“ಸನಾತನ ಶಾಸ್ತ್ರ ಮತ್ತು ಧರ್ಮಗಳಲ್ಲಿ ನಿಹಿತವಾಗಿದ್ದರೂ ಕೆಲವು ಕಾಲ ಮಾತ್ರ ಪ್ರಚ್ಛನ್ನವಾಗಿದ್ದ ಈ ಅಸೀಮ ಅನಂತಭಾವವು, ಈ ಯುಗಾವತಾರನಿಂದ ಪುನರಾವಿಷ್ಕೃತವಾಗಿ ಪಾಂಚಜನ್ಯಸದೃಶವಾದ ಉಚ್ಚನಿನಾದದಿಂದ ಮಾನವ ಸಮಾಜದಲ್ಲಿ ಘೋಷಿತವಾಗುವುದು.
“ಈ ನವಯುಗ ಪ್ರವರ್ತಕನಾದ ಭಗವಾನ್ ಶ್ರೀರಾಮಕೃಷ್ಣನು ಹಿಂದೆ ಅವತರಿಸಿದ ಯುಗಧರ್ಮಪ್ರವರ್ತಕ ಸಮೂಹದ ಪುನಸ್ಸಂಸ್ಕೃತ ಮಹಾಪ್ರಕಾಶವಾಗಿರುತ್ತಾನೆ!
“ಯಾವ ಶಕ್ತಿಯ ಉನ್ಮೇಷಮಾತ್ರದಿಂದಲೆ ದಿಗ್ದಿಗಂತವ್ಯಾಪಿಯಾದ ಪ್ರತಿಧ್ವನಿಯಿಂದ ಜಗತ್ತು ಜಾಗೃತವಾಗುತ್ತಿರುವುದೋ ಈ ಶಕ್ತಿಯ ಪೂರ್ಣತ್ವವನ್ನು ಭಾವಿಸಿ ಅನುಭವಿಸು!”
ಅರ್ಧಶತಮಾನಕ್ಕೆ ಪೂರ್ವದಲ್ಲಿ ಶ್ರೀರಾಮಕೃಷ್ಣರು ಮಹಾಸಮಾಧಿಸ್ಥರಾದ ತರುಣ ದಲ್ಲಿಯೆ, ಜಗತ್ತಿನ ಕಿವಿ ಆ ದಕ್ಷಿಣೇಶ್ವರ ದೇವಮಾನವನ ಪುಣ್ಯನಾಮದ ದೂರಘೋಷದ ಅನುರಣನ ಮತ್ತು ಪ್ರತಿಧ್ವನನಗಳಿಂದ ಆಗತಾನೆ ಒಂದಿನಿತೆ ಉನ್ಮೇಷಗೊಳ್ಳುತ್ತಿದ್ದ ಶುಭಮುಹೂರ್ತದಲ್ಲಿ ದ್ರಷ್ಟಾರ ಸ್ವಾಮಿ ವಿವೇಕಾನಂದರ ಋಷಿವಾಣಿ ಹಾಗೆಂದು ಘೋಷಿಸಿತು. ಅವರು ಅಂದು ಸಾರಿ ಹೇಳಿದ ಭವಿಷ್ಯತ್ತು ದಿನದಿನಕ್ಕೂ ಹೆಚ್ಚು ಹೆಚ್ಚು ಸತ್ಯವಾಗಿ ಈ ಐವತ್ತು ವರ್ಷಗಳಲ್ಲಿ ನಿರ್ವಿವಾದವಾದ ನಿಸ್ಸಂದೇಹವಾದ ನಿರ್ಣಾಯಕವಾದ ಸಿದ್ಧಾಂತವಾಗಿರುವುದನ್ನು ಕಾಣುತ್ತಲಿದ್ದೇವೆ. ಶ್ರೀರಾಮಕೃಷ್ಣರ ದಿವ್ಯಪ್ರಭಾವ ಸಮಗ್ರಪೃಥ್ವಿಮಂಡಲವನ್ನೇ ವ್ಯಾಪಿಸುತ್ತಿದೆ. ಅವರ ಜೀವನ ಉಪದೇಶಗಳಿಂದ ಕೋಟ್ಯಂತರ ಚೇತನಗಳು ಅರಳಿ ಬೆಳಕು ಕಾಣುತ್ತಿವೆ; ಅಸಂಖ್ಯ ಹೃದಯಗಹ್ವರಗಳಲ್ಲಿ ಶಾಂತಿಯ ಸತ್ತ್ವದ ಆನಂದದ ಭಗವಜ್ಜ್ಯೋತಿ ಹೊಮ್ಮುತ್ತಿದೆ. ಆ ದಿವ್ಯಸಂದೇಶಾಮೃತದಿಂದ ಆಕರ್ಷಿತರಾಗಿ ಆರ್ತರೂ ಮುಮುಕ್ಷುಗಳೂ ಜ್ಞಾನಾರ್ಥಿಗಳೂ ಭೂಮಂಡಲದ ಮೂಲೆಮೂಲೆಗಳಿಂದ ಯಾತ್ರೆ ಬರುತ್ತಿದ್ದಾರೆ. ಕಂಡರಿಯದ ಕೇಳರಿಯದ ಬಹುದೂರದ ದೇಶದೇಶಗಳಲ್ಲಿ ಪರಮಹಂಸರ ಜೀವನಸಂದೇಶಗಳು ಪ್ರಕಟವಾಗುತ್ತಿವೆ. ಸ್ವಾಮಿ ವಿವೇಕಾನಂದರಿಂದ “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” ಎಂಬ ಮಹಾಧ್ಯೇಯದಿಂದ ಸ್ಥಾಪಿತವಾದ ಶ್ರೀರಾಮಕೃಷ್ಣ ಮಹಾಸಂಘವು ಸದ್ದುಗದ್ದಲವಿಲ್ಲದೆ ಮೆಲ್ಲಮೆಲ್ಲನೆ ಕ್ರಮಕ್ರಮೇಣ ತನ್ನ ಮಾತೃಸದೃಶವಾದ ಕರುಣಾಬಾಹುಗಳಿಂದ ಪ್ರಪಂಚವನ್ನೆಲ್ಲ ತಬ್ಬುತ್ತಿದೆ. ಪ್ರತಿವರುಷವೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮಹಾಸಂಘದ ಶಾಖಾಕೇಂದ್ರಗಳು ಸ್ಥಾಪಿತವಾಗುತ್ತಿವೆ.
ಆದರೆ ಅದರ ರೀತಿಯೇ ಬೇರೆ, ನೀತಿಯೇ ಬೇರೆ. ಅಲ್ಲಿ ಪ್ರೀತಿಗಲ್ಲದೆ ಭೀತಿಗೆ ಒಂದಿನಿತೂ ಅವಕಾಶವಿರುವುದಿಲ್ಲ. ಅದು ಮತಪ್ರಚಾರದ ಸಂಸ್ಥೆಯಲ್ಲ; ಧರ್ಮಪ್ರಚಾರ ಸಂಸ್ಥೆ. ಅದರ ಉದ್ದೇಶ ಇತರ ವಿದೇಶೀಯ ಮತಸಂಸ್ಥೆಗಳಂತೆ ಮತಾಂತರಗೊಳಿಸುವುದಲ್ಲ. ಎಲ್ಲ ಮತಗಳೂ ಭಗವಂತನೆಡೆಗೆ ಭಕ್ತನನ್ನು ಕರೆದೊಯ್ಯುವ ವಿವಿಧ ಪಥಗಳು ಎಂಬುದೆ ಅದರ ದೃಢ ವಿಶ್ವಾಸ. ಅಮೆರಿಕಾದ ಮತ್ತು ಇಂಗ್ಲೆಂಡಿನ ಕ್ರೈಸ್ತಮಿಷನ್ನುಗಳಂತೆಯಾಗಲಿ ಮಹಮ್ಮದೀಯ ಬೌದ್ಧಾದಿ ಪ್ರಚಾರ ಸಂಸ್ಥೆಗಳಂತಾಗಲಿ ಅದು ಮತಾಂತರಗೊಳಿಸುವ ನೆವದಿಂದ ತಮ್ಮ ಪಕ್ಷದ ಜನಸಂಖ್ಯೆಯನ್ನು ವಿಪುಲಗೊಳಿಸುವ ಲೌಕಿಕವೂ ರಾಜಕೀಯವೂ ಆದ ಕಾರ್ಯಕ್ಕೆ ಎಂದೂ ಪ್ರವೇಶಿಸುವುದಿಲ್ಲ. ಅಲ್ಲದೆ ಇಲ್ಲಿ ಗಮನಿಸ ಬೇಕಾದ ಮತ್ತೊಂದು ಸಂಗತಿ ಎಂದರೆ, ಇತರ ವಿದೇಶೀಯ ಮಿಷನ್ನುಗಳಿಗೆ ಅವರ ದೇಶದ ಸರಕಾರವೋ ಅಥವಾ ಮಠಾಧಿಪತಿಯೋ ಹಣವೊದಗಿಸುವಂತೆ ಶ್ರೀರಾಮಕೃಷ್ಣ ಮಹಾಸಂಘವು ಹಣವೊದಗಿಸುವುದಿಲ್ಲ. ಎಲ್ಲಿ ಯಾವ ದೇಶದಲ್ಲಿ ಕೇಂದ್ರ ತೆರೆದರೂ ಅಲ್ಲಿನ ಜನರ ಅಪೇಕ್ಷೆಯಂತೆಯೇ ತೆರೆಯಬೇಕು. ಅಲ್ಲಿಯ ಜನರೇ ಆ ಸಂಸ್ಥೆ ನಡೆಯುವುದಕ್ಕೆ ಹಣ ಒದಗಿಸಬೇಕು. ಅವರು ಬೇಕೆಂದರೆ ಇರುತ್ತದೆ. ಬೇಡವೆಂದರೆ ಹೋಗುತ್ತದೆ. ತಾಯಿ ಸಂಸ್ಥೆ ಹಣವೊದಗಿಸಿ ಅದರ ಆಯುಃಪ್ರಮಾಣವನ್ನು ಕೃತಕವಾಗಿ ಅಧಿಕಗೊಳಿಸುವ ಗೋಜಿಗೆ ಎಂದಿಗೂ ಹೋಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಶ್ರೀರಾಮಕೃಷ್ಣ ಸಂಘದ ಕೇಂದ್ರೋಪಕೇಂದ್ರಗಳು ಯಾವ ಕೃತಕ ಪ್ರಚೋದನೆಯೂ ಇಲ್ಲದೆ, ಯಾವ ಲೌಕಿಕ ಪ್ರಯೋಜನದ ಉದ್ದೇಶವನ್ನೂ ಒಲ್ಲದೆ, ಸ್ವಾಭಾವಿಕವಾಗಿ, ಸಂದೇಹ ಭೀತಿ ಘರ್ಷಣೆಗಳಿಗೆ ಒಂದಿನಿತೂ ಅವಕಾಶವಿಲ್ಲದಂತೆ ಮೂಡಿ ಮಲರಿ ಬಾಳುತ್ತಿವೆ, ಬದುಕನ್ನು ಬೆಳಗಿಸುತ್ತಿವೆ.
ಶ್ರೀರಾಮಕೃಷ್ಣರ ಹೆಸರು ಜಗದ್ವ್ಯಾಪಿಯಾಗುವಂತೆಯೂ ಅವರ ಉಪದೇಶಾಮೃತ ಲೋಕದ ಹೃದಯಕ್ಕೆ ಪ್ರವಹಿಸುವಂತೆಯೂ ಮಾಡಿದ ಮಹಾವ್ಯಕ್ತಿಗಳಲ್ಲಿ ಇಬ್ಬರು ಕಲಶ ಪ್ರಾಯವಾಗಿದ್ದಾರೆ. ಅವರಲ್ಲಿ ಒಬ್ಬರು ವಿಖ್ಯಾತನಾಮರು, ಮತ್ತೊಬ್ಬರು ಅಜ್ಞಾತರು ಅಥವಾ ಅನಾಮರು: ಸ್ವಾಮಿ ವಿವೇಕಾನಂದ ಮತ್ತು “ಮ” ! ಒಂದು ಆಕಾಶದಲ್ಲಿ ತೊಳಗುವ ಸೂರ್ಯ, ಮತ್ತೊಂದು ಮನೆಮನೆಯ ಹೃದಯದ ಗುಡಿಯಲ್ಲಿ ಬೆಳಗುವ ಹಣತೆ, ನಂದಾದೀಪ, ಕತ್ತಲೆಯಲ್ಲಿ ಭಾಸ್ಕರನಿಲ್ಲದ ವೇಳೆಯಲ್ಲಿಯೂ ತಂಪಿನ ಕಾಂತಿ ಶಾಂತಿಗಳನ್ನು ಕಣ್ಣುಕೋರೈಸದಂತೆ ನಿರಾಡಂಬರವಾಗಿ ನೀಡುವ ಸೊಡರು, ಮುದ್ದುಸೊಡರು, ತಾಯ್ತನದ ಸೊಡರು, ಹಣತೆ ಸೊಡರು! ಆತನು ತನ್ನ ಪೂರ್ಣನಾಮದಿಂದ ಪ್ರಪಂಚದ ಸಂತೆಬಯಲಿಗೆ ಬರಲು ನಾಚಿ, ಹೇಸಿ, ಹೆದರಿ, ‘ಮ’ ಎಂಬ ಮೊದಲಕ್ಕರದಿಂದ ಮಾತ್ರ ತೆರೆಮರೆಯಿಂದ ಇಣುಕಿದ ಎಲೆಮರೆಯ ಮಿಣುಕು ಹೂ!
ಸ್ವಾಮಿ ವಿವೇಕಾನಂದರು ಚಿಕಾಗೊ ಸರ್ವಧರ್ಮಸಮ್ಮೇಳನದಲ್ಲಿ ವಿಜಯಿ ಯಾದಂದು ಮೊದಲುಗೊಂಡು ಅವರು ಪರಂಧಾಮವನ್ನೈದುವವರೆಗೂ ದೇಶವಿದೇಶಗಳಲ್ಲಿ ಜನಾಂಗ ಜನಾಂಗಗಳಲ್ಲಿ ಸಹಸ್ರಾರು ವೇದಿಕೆಗಳ ಮೇಲೆ ನಿಂತು ತಮ್ಮ ಅನನುಕರಣೀಯವಾದ ಧೀರವಾಣಿಯಿಂದಲೂ ಅನುಪಮ ತೇಜಸ್ಸಿನ ವ್ಯಕ್ತಿತ್ವದಿಂದಲೂ ಶ್ರೀಗುರುದೇವನ ಉದಾರ ದಿವ್ಯ ಸಮನ್ವಯ ಸಂದೇಶವನ್ನು ಜಗತ್ತಿಗೆ ಸಾರಿ ಶ್ರೀರಾಮಕೃಷ್ಣರ ನಾಮಸಿಂಹಾಸನ ದಶದಿಕ್ಕುಗಳಲ್ಲಿಯೂ ಸಂಸ್ಥಾಪಿತವಾಗುವಂತೆ ಪೀಠಿಕೆ ಹಾಕಿದರು. ಅವರು ತಾವೇ ಸ್ವತಃ ಬರೆದ ಬರವಣಿಗೆಯೂ ಶಿಷ್ಯವರ್ಗ ದವರು ಬರೆದಿಟ್ಟುಕೊಂಡ ಅವರ ಮಾತುಕತೆ ಮತ್ತು ಭಾಷಣಗಳೂ ತರುವಾಯ ಮುದ್ರಿತವಾಗಿ ಹಲವಾರು ಮಹಾ ಹೊತ್ತಗೆಗಳ ರೂಪದಲ್ಲಿ ಹೊರಬಿದ್ದು ಕೋಟ್ಯಂತರ ಜನಗಳ ಹೃದಯ ಬುದ್ಧಿಗಳಿಗೆ ಪುಷ್ಟಿಕಾಂತಿಗಳನ್ನು ದಾನಮಾಡಿವೆ ಮತ್ತು ಮಾಡುತ್ತಲೂ ಇವೆ. ಇಂಗ್ಲಿಷಿನಲ್ಲಿ ಮೊದಲು ಬೆಳಕು ಕಂಡ ಅವು ಪ್ರಪಂಚದ ಅನೇಕಾನೇಕ ಭಾಷೆಗಳಿಗೆ ಪರಿವರ್ತಿತವಾಗಿ ಈಗ ಸರ್ವಜಗತ್ತಿನ ಸ್ವತ್ತಾಗಿ ಪರಿಣಮಿಸಿವೆ.
ಸ್ವಾಮಿ ವಿವೇಕಾನಂದರ ಸಿರಿಬಾಯಿಂದಲೆ ಪರಮಹಂಸರ ಜೀವನ ವಿಚಾರವನ್ನೆಲ್ಲ ಸಾಧ್ಯವಾದಷ್ಟು ಆಮೂಲಾಗ್ರವಾಗಿ ಕೇಳಿ ಅವರ ವಿಚಾರವಾಗಿ ಮೊತ್ತಮೊದಲನೆಯ ಚಿಕ್ಕದಾದರೂ ಮಹತ್ತಾದ ಗ್ರಂಥವನ್ನು ಬರೆದವರೆಂದರೆ ಭಾರತೀಯ ತತ್ತ್ವಶಾಸ್ತ್ರಗಳನ್ನು ಪಾಶ್ಚಾತ್ಯರಿಗೆ ಪರಿಚಯಮಾಡಿಕೊಡುವುದರಲ್ಲಿಯೆ ತಮ್ಮ ಜೀವಮಾನವನ್ನೆಲ್ಲ ಕಳೆದ ಪ್ರೊಫೆಸರ್ ಮ್ಯಾಕ್ಸ್ ಮುಲ್ಲರ್ ಅವರು. ಅವರ ತರುವಾಯ ಬಹುವರ್ಷ ಕಳೆದಮೇಲೆ, ಅವರಷ್ಟೆ ಪ್ರಸಿದ್ಧರೂ ಪ್ರಪಂಚದ ಸಾಹಿತ್ಯಲೋಕದಲ್ಲಿ ಒಂದು ಶಾಶ್ವತ ತಾರೆಯಾಗಿ ಪ್ರಕಾಶಿಸುತ್ತಿರುವವರೂ ಆದ ಫ್ರೆಂಚ್ ಸಾಧಕ ಸಾಹಿತಿ ಮತ್ತು ಮಹಾಜ್ಞಾನಿ ದಿವಂಗತ ರೊಮೇನ್ ರೊಲಾಂಡ್. ಅವರು ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದ ಇವರಿಬ್ಬರ ಜೀವನಚರಿತ್ರೆಗಳನ್ನೂ ಅನ್ಯಾದೃಶವಾದ ವಿಶಾಲದೃಷ್ಟಿಯಿಂದಲೂ ವಿದ್ವತ್ತಿನಿಂದಲೂ ಬರೆದು ಜಗತ್ತನ್ನು ಬೆರಗುಗೊಳಿಸಿದರು. ಅದಕ್ಕೆ ಮೊದಲೆ ಭಾರತೀಯ ಭಾಷೆಗಳಲ್ಲಿ ಒಂದಾಗಿರುವ ಬಂಗಾಳಿಯಲ್ಲಿ ಪರಮಹಂಸರ ಅಂತರಂಗಶಿಷ್ಯರಲ್ಲಿ ಅಗ್ರಗಣ್ಯರೆಂದು ಪರಿಗಣಿತರಾಗಿದ್ದ ಶ್ರೀಮತ್ ಸ್ವಾಮಿ ಶಾರದಾನಂದರು ‘ಶ್ರೀರಾಮಕೃಷ್ಣ ಲೀಲಾಪ್ರಸಂಗ’ ಎಂಬ ಅದ್ಭುತ ಬೃಹತ್ ಗ್ರಂಥವನ್ನು ಪೌರಾಣಿಕ ಪ್ರಮಾಣದಲ್ಲೆ ಬರೆದು ತಮ್ಮ ಗುರುವಿನ ಜೀವನದ ನಿಕಟ ಪರಿಚಯವನ್ನು ಲೋಕಕ್ಕೆ ಮಾಡಿಕೊಟ್ಟರು.೧ ಆದರೆ ಎಲ್ಲಕ್ಕೂ ಮೊದಲಾಗಿ, ಎಲ್ಲಕ್ಕೂ ಮಿಗಿಲಾಗಿ, ಎಲ್ಲರಿಗಿಂತಲೂ ಹಿರಿದಾಗಿ, ಇತರರಾರಿಂದಲೂ ಸಾಧ್ಯವಿಲ್ಲದಷ್ಟು ವಿವರವಾಗಿ, ಬರೆದ ಇತರರೆಲ್ಲರಿಗೂ ಮೂಲಾಧಾರ ಗ್ರಂಥವಾಗುವಂತೆ ಸಕಲ ವಿಷಯ ಸವಿಸ್ತಾರವಾಗಿ, ಹಿಂದಿಲ್ಲ ಮುಂದೆ ಬರುವುದಿಲ್ಲವೆಂಬಂತೆ ಆಶ್ಚರ್ಯಕರವಾಗಿ, ಪಂಡಿತ ಪಾಮರ ಸರ್ವ ಸುಲಭ ಸ್ವರಸವಾಗಿ, ಶ್ರೀರಾಮಕೃಷ್ಣ ಪರಮಹಂಸರ ಸ್ವಂತ ಸಹಜ ದಿವ್ಯವಾಣಿಯೆ ಲೋಕಕಲ್ಯಾಣಾರ್ಥವಾಗಿ ಮೂರ್ತಿ ಮತ್ತಾಗಿರುವಂತೆ ಅವರ ವಚನವೇದವನ್ನು ಲೋಕಕ್ಕೆ ಅನುಗ್ರಹಿಸಿದವರೆಂದರೆ ‘ಕಥಾಮೃತ’ ಕರ್ತೃ ಶ್ರೀ ‘ಮ’ ! ‘ಮ’ ಅವರಿಗೆ ತಾನು ಯಾವ ಪ್ರಮಾಣದಲ್ಲಿ ಋಣಿಯಾಗಿದ್ದೇನೆ ಎಂಬುದಿನ್ನೂ ಜಗತ್ತಿಗೆ ಸಂಪೂರ್ಣವಾಗಿ ಅರಿವಾಗಿಲ್ಲ. ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಮಹಾಸಂಘದ ಸಂಸ್ಥಾಪನೆ ಮಾಡಿದುದಕ್ಕೆ ಸಮಸಂವಾದಿಯಾಗಿ, ಹೆಗಲೆಣೆಯಾಗಿ ನಿಲ್ಲುತ್ತದೆ. ‘ಮ’ ಅವರ ‘ಶ್ರೀರಾಮಕೃಷ್ಣ ವಚನವೇದ’ ಮೇರುಕೃತಿ!
ಅಷ್ಟೆ ಅಲ್ಲ ಅದಕ್ಕಿಂತಲೂ ಚಿರಸ್ಥಾಯಿ ಎಂದಾದರೂ ಹೇಳಬಹುದು. ಒಮ್ಮೆ ಬೇಲೂರು ಮಠದ ಒಂದು ಮರದಡಿಯಲ್ಲಿ ಅಡ್ಡಾಡುತ್ತಿರುವಾಗ ಸ್ವಾಮಿ ವಿವೇಕಾನಂದರು ಹೇಳಿದರಂತೆ, ‘ಇಂದು ಇಲ್ಲಿ ಸ್ಥಾಪಿತವಾದ ಈ ಸಂಘರೂಪದ ಶಕ್ತಿ ಇನ್ನು ಐನೂರು ವರ್ಷಗಳವರೆಗೂ ಚ್ಯುತಿಯಿಲ್ಲದೆ ಅವ್ಯಾಹತವಾಗಿ ಮುಂದುವರಿಯುತ್ತದೆ’ ಎಂದು. ನಮಗನ್ನಿಸುತ್ತದೆ ‘ಮ’ ಅವರ ಈ ಮೇರುಕೃತಿ ಮನುಷ್ಯತ್ವವಿರುವವರೆಗೆ, ಅದು ದೇವತ್ವವನ್ನು ಬಯಸುತ್ತಿರುವವರೆಗೆ ಚಿರಸ್ಥಾಯಿಯಾಗಿ, ಜೀವಂತ ಶಕ್ತಿಯಾಗಿರುತ್ತದೆ ಎಂದು. ಕಟ್ಟಡ ಸಂಸ್ಥೆಗಳು ಕಾಲವಶವಾಗಿ ಗತಿಸಬಹುದು; ಸರಸ್ವತಿ ಅಮರೆ!
ಈಗೀಗ ಜಗದ್ಪ್ರಸಿದ್ಧವಾಗುತ್ತಿರುವ ‘ಮ’ ಅವರ ನಿಜವಾದ ಹೆಸರು ಮಹೇಂದ್ರ ನಾಥಗುಪ್ತ, ಬಂಗಾಳಿಗಳಿಗೆ ‘ಮಾಸ್ಟರ್ ಮಹಾಶಯ’ ಎಂಬ ನೆಚ್ಚಿನ ನಾಮಾಂಕಿತದಿಂದ ನಿತ್ಯಪರಿಚಿತರಾಗಿದ್ದಾರೆ. ಅವರು ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ನವೀನ ರೀತಿಯ ಇಂಗ್ಲಿಷ್ ವಿದ್ಯಾಭ್ಯಾಸದಲ್ಲಿ ಉತ್ತೀರ್ಣರಾಗಿ, ಅಂದಿನ ಅಂತಹ ಎಲ್ಲ ತರುಣರಂತೆ ಬ್ರಾಹ್ಮಸಮಾಜಕ್ಕೆ ಸೇರಿದವರಾಗಿ, ಒಂದು ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದರು. ಇಂಗ್ಲಿಷ್ ವಿದ್ಯಾಭ್ಯಾಸ ಪದ್ಧತಿಯಿಂದ ಭಾರತೀಯ ತರುಣರ ಮೇಲೆ ಆದ ಎಲ್ಲ ಸತ್ ಮತ್ತು ದುಷ್ಪರಿಣಾಮಗಳಿಗೆ ಅವರೇನೂ ಹೊರತಾಗಿರಲಿಲ್ಲ. ಯಾವ ಅಗೋಚರ ದಿವ್ಯಶಕ್ತಿ ನರೇಂದ್ರನಾಥನನ್ನು ದಕ್ಷಿಣೇಶ್ವರದ ಭವತಾರಿಣಿಯ ಭಕ್ತವರೇಣ್ಯನೆಡೆಗೆ ಸಳೆಯಿತೋ ಅದೇ ಶಕ್ತಿ ಮಹೇಂದ್ರನಾಥಗುಪ್ತನನ್ನೂ ತನ್ನ ಕಡೆಗೆ ಆಕರ್ಷಿಸಿತು. ನರೇಂದ್ರ ಮತ್ತು ಶ್ರೀರಾಮಕೃಷ್ಣರ ಮೊದಮೊದಲ ಸಂದರ್ಶನ ಸಂದರ್ಭಗಳಲ್ಲಿ ನಮಗೆ ಗೋಚರವಾಗುವ ಅದ್ಭುತ ನಾಟಕೀಯತೆ ಮಾಸ್ಟರ್ ಮಹಾಶಯ ಶ್ರೀರಾಮಕೃಷ್ಣರನ್ನು ಸಂದರ್ಶಿಸಿದ ಪ್ರಥಮದಲ್ಲಿ ನಮಗೆ ಕಾಣಿಸುವುದಿಲ್ಲ. ಆದರೆ ‘ಮ’ ತನ್ನ ದಿನಚರಿಯಾದ ‘ಕಥಾಮೃತ’ ದಲ್ಲಿ ಲೋಕಕ್ಕೆ ಕೊಟ್ಟಿರುವ ಆ ಸಂದರ್ಶನ ಕಥನವನ್ನು ಸುಸೂಕ್ಷ್ಮವಾಗಿ ಅವಲೋಕಿಸುವ ಯಾರಿಗಾದರೂ ಹೊಳೆಯುತ್ತದೆ, ನರೇಂದ್ರನಿಗಾಗಿ ಅವರು ಹಾತೊರೆದು ಕಾಯುತ್ತಿದ್ದಂತೆ ಮಾಸ್ಟರ್ ಮಹಾಶಯನನ್ನೂ ನಿರೀಕ್ಷಿಸುತ್ತಿದ್ದರೆಂದು. ತಮ್ಮ ಸಂದೇಶವನ್ನು ಡಿಂಡಿಮಸದೃಶ ಕಂಠದಿಂದ ದಶದಿಕ್ಕುಗಳಿಗೂ ಪ್ರತಿಧ್ವನಿಸುವಂತೆ ಡಂಗುರ ಹೊಯ್ದು ಸಾರಿ ಆಲಿಸಿದವರನ್ನು ತನ್ನ ಭವ್ಯ ವ್ಯಕ್ತಿತ್ವದಿಂದ ಅಪ್ಪಳಿಸುವ ಕಾರ್ಯಕ್ಕೆ ನರೇಂದ್ರನು ಆವಶ್ಯಕವಾಗಿದ್ದಂತೆ ಆ ಲೋಕಪರಿವರ್ತನಕರವಾದ ದಿವ್ಯಸಂದೇಶವನ್ನು ತಮ್ಮ ಸ್ವಂತವಾಣಿಯಲ್ಲಿಯೆ ಹಿಡಿದಿಟ್ಟು, ಅದರ ವಿವರ ವಿವರವನ್ನೂ ಸ್ತರಸ್ತರವಾಗಿ ಚಿತ್ರಿಸಿ, ಗುರುದೇವನ ದೈನಂದಿನ ಗುರುಲಘುಮಿಶ್ರಿತ ಮನೋವಾಕ್ಕಾಯ ವ್ಯಾಪಾರಗಳನ್ನೆಲ್ಲ ತನ್ನ ನೆನಹಿನ ತೊಟ್ಟಿಲಲ್ಲಿ ಲಾಲಿಸಿ ಪಾಲಿಸಿ ಅಪಚಾರವಾಗ ದಂತೆ ಪೊರೆದು, ಸದ್ದುಗದ್ದಲವಿಲ್ಲದೆ ಆಟೋಪ ಅಟ್ಟಹಾಸಗಳಿಲ್ಲದೆ ಲೋಕಶಿಶುಹೃದಯಕ್ಕೆ ಅಮರಸ್ತನ್ಯವೀಯುವ ದೀನ ದಿವ್ಯ ಮಹತ್ತರ ಕಾರ್ಯಕ್ಕೆ ಮಹೇಂದ್ರನಾಥನಂತಹವರ ಆವಶ್ಯಕತೆಯೂ ಅತ್ಯಂತ ಅನಿವಾರ್ಯವಾಗಿತ್ತೆಂಬುದು ಸ್ಪಷ್ಟವಾಗುತ್ತಿದೆ. ಅಷ್ಟೇ ಅಲ್ಲ, ‘ವಚನವೇದ’ ದ ನಾನಾ ಭಾಗಗಳಲ್ಲಿ ಮಾಸ್ಟರ್ ಮಹಾಶಯನ ವಿಚಾರವಾಗಿ ಶ್ರೀಗುರು ಆತನ ಜನ್ಮಾಂತರ ವಿಷಯಗಳನ್ನೂ ಸೂಚಿಸುತ್ತಾರೆ. ಈ ಯುಗದ ಭಗವದ್ವಾಣಿಯನ್ನು ಬರೆದಿಡುವುದಕ್ಕಾಗಿಯೆ ಯುಗಾವತಾರನು ತನ್ನ ದಿವ್ಯ ಕರಣಿಕನನ್ನು ಮಹೇಂದ್ರಗುಪ್ತನನ್ನಾಗಿ ಕರೆದಿದ್ದನೆಂಬುದೂ ಅಲ್ಲಲ್ಲಿ ಧ್ವನಿತವಾಗುತ್ತದೆ. ಮಹೇಂದ್ರನೂ ತನ್ನ ಹೆಸರಿಗೆ ತಕ್ಕಂತೆಯೆ ಗುಪ್ತನಾಗಿದ್ದುಕೊಂಡು, ಗುಪ್ತರೀತಿಯಲ್ಲಿಯೆ ಎಲ್ಲವನ್ನೂ ಬರೆದಿಟ್ಟುಕೊಂಡು, ಯಾವುದಕ್ಕಾಗಿ ತಾನು ಅವತಾರದೊಡನೆ ಅವತರಿಸಿದ್ದನೊ ಅದನ್ನು ಸಂಪೂರ್ಣವಾಗಿ ಸಾರ್ಥಕಗೊಳಿಸಿ ಕೃತಕೃತ್ಯನಾಗಿ ಭೂರಂಗತ್ಯಾಗ ಮಾಡಿದ್ದಾನೆ. ಆತನಿಗೆ ನಾವೆಷ್ಟು ಋಣಿ ಎಂಬುದನ್ನು ಹೇಳಿ ಪೂರೈಸಲಾದೀತೆ?
‘ಶ್ರೀರಾಮಕೃಷ್ಣ ವಚನವೇದ’ ವೆಂದರೆ ಅದೊಂದು ಕರತಲ ದೇವಸ್ಥಾನ, ಕರತಲ ತಪೋರಂಗ, ಕರತಲ ಪುಣ್ಯಕ್ಷೇತ್ರ. ಆದರೆ ದೇವಸ್ಥಾನ ಪುಣ್ಯಕ್ಷೇತ್ರಗಳಂತೆ ತಾನೆಂದಿಗೂ ಕಲುಷಿತವಾಗುವ ಸಂಭವವಿಲ್ಲ, ಶಿಥಿಲವಾಗುವ ಸಂಭವವಿಲ್ಲ. ಯಾವ ಮನೆಯಲ್ಲಿ ಈ ‘ವಚನವೇದ’ ಇರುತ್ತದೆಯೊ ಅದು ಮಂದಿರವಾಗಿರುತ್ತದೆ. ಯಾರ ಜಿಹ್ವೆ ಇದನ್ನು ಹಿಡಿದಿರುತ್ತದೆಯೊ ಅದು ಭಗವಂತನ ಪಾದಾರವಿಂದವನ್ನೇ ಧರಿಸಿರುತ್ತದೆ. ಯಾರ ಚಿಹ್ವೆ ಇದನ್ನು ಪಠಿಸುತ್ತದೆಯೊ ಅದು ಅಮೃತವನ್ನೆ ಈಂಟುತ್ತಿರುತ್ತದೆ. ಇದು ಆನಂದದ ಆಗರ; ಶಾಂತಿಯ ಸಾಗರ; ದಿವ್ಯ ಜ್ಞಾನದ ಓಗರ. ಕಷ್ಟದ ಸಮಯದಲ್ಲಿ ಧೈರ್ಯವೀಯುವ ಸಖ; ಸುಖದ ಸಮಯದಲ್ಲಿ ಸಮರ್ಪಣಭಾವವಿತ್ತು ವಿನಯ ಭಕ್ತಿಗಳನ್ನು ಪ್ರಚೋದಿಸುವ ಗುರು; ಕತ್ತಲಲ್ಲಿ ದೀಪ; ದಾರಿಗೆ ಊರೆಗೋಲು. ದಿಕ್ಕುಗೆಡದಂತೆ ಗುರಿದೋರುವ ಧ್ರುವತಾರೆ. ಇಲ್ಲಿ ವೇದ ವೇದಾಂತ ದರ್ಶನಾದಿ ಸರ್ವಸಾರವಿದೆ. ಓದು ಬರುವ ಅತ್ಯಂತ ಸಾಮಾನ್ಯನೂ ಇದನ್ನು ಓದಿದ ಮೇಲೆ ಯಾವ ಪಂಡಿತನಿಗೂ ಕರುಬುವ ಆವಶ್ಯಕತೆಯಿಲ್ಲ ಯಾವ ವಿದ್ವತ್ ಪೂರ್ಣವಾದ ತತ್ತ್ವಜ್ಞಾನಿಗೂ ಕೀಳೆಂದು ನಾಚಬೇಕಾಗಿಲ್ಲ. ಅದಕ್ಕೆ ಬದಲು ಭಗವಂತನ ಕೃಪೆಯಿಂದ ತನಗಿಂತಲೂ ಧನ್ಯರಿಲ್ಲ ಎಂದರಿತು ನಿರ್ಮಮನಾಗುತ್ತಾನೆ, ಶಾಂತನಾಗುತ್ತಾನೆ, ಪೂರ್ಣನಾಗುತ್ತಾನೆ. ಆತನಿಗೆ ಗಗನದ ವೈಶಾಲ್ಯ, ಹೈಮಾಚಲದ ಔನ್ನತ್ಯ, ಅಂಬುಧಿಯ ಗಂಭೀರ ಗಾಂಭೀರ್ಯ ಎಲ್ಲವೂ ಸಿದ್ಧಿಸುತ್ತವೆ. ಇಷ್ಟು ಸರ್ವಜನ ಸಾಮಾನ್ಯ ರೂಪದಲ್ಲಿ, ಇಷ್ಟು ಸರ್ವಸುಲಭ ರೂಪದಲ್ಲಿ ಭಗವಂತ ಎಂದೂ ಅವತರಿಸಿರಲಿಲ್ಲ, ಭಗವದ್ವಾಣಿ ತಾನೆಂದೂ ಕೃತಿಗೊಂಡಿರಲಿಲ್ಲ.
‘ಮ’ ಅವರ ಈ ಮಹತ್ ಕೃತಿ ‘ಕಥಾಮೃತ’ ಈಗಾಗಲೇ ಅನೇಕ ಭಾಷೆಗಳಲ್ಲಿ ಪರಿವರ್ತನಗೊಂಡಿದೆ, ಗೊಳ್ಳುತ್ತಿದೆ. ಸ್ವಾಮಿ ನಿಖಿಲಾನಂದರಿಂದ ಇಂಗ್ಲಿಷ್ ಭಾಷೆಗೆ ಭಾಷಾಂತರಿತವಾಗಿ, ಅಮೆರಿಕದಲ್ಲಿ ಮೊತ್ತಮೊದಲು ಪ್ರಕಟವಾಗಿ, “The Gospel of Sri Ramakrishna” ಎಂಬ ಹೆಸರಿನಿಂದ ಜಗತ್ಪ್ರಿಯವೂ ಪ್ರಸಿದ್ಧವೂ ಆಗಿದೆ. ಅಸಂಖ್ಯಾತ ವಿದೇಶೀಯ ಜೀವಗಳು ಆ ಭಾಷೆಯಲ್ಲಿ ಅದನ್ನು ಓದಿ ಧನ್ಯರಾಗುತ್ತಿದ್ದಾರೆ. ವಿಚಾರವಾದಿಗಳೂ ಕವಿಗಳೂ ಮೇಧಾವಿಗಳೂ ತತ್ತ್ವಜ್ಞರೂ ದೇಶ ಪಕ್ಷ ಪಂಥ ವಾದ ಮತ ಯಾವ ಭೇದವೂ ಇಲ್ಲದೆ ಭಾರತದ ಈ ಭಾಗೀರಥಿಯ ತೀರ್ಥಕ್ಕೆ ಪುಣ್ಯಸ್ನಾನಗೈಯಲು ಬರತೊಡಗಿದ್ದಾರೆ. ಆ ಆಧ್ಯಾತ್ಮಿಕ ಸಾಹಸದಲ್ಲಿ ಕನ್ನಡಿಗರೂ ಹಿಂದುಳಿದಿಲ್ಲ.
‘ಮ’ ಅವರ ಗ್ರಂಥದ ಪೂರ್ವಭಾಗದ ಕನ್ನಡ ಭಾಷಾಂತರ ‘ಶ್ರೀರಾಮಕೃಷ್ಣ ವಚನಾಮೃತ’ ಎಂಬ ಅಂಕಿತದಿಂದ ಅನೇಕ ವರ್ಷಗಳ ಹಿಂದೆಯೆ ಬೆಂಗಳೂರು ಶ್ರೀರಾಮ ಕೃಷ್ಣಾಶ್ರಮದಿಂದ ಪ್ರಕಟಗೊಂಡಿತು. ಆದರೆ ಆ ಭಾಷಾಂತರ ನಾವು ಅಪೇಕ್ಷಿಸುವಷ್ಟು ಸಮರ್ಪಕವಾಗಿತ್ತೆಂದು ಹೇಳುವಂತಿಲ್ಲ. ಮಾಸ್ಟರ್ ಮಹಾಶಯನು ಶ್ರೀರಾಮಕೃಷ್ಣರ ಬಾಯಿಂದ ಬಂದ ಮಾತುಗಳನ್ನು ಮಾತಾಡಿದಂತೆಯೇ ಬರೆದಿಟ್ಟಿದ್ದಾನೆ, ಬಂಗಾಳಿಯಲ್ಲಿ. ಸಂವಾದವನ್ನು ನಿರ್ವಹಿಸುವಾಗ ಅಲ್ಲಿ ಗ್ರಂಥಭಾಷೆಯ ಪ್ರಯೋಗವೆ ಇಲ್ಲ. ಗ್ರಾಮ್ಯ ಪ್ರಯೋಗಗಳೂ ಯಥೇಚ್ಛವಾಗಿವೆ. ಬರವಣಿಗೆಯ ಕೃತಕತೆ ಒಂದಿನಿತೂ ಇಲ್ಲ.ಓದುಗನಿಗೆ ಶ್ರೀರಾಮಕೃಷ್ಣರ ಸಾಮೀಪ್ಯದಲ್ಲಿಯೇ ಕುಳಿತು ಅವರ ಬಾಯಿಂದ ಬರುವ ಮಾತನ್ನು ಕೇಳುತ್ತಿರುವಂತೆ ಅನುಭವವಾಗುತ್ತದೆ. ಅತ್ಯಂತ ಗಹನವಾದ ಆಧ್ಯಾತ್ಮಿಕ ವಿಚಾರಗಳ ಮಧ್ಯೆ ಮಧ್ಯೆ ಅಳ್ಳೆಬಿರಿಯೆ ನಗುವಂತಹ ಪರಿಹಾಸದ ಮತ್ತು ವಿನೋದದ ಪ್ರಸಂಗಗಳೂ ತಿಳಿಯಾದ ಆಡುಮಾತಿನಲ್ಲಿಯೆ ಹೊಳೆಯುತ್ತವೆ. ಆದ್ದರಿಂದ ಈಗಿನ ಈ ಭಾಷಾಂತರದಲ್ಲಿ ಮೂಲದ ಆ ಸಹಜತೆ ಸರಳತೆಗಳನ್ನು ಅನುಸರಿಸುವ ಉದ್ದೇಶದಿಂದ ಭಾಷೆಯನ್ನು ಆದಷ್ಟು ಮಟ್ಟಿಗೆ ಗ್ರಂಥಭಾಷೆಯಾಗದಂತೆ ನೋಡಿಕೊಂಡು ಆಡುಮಾತಿನ ಶೈಲಿಯನ್ನೆ ಬಳಸಿಕೊಂಡಿದೆ.
ಈ ಭಾಷಾಂತರಕ್ಕೆ ‘ಶ್ರೀರಾಮಕೃಷ್ಣ ವಚನವೇದ’ ಎಂದು ಹೆಸರಿಟ್ಟಿದೆ. ಅದಕ್ಕೆ ಈ ಮುನ್ನುಡಿಕಾರನೆ ಬಹುಮಟ್ಟಿಗೆ ಕಾರಣವಾಗಿರುವುದರಿಂದ ಅದರ ಪರವಾಗಿ ಎರಡು ಮಾತು ಹೇಳಬೇಕಾಗಿದೆ.
‘ವೇದ’ ಎಂದರೆ ನಿತ್ಯಜ್ಞಾನ. ಅದು ಸನಾತನ. ಅದು ಅಪೌರುಷೇಯ. ಅಂದರೆ ಯಾವ ಮಾನವವ್ಯಕ್ತಿಯಿಂದಲೂ ಹುಟ್ಟಿಬಂದುದಲ್ಲ. ಮನುಷ್ಯತ್ವ ಹುಟ್ಟುವುದಕ್ಕೆ ಮೊದಲೂ ಅದು ಇತ್ತು; ಮನುಷ್ಯತ್ವ ಹೋದ ಮೇಲೆಯೂ ಅದು ಇರುತ್ತದೆ. ಅಂದರೆ ‘ಲೋಕ’ ಕ್ಕೆ ಪೂರ್ವದಲ್ಲಿಯೂ ಇತ್ತು; ‘ಲೋಕ’ ದ ಅನಂತರವೂ ಇರುತ್ತದೆ. ‘ವೇದ’ ‘ಲೋಕ’ ಕ್ಕೆ ಅವತರಿಸುವಾಗ ಯಾವನಾದರೊಬ್ಬ ಮನುಷ್ಯಪಾತ್ರದ ಮೂಲಕವಾಗಿಯೆ ಹೊಮ್ಮುತ್ತದೆ. ಅಂತಹ ಮನುಷ್ಯ ನೀರನ್ನು ಹರಿಯಿಸುವ ಒದಗೆಯೆ ಹೊರತು ಅದನ್ನು ಸೃಷ್ಟಿಸುವವನಲ್ಲ. ಅವನು ಪ್ರಣಾಳಿಕಾ ರೂಪ ಮಾತ್ರ. ಅಂತಹನನ್ನು ಋಷಿ, ಕವಿ, ದ್ರಷ್ಟಾರ ಎಂದೆಲ್ಲ ಕರೆಯುತ್ತೇವೆ. ಆ ದೃಷ್ಟಿಯಿಂದ ವೇದ ಎಂಬುದು ಎಂದೋ ಮುಗಿದ ಒಂದು ಗ್ರಂಥದ ಅಥವಾ ಗ್ರಂಥರಾಶಿಯ ಹೆಸರಲ್ಲ. ವೇದದ ಮಹಾಗ್ರಂಥಕ್ಕೆ ಕಾಲಕಾಲಕ್ಕೂ ಯುಗಯುಗಕ್ಕೂ ಹೊಸಹೊಸ ಅಧ್ಯಾಯಗಳೂ ಪ್ರಕರಣಗಳೂ ಸೇರುತ್ತಲೇ ಹೋಗುತ್ತವೆ. ಅವುಗಳಲ್ಲಿ ಆಧುನಿಕ ವಿಜ್ಞಾನಶಾಸ್ತ್ರಗಳಿಗೂ ಗೌರವಸ್ಥಾನವಿದೆ. ನಮ್ಮ ಅನುಭವಗಳು ವಿಸ್ತರಿಸಿದಂತೆಲ್ಲ, ಹೊಸ ಹೊಸ ಸಾಕ್ಷಾತ್ಕಾರಗಳೂ ಸಿದ್ಧಿಗಳೂ ಮೈದೋರಿದಂತೆಲ್ಲ ವೇದವೂ ವಿಸ್ತರಣಗೊಳ್ಳುತ್ತದೆ. ಸದ್ಯಕ್ಕೆ ಅತೀತವಾಗಿರುವ ‘ವೇದ’ ದ ವಿರಾಟ್ ಜಗತ್ತಿನಲ್ಲಿ ‘ಲೋಕ’ ಕ್ಕೆ ಇಳಿಯಬಹುದಾದ, ಇಳಿಯಲಿರುವ ಮತ್ತು ಇಳಿಯಲೇಬೇಕಾಗಿರುವ ಇನ್ನೆಷ್ಟೆಷ್ಟು ವಿಸ್ಮಯಗಳೂ ಅದ್ಭುತಗಳೂ ಆಶ್ಚರ್ಯಗಳೂ ಕಾಲದಬ್ಧಿಯಲ್ಲಿ ಕಾಯುತ್ತಿವೆಯೊ ಹೇಳಬಲ್ಲವರಾರು? ಸೂಕ್ಷ್ಮವಾದ ಆಧ್ಯಾತ್ಮಿಕಾನುಭವ ಜಗತ್ತಿನ ಮಾತಂತಿರಲಿ, ನಮ್ಮ ನಕ್ಷತ್ರ ನೀಹಾರಿಕಾಮಯವಾದ ಈ ಸ್ಥೂಲಜಗತ್ತಿನಲ್ಲಿಯೆ ನಮ್ಮ ವಿಜ್ಞಾನ ಊಹಿಸದಿದ್ದ ಅಘಟನೆಗಳೂ ಘಟಿಸುತ್ತವೆ ಎಂಬುದನ್ನು ನಮ್ಮ ಕಣ್ಣ ಮುಂದೆಯೇ ಕಾಣುತ್ತಿದ್ದೇವೆ! ‘Flying Saucers from Outer Space,’ ‘Flying Saucers Have Landed,’ ‘Flying Saucer from Mars’ ಎಂಬ ಗ್ರಂಥಗಳಲ್ಲಿ ಉಲ್ಲೇಖವಾಗಿರುವುದನ್ನೂ ನಂಬಲರ್ಹರೂ ಸಮರ್ಥವೀಕ್ಷಕರೂ ಆದ ವಿವಿಧ ಸಾಕ್ಷಿಗಳ ಹೇಳಿಕೆಗಳು ಪ್ರಪಂಚದ ನಾನಾ ಭಾಗದ ಪತ್ರಿಕೆಗಳಲ್ಲಿ ವರದಿಯಾಗುತ್ತಿರುವುದನ್ನೂ ಗಮನಿಸಿದರೆ ನಮ್ಮ ಆಶ್ಚರ್ಯಕ್ಕೆ ಏನೇನು ಆಹಾರಗಳನ್ನು ಒದಗಿಸುತ್ತಾರೋ ಈ ವ್ಯೋಮಾಂತರ ವಿಯದ್ಯಾನಗಳಲ್ಲಿರಬಹುದಾದ ಅತಿಥಿ ಮಹನೀಯರು, ಹೇಳಬಲ್ಲವ ರಾರು? ಅಂತೂ ಸದ್ಯಕ್ಕೆ ಅತೀತವಾಗಿರುವ ‘ವೇದ’ ಅನಂತವಾಗಿರುವುದರಿಂದ ‘ಲೋಕ’ ಕ್ಕಿಳಿಯುವ ನಮ್ಮ ವೇದವು ಕೊನೆಯಿಲ್ಲದೆ ಮುಂದುವರಿಯುವುದರಲ್ಲಿ ಸಂದೇಹವಿಲ್ಲ. ಶ್ರೀರಾಮಕೃಷ್ಣರಂತಹ ಸಿದ್ಧಪುರುಷನ, ಮಹರ್ಷಿಯ, ದ್ರಷ್ಟಾರನ, ಅವತಾರವರಿಷ್ಠನ ವಾಕ್ಶ್ರೀಯನ್ನು ‘ವಚನವೇದ’ ಎಂದು ಕರೆಯುವುದರಲ್ಲಿ ಅನೌಚಿತ್ಯವೆಲ್ಲಿ ಬಂತು? ಈ ‘ವಚನವೇದ’ ವೇದಗಳೂ ಮಾಡದ ಕೆಲಸವನ್ನು ಮಾಡುತ್ತದೆ. ಈ ‘ವಚನವೇದ’ ವೇದಗಳೂ ಹೊಗಲಾರದ, ಬಹುಶಃ ಕೆಲವರ ದೃಷ್ಟಿಯಲ್ಲಿ ಹೋಗಬಾರದ, ಮೂಲೆಮೂಲೆಗಳನ್ನೂ ಪ್ರವೇಶಿಸಿ ಜ್ಯೋತಿರ್ದಾನ ಮಾಡುತ್ತದೆ. ಈ ‘ವಚನವೇದ’ ಅಂಧಶ್ರದ್ಧೆಯ ಮೂಢಾಚಾರದ ಜನಜಂಗುಳಿಯನ್ನು ಪುರೋಹಿತ ನಖಪಂಜರದಿಂದ ಪಾರುಮಾಡಿ, ಅವರ ಧರ್ಮದಾಸ್ಯದೈನ್ಯಗಳನ್ನು ಪರಿಹರಿಸಿ, ಅವರನ್ನು ಮನುಷ್ಯರನ್ನಾಗಿ ಮಾಡುತ್ತದೆ. ಈ ‘ವಚನವೇದ’ ಪ್ರಜ್ಞಾಪರಾಧಜನ್ಯವಾದ ಭಯಭೀತಿಗಳಿಂದಲೂ ನೀಚೋಹಂ ಉಚ್ಚೋಹಂ ಎಂಬ ಮನೋಜಟಿಲಗಳಿಂದಲೂ ನಮ್ಮನ್ನುದ್ಧರಿಸಿ, ಉದಾರಧೀರರನ್ನಾಗಿ ಮಾಡಿ, ಸಂರಕ್ಷಿಸುತ್ತದೆ; ಜೀವನ್ಮುಕ್ತಿಗೆ ನಡೆಸುತ್ತದೆ.
ಸ್ವತಂತ್ರ ಭಾರತವನ್ನು ನಮ್ಮ ರಾಜ್ಯಾಂಗ ‘ಸೆಕ್ಯುಲರ್ ರಾಜ್ಯ’ ಎಂದು ಕರೆದಿದೆ. ಸೆಕ್ಯುಲರ್ ಎಂದರೆ ಧಾರ್ಮಿಕವಲ್ಲದ ಮತದೂರವಾದ, ಲೌಕಿಕ, ಲೋಕಾಯತ ಎಂದು ಅರ್ಥವಾಗುತ್ತದೆ. ಯಾವ ಭರತಖಂಡವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಪುಣ್ಯಭೂಮಿ ಯೆಂದು ಕರೆದರೊ; ಯಾವುದರ ವಿಶೇಷ ಪ್ರಜ್ಞೆ, ವಿಶೇಷ ಪ್ರತಿಭೆ, ಕರ್ತವ್ಯ, ಸ್ವಭಾವ, ಸ್ವಧರ್ಮ ಸರ್ವವೂ ಧಾರ್ಮಿಕದಲ್ಲಿ ಮಾತ್ರವೆ ನಿಷ್ಠವಾಗಿದೆ ಎಂದು ಸ್ವಾಮಿ ವಿವೇಕಾನಂದರು ಸಾರಿದರೊ; ಯಾವುದರ ಸ್ವಾತಂತ್ರ್ಯಕ್ಕಾಗಿ ದುಡಿದು ಮಡಿದ ಸ್ವಾತಂತ್ರ್ಯಶಿಲ್ಪಿ ಮಹಾತ್ಮಾ ಗಾಂಧೀಜಿಯ ನಡೆ ನುಡಿ ಉಸಿರು ಎಲ್ಲವೂ ಭಗವದಭಿಮುಖವಾದ ದಿವ್ಯಧರ್ಮ ದಲ್ಲಿಯೆ ಸಮರ್ಪಿತವಾಗಿದ್ದಿತೊ ಆ ಭೂಭಾಗವನ್ನು ‘ಧಾರ್ಮಿಕವಲ್ಲದ’ ‘ಮತ ದೂರವಾದ’ ‘ಲೌಕಿಕ’ ‘ಲೋಕಾಯತ’ ‘ಸೆಕ್ಯುಲರ್’ ಎಂದು ಕರೆದರೆ ಏನರ್ಥವಾಗುತ್ತದೆ? ಹಿಮಾಲಯವನ್ನಾದರೂ ಎತ್ತಿ ಬೇರೆ ದಿಕ್ಕಿಗೆ ಸಾಗಿಸಬಹುದೊ ಏನೋ! ಅಣುಶಕ್ತಿಯ ಪ್ರಯೋಗದಿಂದ ಸಮತಲ ಮಾಡಬಹುದೋ ಏನೋ! ಆದರೆ ಭಾರತೀಯ ಸಂಸ್ಕೃತಿಯ ಈ ಆಧ್ಯಾತ್ಮಿಕ ಲಕ್ಷಣವನ್ನು ಮಾತ್ರ ಮಾರ್ಪಡಿಸಲು ಎಂದೆಂದಿಗೂ ಸಾಧ್ಯವಿಲ್ಲ! ಹಾಗೆ ಮಾಡುವುದೂ ರಾಜ್ಯಾಂಗದ ಉದ್ದೇಶವಲ್ಲ. ರಾಜ್ಯಾಂಗ ‘ಸೆಕ್ಯುಲರ್’ ಎಂದು ಕರೆದುದರ ಉದ್ದೇಶ ಆಡಳಿತದ ಸಮನ್ವಯ ದೃಷ್ಟಿಯನ್ನೂ ಮತೀಯ ನಿಷ್ಪಕ್ಷಪಾತವನ್ನೂ, ಎಲ್ಲ ಮತದವರಿಗೂ ಸರ್ವಸಮಾನವಾದ ಹಕ್ಕುಬಾಧ್ಯತೆ ಹೊರೆ ಹೊಣೆ ಉಂಟೆಂಬುದನ್ನೂ ಸಾರುವುದೆ ವಿನಾ ಯಾವ ಆಸ್ತಿಕ ನಾಸ್ತಿಕ ಸಿದ್ಧಾಂತಗಳನ್ನೂ ಸಂಸ್ಥಾಪಿಸುವುದೂ ಅಲ್ಲ, ಉತ್ಪಾಟಿಸುವುದೂ ಅಲ್ಲ. ಅಂದರೆ ನಮ್ಮ ರಾಷ್ಟ್ರದ ಆಡಳಿತದ ಈ ಲಕ್ಷಣವನ್ನು ಸರಿಯಾದ ಮಾತಿನಲ್ಲಿ ವರ್ಣಿಸುವುದಾದರೆ ‘ಸಮನ್ವಯ ರಾಷ್ಟ್ರ’ ಎಂದು ಕರೆಯಬೇಕಾಗುತ್ತದೆ. ಅಂತಹ ಸಮನ್ವಯ ರಾಷ್ಟ್ರಕ್ಕೆ ಅತ್ಯಂತ ಆವಶ್ಯಕವಾಗಿರುವ ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ಈ ಯುಗದಲ್ಲಿ ಸ್ವಾತಂತ್ರ್ಯೋದಯಕ್ಕೆ ಬಹು ಪೂರ್ವದಲ್ಲಿಯೆ ಸ್ಪಷ್ಟವಾಗಿ, ಅನುಭವ ಪೂರ್ವಕವಾಗಿ, ಸರ್ವಜನಸುಲಭಗ್ರಾಹ್ಯವಾಗಿ, ಪ್ರಭಾವಯುತವಾಗಿ, ಕ್ರಾಂತಿಪೂರ್ಣವಾದರೂ ಸಂಪ್ರದಾಯ ಅವಿರುದ್ಧವೆಂಬಂತೆ ಲೋಕ ಸಮಸ್ತಕ್ಕೂ ತೋರಿ ಸಾರಿದವರೆಂದರೆ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು. ಅವರ ಈ ‘ವಚನವೇದ’ ನಿಜವಾಗಿಯೂ ಸಮನ್ವಯ ದೃಷ್ಟಿಯನ್ನು ಸರ್ವಪ್ರಜೆಗಳಿಗೂ ಸುಲಭವಾಗಿ ಹೃದಯಸ್ಪರ್ಶಿಯಾಗುವಂತೆ ಬೋಧಿಸುವ ನವೀನ ವೇದ. ಮತಾಂತರ ಗೊಳಿಸುವುದು, ಪರಮತ ನಿಂದೆಯಿಂದ ಸ್ವಮತ ಶ್ಲಾಘನೆ ಮಾಡುವುದು, ರಾಜಕೀಯ ಪ್ರಯೋಜನಕ್ಕಾಗಿ ಸ್ವಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಕುತಂತ್ರಕ್ಕೆ ಕೈ ಹಾಕುವುದು ಮೊದಲಾದ ಕಾಡುಭಾವನೆಗಳನ್ನೆಲ್ಲ ಬೇರುಸಹಿತ ಸುಟ್ಟುಹಾಕುವ ಕಾಳ್ಗಿಚ್ಚಾಗುತ್ತದೆ ಈ ‘ವಚನವೇದ’. ನಮ್ಮ ರಾಜ್ಯಾಂಗದ ರಾಜಕೀಯದ ಸುರತರು ಸುಫಲಸುಮಭರಿತ ವಾಗಬೇಕಾದರೆ ಜನಹೃದಯ ಮೂಲವಾಗಿರುವ ಅದರ ತಾಯಿಬೇರು ಈ ‘ವಚನವೇದ’ ಸಾರವನ್ನು ಹೀರಿಕೊಂಡಲ್ಲದೆ ಸಾಧ್ಯವಿಲ್ಲ. ನಮ್ಮ ರಾಜಕೀಯ ರಾಜ್ಯಾಂಗಕ್ಕೆ ಪೂರಕವಾಗುವ ಧಾರ್ಮಿಕ ರಾಜ್ಯಾಂಗವಾಗುತ್ತದೆ ಈ ‘ಶ್ರೀರಾಮಕೃಷ್ಣ ವಚನವೇದ!’
ಸುಮಾರು ಇಪ್ಪತ್ತೈದು ಸಂವತ್ಸರಗಳ ಹಿಂದೆ ಮಾಸ್ಟರ್ ಮಹಾಶಯನನ್ನು ಆತನ ಕಲಕತ್ತೆಯ ಮನೆಯಲ್ಲಿ, ಸಾಯಂ ಸಮಯದಲ್ಲಿ, ಉತ್ತುಂಗ ಮಹಾಸೌಧದ ಉನ್ನತ ತಾರಸಿಯ ಮೇಲೆ, ಆಕಾಶದ ಕೊಡೆಯಡಿಯಲ್ಲಿ ಸ್ವಾಮಿ ಸಿದ್ಧೇಶ್ವರಾನಂದರೊಡಗೂಡಿ ಹೋಗಿದ್ದ ಈ ಲೇಖಕ ಸಂದರ್ಶಿಸುವ ಯೋಗವೊದಗಿತ್ತು. ಶ್ರೀರಾಮಕೃಷ್ಣರ ವಿಚಾರವಾಗಿ ಈ ಲೇಖಕ ಬರೆದಿದ್ದ ಕನ್ನಡ ಕವನವೊಂದನ್ನು ಹಾಡಿಸಿ ಕೇಳಿ ‘ಮ’ ತುಂಬ ಆನಂದಿತರಾಗಿ ಅದನ್ನು ಯಾರ ಕೈಯಲ್ಲಾದರೂ ಬಂಗಾಳಿಗೆ ಪರಿವರ್ತಿಸಿ ಕಳುಹಿಸುವಂತೆ ಅತ್ಯಂತ ವಿಶ್ವಾಸ ಪೂರ್ವಕವಾಗಿ ಕೇಳಿಕೊಂಡಿದ್ದರು; ಲೇಖಕನೂ ಒಪ್ಪಿದ್ದ. ಆದರೆ ಬಹುಶಃ ಆಲಸ್ಯವೆ ಕಾರಣವಾಗಿ ಎರಡು ಮೂರು ವರ್ಷಗಳಾದರೂ ಅದನ್ನು ಭಾಷಾಂತರಿಸಿ ಕಳುಹಿಸಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ‘ಮ’ ಹೋದವರು ಹಿಂದಿರುಗದ ಧಾಮಕ್ಕೆ ಪ್ರಯಾಣಮಾಡಿ ಬಿಟ್ಟರು. ಆ ವಚನಋಣವನ್ನು ಇಂದು ಈ ರೀತಿಯಿಂದಾದರೂ ತೀರಿಸುತ್ತೇನೆ. ಆ ಸ್ತೋತ್ರ ಕವನವನ್ನು ಅವರ ‘ಕಥಾಮೃತದ’ ಕನ್ನಡ ಭಾಷಾಂತರಕ್ಕೆ ನಾಂದಿಯಾಗಿ ಹಾಡಿ ಸಮರ್ಪಿಸುತ್ತೇನೆ. ‘ವಚನವೇದ’ ವನ್ನು ನಮಗಿತ್ತ ಸರ್ವಧರ್ಮ ಸಮನ್ವಯಾಚಾರ್ಯನ ಸರ್ವೋದಯಕಾರಿಯಾದ ಸಮನ್ವಯಭಾವವೂ ಪೂರ್ಣದೃಷ್ಟಿಯೂ ಆ ಸ್ತೋತ್ರದಲ್ಲಿ ಮೂರ್ತಿಮತ್ತಾಗಿ ನಮ್ಮನ್ನು ಶ್ರೇಯಸ್ಸಿಗೆ ನಡೆಸಲಿ.
ಭರತಖಂಡದ ನೀಲಗಗನವ ತಿಮಿರ ಮುಸುಗಿರಲು,
ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು,
ಪರಮಹಂಸನೆ, ಉದಯಸೂರ್ಯನ ತೆರದಿ ರಂಜಿಸಿದೆ.
ಹೃದಯ ನಭದಜ್ಞಾನ ತಿಮಿರವನಿರದೆ ಭಂಜಿಸಿದೆ.
ಸರ್ವಮಾರ್ಗಗಳೊಂದೆ ನಿಲಯಕೆ ಪೋಪುವೆಂಬುದನು
ಯೋಗವಿದ್ಯೆಯೊಳರಿತು ಮಾನವಕುಲಕೆ ಬೋಧಿಸಿದೆ;
ಕ್ರೈಸ್ತ ಹಿಂದೂ ಮಹಮದೀಯರೆ ಬೌದ್ಧ ಮೊದಲಾದ
ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲಿಸಿದೆ.
ಮಾಯ ತಿಮಿರದ ಮಾರ್ಗ ಕಾಣದೆ ಗೋಳಿಡುತಲಿಹರ
ಅಭಯದೀಪವ ಹಿಡಿದು ದಾರಿಯ ತೋರಿ ರಕ್ಷಿಸಿದೆ;
ಘೋರಸಂಸಾರಾಂಬುನಿಧಿಯೊಳು ಮುಳುಗಿ ತೇಲುವರ
ಅಮೃತನಾವೆಯ ತಂದು ವೇಲೆಯನಿರದೆ ಸೇರಿಸಿದೆ.
ಶಿರವ ನಾಕದೊಳಿರಿಸಿ ಚರಣಗಳೆರಡ ಭೂತಳದಿ
ಗುರು ಹಿಮಾಚಲದಂತೆ ನಿಂತಿಹೆ, ಶಾಂತಿಯಾಶ್ರಯನೆ.
ಹೃದಯ ನಿನ್ನದು ಮೇರೆಯಿಲ್ಲದ ರುಂದ್ರ ವಾರಿನಿಧಿ;
ಚಲಿತ ಮತಗಳ ಚಂದ್ರನಾವೆಗಳಲ್ಲಿ ತೇಲುತಿವೆ!
ಕ್ರಿಸ್ತ ಮಹಮದ ರಾಮ ಕೃಷ್ಣ ಜೊರಾಸ್ತ ಗೌತಮರು
ದಿವ್ಯ ವೇದ ಕೊರಾನು ಬೈಬಲು ತಲ್ಮಡಾದಿಗಳು
ಗುಡಿಯು ಚರ್ಚು ಮಸೀದಿ ಆಶ್ರಮ ಅಗ್ನಿಪೂಜೆಗಳು
ಕಾಶಿ ಮಕ್ಕಗಳೆಲ್ಲ ನಿನ್ನೊಳಗೈಕ್ಯವಾ ‘ಗಿಹವು’ !
ದಕ್ಷಿಣೇಶ್ವರ ದೇವನಿಲಯದ ಪರಮಯೋಗೀಂದ್ರ
ಶ್ರೀ ವಿವೇಕಾನಂದ ಪೂಜಿತನಾತ್ಮಭಾವಿತನೆ,
ಲೋಕಜೀವರಿಗಾತ್ಮಶಕ್ತಿಯ ನೀಡಿ ಕಾಪಾಡು;
ನೆನೆವರೆಲ್ಲರ ಹೃದಯವಾಗಲಿ ನಿನ್ನ ನೆಲೆವೀಡು!
ಮೈಸೂರು
೧೭-೧೦-೧೯೫೪
ಕುವೆಂಪು೧.
ಈ ಮಹಾಕೃತಿಯ ಕನ್ನಡಾನುವಾದವು ಶ್ರೀರಾಮಕೃಷ್ಣ ಆಶ್ರಮ ಮೈಸೂರಿನಿಂದ ಪ್ರಕಟವಾಗಿದೆ.