿಸಿದ. ಅಕ್ರೂರ ಕೃಷ್ಣನನ್ನು ರಥದ ಮೇಲೆ ಕೂರಿಸಿಕೊಂಡು ಇನ್ನೇನು ಬೃಂದಾವನ ಬಿಟ್ಟು ಮಥುರೆಗೆ ಹೊರಡುವುದರಲ್ಲಿದ್ದಾಗ, ಗೋಪಿಯರು ರಥವನ್ನು ಅಡ್ಡಗಟ್ಟಿ ಬಿಡುತ್ತಾರೆ. ಕೆಲವರು ಅದರ ಚಕ್ರ ಹಿಡಿದುಕೊಳ್ಳುತ್ತಾರೆ, ಇನ್ನು ಕೆಲವರು ಅದರ ಮುಂಭಾಗದಲ್ಲಿ ಅಡ್ಡಲಾಗಿ ಮಲಗಿಕೊಳ್ಳುತ್ತಾರೆ. ಶ್ರೀಕೃಷ್ಣ ತನ್ನ ಸ್ವಂತ ಇಚ್ಛೆಯಿಂದ ಹೋಗುತ್ತಿದ್ದಾನೆ ಎಂಬುದನ್ನು ಅರಿಯದೆ ಅವರೆಲ್ಲರೂ ಅಕ್ರೂರನಲ್ಲಿ ತಪ್ಪು ಕಂಡುಹಿಡಿಯುತ್ತಾರೆ. ಅಕ್ರೂರ ನಿಜಸ್ಥಿತಿಯನ್ನು ವರ್ಣನೆಮಾಡುತ್ತಿದ್ದಾನೆ.
ರಾಮಲಾಲ ಹಾಡುತ್ತಿದ್ದಾನೆ:
ತಡೆಯದಿರಿ ತಡೆಯದಿರಿ ರಥಚಕ್ರಗಳನು
ಚಕ್ರದಿಂದೀ ರಥವು ಮುನ್ನಡೆವುದೇನು?……..
ಗೋಪಿಯರ ಸಂಬಂಧವಾಗಿ ಪರಮಹಂಸರು ಹೇಳುತ್ತಿದ್ದಾರೆ: “ಗೋಪಿಯರದು ಎಂಥಾ ಪ್ರೀತಿ, ಎಂಥಾ ಪ್ರೇಮ! ರಾಧೆ ಶ್ರೀಕೃಷ್ಣನ ಚಿತ್ರವನ್ನು ತನ್ನ ಕೈಯಿಂದಲೇ ಬರೆದಳು. ಆದರೆ ಅದಕ್ಕೆ ಆಕೆ ಕಾಲು ಬರೆಯಲಿಲ್ಲ, ಶ್ರೀಕೃಷ್ಣ ಎಲ್ಲಿ ಮಥುರೆಗೆ ನಡೆದು ಓಡಿಬಿಡುವನೋ ಎಂದು ಹೆದರಿ. ನಾನು ಹಾಡುಗಳನ್ನೆಲ್ಲಾ ಬಾಲ್ಯಕಾಲದಲ್ಲಿ ಬಹಳವಾಗಿ ಹಾಡುತ್ತಿದ್ದೆ. ಇಡೀ ನಾಟಕಗಳನ್ನೇ ಕಂಠಪಾಟಮಾಡಿಬಿಟ್ಟಿದ್ದೆ.”
ಪರಮಹಂಸರು ಮಧ್ಯಾಹ್ನದ ಊಟವಾದ ನಂತರ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಲೂ ಅವರಿಗೆ ಇನ್ನೂ ಸಮಯ ದೊರೆತಿಲ್ಲ. ಭಕ್ತರು ಬಂದು ಸೇರಲಾರಂಭಿಸಿದರು. ಒಂದು ಗುಂಪು ಮಣಿರಾಮಪುರದಿಂದ ಬಂತು. ಇನ್ನೊಂದು ಬೇಲಘರದಿಂದ. ಭಕ್ತರಲ್ಲಿ ಕೆಲವರು ಹೇಳಿದರು: “ನಾವು ಅವೇಳೆಯಲ್ಲಿ ಬಂದು ನಿಮ್ಮ ವಿಶ್ರಾಂತಿಗೆ ಭಂಗ ತಂದಿದ್ದೇವೆ.”
ಶ್ರೀರಾಮಕೃಷ್ಣರು: “ಇಲ್ಲ, ಇಲ್ಲ. ಅದು ಕೇವಲ ರಜೋಗುಣಿಗಳಿಗೆ ಮಾತ್ರ ಅನ್ವಯಿಸುತ್ತದೆ. ರಜೋಗುಣಿಯ ವಿಷಯವಾಗಿ ಜನ ಹೇಳುತ್ತಾರೆ: ‘ಈಗ ಈತ ನಿದ್ರಾದೇವಿಯನ್ನು ಒಲಿಸಿಕೊಳ್ಳುವುದರಲ್ಲಿದ್ದಾನೆ.”
ಮಣಿರಾಮಪುರದ ಭಕ್ತರು ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುವ ಬಗೆ ಹೇಗೆ ಎಂಬುದಾಗಿ ಪರಮಹಂಸರಿಗೆ ಪ್ರಶ್ನೆ ಹಾಕಿದರು.
ಶ್ರೀರಾಮಕೃಷ್ಣರು: “ಸ್ವಲ್ಪ ಸಾಧನೆ ಭಜನೆ ಮಾಡಬೇಕು. ಹಾಲಿನಲ್ಲಿ ಬೆಣ್ಣೆ ಇದೆ ಎಂದು ಸುಮ್ಮನೆ ಹೇಳಿಬಿಟ್ಟರೆ ಸಾಕಾಗದು. ಹಾಲಿಗೆ ಹೆಪ್ಪು ಹಾಕಿ ಕಡೆದು ಬೆಣ್ಣೆ ತೆಗೆಯಬೇಕು. ಆಗಾಗ ನಿರ್ಜನಪ್ರದೇಶಕ್ಕೆ ಹೋಗಿ ಧ್ಯಾನಮಾಡಿ ಬರಬೇಕು. ಕೆಲವು ಕಾಲ ನಿರ್ಜನಪ್ರದೇಶದಲ್ಲಿದ್ದು ಭಕ್ತಿಯನ್ನು ಸಂಪಾದಿಸಿಕೊಂಡ ನಂತರ ಇಚ್ಛೆ ಬಂದೆಡೆಯಲ್ಲಿ ಇರಬಹುದು. ಕಾಲಿಗೆ ಮೆಟ್ಟುಹಾಕಿಕೊಂಡು ಅನಾಯಾಸದಿಂದ ಮುಳ್ಳುಕಾಡಿನಲ್ಲಿ ನಡೆದು ಹೋಗಿಬಿಡಬಹುದು.
“ಮುಖ್ಯವಾಗಿ ಬೇಕಾದ್ದು ಶ್ರದ್ಧೆ.
ಭಾವುಕನ ಭಾವದೊಲು ಅವನೊಳುದಿಸುವ ಒಲವು,
ಆ ಒಲವಿಗನುಸಾರ ಅವನು ಪಡೆಯುವ ಫಲವು;
ಶ್ರದ್ಧೆ ಎಲ್ಲಕು ಮೂಲ…..
ಶ್ರದ್ಧೆಯೊಂದು ಇದ್ದುಬಿಟ್ಟುದೇ ಆದರೆ ಇನ್ನು ಯಾವುದಕ್ಕೂ ಹೆದರಬೇಕಾಗಿರುವುದಿಲ್ಲ.”
ಒಬ್ಬ ಭಕ್ತ: “ಮಹಾಶಯರೆ, ಗುರುವಿನ ಆವಶ್ಯಕತೆ ಇದೆಯೇ?”
ಶ್ರೀರಾಮಕೃಷ್ಣರು: “ಹೌದು, ಗುರು ಅನೇಕರಿಗೆ ಬೇಕಾಗುತ್ತಾನೆ. ಆದರೆ ಆತನ ವಾಕ್ಯದಲ್ಲಿ ಶ್ರದ್ಧೆಯಿಡಬೇಕು. ಗುರುವನ್ನು ಸಾಕ್ಷಾತ್ ಭಗವಂತನೇ ಎಂಬ ದೃಷ್ಟಿಯಿಂದ ನೋಡಿದಾಗ ಮಾತ್ರವೇ ಆಧ್ಯಾತ್ಮಿಕ ಉನ್ನತಿ ಉಂಟಾಗುತ್ತದೆ. ಅದಕ್ಕಾಗಿಯೇ ವೈಷ್ಣವರು ಹೇಳುವುದು: ‘ಗುರು ಕೃಷ್ಣ ವೈಷ್ಣವ ಒಂದೇ’ ಎಂದು.
“ಭಗವಂತನ ನಾಮೋಚ್ಚಾರಣೆಯನ್ನು ಸರ್ವದಾ ಮಾಡುತ್ತಿರಬೇಕು. ಕಲಿಯುಗದಲ್ಲಿ ನಾಮಮಾಹಾತ್ಮ್ಯ. ಈ ಯುಗದಲ್ಲಿ ಅನ್ನಗತಪ್ರಾಣವಾದ್ದರಿಂದ ಯೋಗಾಭ್ಯಾಸ ಸಾಧ್ಯವಿಲ್ಲ. ಆತನ ನಾಮೋಚ್ಚಾರಣೆ ಮಾಡುತ್ತಾ ಕೈತಾಳ ಹಾಕಿದರೆ ಪಾಪವೆಂಬ ಹಕ್ಕಿಗಳು ಹಾರಿಹೋಗಿ ಬಿಡುತ್ತವೆ.
“ಯಾವಾಗಲೂ ಸತ್ಸಂಗ ಮಾಡುತ್ತಿರಬೇಕು. ಗಂಗೆಯನ್ನು ಸಮೀಪಿಸಿದಷ್ಟೂ ತಂಪಾದ ಹವ ಜಾಸ್ತಿಯಾಗುತ್ತಾ ಬರುತ್ತದೆ. ಬೆಂಕಿಯನ್ನು ಸಮೀಪಿಸಿದಂತೆಲ್ಲಾ ತಾಪವೂ ಅಧಿಕವಾಗುತ್ತಾ ಬರುತ್ತದೆ.
“ಸೋಮಾರಿತನದಿಂದ, ಆಲಸ್ಯದಿಂದ ಏನೂ ದೊರೆಯದು. ಯಾರಿಗೆ ಈ ಪ್ರಾಪಂಚಿಕ ವಸ್ತುಗಳಲ್ಲಿ ಭೋಗಾಸಕ್ತಿ ಇರುವುದೋ ಅವರು ಆಧ್ಯಾತ್ಮಿಕ ಉನ್ನತಿಯ ಸಂಬಂಧವಾಗಿ ಹೇಳುತ್ತಾರೆ: ‘ಆಗುತ್ತೆ; ಒಂದು ದಿನ ಭಗವಂತನನ್ನು ಪಡೆದುಕೊಳ್ಳುತ್ತೇವೆ.’
“ಒಮ್ಮೆ ನಾನು ಕೇಶವಸೇನನಿಗೆ ಹೇಳಿದೆ: ‘ಮಗು ತನ್ನ ಹಿಸ್ಸೆಗಾಗಿ ವ್ಯಾಕುಲನಾಗಿದ್ದರೆ ಪ್ರಾಪ್ತವಯಸ್ಸಿಗೆ ಇನ್ನೂ ಮೂರು ವರ್ಷ ಇದೆ ಎನ್ನುವಾಗಲೇ ತಂದೆ ಆತನಿಗೆ ಹಿಸ್ಸೆ ಕೊಟ್ಟುಬಿಡುತ್ತಾನೆ. ಮಗು ಹಾಸಿಗೆಯಲ್ಲಿ ಮಲಗಿಕೊಂಡು ಉರುಟುಗೋಲು ಚೀಪುತ್ತಿರುವವರೆಗೆ ತಾಯಿ ಅಡಿಗೆ ಕೆಲಸ ಮಾಡುತ್ತಿರುತ್ತಾಳೆ. ಆದರೆ ಯಾವಾಗ ಮಗು ಉರುಟುಗೋಲು ಬಿಸಾಡಿ ಚೀತ್ಕಾರ ಮಾಡುತ್ತದೋ, ಆಗ ಒಲೆ ಮೇಲೆ ಇದ್ದ ಅನ್ನದ ತಪ್ಪಲೆ ಕೆಳಕ್ಕೆ ಇಳಿಸಿ ಓಡಿ ಬಂದು ಮಗುವನ್ನು ಎತ್ತಿಕೊಂಡು ಸ್ತನ ಕೊಡುತ್ತಾಳೆ.’ ಇದನ್ನೆಲ್ಲ ನಾನು ಕೇಶವಸೇನನಿಗೆ ಹೇಳಿದೆ.
“ಜನ ಹೇಳುತ್ತಾರೆ, ಈ ಕಲಿಯುಗದಲ್ಲಿ ಹೆಚ್ಚಾಗಿ ಏನೂ ಬೇಡ; ಒಂದು ದಿನ, ಒಂದು ರಾತ್ರಿ ಭಗವಂತನಿಗಾಗಿ ಅತ್ತುಬಿಟ್ಟರೆ, ದರ್ಶನ ದೊರೆತುಬಿಡುತ್ತದೆ ಎಂಬುದಾಗಿ.
“ಭಗವಂತನ ಮೇಲೆ ಸಿಟ್ಟುಗೊಂಡು ಹೇಳು: ‘ನೀನು ನನ್ನನ್ನು ಸೃಷ್ಟಿಸಿದ್ದೀಯೆ. ನಿನ್ನ ದರ್ಶನವನ್ನು ನನಗೆ ಕೊಟ್ಟೇ ಕೊಡಬೇಕು.’ ಸಂಸಾರದಲ್ಲಾದರೂ ಇರು, ಅಥವಾ ಬೇರೆಲ್ಲಾದರೂ ಇರು; ಮನಸ್ಸು ಮಾತ್ರ ಸರ್ವದಾ ಭಗವಂತನಲ್ಲಿ ಇಟ್ಟಿರು. ವಿಷಯಾಸಕ್ತ ಮನಸ್ಸು ಒದ್ದೆಮುದ್ದೆಯಾದ ಬೆಂಕಿಕಡ್ಡಿ ಇದ್ದಹಾಗೆ. ಎಷ್ಟು ಉಜ್ಜಿದರೂ ಅದು ಹೊತ್ತಿಕೊಳ್ಳದು. ಏಕಲವ್ಯ ತನ್ನ ಗುರು ದ್ರೋಣಾಚಾರ್ಯರ ಮಣ್ಣಿನ ಪ್ರತಿಮೆಯನ್ನು ತನ್ನ ಮುಂದೆ ಇಟ್ಟುಕೊಂಡು ಧನುರ್ವಿದ್ಯೆಯನ್ನು ಕಲಿತುಕೊಂಡ.
“ಮುಂದೆ ಹೋಗು, ಸೌದೆ ಕತ್ತರಿಸುವವನು ಸಾಧುವಿನ ಆದೇಶದಂತೆ ಮುಂದುವರೆದು ಚಂದನವನ, ಬೆಳ್ಳಿಯ ಗಣಿ ಇವನ್ನು ಕಂಡ. ಇನ್ನೂ ಮುಂದಕ್ಕೆ ಹೋಗಿ ಹೀರ ಮಾಣಿಕ್ಯಗಳ ಗಣಿಯನ್ನೂ ಕಂಡ.
“ಅಜ್ಞಾನಿಗಳನ್ನು ಮಣ್ಣಿನ ಮನೆಯ ಒಳಗೆ ವಾಸಿಸುವವರಿಗೆ ಹೋಲಿಸಬಹುದು. ಮನೆಯ ಒಳಗೂ ಸಾಕಾದಷ್ಟು ಬೆಳಕು ಇರುವುದಿಲ್ಲ. ಹೊರಗಿರುವ ಯಾವ ವಸ್ತುವನ್ನೂ ನೋಡಲೂ ಆಗುವುದಿಲ್ಲ. ಆದರೆ ಯಾರು ಜ್ಞಾನವನ್ನು ಪಡೆದುಕೊಂಡು ಸಂಸಾರದಲ್ಲಿ ಇರುತ್ತಾರೋ, ಅವರನ್ನು ಗಾಜಿನ ಮನೆಯಲ್ಲಿ ವಾಸಿಸುವವರಿಗೆ ಹೋಲಿಸಬಹುದು. ಅವರು ಒಳಗಿರುವುದನ್ನೂ ನೋಡಬಲ್ಲರು, ಹೊರಗಿರುವುದನ್ನೂ ನೋಡಬಲ್ಲರು.
“ಇರುವುದು, ‘ಏಕಮೇವಾದ್ವಿತೀಯಮ್’ ಎಂದರೆ ಕೇವಲ ಒಂದೇ ಒಂದು. ಅದೇ ಪರಬ್ರಹ್ಮ. ಎಲ್ಲಿಯವರೆಗೆ ಭಗವಂತ ನಮ್ಮಲ್ಲಿ ‘ಅಹಂ’ ಎಂಬುದನ್ನು ಇಟ್ಟಿರುತ್ತಾನೋ ಅಲ್ಲಿಯವರೆಗೆ ಆತ ನಮಗೆ ತೋರಿಸಿಕೊಳ್ಳುತ್ತಾನೆ, ತಾನು ಆದ್ಯಾಶಕ್ತಿಯ ರೂಪದಿಂದ ಸೃಷ್ಟಿ, ಸ್ಥಿತಿ, ಪ್ರಳಯ ಮಾಡುತ್ತಿರುವುದಾಗಿ.
“ಯಾರು ಬ್ರಹ್ಮನೋ ಆತನೇ ಆದ್ಯಾಶಕ್ತಿ. ಒಬ್ಬ ರಾಜ ಒಮ್ಮೆ ಒಬ್ಬ ಯೋಗಿಗೆ ಹೇಳಿದ, ತನಗೆ ಒಂದೇ ಒಂದು ಪದದಲ್ಲಿ ಬ್ರಹ್ಮಜ್ಞಾನ ದೊರಕಿಸಿಕೊಡಬೇಕು ಎಂಬುದಾಗಿ. ಯೋಗಿ ಹೇಳಿದ: ‘ಆಗಲಿ, ಒಂದು ಪದದಿಂದಲೇ ನಿನಗೆ ಬ್ರಹ್ಮಜ್ಞಾನ ದೊರಕಿಸಿ ಕೊಡುತ್ತೇನೆ.’ ಸ್ವಲ್ಪ ಹೊತ್ತಾದ ನಂತರ ಒಬ್ಬ ಮಂತ್ರವಾದಿ ದೊರೆಯ ಹತ್ತಿರಕ್ಕೆ ಇದ್ದಕ್ಕಿದ್ದ ಹಾಗೆ ಬರುತ್ತಾನೆ. ಆತ ಎರಡು ಬೆರಳುಗಳನ್ನು ಬಹಳವಾಗಿ ತಿರುಗಿಸುತ್ತಿರುವುದು ಮತ್ತು ಹೇಳುತ್ತಿರುವುದು: ‘ರಾಜ, ಇಲ್ಲಿ ನೋಡು! ಇಲ್ಲಿ ನೋಡು! ದೊರೆ ಆಶ್ಚರ್ಯಚಕಿತನಾಗಿ ನೋಡಲಾರಂಭಿಸುತ್ತಾನೆ. ಹಾಗೆ ನೋಡುತ್ತಿದ್ದ ಹಾಗೆ ಕೆಲವು ನಿಮಿಷಗಳ ನಂತರ ಎರಡು ಬೆರಳೂ ಕೂಡಿ ಒಂದೇ ಆಗಿಬಿಡುತ್ತದೆ. ಬಳಿಕ ಮಂತ್ರವಾದಿ ಆ ಒಂದೇ ಬೆರಳನ್ನು ಸುತ್ತುತ್ತ ಹೇಳುತ್ತಾನೆ: ‘ರಾಜ, ಇಲ್ಲಿ ನೋಡು! ಇಲ್ಲಿ ನೋಡು! ಇದರ ಇಂಗಿತಾರ್ಥ, ಮೊದಮೊದಲು ಬ್ರಹ್ಮ ಮತ್ತು ಆದ್ಯಾಶಕ್ತಿ ಎರಡು ವಸ್ತು ಎಂಬ ಬೋಧೆಯಾಗುತ್ತದೆ. ಆದರೆ ಬ್ರಹ್ಮಜ್ಞಾನ ದೊರೆತನಂತರ ಅವು ಎರಡು ಎಂಬ ಬೋಧೆಯಾಗದು. ಆಗ ಅಭೇದ ಎಂಬ ಬೋಧೆ-ಒಂದೇ ಎಂಬ ಬೋಧೆ. ಏಕಮೇವಾದ್ವಿತೀಯಮ್-ಅದ್ವೈತ ಎಂಬ ಬೋಧೆ.’
ಬೇಲಘರದ ಭಕ್ತರೊಡನೆ ಒಬ್ಬ ಗಾಯಕ ಬಂದಿರುವುದು ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿದೆ. ಒಮ್ಮೆ ಆತನ ಹಾಡು ಕೇಳಿ ಪರಮಹಂಸರು ಸಮಾಧಿಸ್ಥರಾಗಿ ಬಿಟ್ಟಿದ್ದರು. ಪರಮಹಂಸರ ಇಚ್ಛೆಗನುಸಾರ ಆತ ಕೆಲವು ಹಾಡುಗಳನ್ನು ಹಾಡಿದ. ಅದರಲ್ಲಿ ಒಂದು ಕುಂಡಲಿನಿಯ ಜಾಗ್ರತಿಯ ಸಂಬಂಧವಾಗಿ ವರ್ಣನೆ ಮಾಡುತ್ತದೆ:
ಏಳು ತಾಯಿ, ಏಳು ತಾಯಿ, ಎಷ್ಟು ಕಾಲ ನಿದ್ದೆಗೈವೆ
ಮೂಲಾಧಾರ ಪದ್ಮದಿ!
ಏಳು ತಾಯಿ ಶಿವನಿರುವಾ ಸಾವಿರದಲ ಕಮಲವರಳ-
ಲೆನ್ನ ಶಿರೋಮಧ್ಯದಿ!
ಷಟ್ ಚಕ್ರವ ಭೇದಿಸಮ್ಮ
ಮನದ ವ್ಯಥೆಯ ನೀಗಿಸಮ್ಮ
ಓ ಚೇತನ ರೂಪಿಣಿ!
ಶ್ರೀರಾಮಕೃಷ್ಣರು: “ಈ ಹಾಡು ಷಟ್ಚಕ್ರಭೇದನದ ವಿಷಯವಾಗಿ ವರ್ಣನೆಮಾಡುತ್ತದೆ. ಭಗವಂತ ಒಳಗೂ ಇದ್ದಾನೆ, ಹೊರಗೂ ಇದ್ದಾನೆ. ಆತ ಆಂತರ್ಯದಲ್ಲಿದ್ದುಕೊಂಡು ಮನಸ್ಸು ವಿವಿಧ ಅವಸ್ಥೆ ತಾಳುವಂತೆ ಮಾಡುತ್ತಾನೆ. ಷಟ್ಚಕ್ರಗಳನ್ನು ಭೇದಿಸಿ ಮುಂದುವರಿದುದೇ ಆದರೆ ಜೀವಾತ್ಮ ಮಾಯಾರಾಜ್ಯವನ್ನು ಬಿಟ್ಟು ಪರಮಾತ್ಮನೊಡನೆ ಐಕ್ಯವಾಗಿ ಬಿಡುತ್ತಾನೆ. ಇದಕ್ಕೇ ಭಗವದ್ದರ್ಶನ ಅಂತ ಹೆಸರು.
“ಮಾಯೆ ಬಾಗಿಲನ್ನು ಬಿಟ್ಟು ನಿಲ್ಲದವರೆಗೆ ಭಗವಂತನ ದರ್ಶನ ದೊರೆಯುವುದಿಲ್ಲ. ಒಮ್ಮೆ ರಾಮ, ಸೀತೆ, ಲಕ್ಷ್ಮಣ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಮುಂದುಗಡೆ ರಾಮ, ಮಧ್ಯೆ ಸೀತೆ, ಹಿಂದುಗಡೆ ಲಕ್ಷ್ಮಣ. ಸೀತೆ ಮಧ್ಯೆ ಇದ್ದುದರಿಂದ ಲಕ್ಷ್ಮಣ ರಾಮನನ್ನು ನೋಡಲಾಗಲಿಲ್ಲ. ಅದೇ ರೀತಿ ಮಾಯೆ ಮಧ್ಯೆ ಇರುವುದರಿಂದ ಜೀವಾತ್ಮನಿಗೆ ಪರಮಾತ್ಮನ ದರ್ಶನ ದೊರೆಯುತ್ತಿಲ್ಲ. (ಮಣಿಮಲ್ಲಿಕನಿಗೆ) ಆದರೆ ಭಗವಂತ ಕೃಪೆಮಾಡಿದ ಅಂದರೆ, ಮಾಯೆ ಬಾಗಿಲು ಬಿಟ್ಟು ನಿಂತುಕೊಂಡುಬಿಡುತ್ತಾಳೆ. ಭೇಟಿಕಾರ ಎದುರು ಬಂದು ನಿಂತುಕೊಂಡರೆ ದ್ವಾರಪಾಲಕ ತನ್ನ ಯಜಮಾನನಿಗೆ ತಿಳಿಸುತ್ತಾನೆ: ‘ಹುಕುಮ್ ಕೊಡಿ, ಒಳಕ್ಕೆ ಬಿಟ್ಟುಬಿಡುತ್ತೇನೆ.’
“ಎರಡು ದೃಷ್ಟಿಗಳಿವೆ-ಒಂದು ವೇದಾಂತದ್ದು, ಇನ್ನೊಂದು ಪುರಾಣದ್ದು. ವೇದಾಂತ ದೃಷ್ಟಿಯಿಂದ ‘ಈ ಜಗತ್ತು ಮಾಯೆಯ ಚೌಕಟ್ಟಿನ ಮನೆ!’ ಅಂದರೆ ಸ್ವಪ್ನದೋಪಾದಿಯಲ್ಲಿ ಮಿಥ್ಯೆಯಾದ್ದು. ಆದರೆ ಪುರಾಣದೃಷ್ಟಿಯಿಂದ, ಭಕ್ತಿಶಾಸ್ತ್ರ ದೃಷ್ಟಿಯಿಂದ, ಭಗವಂತನೇ ಚತುರ್ವಿಂಶತಿ ತತ್ತ್ವಗಳಾಗಿದ್ದಾನೆ. ಆತನನ್ನು ಒಳಗೂ ಹೊರಗೂ ಪೂಜೆಮಾಡಿ.
“ಎಲ್ಲಿಯವರೆಗೆ ಭಗವಂತ ನಮ್ಮಲ್ಲಿ ‘ಅಹಂ’ ಎಂಬುದನ್ನು ಇಟ್ಟಿರುತ್ತಾನೋ ಅಲ್ಲಿಯವರೆಗೆ ಎಲ್ಲವೂ ಇವೆ. ಈ ಜಗತ್ತನ್ನು ಸ್ವಪ್ನವತ್ ಅಂತ ಹೇಳುವ ಹಾಗಿಲ್ಲ. ಒಲೆಯಲ್ಲಿ ಬೆಂಕಿ ಉರಿಯುತ್ತಿದೆ; ಅದಕ್ಕಾಗಿ ತಪ್ಪಲೆಯಲ್ಲಿ ಅಕ್ಕಿ, ಆಲೂಗಡ್ಡೆ, ಬದನೆಕಾಯಿ ಎಲ್ಲಾ ನೆಗೆದಾಡುತ್ತಿರುತ್ತವೆ, ‘ನಾವು ಇಲ್ಲಿದ್ದೇವೆ! ನಾವು ನೆಗೆದಾಡುತ್ತಿರುತ್ತೇವೆ!’ ಎಂಬುದಾಗಿ ಹೇಳುತ್ತಿರುವುವೋ ಏನೋ ಎಂಬಂತೆ. ಈ ಶರೀರವೇ ತಪ್ಪಲೆ, ಮನಸ್ಸು ಬುದ್ಧಿಗಳೇ ನೀರು, ಇಂದ್ರಿಯ ವಿಷಯ ವಸ್ತುಗಳೇ ಅಕ್ಕಿ, ಬೇಳೆ, ಆಲೂಗೆಡ್ಡೆ, ಬದನೆಕಾಯಿ. ‘ಅಹಂ’ ಎಂಬುದೇ ‘ನಾವು ನೆಗೆದಾಡುತ್ತಿದ್ದೇವೆ’ ಎಂಬ ಅಭಿಮಾನ. ಸಚ್ಚಿದಾನಂದನೇ ಬೆಂಕಿ.
“ಅದಕ್ಕಾಗಿಯೇ ಭಕ್ತಿಶಾಸ್ತ್ರಗಳು ಈ ಜಗತ್ತನ್ನು ಆನಂದಭವನ ಎಂಬುದಾಗಿ ವರ್ಣಿಸಿವೆ. ರಾಮಪ್ರಸಾದ ತನ್ನ ಹಾಡೊಂದರಲ್ಲಿ ಹೇಳಿದ್ದಾನೆ: ‘ಈ ಜಗತ್ತು ಮಾಯೆಯ ಚೌಕಟ್ಟಿನ ಮನೆ!’ ಎಂದು. ಇನ್ನೊಬ್ಬ ಅದಕ್ಕೆ ಹೇಳಿದ್ದಾನೆ: ‘ಈ ಜಗತ್ತೇ ಆನಂದಭವನ!’ ಅಂತ. ಒಂದು ಹೇಳಿಕೆ ಇದೆ: ‘ಕಾಳಿಯ ಭಕ್ತ ಜೀವನ್ಮುಕ್ತ, ನಿತ್ಯಾನಂದಮಯ!’ ಎಂಬುದಾಗಿ. ಭಕ್ತನ ದೃಷ್ಟಿಯಿಂದ ಯಾರು ಭಗವಂತನೋ, ಆತನೇ ಮಾಯೆಯಾಗಿದ್ದಾನೆ. ಆತನೇ ಈ ಜೀವ ಜಗತ್ತಾಗಿದ್ದಾನೆ. ಭಕ್ತನ ದೃಷ್ಟಿಗೆ ಭಗವಂತ, ಮಾಯೆ, ಜೀವ, ಜಗತ್ತು, ಎಲ್ಲವೂ ಒಂದೇ. ಕೆಲವು ಮಂದಿ ಭಕ್ತರ ಕಣ್ಣಿಗೆ ಎಲ್ಲವೂ ರಾಮಮಯ; ಎಲ್ಲವೂ ರಾಮನೇ ಆಗಿದ್ದಾನೆ. ಇನ್ನು ಕೆಲವು ಮಂದಿಗೆ ಎಲ್ಲವೂ ರಾಧಾಕೃಷ್ಣಮಯವಾಗಿ ಕಾಣುತ್ತದೆ. ಅವರ ದೃಷ್ಟಿಯಿಂದ ಶ್ರೀಕೃಷ್ಣನೇ ಚತುರ್ವಿಂಶತಿ ತತ್ತ್ವ ಆಗಿದ್ದಾನೆ. ಇದು ಹಸುರು ಕನ್ನಡಕ ಹಾಕಿಕೊಂಡರೆ ಎಲ್ಲವೂ ಹಸುರಾಗಿ ಕಾಣುವ ಹಾಗೆ.
“ಆದರೆ ಭಕ್ತಿದೃಷ್ಟಿಯಿಂದ ಶಕ್ತಿವಿಶೇಷತೆ ಇದೆ. ರಾಮನೇ ಎಲ್ಲವೂ ಆಗಿರುವುದೇನೋ ನಿಜ. ಆದರೆ ಕೆಲವದರಲ್ಲಿ ಹೆಚ್ಚಾಗಿ, ಇನ್ನು ಕೆಲವದರಲ್ಲಿ ಕಡಮೆಯಾಗಿ ವ್ಯಕ್ತವಾಗಿದ್ದಾನೆ. ಅವತಾರಪುರುಷನಲ್ಲಿ ಒಂದು ವಿಧವಾದ ವ್ಯಕ್ತತೆ, ಜೀವರಲ್ಲಿ ಇನ್ನೊಂದು ವಿಧವಾದ ವ್ಯಕ್ತತೆ. ಅವತಾರಪುರುಷರಲ್ಲೂ ದೇಹಬುದ್ಧಿ ಇರುತ್ತದೆ. ಅವರ ಶರೀರಧಾರಣೆ ಮಾಯೆಯಿಂದ. ರಾಮ ಸೀತೆಗಾಗಿ ಅತ್ತ. ಆದರೆ ಮಕ್ಕಳು ಕಣ್ಣುಮುಚ್ಚಾಲೆ ಆಟ ಆಡುವ ಹಾಗೆ ಅವತಾರಪುರುಷರು ತಮ್ಮ ಕಣ್ಣಿಗೆ ತಾವೇ ಇಚ್ಛೆಪಟ್ಟು ಬಟ್ಟೆ ಕಟ್ಟಿಕೊಳ್ಳುತ್ತಾರೆ. ಆದರೆ ತಾಯಿ ಕರೆದಳು ಅಂದರೆ, ಮಕ್ಕಳು ಆಟ-ಗೀಟ ಎಲ್ಲವನ್ನೂ ನಿಲ್ಲಿಸಿಬಿಡುತ್ತವೆ. ಆದರೆ ಜೀವರ ವಿಷಯವೇ ಬೇರೆ. ಅವರ ಕಣ್ಣನ್ನು ಯಾವ ಬಟ್ಟೆಯಿಂದ ಕಟ್ಟಿದೆಯೋ, ಅದರ ತುದಿಗಳನ್ನು ಎಂಟು ಸ್ಕ್ರೂ ಮೊಳೆಗಳಿಂದ ತಲೆಯ ಹಿಂಭಾಗಕ್ಕೆ ಸ್ಕ್ರೂಮಾಡಿದಂತಿದೆ. ಒಟ್ಟು ಎಂಟು ಪಾಶಗಳಿವೆ-ಲಜ್ಜೆ, ದ್ವೇಷ, ಭಯ, ಜಾತಿ, ಕುಲ, ಶೀಲ, ಶೋಕ, ಜುಗುಪ್ಸೆ. ಗುರುವಿಲ್ಲದೆ ಇವನ್ನು ನಿರ್ಮೂಲ ಮಾಡಲಾಗುವುದಿಲ್ಲ.”
ಒಬ್ಬ ಭಕ್ತ: “ಮಹಾಶಯರೇ, ನಮಗೆ ಆಶೀರ್ವಾದ ಮಾಡಿ.”
ಶ್ರೀರಾಮಕೃಷ್ಣರು: “ಎಲ್ಲರ ಆಂತರ್ಯದಲ್ಲೂ ಭಗವಂತನಿದ್ದಾನೆ. ಆದರೆ ಗ್ಯಾಸ್ ಕಂಪೆನಿಗೆ ಅರ್ಜಿ ಹಾಕಿಕೊಳ್ಳಬೇಕು. ನಿಮ್ಮ ಮನೆಗೆ ಗ್ಯಾಸ್ ಸರಬರಾಜು ಆಗಿಬಿಡುತ್ತದೆ.
“ವ್ಯಾಕುಲನಾಗಿ ಪ್ರಾರ್ಥನೆಮಾಡಬೇಕು. ತಾಯಿಗೆ ಮಕ್ಕಳ ಮೇಲಿರುವ ಆಕರ್ಷಣೆ, ಪತಿವ್ರತೆಗೆ ಪತಿಯ ಮೇಲಿರುವ ಆಕರ್ಷಣೆ, ಪ್ರಾಪಂಚಿಕನಿಗೆ ಪ್ರಪಂಚದ ಮೇಲಿರುವ ಆಕರ್ಷಣೆ ಇವು ಮೂರನ್ನೂ ಏಕೀಕರಿಸಿ ಭಗವಂತನ ಕಡೆಗೆ ತಿರುಗಿಸುವುದಾದರೆ, ಆಗ ದರ್ಶನ ದೊರೆತುಬಿಡುತ್ತದೆ.
“ನಿಜವಾದ ಭಗವದ್ಭಕ್ತನಿಗೆ ಕೆಲವು ಲಕ್ಷಣಗಳಿವೆ. ಗಾರುಡಿಗನ ಹಾಡು ಕೇಳಿ ವಿಷಸರ್ಪ ಸ್ತಬ್ಧವಾಗಿಬಿಡುವ ಹಾಗೆ ಭಕ್ತ ಗುರುವಿನ ಉಪದೇಶ ಕೇಳಿ ಸ್ತಬ್ಧನಾಗಿಬಿಡುತ್ತಾನೆ. ಆದರೆ ಕಟ್ಟಿನ ಹಾವು ಹಾಗೆ ಮಾಡದು. ಇನ್ನೊಂದು ಲಕ್ಷಣ, ಆತನಿಗೆ ಚೆನ್ನಾದ ಗ್ರಹಣಶಕ್ತಿ ಇರುತ್ತದೆ. ಬರೀ ಗಾಜಿನ ಮೇಲೆ ವಸ್ತುವಿನ ಪ್ರತಿಬಿಂಬ ಮೂಡದು. ಆದರೆ ಬೆಳ್ಳಿಯ ಉಪ್ಪು ಸವರಿದ ಗಾಜಿನ ಮೇಲೆ ಅದು ಮೂಡುತ್ತದೆ. ಉದಾಹರಣೆಗೆ ಪೋಟೋಗ್ರಾಫಿ. ಭಕ್ತಿಯೇ ಬೆಳ್ಳಿಯ ಉಪ್ಪು. ಮತ್ತೊಂದು ಲಕ್ಷಣ, ಆತ ಜಿತೇಂದ್ರಿಯನಾಗಿರುತ್ತಾನೆ. ಕಾಮಜಯಿಯಾಗಿರುತ್ತಾನೆ. ಗೋಪಿಯರಿಗೆ ಕಾಮವೆಂಬುದೇ ಇರಲಿಲ್ಲ.
“ನೀವು ಸಂಸಾರದಲ್ಲಿದ್ದೀರಿ. ಅದರಿಂದೇನು ಮುಳುಗಿಹೋಗಿಬಿಟ್ಟದ್ದು? ಒಂದು ವಿಧದಲ್ಲಿ ಸಾಧನೆಗೆ ಇನ್ನೂ ಹೆಚ್ಚಿನ ಅನುಕೂಲ. ಇದು ಕೋಟೆಯೊಳಗೆ ನಿಂತು ಯುದ್ಧ ಮಾಡಿದ ಹಾಗೆ. ಶವಸಾಧನೆ ಮಾಡುವಾಗ ಒಮ್ಮೊಮ್ಮೆ ಶವ ‘ಹಾ!’ ಅಂತ ಬಾಯಿ ತೆರೆಯುತ್ತದೆ. ಅದಕ್ಕಾಗಿ ತಾಂತ್ರಿಕ ಸಾಧಕರು ಹತ್ತಿರ ಹುರಿಗಡಲೆ, ಪುರಿ ಇಟ್ಟುಕೊಂಡು ಅದು ಬಾಯಿ ತೆರೆದಾಗಲೆಲ್ಲಾ ಅದಕ್ಕೆ ಅದನ್ನು ಹಾಕುತ್ತಿರುತ್ತಾರೆ. ಅದು ಬಾಯಿ ಮುಚ್ಚಿಕೊಂಡಿತು ಎಂದೊಡನೆಯೇ ನಿಶ್ಚಿಂತೆಯಿಂದ ಧ್ಯಾನದಲ್ಲಿ ತೊಡಗುತ್ತಾರೆ. ಅದೇ ರೀತಿ ಗೃಹಸ್ಥ, ಹೆಂಡತಿ ಮಕ್ಕಳು ಬಂಧುಬಾಂಧವರನ್ನು ತುಷ್ಟಿಗೊಳಿಸಿ ಇಟ್ಟುಕೊಳ್ಳಬೇಕು. ಅವರ ಅನ್ನಬಟ್ಟೆಗೆ ವ್ಯವಸ್ಥೆ ಮಾಡಬೇಕು. ಬಳಿಕ ಸಾಧನೆ ಭಜನೆಗೆ ಅನುಕೂಲ ದೊರೆಯುತ್ತದೆ.
“ಯಾರಿಗೆ ಇನ್ನೂ ಭೋಗೇಚ್ಛೆ ಇದೆಯೋ ಅವರು ಸಂಸಾರದಲ್ಲಿದ್ದೇ ಭಗವಂತನನ್ನು ಕರೆಯಲಿ. ಅದಕ್ಕಾಗಿ ನಿತ್ಯಾನಂದನು, ಮಾಗೂರ ಮೀನಿನ ಸಾರು ಕುಡಿಯುತ್ತ ಯುವತಿಯರೊಡನೆ ವಿಲಾಸಿಸುತ್ತ ಭಗವನ್ನಾಮೋಚ್ಚಾರಣೆಯನ್ನೂ ಮಾಡುವಂತೆ ಪ್ರಾಪಂಚಿಕರಿಗೆ ಅನುಮತಿಯಿತ್ತಿದ್ದ.
“ಆದರೆ ನಿಜವಾದ ಸಂನ್ಯಾಸಿಗಳ ವಿಷಯವೇ ಬೇರೆ. ಜೇನುಹುಳು ಹೂವನ್ನು ಬಿಟ್ಟು ಬೇರೆ ಯಾವುದರ ಮೇಲೂ ಕುಳಿತುಕೊಳ್ಳದು. ಚಾತಕಪಕ್ಷಿಯ ಸುತ್ತಲೂ ಬೇಕಾದಷ್ಟು ನೀರು ಸುಮ್ಮನೆ ತುಂಬಿದೆ. ಅದು ಅದಾವುದನ್ನೂ ಮುಟ್ಟದು. ಅದು ಕೇವಲ ಸ್ವಾತೀ ನಕ್ಷತ್ರದ ಮಳೆಗಾಗಿ ಬಾಯಿತೆರೆದು ಕಾದಿರುತ್ತದೆ. ನಿಜವಾದ ಸಂನ್ಯಾಸಿ ಭಗವದಾನಂದವನ್ನು ಹೊರತು ಬೇರೆ ಯಾವುದನ್ನೂ ಅನುಭವಿಸುವುದಿಲ್ಲ. ಜೇನುಹುಳು ಕೇವಲ ಹೂಗಳ ಮೇಲೆ ಕುಳಿತುಕೊಳ್ಳುತ್ತದೆ. ನಿಜವಾದ ಸಂನ್ಯಾಸಿ ಜೇನುಹುಳುವಿನ ಹಾಗೆ. ಆದರೆ ಗೃಹಸ್ಥ ಸಾಮಾನ್ಯ ನೊಣದ ಹಾಗೆ. ಅದು ಸಿಹಿ ತಿಂಡಿ ಮೇಲೂ ಕುಳಿತುಕೊಳ್ಳುತ್ತದೆ, ಕೊಳೆತು ನಾರುವ ವ್ರಣದ ಮೇಲೂ ಕುಳಿತುಕೊಳ್ಳುತ್ತದೆ.
“ನೀವು ಇಷ್ಟೊಂದು ಶ್ರಮವಹಿಸಿ ಇಲ್ಲಿಗೆ ಬಂದಿದ್ದೀರಿ. ನೀವು ಭಗವಂತನಿಗಾಗಿ ಹುಡುಕುತ್ತಿರಬೇಕು. ಎಲ್ಲರೂ ತೋಟ ನೋಡಿಯೇ ಸಂತುಷ್ಟರಾಗಿಬಿಡುತ್ತಾರೆ. ಎಲ್ಲೋ ಒಬ್ಬಿಬ್ಬರು ತೋಟದ ಯಜಮಾನನ್ನು ನೋಡಲು ಪ್ರಯತ್ನಮಾಡುತ್ತಾರೆ. ಜನರು ಈ ಜಗತ್ತಿನ ಸೌಂದರ್ಯದಲ್ಲೇ ಮಗ್ನರಾಗಿಬಿಡುತ್ತಾರೆ. ಇದರ ಕರ್ತನಿಗಾಗಿ ಹುಡುಕುವುದಿಲ್ಲ.
(ಗಾಯಕನನ್ನು ತೋರಿಸಿ) “ಈತ ಸ್ವಲ್ಪ ಹೊತ್ತಿನ ಹಿಂದೆ ಷಟ್ಚಕ್ರಗಳ ಹಾಡನ್ನು ಹಾಡಿದ. ಅದು ಯೋಗದ ಸಂಬಂಧವಾಗಿ ವರ್ಣಿಸುತ್ತದೆ. ಯೋಗಗಳಲ್ಲಿ ಹಠಯೋಗ ಮತ್ತು ರಾಜಯೋಗ ಎಂಬ ಎರಡು ಯೋಗಗಳಿವೆ. ಹಠಯೋಗಿ ಈ ಶರೀರಕ್ಕೆ ಅನೇಕ ಬಗೆಯ ಕಸರತ್ ಕೊಡುತ್ತಾನೆ. ಆತನ ಉದ್ದೇಶ ಸಿದ್ಧಿ. ದೀರ್ಘಾಯುಸ್ಸು, ಅಷ್ಟಸಿದ್ಧಿ ಇವೇ ಮೊದಲಾದುವನ್ನು ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಸಾಧನೆಯಲ್ಲಿ ತೊಡಗುತ್ತಾನೆ. ಆದರೆ ರಾಜಯೋಗದ ಉದ್ದೇಶ ಭಕ್ತಿ, ಪ್ರೇಮ, ಜ್ಞಾನ, ವೈರಾಗ್ಯ ಇವನ್ನು ಪಡೆದುಕೊಳ್ಳುವುದು. ಇವೆರಡರಲ್ಲಿ ರಾಜಯೋಗವೇ ಮೇಲು.
“ವೇದಾಂತದ ಸಪ್ತಭೂಮಿಕೆಗಳಿಗೂ ಯೋಗಶಾಸ್ತ್ರದ ಷಟ್ಚಕ್ರಗಳಿಗೂ ಬಹಳವಾಗಿ ಹೊಂದಿಕೆ ಇದೆ. ವೇದಾಂತದ ಮೊದಲ ಮೂರು ಭೂಮಿಕೆಗಳೇ ಯೋಗದ ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ ಚಕ್ರಗಳು. ಸಾಮಾನ್ಯರ ಮನಸ್ಸು ಈ ಮೂರು ಭೂಮಿಕೆಗಳಲ್ಲಿ, ಎಂದರೆ ಲಿಂಗ, ಗುಹ್ಯ, ನಾಭಿ ಇವುಗಳಲ್ಲಿ ನೆಲಸಿರುತ್ತದೆ. ಮನಸ್ಸು ಚತುರ್ಥ ಭೂಮಿಕೆಗೆ, ಅಂದರೆ ಅನಾಹತ ಪದ್ಮಚಕ್ರಕ್ಕೆ ಹತ್ತಿದರೆ ಅದಕ್ಕೆ ಜೀವಾತ್ಮ ದೀಪಶಿಖೆಯ ಹಾಗೆ ಕಾಣಬರುತ್ತದೆ. ಇದೂ ಅಲ್ಲದೆ ಅದಕ್ಕೆ ಜ್ಯೋತಿದರ್ಶನವೂ ಆಗುತ್ತದೆ. ಆಗ ಸಾಧಕ ವಿಸ್ಮಿತನಾಗಿ ಹೇಳುತ್ತಾನೆ: ‘ಆಹ! ಏನಿದು? ಅಹ! ಏನಿದು?’
“ಐದನೆ ಭೂಮಿಕೆಗೆ ಮನಸ್ಸು ಹತ್ತಿದಾಗ ಕೇವಲ ಭಗವತ್ಕಥೆ ಕೇಳಲು ಮಾತ್ರ ಇಚ್ಛೆಯಾಗುತ್ತದೆ. ಇದೇ ಯೋಗದ ವಿಶುದ್ಧಚಕ್ರ. ಆರನೆ ಭೂಮಿಕೆ ಮತ್ತು ಆಜ್ಞಾಚಕ್ರ ಎಂಬುವು ಎರಡೂ ಒಂದೇ. ಇಲ್ಲಿಗೆ ಮನಸ್ಸು ಹತ್ತಿದಾಗ ಅದಕ್ಕೆ ಭಗವಂತನ ದರ್ಶನ ಆಗುತ್ತದೆ. ಆದರೆ ಇದು ಲಾಟೀನಿನ ಒಳಗಿರುವ ಬೆಳಕನ್ನು ಗಾಜಿನ ಚಿಮ್ನಿಯ ದೆಸೆಯಿಂದ ಮುಟ್ಟಲಾಗದ ಹಾಗೆ. ಜನಕರಾಜ ಪಂಚಮಭೂಮಿಕೆಯಿಂದ ಬ್ರಹ್ಮಜ್ಞಾನೋಪದೇಶ ಕೊಡುತ್ತಿದ್ದ. ಆತ ಕೆಲವು ವೇಳೆ ಐದನೆಯ, ಇನ್ನು ಕೆಲವು ವೇಳೆ ಆರನೆಯ ಭೂಮಿಕೆಯಲ್ಲಿ ಇರುತ್ತಿದ್ದ.
“ಷಟ್ಚಕ್ರಗಳನ್ನು ಭೇದಿಸಿದನಂತರ ಸಾಧಕ ಏಳನೆಯ ಭೂಮಿಕೆಯನ್ನು ಮುಟ್ಟುತ್ತಾನೆ. ಮನಸ್ಸು ಅಲ್ಲಿಗೆ ಬಂದೊಡನೆಯೇ ಅದು ಬ್ರಹ್ಮನಲ್ಲಿ ಲಯಹೊಂದಿಬಿಡುತ್ತದೆ. ಜೀವಾತ್ಮ ಪರಮಾತ್ಮ ಒಂದಾಗಿಬಿಡುತ್ತಾರೆ. ಸಾಧಕ ಸಮಾಧಿಸ್ಥನಾಗಿಬಿಡುತ್ತಾನೆ. ದೇಹಬುದ್ಧಿ ಹೊರಟುಹೋಗಿಬಿಡುತ್ತದೆ. ಬಾಹ್ಯಜ್ಞಾನ ಶೂನ್ಯವಾಗಿಬಿಡುತ್ತದೆ. ನಾನಾತ್ವದ ಜ್ಞಾನ ಹೊರಟುಹೋಗುತ್ತದೆ. ವಿಚಾರ ನಿಂತುಹೋಗಿಬಿಡುತ್ತದೆ.
“ತ್ರೈಲಂಗಸ್ವಾಮಿ ಒಮ್ಮೆ ಹೇಳಿದರು, ವಿಚಾರದ ದೆಸೆಯಿಂದ ಅನೇಕದ ಬೋಧೆ, ನಾನಾತ್ವದ ಬೋಧೆ ಆಗುತ್ತದೆ ಎಂಬುದಾಗಿ. ಸಮಾಧಿ ದೊರೆತ ಇಪ್ಪತ್ತೊಂದು ದಿನದೊಳಗಾಗಿ ದೇಹತ್ಯಾಗವಾಗಿಬಿಡುತ್ತದೆ. ಆದರೆ ಕುಂಡಲಿನಿ ಜಾಗ್ರತಗೊಳ್ಳುವ ತನಕ ಆತ್ಮ ಜಾಗೃತಿ ಉಂಟಾಗುವುದಿಲ್ಲ.”
“ಭಗವಂತನ ಸಾಕ್ಷಾತ್ಕಾರ ಪಡೆದವನಲ್ಲಿ ಕೆಲವು ಲಕ್ಷಣಗಳನ್ನು ನೋಡಬಹುದು. ಆತ ಬಾಲಕನ ಹಾಗೋ, ಉನ್ಮತ್ತನ ಹಾಗೋ, ಜಡನ ಹಾಗೋ, ಅಥವಾ ಪಿಶಾಚನ ಹಾಗೋ ಆಗಿಬಿಡುತ್ತಾನೆ. ಆತನಿಗೆ ದೃಢಬೋಧೆಯಾಗುತ್ತದೆ, ತಾನು ಯಂತ್ರ, ಭಗವಂತ ಯಾಂತ್ರಿಕ; ಆತನೇ ಕರ್ತ, ಉಳಿದವರೆಲ್ಲಾ ಅಕರ್ತ ಎಂಬುದಾಗಿ. ಒಮ್ಮೆ ನನಗೆ ಸಿಖ್ಖರು ಹೇಳಿದ ಹಾಗೆ, ಎಲೆ ಅಲುಗುವುದೂ ಭಗವಂತನ ಇಚ್ಛೆಯಿಂದಲೇ. ರಾಮನ ಇಚ್ಛೆಯಿಂದಲೇ ಎಲ್ಲಾ ಘಟಿಸುತ್ತವೆ ಎಂಬ ಜ್ಞಾನ ಬೇಕು. ನೇಯ್ಗೆಯವ ಹೇಳುತ್ತಿದ್ದನಲ್ಲ; ‘ರಾಮನ ಇಚ್ಛೆಯಿಂದ ಬಟ್ಟೆಯ ಬೆಲೆ ಒಂದು ರೂಪಾಯಿ ಆರಾಣೆ. ರಾಮನ ಇಚ್ಛೆಯಿಂದ ಡಕಾಯಿತಿ ನಡೆಯಿತು. ರಾಮನ ಇಚ್ಛೆಯಿಂದ ಕಳ್ಳರು ಸಿಕ್ಕಿಬಿದ್ದರು. ರಾಮನ ಇಚ್ಛೆಯಿಂದ ಪೋಲಿಸಿನವರು ನನ್ನನ್ನು ಹಿಡಿದುಕೊಂಡು ಹೋದರು. ಕೊನೆಗೆ ರಾಮನ ಇಚ್ಛೆಯಿಂದಲೇ ನನ್ನನ್ನು ಬಿಟ್ಟುಬಿಟ್ಟರು’ ಎಂಬುದಾಗಿ.”
ಇನ್ನೇನು ಮುಸ್ಸಂಜೆಯಾಗುವುದರಲ್ಲಿದೆ. ಊಟವಾದ ನಂತರ ಇದುವರೆಗೆ ಪರಮಹಂಸರಿಗೆ ವಿಶ್ರಾಂತಿಯೇ ದೊರೆಯಲಿಲ್ಲ. ಭಗವಂತನ ವಿಷಯವಾಗಿ ಒಂದೇ ಸಮನೆ ಮಾತಾಡುತ್ತಿದ್ದರು. ಕೊನೆಗೆ ಈಗ ಭಕ್ತರೆಲ್ಲರೂ ಪರಮಹಂಸರಿಂದ ಬೀಳ್ಕೊಂಡು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದಾರೆ.
೧೫ನೆ ಜೂನ್ ೧೮೮೩, ಜ್ಯೇಷ್ಠ ಶುಕ್ಲ ದಶಮಿ, ಶುಕ್ರವಾರ
ಇಂದು ಗಂಗಾ ಪೂಜೆ. ರಜಾ ಸಿಕ್ಕಿರುವುದರಿಂದ ಅಧರಸೇನ, ಮಾಸ್ಟರ್ ಇವರೇ ಮೊದಲಾದ ಭಕ್ತರು ಬಂದಿದ್ದಾರೆ. ರಾಖಾಲನ ತಂದೆ, ಅಜ್ಜ ಇವರೂ ಬಂದಿದ್ದಾರೆ. ಎಲ್ಲರೂ ಪರಮಹಂಸರ ಕೊಠಡಿಯಲ್ಲಿ ನೆಲದ ಮೇಲೆ ಕುಳಿತಿದ್ದಾರೆ.
ರಾಖಾಲನ ಅಜ್ಜ ಒಬ್ಬ ಭಗವದ್ಭಕ್ತ. ಆತ ಪರಮಹಂಸರಿಗೆ ಪ್ರಶ್ನೆ ಹಾಕಿದ: “ಗೃಹಸ್ಥಾಶ್ರಮಿಗಳಿಗೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆಯೇ?”
ಶ್ರೀರಾಮಕೃಷ್ಣರು ನಗುತ್ತ: “ಏಕೆ ದೊರೆಯುವುದಿಲ್ಲ? ಕೆಸರುಮೀನಿನ ಹಾಗಿರಿ. ಅದು ಕೆಸರಿನಲ್ಲೇನೋ ವಾಸಿಸುತ್ತದೆ. ಆದರೆ ಅದು ತನ್ನ ಶರೀರಕ್ಕೆ ಕೆಸರನ್ನು ಅಂಟಿಸಿಕೊಳ್ಳುವುದಿಲ್ಲ. ಅಥವಾ ಜಾರೆಯಂತಿರಿ. ಆಕೆ ಮನೆಯ ಕೆಲಸಕಾರ್ಯಗಳನ್ನೆಲ್ಲಾ ಚೆನ್ನಾಗಿ ಮಾಡುತ್ತಿರುತ್ತಾಳೆ. ಆದರೆ ಆಕೆಯ ಮನಸ್ಸು ಮಾತ್ರ ಉಪಪತಿಯ ಮೇಲೆ ನೆಲಸಿರುತ್ತದೆ. ಭಗವಂತನಲ್ಲಿ ಮನಸ್ಸಿಟ್ಟು ಸಂಸಾರದಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನೂ ಮಾಡಿ. ಆದರೆ ಅದು ಬಹಳ ಕಠಿಣವೇನೋ ನಿಜ. ನಾನು ಒಮ್ಮೆ ಬ್ರಾಹ್ಮಸಮಾಜದವರಿಗೆ ಹೇಳಿದೆ: ‘ಯಾವ ಕೊಠಡಿಯಲ್ಲಿ ಹುಣಿಸೆಕಾಯಿನ ಉಪ್ಪಿನಕಾಯಿ, ನೀರಿನ ಹಂಡೆ ಇವೆಯೋ, ಅದೇ ಕೊಠಡಿಯಲ್ಲಿ ವಿಷಮಶೀತಜ್ವರದ ರೋಗಿ ಮಲಗಿದ್ದಾನೆ ಅಂತ ಇಟ್ಟುಕೊಳ್ಳಿ. ಆತನನ್ನು ರೋಗ ಹೇಗೆ ಬಿಟ್ಟು ತೊಲಗಬೇಕು ಹೇಳಿ? ಹುಣಸೆಕಾಯಿನ ಉಪ್ಪಿನಕಾಯಿ ಭಾವನೆಯೇ ಸಾಕು, ಬಾಯಲ್ಲಿ ನೀರು ಊರಬೇಕಾದರೆ.’ ಪುರುಷನಿಗೆ ಹೆಂಗಸು ಹುಣಿಸೆಕಾಯಿನ ಉಪ್ಪಿನಕಾಯಿ ಇದ್ದ ಹಾಗೆ. ಜೊತೆಗೆ ವಿಷಯತೃಷ್ಣೆಯಂತೂ ಮನುಷ್ಯನಿಗೆ ಯಾವಾಗ ನೋಡಿದರೂ ರೋಗಿಯ ಜಲತೃಷ್ಣೆಯಂತೇ ಹತ್ತಿಕೊಂಡೇ ಇರುತ್ತದೆ. ಅದಕ್ಕೆ ಕೊನೆಯೆಂಬುದೇ ಇಲ್ಲ. ವಿಷಮಶೀತಜ್ವರದ ರೋಗಿ ಹೇಳುತ್ತಾನೆ: ‘ಒಂದು ಹಂಡೆಯ ನೀರನ್ನೇ ಕುಡಿದುಬಿಡುತ್ತೇನೆ’ ಎಂದು. ತಡೆದುಕೊಳ್ಳುವುದು ಬಹಳ ಕಠಿಣ. ಈ ಜಗತ್ತಿನಲ್ಲಿ ಬಹಳ ಕೋಟಲೆಗಳಿವೆ. ಈ ಕಡೆಗೆ ಹೋದರೆ ಬೀಳುತ್ತದೆ ಮಚ್ಚಿನೇಟು; ಆ ಕಡೆಗೆ ಹೋದರೆ ಬೀಳುತ್ತದೆ ಬರಲೇಟು; ಮತ್ತೆ ಬೇರೆ ದಿಕ್ಕಿಗೆ ಹೋಗೋಣ ಅಂದರೆ ಬೀಳುತ್ತದೆ ಪಾಪಾಸಿನೇಟು. ಜೊತೆಗೆ ಏಕಾಂತದಲ್ಲಿ ವಾಸಿಸದ ಹೊರತು ಭಗವಚ್ಚಿಂತನೆ ಸಾಧ್ಯವಿಲ್ಲ. ಅಕ್ಕಸಾಲಿಗ ಚಿನ್ನ ಕರಗಿಸಿ ಒಡವೆ ಮಾಡುತ್ತಾನೆ. ಹಾಗೆ ಕರಗಿಸುವಾಗ ಅನೇಕರು ಆತನನ್ನು ಕರೆಯುತ್ತಲೇ ಇದ್ದರೆ, ಆತ ಅದನ್ನು ಕರಗಿಸುವ ಬಗೆ ಹೇಗೆ? ಅಕ್ಕಿ ತೊಳಸಬೇಕಾಗಿದೆ ಅಂತ ಇಟ್ಟುಕೊಳ್ಳಿ. ಎಲ್ಲಾ ಕೆಲಸ ಬಿಟ್ಟು ಆ ಕೆಲಸದಲ್ಲೇ ಕುಳಿತುಕೊಳ್ಳಬೇಕು. ಆಗಾಗ ಅದನ್ನು ಕೈಗೆ ತೆಗೆದುಕೊಂಡು ಬೆಳ್ಳಗಾಯಿತೆ ಇಲ್ಲವೆ ಅಂತ ನೋಡುತ್ತಿರಬೇಕು. ಅಕ್ಕಿ ತೊಳಸುತ್ತ ಅನೇಕ ಸಲ ಅಲ್ಲಿಗಿಲ್ಲಿಗೆ ಹೋಗಬೇಕಾಗಿ ಬಂದರೆ ಅದನ್ನು ಚೆನ್ನಾಗಿ ತೊಳೆಸುವ ಬಗೆ ಹೇಗೆ?”
ಒಬ್ಬ ಭಕ್ತ: “ಮಹಾಶಯರೆ, ಹಾಗಾದರೆ ಮಾರ್ಗವೇನು?”
ಶ್ರೀರಾಮಕೃಷ್ಣರು: “ಒಂದು ಮಾರ್ಗವಿದೆ. ತೀವ್ರ ವೈರಾಗ್ಯ ಉಂಟಾದರೆ, ಜಯಶೀಲರಾಗಬಹುದು. ಯಾವುದು ಮಿಥ್ಯಾ ಎಂಬುದಾಗಿ ಗೊತ್ತಾಗುವುದೋ ಅದನ್ನು ಒಡನೆಯೇ ದೃಢಮನಸ್ಸಿನಿಂದ ತ್ಯಜಿಸಿಬಿಡಬೇಕು. ಒಮ್ಮೆ ನನಗೆ ಬಹಳವಾಗಿ ಕಾಯಿಲೆಯಾಗಿದ್ದಾಗ ಗಂಗಾಪ್ರಸಾದಸೇನನ ಹತ್ತಿರಕ್ಕೆ ನನ್ನನ್ನು ಕರೆದುಕೊಂಡು ಹೋದರು. ಗಂಗಾಪ್ರಸಾದ ಹೇಳಿದ : ‘ನಾನು ನಿಮಗೆ ಔಷಧವನ್ನೇನೋ ಕೊಡುತ್ತೇನೆ. ಆದರೆ ನೀವು ಮಾತ್ರ ಒಂದು ತೊಟ್ಟು ನೀರನ್ನೂ ಕುಡಿಯಬಾರದು. ದಾಳಿಂಬೆ ರಸ ಬೇಕಾದರೆ ಕುಡಿಯಬಹುದು.’ ನೀರು ಕುಡಿಯದೆ ಹೇಗೆ ಬದುಕಿರಲಾದೀತು ಎಂದು ಎಲ್ಲರೂ ಚಿಂತಿಸಲಾರಂಭಿಸಿದರು. ಆದರೆ ನಾನು ಮಾತ್ರ ನೀರು ಕುಡಿಯುವುದಿಲ್ಲವೆಂದು ಸತ್ಯಸಂಕಲ್ಪಮಾಡಿಕೊಂಡುಬಿಟ್ಟೆ. ನಾನು ನನಗೇ ಹೇಳಿಕೊಂಡೆ: ‘ನಾನು ಬಾತುಕೋಳಿಯಲ್ಲ-ಪರಮಹಂಸ. ನಾನು ಹಾಲನ್ನೇ ಕುಡಿಯುತ್ತೇನೆ.’
“ಕೆಲವು ಕಾಲ ನಿರ್ಜನಪ್ರದೇಶದಲ್ಲಿ ಇರಬೇಕು. ಅಜ್ಜಿಯನ್ನು ಮುಟ್ಟಿಬಿಟ್ಟರೆ ಇನ್ನು ಭಯಪಡಬೇಕಾಗೇನೂ ಇರುವುದಿಲ್ಲ. ಚಿನ್ನವಾಗಿಬಿಟ್ಟನಂತರ ಅದು ಎಲ್ಲಿ ಬಿದ್ದಿದ್ದರೆ ತಾನೆ ಏನು? ನಿರ್ಜನಪ್ರದೇಶದಲ್ಲಿದ್ದು ಭಕ್ತಿಯನ್ನು ಗಳಿಸಿಕೊಂಡುಬಿಟ್ಟರೆ, ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡುಬಿಟ್ಟರೆ, ಅನಂತರ ಸಂಸಾರದಲ್ಲೂ ಇರಬಹುದು. (ರಾಖಾಲನ ತಂದೆಗೆ) ಅದಕ್ಕಾಗಿಯೇ ಈ ಹುಡುಗರಿಗೆ ನನ್ನೊಡನೆ ಇರುವಂತೆ ನಾನು ಹೇಳುತ್ತಿರುವುದು. ಏಕೆಂದರೆ ಇಲ್ಲಿ ಕೆಲವು ಕಾಲವನ್ನು ಕಳೆದರೆ ಅವರಲ್ಲಿ ಭಗವದ್ಭಕ್ತಿ ಬೆಳೆಯುತ್ತದೆ. ಬಳಿಕ ಅವರು ನಿರಾಯಾಸವಾಗಿ ಸಂಸಾರದಲ್ಲಿರಬಹುದು.”
ಭಕ್ತ: “ಭಗವಂತನೇ ಎಲ್ಲಕ್ಕೂ ಕರ್ತನಾಗಿರುವುದಾದರೆ, ಜನ ಏಕೆ ಒಳ್ಳೆಯದು- ಕೆಟ್ಟದು, ಪಾಪ-ಪುಣ್ಯ ಹೀಗೆಲ್ಲಾ ಹೇಳುತ್ತಾರೆ? ಪಾಪಕಾರ್ಯವೂ ಅವನಿಚ್ಛೆಯಿಂದ ತಾನೆ?”
ಇನ್ನೊಬ್ಬ ಭಕ್ತ: “ಆತನ ಇಚ್ಛೆ ಎಂಬುದನ್ನು ನಾವು ಅರಿತುಕೊಳ್ಳುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಈ ಜಗತ್ತಿನಲ್ಲಿ ಪಾಪ-ಪುಣ್ಯಗಳೆಂಬುವು ಇರುವುದೇನೋ ನಿಜ; ಆದರೆ ಭಗವಂತ ಅವುಗಳಿಂದ ನಿರ್ಲಿಪ್ತ. ಗಾಳಿಯಲ್ಲಿ ಸುಗಂಧ ದುರ್ಗಂಧ ಎರಡೂ ಇರುತ್ತವೆ. ಆದರೆ ಗಾಳಿ ಮಾತ್ರ ಅವುಗಳಿಂದ ನಿರ್ಲಿಪ್ತ. ಭಗವಂತನ ಸೃಷ್ಟಿ ವೈಚಿತ್ರ್ಯವೇ ಹಾಗೆ. ಅದರಲ್ಲಿ ಸತತ ಒಳ್ಳೆಯದು ಕೆಟ್ಟದ್ದು, ಸತ್ ಅಸತ್ ಇದ್ದೇ ಇರುತ್ತದೆ. ಉದಾಹರಣೆಗೆ ಮರ ಗಿಡಗಳಲ್ಲಿ ಕೆಲವು ಮಾವಿನವು, ಇನ್ನು ಕೆಲವು ಹಲಸಿನವು, ಮತ್ತೆ ಕೆಲವು ಅಮಟೆಯವೂ ಕೂಡ. ನೋಡಿಲ್ಲವೇ, ದುಷ್ಟರೂ ಬೇಕಾಗುವುದನ್ನು? ಒಂದು ಪಕ್ಷ ಒಂದು ಜಮೀನುದಾರಿಯಲ್ಲಿ ಜನ ದಂಗೆ ಏಳುತ್ತಾರೆ ಅಂತ ಇಟ್ಟುಕೊ. ಅದನ್ನು ಅಡಗಿಸಬೇಕಾದರೆ ಜಮೀನುದಾರ ಒಬ್ಬ ಯಾವುದಕ್ಕೂ ಹೇಸದ ದುಷ್ಟನನ್ನೇ ಕಳುಹಿಸಬೇಕಾಗುತ್ತದೆ.”
ಮಾತುಕತೆ ಮತ್ತೆ ಗೃಹಸ್ಥಾಶ್ರಮಿಯ ಸಂಬಂಧವಾಗಿ ಆರಂಭವಾಯಿತು.
ಶ್ರೀರಾಮಕೃಷ್ಣರು ಭಕ್ತರಿಗೆ: “ನೋಡಿ, ಸಂಸಾರಕ್ಕೆ ಕಾಲಿಟ್ಟರೆ ಮಾನಸಿಕ ಶಕ್ತಿ ವೃಥಾ ವ್ಯಯವಾಗಿ ಹೋಗುತ್ತದೆ. ಆದರೆ ಸಂಸಾರಿ ಸಂನ್ಯಾಸಜೀವನವನ್ನು ಕೈಗೊಂಡರೆ, ವೃಥಾ ವ್ಯಯವಾಗಿ ಹೋಗಿದ್ದ ಶಕ್ತಿ ಮತ್ತೆ ಕೂಡಿಬಂದುಬಿಡುತ್ತದೆ. ಮೊದಲನೇ ಜನ್ಮವನ್ನು ತಂದೆ ಕೊಡುತ್ತಾನೆ; ಎರಡನೆಯ ಜನ್ಮ ದೊರೆಯುತ್ತೆ ಉಪನಯನದ ಸಮಯದಲ್ಲಿ. ಇನ್ನೊಮ್ಮೆ ಜನ್ಮ ದೊರೆಯುತ್ತೆ ಸಂನ್ಯಾಸದ ಸಮಯದಲ್ಲಿ. ಆಧ್ಯಾತ್ಮಿಕ ಜೀವನಕ್ಕೆ ಇವೆರಡೇ ವಿಘ್ನ. ಹೆಂಗಸಿನಲ್ಲಿ ಆಸಕ್ತಿ ಮನುಷ್ಯನನ್ನು ಭಗವತ್ಪಥದಿಂದ ವಿಮುಖನನ್ನಾಗಿ ಮಾಡಿಬಿಡುತ್ತದೆ. ಹೇಗೆ ತನಗೆ ಅಧೋಗತಿ ಬಂದುಬಿಡುತ್ತದೆ ಎಂಬುದನ್ನು ಮನುಷ್ಯ ಅರಿತುಕೊಳ್ಳಲಾರ. ಒಮ್ಮೆ ನಾನು ಗಾಡಿಯಲ್ಲಿ ಕುಳಿತು ಕೋಟೆಗೆ ಹೋಗುತ್ತಿದ್ದೆ. ಇಳಿಜಾರು ರಸ್ತೆಯಲ್ಲಿ ಮುಂದುವರಿಯುತ್ತಿದ್ದೇನೆ ಎಂದು ನನಗೆ ಸ್ವಲ್ಪವೂ ಗೊತ್ತೇ ಆಗಲಿಲ್ಲ. ಆದರೆ ಗಾಡಿ ಕೋಟೆಯ ಒಳಕ್ಕೆ ಹೋದ ನಂತರ ಗೊತ್ತಾಯಿತು ನಾನು ಎಷ್ಟು ಎತ್ತರದಿಂದ ಕೆಳಕ್ಕೆ ಬಂದುಬಿಟ್ಟಿದ್ದೇನೆ ಎಂಬುದು. ಆಹಾ! ಹೆಂಗಸರು ಗಂಡಸರನ್ನು ತಮ್ಮ ಮೋಹದ ಬಲೆಗೆ ಹಾಕಿ ಇಟ್ಟುಕೊಂಡುಬಿಡುತ್ತಾರೆ. ಕ್ಯಾಪ್ಟನ್ ಹೇಳುತ್ತಾನೆ: ‘ನನ್ನ ಹೆಂಡತಿ ಬಹಳ ಒಳ್ಳೆಯ ವಿವೇಕಿ’ ಎಂಬುದಾಗಿ. ಭೂತ ಯಾರನ್ನು ಮೆಟ್ಟಿಕೊಳ್ಳುತ್ತದೆಯೋ, ಆತನಿಗೆ ಗೊತ್ತೇ ಆಗುವುದಿಲ್ಲ, ತನ್ನನ್ನು ಭೂತ ಮೆಟ್ಟಿಕೊಂಡಿದೆ ಎಂದು. ಆತ ಹೇಳುತ್ತಾನೆ, ತಾನು ಸುಖವಾಗಿದ್ದೇನೆ ಎಂದು!”
ಎಲ್ಲರೂ ಸ್ತಬ್ಧರಾಗಿ ಕೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಸಂಸಾರದಲ್ಲಿ ಕೇವಲ ಕಾಮದ ಭಯ ಒಂದೇ ಅಲ್ಲ. ಜೊತೆಗೆ ಕ್ರೋಧದ ಭಯವೂ ಇದೆ. ಇಚ್ಛೆಗೆ ಅಡ್ಡಲಾಗಿ ಏನಾದರೂ ಬಂತು ಎಂದರೆ, ಒಡನೆಯೇ ಕ್ರೋಧ.”
ಮಾಸ್ಟರ್: “ಒಮ್ಮೊಮ್ಮೆ ಬೆಕ್ಕು ನನ್ನ ಎಲೆಯಿಂದ ಮೀನು ಎಳೆದುಕೊಳ್ಳಲು ತನ್ನ ಕಾಲು ನೀಡುತ್ತದೆ. ನಾನು ಸುಮ್ಮನೆ ಇದ್ದುಬಿಡುತ್ತೇನೆ.”
ಶ್ರೀರಾಮಕೃಷ್ಣರು: “ಏಕೆ ಹಾಗೆ? ಒಮ್ಮೊಮ್ಮೆ ಅದಕ್ಕೆ ಒಂದೆರಡು ಏಟು ಕೊಟ್ಟರೂ ಅದು ತಪ್ಪೇನೂ ಆಗಲಾರದು. ಸಂಸಾರಿ ಬುಸುಗುಟ್ಟಬೇಕಾಗುತ್ತದೆ. ಆದರೆ ವಿಷವನ್ನು ಮಾತ್ರ ಕಾರಕೂಡದು. ಆತ ಉದ್ದೇಶಪೂರ್ವಕವಾಗಿ ಯಾರಿಗೂ ತೊಂದರೆ ಕೊಡಕೂಡದು. ಆದರೆ ಶತ್ರುಗಳಿಂದ ಪಾರಾಗಲು ಕೋಪಿಸಿಕೊಂಡವನ ಹಾಗೆ ತೋರಿಸಿಕೊಳ್ಳಬೇಕು. ಇಲ್ಲದಿದ್ದರೆ ಶತ್ರುಗಳು ತೊಂದರೆ ಕೊಟ್ಟುಬಿಡುತ್ತಾರೆ. ಆದರೆ ಸಂನ್ಯಾಸಿ ಬುಸುಗುಟ್ಟಬೇಕಾಗಿಯೂ ಬರುವುದಿಲ್ಲ.”
ಒಬ್ಬ ಭಕ್ತ: “ಮಹಾಶಯರೆ, ಸಂಸಾರದಲ್ಲಿದ್ದುಕೊಂಡು ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳುವುದು ಬಹಳ ಕಠಿಣ ಅಂತ ತೋರುತ್ತದೆ. ನೀವು ಹೇಳುವುದನ್ನು ಎಷ್ಟು ಜನ ತಾನೆ ಅನುಷ್ಠಾನಕ್ಕೆ ತರಬಲ್ಲರು? ಎಲ್ಲಿ, ಯಾರೂ ನನ್ನ ಕಣ್ಣಿಗೆ ಬೀಳುತ್ತಿಲ್ಲವಲ್ಲ.”
ಶ್ರೀರಾಮಕೃಷ್ಣರು: “ಏಕೆ ಆಗುವುದಿಲ್ಲ? ಆ ದೇಶದಲ್ಲಿ (ಕಾಮಾರಪುಕುರದಲ್ಲಿ) ಪ್ರತಾಪ್ಸಿಂಗ್ ಎಂಬ ಒಬ್ಬ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಇದ್ದಾನೆ. ಆತ ಬಹಳ ದೊಡ್ಡ ಮನುಷ್ಯ. ಆತ ದಾನಿ, ಧ್ಯಾನಿ, ಭಗವದ್ಭಕ್ತ. ಇನ್ನೂ ಅನೇಕ ಗುಣಗಳಿವೆ ಆತನಲ್ಲಿ. ಒಮ್ಮೆ ಆತನನ್ನು ಕರೆಯ ಕಳುಹಿಸಿದ್ದೆ. ಏನಿಲ್ಲ ಅಂದರೂ ಅಂಥವರು ಯಾರಾದರೂ ಇದ್ದೇ ಇರುತ್ತಾರೆ.
“ಸಾಧನೆ ಅತ್ಯಂತ ಆವಶ್ಯಕ. ಆಗ ಏಕೆ ಆತನ ಸಾಕ್ಷಾತ್ಕಾರ ದೊರೆಯುವುದಿಲ್ಲ? ಗುರುವಾಕ್ಯದಲ್ಲಿ ನಿಜವಾದ ಶ್ರದ್ಧೆಯುಂಟಾಯಿತು ಎಂದರೆ, ಮತ್ತೆ ಅಧಿಕವಾಗಿ ಕಷ್ಟಪಡಬೇಕಾಗಿಲ್ಲ. ವ್ಯಾಸದೇವ ಇನ್ನೇನು ಯಮುನೆಯನ್ನು ದಾಟಬೇಕಾಗಿತ್ತು. ಅಷ್ಟರಲ್ಲಿ ಗೋಪಿಯರು ಅಲ್ಲಿಗೆ ಬರುತ್ತಾರೆ. ಅವರೂ ಯಮುನೆಯನ್ನು ದಾಟಬೇಕಾಗಿದೆ. ಆದರೆ ದೋಣಿ ಓಡುತ್ತಿಲ್ಲ. ಗೋಪಿಯರು ವ್ಯಾಸರಿಗೆ ಅರಿಕೆಮಾಡಿಕೊಂಡರು: ‘ಮಹರ್ಷಿಗಳೇ, ಈಗ ನಾವು ದಾಟುವ ಬಗೆ ಹೇಗೆ?’ ವ್ಯಾಸದೇವ ಹೇಳಿದರು: ‘ಹೆದರಬೇಡಿ, ನಿಮ್ಮನ್ನು ಆಚೆ ದಡಕ್ಕೆ ತಲುಪಿಸುತ್ತೇನೆ. ಆದರೆ ಈಗ ನನಗೆ ಬಹಳ ಹಸಿವಾಗುತ್ತಿದೆ. ಏನಾದರೂ ಇದೆಯೇನು?’ ಗೋಪಿಯರ ಹತ್ತಿರ ಹಾಲು, ಕೆನೆ, ಬೆಣ್ಣೆ ಬೇಕಾದಷ್ಟು ಇತ್ತು. ವ್ಯಾಸರು ಎಲ್ಲವನ್ನೂ ತಿಂದುಬಿಟ್ಟರು. ಬಳಿಕ ಗೋಪಿಯರು ಅವರನ್ನು ಕೇಳಿದರು: ‘ಯಮುನೆಯನ್ನು ದಾಟುವ ಸಮಾಚಾರ ಏನಾಯ್ತು?’ ಅನಂತರ ವ್ಯಾಸರು ಯಮುನೆಯ ದಡಕ್ಕೆ ಹೋಗಿ ನಿಂತು ಹೇಳಿದರು: ‘ಓ ಯಮುನೆ, ನಾನು ಇಂದು ಏನನ್ನೂ ತಿನ್ನದೆ ಇರುವುದು ನಿಜವಾದದ್ದೇ ಆದರೆ, ನಿನ್ನ ನೀರು ಇಬ್ಭಾಗವಾಗಿ ಬಿಡಲಿ. ನಾವೆಲ್ಲರೂ ಅದರ ಮೂಲಕ ಆಚೆ ದಡಕ್ಕೆ ಸೇರಿಬಿಡುವಂತಾಗಲಿ.’ ಅವರು ಹಾಗೆ ಹೇಳಿ ನಿಲ್ಲಿಸುವುದೇ ತಡ, ನೀರು ಇಬ್ಭಾಗವಾಗಿಬಿಟ್ಟಿತು. ಗೋಪಿಯರು ಆಶ್ಚರ್ಯಚಕಿತರಾದರು. ಯೋಚಿಸಲಾರಂಭಿಸಿದರು: ‘ಇವರು ಈಗತಾನೆ ಅಷ್ಟೊಂದು ತಿಂದರು! ಆದರೂ ಈಗ ಹೇಳಿದರಲ್ಲ: “ನಾನು ಏನೂ ತಿನ್ನದೆ ಇದ್ದರೆ…..” ಎಂದು!’ ವ್ಯಾಸಮಹರ್ಷಿಗೆ ಅಂಥ ದೃಢ ವಿಶ್ವಾಸವಿತ್ತು, ತಿಂದವರು ತಾವಲ್ಲ, ತಮ್ಮ ಹೃದಯಮಧ್ಯದಲ್ಲಿನ ನಾರಾಯಣ ಎಂಬುದಾಗಿ.
“ಶ್ರೀಶಂಕರಾಚಾರ್ಯರು ನಿಸ್ಸಂದೇಹವಾಗಿ ಬ್ರಹ್ಮಜ್ಞಾನಿಗಳು. ಆದರೆ ಮೊದ ಮೊದಲು ಅವರಿಗೆ ಭೇದಬುದ್ಧಿ ಇತ್ತು. ಎಲ್ಲವೂ ಸಾಕ್ಷಾತ್ ಭಗವಂತನೇ ಎಂಬ ದೃಢವಿಶ್ವಾಸ ಇನ್ನೂ ಉಂಟಾಗಿರಲಿಲ್ಲ. ಒಂದು ದಿನ ಅವರು ಗಂಗಾಸ್ನಾನ ಮಾಡಿ ಮೇಲೆ ಬರುವುದಕ್ಕೂ, ಒಬ್ಬ ಚಂಡಾಲ ಮಾಂಸದ ಕುಕ್ಕೆ ಹೊತ್ತುಕೊಂಡು ಅಲ್ಲಿಗೆ ಬರುವುದಕ್ಕೂ ಒಂದೇ ಆಗುತ್ತದೆ. ಅಜಾಗರೂಕತೆಯಿಂದ ಆತನ ಶರೀರ ಅವರ ಶರೀರಕ್ಕೆ ತಗಲಿ ಬಿಡುತ್ತದೆ. ಆಗ ಶಂಕರಾಚಾರ್ಯರು ರೇಗಿ ಹೇಳುತ್ತಾರೆ: ‘ಲೋ! ನನ್ನನ್ನು ಮುಟ್ಟುವುದಕ್ಕೆ ನಿನಗೆಷ್ಟೋ ಧೈರ್ಯ?’ ಚಂಡಾಲ ಉತ್ತರವಿತ್ತ: ‘ಪೂಜ್ಯರೆ, ನೀವೂ ನನ್ನನ್ನು ಮುಟ್ಟಲಿಲ್ಲ, ನಾನೂ ನಿಮ್ಮನ್ನು ಮುಟ್ಟಲಿಲ್ಲ. ಶುದ್ಧ ಆತ್ಮ ಈ ಶರೀರವಲ್ಲ. ಪಂಚಭೂತ ಅಲ್ಲ, ಚತುರ್ವಿಂಶತಿ ತತ್ತ್ವ ಅಲ್ಲ.’ ಆಗ ಶಂಕರಾಚಾರ್ಯರಿಗೆ ಜ್ಞಾನೋದಯವಾಯಿತು. ಒಮ್ಮೆ ಜಡಭರತರು ರಾಜ ರಹುಗಣನ ಪಲ್ಲಕ್ಕಿ ಹೊತ್ತುಕೊಂಡು ಹೋಗುತ್ತ ಹೋಗುತ್ತ ಇದ್ದ ಹಾಗೆ ಆತ್ಮಜ್ಞಾನದ ಸಂಬಂಧವಾಗಿ ಮಾತನಾಡಲಾರಂಭಿಸಿದರು. ರಾಜ ಪಲ್ಲಕ್ಕಿಯಿಂದ ಕೆಳಕ್ಕಿಳಿದು ಜಡಭರತರನ್ನು ಕೇಳಿದ: ‘ತಾವು ಯಾರು, ದಯವಿಟ್ಟು ತಿಳಿಸಬೇಕು.’ ಜಡಭರತರು ಉತ್ತರವಿತ್ತರು: ‘ನಾನು ನೇತಿ-ಶುದ್ಧ ಆತ್ಮ.’ ಅವರಿಗೆ ತಾವು ಶುದ್ಧ ಆತ್ಮ ಎಂಬ ಪೂರ್ಣಶ್ರದ್ಧೆ ಇತ್ತು.
“ನಾನೇ ಅವನು,” ‘ನಾನು ಶುದ್ಧ ಆತ್ಮ’ -ಇದು ಜ್ಞಾನಿಗಳ ಸಿದ್ಧಾಂತ. ಭಕ್ತರು ಹೇಳುತ್ತಾರೆ: ‘ಇಡೀ ವಿಶ್ವವೇ ಭಗವಂತನ ಐಶ್ವರ್ಯ’ ಎಂಬುದಾಗಿ. ಐಶ್ವರ್ಯವಿಲ್ಲದೆ ಇತ್ತು ಎಂದರೆ, ಯಾರನ್ನೇ ಆಗಲಿ, ಈತ ಧನಿಕ ಎಂಬುದಾಗಿ ಪತ್ತೆಮಾಡುವ ಬಗೆ ಹೇಗೆ? ಆದರೆ ಭಗವಂತ ಸಾಧಕನ ಭಕ್ತಿಯನ್ನು ಮೆಚ್ಚಿ ‘ನಾನು ಏನೊ, ಅದೇ ನೀನು’ ಎಂಬುದಾಗಿ, ಆತನಿಗೆ ಹೇಳುವುದಾದರೆ, ಅದು ಬೇರೆ ವಿಷಯ. ರಾಜ ದರ್ಬಾರು ಹಾಲಿನಲ್ಲಿ ಕುಳಿತುಕೊಂಡಿದ್ದಾನೆ ಅಂತ ಇಟ್ಟುಕೋ. ಆತನ ಪರಿಚಾರಕ ಆ ಹಾಲನ್ನು ಪ್ರವೇಶಿಸಿ ಸಿಂಹಾಸನದ ಮೇಲೆ ದೊರೆಯ ಹತ್ತಿರ ಹೋಗಿ ಕುಳಿತುಕೊಂಡು ರಾಜನಿಗೆ ‘ಓ ರಾಜ ನೀನು ಏನೊ, ನಾನೂ ಅದೇ’ ಎಂಬುದಾಗಿ ಹೇಳಿದರೆ: ಆಗ ಜನ ಭಾವಿಸಿಕೊಳ್ಳುತ್ತಾರೆ, ಆತನಿಗೆ ಹುಚ್ಚು ಹಿಡಿದಿದೆ ಅಂತ. ಆದರೆ, ಪರಿಚಾರಕನ ಸೇವೆಯನ್ನು ಮೆಚ್ಚಿ ರಾಜ ಒಂದು ದಿನ ಆತನಿಗೆ ಹೇಳುವುದಾದರೆ: “ಬಾ ಇಲ್ಲಿ, ಇಲ್ಲೇ ನನ್ನೊಡನೆ ಕುಳಿತುಕೊ. ಇದರಿಂದೇನು ನೀನು ತಪ್ಪು ಮಾಡಿದಂತಾಗುವುದಿಲ್ಲ. ನೀನೂ ನಾನೂ ಇನ್ನು ಮೇಲೆ ಒಂದೇ” ಎಂಬುದಾಗಿ. ಆಗ ಅದು ಪ್ರತ್ಯೇಕ ಸಮಾಚಾರ. ಬಳಿಕ ಪರಿಚಾರಕ ಹೋಗಿ ಸಿಂಹಾಸನದ ಮೇಲೆ ಕುಳಿತುಕೊಂಡರೆ, ಆಗ ಅದು ತಪ್ಪಾಗದು. ಸಾಮಾನ್ಯ ಜನರಿಗೆ ‘ನಾನೇ ಅವನು’ ಎಂದು ಹೇಳುವುದು ಶ್ರೇಯಸ್ಕರವಾದುದಲ್ಲ. ತರಂಗ ನೀರಿನದು, ಎಂದಿಗಾದರೂ ನೀರು ತರಂಗದ್ದಾಗುವುದೇ?
“ಮುಖ್ಯಾಂಶವೇನೆಂದರೆ, ಮನುಷ್ಯ ಯಾವ ಮಾರ್ಗ ಬೇಕಾದರೂ ಅನುಸರಿಸಲಿ, ಮನಸ್ಸು ಸ್ಥಿರವಾಗದ ಹೊರತು ಯೋಗ ಸಾಧ್ಯವಾಗುವುದಿಲ್ಲ. ಯೋಗಿಯ ಮನಸ್ಸು ಆತನ ವಶದಲ್ಲಿರುತ್ತದೆಯೇ ವಿನಾ ಆತ ಅದರ ವಶದಲ್ಲಿರುವುದಿಲ್ಲ. ಮನಸ್ಸು ಸ್ಥಿರವಾಯಿತು ಎಂದರೆ, ವಾಯು ಸ್ಥಿರವಾಗುತ್ತದೆ-ಕುಂಭಕವಾಗುತ್ತದೆ. ಇದೇ ಕುಂಭಕ ಭಕ್ತಿಯೋಗದಿಂದಲೂ ದೊರೆಯುತ್ತದೆ. ಭಕ್ತಿಯಿಂದಲೂ ವಾಯು ಸ್ಥಿರವಾಗಿಬಿಡುತ್ತದೆ. ಕೀರ್ತನೆಯಲ್ಲಿ ಗಾಯಕ ಮೊದಲು ಹಾಡುತ್ತಾನೆ: ‘ನಿತಾಯಿ ನಮ್ಮ ಮದದ ಆನೆ! ನಿತಾಯಿ ನಮ್ಮ ಮದದ ಆನೆ!’ ಎಂಬುದಾಗಿ. ಹೀಗೆ ಮತ್ತೆ ಮತ್ತೆ ಹಾಡುತ್ತ ಹಾಡುತ್ತ ಯಾವಾಗ ಭಾವ ಬಂದು ಬಿಡುವುದೋ, ಆಗ ಆತನಿಗೆ ಇಡೀ ವಾಕ್ಯವನ್ನು ಹೇಳಲು ಸಾಧ್ಯವಾಗುವುದಿಲ್ಲ. ಕೇವಲ ‘ಆನೆ! ಆನೆ!’ ಎಂಬುದಾಗಿ ಹೇಳುತ್ತಾನೆ. ಬಳಿಕ ಭಾವ ಇನ್ನೂ ಗಾಢವಾದ ನಂತರ ‘ಆ… ಆ…!’ ಎಂಬುದಾಗಿ ಮಾತ್ರ ಹೇಳುತ್ತಾನೆ! ಭಾವದಲ್ಲಿ ವಾಯು ಸ್ಥಿರವಾಗಿ ಬಿಡುತ್ತದೆ; ಕುಂಭಕ ಆಗಿಬಿಡುತ್ತದೆ.
“ಒಬ್ಬ ಒಂದು ಕಡೆ ಗುಡಿಸುತ್ತಾ ಇದ್ದಾನೆ ಅಂತ ಇಟ್ಟುಕೊ. ಬೇರೊಬ್ಬ ಬಂದು ಆತನಿಗೆ ಹೇಳುತ್ತಾನೆ: ‘ಇದು ಗೊತ್ತೆ ನಿನಗೆ? ಆ ಆಸಾಮಿ ಈ ಭೂಲೋಕದಲ್ಲಿ ಇಲ್ಲ; ಸತ್ತು ಹೋಗಿಬಿಟ್ಟಿದ್ದಾನೆ.’ ಆ ಸತ್ತ ಮನುಷ್ಯ ಈ ಗುಡಿಸುವವನ ಸಂಬಂಧಿಯಲ್ಲದಿದ್ದರೆ, ಈತ ಗುಡಿಸುವುದನ್ನು ಮುಂದುವರಿಸುತ್ತಲೇ ಆಗಾಗ ಹೇಳುತ್ತಿರುತ್ತಾನೆ: ‘ಅಯ್ಯೋ ಪಾಪ, ಹಾಗೇನು! ಆತ ಸತ್ತುಹೋಗಿಬಿಟ್ಟನೆ? ಬಹಳ ಒಳ್ಳೆಯವ.’ ಹೀಗೆಲ್ಲ ಹೇಳುತ್ತಿದ್ದರೂ ಗುಡಿಸುವುದನ್ನು ಮಾತ್ರ ಮುಂದುವರಿಸುತ್ತಲೇ ಇರುತ್ತಾನೆ. ಆದರೆ ಆ ಸತ್ತ ಮನುಷ್ಯನೇನಾದರೂ ಈತನ ಸಂಬಂಧಿಯಾಗಿದ್ದ ಪಕ್ಷದಲ್ಲಿ ಒಡನೇ ಈತನ ಕೈಯಿಂದ ಬರಲು ಕೆಳಕ್ಕೆ ಬಿದ್ದುಹೋಗಿಬಿಡುತ್ತದೆ. ‘ಅಯ್ಯೋ!’ ಅಂತ ಹೇಳಿ ಈತನೂ ಕುಸಿದು ಬೀಳುತ್ತಾನೆ. ಆಗ ಈತನ ವಾಯು ಸ್ಥಿರವಾಗಿಬಿಡುತ್ತದೆ. ಈಗ ಈತನ ಕೈಯಲ್ಲಿ ಯಾವ ಕೆಲಸವನ್ನೇ ಆಗಲಿ ಚಿಂತನೆಯನ್ನೇ ಆಗಲಿ ಮಾಡಲು ಆಗುವುದಿಲ್ಲ. ಇದನ್ನು ನೀನು ಹೆಂಗಸರಲ್ಲಿ ನೋಡಿಲ್ಲವೇನು? ಅವರಲ್ಲಿ ಯಾರಾದರೂ ಆಶ್ಚರ್ಯಚಕಿತರಾಗಿ ಯಾವುದಾದರೂ ಒಂದು ವಸ್ತುವನ್ನು ನೋಡುತ್ತಲೇ ಅಥವಾ ಒಂದು ವಿಷಯವನ್ನು ಕೇಳುತ್ತಲೇ ಇದ್ದರೆ, ಉಳಿದ ಹೆಂಗಸರು ಅವಳನ್ನು ಕೇಳುತ್ತಾರೆ: ‘ಏನು, ನಿನಗೆ ಭಾವ ಬಂದುಬಿಟ್ಟಿದೆಯೆ?’ ಎಂಬುದಾಗಿ. ಇಂಥ ಸಂದರ್ಭದಲ್ಲಿಯೂ ವಾಯು ಸ್ಥಿರವಾಗಿ ಬಿಡುತ್ತದೆ. ಅದಕ್ಕಾಗಿಯೆ ಜನ ‘ಹಾ!’ ಅಂತ ಬಾಯಿ ತೆರೆದುಕೊಂಡು ಆಶ್ಚರ್ಯಚಕಿತರಾಗಿ ನೋಡುತ್ತ ನಿಂತುಕೊಳ್ಳುವುದು.
“ಸುಮ್ಮನೆ ‘ಸೋಠ್ಹಮ್’ ‘ಸೋಠ್ಹಮ್’ ಅಂದುಬಿಟ್ಟರೇ ಸಾಕಾಗದು. ಜ್ಞಾನಿಗೆ ಕೆಲವು ಲಕ್ಷಣಗಳಿವೆ. ನರೇಂದ್ರನಿಗೆ ಉಬ್ಬಿಕೊಂಡು ಎದ್ದು ಕಾಣುವ ಕಣ್ಣುಗಳಿವೆ. (ಒಬ್ಬ ಭಕ್ತನನ್ನು ತೋರಿಸಿ) ಈತನಿಗೂ ಒಳ್ಳೇ ಕಣ್ಣು ಮತ್ತು ಹಣೆ ಇದೆ.
“ಎಲ್ಲರೂ ಒಂದೇ ಹಂತದವರಲ್ಲ. ಜೀವರಲ್ಲಿ ನಾಲ್ಕು ವಿಧ-ಬದ್ಧಜೀವ, ಮುಮುಕ್ಷುಜೀವ, ಮುಕ್ತಜೀವ, ನಿತ್ಯಜೀವ. ಎಲ್ಲರೂ ಸಾಧನೆ ಮಾಡಲೇಬೇಕು ಎಂಬುದೇನಿಲ್ಲ. ನಿತ್ಯಸಿದ್ಧರೂ ಇದ್ದಾರೆ, ಸಾಧನಸಿದ್ಧರೂ ಇದ್ದಾರೆ. ಕೆಲವರು ಬಹಳವಾಗಿ ಸಾಧನೆ ಮಾಡಿ ಬಳಿಕ ಭಗವಂತನನ್ನು ಪಡೆದುಕೊಳ್ಳುತ್ತಾರೆ. ಇನ್ನು ಕೆಲವರು ಆ ಜನ್ಮದಿಂದಲೇ ಸಿದ್ಧರು. ಉದಾಹರಣೆಗೆ ಪ್ರಹ್ಲಾದ.
“ಪ್ರಹ್ಲಾದಾದಿ ನಿತ್ಯಸಿದ್ಧರೂ ಸಾಧನೆ ಭಜನೆ ಮಾಡುತ್ತಾರೆ. ಅವರಿಗೆ ಸಾಧನೆಗೆ ಮುಂಚೆಯೇ ಭಗವಂತನ ಸಾಕ್ಷಾತ್ಕಾರ. ಇದು ಕುಂಬಳಗಿಡ, ಸೋರೆಗಿಡ, ಮೊದಲು ಕಾಯಿ ಬಿಟ್ಟು ಬಳಿಕ ಹೂವು ಬಿಡುವುದಿಲ್ಲವೆ, ಹಾಗೆ.
(ರಾಖಾಲನ ತಂದೆಯ ಕಡೆ ನೋಡಿ) “ನಿತ್ಯಸಿದ್ಧ ನೀಚವಂಶದಲ್ಲಿ ಜನ್ಮವೆತ್ತಿದರೂ ಆತ ನಿತ್ಯಸಿದ್ಧನಾಗಿಯೇ ಉಳಿಯುತ್ತಾನೆ ವಿನಾ ಬೇರೇನೂ ಆಗಿಹೋಗುವುದಿಲ್ಲ. ಬಟಾಣಿ ಕಾಳು ತಿಪ್ಪೆಗುಂಡಿಯಲ್ಲಿ ಬಿದ್ದರೂ ಅಲ್ಲೂ ಅದು ಬಟಾಣಿ ಗಿಡವಾಗಿಯೇ ಹುಟ್ಟುತ್ತದೆ.
“ಭಗವಂತ ಕೆಲವರಿಗೆ ಹೆಚ್ಚು ಶಕ್ತಿ, ಕೆಲವರಿಗೆ ಕಡಮೆ ಶಕ್ತಿ ಕೊಟ್ಟಿದ್ದಾನೆ. ಒಬ್ಬನಲ್ಲಿ ಅದು ಕೈಯೆಣ್ಣೆದೀಪದ ಹಾಗೆ ಉರಿಯುತ್ತದೆ. ಇನ್ನೊಬ್ಬನಲ್ಲಿ ಪಂಜಿನ ಹಾಗೆ ಉರಿಯುತ್ತದೆ. ವಿದ್ಯಾಸಾಗರನ ಒಂದು ಮಾತಿನಿಂದಲೇ ತಿಳಿದುಕೊಂಡುಬಿಟ್ಟೆ ಆತನ ಬುದ್ಧಿಶಕ್ತಿಯ ಮಿತಿ ಏನು ಎಂಬುದನ್ನು. ಭಗವಂತನ ಸೃಷ್ಟಿಯಲ್ಲಿ ಶಕ್ತಿ ವಿಶೇಷತೆಯಿದೆ ಎಂದು ನಾನು ಹೇಳಿದಾಗ, ಆತ ಹೇಳಿದ: ‘ಮಹಾಶಯರೆ, ಹಾಗಾದರೆ, ಭಗವಂತ ಕೆಲವರಿಗೆ ಹೆಚ್ಚು ಶಕ್ತಿ, ಇನ್ನು ಕೆಲವರಿಗೆ ಕಡಮೆ ಶಕ್ತಿ ಕೊಟ್ಟಿದ್ದಾನೇನು?’ ಒಡನೆ ನಾನು ಹೇಳಿದೆ: ‘ಹೌದು, ಇದರಲ್ಲಿ ಸಂದೇಹವೇನಿದೆ? ಕೊಟ್ಟಿರುವ ಶಕ್ತಿಯಲ್ಲಿ ಹೆಚ್ಚು ಕಡಮೆ ಇಲ್ಲದೆ ಇದ್ದರೆ ನಿನಗೆ ಇಷ್ಟೊಂದು ಕೀರ್ತಿ ಬರಲು ಕಾರಣವೇನು? ನಿನ್ನ ವಿದ್ಯೆ, ನಿನ್ನ ದಯೆ ಇವನ್ನೆಲ್ಲ ಕೇಳಿ ತಾನೆ ನಾವು ಇಲ್ಲಿಗೆ ಬಂದಿರುವುದು. ನಿನಗೇನು ಎರಡು ಕೊಂಬು ಬೆಳೆದಿಲ್ಲ ತಾನೆ? ಅಷ್ಟೊಂದು ವಿದ್ಯೆಗಳಿಸಿಕೊಂಡಿದ್ದರೂ ವಿದ್ಯಾಸಾಗರ ಏನೂ ಅರಿಯದ ಮಕ್ಕಳ ಹಾಗೆ ಮಾತಾಡಿದ: ‘ಭಗವಂತ ಕೆಲವರಿಗೆ ಹೆಚ್ಚು ಶಕ್ತಿ, ಇನ್ನು ಕೆಲವರಿಗೆ ಕಡಮೆ ಶಕ್ತಿ ಕೊಟ್ಟಿದ್ದಾನೆಯೇ’ ಎಂಬುದಾಗಿ. ನೋಡು, ಬೆಸ್ತ ಬಲೆ ಹಾಕಿದಾಗ, ಮೊದಮೊದಲು ದೊಡ್ಡ ಮೀನು ಬಲೆಗೆ ಬೀಳುತ್ತವೆ. ಬಳಿಕ ಬೆಸ್ತ ಕಾಲಿನಿಂದ ಕೆಸರು ಕೆದಕಿ, ಬಲೆ ಎಳೆದಾಗ ಚಿಕ್ಕಪುಟ್ಟ ಮೀನುಗಳೆಲ್ಲಾ ಹೊರ ಬರುತ್ತವೆ. ಹಾಗೇನೆ ಮನುಷ್ಯನಿಗೆ ಇನ್ನೂ ಭಗವಂತನ ಸಾಕ್ಷಾತ್ಕಾರ ದೊರೆತಿಲ್ಲ ಎಂದರೆ, ಅವನ ಆಂತರ್ಯದಲ್ಲಿ ಹುದುಗಿರುವ ಚಿಕ್ಕಪುಟ್ಟ ಮೀನುಗಳು (ಅಜ್ಞಾನ) ಕ್ರಮೇಣ ಹೊರಕ್ಕೆ ಬಂದುಬಿಡುತ್ತವೆ. ಕೇವಲ ಪಾಂಡಿತ್ಯ ಗಳಿಸಿಕೊಂಡುಬಿಟ್ಟರೇ ಏನಾದಹಾಗಾಯಿತು?”
೧೭ನೆ ಜೂನ್ ೧೮೮೩, ಜ್ಯೇಷ್ಠ ಶುಕ್ಲ ದ್ವಾದಶಿ, ಭಾನುವಾರ
ಪರಮಹಂಸರು ದಕ್ಷಿಣೇಶ್ವರದ ತಮ್ಮ ಕೊಠಡಿಯಲ್ಲಿ ಊಟವಾದ ನಂತರ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಅಧರಸೇನ ಮತ್ತು ಮಾಸ್ಟರ್ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿದರು. ಒಬ್ಬ ತಾಂತ್ರಿಕ ಭಕ್ತನೂ ಬಂದಿದ್ದಾನೆ. ರಾಖಾಲ, ಹಾಜರಾ, ರಾಮಲಾಲ ಪರಮಹಂಸರೊಡನೆ ಇದ್ದಾರೆ.
ಶ್ರೀರಾಮಕೃಷ್ಣರು: “ಸಂಸಾರದಲ್ಲಿ ಭಗವಂತನ ಸಾಕ್ಷಾತ್ಕಾರ ಏಕೆ ದೊರೆಯುವುದಿಲ್ಲ? ಆದರೆ ಬಹಳ ಕಠಿಣವೇನೋ ನಿಜ. ಜನಕಾದಿ ಋಷಿಗಳು ಬ್ರಹ್ಮಜ್ಞಾನ ಪಡೆದುಕೊಂಡು ಸಂಸಾರಕ್ಕೆ ಕಾಲಿಟ್ಟಿದ್ದರು. ಆದರೂ ಅವರಿಗೆ ಈ ಸಂಸಾರ ಭಯವಾಗಿ ಕಾಣುತ್ತಿತ್ತು. ಅನಾಸಕ್ತ ಸಂಸಾರಿಯೂ ಬಹಳ ಎಚ್ಚರಿಕೆಯಿಂದ ಇರಬೇಕು. ಒಮ್ಮೆ ಒಬ್ಬ ಭೈರವಿ ಕಣ್ಣಿಗೆ ಬಿದ್ದೊಡನೇ ಜನಕ ತಲೆ ತಗ್ಗಿಸಿದ. ಹೆಂಗಸನ್ನು ನೋಡಿ ಆತನಿಗೆ ಸ್ವಲ್ಪ ಮನಸ್ಸಂಕೋಚವಾಯಿತು. ಆಗ ಭೈರವಿ ಆತನಿಗೆ ಹೇಳಿದಳು: ‘ಜನಕಾ, ನನಗನಿಸುತ್ತದೆ, ನಿನಗಿನ್ನೂ ಬ್ರಹ್ಮಜ್ಞಾನ ದೊರೆತಿಲ್ಲ ಎಂಬುದಾಗಿ. ನಿನ್ನಲ್ಲಿ ಇನ್ನೂ ಸ್ತ್ರೀ-ಪುರುಷ ಭೇದಬುದ್ಧಿ ಇದೆ.’
“ಕಾಡಿಗೆ ಕಟ್ಟಿರುವ ಕೊಠಡಿಯಲ್ಲಿ ನೀನು ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಒಂದು ಕಿಂಚಿತ್ತಾದರೂ ಕಾಡಿಗೆ ಮೈಗೆ ತಾಗಿಯೇ ತಾಗುತ್ತದೆ. ಸಂಸಾರಿಗಳು ರೇಶ್ಮೆ ಉಡಿಗೆ ಉಟ್ಟು ಪೂಜೆಯಲ್ಲಿ ತೊಡಗುವಾಗ, ಒಳ್ಳೇ ಭಾವದಿಂದ ಕೂಡಿರುವುದನ್ನು ನಾನು ಅನೇಕ ವೇಳೆ ನೋಡಿದ್ದೇನೆ. ಪೂಜೆ ಸಮಯದಲ್ಲಿ ಮಾತ್ರವೇ ಏಕೆ, ಊಟೋಪಚಾರ ಆಗುವವರೆಗೂ ಅದೇ ಭಾವದಲ್ಲಿ ಇರುತ್ತಾರೆ. ಅದು ಮುಗಿದ ನಂತರ ಮತ್ತೆ ಎಂದಿನ ಮೂರ್ತಿಗಳೇ! ತಮ್ಮ ರಾಜಸಿಕ, ತಾಮಸಿಕ ಗುಣಗಳನ್ನು ಪ್ರದರ್ಶಿಸುತ್ತಾರೆ!
“ಸತ್ತ್ವಗುಣದಿಂದ ಭಕ್ತಿ ಉಂಟಾಗುತ್ತದೆ. ಭಕ್ತಿಯಲ್ಲೂ ಭಕ್ತಿಯ ಸತ್ತ್ವ, ಭಕ್ತಿಯ ರಜಸ್ಸು, ಭಕ್ತಿಯ ತಮಸ್ಸು ಎಂಬುವು ಇವೆ. ಭಕ್ತಿಯ ಸತ್ತ್ವ ವಿಶುದ್ಧ ಸತ್ತ್ವ. ಈ ಭಕ್ತಿ ಉಂಟಾದುದೇ ಆದರೆ, ಭಕ್ತನ ಮನಸ್ಸು ಭಗವಂತನಲ್ಲಿ ಹೊರತು ಬೇರೆ ಯಾವುದರ ಮೇಲೂ ನೆಲಸದು. ಆದರೆ ತನ್ನ ಶರೀರರಕ್ಷಣೆಗಾಗಿ ಎಷ್ಟು ಆವಶ್ಯಕವೋ ಅದಷ್ಟನ್ನು ಮಾತ್ರ ಆತ ಅದರ ಮೇಲೆ ಇಡುತ್ತಾನೆ.
“ಆದರೆ ಪರಮಹಂಸ ಮೂರು ಗುಣಗಳಿಗೂ ಅತೀತ. ಅವು ಮೂರು ಆತನಲ್ಲಿ ಇದ್ದರೂ ಅವು ಇಲ್ಲ ಅಂತಲೇ ಹೇಳಬಹುದು. ಆತ ಬಾಲಕನ ಹಾಗೆ ಯಾವ ಗುಣಕ್ಕೂ ವಶನಲ್ಲ. ಅದಕ್ಕಾಗಿಯೇ ಪರಮಹಂಸ ಚಿಕ್ಕ ಚಿಕ್ಕ ಮಕ್ಕಳು ತನ್ನೊಡನೆ ಬೆರೆಯಲು ಅವಕಾಶವೀಯುತ್ತಾನೆ; ಏಕೆಂದರೆ ಅವರ ಸ್ವಭಾವವನ್ನು ತನ್ನ ಮೇಲೆ ಆರೋಪಿಸಿಕೊಳ್ಳಲೋಸುಗ.
“ಪರಮಹಂಸ ಸಂಚಯಮಾಡಿಟ್ಟುಕೊಳ್ಳಕೂಡದು. ಆದರೆ ಈ ನಿಯಮ ಸಂಸಾರಿಗಳಿಗಲ್ಲ. ಅವರು ತಮ್ಮ ಕುಟುಂಬಕ್ಕಾಗಿ ಸಂಚಯ ಮಾಡಿ ಇಟ್ಟುಕೊಳ್ಳಲೇಬೇಕು.”
ತಾಂತ್ರಿಕ ಭಕ್ತ: “ಪರಮಹಂಸರಿಗೆ ಪಾಪಪುಣ್ಯದ ಬೋಧೆ ಇರುತ್ತದೆಯೇ?”
ಶ್ರೀರಾಮಕೃಷ್ಣರು: “ಕೇಶವಸೇನನೂ ಇದೇ ಪ್ರಶ್ನೆಯನ್ನು ಹಾಕಿದ. ನಾನು ಆತನಿಗೆ ಹೇಳಿದೆ: ‘ಅದನ್ನು ನಾನು ನಿನಗೆ ವಿವರಿಸಿ ತಿಳಿಸಿದ್ದೇ ಆದರೆ, ನಿನ್ನ ಸಮಾಜ ಒಂದು ನಿಮಿಷವೂ ಉಳಿದಿರದು.’ ಅದಕ್ಕೆ ಕೇಶವ ಹೇಳಿದ: ‘ಹಾಗಾದರೆ ದಯವಿಟ್ಟು ಬೇಡಿ.’
“ಪಾಪ ಪುಣ್ಯ, ಇವು ಏನು ಗೊತ್ತೆ? ಪರಮಹಂಸನಿಗೆ ಕಂಡುಬರುತ್ತದೆ, ಭಗವಂತನೇ ಸುಮತಿ ಕೊಡುತ್ತಾನೆ, ಆತನೇ ದುರ್ಮತಿ ಕೊಡುತ್ತಾನೆ ಎಂಬುದಾಗಿ. ಹುಳಿ, ಸಿಹಿ ಹಣ್ಣುಗಳಿರುವುದು ನಿನ್ನ ಅನುಭವಕ್ಕೆ ಬಂದಿಲ್ಲವೇ? ಕೆಲವು ಮರ ಸಿಹಿ ಹಣ್ಣು ಬಿಡುತ್ತವೆ, ಇನ್ನು ಕೆಲವು ಹುಳಿ ಹಣ್ಣು ಬಿಡುತ್ತವೆ. ಭಗವಂತ ಸಿಹಿ ಹಣ್ಣು ಬಿಡುವ ಮಾವಿನ ಹಣ್ಣುಗಳನ್ನೂ ಸೃಷ್ಟಿಸಿದ್ದಾನೆ, ಹುಳಿ ಹಣ್ಣು ಬಿಡುವ ಅಮಟೆ ಗಿಡಗಳನ್ನೂ ಸೃಷ್ಟಿಸಿದ್ದಾನೆ.”
ತಾಂತ್ರಿಕ: “ಹೌದು ನಿಜ. ಬೆಟ್ಟದ ಮೇಲಕ್ಕೆ ಹೋಗಿ ನೋಡಿದರೆ, ಗುಲಾಬಿಯ ತೋಟ ಕಾಣಿಸಿಕೊಳ್ಳುತ್ತದೆ. ಎಲ್ಲಿಯವರೆಗೆ ಕಣ್ಣಿನ ದೃಷ್ಟಿ ಹೋಗುತ್ತದೋ ಅಲ್ಲಿಯವರೆಗೂ ಕೇವಲ ಗುಲಾಬಿ ತೋಟವೇ ಕಾಣಿಸಿಕೊಳ್ಳುತ್ತದೆ.”
ಶ್ರೀರಾಮಕೃಷ್ಣರು: “ಪರಮಹಂಸನ ಅನುಭವಕ್ಕೆ ಬರುತ್ತದೆ-ಸತ್, ಅಸತ್ ಒಳ್ಳೆಯದು, ಕೆಟ್ಟದ್ದು; ಪಾಪ ಪುಣ್ಯ ಇವೆಲ್ಲಾ ಭಗವಂತನ ಮಾಯೆಯ ಐಶ್ವರ್ಯ ಎಂಬುದಾಗಿ. ಇದು ಬಹು ದೂರದ ವಿಷಯ. ಈ ಅವಸ್ಥೆ ಉಂಟಾಯಿತು ಎಂದರೆ, ಸಮಾಜ ಮುಂತಾದುವು ಸಾಧ್ಯವಿಲ್ಲ.”
ತಾಂತ್ರಿಕ: “ಆದರೆ ಕರ್ಮಫಲ ಉಂಟು ತಾನೆ?”
ಶ್ರೀರಾಮಕೃಷ್ಣರು: “ಅದೂ ಇದೆ. ಒಳ್ಳೆ ಕರ್ಮ ಮಾಡಿದರೆ ಒಳ್ಳೆ ಫಲ, ಕೆಟ್ಟ ಕರ್ಮ ಮಾಡಿದರೆ ಕೆಟ್ಟ ಫಲ. ಮೆಣಸಿನಕಾಯಿ ತಿಂದರೆ ಖಾರ ಹತ್ತಿಕೊಳ್ಳುವುದಿಲ್ಲವೇ? ಇವೆಲ್ಲಾ ಭಗವಂತನ ಲೀಲೆ, ಕ್ರೀಡೆ.”
ತಾಂತ್ರಿಕ: “ಹಾಗಾದರೆ ನಮಗೆ ಮಾರ್ಗವೇನು? ನಮ್ಮ ಕರ್ಮಫಲವನ್ನು ನಾವು ಅನುಭವಿಸಿಯೇ ತೀರಬೇಕು ತಾನೆ?”
ಶ್ರೀರಾಮಕೃಷ್ಣರು: “ಇರಬಹುದು. ಆದರೆ ಭಗವದ್ಭಕ್ತನದು ಬೇರೆ ವಿಷಯ. ಒಂದು ಹಾಡು ಕೇಳು:
ನಿನ್ನ ಬಾಳಿನ ಹೊಲವು ಪಾಳುಬಿದ್ದಿಹುದಲ್ಲೊ
ಕೃಷಿಗೈಯಲೂ ಕೂಡ ತಿಳಿಯದಿರುವೆ!…….
ಅವರು ಮತ್ತೆ ಹಾಡಿದರು:
ಜವ ಬರುವ ಬಾಗಿಲನು ಮುಚ್ಚಿರುವೆನದರಿಂದ
ಸಂದೇಹ ತಲ್ಲಣಗಳಿಲ್ಲ ನನಗೆ;
ಒಂದು ಕಂಬದ ಮೇಲೆ ಮೂರು ಹಗ್ಗವ ಬಿಗಿದು
ಒಂಬತ್ತು ಬಾಗಿಲಿನ ಮನೆಯ ಹೊರಗೆ,
ಪರಶಿವನೆ ರಕ್ಷಣೆಗೆ ನಿಂತು ಸಾವಿರ ದಳದ
ಕಮಲದಲಿ ಮನೆ ಮಾಡಿ ನೆಲಸಿರುವನು.
ಪರಮಹಂಸರು ಮಾತು ಮುಂದುವರಿಸುತ್ತಿದ್ದಾರೆ: “ಕಾಶಿಯಲ್ಲಿ ಬ್ರಾಹ್ಮಣನಾದರೂ ಸಾಯಲಿ, ವೇಶ್ಯೆಯಾದರೂ ಸಾಯಲಿ, ಬೇರೆ ಯಾರು ಬೇಕಾದರೂ ಸಾಯಲಿ, ಎಲ್ಲರೂ ಶಿವ ಆಗಿಬಿಡುತ್ತಾರೆ. ಯಾವಾಗ ಹರಿನಾಮ, ಕಾಳೀನಾಮ, ರಾಮನಾಮ ಇವುಗಳನ್ನು ಕೇಳಿದೊಡನೆಯೇ ಕಣ್ಣಿನಿಂದ ನೀರು ಸುರಿಯುವುದೋ, ಬಳಿಕ ಸಂಧ್ಯಾವಂದನೆ ಮೊದಲಾದ ಕ್ರಿಯೆಗಳ ಆವಶ್ಯಕತೆಯೇನಿರದು. ಎಲ್ಲಾ ಕರ್ಮಗಳೂ ಆತನನ್ನು ತಾವುತಾವಾಗಿಯೇ ಬಿಟ್ಟು ಹೋಗುತ್ತವೆ. ಕರ್ಮಫಲ ಅತನ ಹತ್ತಿರ ಸುಳಿಯುವುದೂ ಇಲ್ಲ.”
ಮತ್ತೆ ಪರಮಹಂಸರು ಹಾಡುತ್ತಿದ್ದಾರೆ:
ಭಾವುಕನ ಭಾವದೊಲು ಅವನೊಳುದಿಸುವ ಒಲವು
ಆ ಒಲವಿಗನುಸಾರ ಅವನು ಪಡೆಯುವ ಫಲವು…….
ಅವರು ಇನ್ನೊಂದು ಹಾಡು ಹಾಡಿದರು.
ಏತಕೆ, ಇನ್ನೇತಕೆ?
ಕಾಶಿ ಕಾಂಚಿಯೊ, ಗಯೆಯೊ ಗಂಗೆಯೋ
ಪುಣ್ಯಕ್ಷೇತ್ರಗಳೇತಕೆ?……..
ಬಳಿಕ ಅವರು ಹೇಳುತ್ತಿದ್ದಾರೆ: “ಮನುಷ್ಯ ಭಗವಂತನಲ್ಲಿ ಲೀನನಾಗಿಬಿಟ್ಟನೆಂದರೆ, ಆತನಲ್ಲಿ ದುರ್ಬುದ್ಧಿಯೇ ಆಗಲಿ, ಪಾಪಬುದ್ಧಿಯೇ ಆಗಲಿ ಉಳಿದುಕೊಂಡಿರದು.”
ತಾಂತ್ರಿಕ: “ನೀವು ಹೇಳುತ್ತೀರಲ್ಲ ‘ವಿದ್ಯಾ ಅಹಂ’ ಅಂತ ಅದು ಉಳಿದುಕೊಂಡಿರುತ್ತದೆ.”
ಶ್ರೀರಾಮಕೃಷ್ಣರು: ‘ವಿದ್ಯಾ ಅಹಂ,’ ‘ಭಕ್ತ ಅಹಂ,’ ‘ದಾಸ ಅಹಂ,’ ‘ಒಳ್ಳೆ ಅಹಂ’ ಇವು ಉಳಿದುಕೊಂಡಿರುತ್ತವೆ. ‘ನೀಚ ಅಹಂ’ ಹೊರಟುಹೋಗುತ್ತದೆ.”
ತಾಂತ್ರಿಕ: “ಇಂದು ನೀವು ನಮ್ಮ ಅನೇಕ ಸಂದೇಹಗಳನ್ನು ನಿವಾರಣೆಮಾಡಿಬಿಟ್ಟಿರಿ.”
ಶ್ರೀರಾಮಕೃಷ್ಣರು: “ಆತ್ಮಸಾಕ್ಷಾತ್ಕಾರವಾಯಿತು ಎಂದರೆ, ಎಲ್ಲಾ ಸಂದೇಹಗಳೂ ನಿವೃತ್ತಿಯಾಗಿಬಿಡುತ್ತವೆ.
“ತಮಃಪ್ರಧಾನ ಭಕ್ತಿಯನ್ನು ಆರೋಪಿಸಿಕೊ. ಜೋರಿನಿಂದ ಹೇಳು: ‘ಏನು? ನಾನು ರಾಮನಾಮ ಪಠಿಸಿದ್ದೇನೆ, ಕಾಳೀನಾಮ ಪಠಿಸಿದ್ದೇನೆ. ನನಗೆಲ್ಲಿಯ ಬಂಧನ? ನನಗೆಲ್ಲಿಯ ಕರ್ಮಫಲ?”
ಪರಮಹಂಸರು ಹಾಡುತ್ತಿದ್ದಾರೆ.
ನಾ ಪಾಪಿಯಾದರೂ ನನ್ನ ಕಡೆಗಾಲದಲಿ
ನಿನ್ನ ಶ್ರೀನಾಮವನು ಜಪಿಸುತಿರಲು……….
ಶ್ರೀರಾಮಕೃಷ್ಣರು ಮಾತು ಮುಂದುವರಿಸುತ್ತಿದ್ದಾರೆ: “ಶ್ರದ್ಧೆ! ಶ್ರದ್ಧೆ! ಒಮ್ಮೆ ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ: ‘ರಾಮನೇ ಎಲ್ಲವೂ ಆಗಿದ್ದಾನೆ’ ಎಂಬುದಾಗಿ. ಒಂದು ನಾಯಿ ರೊಟ್ಟಿಯನ್ನು ತಿಂದುಬಿಡುವುದರಲ್ಲಿದ್ದಾಗ, ಅದಕ್ಕೆ ಆ ಶಿಷ್ಯ ಹೇಳಿದ: ‘ಓ ರಾಮ, ಸ್ವಲ್ಪ ತಾಳು, ಸ್ವಲ್ಪ ತಾಳು. ರೊಟ್ಟಿಗೆ ತುಪ್ಪ ಸವರಿ ಕೊಡುತ್ತೇನೆ.’ ಗುರು ವಾಕ್ಯದಲ್ಲಿ ಆತನಿಗೆ ಈ ಮಟ್ಟದ ಶ್ರದ್ಧೆ.
“ಯಾವ ಕೆಲಸಕ್ಕೂ ಬಾರದವರಲ್ಲಿ ಶ್ರದ್ಧೆಯುಂಟಾಗುವುದಿಲ್ಲ. ಅವರು ಸದಾ ಸಂಶಯಗ್ರಸ್ತರು. ಆತ್ಮಸಾಕ್ಷಾತ್ಕಾರವಾಗುವ ತನಕ ಎಲ್ಲಾ ಸಂಶಯಗಳೂ ನಿವೃತ್ತಿಯಾಗುವುದಿಲ್ಲ.”
“ಶುದ್ಧ ಭಕ್ತಿಯಲ್ಲಿ ಯಾವ ಕಾಮನೆಯೂ ಇರದು. ಈ ಭಕ್ತಿಯ ಮೂಲಕ ಭಗವಂತನ ಸಾಕ್ಷಾತ್ಕಾರವನ್ನು ಬೇಗ ಪಡೆದುಕೊಂಡುಬಿಡಬಹುದು. ಅಣಿಮಾದಿ ಸಿದ್ಧಿ ಮುಂತಾದುವುಗಳೇ ಕಾಮನೆಗಳು. ಕೃಷ್ಣ ಒಮ್ಮೆ ಅರ್ಜುನನಿಗೆ ಹೇಳಿದ: ‘ಗೆಳೆಯ, ಅಣಿಮಾದಿ ಸಿದ್ಧಿಗಳಲ್ಲಿ ಕೇವಲ ಒಂದೇ ಒಂದು ನಿನ್ನಲ್ಲಿ ಇದ್ದರೂ, ನಿನಗೆ ಭಗವಂತನ ಸಾಕ್ಷಾತ್ಕಾರ ದೊರೆಯುವುದಿಲ್ಲ. ಅವು ಕೇವಲ ನಿನ್ನ ಶಕ್ತಿಗೆ ಇನ್ನು ಸ್ವಲ್ಪ ಶಕ್ತಿಯನ್ನು ಸೇರಿಸಬಲ್ಲುವು.”
ತಾಂತ್ರಿಕ: “ಈಗಿನ ಕಾಲದಲ್ಲಿ ತಾಂತ್ರಿಕ ಕ್ರಿಯೆ ಫಲಕಾರಿಯಾಗುತ್ತಿಲ್ಲವಲ್ಲ ಏಕೆ?”
ಶ್ರೀರಾಮಕೃಷ್ಣರು: “ಅವುಗಳನ್ನು ಜನ ಸರಿಯಾಗಿ ಮತ್ತು ಭಕ್ತಿಪೂರ್ವಕವಾಗಿ ಮಾಡದೆ ಇರುವುದರಿಂದ.”
ಮುಕ್ತಾಯವಾಗಿ ಪರಮಹಂಸರು ಹೇಳುತ್ತಿದ್ದಾರೆ: “ಭಕ್ತಿಯೇ ಸಾರ. ನಿಜವಾದ ಭಕ್ತನಿಗೆ ಯಾವ ಭಯವೇ ಆಗಲಿ, ಯಾವ ಚಿಂತನೆಯಾಗಲೀ ಇರದು. ತನ್ನ ಯೋಗಕ್ಷೇಮವೆಲ್ಲ ಭಗವತಿಗೆ ಗೊತ್ತಿದೆ ಎಂಬುದಾಗಿ ಆತನಿಗೆ ಗೊತ್ತಿದೆ. ಬೆಕ್ಕು ಇಲಿಯನ್ನು ಒಂದು ವಿಧದಲ್ಲಿ ಕಚ್ಚಿಕೊಂಡಿರುತ್ತದೆ, ಆದರೆ ತನ್ನ ಮರಿಯನ್ನು ಮಾತ್ರ ಬೇರೆ ವಿಧದಲ್ಲಿ.”
1. ಮಥುರಾಬಾಬುವಿನ ಮಗ, ರಾಣಿ ರಸಮಣಿಗೆ ಮೊಮ್ಮಗನಾಗಬೇಕು. ಆತ ೧೮೭೧ನೇ ಇಸವಿಯಲ್ಲಿ ದೇವಾಲಯದ ಯಜಮಾನನಾದ.
2. ಕಾಳೀದೇವಾಲಯದ ಒಬ್ಬ ಗುಮಾಸ್ತ