೨೨ನೆ ಏಪ್ರಿಲ್ ೧೮೮೩, ಚೈತ್ರ ಪೂರ್ಣಿಮೆ, ಭಾನುವಾರ
ಶ್ರೀರಾಮಕೃಷ್ಣ ಪರಮಹಂಸರು ಕಲ್ಕತ್ತದ ಹತ್ತಿರವಿರುವ ವೇಣೀಮಾಧವಪಾಲನ ಉದ್ಯಾನವನಕ್ಕೆ ಬಂದಿದ್ದಾರೆ. ಇಂದು ಇಲ್ಲಿ ಬ್ರಾಹ್ಮಸಮಾಜದ ಷಾಣ್ಮಾಸಿಕ ಮಹೋತ್ಸವ. ಅನೇಕ ಬ್ರಾಹ್ಮಭಕ್ತರು ಬಂದು ನೆರೆದಿದ್ದಾರೆ. ಅವರೆಲ್ಲರೂ ಪರಮಹಂಸರ ಸುತ್ತ ಕುಳಿತು ಆಗಾಗ ಅವರಿಗೆ ಏನೇನೋ ಪ್ರಶ್ನೆ ಹಾಕುತ್ತಿದ್ದಾರೆ.
ಒಬ್ಬ ಬ್ರಾಹ್ಮಭಕ್ತ: “ಮಹಾಶಯರೇ, ಮಾರ್ಗವೇನು?”
ಶ್ರೀರಾಮಕೃಷ್ಣರು: “ಅನುರಾಗ, ಎಂದರೆ ಭಗವಂತನನ್ನು ಪ್ರೀತಿಸುವುದು, ಮತ್ತೆ ಪ್ರಾರ್ಥನೆ.”
ಬ್ರಾಹ್ಮಭಕ್ತ: “ಯಾವುದನ್ನು ಅನುಸರಿಸಬೇಕು-ಅನುರಾಗವನ್ನೇ ಅಥವಾ ಪ್ರಾರ್ಥನೆಯನ್ನೇ?”
ಶ್ರೀರಾಮಕೃಷ್ಣರು: “ಮೊದಲು ಅನುರಾಗ, ಬಳಿಕ ಪ್ರಾರ್ಥನೆ.”
ಪರಮಹಂಸರು ಹಾಡುತ್ತಿದ್ದಾರೆ:
ನಂಬಿ ಕರೆದರೆ ತಾಯಿ ಓ ಎನ್ನದಿಹಳೇನು?
ನಿನ್ನ ತೊರೆದವಳೆಂತು ಇರಬಲ್ಲಳೋ?……
ಪರಮಹಂಸರು ಮಾತು ಮುಂದುವರಿಸಿ ಹೇಳುತ್ತಿದ್ದಾರೆ: “ಸತತ ಭಗವಂತನ ನಾಮ ಗುಣಕೀರ್ತನೆ ಮತ್ತು ಪ್ರಾರ್ಥನೆ ಮಾಡುತ್ತಿರಬೇಕು. ಹಳೇ ಚೊಂಬನ್ನು ದಿನವೂ ಬೆಳಗುತ್ತಿರಬೇಕು. ಎಲ್ಲೋ ಒಂದು ದಿನ ಬೆಳಗಿಬಿಟ್ಟರೆ ಏನಾದಹಾಗಾಯಿತು? ವಿವೇಕ ವೈರಾಗ್ಯಗಳಿಂದ ಒಡಗೂಡಿರಬೇಕು; ಈ ಸಂಸಾರ ಅನಿತ್ಯ ಎಂಬ ಜ್ಞಾನವನ್ನು ಮನಸ್ಸಿಗೆ ಚೆನ್ನಾಗಿ ಒತ್ತಬೇಕು.”
ಬ್ರಾಹ್ಮಭಕ್ತ: “ಸಂಸಾರವನ್ನು ತ್ಯಜಿಸಿಬಿಡುವುದು ಒಳ್ಳೆಯದೆ?”
ಶ್ರೀರಾಮಕೃಷ್ಣರು: “ಎಲ್ಲರೂ ತ್ಯಜಿಸಿಬಿಡಬೇಕಾಗಿಲ್ಲ. ಯಾರ ಭೋಗೋಪಭೋಗಗಳು ಇನ್ನೂ ಕೊನೆಗೊಂಡಿಲ್ಲವೋ ಅವರು ತ್ಯಜಿಸಿಬಿಡಬೇಕಾಗಿಲ್ಲ. ಕೇವಲ ಎರಡಾಣೆ ಮದ್ಯ ಕುಡಿದರೆ ಮತ್ತನಾಗಲಾಗುವುದೆ?”
ಬ್ರಾಹ್ಮಭಕ್ತ: “ಹಾಗಾದರೆ ಅವರು ಸಾಂಸಾರಿಕ ಜೀವನ ನಡೆಸಿಕೊಂಡು ಹೋಗಬೇಕೆ?”
ಶ್ರೀರಾಮಕೃಷ್ಣರು: “ಹೌದು, ಅವರು ಸಾಂಸಾರಿಕ ಕೆಲಸಕಾರ್ಯಗಳನ್ನು ನಿಷ್ಕಾಮ ಭಾವನೆಯಿಂದ ಮಾಡಲು ಪ್ರಯತ್ನಿಸಬೇಕು. ಕೈಗೆ ಎಣ್ಣೆ ಸವರಿಕೊಂಡು ಹಲಸಿನಹಣ್ಣು ಬಿಡಿಸಬೇಕು. ಧನಿಕನ ಮನೆ ದಾಸಿ ಎಲ್ಲಾ ಕೆಲಸಗಳನ್ನೂ ಮಾಡುತ್ತಾಳೆ. ಆದರೆ ಆಕೆಯ ಮನಸ್ಸು ಮಾತ್ರ ತನ್ನ ಊರಿನಲ್ಲೇ ನೆಲಸಿರುತ್ತದೆ. ಇದಕ್ಕೇ ನಿಷ್ಕಾಮ ಕರ್ಮ ಅಂತ ಹೆಸರು. ನೀವು ಮಾನಸಿಕವಾಗಿ ತ್ಯಾಗಮಾಡಬೇಕು. ಸಂನ್ಯಾಸಿ ಬಾಹ್ಯಿಕ ತ್ಯಾಗ, ಮಾನಸಿಕ ತ್ಯಾಗ ಎರಡನ್ನೂ ಮಾಡಬೇಕು.”
ಬ್ರಾಹ್ಮಭಕ್ತ: “ಭೋಗಾಂತವಾಗಬೇಕು ಅಂದರೆ ಏನು?”
ಶ್ರೀರಾಮಕೃಷ್ಣರು: “ಕಾಮಕಾಂಚನಗಳ ಭೋಗ. ಯಾವ ಕೊಠಡಿಯಲ್ಲಿ ಹುಣಿಸೆಕಾಯಿನ ಉಪ್ಪಿನಕಾಯಿ, ನೀರಿನ ಗುಡಾಣ ಇವೆಯೋ ಅಲ್ಲಿಯೇ ವಿಷಮಶೀತಜ್ವರದ ರೋಗಿಯನ್ನು ಬಿಟ್ಟರೆ ಕಷ್ಟಕ್ಕಿಟ್ಟುಕೊಳ್ಳುತ್ತದೆ. ಧನ, ಕನಕ, ಕೀರ್ತಿ, ಸಂಭ್ರಮ, ದೇಹಸುಖ ಇವನ್ನೆಲ್ಲ ಒಮ್ಮೆ ಅನುಭವಿಸಿದ ಹೊರತು, ಅಂದರೆ ಭೋಗಾಂತವಾಗದ ಹೊರತು, ಅನೇಕರಿಗೆ ಹೃದಯದಲ್ಲಿ ಭಗವಂತನಿಗಾಗಿ ವ್ಯಾಕುಲತೆ ಉಂಟಾಗದು.”
ಬ್ರಾಹ್ಮಭಕ್ತ: “ನಿಜವಾಗಿ ಕೆಟ್ಟವರಾರು-ಹೆಂಗಸೊ, ಗಂಡಸೊ?”
ಶ್ರೀರಾಮಕೃಷ್ಣರು: “ವಿದ್ಯಾರೂಪಿಣಿ ಹೆಂಗಸೂ ಇದ್ದಾಳೆ. ಅವಿದ್ಯಾರೂಪಿಣಿ ಹೆಂಗಸೂ ಇದ್ದಾಳೆ. ವಿದ್ಯಾರೂಪಿಣಿ ಹೆಂಗಸು ಭಗವಂತನ ಕಡೆಗೆ ಕರೆದೊಯ್ಯುತ್ತಾಳೆ; ಆದರೆ ಅವಿದ್ಯಾರೂಪಿಣಿ ಹೆಂಗಸು ಭಗವಂತನನ್ನು ಮರೆಸಿ ಸಂಸಾರದಲ್ಲಿ ಮುಳುಗಿಸಿಬಿಡುತ್ತಾಳೆ.
“ಭಗವಂತನ ಮಾಯೆಯಿಂದಲೇ ಈ ಜಗತ್ತು, ಈ ಸಂಸಾರ ಉದ್ಭವಿಸಿದೆ. ಮಹಾಮಾಯೆಯಲ್ಲಿ ವಿದ್ಯಾಮಾಯೆ ಅವಿದ್ಯಾಮಾಯೆ ಎರಡೂ ಇವೆ. ವಿದ್ಯಾಮಾಯೆಯನ್ನು ಅವಲಂಬಿಸಿದರೆ, ಸಾಧುಸಂಗ, ಜ್ಞಾನ, ಭಕ್ತಿ, ಪ್ರೇಮ, ವೈರಾಗ್ಯ ಇವೆಲ್ಲಾ ಉಂಟಾಗುತ್ತದೆ. ಅವಿದ್ಯಾಮಾಯೆ ಎಂದರೆ ಪಂಚಭೂತಗಳು ಮತ್ತು ಪಂಚೇಂದ್ರಿಯಗಳ ವಸ್ತುಗಳು-ರೂಪ, ರಸ, ಗಂಧ, ಸ್ಪರ್ಶ, ಶಬ್ದ, ಇವು ಭಗವಂತನನ್ನು ಮರೆಸಿಬಿಡುತ್ತವೆ.”
ಬ್ರಾಹ್ಮಭಕ್ತ: “ಅವಿದ್ಯೆಯಿಂದ ಅಜ್ಞಾನವುಂಟಾಗುವುದಾದರೆ, ಯಾಕೆ ಭಗವಂತ ಅದನ್ನು ಸೃಷ್ಟಿಸಿದ?”
ಶ್ರೀರಾಮಕೃಷ್ಣರು: “ಆತನ ಲೀಲೆ. ಕತ್ತಲೆ ಇಲ್ಲದೆ ಇತ್ತು ಎಂದರೆ ಬೆಳಕಿನ ಮಹಿಮೆಯನ್ನು ಅರಿಯಲಾಗುವುದಿಲ್ಲ. ದುಃಖ ಇಲ್ಲದೆ ಇತ್ತು ಎಂದರೆ ಸುಖ ಏನು ಎಂಬುದನ್ನು ಅರಿಯಲಾಗುವುದಿಲ್ಲ. ಕೆಟ್ಟದ್ದು ಏನು ಎಂಬುದರ ಅರಿವು ಇದ್ದರೆ ತಾನೆ ಒಳ್ಳೆಯದು ಏನು ಎಂಬುದರ ಅರಿವು ಆಗಬೇಕಾದರೆ.
“ಮತ್ತೆ ಸಿಪ್ಪೆ ಇರುವುದರಿಂದ ತಾನೆ ಮಾವಿನಕಾಯಿ ಬೆಳೆಯುತ್ತದೆ, ಹಣ್ಣಾಗುತ್ತದೆ. ಮಾವಿನಕಾಯಿ ಪೂರ್ತಿ ಹಣ್ಣಾಗಿ ತಿನ್ನಲು ಸಿದ್ಧವಾಯಿತು ಎಂದರೆ ಆಗ ಸಿಪ್ಪೆ ಬಿಸಾಡಿಬಿಡಬೇಕಾಗುತ್ತದೆ. ಮಾಯಾರೂಪದ ಸಿಪ್ಪೆ ಇರುವುದರಿಂದ ಕ್ರಮೇಣ ಬ್ರಹ್ಮಜ್ಞಾನ ಸಾಧ್ಯ. ಮಾವಿನಕಾಯಿ ಸಿಪ್ಪೆಯ ಹಾಗೆ ವಿದ್ಯಾಮಾಯೆ, ಅವಿದ್ಯಾಮಾಯೆ ಎರಡೂ ಆವಶ್ಯಕ.”
ಬ್ರಾಹ್ಮಭಕ್ತ : “ಒಳ್ಳೇದು; ಸಾಕಾರಪೂಜೆ, ಅಂದರೆ ಮಣ್ಣಿನಿಂದ ಮಾಡಿದ ಭಗವಂತನ ಪ್ರತಿಮೆಗಳ ಪೂಜೆ ಒಳ್ಳೆಯದೇ?”
ಶ್ರೀರಾಮಕೃಷ್ಣರು: “ನೀವು ಸಾಕಾರವನ್ನು ಒಪ್ಪುತ್ತಿಲ್ಲ. ಅದು ಒಳ್ಳೆಯದೆ. ಮೂರ್ತಿ ನಿಮಗಲ್ಲ. ನಿಮಗೆ ಕೇವಲ ಭಾವ ಮಾತ್ರ. ನೀವು ಸಾಕಾರೋಪಾಸಕರ ವ್ಯಾಕುಲವನ್ನು ಅನುಕರಿಸಬೇಕು-ಶ್ರೀಕೃಷ್ಣನಲ್ಲಿ ರಾಧೆಗಿದ್ದ ಆಕರ್ಷಣೆ, ಪ್ರೀತಿ ಇವನ್ನು. ಸಾಕಾರವಾದಿಗಳು ಭಗವತಿ ಕಾಳಿಯ ಅಥವಾ ಭಗವತಿ ದುರ್ಗೆಯ ಪೂಜೆಮಾಡುವಾಗ ಎಂಥ ವ್ಯಾಕುಲತೆಯಿಂದ, ‘ಅಮ್ಮಾ! ಅಮ್ಮಾ!’ ಅಂತ ಕರೆಯುತ್ತಾರೆ! ಎಷ್ಟೊಂದಾಗಿ ಭಗವತಿಯನ್ನು ಪ್ರೀತಿಸುತ್ತಾರೆ! ಅವರ ಆ ಭಾವವನ್ನು ನೀವು ಅನುಕರಿಸಬೇಕು. ನೀವೇನೂ ಮೂರ್ತಿಯನ್ನು ಪೂಜಿಸಬೇಕಾಗಿಲ್ಲ.”
ಬ್ರಾಹ್ಮಭಕ್ತ: “ವೈರಾಗ್ಯ ಹೇಗೆ ಉಂಟಾಗುತ್ತದೆ? ಎಲ್ಲರಿಗೂ ಅದು ಏಕೆ ಬರುವುದಿಲ್ಲ?”
ಶ್ರೀರಾಮಕೃಷ್ಣರು: “ಭೋಗತೃಪ್ತಿ ಪೂರ್ಣವಾಗದ ಹೊರತು ವೈರಾಗ್ಯ ಉಂಟಾಗುವುದಿಲ್ಲ. ಮಗುವಿಗೆ ತಿಂಡಿ ಕೊಟ್ಟೋ ಅಥವಾ ಆಟದ ಸಾಮಾನು ಕೊಟ್ಟೋ ಸುಲಭವಾಗಿ ಸಮಾಧಾನಗೊಳಿಸಿಬಿಡಬಹುದು. ಆದರೆ ಅದು ತಿಂಡಿಯನ್ನು ತಿಂದು ಮುಗಿಸಿದ ನಂತರ ಅಥವಾ ಆಟದ ಸಾಮಾನಿನೊಡನೆ ಆಟವಾಡಿ ಮುಗಿಸಿದ ನಂತರ ಅಳಲಾರಂಭಿಸುತ್ತದೆ : ‘ನಾನು ತಾಯಿಯ ಹತ್ತಿರ ಹೋಗಬೇಕು’ ಎಂಬುದಾಗಿ. ತಾಯಿಯ ಹತ್ತಿರಕ್ಕೆ ಕರೆದುಕೊಂಡು ಹೋಗಲಿಲ್ಲ ಎಂದರೆ ಕೋಪದಿಂದ ಆಟದ ಸಾಮಾನುಗಳನ್ನು ‘ರೊಯ್ಞ್’ ಅಂತ ಬಿಸಾಡಿ ತಾರಸ್ವರದಿಂದ ಕಿರಿಚಲಾರಂಭಿಸುತ್ತದೆ.”
ಬ್ರಾಹ್ಮಭಕ್ತರು ಗುರು ಬೇಕೆಂದು ವಾದಿಸತಕ್ಕವರಿಗೆ ವಿರೋಧಿಗಳು, ಅದಕ್ಕಾಗಿ ಬ್ರಾಹ್ಮಭಕ್ತ ಅದರ ಸಂಬಂಧವಾಗಿ ಈಗ ಪ್ರಶ್ನೆಹಾಕಲಾರಂಭಿಸಿದ.
ಬ್ರಾಹ್ಮಭಕ್ತ: “ಮಹಾಶಯರೆ, ಗುರುವಿಲ್ಲದೆ ಇದ್ದರೆ ಜ್ಞಾನ ದೊರೆಯೋದಿಲ್ಲವೆ?”
ಶ್ರೀರಾಮಕೃಷ್ಣರು: “ಕೇವಲ ಸಚ್ಚಿದಾನಂದನೇ ಗುರು. ಮನುಷ್ಯ ಗುರುವಿನ ಪಟ್ಟಧರಿಸಿ ಜನರಲ್ಲಿ ಆತ್ಮಜಾಗೃತಿಯನ್ನುಂಟುಮಾಡಿದ್ದೇ ಆದರೆ, ಆಗ ತಿಳಿದುಕೊಳ್ಳಬೇಕು ಸಚ್ಚಿದಾನಂದನೇ ಆ ರೂಪ ಧರಿಸಿದ್ದಾನೆ ಎಂಬುದಾಗಿ. ಗುರು ಒಬ್ಬ ಸ್ನೇಹಿತ ಇದ್ದ ಹಾಗೆ. ಆತ ಕೈಹಿಡಿದು ಕರೆದುಕೊಂಡುಹೋಗುತ್ತಾನೆ. ಭಗವಂತನ ದರ್ಶನವಾದನಂತರ ಗುರು-ಶಿಷ್ಯರ ಭೇದವಿರದು. ಅದು ಬಹಳ ತೊಡಕಿನ ಸನ್ನಿವೇಶವನ್ನು ಸೃಜಿಸುತ್ತದೆ. ಅಲ್ಲಿ ಗುರು-ಶಿಷ್ಯರು ಒಬ್ಬರನ್ನೊಬ್ಬರು ಗುರುತಿಸಲಾರರು. ಇದಕ್ಕಾಗಿಯೇ ಜನಕರಾಜ ಶುಕದೇವನಿಗೆ ಹೇಳಿದ: ‘ನಿನಗೆ ಬ್ರಹ್ಮಜ್ಞಾನ ಬೇಕಾಗಿದ್ದರೆ ಮೊದಲು ಗುರುದಕ್ಷಿಣೆ ಕೊಡು.’ ಏಕೆಂದರೆ, ಬ್ರಹ್ಮಜ್ಞಾನ ದೊರೆತನಂತರ ಈತ ಗುರು, ತಾನು ಶಿಷ್ಯ ಎಂಬ ಭೇದಬುದ್ಧಿ ಇರದು. ಭಗವಂತನ ಸಾಕ್ಷಾತ್ಕಾರವಾಗದೆ ಇರುವವರೆಗೆ ಮಾತ್ರ ಗುರು-ಶಿಷ್ಯ ಸಂಬಂಧ.”
ಕ್ರಮೇಣ ಸಾಯಂಕಾಲವಾಯಿತು. ಬ್ರಾಹ್ಮಭಕ್ತರಲ್ಲಿ ಕೆಲವರು ಪರಮಹಂಸರಿಗೆ ಹೇಳುತ್ತಿದ್ದಾರೆ: “ಬಹುಶಃ ಈಗ ನಿಮ್ಮ ಸಾಯಂ ಸಂಧ್ಯಾವಂದನೆಗೆ ಸಮಯ ಆಗಿರಬಹುದು.”
ಶ್ರೀರಾಮಕೃಷ್ಣರು: “ಇಲ್ಲ, ಅಂಥದ್ದೇನಿಲ್ಲ. ಮೊದಮೊದಲು ಅವನ್ನೆಲ್ಲಾ ಮಾಡಬೇಕಾಗುತ್ತದೆ. ಬಳಿಕ ಗಂಟೆ ಬಾರಿಸುವುದು, ವಿಧಿವತ್ ಪೂಜೆ ಇವೆಲ್ಲಾ ಬೇಕಾಗಿರುವುದಿಲ್ಲ.”
ಸಾಯಂಕಾಲವಾದನಂತರ ಆದಿಸಮಾಜದ ಆಚಾರ್ಯ ಬೇಚಾರಾಮ ವೇದಿಕೆಯಲ್ಲಿ ಕುಳಿತು ಉಪಾಸನೆ ನಡೆಸಿದರು. ಆಗಾಗ ಬ್ರಾಹ್ಮಸಮಾಜದ ಹಾಡುಗಳು ಮತ್ತು ಉಪನಿಷತ್ ಪಾಠಗಳು ನಡೆದುವು. ಉಪಾಸನೆ ಮುಗಿದನಂತರ ಆಚಾರ್ಯ ಬೇಚಾರಾಮ ಪರಮಹಂಸರೊಡನೆ ಕುಳಿತುಕೊಂಡು ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೋಡಿ, ನನಗನಿಸುತ್ತದೆ, ನಿರಾಕಾರವೂ ಸತ್ಯ. ಸಾಕಾರವೂ ಸತ್ಯ, ಎಂಬುದಾಗಿ. ನಿಮಗೆ?”
ಆಚಾರ್ಯ: “ನಿರಾಕಾರ ಇಲೆಕ್ಟ್ರಿಕ್ ಕರೆಂಟ್ ಇದ್ದಹಾಗೆ. ಕಣ್ಣಿನಿಂದ ನೋಡಲಾಗುವುದಿಲ್ಲ. ಆದರೆ ಅದರ ಕಾರ್ಯ ನೋಡಬಹುದು.”
ಶ್ರೀರಾಮಕೃಷ್ಣರು: “ಹೌದು, ಎರಡೂ ಸತ್ಯ. ಸಾಕಾರ ನಿರಾಕಾರ ಎರಡೂ ಸತ್ಯ ಭಗವಂತ ಕೇವಲ ನಿರಾಕಾರ ಎಂಬುದು ಹೇಗೆ ಕಾಣುತ್ತದೆ ಗೊತ್ತೆ? ಇದು ಓಲಗ ಊದುವಾಗ ಓಲಗದಲ್ಲಿ ಏಳು ರಂಧ್ರಗಳಿದ್ದರೂ ಒಬ್ಬ ಕೇವಲ ‘ಪ್ಞೋ’ ಅಂತ ರಾಗ ಹೊರಡಿಸುತ್ತಾನಲ್ಲ ಹಾಗೆ. ಆದರೆ ಇನ್ನೊಬ್ಬನನ್ನು ನೋಡಿ, ಆತ ಎಷ್ಟೊಂದು ವಿವಿಧ ರಾಗ ರಾಗಿಣಿಗಳನ್ನು ನುಡಿಸುತ್ತಾನೆ! ಅದೇ ರೀತಿಯಾಗಿ, ಹಾಗೇ ನೋಡಿ, ಸಾಕಾರವಾದಿಗಳು ಭಗವಂತನನ್ನು ಎಷ್ಟೊಂದು ವಿಧದಿಂದ ಪೂಜಿಸಿ ಆನಂದಪಡುತ್ತಾರೆ! ಶಾಂತ, ದಾಸ್ಯ, ಸಖ್ಯ, ವಾತ್ಸಲ್ಯ, ಮಧುರ ಹೀಗೆ ನಾನಾ ಭಾವಗಳಿಂದ!
“ನೋಡಿ, ಮುಖ್ಯವಾಗಿ ಮಾಡಬೇಕಾದ್ದೇನೆಂದರೆ, ಹೇಗಾದರೂ ಮಾಡಿ ಅಮೃತಕುಂಡಕ್ಕೆ ಬಿದ್ದುಬಿಡಬೇಕು. ಒಬ್ಬ ಸ್ತೋತ್ರಾದಿಗಳನ್ನು ಮಾಡಿ ಅದರೊಳಕ್ಕೆ ತಾನೇ ಧುಮುಕಬಹುದು. ಇನ್ನೊಬ್ಬನನ್ನು ಯಾರೊ ಕತ್ತು ಹಿಡಿದು ಅದರೊಳಕ್ಕೆ ನೂಕಿಬಿಡಬಹುದು. ಫಲ ಮಾತ್ರ ಇಬ್ಬರಿಗೂ ಒಂದೇ, ಇಬ್ಬರೂ ಅಮರರಾಗಿಬಿಡುತ್ತಾರೆ.
“ಬ್ರಾಹ್ಮಭಕ್ತರಿಗೆ ಸರಿಯಾದ್ದು ನೀರು-ಹಿಮಗಡ್ಡೆಯ ಉಪಮೆ. ಸಚ್ಚಿದಾನಂದ ಅನಂತ ಜಲರಾಶಿ ಇದ್ದ ಹಾಗೆ. ಮಹಾಸಾಗರದ ನೀರು ಶೀತ ಪ್ರದೇಶದಲ್ಲಿ ಅಲ್ಲಲ್ಲಿ ಹಿಮಗಡ್ಡೆಗಳ ರೂಪ ತಾಳುತ್ತದೆ. ಅದೇ ರೀತಿ ಭಕ್ತಿ ಶೈತ್ಯದಿಂದ ಅದೇ ಸಚ್ಚಿದಾನಂದ ಭಕ್ತರಿಗಾಗಿ ಸಾಕಾರ ರೂಪ ತಾಳುತ್ತಾನೆ. ಋಷಿಗಳು ಆ ಅತೀಂದ್ರಿಯ ಚಿನ್ಮಯರೂಪವನ್ನು ದರ್ಶನಮಾಡಿ ಆತನೊಡನೆ ಮಾತುಕತೆ ಆಡಿದ್ದರು. ಭಕ್ತರಿಗೆ ‘ಭಾಗವತೀ-ತನು’ ಉಂಟಾಗಿ, ‘ಪ್ರೇಮ ಶರೀರ’ ಉಂಟಾಗಿ ಅವರಿಗೂ ಅದೇ ಚಿನ್ಮಯರೂಪ ದರ್ಶನವಾಗುತ್ತದೆ.
“ಬ್ರಹ್ಮ ಅವಾಙ್ಮನಸಗೋಚರ ಎಂಬುದಾಗಿ ವೇದಗಳಲ್ಲಿ ಹೇಳಿದೆ. ಜ್ಞಾನ ಸೂರ್ಯನ ತಾಪದಿಂದ ಹಿಮಗಡ್ಡೆಯಂತಹ ಭಗವಂತನ ಸಾಕಾರ ರೂಪ ಕರಗಿಹೋಗುತ್ತದೆ. ಬ್ರಹ್ಮಜ್ಞಾನ ದೊರೆತನಂತರ ಅಂದರೆ, ನಿರ್ವಿಕಲ್ಪಸಮಾಧಿ ದೊರೆತನಂತರ, ಅದರಲ್ಲಿ ಅದೇ ಅನಂತ ವಾಙ್ಮನಾತೀತ ಅರೂಪ ನಿರಾಕಾರಬ್ರಹ್ಮನ ದರ್ಶನ.
“ಪರಬ್ರಹ್ಮನ ಸ್ವರೂಪ ಏನೆಂಬುದಾಗಿ ಬಾಯಲ್ಲಿ ಹೇಳಲಾಗುವುದಿಲ್ಲ. ಅದರ ಸಂಬಂಧವಾಗಿ ಮಾತೇ ಹೊರಡುವ ಹಾಗಿಲ್ಲ. ಅನಂತವನ್ನು ಯಾರು ತಾನೇ ಮಾತಿನಿಂದ ವರ್ಣಿಸಬಲ್ಲರು? ಹಕ್ಕಿ ಎಷ್ಟೇ ಎತ್ತರಕ್ಕೆ ಹಾರಿಹೋದರೂ, ಅದು ಹಾರಿಹೋಗಬೇಕಾದ ಎತ್ತರ ಇನ್ನು ಉಳಿದುಕೊಂಡೇ ಇರುತ್ತದೆ. ನೀವೇನು ಹೇಳುತ್ತೀರಿ?”
ಆಚಾರ್ಯ: “ಹೌದು, ವೇದಾಂತದಲ್ಲಿ ಹೀಗೇ ಹೇಳಿದೆ.”
ಶ್ರೀರಾಮಕೃಷ್ಣರು: “ಒಮ್ಮೆ ಒಂದು ಉಪ್ಪಿನ ಬೊಂಬೆ ಸಾಗರದ ಆಳ ಕಂಡುಹಿಡಿಯಲು ಹೋಗಿತ್ತು. ಆದರೆ ಹಿಂದಿರುಗಿ ಬಂದು ಯಾವ ವರದಿಯನ್ನೂ ಒಪ್ಪಿಸಲಿಲ್ಲ. ಶುಕದೇವ ಸಚ್ಚಿದಾನಂದ ಸಾಗರದ ದರ್ಶನ ಮಾಡಿದನೇ ವಿನಾ ಪುನಃ ಮುಳುಗುಹಾಕಲಿಲ್ಲ ಎಂಬುದಾಗಿ ಕೆಲವರ ಅಭಿಮತ.
“ನಾನು ಒಮ್ಮೆ ವಿದ್ಯಾಸಾಗರನಿಗೆ ಹೇಳಿದೆ: ‘ಎಲ್ಲಾ ವಸ್ತುಗಳೂ ಎಂಜಲಾಗಿಬಿಟ್ಟಿವೆ. ಆದರೆ ಬ್ರಹ್ಮ ಮಾತ್ರ ಉಚ್ಛಿಷ್ಟ ವಸ್ತು ಆಗಿಲ್ಲ.’ ಅಂದರೆ ಬ್ರಹ್ಮ ಏನು ಎಂಬುದನ್ನು ವರ್ಣನೆ ಮಾಡಲು ಯಾರಿಗೂ ಸಾಧ್ಯವಾಗಲಿಲ್ಲ. ಮಾತಿನಿಂದ ಅದನ್ನು ವರ್ಣನೆಮಾಡಲು ಸಾಧ್ಯವಾಯಿತು ಎಂದರೆ ಅದು ಉಚ್ಛಿಷ್ಟವಾಗಿಬಿಡುತ್ತದೆ. ವಿದ್ಯಾಸಾಗರ ದೊಡ್ಡ ಪಂಡಿತನಾದರೂ ನನ್ನ ಮಾತು ಕೇಳಿ ಅವನಿಗೆ ಬಹಳ ಆನಂದವಾಗಿಬಿಟ್ಟಿತು.
“ಕೇದಾರನಾಥದ ಹತ್ತಿರ ಹಿಮಾವೃತ ಬೆಟ್ಟಗಳಿವೆ; ಹೆಚ್ಚು ಎತ್ತರಕ್ಕೆ ಹತ್ತಿದರೆ ಹಿಂದಿರುಗಿ ಬರುವ ಹಾಗಿಲ್ಲ’ ಎಂಬುದಾಗಿ ಕೇಳಿದ್ದೇನೆ. ಇನ್ನೂ ಎತ್ತರದಲ್ಲಿ ಏನೇನಿದೆ, ಅಲ್ಲಿಗೆ ಹೋದರೆ ಏನು ಅನುಭವ ದೊರೆಯುತ್ತದೆ ಎಂಬುದನ್ನು ಅರಿಯಲು ಯಾರಾರು ಪ್ರಯತ್ನಪಟ್ಟರೋ ಅವರು ಯಾರೂ ಅಲ್ಲಿನ ವರದಿ ಒಪ್ಪಿಸಲು ಹಿಂದಿರುಗಿ ಬರಲಿಲ್ಲ.
“ಭಗವಂತನ ದರ್ಶನ ದೊರೆಯಿತು ಎಂದರೆ ಮನುಷ್ಯ ಆನಂದಪರವಶನಾಗಿಬಿಡುತ್ತಾನೆ. ಮೂಕನಾಗಿಬಿಡುತ್ತಾನೆ. ಯಾರು ತಾನೆ ಸುದ್ದಿಸಮಾಚಾರ ಕೊಡಬಲ್ಲರು? ಯಾರುತಾನೆ ವಿವರಿಸಬಲ್ಲರು?
“ರಾಜ ವಾಸಿಸುವುದು ಏಳು ಹೆಬ್ಬಾಗಿಲುಗಳ ಆಚೆ. ಪ್ರತಿಯೊಂದು ಬಾಗಿಲ ಹತ್ತಿರವೂ ಒಬ್ಬ ದೊಡ್ಡ ಐಶ್ವರ್ಯವಂತ ಕುಳಿತಿರುತ್ತಾನೆ. ಪ್ರತಿಯೊಂದು ಬಾಗಿಲ ಹತ್ತಿರವೂ ಶಿಷ್ಯ ಗುರುವನ್ನು ಕೇಳುತ್ತಾನೆ: ‘ರಾಜ ಈತನೇ?’ ಗುರು ಹೇಳುತ್ತಾನೆ: ‘ಅಲ್ಲ, ನೇತಿ, ನೇತಿ.’ ಶಿಷ್ಯ ಏಳನೇ ಬಾಗಿಲ ಹತ್ತಿರ ಹೋದಾಗ, ಆತನ ಕಣ್ಣಿಗೆ ಒಂದು ದೃಶ್ಯ ಬೀಳುವುದು. ಅದನ್ನು ನೋಡಿ ಒಮ್ಮೆಗೇ ದಂಗುಬಡಿದವನಾಗಿ ‘ರಾಜ ಈತನೇ?’ ಎಂಬುದಾಗಿ ಕೇಳಬೇಕಾಗಿಲ್ಲ. ದರ್ಶನಮಾತ್ರದಿಂದಲೇ ಸಮಸ್ತ ಸಂದೇಹಗಳ ನಿವೃತ್ತಿ.”
ಆಚಾರ್ಯ: “ಹೌದು ವೇದಾಂತದಲ್ಲಿ ಹೀಗೇ ಹೇಳಿದೆ.”
ಶ್ರೀರಾಮಕೃಷ್ಣರು: “ಯಾವಾಗ ಭಗವಂತ ಸೃಷ್ಟಿ-ಸ್ಥಿತಿ-ಪ್ರಳಯ ಕಾರ್ಯಗಳನ್ನು ಮಾಡುತ್ತಾನೋ, ಆಗ ಆತನಿಗೇ ಸಗುಣಬ್ರಹ್ಮ ಅಥವಾ ಆದ್ಯಾಶಕ್ತಿ ಅಂತ ಹೆಸರು; ಯಾವಾಗ ಆತನನ್ನು ತ್ರಿಗುಣಾತೀತ ಎಂಬುದಾಗಿ ಭಾವಿಸುತ್ತೇವೆಯೋ, ಆಗ ಆತನಿಗೆ ವಾಙ್ಮನಾತೀತ ನಿರ್ಗುಣಬ್ರಹ್ಮ ಅಂತ ಹೆಸರು-ಪರಬ್ರಹ್ಮ ಅಂತ ಹೆಸರು.
“ಮನುಷ್ಯ ಭಗವಂತನ ಮಾಯೆಯಬಲೆಗೆ ಸಿಕ್ಕಿ ತನ್ನ ಸ್ವರೂಪವನ್ನು ಮರೆತುಕೊಂಡು ಬಿಡುತ್ತಾನೆ. ತಂದೆಯ ಅನಂತ ಐಶ್ವರ್ಯಕ್ಕೆ ತಾನು ಉತ್ತರಾಧಿಕಾರಿ ಎಂಬುದನ್ನು ಮರೆತು ಬಿಡುತ್ತಾನೆ. ಆತನ ಮಾಯೆ ತ್ರಿಗುಣಮಯವಾದ್ದು. ಈ ಮೂರು ಗುಣಗಳೂ ದರೋಡೆಕೋರರೇ; ಸರ್ವಸ್ವವನ್ನೂ ಹರಣಮಾಡಿಬಿಡುತ್ತಾರೆ. ಸ್ವರೂಪವನ್ನು ಮರೆಸಿಬಿಡುತ್ತಾರೆ. ಈ ಮೂರು ಗುಣಗಳಾದ, ಸತ್ತ್ವ, ರಜಸ್ಸು, ತಮಸ್ಸು-ಇವುಗಳಲ್ಲಿ ಕೇವಲ ಸತ್ತ್ವಗುಣ ಮಾತ್ರವೇ ಭಗವಂತನ ಕಡೆಗೆ ಹೋಗುವ ಮಾರ್ಗವನ್ನು ತೋರಿಸಿಕೊಟ್ಟು ಬಿಡುತ್ತದೆ. ಆದರೆ ಸತ್ತ್ವಗುಣವೂ ಮನುಷ್ಯನನ್ನು ಭಗವಂತನ ಸಮೀಪಕ್ಕೆ ಕರೆದುಕೊಂಡು ಹೋಗಿ ಬಿಡಲಾರದು.
“ಒಂದು ಕಥೆ ಹೇಳುತ್ತೇನೆ ಕೇಳಿ. ಒಬ್ಬ ಧನಿಕ ಕಾಡಿನ ಮಾರ್ಗವಾಗಿ ಹೋಗುತ್ತಿದ್ದ. ಇದ್ದಕ್ಕಿದ್ದಹಾಗೆ ಮೂವರು ಡಕಾಯಿತರು ಆತನನ್ನು ಸುತ್ತುಗಟ್ಟಿ ಆತನ ಸರ್ವಸ್ವವನ್ನೂ ಕಸಿದುಕೊಂಡುಬಿಟ್ಟರು. ಆತನ ಹತ್ತಿರ ಇದ್ದುಬದ್ದುದನ್ನೆಲ್ಲಾ ಕಿತ್ತುಕೊಂಡನಂತರ ಒಬ್ಬ ಡಕಾಯಿತ ಕೇಳಿದ : ‘ಇವನನ್ನೇಕೆ ಹಾಗೇ ಬಿಟ್ಟುಹೋಗಬೇಕು?ಕೊಂದುಹಾಕಿಬಿಡೋಣ? ಹೀಗೆಂದು ಹೇಳಿ ಆತನನ್ನು ಕತ್ತರಿಸಿಹಾಕಲು ಮುಂದುವರಿದ. ಎರಡನೆ ಡಕಾಯಿತ ಆತನನ್ನು ತಡೆದು ಹೇಳಿದ: ‘ಇವನನ್ನೇಕೆ ಕೊಂದುಹಾಕಬೇಕು? ಪಾಪ, ಇವನ ಕೈಕಾಲು ಕಟ್ಟಿ ಇಲ್ಲೇ ಬಿಟ್ಟು ಹೋಗೋಣ. ಆಗ ಈತ ಪೋಲೀಸಿನವನಿಗೆ ಹೋಗಿ ಹೇಳಲಾರ.’ ಹೀಗೆಂದು ಅವರು ಹಗ್ಗದಿಂದ ಧನಿಕನ ಕೈಕಾಲು ಕಟ್ಟಿ ಆತನನ್ನು ಅಲ್ಲೇ ಬಿಟ್ಟು ಹೊರಟುಹೋದರು.
“ಸ್ವಲ್ಪ ಹೊತ್ತಾದನಂತರ ಮೂರನೆ ಡಕಾಯಿತ ಧನಿಕನಿದ್ದಲ್ಲಿಗೆ ಹಿಂದಿರುಗಿ ಬಂದು ಹೇಳಿದ: ‘ಅಯ್ಯೋ ಪಾಪ! ನಿನಗೆ ಬಹಳ ಕಷ್ಟವಾಗಿರಬೇಕು, ಅಲ್ಲವೇ? ನಾನು ನಿನ್ನ ಕೈಕಾಲು ಬಿಚ್ಚಿಹಾಕುತ್ತೇನೆ.’ ಹಗ್ಗವನ್ನು ಬಿಚ್ಚಿಹಾಕಿದ. ನಂತರ ಡಕಾಯಿತ ಧನಿಕನನ್ನು ಕಾಡಿನಿಂದ ಹೊರಕ್ಕೆ ಕರೆದುಕೊಂಡು ಬಂದ. ಬಳಿಕ ರಾಜಮಾರ್ಗವನ್ನು ಸಮೀಪಿಸಿ, ಆ ಡಕಾಯಿತ ಧನಿಕನಿಗೆ ಹೇಳಿದ: ‘ಈ ಮಾರ್ಗವಾಗಿಯೇ ನೀನು ಮುಂದುವರಿ, ಯಾವ ತೊಂದರೆಯೂ ಇಲ್ಲದೆ ನಿನ್ನ ಮನೆಯನ್ನು ತಲುಪುತ್ತೀಯೆ.’ ಧನಿಕ ಹೇಳಿದ: “ಆದರೆ ನೀನೂ ನನ್ನೊಡನೆ ಬರಲೇಬೇಕು. ನೀನು ನನಗೆ ಎಷ್ಟು ಉಪಕಾರವನ್ನು ಮಾಡಿದ್ದೀಯೆ ಏನು ಕತೆ! ನೀನು ನಮ್ಮ ಮನೆಗೆ ಬಂದದ್ದೇ ಆದರೆ ನಮಗೆಲ್ಲಾ ಬಹಳ ಆನಂದವಾಗಿಬಿಡುತ್ತದೆ.” ಡಕಾಯಿತ ಹೇಳಿದ: ‘ಇಲ್ಲ, ನಾನು ಅಲ್ಲಿಗೆ ಬರುವ ಹಾಗಿಲ್ಲ. ಪೋಲೀಸಿನವರು ಹಿಡಿದುಕೊಂಡುಬಿಡುತ್ತಾರೆ.’ ಆತ ಹೀಗೆಂದು ಹೇಳಿ ಧನಿಕನಿಗೆ ದಾರಿ ತೋರಿಸಿಬಿಟ್ಟು ಹೊರಟುಹೋದ.
‘ಇವನನ್ನೇಕೆ ಹಾಗೇ ಬಿಟ್ಟುಬಿಡಬೇಕು? ಕೊಂದುಹಾಕಿಬಿಡೋಣ’ ಎಂಬುದಾಗಿ ಹೇಳಿದ ಮೊದಲನೆ ಡಕಾಯಿತ ತಮಸ್ಸಿನ ಉಪಮೆ. ತಮಸ್ಸು ನಾಶಮಾಡುವುದು. ಎರಡನೆಯ ಡಕಾಯಿತ ರಜೋಗುಣಕ್ಕೆ ಉಪಮೆ. ರಜಸ್ಸು ಮನುಷ್ಯನನ್ನು ಸಂಸಾರ ಬಂಧನಕ್ಕೆ ಸಿಲುಕಿಸಿ ವಿವಿಧ ಕಾರ್ಯಗಳಲ್ಲಿ ಆತನನ್ನು ತೊಡಗಿಸುತ್ತದೆ; ಭಗವಂತನನ್ನು ಮರೆಯುವಂತೆ ಮಾಡುತ್ತದೆ. ಕೇವಲ ಸತ್ತ್ವಗುಣ ಮಾತ್ರವೇ ಭಗವಂತನ ಕಡೆಗೆ ಹೋಗುವ ಮಾರ್ಗವನ್ನು ತೋರಿಸಿಕೊಡುತ್ತದೆ. ದಯೆ, ಧರ್ಮ, ಭಕ್ತಿ ಇವೆಲ್ಲಾ ಸತ್ತ್ವಗುಣದಿಂದ ಉಂಟಾಗುತ್ತದೆ. ಸತ್ತ್ವಗುಣ ಮೆಟ್ಟಲ ಸಾಲ ತುತ್ತತುದಿ ಮೆಟ್ಟಲು ಇದ್ದ ಹಾಗೆ. ಅದನ್ನು ಹತ್ತಿದೊಡನೆಯೇ ಚಾವಣಿ. ಮನುಷ್ಯನ ಸ್ವಭಾವವೇ ಪರಬ್ರಹ್ಮ. ಮನುಷ್ಯ ತ್ರಿಗುಣಾತೀತನಾಗದ ಹೊರತು ಆತನಿಗೆ ಬ್ರಹ್ಮಜ್ಞಾನ ದೊರಕದು.”
ಆಚಾರ್ಯ: “ನೀವು ನಮಗೆ ಬಹಳ ಒಳ್ಳೆಯ ವಿಷಯಗಳನ್ನು ತಿಳಿಸಿದಿರಿ.”
ಶ್ರೀರಾಮಕೃಷ್ಣರು ನಗುತ್ತ: “ಭಕ್ತರ ಸ್ವಭಾವ ಏನು ಗೊತ್ತೆ? ಒಬ್ಬ ಭಕ್ತ ಇನ್ನೊಬ್ಬ ಭಕ್ತನನ್ನು ಸಂಧಿಸಿದಾಗ ಹೇಳುತ್ತಾನೆ: ‘ನಾನು ಹೇಳುವುದನ್ನು ನೀನು ಕೇಳು, ನೀನು ಹೇಳುವುದನ್ನು ನಾನು ಕೇಳುತ್ತೇನೆ.’ ನೀವು ಆಚಾರ್ಯಪುರುಷರು. ಎಷ್ಟೊಂದು ಜನಕ್ಕೆ ನೀವು ಶಿಕ್ಷಣ ಕೊಡುತ್ತೀರಿ ಏನು ಕತೆ? ನೀವು ಜಹಜು; ಆದರೆ ನಾವು ಮೀನು ಹಿಡಿಯುವ ದೋಣಿ.” (ಎಲ್ಲರೂ ನಗುತ್ತಿದ್ದಾರೆ.)
೨ನೆ ಮೇ ೧೮೮೩, ಚೈತ್ರ ಕೃಷ್ಣದಶಮಿ, ಬುಧವಾರ
ಪರಮಹಂಸರು ಮಾಸ್ಟರ್, ರಾಖಾಲ ಇವರೇ ಮೊದಲಾದ ಭಕ್ತರೊಡನೆ ಸಾಯಂಕಾಲ ಐದು ಘಂಟೆ ಸಮಯಕ್ಕೆ ನಂದನವನದಲ್ಲಿರುವ ಬ್ರಾಹ್ಮಸಮಾಜ ಮಂದಿರಕ್ಕೆ ಬಂದಿದ್ದಾರೆ. ಅವರನ್ನು ಮೊದಲು ನೆಲ ಅಂತಸ್ತಿನಲ್ಲಿರುವ ಬೈಠಕ್ಖಾನೆಯಲ್ಲಿ ಕೂರಿಸಲಾಯಿತು. ಕ್ರಮೇಣ ಬ್ರಾಹ್ಮಭಕ್ತರು ಅಲ್ಲಿಗೆ ಬಂದು ಕೂರಲಾರಂಭಿಸಿದರು. ರವೀಂದ್ರನಾಥ ಠಾಕೂರರು ಮತ್ತು ಅವರ ಮನೆಗೆ ಸೇರಿದ್ದ ಇನ್ನೂ ಕೆಲವರು ಅಲ್ಲಿಗೆ ಬಂದು ಸೇರಿದರು.
ಈಗ ಪರಮಹಂಸರನ್ನು ಎರಡನೇ ಅಂತಸ್ತಿನಲ್ಲಿದ್ದ ಉಪಾಸನಾಮಂದಿರಕ್ಕೆ ಕರೆದುಕೊಂಡು ಹೋಗಲಾಯಿತು. ವೇದಿಕೆಯನ್ನು ಆ ಮಂದಿರದ ಪೂರ್ವಭಾಗದಲ್ಲಿ ನಿರ್ಮಿಸಿದ್ದಾರೆ. ನೈಋತ್ಯ ಭಾಗದಲ್ಲಿ ಒಂದು ಇಂಗ್ಲೀಷು ವಾದ್ಯ (ಪಿಯಾನೊ) ಇಟ್ಟಿದ್ದಾರೆ. ಉತ್ತರ ಭಾಗದಲ್ಲಿ ಕೆಲವು ಕುರ್ಚಿಗಳನ್ನು ಹಾಕಿದ್ದಾರೆ. ಮುಂಗತ್ತಲೆ ಸಮೀಪಿಸಿದೊಡನೆ ಉಪಾಸನೆ ಆರಂಭವಾಗುತ್ತದೆ.
ಪರಮಹಂಸರು ಉಪಾಸನಾಮಂದಿರವನ್ನು ಪ್ರವೇಶಿಸಿದೊಡನೆಯೆ ವೇದಿಕೆಗೆ ಪ್ರಣಾಮ ಮಾಡಿದರು. ಅವರ ಹತ್ತಿರವೆ ಕುಳಿತುಕೊಂಡನಂತರ ಮಾಸ್ಟರ್, ರಾಖಾಲನೆ ಮೊದಲಾದ ಭಕ್ತರಿಗೆ ಹೇಳುತ್ತಿದ್ದಾರೆ: “ನರೇಂದ್ರ ಒಮ್ಮೆ ನನ್ನನ್ನು ಕೇಳಿದ: ‘ಸಮಾಜ ಮಂದಿರಕ್ಕೆ ಏಕೆ ಕೆಲಸವಿಲ್ಲದೆ ಪ್ರಣಾಮಮಾಡಲು ಹೋಗಬೇಕು?’ ದೇವಾಲಯ ಕಣ್ಣಿಗೆ ಬಿತ್ತು ಎಂದರೆ, ಭಗವಂತನೇ ಜ್ಞಾಪಕಕ್ಕೆ ಬರುತ್ತಾನೆ. ಉದ್ದೀಪನವಾಗುತ್ತದೆ. ಎಲ್ಲಿ ಆತನ ಸಂಬಂಧವಾಗಿ ಮಾತುಕತೆ ನಡೆಯುವುದೊ, ಅಲ್ಲಿ ಆತನ ಆವಿರ್ಭಾವ ಆಗುತ್ತದೆ. ಎಲ್ಲಾ ತೀರ್ಥಗಳ ಪಾವಿತ್ರ್ಯತೆ ಅಲ್ಲಿ ನೆಲೆಗೊಳ್ಳುತ್ತದೆ. ಈ ವಿಧದ ಸ್ಥಳಗಳೆಲ್ಲಾ ಭಗವಂತನನ್ನೇ ಸ್ಮರಣೆಗೆ ತರುತ್ತವೆ.
“ಒಮ್ಮೆ ಒಬ್ಬ ಭಕ್ತ ಜಾಲಿಮರವನ್ನು ಕಂಡೊಡನೆಯೆ ಭಾವಾವಿಷ್ಟನಾಗಿಬಿಟ್ಟ. ರಾಧಾಕಾಂತ ದೇವಾಲಯದಲ್ಲಿ ಉಪಯೋಗಿಸುತ್ತಿರುವ ಕೊಡಲಿ ಕಾವು ಈ ಮರದ್ದೇ ಎಂಬ ಜ್ಞಾಪಕ ಆತನಿಗೆ ಉಂಟಾಗಿಬಿಟ್ಟಿತು. ಇನ್ನೊಬ್ಬ ಭಕ್ತನಿಗೆ ತನ್ನ ಗುರುವಿನ ಮೇಲೆ ಅಂಥ ಶ್ರದ್ಧಾ ಭಕ್ತಿ, ಆತನ ನೆರೆಹೊರೆಯವರು ಯಾರು ಕಣ್ಣಿಗೆ ಬಿದ್ದರೂ ಭಾವಾವಿಷ್ಟನಾಗಿಬಿಡುತ್ತಿದ್ದ. ಮೇಘ ಕಣ್ಣಿಗೆ ಬಿತ್ತು ಎಂದರೆ, ನೀಲಿ ವಸ್ತ್ರ ಕಣ್ಣಿಗೆ ಬಿತ್ತು ಎಂದರೆ, ಕೃಷ್ಣನ ಪಟ ಕಣ್ಣಿಗೆ ಬಿತ್ತು ಎಂದರೆ, ಶ್ರೀಮತಿಗೆ (ರಾಧೆಗೆ) ಕೃಷ್ಣನ ಉದ್ದೀಪನವಾಗುತ್ತಿತ್ತು. ಆಕೆ ಇವನ್ನೆಲ್ಲಾ ನೋಡಿ ಉನ್ಮತ್ತಳಂತೆ, ‘ಎಲ್ಲಿ ಕೃಷ್ಣ?’ ಎಂದು ವ್ಯಾಕುಲಳಾಗಿಬಿಡುತ್ತಿದ್ದಳು.”
ಘೋಷಾಯ: “ಉನ್ಮಾದ ಒಳ್ಳೆಯದಲ್ಲ.”
ಶ್ರೀರಾಮಕೃಷ್ಣರು: “ಏಕೆ ಹಾಗೆ ಭಾವಿಸುತ್ತೀಯೆ? ಇದೇನು ವಿಷಯಚಿಂತನೆಯಿಂದ ಉಂಟಾದ ಉನ್ಮಾದವೆ, ಬುದ್ಧಿ ಕೆಟ್ಟುಹೋಗುವುದಕ್ಕೆ. ಈ ಅವಸ್ಥೆ ಭಗವಚ್ಚಿಂತನೆಯಿಂದ ಉಂಟಾಗುತ್ತದೆ. ಪ್ರೇಮೋನ್ಮಾದ, ಜ್ಞಾನೋನ್ಮಾದ, ಎಂಬುದು ನಿನ್ನ ಕಿವಿಗೆ ಬಿದ್ದೇ ಇಲ್ಲವೇ?”
ಒಬ್ಬ ಬ್ರಾಹ್ಮಭಕ್ತ: “ಏನು ಮಾಡಿದರೆ ಆತನ ಸಾಕ್ಷಾತ್ಕಾರ ಪಡೆದುಕೊಳ್ಳಬಹುದು?”
ಶ್ರೀರಾಮಕೃಷ್ಣರು: “ಭಗವಂತನನ್ನು ಪ್ರೀತಿಸಿದರೆ; ಭಗವಂತನೇ ಸತ್ಯ, ಈ ಜಗತ್ತು ಅನಿತ್ಯ, ಎಂಬ ವಿಚಾರದಲ್ಲಿ ಸದಾ ತೊಡಗಿದ್ದರೆ. ಅಶ್ವತ್ಥ ವೃಕ್ಷವೇ ಸತ್ಯ-ಹಣ್ಣು ಎರಡು ದಿನದ್ದು.”
ಬ್ರಾಹ್ಮಭಕ್ತ: “ಕಾಮಕ್ರೋಧಾದಿ ಅರಿಷಡ್ವರ್ಗಗಳು ನಮ್ಮಲ್ಲಿ ತುಂಬಿವೆ. ಏನು ಮಾಡೋಣ ನಾವು?”
ಶ್ರೀರಾಮಕೃಷ್ಣರು: “ಆ ಅರಿಷಡ್ವರ್ಗಗಳನ್ನು ಭಗವಂತನ ಕಡೆಗೆ ತಿರುಗಿಸಿಬಿಡು. ಆತ್ಮನೊಡನೆ ವಿಲಾಸಿಸಬೇಕೆಂದು ಕಾಮನೆ ಮಾಡಬೇಕು. ಯಾರು ಭಗವಂತನ ಮಾರ್ಗಕ್ಕೆ ತಡೆ ಒಡ್ಡುತ್ತಾರೋ ಅವರ ಮೇಲೆ ಕೋಪಿಸಿಕೊಳ್ಳಬೇಕು. ಆತನ ಸಾಕ್ಷಾತ್ಕಾರಕ್ಕಾಗಿ ಲೋಭ ಪಡಬೇಕು. ‘ನಾನು, ನನ್ನದು’ ಎಂಬುದನ್ನು ಬಿಡಲಾಗದಿದ್ದರೆ ಭಗವಂತನ ಸಂಬಂಧವಾಗಿ ಮಾತ್ರವೇ ಹಾಗೆ ಮಾಡಬೇಕು. ಅಹಂಕಾರ ಪಡಬೇಕಾಗಿದ್ದರೆ ವಿಭೀಷಣನ ಹಾಗೆ ವರ್ತಿಸಬೇಕು. ಆತ ಹೇಳಿದ, ‘ನಾನು ಶ್ರೀರಾಮನಿಗೆ ಸಾಷ್ಟಾಂಗ ಪ್ರಣಾಮ ಮಾಡಿದ್ದೇನೆ. ಈ ತಲೆಯಿಂದ ನಾನು ಬೇರೆ ಯಾರ ಪಾದವನ್ನೂ ಸ್ಪರ್ಶಮಾಡುವುದಿಲ್ಲ.’
ಬ್ರಾಹ್ಮಭಕ್ತ : “ಭಗವಂತನೇ ಎಲ್ಲವನ್ನೂ ನನ್ನ ಕೈಯಿಂದ ಮಾಡಿಸುತ್ತಿರುವುದಾದರೆ, ನಾನು ಪಾಪಕ್ಕೆ ಹೊಣೆಗಾರನಾಗುವುದಿಲ್ಲವಲ್ಲ?”
ಶ್ರೀರಾಮಕೃಷ್ಣರು ನಗುತ್ತ: “ಹೌದು, ದುರ್ಯೋಧನನೂ ಹಾಗೆಯೇ ಹೇಳಿದ. ಆತ ಹೇಳಿದ: ‘ಹೇ ಹೃಷಿಕೇಶ, ನೀನು ನನ್ನ ಹೃದಯದಲ್ಲಿ ಕುಳಿತು ಹೇಗೆ ಪ್ರೇರಿಸುತ್ತಿದ್ದೀಯೋ ಹಾಗೆಯೇ ನಾನು ವರ್ತಿಸುತ್ತಿದ್ದೇನೆ.’ ಭಗವಂತನೇ ಕರ್ತ, ನಾನು ಅಕರ್ತ ಎಂಬ ದೃಢವಿಶ್ವಾಸ ಯಾರಿಗೆ ಇದೆಯೋ ಆತನಿಂದ ಪಾಪಕಾರ್ಯ ಸಾಧ್ಯವಿಲ್ಲ. ಯಾರಿಗೆ ನರ್ತಿಸುವುದು ಚೆನ್ನಾಗಿ ಬರುತ್ತದೊ ಆತ ಎಂದಿಗೂ ತಾಳ ತಪ್ಪಿ ಹೆಜ್ಜೆ ಇಡುವುದಿಲ್ಲ. ಆಂತರ್ಯ ಶುದ್ಧವಾಗದ ಹೊರತು ಭಗವಂತನಿದ್ದಾನೆ ಎಂಬ ಶ್ರದ್ಧೆಯೇ ಉಂಟಾಗದು.”
ಪರಮಹಂಸರು ಉಪಾಸನಾ ಮಂದಿರದಲ್ಲಿ ನೆರೆದಿದ್ದ ಸಭಿಕರ ಕಡೆ ನೋಡಿ ಹೇಳುತ್ತಿದ್ದಾರೆ: “ಆಗಾಗ ಈ ರೀತಿ ಎಲ್ಲರೂ ಕಲೆತು ಭಗವಚ್ಚಿಂತನೆ ಮತ್ತು ಆತನ ನಾಮಗುಣ ಕೀರ್ತನೆ ಮಾಡುವುದು ಬಹಳ ಒಳ್ಳೆಯದು. ಆದರೆ ಪ್ರಾಪಂಚಿಕರ ಭಗವದನುರಾಗ ಬಹಳ ಕ್ಷಣಿಕ. ಕೆಂಪಗೆ ಕಾದ ಬಾಣಲೆ ಮೇಲೆ ಒಂದು ತೊಟ್ಟು ನೀರು ಬಿದ್ದರೆ ಅದು ಇಂಗಿಹೋಗಲು ಎಷ್ಟು ಸಮಯ ಬೇಕೋ ಅಷ್ಟೆ.”
ಇನ್ನೇನು ಉಪಾಸನೆ ಆರಂಭವಾಗಲಿದೆ. ಸಮಾಜ ಮಂದಿರ ಬ್ರಾಹ್ಮಭಕ್ತರಿಂದ ಪೂರ್ಣವಾಗಿ ತುಂಬಿದೆ. ಕೆಲವು ಮಂದಿ ಬ್ರಾಹ್ಮ ಮಹಿಳೆಯರು ಸಂಗೀತ ಪುಸ್ತಕವನ್ನು ಕೈಯಲ್ಲಿ ಹಿಡಿದು ಕುರ್ಚಿಗಳ ಮೇಲೆ ಕುಳಿತಿದ್ದಾರೆ. ಹಾರ್ಮೋನಿಯಂ ಮತ್ತು ಪಿಯಾನೋಗಳೊಡನೆ ಬ್ರಾಹ್ಮಸಮಾಜದ ಹಾಡುಗಳನ್ನು ಹಾಡಲಾರಂಭಿಸಿದರು. ಹಾಡುಗಳನ್ನು ಕೇಳಿ ಪರಮಹಂಸರಿಗೆ ಪರಮಸಂತೋಷವಾಗಿಬಿಟ್ಟಿದೆ. ಪ್ರಾರ್ಥನೆಯಾದ ನಂತರ ಉಪಾಸನೆ ಆರಂಭವಾಯಿತು. ಆಚಾರ್ಯರ ಒಂದು ಗುಂಪು ವೇದಿಕೆಯ ಮೇಲೆ ಕುಳಿತು ವೇದಮಂತ್ರೋಚ್ಚಾರಣೆ ಮಾಡಲಾರಂಭಿಸಿತು.
ಓಂ ಪಿತಾ ನೋಠ್ಸಿ ಪಿತಾ ಬೋಧಿ ॥
ನಮಸ್ತೇಸ್ತು ಮಾ ಮಾ ಹಿಂಸೀಃ ॥ (ಶುಕ್ಲ ಯಜುರ್ವೇದಸಂಹಿತಾ XXXVII, ೨೦)
ಈಗ ಬ್ರಾಹ್ಮಭಕ್ತರು ಒಕ್ಕೊರಳಿನಿಂದ ಆಚಾರ್ಯರೊಡನೆ ಉಚ್ಚರಿಸಲಾರಂಭಿಸಿದರು:
ಓಂ ಸತ್ಯಂ ಜ್ಞಾನಮನಂತಂ ಬ್ರಹ್ಮ ॥ (ತೈತ್ತಿರೀಯ, ೨, ೧)
ಆನಂದರೂಪಮಮೃತಂ ಯದ್ವಿಭಾತಿ ॥ (ಮುಂಡಕ, ೨, ೨, ೭)
ಶಾಂತಂ ಶಿವಮದ್ವೈತಮ್ ॥ (ಮಾಂಡೂಕ್ಯ, ೭)
ಶುದ್ಧಮಪಾಪವಿದ್ಧಮ್ ॥ (ಈಶ, ೮)
ಈಗ ಆಚಾರ್ಯರ ಗುಂಪು ಸ್ತೋತ್ರಪಾಠ ಮಾಡುತ್ತಿದೆ:
ಓಂ ನಮಸ್ತೇ ಸತೇ ಜಗತ್ಕಾರಣಾಯ ॥
ನಮಸ್ತೇ ಚಿತೇ ಸರ್ವಲೋಕಾಶ್ರಯಾಯ….
ಸ್ತೋತ್ರಪಾಠದ ನಂತರ ಆಚಾರ್ಯರ ಗುಂಪು ಪ್ರಾರ್ಥನೆಮಾಡಲಾರಂಭಿಸಿತು:
ಅಸತೋ ಮಾ ಸದ್ಗಮಯ ॥
ತಮಸೋ ಮಾ ಜ್ಯೋತಿರ್ಗಮಯ ॥
ಈ ಸ್ತೋತ್ರಾದಿ ಪಾಠಗಳನ್ನು ಕೇಳಿ ಪರಮಹಂಸರು ಭಾವಾವಿಷ್ಟರಾಗುತ್ತಿದ್ದಾರೆ. ಈಗ ಆ ಆಚಾರ್ಯರ ಗುಂಪಿನಲ್ಲೊಬ್ಬ ಪ್ರಬಂಧ ಓದುತ್ತಿದ್ದಾನೆ.
ಉಪಾಸನೆ ಮುಗಿಯಿತು. ಭಕ್ತರಲ್ಲಿ ಅನೇಕರು ವಾಯುಸೇವನೆಗಾಗಿ ನೆಲ ಅಂತಸ್ತಿಗೋ ಅಥವಾ ಪ್ರಾಂಗಣಕ್ಕೋ ಹೋದರು. ರಾತ್ರಿಯ ಉಪಾಹಾರದ ವ್ಯವಸ್ಥೆ ನಡೆಯುತ್ತಿದೆ. ಆಗಲೇ ರಾತ್ರಿ ಒಂಬತ್ತು ಆಗಿಬಿಟ್ಟಿದೆ. ಪರಮಹಂಸರು ಹಿಂದಿರುಗಿ ದಕ್ಷಿಣೇಶ್ವರಕ್ಕೆ ಹೋಗಬೇಕಾಗಿದೆ. ಆತಿಥೇಯರು ಉಳಿದ ಅತಿಥಿಗಳೊಡನೆ ಅಷ್ಟೊಂದು ನಿರತರಾಗಿಬಿಟ್ಟಿದ್ದಾರೆ, ಅವರು ಪರಮಹಂಸರನ್ನು ಮರೆತೇಬಿಟ್ಟಿದ್ದಾರೆ.
ಶ್ರೀರಾಮಕೃಷ್ಣರು ರಾಖಾಲನೇ ಮೊದಲಾದವರಿಗೆ: “ಏನು ಸಮಾಚಾರ? ನಮ್ಮನ್ನು ಕೇಳುವವರೇ ಇಲ್ಲವಲ್ಲ!”
ರಾಖಾಲ ಕೋಪದಿಂದ: “ಮಹಾಶಯರೇ, ಬನ್ನಿ, ದಕ್ಷಿಣೇಶ್ವರಕ್ಕೆ ಹೊರಟು ಹೋಗೋಣ.”
ಶ್ರೀರಾಮಕೃಷ್ಣರು ನಗುತ್ತ: “ಸುಮ್ಮನೆ ಕುಳಿತುಕೊ! ಗಾಡಿ ಬಾಡಿಗೆ ಮೂರು ರೂಪಾಯಿ ಎರಡು ಆಣೆ. ಅದನ್ನಾರು ಕೊಡುತ್ತಾರೆ? ಸುಮ್ಮನೆ ಕೋಪಗೊಂಡರೆ ಆಗುತ್ತದೆಯೇ? ಕೈಯಲ್ಲಿ ಒಂದು ಕಾಸಿಲ್ಲ, ಜಳ್ಳು ಬೆದರಿಕೆ ತೋರಿಸುವುದು! ಜೊತೆಗೆ ಇಷ್ಟು ರಾತ್ರಿಯಲ್ಲಿ ಊಟಕ್ಕೆ ಎಲ್ಲಿಗೆ ಹೋಗುವುದು?”
ಎಷ್ಟೋ ಹೊತ್ತಾದ ಮೇಲೆ ಎಲೆ ಹಾಕಾಗಿದೆ ಎಂಬ ಸುದ್ದಿ ಬಂತು. ಊಟಕ್ಕೆ ಎಲ್ಲರನ್ನೂ ಒಟ್ಟಿಗೆ ಏಳಿಸಿಬಿಟ್ಟರು. ಆ ನೂಕುನುಗ್ಗಲಿನಲ್ಲಿ ಪರಮಹಂಸರು ರಾಖಾಲನೇ ಮೊದಲಾದವರೊಡನೆ ಮುಂದುವರಿದು ಎರಡನೇ ಅಂತಸ್ತಿಗೆ ಬಂದರು. ಅಂಗಳ ಆಗಲೇ ಜನರಿಂದ ಭರ್ತಿಯಾಗಿಬಿಟ್ಟಿತ್ತು. ಪರಮಹಂಸರಿಗೆ ಜಾಗವೇ ದೊರೆಯಲಿಲ್ಲ. ಬಹಳ ಪ್ರಯಾಸಪಟ್ಟು ಪರಮಹಂಸರಿಗೆ ಯಾವುದೋ ಒಂದು ಮೂಲೆಯಲ್ಲಿ ಸ್ವಲ್ಪ ಸ್ಥಳ ಮಾಡಿದ್ದಾಯಿತು. ಆ ಸ್ಥಳದಲ್ಲಿ ಧೂಳು ತುಂಬಿತ್ತು. ಒಬ್ಬ ಬ್ರಾಹ್ಮಣ ಹೆಂಗಸು ಪಲ್ಯ ಬಡಿಸಿದಳು. ಪರಮಹಂಸರ ಕೈಯಲ್ಲಿ ಅದನ್ನು ತಿನ್ನಲಾಗಲಿಲ್ಲ. ಅವರು ಉಪ್ಪು ಅದ್ದಿಕೊಂಡೇ ಪೂರಿ ತಿಂದರು ಮತ್ತು ಸ್ವಲ್ಪ ಸಿಹಿ ತಿಂಡಿಯನ್ನು ತಿಂದರು.
ಪರಮಹಂಸರು ದಯಾಸಿಂಧು. ಆತಿಥೇಯರಿಗೆ ಇನ್ನೂ ಎಳೇ ವಯಸ್ಸು; ಆದ್ದರಿಂದ ಅವರ ಮೇಲೆ ಹೇಗೆ ತಾನೇ ಕೋಪಿಸಿಕೊಂಡಾರು? ಅವರು ಉಪಾಹಾರ ತೆಗೆದುಕೊಳ್ಳದೆ ಹೊರಟುಹೋಗಿಬಿಟ್ಟಿದ್ದರೆ ಆತಿಥೇಯರ ಕುಟುಂಬಕ್ಕೆ ಅಮಂಗಳ ಉಂಟಾಗಿಬಿಡುತ್ತಿತ್ತು. ಭಗವಂತನ ಪ್ರೀತ್ಯರ್ಥವಾಗಿ ಈ ಉತ್ಸವವನ್ನು ಏರ್ಪಡಿಸಿದ್ದರಿಂದ ಏನೇ ಲೋಪದೋಷವಿದ್ದರೂ ಮನ್ನಿಸಬೇಕಾದದ್ದೆ.
ಉಪಾಹಾರವಾದನಂತರ ಪರಮಹಂಸರು ಗಾಡಿಗೆ ಹತ್ತಿದರು. ಆದರೆ ಗಾಡಿ ಬಾಡಿಗೆ? ಆತಿಥೇಯ ಎಲ್ಲಿ ಹುಡುಕಿದರೂ ಕಣ್ಣಿಗೆ ಬೀಳುತ್ತಿಲ್ಲ. ಇದರ ಸಂಬಂಧವಾಗಿ ಒಂದು ದಿನ ಪರಮಹಂಸರು ಭಕ್ತರಿಗೆ ನಗುನಗುತ್ತ ಹೇಳಿದರು: “ನಮ್ಮ ಹುಡುಗರು ಆತಿಥೇಯನನ್ನು ಹೇಗೋ ಪತ್ತೆಮಾಡಿ ಆತನನ್ನು ಗಾಡಿ ಬಾಡಿಗೆ ಕೇಳಿದರು. ಮೊದಲು ಅವನು ಕೊಡದೆಹೋದ. ಆದರೆ ಹುಡುಗರು ಕೊನೆಗೆ ಹೇಗೋ ಮಾಡಿ ಅವನಿಂದ ಮೂರು ರೂಪಾಯಿ ವಸೂಲಿಮಾಡಿದರು. ಉಳಿದ ಎರಡಾಣೆಯನ್ನು ಕೊಡದೆ ಹೋದ. ಆತ ಹೇಳಿದ: ‘ಕೊಡುವುದಿಲ್ಲ. ಹೋಗಿ, ಇಷ್ಟೇ ಸಾಕು.’
೧೩ನೆ ಮೇ ೧೮೮೩, ವೈಶಾಖ ಶುಕ್ಲ ಸಪ್ತಮಿ, ಭಾನುವಾರ
ಶ್ರೀರಾಮಕೃಷ್ಣರು ಕಲ್ಕತ್ತದಲ್ಲಿ ಕಾಂಸಾರಿಪಾರದ ಹರಿಭಕ್ತಿಪ್ರದಾಯಿನಿ ಸಭೆಗೆ ಬಂದಿದ್ದಾರೆ. ಇಂದು ಈ ಸಭೆಯ ವಾರ್ಷಿಕೋತ್ಸವ. ಶ್ರೀಕೃಷ್ಣ ಬೃಂದಾವನದಲ್ಲಿ ನಡೆಸಿದ ಲೀಲೆಯ ಸಂಬಂಧವಾಗಿ ಸುಶ್ರಾವ್ಯವಾದ ಕೀರ್ತನೆ ಆರಂಭವಾಯಿತು. ಶ್ರೀಕೃಷ್ಣ ಚಂದ್ರಾವಳಿಯ ಮನೆಗೆ ಹೋದುದಕ್ಕಾಗಿ ಶ್ರೀಮತಿಗೆ (ರಾಧೆಗೆ) ಯಾವ ರೀತಿಯಾಗಿ ಮುನಿಸು ಬಂದುಬಿಟ್ಟಿತು ಎಂಬುದರ ಸಂಬಂಧವಾಗಿ ಈಗ ಕೀರ್ತನೆ ನಡೆಯುತ್ತಿದೆ. ರಾಧೆಯ ಸಖಿಯರು ಆಕೆಯನ್ನು ಸಮಾಧಾನಗೊಳಿಸಲೋಸುಗ ಆಕೆಗೆ ಹೇಳುತ್ತಿದ್ದಾರೆ: “ಶ್ರೀಮತಿ, ಏಕೆ ಮುನಿಸಿಕೊಂಡಿದ್ದೀಯೆ? ನೀನು ಶ್ರೀಕೃಷ್ಣನ ಸುಖಕ್ಕಾಗಿ ಹಾತೊರೆಯದೆ, ನಿನ್ನ ಸುಖಕ್ಕಾಗಿಯೇ ಹಾತೊರೆಯುತ್ತಿರುವಂತೆ ಕಾಣುತ್ತದೆಯಲ್ಲ.” ಶ್ರೀಮತಿ ಹೇಳುತ್ತಾಳೆ: “ಆತ ಚಂದ್ರಾವಳಿಯ ಮನೆಗೆ ಹೋದುದಕ್ಕಾಗಿ ನನಗೆ ಸಿಟ್ಟು ಬಂದಿಲ್ಲ. ಎಲ್ಲಾ ಬಿಟ್ಟು ಅಲ್ಲಿಗೆ ಏಕೆ ಹೋಗಬೇಕು? ಆಕೆಗೆ ಹೇಗೆ ಸೇವೆ ಮಾಡಬೇಕು ಎಂಬುದು ಗೊತ್ತಿಲ್ಲ.”
೨೦ನೆ ಮೇ ೧೮೮೩, ವೈಶಾಖ ಶುಕ್ಲ ಚತುರ್ದಶಿ, ಭಾನುವಾರ
ಇಂದು ರಾಮಚಂದ್ರನ ಮನೆಯಲ್ಲಿ ಕೀರ್ತನೆ ನಡೆಯುತ್ತಿದೆ. ಪರಮಹಂಸರು ಅಲ್ಲಿಗೆ ಬಂದಿದ್ದಾರೆ. ಗಾಯಕ ವರ್ಣಿಸುತ್ತಿದ್ದಾನೆ, ಶ್ರೀಮತಿಯು ಶ್ರೀಕೃಷ್ಣನ ವಿರಹದಿಂದ ಯಾವ ರೀತಿಯಾಗಿ ದುಃಖಕ್ಕೆ ಈಡಾಗಿದ್ದಾಳೆ ಎಂಬುದನ್ನು:
ರಾಧೆ ತನ್ನ ಸಖಿಯರಿಗೆ ಹೇಳುತ್ತಿದ್ದಾಳೆ: “ನನ್ನ ಬಾಲ್ಯಾವಸ್ಥೆಯಿಂದಲೇ ಶ್ರೀಕೃಷ್ಣನ ದರ್ಶನ ಮಾಡಬೇಕೆಂದು ಬಹಳ ಕಾತರಳಾಗಿದ್ದೆ. ಶ್ರೀಕೃಷ್ಣನನ್ನು ಎಂದಿಗೆ ನೋಡೇನು ಎಂದು ದಿನಗಳನ್ನು ಎಣಿಸಿ ಎಣಿಸಿ ಬೆರಳ ಉಗುರು ಸವೆದುಹೋಗಿದೆ. ನೋಡಿ, ಒಮ್ಮೆ ಆತ ನನಗೆ ಹೂವಿನ ಹಾರ ಕೊಟ್ಟ. ಅದು ಒಣಗಿಹೋಗಿಬಿಟ್ಟಿದೆ. ಆದರೂ ನಾನು ಅದನ್ನು ಬಿಸಾಡಲಿಲ್ಲ. ಕೃಷ್ಣನೆಂಬ ಚಂದ್ರ ಎಲ್ಲಿ ಉದಯಿಸಿದ್ದಾನೆ? ನನ್ನ ಅಭಿಮಾನವೆಂಬ ರಾಹುವಿಗೆ ಹೆದರಿ ನನ್ನ ಹೃದಯಾಕಾಶವನ್ನು ಬಿಟ್ಟು ಹೊರಟುಹೋಗಿದ್ದಾನೆಯೇ? ಅಯ್ಯೋ! ಆತನ ದರ್ಶನಮಾಡುವ ಸುಯೋಗ ಮತ್ತೊಮ್ಮೆ ದೊರಕುತ್ತದೆಯೇ? ಹೇ ಪ್ರಾಣವಲ್ಲಭ ಕೃಷ್ಣ, ನನ್ನ ಹೃದಯ ತಣಿದು ತೃಪ್ತಿಯಾಗುವಂತೆ ನಿನ್ನನ್ನು ನಾನು ಎಂದೂ ದರ್ಶನಮಾಡಲಾಗಲಿಲ್ಲವಲ್ಲ! ನನಗಿರುವುದು ಒಂದೇ ಒಂದು ಜೊತೆ ಕಣ್ಣು; ಅವೂ ರೆಪ್ಪೆ ಹೊಡೆಯುವುದರಿಂದ ನನಗೆ ನಿನ್ನ ಅನಿಮಿಷ ದರ್ಶನ ದೊರೆಯುತ್ತಿಲ್ಲ. ಸಾಲದುದಕ್ಕೆ ಪ್ರೇಮಾಶ್ರುವೂ ಧಾರಾಕಾರವಾಗಿ ಸುರಿಯುವುದರಿಂದ ನನ್ನ ಪ್ರಾಣವಲ್ಲಭನ ದರ್ಶನ ನನಗೆ ಸಾಕೆನಿಸುವಷ್ಟು ದೊರೆಯುತ್ತಿಲ್ಲ” ಆತನ ತಲೆಯ ಮೇಲಿರುವ ನವಿಲು ಗರಿ, ಸ್ಥಿರ ಮಿಂಚಿನಂತಿದೆ. ನವಿಲುಗಳು ಶ್ರೀಕೃಷ್ಣನ ನೀಲಮೇಘಸದೃಶ ರೂಪವನ್ನು ಕಂಡು ಪುಕ್ಕ ಕೆದರಿ ಆನಂದದಿಂದ ನರ್ತಿಸುತ್ತಿದ್ದುವು. ಸಖಿಯರಾ, ಇನ್ನು ಈ ಪ್ರಾಣವನ್ನು ಉಳಿಸಿಕೊಂಡಿರಲಾರೆ. ನಾನು ಸತ್ತನಂತರ ಈ ದೇಹವನ್ನು ತೆಗೆದುಕೊಂಡು ಹೋಗಿ ತಮಾಲ ವೃಕ್ಷದ ಕೊಂಬೆಗೆ ಕಟ್ಟಿಬಿಡಿ; ಈ ದೇಹದ ಮೇಲೆ ಶ್ರೀಕೃಷ್ಣನಾಮ ಬರೆದುಬಿಡಿ.”
ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ಭಗವಂತನಿಗೂ ಆತನ ಹೆಸರಿಗೂ ಅಭೇದ. ಅದಕ್ಕಾಗಿಯೇ ರಾಧೆ ಹಾಗೆ ಹೇಳಿದಳು. ರಾಮನಿಗೂ ಆತನ ಹೆಸರಿಗೂ ಏನೂ ಭೇದವಿಲ್ಲ.”
ಮೇ ೨೭, ೧೮೮೩
ಶ್ರೀರಾಮಕೃಷ್ಣರು ದಕ್ಷಿಣೇಶ್ವರದ ತಮ್ಮ ಕೊಠಡಿಯಲ್ಲಿ ಭಕ್ತರೊಡನೆ ಮಾತುಕತೆಯಾಡುತ್ತಿದ್ದಾರೆ. ಘಂಟೆ ಬೆಳಗಿನ ಒಂಬತ್ತು.
ಶ್ರೀರಾಮಕೃಷ್ಣರು ಮಾಸ್ಟರಿಗೆ ಮತ್ತು ಉಳಿದ ಭಕ್ತರಿಗೆ: “ವಿದ್ವೇಷಭಾವ ಒಳ್ಳೆಯದಲ್ಲ. ಶಾಕ್ತರು, ವೈಷ್ಣವರು, ವೇದಾಂತಿಗಳು ಪರಸ್ಪರ ಜಗಳ ಕಾಯುತ್ತಾರೆ. ಅದು ಒಳ್ಳೆಯದಲ್ಲ. ಪದ್ಮಲೋಚನ, ವರ್ಧಮಾನ ರಾಜನ ಆಸ್ಥಾನಪಂಡಿತನಾಗಿದ್ದ. ಒಂದು ದಿನ ಸಭೆಯಲ್ಲಿ ವಿಚಾರ ಆರಂಭವಾಯಿತು, ಶಿವ ದೊಡ್ಡವನೋ ಬ್ರಹ್ಮ ದೊಡ್ಡವನೋ ಎಂದು. ಪದ್ಮಲೋಚನ ಒಳ್ಳೇ ಸೂಕ್ತವಾದ ಉತ್ತರ ಕೊಟ್ಟ. ಆತ ಹೇಳಿದ: “ಇದರ ಸಂಬಂಧವಾಗಿ ನನಗೆ ಏನೂ ಗೊತ್ತಿಲ್ಲ. ನನಗೆ ಶಿವನ ಪರಿಚಯವೂ ಆಗಿಲ್ಲ, ಬ್ರಹ್ಮನ ಪರಿಚಯವೂ ಆಗಿಲ್ಲ. (ಎಲ್ಲರೂ ನಗುತ್ತಿದ್ದಾರೆ)”
“ವ್ಯಾಕುಲತೆ ಇತ್ತು ಎಂದರೆ ಎಲ್ಲಾ ಮಾರ್ಗದಿಂದಲೂ ಭಗವಂತನ ಸಾಕ್ಷಾತ್ಕಾರ ಪಡೆಯಬಹುದು. ಆದರೆ ನಿಷ್ಠೆ ಬೇಕು. ನಿಷ್ಠಾಭಕ್ತಿಯ ಇನ್ನೊಂದು ಹೆಸರು ಅವ್ಯಭಿಚಾರ ಭಕ್ತಿ. ಇದು ಒಂದೇ ಬುಡವಿರುವ ಮರ ನೇರವಾಗಿ ಮೇಲಕ್ಕೆ ಬೆಳೆದುಹೋದ ಹಾಗೆ. ವ್ಯಭಿಚಾರ ಭಕ್ತಿ ಬುಡದಿಂದಲೇ ನಾಲ್ಕೈದು ಕವಲಿರುವ ಹಾಗೆ. ಗೋಪಿಯರ ನಿಷ್ಠೆ ಅಂಥದು; ಅವರು ಹಳದಿ ಹೂವಿನ ಮಾಲೆ ಹಾಕಿಕೊಂಡಿದ್ದ, ಪೀತಾಂಬರಧಾರಿಯಾಗಿದ್ದ, ನವಿಲು ಗರಿಯ ಕಿರೀಟ ಇಟ್ಟುಕೊಂಡಿದ್ದ, ಗೋವಳ ಕೃಷ್ಣನನ್ನು ಹೊರತು ಬೇರೆ ಯಾರನ್ನೂ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಮಥುರೆಯಲ್ಲಿ ರಾಜವೇಷಭೂಷಣದಲ್ಲಿದ್ದ, ತಲೆಗೆ ರುಮಾಲು ಸುತ್ತಿದ್ದ ಕೃಷ್ಣನನ್ನು ಕಂಡೊಡನೆಯೇ ಗೋಪಿಯರು ತಮ್ಮ ಮುಖಕ್ಕೆ ಸೆರಗು ಎಳೆದುಕೊಂಡರು. ಅವರು ತಮ್ಮೊಳಗೇ ಮಾತಾಡಿಕೊಂಡರು: ‘ಇವನಾರಪ್ಪ ಇವನು? ಇವನೊಡನೆ ಮಾತುಕತೆಯಾಡಿ ನಾವು ಶ್ರೀಕೃಷ್ಣನಲ್ಲಿಟ್ಟಿರುವ ಏಕನಿಷ್ಠಾ ಪ್ರೀತಿಯನ್ನು ಕಳೆದುಕೊಳ್ಳೋಣವೇ?’
“ಸತಿ ಪತಿಯ ಮೇಲಿಟ್ಟಿರುವ ಪ್ರೀತಿಯು ನಿಷ್ಠಾಭಕ್ತಿಯ ನಿದರ್ಶನ. ಆಕೆ ತನ್ನ ಮೈದುನಂದಿರ ಊಟೋಪಚಾರ ಮೊದಲಾದುವುಗಳ ಕಡೆಗೂ ಗಮನವೀಯುತ್ತಾಳೆ. ಆದರೆ ತನ್ನ ಪತಿಯೊಡನೆ ವಿಶೇಷ ಸಂಬಂಧವಿಟ್ಟುಕೊಂಡಿದ್ದಾಳೆ. ಅದೇ ರೀತಿಯಾಗಿ ಯಾರು ಬೇಕಾದರೂ ತಮ್ಮ ಸ್ವಧರ್ಮದಲ್ಲಿ ನಿಷ್ಠಾವಂತರಾಗಿರಬಹುದು; ಹಾಗೆಂದು ಅನ್ಯಧರ್ಮಗಳನ್ನು ದ್ವೇಷಿಸಕೂಡದು. ಅದಕ್ಕೆ ಬದಲು ಅವುಗಳ ಕಡೆಗೆ ಆದರ ತೋರಿಸಬೇಕು.”
ಪರಮಹಂಸರು ಗಂಗಾಸ್ನಾನ ಮಾಡಿ ಕಾಳೀದೇವಾಲಯಕ್ಕೆ ಬಂದಿದ್ದಾರೆ. ಅರ್ಚಕನ ಆಸನದ ಮೇಲೆ ಕುಳಿತು ಭಗವತಿಯ ಪಾದಗಳಿಗೆ ಹೂವು ಅರ್ಪಿಸಿದರು. ಆಗಾಗ ತಮ್ಮ ತಲೆಯ ಮೇಲೂ ಇಟ್ಟುಕೊಳ್ಳುತ್ತ ಧ್ಯಾನದಲ್ಲಿ ಮಗ್ನರಾಗಿದ್ದಾರೆ.
ಬಹಳ ಹೊತ್ತಾದ ಮೇಲೆ ಮೇಲಕ್ಕೆ ಎದ್ದರು. ಈಗ ಭಾವದಿಂದ ತುಂಬಿ ತುಳುಕಾಡುತ್ತ ಭಗವತಿಯ ನಾಮೋಚ್ಚಾರಣೆ ಮಾಡುತ್ತ ನರ್ತಿಸುತ್ತಿದ್ದಾರೆ. ಮತ್ತೆ ಮತ್ತೆ ಹೇಳುತ್ತಿದ್ದಾರೆ: “ಹೇ ಭಗವತಿ! ಹೇ ವಿಪನ್ನಾಶಿನೀ! ಹೇ ದುಃಖದುರಿತನಿವಾರಣೀ!” ದೇಹಧಾರಣೆ ಮಾಡಿದ್ದೇ ಆದರೆ, ವಿಪತ್ತು ದುಃಖ ಇವುಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಬಹುಶಃ ಅವುಗಳಿಂದ ಪಾರಾಗಲು ಭಗವತಿಯನ್ನು “ವಿಪನ್ನಾಶಿನೀ” ಎಂಬ ಮಹಾಮಂತ್ರದಿಂದ ಸಂಬೋಧಿಸಿ ಆಕೆಯನ್ನು ವ್ಯಾಕುಲತೆಯಿಂದ ಕರೆಯಬೇಕು ಎಂಬುದಾಗಿ ಸೂಚಿಸುತ್ತಿದ್ದಾರೇನು?
ಪರಮಹಂಸರು ತಮ್ಮ ಕೊಠಡಿಯ ಪಶ್ಚಿಮ ವರಾಂಡದಲ್ಲಿ ಕುಳಿತಿದ್ದಾರೆ. ಕಳೆದ ಇಪ್ಪತ್ತಮೂರು ಇಪ್ಪತ್ತನಾಲ್ಕು ವರ್ಷಗಳಿಂದಲೂ ಪರಮಹಂಸರಿಗೆ ನಕುರ ಗೊತ್ತಿದ್ದಾನೆ. ಆತ ಗೌರಾಂಗನ ಭಕ್ತ. ಆತನಿಗೊಂದು ಚಿಕ್ಕ ಅಂಗಡಿ ಇದೆ. ಪರಮಹಂಸರು ಮೊದಮೊದಲು ಕಲ್ಕತ್ತಕ್ಕೆ ಬಂದಾಗ ಆತನ ಅಂಗಡಿಗೆ ಆಗಾಗ ಹೋಗುತ್ತಿದ್ದರು.
ಇನ್ನೂ ಭಾವಾವಿಷ್ಟರಾಗಿಯೇ ಪರಮಹಂಸರು ಹಾಡುತ್ತಿದ್ದಾರೆ:
ಸದಾನಂದಮಯಿ ಕಾಳೀ
ಪರಶಿವ ಮನಮೋಹಿನೀ!…..
ಮತ್ತೆ ಹಾಡುತ್ತಿದ್ದಾರೆ :
ನೀನೆ ತಾರಕ ಶಕ್ತಿ ಓ ನನ್ನ ಜಗದಂಬ
ತ್ರಿಗುಣಾಧಾರ ಪರಾತ್ಪರಾ!….
ಪರಮಹಂಸರು ಭಗವತಿಯ ಸಂಬಂಧವಾಗಿ ಇನ್ನೂ ಕೆಲವು ಹಾಡುಗಳನ್ನು ಹಾಡಿದರು. ಈಗ ಭಕ್ತರಿಗೆ ಹೇಳುತ್ತಿದ್ದಾರೆ: “ಸಂಸಾರಿಗಳೆದುರಿಗೆ ಕೇವಲ ಈ ಜೀವನದ ದುಃಖದ ವಿಷಯವಾಗಿಯೇ ಮಾತನಾಡುವುದು ಒಳ್ಳೆಯದಲ್ಲ. ಅವರಿಗೆ ಆನಂದ ಬೇಕಾಗಿದೆ. ಅನ್ನದ ಅಭಾವವಿರತಕ್ಕವರೇನೋ ವಿಧಿಯಿಲ್ಲದೆ ಒಂದೆರಡು ದಿನ ಉಪವಾಸ ಮಾಡಿದರೂ ಮಾಡಬಲ್ಲರು. ಆದರೆ ಯಾರು ಆಹಾರ ಒಂದೆರಡು ನಿಮಿಷ ತಡವಾಗಿಬಿಟ್ಟರೆ ಬಹಳ ಸಂಕಟಕ್ಕೊಳಗಾಗಿಬಿಡುತ್ತಾರೋ ಅವರ ಮುಂದೆ ಈ ಜೀವನದ ದುಃಖಕಷ್ಟಗಳ ಸಂಬಂಧವಾಗಿ ಮಾತಾಡುವುದು ಒಳ್ಳೆಯದಲ್ಲ. ವೈಷ್ಣವಚರಣ ಹೇಳುತ್ತಿದ್ದ: ‘ಏಕೆ, ಯಾವಾಗ ನೋಡಿದರೂ “ಪಾಪ! ಪಾಪ!” ಅಂತಿರುವುದು? ಆನಂದಪಡಿ!”
ಪರಮಹಂಸರು ಊಟವಾದನಂತರ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಹಾಗೆಯೇ ಮನೋಹರ ಗೋಸ್ವಾಮಿ ಕೊಠಡಿಯನ್ನು ಪ್ರವೇಶಿಸಿದ. ಆತ ಒಬ್ಬ ಕೀರ್ತನಕಾರ. ಆತ ಗೌರಾಂಗನ ಸಂಬಂಧವಾಗಿ ಮತ್ತು ಶ್ರೀಕೃಷ್ಣನ ಬೃಂದಾವನ ಲೀಲೆಯ ಸಂಬಂಧವಾಗಿಯೂ ಹಾಡಿದ. ಕೀರ್ತನೆ ಕೇಳುತ್ತ ಕೇಳುತ್ತ ಪರಮಹಂಸರು ಭಾವಾವಿಷ್ಟರಾಗಿಬಿಟ್ಟರು. ಅವರು ತಮ್ಮ ಶರಟನ್ನು ಹರಿದುಹಾಕಿಬಿಟ್ಟು ರಾಧೆಯ ಭಾವ ಆರೋಪಿಸಿಕೊಂಡು ಹೇಳುತ್ತಿದ್ದಾರೆ: “ಹೇ ಕೃಷ್ಣ, ಪ್ರಾಣನಾಥ! ಹೃದಯವಲ್ಲಭ! ಗೆಳತಿಯರಾ, ಕೃಷ್ಣನನ್ನು ಕರೆದುಕೊಂಡು ಬಂದು ನನ್ನ ಕೈಗೆ ಕೊಡಿ. ಆಗ ನೀವು ನನ್ನ ನಿಜವಾದ ಗೆಳತಿಯರಾಗುತ್ತೀರಿ. ಇಲ್ಲದಿದ್ದರೆ ನನ್ನನ್ನೇ ಅಲ್ಲಿಗೆ ಕರೆದುಕೊಂಡು ಹೋಗಿಬಿಡಿ. ಬಳಿಕ ನಾನು ನಿಮ್ಮ ಚಿರದಾಸಿಯಾಗಿಬಿಡುತ್ತೇನೆ.”
ಪರಮಹಂಸರ ಭಾವಾವಸ್ಥೆಯನ್ನು ನೋಡಿ ಗೋಸ್ವಾಮಿ ಆಶ್ಚರ್ಯಚಕಿತನಾಗಿ ಬಿಟ್ಟಿದ್ದಾನೆ. ಆತ ಕೈಮುಗಿದುಕೊಂಡು ಹೇಳುತ್ತಿದ್ದಾನೆ: “ದಯವಿಟ್ಟು ನನ್ನ ವಿಷಯಬುದ್ಧಿಯನ್ನು ನಿರ್ಮೂಲಮಾಡಿಬಿಡಿ.”
ಶ್ರೀರಾಮಕೃಷ್ಣರು: “ನೀನು ಮೊದಲು ಛತ್ರದಲ್ಲಿ ಸಾಮಾನು ಇಟ್ಟು ಬಳಿಕ ಪಟ್ಟಣ ನೋಡುತ್ತಿರುವ ಸಾಧುವಿನ ಹಾಗಿದ್ದೀಯೆ. ನೀನು ಒಳ್ಳೆ ದೊಡ್ಡ ರಸಿಕ. ನಿನ್ನಲ್ಲಿ ಬಹಳ ಒಳ್ಳೇ ಭಾವನೆಗಳಿವೆ.”
ಗೋಸ್ವಾಮಿ: “ನಾನು ಕೇವಲ ಸಕ್ಕರೆಮೂಟೆ ಹೊತ್ತುಕೊಂಡು ಹೋಗುತ್ತಿರುವ ಎತ್ತಿನ ಹಾಗೆ. ಸಕ್ಕರೆ ರುಚಿ ನೋಡುವ ಸೌಭಾಗ್ಯ ಎಲ್ಲಿ ದೊರೆತಿದೆ ನನಗೆ?”
ಮತ್ತೆ ಕೀರ್ತನೆ ಮುಂದುವರಿಯುತ್ತಿದೆ. ಎಲ್ಲರೂ ಆನಂದದಿಂದ ತುಂಬಿತುಳುಕಾಡುತ್ತಿದ್ದಾರೆ.
೨ನೆ ಜೂನ್ ೧೮೮೩, ಜ್ಯೇಷ್ಠ ಕೃಷ್ಣ ದ್ವಾದಶಿ, ಶನಿವಾರ
ಪರಮಹಂಸರು ದಕ್ಷಿಣೇಶ್ವರದಿಂದ ಹೊರಟು ಕಲ್ಕತ್ತಕ್ಕೆ ಗಾಡಿಯಲ್ಲಿ ಬರುತ್ತಿದ್ದಾರೆ. ಅವರ ಜೊತೆಯಲ್ಲಿ ರಾಖಾಲ, ಮಾಸ್ಟರ್ ಇನ್ನೂ ಕೆಲವು ಮಂದಿ ಭಕ್ತರು ಇದ್ದಾರೆ. ಅವರು ಮೊದಲು ಬಲರಾಮನ ಮನೆಗೆ ಹೋಗಿ ಅನಂತರ ಅಧರಸೇನನ ಮನೆಗೆ ಹೋಗುತ್ತಾರೆ. ಬಳಿಕ ರಾಮನ ಮನೆಗೆ ಹೋಗುತ್ತಾರೆ. ಅಧರಸೇನನ ಮನೆಯಲ್ಲಿ ಕೀರ್ತನೆ ನಡೆಯುತ್ತದೆ. ರಾಮನ ಮನೆಯಲ್ಲಿ ಹರಿಕಥೆ ನಡೆಯುತ್ತದೆ.
ಗಾಡಿ ಮುಂದುವರಿಯುತ್ತಿದ್ದ ಹಾಗೆ ಪರಮಹಂಸರು ಭಕ್ತರಿಗೆ ಹೇಳುತ್ತಿದ್ದಾರೆ: “ನೋಡಿ, ಭಗವಂತನಲ್ಲಿ ಪ್ರೀತಿಯುಂಟಾದದ್ದೇ ಆದರೆ, ಹುಲ್ಲುಗಾವಲಿನ ಬಾವಿ ಸೂರ್ಯನ ತಾಪದಿಂದ ಒಣಗಿಹೋಗುವ ಹಾಗೆ ಪಾಪವೆಲ್ಲಾ ಬತ್ತಿಹೋಗಿಬಿಡುತ್ತವೆ. ವಿಷಯಸುಖಗಳ ಮೇಲೆ, ಅಂದರೆ ಕಾಮಕಾಂಚನಗಳ ಮೇಲೆ ಪ್ರೀತಿ ಇತ್ತು ಎಂದರೆ ಅವು ಹಾಗಾಗುವುದಿಲ್ಲ. ಹೃದಯದಲ್ಲಿ ವಿಷಯಾಸಕ್ತಿ ಇದ್ದುದೇ ಆದರೆ ಕೇವಲ ಸಂನ್ಯಾಸದಿಂದ ಯಾವ ಉಪಕಾರವೂ ಆಗದು. ಇದು ಉಗುಳನ್ನು ಉಗುಳಿ ಮತ್ತೆ ಅದನ್ನೇ ನುಂಗಿದ ಹಾಗಾಗುತ್ತದೆ.”
ಕೆಲವು ನಿಮಿಷಗಳು ಸುಮ್ಮನೆ ಕುಳಿತಿದ್ದು ಮತ್ತೆ ಹೇಳುತ್ತಿದ್ದಾರೆ: “ಬ್ರಾಹ್ಮಸಮಾಜದವರು ಸಾಕಾರವನ್ನೊಪ್ಪುವುದಿಲ್ಲ. (ನಗುತ್ತ) ನರೇಂದ್ರ ಹೇಳುತ್ತಾನೆ: ‘ಸಾಕಾರ ಭಗವಂತ ಕೇವಲ ಪುತ್ಥಳಿಕೆ’ ಎಂದು. ಆತ ಮತ್ತೆ ಹೇಳುತ್ತಾನೆ: ‘ಏನು? ಅವರು (ಪರಮಹಂಸರು) ಇನ್ನೂ ಕಾಳೀದೇವಾಲಯಕ್ಕೆ ಹೋಗುತ್ತಿದ್ದಾರೆಯೆ!”
ಪರಮಹಂಸರ ಗಾಡಿ ಬಲರಾಮನ ಮನೆಯನ್ನು ಮುಟ್ಟಿತು. ಬಲರಾಮ ಅವರನ್ನು ಎದುರುಗೊಂಡು ಒಳಕ್ಕೆ ಕರೆದುಕೊಂಡು ಹೋದ. ಸುಮಾರು ಅಪರಾಹ್ನ ನಾಲ್ಕು ಘಂಟೆ ಸಮಯಕ್ಕೆ ನಂದನವನದ ಯಜ್ಞನಾಥ ಪರಮಹಂಸರನ್ನು ತನ್ನ ಮನೆಗೆ ಆಹ್ವಾನಿಸಲು ಬಂದಿದ್ದಾನೆ. ತಮ್ಮ ದೇಹಸೌಖ್ಯ ಸರಿಯಾಗಿದ್ದರೆ ಬರುವುದಾಗಿ ಪರಮಹಂಸರು ತಿಳಿಸಿದರು. ಯಜ್ಞನಾಥ ಹೊರಟುಹೋದ ನಂತರ ಪರಮಹಂಸರು ಇದ್ದಕ್ಕಿದ್ದ ಹಾಗೆ ಭಾವಾವಿಷ್ಟರಾಗಿ ಬಿಟ್ಟರು. ಅವರು ಭಗವತಿಗೆ ಹೇಳುತ್ತಿದ್ದಾರೆ: “ತಾಯೆ, ನಿಲ್ಲಿಸು! ಏನಿದೆಲ್ಲಾ ನೀನು ನನಗೆ ತೋರಿಸುತ್ತಾ ಇರುವುದು? ಇವೆಲ್ಲಾ ಏಕೆ? ರಾಖಾಲ ಮುಂತಾದವರ ಮೂಲಕ ತೋರಿಸುತ್ತಾ ಇದ್ದೀಯಲ್ಲ ಇವೆಲ್ಲಾ ಏನು? ರೂಪವೆಲ್ಲಾ ಅದೃಶ್ಯವಾಗುತ್ತಿವೆ. ಆದರೆ, ತಾಯೆ, ಯಾರನ್ನು ಮನುಷ್ಯ ಅಂತ ಕರೆಯುತ್ತೇವೆಯೋ ಆತ ಕೇವಲ ದಿಂಬಿನ ಚೀಲ; ಆತ ದಿಂಬಿನ ಚೀಲವಲ್ಲದೆ ಬೇರೆ ಏನೂ ಅಲ್ಲ. ಆತನಲ್ಲಿರುವ ಚೈತನ್ಯ ನಿನ್ನದೇ.”
“ತಾಯೆ, ನವೀನ ಬ್ರಹ್ಮಜ್ಞಾನಿಗಳಿಗೆ (ಬ್ರಾಹ್ಮಸಮಾಜದವರಿಗೆ) ನಿನ್ನ ಆನಂದರಸ ದೊರೆತಿಲ್ಲ. ಅವರ ಕಣ್ಣಿನಲ್ಲಿ ಹರ್ಷವಿಲ್ಲ-ಹಾಗೇ ಮುಖದಲ್ಲೂ. ಪ್ರೇಮಾಭಕ್ತಿ ಉಂಟಾಗದವರೆಗೆ ಏನೂ ದೊರೆಯುವ ಹಾಗಿಲ್ಲ.
“ಹೇ ತಾಯೆ, ನಿನ್ನನ್ನು ನಾನು ಪ್ರಾರ್ಥನೆಮಾಡಿಕೊಂಡಿದ್ದೆ, ನನ್ನಂಥ ಒಬ್ಬ ಜೊತೆಗಾರನನ್ನು ನನಗೆ ಕೊಡುವ ಹಾಗೆ. ಅದಕ್ಕಾಗಿಯೇ ನೀನು ರಾಖಾಲನನ್ನು ಕೊಟ್ಟಿರುವುದು ಅಂತ ಕಾಣುತ್ತದೆ!”
ಪರಮಹಂಸರು ಅಧರನ ಮನೆಗೆ ಬಂದಿದ್ದಾರೆ. ಕೀರ್ತನೆಗೆ ಸಿದ್ಧತೆ ನಡೆಯುತ್ತಿದೆ. ಅಧರಸೇನನ ನೆರೆಹೊರೆಯವರು ಮತ್ತು ಇನ್ನೂ ಅನೇಕ ಭಕ್ತರು ಪರಮಹಂಸರ ದರ್ಶನ ಪಡೆಯಲು ಬಂದಿದ್ದಾರೆ. ಅವರ ಅಮೃತವಾಣಿ ಕೇಳಲು ಎಲ್ಲರೂ ಕಾತರರಾಗಿ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಭಕ್ತರಿಗೆ: “ಸಂಸಾರ ಮುಕ್ತಿ ಎರಡೂ ಭಗವಂತನಿಚ್ಛೆಗನುಸಾರ. ಆತನೇ ಅಜ್ಞಾನದ ಹೊದ್ದಿಕೆ ಹೊದಿಸಿ ಮನುಷ್ಯನನ್ನು ಸಂಸಾರದಲ್ಲಿ ಇಟ್ಟಿದ್ದಾನೆ. ಬಳಿಕ ಆತನೇ ಇಚ್ಛೆಪಟ್ಟು ತನ್ನ ಹತ್ತಿರಕ್ಕೆ ಕರೆಸಿಕೊಂಡಾಗ ಆತನಿಗೆ ಮುಕ್ತಿ ದೊರೆಯುತ್ತದೆ. ಇದು ಮಗು ಹೊರಗೆಲ್ಲೋ ಆಟಕ್ಕೆ ಹೋಗಿರುವಾಗ ಊಟದ ಸಮಯಕ್ಕೆ ತಾಯಿ ಅದನ್ನು ಕರೆಯುವ ಹಾಗೆ. ಮುಕ್ತಿಯ ಸಮಯ ಬಂತು ಎಂದರೆ, ಆಗ ಆತ ಮನುಷ್ಯನಿಗೆ ಸಾಧುಸಂಗ ದೊರಕಿಸಿಕೊಡುತ್ತಾನೆ. ಜೊತೆಗೆ ತನ್ನನ್ನು ಪಡೆದುಕೊಳ್ಳಲು ಬೇಕಾಗುವ ವ್ಯಾಕುಲತೆಯನ್ನೂ ಉಂಟುಮಾಡಿಕೊಡುತ್ತಾನೆ.”
ನೆರೆಯವ: “ಮಹಾಶಯರೆ, ಯಾವ ವಿಧದ ವ್ಯಾಕುಲತೆ?”
ಶ್ರೀರಾಮಕೃಷ್ಣರು: “ಕೆಲಸ ಕಳೆದುಕೊಂಡ ಗುಮಾಸ್ತನ ವ್ಯಾಕುಲತೆಯ ಹಾಗೆ. ಆತ ದಿನವೂ ಆಫೀಸುಗಳಿಗೆಲ್ಲ ಅಲೆಯುತ್ತಲೆ ಇರುತ್ತಾನೆ-ಕೆಲಸ ಖಾಲಿ ಇದೆಯೇ ಎಂದು ವಿಚಾರಿಸುತ್ತ. ವ್ಯಾಕುಲತೆ ಉಂಟಾಯಿತು ಎಂದರೆ, ಮನುಷ್ಯ ಭಗವಂತನಿಗಾಗಿ ಸುಮ್ಮನೆ ಹಾತೊರೆಯುತ್ತಿರುತ್ತಾನೆ. ಎಲೆ ಅಡಿಕೆ ಅಗಿಯುತ್ತ, ಮೀಸೆ ಹುರಿಮಾಡುತ್ತ, ಯಾವ ಯೋಚನೆಯೂ ಇಲ್ಲದೆ ಕಾಲಮೇಲೆ ಕಾಲು ಹಾಕಿಕೊಂಡು ಸುಖವಾಗಿ ಆರಾಮ ಕುರ್ಚಿಯ ಮೇಲೆ ಕುಳಿತಿರುವ ಮೋಜುಗಾರನಿಗೆ ಭಗವಂತನ ಸಾಕ್ಷಾತ್ಕಾರ ದೊರೆಯುವುದಿಲ್ಲ.”
ನೆರೆಯವ: “ಸಾಧುಸಂಗ ಮಾಡಿದರೆ ಈ ವ್ಯಾಕುಲತೆ ಉಂಟಾಗಿಬಿಡುತ್ತದೆಯೆ?”
ಶ್ರೀರಾಮಕೃಷ್ಣರು: “ಹೌದು, ಸಾಧ್ಯ. ಆದರೆ ಪಾಷಂಡಿಗಳಿಗೆ ಉಂಟಾಗುವುದಿಲ್ಲ. ಸಾಧುವಿನ ಕಮಂಡಲು ನಾಲ್ಕು ಧಾಮಗಳಿಗೂ ಆತನೊಡನೆ ಹೋಗಿಬರಬಹುದು. ಆದರೂ ಅದು ಹಿಂದೆ ಹೇಗೆ ಕಹಿಯಾಗಿತ್ತೋ ಹಾಗೆಯೇ ಕಹಿಯಾಗಿರುತ್ತದೆ.”
ಈಗ ಕೀರ್ತನೆ ಆರಂಭವಾಯಿತು. ಕೀರ್ತನಕಾರ ಶ್ರೀಕೃಷ್ಣನ ಬೃಂದಾವನ ಲೀಲೆಯ ಸಂಬಂಧವಾಗಿ ಹಾಡುತ್ತಿದ್ದಾನೆ:
ರಾಧೆ: “ಸಖಿ, ನನ್ನ ಪ್ರಾಣ ಹೋಗುವುದರಲ್ಲಿದೆ. ನನ್ನ ಕೃಷ್ಣನನ್ನು ಕರೆದುಕೊಂಡು ಬಂದುಬಿಡು.”
ಸಖಿ: “ರಾಧೆ, ಶ್ರೀಕೃಷ್ಣಮೇಘ ಇನ್ನೇನು ಮಳೆ ಸುರಿಯುವುದರಲ್ಲಿತ್ತು. ಅದನ್ನು ನೀನೇ ನಿನ್ನ ಮುನಿಸೆಂಬ ಬಿರುಗಾಳಿಯಿಂದ ಚೆದುರಿಸಿಬಿಟ್ಟೆ. ನೀನು ಕೃಷ್ಣನಿಗೆ ಸುಖ ಬಯಸುತ್ತಿಲ್ಲ ಅಂತ ಕಾಣುತ್ತದೆ. ಹಾಗಿದ್ದರೆ ನೀನು ಏಕೆ ಮುನಿಸಿಕೊಳ್ಳುತ್ತಿದ್ದೆ?”
ರಾಧೆ: “ಸಖಿ, ಈ ಹೆಮ್ಮೆ ನನ್ನದಲ್ಲ. ಯಾರು ನನ್ನನ್ನು ಹೆಮ್ಮೆಪಡುವಂತೆ ಮಾಡಿದನೋ ಆತನೊಡನೆಯೇ ನನ್ನ ಹೆಮ್ಮೆ ಹೊರಟುಹೋಗಿದೆ.”
ಕೀರ್ತನೆ ಮುಗಿದನಂತರ ಪರಮಹಂಸರು ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಗೋಪಿಯರು ಶ್ರೀಕೃಷ್ಣನೊಡನೆ ಐಕ್ಯವಾಗಲು ಕಾತ್ಯಾಯನಿಯ ಪೂಜೆ ಮಾಡಿದರು. ಎಲ್ಲರೂ ಮಹಾಮಾಯೆ ಆದ್ಯಾಶಕ್ತಿಗೆ ಅಧೀನರು. ಅವತಾರಾದಿಗಳು ಕೂಡ ಮಾಯೆಯನ್ನು ಆಶ್ರಯಿಸಿ ತಮ್ಮ ಲೀಲೆಯನ್ನು ನಡೆಸುತ್ತಾರೆ. ಅದಕ್ಕಾಗಿಯೇ ಅವರು ಆದ್ಯಾಶಕ್ತಿಯನ್ನು ಪೂಜಿಸುವುದು. ನೋಡಿಲ್ಲವೆ, ರಾಮ ಸೀತೆಗಾಗಿ ಎಷ್ಟೊಂದು ಅತ್ತ? ‘ಪಂಚಭೂತಗಳ ಕೈಗೆ ಸಿಕ್ಕಿ ಬ್ರಹ್ಮನೂ ಅಳುತ್ತಾನೆ.’
“ವಿಷ್ಣು ಹಿರಣ್ಯಾಕ್ಷನನ್ನು ಕೊಲ್ಲಲು ವರಾಹ ಅವತಾರವನ್ನು ತಾಳಿದ. ಆತನನ್ನು ಕೊಂದ ನಂತರ ವರಾಹ ತನ್ನ ಮಕ್ಕಳು ಮರಿಗಳೊಡನೆ ಸುಖವಾಗಿ ಇದ್ದುಬಿಟ್ಟಿತು. ಅದು ತನ್ನ ನಿಜಸ್ವರೂಪ ಏನು ಎಂಬುದನ್ನು ಸಂಪೂರ್ಣ ಮರೆತು, ತನ್ನ ಮರಿಗಳಿಗೆ ಹಾಲು ಕೊಡುತ್ತ ಆನಂದದ ಜೀವನ ನಡೆಸಿಕೊಂಡು ಹೋಗಲಾರಂಭಿಸಿತು. ದೇವತೆಗಳು ವಿಷ್ಣುವನ್ನು ತನ್ನ ಈ ಅಸಹ್ಯಕರವಾದ ಮೃಗದ ಜೀವನ ಬಿಟ್ಟು ದೇವಲೋಕಕ್ಕೆ ಹಿಂದಿರುಗಬೇಕೆಂದು ಎಷ್ಟು ಒತ್ತಾಯಪಡಿಸಿದರೂ ಆತ ಕಿವಿಗೊಡದೇ ಹೋದ. ದೇವತೆಗಳೆಲ್ಲಾ ಒಂದು ಸಭೆ ಸೇರಿ ಒಂದು ನಿರ್ಧಾರಕ್ಕೆ ಬಂದು ಶಿವನನ್ನು ವರಾಹದ ಹತ್ತಿರಕ್ಕೆ ಕಳುಹಿಸಿದರು. ಶಿವ ಹಂದಿಯನ್ನು ಕೇಳಿದ: ‘ನೀನು ನಿನ್ನ ನಿಜಸ್ವರೂಪವನ್ನು ಏಕೆ ಮರೆತುಬಿಟ್ಟಿದ್ದೀಯೆ?’ ವಿಷ್ಣು ಆ ಹಂದಿಯ ರೂಪದಿಂದ ಉತ್ತರವಿತ್ತ: ‘ಏಕೆ, ನಾನು ಇಲ್ಲೇ ಬಹಳ ಆನಂದದಿಂದಿದ್ದೇನಲ್ಲ.’ ಆಗ ಶಿವ ತನ್ನ ತ್ರಿಶೂಲದಿಂದ ಆ ಹಂದಿಯ ಶರೀರವನ್ನು ಚೂರುಚೂರು ಮಾಡಿದ. ಅನಂತರವೇ ವಿಷ್ಣು ತನ್ನ ಸ್ವಧಾಮಕ್ಕೆ ಹಿಂದಿರುಗಿದ.
ಪರಮಹಂಸರು ಅಧರಸೇನನ ಮನೆಯಿಂದ ಹೊರಟು ಈಗ ರಾಮಚಂದ್ರದತ್ತನ ಮನೆಗೆ ಬಂದಿದ್ದಾರೆ. ಈತ ಪರಮಹಂಸರ ಗೃಹಸ್ಥಶಿಷ್ಯರಲ್ಲಿ ಒಬ್ಬ. ಕಲ್ಕತ್ತದಲ್ಲಿ ಈತನಿಗೆ ಮನೆ ಇದೆ. ಪರಮಹಂಸರು ಅವತಾರಪುರುಷರು ಎಂದು ಘೋಷಿಸಿದವರಲ್ಲಿ ಈತನೇ ಮೊದಲನೆಯವನು. ಪರಮಹಂಸರು ಅನೇಕ ಸಲ ಈತನ ಮನೆಗೆ ಬಂದಿದ್ದಾರೆ. ಈತನ ಶ್ರದ್ಧಾಭಕ್ತಿಯನ್ನು ಅನೇಕ ಸಲ ಹೊಗಳಿದ್ದಾರೆ. ಈತ ಅಂಥಾ ದಯಾಳು, ಪರಮಹಂಸರ ಕೆಲವು ಮಂದಿ ಶಿಷ್ಯರಿಗೆ ಈತನ ಮನೆಯೇ ತಮ್ಮ ಮನೆಯಾಗಿಬಿಟ್ಟಿತ್ತು.
ರಾಮ ಇಂದು ಒಂದು ವಿಶೇಷ ಉತ್ಸವವನ್ನು ಏರ್ಪಡಿಸಿದ್ದಾನೆ. ಚಿಕ್ಕ ಹೊರ ಅಂಗಳವನ್ನು ಚೆನ್ನಾಗಿ ಅಲಂಕರಿಸಿದ್ದಾನೆ. ಒಬ್ಬ ಭಾಗವತ ಪಂಡಿತ ಒಂದು ಎತ್ತರವಾದ ಪೀಠದ ಮೇಲೆ ಕುಳಿತು ಭಾಗವತ ಪ್ರವಚನ ಮಾಡುತ್ತಿದ್ದಾನೆ. ಪರಮಹಂಸರು ತನ್ನ ಮನೆಗೆ ಬಂದೊಡನೆ ರಾಮ ಅವರನ್ನು ಶ್ರದ್ಧಾಭಕ್ತಿಗಳಿಂದ ಎದುರುಗೊಂಡ. ಬಳಿಕ ಅವರನ್ನು ಕರೆದುಕೊಂಡು ಹೋಗಿ ಭಾಗವತ ಪಂಡಿತನ ಹತ್ತಿರ ಕೂರಿಸಿದ. ರಾಮನಿಗೆ ಬಹಳ ಸಂತೋಷವಾಗಿಬಿಟ್ಟಿದೆ. ಭಾಗವತ ಪಂಡಿತ ಹರಿಶ್ಚಂದ್ರನ ಕಥೆಯನ್ನು ಪಠಿಸುತ್ತಿದ್ದಾನೆ:
ವಿಶ್ವಾಮಿತ್ರ ಹರಿಶ್ಚಂದ್ರನಿಗೆ ಹೇಳಿದ: “ಮಹಾರಾಜ, ನೀನು ಇಡೀ ಪೃಥಿವಿಯನ್ನು ನನಗೆ ದಾನಮಾಡಿಬಿಟ್ಟಿದ್ದೀಯೆ. ಆದ್ದರಿಂದ ನಿನಗೆ ಇಲ್ಲಿ ಎಲ್ಲೂ ಸ್ಥಾನವಿಲ್ಲ. ಆದರೆ ಕಾಶಿ ಮಹಾದೇವನಿಗೆ ಸೇರಿದ ಸ್ಥಳವಾದ್ದರಿಂದ ಬೇಕಾದರೆ ಅಲ್ಲಿಗೆ ನೀನು ಹೋಗಿ ಇರಬಹುದು. ಬಾ ನನ್ನೊಡನೆ; ನಿನ್ನನ್ನು ನಿನ್ನ ಸಹಧರ್ಮಿಣಿ ಶೈಬ್ಯೆಯನ್ನು, ನಿನ್ನ ಪುತ್ರ ರೋಹಿತಾಶ್ವನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಬಿಡುತ್ತೇನೆ. ಅಲ್ಲಿ ನೀನು ನನಗೆ ಕೊಡಬೇಕಾಗಿರುವ ದಕ್ಷಿಣೆಯನ್ನು ಸಂಪಾದಿಸಿ ಕೊಡುವೆಯಂತೆ.” ಬಳಿಕ ರಾಜಕುಟುಂಬದವರು ವಿಶ್ವಾಮಿತ್ರನೊಡನೆ ಮುಂದುವರಿದು ಕಾಶಿಯನ್ನು ತಲುಪಿ ವಿಶ್ವನಾಥನ ದರ್ಶನ ಪಡೆದರು.
ವಿಶ್ವನಾಥ ಎಂಬ ಪದ ಕಿವಿಗೆ ಬಿದ್ದೊಡನೆಯೇ ಪರಮಹಂಸರು ಭಾವಾವಿಷ್ಟರಾಗಿ ಬಿಟ್ಟರು. ಅಸ್ಪಷ್ಟ ಸ್ವರದಿಂದ “ಶಿವ! ಶಿವ!” ಎಂದು ಉಚ್ಚರಿಸುತ್ತಿದ್ದಾರೆ.
ಭಾಗವತ ಪಂಡಿತ ಕಥೆ ಮುಂದುವರಿಸುತ್ತಿದ್ದಾನೆ:
‘ಹರಿಶ್ಚಂದ್ರನಿಗೆ ದಕ್ಷಿಣೆಯ ಹಣ ಸಂಪಾದಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಆತ ಒಬ್ಬ ಬ್ರಾಹ್ಮಣನಿಗೆ ತನ್ನ ಧರ್ಮಪತ್ನಿಯನ್ನು ಮಾರಬೇಕಾಯಿತು. ಶೈಬ್ಯೆಯ ಜೊತೆಯಲ್ಲೇ ರೋಹಿತಾಶ್ವ ಹೋಗಬೇಕಾಯಿತು. ಆ ಹಣವೂ ಸಾಲದೆ ಹೋದುದರಿಂದ ಹರಿಶ್ಚಂದ್ರ ತನ್ನನ್ನೂ ಒಬ್ಬ ಚಂಡಾಲನಿಗೆ ಮಾರಿಕೊಂಡ. ಆ ಚಂಡಾಲನಿಗೊಂದು ರುದ್ರಭೂಮಿ ಇತ್ತು. ಆತ ಹರಿಶ್ಚಂದ್ರನನ್ನು ಅದರ ಮೇಲ್ವಿಚಾರಕನನ್ನಾಗಿ ನೇಮಿಸಿದ.
“ಒಂದು ದಿನ ರೋಹಿತಾಶ್ವ ತನ್ನ ಯಜಮಾನನಿಗೆ ಹೂವು ಕೊಯ್ಯುತ್ತಿದ್ದಾಗ ಒಂದು ಕಾಳಸರ್ಪ ಆತನನ್ನು ಕಡಿದುಬಿಟ್ಟಿತು. ಅಂದಿನ ರಾತ್ರಿಯೇ ಆತ ಸತ್ತುಹೋದ. ಈ ಹುಡುಗನ ಶವಸಂಸ್ಕಾರ ಮಾಡಲು ಆ ಮನೆಯ ಕಠೋರ ಹೃದಯಿಯಾದ ಬ್ರಾಹ್ಮಣ, ಶೈಬ್ಯೆಗೆ ಸ್ವಲ್ಪವೂ ಸಹಾಯ ನೀಡಲೇ ಇಲ್ಲ. ಆತ ಹಾಸಿಗೆಯನ್ನು ಬಿಟ್ಟು ಏಳಲೇ ಇಲ್ಲ. ಅಂದಿನ ರಾತ್ರಿ ಅಮಾವಾಸ್ಯೆಯ ಗಾಡಾಂಧಕಾರದಿಂದ ಕೂಡಿತ್ತು. ಸಾಲದುದಕ್ಕೆ ಬಿರುಗಾಳಿ ಮಳೆ ಬೇರೆ. ಮಿಂಚು ‘ಫಳೀರ್ ಫಳೀರ್’ ಅಂತ ಕಾರ್ಮುಗಿಲನ್ನು ಸೀಳುತ್ತಿತ್ತು. ಶೈಬ್ಯೆ ಏಕಾಕಿಯಾಗಿಯೇ ತನ್ನ ಸತ್ತ ಮಗನ ಶರೀರವನ್ನು ಹೆಗಲ ಮೇಲೆ ಹಾಕಿಕೊಂಡು ಸ್ಮಶಾನಕ್ಕೆ ಹೊರಟಳು. ಭಯಾಕುಲಳಾಗಿ ಶೋಕಾಕುಲಳಾಗಿದ್ದಾಳೆ. ಚಂಡಾಲ ಆಕೆಯಿಂದ ನೆಲದ ಹಾಗ ಕೇಳುತ್ತಾನೆ. ತನ್ನ ಪತಿಯೇ ಆ ವೇಷದಲ್ಲಿದ್ದಾನೆ ಎಂಬುದು ಆಕೆಗೆ ಗೊತ್ತಾಗಲಿಲ್ಲ. ಆಕೆಯ ಹತ್ತಿರ ಒಂದು ಕಾಸೂ ಇರಲಿಲ್ಲ. ತನ್ನ ದುಃಖಪರಂಪರೆಗಳನ್ನೆಲ್ಲಾ ನೆನಸಿಕೊಂಡು ಸುಮ್ಮನೆ ಗೊಳೋ ಅಂತ ಅಳಲಾರಂಭಿಸಿದಳು. ಅಂದಿನ ಗಾಡಾಂಧಕಾರವನ್ನು ಬೆಳಕು ಮಾಡುತ್ತಿದ್ದುದು ಕೇವಲ ಈ ಸುಡುಗಾಡಿನಲ್ಲಿ ಉರಿಯುತ್ತಿದ್ದ ಹೆಣಗಳ ಜ್ವಾಲೆಯೇ. ಆಕೆಯ ತಲೆಯ ಮೇಲೆ ಗುಡುಗು ಸುಮ್ಮನೆ ಆರ್ಭಟಿಸುತ್ತಿತ್ತು. ಎದುರುಗಡೆಗೆ ಕರಾಳರೂಪಿನ ಆ ಚಂಡಾಲ ನೆಲದ ಹಾಗ ಕೇಳುತ್ತಿದ್ದ. ಒಮ್ಮೆ ಮಹಾರಾಣಿಯಾಗಿದ್ದ ಶೈಬ್ಯೆ ಸತ್ತ ಮಗನನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು ರುದ್ರಭೂಮಿಯಲ್ಲಿ ಕುಳಿತಿದ್ದಾಳೆ.”
ರಾಜಕುಟುಂಬಕ್ಕೆ ಬಂದೊದಗಿದ ವಿಪತ್ತನ್ನು ನೋಡಿ ಅಲ್ಲಿ ನೆರೆದಿದ್ದ ಭಕ್ತರೆಲ್ಲರೂ ಸುಮ್ಮನೆ ಕಣ್ಣೀರು ಸುರಿಸುತ್ತಾ ಗೋಳಾಡಲಾರಂಭಿಸಿದರು. ಆಗ ಪರಮಹಂಸರು ಏನು ಮಾಡುತ್ತಿದ್ದರು? ಅವರು ಏಕಾಗ್ರಚಿತ್ತದಿಂದ ಪ್ರವಚನವನ್ನು ಕೇಳುತ್ತಿದ್ದರು. ಒಮ್ಮೆ ಮಾತ್ರ ಅವರ ಕಣ್ಣಿನಲ್ಲಿ ನೀರು ಬಂತು. ಕೂಡಲೇ ಅದನ್ನು ಒರೆಸಿಕೊಂಡುಬಿಟ್ಟರು.
ಭಾಗವತ ಮುಂದುವರಿಸುತ್ತಿದ್ದಾನೆ:
“ಶೈಬ್ಯೆ ಹಾಗೆ ರುದ್ರಭೂಮಿಯಲ್ಲಿ ಕುಳಿತು ಗೊಳೋ ಅಂತ ಅಳುತ್ತಿರುವಾಗ ಆಕೆ ತನ್ನ ಪತಿಯ ಹೆಸರನ್ನು ಹೊರಗೆಡಹುತ್ತಾಳೆ. ಆಗ ಹರಿಶ್ಚಂದ್ರ ಮತ್ತು ಶೈಬ್ಯೆ ಇಬ್ಬರೂ ಕೂಡ ರೋಹಿತಾಶ್ವನಿಗಾಗಿ ಅಳುತ್ತಾರೆ. ಇಷ್ಟು ದುರಿತ ಪರಂಪರೆಗೆ ಒಳಗಾದರೂ ಹರಿಶ್ಚಂದ್ರ ತಾನು ಮಾಡಿದ ದಾನಕ್ಕಾಗಿ ಒಮ್ಮೆಯೂ ಕಿಂಚಿತ್ತೂ ವ್ಯಥೆ ಸೂಚಿಸಲಿಲ್ಲ.”
ಕೊನೆಗೆ ವಿಶ್ವಾಮಿತ್ರ ಅಲ್ಲಿಗೆ ಬರುವುದು, ರೋಹಿತಾಶ್ವ ಮತ್ತೆ ಬದುಕಿಕೊಳ್ಳುವುದು, ಎಲ್ಲರೂ ವಿಶ್ವೇಶ್ವರನ ದರ್ಶನ ಮಾಡುವುದು, ಹರಿಶ್ಚಂದ್ರನಿಗೆ ಮತ್ತೆ ರಾಜ್ಯಪ್ರಾಪ್ತಿಯಾಗುವುದು-ಇವುಗಳ ಸಂಬಂಧವಾಗಿ ಪಠಿಸಿ ಭಾಗವತಪಂಡಿತ ಹರಿಶ್ಚಂದ್ರ ಪಾಖ್ಯಾನವನ್ನು ಸಮಾಪ್ತಿಮಾಡಿದ.
ಶ್ರೀರಾಮಕೃಷ್ಣರು ಉದ್ಧವ ಸಂವಾದವನ್ನು ಪಠನ ಮಾಡುವಂತೆ ಭಾಗವತಪಂಡಿತನಿಗೆ ಹೇಳಿದರು.
ಭಾಗವತ ಪಂಡಿತ ಪಠಿಸುತ್ತಿದ್ದಾನೆ:
“ಉದ್ಧವ ಬೃಂದಾವನಕ್ಕೆ ಬಂದಾಗ ಗೋವಳರು ಮತ್ತು ಗೋಪಿಯರು ಅತ್ಯಾತುರತೆಯಿಂದ ಓಡಿಬಂದು ಆತನನ್ನು ಸಂಧಿಸಿ ಕೇಳಿದರು: ‘ನಮ್ಮ ಕೃಷ್ಣ ಹೇಗಿದ್ದಾನೆ? ಏನು, ಆತ ನಮ್ಮನ್ನು ಸಂಪೂರ್ಣವಾಗಿ ಮರೆತುಬಿಟ್ಟನೇ? ನಮ್ಮನ್ನು ಎಂದಾದರೂ ಜ್ಞಾಪಿಸಿಕೊಳ್ಳುತ್ತಿರುವನೇ?’ ಹೀಗೆಂದು ವಿಚಾರಿಸಿ ಅವರಲ್ಲಿ ಕೆಲವರು ಸುಮ್ಮನೆ ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. ಇನ್ನು ಕೆಲವರು ಆತನನ್ನು ಬೃಂದಾವನದ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಿ ಹೇಳಲಾರಂಭಿಸಿದರು: ‘ಈ ಸ್ಥಳದಲ್ಲಿ ಶ್ರೀಕೃಷ್ಣ ಗೋವರ್ಧನ ಧಾರಣೆ ಮಾಡಿದ; ಇಲ್ಲಿ ಧೇನುಕಾಸುರನನ್ನು ವಧಿಸಿದ; ಇಲ್ಲಿ ಶಕಟಾಸುರನನ್ನು ಕೊಂದ; ಈ ಹುಲ್ಲುಗಾವಲಿನಲ್ಲಿ ಗೋವುಗಳನ್ನು ಮೇಯಿಸುತ್ತಿದ್ದ; ಯಮುನೆಯ ಈ ತೀರದಲ್ಲಿ ಗೋಪಿಯರೊಡನೆ ವಿಹರಿಸಿದ; ಇಲ್ಲಿ ಗೋವಳರೊಡನೆ ಆಟವಾಡಿದ; ಈ ಕುಂಜಗಳಲ್ಲೆಲ್ಲಾ ಗೋಪಿಯರೊಡನೆ ರಹಸ್ಯವಾಗಿ ಬೆರೆತ.’ ಉದ್ಧವ ಅವರಿಗೆ ಹೇಳಿದ: ‘ನೀವು ಕೃಷ್ಣನಿಗಾಗಿ ಇಷ್ಟೊಂದು ಕಾತರರಾಗಿದ್ದೀರಲ್ಲ ಏಕೆ? ಆತ ಸರ್ವಭೂತಗಳಲ್ಲಿಯೂ ಇದ್ದಾನೆ. ಆತ ಸಾಕ್ಷಾತ್ ಭಗವಂತನೇ. ಆತ ಅಂತರ್ಯಾಮಿಯಾಗಿಲ್ಲದ ವಸ್ತುವೇ ಇಲ್ಲ.’ ಗೋಪಿಯರು ಹೇಳಿದರು: ‘ನಮಗೆ ಅದೊಂದೂ ಅರ್ಥವಾಗುವುದಿಲ್ಲ. ನಮಗೆ ಓದು ಬರಹ ಏನೂ ಗೊತ್ತಿಲ್ಲ. ನಮಗೆ ಕೇವಲ ಬೃಂದಾವನದ ಕೃಷ್ಣ ಮಾತ್ರ ಗೊತ್ತು. ಇಲ್ಲಿ ಆತ ಅನೇಕ ವಿಧವಾಗಿ ಕ್ರೀಡಿಸಿ ಹೋಗಿದ್ದಾನೆ.’ ಉದ್ಧವ ಹೇಳಿದ: ‘ಆತ ಸಾಕ್ಷಾತ್ ಭಗವಂತನೇ. ಆತನ ಧ್ಯಾನ ಮಾಡಿದರೆ ಮತ್ತೆ ಜನ್ಮವೆತ್ತಬೇಕಾಗಿರುವುದಿಲ್ಲ; ಮುಕ್ತಿ ದೊರೆತುಬಿಡುತ್ತದೆ.’ ಗೋಪಿಯರು ಹೇಳಿದರು: ‘ನಮಗೆ ಮುಕ್ತಿ ಎಂಬ ವಿಷಯ ತಲೆಗೇ ಹತ್ತುವುದಿಲ್ಲ. ನಮಗೆ ನಮ್ಮ ಪ್ರಾಣಪ್ರಿಯನಾದ ಶ್ರೀಕೃಷ್ಣ ಮಾತ್ರ ಬೇಕು.’
ಶ್ರೀರಾಮಕೃಷ್ಣರು ಈ ಸಂವಾದವನ್ನು ಏಕಾಗ್ರಚಿತ್ತದಿಂದ ಕೇಳಿದರು. ಬಳಿಕ ಹೇಳಿದರು: “ಹೌದು, ಗೋಪಿಯರು ಹೇಳಿದ್ದು ಸರಿ.”
ಈಗ ಪರಮಹಂಸರು ತಮ್ಮ ಮಧುರವಾದ ಕಂಠದಿಂದ ಹಾಡುತ್ತಿದ್ದಾರೆ:
ಮುಕ್ತಿಪದವನು ನೀಡಲೆನಗೆ ಮನವಿದ್ದರೂ
ಶುದ್ಧಭಕ್ತಿಯ ಕೊಡಲು ಹಿಂಜರಿವೆನು.
ಪರಿಶುದ್ಧ ಪ್ರೇಮವನು ಪಡೆದ ಆ ಜಗವಂದ್ಯ
ಮೂರು ಲೋಕವ ಮೆಟ್ಟಿ ನಿಲ್ಲುವವನು.
ಕೇಳು ಚಂದ್ರಾವಳೀ, ದಿಟದೊಲವ ಬಣ್ಣಿಸುವೆ:
ಮುಕ್ತಿಗಿಂತಲೂ ಭಕ್ತಿ ಅಪರೂಪವು!
ಆ ಭಕ್ತಿಗೊಲಿದು ನಾ ಪಾತಾಳಲೋಕದಲಿ
ಬಲಿಯ ಬಾಗಿಲ ಕಾಯಲೊಪ್ಪಿರುವೆನು!
ಅಲ್ಲಿ ಬೃಂದಾವನದಿ ಅಂಥ ದಿಟದೊಲವಿಹುದು
ಗೋಪಗೋಪಿಯರೆದೆಯ ಗುಟ್ಟಿನಲ್ಲಿ!
ಆ ಭಕ್ತಿಗಾಗಿಯೇ ನಂದಗೃಹದಲಿ ಬೆಳೆದು
ಆ ಭಾರವನ್ನು ಹೊತ್ತೆ ನಾ ತಲೆಯಲಿ!
ಶ್ರೀರಾಮಕೃಷ್ಣರು ಭಾಗವತ ಪಂಡಿತನಿಗೆ ಹೇಳಿದರು: “ಗೋಪಿಯರದು ಪ್ರೇಮಾ ಭಕ್ತಿ, ಅವ್ಯಭಿಚಾರ ಭಕ್ತಿ, ನಿಷ್ಠಾಭಕ್ತಿ. ವ್ಯಭಿಚಾರ ಭಕ್ತಿ ಎಂಬುದು ಯಾವುದು ಗೊತ್ತೆ? ಜ್ಞಾನಮಿಶ್ರಭಕ್ತಿ. ಉದಾಹರಣೆಗೆ: ‘ಕೃಷ್ಣನೇ ಎಲ್ಲವೂ ಆಗಿದ್ದಾನೆ. ಆತನೇ ಪರಬ್ರಹ್ಮ, ಆತನೇ ರಾಮ, ಆತನೇ ಶಿವ, ಆತನೇ ಶಕ್ತಿ ಎಂಬ ಭಾವನೆ. ಆದರೆ ಜ್ಞಾನದ ಅಂಶ ಪ್ರೇಮಾಭಕ್ತಿಯಲ್ಲಿ ಮಿಶ್ರಿತವಾಗಿಲ್ಲ. ಒಮ್ಮೆ ಹನುಮಂತ ದ್ವಾರಕೆಗೆ ಬಂದು ಕೇಳಿದ: ‘ಸೀತಾರಾಮರನ್ನು ನೋಡಬೇಕು’ ಎಂದು. ಶ್ರೀಕೃಷ್ಣ ರುಕ್ಮಿಣಿಗೆ ಹೇಳಿದ: ‘ನೀನು ಸೀತೆಯ ರೂಪವನ್ನು ಧರಿಸಿಕೊ; ಇಲ್ಲದಿದ್ದರೆ ಹನುಮಂತ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ.’
“ಒಮ್ಮೆ ಪಾಂಡವರು ರಾಜಸೂಯ ಯಾಗವನ್ನು ಮಾಡಿದರು. ಆಗ ರಾಜರೆಲ್ಲರೂ ಕೂಡಿ ಯುಧಿಷ್ಠಿರನನ್ನು ಸಿಂಹಾಸನದ ಮೇಲೆ ಕೂರಿಸಿ ಆತನಿಗೆ ಪ್ರಣಾಮ ಮಾಡಿದರು. ವಿಭೀಷಣ ಹೇಳಿದ: ‘ನಾನು ಶ್ರೀಮನ್ನಾರಾಯಣನಿಗೆ ಒಬ್ಬನಿಗೆ ವಿನಾ ಬೇರೆ ಯಾರಿಗೂ ಪ್ರಣಾಮ ಮಾಡುವುದಿಲ್ಲ’ ಎಂದು. ಆಗ ಶ್ರೀಕೃಷ್ಣನೇ ಯುಧಿಷ್ಠಿರನಿಗೆ ಸಾಷ್ಟಾಂಗ ಪ್ರಣಾಮ ಮಾಡಿದ. ಆಗ ಮಾತ್ರವೇ ವಿಭೀಷಣ ಕಿರೀಟ ಸಮೇತ ಯುಧಿಷ್ಠಿರನಿಗೆ ಸಾಷ್ಟಾಂಗ ಪ್ರಣಾಮಮಾಡಿದ.
“ನಿಷ್ಠಾಭಕ್ತಿ ಯಾವ ರೀತಿಯದು ಗೊತ್ತೆ? ಇದು ಮನೆಯಲ್ಲಿ ಸೊಸೆಯ ವ್ಯವಹಾರದ ಹಾಗೆ. ಆಕೆ ಭಾವ, ಮೈದುನ, ಮಾವ, ಗಂಡ ಎಲ್ಲರಿಗೂ ಕಾಲು ತೊಳೆಯುವುದಕ್ಕೆ ನೀರು, ಕೈ ಬಾಯಿ ಒರೆಸಿಕೊಳ್ಳುವುದಕ್ಕೆ ವಸ್ತ್ರ, ಕುಳಿತುಕೊಳ್ಳುವುದಕ್ಕೆ ಮಣೆ, ಇನ್ನೂ ಏನೇನೋ ರೀತಿಯಾಗಿ ಸೇವೆ ಮಾಡುತ್ತಾಳೆ. ಆದರೆ ತನ್ನ ಪತಿಯೊಡನೆ ಬೇರೆ ಸಂಬಂಧ ಇಟ್ಟುಕೊಂಡಿರುತ್ತಾಳೆ.
“ಈ ಪ್ರೇಮಾಭಕ್ತಿಯಲ್ಲಿ ‘ಅಹಂಕಾರ’, ‘ಮಮಕಾರ’ ಎರಡು ಇವೆ. ಯಶೋದೆ ಭಾವಿಸುತ್ತಿದ್ದಳು: ನಾನು ಗೋಪಾಲನ ಯೋಗಕ್ಷೇಮ ನೋಡಿಕೊಳ್ಳದಿದ್ದರೆ, ಬೇರೆ ಯಾರು ತಾನೆ ನೋಡಿಕೊಳ್ಳುತ್ತಿದ್ದರು? ನಾನು ನೋಡಿಕೊಳ್ಳದಿದ್ದರೆ ಅವನು ಕಾಯಿಲೆ ಬಿದ್ದು ಬಿಡುತ್ತಾನೆ.’ ಶ್ರೀಕೃಷ್ಣ ಸಾಕ್ಷಾತ್ ಭಗವಂತ ಎಂಬ ಬೋಧೆ ಯಶೋದೆಗಿರಲಿಲ್ಲ. ಎರಡನೆಯದು ‘ಮಮಕಾರ’. ಭಗವಂತ ತನ್ನವನು ಎಂದು ಭಾವಿಸುವುದು- ‘ನನ್ನ ಗೋಪಾಲ’ ಎಂದು ಭಾವಿಸುವಿಕೆ. ಉದ್ಧವ ಯಶೋದೆಗೆ ತಿಳಿಸಿದ: ‘ತಾಯೆ, ನಿಮ್ಮ ಕೃಷ್ಣ ಸಾಕ್ಷಾತ್ ಭಗವಂತನೇ; ಜಗಚ್ಚಿಂತಾಮಣಿಯೇ. ಆತ ಸಾಮಾನ್ಯ ಮನುಷ್ಯನಲ್ಲ.’ ಯಶೋದೆ ಹೇಳಿದಳು: ‘ನೋಡಿಲ್ಲಿ, ನಾನು ಕೇಳಿದ್ದು ನಿಮ್ಮ ಚಿಂತಾಮಣಿಯ ವಿಷಯ ಅಲ್ಲ; ನನ್ನ ಗೋಪಾಲ ಹೇಗಿದ್ದಾನೆ ಎಂಬುದಾಗಿ. ಚಿಂತಾಮಣಿಯನ್ನಲ್ಲ, ನನ್ನ ಗೋಪಾಲನನ್ನು.’
“ಗೋಪಿಯರದು ಎಂಥಾ ನಿಷ್ಠೆ! ಅವರು ಮಥುರೆಗೆ ಹೋಗಿ ದ್ವಾರಪಾಲಕನನ್ನು ಬಹಳವಾಗಿ ಬೇಡಿಕೊಂಡು ಸಭಾಮಂದಿರವನ್ನು ಪ್ರವೇಶಮಾಡಿದರು. ದ್ವಾರಪಾಲಕ ಅವರನ್ನು ಶ್ರೀಕೃಷ್ಣನ ಹತ್ತಿರಕ್ಕೆ ಕರೆದುಕೊಂಡು ಹೋದ. ಆದರೆ ಅಲ್ಲಿ ರುಮಾಲು ಸುತ್ತಿರುವ ಶ್ರೀಕೃಷ್ಣನನ್ನು ಕಂಡು, ತಲೆ ತಗ್ಗಿಸಿ ತಮ್ಮೊಳಗೇ ಮಾತಾಡಿಕೊಳ್ಳಲಾರಂಭಿಸಿದರು: ‘ತಲೆಗೆ ರುಮಾಲು ಸುತ್ತಿ ಕುಳಿತಿದ್ದಾನಲ್ಲ, ಇವನಾರು? ಈತನೊಡನೆ ಮಾತುಕತೆಯಾಡಿ ಕೊನೆಗೆ ನಾವು ಶ್ರೀಕೃಷ್ಣನಲ್ಲಿಟ್ಟಿರುವ ನಿಷ್ಠಾಭಕ್ತಿಯನ್ನು ಕಳೆದುಕೊಳ್ಳೋಣವೇ? ಪೀತಾಂಬರಧಾರಿಯಾದ, ನವಿಲುಗರಿಯ ಕಿರೀಟ ಧರಿಸಿರುವ ನಮ್ಮ ಪ್ರಾಣವಲ್ಲಭ ಶ್ರೀಕೃಷ್ಣನೆಲ್ಲಿ?’
“ನೋಡಿದಿರೋ, ಗೋಪಿಯರ ನಿಷ್ಠೆ ಎಷ್ಟು ಅದ್ಭುತವಾದ್ದು! ಬೃಂದಾವನದವರ ಭಾವ ಬಹಳ ವಿಶೇಷವಾದ್ದು. ಕೇಳಿದ್ದೇನೆ, ದ್ವಾರಕೆಯ ಜನರು ಅರ್ಜುನನ ಸಖನಾದ ಶ್ರೀಕೃಷ್ಣನನ್ನು ಮಾತ್ರ ಪೂಜಿಸುತ್ತಾರೆ, ರಾಧೆಯನ್ನು ತಿರಸ್ಕರಿಸುತ್ತಾರೆ ಎಂಬುದಾಗಿ.”
ಒಬ್ಬ ಭಕ್ತ: “ಯಾವುದು ಒಳ್ಳೆಯದು-ಜ್ಞಾನಮಿಶ್ರಿತ ಭಕ್ತಿಯೋ, ಪ್ರೇಮ ಭಕ್ತಿಯೋ?”
ಶ್ರೀರಾಮಕೃಷ್ಣರು: “ಭಗವಂತನಲ್ಲಿ ಅತ್ಯಂತ ಗಾಢವಾದ ಭಕ್ತಿ ಇಲ್ಲದಿದ್ದರೆ, ಆತ ತನ್ನವನೇ ಎಂಬ ಜ್ಞಾನ ಉಂಟಾಗದವರೆಗೆ ಪ್ರೇಮಭಕ್ತಿ ಉಂಟಾಗುವುದಿಲ್ಲ.
“ಒಂದು ಕಥೆ ಕೇಳು. ಮೂರು ಜನ ಸ್ನೇಹಿತರು ಒಂದು ಕಾಡಿನಲ್ಲಿ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ಹುಲಿ ಅಡ್ಡವಾಯಿತು. ಒಬ್ಬ ಹೇಳಿದ: ‘ಗೆಳೆಯರಾ ನಮ್ಮ ಗತಿ ಮುಗಿಯಿತು.’ ಎರಡನೆಯವನು ಹೇಳಿದ: ‘ಹಾಗೇಕೆ ಹೇಳುತ್ತೀಯೆ? ನಮ್ಮ ಗತಿ ಏಕೆ ಮುಗಿದುಹೋದೀತು? ಬನ್ನಿ. ಭಗವಂತನನ್ನು ಪ್ರಾರ್ಥಿಸೋಣ.’ ಮೂರನೆಯವನು ಹೇಳಿದ: ಇದಕ್ಕೆಲ್ಲ ಭಗವಂತನಿಗೇಕೆ ಕಷ್ಟಕೊಡಬೇಕು? ಬನ್ನಿ ಈ ಮರ ಹತ್ತಿಬಿಡೋಣ.
‘ನಮ್ಮ ಗತಿ ಮುಗಿಯಿತು’ ಎಂದು ಹೇಳಿದವನಿಗೆ ಗೊತ್ತಿಲ್ಲ, ಭಗವಂತ ನಮ್ಮ ರಕ್ಷಕ ಎಂಬುದು. ‘ಭಗವಂತನನ್ನು ಪ್ರಾರ್ಥಿಸೋಣ’ ಎಂಬುದಾಗಿ ಹೇಳಿದವ ಜ್ಞಾನಿ. ಜ್ಞಾನಿಗೆ ಗೊತ್ತಿದೆ, ಭಗವಂತ ಸೃಷ್ಟಿ ಸ್ಥಿತಿ ಪ್ರಳಯ ಮಾಡುತ್ತಾನೆ ಎಂದು. ಆದರೆ ಯಾರು ‘ಇದಕ್ಕೆಲ್ಲ ಭಗವಂತನಿಗೇಕೆ ಕಷ್ಟಕೊಡಬೇಕು, ಬನ್ನಿ ಈ ಮರ ಹತ್ತಿಬಿಡೋಣ’ ಎಂದು ಹೇಳಿದನೋ ಆತನ ಹೃದಯದಲ್ಲಿ ಪ್ರೇಮ ಅಂಕುರಿಸಿದೆ, ಪ್ರೀತಿ ಹುಟ್ಟಿದೆ. ಪ್ರೇಮದ ಸ್ವಭಾವವೇ ಅಂಥದು. ಅದು ತನ್ನ ಪ್ರೀತಿಪಾತ್ರನಿಗಿಂತ ತಾನೇ ಬಲಶಾಲಿ ಎಂಬುದಾಗಿ ಭಾವಿಸುವಂತೆ ಮನುಷ್ಯನನ್ನು ಪ್ರೇರೇಪಿಸುತ್ತದೆ. ಪ್ರೀತಿಪಾತ್ರನಿಗೆ ಯಾವ ತೊಂದರೆಯೂ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಾನೆ. ತನ್ನ ಪ್ರೀತಿಪಾತ್ರನ ಕಾಲಿಗೆ ಒಂದು ಮುಳ್ಳೂ ನೆಟ್ಟಕೂಡದು ಎಂಬುದೇ ಆತನ ಹಗಲಿರುಳ ಚಿಂತನೆ.”
ರಾಮಚಂದ್ರದತ್ತ ಪರಮಹಂಸರಿಗೆ ಮತ್ತು ಭಕ್ತರೆಲ್ಲರಿಗೂ ಬಗೆಬಗೆಯ ಸಿಹಿತಿಂಡಿಗಳಿಂದ ಉಪಾಹಾರ ಮಾಡಿಸಿದ.